Tuesday, 8 September 2026

ಮಂಗಳೂರಿನ ಪ್ರಥಮ ಎಲೆಕ್ಟ್ರಿಕ್ ಬಸ್ಸು ಮತ್ತು ರೂಟ್ ನಂಬರ್ 27.

ಎಲೆಕ್ಟ್ರಿಕ್ ಸ್ಕೂಟರ್, ಅಟೋರಿಕ್ಷಾಗಳು ಈಗ ಅಪರೂಪವೇನೂ ಅಲ್ಲ. ಎಲೆಕ್ಟ್ರಿಕ್ ಬಸ್ಸುಗಳೂ ಅಪರೂಪ ಅಲ್ಲ. ಆದರೆ  ಈಗ  ರೂಟ್  ನಂಬರ್ 27ರಲ್ಲಿ ಮಂಗಳೂರಿನ ಪ್ರಥಮ ಹಾಗೂ ಸದ್ಯಕ್ಕೆ ಏಕೈಕ ಖಾಸಗಿ ಹವಾನಿಯಂತ್ರಿತ ಎಲೆಕ್ಟ್ರಿಕ್ ಸಿಟಿ ಬಸ್ ಟಿಕೆಟ್ ದರ ಹೆಚ್ಚಿಸದೆ   ನಿಯಮಿತವಾಗಿ ಓಡಾಟ ನಡೆಸುತ್ತಿರುವುದು  ನಮ್ಮ ಮಟ್ಟಿಗೆ ವಿಶೇಷವೇ ಸರಿ.

ರೂಟ್ ನಂಬರ್ 27ರಲ್ಲಿ ಮಂಗಳಾದೇವಿಯಿಂದ ಸ್ಟೇಟ್ ಬ್ಯಾಂಕಿಗೆ ಈಗಾಗಲೇ ಬಸ್ಸುಗಳನ್ನು ಓಡಿಸುತ್ತಿರುವ  ಗಣೇಶ್ ಪ್ರಸಾದ್  ಸಂಸ್ಥೆ ಪೂನಾದಿಂದ ತರಿಸಿದ  ನ್ಯೂಟನ್ ಕಂಪನಿಯ ಎಲೆಕ್ಟ್ರಿಕ್ ಬಸ್ಸು ಓಡಾಟ ಆರಂಭಿಸಿ ಕೆಲ ಕಾಲ ಕಳೆಯಿತಾದರೂ ಇದರಲ್ಲಿ ಪಯಣಿಸುವ ಸಂದರ್ಭ ನನಗೆ ಇತ್ತೀಚೆಗಷ್ಟೇ ಒದಗಿ ಬಂತು.   1970ರ ದಶಕದಿಂದಲೂ  ಈ ರೂಟಿನ 27 ನಂಬರ್ ಬಸ್ಸುಗಳಲ್ಲಿ ಓಡಾಡುತ್ತಿದ್ದ ನೆನಪುಗಳೂ ಮತ್ತೆ ಮುನ್ನೆಲೆಗೆ ಬಂದವು.

