Sunday, 26 November 2017

ರತ್ನಮಂಜರಿಯ ರತ್ನಗಳು


ಸಾಮಾನ್ಯವಾಗಿ ಚಿತ್ರಗೀತೆಗಳೆಲ್ಲ ಕೆಲವು  ಸಿದ್ಧ ಮಾದರಿಗಳಲ್ಲೇ ಇರುತ್ತವೆ. ಆದರೆ ಕೆಲವು ಗೀತೆಗಳು ಈ ಸಿದ್ಧ ಮಾದರಿಗೆ ಹೊರತಾಗಿದ್ದು ತಮ್ಮ uniquenessನಿಂದಾಗಿ ಗುಂಪಿನಿಂದ ಬೇರೆಯಾಗಿ ನಿಲ್ಲುತ್ತವೆ. ಶಂಕರ್ ಜೈಕಿಶನ್ ಅವರ ಅಜೀಬ್ ದಾಸ್ತಾಂ ಹೈ ಯೆ ಮತ್ತು ಆಜ್ ಕಲ್ ತೆರೆ ಮೆರೆ ಪ್ಯಾರ್ ಕೆ ಚರ್ಚೆ ಹರ್ ಜಬಾನ್ ಪರ್   ಇತ್ಯಾದಿ ಹಾಡುಗಳನ್ನು ಇಂತಹ ವಿಭಾಗಕ್ಕೆ ಸೇರಿಸಬಹುದು. ಕನ್ನಡದಲ್ಲಿ ರಾಜನ್ ನಾಗೇಂದ್ರ  ಸಂಗೀತ ನಿರ್ದೇಶನವಿದ್ದು 1962ರಲ್ಲಿ ತೆರೆ ಕಂಡ ರತ್ನಮಂಜರಿ ಚಿತ್ರದ ಯಾರು ಯಾರು ನೀ ಯಾರು ಮತ್ತು ಗಿಲ್ ಗಿಲ್ ಗಿಲಿ ಗಿಲಕ್ಕ ಹಾಡುಗಳು ಇಂತಹವೇ. ಏಕೆಂದರೆ ಈ ರೀತಿಯವು ಮತ್ತೆ ಬರಲಿಲ್ಲ.  ಈ ಎರಡು ಹಾಡುಗಳು ahead of time  ಎಂದೆನ್ನಿಸಿದರೆ  ಆ ಚಿತ್ರದ   ಉಳಿದ ಹಾಡುಗಳು  50ರ ದಶಕದವೋ ಅನ್ನಿಸುವಂತಿದ್ದು ಜನಪ್ರಿಯತೆಯಲ್ಲಿ ಕೊಂಚ ಹಿಂದೆ ಬಿದ್ದಿದ್ದವು.  ಬೆಂಗಳೂರು, ಧಾರವಾಡ ಆಕಾಶವಾಣಿ ನಿಲಯಗಳಲ್ಲಿ ಈ ಎರಡು ಹಾಡುಗಳು ಅನುರಣಿಸದ  ದಿನವೇ ಇದ್ದಿರಲಾರದು. ಈಗಲೂ ಇವು ರೇಡಿಯೊ ನಿಲಯಗಳ ಮೆಚ್ಚಿನವುಗಳಾಗಿದ್ದು ಆಗಾಗ ಕೇಳಲು ಸಿಗುತ್ತವೆ. ಮುಂದಿನ ಸಲ ರೇಡಿಯೊದಲ್ಲಿ ಬಂದಾಗ ಈ ವಿವರಣೆಯನ್ನು ನೆನೆಸಿಕೊಂಡು ಆಲಿಸಿ. ಹೆಚ್ಚು ಆನಂದಿಸುವಿರಿ! ಹಾಡುಗಳನ್ನು ಬರೆದವರು ಚಿತ್ರದ  ನಿರ್ದೇಶಕರೂ ಆಗಿದ್ದ ಹುಣಸೂರು ಕೃಷ್ಣಮೂರ್ತಿ.  ಚಿತ್ರದ ವಿವರಗಳಲ್ಲಿ  10 ಮಂದಿ ಹಿನ್ನೆಲೆ ಗಾಯಕ ಗಾಯಕಿಯರ ಹೆಸರಿರುವುದನ್ನು ಗಮನಿಸಬಹುದು.  ಆಗಿನ ಕಾಲದಲ್ಲಿ ಆಯಾ ಹಾಡಿನ ಅವಶ್ಯಕತೆಗೆ ತಕ್ಕಂತೆ ಗಾಯಕರನ್ನು ಆಯ್ದುಕೊಳ್ಳುವ ಪರಿಪಾಠವಿತ್ತು. ಆದರೆ 1970ರ ದಶಕದ ನಂತರ ಕೆಲವೇ  ಧ್ವನಿಗಳು ಎಲ್ಲ ರೀತಿಯ   ಹಾಡುಗಳಲ್ಲೂ ಕೇಳಿಸತೊಡಗಿ ಚಿತ್ರ ಸಂಗೀತ ಏಕತಾನತೆಯಿಂದ ಸೊರಗಿತು.

