Friday, 30 November 2012

ಬರೆ ಕ್ಯಾಬರೆ ಅಲ್ಲ


ಎಲ್. ಆರ್ ಈಶ್ವರಿ ಅಂದಾಕ್ಷಣ ಜೋಕೆ ನಾನು ಬಳ್ಳಿಯ ಮಿಂಚುದೂರದಿಂದ ಬಂದಂಥ ಸುಂದರಾಂಗ ಜಾಣ ಇತ್ಯಾದಿ ಹಾಡುಗಳು ನೆನಪಾಗುವುದು ಸಹಜ.  ಆದರೆ ಅವರು ಕ್ಯಾಬರೆ ಛಾಯೆಯ ಇಂತಹ ಹಾಡುಗಳಲ್ಲದೆ  ವಿವಿಧ ಇತರ ರಂಗುಗಳ ಹಾಡುಗಳನ್ನೂ ಹಾಡಿದ್ದಾರೆ.  ಅಂತಹ  ಹೆಚ್ಚು ಚಾಲ್ತಿಯಲ್ಲಿಲ್ಲದ ಕೆಲವು ಹಾಡುಗಳತ್ತ ಇಲ್ಲಿದೆ ಒಂದು ನೋಟ.

1. ಕಂಡರೂ ಕಾಣದಾಂಗೆ - ಅಣ್ಣ ತಂಗಿ



ಇದು ಪ್ರಾಯಶ: ಕನ್ನಡದಲ್ಲಿ ಎಲ್ ಆರ್ ಈಶ್ವರಿ ಅವರ ಮೊದಲ ಹಾಡು.  ಅವರು ಸರೋಜಾ ದೇವಿಯ ದನಿಯಾದರೆ ಪೀಠಾಪುರಂ ನಾಗೇಶ್ವರ ರಾವ್ ರಾಜಕುಮಾರ್ ಅವರ ದನಿಯಾಗಿ ಜತೆಗಿದ್ದಾರೆ. (ಈ ಚಿತ್ರದಲ್ಲಿ ಪಿ.ಬಿ. ಶ್ರೀನಿವಾಸ್ ಅವರು ಕೆ.ಎಸ್.ಅಶ್ವಥ್ ಅವರಿಗಾಗಿ ಇಂಗ್ಲಿಷ್ ಹಾಡು ಹಾಡಿದ್ದರು!  ಈ ಮೊದಲೇ  ರಾಜ್ ಗಾಗಿ ಪಿ.ಬಿ.ಎಸ್  ಓಹಿಲೇಶ್ವರದಲ್ಲಿ ಒಂದು ಹಾಡು ಹಾಡಿದ್ದರೂ ಭಕ್ತ ಕನಕದಾಸದಿಂದ ಮೊದಲ್ಗೊಂಡು ಅವರು ರಾಜ್ ಅವರ ಖಾಯಂ ಗಾಯಕರಾದರು).  Multi track system ನಲ್ಲಿ ರೆಕಾರ್ಡ್ ಆಗುವ ಇಂದಿನ ಹಾಡುಗಳನ್ನು ನಾಚಿಸುವಂತಿದೆ ಈ ಹಾಡಿನ ಧ್ವನಿಮುದ್ರಣದ ಗುಣಮಟ್ಟ.  ಕು.ರಾ.ಸೀ ಸಾಹಿತ್ಯಕ್ಕೆ ಸಂಗೀತ ಜಿ.ಕೆ. ವೆಂಕಟೇಶ್ ಅವರದ್ದು. ಈ ಚಿತ್ರದ ಟೈಟಲ್ ಕಾರ್ಡಲ್ಲಿ ಅವರ ಹೆಸರು ರಾಜೇಶ್ವರಿ ಎಂದು ದಾಖಲಾಗಿದೆ. ಆದರೆ ರಾಜೇಶ್ವರಿ ಎಂಬ ಇನ್ನೋರ್ವ ಗಾಯಕಿಯೂ ಇದ್ದುದರಿಂದ ನಂತರ ಅವರು ತನ್ನ ಪೂರ್ಣ ಹೆಸರಾದ ಲೂರ್ಡ್ ಮೇರಿ ರಾಜೇಶ್ವರಿಯನ್ನು ಹೃಸ್ವಗೊಳಿಸಿ ಎಲ್.ಆರ್. ಈಶ್ವರಿ ಮಾಡಿಕೊಂಡರು.

 
2. ಒಂದಾಗುವ ಮುಂದಾಗುವ - ಚಂದವಳ್ಳಿಯ ತೋಟ



ಇದು ಜೇಸುದಾಸ್ ಅವರನ್ನು ಕನ್ನಡಕ್ಕೆ ಪರಿಚಯಿಸಿದ ಹಾಡು. ಟಿ.ಜಿ. ಲಿಂಗಪ್ಪ ಅವರ ಸಂಗೀತವಿದೆ. ಇದೇ ಚಿತ್ರದ ಸುಮಬಾಲೆಯ ಪ್ರೇಮದ ಸಿರಿಯೆ ಕೂಡ ಈಶ್ವರಿ ಅವರ all time hit ಗಳಲ್ಲಿ ಒಂದು. ಎಲ್. ಆರ್ ಈಶ್ವರಿ ಅವರು ಟಿ.ಜಿ. ಲಿಂಗಪ್ಪ ಸಂಗೀತದಲ್ಲಿ ಆಗಾಗ ಕಾಣಿಸಿಕೊಂಡರೂ ಜೇಸುದಾಸ್ ಮತ್ತೆ ಕಾಣಿಸಿಕೊಂಡದ್ದು ಬಹಳ ವರ್ಷಗಳ ನಂತರ ದೇವರ ಕಣ್ಣು ಚಿತ್ರದ ನಗುವಿನ ಅಳುವಿನ ಸಂಕೋಲೆಯಲ್ಲಿ.  !

3. ತಂಗಾಳಿ ಅಲೆಯೂ ಕೋಗಿಲೆ ಉಲಿಯೂ -  ಪ್ರತಿಜ್ಞೆ



ಪೇಟೆಯ ಲಲನೆಯರು ಸೈಕಲ್ ಮೇಲೆ ಸಾಗುತ್ತಾ ಹಾಡುವ ಹಾಡು.  ವಾಸ್ತವವಾಗಿ ಇದು ಹಿಂದಿ ಸಂಗೀತ ನಿರ್ದೇಶಕ ರವಿ ಅವರ ಟ್ಯೂನ್.  ಈ ಚಿತ್ರದ ನಿರ್ಮಾಪಕ ಬಿ.ಎಸ್.ರಂಗಾ ತಮ್ಮದೇ ನಿರ್ಮಾಣದ  ಪ್ಯಾರ್ ಕಿಯಾ ತೊ ಡರನಾ ಕ್ಯಾ ಚಿತ್ರದ ರಫಿ ಹಾಡಿನ ಧಾಟಿ ಇಲ್ಲಿ ಬಳಸಿಕೊಂಡಿದ್ದಾರೆ.  ಕನ್ನಡಕ್ಕೆ ಅಳವಡಿಕೆ  ಎಸ್. ಹನುಮಂತ ರಾವ್. ಹಿಂದಿಯಲ್ಲಿ ಶಮ್ಮಿಗೆ ರಫಿ ಹಾಡಿದ ಹಾಡನ್ನು ಕನ್ನಡದಲ್ಲಿ ಎಲ್.ಆರ್. ಈಶ್ವರಿ ಧ್ವನಿಯಲ್ಲಿ ಕೇಳುವುದು ಒಂದು ವಿಶಿಷ್ಟ ಅನುಭವ.  ಮೂಲ ಹಿಂದಿ ಹಾಡಿನ ವೀಡಿಯೊ ಇಲ್ಲಿ ನೋಡಬಹುದು.
 
4.  ಮುದ ತುಂಬಿ ಮೆರೆವ ಮದುಮಗಳೆ - ವಾತ್ಸಲ್ಯ



ಮದುಮಗಳಿಗಾಗಿ ಸಖಿಯರು ಹಾಡುವ ಹಾಡು.  ಇಲ್ಲಿ ಸಂಗೀತ ನಿರ್ದೇಶಕ ವಿಜಯ ಕೃಷ್ಣಮೂರ್ತಿ ಪಾಸಮಲರ್ ತಮಿಳು ಚಿತ್ರದ ಹಾಡಿನ ಧಾಟಿಯನ್ನು ಬಳಸಿಕೊಂಡಿದ್ದಾರೆ. ನಾಗಸ್ವರ, ತವಿಲ್, ಮ್ಯಾಂಡೊಲಿನ್, ಕೊಳಲು, ವಯಲಿನ್ಸ್,  ಢೋಲಕ್, ಕೋರಸ್, ಮಂತ್ರಘೋಷಗಳನ್ನೊಳಗೊಂಡ ಆಕರ್ಷಕ ಸಂಯೋಜನೆ.   ವಿಶ್ವನಾಥನ್ - ರಾಮಮೂರ್ತಿ ಸಂಗೀತ ನಿರ್ದೇಶನ ಉಳ್ಳ ಮೂಲ ತಮಿಳು ಹಾಡು ಇಲ್ಲಿ ಕೇಳಬಹುದು.  ಕನ್ನಡ ಹಾಗೂ ತಮಿಳು ಹಾಡುಗಳ ವಾದ್ಯ ಸಂಯೋಜನೆ (ತಾಂತ್ರಿಕವಾಗಿ arrangement ಅನ್ನುತ್ತಾರೆ) ಬಹುತೇಕ ಒಂದೇ ಇದ್ದರೂ ಕನ್ನಡ version ನಲ್ಲಿ ಢೋಲಕ್ ಬಳಕೆ ಹೆಚ್ಚು ಪರಿಣಾಮಕಾರಿಯಾಗಿರುವುದನ್ನೂ, ಎಲ್.ಆರ್.ಈಶ್ವರಿ ಅವರ ಧ್ವನಿಯ ಕತ್ತಿಯ ಅಂಚು ಕನ್ನಡದಲ್ಲಿ ಹೆಚ್ಚು ಹರಿತವಾಗಿರುವುದನ್ನೂ ಗಮನಿಸಬಹುದು.

ಮಾತಿನ ಮಲ್ಲ - ವಿಜಯನಗರದ ವೀರ ಪುತ್ರ.



ಈ ಹಾಡಲ್ಲಿ  ಮತ್ತೆ ಈಶ್ವರಿ ಮತ್ತು ಪೀಠಾಪುರಂ ಜೋಡಿ ಇದೆ.  ತೆರೆಯ ಮೇಲೆ  ನರಸಿಂಹರಾಜು ಲಕ್ಷ್ಮಿದೇವಿ ನಟಿಸಿದ್ದಾರೆ.  ಕವ್ವಾಲಿ ಶೈಲಿಯಲ್ಲಿರುವ ಅಪರೂಪದ  ಹಾಡಿದು. ಆಗಿನ RCA Sound System ನಲ್ಲಿ ಧ್ವನಿಮುದ್ರಿತವಾಗುತ್ತಿದ್ದ ಹಾಡುಗಳಲ್ಲಿ presence of voice and instruments ಎಷ್ಟು ಚೆನ್ನಾಗಿರುತ್ತಿತ್ತೆಂಬುದಕ್ಕೆ ಈ ಹಾಡಿನ ಕೊಳಲು, ಮ್ಯಾಂಡೊಲಿನ್ , ಢೋಲಕ್ ಹಾಗೂ ಹಾಡುಗಾರರ ಧ್ವನಿಯ ಸ್ಪಷ್ಟತೆಯೇ ಸಾಕ್ಷಿ.  ಸಂಗೀತ ದಕ್ಷಿಣದ ಶಂಕರ್-ಜೈಕಿಶನ್ ಎನ್ನಬಹುದಾದ ವಿಶ್ವನಾಥನ್ ರಾಮಮೂರ್ತಿ ಅವರದ್ದು.  ಸಾಹಿತ್ಯ ಆರ್.ಎನ್.ಜಯಗೋಪಾಲ್.  ಈ ಹಾಡಿನ ವೀಡಿಯೊ ಇಲ್ಲಿ ನೋಡಬಹುದು. ಈ ಹಾಡು ನರಸಿಂಹರಾಜು ಲಕ್ಷ್ಮಿದೇವಿ ಅವರದ್ದಾದರೂ ಇದರಲ್ಲಿ  ಪ್ರಖ್ಯಾತ ನಟ ಕಲ್ಯಾಣ್ ಕುಮಾರ್ ಅವರೂ ವಾದ್ಯಗಾರನಾಗಿ ಕಾಣಿಸಿಕೊಂಡಿದ್ದಾರೆ ! ಬಹುಶಃ ಆಗಿನ ಕಾಲದಲ್ಲಿ ಹೀರೊಯಿಸಂನ ego ಇತ್ಯಾದಿ ಇರಲಿಲ್ಲ. (ಇದೇ ರೀತಿ ತೀಸ್ರಿ ಕಸಂ ಚಿತ್ರದಲ್ಲಿ ರಾಜ್ ಕಪೂರ್ ಅವರು ಚಲತ ಮುಸಾಫಿರ್ ಮೋಹಲಿಯಾರೆ ಹಾಡಿನಲ್ಲಿ ಕೋರಸ್ ಹಾಡುಗಾರನಾಗಿ ಕಾಣಿಸಿಕೊಂಡಿದ್ದರು. )

6. ಜಿಗಿಜಿಗಿಯುತ ನಲಿ - ಜೇನುಗೂಡು



ಹಿಂದಿಯ ಭಾಭಿ ಕನ್ನಡದಲ್ಲಿ ಜೇನುಗೂಡು ಆಗಿ ಬಂದಿತ್ತು.  ಅಲ್ಲಿಯ ಚಲಿ ಚಲಿರೆ ಪತಂಗ್ ಮೇರಿ ಚಲಿರೆ ಇಲ್ಲಿ ಈ ಹಾಡಾಯಿತು.  ಜೆ.ವಿ. ರಾಘವುಲು ಎಂಬ ಹೆಚ್ಚು ಹೆಸರು ಮಾಡದ ಗಾಯಕ ಜತೆಗಿದ್ದಾರೆ.   ಆಗಿನ ಕಾಲಕ್ಕೆ ಕನ್ನಡ ಚಿತ್ರಗೀತೆಗಳಲ್ಲಿ ಮೂರು ಚರಣಗಳಿರುತ್ತಿದ್ದುದು ಕಮ್ಮಿ.  ಆದರೆ ಈ ಹಾಡಿನಲ್ಲಿವೆ.  (ಗ್ರಾಮಫೋನ್ ತಟ್ಟೆಯ ಎರಡೂ ಬದಿಗಳನ್ನು ಬಳಸುತ್ತಿದ್ದ ಬಹುಚರಣಗಳ  ರಾಮನ ಅವತಾರದಂತಹ ಹಾಡುಗಳ ವಿಚಾರ ಬೇರೆ .)  ಆಗ ಬೇರೆ ಭಾಷೆಗಳ ಚಿತ್ರಗಳು ರೀಮೇಕ್ ಆಗಿ ಕನ್ನಡಕ್ಕೆ ಬಂದರೂ ಹಾಡುಗಳಿಗೆ ಸ್ವಂತ ಟ್ಯೂನ್ ಬಳಸುತ್ತಿದ್ದರು.  ಹಾಗಾಗಿ ಚಲ್ ಉಡ್ ಜಾರೆ ಪಂಛಿ - ಬಾಳೊಂದು ನಂದನ, ಟೈ ಲಗಾಕೆ ಮಾನಾ ಬನ್ ಗಯೆ ಜನಾಬ್ ಹೀರೊ - ಹೆಸರಿಗೆ ರಂಗ, ಛುಪಾಕರ್ ಮೇರಿ ಆಂಖೋಂಕೊ -ಜೇನಿರುಳು ಜತೆಗೂಡಿರಲು ಆಗಿ ವಿಜಯ ಕೃಷ್ಣಮೂರ್ತಿ ಸಂಗೀತದಲ್ಲಿ ರೂಪಾಂತರಗೊಂಡವು. ತಮಿಳಿನ ಪ್ರಸಿದ್ಧ ಚಿತ್ರ ಪಾಲುಂ ಪಳಮುಂ ಕನ್ನಡದಲ್ಲಿ ಬೆರೆತ ಜೀವ ಆದಾಗ ವಿಜಯ ಭಾಸ್ಕರ್ ಕೂಡ ಟ್ಯೂನ್ ಕಾಪಿ ಮಾಡಿರಲಿಲ್ಲ. ಈ ಹಾಡಿನ ಬಗ್ಗೆ ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ಕಿಸಿ.

