ಇವು ಕನ್ನಡ ಚಿತ್ರರಂಗ ಕಂಡ ಅತ್ಯಂತ ಪ್ರತಿಭಾವಂತ, ಆದರೆ ದುರದೃಷ್ಟವಶಾತ್ ಅಲ್ಪಾಯುಷಿಯಾಗಿದ್ದ ಸಂಗೀತ ನಿರ್ದೇಶಕ ಎಂ. ವೆಂಕಟರಾಜು ಅವರ ಕೊನೆಯ ಚಿತ್ರ ಜೀವನ ತರಂಗದ ಹಾಡುಗಳು. ಅವರ ಮೆಚ್ಚಿನ ಎಸ್.ಕೆ.ಕರೀಂಖಾನ್ ರಚಿಸಿದ್ದ ಒಂದೊಂದು ಹಾಡೂ ಜೇನಿನಲ್ಲಿ ಅದ್ದಿ ತೆಗೆದಿದೆಯೇನೋ ಅನ್ನಿಸುವಂಥದ್ದು. ಈ ಚಿತ್ರ 1963ರಲ್ಲಿ ಬಿಡುಗಡೆಯಾಗುವುದರೊಳಗೆ ಅವರು ಇಹಲೋಕ ತ್ಯಜಿಸಿದ್ದರು. ಆಗಲೇ ಸಂಯೋಜಿಸಿ ಇಟ್ಟಿದ್ದ ಒಂದೆರಡು ಹಾಡುಗಳನ್ನು ಆ ಮೇಲೆ ಚಂದ್ರಕುಮಾರ ಚಿತ್ರದಲ್ಲಿ ಅವರ ಗುರು ಟಿ. ಚಲಪತಿ ರಾವ್ ಬಳಸಿಕೊಂಡರು. ನಿಮ್ಮ ವಿರಾಮದ ವೇಳೆಯಲ್ಲಿ ಶಾಂತ ಮನಸ್ಸಿನಿಂದ ಒಂದೊಂದಾಗಿ ಈ ಹಾಡುಗಳನ್ನು ಆಲಿಸಿ. ಸಾಧ್ಯವಾದರೆ ಹೆಡ್ ಫೋನ್ ಬಳಸಿ. ಇವುಗಳಲ್ಲಿರುವ presence of voice and instruments ಅಂದರೆ ಧ್ವನಿ ಮತ್ತು ವಾದ್ಯಗಳ ಸ್ಪಷ್ಟತೆಯನ್ನು ಅನುಭವಿಸಿ.
ಬಾರಾ ಮಂದಾರ
ಕರಿಂಖಾನ್ ಅವರ ಪ್ರಾಸಬದ್ಧ ಪದಪುಂಜಗಳನ್ನೊಳಗೊಂಡ ಆನಂದಮಯ ಹಾಡು. ಪದಗಳ ಅರ್ಥಕ್ಕೆ ಇಲ್ಲಿ ಹೆಚ್ಚು ಒತ್ತು ಇಲ್ಲ. ಉಕ್ಕುವ ಉಲ್ಲಾಸಕ್ಕೆ ಪ್ರಾಮುಖ್ಯ. ಮಧ್ಯದಲ್ಲಿ ಒಂದೆಡೆ ಬರುವ ಮಂದ್ರ ಕ್ಲಾರಿನೆಟ್ ಮತ್ತು ತಾರ ಕೊಳಲಿನ ಮೇಳ ಗಾಢ ಸಕ್ಕರೆ ಪಾಕದಲ್ಲಿ ನಿಂಬೆಯ ರಸವನ್ನು ಸೇರಿಸಿದಂತಿದ್ದು ಎಸ್.ಜಾನಕಿ ಅವರ ಜೇನದನಿಗೆ ಸಂವಾದಿಯೇನೋ ಅನ್ನಿಸುವಂತಿದೆ! ಬೋಲ್ ಗಳನ್ನು ಅನುಸರಿಸುವ ಶ್ರುತಿಬದ್ಧ ಢೋಲಕ್, ವಯಲಿನ್ಸ್, ಮ್ಯಾಂಡೊಲಿನ್ ಇತ್ಯಾದಿ ವಾದ್ಯಗಳು ಹಾಡಿಗೆ ಮೆರುಗು ನೀಡಿವೆ.
