Thursday 27 July 2017

ಗಾನ ದಾರಿಯಲ್ಲಿ ಸೂರ್ಯ ಜಾರಿ ಹೋದ


ಆರಾಧನಾದಲ್ಲಿ ರಾಜೇಶ್ ಖನ್ನಾಗೆ ಕಿಶೋರ್ ಕುಮಾರ್ ಕೆಲವು ಹಾಡುಗಳನ್ನು ಹಾಡಿದ್ದೇ ನೆಪವಾಗಿ ರಫಿ ಕ್ರಮೇಣ ಹಿನ್ನೆಲೆಗೆ ಸರಿಯುವಂತಾದಾಗ  ಅವರ ಅನೇಕ ಅಭಿಮಾನಿಗಳಿಗೆ ಅನ್ನಿಸಿದ್ದು ಹೀಗೆ.  ಆದರೆ ಆರಾಧನಾದಲ್ಲಿ ರಫಿ ಹಾಡುಗಳೂ ಇದ್ದವು.  ಅದೇ ಸಮಯಕ್ಕೆ ಬಂದ ರಾಜೇಶ್ ಖನ್ನಾ ಚಿತ್ರಗಳಾದ ದೋ ರಾಸ್ತೆ, ದ ಟ್ರೇನ್ ಚಿತ್ರಗಳು ಗೆದ್ದದ್ದೇ ರಫಿ ಹಾಡುಗಳಿಂದ. ಆದರೂ ಹೀಗೇಕಾಯಿತು? ಕಾರಣ ಯಾರಿಗೂ ಗೊತ್ತಿಲ್ಲ.

ಆಗ ಚಾಲ್ತಿಯಲ್ಲಿದ್ದ ಅಲಿಖಿತ ನಿಯಮದ ಪ್ರಕಾರ  ರಾಜ್ ಕಪೂರ್ ಅವರಿಗೆ ಮತ್ತು ಆಗೊಮ್ಮೆ ಈಗೊಮ್ಮೆ ಇತರ pathos ಹಾಡುಗಳಿಗೆ ಮುಕೇಶ್,  ತನಗಾಗಿ ಮತ್ತು ದೇವಾನಂದ್‌ಗಾಗಿ ಕಿಶೋರ್ ಕುಮಾರ್, ಬಿ.ಆರ್. ಫಿಲ್ಮ್ಸ್‌ನ ಚಿತ್ರಗಳಿಗೆ ಮಹೇಂದ್ರ ಕಪೂರ್, ತನ್ನ ಸಂಗೀತ ನಿರ್ದೇಶನದ ಚಿತ್ರಗಳಿಗೆ ಹೇಮಂತ್ ಕುಮಾರ್, ಹಾಸ್ಯ ಮತ್ತು ಶಾಸ್ತ್ರೀಯ ಹಾಡುಗಳಿಗೆ ಮನ್ನಾಡೇ ಹಾಡುತ್ತಿದ್ದುದನ್ನು ಬಿಟ್ಟರೆ ಇತರೆಲ್ಲ ಹಾಡುಗಳಿಗೆ ರಫಿಯೇ ಧ್ವನಿಯಾಗುತ್ತಿದ್ದುದು.  ಹೀಗಾಗಿ ಆರಾಧನಾ ಹಾಡುಗಳನ್ನೂ ರಫಿಯೇ ಹಾಡುವುದೆಂದು ನಿರ್ಧಾರವಾಗಿತ್ತು.  ಒಂದು ಹಾಡು  ಬಾಗೊ ಮೆಂ ಬಹಾರ್ ಹೈ ರಫಿ-ಲತಾ ಧ್ವನಿಯಲ್ಲಿ ರೆಕಾರ್ಡ್ ಕೂಡ ಆಗಿತ್ತು. ಅಷ್ಟರಲ್ಲಿ ರಫಿ ದೀರ್ಘ ರಜೆಯ ಮೇಲೆ ಹಜ್ ಯಾತ್ರೆಗೆ ತೆರಳಿದರು. ಶಕ್ತಿ ಸಾಮಂತ್  ನಿರ್ಮಿಸುತ್ತಿದ್ದ ದೊಡ್ಡ ಬಜಟ್ ಚಿತ್ರ ಪಗ್ಲಾ ಕಹೀಂ ಕಾ ಯಾವುದೋ ಕಾರಣಕ್ಕೆ ಅರ್ಧದಲ್ಲಿ ನಿಂತಿತ್ತು. ಹೀಗಾಗಿ ಅವರು stop gap arrangement ಆಗಿ   ಶರ್ಮಿಳಾ ಠಾಗೋರ್ ಮತ್ತು ಆಗಿನ್ನೂ ನವ ನಟನೇ ಆಗಿದ್ದ ರಾಜೇಶ್ ಖನ್ನಾ  ಮುಖ್ಯ ಭೂಮಿಕೆಯಲ್ಲಿ ನಟಿಸಲಿರುವ ಆರಾಧನಾ ನಿರ್ಮಾಣಕ್ಕೆ ಕೈ ಹಾಕಿದ್ದರು.  ಬೇಗ ಚಿತ್ರೀಕರಣ ಮುಗಿಸಿ ಚಿತ್ರ ಬಿಡುಗಡೆ ಮಾಡುವುದು ಅವರಿಗೆ ಅನಿವಾರ್ಯವಾಗಿತ್ತು. ಅದಕ್ಕಾಗಿ ತಕ್ಷಣ ಹಾಡುಗಳು ಬೇಕಾಗಿದ್ದವು.  ಈ ಕುರಿತು ಸಂಗೀತ ನಿರ್ದೇಶಕ ಎಸ್.ಡಿ.ಬರ್ಮನ್ ಅವರೊಂದಿಗೆ ಚರ್ಚಿಸುತ್ತಿದ್ದಾಗ ಅವರ ಆಪ್ತರಾದ ಕಿಶೋರ್ ಕುಮಾರ್ ಅವರಿಂದ ಉಳಿದ ಹಾಡುಗಳನ್ನು ಹಾಡಿಸಿದರೆ ಹೇಗೆ ಎಂಬ ಯೋಚನೆ ಶಕ್ತಿ ಸಾಮಂತ್ ಅವರಿಗೆ ಬಂತು. ಕೂಡಲೇ ‘ಬರ್ಮನ್ ದಾದಾ ನಿಮ್ಮನ್ನು ಬರಹೇಳಿದ್ದಾರೆ’ ಎಂದು ಫೋನ್ ಮಾಡಿ ಕಿಶೋರ್ ಕುಮಾರ್ ಅವರನ್ನು ಕರೆಸಲಾಯಿತು.  ಇನ್ಯಾರಿಗೂ ಕ್ಯಾರೇ ಅನ್ನದಿದ್ದರೂ ಬರ್ಮನ್ ದಾದಾಗೆ ಬಹಳ ಗೌರವ ಕೊಡುತ್ತಿದ್ದ ಕಿಶೋರ್ ತಡ ಮಾಡದೆ ಬಂದರು.  ಬಂದೊಡನೆ ‘ಏನು ವಿಷಯ’ ಎಂದು ಬರ್ಮನ್ ದಾದಾ ಅವರಲ್ಲಿ ವಿಚಾರಿಸಿದಾಗ ‘ಕರೆದದ್ದು  ನಾನಲ್ಲ, ಶಕ್ತಿ ಸಾಮಂತ್ ನಿನ್ನಲ್ಲಿ ಏನೋ ಮಾತಾಡಬೇಕಂತೆ’ ಅಂದಾಗ ಶಕ್ತಿ ಸಾಮಂತ್ ಕಕ್ಕಾಬಿಕ್ಕಿಯಾದರೂ ಕಿಶೋರ್‌ಗೆ ವಿಷಯ ತಿಳಿಸಿದರು. ಚಿತ್ರದ ನಾಯಕ ರಾಜೇಶ್ ಖನ್ನಾ ಎಂದು ತಿಳಿಯುತ್ತಲೇ ಕಿಶೋರ್ ‘ಇಲ್ಲ ಇಲ್ಲ.  ನಾನು ದೇವಾನಂದ್‌ಗೆ ಮಾತ್ರ ಹಾಡುವುದು. ಇತರರಿಗೆ ಹಾಡಿದರೆ ಜನ ಒಪ್ಪಲಾರರು’ ಎಂದು ಖಡಾಖಂಡಿತವಾಗಿ ನಿರಾಕರಿಸಿದರು.  ವಾಸ್ತವವಾಗಿ ತಾನೊಬ್ಬ ನಟನೇ ಹೊರತು ಹಿನ್ನೆಲೆ ಗಾಯಕ ಅಲ್ಲ.  ತನ್ನ ಹಾಡುಗಳಿಂದ ಇತರರೇಕೆ ಖ್ಯಾತಿ ಗಳಿಸಬೇಕು ಎಂಬ ಭಾವನೆ ಅವರ ತಲೆಯಲ್ಲಿತ್ತು.  ರಾಗಿಣಿ, ಶರಾರತ್, ಬಾಘಿ ಶಹಜಾದಾ ಮುಂತಾದ ಚಿತ್ರಗಳಲ್ಲಿ ರಫಿಯ ಹಾಡಿಗೆ ಅಭಿನಯಿಸಲು ಅವರು ಒಪ್ಪಿದ್ದೂ ಇದೇ ಕಾರಣಕ್ಕಾಗಿ. ಕಲ್ಯಾಣಜೀ ಆನಂದಜೀ ಅವರಿಗೆ ಉಪಕಾರ್ ಚಿತ್ರದ ಕಸಮೆ ವಾದೇ ಪ್ಯಾರ್ ವಫಾ  ಹಾಡನ್ನು ಕಿಶೋರ್ ಅವರಿಂದ ಹಾಡಿಸಬೇಕೆಂದು ಆಸೆ ಇತ್ತು. ಇದಕ್ಕಾಗಿ ಅವರನ್ನು ಸಂಪರ್ಕಿಸಿದಾಗ ‘ನಾನೇ ಬೇರೆಯವರಿಂದ playback ಹಾಡಿಸಿಕೊಳ್ಳುವ ನಟ. ಇನ್ನೊಬ್ಬರಿಗಾಗಿ ಹಾಡುವಂತೆ ನನ್ನನ್ನೇನು ಕೇಳುತ್ತೀರಿ’ ಅಂದಿದ್ದರಂತೆ.  ಆದರೆ ಬರ್ಮನ್ ದಾದಾ ಬಿಟ್ಟಾರೆಯೇ. ‘ಏಕೆ ನಖ್ರಾ ಮಾಡುತ್ತಿ.  ಸುಮ್ಮನೆ ನಾನು ಹೇಳಿದಂತೆ ಕೇಳು’ ಎಂದು ದಬಾಯಿಸಿದಾಗ  ಕಿಶೋರ್ ವಿಧಿಯಿಲ್ಲದೆ ಒಪ್ಪಬೇಕಾಯಿತು.  ಹೀಗೆ ಚಿತ್ರೀಕರಣಕ್ಕಾಗಿ ಕೂಡಲೇ ಬೇಕಾಗಿದ್ದ  ಕೋರಾ ಕಾಗಜ್ ಥಾ ಯೆ ಮನ್ ಮೇರಾ, ಮೇರೆ ಸಪನೋಂ ಕಿ ರಾನಿ ಮತ್ತು ರೂಪ್ ತೇರಾ ಮಸ್ತಾನಾ ಕಿಶೋರ್ ಧ್ವನಿಯಲ್ಲಿ ರೆಕಾರ್ಡ್ ಆದವು.  ಅಷ್ಟರಲ್ಲಿ ವಿದೇಶದಿಂದ ಮರಳಿದ ರಫಿ ತಾನು ಹೋಗುವ ಮೊದಲು ಆರಾಧನಾದ ಒಂದೇ ಹಾಡು ರೆಕಾರ್ಡ್ ಆಗಿದ್ದುದನ್ನು ನೆನಪಿಸಿಕೊಂಡು ‘ನಾನು ಬಂದಿದ್ದೇನೆ. ನನ್ನಿಂದ ಏನಾದರೂ ಸೇವೆ ಬೇಕಿದ್ದರೆ ಹೇಳಿ’ ಎಂದು ಶಕ್ತಿ ಸಾಮಂತ್‌ಗೆ ಫೋನ್ ಮಾಡಿದರು.  ಅದುವರೆಗಿನ ತನ್ನ ಎಲ್ಲ ಚಿತ್ರಗಳಲ್ಲೂ ಹಾಡಿದ್ದ ರಫಿ ಬಗ್ಗೆ ಸಾಮಂತ್‌ಗೆ ಅಪಾರ ಗೌರವವಿತ್ತು.  ಅವರಿಗೆ ವಿಷಯ ತಿಳಿಸಿ ‘ಒಂದು ಹಾಡು ಉಳಿದಿದೆ.  ಅದನ್ನು ನೀವು ಹಾಡಿ ಬಿಡಿ’ ಎಂದರು.  ಆ ಹಾಡು ಗುನ್ ಗುನಾ ರಹೇ ಹೈಂ ಭಂವರೆ.  ಇವಿಷ್ಟು ವಿವರಗಳನ್ನು ಸ್ವತಃ ಶಕ್ತಿ ಸಾಮಂತ್ ಒಂದು ರೇಡಿಯೋ ಸಂದರ್ಶನದಲ್ಲಿ ಹೇಳಿದ್ದಾರೆ.   ಆದ್ದರಿಂದ ಕೆಲವು ಹಾಡುಗಳ ಧ್ವನಿಮುದ್ರಣದ ನಂತರ ಎಸ್.ಡಿ.ಬರ್ಮನ್ ಅವರಿಗೆ ಅಸೌಖ್ಯ ಉಂಟಾಯಿತು.  ಉಳಿದ ಹಾಡುಗಳನ್ನು ಆರ್. ಡಿ. ಬರ್ಮನ್ ತನಗೆ ಪ್ರಿಯರಾದ ಕಿಶೋರ್ ಅವರಿಂದ ಹಾಡಿಸಿದರು ಎಂದೆಲ್ಲ ಕೆಲವೆಡೆ ಉಲ್ಲೇಖವಾಗಿರುವುದು ಸತ್ಯಕ್ಕೆ ದೂರವಾದ ಮಾತು. ಆರಾಧನಾದ ಯಾವ ಹಾಡಿನ ರೆಕಾರ್ಡಿಂಗ್ ಸಂದರ್ಭದಲ್ಲೂ ಆರ್.ಡಿ. ಬರ್ಮನ್ ಇರಲೇ ಇಲ್ಲ ಎಂದು ರೂಪ್ ತೇರಾ ಮಸ್ತಾನಾ ಹಾಡಿನಲ್ಲಿ saxophone ನುಡಿಸಿದ ಮನೋಹಾರಿ ಸಿಂಗ್ ಒಂದೆಡೆ ಹೇಳಿರುವುದು ಈ ಮಾತಿಗೆ ಪುಷ್ಟಿ ನೀಡುತ್ತದೆ.

ಯಾರು ಹಾಡಿದ್ದೆಂಬುದರ ಬಗ್ಗೆ ಹೆಚ್ಚು ಗಮನ ನೀಡದೆ ಆರಾಧನಾದ  ಹಾಡುಗಳ ವೈವಿಧ್ಯ ಮತ್ತು ಮಾಧುರ್ಯವನ್ನು ರಫಿ ಪ್ರಿಯರೂ ಸೇರಿದಂತೆ ಎಲ್ಲರೂ ಆಸ್ವಾದಿಸಿದ್ದರು. ತನಗಾಗಿ ಅಥವಾ ದೇವಾನಂದ್‌ಗಾಗಿ ಅಲ್ಲದೆಯೂ ಕಿಶೋರ್ ಈ ಮೊದಲೂ ಭೂತ್ ಬಂಗ್ಲಾ, ಹೋಲಿ ಆಯಿರೇ, ತೀನ್ ಬಹೂರಾನಿಯಾಂ, ಪ್ಯಾರ್ ಕಾ ಮೌಸಮ್, ಅಭಿಲಾಷಾ, ನನ್ಹಾ ಫರಿಶ್ತಾ,  ಹಮ್‌ಜೋಲಿ, ಕಾರವಾಂ  ಮುಂತಾದ ಚಿತ್ರಗಳಲ್ಲಿ ಹಾಡಿದ ಉದಾಹರಣೆಗಳಿದ್ದವು. ಆದರೂ ಕೆಲವು ಪತ್ರಿಕೆಗಳು ಮೊತ್ತ ಮೊದಲಬಾರಿ ಕಿಶೋರ್ ಕುಮಾರ್ ಆರಾಧನಾದಲ್ಲಿ ಬೇರೊಬ್ಬ ಹೀರೊಗೆ ಹಾಡಿದರು ಎಂದು ಬರೆದವು.  ಅಂದಿನ ದಿನಗಳಲ್ಲಿ ಹಾಡುಗಳ ಜನಪ್ರಿಯತೆಯ ಏಕೈಕ ಮಾನದಂಡವಾಗಿದ್ದ ಬಿನಾಕಾ ಗೀತ್ ಮಾಲಾದಲ್ಲಿ ಆರಾಧನಾದ ಕಿಶೋರ್ ಹಾಡುಗಳು ಅಂತಹ ಸದ್ದೇನೂ ಮಾಡಿರಲಿಲ್ಲ.  

ಕಾಲ ಕ್ರಮೇಣ  ರಫಿ ಮುಖ್ಯ ಗಾಯಕನಾಗಿದ್ದ ಚಿತ್ರಗಳಲ್ಲಿ ಒಂದೊಂದು ಕಿಶೋರ್ ಹಾಡು ಬರಲು ಆರಂಭವಾಗಿ ಹಿಟ್ ಆಗತೊಡಗಿತು. ಅಂದಾಜ್ ಚಿತ್ರದ ಜಿಂದಗಿ ಎಕ್ ಸಫರ್ ಹೈ ಸುಹಾನಾ, ತುಮ್ ಹಸೀನ್ ಮೈ ಜವಾನ್ ಚಿತ್ರದ ಮುನ್ನೆ ಕೀ ಅಮ್ಮಾ ಇದಕ್ಕೆ ಕೆಲವು ಉದಾಹರಣೆಗಳು.  ಇನ್ನಷ್ಟು ಸಮಯ ಕಳೆದಂತೆ ಇದು ತಿರುವು ಮುರುವು ಆಗಿ ಕಿಶೋರ್ ಮುಖ್ಯ ಗಾಯಕನಾಗಿ ರಫಿಯ ಒಂದೊಂದು ಹಾಡು ಬರತೊಡಗಿತು. ಉದಾಹರಣೆಗೆ ಸಚ್ಚಾ ಝೂಟಾ ಚಿತ್ರದ ಯೂಂ ಹಿ ತುಮ್ ಮುಝ್ ಸೆ ಬಾತ್ ಕರ್‌ತೀ ಹೊ, ಹಾಥಿ ಮೇರೆ ಸಾಥಿಯ ನಫ್‌ರತ್ ಕೀ ದುನಿಯಾ ಕೊ ಛೋಡ್ ಕೆ  ಇತ್ಯಾದಿ.  ಆ ಮೇಲೆ ರಫಿ ದೃಶ್ಯದಿಂದ ಮರೆಯಾಗಿ ಬಹುತೇಕ ಚಿತ್ರಗಳಲ್ಲಿ ಹಿನ್ನೆಲೆ ಗಾಯಕನಾಗಿ ಕಿಶೋರ್ ಕುಮಾರ್ ಹೆಸರು ಮಾತ್ರ ಕಾಣಿಸಿಕೊಳ್ಳತೊಡಗಿತು.  ಕಾರಣಾಂತರಗಳಿಂದ ಕಿಶೋರ್ ಲಭ್ಯರಾಗದ ಸಂದರ್ಭ ಅಥವಾ ಇಬ್ಬರು ಗಾಯಕರು ಹಾಡಬೇಕಾಗಿ  ಬಂದಾಗ ರಫಿ ಬದಲು ಮನ್ನಾಡೇ, ಮುಕೇಶ್ , ಮಹೇಂದ್ರ ಕಪೂರ್, ಭೂಪೇಂದ್ರ  ಮುಂತಾದವರು ಸಂಗೀತ ನಿರ್ದೇಶಕರ  ಆಯ್ಕೆ ಆಗತೊಡಗಿದರು.  ವಾಸ್ತವವಾಗಿ ಸೀತಾ ಔರ್ ಗೀತಾದ ಅಭೀ ತೊ ಹಾಥ್ ಮೆಂ ಜಾಮ್ ಹೈ, ಶೋಲೆ ಚಿತ್ರದ ಯೇ ದೋಸ್ತಿ ಮುಂತಾದ ಹಾಡುಗಳು  ರಫಿಯ ಪಾಲಿಗೆ ಬರಬೇಕಾಗಿದ್ದವುಗಳು.  ರಫಿಯ ಹಾಡುಗಳಿಂದಲೇ ಜನಪ್ರಿಯತೆಯ ತುತ್ತ ತುದಿಗೇರಿದ್ದ ರಾಜೇಂದ್ರ ಕುಮಾರ್ ಕೂಡ ಆಪ್ ಆಯೇ ಬಹಾರ್ ಆಯೀ ಚಿತ್ರದ ತುಮ್ ಕೊ ಭೀ ತೊ ಐಸಾ ಹಿ ಕುಛ್ ಎಂದು ಕಿಶೋರ್ ಧ್ವನಿಯಲ್ಲಿ ಹಾಡಿದ್ದು,  ದಿಲೀಪ್ ಕುಮಾರ್ ಅಭಿನಯದ ಸಗೀನ ಚಿತ್ರದ ಎಲ್ಲ ಹಾಡುಗಳು ಕಿಶೋರ್ ಪಾಲಾದದ್ದು ರಫಿ ಅಭಿಮಾನಿಗಳಿಗೆ ತೀವ್ರ ನಿರಾಸೆ ಉಂಟು ಮಾಡಿತ್ತು.

ಇದಕ್ಕೆ ಅಂದಿನ ನಿರ್ಮಾಪಕರು ಮತ್ತು ಸಂಗೀತ ನಿರ್ದೇಶಕರೇ ಕಾರಣ  ಎಂದು ಹೇಳಲಾಗದು.  ಯಾವ ಶ್ರುತಿಯಲ್ಲೂ ಯಾವ ಶೈಲಿಯಲ್ಲೂ ಯಾರೊಂದಿಗೂ ಯಾವುದೇ ರೀತಿಯ ಹಾಡನ್ನು ಅತಿ ಶೀಘ್ರವಾಗಿ ಕಲಿತು ತಪ್ಪಿಲ್ಲದೆ ಹಾಡಬಲ್ಲವರಾಗಿದ್ದ ರಫಿ ಎಲ್ಲರ ಪ್ರಥಮ ಆಯ್ಕೆಯೇ ಆಗಿದ್ದರು. ಆದರೆ  ಹಜ್ ಯಾತ್ರೆಯನ್ನು ಮುಗಿಸಿ ಬಂದ ರಫಿ ಆಧ್ಯಾತ್ಮದತ್ತ ಹೆಚ್ಚು ವಾಲಿದ್ದರು ಮತ್ತು ಹೆಚ್ಚು ಸಮಯ ವಿದೇಶದಲ್ಲೇ ವಾಸ್ತವ್ಯ ಹೂಡುತ್ತಿದ್ದುದರಿಂದ ಬೇಕಿದ್ದಾಗ ಧ್ವನಿಮುದ್ರಣಕ್ಕೆ ಸಿಗುತ್ತಿರಲಿಲ್ಲ ಎಂದು ಕೆಲವರು ಹೇಳುತ್ತಾರೆ.  ಓರ್ವ ವ್ಯಕ್ತಿ  ಅವರ ಮನೆಯಲ್ಲೇ ಠಿಕಾಣಿ  ಹೂಡಿ ಹಾಡಿನ ಮೂಲಕ ಸಂಪತ್ತು ಗಳಿಸುವುದು ಪಾಪ ಕಾರ್ಯ ಎಂಬ ವಿಚಾರವನ್ನು ಅವರ ತಲೆಯಲ್ಲಿ ತುಂಬಿದ್ದರು ಎಂದೂ ಹೇಳಲಾಗುತ್ತಿದೆ.  ಈ ವಿಚಾರವನ್ನು ರಫಿಯ ಪುತ್ರ ಪಕ್ಕದಲ್ಲೇ ವಾಸವಾಗಿದ್ದ ಪ್ರಖ್ಯಾತ ಅರೇಂಜರ್ ಮತ್ತು ಸರ್ವ ವಾದ್ಯ ಪರಿಣತ ಕೇರ್ಸಿ ಲಾರ್ಡ್ ಅವರಲ್ಲಿ ಹೇಳಿಕೊಂಡಾಗ ಅವರು ಉಪಾಯವಾಗಿ ಆ ವ್ಯಕ್ತಿಯನ್ನು ಸಾಗಹಾಕಿದ ಮೇಲೆ ಮತ್ತೆ ರಫಿ ಹಾಡತೊಡಗಿದರು ಎಂದು ಸ್ವತಃ ಲಾರ್ಡ್ ಒಂದು ಸಂದರ್ಶನದಲ್ಲಿ ಹೇಳಿದ್ದಾರೆ.

ಈ ಮಧ್ಯೆಯೂ ಲಕ್ಷ್ಮೀ ಪ್ಯಾರೆ ತಮ್ಮ ಚಿತ್ರಗಳಲ್ಲಿ ಒಂದಾದರೂ ರಫಿ ಹಾಡಿರುವಂತೆ ನೋಡಿಕೊಳ್ಳುತ್ತಿದ್ದರು.  ರಫಿ ಅಭಿಮಾನಿಗಳಾದ ನಾಸಿರ್ ಹುಸೇನ್, ಮನಮೋಹನ್ ದೇಸಾಯಿ ಮುಂತಾದವರು ಕೂಡ ಸಾಧ್ಯವಾದಾಗಲೆಲ್ಲ  ಅವರನ್ನು ಬಳಸಿಕೊಳ್ಳುತ್ತಿದ್ದರು.  ಆದರೆ ಅಷ್ಟರಲ್ಲಿ ಅವರ ಧ್ವನಿಯಲ್ಲಿ ತೆರೆಮೇಲೆ ಹಾಡುತ್ತಿದ್ದ ನಾಯಕ ನಟರು ಒಬ್ಬೊಬ್ಬರಾಗಿ ನಿವೃತ್ತರಾಗಿದ್ದರು. ತನ್ನ ಅತಿ ಮೆಚ್ಚಿನ ಗಾಯಕ ರಫಿ ಎಂದು ಘಂಟಾ ಘೋಷವಾಗಿ ಸಾರುತ್ತಿದ್ದ ಓ.ಪಿ.ನಯ್ಯರ್ ಆಶಾ ಭೋಸ್ಲೆಯೊಂದಿಗೆ ಜಗಳವಾಡಿ ಮರೆಗೆ ಸರಿದಿದ್ದರು.  ಜೈಕಿಶನ್ ನಿಧನದ ನಂತರ ಅವರ ಬಲಗೈ ಬಂಟರಾಗಿದ್ದ ಸೆಬಾಸ್ಟಿಯನ್ ಶಸ್ತ್ರ ತ್ಯಾಗ ಮಾಡಿ ಗೋವೆಗೆ ಹಿಂತಿರುಗಿದ ಮೇಲೆ ಅದುವರೆಗೆ ಅವರನ್ನೇ ಅನುಸರಿಸಿ ತಮ್ಮ ರಚನೆಗಳಲ್ಲೂ ಮಾಧುರ್ಯ ತುಂಬಿ ತುಳುಕುವಂತೆ ಮಾಡುತ್ತಿದ್ದ ಇತರ ಸಂಗೀತ ನಿರ್ದೇಶಕರು ಸಂಗೀತೋಪಕರಣಗಳ ಬದಲಿಗೆ oscillatorಗಳ ಸದ್ದನ್ನು ಬಳಸಲಾರಂಭಿಸಿದ್ದರು. ಹಾಡುಗಳಲ್ಲೂ ಮೊದಲಿನ ವೈವಿಧ್ಯ ಇರದೆ ಏಕತಾನತೆ ಕಾಣಿಸತೊಡಗಿತ್ತು. ಜಯದೇವ್ ಮತ್ತು  ಮದನ್ ಮೋಹನ್ ಅವರ  ಜಂಟಿ ಸಂಗೀತ ನಿರ್ದೇಶನದ ಲೈಲಾ ಮಜ್ನೂದಲ್ಲಿ ಯುವ ನಟ ಋಷಿ ಕಪೂರ್ ಅವರ ಎಲ್ಲ ಹಾಡುಗಳನ್ನು  ಹಾಡುವ ಮೂಲಕ ಮತ್ತೆ ಮುