Friday 3 June 2016

ಹೆಚ್ಚು ಹಾಡದವರು





     50-60ರ ದಶಕಗಳಲ್ಲಿ ಘಂಟಸಾಲ, ಪಿ.ಬಿ.ಶ್ರೀನಿವಾಸ್, ಎಸ್.ಜಾನಕಿ, ಪಿ.ಸುಶೀಲ ಅವರು ಮುಖ್ಯ ಗಾಯಕರಾಗಿದ್ದು ಎಲ್.ಆರ್.ಈಶ್ವರಿ, ಪಿ.ಲೀಲ, ಪೀಠಾಪುರಂ ನಾಗೇಶ್ವರ ರಾವ್, ಬಿ.ಕೆ.ಸುಮಿತ್ರ, ಜೇಸುದಾಸ್ ಮುಂತಾದವರು ಕೂಡ ಸಂದರ್ಭಕ್ಕೆ ತಕ್ಕಂತೆ ಸಾಕಷ್ಟು ಹಾಡುಗಳನ್ನು ಹಾಡುತ್ತಿದ್ದರು.   ಇವರಷ್ಟೇ ಅಲ್ಲದೆ ಆ ಕಾಲದಲ್ಲಿ ಕೇವಲ ಬೆರಳೆಣಿಕೆಯ ಹಿಟ್ ಹಾಡುಗಳನ್ನು ಹಾಡಿದ ಗಾಯಕ ಗಾಯಕಿಯರ ದೊಡ್ಡ ಗಡಣವೇ ಇತ್ತು. ಇವರಲ್ಲಿ ಹೆಚ್ಚಿನವರು ಕನ್ನಡಿಗರಾಗಿರಲಿಲ್ಲ.  ಆದರೂ ಎಷ್ಟೋ ಹುಟ್ಟು ಕನ್ನಡಿಗರಿಂದ ಹೆಚ್ಚು ಶುದ್ಧವಾಗಿ ಸ್ಪಷ್ಟವಾಗಿ ಕನ್ನಡ ಪದಗಳನ್ನು ಉಚ್ಚರಿಸುತ್ತಿದ್ದರು.  ಇವರ ಬಗ್ಗೆ ಚರ್ಚೆ ನಡೆದದ್ದಾಗಲೀ, ಪತ್ರಿಕೆಗಳಲ್ಲಿ ಲೇಖನಗಳು ಬಂದದ್ದಾಗಲೀ ಕಮ್ಮಿ. ಮುಂದೆ 70ರ ದಶಕದ ಮಧ್ಯಭಾಗದಲ್ಲಿ ಎಸ್.ಪಿ. ಬಾಲಸುಬ್ರಹ್ಮಣ್ಯಂ - ವಾಣಿ ಜಯರಾಂ ಯುಗ ಆರಂಭವಾದ ಮೇಲಂತೂ ಇವರೆಲ್ಲ ಪೂರ್ತಿ ಹಿನ್ನೆಲೆಗೆ ಸರಿದು ಹೋದರು. ಏಕತಾನತೆಯನ್ನು ಹೋಗಲಾಡಿಸುವಲ್ಲಿ ಸಹಕಾರಿಯಾಗಿದ್ದ ಅಂಥ ಹೆಚ್ಚು ಹಾಡದ ಪ್ರತಿಭಾನ್ವಿತರ ಬಗ್ಗೆ ಒಂದಷ್ಟು ನೆನಪು ಮಾಡಿಕೊಳ್ಳೋಣ.

1. ಎ.ಪಿ.ಕೋಮಲ

ದಾರಿ ತಪ್ಪಿದ ಮಗ ಚಿತ್ರದ ಕಾಪಾಡು ಶ್ರೀ ಸತ್ಯ ನಾರಾಯಣ ಹಾಡು ನೀವು ಕೇಳಿದ್ದೀರಾದರೆ ಪಿ.ಬಿ.ಎಸ್ ಮತ್ತು ಎಸ್.ಜಾನಕಿ ಅವರೊಂದಿಗೆ ಇವರ ಧ್ವನಿಯನ್ನೂ ನೀವು ಕೇಳಿದ್ದೀರಿ.  ರಣಧೀರ ಕಂಠೀರವ ಚಿತ್ರದ ರತಿ ಸುಖ ಸಾರೆ ಎಂಬ ಜಯದೇವ ಅಷ್ಟಪದಿ, ಭೂಕೈಲಾಸ ಚಿತ್ರದ ಈ ದೇಹ ಮೂರು ದಿನ ಅಲ್ಲವೇನೋ, ಓಹಿಲೇಶ್ವರನೀ ಎನ್ನ ಜೀವ ಶರಣು ಮಹಾದೇವ, ಕಿತ್ತೂರು ಚೆನ್ನಮ್ಮಆಲಕ್ಕೆ ಹೂವಿಲ್ಲ ಇವರು ಹಾಡಿದ ಇನ್ನು ಕೆಲವು ಹಾಡುಗಳು. ಸತಿ ಶಕ್ತಿ ಚಿತ್ರಕ್ಕಾಗಿ ಟಿ.ಜಿ.ಲಿಂಗಪ್ಪ ಸಂಗೀತ ನಿರ್ದೇಶನದಲ್ಲಿ ಅವರು ಹಾಡಿದ ಮಾತೆಗೆ ಮಿಗಿಲಾದ ದೇವರಿಲ್ಲ ಎಂಬ  ಸುಂದರ ಹಾಡು ಇಲ್ಲಿದೆ.



2. ಜಿಕ್ಕಿ

ಇವರ ನಿಜ ನಾಮಧೇಯ ಪಿ.ಜಿ.ಕೃಷ್ಣವೇಣಿ ಎಂದಾದರೂ ಜಿಕ್ಕಿ ಎಂದೇ ಪ್ರಸಿದ್ಧರು.  ಭಕ್ತ ಕನಕದಾಸಬಳ್ಳಿ ಬಳ್ಳಿಯಲ್ಲಿ ಹೂವ ನೋಡೇ ಹೆಣ್ಣೆ ಇವರ  ಪ್ರಸಿದ್ಧ ಹಾಡು. ಹಿಂದಿಯ  ಕುಹೂ ಕುಹೂ ಬೋಲೆ ಕೊಯಲಿಯಾದ ಮೂಲ ತೆಲುಗು ಹಾಡನ್ನು ಘಂಟಸಾಲ ಜೊತೆಗೆ ಇವರೇ ಹಾಡಿದ್ದು.. ಮನೆ ತುಂಬಿದ ಹೆಣ್ಣು ಚಿತ್ರಕ್ಕಾಗಿ ರಾಜನ್ ನಾಗೇಂದ್ರ ಸಂಗೀತ ನಿರ್ದೇಶನದಲ್ಲಿ ಅವರು ಹಾಡಿದ  ಝಣ ಝಣ ತಕತಾ ಎಂಬ ಹಾಡನ್ನು ಈಗ ಕೇಳಿ.