ಯಾರು ಯಾರು ನೀ ಯಾರು

ಇದು ಸ್ವತಃ ನಾಗೇಂದ್ರ ಮತ್ತು ರಾಣಿ ಎಂಬ ಗಾಯಕಿ ನರಸಿಂಹರಾಜು ಮತ್ತು ಎಂ. ಎನ್. ಲಕ್ಷ್ಮಿದೇವಿ ಅವರಿಗಾಗಿ  ಹಾಡಿದ ಗೀತೆ.  ಇದರ ಸಾಹಿತ್ಯ ರುಂಡ ಮತ್ತು ಮುಂಡ ಬೇರೆ ಬೇರೆಯಾಗಿದ್ದ ಒಂದು ಮಾಯಾವಿ ಹೆಣ್ಣು ಮತ್ತು ಅಲ್ಲಿಗೆ ಬಂದ ಒಂದು ಗಂಡಿನ ಸಂಭಾಷಣೆಯ ರೂಪದಲ್ಲಿದೆ.  ಹಾಡನ್ನು ಕಣ್ಣು ಮುಚ್ಚಿ ಆಲಿಸಿದರೂ ಈ ಚಿತ್ರಣ ಸ್ಪಷ್ಟವಾಗಿ ಮನಸ್ಸಿನಲ್ಲಿ ಮೂಡುತ್ತದೆ. ನನಗೆ ಆ ಕಾಲದಲ್ಲಿ ಈ ಸಿನಿಮಾ ನೋಡುವ ಅವಕಾಶ ಒದಗಿರಲಿಲ್ಲ.  ಆ ಮೇಲೊಮ್ಮೆ ಇದು ಟಿ.ವಿ.ಯಲ್ಲಿ ಪ್ರಸಾರವಾದಾಗ ಅಲ್ಲಿ ಚಿತ್ರೀಕರಣಗೊಂಡುದಕ್ಕಿಂತ ಮನಸ್ಸಿನ ಕಲ್ಪನೆಯೇ ಹೆಚ್ಚು ರಮ್ಯ ಎಂದು ನನಗನ್ನಿಸಿತ್ತು.  ಗಾಯಕರ ಅತ್ಯಂತ ಸ್ಪಷ್ಟ ಉಚ್ಚಾರ ಮತ್ತು ಶಕ್ತಿ ಶಾಲಿ voice throw ಈ ಹಾಡಿನ ವಿಶೇಷತೆ.  ಅದರಲ್ಲೂ ‘ರ’ಕಾರದ ಉಚ್ಚಾರವಂತೂ ಅಚ್ಚರಿ ಮೂಡಿಸುವಂತಿದೆ.  ಸಾಹಿತ್ಯವನ್ನು ಅನುಸರಿಸುತ್ತಾ ಅಲ್ಲಲ್ಲಿ break, take off ಮಾಡುವ ಢೋಲಕ್ ಮುಖ್ಯ ತಾಳವಾದ್ಯವಾಗಿ ಮ್ಯಾಂಡೊಲಿನ್ ಮುಂಚೂಣಿಯಲ್ಲಿರುವ ಮಿತ ಹಿಮ್ಮೇಳವಿದೆ.  ಆರಂಭದ ಭಾಗದಲ್ಲಿ  chinese temple bells ಎಂಬ ಉಪಕರಣದ ಕಿಟಿಕಿಟಿಕಿಟಿಕ್ ಎಂಬ ಸದ್ದು ಗಮನ ಸೆಳೆಯುತ್ತದೆ.  ಕೊನೆಯ ಭಾಗದಲ್ಲಿ ರುಂಡ ಮುಂಡ ಸೇರಿಸುವಾಗಿನ ಮ್ಯಾಂಡೊಲಿನ್ effect ಕೂಡ ಮಜವಾಗಿದೆ.  ಕ್ಲಾರಿನೆಟ್ ಕೊಳಲುಗಳ ಜಂಟಿ ಬಳಕೆಯಲ್ಲಿ ಓ. ಪಿ. ನಯ್ಯರ್ ಛಾಪು ಇದೆ. ಅದುವರೆಗೆ ಹೆದರಿ ನಡುಗುತ್ತಿದ್ದ ಗಂಡು ಪಾತ್ರ ಹಾಡಿನ ಕೊನೆಯಲ್ಲಿ ‘ಇನ್ನಿವರು ಹೆದರಲಾರ್ರು’ ಅಂದಾಗ ಕೇಳುಗರಿಗೂ ಒಂದು ರೀತಿ ನಿರಾಳ ಅನ್ನಿಸುತ್ತದೆ.  70ರ ದಶಕದಲ್ಲಿ ನಾನು ಟೇಪ್ ರೆಕಾರ್ಡರ್ ಕೊಂಡ ಮೇಲೆ ಈ ಹಾಡನ್ನು ಧ್ವನಿಮುದ್ರಿಸಿಕೊಳ್ಳಲು ಬಹಳ ಪ್ರಯತ್ನ ಪಟ್ಟಿದ್ದೆ.  ಕೊನೆಗೆ ಬೆಂಗಳೂರಿನ ಹೋಟೆಲೊಂದರಲ್ಲಿ ಚಹಾ ಕುಡಿಯುತ್ತಿದ್ದಾಗ ಜೊತೆಗೊಯ್ದಿದ್ದ ಟೇಪ್ ರೆಕಾರ್ಡರನ್ನು ಮೇಜಿನ ಮೇಲಿರಿಸಿ ಬೆಂಗಳೂರು ಆಕಾಶವಾಣಿಯಿಂದ ಪ್ರಸಾರವಾದ ಇದನ್ನು ಧ್ವನಿಮುದ್ರಿಸಿಕೊಳುವಲ್ಲಿ ಸಫಲನಾದೆ. ಸಾಹಿತ್ಯ ಓದುತ್ತಾ ಈಗ ಹಾಡು ಆಲಿಸಿ. ನೀವು ಬೇರೆಡೆ ಕೇಳುವ ಈ ಹಾಡಿಗೂ ಇಲ್ಲಿರುವುದಕ್ಕೂ ಸ್ವಲ್ಪ ವ್ಯತ್ಯಾಸವಿದೆ. ಏನೆಂದು ಗುರುತಿಸಲು ಪ್ರಯತ್ನಿಸಿ.



