
ಇಂದು ಸಂಜೆ ವಾಕಿಂಗ್ ಸಮಯದಲ್ಲಿ ನಮ್ಮ ಮನೆ ಸಮೀಪದ ಜೆಪ್ಪು ಸಾರ್ವಜನಿಕ ಉದ್ಯಾನದಲ್ಲಿ ಸುಣ್ಣ ಬಣ್ಣ ಬಳಿದುಕೊಂಡ ರಾಮಪ್ಪ ರೇಡಿಯೋ ಪೆವಿಲಿಯನ್ ಕಾಣಿಸಿತು. ಬಾಗಿಲಿನ ಮೇಲ್ಗಡೆ ಲೌಡ್ ಸ್ಪೀಕರಿನ ಹಾರ್ನ್ ಪಳೆಯುಳಿಕೆ ಇರುವುದನ್ನೂ ಗಮನಿಸಬಹುದು. ಸಾರ್ವಜನಿಕ ರೇಡಿಯೋ ಆಲಿಸುವಿಕೆ ಎಂಬುದು ಇತಿಹಾಸ ಸೇರಿ ಎಷ್ಟೋ ಸಮಯವಾದರೂ ಹಳೆಯ ಕಾಲದ ನೆನಪಿಗೆ ಇನ್ನೂ ಇದನ್ನು ಹಾಗೆಯೇ ಉಳಿಸಿಕೊಂಡಿರುವುದನ್ನು ಕಂಡು ಖುಶಿ ಆಯಿತು.
ಹಿಂದಿನ ಕಾಲದಲ್ಲಿ ಎಲ್ಲ ಪೇಟೆ ಪಟ್ಟಣಗಳಲ್ಲೂ ಇಂಥ ರೇಡಿಯೋ ಪೆವಿಲಿಯನ್‌ಗಳು ಇರುತ್ತಿದ್ದವು. ಹೆಚ್ಚಾಗಿ ಸಂಜೆಯ ಹೊತ್ತು ರೇಡಿಯೋಗೆ ಧ್ವನಿವರ್ಧಕವನ್ನು ಅಳವಡಿಸಿ ಆಸುಪಾಸಿನ ಎಲ್ಲರಿಗೂ ಕೇಳಿಸುವಂತೆ ಮಾಡಲಾಗುತ್ತಿತ್ತು. ಬುಧವಾರದ ದಿನ ಬಿನಾಕಾ ಗೀತ್ ಮಾಲಾ ಇರುತ್ತಿದ್ದುದರಿಂದ ಅಂದು ರಾತ್ರೆ 9 ಗಂಟೆ ತನಕ ಸಮಯವನ್ನು ವಿಸ್ತರಿಸಲಾಗುತ್ತಿತ್ತು. ಕೆಲವೆಡೆ ಅಂದು ಜನಜಂಗುಳಿ ರಸ್ತೆಯ ವರೆಗೂ ವಿಸ್ತರಿಸಿ ಟ್ರಾಫಿಕ್ ಜಾಮ್ ಆಗುವುದೂ ಇತ್ತಂತೆ.
ಮಂಗಳೂರಿನ ಬಾವುಟೆ ಗುಡ್ಡೆಯ ಟಾಗೋರ್ ಪಾರ್ಕಿನಲ್ಲೂ ರೇಡಿಯೋ ಪೆವಿಲಿಯನ್ ಇತ್ತು. 1973ರಲ್ಲಿ ನಾನು ಹೊಸದಾಗಿ ನೌಕರಿಗೆ ಸೇರಿದಾಗ ಸಂಜೆಯ ಹೊತ್ತು ಒಂದರ್ಧ ಗಂಟೆ ಅಲ್ಲಿ ಹೋಗಿ ವಿವಿಧಭಾರತಿಯ ಸಾಂಧ್ಯಗೀತ್ ಕಾರ್ಯಕ್ರಮ ಆಲಿಸುತ್ತಿದ್ದೆ.
