ಕ್ರಿಕೆಟ್, ಟಿ.ವಿ, ಕಂಪ್ಯೂಟರ್, ಮೊಬೈಲ್ ಇತ್ಯಾದಿ ಯಾವುದೂ ಇಲ್ಲದಿದ್ದ ಕಾಲದಲ್ಲಿ ಹುಟ್ಟಿದ ನಮ್ಮಂಥವರ ಬಾಲ್ಯವು ಅನೇಕ ವೈವಿಧ್ಯಮಯ ಆಟಗಳ ಆಡುಂಬೊಲವಾಗಿತ್ತು. ಬಹುತೇಕ ಆಟಗಳಿಗೆ ಯಾವುದೇ ಸಲಕರಣೆಗಳ ಅಗತ್ಯವೂ ಇರುತ್ತಿರಲಿಲ್ಲ. ಎಲ್ಲೆಡೆ ಕೂಡುಕುಟುಂಬಗಳೇ ಇರುತ್ತಿದ್ದ ಆ ಕಾಲದಲ್ಲಿ ಆಡಲು, ಆಡಿಸಲು ಮನೆ ತುಂಬ ವಿವಿಧ ವಯೋಮಾನದ ಸದಸ್ಯರೂ ಇರುತ್ತಿದ್ದರು.
ಚಿಕ್ಕ ಮಕ್ಕಳನ್ನು ಬೆನ್ನ ಮೇಲೇರಿಸಿಕೊಂಡು ಪ್ರತಿಯೊಬ್ಬರ ಹತ್ತಿರ ಹೋಗಿ ಉಪ್ಪು ಬೇಕೋ ಅನ್ನುವುದು, ಇಬ್ಬರು ದೊಡ್ಡ ಮಕ್ಕಳು ಪರಸ್ಪರರ ಕೈಗಳನ್ನು ಚೌಕಾಕಾರದಲ್ಲಿ ಜೋಡಿಸಿಕೊಂಡು ಮಗುವನ್ನು ಅದರಲ್ಲಿ ಕೂರಿಸಿ ರಥಯಾತ್ರೆ ಮಾಡಿಸುವುದು ಮೊದಲ ಹಂತದ ಕೆಲವು ಆಟಗಳು.
ಎಣಿಕೆಯ ಆಟಗಳು
ಮಕ್ಕಳೆಲ್ಲರ ಕೈಗಳನ್ನು ನೆಲದ ಮೇಲಿರಿಸಿ ಒಂದೊಂದೇ ಕೈ ಬೆರಳನ್ನು ಮುಟ್ಟುತ್ತಾ ವನರಿ ಟೋರಿ ಟಿಕ್ರಿ ಪೆನ್ ಆಪನ್ ಜಾಪನ್ ಪೋನ್ ಪೆನ್ ಮೊಗರಿ ಪೆನ್ ಟೊಣೊ ಟೋಣೊ ಸರ್ಟಿ ವನ್ ಅಂದು ಮುಗಿಸುವಾಗ ಯಾವ ಬೆರಳಿನ ಸರದಿ ಬಂದಿತ್ತೋ ಅದನ್ನು ಮಡಿಸುವುದು. ಹೀಗೆ ಮಡಿಸುತ್ತಾ ಕೊನೆಗೆ ಉಳಿದ ಬೆರಳಿಗೆ ಜಯಶಾಲಿಯ ಪಟ್ಟ.
ಎಲ್ಲರೂ ಮುಚ್ಚಿದ ಮುಷ್ಠಿಗಳನ್ನು ಮರದಂತೆ ಒಂದರ ಮೇಲೊಂದಿಟ್ಟು ಪಂರ್ದೋ ಕಾಯೋ ನೆಲ್ಲಿ ಕುಡಪ್ಪೊ ಆಟಿಡೊಂಜಿ ಪೆಲಕೈ ಉಂಡು ಅಯಿನ್ ಕೊಯಿಂಡ ಅಜ್ಜಿ ನೆರ್ವೊಳು ಕೊಯ್ಕೊ ಕೊಯ್ಕೊ ಕೊಯ್ಕೊ ಅನ್ನುವಾಗ ಯಾವ ಮುಷ್ಠಿ ಕೊಯ್ಯಲು ಸಿಗುತ್ತದೋ ಅದು ಆಟದಿಂದ ಹೊರಗೆ. ಹೀಗೆ ಮುಂದುವರಿಯುತ್ತಾ ಕೊನೆಗೆ ಯಾರ ಮುಷ್ಠಿ ಉಳಿಯುತ್ತದೋ ಅವರಿಗೆ ಪೆಲಕೈ(ಹಲಸಿನ ಹಣ್ಣು) ಸಿಕ್ಕಿದಂತೆ.
