Friday, 3 December 2021

ಕಟ್ಟದ ಕಥೆ


ಡಿಸೆಂಬರ್ ಮೊದಲ ವಾರ ಅಂದರೆ ದಕ್ಷಿಣ ಕನ್ನಡದ ಕಾಶ್ಮೀರ ಎಂದೆನಿಸಿಕೊಳ್ಳುವ ಬೆಳ್ತಂಗಡಿ ತಾಲೂಕಿನ ಕಲ್ಮಂಜ ಗ್ರಾಮದ ನಮ್ಮೂರಿನ ಮೃತ್ಯುಂಜಯಾ ನದಿಗಡ್ಡವಾಗಿ ಪ್ರತಿ ವರ್ಷ ಕಟ್ಟುತ್ತಿದ್ದ ಕಲ್ಲು, ಮಣ್ಣು, ಸೊಪ್ಪುಗಳ ಕಟ್ಟದ ಬಗ್ಗೆ ಊರಿನವರೆಲ್ಲ ಸೇರಿ ಮಾತುಕತೆ ನಡೆಸುತ್ತಿದ್ದ ಕಾಲ.  ಈ ಮಾತುಕತೆ ನಡೆಯುತ್ತಿದ್ದುದು ಯಾರದೇ ಮನೆಯಲ್ಲಿ ಅಲ್ಲ, ಊರಿಂದ ಸುಮಾರು ಅರ್ಧ ಮೈಲಿ ದೂರದಲ್ಲಿ ಕಟ್ಟ ಕಟ್ಟುವ ಸ್ಥಳದಲ್ಲಿ. ಕಟ್ಟಬೇಕಾದ ಕಟ್ಟ ಒಂದೇ ಆದರೂ ಇದರಲ್ಲಿ ಇಂಗ್ಲಿಷ್ L ಆಕಾರದ ಎರಡು ಭಾಗಗಳು.  ಒಂದು  ಆನಂಗಳ್ಳಿ ವಾಳ್ಯದ್ದಾದರೆ ಇನ್ನೊಂದು ಪರಾರಿ ವಾಳ್ಯದ್ದು. ಕಟ್ಟದಿಂದ ನೀರು ಹರಿಯುವ ತೋಡಿನ ಗುಂಟ ಇರುವ ಮನೆಗಳ ಸಮೂಹಕ್ಕೆ ವಾಳ್ಯ ಎಂದು ಹೆಸರು.  ಎರಡೂ ಕೈಗಳು ಸೇರಿದರೆ ಮಾತ್ರ ಚಪ್ಪಾಳೆ ಆಗುವಂತೆ ಎರಡೂ ಭಾಗಗಳು ಸೇರಿದರೆ ಮಾತ್ರ ಕಟ್ಟ ಸಂಪೂರ್ಣ. ಇಂತಹುದೇ ನಿರ್ದಿಷ್ಟ ಜಾಗದಲ್ಲಿ ಕಟ್ಟ ಕಟ್ಟಿ ತೋಡು ನಿರ್ಮಿಸಿದರೆ ತೋಟಗಳಿಗೆ ನೀರು ಹರಿದೀತು ಎಂದು ಯಾವುದೇ ವೈಜ್ಞಾನಿಕ ಉಪಕರಣಗಳ ಸಹಾಯವಿಲ್ಲದೆ ಶತಮಾನಗಳ ಹಿಂದೆಯೇ ಕಂಡು ಹಿಡಿದಿದ್ದ ನಮ್ಮ ಪೂರ್ವಜರ ಜಾಣ್ಮೆಯನ್ನು ಮೆಚ್ಚಲೇ ಬೇಕು. 

