
ಕಾಲಗರ್ಭದಲ್ಲಿ ಅಡಗಿ ಹೋಗಿರುವ ಬಲು ಅಪರೂಪದ ಹಳೆಯ ಹಾಡುಗಳನ್ನು ಹುಡುಕಿ ಕೇಳಿಸುವುದು ಯಾವಾಗಲೂ ನನ್ನ ಪ್ರಯತ್ನವಾಗಿರುತ್ತದೆ. ಇಂಥ ಹಾಡುಗಳು ಎಲ್ಲರಿಗೂ ಇಷ್ಟವಾಗಲಾರವಾದರೂ ಒಂದು ದಾಖಲೆಯ ರೂಪದಲ್ಲಿ ಇರಲಿ ಎಂಬ ದೃಷ್ಟಿಯಿಂದ ನಾನು ಈ ಕೆಲಸ ಮಾಡುತ್ತೇನೆ. ಎಡ್ವಾನ್ಸ್ ಬುಕಿಂಗ್ ಮಾಡಿ ಸಿನಿಮಾ ಟಾಕೀಸಿಗೆ ಹೋದಾಗ ಅಲ್ಲಿ ಜನಸಂದಣಿಯೇ ಇಲ್ಲದಿರುವಂತೆ ಅಥವಾ ಬಸ್ಸಿನ ಸೀಟು ರಿಸರ್ವ್ ಮಾಡಿಸಿ ಹೋದಾಗ ಎಲ್ಲ ಸೀಟುಗಳು ಖಾಲಿ ಇರುವಂತೆ ಕೆಲವು ಸಲ ನಾನು ಕಷ್ಟ ಪಟ್ಟು ಹುಡುಕಿ ಹಾಕಿದ ಹಾಡಿನ ಇಡೀ ಸಿನಿಮಾವೇ ಅಂತರ್ಜಾಲದಲ್ಲಿ ಸುಲಭವಾಗಿ ಲಭ್ಯವಾಗಿ ನನ್ನ ಒಣ ಪ್ರತಿಷ್ಠೆ ಠುಸ್ಸೆನ್ನುವುದೂ ಇದೆ! ಈಗ ನಾನು ಕೇಳಿಸಲಿರುವ ಹಾಡು ಅಂತರ್ಜಾಲಕ್ಕೆ ಪಾತಾಳ ಗರಡಿ ಹಾಕಿ ಶೋಧಿಸಿದರೂ ಸದ್ಯಕ್ಕಂತೂ ಎಲ್ಲೂ ಸಿಗಲಾರದು ಎಂಬ ನಂಬಿಕೆ ನನ್ನದು.
ಕಾಡಿಗೆ ಮಾರುವ ಸುರ್ಮಾ ಮೇರಾ ನಿರಾಲಾ, ಬೋರೆ ಹಣ್ಣುಗಳನ್ನು ಮಾರುವ ಬೇರ್ ಲ್ಯೋ ಮೇವಾ ಗರೀಬೋಂ ಕಾ, ಬಳೆಗಳನ್ನು ಮಾರುವ ಲೇ ಲೋ ಚೂಡಿಯಾಂ ನೀಲಿ ಪೀಲಿ ಲಾಲ್ ಹರಿ ಆಸ್ಮಾನಿ, ಸಿಯಾಳ ಮಾರುವ ಯೇಲೋರೇ ಲೇಲೋ ಬಾಬು ಪೀ ಲೋ ನಾರಿಯಲ್ ಪಾನಿ, ಚಹಾ ಮಾರುವ ಆಹೇಂ ನ ಭರ್ ಠಂಡಿ ಠಂಡಿ ಗರಮ್ ಗರಮ್ ಚಾಯ್ ಪೀಲೆ, ಮೊಬೈಲ್ ಹೋಟೇಲಿನ ಆಯಾ ಮೈ ಲಾಯಾ ಚಲ್ತಾ ಫಿರ್ತಾ ಹೋಟಲ್, ಖಾಲಿ ಬಾಟ್ಲಿಗಳನ್ನು ಮಾರುವ ಖಾಲಿ ಡಬ್ಬಾ ಖಾಲಿ ಬೋತಲ್ ಲೇಲೆ ಮೇರೆ ಯಾರ್ ಮುಂತಾದವು ವಿವಿಧ ವಸ್ತುಗಳನ್ನು ವಿಕ್ರಯಿಸುವ ಹಿಂದಿಯ ಕೆಲವು ಹಾಡುಗಳು. ಇದೇ ರೀತಿ ಕನ್ನಡದಲ್ಲಿ ವರದಕ್ಷಿಣೆ ಚಿತ್ರದ ಸುಂದರ್ ಟೂತ್ ಪೌಡರ್, ಪರೋಪಕಾರಿ ಚಿತ್ರದ ಬೇಕೆ ಐಸ್ ಕ್ರೀಮ್, ದೇವರ ಮಕ್ಕಳು ಚಿತ್ರದ ಬೇಕೇನು ಸಾಮಾನು ನೋಡು ನೋಡು, ದುಡ್ಡೇ ದೊಡ್ಡಪ್ಪ ಚಿತ್ರದ ಸೋ ಸೋ ಸೋ ಡಾ ಡಾ ಡಾ, ದಾಹ ಚಿತ್ರದ ಬಳೆಗಾರ ಚೆನ್ನಯ್ಯ ಇತ್ಯಾದಿಗಳ ಸಾಲಿನಲ್ಲಿ ಬಂದದ್ದೇ 1965ರ ಅಮರಜೀವಿ ಚಿತ್ರದ ಮಿಠಾಯಿ ಮಾರುವ ಸುಬ್ಬನ ಹಾಡು.
ಈಗ ಈ ಚಿತ್ರದ ಹಳ್ಳಿಯೂರ ಹಮ್ಮೀರ ಹಾಡು ಮಾತ್ರ ಕೇಳಲು ಸಿಗುತ್ತಿದೆ. ನಮ್ಮ ಅಂದಿನ ನ್ಯಾಶನಲ್ ಎಕ್ಕೋ ರೇಡಿಯೋದ ದಿನಗಳಲ್ಲಿ ಈಗ ಆಕಾಶವಾಣಿ ಧಾರವಾಡ ಇರುವ ಮೀಟರಿನಲ್ಲಿ ಅತಿ ಸ್ಪಷ್ಟವಾಗಿ ಕೇಳುತ್ತಿದ್ದ ಭದ್ರಾವತಿ ನಿಲಯದಿಂದ ಈ ಚಿತ್ರದ ಎಲ್ಲ ಹಾಡುಗಳು ದಿನ ನಿತ್ಯ ಎಂಬಂತೆ ಪ್ರಸಾರವಾಗುತ್ತಿದ್ದವು. ಅವುಗಳ ಪೈಕಿ ಭಲಾರೆ ಹೆಣ್ಣೆ ಮತ್ತು ಈ ಮಿಠಾಯಿ ಸುಬ್ಬನ ಹಾಡು ನನಗೆ ಅತಿ ಪ್ರಿಯವಾಗಿದ್ದವು. ಈಗ ಆ ಭಲಾರೆ ಹೆಣ್ಣು ಎಲ್ಲಿ ಕಾಣೆಯಾಗಿದ್ದಾಳೆಂದು ಗೊತ್ತಿಲ್ಲ.
