Tuesday 15 May 2012

ಮಧುರ ಕಂಠದ ಮಹೇಂದ್ರ ಕಪೂರ್

  
 
ಅಖಿಲಭಾರತ ಗಾಯನ ಸ್ಪರ್ಧೆಯೊಂದರಲ್ಲಿ ಭಾಗವಹಿಸುವ ಮೂಲಕ ಹಿನ್ನಲೆ ಗಾಯನ ಕ್ಷೇತ್ರಕ್ಕೆ ಕಾಲಿಟ್ಟವರು ಮಹೇಂದ್ರ ಕಪೂರ್. ಆ ಸ್ಪರ್ಧೆಗೆ ತೀರ್ಪುಗಾರರಾಗಿದ್ದವರು ಖ್ಯಾತ ಸಂಗೀತ ನಿರ್ದೇಶಕರಾದ ನೌಶಾದ್ ಹಾಗೂ ಸಿ. ರಾಮಚಂದ್ರ. ಸ್ಪರ್ಧೆಯಲ್ಲಿ ವಿಜೇತರಾದ ಗಾಯಕನಿಗೆ ತಮ್ಮ ಮುಂದಿನ ಚಿತ್ರದಲ್ಲಿ ಅವಕಾಶ ಕೊಡುವುದಾಗಿ ಇಬ್ಬರೂ ನಿಶ್ಚೈಸಿದ್ದರಂತೆ. ಅಂತೆಯೇ 1958ರಲ್ಲಿ ನೌಶಾದ್ ಅವರು ಸೊಹನೀ ಮಹಿವಾಲ್' ಚಿತ್ರದಲ್ಲಿ ಇವರಿಂದ ಹಾಡಿಸಿದ ಚಾಂದ್ ಛುಪಾ ಔರ್ ತಾರೆ ಡೂಬೆ ಮಹೇಂದ್ರ ಕಪೂರ್ ಅವರ ಮೊದಲ ಹಾಡಾಯಿತು.

   ಆದರೆ ಚಲನಚಿತ್ರ ಸಂಗೀತ ಪ್ರೇಮಿಗಳ ನಾಲಿಗೆಯಲ್ಲಿ ಕುಣಿದಾಡಿದ್ದು ಅದೇ ವರ್ಷ ಸಿ. ರಾಮಚಂದ್ರ ಅವರು ನವರಂಗ್ ಚಿತ್ರಕ್ಕಾಗಿ ಇವರಿಂದ ಹಾಡಿಸಿದ ಆಧಾ ಹೈ ಚಂದ್ರಮಾ ರಾತ್ ಆಧೀ. ಇದರಿಂದ ಪ್ರಭಾವಿತರಾದ ಬಿ.ಆರ್.ಚೋಪ್ಡಾ ಅವರು ಎನ್ ದತ್ತಾ ಅವರ ಸಂಗೀತದ ಧೂಲ್ ಕಾ ಫೂಲ್ ಚಿತ್ರದಲ್ಲಿ ಇವರಿಗೆ ನೀಡಿದ ಅವಕಾಶ ತೆರೆ ಪ್ಯಾರ್ ಕಾ ಆಸ್‌ರಾ ಚಾಹತಾ ಹೂಂ ದಂತಹ ಸರ್ವಕಾಲಿಕ ಹಿಟ್ ಹಾಡಿನ ಜನನಕ್ಕೆ ಕಾರಣವಾಗುವುದರೊಂದಿಗೆ ಬಿ.ಆರ್.ಫಿಲ್ಮ್ಸ್ ಹಾಗೂ ಮಹೇಂದ್ರ ಕಪೂರ್ ಅವರ ಮಹಾಭಾರತ್ ಟಿ.ವಿ. ಧಾರಾವಾಹಿ  ವರೆಗಿನ ದೀರ್ಘಕಾಲೀನ ಸಂಬಂಧಕ್ಕೂ ನಾಂದಿಯಾಯಿತು.