ಎರಡೂ ವಾಳ್ಯಗಳಿಂದ  ಒಬ್ಬೊಬ್ಬ ಉತ್ಸಾಹಿ ಮುಂದೆ ಬಂದು  ಕಟ್ಟ ಕಟ್ಟಿಸುವ ಕೆಲಸದ ಜವಾಬ್ದಾರಿ ವಹಿಸಿಕೊಳ್ಳುತ್ತಿದ್ದುದು ಸಂಪ್ರದಾಯ. ವಾಡಿಕೆಯ ತಜ್ಞ ಆಳುಗಳನ್ನು ಒಟ್ಟುಗೂಡಿಸಿ ಕೆಲಸ ಮಾಡಿಸುವುದು, ಫಲಾನುಭವಿಗಳಿಂದ ಒಂದಷ್ಟು ಮುಂಗಡ ಪಡೆದುಕೊಂಡು ಆಳುಗಳಿಗೆ ಮಜೂರಿ ಪಾವತಿಸುವುದು, ಏನೇನೋ ಸಬೂಬು ಹೇಳಿ ಕೆಲವರು ಮುಂಗಡ ಕೊಡದಿದ್ದಾಗ ತಾನೇ ಕೈಯಿಂದ ಭರಿಸುವುದು ಇವನ್ನೆಲ್ಲ ವಹಿಸಿಕೊಂಡವನು ನಿಭಾಯಿಸಬೇಕಾಗಿತ್ತು. ಕೆಲಸ ಸಂಪೂರ್ಣ ಆದ ಮೇಲೆ ಪೈ ಪೈ ಲೆಕ್ಕ ತೋರಿಸಿ ಅವರವರ ಜಮೀನಿನ ವಿಸ್ತೀರ್ಣದ ಆಧಾರದ ಮೇಲೆ   ಖರ್ಚಿನಲ್ಲಿ ಎಲ್ಲರಿಗೂ ಪಾಲು. ಅದನ್ನು ವಸೂಲು ಮಾಡುವುದೂ ವಹಿಸಿಕೊಂಡವನದ್ದೇ ಜವಾಬ್ದಾರಿ.