ಹೆಣ್ಣಾಗಿ ಬಂದ ಮೇಲೆ
ಮೊದಲ ಹಾಡಿನ ಉಲ್ಲಾಸಕ್ಕೆ contrast ರೂಪದಲ್ಲಿರುವ ವಿಷಾದ ಭಾವದ ಹಾಡಿದು. ಜಾನಕಿ ಅವರದ್ದೇ ಧ್ವನಿ. ಇದರಲ್ಲಿ ಆ ಕಾಲದಲ್ಲಿ ಜನಪ್ರಿಯವಾಗಿದ್ದ ಸೋಲೊವಾಕ್ಸ್ ಎಂಬ ಸಂಗೀತೋಪಕರಣ ಬಳಕೆಯಾಗಿದೆ. ಅದು ಈಗಿನ ಕೀಬೋರ್ಡುಗಳಂತೆ ಕರ್ಕಶವಾಗಿರದೆ ಇತರ ವಾದ್ಯಗಳ ಜೊತೆ ಶ್ರುತಿಶುದ್ಧವಾಗಿ ಮಿಳಿತವಾಗುತ್ತಿದ್ದುದನ್ನು ಗಮನಿಸಬಹುದು. ಕನ್ನಡದ ಹಾಸ್ಯ ನಟ ಹನುಮಂತಾಚಾರ್ ಇದರ ನುಡಿಸುವಿಕೆಯಲ್ಲಿ ಪ್ರಾವೀಣ್ಯ ಹೊಂದಿದ್ದರು. 60ರ ದಶಕದಲ್ಲಿ ಬೆಂಗಳೂರು ಆಕಾಶವಾಣಿಯ ಕಾರ್ಮಿಕರ ಕಾರ್ಯಕ್ರಮದಲ್ಲಿ ಬರುತ್ತಿದ್ದ ಚಿತ್ರಗೀತೆಗಳನ್ನಾಧರಿಸಿದ ಗೀತ ರೂಪಕದಲ್ಲಿ ಈ ಹಾಡು ಹೆಚ್ಚಾಗಿ ಸೇರ್ಪಡೆಗೊಳ್ಳುತ್ತಿತ್ತು. ರಾಜನ್ ನಾಗೇಂದ್ರ ಅವರು ನೀ ನಡೆವ ಹಾದಿಯಲ್ಲಿ ಹಾಡಿಗೆ ಇದರಿಂದ ಸ್ಪೂರ್ತಿ ಪಡೆದಿರಬಹುದು!
ಬಂತಮ್ಮ ಮದುವೆ ಬಂತಮ್ಮ
ಇದೂ ಜಾನಕಿ ಅವರದೇ ಧ್ವನಿಯಲ್ಲಿರುವ, ಸೋದರ ಸೊಸೆಯೊಬ್ಬಳು ತನ್ನ ಅತ್ತೆಯನ್ನು ಛೇಡಿಸುವ ಹಾಡು. ಸನ್ನಿವೇಶಕ್ಕೆ ತಕ್ಕಂತೆ ನಮ್ಮತ್ತೆ ರಾಣಿ, ಚಂದದ ಚಿಕ್ಕಪ್ಪ, ನೋಟಿನ ಕಟ್ಟು, ಮೂರೆಳೆ ಚೈನು ಇತ್ಯಾದಿ ಪದಗಳನ್ನು ಬಳಸಲಾಗಿದೆ. ಮದುಮಗನನ್ನು ಮದುವಣ್ಣನೆಂದು ಸಂಬೋಧಿಸಿರುವುದು ಗಮನಾರ್ಹ. ಕರೀಂಖಾನ್ ಅವರು ಮನೆ ಅಳಿಯ ಚಿತ್ರಕ್ಕಾಗಿ ರಚಿಸಿದ ಗೊಲ್ಲರು ಬಾಲೆ ಹಾಡಲ್ಲೂ ಈ ಪದ ಬಳಸಿದ್ದಾರೆ.
