Friday, 15 December 2017

ವೈದೇಹಿ ಏನಾದಳು

ಯಕ್ಷಗಾನ , ಹರಿಕಥೆ, ನಾಟಕಗಳಲ್ಲಿ ರಾಮ ಹಾಡುವ ಹಾಡುಗಳಿರುತ್ತವೆ.  ಸುಧೀರ್ ಫಡ್ಕೆ ಅವರ ಪ್ರಸಿದ್ಧ ಗೀತರಾಮಾಯಣದಲ್ಲೂ ಕೋಠೆ ಸೀತಾ ಜನಕ ನಂದಿನಿ ಎಂದು ರಾಮ ಹಾಡುತ್ತಾನೆ. ಆದರೆ ಚಲನಚಿತ್ರಗಳಲ್ಲಿ ರಾಮನನ್ನು ಕುರಿತ ಹಾಡುಗಳು, ರಾಮನ ಉಲ್ಲೇಖ ಇರುವ ಹಾಡುಗಳು ನೂರಾರು ಇದ್ದರೂ ಯುದ್ಧ ಸಂದರ್ಭದ ಕಂದ ಪದ್ಯಗಳನ್ನು ಹೊರತು ಪಡಿಸಿದರೆ ಸ್ವತಃ ರಾಮ ಹಾಡುವ ಹಾಡುಗಳು ಇಲ್ಲವೆನ್ನುವಷ್ಟು ಕಮ್ಮಿ. ಸಂಪೂರ್ಣ ರಾಮಾಯಣ, ಲವ ಕುಶದಂಥ ಸಿನಿಮಾಗಳಲ್ಲೂ ರಾಮನ ಭಾವನೆಗಳನ್ನು ವ್ಯಕ್ತ ಪಡಿಸುವ ಹಾಡುಗಳು ಹಿನ್ನೆಲೆಯಲ್ಲಷ್ಟೇ ಕೇಳಿ ಬರುತ್ತವೆ. ಕನ್ನಡಕ್ಕೂ ಡಬ್ ಆಗಿದ್ದ ಹೋಮಿ ವಾಡಿಯಾ ಅವರ ಸಂಪೂರ್ಣ ವರ್ಣರಂಜಿತ ಸಂಪೂರ್ಣ ರಾಮಾಯಣ ಚಿತ್ರಕ್ಕಾಗಿ ರಾಮ ಮತ್ತು ಸೀತೆ  ಹಾಡಲೆಂದು ತುಮ್ ಗಗನ್ ಕೆ ಚಂದ್ರಮಾ ಔರ್ ಮೈ ಧರಾ ಕೀ ಧೂಲ್ ಹೂಂ ಎಂಬ ಒಂದು ಯುಗಳ ಗೀತೆಯನ್ನು ಕವಿ ಭರತವ್ಯಾಸ್ ಅವರು ರಚಿಸಿದ್ದರೂ ಆ ಮೇಲೆ ಅದನ್ನು ಕೈಬಿಡಲಾಯಿತಂತೆ. ಮುಂದೆ ಅದೇ ಗೀತೆಯನ್ನು ಸತಿ ಸಾವಿತ್ರಿ ಚಿತ್ರದಲ್ಲಿ ಬಳಸಿಕೊಳ್ಳಲಾಯಿತು.  ಹಸಿರು ತೋರಣ ಚಿತ್ರದ ಒಂದು ನಾಟಕದ ಸನ್ನಿವೇಶದಲ್ಲಿ ರಾಮನ ಪಾತ್ರಧಾರಿಯಾಗಿ ರಾಜ್ ಕುಮಾರ್ ಅವರಿಗೆ ಒಂದು ಹಾಡಿದ್ದರೂ ಅದನ್ನು  ನಾಟಕದ ಹಾಡೆಂದೇ ಪರಿಗಣಿಸಬೇಕಾಗುತ್ತದೆ.   ಈ ನಿಟ್ಟಿನಲ್ಲಿ ಸೀತಾ ವಿಯೋಗದಲ್ಲಿ ರಾಮ ಹಾಡುವ ದಶಾವತಾರ ಚಿತ್ರದ ವೈದೇಹಿ ಏನಾದಳು ಹಾಡು  ಏಕಮೇವಾದ್ವಿತೀಯವಾಗಿ ನಿಲ್ಲುತ್ತದೆ.