7.  ಏಳಯ್ಯ ಮನಮೋಹನ - ಸಂತ ತುಕಾರಾಂ



ತಾನು ಶಾಸ್ತ್ರೀಯ ಸಂಗಿತಾಧಾರಿತ ಹಾಡೂ ಹಾಡಬಲ್ಲೆ ಎಂದು ತೋರಿಸಿದ ಇದು ವಿವಿಧ ಹಂತಗಳಲ್ಲಿ ಸಾಗುತ್ತಾ ಕೊನೆಗೆ ಹೇ ಪಂಢರಯ್ಯ ನೀನೆ ಜಗದ ತಂದೆ ಕಣಯ್ಯಾ ಎಂದು ಭಗವಂತನಿಗೆ ಶರಣಾಗುವಾಗ ಪಿ.ಬಿ. ಶ್ರೀನಿವಾಸ್ ಕೂಡ ದನಿಗೂಡಿಸುತ್ತಾರೆ.  ಚಿ.ಸದಾಶಿವಯ್ಯ ಸಾಹಿತ್ಯಕ್ಕೆ ವಿಜಯ ಭಾಸ್ಕರ್ ಸಂಗೀತ.

8. ಕಂದ ಕಣ್ಮಣಿಯೆ - ಬಾಲ ನಾಗಮ್ಮ



ಇದು ಈಶ್ವರಿ ಅವರು ಹಾಡಿದ  ಜೋಗುಳಗಳ ಪೈಕಿ ಒಂದು.  ಸಂಗೀತ ಎಸ್.ರಾಜೇಶ್ವರ ರಾವ್. ಕಂಚಿನ ಕಂಠದ ಈ ಜೋಗುಳ ಕೇಳಿ ಮಗು ನಿದ್ರಿಸುತ್ತದೋ ಅಥವಾ ಕೈ ಕಾಲು ಕುಣಿಸಿ ಆಟವಾಡುತ್ತದೋ ಎಂಬ ಸಂದೇಹ !  ಮಹಾ ಸತಿ ಅನಸೂಯ ಚಿತ್ರದಲ್ಲೂ ತ್ರಿಮೂರ್ತಿಗಳಿಗೆ  ಆದಿ ದೇವ ಆದಿ ಮೂಲ ಆದಿ ಬ್ರಹ್ಮ ಜೊ ಜೊ ಎಂಬ ಜೋಗುಳ ಹಾಡಿದ್ದಾರೆ. 

9. ಆಭರಣದ ಅಲಂಕಾರ - ಮಂತ್ರಾಲಯ ಮಹಾತ್ಮೆ



ನವ ವಧುವಿನಲ್ಲಿ  ಹೊಸ ಕಳೆ ಎಲ್ಲಿಂದ ಬಂತೆಂದು ಗೆಳತಿಯು ಛೇಡಿಸುವ ಈ ಹಾಡಿನಲ್ಲಿ ಈಶ್ವರಿ ಅವರ ದನಿಯ ಕೀಟಲೆ ಮತ್ತು ಜಾನಕಿ ಅವರ ದನಿಯ ಮುಗ್ಧತೆಯ ಸಮ್ಮಿಳನವಿದೆ.  ಆಲಿಸಿದಾಗ ಶುಂಠಿ ಮತ್ತು ಜೇನುತುಪ್ಪದ ಮಿಶ್ರಣ ಸೇವಿಸಿದ ಅನುಭವವಾಗುತ್ತದೆ !  ಇದು ರಾಜನ್ ನಾಗೇಂದ್ರ ಅವರ ಸಂಗೀತ.

10  ಕುಣಿಯೋಣು ಬಾರಾ - ಚಕ್ರ ತೀರ್ಥ



ದ. ರಾ. ಬೇಂದ್ರೆ ಅವರ ಪ್ರಸಿದ್ಧ ಕವನಕ್ಕೆ ಈಶ್ವರಿ ದನಿಯಾಗಿದ್ದಾರೆ. ತ.ರಾ.ಸು ಕಾದಂಬರಿ ಆಧಾರಿತ ಈ ಚಿತ್ರಕ್ಕೆ ಟಿ.ಜಿ..ಲಿಂಗಪ್ಪ ಅವರ ಸಂಗೀತ ಇದೆ.
     
     ಎಲ್.ಆರ್. ಈಶ್ವರಿ ಕಣ್ಣು ಕತ್ತಿಯ ಅಂಚು ಎಂದು ಹಾಡಲಿ  ಅಥವಾ ಇನ್ಯಾವುದೇ ಹಾಡು ಹಾಡಲಿ ಯಾವಾಗಲೂ ಅವರ ಕಂಠ ಕತ್ತಿಯ ಅಂಚು !   ಪುರುಷರಲ್ಲಿ ಈ ರೀತಿ ಕತ್ತಿಯ ಅಂಚಿನಂಥ ಕಂಠ ಉಳ್ಳವರು ಟಿ. ಎಂ. ಸೌಂದರರಾಜನ್ ಮಾತ್ರ. ನನ್ನ ಆರಂಭದ ರೇಡಿಯೋ ಕೇಳ್ಮೆ ದಿನಗಳಲ್ಲಿ ಅವರು ಹೆಚ್ಚು ಹೆಚ್ಚು ಕನ್ನಡ ಹಾಡುಗಳನ್ನು ಹಾಡಲಿ ಎಂದು ಹಾರೈಸುವುದಿತ್ತು ! ಯಾವಾಗಲಾದರೂ ಸದಾರಮೆ ಚಿತ್ರದ ಚಿನ್ನ ಕೇಳ್ ಬ್ಯಾಡ್ವೆ ನನ್ನ ಪುರಾಣ ಅಥವಾ ಬಾರೆ ಬಾರೆ ನನ್ನ ಹಿಂದೆ ಹಿಂದೆ ಕೇಳಸಿಕ್ಕಿದರೆ ಹಿಗ್ಗುವುದಿತ್ತು.

     ಸಿಟ್ಯಾಕೊ ಸಿಡುಕ್ಯಾಕೊ, ವಾಹರೆ ಮೇರಾ ಮುರ್ಗಾ, ಅಯ್ಯಯ್ಯಯ್ಯೊ ಹಳ್ಳಿಮುಕ್ಕದಂತಹ ಯಾವಾಗಲೂ ಕೇಳಸಿಗುವ  ಅವರ ಹಾಡುಗಳ ಬಗ್ಗೆ ಇಲ್ಲಿ ಚರ್ಚಿಸಲಾಗಿಲ್ಲ. 

  


Sunday, 12 August 2012

ಜಹಾಂ ಡಾಲ್ ಡಾಲ್ ಪರ್ ...



ಅದಿನ್ನೂ ಕ್ಯಾಸೆಟ್, CDಗಳನ್ನು ಹಾಕಿಕೊಂಡು ಮಾಡುವ ಫಿಲ್ಮೀ  ಡ್ಯಾನ್ಸುಗಳು ಶಾಲೆಗಳಲ್ಲಿ ಶುರುವಾಗಿರದಿದ್ದ ಕಾಲ. ಹಾಗೆಂದು ಚಿತ್ರಗೀತೆಗಳ ಬಗ್ಗೆ ಅತಿ ಮಡಿವಂತಿಕೆಯಿದ್ದ ಕಾಲವೂ ಅಲ್ಲ. ನಮ್ಮೂರಿನ ಶಾಲೆಗಳಲ್ಲಿ ಸ್ವಾತಂತ್ರ್ಯೋತ್ಸವ ಸಂದರ್ಭದಲ್ಲಿ ಮಕ್ಕಳಿಗೆ ಹಾಡುವ ಸ್ಪರ್ಧೆ ಏರ್ಪಡಿಸುತ್ತಿದ್ದರು.  ನಾನು ಕಾಲೇಜಿಗೆ ಹೋಗುವಾಗ ಕೂಡು ಕುಟುಂಬದ ನಮ್ಮ ಮನೆಯಲ್ಲಿ ಶಾಲೆಗೆ ಹೋಗುವ ಮಕ್ಕಳು ಇದ್ದೇ ಇರುತ್ತಿದ್ದರು.  ಪ್ರತೀ ವರ್ಷ ಒಬ್ಬರಿಗಲ್ಲ ಒಬ್ಬರಿಗೆ  ನಾನು ಈ ಹಾಡು ಕಲಿಸಿ ಶಾಲೆಯಲ್ಲಿ ಹಾಡುವಂತೆ ಪ್ರೋತ್ಸಾಹಿಸುತ್ತಿದ್ದೆ.  ಅವರೂ ಖುಶಿಯಿಂದ ಕಲಿತು ಹಾಡಿ ಬಹುಮಾನ - ಮೆಚ್ಚುಗೆ ಗಳಿಸುತ್ತಿದ್ದರು. 

ಈ ಹಾಡಿನ ಗುಣವೇ ಅಂಥದ್ದು.  ಹೆಚ್ಚಿನ ಹಿಂದೀ ಹಾಡುಗಳು ತಮ್ಮ ಆಕರ್ಷಕ ಧಾಟಿಗಳಿಂದಾಗಿ ಜನಪ್ರಿಯವಾಗುತ್ತವೆಯೇ ಹೊರತು ಅವುಗಳ ಸಾಹಿತ್ಯ ಅಷ್ಟಕ್ಕಷ್ಟೇ. ಕೆಲವು ಹಾಡುಗಳಲ್ಲಿ ಪ್ರಾಸದ ಬಂಧವೂ ಇರುವುದಿಲ್ಲ.  ಇದ್ದರೂ ಬಲು ಶಿಥಿಲ.  ಒಂದು ಸಾಲು ಜಾದೂ ಎಂಬ ಶಬ್ದದಲ್ಲಿ ಕೊನೆಗೊಂಡರೆ ಇನ್ನೊಂದು ಸಾಲಿನ ಕೊನೆಗೆ  ಕಾಬೂ ಎಂಬ ಶಬ್ದ ಇದ್ದರೂ ನಡೆಯುತ್ತದೆ.  ಆದರೆ ಈ ಹಾಡು ಹಾಗಲ್ಲ.  ರಾಜೇಂದ್ರ  ಕೃಷ್ಣ ಅವರ ಉತ್ಕೃಷ್ಟ ಪ್ರಾಸಬದ್ಧ ಸಾಹಿತ್ಯ, ಹಂಸರಾಜ ಬಹಲ್ ಅವರ ಯಮನ್ ರಾಗಾಧಾರಿತ ಮಧುರ ಧಾಟಿ,  ರಫಿಯ ಗಂಧರ್ವ ಗಾಯನಗಳ ಸಂಗಮ ಇಲ್ಲಿದೆ. ಶಂಕರ್ ಜೈಕಿಶನ್, ಆರ್ ಡಿ ಬರ್ಮನ್ ಅಂದರೆ ಎಲ್ಲರಿಗೆ  ತಿಳಿದೀತು.  ಆದರೆ ಚಿತ್ರಸಂಗೀತದಲ್ಲಿ ಆಳ ಅಭಿರುಚಿ ಉಳ್ಳವರು ಮಾತ್ರ ಈ ಹಂಸರಾಜ ಬಹಲ್ ಹೆಸರು ಕೇಳಿರಬಹುದು. ಅವರು ಸಂಗೀತ ನೀಡಿದ ಚಿತ್ರಗಳು ಕೆಲವೇ ಕೆಲವು.  ಅವುಗಳ ಪೈಕಿ ಈ ಹಾಡು ಶಿಖರಪ್ರಾಯ. ಆ ಕಾಲದ ಪದ್ಧತಿಯಂತೆ ಮೂಲ ಹಾಡಿನಲ್ಲಿ 100 ಪೀಸ್ ಆರ್ಕೆಷ್ಟ್ರಾ ಇದ್ದರೂ ಯಾವ ಸಂಗೀತೋಪಕರಣವನ್ನೂ ಬಳಸದೆ ಹಾಗೆಯೇ ಹಾಡಿದರೂ ಈ ಹಾಡು ಅಷ್ಟೇ ಪರಿಣಾಮಕಾರಿ.  ಸಮೂಹಗಾನ ರೂಪದಲ್ಲಿ ಹಾಡಿದರೆ ಇನ್ನೂ ಉತ್ತಮ. ಇದು ಮಧ್ಯ ಸಪ್ತಕ ಹಾಗೂ ತಾರ ಸಪ್ತಕಗಳಲ್ಲಿ ಸಂಚರಿಸುವುದರಿಂದ ಸೂಕ್ತ ಶ್ರುತಿಯನ್ನು ಆಯ್ದುಕೊಳ್ಳುವುದು ಮುಖ್ಯ.  ಜಹಾಂ ಡಾಲ್ ಡಾಲ್ ಪರ್ ಎಂದು ಮಧ್ಯ ಸಪ್ತಕದ ಷಡ್ಜದಿಂದ ಆರಂಭವಾಗಿ ಒಮ್ಮೆಲೇ ತಾರ ಸಪ್ತಕದ ಗಾಂಧಾರದಲ್ಲಿ  ಬರುವ ಗುರುರ್ ಬ್ರಹ್ಮ ಶ್ಲೋಕವು ರೋಮಾಂಚನವನ್ನುಂಟುಮಾಡುತ್ತದೆ.  ಸಮೂಹ  ಸ್ವರಗಳಲ್ಲಿ ಇರುವ  ತಾರ ಸಪ್ತಕದ ಪಂಚಮವನ್ನು ಸ್ಪರ್ಶಿಸುವ ಜೈ ಭಾರತಿ ಘೋಷ ಹಾಡಲು ಕೊಂಚ ಕಠಿಣ ಆದರೆ ಕೇಳಲು ಬಲು ಆಕರ್ಷಕ.

ಸಾಮಾನ್ಯವಾಗಿ ಸಿನಿಮಾ  ಹಾಡುಗಳು ಆರಂಭದಿಂದ ಕೊನೆಯವರೆಗೆ  ಒಂದೇ ಲಯದಲ್ಲಿ ಇರುತ್ತವೆ. ಹಿಂದುಸ್ಥಾನಿ ಸಂಗೀತದ ಗಾಯನ ವಾದನಗಳು ವಿಲಂಬಿತ ಲಯದಿಂದ ಆರಂಭಿಸಿ    ಆ ಮೇಲೆ ದ್ರುತ ಗತಿಗೆ   ಹೊರಳುವಂತೆ ಈ ಹಾಡು ಕೂಡ ಕ್ರಮೇಣ ಲಯದ ಗತಿಯನ್ನು ಹೆಚ್ಚಿಸಿಕೊಳ್ಳುವುದು ಒಂದು ವಿಶೇಷ.  ರೇಡಿಯೋದಲ್ಲಿ ಕೇಳಲು ಸಿಗುವ ಗ್ರಾಮೊಫೋನ್ ತಟ್ಟೆಯ ಎರಡೂ ಬದಿಗಳನ್ನು ಆವರಿಸಿರುವ ಹಾಡಿನಲ್ಲಿ ಇಲ್ಲದ 3ನೇ  ಹೆಚ್ಚುವರಿ   ಚರಣ   ಸಿನಿಮಾದಲ್ಲಿ  ಇದೆ.

ನೀವು ಹಿರಿಯರಾದರೆ ಈ ಹಾಡನ್ನು ಮೊಮ್ಮಕ್ಕಳಿಗೆ ಕಲಿಸಿ, ಯುವಕರಾದರೆ ಮಕ್ಕಳಿಗೆ ಕಲಿಸಿ.  ಕಲಿತು ಚೆನ್ನಾಗಿ ಹಾಡಿದರೆ ಸ್ಪರ್ಧೆಗಳಲ್ಲಿ ಬಹುಮಾನ ಗ್ಯಾರಂಟಿ.  




