Tuesday, 25 August 2015

ಸಿರಿವಂತನಾದರೂ ಕನ್ನಡ ಹಾಡನ್ನಾಲಿಸುವೆ



      ಸಿನಿಮಾದಿಂದಾಗಿ ಜನಪ್ರಿಯವಾಗಿರುವ ಹಾಡುಗಳು, ಹಾಡಿನಿಂದ ಜನಪ್ರಿಯವಾಗಿರುವ ಸಿನಿಮಾಗಳು, ಸಿನಿಮಾದೊಳಗೆ ಸೇರಿ ಜನಪ್ರಿಯತೆ ಗಳಿಸಿದ ಹಾಡುಗಳು,  ಹಾಡುಗಳೇ ಇಲ್ಲದ ಸಿನಿಮಾಗಳು  ಅನೇಕ ಇವೆ.  ಜನಪ್ರಿಯವಾದರೂ ಸಿನಿಮಾದಲ್ಲಿ ಇಲ್ಲದ ಹಾಡುಗಳೂ ಇವೆ. (ಗೆಜ್ಜೆ ಪೂಜೆ ಚಿತ್ರಕ್ಕಾಗಿ ರಚಿಸಲಾದ ಒಂದಿ ದಿನ ರಾತ್ರಿಯಲಿ ಕಂಡೆ ಕನಸೊಂದ ಇದಕ್ಕೆ ಒಂದು ಉದಾಹರಣೆ.)  ಆದರೆ ಈ ಸಿರಿವಂತನಾದರೂ ಕನ್ನಡ ನಾಡಲ್ಲೆ ಮೆರೆವೆ ಸಿನಿಮಾವೇ ಇಲ್ಲದ ಅತಿ ಜನಪ್ರಿಯ ಹಾಡು. ಈ ಹಾಡನ್ನು ಒಳಗೊಂಡಿರಬೇಕಾಗಿದ್ದ ಸಿ.ವಿ.ಶಿವಶಂಕರ್ ಅವರ ಕಲ್ಪನೆಯ ಸಂಗಮ ಚಿತ್ರವು  ಮೂರ್ತರೂಪ ಪಡೆಯಲೇ ಇಲ್ಲ. ಆದರೆ ಈ ಹಾಡಿನಲ್ಲಿ ಅವರ  ಉತ್ಕೃಷ್ಟ ಸಾಹಿತ್ಯ, ಕೆ.ಪಿ.ಸುಖದೇವ್ ಎಂಬ ಹೊಸಬರ ಆಕರ್ಷಕ ಸಂಗೀತ ನಿರ್ದೇಶನ ಮತ್ತು ಪಿ.ಬಿ.ಶ್ರೀನಿವಾಸ್ ಮತ್ತು ಹೊಸ ಗಾಯಕಿ ಸಿ.ಕೆ.ರಮಾ ಅವರ  ಮಧುರ ಧ್ವನಿಗಳ ಸಂಗಮ ಆದದ್ದಂತೂ ನಿಜ. ಬಡವ ಸಿರಿವಂತ ಎಂಬ ಭೇದವಿಲ್ಲದೆ ಎಲ್ಲರೂ ಈ ಚಿತ್ರ(ರಹಿತ)ಗೀತೆಯನ್ನು ಮೆಚ್ಚುತ್ತಾರೆ.  (ಈ ಹಾಡಿಗೆ ಹೇಳಲಾದರೂ ಒಂದು ಚಿತ್ರದ ಹೆಸರಿದೆ. ಆದರೆ ಕವಿ ಪ್ರದೀಪ್ ವಿರಚಿತ ಹಿಂದಿಯ ಏ ಮೇರೆ ವತನ್ ಕೆ ಲೊಗೋ  ಚಿತ್ರದ ಹೆಸರಿನ ಹಂಗೂ ಇಲ್ಲದೆ ಜನಪ್ರಿಯತೆಯ ಶಿಖರವನ್ನೇರಿದ ಗೀತೆ.)