ಯಾರು ಯಾರು ನೀ ಯಾರು
ಎಲ್ಲಿಂದ ಬಂದೆ ಯಾವೂರು
ಬದುಕಿದ್ದ ಜನರು ಇಲ್ಯಾರು ಬರರು
ಬಂದವರು ಬದುಕಲಾರ್ರು

ಯಾರು ಯಾರು ನೀ ಯಾರು
ಎಲ್ಲಿರುವೆ ಬಂದು ಮುಖ ತೋರು
ಯಾಕಿಲ್ಲಿ ಜನರು ಬಂದುಳಿಯಲಾರ್ರು
ಏನಿದರ ಗುಟ್ಟು ಸಾರು

ನೋಡು ನೋಡು ನಾನಿಲ್ಲಿ
ಎಲ್ಲಿ
ಗಿಡದಲ್ಲಿ
ಉಳಿದಿದ್ದೆಲ್ಲಿ
ನೋಡು ನೋಡು ನಾನಿಲ್ಲಿ
ನಿನ್ನ ಬೆನ್ನ ಹಿಂದುಗಡೆಯಲ್ಲಿ
ಅಯ್ಯಯ್ಯಯ್ಯೋ ಭೂತ ಕಾಣಿಸಿತು ಮಾತನಾಡಿಸಿತು
ಪ್ರಾಣ ಹೋಗೊ ಗತಿ ಬಂತು
ಅಯ್ಯೊ ಗಂಡೆ ಸ್ವಲ್ಪ ಧೈರ್ಯ ತಾಳು
ಹೇಳೊ ಮಾತು ಕೇಳು


ದೇವಕನ್ಯೆ ನಾನಯ್ಯ
ನನ್ನ ಜೀವ ಉಳಿಸೊ ಮಹರಾಯ
ದೇವಕನ್ಯೆಯೋ ದೆವ್ವಕನ್ಯೆಯೋ
ಯಾವ ಪೀಡೆಯೋ ತಿಳಿಯೆ
ಮೂರ್ಖನಾಗದಿರು ಮೂರ್ಛೆ ಹೋಗದಿರು
ಮದುವೆ ಆಗು ಬಾ ಎದುರು
ರುಂಡ ಒಂದು ಕಡೆ ಮುಂಡ ಒಂದು ಕಡೆ
ಮದುವೆ ಆಗೋದ್ಯಾವ್ಕಡೆ
ಅಯ್ಯೊ ಗಂಡೆ ಸ್ವಲ್ಪ ಧೈರ್ಯ ತೋರ್ಸು
ರುಂಡ ಮುಂಡ ಸೇರ್ಸು

ಯಾರು ಯಾರು ನೀ ಯಾರು
ಎಲ್ಲಿಂದ ಬಂದೆ ಯಾವೂರು
ಬದುಕಿದ್ದ ಜನರು ಹೆದರೋಡುತಿದ್ರು
ಇನ್ನಿವರು ಹೆದರಲಾರ್ರು

ಗಿಲ್ ಗಿಲ್ ಗಿಲಿ ಗಿಲಕ್ಕ

ಎಸ್. ಜಾನಕಿ ಅವರ ever green ಹಾಡುಗಳಲ್ಲಿ ಅಗ್ರ ಶ್ರೇಣಿಯಲ್ಲಿರುವ ಇದು ಅತಿ ವೇಗ ಹೊಂದಿದ್ದು ಹೆಚ್ಚು ಸಾಹಿತ್ಯ ಭಾಗ ಒಳಗೊಂಡಿದೆ. ಸಂದರ್ಭಕ್ಕೆ ತಕ್ಕ ಅರ್ಥ ಕಲ್ಪಿಸಿಕೊಳ್ಳಬೇಕಾದ  ಪ್ರಾಸಬದ್ಧವಾದ ಅಣಕು ಶಬ್ದಗಳೇ ಜಾಸ್ತಿ ಇದರಲ್ಲಿ. F Sharp ಅಂದರೆ ಕಪ್ಪು 3ರ ಶ್ರುತಿಯಲ್ಲಿ  ಜಾನಕಿಯವರ ಧ್ವನಿ ಸುಲಲಿತವಾಗಿ ತಾರ ಸಪ್ತಕದ ಪಂಚಮವನ್ನು ಸ್ಪರ್ಶಿಸುತ್ತದೆ. ಹಾಡಿನ ವೇಗಕ್ಕೆ ಸರಿಸಾಟಿಯಾಗಿ ವಿವಿಧ ವಾದ್ಯಗಳನ್ನು ನುಡಿಸಿದ ಅನಾಮಿಕ ಕಲಾವಿದರೆಲ್ಲರ ನೈಪುಣ್ಯವನ್ನು ನಾವು ಮೆಚ್ಚಲೇ ಬೇಕು. ಹಾಡಿನ ಸಾಹಿತ್ಯವನ್ನು ಅನುಸರಿಸುವ ಏರು ಶ್ರುತಿಯ ಮಹಾರಾಷ್ಟ್ರದ ಲಾವಣಿಯಲ್ಲಿ ಬಳಸುವ ಢೋಲಕಿಯ ನುಡಿತ ಹಾಡನ್ನು ಬೇರೆಯೇ ಎತ್ತರಕ್ಕೆ ಒಯ್ದಿದೆ.  ಹಿಂದಿ ಚಿತ್ರರಂಗದಲ್ಲಿ ಪಾರಸ್ ಮಣಿ ಚಿತ್ರದ ಉಯಿಮಾ ಉಯಿಮಾ ಯೆ ಕ್ಯಾ ಹೋಗಯಾ ಎಂಬ ಅತಿ ವೇಗದ ಹಾಡಿಗೆ ನುಡಿಸಿದ ಕಲಾವಿದರಿಗಿಂತ ನಾವೆನೂ ಕಮ್ಮಿ ಇಲ್ಲ ಎಂದು ಸಾಬೀತು ಪಡಿಸಿದ್ದಾರೆ  ಇದನ್ನು ನುಡಿಸಿದ ಅಜ್ಞಾತ ಕಲಾವಿದರು.  ಹಾಡಿನ ಕೊನೆಯ 25 ಸೆಕೆಂಡುಗಳಷ್ಟು ಕಾಲದ climax ಕೇಳುತ್ತಿದ್ದಂತೆ ನಾವು ಭರದಿಂದ ತಿರುಗುವ ಗಾಳಿ ಸುಳಿಯಲ್ಲಿ ಮೇಲಕ್ಕೇರುತ್ತಾ ಕೊನೆಗೆ ಧೊಪ್ಪನೆ ಕೆಳಕ್ಕೆ ಬಿದ್ದ ಅನುಭವವಾಗುತ್ತದೆ!



