Tuesday, 24 July 2012

ಎಣ್ಣೆ ಸಮುದ್ರವೂ ಬತ್ತಿ ಪರ್ವತವೂ



ಆಗಿನ್ನೂ ವಿದ್ಯುತ್ ಎಂದರೆ ಏನೆಂದು ಗೊತ್ತಿರದಿದ್ದ ಚಿಮಿಣಿ ದೀಪಗಳ ಕಾಲ.  ಸಾಯಂಕಾಲವಾದೊಡನೆ ದೀಪಗಳ ಗಾಜನ್ನೊರಸಿ, ಅವುಗಳ ಹೊಟ್ಟೆ ಖಾಲಿಯಾಗಿದ್ದರೆ ತುಂಬಿಸಿ ಜ್ಯೋತಿ ಬೆಳಗಿಸಿ ಆದೊಡನೆ  ಕೂಡುಕುಟುಂಬಗಳ ಮನೆ ಹಿರಿಯರು  ಮಕ್ಕಳನ್ನೆಲ್ಲ ಕೂರಿಸಿಕೊಂಡು ಬಾಯಿ ಪಾಠ ಹೇಳಿಕೊಡುತ್ತಿದ್ದರು.  ಶುಭಂ ಕರೋತು ಕಲ್ಯಾಣಂ ದಿಂದ ಆರಂಭವಾದ ಇದು ಆದಿತ್ಯವಾರ ಸೋಮವಾರ, ಪಾಡ್ಯ ಬಿದಿಗೆ, ಚೈತ್ರ ವೈಶಾಖ, ವಸಂತ ಋತು ಗ್ರೀಷ್ಮ ಋತು,  ಮೇಷ  ವೃಷಭ,  ಅಶ್ವಿನಿ ಭರಣಿ, ಬವ - ಸಿಂಹ, ಬಾಲವ - ಹುಲಿ,  ಪ್ರಭವ ವಿಭವ ಇತ್ಯಾದಿ ಕಾಲ ಗಣನೆಯ ಎಲ್ಲ ಕೋಷ್ಟಕಗಳನ್ನು ಒಳಗೊಂಡಿರುತ್ತಿತ್ತು.  ಐಚ್ಛಿಕವಾಗಿ ರಾಮರಕ್ಷಾ ಸ್ತೋತ್ರವನ್ನು ಹೇಳುವ ಕ್ರಮವೂ ಇತ್ತು.  ಇಷ್ಟೆಲ್ಲ ಮುಗಿಯುವ ಹೊತ್ತಿಗೆ ಸುಮಾರು ಏಳು ಗಂಟೆ ಆಗುತ್ತಿತ್ತು.  ಏಳೂವರೆ ಹೊತ್ತಿಗೆ ಮಕ್ಕಳು ಹಿರಿಯರು ಎಲ್ಲರ ಊಟವೂ ಆಗಿ ಎಂಟು ಎಂಟುವರೆಯೊಳಗೆ  ಮಲಗುವ ತಯಾರಿಯೂ ಆಗುತ್ತಿತ್ತು.  ಒಳ್ಳೊಳ್ಳೆ ಕತೆಗಳನ್ನು ಹೇಳುವ   ಹಿರಿಯರ ಬಳಿ ಮಲಗಲು ಮಕ್ಕಳಲ್ಲಿ ಪೈಪೋಟಿ.  ಮಲಗಲು ಹೋಗುವಾಗ ಚಿಕ್ಕದೊಂದು ಬೆಡ್ ಲ್ಯಾಂಪ್ ಒಯ್ಯುವುದೂ ವಾಡಿಕೆ. ರಾತ್ರಿಯ ಗಾಢಾಂಧಕಾರದಲ್ಲಿ ಭಯವಾಗದಂತೆ 

ಕಫಲ್ಲಸ್ಯ* ತ್ರಯೊ ಭಾರ್ಯಾ
ದಾಹಿನೀ ಮೋಹಿನೀ ಸತಿ
ತಾಸಾಂ ಸ್ಮರಣ ಮಾತ್ರೇಣ
ಚೋರೋ ಗಚ್ಛತಿ ನಿಷ್ಫಲಃ
ಅಗಸ್ತಿರ್ ಮಾಧವಂಚೈವ
ಮುಚುಕುಂದೋ ಮಹಾಮುನಿಂ
ವೃಕೋದರಂಚ ರಾಮಂಚ
ಷಡೇತೇ ಶಯನೇ ಸ್ಮರೇತ್
ಹರಿಂ ಹರಂ ಹನೂಮಂತಂ
ಹರಿಶ್ಚಂದ್ರಮ್ ಹಲಾಯುಧಂ
ಪಂಚೈತಾನಿ ಸ್ಮರೇನ್ನಿತ್ಯಂ
ಹಾನಿ ಶಸ್ತ್ರಃ ನ ಬಾಧ್ಯತೆ
ಜಲೇ ರಕ್ಷತು ವಾರಾಹಃ
ಸ್ಥಲೇ ರಕ್ಷತು ವಾಮನಃ
ಅಟವ್ಯಾಂ ನಾರಸಿಂಹಸ್ಚ
ಸರ್ವತಃ ಪಾತು ಕೇಶವಃ
ಕಫಲ್ಲ ಕಫಲ್ಲ  ಕಫಲ್ಲ