   ಮುಂದೆ ಈ ಬ್ಯಾನರ್ ನಲ್ಲಿ ರವಿ ಅವರ ಸಂಗೀತದೊಂದಿಗೆ ಬಂದ ಗುಮ್‌ರಾಹ್  ಚಿತ್ರದ ಚಲೊಎಕ್ ಬಾರ್ ಫಿರ್ ಸೆ, ಇನ್ ಹವಾವೊಂ ಮೆ, ಯೆ ಹವಾ ಯೆ ಹವಾ, ಆಪ್ ಆಯೇ ತೊ ಖಯಾಲೆಂ, ಹಮ್‌ರಾಜ್ ಚಿತ್ರದ ನೀಲೆ ಗಗನ್ ಕೆ ತಲೆ, ತುಮ್ ಅಗರ್ ಸಾಥ್ ದೆನೆ ಕಾ, ಕಿಸೀ ಪತ್ಥರ್ ಕೀ ಮೂರತ್ ಸೆ, ನ ಮುಂಹ್ ಛುಪಾಕೆ ಜಿಯೊ ಹಾಡುಗಳಿಂದ ಮಹೇಂದ್ರ ಕಪೂರ್ ಚಿತ್ರ ಸಂಗೀತ ಪ್ರೇಮಿಗಳ ಹೃದಯದಲ್ಲಿ ಶಾಶ್ವತ ಸ್ಥಾನ ಪಡೆದರು.

   ನ ಮುಂಹ್ ಛುಪಾಕೆ ಜಿಯೊ, ನ ಸರ್ ಝುಕಾಕೆ ಜಿಯೊ ಹಾಡಿನಲ್ಲಿ ಅಂಧೇರಿ ರಾತ್ ಮೆ .. ಎಂಬ ಒಂದೇ ಉಸಿರಿನಲ್ಲಿ ದೀರ್ಘವಾಗಿ ಹಾಡುವ ಸಾಲೊಂದಿದೆ. ಈ ಹಾಡಿಗೆ ನಟಿಸಿದ ಸುನೀಲ್ ದತ್ ಅವರಿಗೆ ಇಷ್ಟೊಂದು ಹೊತ್ತು ಬಾಯನ್ನು ತೆರೆದು ಹಿಡಿಯುವುದೇ ಕಷ್ಟ ಅನ್ನಿಸಿತಂತೆ! ಈ ಸಂಸ್ಥೆಯ ನಿರ್ಮಾಣದ ವಕ್ತ್ ಚಿತ್ರದ ದಿನ್ ಹೈ ಬಹಾರ್ ಕೆ, ಆದ್ಮೀ ಔರ್ ಇನ್‌ಸಾನ್ ಚಿತ್ರದ ದಿಲ್ ಕರ್‌ತಾ ಹಾಗೂ ಜಿಂದಗೀ ಇತ್ತೇಫಾಕ್ ಹೈ , ಧುಂದ್  ಚಿತ್ರದ ಸಂಸಾರ್ ಕೀ ಹರ್ ಶೈಕಾ ಮುಂತಾದವೂ ಮರೆಯದ ಹಾಡುಗಳಾದವು. ರವಿ ಅವರು ಇತರ ಬ್ಯಾನರ್ ಗಳ ಚಿತ್ರಗಳಾದ ಭರೋಸಾ ದಲ್ಲಿ ಆಜ್ ಕೀ ಮುಲಾಕಾತ್ ಬಸ್ ಇತ್‌ನೀ,  ಅನ್‌ಮೋಲ್ ಮೋತಿ ಯಲ್ಲಿ  ಏ ಜಾನೆ ಚಮನ್ ತೆರಾ ಗೋರಾ ಬದನ್ ಮುಂತಾದ ಸುಮಧುರ ಹಾಡುಗಳನ್ನು ಇವರಿಂದ ಹಾಡಿಸಿದರು. ಬಿ. ಆರ್. ಫಿಲ್ಮ್ಸ್ ಬ್ಯಾನರ್ ನಲ್ಲಿ  ರವೀಂದ್ರ ಜೈನ್ ಸಂಗೀತದೊಂದಿಗೆ ಬಂದ ಪತಿ ಪತ್ನಿ ಔರ್ ವೊ ಚಿತ್ರದ  ಥಂಡೆ ಥಂಡೆ ಪಾನೀ ಸೆ ಹಾಡೂ ಬಹು ಜನಪ್ರಿಯ.