ಗಿಲ್ ಗಿಲ್ ಗಿಲ್ ಗಿಲ್ ಗಿಲ್ ಗಿಲ್ ಗಿಲ್ ಗಿಲಿ
ಗಿಲಕ್ಕ್ ಕಾಲಗೆಜ್ಜೆ ಝಣಕ್ಕ್ ಕೈಯ ಬಳೆ
ಠಣಕ್ಕ್ ಝಣಕ್ಕ್ ಹಾ ಹಾ ಹಾ
ಗಿಲ್ ಗಿಲ್ ಗಿಲಿ ಗಿಲಕ್ಕ್ ಕಾಲಗೆಜ್ಜೆ ಝಣಕ್ಕ್
ಕೈಯ ಬಳೆ ಠಣಕ್ಕ್ ರಂಗೆದ್ದಿತೊ
ನಿನ್ನ ಕಂಡು ಹಾರಿ ಕುಣಿಯೊ ಭುಂಗೆದ್ದಿತೊ
ಕೋಡಿಯಂತೆ ಹರಿದು ಬಂದ ಈ ಸ್ಪೂರ್ತಿಗೆ
ಜೋಡಿ ಇತ್ತು ಆಡು ಬಾರೊ ನನ್ನೊಂದಿಗೆ
ಜೋಡಿ ಇತ್ತು ಆಡು ಬಾರೊ ನನ್ನೊಂದಿಗೆ

ನೀರ ನಿನ್ನ ಕಣ್ಣ ಬಾಣ ಹಾರಿ ಬಂದು ನನ್ನ ಪ್ರಾಣ
ನಿನಗಾಯಿತೋ ನೇಹ ನನಸಾಯಿತೋ
ಆಸೆ ಬಳ್ಳಿ ಹೂವ ಬಿಟ್ಟು ರಾಶಿ ಜೇನ ತುಂಬಿ ಇಟ್ಟು
ತುಳುಕಾಡಿತೋ ನಿನ್ನ ಹುಡುಕಾಡಿತೊ
ಮೋರೆ ತೋರಿ ಗಿರಕ್ಕ ಮೊರೆಯ ಕೇಳಿ ಸರಕ್ಕ
ಮರುಕ್ಕ ತೊರೊಕ್ಕೆ ಮುರುಕ ಯಾತಕೊ
ಕಣ್ಣುಗಳ ಥಳಕ್ಕ್ ತನುವಿನ ಬಳಕ್ಕ್
ಮನಸಿನ ಕುಲುಕ್ಕ್ ರಂಗೆದ್ದಿತೊ
ನಿನ್ನ ಕಂಡು ಕರಗಿ ಜೀವ ಝುಮ್ಮೆಂದಿತೋ
ಕೋಡಿಯಂತೆ ಹರಿದು ಬಂದ ಈ ಸ್ಪೂರ್ತಿಗೆ
ಜೋಡಿ ಇತ್ತು ಆಡು ಬಾರೊ ನನ್ನೊಂದಿಗೆ
ಜೋಡಿ ಇತ್ತು ಆಡು ಬಾರೊ ನನ್ನೊಂದಿಗೆ

