ಈಗ ಟಿವಿಯಲ್ಲಿ ಜಾಹೀರಾತುಗಳು ಆರಂಭವಾದೊಡನೆ ಮನದಲ್ಲೇ ಹಿಡಿಶಾಪ ಹಾಕುತ್ತಾ ರಿಮೋಟ್ ಕೈಗೆತ್ತಿಕೊಳ್ಳುವವರೇ ಜಾಸ್ತಿ. ಆದರೆ ಹಿಂದಿನ ಕಾಲದಲ್ಲಿ ರೇಡಿಯೋ ಸಿಲೋನ್ ಮತ್ತು ಚಂದಮಾಮದ ಜಾಹೀರಾತುಗಳನ್ನು ಎಲ್ಲರೂ ಮೆಚ್ಚಿಕೊಳ್ಳುತ್ತಿದ್ದರು. ಅವು ಮಿತಿ ಮೀರಿದ ಸಂಖ್ಯೆಯಲ್ಲಿರದೆ ಮನಸ್ಸನ್ನು ಮುದಗೊಳಿಸುವಂತಿರುತ್ತಿದ್ದುದೇ ಇದಕ್ಕೆ ಕಾರಣ. ಜಾಹೀರಾತುದಾರರ ಅವಗಣನೆಗೊಳಗಾದ ರೇಡಿಯೋ ಸಿಲೋನ್ ಈಗ ತನ್ನ ವೈಭವವನ್ನೆಲ್ಲ ಕಳಕೊಂಡು ಕುಟುಕು ಜೀವ ಹಿಡಿದುಕೊಂಡಿದೆ. ಪ್ರಕಟಣೆಯನ್ನು ನಿಲ್ಲಿಸಿದ್ದ ಚಂದಮಾಮ ಕೆಲ ವರ್ಷಗಳ ಹಿಂದೆ ಅಂತರ್ಜಾಲದಲ್ಲಿ ಅವತಾರವೆತ್ತಿದಾಗ ಹಳೆಯ ಸಂಚಿಕೆಗಳೊಡನೆ ಹಳೆ ಜಾಹೀರಾತುಗಳದ್ದೇ ಒಂದು ವಿಭಾಗವನ್ನೂ ಅಳವಡಿಸಿಕೊಂಡಿತ್ತು. ಆದರೇಕೋ ಕೆಲ ಕಾಲದ ನಂತರ ಚಂದಮಾಮದ ಜಾಲತಾಣ ನೆನಪುಗಳನ್ನು ಮಾತ್ರ ಉಳಿಸಿ ಅಂತರ್ಜಾಲದಿಂದ ಅಂತರ್ಧಾನವಾಯಿತು. ಆದರೆ ಅಷ್ಟರೊಳಗೆ ಕೆಲವು ನೆನಪುಗಳನ್ನು ಬಾಚಿಕೊಳ್ಳಲು ನನಗೆ ಸಾಧ್ಯವಾಗಿತ್ತು. ಅವುಗಳಲ್ಲಿ ಕೆಲವನ್ನು ಇಲ್ಲಿ ಹಂಚಿಕೊಳ್ಳುತ್ತಿದ್ದೇನೆ.
ಸಿನಿಮಾ ಜಾಹೀರಾತುಗಳಿಗೂ ಚಂದಮಾಮಕ್ಕೂ 40ರ ದಶಕದಲ್ಲಿ ಅದು ಆರಂಭವಾದಾಗಿನಿಂದಲೇ ನಂಟು ಬೆಳೆದಿತ್ತು. ಚಂದಮಾಮದ ವಿಜಯಾ ಸಂಸ್ಥೆ ಸ್ವತಃ ಚಿತ್ರಗಳನ್ನು ನಿರ್ಮಿಸುತ್ತಿದ್ದುದು ಇದಕ್ಕೆ ಕಾರಣವಾಗಿರಬಹುದು. ಆಗ ಹೆಚ್ಚಾಗಿ ತಮಿಳು ಚಿತ್ರಗಳೇ ತಯಾರಾಗುತ್ತಿದ್ದುದರಿಂದ ಸಹಜವಾಗಿಯೇ ಅವುಗಳ ಜಾಹೀರಾತುಗಳು ಹೆಚ್ಚಾಗಿರುತ್ತಿದ್ದವು. ಆ ಮೇಲೆ ಕ್ರಮೇಣ ತೆಲುಗು, ಕನ್ನಡ, ಹಿಂದಿ ಸಿನಿಮಾ ಜಾಹೀರಾತುಗಳು ಬರತೊಡಗಿದವು. ಇವುಗಳಿಂದಾಗಿ ಯಾವ ಯಾವ ಊರಿನಲ್ಲಿ ಯಾವ ಯಾವ ಸಿನಿಮಾ ಟಾಕೀಸುಗಳು ಆ ಕಾಲದಲ್ಲಿ ಇದ್ದವು ಎಂಬ ಚಿತ್ರಣವೂ ನಮಗೆ ದೊರೆಯುತ್ತದೆ. ಮೇಲಿನ ಮೂರು ಜಾಹೀರಾತುಗಳಿಂದ ಮಂಗಳೂರಿನ ನ್ಯೂ ಚಿತ್ರಾ ಟಾಕೀಸು 51ನೇ ಇಸವಿಗಿಂತಲೂ ಹಿಂದಿನಿಂದ ಇತ್ತೆಂದೂ, ರೂಪವಾಣಿ ಟಾಕೀಸು 1953 ಮತ್ತು ಜ್ಯೋತಿ ಚಿತ್ರಮಂದಿರ 55ರ ಸುಮಾರಿಗೆ ಆರಂಭವಾದವೆಂದು ತಿಳಿಯುತ್ತದೆ. ನಿಮ್ಮೂರಿನ ಯಾವುದಾದರೂ ಟಾಕೀಸು ಕಾಣಿಸುತ್ತಿದೆಯೇ ನೋಡಿ. ಮಂಗಳೂರಿನ ಈ ಮೂರೂ ಟಾಕೀಸುಗಳು ಈಗಲೂ ಇದ್ದು ಆಗ ತಮಿಳು, ಕನ್ನಡ ಚಿತ್ರಗಳನ್ನು ಪ್ರದರ್ಶಿಸುತ್ತಿದ್ದ ನ್ಯೂ ಚಿತ್ರಾ ನಂತರ ಇಂಗ್ಲಿಷ್ ಚಿತ್ರಗಳಿಗೆ ಮುಡಿಪಾಯಿತು. ನಾನು 70ರ ದಶಕದಲ್ಲಿ ನೌಕರಿಗಾಗಿ ಮಂಗಳೂರಿಗೆ ಬಂದಾಗ ರೂಪವಾಣಿ ಟಾಕೀಸು ನನಗೆ ಅಚ್ಚುಮೆಚ್ಚಿನದಾಗಿತ್ತು. ಅದುವರೆಗೆ ನಾನು ರೇಡಿಯೋದಲ್ಲಿ ಹಾಡುಗಳನ್ನು ಕೇಳುತ್ತಾ ನೋಡಬೇಕೆಂದು ಆಸೆಪಟ್ಟಿದ್ದ ಅದೆಷ್ಟೋ ಹಳೆಯ ಚಿತ್ರಗಳು ಇಳಿಸಿದ ದರಗಳ ಬೆಳಗ್ಗಿನ ದೇಖಾವೆಯಾಗಿ ನನಗೆ ಅಲ್ಲಿ ನೋಡಲು ಸಿಕ್ಕಿದ್ದೇ ಇದಕ್ಕೆ ಕಾರಣ. ಆ ಟಾಕೀಸಿಗೆ ವಾರಾಂತ್ಯದಲ್ಲಿ ಬರಲಿರುವ ಹಳೇ ಸಿನಿಮಾದ ಪೋಸ್ಟರನ್ನು ನಿರ್ದಿಷ್ಟ ಜಾಗವೊಂದರಲ್ಲಿ ಒಂದು ವಾರ ಮೊದಲೇ ಹಚ್ಚಿಟ್ಟಿರುತ್ತಿದ್ದರು. ಅದನ್ನು ನೋಡಿಕೊಂಡು ಬಂದು ಆ ಚಿತ್ರ ನೋಡುವ ಕನಸು ಕಾಣುತ್ತಾ ಒಂದು ವಾರವನ್ನು ಕಳೆಯುವುದು ನಿಜವಾಗಿ ಚಿತ್ರ ನೋಡಿದ್ದಕ್ಕಿಂತಲೂ ಹೆಚ್ಚಿನ ಖುಶಿ ನೀಡುತ್ತಿತ್ತು!
