Sunday 3 January 2021

ಬೇಡದ ಬದಲಾವಣೆ


ತಾವಾಗಿ ಬೇಡದ ಬದಲಾವಣೆ ಯಾರಿಗೂ ಬೇಡ. ಬಾಹ್ಯ ಬಲಪ್ರಯೋಗ ಇಲ್ಲದಿದ್ದರೆ ಯಾವುದೇ ವಸ್ತುವು ತಾನಿದ್ದ ಸ್ಥಿತಿಯಲ್ಲೇ ಇರಲು ಬಯಸುತ್ತದೆ ಎಂಬುದು ನ್ಯೂಟನ್ನನ  ಮೊದಲನೇ ನಿಯಮದ ತಾತ್ಪರ್ಯ. ಇದು ಜಡ ವಸ್ತುಗಳಿಗೆ ಮಾತ್ರವಲ್ಲ, ನಮಗೂ ಅನ್ವಯಿಸುತ್ತದೆ. ಯಾವುದೇ ಬದಲಾವಣೆ ಒತ್ತಾಯಪೂರ್ವಕ ಜ್ಯಾರಿಗೆ ತರುವ ಪ್ರಯತ್ನ ನಡೆದಾಗ ಮೊದಲು ವಿರೋಧ ವ್ಯಕ್ತವಾಗುವುದು ಇದೇ ಕಾರಣಕ್ಕೆ.  ನಮ್ಮ ದಿನನಿತ್ಯದ ಜೀವನದಲ್ಲೂ ಅನೇಕ ಸಲ ಇದು ಅನುಭವಕ್ಕೆ ಬಂದಿರುತ್ತದೆ.

ಶಾಲೆಗೆ ವಿರೋಧ


ಮನೆಯಲ್ಲಿ ಆಡಿಕೊಂಡಿದ್ದ ನನ್ನನ್ನು ಶಾಲೆಗೆ ಸೇರಿಸಿದಾಗ ನಾನು ಪ್ರಬಲ ವಿರೋಧ ವ್ಯಕ್ತಪಡಿಸಿದ್ದೆ.  ತಂದೆಯವರಿಂದ ಬೆನ್ನಿಗೆ ಬಾಸುಂಡೆ ಬರುವಂತೆ ಪೆಟ್ಟು ತಿಂದ ಮೇಲೆಯೇ ಮನಸ್ಸಿಲ್ಲದ ಮನಸ್ಸಿನಿಂದ ನಾನು ಶಾಲೆಗೆ ಹೋಗತೊಡಗಿದ್ದು.  ಶಾಲೆಯಲ್ಲಿ ಒಂದನೇ ತರಗತಿಯ ಬದಲು ಐದನೇ ತರಗತಿಯಲ್ಲಿದ್ದ ಅಣ್ಣನ ಜೊತೆಯೇ ಕುಳಿತುಕೊಳ್ಳುತ್ತಿದ್ದೆ.  ಮರು ವರ್ಷ ಅಣ್ಣ ಬೇರೆ ಶಾಲೆಗೆ ಹೋದ ಮೇಲಷ್ಟೇ ನನ್ನ ತರಗತಿಯಲ್ಲಿ ಕುಳಿತುಕೊಳ್ಳತೊಡಗಿದ್ದು. ಕ್ರಮೇಣ ಆ ವಾತಾವರಣ ಒಗ್ಗತೊಡಗಿ ಐದನೇ ಕ್ಲಾಸಿನ ವರೆಗೆ ಸಿದ್‌ಬೈಲ್ ಪರಾರಿ ಶಾಲಾಜೀವನವನ್ನು ಆನಂದಿಸಿದೆ.  ಮಧ್ಯೆ ನೆಚ್ಚಿನ ಅಧ್ಯಾಪಕರು ವರ್ಗವಾಗಿ ಬೇರೆಡೆ ಹೋದಾಗ ಹೊಸಬರನ್ನು ಒಪ್ಪಿಕೊಳ್ಳಲು ಮನಸ್ಸು ಕೆಲ ಕಾಲ ನಿರಾಕರಿಸಿದ್ದುಂಟು. 

ಸಿದ್‌ಬೈಲ್ ಶಾಲೆಯಲ್ಲಿ 5ನೇ ತರಗತಿ ಮುಗಿಯುತ್ತಲೇ ಮತ್ತೆ ಬೇಡದ ಬದಲಾವಣೆಗೆ ಒಳಗಾಗಬೇಕಾಯಿತು.  ನನ್ನಿಷ್ಟದಂತೆ  ರಾಜನಾಗಿ ಇರುತ್ತಿದ್ದ ನಮ್ಮ ಮೂಲ ಮನೆಯನ್ನು ಬಿಟ್ಟು  ಕಟ್ಟುನಿಟ್ಟಿನವರು ಎಂದು ನಮ್ಮ ದೃಷ್ಟಿಯಲ್ಲಿ ಎನಿಸಿಕೊಂಡಿದ್ದ ನಮ್ಮ ಹಿರಿ ಅಣ್ಣನ ಮನೆಯಲ್ಲಿ ಇದ್ದುಕೊಂಡು ಮುಂಡಾಜೆ ಹೈಯರ್ ಎಲಿಮೆಂಟರಿ ಶಾಲೆಗೆ ಹೋಗಬೇಕಾಯಿತು.  ಇರುವ ಜಾಗ ಬೇರೆ, ಶಾಲೆ ಬೇರೆ, ಅಧ್ಯಾಪಕರು ಬೇರೆ, 30ಕ್ಕಿಂತಲೂ ಹೆಚ್ಚಿನ ಸಂಖ್ಯೆಯ ಗುರುತು ಪರಿಚಯವಿಲ್ಲದ ಸಹಪಾಠಿಗಳು ಬೇರೆ.  ಒಟ್ಟಲ್ಲಿ ಮೀನನ್ನು ನೀರಿನಿಂದ ಹೊರತೆಗೆದಂಥ ಪರಿಸ್ಥಿತಿ. ಹೊಂದಿಕೊಳ್ಳಲು ಒಂದು ವರ್ಷವೇ ಬೇಕಾಯಿತು.