ಚಿತ್ರ : ಸಿಕಂದರ್ ಎ ಆಜಮ್  (1965)
ಸಂಗೀತ : ಹಂಸರಾಜ ಬಹಲ್
ರಚನೆ : ರಾಜೇಂದ್ರ  ಕೃಷ್ಣ
ಗಾಯಕ : ರಫಿ

ಜಹಾಂ ಡಾಲ್ ಡಾಲ್ ಪರ್ ಸೋನೇ ಕೀ ಚಿಡಿಯಾಂ ಕರ್‍ತೀ ಹೈಂ ಬಸೇರಾ
ವೊ ಭಾರತ್ ದೇಶ್ ಹೈ ಮೇರಾ


ಗುರುರ್ ಬ್ರಹ್ಮ ಗುರೂರ್ ವಿಷ್ಣು ಗುರುರ್ದೇವೋ ಮಹೇಶ್ವರಾ
ಗುರುರ್ಸಾಕ್ಷಾತ್ ಪರಬ್ರಹ್ಮ ತಸ್ಮೈ ಶ್ರೀ ಗುರವೇ ನಮಃ


ಜಹಾಂ ಡಾಲ್ ಡಾಲ್ ಪರ್ ಸೋನೇ ಕೀ ಚಿಡಿಯಾಂ ಕರ್ ತೀ ಹೈಂ ಬಸೇರಾ
ವೊ ಭಾರತ್ ದೇಶ್ ಹೈ ಮೇರಾ 
ವೊ ಭಾರತ್ ದೇಶ್ ಹೈ ಮೇರಾ(2)
ಜಹಾಂ ಸತ್ಯ ಅಹಿಂಸಾ ಔರ್ ಧರಮ್ ಕಾ ಪಗ್ ಪಗ್ ಲಗ್‍ತಾ ಡೇರಾ
ವೊ ಭಾರತ್ ದೇಶ್ ಹೈ ಮೇರಾ
ವೊ ಭಾರತ್ ದೇಶ್ ಹೈ ಮೇರಾ
ಜಯ್ ಭಾರತೀ  ಜಯ್ ಭಾರತೀ  ಜಯ್ ಭಾರತೀ  ಜಯ್ ಭಾರತೀ

ಯೆ ಧರ್‍ತೀ ವೊ ಜಹಾಂ ಋಷಿ ಮುನಿ ಜಪ್‍ತೇ ಪ್ರಭು ನಾಮ್ ಕೀ ಮಾಲಾ

ಹರಿ ಓಂ ಹರಿ ಓಂ ಹರಿ ಓಂ ಹರಿ ಓಂ
ಜಹಾಂ ಹರ್ ಬಾಲಕ್  ಏಕ್ ಮೋಹನ್ ಹೈ ಔರ್ ರಾಧಾ ಏಕ್ ಏಕ್ ಬಾಲಾ

ಔರ್ ರಾಧಾ ಏಕ್ ಏಕ್ ಬಾಲಾ
ಜಹಾಂ ಸೂರಜ್ ಸಬ್‍ಸೇ ಪಹಲೇ ಆಕರ್ ಡಾಲೇ ಅಪನಾ ಘೇರಾ

ವೊ ಭಾರತ್ ದೇಶ್ ಹೈ ಮೇರಾ ವೊ ಭಾರತ್ ದೇಶ್ ಹೈ ಮೇರಾ

ಜಹಾಂ ಗಂಗಾ ಜಮುನಾ ಕೃಷ್ಣ ಔರ್ ಕಾವೇರೀ ಬಹತೀ ಜಾಯೆಂ
ಜಹಾಂ ಉತ್ತರ್ ದಕ್ಷಿಣ್ ಪೂರಬ್ ಪಶ್ಚಿಮ್ ಕೊ ಅಮೃತ್ ಪಿಲ್‍ವಾಯೆಂ
ಯೆ  ಅಮೃತ್ ಪಿಲ್‍ವಾಯೆಂ
ಕಹೀಂ ಯೆ ತೊ ಫಲ್ ಔರ್ ಫೂಲ್ ಉಗಾಯೆಂ ಕೇಸರ್ ಕಹೀಂ ಬಿಖೇರಾ
ವೊ ಭಾರತ್ ದೇಶ್ ಹೈ ಮೇರಾ ವೊ ಭಾರತ್ ದೇಶ್ ಹೈ ಮೇರಾ

ಅಲ್‍ಬೇಲೊಂ ಕೀ ಇಸ್ ಧರ್‍ತೀ ಕೆ ತ್ಯೋಹಾರ್ ಭೀ ಹೈಂ ಅಲ್‍ಬೇಲೆ

ಕಹೀಂ ದೀವಾಲೀ ಕೀ ಜಗ್‍ಮಗ್ ಹೈ ಹೋಲೀ ಕೇ ಕಹೀಂ ಮೇಲೆ

ಹೋಲೀ ಕೇ ಕಹೀಂ ಮೇಲೆ
ಜಹಾಂ ರಾಗ್ ರಂಗ್ ಔರ್ ಹಸೀಂ ಖುಶೀ ಕಾ  ಚಾರೊಂ ಓರ್ ಹೈ ಘೇರಾ
ವೊ ಭಾರತ್ ದೇಶ್ ಹೈ ಮೇರಾ ವೊ ಭಾರತ್ ದೇಶ್ ಹೈ ಮೇರಾ

ಜಹಾಂ ಆಸ್‍ಮಾನ್ ಸೇ ಬಾತೇಂ ಕರ್‍ತೆ ಮಂದಿರ್ ಔರ್ ಶಿವಾಲಯ್

ಕಿಸೀ ನಗರ್ ಮೆಂ ಕಿಸೀ ದ್ವಾರ್ ಪರ್ ಕೊಯೀ ನ ತಾಲಾ ಡಾಲೇ

ಕೊಯೀ ನ ತಾಲಾ ಡಾಲೇ
ಔರ್ ಪ್ರೇಮ್ ಕೀ ಬಂಸೀ ಜಹಾಂ ಬಜಾತಾ ಆಯೇ ಶಾಮ್ ಸವೇರಾ
ವೊ ಭಾರತ್ ದೇಶ್ ಹೈ ಮೇರಾ ವೊ ಭಾರತ್ ದೇಶ್ ಹೈ ಮೇರಾ.

ಜಹಾಂ ಸತ್ಯ ಅಹಿಂಸಾ ಔರ್ ಧರಮ್ ಕಾ ಪಗ್ ಪಗ್ ಲಗ್‍ತಾ ದೇರಾ
ವೊ ಭಾರತ್ ದೇಶ್ ಹೈ ಮೇರಾ

ಜಯ್ ಭಾರತೀ  ಜಯ್ ಭಾರತೀ  ಜಯ್ ಭಾರತೀ  ಜಯ್ ಭಾರತೀ

    

Saturday, 28 July 2012

ರಫಿ - Top Ten for 10 Heroes




ರಫಿಯ ಹಾಡೆಂದರದು ಅಮೃತದ ಗುಳಿಗೆ
ಮಾಡುವುದು ಪ್ರತಿಯೊಂದು ದಿನವ ದೀವಳಿಗೆ
ಕೇಳುತ್ತ ಹೋದಂತೆ ಒಂದೊಂದೆ ಹಾಡು
ವಯಸು ಹಿಮ್ಮುಖವಾಗಿ ಚಲಿಸುವುದು ನೋಡು

 
     50 ರ ದಶಕದ ಉತ್ತರಾರ್ಧ ಮತ್ತು 60 ರ  ದಶಕದಲ್ಲಿ ಬಹುತೇಕ ಎಲ್ಲ ನಟರೂ ತೆರೆಯ ಮೇಲೆ ರಫಿ ಧ್ವನಿಯಲ್ಲಿ ಹಾಡಿದವರೇ.  ಕೆಲವರಂತೂ ರಫಿ ಹಾಡುಗಳಿಂದಾಗಿಯೆ ಯಶಸ್ಸಿನ ಮೆಟ್ಟಲೇರುತ್ತಾ ಹೋದವರು.  ಈ ಸಲದ ರಫಿ ಪುಣ್ಯ ತಿಥಿಯ ಸಂದರ್ಭದಲ್ಲಿ ಆ ಸಮಯದ 10 ಹಿರಿಯ ನಟರಿಗಾಗಿ ರಫಿ ಹಾಡಿದ್ದ 10 ಹಾಡುಗಳು ಇಲ್ಲಿವೆ. 

1. Raj Kapoor - Sadque Heer Tujhpe
ರಾಜ್ ಕಪೂರ್ - ಸದ್ಕೆ ಹೀರ್ ತುಝಪೆ

ಮೇರಾ ನಾಮ್ ಜೋಕರ್ ಚಿತ್ರದಲ್ಲಿ ರಫಿ ಹಾಡೊಂದು ಇದೆಯೆಂದು ಹೇಳಿದರೆ  ಅದು  ಮಲ್ಟಿ ಸ್ಟಾರ್  ಚಿತ್ರವಾದ ಕಾರಣ ರಾಜೇಂದ್ರ ಕುಮಾರ್ ಅಥವಾ ಧರ್ಮೇಂದ್ರ ಅವರಿಗಾಗಿ ಇರಬಹುದು ಎಂಬ ಭಾವನೆ ಬರುವುದು ಸಹಜ.  ಅಲ್ಲ, ಇದನ್ನು ರಫಿ ಹಾಡಿದ್ದು ರಾಜ್ ಕಪೂರ್ ಅವರಿಗಾಗಿಯೇ.  ಮುಕೇಶ್ , ತಪ್ಪಿದರೆ ಮನ್ನಾಡೆ ಅವರೇ ರಾಜ್ ಕಪೂರ್ ಹಾಡುಗಳನ್ನ್ನು ಹಾಡುವ ಅಲಿಖಿತ ನಿಯಮ ಇದ್ದ ಆ ಕಾಲದಲ್ಲಿ  ಇದು ಹೇಗೆ ಸಾಧ್ಯ ಅನ್ನಿಸುತ್ತದೆಯಲ್ಲವೇ.  ಪಂಜಾಬೀ ಜಾನಪದ ಶೈಲಿಯ ಈ  ಹೀರ್ ಹಾಡೇ ಅಂಥದ್ದು.  ಅದನ್ನು ಬೇರೆ ಯಾರೂ ಹಾಡಲು ಸಾಧ್ಯವೇ ಇಲ್ಲ ಎಂದು ರಾಜ್ ಕಪೂರ್, ಶಂಕರ್-ಜೈಕಿಶನ್ ಎಲ್ಲರೂ ನಿರ್ಧರಿಸಿರಬಹುದು.  ಶಂಕರ್-ಜೈಕಿಶನ್ ಹಾಡುಗಳನ್ನು ಶೈಲೇಂದ್ರ ಅಥವಾ ಹಸರತ್ ಜೈಪುರಿ ಬರೆಯುವುದು ಆಗಿನ ಇನ್ನೊಂದು ನಿಯಮ.  ಶಂಕರ್ ಗೆ ಪ್ರಿಯರಾಗಿದ್ದ ಶೈಲೇಂದ್ರ  ಅವರ  ನಿಧನದ ಬಳಿಕ ಈ ನಿಯಮವೂ ಮುರಿಯತೊಡಗಿ ನೀರಜ್, ರಾಜೇಂದ್ರ ಕಿಶನ್ ಮುಂತಾದವರು ಅವರಿಗೆ ಹಾಡು ಬರೆಯತೊಡಗಿದ್ದರು.  ಆದರೆ ಈ ಹಾಡು ಸ್ವತಃ ಸಂಗೀತ ನಿರ್ದೇಶಕರೂ ಆಗಿದ್ದ ಪ್ರೇಮ್ ಧವನ್ ಅವರ ರಚನೆ.  ಧ್ವನಿಯನ್ನು ತೆಳು ಬಂಗಾರದ ಸರಿಗೆಯಂತೆ  ಬಳುಕಿಸಿ  ತನ್ನೆಲ್ಲ ಪ್ರತಿಭೆಯನ್ನು ಧಾರೆಯೆರೆದು ರಫಿ ಹಾಡಿದ ಈ ಹಾಡು ಚಿತ್ರಮಂದಿರಗಳಲ್ಲಿ ತೆರೆಕಂಡ  ಮೇರಾ ನಾಮ್ ಜೋಕರ್ ನಲ್ಲಿ  ಇಲ್ಲದಿದ್ದುದು ವಿಷಾದನೀಯ.





2. Dilip Kumar - Toote Hue Khwabone
ದಿಲೀಪ್ ಕುಮಾರ್ - ಟೂಟೆ ಹುವೆ ಖ್ವಾಬೊಂ ನೆ

ಸಲಿಲ್ ಚೌಧರಿ ಮನದಾಳದಿಂದ ರಫಿ ಪ್ರಿಯರಲ್ಲವೆಂದು ಅವರ ಹೆಚ್ಚಿನ ಚಿತ್ರಗಳ ತಲತ್ ಹಾಗೂ ಮುಕೇಶ್ ಹಾಡುಗಳಿಂದ ತಿಳಿಯುತ್ತದೆ.  ಮಧುಮತಿಯಲ್ಲೂ ಅವರ ಮುಖ್ಯ ಗಾಯಕ ಮುಕೇಶ್.  ಆದರೆ ಬೇರಾರೂ ಈ ಹಾಡಿಗೆ ನ್ಯಾಯ ಒದಗಿಸಲು ಸಾಧ್ಯವೇ ಇಲ್ಲವೆಂದು  ಗೊತ್ತಿದ್ದುದರಿಂದ ಈ ಹಾಡಿಗಾಗಿ ಅವರು ಅನಿವಾರ್ಯವಾಗಿ ರಫಿ ಅವರ ಮೊರೆ ಹೋಗಬೇಕಾಯಿತು.  ರಫಿಯೂ ಅವರ ನಿರೀಕ್ಷೆಯನ್ನು ಹುಸಿ ಮಾಡಲಿಲ್ಲ.  ಇದೇ ಚಿತ್ರದ ಜಂಗಲ್ ಮೆಂ ಮೋರ್ ನಾಚಾ ಕೂಡ ರಫಿಯೇ ಹಾಡಿದ್ದಾರೆ ಏಕೆಂದರೆ ಅದು ಜಾನಿವಾಕರ್ ಹಾಡು.  ಜಾನಿವಾಕರ್ ತಮ್ಮ ಹಾಡುಗಳಿಗೆ ರಫಿ ಹೊರತು ಇನ್ನಾರನ್ನೂ ಒಪ್ಪುತ್ತಿರಲಿಲ್ಲ.  ಒಂದು ವೇಳೆ ನಾಯಕ ಮತ್ತು ಜಾನಿವಾಕರ್  ಸೇರಿ ಹಾಡುವುದಿದ್ದರೆ  ತನಗೆ ರಫಿ ಹಾಗೂ ನಾಯಕನಿಗೆ ಬೇರೆ ಗಾಯಕನಿರುವಂತೆ ಅವರು ನೋಡಿಕೊಳ್ಳುತ್ತಿದ್ದರು!  ದೂರ್ ಕೀ ಆವಾಜ್ಹಮ್ ಭಿ ಅಗರ್ ಬಚ್ಚೆ ಹೋತೆ ಇದಕ್ಕೆ ಉದಾಹರಣೆ.




3. Dev Anand - Dil Ka Bhanvar Kare Pukar
ದೇವ್ ಆನಂದ್ -ದಿಲ್ ಕಾ ಭಂವರ್ ಕರೇ ಪುಕಾರ್

ತೇರೆ ಘರ್ ಕೆ ಸಾಮ್ನೆ ಚಿತ್ರದ ಈ ಹಾಡು ಏಕಮುಖಿ ನಿಯಮ ಉಲ್ಲಂಘನೆಯ ಒಂದು ಉದಾಹರಣೆ.  60ರ ದಶಕದ ಕೊನೆವರೆಗೂ ಶಂಕರ್- ಜೈಕಿಶನ್ ಅವರು ಶೈಲೇಂದ್ರ - ಹಸ್ರತ್ ಜೈಪುರಿಗೆ ಸಂಪೂರ್ಣ ನಿಷ್ಠರಾಗಿದ್ದವರು.  ಆದರೆ ಈ ಈರ್ವರು ಗೀತ ರಚನಕಾರರು ಆಗಾಗ ಬೇರೆಯವರಿಗೂ ಬರೆಯುತ್ತಿದ್ದರು !  ಇಲ್ಲಿ ಹಸ್ರತ್ ಜೈಪುರಿ ಅವರು ಎಸ್.ಡಿ.ಬರ್ಮನ್ ಅವರಿಗೆ ಗೀತೆಗಳನ್ನು ಬರೆದಿದ್ದಾರೆ.  ಈಗ ಪ್ರವೇಶ ನಿಷೇಧಿಸಲ್ಪಟ್ಟಿರುವ ಕುತುಬ್ ಮಿನಾರ್ ನಲ್ಲಿ ಸಂಪೂರ್ಣ ಚಿತ್ರೀಕರಣಗೊಂಡ ಏಕೈಕ ಗೀತೆ ಇದು.  ಸಾಹಿತ್ಯ, ಸಂಗೀತ, ನಟನೆ, ಚಿತ್ರೀಕರಣ ಎಲ್ಲದರಲ್ಲೂ ಅದೆಂತಹ ಲವಲವಿಕೆ.  ಕುತುಬ್ ಮಿನಾರ್ ನಿಂದ ಇಳಿಯುತ್ತಿರುವ  ಪ್ರವಾಸಿಗಳಲ್ಲೋರ್ವರಾಗಿ ಚಿತ್ರದ ನಿರ್ದೇಶಕ  ವಿಜಯ್ ಆನಂದ್ ಅವರನ್ನೂ ಇದರಲ್ಲಿ ನೋಡಬಹುದು.