   ಮನೋಜ್ ಕುಮಾರ್ ಅವರೊಂದಿಗೆ ಮಹೇಂದ್ರ ಕಪೂರ್ ಅವರ ನಂಟು ಶಹೀದ್ ಚಿತ್ರದ ಮೆರಾ ರಂಗ್ ದೇ ಬಸಂತೀ ಚೋಲಾ ಹಾಡಿನೊಂದಿಗೆ ಆರಂಭವಾದರೂ ಬಲಗೊಂಡದ್ದು ಉಪ್‌ಕಾರ್ ಚಿತ್ರದೊಂದಿಗೆ. ಗುಲ್‌ಶನ್ ಬಾವ್ರಾ ರಚಿಸಿ ಕಲ್ಯಾಣ್‌ಜೀ ಆನಂದ್‌ಜೀ ಸಂಗೀತ ನೀಡಿದ ಮೆರೆ ದೇಶ್ ಕೀ ಧರ್‌ತೀ ಹಾಡು ದೇಶ ಭಕ್ತಿಗೆ ಪರ್ಯಾಯವೇ ಆಯಿತು. ಇದನ್ನು ಎರಡನೇ ರಾಷ್ಟ್ರಗೀತೆ ಎನ್ನುವವರೂ ಇದ್ದಾರೆ! ಪೂರಬ್ ಔರ್ ಪಶ್ಚಿಮ್ ನ ಹೈ ಪ್ರೀತ್ ಜಹಾಂ ಕೀ ರೀತ್ ಸದಾ ಹಾಡೂ ಇದೇ ಸಾಲಿಗೆ ಸೇರಿತು. ಮುಂದೆ ರೋಟೀ ಕಪಡಾ ಔರ್ ಮಕಾನ್ ನಲ್ಲಿ ಕಲ್ಯಾಣ್‌ಜೀ ಆನಂದ್‌ಜೀ ಅವರ ಸ್ಥಾನಕ್ಕೆ ಲಕ್ಷ್ಮೀಕಾಂತ್ ಪ್ಯಾರೇಲಾಲ್ ಅವರು ಬಂದು ಮುಕೇಶ್ ಅವರು ಮುಖ್ಯ ಗಾಯಕರಾದರೂ ಮಹೇಂದ್ರ ಕಪೂರ್ ಅವರಿಗಾಗಿ ಔರ್ ನಹೀಂ ಬಸ್ ಔರ್ ನಹೀಂ ಹಾಡು ಇತ್ತು.  ಆದರೆ ಲಕ್ಷ್ಮಿ ಪ್ಯಾರೆ ಸಂಗೀತದಲ್ಲಿ ಇವರ ಶ್ರೇಷ್ಠ ಗೀತೆ ಪ್ಯಾರ್ ಕಿಯೆ ಜಾ ಚಿತ್ರದ ಫೂಲ್ ಬನ್ ಜಾವೂಂಗಾ.