ಜುಟ್ಟಿಗೆ ಪಟ್ಟು

ನಮ್ಮದು ಕಟ್ಟಾ ಸಂಪ್ರದಾಯಬದ್ಧ ಕುಟುಂಬವಾಗಿದ್ದು ಗಂಡುಮಕ್ಕಳು ಜುಟ್ಟು ಬಿಟ್ಟು ಟೊಪ್ಪಿ ಧರಿಸುವುದು ಕಡ್ಡಾಯವಾಗಿತ್ತು.  ನಾನೂ ಸುಮಾರು ಮೂರನೆಯ ಕ್ಲಾಸ್ ವರೆಗೆ ಟೊಪ್ಪಿ ಧರಿಸಿಯೇ ಶಾಲೆಗೆ ಹೋದದ್ದು ನೆನಪಿದೆ.  ಅಷ್ಟರಲ್ಲಿ ಬೀಸತೊಡಗಿದ್ದ ಆಧುನಿಕತೆಯ ಗಾಳಿ  ನಮ್ಮಲ್ಲೂ ಹೊಕ್ಕು  ಸಣ್ಣ ಕ್ರಾಪ್ ಬೆಳೆಸಲು ಅನುಮತಿ ಸಿಕ್ಕಿತ್ತು.  ಆದರೆ ಜೊತೆಗೆ ಪುಟ್ಟದಾದರೂ ಜುಟ್ಟು ಬೇಕೇ ಬೇಕಿತ್ತು. ಆ ಕಾಲದಲ್ಲಿ ಸಾಮಾನ್ಯವಾಗಿ  4-5ನೇ ಕ್ಲಾಸಿನ ಹುಡುಗರಿಗೆ ಉಪನಯನ  ಮಾಡುತ್ತಿದ್ದರೂ ಗುರುಬಲವಿಲ್ಲದ್ದರಿಂದ ನನ್ನ ಉಪನಯನ 7ನೇ ಕ್ಲಾಸ್ ಇರುವಾಗ ಆಯಿತು.  ಆ ಸಂದರ್ಭದಲ್ಲಿ ತಲೆಗೆ ಮುಂಡನ ಮಾಡಿ ಶಿಖೆ ಮಾತ್ರ ಉಳಿಸಬೇಕಾಗಿತ್ತು. ಆದರೆ ಶಾಲೆಯ ಸಹಪಾಠಿಗಳು ಕೀಟಲೆ ಮಾಡಬಹುದೆಂಬ ಭಯದಿಂದ ಹಿರಿಯಣ್ಣನ ಒತ್ತಾಯವಿದ್ದರೂ ಈ ಬದಲಾವಣೆಗೆ ಒಪ್ಪದೆ ಶಿಖೆಯ ಜೊತೆಗೆ  ಸಣ್ಣ ಕ್ರಾಪ್ ಉಳಿಸಿಕೊಳ್ಳುವಲ್ಲಿ ಸಫಲನಾಗಿದ್ದೆ.