ದಟ್ಟ ಕಾಡಿನಲ್ಲಿ ಬೆಳೆದ ದಿವ್ಯವಾದ ಮಲ್ಲೆ ಹೂವು
ಮುಟ್ಟಿಲ್ಲವೋ ದುಂಬಿ ಮುಟ್ಟಿಲ್ಲವೋ
ನಿನ್ನ ಬಿಟ್ಟು ಅನ್ಯರತ್ತ ಹಾರಲಿಲ್ಲ ಹೂವ ಚಿತ್ತ
ಸಟೆಯಲ್ಲವೋ ಮಾತು ಸಟೆಯಲ್ಲವೋ
ಕೊಟ್ಟು  ಭಾಷೆ ಕರಕ್ಕೆ ಕಟ್ಟು ತಾಳಿ ಉರಕ್ಕೆ
ಪ್ರಾಣಕ್ಕೆ ಪ್ರೇಮಕ್ಕೆ ನೀನೆ ನಾಯಕ
ಕಣ್ಣುಗಳ ಥಳಕ್ಕ್ ತನುವಿನ ಬಳಕ್ಕ್
ಮನಸಿನ ಕುಲುಕ್ಕ್ ರಂಗೆದ್ದಿತೊ
ನಿನ್ನ ಕಂಡು ಕರಗಿ ಜೀವ ಝುಮ್ಮೆಂದಿತೋ
ಕೋಡಿಯಂತೆ ಹರಿದು ಬಂದ ಈ ಸ್ಪೂರ್ತಿಗೆ
ಜೋಡಿ ಇತ್ತು ಆಡು ಬಾರೊ ನನ್ನೊಂದಿಗೆ
ಜೋಡಿ ಇತ್ತು ಆಡು ಬಾರೊ ನನ್ನೊಂದಿಗೆ

ಈ ರತ್ನಮಂಜರಿ ಚಿತ್ರ ಅಂತರ್ಜಾಲದಲ್ಲಿ ವೀಕ್ಷಣೆಗೆ ಲಭ್ಯವಿದೆ. ಆದರೆ  ಹಾಡುಗಳ ಭಾಗ ಅಲ್ಲಲ್ಲಿ  ಕ್ಷತಿಗೊಂಡಿರುವುದರಿಂದ ನೋಡಿದರೆ ರಸಭಂಗವಾಗುವ ಸಾಧ್ಯತೆ ಜಾಸ್ತಿ.  




Wednesday, 22 November 2017

ದಂತಧಾವನಗಾನ ನೆನಪಿಸಿದ ದಂತಕತೆ


1956ರಲ್ಲಿ ವರದಕ್ಷಿಣೆ ಎಂಬ ಚಿತ್ರ ಬಂದಿತ್ತು ಎಂದಾಗಲಿ, ಅದರಲ್ಲಿ   ಪ್ಯಾಸಾ ಚಿತ್ರದ ಸರ್ ಜೊ ತೇರಾ ಚಕರಾಯೆ ಧಾಟಿಯ ಸುಂದರ್ ಟೂತ್ ಪೌಡರ್ ಎಂಬ ಹಾಡೊಂದು ಇದೆ ಎಂದಾಗಲಿ ಅಂತರ್ಜಾಲ ಕ್ರಾಂತಿಗಿಂತ ಮೊದಲು ನನಗೆ ಗೊತ್ತೇ ಇರಲಿಲ್ಲ. ಏಕೆಂದರೆ ಈ ಚಿತ್ರದ ಹಾಡುಗಳುರೇಡಿಯೋದಲ್ಲಿ ಬರುತ್ತಿರಲಿಲ್ಲ. ಆ ಮೇಲೆ ಈ ಹಾಡಿನ ಬಗ್ಗೆ ಮಾಹಿತಿ ದೊರಕಿದರೂ ಬಹಳ ಕಾಲ ಅದು ಕೇಳಲು ಸಿಕ್ಕಿರಲಿಲ್ಲ. ಅಂತೂ ಕೊನೆಗೆ ಆ ಚಿತ್ರದ ಹಾಡುಗಳು ಮಾತ್ರವಲ್ಲ, ಇಡೀ ಚಿತ್ರವೇ ಅಂತರ್ಜಾಲದಲ್ಲಿ ಲಭ್ಯವಾಯಿತು. ಚಿತ್ರದ ಟೈಟಲ್ಸ್‌ನಲ್ಲಿ  ಸ್ಟೀವನ್ಸ್ ಮತ್ತು ಜ್ಯೂನಿಯರ್ ಘಂಟಸಾಲ ಎಂಬ ಪುರುಷ  ಗಾಯಕರ ಹೆಸರಿದ್ದು  ಈ ಹಾಡಿನ ಗಾಯಕ ಯಾರು ಎಂಬ ಬಗ್ಗೆ ಮಾಹಿತಿ ಇಲ್ಲ. ಚಿತ್ರದ ಪದ್ಯಾವಳಿಯೋ, ಹಾಡಿನ ಗಾನತಟ್ಟೆಯೋ ಯಾರಲ್ಲಾದರೂ ಇದ್ದರೆ ಖಚಿತವಾಗಿ ಹೇಳಬಹುದು.  

ಟೂತ್ ಪೌಡರ್ ಮಾರುವವನ ಪಾತ್ರದಲ್ಲಿ  ನರಸಿಂಹರಾಜು  ಈ  ಹಾಡನ್ನು ತೆರೆಯ ಮೇಲೆ ಹಾಡಿದ್ದು ಎಂದು ನನಗೆ  ಈ ವಿಡಿಯೊ ನೋಡಿದ ಮೇಲಷ್ಟೇ ಗೊತ್ತಾದದ್ದು.  ಹಲ್ಲುಪುಡಿಯನ್ನು ಕುರಿತ ಈ ಹಾಡಿಗೆ ತನ್ನ ಹಲ್ಲುಗಳನ್ನೇ ಬಂಡವಾಳವನ್ನಾಗಿಸಿ ಸದಭಿರುಚಿಯ ಹಾಸ್ಯದ ಹರಿಕಾರನಾಗಿ ದಶಕಗಳ ಕಾಲ ಕನ್ನಡ ಚಿತ್ರರಂಗವನ್ನಾಳಿದ  ನರಸಿಂಹರಾಜು ಅಲ್ಲದೆ ಇನ್ಯಾರು ತಾನೇ ನ್ಯಾಯ ಒದಗಿಸಬಲ್ಲರು ಎಂದು ನನಗೆ ಅನ್ನಿಸಿತು.