   ಕಲ್ಯಾಣ್‌ಜೀ ಆನಂದ್‌ಜೀ ಅವರು ಇತರ ಚಿತ್ರಗಳಾದ ಪರಿವಾರ್ ನಲ್ಲಿ ಹಮ್‌ನೆ ಜೊ ದೇಖೆ ಸಪ್‌ನೆ, ಗೀತ್ ನಲ್ಲಿ ಜಿಸ್‌ಕೆ ಸಪನೆ ಹಮೆ ರೋಜ್ ಆತೇ ರಹೆ , ಯಾದ್‌ಗಾರ್ ನಲ್ಲಿ ಎಕ್ ತಾರಾ ಬೋಲೆ ಗೀತೆಗಳನ್ನು ಹಾಡಿಸಿದರೂ ವಿಶೇಷವಾಗಿ ಉಲ್ಲೇಖಿಸಬೇಕಾದದ್ದು ದಿಲೀಪ್‌ಕುಮಾರ್ ನಟನೆಯ ಗೋಪಿ ಚಿತ್ರ. ಇದರಲ್ಲಿ ಸುಖ್ ಕೆ ಸಬ್ ಸಾಥೀ ಮಾತ್ರ ರಫಿ ಧ್ವನಿಯಲ್ಲಿದ್ದು ಜಂಟಲ್ ಮೆನ್ ಜಂಟಲ್ ಮೆನ್, ರಾಮಚಂದ್ರ್ ಕಹ ಗಯೇ ಸಿಯಾ ಸೆ ಹಾಗೂ ಏಕ್ ಪಡೋಸನ್ ಪೀಛೇ ಪಡ್‌ಗಯಿ ಹಾಡುಗಳು ಮಹೇಂದ್ರ ಕಪೂರ್ ಪಾಲಾಗಿ ಜಯಭೇರಿ ಬಾರಿಸಿದವು.

   ಯಾವುದೋ ರೆಕಾರ್ಡಿಂಗ್‌ಗೆ ತಡವಾಗಿ ಬಂದ ಕಾರಣಕ್ಕಾಗಿ ತನ್ನ ಅಚ್ಚುಮೆಚ್ಚಿನ ಗಾಯಕ ರಫಿಯೊಡನೆ ವಿರಸ ಬೆಳೆಸಿಕೊಂಡ ಒ.ಪಿ.ನಯ್ಯರ್ ಅವರು ಮುಂದೆ ಬಹಳ ವರ್ಷಗಳ ಕಾಲ ಮಹೇಂದ್ರಕಪೂರ್ ಅವರನ್ನು ಬಳಸಿಕೊಂಡರು. ಈ ಅವಧಿಯಲ್ಲಿ ಯೆ ರಾತ್ ಫಿರ್ ನ ಆಯೇಗೀ ಚಿತ್ರದ ಮೇರಾ ಪ್ಯಾರ್ ವೊ ಹೈ ಕೆ, ಬಹಾರೆ ಫಿರ್ ಭೀ ಆಯೇಂಗೀ ಚಿತ್ರದ ಬದಲ್ ಜಾಯೆ ಅಗರ್ ಮಾಲೀ, ಕಿಸ್ಮತ್ ಚಿತ್ರದ ಲಾಖೋಂ ಹೈ ಯಹಾಂ ದಿಲ್‌ವಾಲೆ ಹಾಗೂ ಆಂಖೊಂ ಮೆ ಕಯಾಮತ್ ಕೆ ಕಾಜಲ್', ಸಂಬಂಧ್ ಚಿತ್ರದ ಜೊ ದಿಯಾ ಥಾ ತುಮ್ ನೆ ಎಕ್ ದಿನ್ ಹಾಗೂ ಅಂಧೇರೆ ಮೆ ಜೊ ಬೈಠೇ ಹೈಂ,  ಕಹೀಂ ದಿನ್ ಕಹೀಂ ರಾತ್' ನ ತುಮ್ಹಾರಾ ಚಾಹನೆ ವಾಲಾ ದಂತಹ ಹಾಡುಗಳು ಜನ್ಮತಾಳಿದವು.