ಮನದೆ ಮುನಿದೆ
ಇದು ಪಿ.ಬಿ.ಶ್ರೀನಿವಾಸ್ ಮತ್ತು ಜಾನಕಿ ಅವರ ಧ್ವನಿಯಲ್ಲಿರುವ ಯುಗಳ ಗೀತೆ. ಇವರಿಬ್ಬರು ಭಕ್ತ ಕನಕದಾಸದ ಕಾಲದಿಂದಲೂ ವೆಂಕಟರಾಜು ಅವರ ನೆಚ್ಚಿನ ಗಾಯಕರಾಗಿದ್ದವರು. ಹಾಡಿನ ಮೂಡಿಗೆ ತಕ್ಕಂತೆ ವೇಗದ ಲಯ ಇದೆ. ಕಪ್ಪು ಎರಡರ ಶ್ರುತಿಯಲ್ಲಿ ಮಧ್ಯ ಮತ್ತು ತಾರ ಸಪ್ತಕಗಳಲ್ಲೇ ಸಂಚರಿಸಿ ಮೇಲಿನ ಮಧ್ಯಮವನ್ನು ಸ್ಪರ್ಶಿಸುವ ಈ ಹಾಡಿನಲ್ಲಿ ಪಿ.ಬಿ.ಎಸ್ ಅವರು ಕೆಲವೆಡೆ ಫಾಲ್ಸ್ ವಾಯ್ಸ್ ಬಳಸಿದ್ದಾರೆ. ಬಹಳಷ್ಟು ಜಂಪಿಂಗ್ ನೋಟ್ಸ್ ಇರುವ ಈ ರಚನೆ ಹಾಡಲು ನುಡಿಸಲು ಅಷ್ಟೊಂದು ಸುಲಭವಲ್ಲ. ಆದರೆ ಆಲಿಸಲು ಬಲು ಆಪ್ಯಾಯಮಾನ.
ಆನಂದ ತುಂಬಿ ತಂದೆ
ಪಿ.ಬಿ.ಎಸ್ ಮತ್ತು ಜಾನಕಿ ಅವರ ಯುಗಳ ಸ್ವರಗಳಲ್ಲಿರುವ ಇದು ರಾಧಾ-ಕೃಷ್ಣರ ಸರಸ ಸಂವಾದ ರೂಪದಲ್ಲಿದ್ದು ದರ್ಬಾರಿ ಕಾನಡಾ ರಾಗಾಧಾರಿತವಾಗಿದೆ. ಮೊದಲ ಎರಡು ಚರಣಗಳಲ್ಲಿ ಕೃಷ್ಣನ ಓಲೈಕೆಗೆ ಪ್ರತಿರೋಧ ತೋರಿದ ರಾಧೆ ಮೂರನೆ ಚರಣದಲ್ಲಿ ಆತನಿಗೆ ಶರಣಾಗುತ್ತಾಳೆ. ಕೃಷ್ಣನ ಹಾಡಾದರೂ ಆರಂಭದಲ್ಲಿ ಮಾತ್ರ ಕೊಳಲಿನ ತಾನವಿದ್ದು ತಬ್ಲಾದ ಚಿಕ್ಕ ಸೋಲೋದ ನಂತರ ಹಾಡು ಆರಂಭವಾದ ಮೇಲೆ ಸಿತಾರ್, ವಯಲಿನ್ಸ್ ಮತ್ತು ತಾರ್ ಶಹನಾಯಿ ಬಳಕೆಯಾಗಿವೆ. ಕೊನೆಯಲ್ಲಿ ಚುಟುಕಾದ ಚಿಟ್ಟೆಸ್ವರಗಳೂ ಇವೆ. ಈ ಹಾಡಿಗೆ ತಬ್ಲಾ ನುಡಿಸಿದ ಕಲಾವಿದರಿಗೆ ನೂರಕ್ಕೆ ನೂರು ಅಂಕ ಕೊಡಲೇ ಬೇಕು. ಎಸ್.