Sunday 11 December 2016

ಅಬ್ಬಾ! ಆ ಹಾಡುಗಳು!!


     ಪಿ.ಕಾಳಿಂಗರಾಯರ ಚಿತ್ರ ಮತ್ತು ಈ ಉದ್ಗಾರ ನೋಡಿದೊಡನೆ ಈ ಬರಹ ಅವರ ಪ್ರಸಿದ್ಧ ಭಕ್ತಿ ಗೀತೆ, ಭಾವ ಗೀತೆ, ಜಾನಪದ ಗೀತೆಗಳ  ಬಗ್ಗೆ ಇರಬಹುದೆಂದು ನೀವಂದುಕೊಂಡಿದ್ದರೆ ನಿಮ್ಮ ಊಹೆ ತಪ್ಪು.  ಅವುಗಳೆಲ್ಲವು ಕೂಡ ಈ ಉದ್ಗಾರಕ್ಕೆ ಅರ್ಹವೇ ಆಗಿದ್ದರೂ ಇಲ್ಲಿ ನಾನು ಹೇಳ ಹೊರಟಿರುವುದು ಅವರ ಸಂಗೀತ ನಿರ್ದೇಶನವಿದ್ದ ಸಿನಿಮಾ ಒಂದರ ಹಾಡುಗಳ ಬಗ್ಗೆ.  ಹೌದು, ತಾಯಿ ದೇವಿಯನು ಕಾಣೆ ಹಂಬಲಿಸಿ, ಅಂಥಿಂಥ ಹೆಣ್ಣು ನೀನಲ್ಲ ಮುಂತಾದ ಹಾಡುಗಳನ್ನು ಸಿನಿಮಾಗಳಿಗಾಗಿ ಹಾಡಿದ ಅವರು ಕೆಲವು ಚಿತ್ರಗಳಿಗೆ ಸಂಗೀತ ನಿರ್ದೇಶನ ಕೂಡ ಮಾಡಿದ್ದರು.  ಅವುಗಳ ಪೈಕಿ 1959ರಲ್ಲಿ ಬಿಡುಗಡೆ ಆದ William Shakespeare ಅವರ  Taming of the shrew  ಆಧಾರಿತ ಹೆಚ್.ಎಲ್.ಎನ್.ಸಿಂಹ ಅವರ ನಿರ್ದೇಶನದ ಅಬ್ಬಾ ಆ ಹುಡುಗಿಯೂ  ಒಂದು.  ರಾಜಕುಮಾರ್, ನರಸಿಂಹರಾಜು, ಮೈನಾವತಿ, ಪಂಢರಿ ಬಾಯಿ ಮುಂತಾದವರ ತಾರಾಗಣವಿದ್ದ ಈ ಚಿತ್ರದಲ್ಲಿ ರಾಜಾ ಶಂಕರ್ ಮೊತ್ತ ಮೊದಲ ಬಾರಿ ಕಾಣಿಸಿಕೊಂಡಿದ್ದರು. ಪಿ.ಬಿ.ಶ್ರೀನಿವಾಸ್ ಮತ್ತು ಎಸ್.ಜಾನಕಿ ಅವರ ಸುಮಧುರ ಯುಗಳ ಗೀತೆಗಳ ಶುಭಾರಂಭವಾದದ್ದೂ ಈ ಚಿತ್ರದಿಂದಲೇ.