ಮಳೆಗಾಲ ಆರಂಭವಾದೊಡನೆ ಕಡಿದು ಹೋಗಿರುತ್ತಿದ್ದ ಹಿಂದಿನ ವರ್ಷದ ಕಟ್ಟದ ದೊಡ್ಡ ದೊಡ್ಡ ಕಲ್ಲುಗಳನ್ನು ಗುರುತಿಸಿ ನಿರ್ದಿಷ್ಟ ಜಾಗದಲ್ಲಿರಿಸುವುದು ಮೊದಲ ಕೆಲಸ.  3- 4 ಜನ ಸೇರಿ ಎತ್ತಬೇಕಾದ ಬೃಹತ್ ಕಲ್ಲುಗಳನ್ನು ಎಲ್ಲೆಲ್ಲಿ ಇರಿಸಬೇಕೆಂಬ  ಬಗ್ಗೆ ಮಾಹಿತಿ ಇದ್ದ ಮತ್ತು ಅವುಗಳನ್ನು ಎತ್ತಲು ಬೇಕಾದ ಶಕ್ತಿ ಮತ್ತು ಯುಕ್ತಿ ಇದ್ದ ಆಳುಗಳೂ ಆಗ ಇದ್ದರು. ನಂತರ ಸಣ್ಣ ಕಲ್ಲುಗಳನ್ನು ಪೇರಿಸಿ ಕಟ್ಟಾಣಿ ಕಟ್ಟುವುದು. ಆ ಮೇಲೆ ಕಟ್ಟದ ಒಳ ಬದಿಯಲ್ಲಿ ಸೊಪ್ಪು ಮತ್ತು ಮಣ್ಣಿನ  ಸುಮಾರು ಒಂದೊಂದು ಅಡಿ ಎತ್ತರದ ಪದರಗಳನ್ನು ಒಂದರ ಮೇಲೊಂದು ಪೇರಿಸುವುದು. ಆಗ ಸೊಪ್ಪು ಅಲ್ಲಿಯ ಪರಿಸರದಲ್ಲಿ ಯಥೇಚ್ಛವಾಗಿ ದೊರಕುತ್ತಿತ್ತು. ಬೇಕಾಗುವ ಮಣ್ಣನ್ನು ಸಮೀಪದ ಜಮೀನೊಂದರ ದರೆಯಿಂದ  ಅಗೆದು ತರಲಾಗುತ್ತಿತ್ತು. ಈ ಕಟ್ಟದ ಫಲಾನುಭವಿಯಲ್ಲದ ಆ ಜಮೀನಿನ ಒಡೆಯರಿಗೆ ಇದಕ್ಕಾಗಿ  ಒಂದಷ್ಟು ನಾಮಮಾತ್ರದ ಶುಲ್ಕವೂ ಪಾವತಿಯಾಗುತ್ತಿತ್ತು ಎಂದು ನೆನಪು. L ಆಕಾರದ ಎರಡು ಕಟ್ಟಗಳು ಸಂಧಿಸುವಲ್ಲಿ ಹೆಚ್ಚುವರಿ ನೀರು ಹರಿದು ಹೋಗಲು ಮಾದು ಎನ್ನಲಾಗುವ ಕಿಂಡಿಯೊಂದನ್ನು ಬಿಡಲಾಗುತ್ತಿತ್ತು. ಈ ಜಾಗದಲ್ಲಿ  ಅಡಿಕೆ ಸೋಗೆಗಳ ತಡೆ ಒಡ್ಡಿ ನೀರನ್ನು ನಿಯಂತ್ರಿಸಲಾಗುತ್ತಿತ್ತು. ಕಲ್ಲಿನ ಕಟ್ಟಾಣಿಯ ಮೇಲ್ಭಾಗದಲ್ಲೂ ಸೊಪ್ಪು ಮತ್ತು ಮಣ್ಣುಗಳ ಸುಮಾರು ನಾಲ್ಕು ಅಡಿ ಅಗಲದ ಪದರ ನಿರ್ಮಿಸಿ ಕಟ್ಟದ ಮೇಲಿಂದ ನಡೆದು ಮಾದಿನ ಮೇಲೆ ಹಾಕಿದ ಅಡಿಕೆ ಮರಗಳ ಸಂಕದ ಮೇಲಿಂದ ಹಾದು ಸುಲಭವಾಗಿ ಆಚೆ ದಡವನ್ನು ಸೇರುವ ವ್ಯವಸ್ಥೆಯನ್ನೂ ಮಾಡಲಾಗುತ್ತಿತ್ತು. ಒಂದು ಬದಿಯಲ್ಲಿ ಅಗಾಧ ಜಲರಾಶಿ, ಮಾದಿನ ಮೂಲಕ ರಭಸವಾಗಿ ಹರಿಯುವ ನೀರು ನೋಡಿ ಅಳ್ಳೆದೆಯವರು ಕಟ್ಟದ ಮೇಲಿಂದ ನಡೆದು ಹೋಗಲು ಅಳುಕುತ್ತಿದ್ದರು.