ಅನಂತ ಪದ್ಮನಾಭ ಅನಂತ ಪದ್ಮನಾಭ ಅನಂತ ಪದ್ಮನಾಭ
ಆಸ್ತಿಕ ಆಸ್ತಿಕ ಆಸ್ತಿಕ
ಕಾಳ ರಾತ್ರಿ ಮಹಾಮ್ಮಾಯೀ
ಕ್ಷೇಮ ರಾತ್ರಿ ಸುಖೀ ಪಹ


ಎಂಬ ಭಯಹರ ಸ್ತೋತ್ರವನ್ನು ಹೇಳಿ ದೀಪ ಆರಿಸಿ ಮಲಗುವುದು ಬಹುತೇಕ ಎಲ್ಲ ಕಡೆ ಇದ್ದ ವಾಡಿಕೆ. 

ನಮ್ಮ ಮನೆಯಲ್ಲಿ ಇದರ ಮುಂದುವರಿದ ಭಾಗವಾಗಿ

 






ದೀಪ ದೀಪಾಂತರಕ್ಕೆ ಹೋಗಿ      
ಎಣ್ಣೆ ಸಮುದ್ರಕ್ಕೆ ಹೋಗಿ   
ಬತ್ತಿ ಪರ್ವತಕ್ಕೆ ಹೋಗಿ
ಅನ್ಪತ್ಯವಾದ್ರೆ ಇವತ್ತು ಬನ್ನಿ
ಇಲ್ಲವಾದ್ರೆ ನಾಳೆ ಸಂಜೆ ಬನ್ನಿ
ಆಯ್ತೋ ... ಆಯ್ತು...
ಉಫ್ ....


ಎಂಬ ಸ್ವಾರಸ್ಯಕರ ಪ್ರಕ್ರಿಯೆಯೊಡನೆ ಸೂಕ್ತ ಮರ್ಯಾದೆಯೊಂದಿಗೆ ದೀಪ ಆರಿಸುವ ವಿಶೇಷ ಪದ್ಧತಿಯೊಂದಿತ್ತು.  ಮುಂದೆ ಸಸೇಮಿರಾ ಕತೆ, ನೇತಾಡುವ ರುಂಡಗಳ  ಕತೆ, ರಾಜ ಮತ್ತು ಟೊಪ್ಪಿಯ ಕತೆ,  ಸತ್ಯೆನಲಾ ಪಾಕಿ ಕತೆ,  ಇಲಿ ದಂಪತಿಗಳ ಕತೆ ಮುಂತಾದವುಗಳನ್ನು ಕೇಳುತ್ತಾ ನಿದ್ದೆಗೆ ಜಾರಿದುದೇ ತಿಳಿಯುತ್ತಿರಲಿಲ್ಲ.

 *ಕಫಲ್ಲ ಎಂಬುವವನು ಆದಿ ಚೋರನಂತೆ.  ಈತನ ಹೆಸರನ್ನು ಸ್ಮರಿಸಿದವರಿಗೆ ಚೋರ ಭಯವಿಲ್ಲವೆಂದು ಬ್ರಹ್ಮ ವರಕೊಟ್ಟಿದ್ದನೆಂದು ನಂಬಿಕೆ ಇದೆ. ಕೆಲವು ಕಡೆ ಬಾಗಿಲಿಗೆ ಬೀಗ ಹಾಕಿ ಹೊರ ಹೋಗುವಾಗ
ತಿಸ್ತ್ರೋ ಭಾರ್ಯಾ ಕಫಲ್ಲಸ್ಯ, ದಾಹಿನೀ ಮೋಹನೀ ಸತೀ।
ತಾಸಾಂ ಸ್ಮರಣ-ಮಾತ್ರೇಣ, ಚೌರೋ ವಿಶಾತಿ ನೋ ಗೃಹಮ್।।

ಎಂದು ಹೇಳುವ ಕ್ರಮವೂ ಇದೆಯಂತೆ.

1 comment:

  1. I have thoroughly enjoyed the narration on the BlogSpot and it truly took me back to those golden days.

    The learning and solid foundation to culture and values at that age influences our life throughout. I remember full series of ‘Bayi Patha’ even now.

    I also enjoyed music section of the Blog Spot, thanks again for uploading this excellent collection and selection

    Narahari Joshi

    ReplyDelete

Your valuable comments/suggestions are welcome