ದಂತಧಾವನದ ಈ ಗಾನ ನನ್ನ ಮನಸ್ಸು ಬಾಲ್ಯಕಾಲದ ನಮ್ಮ ದಂತ ಕತೆಯ ನೆನಪಿನತ್ತ ಧಾವಿಸುವಂತೆ ಮಾಡಿತು. ತೀರಾ ಚಿಕ್ಕವರಾಗಿದ್ದಾಗ ಟೂತ್ ಪೌಡರ್, ಪೇಸ್ಟುಗಳೆಂದರೇನೆಂದೇ ನಮಗೆ ಗೊತ್ತಿರಲಿಲ್ಲ.   ನಮ್ಮ ತಂದೆಯವರು ಬೆರಣಿ ಸುಟ್ಟು ತಯಾರಿಸಿದ ಪೆಂಡೊ ಎಂಬ ಕರ್ರಗಿನ ಬಿಲ್ಲೆಗಳನ್ನು ಗೆರಟೆಯೊಂದರಲ್ಲಿ ಹಾಕಿಡುತ್ತಿದ್ದರು. ಅದನ್ನು ಒಂದಿಷ್ಟು ಮುರಿದುಕೊಂಡು ನಮ್ಮ ಹಲ್ಲು ತಿಕ್ಕುತ್ತಿದ್ದರು.   ತನಗಾಗಿ ಅವರು ತೆಂಗಿನ ಸಿಪ್ಪೆಯಿಂದ ತಯಾರಿಸಿದ ಬ್ರಶ್ಶೊಂದನ್ನು ಇಟ್ಟುಕೊಂಡಿರುತ್ತಿದ್ದರು.  ನಮ್ಮ ತಾಯಿ ಮತ್ತು ಅತ್ತಿಗೆಯಂದಿರು ಹಲ್ಲುಜ್ಜಲು ಮಾವಿನೆಲೆ ಉಪಯೋಗಿಸುತ್ತಿದ್ದರು.  ಕೆಲಕಾಲದ ನಂತರ ನಮ್ಮ ಮನೆಗೆ ಖಾಕಿ ಬಣ್ಣದ ಲಕೋಟೆಯಲ್ಲಿ ಬರುತ್ತಿದ್ದ ಗುಲಾಬಿ ಬಣ್ಣದ ನಂಜನಗೂಡು ಟೂತ್ ಪೌಡರಿನ ಪ್ರವೇಶವಾಯಿತು. ಅದನ್ನು ಒಂದು ಹಳೆಯ ಕುಟಿಕುರಾ ಫೇಸ್ ಪೌಡರಿನ ಡಬ್ಬಿಯಲ್ಲಿ ಹಾಕಿಡುತ್ತಿದ್ದರು. ಒಗರು ಮಿಶ್ರಿತ ಸಿಹಿ ರುಚಿಯ ದೊರಗಾದ ಆ ಪುಡಿಯನ್ನು  ಅಂಗೈಗೆ ಸುರಿದುಕೊಂಡು ಬೆರಳಿನಿಂದ ಎದುರಿನ ಹಲ್ಲುಗಳ ಮುಂಭಾಗ ಮಾತ್ರ  ತಿಕ್ಕುತ್ತಿದ್ದೆವು. ಹೀಗಾಗಿ ದವಡೆ ಹಲ್ಲುಗಳ ಸೂಕ್ತ ನಿರ್ವಹಣೆ ಇಲ್ಲದೆ ಕುಳಿಗಳುಂಟಾಗಿ ಹಲ್ಲುನೋವು ಎಲ್ಲ ಮಕ್ಕಳಲ್ಲೂ ಸಾಮಾನ್ಯವಾಗಿತ್ತು.  ಪದೇ ಪದೇ ಬೆಲ್ಲವನ್ನು ಬೇಡಿ ತಿನ್ನುವ ಅಭ್ಯಾಸವೂ ನಮಗಿದ್ದುದು ಇದಕ್ಕೆ ಪೂರಕವಾಗಿತ್ತು.  ಆಗ ದಂತವೈದ್ಯ ಎಂಬ ಪದವನ್ನೇ ನಾವು ಕೇಳಿರಲಿಲ್ಲ.  ಲವಂಗದ ಎಣ್ಣೆಯ ಒಂದು ಬಾಟಲಿ ಯಾವಾಗಲೂ ಮನೆಯಲ್ಲಿರುತ್ತಿತ್ತು.  ಹಲ್ಲು ನೋವು ತೀವ್ರವಾದಾಗ ಸ್ವಲ್ಪ ಹತ್ತಿಯನ್ನು ಅದರಲ್ಲದ್ದಿ ಹಲ್ಲಿನ ಕುಳಿಯಲ್ಲಿಡಲಾಗುತ್ತಿತ್ತು.  ಕೆಲವು ಸಲ ಇಸ್ಮಾಲಿ ಎಂಬವನೊಬ್ಬ ಬಂದು ನಮ್ಮನ್ನು ಹೊರ ಜಗಲಿಯಲ್ಲಿದ್ದ ಬೆಂಚಿನ ಮೇಲೆ ಮಲಗಿಸಿ ಎಡಗಡೆಯ   ಹಲ್ಲು ನೋಯುತ್ತಿದ್ದರೆ ಬಲಗಡೆ ಕಿವಿಯಲ್ಲಿ ಯಾವುದೋ ಎಲೆಗಳ ರಸವನ್ನು ಹಿಂಡುತ್ತಿದ್ದ!  ಜೀವಮಾನವಿಡೀ ಒಮ್ಮೆಯೂ ನಿಜವಾದ ಬೀಡಿ ಸಿಗರೇಟು ಸೇದದಿದ್ದರೂ ಹಲ್ಲು ನೋವಿಗೆಂದು ಎಕ್ಕದ ಗಿಡದ ಟೊಳ್ಳು ಕಾಂಡವನ್ನು ಬೀಡಿಯಂತೆ ಸೇದಿದ್ದೂ ಉಂಟು!