ಚಂದಮಾಮದ ಜಾಹೀರಾತಿನ ಬಹುತೇಕ ಚಿತ್ರಗಳು ‘ಶರವೇಗ’ದಲ್ಲಿ ಬರುತ್ತಿದ್ದವು! ಮಾಯಾ ಬಜಾರ್, ಹಮ್ ಪಂಛೀ ಏಕ್ ಡಾಲ್ ಕೆ ಮುಂತಾದ ಚಿತ್ರಗಳ ಜಾಹೀರಾತಿನೊಂದಿಗೆ ಇಡೀ ಕಥೆಯನ್ನೂ ಹಲವು ಪುಟಗಳಲ್ಲಿ ಪ್ರಕಟಿಸಲಾಗಿತ್ತು. ಕೆಲವು ಸಲ ಬೇರೆ ಭಾಷೆಯ ಸಿನಿಮಾ ಹೆಸರನ್ನು ಕನ್ನಡಕ್ಕೆ ಭಾಷಾಂತರಿಸುವುದೂ ಇತ್ತು. ಉದಾಹರಣೆಗೆ ಸೆಂಗೋಟ್ಟೈ ಸಿಂಗಂ ಎಂಬ ತಮಿಳು ಸಿನಿಮಾ ಕನ್ನಡ ಜಾಹೀರಾತಿನಲ್ಲಿ ಶಂಕೋಟೆ ಸಿಂಹ ಎಂದಿತ್ತು. ತೆಲುಗಿನ ಅಪ್ಪುಚೇಸಿ ಪಪ್ಪು ಕೂಡು ಸಿನಿಮಾದ ಹೆಸರಿನ ಅರ್ಥ ಗೊತ್ತಿಲ್ಲದಿದ್ದರೂ ಪ್ರಾಸಬದ್ಧವಾಗಿ ಆಕರ್ಷಕ ಎನ್ನಿಸುತ್ತಿತ್ತು. ಮುಂದೊಮ್ಮೆ ನಮ್ಮ ಇಲಾಖಾ ತರಬೇತಿಗಾಗಿ ಮದರಾಸಿಗೆ ಹೋದಾಗ ಅಲ್ಲಿ ತೆಲುಗು ಬಲ್ಲ ಸಹೋದ್ಯೋಗಿಯೊಬ್ಬರು ಪಪ್ಪು ಎಂದರೆ ಒಂದು ವ್ಯಂಜನ ವಿಶೇಷವೆಂದೂ, ಋಣಂ ಕೃತ್ವಾ ಘೃತಂ ಪಿಬೇತ್ ಎಂಬಂತೆ ಸಾಲ ಮಾಡಿಯಾದರೂ ಮೃಷ್ಟಾನ್ನ ಉಣ್ಣು ಎಂದು ಇದರರ್ಥವೆಂದೂ ತಿಳಿಸಿ ಒಂದು ಒಳ್ಳೆಯ ಆಂಧ್ರ ಹೋಟಲಿಗೆ ಕರೆದೊಯ್ದು ಪಪ್ಪುವಿನ ರುಚಿಯನ್ನೂ ಸವಿಯುವಂತೆ ಮಾಡಿದ್ದರು!
ಚಂದಮಾಮದಲ್ಲಿ ನಿರಂತರವಾಗಿ ಕಾಣಿಸಿಕೊಳ್ಳುತ್ತಿದ್ದ ಇನ್ನೊಂದು ಜಾಹೀರಾತು ಗ್ರಾಮಫೋನ್ ರೆಕಾರ್ಡುಗಳ ಡೀಲರ್ ಆಗಿದ್ದ ಸೀತಾ ಫೋನ್ ಕಂಪನಿದ್ದು. 30ರ ದಶಕದಿಂದ ಸಕ್ರಿಯವಾಗಿದ್ದ ಅದು ಈಗಲೂ ಬೆಂಗಳೂರಲ್ಲಿ ಇದೆ. ಆ ಕಾಲದಲ್ಲಿ ಸಿನಿಮಾ ಹಾಡುಗಳ ಜೊತೆ ನಾಟಕ, ಶಾಸ್ತ್ರೀಯ ಸಂಗೀತ ಇತ್ಯಾದಿಗಳ ರೆಕಾರ್ಡುಗಳು ಹೆಚ್ಚು ಮಾರಾಟವಾಗುತ್ತಿದ್ದಿರಬೇಕು. ಈ ಚಿತ್ರದಲ್ಲಿ ಕಾಣುವ ‘ನಕಲಿ’ಗಳು ಎಂದರೆ ಪ್ರಸಿದ್ಧ ಹಾಡುಗಳ version songs ಇರಬಹುದೇನೋ. ಅವೆಲ್ಲ ಎಲ್ಲಿ ಹೋದವೋ. ಜಗನ್ಮೋಹಿನಿ ಸಿನಿಮಾದ ಹಾಡುಗಳ ಜಾಹೀರಾತಂತೂ ಪ್ರತೀ ತಿಂಗಳು ಎಂಬಂತೆ ಕೆಲವು ವರ್ಷ ಬರುತ್ತಿತ್ತು.