*****

ಮೊದಲು ಈ ರೂಟಿನಲ್ಲಿ ಪಾಪ್ಯುಲರ್ ಹೆಸರಿನ ಒಂದೇ ಬಸ್ಸು ಇತ್ತು.  Fargo ಎಂಜಿನ್ ಹೊಂದಿದ್ದ ಈ ಬಸ್ಸನ್ನು ಕರ್ಕಡ ಮತ್ತು ಬಾಬಣ್ಣ ಎಂಬ ಇಬ್ಬರು ಚಾಲಕರು ದಿನ ಬಿಟ್ಟು ದಿನ ಚಲಾಯಿಸುತ್ತಿದ್ದುದು. ಅದರ ಮಾಲಕರಾಗಿದ್ದ ಪರಂಗಿಪೇಟೆಯ ನಾಗೇಶ್ ಕಂಡಕ್ಟರ್ ಕೆಲಸವನ್ನೂ ಮಾಡುತ್ತಿದ್ದರು. ಹಂಪನಕಟ್ಟೆಯಲ್ಲಿದ್ದ P.V. Motorನವರ ಗ್ಯಾರೇಜನ್ನೆ ಇದು ಬಳಸುತ್ತಿತ್ತು. 1978ರಲ್ಲಿ ನಾನು ದೂರವಾಣಿ ಇಲಾಖೆಯಲ್ಲಿ ಜೂನಿಯರ್ ಎಂಜಿನಿಯರ್ ಆದ ಮೇಲೆ ಈ ಬಸ್ಸಿನ ಕಾಯಂ ಪ್ರಯಾಣಿಕನಾದೆ. ಬೆಳಗ್ಗೆ 6-45ಕ್ಕೆ ಸರಿಯಾಗಿ ಬಾಬುಗುಡ್ಡೆಗೆ ಬರುತ್ತಿದ್ದ ಅದು ಮಾರ್ನಿಂಗ್ ಡ್ಯೂಟಿ ಇದ್ದ ದಿನ ನನ್ನನ್ನು  7 ಗಂಟೆಯೊಳಗೆ  ಟೆಲಿಫೋನ್  ಎಕ್ಸ್‌ಚೇಂಜ್‌ಗೆ ತಲುಪಿಸುತ್ತಿತ್ತು. ಆಗ ವಾರದ ಯಾವುದಾದರೊಂದು ದಿನ weekly off ಇರುತ್ತಿದ್ದ ನನಗೆ ಶನಿವಾರ ಮತ್ತು ಭಾನುವಾರ ಒಟ್ಟಿಗೆ ರಜೆ ಸಿಕ್ಕಿದರೆ ಶುಕ್ರವಾರ ಸಂಜೆ ತಾಜ್ ಮಹಲಿನಲ್ಲಿ ತುಪ್ಪದೋಸೆ ತಿಂದು  ಈ ಬಸ್ಸಿನ ಎಡ ಭಾಗದ ಕಿಟಿಕಿ ಬದಿಯಲ್ಲಿ ಕುಳಿತು ಪ್ರಯಾಣಿಸುವುದು ಆಹ್ಲಾದಕರ ಅನುಭವ ನೀಡುತ್ತಿತ್ತು.  

ಕೆಲ ಕಾಲದ ನಂತರ ಫಾರ್ಗೊ ಎಂಜಿನಿನ ಹಳೆ ಬಸ್ಸಿಗೆ ಬದಲಾಗಿ ಟಾಟಾ ಎಂಜಿನಿನ ಫಳ ಫಳ ಕೆಂಪು ಬಣ್ಣದ  ಹೊಸ ಪಾಪ್ಯುಲರ್ ಬಸ್ಸು ಬಂತು.  ಅದರಲ್ಲಿ ಶಿರೋ ಭಾಗದ ಬದಲಿಗೆ windshieldನ ಕೆಳಭಾಗದಲ್ಲಿ ಬಲ್ಬು ಹೊಂದಿದ ಪೆಟ್ಟಿಗೆಯೊಳಗೆ ಮಂಗಳಾದೇವಿ - ಸ್ಟೇಟ್‌ಬ್ಯಾಂಕ್ ಎಂದು ಬರೆದ ಬೋರ್ಡ್ ಇತ್ತು. ಆಗ ಈ ಬಸ್ಸಿನಲ್ಲಿ ಮಾತ್ರ ಅಂಥ ವ್ಯವಸ್ಥೆ ಇದ್ದುದರಿಂದ ರಾತ್ರಿ ಹೊತ್ತು ದೂರದಿಂದಲೇ 27 ನಂಬರ್ ಬಸ್ಸೆಂದು ಗೊತ್ತಾಗುತ್ತಿತ್ತು.

ಒಂದೇ ಬಸ್ಸು ಇದ್ದ ಆ ಕಾಲದಲ್ಲಿ ಹಂಪನಕಟ್ಟೆಯಿಂದ ಅತ್ತಾವರ, ಮಂಗಳಾದೇವಿ ಕಡೆಗೆ ಹೋಗುವವರಿಗೆ standing ಗ್ಯಾರಂಟಿ ಆದ್ದರಿಂದ ಬಸ್ಸು ಸ್ಟೇಟ್ ಬ್ಯಾಂಕ್ ಕಡೆ ಹೋಗುವಾಗಲೇ ತಾಜಮಹಲ್ ಬಳಿ  ಹತ್ತಿ ಬಿಡುತ್ತಿದ್ದರು.