ಸಿದ್ಧವನಕ್ಕೆ ಸೇರ್ಪಡೆ


8ನೆಯ ತರಗತಿಗೆ ಉಜಿರೆ ಹೈಸ್ಕೂಲಿಗೆ ಹೋಗಬೇಕಾಗಿತ್ತು.  ನನ್ನ ಅಣ್ಣ ಹಾಸ್ಟೆಲಲ್ಲಿ ಉಳಿದುಕೊಂಡು SSLC ಮುಗಿಸಿದ್ದರಿಂದ ನಾನೂ ಹಾಗೆಯೇ ಮಾಡುವುದೆಂದು ನಿಶ್ಚಯವಾಗಿ ಮಾನಸಿಕವಾಗಿ ಅದಕ್ಕೆ ಸಿದ್ಧನಾಗಿದ್ದೆ.   7ನೇ ತರಗತಿಯ ಪಬ್ಲಿಕ್ ಪರೀಕ್ಷೆಯಲ್ಲಿ ಶಾಲೆಗೆ ಮೊದಲಿಗನಾಗಿ ತೇರ್ಗಡೆಯೂ ಆದೆ.  ಜೂನ್‌ನಲ್ಲಿ ಹೈಸ್ಕೂಲ್ ಆರಂಭವಾಗುವ ಸಮಯಕ್ಕೆ ಹಾಸ್ಟೆಲ್ ಸೇರುವುದಕ್ಕೆಂದು ಹೊರಗಿನ ವ್ಯವಹಾರಗಳ ಮ್ಯಾನೇಜ್‌ಮೆಂಟ್ ಮಾಡುತ್ತಿದ್ದ ನಮ್ಮ ಎರಡನೇ ಹಿರಿಯಣ್ಣನ ಜೊತೆಗೆ  (ನೋಡಿ - ಒಂದು ಗ್ರೂಪ್ ಫೋಟೋದ ಸುತ್ತ) ಉಜಿರೆಗೆ ಹೋದೆವು.  ಹೈಸ್ಕೂಲಿಗೆ ದಾಖಲಾಗಲು ಬಂದ ನಮ್ಮೂರಿನ ಇತರ ಕೆಲವು ಹುಡುಗರೂ ಪೇಟೆಯಲ್ಲಿ ಸಿಕ್ಕರು.  ಅವರೆಲ್ಲ ಸಿದ್ಧವನ ಗುರುಕುಲಕ್ಕೆ ಸೇರುವವರೆಂದು ತಿಳಿದ ನಮ್ಮಣ್ಣ ನನ್ನನ್ನೂ ಹಾಸ್ಟೆಲ್ ಬದಲಿಗೆ ಸಿದ್ಧವನಕ್ಕೆ ಸೇರಿಸುವ ದಿಢೀರ್ ನಿರ್ಧಾರ ಕೈಗೊಂಡರು.  ಸಿದ್ಧವನ ಅಂದರೆ ಬಲು ಕಟ್ಟು ನಿಟ್ಟು,  ಅಲ್ಲಿ ಕಡ್ಡಾಯವಾಗಿ ಬೆಳಗಿನ ಜಾವ ಏಳಬೇಕು, ತಣ್ಣೀರ ಸ್ನಾನ ಮಾಡಬೇಕು, ಹಾಗೆ ಹೀಗೆ  ಎಂದೆಲ್ಲ ಕೇಳಿ ತಿಳಿದಿದ್ದ ನನ್ನ ಪ್ರಬಲ ವಿರೋಧ ಕೆಲಸ ಮಾಡಲಿಲ್ಲ.  ಒತ್ತಾಯಪೂರ್ವಕವಾಗಿ ಸಿದ್ಧವನಕ್ಕೆ ನನ್ನ ಸೇರ್ಪಡೆಯಾಯಿತು.  ನನ್ನಂಥ ಇತರ ನೂರಾರು ವಿದ್ಯಾರ್ಥಿಗಳಿದ್ದ ಅಲ್ಲಿ ವಾಸ್ತವವಾಗಿ ಯಾವ ತೊಂದರೆಯೂ ಇರಲಿಲ್ಲ. ವಾರ್ಡನ್ ಜಿನರಾಜ ಶಾಸ್ತ್ರಿ ಸೌಮ್ಯ ಸ್ವಭಾವದವರೇ ಆಗಿದ್ದರು.   