ಕೆ. ಕರೀಂಖಾನ್ ಅವರಂಥ ಅನ್ಯ ಧರ್ಮೀಯ ಕವಿಯೊಬ್ಬರು ಇಂತಹ ಕೃಷ್ಣನ ಗೀತೆಗಳನ್ನು ರಚಿಸುವುದು ಆಗ ವಿಶೇಷ ಸುದ್ದಿಯಾಗುತ್ತಿರಲಿಲ್ಲ. ಕರೀಂಖಾನ್ ಅವರೇ ರಚಿಸಿದ ನಟವರ ಗಂಗಾಧರ ಅಥವಾ ಶಕೀಲ್ ಬದಾಯೂನಿ ರಚಿಸಿದ ಮನ್ ತಡಪತ್ ಹರಿ ದರ್‌ಶನ್ ಕೊ ಆಜ್ ಮುಂತಾದ ಹಾಡುಗಳು ಆಗ ಚಿತ್ರರಂಗದ ಸರ್ವಧರ್ಮ ಸಮನ್ವಯದ ಕುರುಹೆಂಬಂತೆ ಸ್ವೀಕರಿಸಲ್ಪಡುತ್ತಿದ್ದವು!
ಬಂತು ನವ ಜೀವನ
ಪ್ರಸಿದ್ಧ ಗಾಯಕರು, ದೊಡ್ಡ ಆರ್ಕೆಷ್ಟ್ರಾ ಯಾವುದೂ ಇಲ್ಲದೆಯೂ ಒಂದು ಉತ್ಕೃಷ್ಟ ಹಾಡನ್ನು ಸಂಯೋಜಿಸಬಹುದೆಂದು ವೆಂಕಟರಾಜು ಇಲ್ಲಿ ತೋರಿಸಿಕೊಟ್ಟಿದ್ದಾರೆ. ಕವ್ವಾಲಿ ಶೈಲಿಯ ಈ ಹಾಡಿನಲ್ಲಿ ಬಳಕೆಯಾಗಿರುವುದು ತಬ್ಲಾ, ಹಾರ್ಮೋನಿಯಮ್ ಮತ್ತು ಕ್ಲಾರಿನೆಟ್ ಮಾತ್ರ . ಇದನ್ನು ಹಾಡಿದವರು ಸತ್ಯ ರಾವ್ ಮತ್ತು ಸೌಮಿತ್ರಿ ಎಂಬ ಹೆಸರೇ ಕೇಳಿರದ ಕಲಾವಿದರು! ಚಿತ್ರದ ನಾಮಾವಳಿಯಲ್ಲೂ ಇವರ ಉಲ್ಲೇಖವೇ ಇಲ್ಲ! ಆದರೂ ಅದೆಂತಹ ಧ್ವನಿಭಾರ, ಅದೆಂತಹ voice throw, ಅದೆಂತಹ ಶ್ರುತಿ ಶುದ್ಧತೆ, ಅದೆಂತಹ ವೃತ್ತಿಪರತೆ! ಈ ಗಾಯಕರು ಬಹುಶಃ ನಾಟಕರಂಗದಲ್ಲಿ ಪಳಗಿದವರಿರಬೇಕು. ವೆಂಕಟರಾಜು ಅವರೂ ನಾಟಕದ ಹಿನ್ನೆಲೆಯಿಂದ ಬಂದವರೇ ಆಗಿದ್ದರಿಂದ ಈ ಪ್ರಯೋಗ ಮಾಡಿರಬಹುದು. ನಿಮ್ಮಲ್ಲಿ ಹೆಚ್ಚಿನವರು ಖಂಡಿತವಾಗಿಯೂ ಈ ಹಾಡನ್ನು (ಇತ್ತೀಚೆಗೆ) ಕೇಳಿರಲಿಕ್ಕಿಲ್ಲ. ಆ ಕಾಲದಲ್ಲಿ ಆಕಾಶವಾಣಿ ಬೆಂಗಳೂರು, ಧಾರವಾಡ, ಭದ್ರಾವತಿಗಳಲ್ಲಿ ಹೆಚ್ಚಾಗಿ ಕೇಳಿಬರುತ್ತಿತ್ತು .