ಕೆಲ ಕಾಲದ ನಂತರ ಚಾಕಲೇಟ್ ಬಣ್ಣದ ಬಾಡಿಯ ಸ್ವಾಮಿ ತಿಲಕ್ ಎಂಬ ಎರಡನೆಯ ಬಸ್ಸು ಈ ರೂಟಲ್ಲಿ ಓಡಾಡ ತೊಡಗಿ ಪಾಪ್ಯುಲರ್ ಬಸ್ಸಿಗೆ ಸ್ಪರ್ಧೆ ಒಡ್ಡಿತು. ಅದು ನಿಗದಿತ ಸಮಯಪಾಲನೆ ಮಾಡದೆ  ಓಡಾಡಿದರೆ ಕಲಾವಿದರೂ ಆಗಿದ್ದ ಪಾಪ್ಯುಲರ್ ಬಸ್ಸಿನ ನಾಗೇಶ್ ಅವರು 'ಚಟ್ಣಿಯ ಕಾಸು ಹೋಗಲಿ,  ನಮಗೆ ಗಂಜಿಯ ಕಾಸೂ ಆಗುತ್ತಿಲ್ಲಣ್ಣ'  ಎಂದು ಆ ಬಸ್ಸಿನವರಿಗೆ  ಕಾವ್ಯಮಯವಾಗಿ ಹೇಳುತ್ತಿದ್ದರು!  ಆ ಮೇಲೆ ಸ್ವಾಮಿ ತಿಲಕ್ ಬದಲಿಗೆ ನಿತ್ಯಾದರ್ ಹೆಸರಿನ ಬಸ್ ಬಹಳ ಸಮಯ ಪಾಪ್ಯುಲರ್‌ನ ಪ್ರತಿಸ್ಪರ್ಧಿಯಾಗಿ ಓಡಾಡುತ್ತಿತ್ತು.  ನಿತ್ಯಾದರ್ ಬ್ಯಾಟರಿ ವ್ಯವಹಾರದ ಸಂಸ್ಥೆಯಾಗಿದ್ದುದರಿಂದ ಆ ಬಸ್ಸನ್ನು 'ಬ್ಯಾಟರಿ ಬಸ್ಸು' ಎಂದೂ ಹೇಳುತ್ತಿದ್ದರು!  ಈಗ ನಿಜವಾಗಿಯೂ ಬ್ಯಾಟರಿ ಬಸ್ಸೊಂದು ಈ ರೂಟಿಗೆ ಸೇರ್ಪಡೆಯಾಗುತ್ತಿರುವುದು ಕಾಕತಾಳೀಯವೇ ಆಗಿರಬಹುದು!


ಕೆಲವು ವರ್ಷಗಳ ನಂತರ ನಾನು ದ್ವಿಚಕ್ರ ವಾಹನ ಬಳಸತೊಡಗಿದ ಮೇಲೆ ನನ್ನ ಸಿಟಿ ಬಸ್ ಪಯಣ ಕಮ್ಮಿಯಾದ್ದರಿಂದ   ಪಾಪ್ಯುಲರ್ ಬಸ್ಸು ರೂಟ್ 27ನ್ನು ಗಣೇಶ್ ಪ್ರಸಾದ್ ಸಂಸ್ಥೆಗೆ ಬಿಟ್ಟುಕೊಟ್ಟದ್ದು, ಬಸ್ಸುಗಳ ಸಂಖ್ಯೆ ಜಾಸ್ತಿ ಆದದ್ದು ಯಾವಾಗಿನಿಂದ ಎಂದು ನನಗೆ ನೆನಪಿಲ್ಲ. 