ರಂಪ ಮಾಡಿ ಹಾಸ್ಟೆಲ್ ಸೇರಿದ್ದು


ಆದರೆ ಹಾಸ್ಟೆಲಿಗೆ ಸೇರುವುದೆಂದು ಇದ್ದದ್ದು ಈ ರೀತಿ ಬದಲಾದದ್ದನ್ನು ನನ್ನ ಮನಸ್ಸು ಒಪ್ಪಲಿಲ್ಲ.  ಭಾನುವಾರಗಳಂದು ಮನೆಗೆ ಬಂದಾಗ ಅಲ್ಲಿ ಇಲ್ಲದ ತೊಂದರೆಗಳನ್ನೆಲ್ಲ ಕಲ್ಪಿಸಿ ಬಣ್ಣಿಸುತ್ತಾ ನಾನು ಅಲ್ಲಿರುವುದಿಲ್ಲ ಎಂದು ರಂಪ ಮಾಡತೊಡಗಿದೆ.  ಸೋಮವಾರ ಬೆಳಗ್ಗೆ ಹೊರಡುವಾಗಲಂತೂ ಇದು ತಾರಕಕ್ಕೇರುತ್ತಿತ್ತು.  ಆದರೆ ಇದರಿಂದ ಯಾವ ಪರಿಣಾಮವೂ ಉಂಟಾಗಲಿಲ್ಲ. ಹಾಗೆಯೇ ಸುಮಾರು ಎರಡು ತಿಂಗಳುಗಳು ಕಳೆದರೂ ನನ್ನ ಮನಸ್ಸು ಸಿದ್ಧವನವನ್ನು ಒಪ್ಪಿಕೊಳ್ಳಲೇ ಇಲ್ಲ. ಶಾಲೆಯಲ್ಲಿ ಪಾಠಗಳೂ ರುಚಿಸುತ್ತಿರಲಿಲ್ಲ.  ಕೊನೆಗೊಂದು ವಾರಮಧ್ಯದ  ದಿನ ಬೆಳಗ್ಗೆ  ಯಾರಲ್ಲೂ ಹೇಳದೆ ಕೇಳದೆ ಸಿದ್ಧವನದಿಂದ  ಮನೆಗೆ ಹೊರಟೆ. ಮುಂಡಾಜೆಯಲ್ಲಿ  ಬಸ್ಸಿಳಿದು ಮನೆಗೆ ನಡೆದುಕೊಂಡು ಹೋಗುತ್ತಿರುವಾಗ ಉಜಿರೆಗೆಂದು ಹೊರಟಿದ್ದ ನಮ್ಮ ಮೂರನೇ ಅಣ್ಣ ಎದುರಿನಿಂದ ಬರುತ್ತಿರುವುದು ಕಂಡಿತು. ನನ್ನನ್ನು ಕಂಡು ಆಶ್ಚರ್ಯ ಚಕಿತರಾದ ಅವರು  ಕಾರಣ ಕೇಳಿದಾಗ   ‘ಕಣ್ಣ ಮುಂದೆ ಚುಕ್ಕಿಗಳು ಕಾಣಿಸುತ್ತವೆ’ ಎಂದು ನಾನು ಹೇಳಿದ್ದು ಸುಳ್ಳೆಂದು ಅವರಿಗೆ ಗೊತ್ತಾಗಿ ‘ನಾನು ನಿನ್ನನ್ನು ಹಾಸ್ಟೆಲಿಗೆ ಸೇರಿಸುತ್ತೇನೆ’ ಎಂದು ಹೇಳಿ ನನ್ನನ್ನು ಕರಕೊಂಡು ಹೈಸ್ಕೂಲಿನ ಹೆಡ್ ಮಾಸ್ಟರ್ ಆರ್.ಎನ್. ಭಿಡೆಯವರ ಮನೆಗೆ ಹೋದರು.  ಅವರಿಗೆ ವಿಷಯವನ್ನೆಲ್ಲ ವಿವರಿಸಿದಾಗ ‘ಅದಕ್ಕೇಕೆ ಚಿಂತೆ.  ಅವನನ್ನು ಹಾಸ್ಟೆಲಿಗೆ ಸೇರಿಸುವಾ’ ಎಂದು ಹೇಳಿ  ಸಿದ್ಧವನದ ಮ್ಯಾನೇಜರ್ ಮಾರ್ಪಳ್ಳಿ ಸುಬ್ರಾಯರಿಗೆ ಮತ್ತು ಹಾಸ್ಟೆಲಿನ  ವಾರ್ಡನ್ ನಾಗಪ್ಪಯ್ಯ ಅವರಿಗೆ ಕಾಗದ ಬರೆದು ಕೊಟ್ಟರು.  ಈ ರೀತಿ ಆ ದಿನ ಸುಲಭವಾಗಿ ಸಿದ್ಧವನದಿಂದ ಹಾಸ್ಟೆಲಿಗೆ ನನ್ನ ವಾಸ್ತವ್ಯ ಬದಲಾಗಿ ಬೇಡದ ಬದಲಾವಣೆಯಿಂದುಂಟಾಗಿದ್ದ  ಕಾಲ್ಪನಿಕ  ಬವಣೆ ಈ ಬೇಡಿದ ಬದಲಾವಣೆಯಿಂದಾಗಿ ಕೊನೆಗೊಂಡಿತು.  ಆ ಮೇಲೆ ಇತರರಿಗೆ ಬಲು ಕಟ್ಟುನಿಟ್ಟಿನವರು ಅನ್ನಿಸುತ್ತಿದ್ದ ವಾರ್ಡನ್ ನಾಗಪ್ಪಯ್ಯ ಅವರ ನೆಚ್ಚಿನ ವಿದ್ಯಾರ್ಥಿಯಾಗಿ  ಮೂರು ವರ್ಷ ಉಜಿರೆ ಹಾಸ್ಟೆಲಿನಲ್ಲಿ ಕಳೆದೆ.   ನಾಗಪ್ಪಯ್ಯ ತಾವೇ ಇಷ್ಟ ಪಟ್ಟು ಒಮ್ಮೆ ನಮ್ಮ ಮನೆಗೂ ಬಂದು ಒಂದು ದಿನ ಇದ್ದರು. ತಾನು ಸೇರಿಸಿದ್ದ ಸಿದ್ಧವನದಿಂದ ಹಾಸ್ಟೆಲಿಗೆ ಬದಲಾವಣೆ ಮಾಡಿಸಿಕೊಂಡಿದ್ದಕ್ಕೆ ಎರಡನೇ ಅಣ್ಣ ಆಕ್ಷೇಪವೇನೂ ಎತ್ತಲಿಲ್ಲ.  ಈ ಕೆಲಸ ಅವರೇ ಮಾಡಬಹುದಾಗಿದ್ದರೂ ತಾನೇ ಕೈಗೊಂಡಿದ್ದ ನಿರ್ಧಾರವನ್ನು ಬದಲಿಸುವುದು  ಬೇಡದ ಬದಲಾವಣೆಯಾಗಿ ಅವರಿಗೆ ಕಂಡಿತೋ ಏನೋ.  ಈ ರೀತಿ ಒಮ್ಮೆ ಸಿದ್ಧವನದಿಂದ ಹೊರಬಿದ್ದರೂ  ಅಲ್ಲಿಯ ಋಣ ತೀರಿರಲಿಲ್ಲ ಅನ್ನಿಸುತ್ತದೆ.  ಪಿ.ಯು.ಸಿ ಮತ್ತು  ಡಿಗ್ರಿಗಾಗಿ ಮತ್ತೆ ನಾಲ್ಕು ವರ್ಷ ಸಿದ್ಧವನದ ವಠಾರದಲ್ಲೇ ಕಾರ್ಯಾಚರಿಸುತ್ತಿದ್ದ ಮಂಜುನಾಥೇಶ್ವರ ಕಾಲೇಜಿನಲ್ಲಿ ಕಾಲ ಕಳೆಯಬೇಕಾಯಿತು.  ಆದರೆ ಅಲ್ಲಿಯ ನಿವಾಸಿಯಾಗಿ ಅಲ್ಲ, ಮನೆಯಿಂದ ಕೆಲವು ವರ್ಷ ಬಸ್ಸಿನಲ್ಲಿ, ಆ ಮೇಲೆ ಸೈಕಲ್ಲಿನಲ್ಲಿ ಹೋಗಿ ಬರುವ ಡೇ ಸ್ಕಾಲರ್ ಆಗಿ.  ನಾವು ಡಿಗ್ರಿಯ ಅಂತಿಮ ವರ್ಷಕ್ಕೆ ಬರುವಷ್ಟರಲ್ಲಿ ಈಗಿನ ಬೃಹತ್ ಕಟ್ಟಡ ಸಿದ್ಧಗೊಂಡು  ಕೊನೆಯ ಪರೀಕ್ಷೆಯನ್ನಷ್ಟೇ ಅಲ್ಲಿ ಬರೆದೆ.