     ಯಾವುದೇ ಎಲೆಕ್ಟ್ರಾನಿಕ್ ವಾದ್ಯಗಳನ್ನು ಬಳಸದೆ ಕೊಳಲು, ವೀಣೆ, ಕ್ಲಾರಿನೆಟ್, ಸಿತಾರ್, ಎಕಾರ್ಡಿಯನ್,  ವಯಲಿನ್ಸ್,  ಢೋಲಕ್, ತಬ್ಲಾ ಮುಂತಾದವುಗಳನ್ನಷ್ಟೇ  ಉಪಯೋಗಿಸಿದ ವಾದ್ಯವೃಂದ ಸಿ.ವಿ.ಶಿವಶಂಕರ್ ಅವರ  ಅಚ್ಚುಮೆಚ್ಚಿನ ಸಂಗೀತ ನಿರ್ದೇಶಕ  ಆರ್.ರತ್ನ  ಅವರ ಮೇಲ್ವಿಚಾರಣೆಯದ್ದೇ ಆಗಿರಬಹುದು ಎಂದು ನನ್ನ ಊಹೆ.  ಹಿಂದೋಳಕ್ಕೆ ಪಂಚಮ ಸೇರಿಸಿದಾಗ ಉಂಟಾಗುವ ಪಂಚಮ್ ಮಾಲಕೌಂಸ್(ಕರ್ನಾಟಕ ಸಂಗೀತದ ಜಯಂತಶ್ರೀ) ರಾಗಾಧಾರಿತವಾಗಿದೆ ಈ ಹಾಡು. ಬಿಳಿ 5ರ ಏರು ಶ್ರುತಿಯ ಆಯ್ಕೆ ಹಾಡಿನ ಮೂಡಿಗೆ ತಕ್ಕ ಉಠಾವ್ ಒದಗಿಸಿದೆ. ಅಲ್ಲದೆ ಈ ಏರು ಶ್ರುತಿಯಿಂದಾಗಿ  ವಾಸ್ತವವಾಗಿ ತಾರ ಷಡ್ಜವನ್ನಷ್ಟೇ ಮುಟ್ಟಿರುವ ಕೊನೆಯಲ್ಲಿ ಪುನರಾವರ್ತನೆಗೊಳ್ಳುವ ಮಣ್ಣಾಗಿ ನಿಲುವೆ ಎಂಬ ಸಾಲು ತಾರ ಪಂಚಮವನ್ನು ಸ್ಪರ್ಶಿಸಿತೇನೋ ಎಂಬ ಭ್ರಮೆಯುಂಟಾಗುತ್ತದೆ! ಅಂದಿನ RCA Sound System ನ ವಿಶೇಷತೆಯಾದ  ಗಾಯಕರ ಧ್ವನಿಯನ್ನು ಎತ್ತಿಕೊಡುವುದರ ಜೊತೆಗೆ  ಪ್ರತಿಯೊಂದು ವಾದ್ಯವನ್ನು ನಿಖರವಾಗಿ ಆಲಿಸಲು ಸಾಧ್ಯವಾಗಿಸುವ presence of instruments ಇದರಲ್ಲೂ ಇದೆ. ಉಸಿರಿನ ಸದ್ದು ಒಂದಿನಿತೂ ಕೇಳಿಸದಿರುವುದು recordist ಮತ್ತು ಗಾಯಕರ ವೃತ್ತಿಪರತೆಗೆ ಪುರಾವೆ.  ಇಂದಿನ ಮಲ್ಟಿ ಚಾನಲ್ ಕಂಪ್ಯೂಟರ್ ರೆಕಾರ್ಡಿಂಗ್ ಯುಗದಲ್ಲಿ ಇಂತಹ ಸ್ಪಷ್ಟತೆ ಎಂದೂ ಕಾಣ ಸಿಗದು.

