ಮಂಗಳೂರು, ಮ್ಯಾಂಗಲೋರ್, ಮಂಜರುನ್, ಕುಡ್ಲ, ಕೊಡಿಯಾಲ, ಕುಡೇಲ, ಮೈಕಲ್, ಮಂಗಳಾಪುರಂ ಮುಂತಾದ ಹಲವು ಹೆಸರುಗಳಿಂದ ಗುರುತಿಸಲ್ಪಡುವ ಮಂಗಳೂರಿಗೆ ಮಂಗಳೂರೆಂಬ ಹೆಸರು ಬರಲು ಕಾರಣಳಾದ ಮಂಗಳಾದೇವಿಯನ್ನು ಕುರಿತ ಶ್ರೀ ಮಂಗಳಾದೇವಿ ನಿನಗೆ ಪ್ರಣಾಮ ಎಂಬ ಹಾಡನ್ನು ಅರಿಯದವರು ಕರ್ನಾಟಕದ ಕರಾವಳಿಯಲ್ಲಂತೂ ಯಾರೂ ಇರಲಾರರು. ತಲತಲಾಂತರಗಳಿಂದ ಬಂದ ಸಾಂಪ್ರದಾಯಿಕ ಗೀತೆಯೇನೋ ಎನ್ನುವಷ್ಟು ಜನಪ್ರಿಯವಾದ ಇದು ಈ ಭಾಗದ ಮಹಿಳೆಯರಿಗೆಲ್ಲ ಕಂಠಪಾಠ. ಆದರೆ ಕಲಾವತಿ ರಾಗಾಧಾರಿತ ಈ ಹಾಡಿನ ಕುರಿತಾದ ಹೆಚ್ಚಿನ ಮಾಹಿತಿ ಅನೇಕರಿಗೆ ತಿಳಿದಿರಲಾರದು.
ಆಗಿನ್ನೂ ಕ್ಯಾಸೆಟ್ ಯುಗ ಆರಂಭವಾಗಿರಲಿಲ್ಲ. ಗ್ರಾಮೊಫೋನ್ ತಟ್ಟೆಗಳ ರೂಪದಲ್ಲಿ ಮಾತ್ರ ಧ್ವನಿಮುದ್ರಣ ಆಗುತ್ತಿದ್ದುದು. ಅದಕ್ಕಾಗಿ ದೂರದ ಮದರಾಸಿಗೋ, ಬೊಂಬಾಯಿಗೋ ಹೋಗಬೇಕಿತ್ತು. 1950ರ ದಶಕದಲ್ಲಿ ಬೊಂಬಾಯಿಯ ನ್ಯಾಶನಲ್ ರೆಕಾರ್ಡ್ ಸಂಸ್ಥೆ ಬೆಂಗಳೂರಿನ ಸೀತಾ ಫೋನ್ ಕಂಪನಿಯ ಸಹಯೋಗದೊಂದಿಗೆ ಅನೇಕ ಸ್ಥಳೀಯ ಕಲಾವಿದರನ್ನು ಬಳಸಿಕೊಂಡು ಲಾವಣಿ, ಜಾನಪದ, ನಾಟ್ಯ ಸಂಗೀತ, ಶಾಸ್ತ್ರೀಯ ಸಂಗೀತ, ಹರಿಕಥೆ, ನಾಟಕಗಳು ಹೀಗೆ ವೈವಿಧ್ಯಮಯ ಗ್ರಾಮೊಫೋನ್ ರೆಕಾರ್ಡುಗಳನ್ನು ತಯಾರಿಸುತ್ತಿದ್ದುದು ಚಂದಮಾಮದ ಜಾಹೀರಾತುಗಳಿಂದ ತಿಳಿಯುತ್ತದೆ. ಆದರೆ ಅವುಗಳಲ್ಲಿ ಕರಾವಳಿ ಕಲೆಗಳಾದ ತಾಳಮದ್ದಳೆ, ಯಕ್ಷಗಾನ ಇತ್ಯಾದಿಗಳ ಒಂದೂ ರೆಕಾರ್ಡ್ ಇಲ್ಲದಿರುವುದರಿಂದ ಈ ಭಾಗ ಆ ಕಂಪನಿಗಳ ವ್ಯಾಪ್ತಿಯಿಂದ ಹೊರಗಿದ್ದುದು ಅರಿವಾಗುತ್ತದೆ. ಆಗ ದಕ್ಷಿಣ ಕನ್ನಡ ಮೈಸೂರು ರಾಜ್ಯದ ಅಂಗವಾಗಿರದೆ ಮದರಾಸು ಪ್ರೆಸಿಡೆನ್ಸಿಗೆ ಸೇರಿದ್ದುದು ಇದಕ್ಕೆ ಕಾರಣವೋ ಅಥವಾ ಈ ಕಡೆಯವರು ಆ ದಿಸೆಯಲ್ಲಿ ಆಸಕ್ತಿ ತೋರಿಸಿರಲಿಲ್ಲವೋ ತಿಳಿಯದು.