3. ಸೂಲಮಂಗಲಂ ರಾಜಲಕ್ಷ್ಮಿ

ಸೂಲಮಂಗಲಂ ಸಹೋದರಿಯರು ಎಂದು ಭಕ್ತಿಗೀತೆಗಳ ಸಾಮ್ರಾಜ್ಯದಲ್ಲಿ ಖ್ಯಾತರಾದ ಜಯಲಕ್ಷ್ಮಿ ಮತ್ತು ರಾಜಲಕ್ಷ್ಮಿ ಅವರ ಪೈಕಿ ಸಿನಿಮಾ ರಂಗದಲ್ಲಿ ಹೆಚ್ಚು ಮಿಂಚಿದ್ದು ರಾಜಲಕ್ಷ್ಮಿ. ಇವರು ಹಾಡಿದ ಸೇವಂತಿಗೆ ಚೆಂಡಿನಂಥ ಮುದ್ದು ಕೋಳಿ ಹಾಡನ್ನು ಕೇಳದವರು, ಕೇಳಿ ಮೆಚ್ಚದವರು ಇರಲಾರರು. ವಿಶೇಷವೆಂದರೆ ಕನ್ನಡ ಚಿತ್ರ ರಂಗದಲ್ಲಿ ಇವರ ಪ್ರತಿಭೆಯನ್ನು ಹೆಚ್ಚು ಬಳಸಿಕೊಂಡವರು ಟಿ.ಜಿ.ಲಿಂಗಪ್ಪ ಮಾತ್ರ. ಪಂತುಲು ಅವರ ಶ್ರೀ ಕೃಷ್ಣ ದೇವರಾಯ ಚಿತ್ರದ ಕೃಷ್ಣನ ಹೆಸರೇ ಲೋಕಪ್ರಿಯ ಹಾಡಲ್ಲೂ ಟಿ.ಜಿ.ಲಿಂಗಪ್ಪ ಅವರು ರಾಜಲಕ್ಷ್ಮಿ ಅವರ ಧ್ವನಿಯನ್ನು ಬಳಸಿಕೊಂಡಿದ್ದರು. ಸ್ಕೂಲ್ ಮಾಸ್ಟರ್ ಚಿತ್ರದ ಭಾಮೆಯ ನೋಡಲು ತಾ ಬಂದ ಇವರು ಹಾಡಿದ ಇನ್ನೊಂದು ಬಲು ಪ್ರಸಿದ್ಧ ಹಾಡು.  ಅದೇ ಚಿತ್ರದ ಇನ್ನೇನು ಆನಂದ ಬೇಕಾಗಿದೆ ಎಂಬ ಮಧುರ ಹಾಡು ನಿಮಗಾಗಿ.



4. ಕೆ.ಜಮುನಾರಾಣಿ

ಪ್ರತಿಜ್ಞೆ ಚಿತ್ರದಲ್ಲಿ ಪೀಠಾಪುರಂ ನಾಗೇಶ್ವರ ರಾವ್ ಅವರೊಂದಿಗೆ ಹಾಡಿದ ನಾ ನಿನ್ನ ಮೋಹಿಸೆ ಬಂದಿಹೆನು ಇವರ ಪ್ರಸಿದ್ಧ ಹಾಡುಗಳ ಪೈಕಿ ಒಂದು.  ಆದರೆ ನಾನು ಇಲ್ಲಿ ಕೇಳಿಸಲಿರುವುದು ವಿಜಯನಗರದ ವೀರ ಪುತ್ರ ಚಿತ್ರಕ್ಕಾಗಿ ಇವರು ಹಾಡಿದ ವಿಶ್ವನಾಥನ್ ರಾಮಮೂರ್ತಿ ಅವರ ವೈಶಿಷ್ಟ್ಯಪೂರ್ಣ ರಾಗಸಂಯೋಜನೆಯುಳ್ಳ ವೈಯಾರ ತೋರುತ ಸಿಂಗಾರ ಬೀರುತ ಎಂಬ ಹಾಡು.  Youtubeನಲ್ಲಿ ಲಭ್ಯವಿರುವ ಈ ಚಿತ್ರದಲ್ಲಿ ಆರ್. ನಾಗೇಂದ್ರ ರಾವ್ ಅವರ ಮೇಲೆ ಚಿತ್ರಿತವಾದ ಈ dream sequence ಹಾಡನ್ನು ನೋಡಬಹುದು.  ನಾನು ಕೇಳಿಸಲಿರುವ ಹಾಡಲ್ಲಿ ಚಿತ್ರದಲ್ಲಿಲ್ಲದ ಒಂದು ಚರಣ ಇದೆ.