     ಅಂದಿನ ದಿನಗಳಲ್ಲಿ ಕನ್ನಡ ಚಿತ್ರಗಳು ಬಿಡುಗಡೆಯಾಗಿ ಕೆಲವು ತಿಂಗಳುಗಳು ಕಳೆದ ಮೇಲಷ್ಟೇ ಹಾಡುಗಳ ಧ್ವನಿಮುದ್ರಿಕೆಗಳು ಬಿಡುಗಡೆಗೊಂಡು ರೇಡಿಯೊ ಮತ್ತಿತರ ಕಡೆ ಕೇಳಿಸತೊಡಗುತ್ತಿದ್ದವು.  ಆದರೆ ಚಿತ್ರವು ಸೆಟ್ಟೇರದೇ ಇದ್ದರೂ 6 ನಿಮಿಷಗಳ ಈ ಹಾಡಿನ double sided ಧ್ವನಿಮುದ್ರಿಕೆ ತಯಾರಾದದ್ದು ಒಂದು ವಿಶೇಷ.  70ರ ದಶಕದಲ್ಲಿ TV, ಕಂಪ್ಯೂಟರ್, ಮುಂತಾದವುಗಳಿಂದ ಹೊರಡುವ  ವಿಕಿರಣಗಳ ಅಡ್ಡ ಪರಿಣಾಮ ಇಲ್ಲದ್ದರಿಂದ ದೂರದ ಮೀಡಿಯಂ ವೇವ್ ಸ್ಟೇಶನ್ನುಗಳೂ ಸ್ಪಷ್ಟವಾಗಿ ಕೇಳಿಸುತ್ತಿದ್ದವು.  ಧಾರವಾಡ ಮತ್ತು ಗುಲ್ಬರ್ಗಾ ನಿಲಯಗಳಿಂದ  ವಾರಕ್ಕೊಮ್ಮೆ ಪ್ರಸಾರವಾಗುತ್ತಿದ್ದ ಗ್ರಾಮೀಣ ಯುವಜನರ ಮೆಚ್ಚಿನ ಚಿತ್ರಗೀತೆಗಳ ಕಾರ್ಯಕ್ರಮದಲ್ಲಿ ಈ ಹಾಡು ಇದ್ದೇ ಇರುತ್ತಿತ್ತು.  ಮಧ್ಯಾಹ್ನ ಪ್ರಸಾರವಾಗುತ್ತಿದ್ದ ರೇಡಿಯೋ ಸಿಲೋನಿನ ಕನ್ನಡ ಕಾರ್ಯಕ್ರಮದಲ್ಲೂ ಇದು ಆಗಾಗ ಕೇಳಿ ಬರುತ್ತಿತ್ತು.  ಈಗಲೂ ಕೆಲವು ರೇಡಿಯೊ ನಿಲಯಗಳಿಂದ ಆಗೊಮ್ಮೆ ಈಗೊಮ್ಮೆ ಧ್ವನಿಮುದ್ರಿಕೆಯ ಒಂದು ಬದಿಯ ಒಂದು  ಚರಣ ಮಾತ್ರ ಕೇಳಿ ಬರುವುದುಂಟು. 

      ಎಲ್ಲ ಚರಣಗಳನ್ನೊಳಗೊಂಡ ಸಂಪೂರ್ಣ ಹಾಡು ಸಾಹಿತ್ಯದೊಂದಿಗೆ ನಿಮಗಾಗಿ ಇಲ್ಲಿದೆ.  ವಿರಾಮದ ವೇಳೆಯಲ್ಲಿ ಸಾಹಿತ್ಯ ಓದುತ್ತಾ ಆಲಿಸಿ. Box Player ಕೆಲಸ ಮಾಡದಿದ್ದರೆ  ಪಕ್ಕದ ಗ್ರಾಮಫೋನಿನಲ್ಲಿ ಪ್ರಯತ್ನಿಸಬಹುದು.

     ಒಂದು ರಸಪ್ರಶ್ನೆ : ಈ ಹಾಡಿನ 41 ಸೆಕೆಂಡು ಮತ್ತು  50 ಸೆಕೆಂಡುಗಳ ಮಧ್ಯ ಬರುವ  interlude ತುಣುಕಿನಲ್ಲಿ ಆ ದಿನಗಳಲ್ಲಿ ಪ್ರಸಿದ್ಧವಾಗಿದ್ದು ಈಗಲೂ ಜನಪ್ರಿಯವಾಗಿರುವ ಶಂಕರ್ ಜೈಕಿಶನ್ ಹಾಡೊಂದರ preludeನ ಝಲಕ್ ಗುರುತಿಸಬಹುದು. ಯಾವ ಹಾಡೆಂದು ಹೇಳಬಲ್ಲಿರಾ?

    


ಸಿರಿವಂತನಾದರೂ ಕನ್ನಡ ನಾಡಲ್ಲೆ ಮೆರೆವೆ
ಭಿಕ್ಷುಕನಾದರೂ ಕನ್ನಡ ನಾಡಲ್ಲೆ ಮಡಿವೆ
ಸಿರಿವಂತಳಾದರೂ ಕನ್ನಡ ನಾಡಲ್ಲೆ ಮೆರೆವೆ
ಭಿಕ್ಷುಕಿಯಾದರೂ ಕನ್ನಡ ನಾಡಲ್ಲೆ ಮಡಿವೆ