     ಈ ಚಿತ್ರದಲ್ಲಿ ಕಾಳಿಂಗ ರಾವ್ ಅವರಿಗೆ ಅರೇಂಜರ್ ರೂಪದಲ್ಲಿ ಸಹಾಯ ಮಾಡಲು ಹಿಂದಿಯ ಪ್ರಸಿದ್ಧ ಸಂಗೀತ ನಿರ್ದೇಶಕ ಹಾಗೂ ಮ್ಯಾಂಡೊಲಿನ್ ವಾದಕ ಸಜ್ಜಾದ್ ಹುಸೇನ್ ಅವರನ್ನು ವಿಶೇಷವಾಗಿ ಕರೆಸಲಾಗಿತ್ತು. ಸಂಗೀತ ನಿರ್ದೇಶಕರು ಹಾಡುಗಳಿಗೆ ರಾಗ ಸಂಯೋಜಿಸಿದ  ಮೇಲೆ ಅಗತ್ಯವಿರುವ notations ಇತ್ಯಾದಿ ಮಾಡಿಕೊಂಡು ಸೂಕ್ತ ವಾದ್ಯಗಾರರನ್ನು ಆಯ್ಕೆ ಮಾಡಿ ಆರ್ಕೆಷ್ಟ್ರಾವನ್ನು ಹೊಂದಿಸಿ ಹಾಡನ್ನು ಅಲಂಕರಿಸುವುದು ಅರೇಂಜರ್ ಕೆಲಸವಾಗಿರುತ್ತದೆ. ಒಂದು ರೀತಿಯಲ್ಲಿ ಅರೇಂಜರ್ ಅಂದರೆ  ಸಂಗೀತ ನಿರ್ದೇಶಕರ ಬಲಗೈ ಇದ್ದ ಹಾಗೆ. ಹಿಂದಿಯಲ್ಲಿ ಶಂಕರ್ ಜೈಕಿಶನ್, ಓ.ಪಿ.ನಯ್ಯರ್, ಸಲಿಲ್ ಚೌಧರಿ ಮುಂತಾದವರಿಗೆ ಸೆಬಾಸ್ಟಿಯನ್; ಎಸ್.ಡಿ.ಬರ್ಮನ್, ಆರ್.ಡಿ.ಬರ್ಮನ್ ಅವರಿಗೆ ಮಾರುತಿ ರಾವ್ ಮತ್ತು ಬಾಸು-ಮನೋಹಾರಿ ಅರೇಂಜರ್ ಆಗಿದ್ದರು. ದಕ್ಷಿಣ ಭಾರತದಲ್ಲಿ ಆರ್. ಸುದರ್ಶನಂ, ವಿಜಯಾ ಕೃಷ್ಣಮೂರ್ತಿ, ಎಲ್.ವೈದ್ಯನಾಥನ್ ಮುಂತಾದವರು ಪ್ರಸಿದ್ಧ ಅರೇಂಜರ್ಸ್.  ಇಳಯ ರಾಜಾ ಕೂಡ ಮೊದಲು ಜಿ.ಕೆ.ವೆಂಕಟೇಶ್ ಅವರಿಗೆ ಅರೇಂಜರ್ ಆಗಿ ಕೆಲಸ ಮಾಡಿದ್ದರು.  ಲಕ್ಷ್ಮೀಕಾಂತ್ ಪ್ಯಾರೇಲಾಲ್ ಜೋಡಿಯಲ್ಲಿ ಪ್ಯಾರೇಲಾಲ್ ಸ್ವತಃ ಅರೇಂಜರ್ ಆಗಿದ್ದರು.  ಹಾಗೆಯೇ ಕಾಳಿಂಗ ರಾವ್ ಅವರಿಗೆ ಸಹಾಯಕರಾಗಿ ಬಂದ ಸಜ್ಜಾದ್ ಹುಸೇನ್ ಕೂಡ ಸಂಗೀತ ನಿರ್ದೇಶಕ ಮತ್ತು ಅರೇಂಜರ್ ಎರಡೂ ಆಗಿದ್ದವರು. ಅವರ ಸಹಕಾರದೊಂದಿಗೆ ಕಾಳಿಂಗರಾಯರು ಅಬ್ಬಾ ಆ ಹುಡುಗಿ ಚಿತ್ರದಲ್ಲಿ ನೀಡಿದ ಹಾಡುಗಳನ್ನು ಕೇಳಿದರೆ FM ರೇಡಿಯೋ, ಟಿ.ವಿ, mp3ಗಳಲ್ಲಿ ಕೇಳಿದ ಹಾಡುಗಳನ್ನೇ ಮತ್ತೆ ಮತ್ತೆ ಕೇಳಿ ಬೇಸತ್ತಿರಬಹುದಾದ ನಿಮಗೆ ಖಂಡಿತವಾಗಿಯೂ ತಾಜಾತನದ ಅನುಭವವಾಗಬಹುದು.  ಇವು ಚಿತ್ರಗೀತೆಗಳ ಸಿದ್ಧ ಮಾದರಿಗಿಂತ ಕೊಂಚ ಭಿನ್ನ.