ಸಾಮಾನ್ಯವಾಗಿ  ದಿಸೆಂಬರ್ ತಿಂಗಳ ಕೊನೆಯೊಳಗೆ ಕಾಮಗಾರಿ ಮುಗಿದು ಮಾದಿಗೆ ಮಡಲುಗಳನ್ನು ಹಾಕಿ ತೋಡಿಗೆ ನೀರು ತಿರುಗುತ್ತಿತ್ತು. ಅಷ್ಟರೊಳಗೆ ಅವರವರ ಭಾಗದ ತೋಡಿನ  ಹೂಳು ತೆಗೆದು  ಸ್ವಚ್ಛಗೊಳಿಸುವ ಕಾರ್ಯ ಮುಗಿದಿರುತ್ತಿತ್ತು. ಮಳೆಗಾಲದ ನೀರು ಹರಿಯುವ ತೊರೆಗಳು ಈ ತೋಡನ್ನು ಅಡ್ಡ ಹಾಯುವಲ್ಲಿನ ಇಡೆಕ್ಕಟ್ಟು ಅಥವಾ ದಂಬೆಹೋಡುಗಳ ದುರಸ್ತಿಯೂ ಇಷ್ಟರೊಳಗೆ ಆಗಬೇಕಾಗಿತ್ತು. ಮಾದಿಗೆ ಮಡಲು ಹಾಕಿ ನೀರು ತಿರುಗಿಸುವ ದಿನ  ಊರವರೆಲ್ಲರ ಸಮಕ್ಷಮದಲ್ಲಿ  ನದಿಯ ಪೂಜೆ ಮಾಡುವ  ವಿಶೇಷ ಗೌರವ  ಲಾಗಾಯ್ತಿನಿಂದಲೂ ನಮ್ಮ ಮನೆತನಕ್ಕೆ ಸಲ್ಲುತ್ತಿದ್ದುದು.  ಪೂಜೆ ಮುಗಿದೊಡನೆ ಒಡೆದ ಕಾಯಿಯ ಚೂರನ್ನು ಪ್ರಸಾದವೆಂದು ಬಾಯಿಗೆ ಹಾಕಿಕೊಂಡು ಬೇಗ ಮನೆಗೆ ಬಂದು "ಹಾವು, ಹುಳ  ಹುಪ್ಪಟೆಗಳಿದ್ದಾವು, ಎಚ್ಚರ" ಎಂದು ಹಿರಿಯರು ಬೈದರೂ ತೋಡಿನಲ್ಲಿ ಹರಿದು ಬರುವ ಮೊದಲ ನೀರಿನ  ಸ್ಪರ್ಶಕ್ಕಾಗಿ ಕಾಯುವುದೆಂದರೆ ಅದೊಂದು ಥ್ರಿಲ್. ಕೆಲವು ವರ್ಷ ಸಂಜೆ ನೀರು ತಿರುಗಿಸುತ್ತಿದ್ದುದರಿಂದ  ಅದು  ರಾತ್ರೆ ನಮ್ಮಲ್ಲಿಗೆ ತಲುಪಿ ಈ ಥ್ರಿಲ್ ತಪ್ಪಿ ಹೋಗುತ್ತಿತ್ತು.

1960ರ ದಶಕದಲ್ಲಿ ನಮ್ಮ ತಂದೆಯವರು ಕಟ್ಟದ ಸಮೀಪ ನದಿಗೆ ಪೂಜೆ ಸಲ್ಲಿಸುತ್ತಿರುವುದನ್ನು ಈ ಚಿತ್ರದಲ್ಲಿ ನೋಡಬಹುದು.


ಅವರವರ ತೋಟಕ್ಕೆ ನಿಗದಿಯಾದ ಸಮಯದಲ್ಲಿ ತೋಡಿನ ನೀರನ್ನು ತಡೆಯಲು  ಅಡಿಕೆ ಮರ ಮತ್ತು ಸಲಾಕೆಗಳನ್ನು ಬಳಸುವ ಆಡ್ಡಾಂಝೊ ಎಂಬ ತಡೆ, ತಮ್ಮ ಪಾಳಿಯಲ್ಲದ ದಿನಗಳಂದು ತೋಟಕ್ಕೆ ನೀರು ಹೋಗದಂತೆ ತಡೆಯಲು ಕಡೀವು ಎಂಬ ಇಂಥದ್ದೇ ಸಣ್ಣ ತಡೆ ಇರುತ್ತಿದ್ದವು. ಒಣಗಿದ ಬಾಳೆ ಎಲೆಗಳನ್ನು ಬಳಸಿ ಆದಷ್ಟು ಕಮ್ಮಿ ನೀರು ಇವುಗಳಿಂದ ಹೊರ ಹೋಗುವಂತೆ ಮಾಡಲಾಗುತ್ತಿತ್ತು. ಆದರೂ ತೋಟದೊಳಗೆ ನೀರು ಹೋಗುವ ಸಣ್ಣ ಕಾಲುವೆಯಲ್ಲಿ ಸ್ವಲ್ಪ ನೀರು ಯಾವಾಗಲೂ ಹರಿಯುತ್ತಿತ್ತು. ಇದಕ್ಕೆ ಸಣ್ಣ ಸಣ್ಣ ಕಲ್ಲುಗಳ ಮಿನಿಯೇಚರ್ ಕಟ್ಟ ಕಟ್ಟಿ ಶೇಖರವಾದ ನೀರು ಹರಿಯಲು ಒಂದು ಕಾಲುವೆ ರಚಿಸಿ ನಾವು ಆಟ ಆಡುವುದಿತ್ತು.