ಸಂಗೀತ ಕಲೆ ಮೆಚ್ಚಿ ವೀಣೆಯ ಪಿಡಿದೊಡೆ
ಶೃಂಗೇರಿ ಶಾರದೆ ಮಡಿಲಲ್ಲಿ ನಲಿವೆ
ವೀರ ಖಡ್ಗವ ಝಳಪಿಸುವ ವೀರ ನಾನಾದೊಡೆ
ಚಾಮುಂಡಾಂಬೆಯ ಕರದಲ್ಲಿ ಹೊಳೆವೆ

ಸಿರಿವಂತಳಾದರೂ ಕನ್ನಡ ನಾಡಲ್ಲೆ ಮೆರೆವೆ
ಭಿಕ್ಷುಕಿಯಾದರೂ ಕನ್ನಡ ನಾಡಲ್ಲೆ ಮಡಿವೆ
ಸಿರಿವಂತನಾದರೂ ಕನ್ನಡ ನಾಡಲ್ಲೆ ಮೆರೆವೆ


ಶರಣಗೆ ವಂದಿಪ ಶರಣೆ ನಾನಾದೊಡೆ
ವಚನವೆ ಬದುಕಿನ ಮಂತ್ರವೆನುವೆ
ವೀರಗೆ ವಂದಿಪ ಶೂರ ನಾನಾದೊಡೆ
ಕಲ್ಲಾಗಿ ಹಂಪೆಯಲಿ ಬಹುಕಾಲ ನಿಲುವೆ

ಸಿರಿವಂತನಾದರೂ ಕನ್ನಡ ನಾಡಲ್ಲೆ ಮೆರೆವೆ
ಭಿಕ್ಷುಕಿಯಾದರೂ ಕನ್ನಡ ನಾಡಲ್ಲೆ ಮಡಿವೆ
ಸಿರಿವಂತನಾದರೂ ಕನ್ನಡ ನಾಡಲ್ಲೆ ಮೆರೆವೆ

ದಾಸರಿಗೆ ವಂದಿಪ ಅಭಿಮಾನಿಯಾದೊಡೆ
ಕನ್ನಡ ಸಾಹಿತ್ಯ ನನ್ನಾಸ್ತಿ ಎನುವೆ
ಪುಣ್ಯನದಿಯಲಿ ಮೀಯುವೆನಾದೊಡೆ
ಕಾವೇರಿ ತುಂಗೆಯರ ಮಡಿಲಲ್ಲೆ ಮೀಯುವೆ
ಇನ್ನೊಮ್ಮೆ ಮರುಜನ್ಮ ಪಡೆಯುವೆನಾದೊಡೆ
ಕನ್ನಡದ ಮಣ್ಣಲ್ಲಿ ಮಣ್ಣಾಗಿ ನಿಲುವೆ.
ಮಣ್ಣಾಗಿ ನಿಲುವೆ ಮಣ್ಣಾಗಿ ನಿಲುವೆ

4 comments:

  1. ಸಾರ್, ಆ ಮಧ್ಯದಲ್ಲಿ ಬರುವ ಟ್ಯೂನು ಆಮ್ರಪಾಲಿ ಚಿತ್ರದ ಹಾಡಲ್ಲಿ ಬರೋದಾ?

    ReplyDelete
    Replies
    1. ಇಷ್ಟು ಸಮಯದ ನಂತರ ನೀವೊಬ್ಬರಾದರೂ ಪ್ರಯತ್ನಿಸಿದ್ದು ಸಂತೋಷ. ಆದರೆ ಆಮ್ರಪಾಲಿ ಅಲ್ಲ. ಕನ್ಯಾದಾನ್ ಚಿತ್ರದ ಲಿಖೆ ಜೊ ಖತ್ ತುಝೆ.

      Delete
    2. Wah Re Wah, Esthu Sogasada Haadu haagu Commentary. Rasa prasneyanthu tale kedisitu. Aadare uttare dorakadiga entha khusi.....Dhanyavadagalu

      Delete
  2. ಈ ಹಾಡು ನಮ್ಮನೆ ಹತ್ರ ಇದ್ದ ಹೋಟೆಲ್ನಲ್ಲಿ ಅದೆಷ್ಟು ಬಾರಿ ಹಾಕುತ್ತಿದ್ದರೊ.. ಯಾಕೊ ಗಾಯಕಿಯ ಧ್ವನಿ ಅಷ್ಟು ಹಿಡಿಸಿರಲಿಲ್ಲ.

    ReplyDelete

Your valuable comments/suggestions are welcome