ಆಸೆಯ ಗೋಪುರ ನಿರ್ಮಿಸಿಕೊಂಡು

      ತಾನೇ ಹಾಡಬಹುದಾಗಿತ್ತಾದರೂ   ಪಿ.ಬಿ.ಶ್ರೀನಿವಾಸ್ ಅವರಿಗೆ ಹೃದಯ ದೇವಿಯೆ ಮತ್ತು ಈ ಹಾಡನ್ನು ಎಸ್.ಜಾನಕಿ ಅವರೊಂದಿಗೆ ಹಾಡಲು ಅವಕಾಶ ಮಾಡಿಕೊಟ್ಟು  ಅವರಿಬ್ಬರ ಯುಗಳ ಗಾಯನದ ಮೊದಲ ಚಿತ್ರ ಎಂಬ ದಾಖಲೆ ನಿರ್ಮಾಣವಾಗಲು  ಪಿ.ಕಾಳಿಂಗ ರಾವ್ ಕಾರಣರಾದರು.  ಈ ಹಾಡಿನಲ್ಲಿ ಅತಿ ತಾರ ಸ್ಥಾಯಿಯಲ್ಲಿ ಆರಂಭವಾಗುವ   ಜಾನಕಿ ಅವರ ಧ್ವನಿಯನ್ನು ಆಲಿಸಿದರೆ ವಯಲಿನ್ ನುಡಿಯುತ್ತಿದೆಯೇನೋ ಎಂದು ಭಾಸವಾಗುತ್ತದೆ!  ಇದು ಖಂಡಿತವಾಗಿಯೂ ಸಜ್ಜಾದ್ ಹುಸೇನ್ ಅವರದೇ ಪ್ರಯೋಗ ಆಗಿರಬಹುದು. ಹಿಂದಿಯಲ್ಲಿ ಅವರು ರುಸ್ತುಂ ಸೊಹ್ರಾಬ್ ಚಿತ್ರದ ಫಿರ್ ತುಮ್ಹಾರೀ ಯಾದ್ ಆಯೀ ಏ ಸನಮ್ ಹಾಡಿನ ಆರಂಭವನ್ನು ರಫಿ ಅವರ ಅತಿ ತಾರ ಸ್ಥಾಯಿಯ  ಆಲಾಪದಿಂದಲೇ ಮಾಡಿರುವುದು ಇದಕ್ಕೆ ಸಾಕ್ಷಿ.  ನಾಲ್ಕಕ್ಷರದ ಢೋಲಕ್ ನಡೆಯೊಂದಿಗೆ ಆರಂಭವಾಗುವ ಈ ಹಾಡು  ಮಧ್ಯದಲ್ಲಿ ತಬಲಾದ ಐದು ಅಕ್ಷರಕ್ಕೆ ಬದಲಾಗಿ ಮತ್ತೆ ನಾಲ್ಕಕ್ಷರಕ್ಕೆ ಮರಳುವುದು ಒಂದು ಅಪರೂಪದ ಪ್ರಯೋಗ. ವಿಷಾದ ಭಾವದ ಗೀತೆಯಾದರೂ ಗ್ರೂಪ್ ವಯಲಿನ್ಸ್, ಮ್ಯಾಂಡೊಲಿನ್, ಹವಾಯಿಯನ್ ಗಿಟಾರ್, ಟ್ರಂಪೆಟ್, ಕೊಳಲುಗಳ ಸಮರ್ಥ ಬಳಕೆಯಿಂದ ಅದಕ್ಕೊಂದು ಉಠಾವ್ ದೊರೆತಿದೆ. ಪಿ.ಬಿ.ಶ್ರೀನಿವಾಸ್ ಧ್ವನಿಯಲ್ಲಿರುವ ಸದಯೇ ಬಾರೆಯಾ ಸಾಲು ಮತ್ತು ಆ ಸಾಲಿನ ಕೊನೆಯಲ್ಲಿ ಬರುವ ಕೊಳಲಿನ ಚೀತ್ಕಾರ ನೇರವಾಗಿ ಎದೆಯನ್ನಿರಿಯುವಂಥದ್ದು. ಈ ಸದಯೇ ಪದದ ಎತ್ತುಗಡೆಯು ಆಹ್ ಚಿತ್ರದ ಆಜಾರೇ ಅಬ್ ಮೇರಾ ದಿಲ್ ಪುಕಾರಾವನ್ನು ಹೋಲುತ್ತದೆ. ಢೋಲಕ್ ನಡೆಯೂ ಅದರಂತೆಯೇ ಇರುವುದು ಈ ಹೋಲಿಕೆಗೆ ಸಮರ್ಥನೆ ನೀಡುತ್ತದೆ.  Interludeನ ಒಂದು ತುಣುಕು ಮಾಯಾ ಬಜಾರ್ ಚಿತ್ರದ ಹಾಡನ್ನು ನೆನಪಿಸುತ್ತದೆ.