ಇದೇ ರೀತಿ ವೃತ್ತಾಕಾರ ಕುಳಿತವರ ಮಂಡಿಗಳನ್ನು ಒಂದೊಂದಾಗಿ ಮುಟ್ಟುತ್ತಾ ಅಟ್ಟ ಮುಟ್ಟ ತನ್ನ ದೇವಿ ನಿನ್ನ ಗಂಡ ಎಲ್ಲಿಗೆ ಹೋದ ಮಲ್ಲಪ ನಾಯಕನ್ ಕೇರಿಗೆ ಹೋದ ಏನು ತಂದ ಗಿಣಿಯೊಂದ ತಂದ ಚಂದ್ರ ಶಾಲೆಯೂ ಅನ್ನುತ್ತಾ ವಿಜೇತರನ್ನು ಆಯ್ಕೆ ಮಾಡುವುದು ಹೆಣ್ಣು ಮಕ್ಕಳ ಇಷ್ಟದ ಆಟವಾಗಿರುತ್ತಿತ್ತು.
ತುಂಬಾ ಮಕ್ಕಳು ಸೇರಿದ ಕಡೆ ಯಾರಾದರೂ ಸದ್ದಿಲ್ಲದ ಅಪಾನವಾಯುವಿನಿಂದ ವಾತಾವರಣ ಕಲುಷಿತಗೊಳಿಸುವುದು ಅಪರೂಪವೇನೂ ಆಗಿರಲಿಲ್ಲ. ಆಗ ಅಬ್ಬಲಕ ತಬ್ಬಲಕ ಮಿರಿಮಿರಿ ಕಂಚ ಜೋಳ ಜೋಪಿ ಅಸ್ಕಿ ಪುಸ್ಕಿ ಪಾದರ ಪುಸ್ಕಿ ಎಂದು ಅಪರಾಧಿಯನ್ನು ಪತ್ತೆ ಮಾಡುವ ಪದ್ಧತಿಯೊಂದಿತ್ತು. ಒಂದು ವೇಳೆ ಕೊನೆಯ ಪದ ಎಣಿಕೆ ಮಾಡುವವನತ್ತಲೇ ಬೆಟ್ಟು ಮಾಡಿದರೆ ಠುಂಯ್ ಎಂಬ ಹೆಚ್ಚಿನ ಪದವನ್ನು ಸೇರಿಸುವುದೂ ಇತ್ತು!
ಕೌಶಲ್ಯದ ಆಟಗಳು
5 ಚಿಕ್ಕ ಕಲ್ಲುಗಳನ್ನುಪಯೋಗಿಸಿ ಆಡುವ ಕಲ್ಲಾಟ ಇವುಗಳಲ್ಲೊಂದು. ಎಲ್ಲ ಕಲ್ಲುಗಳನ್ನು ಮೇಲೆ ಹಾರಿಸಿ ಅವುಗಳನ್ನು ಅಂಗೈಯ ಹಿಂಭಾಗದ ಮೇಲೆ ಹಿಡಿಯಬೇಕು. ನಂತರ ಒಂದು ಕಲ್ಲನ್ನು ಕೈಯ ಮೇಲುಳಿಸಿಕೊಂಡು ಉಳಿದವುಗಳನ್ನು ಒಂದೊಂದಾಗಿ ಕೆಳಗೆ ಬೀಳಿಸಬೇಕು. ಆ ಒಂದು ಕಲ್ಲನ್ನು ಮೇಲೆ ಹಾರಿಸಿ ಅದು ಕೆಳಗೆ ಬೀಳುವುದರೊಳಗೆ ನೆಲದ ಮೇಲಿನ ಕಲ್ಲುಗಳನ್ನು ಕ್ರಮದಂತೆ ಹೆಕ್ಕಿಕೊಂಡು ಮೇಲೆ ಹಾರಿಸಿದ್ದ ಕಲ್ಲನ್ನೂ ಹಿಡಿಯಬೇಕು. ಇದರಲ್ಲಿ ಒಂದೊಂದನೇ, ಎರಡೆರಡನೇ ಇತ್ಯಾದಿ ಅನೇಕ ಗ್ರೇಡುಗಳಿವೆ. ಕೊನೆ ಕೊನೆಯ ಗ್ರೇಡುಗಳಂತೂ ಬಲು ಕ್ಲಿಷ್ಟ. ಕೊನೆಯ ಅತಿ ಕ್ಲಿಷ್ಟ ಗ್ರೇಡನ್ನು ತಲುಪುವವರೂ ಅನೇಕರಿದ್ದರು. ಕಲ್ಲಿನ ಬದಲು ಗೋಲಾಕಾರದ ಗಜ್ಜುಗ ಕಾಯಿಗಳನ್ನು ಬಳಸಿದರೆ ಈ ಆಟ ಮತ್ತೂ ಕಠಿಣ.