1960ರಲ್ಲಿ ಬಿಡುಗಡೆಯಾದ ದಶಾವತಾರ ಚಿತ್ರವನ್ನು  ಬಿ.ಎಸ್. ರಂಗಾ ಅವರು  ನಿರ್ಮಿಸಿದ್ದರು.  ಸಾಹಿತ್ಯ ಮತ್ತು ಹಾಡುಗಳ  ಹೊಣೆ ಹೊತ್ತವರು ಜಿ.ವಿ.ಅಯ್ಯರ್. ಸಂಗೀತ ನಿರ್ದೇಶನ ಜಿ.ಕೆ. ವೆಂಕಟೇಶ್ ಅವರದ್ದು. ಚಿತ್ರದ ಹತ್ತರಲ್ಲಿ ಒಂದು ಭಾಗವಾದ ರಾಮಾವತಾರದಲ್ಲಿ ಸೀತಾಪಹರಣ ಸನ್ನಿವೇಶಕ್ಕೆ  ಒಂದು ಹಾಡಿರಬೇಕೆಂಬ ಪ್ರೇರಣೆ ಹೇಗುಂಟಾಯಿತೋ, ಜಿ.ವಿ. ಅಯ್ಯರ್ ಅವರ ಲೇಖನಿಯನ್ನು ಯಾರು ಹಿಡಿದು ನಡೆಸಿದರೋ, ಕನ್ನಡ ಚಿತ್ರ ಸಂಗೀತ  ಇನ್ನೂ ಶೈಶವಾವಸ್ಥೆಯಲ್ಲಿದ್ದು ಹಿಂದಿ ಹಾಡುಗಳ ಧಾಟಿಗಳನ್ನೇ ಬಳಸುತ್ತಿದ್ದ ಕಾಲದಲ್ಲಿ  ಹಿಂದೆ ಬಂದಿರದ ಮುಂದೆ ಬರಲು ಸಾಧ್ಯವಿಲ್ಲದ ಧಾಟಿಯೊಂದನ್ನು ಜಿ.ಕೆ. ವೆಂಕಟೇಶ್ ಅವರು ಹೇಗೆ ಸಂಯೋಜಿಸಿದರೋ, ಕಲ್ಲೂ ಕರಗುವಂತೆ, ಸಕಲ ಚರಾಚರಗಳು ಕ್ಷಣಕಾಲ ಸ್ತಬ್ಧವಾಗುವಂತೆ ಗಾನ ಗಂಧರ್ವ ಪಿ.ಬಿ.ಶ್ರೀನಿವಾಸ್ ಅದನ್ನು ಹೇಗೆ ಹಾಡಿದರೋ ಆ ರಾಮನಿಗೇ ಗೊತ್ತು.

ಗೋದಾವರಿ ದೇವಿ ಮೌನವಾಂತಿಹೆ ಏಕೆ ಎಂದು ಆರಂಭವಾಗುವ ಈ ಹಾಡನ್ನು ಎಲ್ಲರೂ ಗುರುತಿಸುವುದು ವೈದೇಹಿ ಏನಾದಳು ಎಂಬ ನಂತರದ ಸಾಲಿನಿಂದಲೇ.  ಆ ಮೊದಲ ಸಾಲು ಮತ್ತೆ ಮರುಕಳಿಸುವುದೂ ಇಲ್ಲ. ಜಂಪೆ ತಾಳದಲ್ಲಿದ್ದು ಶುಭಪಂತುವರಾಳಿ ರಾಗವನ್ನು ಆಧರಿಸಿದ ಈ ಹಾಡಿನ ಷಡ್ಜ ಎಲ್ಲಿ ಎಂದೇ ಸುಲಭದಲ್ಲಿ ಗೊತ್ತಾಗುವುದಿಲ್ಲ. ಇದನ್ನು ಯಥಾವತ್ ಮರು ಸೃಷ್ಟಿ ಮಾಡುವುದಂತೂ ದೂರದ ಮಾತು.