1960ರ ದಶಕದಲ್ಲಿ ನಾನು ಉಜಿರೆ ಹಾಸ್ಟೆಲಿನಲ್ಲಿ ಇದ್ದಾಗ ಸಂಜೆ ಪೇಟೆ ಕಡೆ ಹೋಗುವುದಿತ್ತು. ಅಲ್ಲಿ ರೇಡಿಯೋ ಪೆವಿಲಿಯನ್ ಇರದಿದ್ದರೂ ಪಂಚಾಯತ್ ಆಫಿಸಿನವರು ಧ್ವನಿವರ್ಧಕದ ಮೂಲಕ ರೇಡಿಯೋ ಕೇಳಿಸುವ ವ್ಯವಸ್ಥೆ ಮಾಡಿದ್ದರು. ವಿವಿಧ ಭಾರತಿಯ ಮಧುರಗೀತಮ್ ಕಾರ್ಯಕ್ರಮದಲ್ಲಿ ವೀರಕೇಸರಿಯ ಸ್ವಾಭಿಮಾನದ ನಲ್ಲೆ, ಮನೆ ಅಳಿಯದ ಕೇಳುವ ಒಗಟನು ಒಡೆದು, ನಾಂದಿಯ ಹಾಡೊಂದ ಹಾಡುವೆ, ಕನ್ಯಾರತ್ನದ ಬಿಂಕದ ಸಿಂಗಾರಿ ಇತ್ಯಾದಿ ಹಾಡುಗಳನ್ನು ಕೇಳಿದ್ದು ನನ್ನ ಮನದಲ್ಲಿ ಶಾಶ್ವತ ದಾಖಲೆಯಾಗಿ ಉಳಿದಿದೆ.
ಆಗ ಭವನ, ವಿಲಾಸ, ಮಹಲ್ ಮುಂತಾದ ನಾಮಾಂಕಿತದ ಉಡುಪಿ ಹೋಟೇಲುಗಳೂ ಒಂದು ರೀತಿ ರೇಡಿಯೋ ಪೆವಿಲಿಯನ್‌ಗಳೇ ಆಗಿರುತ್ತಿದ್ದವು. ಅವುಗಳ ಗಲ್ಲಾ ಟೇಬಲ್ ಬಳಿ ಇರುತ್ತಿದ್ದ ದೈತ್ಯಾಕಾರದ ವಾಲ್ವ್ ರೇಡಿಯೋಗಳು ದಿನವಿಡೀ ಮೆಲುದನಿಯಲ್ಲಿ ಹಾಡುತ್ತಲೇ ಇರುತ್ತಿದ್ದವು. ಆ ರೇಡಿಯೋಗಳಲ್ಲಿ ಇರುತ್ತಿದ್ದ ಡಯಲ್ ಲ್ಯಾಂಪ್ ಮತ್ತು ಹಸಿರು ಬಣ್ಣದ magic eye ನನಗಾಗ ಆಕರ್ಷಣೆಯ ವಿಷಯಗಳಾಗಿದ್ದು ನಾನೂ ಒಂದು ದಿನ ಇಂಥ ರೇಡಿಯೋ ಹೊಂದುವಂತಾದರೆ ಎಷ್ಟು ಚೆನ್ನಾಗಿರುತ್ತದೆ ಎಂದು ಮನದಲ್ಲಿ ಮಂಡಿಗೆ ಮೆಲ್ಲುವುದಿತ್ತು.
1962ರಲ್ಲಿ ನಮ್ಮ ಮನೆಗೆ ನ್ಯಾಶನಲ್ ಎಕ್ಕೊ ಟೇಬಲ್ ಸೆಟ್ ಬಂದಿದ್ದರೂ ಅದರಲ್ಲಿ ಡಯಲ್ ಲ್ಯಾಂಪ್ ಇರಲಿಲ್ಲ. ನೌಕರಿಗೆ ಸೇರಿದ ಮೇಲೆ ಅನೇಕ ವರ್ಷ ಬೆಂಕಿ ಪೆಟ್ಟಿಗೆಯಂಥ ಬಾಡಿಗೆ ಮನೆಗಳಲ್ಲಿ ಇದ್ದುದರಿಂದ ಅಲ್ಲಿ ಇಂಥ ದೊಡ್ಡ ರೇಡಿಯೋ ಇಟ್ಟುಕೊಳ್ಳುವುದು ಕಾರ್ಯಸಾಧು ಅನಿಸದೆ portable transistorಗಳನ್ನೇ ಬಳಸಬೇಕಾಯಿತು. ಸ್ವಂತ ಮನೆ ಹೊಂದುವ ಹೊತ್ತಿಗೆ TV ಯುಗ ಆರಂಭವಾಗಿ ಟೇಬಲ್ ರೇಡಿಯೋಗಳ ಕಾಲ ಮುಗಿದು ಹೋಗಿತ್ತು. ಹೀಗಾಗಿ ಡಯಲ್ ಲ್ಯಾಂಪ್ ರೇಡಿಯೋಗಳನ್ನು ಆಗಾಗ ಕನಸಿನಲ್ಲಿ ಮಾತ್ರ ಕಾಣಲು ಸಾಧ್ಯವಾಗುತ್ತಿತ್ತು.

ಇಷ್ಟು ವರ್ಷಗಳ ನಂತರ ಮೊನ್ನೆ ಮೊನ್ನೆಯಷ್ಟೇ ಬ್ಲೂ ಟೂತ್ ವ್ಯವಸ್ಥೆಯೂ ಇರುವ, ಡಯಲ್ ಲ್ಯಾಂಪ್ ಸಹಿತವಾದ ಪಗಾರಿಯಾ ಕಂಪನಿಯ ಅತ್ಯುತ್ತಮ receiving ಸಾಮರ್ಥ್ಯದ 3 ಬ್ಯಾಂಡ್ ರೇಡಿಯೋವನ್ನು ಹೊಂದುವ ಮೂಲಕ ನನ್ನ ಈ ಆಸೆ ಪೂರೈಸಿತು. ನನ್ನ ಬಳಿ ಈಗ ಲೆಕ್ಕಕ್ಕೆ ಸಿಗದಷ್ಟು ರೇಡಿಯೋ ಸೆಟ್ಟುಗಳಿದ್ದರೂ ಇದನ್ನು ದಿಂಬಿನ ಪಕ್ಕದ ಕೇಳುವಿಕೆಗೆ ಉಪಯೋಗಿಸುತ್ತಿದ್ದೇನೆ. ಆಡಿಯೋ ಗುಣಮಟ್ಟವೂ ಉತ್ತಮವಾಗಿರುವುದರಿಂದ online ನಿಲಯಗಳ ಪ್ರಸಾರವನ್ನೂ bluetooth ಮೂಲಕ ಇದರಲ್ಲಿ ಆಲಿಸುವುದು ಹೆಚ್ಚಿನ ಆನಂದ ನೀಡುತ್ತಿದೆ. ನಾನು ಆಗೊಮ್ಮೆ ಈಗೊಮ್ಮೆ ನೋಡುವ TV ಕಾರ್ಯಕ್ರಮ ಮತ್ತು youtube ಸಿನಿಮಾಗಳ ಆಡಿಯೋವನ್ನೂ instruments ಮತ್ತು voice ಬೇರೆ ಬೇರೆಯಾಗಿ ಎತ್ತಿ ಕೊಡುವ ಇದರಲ್ಲೇ ಆಲಿಸುವುದು.
ನೋಡಿದಿರಾ, ಕಣ್ಣಿಗೆ ಕಾಣಿಸಿದ ಹಳೆಯ ರೇಡಿಯೋ ಪೆವಿಲಿಯನ್ ಎಲ್ಲೆಲ್ಲ ಸುತ್ತಾಡಿಸಿತು!
- ಚಿದಂಬರ ಕಾಕತ್ಕರ್.
No comments:
Post a Comment