ಆನಂದದಾಯಕವು

     ಎಸ್.ಜಾನಕಿ ಧ್ವನಿಯಲ್ಲಿರುವ ಈ ಹಾಡಿನಲ್ಲಿ ಸಜ್ಜಾದ್ ಹುಸೇನ್ ಅವರ ಮ್ಯಾಂಡೊಲಿನಿನದೇ ಪ್ರಾಬಲ್ಯ.  ಗಿಟಾರಿನೊಂದಿಗೆ ಆರಂಭವಾಗುವ ಹಾಡು ಬೊಂಗೋ ರಿದಂ ಜೊತೆಗಿನ ಚಿಕ್ಕ ಆಲಾಪವೊಂದರ ನಂತರ ದೀರ್ಘ ಮ್ಯಾಂಡೊಲಿನ್ prelude ಹೊಂದಿದೆ.  ಚಿಕ್ಕ ಉರುಳಿಕೆಯೊಂದಿಗೆ ಎತ್ತುಗಡೆಯಾಗುವ ಢೋಲಕ್ ರಿದಂ ಜೊತೆ ಎಕಾರ್ಡಿಯನ್ನಿನ ಚಿಕ್ಕ link piece ಹೊಂದಿದ ಪಲ್ಲವಿ ಮುಗಿಯುತ್ತಲೇ ಹಿಂದಿಯ ಜಿ.ಎಸ್.ಕೊಹ್ಲಿ ಶೈಲಿಯ ಚಿಕ್ಕ full weight ತುಣುಕಿನೊಂದಿಗೆ ಮೊದಲ BGM ಆರಂಭವಾಗಿ ಕೊಳಲು, ಕ್ಲಾರಿನೆಟ್, ಗ್ರೂಪ್ ವಯಲಿನ್ಸ್ ಆದಮೇಲೆ ಮತ್ತೆ ಮ್ಯಾಂಡೊಲಿನ್ ಬರುತ್ತದೆ. ಚರಣ ಭಾಗದಲ್ಲಿ ಜಾನಕಿ ಅವರ ತಾರ ಸ್ಥಾಯಿ ಸಾಮರ್ಥ್ಯವನ್ನು ಬಳಸಿಕೊಳ್ಳಲಾಗಿದ್ದು ಅಕಾರ್ಡಿಯನ್ ಮತ್ತು ಕೊಳಲು-ಕ್ಲಾರಿನೆಟ್ ಗಳ link pieceಗಳಿವೆ.  ಚರಣದ ಕೊನೆಯ ಭಾಗದಲ್ಲಿ ಅಮರ ಸಂದೇಶ ಎಂಬ ಸಾಲಿಗೆ ಢೋಲಕ್ ಬದಲಿಗೆ ಬೊಂಗೋ ರಿದಮ್ ಇದೆ.  ಎರಡನೆಯ BGM ಮ್ಯಾಂಡೊಲಿನ್ pieceನಿಂದ ಆರಂಭವಾಗಿ ಗ್ರೂಪ್ ವಯಲಿನ್ಸ್ ನೊಂದಿಗೆ ಮುಕ್ತಾಯವಾಗುತ್ತದೆ.  ಎರಡನೆಯ ಚರಣವೂ ಢೋಲಕ್ ಉರುಳಿಕೆಯೊಂದಿಗೆ ಎತ್ತುಗಡೆಯಾಗಿ ಮುಂದುವರೆಯುತ್ತದೆ.ಕೊನೆಯಲ್ಲಿ ಪಲ್ಲವಿ ಭಾಗ ಪೂರ್ತಿ ಪುನರಾವರ್ತನೆಯಾಗಿ ಬೊಂಗೋ ರಿದಂ ಜೊತೆಗಿನ ವಯಲಿನ್ಸ್, ಕ್ಲಾರಿನೆಟ್, ಕೊಳಲುಗಳ climaxನೊಂದಿಗೆ ಮುಗಿಯುತ್ತದೆ.  ಹಿಂದಿಯಲ್ಲಿ ಆರ್ ಪಾರ್ ಎಂಬ ಜೋಡಿ ಪದಗಳನ್ನು ಕಹೀಂ ಆರ್ ಕಹೀಂ ಪಾರ್ ಲಾಗಾ ತೀರೇ ನಜರ್ ಎಂದು ವಿಂಗಡಿಸಿ ಬಳಸಿದಂತೆ ಇಲ್ಲಿ ಹಾವ ಭಾವ ಜೋಡಿ ಪದಗಳನ್ನು ಏನೇನೋ ಹಾವ ಏನೇನೋ ಭಾವ ಎಂದು ವಿಂಗಡಿಸಲಾಗಿದೆ.   ಈ ಹಾಡಿನ ಮೊದಲ ಸಾಲಿನ ಧಾಟಿ ದಿಲ್ ಲೇಕೆ ಜಾತೆ ಹೊ ಕಹಾಂ ಎಂಬ ಹಾಡನ್ನು ಹೋಲುತ್ತದೆ.