ರಾತ್ರಿ ಊಟ ಮುಗಿಸಿ ಕೈ ತೊಳೆಯಲು ಹೊರಗಡೆ ಬಂದಾಗ ಕೇಳಿಸುವ  ತೋಡಿನಲ್ಲಿ ಹರಿಯುವ ನೀರಿನ ಜುಳು ಜುಳು ಕೇಳಲು ಬಲು ಆಪ್ಯಾಯಮಾನವಾಗಿರುತ್ತಿತ್ತು. . ಈ ಜುಳು ಜುಳು ಸದ್ದು ಜಾಸ್ತಿಯಾದಷ್ಟು ಚಳಿ ಜಾಸ್ತಿ ಎಂಬ ಭಾವನೆಯೂ ಇತ್ತು. ವಾಸ್ತವವಾಗಿ ಅವು ಡಿಸೆಂಬರ್, ಜನವರಿ ತಿಂಗಳುಗಳಾಗಿರುತ್ತಿದ್ದುದು ಚಳಿ ಹೆಚ್ಚಾಗಲು ಕಾರಣ! ತೋಡಿಗೆ ನೀರು ಬಂದ ಮೇಲೆ ಬಟ್ಟೆ ಒಗೆಯುವ, ಪಾತ್ರೆ ತೊಳೆಯುವ ಕೆಲಸಗಳೆಲ್ಲ ಅದರ ಬದಿಯಲ್ಲೇ.  ಮೇಲಿನಿಂದ ಹಕ್ಕಿಗಳು ಗಲೀಜು ಮಾಡದಂತೆ ತೋಡಿನ ಬದಿ ಮಡಲಿನ ಕಿರು ಚಪ್ಪರವನ್ನೂ ನಿರ್ಮಿಸಲಾಗುತ್ತಿತ್ತು.  ಕಿರಿಯರ ಸ್ನಾನವೂ ಬಹುತೇಕ ಅಲ್ಲೇ. ಹಿರಿಯರ ಕಣ್ಣು ತಪ್ಪಿಸಿ ಸಂಕದ ಮೇಲಿನಿಂದ ನೀರಿಗೆ ಜಿಗಿಯುವುದು, ಬಾಳೆ ಗಿಡದ ತೆಪ್ಪ ನಿರ್ಮಿಸಿ ಕಾಲುವೆಯಲ್ಲಿ ಆಡುವುದೂ ಇತ್ತು. ಹೀಗೆ ಆಟ ಆಡುವಾಗ ನಮ್ಮ ಅಣ್ಣನಿಗೊಮ್ಮೆ ನೀರು ಹಾವು ಕಚ್ಚಿದ್ದೂ ಇದೆ! ಯಾವಾಗಲೂ ಸ್ಫಟಿಕ ಶುಭ್ರವಾಗಿರುತ್ತಿದ್ದ ತೋಡಿನ ನೀರು ಮಧ್ಯಾಹ್ನ 12ರ ನಂತರ ಮಾತ್ರ ಕೊಂಚ ರಾಡಿ. ಇದಕ್ಕೆ ಕಾರಣ ಹೆಚ್ಚಿನ ಮನೆಯವರು ತಮ್ಮ ಎಮ್ಮೆಗಳನ್ನು ನೀರಲ್ಲಿ ಕಟ್ಟುವ ಸಮಯ ಇದಾಗಿತ್ತು.  ಅವರವರ ಸರದಿಯಂತೆ  ಕಾಲುವೆಗೆ ತಡೆ ಕಟ್ಟಿ  ತಮ್ಮ ತಮ್ಮ ತೋಟಗಳಿಗೆ  ನೀರು ಹಾಯಿಸುವಲ್ಲಿ ಎಲ್ಲರೂ ಬಲು ಪ್ರಾಮಾಣಿಕರು.  ನಮಗಿಂತ ಮೇಲಿನವರ ಸರದಿ ಇದ್ದ ದಿನ  ನೀರ ಹರಿವು ಸ್ಥಗಿತವಾಗುವ ಕಾರಣ ಪಾತ್ರೆ ತೊಳೆಯಲು, ಬಟ್ಟೆ ಒಗೆಯಲು ಆಗುವುದಿಲ್ಲವೆಂದು ಮನೆಯ ಮಹಿಳೆಯರಿಗೂ, ನೀರಲ್ಲಿ ಆಡಲು ಆಗುವುದಿಲ್ಲವೆಂದು ಮಕ್ಕಳಿಗೂ ಬೇಸರ.  ನಮ್ಮ ಮನೆಯ ಸರದಿ ಯಾವಾಗಲೂ ಮಧ್ಯ ರಾತ್ರಿ.  ಆದರೂ ನಮ್ಮ ಅಣ್ಣಂದಿರು ಬೇಸರ ಪಟ್ಟುಕೊಳ್ಳದೆ ಲಾಟೀನು ಹಿಡಿದು  ತೋಟಕ್ಕೆ ನೀರು ಹಾಯಿಸುತ್ತಿದ್ದರು.

