ಸಂತಸವ ನೀಡುವುದು ನೆನಪುಗಳ ಮೆಲುಕು
ಅಡಗಿಹುದು ಮನದೊಳಗೆ ಏನೇನೊ ಸರಕು
ಆಟವನು ನೋಡಿದ್ದು ಕಂಬಳಿಯ ಹೊದ್ದು
ಗ್ಯಾಸ್ ಲೈಟು ಹೊರಡಿಸಿದ ಹಿಸ್ಸೆಂಬ ಸದ್ದು
ವಿದ್ಯುತ್ ದೀಪಗಳು ವಿವಿಧ ಅವತಾರಗಳನ್ನು ತಾಳುತ್ತಾ ಬುರುಡೆ ಬಲ್ಬಿನಿಂದ ಟ್ಯೂಬ್ ಲೈಟ್, CFL ಮತ್ತು ಈಗಿನ LED ಬಲ್ಬುಗಳವರೆಗೆ ಬಂದು ಮುಟ್ಟಿದ್ದರೂ ಈಗಲೂ ಅಲ್ಲೊಂದು ಇಲ್ಲೊಂದು ಕಡೆ ಪೆಟ್ರೋಮ್ಯಾಕ್ಸ್ ಅಥವಾ ಗ್ಯಾಸ್ ಲೈಟುಗಳು ಬೆಳಕು ಬೀರುತ್ತಿರುವುದು ಅವುಗಳ ಸಮಯದ ಸೀಮೆಯನ್ನು ಮೀರಿದ ಉಪಯುಕ್ತತೆಯನ್ನು ಸಾರಿ ಹೇಳುತ್ತದೆ. 19ನೇ ಶತಮಾನದ ಕೊನೆಯ ಭಾಗದಲ್ಲಿ Max Graetz ಎಂಬಾತನು ಆವಿಷ್ಕರಿಸಿದ ಈ ದೀಪದಲ್ಲಿ ಮೊದಲು ಪ್ಯಾರಫಿನ್ ಮೇಣವನ್ನು ಇಂಧನವಾಗಿ ಉಪಯೋಗಿಸಲಾಗುತ್ತಿತ್ತಂತೆ. ನಂತರ ಈಗಿರುವಂತೆ ಸೀಮೆ ಎಣ್ಣೆಯ ಬಳಕೆ ಆರಂಭವಾಯಿತು. ಒಂದು ಚಿಕ್ಕ ಕೈ ಪಂಪ್ ಮೂಲಕ ಟ್ಯಾಂಕಿನಲ್ಲಿ ಉಂಟುಮಾಡುವ ಒತ್ತಡ ಮತ್ತು ಆರಂಭದಲ್ಲಿ ಇಂಧನ ಮೇಲೇರುವ ಕೊಳವೆಯ ಬುಡದಲ್ಲಿ ಸ್ಪಿರಿಟನ್ನು ಉರಿಸಿ ಉಂಟುಮಾಡುವ ಉಷ್ಣತೆ ಹಾಗೂ ಒಮ್ಮೆ ಉರಿಯತೊಡಗಿದ ಮೇಲೆ ತನ್ನದೇ ಉಷ್ಣತೆಯನ್ನು ಉಪಯೋಗಿಸಿ ಇಂಧನವು ಗ್ಯಾಸ್ ರೂಪವನ್ನು ತಾಳಿ ಕಿರು ರಂಧ್ರವುಳ್ಳ ಪಿನ್ ಮೂಲಕ ಮ್ಯಾಂಟಲಿನೊಳಗೆ ಚಿಮ್ಮಿ ಉಜ್ವಲ ಬೆಳಕು ಬೀರುವಂತೆ ಮಾಡುವ ಇದರ ತಂತ್ರಜ್ಞಾನ ನಿಜಕ್ಕೂ ಅದ್ಭುತ. ವಿವಿಧ ರಾಸಾಯನಿಕಗಳನ್ನು ಲೇಪಿಸಿದ ಸಿಲ್ಕಿನ ಬಲೆಯಂಥ ರಚನೆ ಹೊಂದಿದ ಮ್ಯಾಂಟಲ್ ಪ್ರಥಮ ಉಪಯೋಗದಲ್ಲೇ ಸುಟ್ಟು ಬೂದಿಯಾದರೂ ಸೂಕ್ತ ಎಚ್ಚರಿಕೆ ವಹಿಸಿದರೆ ಆ ಬೂದಿಯೇ ಸುದೀರ್ಘ ಸಮಯ ಬಾಳಿಕೆ ಬರುವುದು ಇನ್ನೊಂದು ವಿಸ್ಮಯ. ಉಪಯೋಗಿಸಲ್ಪಡುವ ಪೆಟ್ರೋಲಿಯಮ್ ಮೂಲದ ಇಂಧನ ಮತ್ತು ಆವಿಷ್ಕರಿಸಿದವನ ಹೆಸರಿನ ಪೂರ್ವಾರ್ಧ ಮ್ಯಾಕ್ಸ್ ಸೇರಿ ಪೆಟ್ರೊಮ್ಯಾಕ್ಸ್ ಹಾಗೂ ಇಂಧನವು ಗ್ಯಾಸ್ ರೂಪಕ್ಕೆ ಪರಿವರ್ತನೆಗೊಂಡು ಬೆಳಕನ್ನೀಯುವುದರಿಂದ ಗ್ಯಾಸ್ ಲೈಟ್ - ಎರಡೂ ಇದಕ್ಕೆ ಅನ್ವರ್ಥ ನಾಮಗಳೇ.