5. ಸ್ವರ್ಣಲತಾ

70ರ ದಶಕದ ನಂತರ ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದ ಇದೇ ಹೆಸರಿನ ಇನ್ನೊಬ್ಬ ಗಾಯಕಿಯೂ ಇದ್ದರು. ಇಲ್ಲಿ ಚರ್ಚಿಸುತ್ತಿರುವುದು ಹಳೆಯ ಕಾಲದ ಸ್ವರ್ಣಲತಾ ಬಗ್ಗೆ. ಕನ್ನಡದಲ್ಲಿ ಇವರು ಹಾಡಿದ್ದು ಬಲು ಕಮ್ಮಿ.  ಆದರೆ ಹಾಡಿದ್ದಷ್ಟೂ ಸೂಪರ್ ಹಿಟ್.  ಒಂದು ಉದಾಹರಣೆ ಮಾಯಾ ಬಜಾರಿಆಹಾ ನನ್ ಮದ್ವೆಯಂತೆ.  ಇನ್ನೊಂದು ಸತ್ಯಹರಿಶ್ಚಂದ್ರ ಚಿತ್ರದ  ನನ್ನ ನೀನು ನಿನ್ನ ನಾನು.  ರೇಡಿಯೊದಲ್ಲಿ ಕೇಳಿಬರುತ್ತಿದ್ದ 78 rpm ಧ್ವನಿಮುದ್ರಿಕೆಯ ಈ ಹಾಡಲ್ಲಿ ಮಳೆಗಾಲ ಮಾಡಿಗಿಳಿದು ಬರಲಾರೆ ಮೆಲ್ಲನೆ ಬಾರಯ್ಯ ಗೋಡೆ ಏರಿ ಎಂಬ ಸಾಲು ಇತ್ತು.  ಆದರೆ ಈಗ ಲಭ್ಯವಿರುವ versionನಲ್ಲಿ  ಆ ಸಾಲು ಮಾಯವಾಗಿದೆ. 



6. ಶ್ರೀರಂಗಂ ಗೋಪಾಲರತ್ನಂ

ಶಾಸ್ತ್ರೀಯ ಹಾಡುಗಾರರಾದ ಇವರು ಚಲನಚಿತ್ರಕ್ಕಾಗಿ ಹಾಡಿದ್ದು ಒಂದೇ ಹಾಡು.  ಆದರೆ ಅದೊಂದೇ ನೂರಕ್ಕೆ ಸಮ.  ಅದೇ ಸುಬ್ಬಾ ಶಾಸ್ತ್ರಿ ಚಿತ್ರದ ಕೃಷ್ಣನ ಕೊಳಲಿನ ಕರೆಪು.ತಿ.ನ ಅವರು ಗೋಕುಲ ನಿರ್ಗಮನ ನಾಟಕಕ್ಕಾಗಿ ರಚಿಸಿದ ಈ ಗೀತೆಯನ್ನು ಚಿತ್ರಕ್ಕಾಗಿ ಸಂಗೀತಕ್ಕೆ ಅಳವಡಿಸಿದವರು ವೀಣಾ ವಿದ್ವಾನ್ ದೊರೆಸ್ವಾಮಿ ಅಯ್ಯಂಗಾರ್. ಈ ಹಾಡಿಗೆ ಸಂಬಂಧಿಸಿದವರು ಯಾರೂ ಚಲನಚಿತ್ರರಂಗದ ವೃತ್ತಿಪರರಲ್ಲದಿದ್ದರೂ ಚಿತ್ರಸಂಗೀತದ ಮೂಲ ಲಕ್ಷಣಗಳಾದ ಅಚ್ಚುಕಟ್ಟುತನ, ಸ್ಪಷ್ಟತೆ, ಸುಶ್ರಾವ್ಯತೆ ಎಲ್ಲವೂ ಈ ಹಾಡಿನಲ್ಲಿ ಮೇಳೈಸಿರುವುದು ಅಚ್ಚರಿ ಹುಟ್ಟಿಸುತ್ತದೆ.



7. ಟಿ.ಜಿ.ಲಿಂಗಪ್ಪ

ಸಂಗೀತ ನಿರ್ದೇಶಕರ ಹೆಸರು ಇಲ್ಲೇಕೆ ಬಂತು ಎಂದು ಅಚ್ಚರಿಗೊಂಡಿರಾ?  ಸ್ಕೂಲ್ ಮಾಸ್ಟರ್ ಚಿತ್ರದ ಸ್ವಾಮಿ ದೇವನೆ ಲೋಕಪಾಲನೆ ಹಾಡು ನೀವು ಕೇಳಿರುತ್ತೀರಾದರೂ ಅದನ್ನು ಟಿ.ಜಿ. ಲಿಂಗಪ್ಪ ಅವರು ಸ್ವತಃ ಹಾಡಿದ್ದು ಎಂದು ಅನೇಕರಿಗೆ ಗೊತ್ತಿರಲಾರದು.  (ಇದೇ ಹಾಡನ್ನು ಪಂತುಲು ಅವರ ಕಿತ್ತೂರು ಚೆನ್ನಮ್ಮ ಚಿತ್ರದಲ್ಲೂ ಆರಂಭದ ಶಾಲಾ ಪ್ರಾರ್ಥನೆ ದೃಶ್ಯದಲ್ಲಿ ಬಳಸಿಕೊಳ್ಳಲಾಗಿತ್ತು.)  ಸ್ಕೂಲ್ ಮಾಸ್ಟರ್ ಚಿತ್ರದ ರಾಧಾ ಮಾಧವ ವಿನೋದ ಹಾಸ ಮತ್ತು ಈಗ ನೀವು ಕೇಳಲಿರುವ ಸೊಂಪಾದ ಸಂಜೆವೇಳೆ ಹಾಡುಗಳನ್ನೂ ಪಿ.ಸುಶೀಲ ಜೊತೆ ಅವರೇ ಹಾಡಿದ್ದು.  ಬಹುಶಃ ಇದು ಮೌತ್ ಆರ್ಗನ್ ಬಳಕೆಯಾದ ಕನ್ನಡದ ಮೊದಲ ಹಾಡು. ಮುಂದೆ ಬೆಟ್ಟದ ಹುಲಿ ಚಿತ್ರದ ಆಡುತಿರುವ ಮೋಡಗಳೆ ಮತ್ತು ದೇವರ ಗುಡಿ ಚಿತ್ರದ ಚೆಲುವೆಯ ಅಂದದ ಮೊಗಕೆ ಹಾಗೂ ಮಾಮರವೆಲ್ಲೋ ಹಾಡುಗಳು ಬಿಟ್ಟರೆ ಕನ್ನಡದಲ್ಲಿ ಮೌತ್ ಆರ್ಗನ್ ಕೇಳಿಬಂದದ್ದು ಕಮ್ಮಿ.  ಟಿ.ಜಿ. ಲಿಂಗಪ್ಪನವರ ಗಾಯನ ಪ್ರತಿಭೆ ಒಂದೇ ಚಿತ್ರಕ್ಕೆ ಸೀಮಿತವಾಗಲು ಕಾರಣವೇನೆಂದು ತಿಳಿದಿಲ್ಲ.  ಬಿ.ಆರ್.ಪಂತುಲು ಅವರು ಜೀವಂತವಿರುವವರೆಗೆ ಪದ್ಮಿನಿ ಪಿಕ್ಚರ್ಸ್‌ನ ಎಲ್ಲ ಕನ್ನಡ ಚಿತ್ರಗಳಿಗೂ  ಸಂಗೀತ ನಿರ್ದೇಶನ ಮಾಡಿದ್ದು ಅವರ ಇನ್ನೊಂದು ಹೆಗ್ಗಳಿಕೆ.