ವೀರ ಕಿಟ್ಟು ಮತ್ತು ಬಾಯಿಬಡುಕ ಪುಟ್ಟು ಎಂಬ ಡಾಲ್ಡಾದ ಜಾಹೀರಾತು ಒಂದು ಪುಟ್ಟ ಕಥೆಯ ರೂಪದಲ್ಲಿ ಇರುತ್ತಿತ್ತು. ಬಾಯಿಬಡುಕ ಪುಟ್ಟು ಎನೋ ಒಂದು ಸಾಹಸ ಮಾಡಲು ಹೋಗಿ ಸೋತಾಗ ಕಿಟ್ಟು ಆತನಿಗೆ ವ್ಯಾಯಾಮ ಮಾಡಿ, ಹಾಲು ಕುಡಿದು, ಡಾಲ್ಡಾದಿಂದ ತಯಾರಿಸಿದ ಆಹಾರ ಸೇವಿಸಿ ಶಕ್ತಿವಂತನಾಗುವಂತೆ ಸಲಹೆ ನೀಡುತ್ತಿದ್ದ! ಈ ಸಾಹಸಗಳು ಸಂಚಿಕೆಯಿಂದ ಸಂಚಿಕೆಗೆ ಬದಲಾಗುತ್ತಿದ್ದವು. ಪ್ಯಾರೀಯವರ ಚಾಕೋಲೇಟುಗಳ ಜಾಹೀರಾತು ಬಲು ಮಜವಾಗಿರುತ್ತಿತ್ತು. ವೈದ್ಯರೆಲ್ಲ ಸಿದ್ಧರಾಗಿ ಆಪರೇಶನ್ ಮಾಡಲು ಬಂದಾಗ ರೋಗಿ ಪ್ಯಾರಿ ಮಿಠಾಯಿ ಕೊಳ್ಳಲು ಹೋಗಿರುತ್ತಿದ್ದ. ಕೆಲವು ಸಲ ಪೋಲೀಸ್ ಅಧಿಕಾರಿ ಜೈಲು ಪರಿವೀಕ್ಷಣೆಗೆ ಬಂದಾಗ ಕೈದಿ, ವಿಕ್ಟರಿ ಸ್ಟಾಂಡಲ್ಲಿ ನಿಂತಿರಬೇಕಾಗಿದ್ದ ಬಹುಮಾನ ವಿಜೇತ ಪ್ಯಾರಿ ಮಿಠಾಯಿ ಕೊಳ್ಳಲು ಹೋಗಿರುತ್ತಿದ್ದರು!
ಕೆಲವು ಸ್ಪರ್ಧಾರೂಪದ ಜಾಹೀರಾತುಗಳೂ ಇರುತ್ತಿದ್ದವು. ಗಿಬ್ಸ್ ಡೆಂಟಿಫ್ರಿಸ್ ಎಂಬ ವಿಕ್ಸ್ ವೆಪೋರಬ್ ತರಹದ ಡಬ್ಬಿಯಲ್ಲಿ ಬರುತ್ತಿದ್ದ ದಂತಮಂಜನದ್ದು ಬಣ್ಣ ಬಳಿಯುವ ಸ್ಪರ್ಧೆಯೊಂದಿತ್ತು. 1962ರಲ್ಲಿ 7 ನೇ ತರಗತಿಯಲ್ಲಿದ್ದಾಗ ನನಗೆ ಸಿಕ್ಕಿದ ಅಣ್ಣನ ಹಳೆ Rives ವಾಟರ್ ಕಲರ್ ಉಪಯೋಗಿಸಿ ನಾನು ಮೊತ್ತ ಮೊದಲ ಕುಂಚ ಪ್ರಯೋಗ ಮಾಡಿದ್ದು ಈ 1958ರ ಚಂದಮಾಮದ ಮೇಲೆ. ನನ್ನ ಆಗಿನ ಕೈ ಬರಹವನ್ನೂ ಅದರಲ್ಲಿ ನೋಡಬಹುದು! ಬಲಭಾಗದಲ್ಲಿ C B K ಎಂಬ ಮೊಹರು ಕಾಣುತ್ತಿದೆಯಲ್ಲ, ಅದು ಕಾವಟೆ ಎಂಬ ಮೆದು ಮರದ ಮುಳ್ಳನ್ನು ಕೆತ್ತಿ ತಯಾರಿಸಿದ ಅಚ್ಚಿನ ಗುರುತು. ಈ ಕುರಿತು ನವೋಲ್ಲಾಸದ ನವರಾತ್ರಿಯಲ್ಲಿ ವಿವರಣೆ ಇದೆ. ಇಲ್ಲಿ ತಪ್ಪು ಹುಡುಕುವ ಸ್ಪರ್ಧೆ ಆಯೋಜಿಸಿದ್ದ ಬಿನಾಕಾ ಅಂತೂ ಆಗಿನಿಂದಲೂ ಜಾಹೀರಾತಿನ ವಿಷಯದಲ್ಲಿ ಮುಂಚೂಣಿಯಲ್ಲೇ ಇತ್ತು. ಬಿನಾಕಾ ಗೀತ್ ಮಾಲಾ ಆಗಲೇ ಜನಪ್ರಿಯತೆಯ ತುತ್ತ ತುದಿಯಲ್ಲಿತ್ತು. ಗ್ರೀನ್, ರೋಸ್, ಟಾಪ್ ಮತ್ತು ಫ್ಲೋರೈಡ್ ಎಂಬ ನಾಲ್ಕು