1970ರ ದಶಕದ ಆದಿ ಭಾಗದಲ್ಲಿ ತುಳು ಚಿತ್ರಗಳ ತಯಾರಿಕೆ ಆರಂಭವಾಗಿ ಹಾಡುಗಳ ಧ್ವನಿಮುದ್ರಣ ಮದರಾಸಿನಲ್ಲಿ ನಡೆಯತೊಡಗಿತು. ಮದರಾಸಿನೊಂದಿಗೆ ದಕ್ಷಿಣ ಕನ್ನಡಿಗರ ನಂಟು ಬೆಳೆಯಿತು. ಅಶೋಕ್ ಚರಣ್ ನೈಟ್ ಮೂಲಕ ಪ್ರಸಿದ್ಧರಾಗಿದ್ದ ಅಶೋಕ್ ಮತ್ತು ಚರಣ್ ಸಹೋದರರು 1973ರಲ್ಲಿ ಮದರಾಸಿಗೆ ತೆರಳಿ ನವ್ಯ ಗೀತೆಗಳು ಎಂಬ ಹೆಸರಿನಲ್ಲಿ ನಾಲ್ಕು ಪ್ರೈವೇಟ್ ಹಾಡುಗಳ ಗ್ರಾಮೊಫೋನ್ ರೆಕಾರ್ಡ್ ಹೊರ ತಂದರು. ಈ ಹಾಡುಗಳ ರಚನೆ ಮತ್ತು ಸಂಗೀತ ಸಂಯೋಜನೆ ಅಶೋಕ್ ಚರಣ್ ಅವರದೇ ಆಗಿದ್ದು ಇದಕ್ಕೆ ಪಾವಲಾರ್ ಬ್ರದರ್ಸ್ ಹೆಸರಿನಲ್ಲಿ ಇಳಯರಾಜಾ ಅವರು ಆರ್ಕೆಷ್ಟ್ರಾ ಅರೇಂಜ್ ಮಾಡಿದ್ದರು. ಇದರಿಂದ ಸ್ಪೂರ್ತಿ ಪಡೆದ ವಿಜಯಕುಮಾರ್ ಎಂಬ ತರುಣ 1976ರಲ್ಲಿ ಮಂಗಳೂರಿನ ಶರವು, ಮಂಗಳಾದೇವಿ, ಕದ್ರಿ ಮತ್ತು ಕುದ್ರೋಳಿ ದೇವಸ್ಥಾನಗಳನ್ನು ಕುರಿತು ಒಂದೊಂದು ಹಾಡನ್ನು ತಾವೇ ಬರೆದು, ಸ್ವರ ಸಂಯೋಜಿಸಿಕೊಂಡು ಮದರಾಸಿಗೆ ಹೋದರು. ಅಲ್ಲಿ ಎ.ಎ. ರಾಜ್ ಎಂಬವರ ಆರ್ಕೆಷ್ಟ್ರಾ ಸಂಯೋಜನೆಯೊಂದಿಗೆ ಪಿ.ಬಿ.ಶ್ರೀನಿವಾಸ್ ಅವರ ಧ್ವನಿಯಲ್ಲಿ ಶರವು ಮಹಾ ಗಣಪತಿ ಮತ್ತು ಕದಳಿ ವನದಲಿ ಶ್ರೀ ಮಂಜುನಾಥ ಹಾಗೂ ಬಿ.ಕೆ.ಸುಮಿತ್ರಾ ಧ್ವನಿಯಲ್ಲಿ ಶ್ರೀ ಮಂಗಳಾದೇವಿ ನಿನಗೆ ಪ್ರಣಾಮ ಮತ್ತು ನಾರಾಯಣ ಗುರುಸ್ವಾಮಿ ಎಂಬ ಹಾಡುಗಳ ಗ್ರಾಮೊಫೋನ್ ರೆಕಾರ್ಡ್ ಮಾಡಿಸಿದರು. ಈ ನಾಲ್ಕೂ ಹಾಡುಗಳಿಗೆ ಜನರಿಂದ ಉತ್ತಮ ಸ್ವಾಗತ ದೊರಕಿತು. ಅದರಲ್ಲೂ ಶರವು ಮಹಾ ಗಣಪತಿ ಮತ್ತು ಶ್ರೀ ಮಂಗಳಾದೇವಿ ನಿನಗೆ ಪ್ರಣಾಮ ಹಾಡುಗಳು ಅತೀವ ಜನಪ್ರಿಯತೆ ಗಳಿಸಿ ಸಾರ್ವಕಾಲಿಕ ಹಿಟ್ ಎನಿಸಿದವು. ಅಂತರ್ಜಾಲ ಕ್ರಾಂತಿಯಿಂದಾಗಿ ಉಳಿದ ಮೂರು ಹಾಡುಗಳು ಸುಲಭಲಭ್ಯವಾಗಿದ್ದರೂ ಅದೇಕೋ ಶ್ರೀ ಮಂಗಳಾದೇವಿ ಹಾಡು ಮಾತ್ರ ಮೂಲ ರೂಪದಲ್ಲಿ ಎಲ್ಲೂ ಸಿಗದಂತಾಗಿ ಇತರರು ಹಾಡಿದ್ದನ್ನು ಕೇಳಿ ತೃಪ್ತಿ ಪಡಬೇಕಾಗಿತ್ತು.
ನಮ್ಮ ಸಹೋದ್ಯೋಗಿ ಮಿತ್ರರೊಬ್ಬರಿಗೆ ಗುಜರಿ ಅಂಗಡಿಗಳಲ್ಲಿ ಗ್ರಾಮೊಫೋನ್ ರೆಕಾರ್ಡುಗಳೇನಾದರೂ ಕಂಡರೆ ಅವುಗಳನ್ನು ಕೊಂಡು ಸಂಗ್ರಹಿಸುವ ಹವ್ಯಾಸ ಇದೆ. 2021ರಲ್ಲಿ ಅವರು ತಮ್ಮ ಸಂಗ್ರಹವನ್ನು ಪರಿಶೀಲಿಸುತ್ತಿರುವಾಗ ಶ್ರೀ ಮಂಗಳಾದೇವಿ ಹಾಡಿನ ರೆಕಾರ್ಡೂ ಅವುಗಳ ಮಧ್ಯೆ ಇರುವುದು ಅವರ ಗಮನಕ್ಕೆ ಬಂತು. ಕೂಡಲೇ ಅದರ ಫೋಟೊ ತೆಗೆದು ನನಗೆ ಕಳಿಸಿದರು. ಅದರ mp3 ಮಾಡಿ ಕೊಡಿ ಎಂದು ಕೇಳಿದಾಗ ತಮ್ಮಲ್ಲಿರುವ ರೆಕಾರ್ಡ್ ಪ್ಲೇಯರಿನ ಮೋಟಾರು ಕೆಟ್ಟು ಹೋಗಿದೆ ಎಂದು ತಿಳಿಸಿದರು. ನಾನು ವಿಷಯವನ್ನು ಅಲ್ಲಿಗೇ ಬಿಟ್ಟೆ. ಕೆಲವು ದಿನಗಳ ನಂತರ ಹಾಡಿನ mp3 ರೆಡಿ ಆಗಿದೆ ಎಂದು ಅವರಿಂದ ಫೋನ್ ಬಂದಾಗ ನನಗೆ ಅಚ್ಚರಿ ಆಯಿತು. ತಾಂತ್ರಿಕ ನಿಪುಣರೂ ಆಗಿರುವ ಅವರು ಗ್ರಾಮಫೋನ್ ಟರ್ನ್ ಟೇಬಲನ್ನು ಕೈಯಲ್ಲೇ ಸ್ಥಿರವಾದ ವೇಗದಲ್ಲಿ ತಿರುಗಿಸಿ ಕಂಪ್ಯೂಟರಿನಲ್ಲಿ ಹಾಡನ್ನು ರೆಕಾರ್ಡ್ ಮಾಡಿದರಂತೆ. ವೇಗದ ಅಲ್ಪ ಸ್ವಲ್ಪ ವ್ಯತ್ಯಾಸವನ್ನು ಆ ಮೇಲೆ ಸಾಫ್ಟ್‌ವೇರ್ ಮೂಲಕ ನಾನು ಸರಿಪಡಿಸಿಕೊಂಡೆ. ಈ ರೀತಿ ಕಣ್ಮರೆಯಾಗಿ ಹೋಗಿದ್ದ ಹಾಡೊಂದು ಪುನರ್ಜನ್ಮ ಪಡೆದು ನಮಗೆಲ್ಲ ಕೇಳಲು ದೊರಕಿತು.