8. ನಾಗೇಂದ್ರ

ರಾಜನ್ ನಾಗೇಂದ್ರ ಜೋಡಿಯ ನಾಗೇಂದ್ರ ಒಳ್ಳೆಯ ಗಾಯಕರೂ ಹೌದು.  ರತ್ನ ಮಂಜರಿಯಾರು ಯಾರು ನೀ ಯಾರು ಇವರ ಸೂಪರ್ ಹಿಟ್ ಹಾಡು.  ನರಸಿಂಹರಾಜು ಅವರಿಗಾಗಿ ಬಹಳಷ್ಟು ಹಾಡುಗಳನ್ನು ಹಾಡಿದ ಇವರು ತಮ್ಮ ಸಂಗೀತ ನಿರ್ದೇಶನದ ಚಿತ್ರಗಳು ಮಾತ್ರವಲ್ಲದೆ ಪೆಂಡ್ಯಾಲ ನಾಗೇಶ್ವರ ರಾವ್ ಸಂಗೀತದ ಸತ್ಯ ಹರಿಶ್ಚಂದ್ರ ಚಿತ್ರದಲ್ಲಿ ಕಾಲ ಕೌಶಿಕನ ಮುಂದೆ ಎಂಬ ಹಾಡು ಮತ್ತು ವಿಜಯಾ ಕೃಷ್ಣಮೂರ್ತಿ ಸಂಗೀತದಲ್ಲಿ ಜೇನುಗೂಡು ಚಿತ್ರಕ್ಕಾಗಿ ಹಾ ಪ್ರಿಯಾ ಕೈಲಾಸ ನಿಲಯಾ ಎಂಬ ಹಾಡನ್ನೂ ಹಾಡಿದ್ದಾರೆ.  ಕಲ್ಯಾಣ್ ಕುಮಾರ್ ಅಭಿನಯದ ಮುತ್ತೈದೆ ಭಾಗ್ಯ ಚಿತ್ರದ ನಮ್ಮೂರೆ ಚಂದ ಹಾಡು ಬಲು ಪ್ರಸಿದ್ಧ.  ಅದೇ ಚಿತ್ರದ ನಾನೊಂದು ಮದುವೆಯ ಮಾಡಿಕೊಂಡೆ ಎಂಬ ನೀವು ಇದುವರೆಗೆ ಕೇಳಿರಲಾರದ ಹಾಡೊಂದು ಇಲ್ಲಿದೆ.



9. ಟಿ.ಎ.ಮೋತಿ

ಬಂಗಾರದ ಮನುಷ್ಯ ಚಿತ್ರದ ಟೈಟಲ್ ಕಾರ್ಡಲ್ಲಿ ಗಾಯಕರ ಪಟ್ಟಿಯಲ್ಲಿ ಇವರ ಹೆಸರನ್ನೂ ನೀವು ನೋಡಿರುತ್ತೀರಿ.  ಅನೇಕ ಗಾಯಕ ಗಾಯಕಿಯರು ಒಟ್ಟು ಸೇರಿ ಹಾಡಿದ ಆ ಚಿತ್ರದ ಹನಿ ಹನಿ ಗೂಡ್ದ್ರೆ ಹಳ್ಳ ಎಂಬ ಹಾಡಿನ ಆರಂಭದ ಸಾಲುಗಳನ್ನು  ಎಂ.ಪಿ.ಶಂಕರ್ ಅವರಿಗಾಗಿ ಹಾಡಿರುವುದು ಇವರೇ. (ಅನೇಕ ಗಾಯಕರಿದ್ದುದರಿಂದ ಗೊಂದಲವುಂಟಾಗಿ ಮುಂದೆ ಎಸ್.ಪಿ.ಬಿ ಧ್ವನಿಗೂ ಎಂ.ಪಿ.ಶಂಕರ್ ಅವರು lip sync ಮಾಡಿರುವುದನ್ನು ಈ ಹಾಡಿನ ವೀಡಿಯೊದಲ್ಲಿ ಗಮನಿಸಬಹುದು!). ಬೇಡರ ಕಣ್ಣಪ್ಪ ಚಿತ್ರದ ಮಾಯೆಗೆ ಸಿಲುಕಿ ಮರುಳಾದೆ ಮನುಜ, ಕನ್ಯಾರತ್ನ ಚಿತ್ರದ ಮೈಸೂರ್ ದಸರಾ ಬೊಂಬೆ , ಮಧುಮಾಲತಿ ಚಿತ್ರದ ಷೋಡಶಿ  ಷೋಡಶಿ  ಇವರು ಹಾಡಿದ ಇನ್ನು ಕೆಲವು ಹಾಡುಗಳು. ದೂರದ ಬೆಟ್ಟ ಚಿತ್ರದ ಟೈಟಲ್ಸ್ ನಲ್ಲಿಯೂ ಗಾಯಕರಾಗಿ ಇವರ ಹೆಸರು ದಾಖಲಾಗಿದೆ.  ಬಹುಶಃ ಆ ಚಿತ್ರದ ಹೋಳಿ ಹಾಡನ್ನು ಗಮನವಿಟ್ಟು ಕೇಳಿದರೆ ಎಲ್ಲಾದರೂ ಇವರ ಧ್ವನಿಯನ್ನು ಗುರುತಿಸಬಹುದೇನೋ.  ಆದರೆ ಇವರ ಪೂರ್ಣ ಪ್ರತಿಭೆ ಅನಾವರಣಗೊಂಡದ್ದು  ಕಲಾವತಿ  ಚಿತ್ರದಲ್ಲಿ.  ಆ ಚಿತ್ರದ ಗಾನ ನಾಟ್ಯ ರಸಧಾರೆ ಹಾಡು ಹೇಗಿದೆ ನೋಡಿ.  ಅವರು ಹಾಡಿದ ಹೆಚ್ಚಿನ ಚಿತ್ರಗಳು ಜಿ.ಕೆ.ವೆಂಕಟೇಶ್ ಸಂಗೀತ ನಿರ್ದೇಶನ ಇದ್ದವುಗಳು.