ಕಣ್ಣುಮುಚ್ಚಾಲೆ ಆಡುವ

     ಜಿಕ್ಕಿ, ಮೋಹನ್ ಕುಮಾರಿ, ಸೋಹನ್ ಕುಮಾರಿ ಮತ್ತಿತರರು ಹಾಡಿರುವ ಇದು ಸರಳ ಜಾನಪದ ಶೈಲಿಯಲ್ಲಿದ್ದು ಸುಂದರವಾದ ಢೋಲಕ್ ಹಿನ್ನೆಲೆಯಲ್ಲಿ ಮುಂದುವರೆಯುತ್ತದೆ. ಢೋಲಕ್ ‘ಎಡ’ದ ಕೆಲಸ ಗಮನ ಸೆಳೆಯುತ್ತದೆ.  interludeಗೆ ಕ್ಲಾರಿನೆಟ್ - ಕೊಳಲು ಜೋಡಿಯನ್ನು ಮುಖ್ಯವಾಗಿ ಬಳಸಲಾಗಿದೆ. ಹಾಡಿನ ಪೂರ್ವಾರ್ಧದಲ್ಲಿ ಇದ್ದ ತಿಶ್ರ ಢೋಲಕ್ ನಡೆ ಆ ಮೇಲೆ ಚತುರಶ್ರಕ್ಕೆ ಬದಲಾಗುತ್ತದೆ.  ಹಿನ್ನೆಲೆಗೆ ಮ್ಯಾಂಡೊಲಿನ್ ಸೇರಿಕೊಳ್ಳುತ್ತದೆ. ಹೆಣ್ಣುಮಕ್ಕಳ ಆಟದ ಸಂದರ್ಭದ ಹಾಡಾದ್ದರಿಂದ ಅಲ್ಲಲ್ಲಿ ವಿಶೇಷ effects ಬಳಸಿಕೊಳ್ಳಲಾಗಿದೆ.




ಎನಿತು ಮನೋಹರವೀ ನಾಮ

     ಇದು ನರಸಿಂಹರಾಜು ಮೇಲೆ ಚಿತ್ರೀಕರಿಸಿದ ಕಾಮಿಡಿ ಹಾಡಾಗಿದ್ದು ಭಾರತೀಯ ಮತ್ತು ಪಾಶಾತ್ಯ ಶೈಲಿಯ ಮಿಶ್ರಣ ಹೊಂದಿದೆ.  ಮೋಹನ್ ಕುಮಾರಿ ಮತ್ತು ಪಿ. ಕಾಳಿಂಗ ರಾವ್ ಧ್ವನಿ ನೀಡಿದ್ದಾರೆ.  ಮಧ್ಯಭಾಗದಲ್ಲಿ ಬರುವ ಮ್ಯಾಂಡೊಲಿನ್ special effect ಆಕರ್ಷಕವಾಗಿದೆ.  ನಾಲ್ಕಕ್ಷರದ ತಾಳ ಐದಕ್ಷರಕ್ಕೆ ಬದಲಾಗುವ ತಂತ್ರ ಇಲ್ಲೂ ಬಳಸಲಾಗಿದೆ.  ತನ್ನ ಉಬ್ಬುಹಲ್ಲುಗಳನ್ನೇ ಬಂಡವಾಳವಾಗಿಸಿ ಗೆದ್ದ ನರಸಿಂಹರಾಜುವಿಗೆ ದಂತವಕ್ರ ಮತ್ತು ವಕ್ರದಂತ ಎಂಬೆರಡು ಬಿರುದುಗಳು ಹಾಡಿನ ಕೊನೆಯಲ್ಲಿ ಸಿಗುತ್ತವೆ!




ಬಾ ಚಿನ್ನ ಮೋಹನ ನೋಡೆನ್ನ



     ಪಕ್ಕಾ ಕಾಳಿಂಗ ರಾವ್ ಶೈಲಿಯ ಈ ಹಾಡನ್ನು ಅವರು ಮೋಹನ್ ಕುಮಾರಿ ಅವರೊಂದಿಗೆ ಹಾಡಿದ್ದಾರೆ.  ಮ್ಯಾಂಡೊಲಿನ್ ಜೊತೆಗಿನ ಅರೇಬಿಯನ್ ಶೈಲಿಯ ಆಲಾಪದೊಂದಿಗೆ ಆರಂಭವಾಗುವ ಈ ಹಾಡು ಢೋಲಕ್  ತಿಶ್ರ ನಡೆಯಲ್ಲಿ ಮುಂದುವರೆಯುತ್ತದೆ.  ಮೊದಲ ಚರಣ ಮುಗಿಯುತ್ತಲೇ ಚತುರಶ್ರ ನಡೆಯಲ್ಲಿ ವಯಲಿನ್ಸ್, ಕ್ಲಾರಿನೆಟ್, ಕೊಳಲು ಹಾಗೂ ಮ್ಯಾಂಡೊಲಿನ್ interlude ಮುಗಿದೊಡನೆ ಕಾಳಿಂಗರಾವ್ ಪ್ರವೇಶವಾಗುತ್ತದೆ.  ಸಾಲುಗಳ ಮಧ್ಯದ ತಾರ ಸ್ಥಾಯಿ ಕ್ಲಾರಿನೆಟ್  interludeಗೆ ಕೈ ಚಪ್ಪಾಳೆ ತಾಳದ ಜೊತೆ ಇದೆ.  ಮತ್ತೆ ತಿಶ್ರದಲ್ಲಿ ಪಲ್ಲವಿ ಆದೊಡನೆ ಚತುರಶ್ರದಲ್ಲಿ ಮ್ಯಾಂಡೊಲಿನ್ piece ಮುಗಿಯುತ್ತಲೇ ತಿಶ್ರ ನಡೆಯಲ್ಲಿದ್ದ  ಮೊದಲ ಚರಣದ ಸ್ವಲ್ಪ ಭಾಗ ಈಗ  ಚತುರಶ್ರದಲ್ಲಿ ಪುನರಾವರ್ತನೆಯಾಗುತ್ತದೆ. ಕೊನೆಗೆ ತಿಶ್ರನಡೆಯ ಪಲ್ಲವಿಗೆ ಮರಳುವ ಹಾಡು ಇಬ್ಬರ ಆಲಾಪದೊಂದಿಗೆ ಮುಕ್ತಾಯವಾಗುತ್ತದೆ. ಸಮದಲ್ಲಿ ಎತ್ತುಗಡೆಯಾಗುವ ಬಾ ಚಿನ್ನ ಮೋಹನ ನೋಡೆನ್ನ ಸಾಲನ್ನು ಒಂದೆರಡು ಕಡೆ  ಬಾ ಅಕ್ಷರವನ್ನು ಮೊದಲೇ ಎತ್ತಿಕೊಂಡು ಚಿನ್ನ ಮೋಹನ ನೋಡೆನ್ನ ಭಾಗವನ್ನು ಸಮಕ್ಕೆ ಹೊಂದಿಸಿ ಹಾಡುವ ಚಾಕಚಕ್ಯತೆ ಪ್ರದರ್ಶಿಸಲಾಗಿದೆ. ಈ ಹಾಡಿನ  ಗಾಯಕಿಯ voice throw ಅತ್ಯುನ್ನತ ಮಟ್ಟದ್ದು. ಅವರ ಪ್ರತಿಭೆಯನ್ನು ಇತರ ಸಂಗೀತ ನಿರ್ದೇಶಕರು ಏಕೆ ಬಳಸಿಕೊಳ್ಳಲಿಲ್ಲವೋ ತಿಳಿಯದು.