ಕೆಂಪು ಬಸ್ಸುಗಳ ಪ್ರವೇಶ


ಡಿಗ್ರಿ ಪ್ರಥಮ ವರ್ಷದಲ್ಲಿರುವಾಗ ಬಸ್ಸು ಸಂಚಾರದಲ್ಲಿ ಬೇಡದ ಬದಲಾವಣೆಯುಂಟಾಯಿತು.  ದಕ್ಷಿಣ ಕನ್ನಡದ ದಕ್ಷಿಣ ಭಾಗದ ರಸ್ತೆಗಳ ರಾಷ್ಟ್ರೀಕರಣ(ರಾಜ್ಯೀಕರಣ?) ಆಗಿ  ಅಲ್ಲಿಯವರೆಗೆ ನಿರ್ದಿಷ್ಟ ಸಮಯಕ್ಕೆ ಓಡಾಡುತ್ತಾ  ಅತ್ಯಂತ ಅನುಕೂಲಕರವಾಗಿದ್ದ ಖಾಸಗಿ ಬಸ್ಸುಗಳ ಬದಲಿಗೆ  ಕೆಂಪು ಬಸ್ಸುಗಳ ಹೊತ್ತು ಗೊತ್ತಿಲ್ಲದ ಸಂಚಾರ ಆರಂಭವಾಯಿತು. ಇದರಿಂದಾಗಿ ಅನೇಕ ಸಲ ದುಬಾರಿ ಶುಲ್ಕ ತೆತ್ತು ಖಾಸಗಿ ಟ್ಯಾಕ್ಸಿಗಳಲ್ಲಿ ಪಯಣಿಸಬೇಕಾಗುತ್ತಿತ್ತು. ಕೆಲವು ಸಲ ಕ್ಲಾಸುಗಳನ್ನು ತಪ್ಪಿಸಿಕೊಳ್ಳಬೇಕಾಗುತ್ತಿತ್ತು. ಕೊನೆಗೆ ಅಣ್ಣ ತೆಗೆಸಿ ಕೊಟ್ಟ ಸೈಕಲ್ ಇದಕ್ಕೆ ಪರಿಹಾರ ಒದಗಿಸಿತು.  ಆದರೆ ಈ ಬದಲಾವಣೆಯಿಂದಲೂ ಬವಣೆಗಳು ಪೂರ್ಣವಾಗಿಯೇನೂ ದೂರಾಗಲಿಲ್ಲ.  ಆಗಿನ ಟೈರು ಟ್ಯೂಬುಗಳ ಗುಣಮಟ್ಟ ಅಷ್ಟೊಂದು ಚೆನ್ನಾಗಿಲ್ಲದಿದ್ದುದರಿಂದ ಇಟ್ಟಲ್ಲೇ ಗಾಳಿ ಕಮ್ಮಿ ಆಗುವುದು, ಟೈರಿನ ಸರಿಗೆ ಬಿಚ್ಚಿಕೊಳ್ಳುವುದು, ನೆಕ್ ಕಟ್ಟಾಗುವುದು ಇತ್ಯಾದಿ ತೊಂದರೆಗಳು ಸಂಭವಿಸುತ್ತಿದ್ದವು. ಒಂದು ಸಲ ಚೈನ್ ತುಂಡಾಗಿ ಸೈಕಲನ್ನು ಎರಡು ಕಿಲೋಮೀಟರ್ ತಳ್ಳಿಕೊಂಡು ಹೋಗುವ ಪ್ರಸಂಗ ಬಂದು ಆ ದಿನ ಇದ್ದ ಇಂಗ್ಲಿಷ್ ಪರೀಕ್ಷೆಗೆ ಅರ್ಧ ಗಂಟೆ ತಡವಾಗಿ ಹೋಗಬೇಕಾಯಿತು. ಆದರೂ ಇವುಗಳನ್ನೆಲ್ಲ ಸರಿಪಡಿಸಲು ‘ಇದೆಲ್ಲ ಹೋಗಿದೆ ಭಟ್ರೇ’ ಅನ್ನುವ ಸೈಕಲ್ ಶಾಪಿನ ಶೇಷಗಿರಿ ಶೆಣೈ  ಸಹಾಯ ಹಸ್ತ ಇದ್ದೇ ಇತ್ತು.  ನಾನೂ ಪಂಕ್ಚರ್ ರಿಪೇರಿ, ಸರಿಗೆಯಿಂದ ಬೇರ್ಪಟ್ಟ ಟೈರಿನ ಬದಿಗಳನ್ನು ನೂಲಿನಿಂದ ಹೊಲಿಯುವುದು ಇತ್ಯಾದಿ ತೇಪೆ ಕೆಲಸಗಳಲ್ಲಿ ನೈಪುಣ್ಯ ಸಾಧಿಸಿದ್ದೆ.