ಅಮರಜೀವಿ ಚಿತ್ರದ್ದು ಒಂದು ವಿಶೇಷ ಇದೆ. ಚಿತ್ರೀಕರಣ ಆರಂಭವಾದಾಗ ಇದರ ಹೆಸರು ಹಳ್ಳಿಯ ಹುಡಿಗಿ ಎಂದಾಗಿತ್ತು! ಆ ಹೆಸರಿನೊಂದಿಗೆ ಚಿತ್ರದ ಜಾಹೀರಾತೂ ಬಿಡುಗಡೆಯಾಗಿತ್ತು. ಆಗ ಚಿಂದೋಡಿ ಲೀಲಾ ಅಭಿನಯಿಸುತ್ತಿದ್ದ, ಬಹುಶಃ ಗುಬ್ಬಿ ಕಂಪನಿಯ ಇದೇ ಹೆಸರಿನ ನಾಟಕ ಬಲು ಪ್ರಸಿದ್ಧವಾಗಿತ್ತು. ಆವರ ಆಕ್ಷೇಪದಿಂದ ಹೆಸರು ಬದಲಾಯಿತೇ ಎಂದು ಗೊತ್ತಿಲ್ಲ. ಈ ಚಿತ್ರ ಆ ನಾಟಕವನ್ನಾಧರಿಸಿದ್ದೇ ಎಂಬ ಬಗ್ಗೆಯೂ ಮಾಹಿತಿ ಇಲ್ಲ. ಹಿಂದಿಯಲ್ಲೂ ಚಿತ್ರಗಳ ಹೆಸರು ಬದಲಾವಣೆಯಾದ ಉದಾಹರಣೆಗಳಿವೆ. ಶಮ್ಮಿ ಕಪೂರ್ ಅಭಿನಯದ ಜಂಗ್ಲಿಗೆ ಮೊದಲು ಮಿಸ್ಟರ್ ಹಿಟ್ಲರ್ ಎಂದು ಹೆಸರಿಡಲಾಗಿತ್ತಂತೆ. ಮರೋ ಚರಿತ್ರದ ಹಿಂದಿ ಅವತರಣಿಕೆ ಮೊದಲು ಏಕ್ ನಯಾ ಇತಿಹಾಸ್ ಆಗಿದ್ದದ್ದು ನಂತರ ಏಕ್ ದೂಜೆ ಕೇ ಲಿಯೆ ಎಂದು ಬದಲಾಯಿತು. ಅದರ ಒಂದು ಹಾಡಲ್ಲಿ ಏಕ್ ನಯಾ ಇತಿಹಾಸ್ ಬನಾಯೇಂಗೆ ಎಂಬ ಸಾಲು ಇರುವುದನ್ನು ಗಮನಿಸಬಹುದು.

ರಾಜಾ ಶಂಕರ್, ಹರಿಣಿ, ನರಸಿಂಹರಾಜು ಮುಂತಾದವರ ತಾರಾಗಣವಿದ್ದು ವಿಜಯಭಾಸ್ಕರ್ ಸಂಗೀತವಿದ್ದ ಅಮರಜೀವಿ ಚಿತ್ರದ ಮಿಠಾಯಿ ಸುಬ್ಬನ ಹಾಡು ಹಾಡಿದ್ದು ನಾನು ಕನ್ನಡದ ಮನ್ನಾಡೆ ಎಂದು ಕರೆಯುವ ಪೀಠಾಪುರಂ ನಾಗೇಶ್ವರ ರಾವ್. ಒಂದು ಕಾಲದಲ್ಲಿ ರಾಜ್ ಕುಮಾರ್ ದನಿಯಾಗಿ ಅಣ್ಣ ತಂಗಿ ಚಿತ್ರದ ಕಂಡರೂ ಕಾಣದ್ ಹಾಂಗೆ ಎಂದು ಹಾಡಿದ್ದ ಇವರು ಆ ಮೇಲೆ ಕನ್ನಡ, ತೆಲುಗು ಎರಡೂ ಭಾಷೆಗಳಲ್ಲಿ ಹಿನ್ನೆಲೆ ಮತ್ತು ಕಾಮಿಡಿ ಹಾಡುಗಳಿಗೆ ಸೀಮಿತರಾದರು. 70ರ ದಶಕದಲ್ಲಿ ಹೀರೋಗಳೇ ಕಾಮಿಡಿ ಮಾಡತೊಡಗಿ ಒಂದೆರಡು ಕಂಠಗಳೇ ಎಲ್ಲ ರೀತಿಯ ಹಾಡುಗಳನ್ನು ಹಾಡುವ ಪರಂಪರೆ ಆರಂಭವಾದ ಪರಿಣಾಮ ತನ್ನ ಸಮಕಾಲೀನ ಅನೇಕ ಗಾಯಕರಂತೆ ಇವರೂ ಮರೆಯಾಗಿ ಹೋದರು.