ಹೃದಯ ದೇವಿಯೆ ನಿನ್ನ

     ಪಿ.ಬಿ.ಎಸ್ - ಜಾನಕಿ all time hitsನಲ್ಲಿ ಒಂದಾದ ಇದು  ಈಗಲೂ ಕೆಲವೊಮ್ಮೆ ರೇಡಿಯೋದಲ್ಲಿ ಕೇಳಿ ಬರುವುದಿದೆ. ಉಳಿದ ಹಾಡುಗಳಂತೆ ಇದರಲ್ಲಿ ಆರ್ಕೆಷ್ಟ್ರಾದ ಅಬ್ಬರವಿಲ್ಲ.  ಢೋಲಕ್ ತಬ್ಲಾದಂತಹ ತಾಳ ವಾದ್ಯಗಳೂ ಇಲ್ಲ. ಸುರ್ ಬಹಾರ್ ರೀತಿಯ ತಂತಿ ವಾದ್ಯ, vibro phone, ಮರದ ಎರಡು ತುಂಡುಗಳ castanetsಗಳ ಅತಿ ಸೌಮ್ಯ ಹಿನ್ನೆಲೆ. Interludeಗೆ ಮಾತ್ರ ಇತರ ವಾದ್ಯಗಳ ಸಮೂಹ ಬಳಸಲಾಗಿದೆ.  ಪಿ.ಬಿ.ಎಸ್ ಮತ್ತು ಜಾನಕಿ ಅವರ ಧ್ವನಿ ಹಾಗೂ ಪಹಾಡಿ ರಾಗಾಧಾರಿತ  ಧಾಟಿ ಇವೇ ಹಾಡಿನ ಜೀವಾಳ. ಮರು ವರ್ಷ ಇದೇ ಶೈಲಿಯ ಚೌದವಿಂ ಕಾ ಚಾಂದ್ ಹೋ ಬಂತು!  ಕೊನೆಯ ಚರಣದಲ್ಲಿ ಒಬ್ಬರು ಒಂದು ಧಾಟಿಯಲ್ಲಿ ಹಾಡುವಾಗ ಇನ್ನೊಬ್ಬರು ಅದಕ್ಕೆ ಪೂರಕವಾದ ಬೇರೊಂದು ಧಾಟಿಯಲ್ಲಿ ಹಾಡುವ counter melody ತಂತ್ರವನ್ನು ಕನ್ನಡದಲ್ಲಿ ಮೊತ್ತ ಮೊದಲ ಬಾರಿಗೆ ಈ ಹಾಡಿನಲ್ಲಿ ಉಪಯೋಗಿಸಲಾಗಿದೆ.  ಹಾಡುಗಳ Interludeಗಳಲ್ಲಿ ಹಾಗೂ ಹಾಡಿನ ಜೊತೆ ಜೊತೆಗೆ ಹಿನ್ನೆಲೆಯಲ್ಲಿ ಚೇಲೊದಂತಹ ವಾದ್ಯಗಳನ್ನು ನುಡಿಸುವಾಗ ಹೆಚ್ಚಾಗಿ  ಈ ತಂತ್ರ ಬಳಸಲಾಗುತ್ತದೆ. 1959ರಲ್ಲಿ ನಿಂತು ನಾವು ಯೋಚಿಸುವುದಾದರೆ ಕನ್ನಡದ ಮಟ್ಟಿಗೆ ಈ ಹಾಡು ತುಂಬಾ ahead of time.