ಚೇಲೋ ಮತ್ತು ವೈಬ್ರಾಫೋನ್ ಜೊತೆಯಾಗಿರುವ ಈ ಹಾಡಿನ prelude ಆಲಿಸುವಾಗಲೇ ನಮ್ಮ ಚೈತನ್ಯವೆಲ್ಲ ಕಾಲುಗಳ ಮೂಲಕ ಬಸಿದು ನೆಲಕ್ಕಿಳಿದಂಥ ಅನುಭವವಾಗುತ್ತದೆ. ಕಾನನದ ನೀರವತೆಯನ್ನು ಬಿಂಬಿಸುವ ವಿಶಿಷ್ಟ ದನಿಯ ತಾಳವಾದ್ಯ ಮತ್ತು ಕೊಳಲಿನ ಹಿನ್ನೆಲೆಯೊಂದಿಗೆ ಪಲ್ಲವಿ ಆರಂಭವಾಗುತ್ತದೆ.  ಚೇಲೋ ಮತ್ತು ವೈಬ್ರಾಫೋನ್‌ಗಳ ಅತಿ ಚಿಕ್ಕ interlude  ನಂತರ ಪಲ್ಲವಿಯ ಮುಂದುವರಿದ ಭಾಗವೇ ಎನ್ನಿಸುವ  ಪ್ರೀತಿ ಅಮೃತವನೆರೆದು ಎಂಬ ಸಾಲು ಇರುವ ಮೊದಲ ಚರಣ ಬರುತ್ತದೆ. ಪಿ.ಬಿ.ಶ್ರೀನಿವಾಸ್ ಅವರ ಹೆಗ್ಗುರುತಾದ ವಿಶಿಷ್ಟ ಮುರ್ಕಿಗಳು ಅರ್ಥಾತ್ ಸಣ್ಣ ಸಣ್ಣ ಬಳುಕುಗಳನ್ನು ಹೊಂದಿದ ಚರಣ ಭಾಗದ ಸಂಚಾರ  ಮುಂದುವರೆಯುತ್ತಾ ಕರ್ಕಶವೆನ್ನಿಸದ ರೀತಿ false voiceನಲ್ಲಿ ಏರು ಸ್ವರಗಳನ್ನು ಸ್ಪರ್ಶಿಸಿ ಮತ್ತೆ ಕೆಳಗಿಳಿಯಲು ವೈಬ್ರಾಫೋನ್ ಮತ್ತು ಚೇಲೊಗಳ bridge music  ಸೇತುವೆ ನಿರ್ಮಿಸಿಕೊಡುತ್ತದೆ.

ಮುಂದಿನ interlude ಬರೇ ಹಕ್ಕಿಗಳ ಚಿಲಿಪಿಲಿ ಸದ್ದು.  ಹಕ್ಕಿಗಳ ಚಿಲಿಪಿಲಿ ಗಾನ ಮಂಗಳಕರ ನಾದವು ಎಂದು ಉದಯ ಶಂಕರ್ ಅವರು ಬರೆಯುವ ಎಷ್ಟೋ ವರ್ಷ ಮೊದಲೇ ಜಿ.ಕೆ. ವೆಂಕಟೇಶ್ ಅವರು ಈ ಪ್ರಯೋಗ ಮಾಡಿದ್ದರು.  ಈ ಚರಣದಲ್ಲಿ ಪ್ರೇಮಗಾನದ ಸುಧೆಯ ಎಂಬಲ್ಲಿ ದಿಂದ ಕ್ಕೆ ಒಂದು ಸ್ವರ ಸ್ಥಾನ ಏರುವ ಸೊಗಸು ಅನನ್ಯ. ಉಳಿದ ಚರಣಗಳ ಇಂತಹ  ಭಾಗದಲ್ಲಿ  ಈ ಪ್ರಯೋಗ ಇಲ್ಲ.