   ಶಂಕರ್ ಜೈಕಿಶನ್ ಆವರ ಸಂಗೀತ ನಿರ್ದೇಶನದ ಹರಿಯಾಲೀ ಔರ್ ರಾಸ್ತಾ ದಲ್ಲಿ ಖೋ ಗಯಾ ಹೈ ಮೆರಾ ಪ್ಯಾರ್, ಜಿಸ್ ದೇಶ್ ಮೆ ಗಂಗಾ ಬಹತೀ ಹೈ ಯಲ್ಲಿ ಹಮ್ ಭೀ ಹೈಂ ತುಮ್ ಭೀ ಹೋ ಮುಂತಾದ ಹಾಡುಗಳಲ್ಲಿ ಮಹೇಂದ್ರ ಕಪೂರ್ ಧ್ವನಿ ಕೇಳಿಸಿದರೂ ಅವರಿಗೆ ದೊರಕಿದ ಬಂಪರ್ ಅವಕಾಶವೆಂದರೆ ಸಂಗಂ ಚಿತ್ರದ ಮುಕೇಶ್ ಲತಾ ಅವರೊಂದಿಗಿನ ಹರ್ ದಿಲ್ ಜೊ ಪ್ಯಾರ್ ಕರೇಗಾ ಹಾಡು.

   ಮೊತ್ತ ಮೊದಲ ಅವಕಾಶ ನೀಡಿದ ನೌಶಾದ್ ಅವರು ಆ ಮೇಲೆ ಮಹೇಂದ್ರ ಕಪೂರ್ ಅವರನ್ನು ಬಳಸಿಕೊಂಡದ್ದು ಕಡಿಮೆಯೇ. ಆದರೆ ಇವರ ನಿರ್ದೇಶನದಲ್ಲಿ ತನ್ನ ಆರಾಧ್ಯ ದೈವ ಹಾಗೂ ಗುರು ರಫಿಯವರೊಡನೆ ಆದ್ಮೀ ಚಿತ್ರಕ್ಕಾಗಿ ಕೈಸೀ ಹಸೀನ್ ಆಜ್ ಎಂಬ ಒಂದು ಯುಗಳ ಗೀತೆಯನ್ನು ಹಾಡುವ ಅವಕಾಶ ಮಹೇಂದ್ರ ಕಪೂರ್ ಅವರಿಗೆ ದೊರಕಿತು. ಆದರೆ ಇದೇ ಹಾಡನ್ನು ಧ್ವನಿಮುದ್ರಿಕೆಗಾಗಿ ಹಾಡಿದ್ದು ರಫಿ ಹಾಗೂ ತಲತ್ ಮಹಮೂದ್!

    ಮಹೇಂದ್ರ ಕಪೂರ್ ಅವರು ಮನ್ನಾಡೆ ಅವರೊಂದಿಗೆ ದಾದಿಮಾ ಚಿತ್ರಕ್ಕಾಗಿ ಹಾಡಿದ ಉಸ್ ಕೊ ನಹಿಂ ದೇಖಾ ಹಮ್ ನೆ ಕಭೀ, ಕಿಶೋರ್ ಕುಮಾರ್ ಅವರೊಂದಿಗೆ ವಿಕ್ಟೋರಿಯ ನಂಬರ್ 203 ನಲ್ಲಿ ಹಾಡಿದ ದೊ ಬೆಚಾರೇ ಬಿನಾ ಸಹಾರೆ   ಹಾಡುಗಳೂ ಮರೆಯುವಂಥವುಗಳಲ್ಲ. ಫರಿಯಾದ್ ಚಿತ್ರದಲ್ಲಿ ಸುಮನ್ ಕಲ್ಯಾಣಪುರ್ ಸಂಗಡ ಹಾಡಿದ ಸ್ನೇಹಲ್ ಭಾಟ್ಕರ್ ಸಂಗೀತದ ಪಪೀಹಾ ದೆಖೊ ದೇಖ್ ರಹಾ ಥಾ ಇನ್ನೊಂದು ವಿಶಿಷ್ಟ ಶೈಲಿಯ ಹಾಡು.