4. Shammi Kapoor - Zindagi Kya Hai
ಶಮ್ಮಿ ಕಪೂರ್ - ಜಿಂದಗಿ ಕ್ಯಾಹೈ

ಕನ್ನಡಿಗ ಬಿ.ಎಸ್.ರಂಗಾ ಅವರು ನಿರ್ಮಿಸಿದ ಬಿ.ಸರೋಜಾದೇವಿ ನಾಯಕಿಯಾಗುಳ್ಳ ಪ್ಯಾರ್ ಕಿಯಾ ತೊ ಡರನಾ ಕ್ಯಾ ಚಿತ್ರದ ಈ ಹಾಡು ಕೇಳಲು ಸಿಗುವುದು ಕಮ್ಮಿ.  ಇದರ ಸಂಗೀತ ನಿರ್ದೇಶಕ ರವಿ ಆದರೂ ದಟ್ಟ ಶಂಕರ್ ಜೈಕಿಶನ್  ಛಾಯೆಯನ್ನು ಇಲ್ಲಿ ಗುರುತಿಸಬಹುದು.  ಹಾಗೆ ನೋಡ ಹೋದರೆ 60ರ ದಶಕದಲ್ಲಿ ನೌಶಾದ್ ಸೇರಿದಂತೆ ಶಂಕರ್ ಜೈಕಿಶನ್ ಪ್ರಭಾವದಿಂದ ತಪ್ಪಿಸಿಕೊಂಡವರು ಯಾರೂ ಇಲ್ಲವೆಂದೇ ಅನ್ನಿಸುತ್ತದೆ.




5. Rajendra Kumar - Hai Vo Chale
ರಾಜೇಂದ್ರ ಕುಮಾರ್ - ಹಾಯ್ ವೊ ಚಲೆ

ಇವರು ಜ್ಯುಬಿಲಿ ಕುಮಾರ್ ಎನ್ನಿಸಿಕೊಳ್ಳಲು ರಫಿ ಹಾಡುಗಳೇ ಕಾರಣ.  ಹಮ್ ರಾಹೀ ಚಿತ್ರದ ಲಘು ಶೈಲಿಯ ಈ ಹಾಡಿನಲ್ಲಿ ದತ್ತಾರಾಮ್ ಅವರ ಢೋಲಕ್ ಕೈ ಚಳಕ ಎದ್ದು ಕಾಣುತ್ತದೆ.  ಇದರ ಆರಂಭದ intro music ನಲ್ಲಿ ಸಂಗಂನ  ಹರ್ ದಿಲ್ ಜೊ ಪ್ಯಾರ್ ಕರೇಗಾ intro ದ ಒಂದು ಚಿಕ್ಕ ಎಳೆ ಗುರುತಿಸಿದಿರಾ?  ಇವುಗಳ composing ಸರಿ ಸುಮಾರು ಒಟ್ಟೊಟ್ಟಿಗೇ ಆಗಿರಬಹುದು.




6. Dharmendra  - Hui Sham Unka Khayal Aa Gaya
ಧರ್ಮೇಂದ್ರ - ಹುಯೀ ಶ್ಯಾಮ್ ಉನ್ ಕಾ ಖಯಾಲ್ ಆ ಗಯಾ

ಲಕ್ಷ್ಮಿ-ಪ್ಯಾರೆ ಅವರ ಕ್ಲಾಸಿಕ್ ರಚನೆ  ಮೆರೆ ಹಮ್ ದಮ್ ಮೆರೆ ದೋಸ್ತ್ ಚಿತ್ರದ ಮುಸ್ಸಂಜೆ ನೆನಪಿನ ಈ ಹಾಡು.  ಇದು ಕಶ್ಮೀರ್ ಕೀ ಕಲಿಹೈ ದುನಿಯಾ ಉಸೀಕೀ ಹಾಡಿನಿಂದ ಸ್ಪೂರ್ತಿ ಪಡೆದಂತೆ ಭಾಸವಾಗುತ್ತದೆ.  ಅದರಂತೆಯೇ ಇಲ್ಲೂ ಅತಿ ಕಡಿಮೆ ಸಂಗೀತೋಪಕರಣಗಳನ್ನು ಬಳಸಲಾಗಿದೆ.  ಮುಸ್ಸಂಜೆಗೂ ನೆನಪುಗಳಿಗೂ ಅದೇನೋ ಬಿಡಿಸಲಾಗದ ನಂಟು.  ಒಬ್ಬಂಟಿ ಸಂಜೆಗಳಲ್ಲಿ  ಕಾಡುವ ನೆನಪುಗಳನ್ನು ನಾವೆಲ್ಲರೂ ಒಂದಲ್ಲ ಒಂದು ಸಂದರ್ಭದಲ್ಲಿ ಅನುಭವಿಸಿಯೇ ಇರುತ್ತೇವೆ. ಕಹೀಂ ದೂರ್ ಜಬ್ ದಿನ್ ಢಲ್ ಜಾಯೆ,   ಆಂಚಲ್ ಮೆ ಸಜಾಲೇನಾ ಕಲಿಯಾ ಮುಂತಾಗಿ ಇನ್ನೂ ಕೆಲವು ಮುಸ್ಸಂಜೆ ನೆನಪಿನ ಹಾಡುಗಳಿವೆ.  ನಮಗೆ ಮುಸ್ಸಂಜೆ ನೆನಪುಗಳನ್ನು ಸವಿಯಾಗಿಸಲು ಧರ್ಮೇಂದ್ರ ಮೊರೆ ಹೋದ ರೀತಿಯ ನಶೆ ಬೇಡ, ಇಂತಹ ಹಾಡುಗಳ ನಶೆ ಮಾತ್ರ ಸಾಕು ಅಲ್ಲವೇ?




7. Joy Mukherji - Ek Musafir Ek Haseena
ಜೊಯ್ ಮುಖರ್ಜಿ - ಮುಝೆ ದೇಖ್ ಕರ್

ಏಕ್ ಮುಸಾಫಿರ್ ಏಕ್ ಹಸೀನಾ ಚಿತ್ರದಲ್ಲಿ ರಫಿ ಮೆಲುದನಿಯಲ್ಲಿ ಹಾಡಿದ ವಿಳಂಬ ಗತಿಯ ಹಾಡಿದು.  ಮೆಲುದನಿಯಿರಲಿ ಏರುದನಿಯಿರಲಿ, ನಿಧಾನ ಲಯವಿರಲಿ ತೀವ್ರ ಗತಿ ಇರಲಿ, ವಾದ್ಯಗಳ ಅಬ್ಬರವಿರಲಿ ಮೌನವೇ ಹಿನ್ನೆಲೆ ಸಂಗೀತವಾಗಿರಲಿ , ರಫಿಯ ಹಾಡುಗಳೆಲ್ಲ ನೇರ ಮನದಾಳಕ್ಕೆ ಇಳಿಯುತ್ತಿದ್ದ ಕಾಲವದು.




8. Biswajit - Tera Husn Rahe
ಬಿಸ್ವಜೀತ್ - ತೇರಾ ಹುಸ್ನ್ ರಹೆ ಮೇರಾ ಇಶ್ಕ್ ರಹೆ

ಬೀಸ್ ಸಾಲ್ ಬಾದ್ ಮೂಲಕ  ನಿರ್ಮಾಪಕರಾಗಿ ಬಿಸ್ವಜೀತ್ ಅವರನ್ನು ತೆರೆಗೆ ತಂದ ಹೇಮಂತ್ ಕುಮಾರ್ ಸಂಗೀತದ ದೋ ದಿಲ್ ಚಿತ್ರದ ಮಧುರ ಹಾಡಿದು.  ತಾವೇ ಶ್ರೇಷ್ಠ ಗಾಯಕರಾಗಿದ್ದರೂ ಹೇಮಂತ್ ಕುಮಾರ್ ಈ ಚಿತ್ರದಲ್ಲಿ ರಫಿಯನ್ನು ಬಳಸಿಕೊಂಡಿದ್ದಾರೆ.  ಈ ಮುಂಚೆಯೂ ಜಾಗೃತಿ, ಮಿಸ್ ಮೇರಿ ಮುಂತಾದ ಚಿತ್ರಗಳಲ್ಲಿ ಅವರು ರಫಿಯನ್ನು ಬಳಸಿದ್ದಿದೆ.  ಇದೇ ರೀತಿ ನನ್ನ ತಮ್ಮ ಚಿತ್ರದ ಸಂಗೀತ ನಿರ್ದೇಶಕ ಘಂಟಸಾಲ ಅವರ ಇದೇ ಹೊಸ ಹಾಡು ಪಿ.ಬಿ.ಎಸ್  ಹಾಡಿದ್ದನ್ನು ನೆನಪಿಸಿಕೊಳ್ಳಬಹುದು.




9. Sunil Datt - Nainovale Tere Naina
ಸುನೀಲ್ ದತ್ತ್  - ನೈನೊವಾಲೆ ತೇರೆ ನೈನಾ

ಚಿತ್ರಗೀತೆಗಳ ಸಿದ್ಧ ಮಾದರಿಗಿಂತ ಭಿನ್ನವಾದ  ಈ ಶಂಕರ್- ಜೈಕಿಶನ್ ರಚನೆ ಬೇಟಿ ಬೇಟೆ ಚಿತ್ರದ್ದು.  ಗಿಟಾರ್ ಹಾಗೂ ಎಕಾರ್ಡಿಯನ್ ಗಳನ್ನು ಅತಿ ಸುಂದರ ಸಂಗಮ ಇಲ್ಲಿದೆ.  ಬ್ರಹ್ಮಚಾರಿಆಜ್ ಕಲ್ ತೆರೆ ಮೆರೆ ಪ್ಯಾರ್ ಕೆ ಹಾಗೂ ದಿಲ್ ಅಪನಾ ಔರ್ ಪ್ರೀತ್ ಪರಾಯೀಅಜೀಬ್ ದಾಸ್ತಾಂ ಹೈ ಯೆ ಹಾಡುಗಳೂ ಇದೇ ರೀತಿ ಸಿದ್ಧ ಮಾದರಿಗೆ  ಹೊರತಾದವುಗಳು.


 

10. Pradeep Kumar - Jo Baat Tujh Me Hai
ಪ್ರದೀಪ್ ಕುಮಾರ್ - ಜೊ ಬಾತ್ ತುಝ್ ಮೆ ಹೈ

ಜೊ ವಾದಾ ಕಿಯಾ ವೊ, ಪಾಂವ್ ಛೂ ಲೇನೆ ದೊ ಹಾಗೂ ಈ ಹಾಡು  ತಾಜ್ ಮಹಲ್ ಚಿತ್ರದ 3 ಆಧಾರ ಸ್ತಂಭಗಳು.  ಸಾರಂಗಿಯ ಮಧುರ ದನಿಯೊಂದಿಗೆ ಆರಂಭವಾಗುವ ಈ ಹಾಡಿನ  ಒಂದು ಚರಣ ಮಧ್ಯ ಸ್ಥಾಯಿಯಲ್ಲೂ ಇನ್ನೊಂದು ಮಂದ್ರ ಸ್ಥಾಯಿಯಲ್ಲೂ ಇದ್ದು ಇದರ ಸಂಯೋಜನೆ ಮಾಧುರ್ಯವೇ ಮೈವೆತ್ತಂತಿದೆ. ಸ್ವತಃ ಹೃದಯ ಬೇನೆಯಿಂದ ನರಳುತ್ತಿದ್ದ ರೋಶನ್ ಕೇಳುಗರ ಹೃದಯಗಳಿಗೆ ತಂಪನ್ನೆರೆಯುತ್ತಿದ್ದರು.  ಈ ಚಿತ್ರದ ಹಾಡುಗಳು  ಧ್ವನಿಮುದ್ರಿತವಾದೊಡನೆ ಮದರಾಸಿನಲ್ಲಿ ರಾಜಕುಮಾರ್ ಚಿತ್ರದ ಶೂಟಿಂಗಲ್ಲಿದ್ದ ಶಮ್ಮಿ ಕಪೂರ್ ಅವುಗಳ  ಟೇಪ್ ಗಳನ್ನು ತರಿಸಿಕೊಂಡು ರಾತ್ರಿಯಿಡೀ ಆಲಿಸುತ್ತಾ ಕಣ್ಣೀರು ಸುರಿಸಿದ್ದರಂತೆ . 



    

 ಈ ನಟರಿಗೆ ರಫಿ ಹಾಡಿರುವ  ಎಷ್ಟೋ ಮರೆಯಲಾಗದ ಹಾಡುಗಳ ಪೈಕಿ ಇಲ್ಲಿರುವವು ಪ್ರಾತಿನಿಧಿಕ ಮಾತ್ರ.    ಗುರು ದತ್ತ್, ಭರತ್ ಭೂಷಣ್ , ಜಾನಿವಾಕರ್, ಮಹಮೂದ್ ಹಾಗೂ ನಂತರದ ಪೀಳಿಗೆಯ ಶಶಿ ಕಪೂರ್,  ಮನೋಜ್ ಕುಮಾರ್, ಫಿರೋಜ್ ಖಾನ್,  ಸಂಜಯ್, ಜಿತೇಂದ್ರ, ರಾಜೇಶ್  ಖನ್ನಾ , ಅಮಿತಾಭ್ ಬಚ್ಚನ್ ಮುಂತಾದ ಇನ್ನೂ ಎಷ್ಟೋ ನಟರಿಗಾಗಿ  ರಫಿ ಹಾಡಿರುವ ಹಾಡುಗಳನ್ನು ಇನ್ನೊಮ್ಮೆ ಯಾವತ್ತಾದರೂ ನೋಡೋಣ.