ಮಸಣ ಮೌನದೆ ಸುಳಿವ ಎಂಬ ಚರಣದ ಸುಳಿವ ಎಂಬಲ್ಲಿ ಪಿ.ಬಿ.ಎಸ್ ಅವರ ಧ್ವನಿ ಅತಿ ಮಂದ್ರ ಸ್ಥಾಯಿಯಲ್ಲಿ sustain ಆಗುವಾಗಿನ ಅನುಭವ ಅನನ್ಯ. ಹಾಡಿನ ಇಡೀ ಸಾರವೇ ಈ ಭಾಗದಲ್ಲಿ ಅಡಕವಾಗಿದೆಯೇನೋ ಎಂದು ಅನ್ನಿಸುತ್ತದೆ.  ಮಸಣದ ಮೌನವನ್ನು ಅಭಿವ್ಯಕ್ತಿಗೊಳಿಸಲೋ ಎಂಬಂತೆ ಈ ಇಡೀ ಚರಣದಲ್ಲಿ ಯಾವ ತಾಳವಾದ್ಯವನ್ನೂ ಉಪಯೋಗಿಸಲಾಗಿಲ್ಲ. ಆದರೆ ನಾವು ಹಾಡಲ್ಲಿ ಎಷ್ಟು ತಲ್ಲೀನರಾಗಿರುತ್ತೇವೆ ಎಂದರೆ ಈ ವಿಷಯ ನಮ್ಮ ಗಮನಕ್ಕೇ ಬರುವುದಿಲ್ಲ!

ಈ ಸುದೀರ್ಘ ಡಬಲ್ ಪ್ಲೇಟ್ ಹಾಡು ನಮ್ಮ ತಾಯಿಗೆ ಬಲು ಮೆಚ್ಚಿನದಾಗಿತ್ತು.  ರೇಡಿಯೋದಲ್ಲಿ ಪ್ರಸಾರವಾದರೆ ಎಲ್ಲಿದ್ದರೂ ಬಂದು ಪೂರ್ತಿ ಕೇಳದೆ ಹೋಗುತ್ತಿರಲಿಲ್ಲ.  ಪಿ.ಬಿ.ಎಸ್  ಧ್ವನಿಯನ್ನು ತುಂಬಾ ಇಷ್ಟ ಪಡುತ್ತಿದ್ದ  ಅವರು ಈ ಹಾಡಂತೂ ಸ್ವತಃ ಶ್ರೀರಾಮನೇ ಹಾಡಿದಂತಿದೆ ಅನ್ನುತ್ತಿದ್ದರು.

ಆದರೆ ಇಂತಹ ಅದ್ವಿತೀಯ ಹಾಡನ್ನು ಸೂಕ್ತವಾಗಿ ಚಿತ್ರೀಕರಿಸುವಲ್ಲಿ  ನಿರ್ದೇಶಕರು ಸೋತಿದ್ದಾರೆ ಎಂದೇ ಅನ್ನಬೇಕಾಗುತ್ತದೆ. ಹಾಡಿನ ಬಹು ಭಾಗ  long shot ಗಳನ್ನೇ ಹೊಂದಿದ್ದು ಹಾಡಿನ ಭಾವಕ್ಕೆ ಯಾವ ರೀತಿಯಲ್ಲೂ ಪೂರಕವಾಗಿಲ್ಲ.  ಇತ್ತೀಚೆಗೆ ಗಮನವಿಟ್ಟು ನೋಡುವವರೆಗೆ ಶ್ರೀರಾಮನ ಪಾತ್ರಧಾರಿ ಪ್ರಸಿದ್ಧ ನಟ ರಾಜಾ ಶಂಕರ್ ಎಂದು ನನಗೆ ಗೊತ್ತಾಗಿರಲೇ ಇಲ್ಲ!.  ಯಾರೋ ಅನಾಮಿಕ ಕಲಾವಿದ ಎಂದೇ ನಾನಂದುಕೊಂಡಿದ್ದೆ.

ನಮ್ಮನ್ನು ಭಾವನಾಲೋಕಕ್ಕೊಯ್ಯುವ  ಈ ಮಧುರ ಹಾಡನ್ನು ಈಗ ಸಾಹಿತ್ಯ ಓದುತ್ತಾ  ಆಲಿಸಿ. ಹೆಡ್ ಫೋನ್ ಬಳಸಿದರೆ ಉತ್ತಮ.