ಇಂಧನವನ್ನು ಗಟಗಟನೆ ಕುಡಿಯುವ ಗ್ಯಾಸ್ ಲೈಟುಗಳನ್ನು ವಿಶೇಷ ಸಮಾರಂಭ, ಉತ್ಸವ ಹಾಗೂ ಅಂಗಡಿ ಮುಂಗಟ್ಟುಗಳಲ್ಲಷ್ಟೇ ಹೆಚ್ಚಾಗಿ ಉಪಯೋಗಿಸುತ್ತಿದ್ದುದು. ವಿದ್ಯುದ್ದೀಪಾಲಂಕೃತವಾದ ಭವ್ಯ ರಂಗ ಮಂಟಪಗಳಿಗಿಂತ ಮುಂಚೆ ಯಕ್ಷಗಾನ ಬಯಲಾಟಗಳಿಗೂ ಗ್ಯಾಸ್ ಲೈಟುಗಳೇ ಬೆಳಕಿನ ಆಸರೆಯಾಗಿದ್ದವು. ಉತ್ಸವ, ಜಾತ್ರೆಗಳಲ್ಲಿ ಅವುಗಳನ್ನು ತಲೆಯ ಮೇಲೆ ಹೊತ್ತುಕೊಳ್ಳಲು ಅನುಕೂಲವಾಗುವಂತಹ ವಿಶೇಷ standಗಳಿರುತ್ತಿದ್ದವು. ಅವು ಹೊರಡಿಸುತ್ತಿದ್ದ ಹಿಸ್ ಶಬ್ದವು ಸಮಾರಂಭಗಳಿಗೊಂದು ಶೋಭೆ. ಮದುವೆ ಮುಂಜಿಗಳಂತಹ ಸಮಾರಂಭಗಳಲ್ಲಿ ರಾತ್ರೆ ಸರಿಯಾದ ದಿಂಬು ಹೊದಿಕೆ ಇಲ್ಲದೆ ಮಲಗಿದ್ದಲ್ಲಿ ಕಾರ್ಯಕರ್ತರಾರಾದರೂ ಗ್ಯಾಸ್ ಲೈಟ್ ಕೈಯಲ್ಲಿ ಹಿಡಿದು ದಾಪುಗಾಲು ಹಾಕುತ್ತಾ ಓಡಾಡಿದರೆ ಅದರ ಪ್ರಖರ ಬೆಳಕು ಕಣ್ಣಿಗೆ ಚುಚ್ಚಿ ಅಸಾಧ್ಯ ಸಿಟ್ಟು ಬರುವುದೂ ಇತ್ತು.