ವಾಸ್ತವವಾಗಿ ರೆಕಾರ್ಡುಗಳನ್ನು ತಯಾರಿಸುವ ಕಂಪನಿಯೇ ಕಲಾವಿದರಿಗೆ ಗೌರವ ಧನ ಕೊಡಬೇಕು. ಇಲ್ಲಿ ವಿಜಯಕುಮಾರ್ ಅವರು ದಾನಿಗಳ ಸಹಾಯದಿಂದ ತಾನೇ ಹಣ ಹೊಂದಿಸಿ ಈ ಧ್ವನಿಮುದ್ರಣ ಮಾಡಿಸಿದಂತಿದೆ. ರೆಕಾರ್ಡಿನಲ್ಲಿ ಬರೆದಿರುವ Sponsored by Srikrishna ಎಂಬ ವಿಶೇಷ ಉಲ್ಲೇಖವನ್ನು ಗಮನಿಸಿ. P.Bಯವರ ಹೆಸರು P.B. Sreenivos ಎಂದಿರುವುದನ್ನೂ ಕಾಣಬಹುದು. ಎಲ್ಲ ಧ್ವನಿಮುದ್ರಿಕೆಗಳಲ್ಲೂ ಅವರ ಹೆಸರು ಹೀಗೆ ಶ್ರೀನಿವೋಸ್ ಎಂದೇ ಇರುತ್ತಿತ್ತು. ಇದಕ್ಕೇನು ಕಾರಣ ಎಂದು ತಿಳಿದಿಲ್ಲ.
ಸಾಹಿತಿ ವಿಶುಕುಮಾರ್, ಸಂಗೀತಗಾರ ಚರಣ್‌ಕುಮಾರ್ ಮತ್ತು ಪತ್ರಕರ್ತ ಸಂತೋಷ್‌ಕುಮಾರ್ ಗುಲ್ವಾಡಿ ಕರಾವಳಿಗೆ ಕೀರ್ತಿ ತಂದ ಕುಮಾರತ್ರಯರು ಎಂದು ಹೇಳುವುದುಂಟು. ನಾಲ್ಕನೆಯವರಾಗಿ ವಿಜಯಕುಮಾರ್ ಕೂಡ ಆ ಪಟ್ಟಿಗೆ ಸೇರಲು ಅರ್ಹರು.
ಒಂದೊಂದು ಬದಿಯಲ್ಲಿ ಎರೆಡೆರಡು ಹಾಡುಗಳಿರುವ 45 RPMನ EP(Extended Play)
ರೆಕಾರ್ಡಿನಲ್ಲಿರುವ ಆ ನಾಲ್ಕೂ ಹಾಡುಗಳನ್ನು ಕೆಳಗಿನ ಪಟ್ಟಿಯಿಂದ ಆರಿಸಿ ಆಲಿಸಬಹುದು.
(ವಿವಿಧ ರೀತಿಯ ಗ್ರಾಮೊಫೋನ್ ರೆಕಾರ್ಡುಗಳ ಬಗ್ಗೆ ತಿಳಿಯಲು ಗ್ರಾಮೊಫೋನ್ ಗಾಥೆ ಲೇಖನ ನೋಡಿ.)