10. ಆರ್.ನಾಗೇಂದ್ರ ರಾವ್

ಪ್ರಸಿದ್ಧ ನಿರ್ಮಾಪಕ ನಿರ್ದೇಶಕರಾದ ಇವರೂ  ಸ್ವತಃ ಹಾಡುತ್ತಿದ್ದರೆಂಬ ವಿಷಯ ನಿಮಗೆ ಗೊತ್ತಿತ್ತೇ.  ವಸಂತಸೇನಾ ಚಿತ್ರದಲ್ಲಿ ಕಾಮನು ಕಾಡುವ ಕೋತಿಯ ಹಾಗೆ ಎಂಬ ಹಾಡು ಇವರು ಹಾಡಿದ್ದರಂತೆ.  60ರ ದಶಕದ ಆನಂದಬಾಷ್ಪ ಚಿತ್ರದಲ್ಲೂ ಇವರು ಹಾಡಿದ ಬಾರೋ ಬಾರೋ ಎಲೆ ಮಗುವೆ ಎಂಬ ಹಾಡೊಂದಿತ್ತು.  ಅದನ್ನೀಗ ಕೇಳಿ.



     ಈ ಪಟ್ಟಿ ಪ್ರಾತಿನಿಧಿಕ ಮಾತ್ರ. ಜಿ.ಕೆ.ವೆಂಕಟೇಶ್(ಕನ್ನಡದ ಮಕ್ಕಳೆಲ್ಲ ಒಂದಾಗಿ ಬನ್ನಿ, ಆಡಿಸಿದಾತ ಬೇಸರ ಮೂಡಿ, ವಿರಸವೆಂಬ ವಿಷಕೆ), ರಘುನಾಥ ಪಾಣಿಗ್ರಾಹಿ(ಪ್ರೇಮವೇ ದೈವ), ಎ.ಎಂ.ರಾಜಾ(ಅತಿಮಧುರ ಅನುರಾಗ) , ಮಾಧವಪೆದ್ದಿ ಸತ್ಯಂ(ವಿವಾಹ ಭೋಜನವಿದು), ಜೆ.ವಿ.ರಾಘವುಲು(ಜಿಗಿಜಿಗಿಯುತ ನಲಿ), ಟಿ.ಆರ್.ಜಯದೇವ್(ನಿಲ್ಲೆ ಗೊಲ್ಲರು ಬಾಲೆ ನಿಲ್ಲೆ),  ಮನಮೋಹನ ಠಾಕೂರ್(ದಾರಿಲಿ ನಿಂತಿಹುದೇಕೆ ಓ ಚೆನ್ನಯ್ಯ), ಶಿರ್ಕಾಳಿ ಗೋವಿಂದರಾಜನ್(ರಾಮನ ಅವತಾರ), ಟಿ.ಎಮ್. ಸೌಂದರರಾಜನ್(ಚಿನ್ನ ಕೇಳ್ಬ್ಯಾಡ್ವೆ ನನ್ನ ಪುರಾಣ),  ಸಿ.ಎಸ್.ಜಯರಾಮನ್(ಶಿವಪ್ಪ ಕಾಯೊ ತಂದೆ), ವಿ.ಗೋಪಾಲಂ(ಶ್ರಾದ್ಧದೂಟ ಸುಮ್ಮನೆ), ಹೊನ್ನಪ್ಪ ಭಾಗವತರ್(ಮಹಾಕವಿ ಕಾಳಿದಾಸ), ಎಂ.ಎಲ್.ವಸಂತಕುಮಾರಿ(ನಮೋ ನಮೋ ನಟರಾಜ ನಮೋ),  ರಾಮಚಂದ್ರ ರಾವ್(ದೋಣಿ ಸಾಗಲಿ), ಆರ್.ಎನ್.ಸುದರ್ಶನ್(ಇರಬೇಕು ಅರಿಯದ ಕಂದನ ತರಹ, ಹೂವೊಂದು ಬಳಿ ಬಂದು) , ಪಿ.ಕಾಳಿಂಗ ರಾವ್(ಅಂಥಿಂಥ ಹೆಣ್ಣು ನೀನಲ್ಲ, ತಾಯಿ ದೇವಿಯನು ಕಾಣೆ ಹಂಬಲಿಸಿ, ಓಂ ನಮೋ ನಾರಾಯಣ), ಬಾಲಮುರಳಿಕೃಷ್ಣ(ನಟವರ ಗಂಗಾಧರ) , ಭೀಮಸೇನ್ ಜೋಶಿ(ನಂಬಿದೆ ನಿನ್ನ ನಾದ ದೇವತೆಯೆ),  ಹೆಚ್.ಎಮ್.ಮಹೇಶ್(ಗಂಧದ ನೆರಿಗ್ಯೋಳೆ), ರವೀ(ಸೂರ್ಯಂಗೂ ಚಂದ್ರಂಗೂ, ಇಲ್ಲೇ ಸ್ವರ್ಗ ಇಲ್ಲೇ ನರಕ, ಯೌವನದ ಹೊಳೆಯಲ್ಲಿ), ಸತ್ಯವತಿ(ಹಾಡು ಬಾ ಕೋಗಿಲೆ), ಬೆಂಗಳೂರು ಲತಾ(ಚಂದ್ರಮುಖಿ ಪ್ರಾಣಸಖಿ)), ಬಿ.ವಸಂತ(ಮಲ್ಲಿಗೆ ಹೂವಿನಂಥ ಮೈಯಿನೋಳೆ), ಎಲ್.ಆರ್.ಅಂಜಲಿ(ಗುಡಿಯೊಳಿರುವ ಶಿಲೆಗಳೆಲ್ಲ), ಎಂ.ಎಸ್.ಪದ್ಮ(ಸಲ್ಲದೆಲೆ ಶಾಮನೆ ಈ ಸರಸ ),  ರಾಧಾ ಜಯಲಕ್ಷ್ಮಿ(ಭಾಗ್ಯದಾ ಲಕ್ಷ್ಮಿ ಬಾರಮ್ಮ), ಸಿ.ಕೆ.ರಮಾ(ಸಿರಿವಂತನಾದರೂ ಕನ್ನಡ ನಾಡಲ್ಲಿ), ಕಸ್ತೂರಿ ಶಂಕರ್(ರಂಗೇನ ಹಳ್ಳಿಯಾಗೆ), ರೇಣುಕ(ನನ್ಯಾಕೆ ನೀ ಹಾಗೆ)  ಮುಂತಾದ  ಇನ್ನೂ ಎಷ್ಟೋ ಮಂದಿ ಕನ್ನಡ ಚಿತ್ರಗಳಲ್ಲಿ ಹೆಚ್ಚು ಹಾಡದೆಯೂ  ಗಾಯಕರಾಗಿ ತಮ್ಮ ಹೆಜ್ಜೆ ಗುರುತು ಮೂಡಿಸಿದವರಿದ್ದಾರೆ.

     ಇಲ್ಲಿರುವ ಮಾಹಿತಿ ಸಮಗ್ರವಲ್ಲ ಮತ್ತು 70ರ ದಶಕದ ಮಧ್ಯಭಾಗದವರೆಗಿನ ಕಾಲಮಿತಿಗೆ  ಸೀಮಿತ.

10 comments:

  1. ಹೆಚ್ಚು ಹಾಡದವರು ... ಅಂದರೆ ಕನ್ನಡ ಹಾಡುಗಳನ್ನು ಹೆಚ್ಚು ಹಾಡದವರ ಪ್ರಾತಿನಿಧಿಕ ಪಟ್ಟಿ - ಅತ್ಯುತ್ತಮ ಮಾಹಿತಿ , ಕಷ್ಟ ಪಟ್ಟು ಸಂಗ್ರಹಿಸಿರುವ ಸಮಗ್ರ ವಿವರ , ಕೆಲವು ಗೀತೆಗಳ ಲಿಂಕುಗಳು - ಯನ್ನು ಕೊಟ್ಟು ತಾವೇನೋ ಸುಖ ನಿದ್ರೆಗೆ ಜಾರಿದಿರೇನೋ ?! ............. ನನ್ನ ನಿದ್ರೆಯಂತೂ ದೂರ ಉಳಿಯಿತು !! [ ' ನಮ್ಮ ಕಡೆ ತಲೆಗೆ ಹುಳ ಬಿಡುವುದು ' ಎನ್ನುತ್ತಾರೆ , ಬಹುಶಃ ಇದೇ ಇರಬೇಕು !!! ] ...... ನಿಜಕ್ಕೂ ಹಳೇ ಹಾಡುಗಳ ಮೆಲುಕು , ಅವುಗಳ ಹಿಂದೆ-ಮುಂದೆಯ ನೆನಪುಗಳು .... ವಾಹ್ ... ಎಂತಾ ಸುಖವಲ್ಲವೇ ?! ............ ನಿಧಾನವಾಗಿ ಓದುತ್ತಾ , ಹಾಡುಗಳನ್ನು ಕೇಳುತ್ತಾ ಸ್ವಲ್ಪ ಕಳೆದೂ ಹೋದೆ ... ನಂತರ ನೋಡುವಾ ! ನನಗೇನಾದರೂ ಈ ಪಟ್ಟಿಯಲ್ಲಿಲ್ಲದ್ದನ್ನು ಸೇರಿಸಲು ಅವಕಾಶ ಕೊಡಬಹುದೇ ಈ ಚಿದಂಬರ್ ಸರ್ ಎಂದು ಮುಂದುವರೆದೆ !......................................................................... [ ಸ್ವಲ್ಪ 79 - 83 ರ ಕಾಲೇಜಿನ ದಿನಗಳ ನೆನಪೂ ಬಂತು .... ಅದೆಂದರೆ .... ಎಲ್ಲಾ ತರದ ಹಾಡು ಹೇಳುವ ಸ್ಪರ್ಧೆಗಳಿಗೆ ಹೆಸರು ಕೊಟ್ಟಾಗಿರುತ್ತಿತ್ತು , ಕನ್ನಡವೋ , ತಮಿಳೋ , ಹಿಂದಿಯೋ , ಭಾವಗೀತೆಗಳೋ , ಸಿನೆಮಾ ಗೀತೆಗಳೋ ... ಒಟ್ಟಾರೆ ಸ್ಪರ್ಧಿಗಳ ಪಟ್ಟಿಯಲ್ಲಿ ಹೆಸರಿರುತ್ತಿತ್ತು ! ..... ಆಗೇನು ಈಗಿನ ತರಹದ ಕಂಪ್ಯೂಟರ್, ಆ ಪಾಡ್, ಈ ಪ್ಯಾಡ್ , ಸೀಡಿ, ಡೀವೀಡಿ , ಕ್ಯಾಸೆಟ್ ಗಳ ಕಾಲವಲ್ಲವಲ್ಲಾ ! ... ರೇಡಿಯೋ , ರೆಕಾರ್ಡ್ ಪ್ಲೇಯರ್ , 10 ಪೈಸೆಯ ಹಾಡಿನ ಪುಸ್ತಕಗಳು ದೊರಕುತ್ತಿದ್ದ ಕಾಲ ..... ಹೇಗೇಗೋ ಮಾಡಿ ಹಾಡುಗಳನ್ನು ಅಭ್ಯಾಸ ಮಾಡಿಕೊಂಡು ಹೋಗಿದ್ದರೆ... ನನಗಿಂತ ಮೊದಲು ಬಂದ ಸ್ಪರ್ಧಿ ಅದೇ ಹಾಡನ್ನು ಹಾಡಿದಾಗ .... ಅಯ್ಯೋ ಪಾಪಿ ' ___ ' ಮಗನೇ/ ಮಗಳೇ ..ನಿನಗೆ ಇದೇ ಹಾಡು ಸಿಗಬೇಕಿತ್ತಾ ? ಅಂತ ಬೈದುಕೊಂಡು ಟೆನ್ಷನ್ ಮಾಡಿಕೊಳ್ತಾ ಇದ್ದದ್ದು ..... ಕೂತಲ್ಲಿ ಕೂರಲಾಗದೇ , ನಿಂತಲ್ಲಿ ನಿಲ್ಲಲಾಗದೇ .... ಟಾಯ್ಲೆಟ್ ಗೆ ( ಈಗದನ್ನು ವಾಶ್ ರೂಂ ಅನ್ನಲೇಬೇಕು , ನಾವಲ್ಲಿ ವಾಶ್ ಮಾಡುತ್ತೇವೋ, ಮತ್ತೊಂದು ಮಾಡುತ್ತೇವೋ ನಮಗಂತೂ ಆಗ ಟಾಯ್ಲೆಟ್ ಅಂದ್ರೇನೆ ಸಮಾಧಾನ !) ಓಡಿ , ಅಲ್ಲೇನೂ ಮಾಡಲಾಗದೇ ... ಮತ್ತೆ ವಾಪಾಸ್ ಬಂದು ಕುಳಿತರೆ.... ಅದೋ ... ಮತ್ತೆ ಯಾರೋ ನಾ ಹಾಡಬೇಕೆಂದುಕೊಂಡಿದ್ದ , ನಾನು ರಾತ್ರಿಯೆಲ್ಲಾ ಅಭ್ಯಾಸ ಮಾಡಿದ್ದ ಹಾಡನ್ನಲ್ಲವೇ ಹಾಡುತ್ತಿರೋದು .... ಮತ್ತೆ ಮೇಲಿನ ಸ್ಟೆಪ್ಪುಗಳ ರಿಪೀಟು !! ..... ಮುಗಿದೇ ಹೋಯ್ತು ಕಾಲೇಜು ....
    ಇಂತೆಲ್ಲಾ ನೆನಪುಗಳನ್ನುಳಿಸಿ ! ] .......................................................