ವಿಧಗಳಲ್ಲಿ ದೊರೆಯುತ್ತಿದ್ದ ಪೇಸ್ಟು ಅದೊಂದೇ. ಬಿನಾಕಾ ಪೇಸ್ಟುಗಳೊಡನೆ ಬರುತ್ತಿದ್ದ ಚಿಕ್ಕ ಚಿಕ್ಕ ಪ್ಲಾಸ್ಟಿಕ್ ಬೊಂಬೆಗಳು ಮತ್ತು ಸ್ಟಿಕ್ಕರುಗಳು ಅನೇಕರಿಗೆ ನೆನಪಿರಬಹುದು. ಆಗಿನ ಕಾಲದ ಜನಪ್ರಿಯ ಕ್ಲಿಕ್ III ಕ್ಯಾಮರಾದ್ದೂ ಒಂದು ಫೋಟೋ ಸ್ಪರ್ಧೆ ಇತ್ತು. 60ರ ದಶಕದಲ್ಲಿ ಆ ಕ್ಯಾಮರಾ ರೂ 46.50 ಕ್ಕೆ ದೊರಕುತ್ತಿತ್ತು. ಈ ಮೂರೂ ಉತ್ಪನ್ನಗಳು ಈಗ ಕಾಲನ ಹೊಡೆತಕ್ಕೆ ಸಿಕ್ಕಿ ಮರೆಯಾಗಿವೆ. ಗಿಬ್ಸ್ ದಂತಮಂಜನವನ್ನಂತೂ ನಾನೂ ಈ ಜಾಹೀರಾತಲ್ಲಷ್ಟೇ ನೋಡಿದ್ದು. ಬಿನಾಕಾ ಇದ್ದದ್ದು ಸಿಬಾಕಾ ಆಗಿ ಕೊನೆಗೆ ತನ್ನ ಪ್ರತಿಸ್ಪರ್ಧಿ ಕೋಲ್ಗೇಟಿನಲ್ಲಿ ವಿಲೀನವಾಯಿತು. ಕ್ಲಿಕ್ III ಕ್ಯಾಮರಾ ಡಿಜಿಟಲ್ ಕ್ರಾಂತಿಗೆ ಶರಣಾಯಿತು. ಕಾಲವನ್ನು ತಡೆಯೋರು ಯಾರೂ ಇಲ್ಲ ಅಲ್ಲವೇ?
ಈ ಆಟಿಕೆಗಳ ಜಾಹೀರಾತು ನೋಡಿ ನನ್ನಲ್ಲೂ ಇಂಥದ್ದೊಂದಿದ್ದಿದ್ದರೆ ಎಂದು ಆಸೆ ಹುಟ್ಟಿದ್ದುಂಟು. ಒಮ್ಮೆ ಇಂತಹ ಬೋಟ್ ಧರ್ಮಸ್ಥಳ ಜಾತ್ರೆಯಲ್ಲಿ ಕೊಳ್ಳಲು ಸಿಕ್ಕಿದಾಗ ಸ್ವರ್ಗಕ್ಕೆ ಮೂರೇ ಗೇಣು ಅನ್ನಿಸಿತ್ತು. ಆದರೆ ಮನೆಗೆ ಬಂದು ಅದನ್ನು ನೀರಿಗಿಳಿಸಿದಾಗ ಬಕೆಟ್ಟಿನಲ್ಲಿ ಎರಡು ಸುತ್ತು ಹೊಡೆದು ಶಾಶ್ವತ ಮುಷ್ಕರ ಹೂಡಿತು. ಯಾರಲ್ಲೂ ಸುದ್ದಿ ಹೇಳದೆ ಅದನ್ನು ಮೂಲೆ ಸೇರಿಸಿದೆ. ಈ ವ್ಯೂ ಮಾಸ್ಟರ್ ಇತ್ಯಾದಿ ಕೊಳ್ಳುವ ಆರ್ಥಿಕ ಶಕ್ತಿ ಆಗ ನಮಗಿರಲಿಲ್ಲ. ಆದರೆ ಇದನ್ನೇ ಹೋಲುವ ಚಿಕ್ಕ ಬಯೋಸ್ಕೋಪ್ ಕೆಲವು ಆಣೆಗಳಿಗೆ ಜಾತ್ರೆಯಲ್ಲಿ ಸಿಗುತ್ತಿತ್ತು. ಜೊತೆಗೆ ಸಿಗುತ್ತಿದ್ದ ಹಳೆ ಸಿನಿಮಾ ರೀಲಿನ ತುಂಡುಗಳನ್ನು ಅದರಲ್ಲಿಟ್ಟು ಒಂದು ಕಣ್ಣಿಂದ ನೋಡಿದಾಗ ಸಿಗುತ್ತಿದ್ದ ಖುಶಿ ಈಗ HD ಟಿವಿ ನೋಡಿದರೂ ಸಿಗದು. ಕಿಟಿಕಿಯಿಂದ ಮನೆಯೊಳಗೆ ಬೀಳುತ್ತಿದ್ದ ಬಿಸಿಲು ಕೋಲಿನ ಎದುರು ಆ ರೀಲಿನ ತುಂಡುಗಳನ್ನು ಹಿಡಿದು ಮನೆಯಲ್ಲಿದ್ದ ಭೂತಕನ್ನಡಿಯ ಸಹಾಯದಿಂದ ಎದುರಿನ ಗೋಡೆಯ ಮೇಲೆ ದೊಡ್ಡ ಚಿತ್ರ ಬೀಳುವಂತೆಯೂ ನಾನು ಮಾಡುತ್ತಿದ್ದೆ.