ಸಾಂಪ್ರದಾಯಿಕ ಚೆನ್ನೆಮಣೆ ಆಟವನ್ನು ವಟಸಾವಿತ್ರಿ ವ್ರತದಿಂದ ನೂಲಹುಣ್ಣಿಮೆಯ ವರೆಗೆ ಮಾತ್ರ ಅಡಲು ಅನುಮತಿ ಇತ್ತು. ಕವಡೆ ಉಪಯೋಗಿಸಿ ಆಡುವ ಎಕ್ಕಾಟಿ ಎನ್ನುವ ಇನ್ನೊಂದು ರೀತಿಯ ಆಟವನ್ನು ವರ್ಷದುದ್ದಕ್ಕೂ ಆಡಬಹುದಾಗಿತ್ತು. ಎಂದೋ ಒಮ್ಮೆ ಅಕ್ಕ ತಂಗಿಯರಿಬ್ಬರು ಆಟದ ಕೊನೆಗೆ ಚೆನ್ನೆಮಣೆಯಿಂದಲೇ ಹೊಡೆದುಕೊಂಡು ಸತ್ತಿದ್ದರಂತೆ. ಹೀಗಾಗಿ ಸೋದರಿಯರಿಬ್ಬರು ಎಂದಿಗೂ ಚೆನ್ನೆಮಣೆ ಅಡಬಾರದು ಅನ್ನುತ್ತಿದ್ದರು.
ಒಬ್ಬರೇ ಆಡುವ ಆಟಗಳು
ನಮ್ಮ ಊರಿನ ಆಢ್ಯ ಮಹನೀಯರೊಬ್ಬರು ಕೊಟ್ಟ ಹಳೆ ಕಾರು ಟಯರೊಂದಿತ್ತು ನಮ್ಮಲ್ಲಿ. ಅದನ್ನು ಒಂದು ಕೋಲಿಂದ ಹೊಡೆದು ಓಡಿಸುತ್ತಾ ನಾವೇ ಕಾರು ಚಲಾಯಿಸಿದಂತೆ ಸಂಭ್ರಮಿಸುವುದು ನಮ್ಮ ಮೆಚ್ಚಿನ ಆಟವಾಗಿತ್ತು. ಬೇಲಿಯ ದಣಪೆಗೆ ಎಕ್ಸಲರೇಟರ್, ಕ್ಲಚ್, ಬ್ರೇಕ್, ಗೇರುಗಳಂತೆ ಒಂದೊಂದು ಕೋಲು ಸಿಕ್ಕಿಸಿ ಬಸ್ಸು ಬಿಡುವ ಡ್ರೈವಿಂಗ್ಆಟ ಆಡಿದ್ದೂ ಇದೆ! ಒಂದೊಂದು ಗಂಟು ಉಳಿಸಿದ ಬಿದಿರಿನ ಕೋಲುಗಳನ್ನೇರಿ ನಡೆಯುವುದು ಮರಕಾಲಿನ ಆಟ ನಮ್ಮ ಮೆಚ್ಚಿನದಾಗಿತ್ತು. ಅವುಗಳ ಮೇಲೆ ನಿಂತಲ್ಲೇ ನಿಲ್ಲುವುದು, ಎತ್ತರವಾದ ಮೆಟ್ಟಲುಗಳನ್ನೇರುವುದು ಮುಂತಾದವುಗಳನ್ನು ಮಾಡಬಲ್ಲವರು ಎಕ್ಸ್‌ಪರ್ಟ್ ಅನಿಸಿಕೊಳ್ಳುತ್ತಿದ್ದರು. ಬಿದಿರಿನ ಗಂಟು ಕಾಲಿಗೆ ತಾಗಿ ನೋವಾಗದಂತೆ ಅವುಗಳಿಗೆ ಗೋಣಿಚೀಲ ಸುತ್ತಿ ಕುಶನ್ ಕೂಡ ಮಾಡಿಕೊಳ್ಳುತ್ತಿದ್ದೆವು. ಅಂಗಳ ಹಾಳಾಗುತ್ತದೆ ಎಂದು ಹಿರಿಯರು ಬೈದರೂ ನಮ್ಮ ಉತ್ಸಾಹ ಕುಗ್ಗುತ್ತಿರಲಿಲ್ಲ. ಬುಗುರಿ ತಿರುಗಿಸುವುದು, ತಿರುಗುತ್ತಿರುವಾಗ ದಾರದಿಂದ ಅದನ್ನೆತ್ತಿ ಕೈಯ ಮೇಲೆ ತಿರುಗುವಂತೆ ಮಾಡುವುದು ಕೂಡ ನಮ್ಮ ನೆಚ್ಚಿನ ಆಟವಾಗಿತ್ತು. ತೆಂಗಿನ ಗರಿಯ ಗಿರಿಗಿಟ್ಲೆ ಕೈಯಲ್ಲಿ ಹಿಡಿದು ಓಡುವುದು, ಅಡಿಕೆ ಮರದ ತೆಳ್ಳಗಿನ ಪದರವೊಂದಕ್ಕೆ ನೂಲು ಕಟ್ಟಿ ಅದನ್ನು ಬ್ರೂಂ ಬ್ರೂಂ ಎಂದು ಸದ್ದು ಬರುವಂತೆ ತಿರುಗಿಸುವುದು, ಕುಂಟಲ ಗಿಡದ ಎಲೆ, ಶಂಖಪುಷ್ಪದ ಕೋಡುಗಳ ಪೀಪಿ ತಯಾರಿಸಿ ಊದುವುದು ಇತ್ಯಾದಿಗಳನ್ನೂ ನಾವು ಮಾಡುತ್ತಿದ್ದೆವು. ಕಾಗದದಿಂದ ವಿಮಾನ, ದೋಣಿ, ಹಡಗು, ಶಾಯಿ ದವತಿ ಇತ್ಯಾದಿಗಳನ್ನು ಮಾಡುವುದೂ ನಮ್ಮ ಆಟವಾಗಿತ್ತು.
ಹೊರಾಂಗಣ ಆಟಗಳು
ಕುರುಬನ ಪಾತ್ರದ ಒಬ್ಬನು ಕುರಿಗಳೇ ಕುರಿಗಳೇ ಓಡಿ ಬನ್ನಿ ಎಂದಾಗ ಓಡಿ ಬರುವವರನ್ನು ನಡುದಾರಿಯಲ್ಲಿ ನಿಂತಿರುವ ತೋಳ ಪಾತ್ರಧಾರಿ ಮುಟ್ಟಿದರೆ ಅವರು ಔಟ್. ಹೀಗೆ ಪುನರಾವರ್ತನೆಯಾಗುತ್ತಾ ಕೊನೆಗೆ ಔಟಾಗದೇ ಉಳಿದವರು ಜಯಶಾಲಿಗಳು. ಹೆಬ್ಬೆರಳು ಮತ್ತು ತೋರುಬೆರಳನ್ನು ವೃತ್ತಾಕಾರವಾಗಿ ಜೋಡಿಸಿ ಅದರ ಮೂಲಕ ಉಗುಳುವಾಗ ಯಾರ ಎಂಜಲು ಬೆರಳಿಗೆ ತಾಗುವುದಿಲ್ಲವೋ ಅವರಿಗೆ ಕುರುಬ ಮತ್ತು ತೋಳ ಆಗುವ ಅವಕಾಶ. ಎಂಜಲು ತಾಗಿದವರು ಕುರಿಗಳಾಗಬೇಕಿತ್ತು. ಇದೇ ರೀತಿ ಎಂಜಲು ತಾಗಿದವರು ಕಾಗೆ ಮತ್ತು ತಾಗದವರು ಗಿಳಿ ಆಗುವ ಕಾಗೆ ಗಿಳಿ ಆಟವೂ ಇತ್ತು.
ಮದುವೆ, ಮುಂಜಿಗಳಂಥ ಸಮಾರಂಭಗಳಿರುವಾಗ ಇಡೀ ಮನೆಯಂಗಳವನ್ನು ಆವರಿಸುವ ಚಪ್ಪರ ಹಾಕಲಾಗುತ್ತಿತ್ತು. ಅಂತಹ ಸಂದರ್ಭಗಳಲ್ಲಿ ಚಪ್ಪರದ ನಾಲ್ಕು ಕಂಬಗಳ ಮಧ್ಯೆ ಆಡುವ ಆಟವೇ ಕಂಬಾಟ. ನಾಲ್ವರು ನಾಲ್ಕು ಕಂಬಗಳನ್ನು ಹಿಡಿದುಕೊಂಡಿರಬೇಕು. 5ನೆಯವನು ನಡುವಿನಲ್ಲಿ ಸುತ್ತುತ್ತಿರಬೇಕು. ಆ ನಾಲ್ವರು ಕಂಬ ಬದಲಾಯಿಸುವ ಸಂದರ್ಭವನ್ನು ಹೊಂಚು ಹಾಕಿ ನಡುವಿದ್ದವನು ಖಾಲಿ ಕಂಬವನ್ನು ಆಕ್ರಮಿಸಿಕೊಳ್ಳಬೇಕು. ಕಂಬ ತಪ್ಪಿಹೋದವನು ನಡುವೆ ಬಂದು ಸುತ್ತತೊಡಗಬೇಕು. ಇದು ಸಾಕೆನ್ನಿಸುವ ವರೆಗೆ ಆಡಬಹುದಾದ ಆಟ.
ಇಂತಹ ಸಮಾರಂಭಗಳ ಸಂದರ್ಭದಲ್ಲಿ ಪಲ್ಲಿ ಹಿಡಿಯುವುದು ಯುವಕರ ಮೆಚ್ಚಿನ ಆಟವಾಗಿತ್ತು. ಇಬ್ಬರು ಪರಸ್ಪರರ ಎಡಗೈನ್ನು ಬಿಗಿಯಾಗಿ ಹಿಡಿದುಕೊಳ್ಳಬೇಕು. ಇನ್ನೊಬ್ಬನು ಅವರ ಈ ಹಿಡಿತವನ್ನು ಬಿಡಿಸಲು ಪ್ರಯತ್ನಿಸಬೇಕು. ಬಿಡಿಸಲು ಬಂದವನ ಬೆನ್ನಿಗೆ ಬಲಗೈಯಿಂದ ಗುದ್ದುವ ಮುಕ್ತ ಅವಕಾಶ ಪಲ್ಲಿ ಹಿಡಿದವರಿಗಿರುತ್ತದೆ. ಗುದ್ದುಗಳನ್ನು ಸಹಿಸಿಕೊಂಡು ಪಲ್ಲಿ ಬಿಡಿಸಿದರೆ ಆತ ಗೆದ್ದಂತೆ.
ಶಾಲೆಯ ಆಟಗಳು
ವೃತ್ತಾಕಾರವಾಗಿ ಕುಳಿತವರ ಸುತ್ತ ಒಬ್ಬ ಟೊಪ್ಪಿಯೊಂದನ್ನು ಹಿಡಿದುಕೊಂಡು ಓಡುತ್ತಿರುತ್ತಾನೆ. ಮಧ್ಯದಲ್ಲಿ ಆ ಟೊಪ್ಪಿಯನ್ನು ಯಾರಾದರೊಬ್ಬರ ಹಿಂದೆ ರಹಸ್ಯವಾಗಿ ಇರಿಸುತ್ತಾನೆ. ತಕ್ಷಣ ಗೊತ್ತಾದರೆ ಇರಿಸಿಕೊಂಡವ ಅದೇ ಟೊಪ್ಪಿಯಿಂದ ಆತನನ್ನು ಹೊಡೆಯುತ್ತಾ ಒಂದು ಸುತ್ತು ಓಡಿಸಬೇಕು. ಗೊತ್ತಾಗದೇ ಹೋದರೆ ಇರಿಸಿಕೊಂಡವ ಟೊಪ್ಪಿಯೇಟು ತಿನ್ನುತ್ತಾ ಒಂದು ಸುತ್ತು ಓಡಬೇಕು. ಇದು ಟೊಪ್ಪಿ ಆಟ.