ಕೆಲವು ವರ್ಷಗಳ ನಂತರ ನಮ್ಮಲ್ಲಿ ಕೊಲ್ಗೇಟ್ ಬಿಳಿ ಹಲ್ಲುಪುಡಿಯ ಬಳಕೆ ಆರಂಭವಾಯಿತು.  ಹಲ್ಲುಗಳ ಬಗ್ಗೆ ವಿಶೇಷ ಕಾಳಜಿ ಹೊಂದಿದ್ದ ನಮ್ಮ ಒಬ್ಬ ಅಣ್ಣ ತನಗಾಗಿ ಮಾತ್ರ ಪೇಸ್ಟ್ ಮತ್ತು ಬ್ರಶ್ ತಂದಿಟ್ಟುಕೊಂಡು ಬಳಸುತ್ತಿದ್ದರು.  ಆ ಪೇಸ್ಟನ್ನು ಮುಟ್ಟುವ ಅಧಿಕಾರ ಬೇರೆ ಯಾರಿಗೂ ಇರಲಿಲ್ಲ!  ಅವರು ಹೆಚ್ಚಾಗಿ ಕೆಂಪು ಬಣ್ಣದ ಪೆಟ್ಟಿಗೆಯ ಕೋಲ್ಗೇಟ್ ಪೇಸ್ಟ್ ತರುತ್ತಿದ್ದರು. ನಾನು ನಾಲ್ಕನೇ ಕ್ಲಾಸಲ್ಲಿರುವಾಗ ನನ್ನ ಒತ್ತಾಯದ ಮೇರೆಗೆ ನಮ್ಮ ಇನ್ನೊಬ್ಬ ಅಣ್ಣ ನನಗೂ ಹಳದಿ ಬಣ್ಣದ ಪೆಟ್ಟಿಗೆಯ ಕೋಲಿನೋಸ್ ಪೇಸ್ಟ್ ಮತ್ತು ಜ್ಯೂನಿಯರ್ ಬ್ರಶ್ ಒಂದನ್ನು ತಂದುಕೊಟ್ಟಿದ್ದರು. ಅದನ್ನುಪಯೋಗಿಸಿ ಮೊದಲ ದಿನ ಅತ್ಯುತ್ಸಾಹದಿಂದ ಬ್ರಶ್ ಮಾಡಲು ಪ್ರಯತ್ನಿಸಿದಾಗ  ಒಸಡುಗಳಿಂದ ರಕ್ತ ಜಿನುಗಿತ್ತು!