Tuesday, 24 July 2012

ಎಣ್ಣೆ ಸಮುದ್ರವೂ ಬತ್ತಿ ಪರ್ವತವೂ



ಆಗಿನ್ನೂ ವಿದ್ಯುತ್ ಎಂದರೆ ಏನೆಂದು ಗೊತ್ತಿರದಿದ್ದ ಚಿಮಿಣಿ ದೀಪಗಳ ಕಾಲ.  ಸಾಯಂಕಾಲವಾದೊಡನೆ ದೀಪಗಳ ಗಾಜನ್ನೊರಸಿ, ಅವುಗಳ ಹೊಟ್ಟೆ ಖಾಲಿಯಾಗಿದ್ದರೆ ತುಂಬಿಸಿ ಜ್ಯೋತಿ ಬೆಳಗಿಸಿ ಆದೊಡನೆ  ಕೂಡುಕುಟುಂಬಗಳ ಮನೆ ಹಿರಿಯರು  ಮಕ್ಕಳನ್ನೆಲ್ಲ ಕೂರಿಸಿಕೊಂಡು ಬಾಯಿ ಪಾಠ ಹೇಳಿಕೊಡುತ್ತಿದ್ದರು.  ಶುಭಂ ಕರೋತು ಕಲ್ಯಾಣಂ ದಿಂದ ಆರಂಭವಾದ ಇದು ಆದಿತ್ಯವಾರ ಸೋಮವಾರ, ಪಾಡ್ಯ ಬಿದಿಗೆ, ಚೈತ್ರ ವೈಶಾಖ, ವಸಂತ ಋತು ಗ್ರೀಷ್ಮ ಋತು,  ಮೇಷ  ವೃಷಭ,  ಅಶ್ವಿನಿ ಭರಣಿ, ಬವ - ಸಿಂಹ, ಬಾಲವ - ಹುಲಿ,  ಪ್ರಭವ ವಿಭವ ಇತ್ಯಾದಿ ಕಾಲ ಗಣನೆಯ ಎಲ್ಲ ಕೋಷ್ಟಕಗಳನ್ನು ಒಳಗೊಂಡಿರುತ್ತಿತ್ತು.  ಐಚ್ಛಿಕವಾಗಿ ರಾಮರಕ್ಷಾ ಸ್ತೋತ್ರವನ್ನು ಹೇಳುವ ಕ್ರಮವೂ ಇತ್ತು.  ಇಷ್ಟೆಲ್ಲ ಮುಗಿಯುವ ಹೊತ್ತಿಗೆ ಸುಮಾರು ಏಳು ಗಂಟೆ ಆಗುತ್ತಿತ್ತು.  ಏಳೂವರೆ ಹೊತ್ತಿಗೆ ಮಕ್ಕಳು ಹಿರಿಯರು ಎಲ್ಲರ ಊಟವೂ ಆಗಿ ಎಂಟು ಎಂಟುವರೆಯೊಳಗೆ  ಮಲಗುವ ತಯಾರಿಯೂ ಆಗುತ್ತಿತ್ತು.  ಒಳ್ಳೊಳ್ಳೆ ಕತೆಗಳನ್ನು ಹೇಳುವ   ಹಿರಿಯರ ಬಳಿ ಮಲಗಲು ಮಕ್ಕಳಲ್ಲಿ ಪೈಪೋಟಿ.  ಮಲಗಲು ಹೋಗುವಾಗ ಚಿಕ್ಕದೊಂದು ಬೆಡ್ ಲ್ಯಾಂಪ್ ಒಯ್ಯುವುದೂ ವಾಡಿಕೆ. ರಾತ್ರಿಯ ಗಾಢಾಂಧಕಾರದಲ್ಲಿ ಭಯವಾಗದಂತೆ 

ಕಫಲ್ಲಸ್ಯ* ತ್ರಯೊ ಭಾರ್ಯಾ
ದಾಹಿನೀ ಮೋಹಿನೀ ಸತಿ
ತಾಸಾಂ ಸ್ಮರಣ ಮಾತ್ರೇಣ
ಚೋರೋ ಗಚ್ಛತಿ ನಿಷ್ಫಲಃ
ಅಗಸ್ತಿರ್ ಮಾಧವಂಚೈವ
ಮುಚುಕುಂದೋ ಮಹಾಮುನಿಂ
ವೃಕೋದರಂಚ ರಾಮಂಚ
ಷಡೇತೇ ಶಯನೇ ಸ್ಮರೇತ್
ಹರಿಂ ಹರಂ ಹನೂಮಂತಂ
ಹರಿಶ್ಚಂದ್ರಮ್ ಹಲಾಯುಧಂ
ಪಂಚೈತಾನಿ ಸ್ಮರೇನ್ನಿತ್ಯಂ
ಹಾನಿ ಶಸ್ತ್ರಃ ನ ಬಾಧ್ಯತೆ
ಜಲೇ ರಕ್ಷತು ವಾರಾಹಃ
ಸ್ಥಲೇ ರಕ್ಷತು ವಾಮನಃ
ಅಟವ್ಯಾಂ ನಾರಸಿಂಹಸ್ಚ
ಸರ್ವತಃ ಪಾತು ಕೇಶವಃ
ಕಫಲ್ಲ ಕಫಲ್ಲ  ಕಫಲ್ಲ

ಅನಂತ ಪದ್ಮನಾಭ ಅನಂತ ಪದ್ಮನಾಭ ಅನಂತ ಪದ್ಮನಾಭ
ಆಸ್ತಿಕ ಆಸ್ತಿಕ ಆಸ್ತಿಕ
ಕಾಳ ರಾತ್ರಿ ಮಹಾಮ್ಮಾಯೀ
ಕ್ಷೇಮ ರಾತ್ರಿ ಸುಖೀ ಪಹ


ಎಂಬ ಭಯಹರ ಸ್ತೋತ್ರವನ್ನು ಹೇಳಿ ದೀಪ ಆರಿಸಿ ಮಲಗುವುದು ಬಹುತೇಕ ಎಲ್ಲ ಕಡೆ ಇದ್ದ ವಾಡಿಕೆ. 

ನಮ್ಮ ಮನೆಯಲ್ಲಿ ಇದರ ಮುಂದುವರಿದ ಭಾಗವಾಗಿ

 






ದೀಪ ದೀಪಾಂತರಕ್ಕೆ ಹೋಗಿ      
ಎಣ್ಣೆ ಸಮುದ್ರಕ್ಕೆ ಹೋಗಿ   
ಬತ್ತಿ ಪರ್ವತಕ್ಕೆ ಹೋಗಿ
ಅನ್ಪತ್ಯವಾದ್ರೆ ಇವತ್ತು ಬನ್ನಿ
ಇಲ್ಲವಾದ್ರೆ ನಾಳೆ ಸಂಜೆ ಬನ್ನಿ
ಆಯ್ತೋ ... ಆಯ್ತು...
ಉಫ್ ....


ಎಂಬ ಸ್ವಾರಸ್ಯಕರ ಪ್ರಕ್ರಿಯೆಯೊಡನೆ ಸೂಕ್ತ ಮರ್ಯಾದೆಯೊಂದಿಗೆ ದೀಪ ಆರಿಸುವ ವಿಶೇಷ ಪದ್ಧತಿಯೊಂದಿತ್ತು.  ಮುಂದೆ ಸಸೇಮಿರಾ ಕತೆ, ನೇತಾಡುವ ರುಂಡಗಳ  ಕತೆ, ರಾಜ ಮತ್ತು ಟೊಪ್ಪಿಯ ಕತೆ,  ಸತ್ಯೆನಲಾ ಪಾಕಿ ಕತೆ,  ಇಲಿ ದಂಪತಿಗಳ ಕತೆ ಮುಂತಾದವುಗಳನ್ನು ಕೇಳುತ್ತಾ ನಿದ್ದೆಗೆ ಜಾರಿದುದೇ ತಿಳಿಯುತ್ತಿರಲಿಲ್ಲ.

 *ಕಫಲ್ಲ ಎಂಬುವವನು ಆದಿ ಚೋರನಂತೆ.  ಈತನ ಹೆಸರನ್ನು ಸ್ಮರಿಸಿದವರಿಗೆ ಚೋರ ಭಯವಿಲ್ಲವೆಂದು ಬ್ರಹ್ಮ ವರಕೊಟ್ಟಿದ್ದನೆಂದು ನಂಬಿಕೆ ಇದೆ. ಕೆಲವು ಕಡೆ ಬಾಗಿಲಿಗೆ ಬೀಗ ಹಾಕಿ ಹೊರ ಹೋಗುವಾಗ
ತಿಸ್ತ್ರೋ ಭಾರ್ಯಾ ಕಫಲ್ಲಸ್ಯ, ದಾಹಿನೀ ಮೋಹನೀ ಸತೀ।
ತಾಸಾಂ ಸ್ಮರಣ-ಮಾತ್ರೇಣ, ಚೌರೋ ವಿಶಾತಿ ನೋ ಗೃಹಮ್।।

ಎಂದು ಹೇಳುವ ಕ್ರಮವೂ ಇದೆಯಂತೆ.

Tuesday, 15 May 2012

ಮಧುರ ಕಂಠದ ಮಹೇಂದ್ರ ಕಪೂರ್

  
 
ಅಖಿಲಭಾರತ ಗಾಯನ ಸ್ಪರ್ಧೆಯೊಂದರಲ್ಲಿ ಭಾಗವಹಿಸುವ ಮೂಲಕ ಹಿನ್ನಲೆ ಗಾಯನ ಕ್ಷೇತ್ರಕ್ಕೆ ಕಾಲಿಟ್ಟವರು ಮಹೇಂದ್ರ ಕಪೂರ್. ಆ ಸ್ಪರ್ಧೆಗೆ ತೀರ್ಪುಗಾರರಾಗಿದ್ದವರು ಖ್ಯಾತ ಸಂಗೀತ ನಿರ್ದೇಶಕರಾದ ನೌಶಾದ್ ಹಾಗೂ ಸಿ. ರಾಮಚಂದ್ರ. ಸ್ಪರ್ಧೆಯಲ್ಲಿ ವಿಜೇತರಾದ ಗಾಯಕನಿಗೆ ತಮ್ಮ ಮುಂದಿನ ಚಿತ್ರದಲ್ಲಿ ಅವಕಾಶ ಕೊಡುವುದಾಗಿ ಇಬ್ಬರೂ ನಿಶ್ಚೈಸಿದ್ದರಂತೆ. ಅಂತೆಯೇ 1958ರಲ್ಲಿ ನೌಶಾದ್ ಅವರು ಸೊಹನೀ ಮಹಿವಾಲ್' ಚಿತ್ರದಲ್ಲಿ ಇವರಿಂದ ಹಾಡಿಸಿದ ಚಾಂದ್ ಛುಪಾ ಔರ್ ತಾರೆ ಡೂಬೆ ಮಹೇಂದ್ರ ಕಪೂರ್ ಅವರ ಮೊದಲ ಹಾಡಾಯಿತು.

   ಆದರೆ ಚಲನಚಿತ್ರ ಸಂಗೀತ ಪ್ರೇಮಿಗಳ ನಾಲಿಗೆಯಲ್ಲಿ ಕುಣಿದಾಡಿದ್ದು ಅದೇ ವರ್ಷ ಸಿ. ರಾಮಚಂದ್ರ ಅವರು ನವರಂಗ್ ಚಿತ್ರಕ್ಕಾಗಿ ಇವರಿಂದ ಹಾಡಿಸಿದ ಆಧಾ ಹೈ ಚಂದ್ರಮಾ ರಾತ್ ಆಧೀ. ಇದರಿಂದ ಪ್ರಭಾವಿತರಾದ ಬಿ.ಆರ್.ಚೋಪ್ಡಾ ಅವರು ಎನ್ ದತ್ತಾ ಅವರ ಸಂಗೀತದ ಧೂಲ್ ಕಾ ಫೂಲ್ ಚಿತ್ರದಲ್ಲಿ ಇವರಿಗೆ ನೀಡಿದ ಅವಕಾಶ ತೆರೆ ಪ್ಯಾರ್ ಕಾ ಆಸ್‌ರಾ ಚಾಹತಾ ಹೂಂ ದಂತಹ ಸರ್ವಕಾಲಿಕ ಹಿಟ್ ಹಾಡಿನ ಜನನಕ್ಕೆ ಕಾರಣವಾಗುವುದರೊಂದಿಗೆ ಬಿ.ಆರ್.ಫಿಲ್ಮ್ಸ್ ಹಾಗೂ ಮಹೇಂದ್ರ ಕಪೂರ್ ಅವರ ಮಹಾಭಾರತ್ ಟಿ.ವಿ. ಧಾರಾವಾಹಿ  ವರೆಗಿನ ದೀರ್ಘಕಾಲೀನ ಸಂಬಂಧಕ್ಕೂ ನಾಂದಿಯಾಯಿತು.

   ಮುಂದೆ ಈ ಬ್ಯಾನರ್ ನಲ್ಲಿ ರವಿ ಅವರ ಸಂಗೀತದೊಂದಿಗೆ ಬಂದ ಗುಮ್‌ರಾಹ್  ಚಿತ್ರದ ಚಲೊಎಕ್ ಬಾರ್ ಫಿರ್ ಸೆ, ಇನ್ ಹವಾವೊಂ ಮೆ, ಯೆ ಹವಾ ಯೆ ಹವಾ, ಆಪ್ ಆಯೇ ತೊ ಖಯಾಲೆಂ, ಹಮ್‌ರಾಜ್ ಚಿತ್ರದ ನೀಲೆ ಗಗನ್ ಕೆ ತಲೆ, ತುಮ್ ಅಗರ್ ಸಾಥ್ ದೆನೆ ಕಾ, ಕಿಸೀ ಪತ್ಥರ್ ಕೀ ಮೂರತ್ ಸೆ, ನ ಮುಂಹ್ ಛುಪಾಕೆ ಜಿಯೊ ಹಾಡುಗಳಿಂದ ಮಹೇಂದ್ರ ಕಪೂರ್ ಚಿತ್ರ ಸಂಗೀತ ಪ್ರೇಮಿಗಳ ಹೃದಯದಲ್ಲಿ ಶಾಶ್ವತ ಸ್ಥಾನ ಪಡೆದರು.

   ನ ಮುಂಹ್ ಛುಪಾಕೆ ಜಿಯೊ, ನ ಸರ್ ಝುಕಾಕೆ ಜಿಯೊ ಹಾಡಿನಲ್ಲಿ ಅಂಧೇರಿ ರಾತ್ ಮೆ .. ಎಂಬ ಒಂದೇ ಉಸಿರಿನಲ್ಲಿ ದೀರ್ಘವಾಗಿ ಹಾಡುವ ಸಾಲೊಂದಿದೆ. ಈ ಹಾಡಿಗೆ ನಟಿಸಿದ ಸುನೀಲ್ ದತ್ ಅವರಿಗೆ ಇಷ್ಟೊಂದು ಹೊತ್ತು ಬಾಯನ್ನು ತೆರೆದು ಹಿಡಿಯುವುದೇ ಕಷ್ಟ ಅನ್ನಿಸಿತಂತೆ! ಈ ಸಂಸ್ಥೆಯ ನಿರ್ಮಾಣದ ವಕ್ತ್ ಚಿತ್ರದ ದಿನ್ ಹೈ ಬಹಾರ್ ಕೆ, ಆದ್ಮೀ ಔರ್ ಇನ್‌ಸಾನ್ ಚಿತ್ರದ ದಿಲ್ ಕರ್‌ತಾ ಹಾಗೂ ಜಿಂದಗೀ ಇತ್ತೇಫಾಕ್ ಹೈ , ಧುಂದ್  ಚಿತ್ರದ ಸಂಸಾರ್ ಕೀ ಹರ್ ಶೈಕಾ ಮುಂತಾದವೂ ಮರೆಯದ ಹಾಡುಗಳಾದವು. ರವಿ ಅವರು ಇತರ ಬ್ಯಾನರ್ ಗಳ ಚಿತ್ರಗಳಾದ ಭರೋಸಾ ದಲ್ಲಿ ಆಜ್ ಕೀ ಮುಲಾಕಾತ್ ಬಸ್ ಇತ್‌ನೀ,  ಅನ್‌ಮೋಲ್ ಮೋತಿ ಯಲ್ಲಿ  ಏ ಜಾನೆ ಚಮನ್ ತೆರಾ ಗೋರಾ ಬದನ್ ಮುಂತಾದ ಸುಮಧುರ ಹಾಡುಗಳನ್ನು ಇವರಿಂದ ಹಾಡಿಸಿದರು. ಬಿ. ಆರ್. ಫಿಲ್ಮ್ಸ್ ಬ್ಯಾನರ್ ನಲ್ಲಿ  ರವೀಂದ್ರ ಜೈನ್ ಸಂಗೀತದೊಂದಿಗೆ ಬಂದ ಪತಿ ಪತ್ನಿ ಔರ್ ವೊ ಚಿತ್ರದ  ಥಂಡೆ ಥಂಡೆ ಪಾನೀ ಸೆ ಹಾಡೂ ಬಹು ಜನಪ್ರಿಯ.

   ಮನೋಜ್ ಕುಮಾರ್ ಅವರೊಂದಿಗೆ ಮಹೇಂದ್ರ ಕಪೂರ್ ಅವರ ನಂಟು ಶಹೀದ್ ಚಿತ್ರದ ಮೆರಾ ರಂಗ್ ದೇ ಬಸಂತೀ ಚೋಲಾ ಹಾಡಿನೊಂದಿಗೆ ಆರಂಭವಾದರೂ ಬಲಗೊಂಡದ್ದು ಉಪ್‌ಕಾರ್ ಚಿತ್ರದೊಂದಿಗೆ. ಗುಲ್‌ಶನ್ ಬಾವ್ರಾ ರಚಿಸಿ ಕಲ್ಯಾಣ್‌ಜೀ ಆನಂದ್‌ಜೀ ಸಂಗೀತ ನೀಡಿದ ಮೆರೆ ದೇಶ್ ಕೀ ಧರ್‌ತೀ ಹಾಡು ದೇಶ ಭಕ್ತಿಗೆ ಪರ್ಯಾಯವೇ ಆಯಿತು. ಇದನ್ನು ಎರಡನೇ ರಾಷ್ಟ್ರಗೀತೆ ಎನ್ನುವವರೂ ಇದ್ದಾರೆ! ಪೂರಬ್ ಔರ್ ಪಶ್ಚಿಮ್ ನ ಹೈ ಪ್ರೀತ್ ಜಹಾಂ ಕೀ ರೀತ್ ಸದಾ ಹಾಡೂ ಇದೇ ಸಾಲಿಗೆ ಸೇರಿತು. ಮುಂದೆ ರೋಟೀ ಕಪಡಾ ಔರ್ ಮಕಾನ್ ನಲ್ಲಿ ಕಲ್ಯಾಣ್‌ಜೀ ಆನಂದ್‌ಜೀ ಅವರ ಸ್ಥಾನಕ್ಕೆ ಲಕ್ಷ್ಮೀಕಾಂತ್ ಪ್ಯಾರೇಲಾಲ್ ಅವರು ಬಂದು ಮುಕೇಶ್ ಅವರು ಮುಖ್ಯ ಗಾಯಕರಾದರೂ ಮಹೇಂದ್ರ ಕಪೂರ್ ಅವರಿಗಾಗಿ ಔರ್ ನಹೀಂ ಬಸ್ ಔರ್ ನಹೀಂ ಹಾಡು ಇತ್ತು.  ಆದರೆ ಲಕ್ಷ್ಮಿ ಪ್ಯಾರೆ ಸಂಗೀತದಲ್ಲಿ ಇವರ ಶ್ರೇಷ್ಠ ಗೀತೆ ಪ್ಯಾರ್ ಕಿಯೆ ಜಾ ಚಿತ್ರದ ಫೂಲ್ ಬನ್ ಜಾವೂಂಗಾ.