ಕುಳಿತವರೆಲ್ಲರೂ ಒಂದು action ಮಾಡುತ್ತಿರುತ್ತಾರೆ. ಅವರ ಮಧ್ಯೆ ಇರುವ ನಾಯಕ ಬೇರೆ action ಆರಂಭಿಸಿದರೆ ಎಲ್ಲರೂ ಆತನನ್ನು ಅನುಸರಿಸುತ್ತಾರೆ. ಹೊರಗೆ ಓಡುತ್ತಿರುವವನು ಈ ನಾಯಕ ಯಾರೆಂದು ಕಂಡುಹಿಡಿಯಬೇಕು. ಇದರಲ್ಲಿ ಸಫಲನಾದರೆ ಆತ ನಾಯಕನಾಗುತ್ತಾನೆ. ನಾಯಕನಾಗಿದ್ದವನು ಓಡುತ್ತಾನೆ. ಇದು ನಾಯಕನನ್ನು ಹುಡುಕುವ ಆಟ.
ಎಲ್ಲರೂ ಕೈ ಕೈ ಹಿಡಿದುಕೊಂಡು ವೃತ್ತಾಕಾರವಾಗಿ ಕೋಟೆಕಟ್ಟಿ ನಿಂತುಕೊಂಡಿರುತ್ತಾರೆ. ನಡುವೆ ದನ ಇರುತ್ತದೆ. ಹೊರಗಿರುವ ಹುಲಿ ಒಳಗೆ ಬಂದು ದನವನ್ನು ಹಿಡಿಯಲು ಪ್ರಯತ್ನಿಸುತ್ತದೆ. ಆದರೆ ಕೈ ಕೈ ಹಿಡಿದಿಕೊಂಡವರು ಹೀಗೆ ಮಾಡಲು ಬಿಡಬಾರದು. ಒಂದು ವೇಳೆ ಬಲಪ್ರಯೋಗಮಾಡಿ ಒಳಗೆ ಬಂದರೆ ದನಕ್ಕೆ ಹೊರಹೋಗಲು ಅವಕಾಶಮಾಡಿಕೊಟ್ಟು ಹುಲಿ ಹೊರಗೆ ಹೋಗದಂತೆ ತಡೆಯಬೇಕು. ಇಷ್ಟೆಲ್ಲ ಪ್ರತಿರೋಧದ ನಡುವೆ ಹುಲಿ ದನವನ್ನು ಮುಟ್ಟಿದರೆ ಈ ಹುಲಿದನದ ಆಟ ಮುಕ್ತಾಯವಾದಂತೆ.
ಇಬ್ಬರು ಹುಡುಗರು ಪರಸ್ಪರ ಹಿಡಿದುಕೊಂಡ ಕೈಗಳ ಮೇಲೆ ಒಂದು ಕಾಲು ಹಾಕಿ ಅವರ ಭುಜಗಳ ಮೇಲೆ ಕೈ ಇಟ್ಟು ಹೇಯ್ ಹೇಯ್ ಎನ್ನುತ್ತಾ ಅವರನ್ನು ಎತ್ತುಗಳಂತೆ ಓಡಿಸುವ ಗಾಡಿ ಆಟವನ್ನೂ ಆಡುತ್ತಿದ್ದೆವು.
ಇಬ್ಬರು ಹುಡುಗರು ಪರಸ್ಪರ ಹಿಡಿದುಕೊಂಡ ಕೈಗಳ ಮೇಲೆ ಒಂದು ಕಾಲು ಹಾಕಿ ಅವರ ಭುಜಗಳ ಮೇಲೆ ಕೈ ಇಟ್ಟು ಹೇಯ್ ಹೇಯ್ ಎನ್ನುತ್ತಾ ಅವರನ್ನು ಎತ್ತುಗಳಂತೆ ಓಡಿಸುವ ಗಾಡಿ ಆಟವನ್ನೂ ಆಡುತ್ತಿದ್ದೆವು.
ಒಳ್ಳೆಯ ಬರಹ
ReplyDelete