ಗೋದಾವರಿ ದೇವಿ ಮೌನವಾಂತಿಹೆ ಏಕೆ
ವೈದೇಹಿ ಏನಾದಳು  ವೈದೇಹಿ ಏನಾದಳು

ಪ್ರೀತಿ ಅಮೃತವನೆರೆದು ಜೀವಜ್ಯೋತಿಯ ಬೆಳಗಿ
ನೀತಿ ನೇಹದ ದಾರಿ ತೋರಿದವಳು

ವೈದೇಹಿ ಏನಾದಳು  ವೈದೇಹಿ ಏನಾದಳು

ಮಾಮರದ ಮರೆಯಲ್ಲಿ ಕುಳಿತಿರುವ ಕೋಗಿಲೆಯೆ
ನಿನ್ನ ದನಿ ಜೊತೆಯಲ್ಲಿ ತನ್ನ ದನಿ ಸೇರಿಸುತ
ಪ್ರೇಮಗಾನದ ಸುಧೆಯ ಹರಿಸಿದವಳು

ವೈದೇಹಿ ಏನಾದಳು  ವೈದೇಹಿ ಏನಾದಳು

ಮಲ್ಲೆ ಮಲ್ಲಿಗೆ ಜಾಜಿ ಸಂಪಿಗೆಯ ಹೂಗಳೆ
ಎಲ್ಲ ನಗುಮೊಗವೆಲ್ಲ ತನ್ನೊಡನೆ ನಗಲೆಂದು
ಶಿರದಲ್ಲಿ ಧರಿಸಿದವಳು

ವೈದೇಹಿ ಏನಾದಳು  ವೈದೇಹಿ ಏನಾದಳು

ಮಸಣಮೌನದೆ ಸುಳಿವ ವಿಪಿನವಾಸಿಗಳೆ
ನೀವು ಧರಣಿಜಾತೆಯ ಕಾಣಿರಾ
ಧರಣಿಜಾತೆಯ ಕಾಣಿರಾ

ನೇಸರನೆ ನೀನೇಕೆ ಮೋರೆಮರೆ ಮಾಡುತಿಹೆ
ಸೀತೆ ಇರುವನು ತೋರೆಯಾ
ಸೀತೆ ಇರುವನು ತೋರೆಯಾ

ವೈದೇಹಿ ಏನಾದಳು  ವೈದೇಹಿ ಏನಾದಳು


8 comments:

Narayani Damodar said...

ನನ್ನ ಮೆಚ್ಚಿನ ಗೀತೆಯನ್ನು ವಿರಾಮದಲ್ಲಿ ಮತ್ತೊಮ್ಮೆ ಕೇಳಿ ಖುಷಿಪಟ್ಟೆ. ಗೀತೆಯ ಕುರಿತ ವಿಶೇಷ ಮಾಹಿತಿ ಮತ್ತು ಆಪ್ತಶೈಲಿಯ ವಿವರಣೆಯು ಆಕರ್ಷಕ.

Chidambar Kakathkar said...

ನಿಮ್ಮ ಪ್ರೋತ್ಸಾಹಕ ನುಡಿಗಳಿಗೆ ಧನ್ಯವಾದ.

PBK said...

ಇದರ audio ಆವೃತ್ತಿ ತುಂಬಾ ಸುಶ್ರಾವ್ಯವಾಗಿದೆ ಹಾಗೂ ಹಾಡುಗಳ ಆಯ್ಕೆ ಹಾಗೂ ಅಗತ್ಯವೆನಿಸಿದಲ್ಲಿ ಅವುಗಳ ಲಿರಿಕ್ಸ್ನಲ್ಲಿ ಮಾಡಿದ ಸೂಕ್ತ ಬದಲಾವಣೆ ಸ್ತುತ್ಯರ್ಹ.

madhu.bhat said...

ಎಂದಿನ ಚಂದದ ಬರಹ.

Anonymous said...