ಬಂತು ನವ ಜೀವನ
ಪ್ರಸಿದ್ಧ ಗಾಯಕರು, ದೊಡ್ಡ ಆರ್ಕೆಷ್ಟ್ರಾ ಯಾವುದೂ ಇಲ್ಲದೆಯೂ ಒಂದು ಉತ್ಕೃಷ್ಟ ಹಾಡನ್ನು ಸಂಯೋಜಿಸಬಹುದೆಂದು ವೆಂಕಟರಾಜು ಇಲ್ಲಿ ತೋರಿಸಿಕೊಟ್ಟಿದ್ದಾರೆ. ಕವ್ವಾಲಿ ಶೈಲಿಯ ಈ ಹಾಡಿನಲ್ಲಿ ಬಳಕೆಯಾಗಿರುವುದು ತಬ್ಲಾ, ಹಾರ್ಮೋನಿಯಮ್ ಮತ್ತು ಕ್ಲಾರಿನೆಟ್ ಮಾತ್ರ . ಇದನ್ನು ಹಾಡಿದವರು ಸತ್ಯ ರಾವ್ ಮತ್ತು ಸೌಮಿತ್ರಿ ಎಂಬ ಹೆಸರೇ ಕೇಳಿರದ ಕಲಾವಿದರು! ಚಿತ್ರದ ನಾಮಾವಳಿಯಲ್ಲೂ ಇವರ ಉಲ್ಲೇಖವೇ ಇಲ್ಲ! ಆದರೂ ಅದೆಂತಹ ಧ್ವನಿಭಾರ, ಅದೆಂತಹ voice throw, ಅದೆಂತಹ ಶ್ರುತಿ ಶುದ್ಧತೆ, ಅದೆಂತಹ ವೃತ್ತಿಪರತೆ! ಈ ಗಾಯಕರು ಬಹುಶಃ ನಾಟಕರಂಗದಲ್ಲಿ ಪಳಗಿದವರಿರಬೇಕು. ವೆಂಕಟರಾಜು ಅವರೂ ನಾಟಕದ ಹಿನ್ನೆಲೆಯಿಂದ ಬಂದವರೇ ಆಗಿದ್ದರಿಂದ ಈ ಪ್ರಯೋಗ ಮಾಡಿರಬಹುದು. ನಿಮ್ಮಲ್ಲಿ ಹೆಚ್ಚಿನವರು ಖಂಡಿತವಾಗಿಯೂ ಈ ಹಾಡನ್ನು (ಇತ್ತೀಚೆಗೆ) ಕೇಳಿರಲಿಕ್ಕಿಲ್ಲ. ಆ ಕಾಲದಲ್ಲಿ ಆಕಾಶವಾಣಿ ಬೆಂಗಳೂರು, ಧಾರವಾಡ, ಭದ್ರಾವತಿಗಳಲ್ಲಿ ಹೆಚ್ಚಾಗಿ ಕೇಳಿಬರುತ್ತಿತ್ತು .
ಜೀವನ ತರಂಗದ ಹಾಡುಗಳ ವೀಡಿಯೊ ಮಾತ್ರವಲ್ಲ, ಆ ಪೂರ್ತಿ ಚಿತ್ರವೇ ಅಂತರ್ಜಾಲದಲ್ಲಿ ಲಭ್ಯವಿದ್ದು ಆಸಕ್ತರು ವೀಕ್ಷಿಸಬಹುದು. ಈ ಪೋಸ್ಟ್ ಓದಿದ ನಂತರ ವೀಕ್ಷಿಸಿದರೆ ಹೆಚ್ಚಿನ ಆನಂದ ದೊರೆಯಬಹುದು!
No comments:
Post a Comment
Your valuable comments/suggestions are welcome