ಹಾಡುಗಳಲ್ಲಿ ಬೇಡದ ಬದಲಾವಣೆ


ಕಾಲೇಜು ಮುಗಿಯುತ್ತಲೇ ಬೃಹತ್ತಾದ ಬೇಡದ ಬದಲಾವಣೆಯೊಂದು  ನನ್ನನ್ನು ಬಹುವಾಗಿ ಬಾಧಿಸಿತು.  ಅದುವೇ ಹಿಂದಿ ಚಿತ್ರಸಂಗೀತದ ಆರಾಧನೋತ್ತರ ಕಾಲದಲ್ಲಿ ರಾಜ್‌ಕಪೂರ್‌ಗೆ ಮತ್ತು ಇತರ ಪ್ಯಾಥೋಸ್ ಹಾಡುಗಳಿಗೆ ಮುಕೇಶ್, ದೇವ್ ಆನಂದ್‌ಗೆ ಮತ್ತು ತನಗೆ ಕಿಶೋರ್, ಹಾಸ್ಯ ಅಥವಾ ಶಾಸ್ತ್ರೀಯ ಹಾಡುಗಳಿಗೆ ಮನ್ನಾಡೇ, ಬಿ.ಆರ್. ಚೋಪ್ರಾ ಚಿತ್ರಗಳಿಗೆ ಮಹೇಂದ್ರ ಕಪೂರ್ ಮತ್ತು ಉಳಿದೆಲ್ಲರಿಗೆ ರಫಿ ಎಂದಿದ್ದ ಅಲಿಖಿತ ನಿಯಮ ಮುರಿದು ಹೋಗಿ  ಎಲ್ಲವೂ ಕಿಶೋರ್‌ಮಯವಾದದ್ದು.  ಕಿಶೋರ್ ಕುಮಾರ್ ಕೂಡ ನನ್ನ ನೆಚ್ಚಿನ ಗಾಯಕ ಆಗಿದ್ದವರೇ.  ಆರಾಧನಾ ಸೇರಿ ಅಲ್ಲಿಯ ವರೆಗಿನ  ಅವರ ಹಾಡುಗಳನ್ನೂ ಬಹುವಾಗಿ ಮೆಚ್ಚಿದ್ದೆ.  ಆದರೆ ಧರ್ಮೇಂದ್ರ, ಜೀತೇಂದ್ರ, ರಾಜೇಂದ್ರ ಕುಮಾರ್, ಕೊನೆಗೆ ದಿಲೀಪ್ ಕುಮಾರ್ ಹಾಡುಗಳನ್ನೂ ಆತ ಹಾಡುವುದನ್ನು ಒಪ್ಪಿಕೊಳ್ಳಲು ನನಗೆ ಆಗಲಿಲ್ಲ. ಪರೀಕ್ಷೆಗೆ ಓದುವಾಗಲೂ  ರಫಿ ಹಾಡುಗಳನ್ನು ಮೆಲುದನಿಯಲ್ಲಿ ಆಲಿಸುತ್ತಿದ್ದವ ನಾನು. ಕಾಲೇಜು ಶಿಕ್ಷಣ ಮುಗಿದ ಮೇಲೆ ಇಂಥ ಹಾಡುಗಳನ್ನು ಮನಸೋ ಇಚ್ಛೆ ಆನಂದಿಸುವ ನನ್ನ ಮಹದಾಸೆಗೆ ಈ ಬೇಡದ ಬದಲಾವಣೆ ತಣ್ಣೀರೆರಚಿತ್ತು.  ಎಲ್ಲ ರೇಡಿಯೋ ನಿಲಯಗಳಿಂದ ಹಗಲು ರಾತ್ರಿ  ಕಿಶೋರ್ ಹಾಡುಗಳೇ ಕೇಳಿಸತೊಡಗಿದ್ದನ್ನು ನನ್ನಿಂದ ಅರಗಿಸಿಕೊಳ್ಳಲಾಗುತ್ತಿರಲಿಲ್ಲ.  ರೇಡಿಯೋ ಸಿಲೋನಿನಿಂದ ಹೊಸ ಚಿತ್ರಗಳ ಹಾಡುಗಳು ಮೊದಲ ಬಾರಿ ಪ್ರಸಾರವಾಗುವಾಗ ಒಂದಾದರೂ ರಫಿ ಹಾಡು ಇದೆಯೇ ಎಂದು ಕಾತರದಿಂದ ಕಾಯುತ್ತಿದ್ದೆ. ಈಗಿನ ಹಾಗೆ ನಮಗೆ ಬೇಕಿದ್ದ ಹಾಡುಗಳನ್ನು ಕೇಳಲು ಆಗ ಅಂತರ್ಜಾಲ ಎಲ್ಲಿತ್ತು. ಎಲ್ಲದಕ್ಕೂ ರೇಡಿಯೋದವರ ಮರ್ಜಿಯನ್ನು ಕಾಯಬೇಕಿತ್ತು.  ಎರಡು ವರ್ಷದ ನಿರುದ್ಯೋಗ ಪರ್ವದ ನಂತರ ನೌಕರಿ ದೊರಕಿ ನನಗೆ ಸಂಪೂರ್ಣ ಸ್ವಾತಂತ್ರ್ಯ ದೊರಕಿದ ಮೇಲೆ ಬಹಳಷ್ಟು ಸಿನಿಮಾಗಳನ್ನು ನೋಡಿದೆ. ಆದರೆ ಅವುಗಳಲ್ಲಿ ಮರು ಬಿಡುಗಡೆಯಾದ ಹಳೆ ಸಿನಿಮಾಗಳ ಸಂಖ್ಯೆಯೇ ಜಾಸ್ತಿ. ಕಿಶೋರ್ ಹಾಡುಗಳು ಮಾತ್ರ ಇರುವ ಎಷ್ಟೋ ಸಿನಿಮಾಗಳನ್ನು ನಾನು ನೋಡಲೇ ಇಲ್ಲ!  ಗಾಯದ ಮೇಲೆ ಉಪ್ಪು ಸುರಿದಂತೆ ಕೆಲವು ವರ್ಷಗಳ ನಂತರ ಕನ್ನಡ ಚಿತ್ರಸಂಗೀತ ಕ್ಷೇತ್ರದಲ್ಲೂ ಇಂಥದೇ ಬೇಡದ ಬದಲಾವಣೆ ಸಂಭವಿಸಿತು. 80ರ ದಶಕದಲ್ಲಿ ಹಳೆ ಹಾಡುಗಳ ಕ್ಯಾಸೆಟ್ಟುಗಳು ಬರತೊಡಗುವ ವರೆಗೆ ಇಲ್ಲಿ ಹಿಂದಿ ಭಾಷೆಗಿಂತ ಹೆಚ್ಚಾಗಿಯೇ ಏಕತಾನತೆ  ಬಾಧಿಸಿತು. 