    ಈಗಿವೆಲ್ಲಾ ನೆನಪಿಸಿದ್ದು ನಿಮ್ಮ ಹಾಡುಗಳ ಪಟ್ಟಿ .................... [ ನಾನು , ನೀವು , ಇನ್ನೂ ಒಂದು ಹತ್ತಿಪ್ಪತ್ತು ಜನ ಪಟ್ಟಿ ಮಾಡಿದರೂ ... ಮತ್ತೂ ಹತ್ತು - ಹಲವು ಹಾಡುಗಳು ಸೇರಿಕೊಳ್ಳುತ್ತವೆನ್ನುವುದು ಈ ಪಟ್ಟಿಗಳ ಶಕ್ತಿ ಅಲ್ಲವೇ ?! ] ... ಇರಲಿ ನನ್ನ ಕಡೆಯಿಂದಷ್ಟು ಮಾಹಿತಿ :
    {} ರಾಷ್ಟ್ರ ಪ್ರಶಸ್ತಿ ವಿಜೇತ ' ಶಿವಮೊಗ್ಗ ಸುಬ್ಬಣ್ಣ ' [ ಕಾಡು ಕುದುರೆ ಓಡಿ ಬಂದಿತ್ತಾ ]
    {} ಆರ್ ಎನ್ ಸುದರ್ಶನ್ [ ಹೂವೊಂದು ಬಳಿ ಬಂದು / ಇರಬೇಕು ಇರಬೇಕು ಅರಿಯದ ಕಂದನ ತರಹ ]
    {} ಹೆಚ್ ಪಿ ಗೀತಾ [ ಸಂಗೀತ ನಿರ್ದೇಶಕ ಉಪೇಂದ್ರ ಕುಮಾರರ ಪತ್ನಿ - ನೀನಾ ಭಗವಂತ / ನಗುವೆಯಾ ಹೆಣ್ಣೆ ]
    {} ರಾಮಕೃಷ್ಣ [ ಈ ಬಾಳ ಗೀತೆಗೆ ಇಂದು - ಈ ಹಾಡಿನ ಹಮ್ಮಿಂಗ್ ಹಾಗೂ ವಯೊಲಿನ್ ನ ಪೋರ್ಷನ್ ಗಳನ್ನು ಹೇಗೆ ಮರಯಲು ಸಾಧ್ಯ ? ]
    {} ಎ ಎಲ್ ರಾಘವನ್ [ ಸೀನು - ಸುಬ್ಬು ಹಾಡುಗಳ ಹಾಡುಗಾರ - ಬಲು ಅಪರೂಪ ನಮ್ ಜೋಡಿ / ನಾವು ಹಾಡುವುದೇ ಸಂಗೀತ ]
    {} ರಾಜ್ ಕುಮಾರ್ ಭಾರತಿ [ ಮರೆಯಲಾರೆ ಸಂಸ್ಕೃತಿ / ಏಕಮ್ಮ ಶೀಲಮ್ಮ ಬಿಂಕ ನನ್ನಲ್ಲಿ ]
    {} ಬಾಲಕೃಷ್ಣ [ನೀನಾ ಭಗವಂತ ? - ' ಹಂಸ ಲೇಖಾ ' ರ ಅಣ್ಣ ]
    {} ಕೃಷ್ಣಾ ಕಲ್ಲೆ [ ಒಂದೊಂದಾಗಿ ಜಾರಿದರೆ ]
    {} ಮನ್ನಾ ಡೇ [ ಸತ್ಯಮೇವ ಜಯತೆ ]
    {} ಲತಾ ಮಂಗೇಶ್ಕರ್ [ ಬೆಳ್ಳನೆ ಬೆಳಗಾಯಿತು ]
    {} ಆಶಾ ಭೋಂಸ್ಲೆ [ ಸವಾಲು ಹಾಕಿ ಸೋಲಿಸಿ ಎಲ್ಲರ ] - ಆದರೆ ಪಾಪ ಈಕೆಗೆ ಈ ಕನ್ನಡ ಹಾಡನ್ನು ಹಾಡಿದ ನೆನಪೇ ಇಲ್ಲ , ಹೋಗಲಿ ಸ್ವಲ್ಪ ವಯಸ್ಸಾಗಿದೆ ಎಂದು ಕ್ಷಮಿಸಬಹುದು - YouTube ನಲ್ಲಿ Asha Bhonsle Kannada Song ಎಂದು ಕ್ಲಿಕ್ಕಿಸಿ ನೋಡಿ : ಕನ್ನಡ ಸಿನೆಮಾಗಳ ಏನೊಂದೂ ಚರಿತ್ರೆ ಗೊತ್ತಿಲ್ಲದ, ಕನ್ನಡ ಚಿತ್ರ - ' ಮತ್ತೆ ಮುಂಗಾರು ' - ಮಾಡುತ್ತಿರುವ ಬೃಹಸ್ಪತಿಗಳು ಇದು ನನ್ನ ಮೊದಲ ಸಿನ್ಮಾ , ನಿನ್ದೂ ಅಷ್ಟೇ .. ಅನ್ನುವ ರೀತಿ ಮಾತಾಡುವುದನ್ನು ಕೇಳಿ - ಛೀ ಅನ್ನಿಸದಿದ್ದರೆ ಕೇಳಿ.
    {} ಕಿಶೋರ್ ಕುಮಾರ್ [ ಆಡೂ ಆಟ ಆಡೂ ]
    {} ಮಹಮದ್ ರಫಿ [ ನೀನೆಲ್ಲಿ ನಡೆವೆ ದೂರಾ ]
    {} ಕುಮಾರ್ ಶಾನು [ ದೇವರು ವರವನು ಕೊಟ್ರೆ ]
    {} ಶಾನ್ [ ಏನೋ ಒಂಥರಾ ]