ಬಾರೆನ್ ಮನೋಹರ
ಪಾಶ್ಚಾತ್ಯ ಶೈಲಿಯ ಹಾಡು. ಪ್ರಸಿದ್ಧರನ್ನು ಹೊರತು ಪಡಿಸಿ ಗಾಯಕಿಯರ ಧ್ವನಿ ಕೇಳಿ ಗುರುತಿಸುವುದು ಬಲು ಕಷ್ಟ.  ಪದ್ಯಾವಳಿ ಅಥವಾ ಗ್ರಾಮಫೋನ್ ತಟ್ಟೆಯ ಮೊರೆಹೋಗಬೇಕಾಗುತ್ತದೆ. ಹೀಗಾಗಿ ಇದನ್ನು ಹಾಡಿದವರು ಯಾರೆಂದು ಖಚಿತವಾಗಿ ಗೊತ್ತಿಲ್ಲ. Prelude ಮತ್ತು interludeಗಳಿಗೆ ಟ್ರಂಪೆಟ್, ಮ್ಯಾಡೊಲಿನ್, ಬೊಂಗೊ ಇತ್ಯಾದಿಗಳನ್ನು  ಬಳಸಲಾಗಿದೆ.  ಹಾಡಿನ ಭಾಗದಲ್ಲಿ ಢೋಲಕ್ ಇದೆ. ಹೆಡ್ ಫೋನಿನಲ್ಲಿ ಆಲಿಸಿದರೆ ಅದರ ಎಡದ ಗುಂಕಿ ನುಡಿತವನ್ನು ಆಸ್ವಾದಿಸಬಹುದು.




ಅಬ್ಬಾ ಆ ಹುಡುಗಿ
ಯ ಹಾಡುಗಳನ್ನು ಕೇಳಿದ ಮೇಲೆ ಅಬ್ಬಾ! ಆ ಹಾಡುಗಳು!! ಎಂದು ನಿಮಗೂ ಅನ್ನಿಸಿತೇ?

2 comments:

  1. "..ಅಬ್ಬಾ! ಆ ಹಾಡುಗಳು!! ಎಂದು ನಿಮಗೂ ಅನ್ನಿಸಿತೇ?"
    ಅನ್ನಿಸಿತು ಸಾರ್, ಅನ್ನಿಸಿತು! ಕೊನೇಹಾಡು ಕೇಳುತ್ತಾ ಕುಮಾರಗಂಧರ್ವರ 'ನೈ ಹಾರವ' ಎಂಬ ಪ್ರಸ್ತುತಿ ಕೂಡ ನೆನಪಾಯಿತು. ಮತ್ತೆ "ಆಬ್ಬಾ ಈ ಬ್ಲಾಗು!!" ಅಂತಲೂ ಬಹಳ ಸಲ ಅನ್ನಿಸಿತು! ನಿಮ್ಮ ಬಹುಪರಿಶ್ರಮದ ಆಪ್ತಹವ್ಯಾಸದ ಈ ಅತ್ಯಮೂಲ್ಯ ಸಂಗ್ರಹಕ್ಕೆ ನಮೋನ್ನಮಃ. ಬಹಳ ಧನ್ಯವಾದಗಳು.

    ReplyDelete
    Replies
    1. ಪ್ರತಿಕ್ರಿಯೆಗೆ ಧನ್ಯವಾದ.
      ತಮ್ಮ ಪರಿಚಯ ತಿಳಿಸಿದರೆ ಸಂತೋಷವಾಗುತ್ತದೆ. :)

      Delete

Your valuable comments/suggestions are welcome