ಹೊಸಬರೆಂದಲ್ಲ, ಪ್ರಸಿದ್ಧ ಸಂಗೀತ ನಿರ್ದೇಶಕರ ಸಫಲತೆಯ ಹಿಂದೆಯೂ ಅರೇಂಜರ್‌ಗಳ ಕಾಣದ ಕೈಯ ಕೈವಾಡ ಇದ್ದೇ ಇರುತ್ತದೆ. ಈ ಹಾಡುಗಳಿಗೆ ಆರ್ಕೆಷ್ಟ್ರಾ ಅರೇಂಜ್ ಮಾಡಿದ ಎ.ಎ. ರಾಜ್ ಕೆಲವು ಚಿತ್ರಗಳಿಗೆ ಸಂಗೀತ
ನಿರ್ದೇಶನ ಕೂಡ ಮಾಡಿದ್ದಾರೆ. ಪಿ.ಬಿ.ಎಸ್, ಬಿ.ಕೆ. ಸುಮಿತ್ರಾ ಮತ್ತು ಸಂಗಡಿಗರ
ಧ್ವನಿಗಳುಳ್ಳ ನೀಲಗಗನದಿ ಹಾರುವ ಓ ಗಾಳಿಪಟ, ಪಿ.ಬಿ.ಎಸ್ ಹಾಡಿರುವ ಎಲ್ಲರೂ ಸೇರಿ
ಒಂದಾಗಿ ನವಜೀವನ ಗೀತೆಯ ಹಾಡೋಣ, ಪಿ.ಬಿ.ಎಸ್, ಎಲ್.ಆರ್. ಈಶ್ವರಿ ಹಾಡಿದ ಪುಟ್ನರ್ಸಿ
ಬಾರೇ ಪಟ್ಣಕ್ಕೆ ಮತ್ತು ಚಿ. ಉದಯಶಂಕರ್ ಮತ್ತು ಜಾನಕಿ ಹಾಡಿದ ಹೆಣ್ಣಿನದು ಹೂ ಮನಸು
ಇತ್ಯಾದಿ ಹಾಡುಗಳಿದ್ದ ಮನಃಶಾಂತಿ ಇವುಗಳಲ್ಲೊಂದು. ಈ ಹಾಡುಗಳು ವಿವಿಧಭಾರತಿಯ ಮಧುರ್
ಗೀತಂ ಕಾರ್ಯಕ್ರಮದಲ್ಲಿ ಬಹಳ ಸಮಯ ಪ್ರಸಾರವಾಗುತ್ತಿದ್ದು ಈಗ ಹಿನ್ನೆಲೆಗೆ ಸರಿದಿವೆ.
ಜೈ ಜವಾನ್ ಜೈ ಕಿಸಾನ್ ಎಂಬ 1971 ಹಿಂದಿ ಚಿತ್ರವೊಂದಕ್ಕೂ ಅವರ ಸಂಗೀತವಿದ್ದು ಅದರಲ್ಲಿ
ಜೇಸುದಾಸ್, ಪಿ.ಬಿ.ಎಸ್ ಮತ್ತು ಎಸ್. ಜಾನಕಿ ಹಾಡಿದ ಹಾಡುಗಳಿದ್ದವು. ಈ ಹಾಡುಗಳು
ರೇಡಿಯೋ ಸಿಲೋನಿನ ಏಕ್ ಹೀ ಫಿಲ್ಮ್ ಕೇ ಗೀತ್ ಕಾರ್ಯಕ್ರಮದಲ್ಲಿ ಪ್ರಸಾರವಾದ ಬಗ್ಗೆ ನನ್ನ
ದಿನಚರಿಯಲ್ಲಿ ಉಲ್ಲೇಖ ಇದೆ.
ಶ್ರೀ ಮಂಗಳಾದೇವಿ ಹಾಡು ಕೇಳಲು ಬಹಳ ಸಮಯದಿಂದ ತವಕಿಸುತ್ತಿದ್ದೆ, ಸರ್. ಅಮೃತ ಸಿಕ್ಕಂತಾಯಿತು. ಜೊತೆಗೆ ನೀವು ಪಟ್ಟ ಶ್ರಮ, ಹಾಡಿನ ಹಿನ್ನಲೆಯ ಸಂಗತಿಗಳನ್ನು ಪ್ರಸ್ತುತ ಪಡಿಸುವ ಕ್ರಮ ನಿಜಕ್ಕೂ ಸ್ತುತಿಗೆ ಅರ್ಹ. ತುಂಬಾ, ತುಂಬಾ ಧನ್ಯವಾದಗಳು.
ReplyDeleteನೀವು ಹಿಂದೊಮ್ಮೆ ಈ ಹಾಡಿನ ಉಲ್ಲೇಖ ಮಾಡಿದ್ದು ನೆನಪಿತ್ತು. ಪ್ರತಿಕ್ರಿಯೆಗೆ ಧನ್ಯವಾದಗಳು.
Deleteಸುಮಾರು 50 ವರ್ಷಗಳ ಹಿಂದೆ ಹಾಡಿದ ರೆಕಾರ್ಡಿಂಗ್ ಆದನಂತರ ಕೇಳಿರದ (ಮಂಗಳಾದೇವಿ) ಮುಂತಾದ ಹಾಡುಗಳನ್ನು ಕೇಳಿಸಿದ್ದಕ್ಕೆ ಧನ್ಯವಾದಗಳು.🙏🙏🙏🙏
ReplyDelete---ಬಿ.ಕೆ.ಸುಮಿತ್ರ (whatsapp)