ನೀವು ಲೇಖನದಲ್ಲಿ ಬರೆದಿರುವುದಷ್ಟನ್ನೂ ನಾನೂ ಅನುಭವಿಸಿದ್ದೇನೆ. ಆದರೆ ರಾಗದ ಬಗ್ಗೆ ಅಷ್ಟು ತಿಳುವಳಿಕೆ ಇಲ್ಲ. "ಮೌನವಾ೦ತಿಹೆ ಏಕೆ" ಎಷ್ಟು ಅಪರೂಪದ ಪದ ಅಲ್ಲವೇ?ಚಿಕ್ಕವಳಿದ್ದಾಗ ಈ ಹಾಡು ಕೇಳುತ್ತಿದ್ದಾಗಲೆಲ್ಲಾ, ಕಪ್ಪು ಬಿಳುಪು ಚಿತ್ರದಲ್ಲಿ,ರಾಮ ಲಕ್ಷ್ಮಣರು ಸೀತೆಗಾಗಿ ಕಾಡು ಮೇಡು ಸುಳಿಯುತ್ತಿರುವ ಚಿತ್ರ ಕಣ್ ಮು೦ದೆ ಬರುತ್ತಿತ್ತು. ಅಷ್ಟೇ ಅಲ್ಲ, ಅ೦ತ್ಯಾಕ್ಶರಿ ಆಡಿದಾಗಲೆಲ್ಲ, 'ವ' ಇ೦ದ ಪ್ರಾರ೦ಭವಾಗುವ ಹಾಡಿಗೆ,ಇದನ್ನೇ ಹಾಡುತ್ತಿದ್ದೆ. ಮಿಕ್ಕವರೆಲ್ಲ ಈ ಅಪರೂಪದ ಹಾಡನ್ನು ಕೇಳಿಲ್ಲದಿದ್ದರಿ೦ದ,ನಾನು ಬುರುಡೆ ಬಿಡ್ತಾ ಇದೀನಿ ಅ೦ತ ಅಲ್ಲಗಳೆದು, ಪಾ೦ಯಿ೦ಟ್ಸ್ ಕೊಡ್ತಾ ಇರ್ಲಿಲ್ಲ. ಒ೦ದು ಹಾಡು ಅದೆಷ್ತು ನೆನಪಿನಾಳಕ್ಕೆ ಕರೆದುಕೊ೦ಡು ಹೋಗತ್ತೆ, ಅಲ್ವ ? ಅದ್ಭುತ ಲೇಖನ ಹ೦ಚಿಕೊ೦ಡಿದ್ದಕ್ಕೆ ಧನ್ಯವಾದಗಳು.

Saraswati Vattam (FB)

Anonymous said...