   ಇತರ ಗಾಯಕರಿಗೆ ಹೋಲಿಸಿದರೆ ಇವರ ಹಾಡುಗಳ ಸಂಖ್ಯೆ ಕಮ್ಮಿ ಇರಬಹುದು. ಆದರೆ ರಫಿ, ಮನ್ನಾಡೆ, ಮುಕೇಶ್, ತಲತ್, ಹೇಮಂತ್ ಕುಮಾರ್, ಕಿಶೋರ್ ಕುಮಾರ್ ಅವರಂತಹ ದಿಗ್ಗಜರು ಹಿನ್ನೆಲೆ ಗಾಯನ ಕ್ಷೇತ್ರವನ್ನಾಳುತ್ತಿದ್ದ ಸಮಯದಲ್ಲಿ ತನ್ನದೇ ಒಂದು ಸ್ಥಾನವನ್ನು ನಿರ್ಮಿಸಿಕೊಂಡು ಬಹಳಷ್ಟು ವರ್ಷಗಳ ಕಾಲ ಮಾಧುರ್ಯವನ್ನು ಉಣಬಡಿಸಿದ ಮಹೇಂದ್ರ ಕಪೂರ್ ಅವರ ಸಾಧನೆಯೇನೂ ಕಮ್ಮಿಯಲ್ಲ. ಈ ಸಾಧನೆಗೆ ಪದ್ಮಶ್ರೀ, ರಾಷ್ಟ್ರೀಯ ಪುರಸ್ಕಾರ , ಫಿಲಂಫೇರ್ ಅವಾರ್ಡ್ ಹಾಗೂ ಎಲ್ಲಕ್ಕಿಂತ ಹೆಚ್ಚಾಗಿ ಸಂಗೀತಪ್ರೇಮಿಗಳ ಮೆಚ್ಚುಗೆಯ ಮನ್ನಣೆ ಇವರಿಗೆ ದೊರಕಿದೆ.

(ಇದು ಕೆಲ ವರ್ಷಗಳ ಹಿಂದೆ ಮಹೇಂದ್ರ ಕಪೂರ್ ಅವರು ನಿಧನ ಹೊಂದಿದಾಗ ದಟ್ಸ್ ಕನ್ನಡ ದಲ್ಲಿ ಪ್ರಕಟವಾಗಿದ್ದ ಲೇಖನ)

1 comment:

  1. ಮಹೇಂದ್ರ ಕಪೂರ್ ಹಾಡುಗಳು ನನಗೂ ಇಷ್ಟ. ಅದರಲ್ಲೂ ಮೆರೆ ದೇಶ್ ಕೀ ಧರ್‌ತೀ, ಹೈ ಪ್ರೀತ್ ಜಹಾಂ ಕೀ ರೀತ್ ಸದಾ, ತುಮ್ಹಾರಾ ಚಾಹನೆ ವಾಲಾ,
    ಸಂಸಾರ್ ಕೀ ಹರ್ ಶೈಕಾ, ನೀಲೆ ಗಗನ್ ಕೆ ತಲೆ, ತುಮ್ ಅಗರ್ ಸಾಥ್ ದೆನೆ ಕಾ- ಈ ಅರ್ಧ ಡಜನ್ ಅತ್ಯಂತ ಅಚ್ಚುಮೆಚ್ಚಿನವು. "ಯೇ ನೀಲೇ ಗಗನ್ ಕಿತ್ತಳೇ... ಧರ್ತೀ ಕಾ ಪ್ಯಾರ್ ಮೂಸಂಬೀ..." ಎಂದು ನಮ್ಮನೆಯಕೆಲಸದವ ಪದ್ಮಯನೂ ಹಾಡುತ್ತಿದ್ದ!

    ReplyDelete

Your valuable comments/suggestions are welcome