ಇತರ ಉದಾಹರಣೆಗಳು


ಬೇಡದ ಬದಲಾವಣೆಯನ್ನು ಬಯಸದ ಚಿಕ್ಕ ಪುಟ್ಟ ಉದಾಹರಣೆಗಳೂ ಅನೇಕ ಇರುತ್ತವೆ. ಬೆಳಗ್ಗೆ ಒಂದು ಮಗ್ಗುಲಿಂದ ಏಳುವ ಅಭ್ಯಾಸವಿದ್ದರೆ ದಿನವೂ ಅದೇ ಮಗ್ಗುಲಿಂದ ಏಳುತ್ತೇವೆ. ಎಂದಾದರೂ ತಪ್ಪಿ  ಇನ್ನೊಂದು ಮಗ್ಗುಲಿಂದ ಎದ್ದರೆ ಆ ದಿನ ಏನಾದರೂ ಅಹಿತಕರವಾದದ್ದು ಸಂಭವಿಸುತ್ತದೋ ಎಂಬ ಅಳುಕುಂಟಾಗುವುದುಂಟು. ನಾವು ಸ್ನಾನ ಮಾಡುವಾಗ ಮೊದಲು ತಲೆಗೆ, ನಂತರ ಹೊಟ್ಟೆ, ಆ ಮೇಲೆ ಎಡ ಕೈ, ಬಲ ಕೈ, ಬೆನ್ನು, ಎಡ ಕಾಲು, ಬಲಕಾಲು ಹೀಗೆ ಸೋಪ್ ಹಚ್ಚಿಕೊಳ್ಳುತ್ತೇವೆಂದು ಇಟ್ಟುಕೊಳ್ಳಿ. ಮರು ದಿನವೂ ಇದೇ ಪ್ಯಾಟರ್ನ್ ಅನುಸರಿಸುತ್ತೇವೆ ಹೊರತು  ಒಂದು ದಿನವೂ ಇದನ್ನು ಬದಲಾಯಿಸುವುದಿಲ್ಲ. ಟವೆಲಿನಿಂದ ಒರಸಿಕೊಳ್ಳುವುದಕ್ಕೂ ಎಂದೂ ಬದಲಾಗದ ನಿರ್ದಿಷ್ಟ ಪ್ಯಾಟರ್ನ್ ಇರುತ್ತದೆ. ಕೆಲಸ ಮಾಡುವ ಕಚೇರಿಯ ಕ್ಯಾಂಟೀನಿನಲ್ಲಿ ನಿರ್ದಿಷ್ಟ ಟೇಬಲನ್ನೇ ಇಷ್ಟ ಪಡುತ್ತೇವೆ.  ಅನೇಕ ಟಾಯ್ಲೆಟುಗಳಿದ್ದರೆ ಮೊದಲ ದಿನ ಬಳಸಿದುದನ್ನೇ ಯಾವಾಗಲೂ ಬಳಸಲಿಚ್ಛಿಸುತ್ತೇವೆ.  ನಾನು ಉದ್ಯೋಗದಲ್ಲಿರುವಾಗ ಅನೇಕ ತರಬೇತಿಗಳನ್ನು ಪಡೆದದ್ದುಂಟು.  ಟ್ರೈನಿಂಗ್ ಸೆಂಟರುಗಳ ಕ್ಲಾಸ್ ರೂಮುಗಳಲ್ಲಿ ಎಲ್ಲಿ ಬೇಕೆಂದರಲ್ಲಿ ಕುಳಿತುಕೊಳ್ಳುವ ಸ್ವಾತಂತ್ರ್ಯವಿರುತ್ತದೆ.  ಆದರೆ ಎಲ್ಲರೂ ಮೊದಲ ದಿನ ಕುಳಿತ ಸ್ಥಾನದಲ್ಲೇ ಕೊನೆಯವರೆಗೆ ಕುಳಿತುಕೊಳ್ಳುವುದನ್ನು ಗಮನಿಸಿದ್ದೇನೆ.  ಕೂಡುಕುಟುಂಬದ ನಮ್ಮ ಮನೆಯಲ್ಲಿ ನಾನು ಒಂದು ನಿರ್ದಿಷ್ಟ ಕಿಟಿಕಿಯ ಬುಡದಲ್ಲಿ ಊಟಕ್ಕೆ ಕುಳಿತುಕೊಳ್ಳುತ್ತಿದ್ದುದು.  ಉದ್ಯೋಗಕ್ಕಾಗಿ  ಮನೆ ಬಿಡುವ ವರೆಗೂ ಆ ಜಾಗ ಬದಲಾಗಿರಲಿಲ್ಲ.  ನಂತರ ಮನೆಗೆ ಹೋದಾಗಲೂ ಅಲ್ಲೇ ಕುಳಿತುಕೊಳ್ಳುತ್ತಿದ್ದೆ.