ತುಂಬಾ ಸ್ವಾರಸ್ಯಕರವಾದ ಹಾಗು ರಂಜನೀಯವಾದ ಲೇಖನ ಸರ್. ಶ್ರೀ ರಾಮನವಮಿ ಇಂದು ಕೊರೊನದ ದೆಸೆಯಿಂದ ಬರಡು ಬರಡಾಗಿದ್ದ ಈ ಸಂದರ್ಭದಲ್ಲಿ ನಿಮ್ಮ ಲೇಖನ ಚೈತನ್ಯವನ್ನುಂಟು ಮಾಡಿತು. ಯಾರ ಮನೆಗೂ ಹೋಗುವ ಹಾಗಿಲ್ಲ ಪಾನಕ ಕೋಸಂಬರಿ ಸಜ್ಜಿಗೆ ಕೊಡಲು ಯಾರನ್ನು ಕರೆಯುವ ಹಾಗೂ ಇಲ್ಲ. ತುಂಬಾ ಬೇಸರವಾಗಿತ್ತು. ನಿಮ್ಮ ಸಿನಿಮಾ ಹಾಡಿನ ರಾಮಾಯಣ ಓದಿ ನಕ್ಕು ನಕ್ಕು ಸಾಕಾಯ್ತು. ನಿಜಕ್ಕೂ ಇಂಥ ಬರಹಗಳೇ ಮರುಭೂಮಿಯಲ್ಲಿನ ಓಯಸಿಸ್ ನಂತೆ ಸಂತೋಷ ಉಕ್ಕಿಸುತ್ತವೆ. ನೀವು ಬಳಸಿಕೊಂಡ ಹಾಡುಗಳಂತೂ ಇದಕ್ಕೆ ಹೇಳಿ ಬರೆಸಿದ ಹಾಗಿದೆ. ನಾನು ದಶಾವತಾರ ನೋಡಿದ್ದು ತುಂಬಾ ಚಿಕ್ಕವಳಿದ್ದಾಗ. ನೆನಪು ಮಸುಕು ಮಸುಕಾಗಿದೆ. ಬೇರೆಲ್ಲ ಮರೆತು ಹೋಗಿದ್ದರೂ ಭೂ ಕೈಲಾಸದ ರಾಮನ ಅವತಾರ ರಘುಕುಲ ಸೋಮನ ಅವತಾರ ಹಾಗೂ ದಶಾವತಾರದ ವೈದೇಹಿ ಏನಾದಳೋ ಹಾಡನ್ನು ಮರೆಯಲು ಸಾಧ್ಯವಿಲ್ಲ. ನೀವೆಂದಂತೆ ಬಹುಷಃ ಸಿನಿಮಾ ತಂತ್ರಜ್ಞಾನ ಹೆಚ್ಚು ಮುಂದುವರೆದಿರಲಿಲ್ಲದ ಕಾರಣಕ್ಕೋ ಅಥವ ಹತ್ತು ಅವತಾರಗಳನ್ನು ಸೀಮಿತ ಅವಧಿಯಲ್ಲಿ ತೋರಿಸಬೇಕೆಂಬ ಕಾರಣಕ್ಕೋ ಸಿನಿಮಾ ಅಷ್ಟೊಂದು ಚೆನ್ನಾಗಿ ನಿರ್ಮಾಣ ಮಾಡಲಿಲ್ಲ. ಇರಲಿ ಬಿಡಿ. ಅದರಲ್ಲಿನ ಹೈಲೈಟ್ ಆದ ಈ ಹಾಡು ತುಂಬಾ ಇಂಪಾಗಿದೆ. ನಿಮ್ಮಷ್ಟು ಸಂಗೀತ ಜ್ಞಾನ ಇಲ್ಲದಿದ್ದರೂ ನೀವು ಹೇಳಿದ ಎಲ್ಲ ವಿಶೇಷತೆಗಳನ್ನು ನಾನೂ ಗಮನಿಸಿದ್ದೇನೆ. ಆ ಹಾಡು ಕೇಳುತ್ತಿದ್ದರೆ ನಿಜಕ್ಕೂ ನಾವೇ ಕದಲ್ಲಿದ್ದೇವೆನೋ ಎಂಬ ಭಾವನೆ ಬರುವಷ್ಟು ಹಿನ್ನೆಲೆ ಸಂಗೀತ ಚೆನ್ನಾಗಿದೆ. ನಿಮ್ಮೆಲ್ಲರಿಗೂ ಶ್ರೀರಾಮ ನವಮಿಯ ಶುಭ ಹಾರೈಕೆಗಳು. ಆ ಶ್ರೀರಾಮ ಮತ್ತು ಅವನ ಭಂಟ ಸಂಜೀವರಾಯ ದೇಶದ ಜನತೆಯನ್ನು ಈ ಸಂಕಷ್ಟದಿಂದ ಪಾರು ಮಾಡಲೆಂದು ನನ್ನ ಪ್ರಾರ್ಥನೆ.

Laxmi GN(FB)

Anonymous said...

ಸಿನಿಮಾ ಹಾಡುಗಳಿಂದ ಆವೃತವಾದ “ನಿಮ್ಮ ರಾಮಾಯಣ” ಮನಕ್ಕೆ ಮುದ ನೀಡಿತು. (ಶೂರ್ಪನಖಾಳ entry ಹಾಗೂ ಅವಳಿಗೆ connect ಆಗಿರುವ ಹಾಡುಗಳಂತೂ ನಗೆ ಉಕ್ಕಿಸಿದವು.)

Mangala Gundappa(FB)

Anonymous said...

🙏👌