ನಮ್ಮೂರಿಗೆ ಸಮೀಪದ ಉಜಿರೆಯಲ್ಲಿ ಕೆಲ ಸಮಯ ಗ್ಯಾಸ್ ಲೈಟುಗಳನ್ನು ಬಾಡಿಗೆಗೆ ಕೊಡುವ ವ್ಯವಹಾರ ನಡೆಸುತ್ತಿದ್ದ ಜನಾರ್ದನ ಭಟ್ ಎಂಬುವವರಿಗೆ ಲೈಟ್ ಭಟ್ಟರೆಂಬ ಹೆಸರೇ ಕೊನೆವರೆಗೆ ಅಂಟಿಕೊಂಡು ಬಿಟ್ಟಿತ್ತು! ಈ ಬಗ್ಗೆ ಹೆಚ್ಚಿನ ವಿವರಗಳಿಗೆ ಮುಗಿಯುವವರೆಗೆ ಮಾತ್ರ : ಬೊಂಬೆಯಾಟವಯ್ಯ ಲೇಖನ ನೋಡಬಹುದು.
ನಮ್ಮ ಮನೆಯಲ್ಲೂ ಯಕ್ಷಗಾನ ಬಯಲಾಟಗಳಿಗೆ ಹಾಗು ಧರ್ಮಸ್ಥಳ ಜಾತ್ರೆಗೆ ಹೋಗಲೆಂದೇ ಒಂದು second hand ಗ್ಯಾಸ್ ಲೈಟ್ ಖರೀದಿಸಿದ್ದರು. ಅದರ ಒಳಹೊರಗುಗಳನ್ನೆಲ್ಲ ಬಲ್ಲ ನಮ್ಮ ಅಣ್ಣ ಅದಕ್ಕೆ incharge. ಅದರ ಬೆಳಕಿನಲ್ಲಿ ಮನೆ ಮಂದಿಯೆಲ್ಲ ಸಾಲಾಗಿ ನಡೆಯುವಾಗ ಬೀಳುತ್ತಿದ್ದ ಕಾಲುಗಳ ಉದ್ದುದ್ದ ನೆರಳುಗಳು ನೋಡಲು ಬಹಳ ಚೆನ್ನಾಗಿರುತ್ತಿದ್ದವು. ಧರ್ಮಸ್ಥಳ ತಲುಪಿದೊಡನೆ ಅದನ್ನು ಆರಿಸಿ ಪರಿಚಯದ ಅಂಗಡಿಯೊಂದರಲ್ಲಿ ಇರಿಸುತ್ತಿದ್ದರು. ವಾಪಸ್ ಹೊರಡುವ ಸಮಯಕ್ಕೆ ಅದನ್ನು ಮತ್ತೆ ಉರಿಸಿ ನಡೆಯತೊಡಗಿದರೆ ಜಾತ್ರೆಯ ಜನಜಂಗುಳಿಯಲ್ಲಿ ಬೇರೆ ಬೇರೆಯಾಗುವ ಸಾಧ್ಯತೆಯಿದ್ದ ಮನೆ ಮಂದಿಗೆಲ್ಲ ಇದು ಗೋಚರಿಸಿ ಮತ್ತೆ ಒಟ್ಟು ಸೇರುವುದಕ್ಕೆ ಅನುಕೂಲವಾಗುತ್ತಿತ್ತು ಏಕೆಂದರೆ ಈ ರೀತಿ ಗ್ಯಾಸ್ ಲೈಟ್ ನೊಂದಿಗೆ ಜಾತ್ರೆಗೆ ಬರುವವರು ಬೇರೆ ಯಾರೂ ಇರಲಿಲ್ಲ!
ನಿಮ್ಮನ್ನು ಹಳೆಯ ಕಾಲಕ್ಕೊಯ್ಯಬಹುದಾದಂಥ ಪೆಟ್ರೊಮ್ಯಾಕ್ಸ್ ಉರಿಸುವ ದೃಶ್ಯವುಳ್ಳ ಕಿರು ವೀಡಿಯೊ ಒಂದನ್ನು ಇಲ್ಲಿ ನೋಡಬಹುದು.
ಕೆಲ ಸಮಯ ಹಿಂದೆ ಈ ವೀಡಿಯೊವನ್ನು facebook ಗೆ upload ಸುಮಾರು 6000 ಬಾರಿ ವೀಕ್ಷಿಸಲ್ಪಟ್ಟು ಅನೇಕ ಪ್ರತಿಕ್ರಿಯೆಗಳೂ ದಾಖಲಾಗಿದ್ದವು. ಅವುಗಳಲ್ಲಿ ಕೆಲವು ಇಲ್ಲಿವೆ.
No comments:
Post a Comment
Your valuable comments/suggestions are welcome