ಇದೆಲ್ಲ ಏನಿದ್ದರೂ ನಾವು ಬೇಡದ ಬದಲಾವಣೆ ಬಗ್ಗೆ.  ನಾವು ಬೇಡಿದ ಬದಲಾವಣೆಯಾದರೆ ಅದು ಬೇಡವೆಂದವರು  ನಮಗೆ ಬೇಡವಾಗುತ್ತಾರೆ. 

*********

3-1-2021ರ ವಿಶ್ವವಾಣಿಯ ವಿರಾಮದಲ್ಲೂ ಇದು  ಪ್ರಕಟವಾಯಿತು.  ನೇರವಾಗಿ ಓದಲು ಇಲ್ಲಿ ಕ್ಲಿಕ್ಕಿಸಿ.


5 comments:

  1. ಈಗಷ್ಟೇ ಓದಿದೆ ವಿಶ್ವವಾಣಿ ವಿರಾಮ ಪುರವಣಿಯಲ್ಲಿ. ಈ ಸುಲಲಿತಪ್ರಬಂಧ ನನಗೆ ತುಂಬ ಇಷ್ಟವಾಯ್ತು! ನಾನು ಸಿದ್ಧವನ ಗುರುಕುಲದಲ್ಲಿ ಎರಡು ವರ್ಷಗಳನ್ನು ಯಶಸ್ವಿಯಾಗಿ ಕಳೆದವನು ಎಂದು ಈ ಸಂದರ್ಭದಲ್ಲಿ ಸ್ಮರಿಸಬಹುದು.

    Shrivatsa Joshi (FB)

    ReplyDelete
  2. ನಿಜ. ನಮಗೆ ಬೇಕಾದ ಬದಲಾವಣೆ ನಮಗೆ ಖುಷಿ ಕೊಡುತ್ತದೆ. ಎಲ್ಲಾ ವಿವರಗಳೂ ಸೊಗಸಾಗಿವೆ. ನಿಮ್ಮ ಅಣ್ಣಂದಿರು “ ತಂದೆಯ ಸ್ಥಾನವನ್ನೂ” ತುಂಬಿದ್ದರು- ಅನ್ನಿಸುತ್ತದೆ. ನಮ್ಮ ಮನೆಗಳಲ್ಲೂ, ನಾವು ಪ್ರತೀದಿನ ನಮಗಿಷ್ಟವಾದ ಒಂದು ನಿರ್ದಿಷ್ಟ ಜಾಗದಲ್ಲಿ ಕುಳಿತುಕೊಂಡು, ಪೇಪರ್ ಓದುವುದು/ ಮೊಬೈಲ್ ನೋಡುವುದು- ಮಾಡಿಕೊಂಡು, ಒಂದು comfort zone ಅನ್ನು create ಮಾಡಿಕೊಂಡಿರುತ್ತೇವೆ.ನೀವು ಬರೆದಿರುವ ಹೆಚ್ಚಿನಂಶ- ಎಲ್ಲಾ ವಿವರಗಳೂ- ನಾವೂ ಅವುಗಳಿಗೆ connect ಮಾಡಿಕೊಳ್ಳುವಂತಿವೆ. ಓದಿ ಖುಷಿ ಆಗಿದ್ದಷ್ಟೇ ಅಲ್ಲದೆ, ನನ್ನ ಜೀವನದಲ್ಲಿ ಬಂದು ಹೋದ “ಬೇಕು- ಬೇಡ” ದ ಬದಲಾವಣೆಗಳು, ಅವುಗಳಿಂದ ಸಿಕ್ಕ ಸಂತೋಷ ಹಾಗೂ ನಿರಾಸೆ- ಇವೆಲ್ಲವೂ ನನ್ನ ಸ್ಮೃತಿಪಟಿಲದ ಮೇಲೆ ಹಾದುಹೋದವು.

    Mangala Gundappa (FB)

    ReplyDelete
  3. ಲೇಖನ ಚೆನ್ನಾಗಿದೆ. ಈ ಹೊಸ ಬದಲಾವಣೆ ಸ್ಮಾರ್ಟ್ ಫೋನ್ ಬಂದಾಗಲೂ ಶುರು ಶುರುವಿಗೆ ( smart phone ಏನೋ ಖರೀದಿಸಿದ್ದೆ) ಮನಸ್ಸು ನನ್ನ ಹಳೆಯ ನೋಕಿಯಾ ಬಟನ್ ಫೋನ್ ನ ತ್ಯಾಗ ಮಾಡಲು ತಯಾರೇ ಇರಲಿಲ್ಲ!

    PBK (FB)

    ReplyDelete
  4. ಸೊಗಸಾಗಿದೆ. ಅದರಲ್ಲಿಯೂ ನೀವು ಕಿಶೋರ್‌ ಕುಮಾರ್‌ ಬಗ್ಗೆ ಬರೆದದ್ದು ತುಂಬ ನಿಜ!

    ReplyDelete

Your valuable comments/suggestions are welcome