   ಕಲ್ಯಾಣ್‌ಜೀ ಆನಂದ್‌ಜೀ ಅವರು ಇತರ ಚಿತ್ರಗಳಾದ ಪರಿವಾರ್ ನಲ್ಲಿ ಹಮ್‌ನೆ ಜೊ ದೇಖೆ ಸಪ್‌ನೆ, ಗೀತ್ ನಲ್ಲಿ ಜಿಸ್‌ಕೆ ಸಪನೆ ಹಮೆ ರೋಜ್ ಆತೇ ರಹೆ , ಯಾದ್‌ಗಾರ್ ನಲ್ಲಿ ಎಕ್ ತಾರಾ ಬೋಲೆ ಗೀತೆಗಳನ್ನು ಹಾಡಿಸಿದರೂ ವಿಶೇಷವಾಗಿ ಉಲ್ಲೇಖಿಸಬೇಕಾದದ್ದು ದಿಲೀಪ್‌ಕುಮಾರ್ ನಟನೆಯ ಗೋಪಿ ಚಿತ್ರ. ಇದರಲ್ಲಿ ಸುಖ್ ಕೆ ಸಬ್ ಸಾಥೀ ಮಾತ್ರ ರಫಿ ಧ್ವನಿಯಲ್ಲಿದ್ದು ಜಂಟಲ್ ಮೆನ್ ಜಂಟಲ್ ಮೆನ್, ರಾಮಚಂದ್ರ್ ಕಹ ಗಯೇ ಸಿಯಾ ಸೆ ಹಾಗೂ ಏಕ್ ಪಡೋಸನ್ ಪೀಛೇ ಪಡ್‌ಗಯಿ ಹಾಡುಗಳು ಮಹೇಂದ್ರ ಕಪೂರ್ ಪಾಲಾಗಿ ಜಯಭೇರಿ ಬಾರಿಸಿದವು.

   ಯಾವುದೋ ರೆಕಾರ್ಡಿಂಗ್‌ಗೆ ತಡವಾಗಿ ಬಂದ ಕಾರಣಕ್ಕಾಗಿ ತನ್ನ ಅಚ್ಚುಮೆಚ್ಚಿನ ಗಾಯಕ ರಫಿಯೊಡನೆ ವಿರಸ ಬೆಳೆಸಿಕೊಂಡ ಒ.ಪಿ.ನಯ್ಯರ್ ಅವರು ಮುಂದೆ ಬಹಳ ವರ್ಷಗಳ ಕಾಲ ಮಹೇಂದ್ರಕಪೂರ್ ಅವರನ್ನು ಬಳಸಿಕೊಂಡರು. ಈ ಅವಧಿಯಲ್ಲಿ ಯೆ ರಾತ್ ಫಿರ್ ನ ಆಯೇಗೀ ಚಿತ್ರದ ಮೇರಾ ಪ್ಯಾರ್ ವೊ ಹೈ ಕೆ, ಬಹಾರೆ ಫಿರ್ ಭೀ ಆಯೇಂಗೀ ಚಿತ್ರದ ಬದಲ್ ಜಾಯೆ ಅಗರ್ ಮಾಲೀ, ಕಿಸ್ಮತ್ ಚಿತ್ರದ ಲಾಖೋಂ ಹೈ ಯಹಾಂ ದಿಲ್‌ವಾಲೆ ಹಾಗೂ ಆಂಖೊಂ ಮೆ ಕಯಾಮತ್ ಕೆ ಕಾಜಲ್', ಸಂಬಂಧ್ ಚಿತ್ರದ ಜೊ ದಿಯಾ ಥಾ ತುಮ್ ನೆ ಎಕ್ ದಿನ್ ಹಾಗೂ ಅಂಧೇರೆ ಮೆ ಜೊ ಬೈಠೇ ಹೈಂ,  ಕಹೀಂ ದಿನ್ ಕಹೀಂ ರಾತ್' ನ ತುಮ್ಹಾರಾ ಚಾಹನೆ ವಾಲಾ ದಂತಹ ಹಾಡುಗಳು ಜನ್ಮತಾಳಿದವು.

   ಶಂಕರ್ ಜೈಕಿಶನ್ ಆವರ ಸಂಗೀತ ನಿರ್ದೇಶನದ ಹರಿಯಾಲೀ ಔರ್ ರಾಸ್ತಾ ದಲ್ಲಿ ಖೋ ಗಯಾ ಹೈ ಮೆರಾ ಪ್ಯಾರ್, ಜಿಸ್ ದೇಶ್ ಮೆ ಗಂಗಾ ಬಹತೀ ಹೈ ಯಲ್ಲಿ ಹಮ್ ಭೀ ಹೈಂ ತುಮ್ ಭೀ ಹೋ ಮುಂತಾದ ಹಾಡುಗಳಲ್ಲಿ ಮಹೇಂದ್ರ ಕಪೂರ್ ಧ್ವನಿ ಕೇಳಿಸಿದರೂ ಅವರಿಗೆ ದೊರಕಿದ ಬಂಪರ್ ಅವಕಾಶವೆಂದರೆ ಸಂಗಂ ಚಿತ್ರದ ಮುಕೇಶ್ ಲತಾ ಅವರೊಂದಿಗಿನ ಹರ್ ದಿಲ್ ಜೊ ಪ್ಯಾರ್ ಕರೇಗಾ ಹಾಡು.

   ಮೊತ್ತ ಮೊದಲ ಅವಕಾಶ ನೀಡಿದ ನೌಶಾದ್ ಅವರು ಆ ಮೇಲೆ ಮಹೇಂದ್ರ ಕಪೂರ್ ಅವರನ್ನು ಬಳಸಿಕೊಂಡದ್ದು ಕಡಿಮೆಯೇ. ಆದರೆ ಇವರ ನಿರ್ದೇಶನದಲ್ಲಿ ತನ್ನ ಆರಾಧ್ಯ ದೈವ ಹಾಗೂ ಗುರು ರಫಿಯವರೊಡನೆ ಆದ್ಮೀ ಚಿತ್ರಕ್ಕಾಗಿ ಕೈಸೀ ಹಸೀನ್ ಆಜ್ ಎಂಬ ಒಂದು ಯುಗಳ ಗೀತೆಯನ್ನು ಹಾಡುವ ಅವಕಾಶ ಮಹೇಂದ್ರ ಕಪೂರ್ ಅವರಿಗೆ ದೊರಕಿತು. ಆದರೆ ಇದೇ ಹಾಡನ್ನು ಧ್ವನಿಮುದ್ರಿಕೆಗಾಗಿ ಹಾಡಿದ್ದು ರಫಿ ಹಾಗೂ ತಲತ್ ಮಹಮೂದ್!

    ಮಹೇಂದ್ರ ಕಪೂರ್ ಅವರು ಮನ್ನಾಡೆ ಅವರೊಂದಿಗೆ ದಾದಿಮಾ ಚಿತ್ರಕ್ಕಾಗಿ ಹಾಡಿದ ಉಸ್ ಕೊ ನಹಿಂ ದೇಖಾ ಹಮ್ ನೆ ಕಭೀ, ಕಿಶೋರ್ ಕುಮಾರ್ ಅವರೊಂದಿಗೆ ವಿಕ್ಟೋರಿಯ ನಂಬರ್ 203 ನಲ್ಲಿ ಹಾಡಿದ ದೊ ಬೆಚಾರೇ ಬಿನಾ ಸಹಾರೆ   ಹಾಡುಗಳೂ ಮರೆಯುವಂಥವುಗಳಲ್ಲ. ಫರಿಯಾದ್ ಚಿತ್ರದಲ್ಲಿ ಸುಮನ್ ಕಲ್ಯಾಣಪುರ್ ಸಂಗಡ ಹಾಡಿದ ಸ್ನೇಹಲ್ ಭಾಟ್ಕರ್ ಸಂಗೀತದ ಪಪೀಹಾ ದೆಖೊ ದೇಖ್ ರಹಾ ಥಾ ಇನ್ನೊಂದು ವಿಶಿಷ್ಟ ಶೈಲಿಯ ಹಾಡು.

   ಇತರ ಗಾಯಕರಿಗೆ ಹೋಲಿಸಿದರೆ ಇವರ ಹಾಡುಗಳ ಸಂಖ್ಯೆ ಕಮ್ಮಿ ಇರಬಹುದು. ಆದರೆ ರಫಿ, ಮನ್ನಾಡೆ, ಮುಕೇಶ್, ತಲತ್, ಹೇಮಂತ್ ಕುಮಾರ್, ಕಿಶೋರ್ ಕುಮಾರ್ ಅವರಂತಹ ದಿಗ್ಗಜರು ಹಿನ್ನೆಲೆ ಗಾಯನ ಕ್ಷೇತ್ರವನ್ನಾಳುತ್ತಿದ್ದ ಸಮಯದಲ್ಲಿ ತನ್ನದೇ ಒಂದು ಸ್ಥಾನವನ್ನು ನಿರ್ಮಿಸಿಕೊಂಡು ಬಹಳಷ್ಟು ವರ್ಷಗಳ ಕಾಲ ಮಾಧುರ್ಯವನ್ನು ಉಣಬಡಿಸಿದ ಮಹೇಂದ್ರ ಕಪೂರ್ ಅವರ ಸಾಧನೆಯೇನೂ ಕಮ್ಮಿಯಲ್ಲ. ಈ ಸಾಧನೆಗೆ ಪದ್ಮಶ್ರೀ, ರಾಷ್ಟ್ರೀಯ ಪುರಸ್ಕಾರ , ಫಿಲಂಫೇರ್ ಅವಾರ್ಡ್ ಹಾಗೂ ಎಲ್ಲಕ್ಕಿಂತ ಹೆಚ್ಚಾಗಿ ಸಂಗೀತಪ್ರೇಮಿಗಳ ಮೆಚ್ಚುಗೆಯ ಮನ್ನಣೆ ಇವರಿಗೆ ದೊರಕಿದೆ.

(ಇದು ಕೆಲ ವರ್ಷಗಳ ಹಿಂದೆ ಮಹೇಂದ್ರ ಕಪೂರ್ ಅವರು ನಿಧನ ಹೊಂದಿದಾಗ ದಟ್ಸ್ ಕನ್ನಡ ದಲ್ಲಿ ಪ್ರಕಟವಾಗಿದ್ದ ಲೇಖನ)

Friday, 4 May 2012

ಇಲ್ಲಿದೆ ಎಲ್ಲೂ ಇಲ್ಲದ ಆ ಹಾಡು


     ಕೆಲ ವರ್ಷಗಳ ಹಿಂದೆ ಉದಯವಾಣಿಯ ಹಾಡು ಹಾದಿ ಹೆಜ್ಜೆ ಗುರುತು ಅಂಕಣದಲ್ಲಿ  ಜಗನ್ಮೋಹಿನಿ ಚಿತ್ರದ  ಎಂದೋ ಎಂದೋ ಹಾಡಿನ ಬಗ್ಗೆ ನನ್ನದೂ ಒಂದು ಕಿರು ಲೇಖನ ಪ್ರಕಟವಾಗಿತ್ತು.  ಅದು ಹೀಗಿತ್ತು.
-----
ಇಲ್ಲದ ಹಾಡಿಗೆ ತುಡಿತ
     ಎಂದೋ  ಎಂದೋ ಎಂದೋ,  ಎಂದೋ ನಿನ್ನ ದರುಶನ - 50ರ ದಶಕದ ಸೂಪರ್ ಹಿಟ್ ಚಿತ್ರ  ಜಗನ್ಮೋಹಿನಿಯ ಈ ಹಾಡು ನನ್ನ ಕಿವಿಗೆ ಬಿದ್ದ ಮೊದಲ ಸಿನಿಮಾ ಗೀತೆ.  ನನ್ನ ಅಕ್ಕ ಈ ಹಾಡನ್ನು ಹಾಡುತ್ತಾ ನನ್ನನ್ನು ತೊಟ್ಟಿಲಲ್ಲಿ ಕೂರಿಸಿ ತೂಗುತ್ತಿದ್ದಳಂತೆ.  ಮತ್ತೆ ಮತ್ತೆ ಈ ಹಾಡು ಹಾಡುವಂತೆ ನಾನು ಹಠ ಮಾಡುತ್ತಿದ್ದುದೂ ಇತ್ತಂತೆ.  ನನಗೆ ಅರಿವು ಮೂಡುವುದಕ್ಕೂ ಮುನ್ನ ಎಂದೋ ಒಮ್ಮೆ ಮನೆಯವರೊಂದಿಗೆ  ಬೆಳ್ತಂಗಡಿಯ ಟೂರಿಂಗ್ ಟಾಕೀಸಿನಲ್ಲಿ  ಆ ಚಿತ್ರವನ್ನು ನೋಡಿದ್ದು,  ಅದರೊಳಗಿನ ಜನರೆಲ್ಲ ಬೂದಿಯ ಮೇಲೇಕೆ ಓಡಾಡುತ್ತಿದ್ದಾರೆಂದು ನಾನು ಅಚ್ಚರಿಪಟ್ಟದ್ದು - ಕೆಲ ಅಸ್ಪಷ್ಟ ನೆನಪು  ನನಗಿನ್ನೂ ಇದೆ.  ಕಪ್ಪು ಬಿಳುಪಿನ ಆ ಚಿತ್ರದ ನೆಲ, ಬೆಟ್ಟ ಗುಡ್ದಗಳು  ನನಗೆ ಬೂದಿ ರಾಶಿಯಂತೆ ಕಂಡಿರಬೇಕು.  ನಮ್ಮಕ್ಕ ಈಗಲೂ ಆ ಹಾಡನ್ನು ಹಾಡಬಲ್ಲರು. ಆದರೆ ರೇಡಿಯೋದಲ್ಲಾಗಲೀ, ಧ್ವನಿಮುದ್ರಿಕೆಯಲ್ಲಾಗಲೀ ಅದನ್ನು ನಾನು ಇದು ವರೆಗೂ ಕೇಳಿದ್ದಿಲ್ಲ.  ಬಹುಶ: ಇನ್ನು ಕೇಳುವ ಸಾಧ್ಯತೆಯೂ ಇಲ್ಲ.  ಚಿತ್ರದ ಮೂಲ ಪ್ರತಿಯೇ ನಾಶವಾಗಿ ಹೋಗಿದೆಯೆಂದು ಕೇಳಿದ್ದೇನೆ.  ಗ್ರಾಮೋಫೋನ್ ಇಟ್ಟುಕೊಂಡಿದ್ದವರ ಮನೆಯ ಅಟ್ಟದಲ್ಲೋ, ಹಳೆ ಕಾಲದ ಮೈಕ್ ಸೆಟ್ಟಿನವರ ಗೋದಾಮಿನಲ್ಲೋ  ಈ ಹಾಡಿನ ಸವೆದು ಹೋದ ಗಾನ ತಟ್ಟೆ ಇರಲೂಬಹುದು.  ಆದರೆ ಆಗಾಗ ರೇಡಿಯೊ, ಟಿ.ವಿ.ಗಳಲ್ಲಿ ಪ್ರಸಾರವಾಗುವ ಇದರ ಮೂಲವಾದ ಮಹಲ್ ಚಿತ್ರದ ಆಯೇಗಾ ಆಯೇಗಾ ಆಯೇಗಾ, ಆಯೇಗಾ ಆನೇವಾಲಾ ಹಾಡನ್ನು ಕೇಳಿದಾಗಲೆಲ್ಲ ಆ ದಿನಗಳ ಮಸುಕಾದ ಚಿತ್ರಗಳು ಕಣ್ಮುಂದೆ ಸುಳಿಯುತ್ತವೆ.  ಮುಂದಿನ ದಿನಗಳಲ್ಲಿ ಅದೆಷ್ಟೋ ಹಾಡುಗಳು ಮನಸ್ಸನ್ನು ಪ್ರವೇಶಿಸಿವೆ, ನೆಲೆ ನಿಂತಿವೆ, ಕ್ಯಾಸೆಟ್, ಸಿ.ಡಿ.ಗಳ ರೂಪದಲ್ಲಿ ಕಪಾಟು ಸೇರಿವೆ.  ಆದರೆ ಇಲ್ಲದ ಈ ಹಾಡಿನ ಬಗ್ಗೆ ತುಡಿತ  ಕಮ್ಮಿಯಾಗಿಲ್ಲ. 
----

   ಒಂದು ದಿನ  ಅಂತರ್ಜಾಲದಲ್ಲಿ ಹಳೆಯ ಚಂದಮಾಮಗಳನ್ನು ಜಾಲಾಡುತ್ತಿರುವಾಗ  1952 ಜೂನ್ ಸಂಚಿಕೆಯ ಜಾಹೀರಾತೊಂದರಲ್ಲಿ  ಜಗನ್ಮೋಹಿನಿ ಚಿತ್ರದ ಎಲ್ಲ ಹಾಡುಗಳ ಪಟ್ಟಿಯೂ ಕಣ್ಣಿಗೆ ಬಿತ್ತು.  ಅದರ ಪರಿಣಾಮವಾಗಿ ಈ ಹಾಡನ್ನು ಯಾವ ರೂಪದಲ್ಲಾದರೂ ಸಂಪಾದಿಸಲೇ ಬೇಕೆಂಬ ಇಚ್ಛೆ ಉತ್ಕಟವಾಯಿತು.