ಚಿತ್ರಗಳೇ ಎಲ್ಲವನ್ನೂ ಹೇಳುವ ನ್ಯೂಟ್ರಿನ್ ಮಿಠಾಯಿಯ ಈ ಜಾಹೀರಾತು ಬಲು ಸುಂದರ. ಯಾರಾದರೂ ಕೊಟ್ಟಾಗ ತಿನ್ನುವುದಕ್ಕಿಂತ ಯಾರಿಗೂ ತಿಳಿಯದೆ ಇಟ್ಟಲ್ಲಿಂದ ಹಾರಿಸಿ ತಿನ್ನುವ ಮಿಠಾಯಿಯ ರುಚಿ ಹೆಚ್ಚು ಎನ್ನುವ ಅನುಭವ ನಿಮಗೂ ಆಗಿರಬಹುದು! ಪಕ್ಕದ ಟಿನೋಪಾಲ್ ಅಂದರೆ ಆಗಿನ ಉಜಾಲಾ. ತಿಳಿ ಹಳದಿ ಬಣ್ಣದ ಪೌಡರ್ ರೂಪದಲ್ಲಿದ್ದ ಅದು ಚಿಕ್ಕ ಆಕರ್ಷಕ ಡಬ್ಬಿಯಲ್ಲಿ ದೊರಕುತ್ತಿತ್ತು. ನಾವೆಲ್ಲ ಉಜಿರೆ ಕಾಲೇಜಿಗೆ ಹೋಗುವಾಗ ಪಂಚೆ ಉಡುತ್ತಿದ್ದೆವು. ಬೆರಳೆಣಿಕೆಯಷ್ಟು ಪ್ಯಾಂಟುಧಾರಿಗಳಿದ್ದರೋ ಏನೋ. ಸಂಜೆ ಬಂದೊಡನೆ ಪಂಚೆಯನ್ನು ಶುಭ್ರವಾಗಿ ಒಗೆದು ನೀಲಿ ಮತ್ತು ಟಿನೋಪಾಲ್ ಮಿಶ್ರಣದಲ್ಲಿ ಅದ್ದಿದರೆ ಅದು ಕೊಕ್ಕರೆ ಗರಿಯಂತೆ ಬೆಳ್ಳಗಾಗುತ್ತಿತ್ತು. ರೇಡಿಯೋ ಸಿಲೋನಿನಲ್ಲಿ
Now what is it that whitens best of all
Tinopal
Now what is it that whitens best of all
Tinopal
What is it that whitens best
What is it that whitens best
Tinopal is that whitens best of all
ಎಂಬ ಉಷಾ ಉತ್ತುಪ್ ಹಾಡಿದ್ದ ಜಿಂಗಲ್ ಕೂಡ ಬರುತ್ತಿತ್ತು.
ಬಟ್ಟೆ ಒಗೆಯುವ ವಿವಿಧ ಸೋಪುಗಳ ಪೈಕಿ ನಮ್ಮೂರಲ್ಲಿ ಹೆಚ್ಚು ಜನಪ್ರಿಯವಾಗಿದ್ದದ್ದು ಕಸ್ತೂರಿ ಬಾರ್ ಸೋಪ್. ಜನರು ಅಂಗಡಿಗೆ ಹೋಗಿ ‘ಒಂದು ಕಸ್ತೂರಿ ಬಾರ್ ಸೋಪ್ ಸಾಬೂನು ಕೊಡಿ’ ಅನ್ನುತ್ತಾರೆಂಬ ಜೋಕ್ ಕೂಡ ಅಷ್ಟೇ ಜನಪ್ರಿಯವಾಗಿತ್ತು. ನಮ್ಮ ಮನೆ ಬಳಕೆಗೆ ವರ್ಷವಿಡೀ ಸಾಕಾಗುವಷ್ಟು ಬಾರುಗಳಿರುವ ಒಂದು ಇಡೀ ಪೆಟ್ಟಿಗೆಯನ್ನೇ ಖರೀದಿಸಿ ತಂದಿಟ್ಟಿರುತ್ತಿದ್ದರು. ಬಾರುಗಳನ್ನು ಚಿಕ್ಕ ತುಂಡುಗಳಾಗಿ ಕತ್ತರಿಸಲೆಂದೇ ಉದ್ದವಾದ ಚೂರಿಯೊಂದಿತ್ತು. ಅಂಗಡಿಯವರು ಸೆಣಬಿನ ದಾರದಿಂದಲೇ ಬಾರನ್ನು ಸುಲಭವಾಗಿ ತುಂಡರಿಸುವುದು ನೋಡಿ ನಮಗೆ ಅಚ್ಚರಿಯಾಗುತ್ತಿತ್ತು. ಈಗ ಇಂತಹ ಸೋಪುಗಳು ಡಿಟರ್ಜೆಂಟುಗಳಿಗೆ ದಾರಿಮಾಡಿಕೊಟ್ಟು ಬದಿಗೆ ಸರಿದಿವೆ.