ಹೈಸ್ಕೂಲ್ ವಿದ್ಯಾಭ್ಯಾಸಕ್ಕಾಗಿ ಉಜಿರೆಯಲ್ಲಿ ಹಾಸ್ಟೆಲ್ ಸೇರಿದ ಮೇಲೆ  ವಿವಿಧ ಟೂತ್ ಪೇಸ್ಟುಗಳನ್ನು ಮನಸೋ ಇಚ್ಛೆ ಉಪಯೋಗಿಸಲು ನನಗೆ ಪೂರ್ಣ ಸ್ವಾತಂತ್ರ್ಯ ದೊರಕಿತು.  ಕೈಯಲ್ಲಿ ಹೆಚ್ಚು ದುಡ್ಡು ಇಲ್ಲದಿರುತ್ತಿದ್ದರೂ ಅವಶ್ಯಕ ವಸ್ತುಗಳನ್ನು ಕೊಂಡುಕೊಳ್ಳಲು ಅನುಕೂಲವಾಗುವಂತೆ  ನಮ್ಮ ಸಂಸ್ಕೃತ ಅಧ್ಯಾಪಕರೂ ಆಗಿದ್ದ ಗೋಪಾಲ ಮಾಸ್ಟ್ರ ಅಂಗಡಿಯಲ್ಲಿ ನನ್ನ ಖಾತೆಯೊಂದನ್ನು ಮನೆಯವರು ತೆರೆದಿದ್ದರು.  ಬೇಕಿದ್ದ ವಸ್ತುಗಳನ್ನು ಕೊಂಡು ಪುಸ್ತಕವೊಂದರಲ್ಲಿ ಅದನ್ನು ದಾಖಲಿಸಿ ಆಗಾಗ ಲೆಕ್ಕ ಚುಕ್ತಾ ಮಾಡುವ ವ್ಯವಸ್ಥೆಯಾಗಿತ್ತದು.  ನಾವು ಬಿಸ್ಕೆಟ್, ಚಾಕಲೇಟು ಇತ್ಯಾದಿ ಕೊಂಡದ್ದು ಸುಲಭದಲ್ಲಿ ವೇದ್ಯವಾಗದಂತೆ ವಿವರಗಳನ್ನು ಮೋಡಿ ಅಕ್ಷರಗಳಲ್ಲಿ ಬರೆದು ಮೊಬಲಗು ಮಾತ್ರ ಸ್ಪಷ್ಟವಾಗಿ ಕಾಣಿಸುವಂತೆ ಅವರು ಆ ಪುಸ್ತಕದಲ್ಲಿ ಬರೆಯುತ್ತಿದ್ದರು!  ಪ್ರಾಣಿಗಳ ಪುಟ್ಟ ಪ್ಲಾಸ್ಟಿಕ್ ಬೊಂಬೆಗಳೊಂದಿಗೆ ಬರುತ್ತಿದ್ದ ಬಿನಾಕಾ ಪೇಸ್ಟನ್ನು ನಾನು ಹೆಚ್ಚಾಗಿ ಕೊಳ್ಳುತ್ತಿದ್ದೆ.  ಪಚ್ಚೆ ಕಲರಿನ ಕ್ಲೋರೊಫಿಲ್, ತಿಳಿ ಗುಲಾಬಿ ಬಣ್ಣದ ರೋಸ್, ಬಿಳಿ ಬಣ್ಣದ ಟಾಪ್ ಮತ್ತು ತಿಳಿ ನೀಲಿ ಬಣ್ಣದ ಫ್ಲೋರೈಡ್ ಎಂಬ ವಿವಿಧ ಬಿನಾಕಾ ಪೇಸ್ಟುಗಳು ಆಗ ದೊರಕುತ್ತಿದ್ದವು.  ಬಿಳಿ ಪೇಸ್ಟಿಗೆ ಕೆಂಪು ಪಟ್ಟೆಗಳುಳ್ಳ ಸಿಗ್ನಲ್ ಟೂತ್ ಪೇಸ್ಟು ಕೂಡ ಆಗ ಜನಪ್ರಿಯವಾಗಿತ್ತು.  ಪಟ್ಟೆಗಳಿಗಾಗಿ ಮುಚ್ಚಳದ ಬಳಿ ಅಳವಡಿಸಿರುತ್ತಿದ್ದ ಕೆಂಪು ಪದಾರ್ಥದ ಸಂಗ್ರಹಾಗಾರವನ್ನು ತೆರೆದು ಕೆಂಪು ಭಾಗ ಮಾತ್ರ ಮೊದಲು ಹೊರಗೆ ಬರುವಂತೆ ಕೆಲವು ಮಿತ್ರರು ಮಾಡಿಕೊಳ್ಳುತ್ತಿದ್ದರು.  ಫೋರ್‍ಹನ್ಸ್ ಎಂಬ ಪೇಸ್ಟಿನ ಜಾಹೀರಾತಲ್ಲಿ ದಂತರಕ್ಷಣೆಯ ಕುರಿತಾದ ಉಚಿತ ಕಿರು ಪುಸ್ತಿಕೆಗಾಗಿ ಬರೆಯಿರಿ ಎಂಬ ಸೂಚನೆ ಇರುತ್ತಿತ್ತು.  ಆ ಪೇಸ್ಟಿನ ಒಗರು ರುಚಿ ನನಗಿಷ್ಟವಾಗದಿದ್ದರೂ ನಾನು ಈ ಬಣ್ಣಬಣ್ಣದ ಪುಸ್ತಿಕೆಯನ್ನು ಅನೇಕ ಬಾರಿ ತರಿಸಿದ್ದಿದೆ.


ಇಷ್ಟೆಲ್ಲ ವಿವಿಧ ಪೇಸ್ಟುಗಳನ್ನು ಬಳಸಿ ಪ್ರಯೋಗ ಮಾಡಿದರೂ ಇವ್ಯಾವುದೂ ಒಸಡುಗಳನ್ನು ಬಲಪಡಿಸಲಿಲ್ಲ, ಹಲ್ಲಿನ ಎನಾಮಲನ್ನು ಗಟ್ಟಿಗೊಳಿಸಲಿಲ್ಲ, ಆಗಾಗ ಕಾಡುವ ಹಲ್ಲು ನೋವನ್ನು ಹೋಗಲಾಡಿಸಲಿಲ್ಲ. ಕೊನೆಗೆ ನೌಕರಿ ದೊರೆತು ಮಂಗಳೂರು ಸೇರಿ ಆರ್ಥಿಕವಾಗಿ ಸ್ವಲ್ಪ ಸಬಲನಾದ ಮೇಲೆ ದಂತವೈದ್ಯ ಮಿತ್ರರುಗಳ ನೆರವಿನಿಂದ  ಹಲ್ಲುಗಳನ್ನು  ಸದೃಢಗೊಳಿಸಿಕೊಂಡು ಬೇನೆ ಬೇಗುದಿಗಳಿಂದ ಮುಕ್ತಿ ಹೊಂದಿ ಆನಂದವಾಗಿದ್ದೇನೆ ಎಂಬಲ್ಲಿಗೆ ಈ ದಂತಕತೆಯು ಮುಕ್ತಾಯವಾದುದು.