    ........................... ಪಟ್ಟಿ ಸಾಗುತ್ತಲೇ ಹೋಗುತ್ತೆ .. ಅಲ್ಲವೇ ?...........
    ಒಂದಷ್ಟು ಹಳೇ ನೆನಪುಗಳನ್ನೂ, .......... ಕನ್ನಡ ಹಾಡುಗಳನ್ನೂ ಮೆಲುಕು ಹಾಕುವಂತೆ ಮಾಡಿದ - ತಂಬೂರಿ ಶ್ರುತಿ ಮಾಡಿಕೊಟ್ಟ - ತಮಗೆ ಪ್ರೀತಿಯ ಧನ್ಯವಾದಗಳು .

    ReplyDelete
    Replies
    1. ಒಂದು ಸ್ವತಂತ್ರ ಲೇಖನವೇ ಆಗಬಹುದಾದ ನಿಮ್ಮ ವಿಸ್ತೃತ ಪ್ರತಿಕ್ರಿಯೆಗಾಗಿ ಧನ್ಯವಾದ.

      Delete
  2. ಹಳೇ ಹಾಡುಗಳನ್ನು ಕೇಳುತ್ತಿರುವಾಗ಻ ಅದೂ ರಾತ್ರಿ ಹೊತ್ತು ಒ0ಥರಾ ಅಮಲು ಬ0ದ ಹಾಗೆ ಅನಿಸುತ್ತೆ.ಧನ್ಯವಾದಗಳು.

    ReplyDelete
    Replies
    1. ಈ ಅಮಲಿನಲ್ಲಿ ಮೈ ಮರೆಯುವವರಿಗೆ ಬೇರಾವ ಅಮಲಿನ ಅಗತ್ಯವೂ ಇರುವುದಿಲ್ಲ. ಪ್ರತಿಕ್ರಿಯೆಗೆ ಕೃತಜ್ಞ.

      Delete
  3. ಅತ್ಯಮೂಲ್ಯ ಸಂಗ್ರಹ...ಹಿಂದೊಮ್ಮೆ ಇಂಥದೊಂದು ಪ್ರಯತ್ನ ಮಾಡಲು ಹೋಗಿದ್ದೆ. ಆದ್ರೆ ನನ್ನ ಸೀಮಿತ ಜ್ಞಾನ, ಸಂಗ್ರಹಗಳಿಂದಾಗಿ ಅದು ಸಾಧ್ಯವಾಗಲಿಲ್ಲ. ತುಂಬಾ ಧನ್ಯವಾದಗಳು.

    ReplyDelete
  4. ಪಿ.ಸುರೇಶ ಹೆಬ್ಬಾರ್24 July 2016 at 20:49

    ಹಳೆ ಹಾಡುಗಳ ಸಂಗ್ರಹ ಮಧುರವಾಗಿದೆ.Thanks

    ReplyDelete
  5. ಶರಣು ಶರಣು ನಿಮ್ಮ ಅತ್ಯಪೂರ್ವ ಮಾಹಿತಿ ಮತ್ತು ಅಮೂಲ್ಯ ಹಾಡಿನ ಕಣಜಕ್ಕಾಗಿ...

    ReplyDelete
  6. This comment has been removed by the author.

    ReplyDelete
  7. ನಿಮ್ಮ ಈ ಮಾಹಿತಿಪೂರ್ಣ ಲೇಖನ ಓದಿ ತುಂಬ ಖುಷಿಯಾಯ್ತು.ಇಂಥ ಲೇಖನ ಬರೆಯಲು ಬಹಳ ತಾಳ್ಮೆ,ವಿಷಯ ಸಂಗ್ರಹದ ಹಿನ್ನೆಲೆ ಬೇಕು.ಈಗಿನ ಪತ್ರಕರ್ತರಲ್ಲಿ ಯಾರಲ್ಲೂ ಇಲ್ಲದ ನಿಮ್ಮ ಈ ಪ್ರತಿಭೆಗೊಂದು ನನ್ನ ದೊಡ್ಡ ಸಲಾಂ.ಚಲನ ಚಿತ್ರ ಕ್ಷೇತ್ರದ ಉತ್ತಮ ನಿಯತಕಾಲಿಕಗಳಲ್ಲಿ ಪ್ರಕಟವಾಗಬೇಕಿದ್ದಂಥ ಲೇಖನ.

    Anantharaja Melanta (FB)

    ReplyDelete
  8. ಚಿತ್ರಗೀತೆ ವಿಭಾಗದಲ್ಲಿ ನಿಮಗೆ ಡಾಕ್ಟರೇಟ್ ಕೊಡಬೇಕು. ಅದಕ್ಕಿಂತ ದೊಡ್ಡದು ಇದ್ದರೂ ಅದಕ್ಕೂ ನೀವು ಅರ್ಹರು.

    Lakshmi GN (FB)

    ReplyDelete

Your valuable comments/suggestions are welcome