     ಇತ್ತೀಚೆಗೆ ಮಾಳ ಸಮೀಪದ ಕೂಡಬೆಟ್ಟಿನಲ್ಲಿರುವ ನಮ್ಮ ಅಂಬಕ್ಕನನ್ನು ಭೇಟಿಯಾದಾಗ  ಎಂದೋ ಕಲಿತಿದ್ದ ಎಂದೋ ಎಂದೋ ಹಾಡು ಅವರಿಗೆ ಈಗಲೂ ಕಂಠಸ್ಥವಾಗಿರುವುದು ತಿಳಿದು ಆಶ್ಚರ್ಯವಾಯಿತು.  ಆ ಹಾಡನ್ನು ಅವರು ಬೆಳ್ತಂಗಡಿಯ ಟೂರಿಂಗ್ ಟಾಕೀಸಿನಲ್ಲಿ ಜಗನ್ಮೋಹಿನಿ ಚಿತ್ರವನ್ನು ನೋಡಿದಾಗ ಮಾತ್ರ ಒಂದೇ ಸಲ ಕೇಳಿದ್ದಂತೆ.  ಇದರ ಮೂಲ ಮಹಲ್ ಚಿತ್ರದ ಆಯೇಗಾ ಆಯೇಗಾ ಆಯೇಗಾ ಆನೇವಾಲಾ  ಹಾಡನ್ನು ಅವರು ಒಮ್ಮೆಯೂ ಕೇಳಿಲ್ಲವಂತೆ.  ಇಷ್ಟು ವರ್ಷಗಳ ನಂತರವೂ ಚಾ ಚೂ ತಪ್ಪದಂತೆ ಅವರು ಹಾಡಿದ ಆ ಹಾಡನ್ನು ಈಗ ಕೇಳೋಣ.



 


ಎಂದೋ ನಿನ್ನ ದರುಶನ 
ಚಿತ್ರ : ಜಗನ್ಮೋಹಿನಿ 





ಎಂದೋ ಎಂದೋ ಎಂದೋ
ಎಂದೋ ನಿನ್ನ ದರುಶನ 
ಎಂದೋ

ನೀ ಎನ್ನ ಪ್ರಾಣ ಜ್ಯೋತಿ
ನಿನಗಾಗಿ ಎನ್ನ ಪ್ರೀತಿ
ನಾ ನಿನ್ನ ಕಾದು ಕುಳಿತೆ
ನೀ ಏಕೆ ಎನ್ನ ಮರೆತೆ

ಇರುಳೆಲ್ಲ ನಿನ್ನ ಸ್ವಪ್ನ
ಹಗಲೆಲ್ಲ ನಿನ್ನ ಧ್ಯಾನ
ಹೀಗಾಯ್ತು ಎನ್ನ ಬವಣೆ
ನಾ ಬೇರೆ ದಾರಿ ಕಾಣೆ 

ವಿರಹಾಗ್ನಿಯಿಂದ ಉರಿದು
ಕಣ್ಣೀರ ಕೋಡಿ ಹರಿದು
ನೀ ಎನ್ನ ಸೇರದಾದೆ
ಈ ರೂಪ ಕಳೆಯದಾದೆ

     ಜಗನ್ಮೋಹಿನಿ ಹಾಡುಗಳ ಜಾಹೀರಾತಿನಲ್ಲಿರುವ 6ನೇ ಹಾಡು ಕರೆಯುವೆ ನಿನ್ನ ಕಣ್ಮಣಿ ನಾನೇ  ಇದು ಪತಂಗಾ    ಚಿತ್ರದ   ಓ ದಿಲ್ ವಾಲೊ  ದಿಲ್ ಕಾ ಲಗಾನಾ ಧಾಟಿಯನ್ನು ಹೊಂದಿದ್ದು ಇದೇ ಧಾಟಿಯಲ್ಲಿ ಮುಂಡಾಜೆಯ ಪ್ರಸಿದ್ಧ ಶಿಶು ಕವಿ ರಾಮಚಂದ್ರ ಭಟ್ಟರು ಕರೆವೆನು ನಿನ್ನ ಕಣ್ಮಣಿಯೆನ್ನ ಕಾಡಿಗೆ ಕಣ್ಣಿನ ಓ ನವಿಲೇ ಕವಿತೆಯನ್ನು ರಚಿಸಿದ್ದರು.  ಇದನ್ನು ಒಳಗೊಂಡಿದ್ದ ತಮ್ಮನ ಕವಿತೆಗಳು ಪುಸ್ತಕದಲ್ಲಿ ಈ ಧಾಟಿಯ ಉಲ್ಲೇಖವೂ ಇತ್ತು.  

    10ನೇ ಹಾಡು ಓ ವಸಂತ ಮಾಸ ಓಡಿ ಬಂದಿದೆ ಇದು ಬರಸಾತ್ ಚಿತ್ರದ ಓ ಮುಝೆ ಕಿಸೀ ಸೆ ಪ್ಯಾರ್ ಹೊ ಗಯಾ ಧಾಟಿಯನ್ನು ಹೊಂದಿದೆ. ಇದನ್ನು ಶಾಲಾ ವಾರ್ಷಿಕೋತ್ಸವಗಳಲ್ಲಿ  ಟಮ್ಕಿ, ಲೇಜಿಮ್, ಕೋಲಾಟ ಇತ್ಯಾದಿಗಳಿಗೆ ಉಪಯೋಗಿಸಿಕೊಳ್ಳಲಾಗುತ್ತಿದ್ದುದು ಅನೇಕರಿಗೆ ನೆನಪಿರಬಹುದು.



     

Friday, 30 March 2012

ಯುಗಳ ಗೀತೆಗಳ ರಾಣಿ ಸುಮನ್ ಕಲ್ಯಾಣ್ ಪುರ್

60ರ ದಶಕದ ಲತಾ ಮಂಗೇಶ್ಕರ್ ಗಾಯನವೆಂದರೆ ಅದು ಪೈಲಟ್ ಪೆನ್ನಿನ ಬರವಣಿಗೆಯಂತೆ  ಸರಾಗ ಸುಂದರ.  ಲತಾ ಅವರದ್ದೇ ಕೊಂಚ ಲಘು ವರ್ಷನ್ ಅನ್ನಬಹುದಾದ  ಸುಮನ್ ಕಲ್ಯಾಣಪುರ್ ಅವರ ಗಾಯನವನ್ನು ಸ್ವಾನ್ ಪೆನ್ನಿನ ಬರವಣಿಗೆಗೆ ಹೋಲಿಸಬಹುದೇನೋ!  ಶಂಕರ್ ಜೈಕಿಶನ್ ಅವರಿಂದ ಲಕ್ಷ್ಮಿ ಪ್ಯಾರೆ ವರೆಗೆ ಎಲ್ಲರ ಅಚ್ಚು ಮೆಚ್ಚಿನ  ಈ ಗಾಯಕಿ ಡ್ಯುಯೆಟ್ ಸ್ಪೆಷಲಿಸ್ಟ್ ಎಂದರೆ ತಪ್ಪಾಗಲಾರದು. ಹೆಚ್ಚಿನ ರಿಹರ್ಸಲ್ ಇಲ್ಲದೆ  ಸ್ಟುಡಿಯೊದಲ್ಲೇ ಹಾಡನ್ನು ಒಂದೆರಡು ಸಲ ಕೇಳಿ ರೆಕಾರ್ಡಿಂಗಿಗೆ ತಯಾರಾಗುತ್ತಿದ್ದರಂತೆ.  ಲತಾ ಅವರು ಮುಂಚೂಣಿಯಲ್ಲಿರುವಾಗಲೇ ಇಷ್ಟೊಂದು ಹಾಡುಗಳು ಇವರ ಕಂಠದಿಂದ ಹೊರಹೊಮ್ಮಲು ಇದೂ ಒಂದು ಕಾರಣವಿರಬಹುದು.  ಇವರು ರಫಿ  ಜತೆಗೂಡಿ ಹಾಡಿದರೆಂದರೆ ಆ ಹಾಡು ಸುಪರ್ ಹಿಟ್ ಎಂದೇ ಅರ್ಥ.  ಅಂತಹ ಕೆಲವು ಹಾಡುಗಳು ಇಲ್ಲಿವೆ.



1. ತುಝೆ ಪ್ಯಾರ್ ಕರತೆ ಹೈಂ ಕರತೆ ರಹೇಂಗೆ - ಎಪ್ರಿಲ್ ಫೂಲ್
      तुझे प्यार करते हैं करते रहेंगे - एप्रिल फूल




2. ಅಗರ್ ತೇರಿ ಜಲ್ವಾನುಮಾಯಿ ನ ಹೋತಿ - ಬೇಟಿ ಬೇಟೆ       
     अगर तेरि जल्वानुमाई न होती - बेटी बेटे


 
3. ಆಜ್ ಹುನ ಆಯೆ ಬಾಲಮಾ - ಸಾಂಝ್ ಔರ್  ಸವೇರಾ       
     आज हुन आए बालमा - सांझ और सवेरा


 
4.  ತುಮನೆ ಪುಕಾರಾ ಔರ್ ಹಮ್ ಚಲೆ ಆಯೆ - ರಾಜ್ ಕುಮಾರ್        
     तुमने पुकारा और हम चले आए - राजकुमार


 
5.  ಜಬ್ ಸೆ ಹಮ್ ತುಮ್ ಬಹಾರೊಂ ಮೆಂ - ಮೈಂ ಶಾದಿ ಕರನೆ ಚಲಾ       
     जब से हम तुम बहारों में - मैं शादी करने चला


 
6. ಠಹರಿಯೆ ಹೋಶ್ ಮೆಂ ಆಲುಂ -  ಮೊಹಬ್ಬತ್ ಇಸಕೊ ಕಹತೆ  ಹೈಂ       
    ठहरिए होश में आलूं - मोहब्बत इसको कहते हैं 


 
7. ರಾತ್ ಸುಹಾನೀ ಜಾಗ್ ರಹೀ ಹೈ - ಜಿಗ್ರೀ ದೋಸ್ತ್       
    रात सुहानी जाग रही है - जिग्री दोस्त


 
8. ಕ್ಯಾ ಕಹನೆ ಮಾಶ ಅಲ್ಲಾ -  ಜೀ ಚಾಹತಾ ಹೈ       
     क्या कहने माश अल्ला - जी चाहता है



 
9. ಆಜ್ ಕಲ್ ತೆರೆ ಮೇರೆ ಪ್ಯಾರ್ ಕೆ - ಬ್ರಹ್ಮಚಾರಿ         
      आज कल तेरे मेरे प्यार के - ब्रह्मचारी



 
10. ನಾ ನಾ ಕರತೆ ಪ್ಯಾರ್ ತುಮ್ಹೀ ಸೆ - ಜಬ್ ಜಬ್ ಫೂಲ್ ಖಿಲೆ         
      ना ना करते प्यार तुम्ही से - जब जब फूल खिले



 

Sunday, 11 March 2012

ಹಾಡುಗಳಿಂದಲೇ ಜಗವನ್ನು ಜಯಿಸಿದ ಜೊಯ್ ಮುಖರ್ಜಿ

ಗಾನ ಗಾರುಡಿಗ ರವಿ ಇಹಲೋಕ ತ್ಯಜಿಸಿದ ಎರಡೇ ದಿನಗಳಲ್ಲಿ ಗಾನಗಳಿಂದಲೇ ಜಗವನ್ನು ಜಯಿಸಿದ ಜೊಯ್ ಮುಖರ್ಜಿ ಅದೇ ಹಾದಿ ಹಿಡಿದು  ಮತ್ತೊಂದಿಷ್ಟು ಕಾಲಜಯೀ ಹಾಡುಗಳನ್ನು ನೆನಪಿಸಿಕೊಳ್ಳುವ ಸಂದರ್ಭ ಬಂದಿದೆ.  ತೆರೆಯ ಮೇಲೆ ಸಾಕ್ಷಾತ್ಕರಿಸಿದ ಒಟ್ಟು ಹಾಡುಗಳು ಮತ್ತು ಸುಪರ್ ಹಿಟ್ ಹಾಡುಗಳ ಶೇಕಡಾವಾರು ಮಾನದಂಡವೊಂದಿದ್ದರೆ ಜೊಯ್ ಮುಖರ್ಜಿ ಇಲ್ಲಿ ಪ್ರಥಮ ಸ್ಥಾನದಲ್ಲಿ ನಿಲ್ಲುತ್ತಾರೆ.  ಇವರ ಇನ್ನೋರ್ವ ಸಮಕಾಲೀನ  ಬಿಸ್ವಜೀತ್ ಅವರಂತೆ ಇವರು ಮಿಂಚಿದ್ದೇ ಒಂದನ್ನೊಂದು ಮೀರಿಸುವ ರಫಿ ಹಾಡುಗಳಿಂದ.   ಇಂತಹ ಹತ್ತು ಹಾಡುಗಳು ಅವರ ನೆನಪಿಗಾಗಿ.