ಆದರೆ ಹೆಸರು ಯಾವುದೇ ಇರಲಿ, ಇಂದು ಕೂಡ ರೂಟ್ ನಂಬರ್ 27ರಲ್ಲಿ ಓಡಾಡುವುದು ದುಂಬು ಪೋಲೆ, ಪಿರ ಪೋಲೆ, ಬೇಗ ಬೇಗ, ಆಂಡ  ಮುಂತಾದ ಅರಚಾಟಗಳು, ಕಂಡಕ್ಟರ್ ಮತ್ತು ಕ್ಲೀನರ್  ಇಬ್ಬರೂ ಕಿವಿ ತೂತಾಗುವಂತೆ  ಸೀಟಿ ಊದುವುದು, ಕರ್ಕಶ ಹಾರ್ನ್, ಅತಿ ವೇಗದ ಚಾಲನೆ, over taking, ಮಾರ್ಗ ಮಧ್ಯದಲ್ಲಿ ಕೆಲವೆಡೆ  ದೀರ್ಘ ಅವಧಿಗೆ ಲಂಗರು ಹಾಕುವುದು  ಇತ್ಯಾದಿ ಅಪಸವ್ಯಗಳು ಇಲ್ಲದ ಸಮಾಧಾನಿ ಬಸ್ಸುಗಳು.


- ಚಿದಂಬರ ಕಾಕತ್ಕರ್.

Wednesday, 2 September 2026

ಖಾಸಗಿ ಬಸ್ಸುಗಳು ಮತ್ತು ಏಜಂಟರು.


20ನೆಯ ಶತಮಾನದ  ಆರಂಭದಲ್ಲಿ ಸಾರ್ವಜನಿಕ ಬಸ್ಸು ಸಾರಿಗೆ‌ ಆರಂಭವಾದಾಗ ಯಾವ ಬಸ್ಸು ಎಲ್ಲಿಗೆ ಹೋಗುತ್ತದೆ  ಎಂದು ತಿಳಿಸಿ ಜನರನ್ನು ಒಟ್ಟು ಮಾಡಲು  ಪ್ರತೀ ಊರಲ್ಲಿ ಕಮಿಷನ್ ಆಧಾರದ ಮೇಲೆ ಒಬ್ಬೊಬ್ಬ ಏಜಂಟರನ್ನು  ನಿಯೋಜಿಸುವ ಪದ್ಧತಿ ಆರಂಭವಾಗಿರಬಹುದು.  ಬಸ್ಸುಗಳಲ್ಲಿ ಬೋರ್ಡುಗಳಿದ್ದರೂ ಆ ಕಾಲದಲ್ಲಿ  ಅನಕ್ಷರಸ್ಥರು ಹೆಚ್ಚು ಇದ್ದುದರಿಂದ    ಆಯಾ ಬಸ್ಸು ಬರುವ ಹೊತ್ತಿಗೆ ಅದು ಹಾದು ಹೋಗುವ ಊರುಗಳ ಹೆಸರನ್ನು ಗಟ್ಟಿಯಾಗಿ ಕೂಗುತ್ತಾ, ಬಸ್ಸು ಬಂದೊಡನೆ ತಾನೂ ಅದನ್ನೇರಿ  ಪ್ರಯಾಣಿಕರಿಗೆಲ್ಲ ಟಿಕೆಟ್ ಕೊಟ್ಟು, ಕಂಡಕ್ಟರರ ಟ್ರಿಪ್ ಶೀಟಿನಲ್ಲಿ ಎಂಟ್ರಿ ಮಾಡಿಸಿ,  ಇಳಿಯುವ ಮುನ್ನ 'ಯಾರಿಗಾದರೂ ಚಿಲ್ಲರೆ ಬಾಕಿ ಇದೆಯೇ' ಎಂದು ವಿಚಾರಿಸುವುದು ಅವರ ಕರ್ತವ್ಯವಾಗಿರುತ್ತಿತ್ತು. ದೊಡ್ಡ ಪಟ್ಟಣಗಳ ಮುಂದಿನ ಸ್ಟಾಪ್‌ಗಳಲ್ಲಿ ಸಿಗುವ ಪ್ರಯಾಣಿಕರಿಗೂ ಟಿಕೆಟ್ ಕೊಡಲು   ಏಜಂಟರು  ಊರ ಹೊರಗಿನ ವರೆಗೆ ಬಸ್ಸಿನಲ್ಲೇ ಬರುವ ಪದ್ಧತಿ ಆ ಮೇಲೆ ಆರಂಭವಾಯಿತು.  ಎದುರಿಂದ ಬರುವ ಅದೇ  ಕಂಪನಿಯ ಇನ್ನೊಂದು ಬಸ್ಸಿನಲ್ಲಿ ಅವರು  ಬಸ್ ಸ್ಟೇಂಡಿಗೆ ಮರಳುತ್ತಿದ್ದರು. ಆ ಮೇಲೆ ಮಾರ್ಗ ಮಧ್ಯದಲ್ಲಿ ಹತ್ತಿದ ಪ್ರಯಾಣಿಕರಿಗೆ ಕಂಡಕ್ಟರರೇ ಟಿಕೇಟು ಕೊಡುತ್ತಿದ್ದರು. 

ಸಿ.ಪಿ.ಸಿ, ಪಿ.ವಿ, ಶಂಕರ್ ವಿಠಲ್, ಹನುಮಾನ್ ಮುಂತಾದ ಕಂಪನಿಗಳು ಕಂಬೈಂಡ್ ಬುಕಿಂಗ್ ಏಜನ್ಸಿಯಡಿ ಕಾರ್ಯಾಚರಿಸುತ್ತಿದ್ದರೂ ಆ  ಕಂಪನಿಗಳ ಬಸ್ಸುಗಳಿಗೆ ಏಜಂಟರು ಬೇರೆ ಬೇರೆಯೇ ಇರುತ್ತಿದ್ದರು.  

ಪ್ರಯಾಣಿಕರು  ಸುಶಿಕ್ಷಿತರಾದರೂ, ದೊಡ್ಡ ದೊಡ್ಡ ಕಂಪನಿಗಳ ಕಾಲ ಮುಗಿದು ಒಂದೊಂದೇ ಬಸ್ಸು ಹೊಂದಿರುವವರ ಕಾಲ ಬಂದರೂ ಏಜಂಟರನ್ನು  ನಿಯೋಜಿಸುವ ಪದ್ಧತಿ ತೀರಾ ಇತ್ತಿಚಿನ ತನಕವೂ ಮುಂದುವರಿದಿತ್ತು. 

ವಿದ್ಯಾರ್ಥಿ ದೆಸೆಯಲ್ಲಿ  ಬಸ್ಸುಗಳೊಂದಿಗೆ ಹೆಚ್ಚು ಮುಖಾಮುಖಿಯಾಗುತ್ತಿದ್ದ ಉಜಿರೆಯ ಕೆಲವು ಏಜಂಟರು ನನಗೆ ನೆನಪಿದ್ದಾರೆ. ಶೆಟ್ಟಿ ಬಸ್ಸಿಗೆ ಏಜಂಟರಾಗಿದ್ದ  ತಾಮ್ರದಂಗಡಿಯ ಪಾಂಡುರಂಗರು ಬಸ್ಸಿನ ಬಳಿ ಬಂದು  'ಮಂಗಳೂರು ಯಾರು ಮಂಗಳೂರ್' ಎಂದು ಒಂದು ಸಲ ಮಾತ್ರ ಹೇಳುತ್ತಿದ್ದರು. ಚಾರ್ಮಾಡಿ ಗಡಿಯಿಂದ ಬೇರೆ ಬಸ್ಸಿಗೆ ಕನೆಕ್ಷನ್ ಇದ್ದ ಭಾರತ್ ಬಸ್ಸಿಗೆ ಸೋಡಾ ಅಂಗಡಿ ಇಟ್ಟುಕೊಂಡಿದ್ದ ಉಪೇಂದ್ರ ಪ್ರಭು ಏಜಂಟ್. ನೀಳ ಗಡ್ಡ ಹೊಂದಿದ್ದ  ಅವರನ್ನು ಕಂಡರೆ ನಮಗೆ ಭಯಮಿಶ್ರಿತ ಗೌರವ. ಅವರು ಬಸ್ಸಿನ ಬಾಗಿಲ ಬಳಿ ನಿಂತು ದೂರದ ಪ್ರಯಾಣಿಕರಿಗೆ ಮೊದಲು ಟಿಕೆಟ್ ಕೊಟ್ಟು ಒಳಗೆ ಕಳಿಸಿ  ನಂತರ ಸಮೀಪದ ನಿಡಿಗಲ್, ಮುಂಡಾಜೆಗೆ ಹೋಗುವವರನ್ನು ವಿಚಾರಿಸುತ್ತಿದ್ದರು. ಶಂಕರ್‌ವಿಠಲ್ ಬಸ್ಸುಗಳ ಏಜಂಟ್ ಆಗಿದ್ದವರು ಚಿನ್ನು ಎಂಬವರು. ನಾವು ಶಾಲೆಯಿಂದ ಮರಳುತ್ತಿದ್ದ ಶಾರದಾಂಬಾ ಬಸ್ಸಿಗೂ ಅವರೇ ಏಜಂಟ್.  ವಿದ್ಯಾರ್ಥಿಗಳಿಂದ  ಪೂರ್ತಿ ಚಾರ್ಜ್  ಪಡೆಯುತ್ತಿದ್ದ ಅವರ  ಕಣ್ಣು ತಪ್ಪಿಸಿ   ಕಂಡಕ್ಟರ್ ದೇವಾಡಿಗರಿಂದ ನಾವು ರಿಯಾಯತಿ  ಟಿಕೆಟ್ ಪಡೆಯುತ್ತಿದ್ದೆವು. ಸಿಪಿಸಿ, ಪಿ.ವಿ ಬಸ್ಸುಗಳ ಏಜಂಟರ ಆಫೀಸೇ ಉಜಿರೆಯಲ್ಲಿತ್ತು. ಅವರು ಎಂದೂ ಬಸ್ಸುಗಳ ಬಳಿಗೆ ಬರುತ್ತಿರಲಿಲ್ಲ.  ಬೇಕಿದ್ದರೆ ಅಲ್ಲಿ ಹೋಗಿ ಟಿಕೇಟು ಪಡೆಯಬೇಕಿತ್ತು. ಇಲ್ಲವಾದರೆ ಬಸ್ಸಿನಲ್ಲೇ ಕಂಡಕ್ಟರರಿಂದ ಪಡೆದರೂ ನಡೆಯುತ್ತಿತ್ತು. ಹನುಮಾನ್, ವೆಂಕಟೇಶ್, ಆಂಜನೇಯ, ಕೃಷ್ಣಾ express, ಜಯಪದ್ಮ, CKMS  ಮುಂತಾದ ಬಸ್ಸುಗಳಿಗೆ  ಉಜಿರೆಯಲ್ಲಿ ಏಜಂಟರಿರಲಿಲ್ಲ ಎಂದು ನನ್ನ ನೆನಪು.

ನಾನೊಮ್ಮೆ ಕಾರ್ಕಳದಿಂದ ಮಂಗಳೂರಿಗೆ ಪ್ರಯಾಣಿಸಿದ ಖಾಸಗಿ ಬಸ್ಸಿನ ಹಿರಿಯ ವಯಸ್ಸಿನ ಸಮಾಧಾನಿ  ಕಂಡಕ್ಟರರೊಡನೆ ಲೋಕಾಭಿರಾಮವಾಗಿ ಮಾತನಾಡುವಾಗ 'ಇತ್ತೀಚೆಗೆ ಬಸ್ಸುಗಳಲ್ಲಿ  ಏಜಂಟರೇಕೆ ಕಾಣ್ತಿಸ್ತಿಲ್ಲ' ಎಂದು ವಿಚಾರಿಸಿದೆ.  ETM, ಅಂದರೆ ಎಲೆಕ್ಟ್ರಾನಿಕ್ ಟಿಕೆಟ್ ಮಷೀನುಗಳು ಬಂದ ಮೇಲೆ ಏಜಂಟರು ಟಿಕೆಟ್ ಕೊಡುವ ಪದ್ಧತಿ ನಿಂತಿದೆ, ಜನರನ್ನು ಕೂಗಿ ಕರೆಯವುದು  ಮಾತ್ರ ಈಗ ಅವರ ಕೆಲಸ ಎಂದು ಅವರು  ಹೇಳಿದರು.  ಈಗ ಬಸ್ಸುಗಳ ಸಂಖ್ಯೆ ಜಾಸ್ತಿ ಆಗಿರುವುದರಿಂದ ಜನರನ್ನು ಕರೆಯುವ ಏಜಂಟರಿಗಿಂತ ಸಮಯ ಪಾಲನೆ ಮಾಡುವಂತೆ ನೋಡಿಕೊಳ್ಳುವ ಟೈಮ್ ಕೀಪರುಗಳ ಪ್ರಾಮುಖ್ಯ ಜಾಸ್ತಿ ಆಗಿದೆ ಎಂದೂ ಹೇಳಿದರು.