ಶಿವರಾತ್ರಿ ಸಮಯಕ್ಕೆ ನದಿ ನೀರಿನ ಹರಿವು ಕಮ್ಮಿ ಆಗುತ್ತಿದ್ದುದರಿಂದ ಮಾದನ್ನು ಕಟ್ಟಾಣಿ ಕಟ್ಟಿ ಸಂಪೂರ್ಣ ಮುಚ್ಚಲಾಗುತ್ತಿತ್ತು. ಇನ್ನೊಂದೆಡೆ ಕಲ್ಲಿನ ಕಟ್ಟಾಣಿ ಇಲ್ಲದೆ ಸೊಪ್ಪು ಮಣ್ಣುಗಳನ್ನು ಮಾತ್ರ ತುಂಬಿಸಿದ emergency exit  ಕೂಡ ಇರುತ್ತಿತ್ತು. ಎಪ್ರಿಲ್ ಸಮಯದಲ್ಲಿ ಮುಂಗಾರು ಪೂರ್ವ ಮಳೆಗೆ ನದಿಯಲ್ಲಿ ಹೆಚ್ಚು ನೀರು ಹರಿದು ಬಂದು ಕಟ್ಟಕ್ಕೆ ಅಪಾಯವಾಗುವ ಸಂದರ್ಭ ಬಂದರೆ ಇದನ್ನು ತೆರೆದು ಕೊಡಲಾಗುತ್ತಿತ್ತು.  ತೋಡಿನಲ್ಲಿ ನೀರು ಹರಿಯುವಷ್ಟು ಸಮಯ ಎಲ್ಲರ ಮನೆಯ ಬಾವಿಗಳಲ್ಲಿ ಯಥೇಚ್ಛ ನೀರು ತುಂಬಿ. ಕೆಲವೊಮ್ಮೆ ಮುಂಗಾರು ಪೂರ್ವ ಮಳೆಗೆ ನದಿಯಲ್ಲಿ ನೆರೆ ಬಂದು ಅವಧಿಗೆ ಮುನ್ನವೇ ಕಟ್ಟ ಕಡಿದು ಹೋದರೆ ಹೆಚ್ಚಿನವರ ಬಾವಿಗಳು ಒಣಗಿ ಮಳೆಗಾಲ ಆರಂಭವಾಗುವ ವರೆಗೆ ಪಡಿಪಾಟಲು ಪಡಬೇಕಾಗುತ್ತಿತ್ತು. ಪೂರ್ಣಪ್ರಮಾಣದ ಮಳೆಗಾಲ ಆರಂಭವಾದೊಡನೆ  ಕಟ್ಟವು ತಾನಾಗಿ ಕಡಿದು ಉಪಯೋಗಿಸಿದ ಕಲ್ಲುಗಳು ಅಲ್ಲೇ ಬಿದ್ದು ಮರು ವರ್ಷ  ಮತ್ತೆ ಉಪಯೋಗಕ್ಕೆ ಬರುತ್ತಿದ್ದರೂ ಸೊಪ್ಪು-ಮಣ್ಣುಗಳು ನೆರೆಯಲ್ಲಿ ಕೊಚ್ಚಿ ಹೋಗುತ್ತಿದ್ದವು.