1. ಲಾಖೊಂ ಹೈ ನಿಗಾಹ ಮೆ - ಫಿರ್ ವಹೀ ದಿಲ್ ಲಾಯಾ ಹೂಂ

2. ಪ್ಯಾರ್ ಕಿ ಮಂಜಿಲ್ ಮಸ್ತ್  ಸಫರ್ - ಜಿದ್ದಿ
3. ಮುಕದ್ದರ್ ಆಜಮಾನಾ ಚಾಹತಾ ಹೂಂ - ದೂರ್ ಕೀ ಆವಾಜ್
4. ದಿಲ್ ಬೇಕರಾರ್ ಸಾ ಹೈ - ಇಶಾರಾ
5. ಓ ಮೆರೆ ಶಾಹೆ ಖುಬಾ - ಲವ್ ಇನ್ ಟೊಕಿಯೊ
6. ಕ್ಯಾ ಕಹನೆ ಮಾಶ ಅಲ್ಲಾ - ಜೀ ಚಾಹತಾ ಹೈ
7. ಸಾಜ್ ಹೊ ತುಮ್ ಆವಾಜ್ ಹೂಂ ಮೈ - ಸಾಜ್ ಔರ್ ಆವಾಜ್
8. ಯೆ ಝುಕಿ ಝುಕಿ ಝುಕಿ ನಿಗಾಹೆಂ ತೇರಿ - ಆವೊ ಪ್ಯಾರ್ ಕರೇಂ
9. ಮಾಶ ಅಲ್ಲಾ ತುಮ್ ಜವಾಂ ಹೊ - ಯೆ ಜಿಂದಗೀ ಕಿತನೀ ಹಸೇನ್ ಹೈ
10. ದಿಲ್ ಕೀ ಆವಾಜ್ ಭಿ ಸುನ್ - ಹಮ್ ಸಾಯಾ

Monday, 6 February 2012

ಕನ್ನಡದ ಮನ್ನಾಡೇಯ ಗೀಗೀ ಹಾಡು

     ಕನ್ನಡ ಚಿತ್ರ ಸಂಗೀತದ ಸುವರ್ಣಯುಗವನ್ನು ಶ್ರೀಮಂತಗೊಳಿಸಿದ ಗಾಯಕ ಗಾಯಕಿಯರಲ್ಲಿ ಪಿ.ಬಿ.ಶ್ರೀನಿವಾಸ್, ಎಸ್.ಜಾನಕಿ, ಪಿ.ಸುಶೀಲ, ಘಂಟಸಾಲ, ಎಸ್.ಪಿ.ಬಾಲಸುಬ್ರಹ್ಮಣ್ಯಂ, ಎಲ್.ಆರ್.ಈಶ್ವರಿ ಮುಂತಾದವರನ್ನು ಅರಿಯದ ಕನ್ನಡಿಗರಿಲ್ಲ. ಆದರೆ ಕಂಡರೂ ಕಾಣದಂಗೆ ನಡೀತಿದ್ದಿ ನ್ಯಾಯವೇನೇ ಇದು ಬೆಳ್ಳಿ(ಅಣ್ಣ ತಂಗಿ), ಭಲೇ ಭಲೇ ಗಾರುಡಿ(ಕೃಷ್ಣಗಾರುಡಿ), ಸತ್ಯದ ನುಡಿಯ ಲಾಲಿಸಿರೊ(ಚಂದವಳ್ಳಿಯ ತೋಟ), ಕನ್ನಡ ನಾಡಿನ ಕುಲ ನಾರಿ(ನಾಗ ಪೂಜಾ),  ನಾ ನಿನ್ನ ಮೋಹಿಸಿ ಬಂದಿಹೆನು(ಪ್ರತಿಜ್ಞೆ), ನೀನೆ ಕಿಲಾಡಿ ಹೆಣ್ಣು(ಗಾಳಿ ಗೋಪುರ), ಹಾಡು ಬಾ ಕೋಗಿಲೆ(ವೀರ ಸಂಕಲ್ಪ), ಸುಬ್ಬ ಬಂದ ಹಬ್ಬ ತಂದ(ಅಮರ ಜೀವಿ), ಹಗಲು ಹರಿಯಿತು ಇರುಳು ಕಳೆಯಿತು(ಚಕ್ರ ತೀರ್ಥ), ರಾತ್ರಿಯಲಿ ಮಳೆ ಬಂದು(ಅಮ್ಮ), ನಾನೂ ನೀನೂ ಜೋಡಿ(ಸ್ಕೂಲ್ ಮಾಸ್ಟರ್), ನಾವಿಕನಾರೊ ನಡೆಸುವನೆಲ್ಲೊ(ಕುಲ ಗೌರವ), ಬೆಳಗಲಿ ಬೆಳಗಲಿ(ಶ್ರೀ ಕೃಷ್ಣ ದೇವರಾಯ), ನನ್ನ ನಿನ್ನ ಕಣ್ಣು ಸೇರಿದಂದು ನನ್ನವಳಾದೆ ನೀನು(ಅಡ್ಡ ದಾರಿ), ಚೆಲುವೇ ಚೆಲುವೇ ತಾನಿ ತಂದಾನಾ(ಲಕ್ಷಾಧೀಶ್ವರ), ಮಾತಿನ ಮಲ್ಲ ತೋರುತ ಹಲ್ಲ(ವಿಜಯ ನಗರದ ವೀರ ಪುತ್ರ), ಹಲೊ ಮಿಸ್ ಹಲೊ ಮಿಸ್ ಕೊಂಚ ನಿಲ್ಲಿ(ಚಿಕ್ಕಮ್ಮ) ಮುಂತಾದ ಹಾಡುಗಳು ಅನೇಕರಿಗೆ  ಗೊತ್ತಿದ್ದರೂ ಈ ಹಾಡುಗಳಿಗೆ ಧ್ವನಿ ನೀಡಿದ ಗಾಯಕ ಯಾರು ಎಂದು ಕೇಳಿದರೆ ಬಹುಶಃ ಕೂಡಲೇ ಉತ್ತರ ಸಿಗಲಾರದು. ಇವರೇ ಕನ್ನಡದ ಮನ್ನಾಡೇ ಎಂದು ಕರೆಯಬಹುದಾದ ಪೀಠಾಪುರಂ ನಾಗೇಶ್ವರ ರಾವ್. ಮನ್ನಾಡೇಯನ್ನು ಹೋಲುವ ಘನ ಗಂಭೀರ ಕಂಠ, ಅವರಂತೆಯೇ ಕೊಂಚ ತೊದಲು ಎನ್ನಬಹುದಾದ voice throw , ಹೆಚ್ಚಾಗಿ ಕಾಮಿಡಿ ಹಾಗೂ ಹಿನ್ನೆಲೆಯ ಹಾಡುಗಳಿಗಾಗಿ ಬಳಕೆ ಇವು ಇವರಿಬ್ಬರ ಸಮಾನ ಅಂಶಗಳು.  ಕನ್ನಡದಲ್ಲಿ ಇವರನ್ನು ಹೆಚ್ಚು ಬಳಸಿಕೊಂಡವರು ಟಿ.ಜಿ.ಲಿಂಗಪ್ಪ. ಪಿ.ಬಿ.ಎಸ್ ಅವರಂತೆಯೇ ತೆಲುಗು ಮಾತೃಭಾಷಿಗರಾದರೂ ಕನ್ನಡಿಗರೂ ನಾಚುವಷ್ಟು ಶುದ್ಧ ಕನ್ನಡ ಉಚ್ಚಾರದಲ್ಲಿ ಇಷ್ಟೊಂದು ಪ್ರಸಿದ್ಧ ಹಾಡುಗಳನ್ನು ಹಾಡಿದ ಇವರ ಬಗ್ಗೆ ಯಾವುದೇ ಪತ್ರಿಕೆಯಲ್ಲಿ ಲೇಖನವನ್ನಾಗಲೀ,  ಫೋಟೊವನ್ನಾಗಲೀ, ಕೊನೆಗೆ 1996ರಲ್ಲಿ ಇವರು ನಿಧನ ಹೊಂದಿದ ಸುದ್ದಿಯನ್ನಾಗಲೀ ಎಲ್ಲೂ ನೋಡಿದ ನೆನಪಿಲ್ಲ. 50-60 ರ ದಶಕಗಳಲ್ಲಿ ಕನ್ನಡ ಹಾಗೂ ತೆಲುಗು ಚಿತ್ರರಂಗದಲ್ಲಿ ಸಕ್ರಿಯರಾಗಿದ್ದ ಇವರ ಬಗ್ಗೆ ಅಂತರ್ಜಾಲವನ್ನು ಜಾಲಾಡಿದಾಗ ಒಂದು ಫೋಟೊ ಮತ್ತು ಕೊಂಚ ಮಾಹಿತಿ ದೊರಕಿತು.

ಕೊನೆವರೆಗೂ ಹಿನ್ನೆಲೆಯಲ್ಲೇ ಉಳಿದು ನಿಜ ಅರ್ಥದಲ್ಲಿ ಹಿನ್ನೆಲೆ ಗಾಯಕರಾದ ಪೀಠಾಪುರಂ ನಾಗೇಶ್ವರ ರಾವ್ ಅವರನ್ನು ಸ್ಮರಿಸುತ್ತಾ ನೆನಪಿಸಿಕೊಳ್ಳುತ್ತಾ ಇತ್ತೀಚೆಗೆ ಹೆಚ್ಚಾಗಿ ಕೇಳಿಬರದ ಗೀ ಗೀ ಪದವನ್ನು ಆಲಿಸೋಣ. ಆಕಾಶವಾಣಿಯ ಸುಗಮ ಸಂಗೀತ ಕ್ಷೇತ್ರಕ್ಕೆ ತಮ್ಮ ಪ್ರತಿಭೆಯನ್ನು ಧಾರೆಯೆರೆದ ಪದ್ಮಚರಣ್ ಸಂಗೀತ ನಿರ್ದೇಶನ ಮಾಡಿದ ಪಾಪ ಪುಣ್ಯ ಚಿತ್ರದ ಗೀತೆ ಇದು. ಶಾಸ್ತ್ರೀಯ ಸಂಗೀತದ ಉತ್ತಮ ವಯಲಿನ್ ವಿದ್ವಾಂಸರಾಗಿದ್ದ ಪದ್ಮಚರಣ್ ಅವರ ಮೂಲ ಹೆಸರು ಆಸೂರಿ ವೆಂಕಟಕೃಷ್ಣಮಾಚಾರ್. ಸಾಹಿತ್ಯ ಮಹದೇವ ಬಣಕಾರ ಅವರದು. ಈ ಹಾಡಲ್ಲದಿದ್ದರೆ ಅನೇಕರಿಗೆ ಗೀಗೀ ಪದ ಎಂದರೇನೆಂದೇ ಗೊತ್ತಾಗುತ್ತಿರಲಿಲ್ಲ.

ಈ ಹಾಡಿನಲ್ಲಿ ತಾಳವಾದ್ಯದ ಹೊರತಾಗಿ ಯಾವುದೇ ತಂತಿ ವಾದ್ಯ, ಗಾಳಿ ವಾದ್ಯ ಬಳಕೆಯಾಗದಿರುವುದನ್ನು ಮತ್ತು ಚಿತ್ರಗೀತೆಗಳಲ್ಲಿ ಸಾಮಾನ್ಯವಾಗಿರುವ prelude, imterlude ಇಲ್ಲದಿರುವುದನ್ನು ಗಮನಿಸಿ. ತಾಳವಾದ್ಯ ಮಾತ್ರ ಬಳಕೆಯಾದ ಬೇರೆ ಚಿತ್ರಗೀತೆ ನಿಮಗೆ ನೆನಪಿದ್ದರೆ ತಿಳಿಸಿ.


ಚಿತ್ರ : ಪಾಪ ಪುಣ್ಯ
ರಚನೆ : ಮಹದೇವ ಬಣಕಾರ್
ಸಂಗೀತ : ಪದ್ಮಚರಣ್
ಗಾಯಕರು : ಪೀಠಾಪುರಂ ನಾಗೇಶ್ವರ ರಾವ್ ಮತ್ತು ಸಂಗಡಿಗರು


ಹರ ಹರಾ ಹರಾ
ಅರೆ ಗೀಯ ಗೀಯ ಗಾಗಿಯ ಗೀಯ
ಗೀಯ ಗೀಯ ಗಾಗಿಯ ಗೀ
ನಾವು ಬಂದೇವ ನಾವು ಬಂದೇವ
ನಾವು ಬಂದೇವ ಶ್ರೀಶೈಲ ನೊಡೊದಕ್ಕ
ಸ್ವಾಮಿ ಸೇವಾ ಮಾಡಿ ಮತ್ತ ಹೋಗೋದಕ್ಕ
ನಾವು ಬಂದೇವ ಶ್ರೀಶೈಲ ನೊಡೊದಕ್ಕ
ಸ್ವಾಮಿ ಸೇವಾ ಮಾಡಿ ಮತ್ತ ಹೋಗೋದಕ್ಕ
ನಾವು ಬಂದೇವ ನಾವು ಬಂದೇವ
ನಾವು ಬಂದೇವ ಶ್ರೀಶೈಲ ನೊಡೊದಕ್ಕ
ಸ್ವಾಮಿ ಸೇವಾ ಮಾಡಿ ಮತ್ತ ಹೋಗೋದಕ್ಕ
ಅರೆ ಗೀಯ ಗೀಯ ಗಾಗಿಯ ಗೀಯ
ಗೀಯ ಗೀಯ ಗಾಗಿಯ ಗೀ

ಹೇ ಬೆಟ್ಟದ ಮೇಲೇರಿ ಶಿವ ಯಾಕೆ ಕುಂತ
ಅವನಿಗೇನು ಬಂತ
ಅಂಥದ್ದವನಿಗೇನು ಬಂತ
ಹೂಂ ಹೇಳಪ್ಪ
ಕೆಟ್ಟ ಜನರ ಮುಖ ನೋಡಬಾರದಂತ.. ತ..
ತತ ಗೀಯ ಗೀಯ ಗಾಗಿಯ ಗೀಯ
ಗೀಯ ಗೀಯ ಗಾಗಿಯ ಗೀ

ಹೇ ಹಣ್ಣು ಕಾಯಿ ಧೂಪ ದೀಪ ಇಡತಾರಂತ
ಯಾಕಂತ
ಪುಣ್ಯ ಬರಲಿ ಅಂತ  ಪುಣ್ಯ ಬರಲಿ ಅಂತ
ತಾಸಿನೊಳಗೆ ಕೋಟಿ ಪುಣ್ಯ ಬರಲಿ ಅಂತ.. ತ..
ತತ ಗೀಯ ಗೀಯ ಗಾಗಿಯ ಗೀಯ
ಗೀಯ ಗೀಯ ಗಾಗಿಯ ಗೀ
ನಾವು ಬಂದೇವ ನಾವು ಬಂದೇವ
ನಾವು ಬಂದೇವ ಶ್ರೀಶೈಲ ನೊಡೊದಕ್ಕ
ಸ್ವಾಮಿ ಸೇವಾ ಮಾಡಿ ಮತ್ತ ಹೋಗೋದಕ್ಕ
ಅರೆ ಗೀಯ ಗೀಯ ಗಾಗಿಯ ಗೀಯ
ಗೀಯ ಗೀಯ ಗಾಗಿಯ ಗೀಯ ಗಾಗಿಯ

ಹೇ ಭಿಕ್ಷುಕ ಬಂದರೆ ನಿಷ್ಠುರವಾಗಿ ಹೇಳ್ತಾರಂತ
ಏನಂತ
ಮುಂದಕ್ಕ ಹೋಗಂತ
ಈಗಾಗೂದಿಲ್ಲ
ಮುಂದಕ್ಕ ಹೋಗಂತ
ಬೆಟ್ಟ ಏರಿ ಬಂದಿದ್ರೂ ಕೆಟ್ಟ ಗುಣ ಹೋಗಿರ್ಲಿಲ್ಲ
ಹುಟ್ಟುಗುಣ ಸುಟ್ಟರೂ ಹೋಗದಂತ.. ತ..
ತತ ಗೀಯ ಗೀಯ ಗಾಗಿಯ ಗೀಯ ಗೀ
ಹೇ ಬಾಯಿದ್ರೂ ಮೂಕನಾಗಿ
ಕಿವಿ ಇದ್ರೂ ಕಿವುಡನಾಗಿ
ಶಿವ ಯಾಕೆ ಕುಂತ
ಹೇಳಪ್ಪಾ
ವರ ಕೇಳತಾರಂತ.. ತ..
ತತ ಗೀಯ ಗೀಯ ಗಾಗಿಯ ಗೀಯ ಗೀ

ಹೇ ಶಿವನ ಒಲಿಸೂದಕ್ಕ ಏನ ಮಾಡಬೇಕ
ಹೂಂ ಹೇಳಪ್ಪಾ
ಭಕ್ತಿಯೊಂದು ಸಾಕ
ನಮ್ಮಿಂದ ಶಿವನಿಗೇನು ಬೇಕ.. ಕ..
ತತ ಗೀಯ ಗೀಯ ಗಾಗಿಯ ಗೀಯ ಗೀಯ ಗೀ
ನಾವು ಬಂದೇವ ನಾವು ಬಂದೇವ
ನಾವು ಬಂದೇವ ಶ್ರೀಶೈಲ ನೊಡೊದಕ್ಕ
ಸ್ವಾಮಿ ಸೇವಾ ಮಾಡಿ ಮತ್ತ ಹೋಗೋದಕ್ಕ
ಅರೆ ಗೀಯ ಗೀಯ ಗಾಗಿಯ ಗೀಯ
ಗೀಯ ಗೀಯ ಗಾಗಿಯ ಗೀಯ
ಗೀಯ ಗೀಯ ಗಾಗಿಯ ಗೀಯ