ಆಗಿನ್ನೂ ಬೈಕು, ಕಾರುಗಳು ಸಾಮಾನ್ಯ ಜನರ ಕೈಗೆಟಕುತ್ತಿರಲಿಲ್ಲ. ಹೀಗಾಗಿ ಸೈಕಲ್ ಜಾಹೀರಾತುಗಳು ಹೆಚ್ಚು ಕಾಣಿಸಿಕೊಳ್ಳುತ್ತಿದ್ದವು. ಆದರೆ ಮಗು ನಡೆಯಲು ಕಲಿಯುವುದಕ್ಕೂ ಮುನ್ನ ಮನೆಗೆ ಟ್ರೈಸಿಕಲ್ ಬರುವ ಕಾಲವೂ ಅದಾಗಿರಲಿಲ್ಲ. ಸೈಕಲ್ ಸವಾರಿಯ ಅನುಭವ ಪಡೆಯಲು ಸಾಮಾನ್ಯವಾಗಿ ಹೈಸ್ಕೂಲ್ ಮೇಟ್ಟಲೇರಿದ ಮೇಲಷ್ಟೇ ಸಾಧ್ಯವಾಗುತ್ತಿತ್ತು. ಗಂಟೆಗೆ ಕೆಲವು ಪೈಸೆಗಳ ಬಾಡಿಗೆಗೆ ಆಗ ಸೈಕಲುಗಳು ದೊರೆಯುತ್ತಿದ್ದವು. ಆಗಲೇ expert ಆಗಿರುತ್ತಿದ್ದ ಅಣ್ಣನನ್ನೋ, ಸ್ನೇಹಿತನನ್ನೋ ಜೊತೆಗಿಟ್ಟುಕೊಂಡು ಊರಿನ ಮೈದಾನಿನಲ್ಲಿ ಸೈಕಲ್ ಸವಾರಿ ಕಲಿಯುವಿಕೆ ಆರಂಭವಾಗುತ್ತಿತ್ತು. ಒಂದು ರೂಪಾಯಿ ಬಾಡಿಗೆಗೆ ಇಡೀ ಒಂದು ದಿನಕ್ಕೆ ದೊರೆಯುತ್ತಿದ್ದ ಸೈಕಲನ್ನು ಮನೆಗೆ ತಂದು ಊರ ದೇವಸ್ಥಾನದ ಮಾಡಿನ ನಾಲ್ಕೂ ಮೂಲೆಗಳಿಗೆ ಲಾಟೀನು ತೂಗಾಡಿಸಿ ಸ್ನೇಹಿತರೊಂದಿಗೆ ರಾತ್ರಿಯಿಡೀ ಸರದಿಯಂತೆ ದೇವರಿಗೆ ಪ್ರದಕ್ಷಿಣೆ ಹೊಡೆದದ್ದೂ ಇದೆ. ‘ಹಿಂದಿನ ಚಕ್ರ ತಿರುಗುತ್ತಾ ಇದೆ ನೋಡೋ’ ಎಂದು ಹೊಸತಾಗಿ ಸವಾರಿ ಕಲಿತವರ ಏಕಾಗ್ರತೆ ಭಂಗಗೊಳಿಸಿ ಅವರು ಬ್ಯಾಲನ್ಸ್ ತಪ್ಪಿ ಸೈಕಲ್ ಸಮೇತ ಧೊಪ್ಪನೆ ಬೀಳುವುದನ್ನು ನೋಡಿ ಸಂತೋಷ ಪಡುವುದು ಆಗಿನ ದಿನಗಳಲ್ಲಿ ಸಾಮಾನ್ಯವಾಗಿತ್ತು! ಎಷ್ಟು ಸಲ ಬಿದ್ದು ಎದ್ದರೂ ಸೈಕಲ್ ಮೇಲಿನ ಮೋಹ ಮಾತ್ರ ಕಮ್ಮಿ ಆಗುತ್ತಿರಲಿಲ್ಲ. ಭಾರತೀಯರ ಮಟ್ಟಿಗೆ ಆಗಿನ ಸಾಮಾನ್ಯ ಸೈಕಲುಗಳ ಎತ್ತರ ಕೊಂಚ ಜಾಸ್ತಿಯೇ ಆಗಿತ್ತು ಅನ್ನಬೇಕು. ಎಂತಹ ಆಜಾನುಬಾಹುವಾದರೂ ಸೀಟ್ ಮೇಲೆ ಕುಳಿತಾಗ ಕಾಲು ನೆಲಕ್ಕೆ ಎಟಕುತ್ತಿರಲಿಲ್ಲ. ಹೀಗಾಗಿ ಹುಡುಗರು ಮೊದಲು ಪೆಡಲ್ ಬ್ಯಾಲನ್ಸ್, ಆ ಮೇಲೆ ರೋಲಿನ ಒಳಗಿಂದ ಕಾಲು ತೂರಿಸಿ ಪೆಡಲನ್ನು ತಿರುಗಿಸುವುದು, ನಂತರ ಸೀಟಾರೋಹಣ ಹೀಗೆ ಹಂತ ಹಂತವಾಗಿ ಪ್ರಾವೀಣ್ಯ ಸಾಧಿಸಬೇಕಾಗುತ್ತಿತ್ತು. ಪೆಡಲ್ ಮೇಲೆ ಪೂರ್ತಿ ದೇಹದ ಭಾರಹಾಕಿ ಸೀಟನ್ನೇರುವ ಪದ್ಧತಿ ನಮ್ಮ ದೇಶದ ಸಾಂಪ್ರದಾಯಿಕ ಸೈಕಲ್ ಸವಾರರು ಮಾತ್ರ ಅನುಸರಿಸುತ್ತಿರುವುದೇನೋ. ಸೀಟ್ ಮೇಲೆ ಕುಳಿತು ಕಾಲಿಂದ ತಿರುಗಿಸುವ ಉದ್ದೇಶಕ್ಕಾಗಿಯಷ್ಟೇ ಇರುವ ಪೆಡಲ್ ‘ಈ ಭಾರವ ತಾಳೆನು ಬೇರೇನೂ ದಾರಿಯ ಕಾಣೆನು’ ಎಂದು ಅಳಲಾರದೇ ಎಂದು ನನಗೆ ಅನ್ನಿಸುವುದಿದೆ! ನಾನು ಡಿಗ್ರಿಯ ಎರಡನೇ ವರ್ಷದಲ್ಲಿರುವಾಗ ನಮ್ಮ ಮನೆಗೆ ಸೈಕಲ್ ಬಂತು. ಆ ಮೇಲೆ ನೌಕರಿಗಾಗಿ ಊರು ಬಿಡುವ ವರೆಗೂ ಅದು ನನ್ನ ನೆಚ್ಚಿನ ಸಂಗಾತಿಯಾಗಿ ಸವಾರಿಯ ಸುಖ; ಪಂಕ್ಚರ್, ರಿಪೇರಿ ಇತ್ಯಾದಿಗಳ ಕಷ್ಟ ಎಲ್ಲದರ ಪರಿಚಯ ಮಾಡಿಸಿತು.
ಟೇಪ್ ರೆಕಾರ್ಡರು ಏನೋ ಬಲು ಸುಂದರವೇ. ಆದರೆ ಚಿನ್ನದ ಬೆಲೆ 10 ಗ್ರಾಮಿಗೆ ಸುಮಾರು 100 ರೂಪಾಯಿ ಆಗಿದ್ದ 50ರ ದಶಕದಲ್ಲಿ 1000ರೂ ಬೆಲೆಬಾಳುವ ಈ ಟೇಪ್ ರೆಕಾರ್ಡರ್ ಕೊಳ್ಳುವ ಸಾಮರ್ಥ್ಯವಿದ್ದ ಚಂದಮಾಮ ಓದುಗರು ಎಷ್ಟಿದ್ದಿರಬಹುದು?
ಚಂದಮಾಮ ಜಾಹೀರಾತುಗಳ ಮೇಲೆ ಒಂದು ಪಕ್ಷಿ ನೋಟ ಬೀರಿದೆವಲ್ಲ. ನಾನು ವಾರಕ್ಕೊಂದರಂತೆ ಹಂಚಿಕೊಳ್ಳುತ್ತಿರುವ ಹಳೆ ಸಂಚಿಕೆಗಳನ್ನು ಓದುವಾಗ ಇನ್ನು ನೀವು ಕೂಡ ಎಲ್ಲ ಜಾಹೀರಾತುಗಳನ್ನು ಗಮನವಿಟ್ಟು ನೋಡುತ್ತೀರಿ ಅಂದುಕೊಂಡಿದ್ದೇನೆ.
Excellent information! Loved reading this.
ReplyDelete