ಕ್ರಮೇಣ ಕಾಡು ನಾಶವಾಗಿ ಪ್ರತೀ ವರ್ಷ ಅಷ್ಟೊಂದು ಸೊಪ್ಪು ಸಿಗುವುದು ಕಷ್ಟವಾಗತೊಡಗಿತು. ಅಲ್ಲದೆ ಅಗಾಧ ಪ್ರಮಾಣದ  ಮಣ್ಣು   ವರ್ಷದ ಕೊನೆಗೆ ನೀರಿನಲ್ಲಿ ಕೊಚ್ಚಿ ಹೋಗಿ  ನಾಶವಾಗಬಾರದು ಎಂದು ಊರಿನ ಕೆಲವು ಉತ್ಸಾಹಿ ಯುವಕರಿಗೆ ಅನ್ನಿಸಿ ಇತ್ತೀಚಿನ ಕೆಲವು ವರ್ಷಗಳಲ್ಲಿ ಸೊಪ್ಪು ಮಣ್ಣುಗಳ  ಬದಲಿಗೆ ಮರುಬಳಕೆ ಮಾಡಬಹುದಾದ ದಪ್ಪ ಪ್ಲಾಸ್ಟಿಕ್ ಹಾಳೆ ಮತ್ತು ಮರಳಿನ ಚೀಲಗಳ ಉಪಯೋಗ ಆರಂಭಿಸಿ ಪರಿಸರಕ್ಕೆ ಹಾನಿಕರವೆಂದು ಹಣೆಪಟ್ಟಿ ಕಟ್ಟಿಕೊಂಡ ಪ್ಲಾಸ್ಟಿಕ್ ಪರಿಸರವನ್ನು ಉಳಿಸಲೂ ಬಲ್ಲುದು ಎಂದು ತೋರಿಸಿಕೊಟ್ಟಿದ್ದರು.

ಕೆಲ ವರ್ಷಗಳ ಹಿಂದೆ ಸರ್ಕಾರ ನಿರ್ಮಿಸಿಕೊಟ್ಟ ಕಿರು ಕಾಂಕ್ರೀಟ್ ಡ್ಯಾಮ್  ಶತಮಾನಗಳ ಇತಿಹಾಸ ಇದ್ದ  ಆ ಸಾಂಪ್ರದಾಯಿಕ ಕಟ್ಟವನ್ನು ಚರಿತ್ರೆಯ ಪುಟಗಳಿಗೆ ಸೇರಿಸಿದೆ. ಕಾಲಯಂತ್ರದಲ್ಲಿ ಹಿಂದೆ ಹೋಗಿ ಈ  ವೀಡಿಯೋದಲ್ಲಿ ಅದನ್ನು ನೋಡಬಹುದು.



 

No comments:

Post a Comment

Your valuable comments/suggestions are welcome