50-60ರ ದಶಕಗಳಲ್ಲಿ ಹಾಡುಗಳಿಗೆ ವೈವಿಧ್ಯ ಒದಗಿಸುತ್ತಿದ್ದ ಗಾಯಕ ಗಾಯಕಿಯರ ಗಡಣವನ್ನು ಈ ಚಿತ್ರದಲ್ಲಿ ನೋಡಬಹುದು. ಮಧ್ಯದ ಸಾಲಿನಲ್ಲಿ ಟೈ ಧರಿಸಿದವರು ಪೀಠಾಪುರಂ.
50-60ರ ದಶಕಗಳಲ್ಲಿ ಹಾಡುಗಳಿಗೆ ವೈವಿಧ್ಯ ಒದಗಿಸುತ್ತಿದ್ದ ಗಾಯಕ ಗಾಯಕಿಯರ ಗಡಣವನ್ನು ಈ ಚಿತ್ರದಲ್ಲಿ ನೋಡಬಹುದು. ಮಧ್ಯದ ಸಾಲಿನಲ್ಲಿ ಟೈ ಧರಿಸಿದವರು ಪೀಠಾಪುರಂ.

ಅಮರಜೀವಿ ಚಿತ್ರದ ಜಾಹೀರಾತಲ್ಲಿ ಹೆಸರಿರುವ ಕಣಗಾಲ್ ಪ್ರಭಾಕರ ಶಾಸ್ತ್ರಿ, ಕು.ರ.ಸೀ ಮತ್ತು ಎಸ್.ಕೆ. ಕರೀಂ ಖಾನ್ ಅವರ ಪೈಕಿ ಕೈಲಾಸಂ ಶೈಲಿಯ ಈ ಹಾಡಿನ ರಚನೆ ಯಾರದ್ದೆಂದು ಗೊತ್ತಿಲ್ಲ. ಇಲ್ಲಿ ಬಣ್ಣಿಸಲಾಗಿರುವ ವಿವಿಧ ಪ್ರಾಣಿಗಳ ಆಕಾರದ ಮಿಠಾಯಿಗಳು, ಬಿಸ್ಕತ್ತುಗಳು ಮಕ್ಕಳಿಗೆ ಯಾವಾಗಲೂ ಪ್ರಿಯವೇ. ನಾವೆಲ್ಲರೂ ಚಿಕ್ಕಂದಿನಲ್ಲಿ ಇಷ್ಟ ಪಟ್ಟವರೇ. ಒಬ್ಬ ಹಳ್ಳಿಗಾಡಿನ street singer ಶೈಲಿಗೆ ಸರಿಹೊಂದುವಂತೆ ಜಾನಪದ ಮೂಲದ ವಾದ್ಯಗಳನ್ನೇ ಬಳಸಿ ವಿಜಯಭಾಸ್ಕರ್ ಸಂಯೋಜಿಸಿದ ಈ ಹಾಡನ್ನು ಈಗ ಆಲಿಸೋಣ. ನೀವು 1960ಕ್ಕಿಂತ ಮೊದಲು ಜನಿಸಿದವರಾಗಿದ್ದು ಬಾಲ್ಯದಲ್ಲಿ ರೇಡಿಯೋ ಕೇಳುವ ಹವ್ಯಾಸ ಉಳ್ಳವರಾಗಿದ್ದರೆ ಒಂದು ಕ್ಷಣ ಅಂದಿನ ಕಾಲವನ್ನು ಮರು ಜೀವಿಸೋಣ.

ಸುಬ್ಬ ಬಂದ ಹಬ್ಬ ತಂದ
ಮಿಠಾಯಿ ಮಾರ್ತಾ ಮಂದ್ಯಾಗೆ
ಮಂಡ್ಯ ಸಕ್ರೆ ದಂಡ್ಯಾಗ್ ಬೆರ್ಸಿ
ತಂದಿವ್ನಿಲ್ಗೆ ನಿಮ್ಗಾಗೆ
ಇದೋ ನೋಡಿ ರಂಭಾ ಮಿಠಾಯಿ
ವಾರೆ ನೋಟ ಕಣ್ಣಾಗೈತೆ
ಕಣ್ಣಿಗ್ ಕಟ್ಟೊ ಬಣ್ಣ ಐತೆ
ಇದನು ತಿಂದ್ರೆ ಹಲ್ದಿಲ್ದಿದ್ರೂ
ಬಾಯ್ನಾಗೆ ಹಾಗೇ ಕರಗ್ ಹೋಗ್ತೈತೆ
ಹನುಮ ತಿಂದ ಗುಡ್ಡವ ತಂದ
ಭೀಮ ತಿಂದ ಕೀಚಕ್ನ ಕೊಂದ
ಅದ್ನೇ ತಂದಿವ್ನಿ ನಿಮ್ಗಾಗೆ
ಇದೋ ನೋಡಿ ಕಡ್ಡಿ ಚಿಕ್ಕ
ಇವ್ನು ಬಲು ಘಾಟಿ ಪಕ್ಕಾ
ಇವ್ನನ್ ಬಿಟ್ರೆ ಮತ್ತೆ ಸಿಕ್ಕ
ಕುದ್ರೆ ಬೇಕೋ ಆನೆ ಬೇಕೋ
ಮರ ಏರೊ ಮಂಗ ಬೇಕೋ
ಇಲ್ವೆ ಜಂಬದ್ ಕೋಳಿ ಬೇಕೊ
ನಿಂಗ ತಿಂದು ಸಂಗ ಬಿಟ್ಟ
ಮುದ್ದ ತಿನ್ನೋಕ್ ಒದ್ದಾಡ್ಬಿಟ್ಟ
ಮತ್ತೆ ಸಿಗ್ದು ಮುಗ್ದ್ ಹೋದ್ ಮ್ಯಾಗೆ
ಮಿಠಾಯಿ ಮಾರ್ತಾ ಮಂದ್ಯಾಗೆ
ಮಂಡ್ಯ ಸಕ್ರೆ ದಂಡ್ಯಾಗ್ ಬೆರ್ಸಿ
ತಂದಿವ್ನಿಲ್ಗೆ ನಿಮ್ಗಾಗೆ
ಇದೋ ನೋಡಿ ರಂಭಾ ಮಿಠಾಯಿ
ವಾರೆ ನೋಟ ಕಣ್ಣಾಗೈತೆ
ಕಣ್ಣಿಗ್ ಕಟ್ಟೊ ಬಣ್ಣ ಐತೆ
ಇದನು ತಿಂದ್ರೆ ಹಲ್ದಿಲ್ದಿದ್ರೂ
ಬಾಯ್ನಾಗೆ ಹಾಗೇ ಕರಗ್ ಹೋಗ್ತೈತೆ
ಹನುಮ ತಿಂದ ಗುಡ್ಡವ ತಂದ
ಭೀಮ ತಿಂದ ಕೀಚಕ್ನ ಕೊಂದ
ಅದ್ನೇ ತಂದಿವ್ನಿ ನಿಮ್ಗಾಗೆ
ಇದೋ ನೋಡಿ ಕಡ್ಡಿ ಚಿಕ್ಕ
ಇವ್ನು ಬಲು ಘಾಟಿ ಪಕ್ಕಾ
ಇವ್ನನ್ ಬಿಟ್ರೆ ಮತ್ತೆ ಸಿಕ್ಕ
ಕುದ್ರೆ ಬೇಕೋ ಆನೆ ಬೇಕೋ
ಮರ ಏರೊ ಮಂಗ ಬೇಕೋ
ಇಲ್ವೆ ಜಂಬದ್ ಕೋಳಿ ಬೇಕೊ
ನಿಂಗ ತಿಂದು ಸಂಗ ಬಿಟ್ಟ
ಮುದ್ದ ತಿನ್ನೋಕ್ ಒದ್ದಾಡ್ಬಿಟ್ಟ
ಮತ್ತೆ ಸಿಗ್ದು ಮುಗ್ದ್ ಹೋದ್ ಮ್ಯಾಗೆ
* * * * * *
11-Apr-2020
ಹಳೆ ಧ್ವನಿಮುದ್ರಿಕೆಗಳ ಸಂಗ್ರಾಹಕ ಬಿ.ಆರ್. ಉಮೇಶ್ ಒದಗಿಸಿದ ಡಿಸ್ಕ್ ಲೇಬಲ್ ಈ ಹಾಡು ಗೀತಪ್ರಿಯ ಅವರ ರಚನೆ ಎಂದು ಖಚಿತ ಪಡಿಸಿತು. ದೂರದ ಕಲ್ಕತ್ತಾದಲ್ಲಿ ಗ್ರಾಮೊಫೋನ್ ಡಿಸ್ಕುಗಳು ತಯಾರಾಗುತ್ತಿದ್ದುದರಿಂದ ಕನ್ನಡ, ಇಂಗ್ಲಿಶ್ ಎರಡರಲ್ಲೂ ‘ಸುಬ ಬಾಂದ’ ಎಂದು ಮುದ್ರಿತವಾಗಿರುವುದನ್ನು ಗಮನಿಸಬಹುದು!

3 comments:
ಇದು ಎಸ್.ಕೆ.ಕರೀಂಖಾನ್ ಅವರ ರಚನೆ. ಡಿ.ಲಿಂಗಯ್ಯನವರು ರಚಿಸಿದ ಜನಪದ ಜಂಗಮ ಎಂಬ ಕರೀಂಖಾನ್ ಅವರ ಕುರಿತ ಕೃತಿಯಲ್ಲಿ ಈ ಗೀತೆ ಇದೆ ಇನ್ನೂ ಎರಡು ಚರಣಗಳಿವೆ. ಇದು ಸಿನಿಮಾಕ್ಕೆ ರಚಿತವಾದ ಗೀತೆ ಆಗಿರಲಾರದು. ಮೊದಲು ರಚನೆಯಾಗಿದ್ದನ್ನು ಕರೀಂಖಾನರೇ ಬದಲಾಯಿಸಿ ಕೊಟ್ಟಿರ ಬಹುದು. ಅಪರೂಪದ ಗೀತೆ ಕೇಳಿಸಿದ್ದಕ್ಕೆ ವಂದನೆಗಳು.
Sreedhara Murthy (FB)
ಎಷ್ಟು ಜತನದಿಂದ ಹಳೆಯ ಸಂಪತ್ತನ್ನು ಕಾಪಾಡಿದ್ದೀರ. ನಿಮ್ಮಂತವರು ಭಾಷೆಯ ಉಳಿವಿಗೆ ಕಾರಣರು. ಒಂದು ಕಾರ್ಯವನ್ನು ಮಾಡುತ್ತಿದ್ದೀರಾ. ವಂದನೆಗಳು
ಲೇಖನ ಓದಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.
Post a Comment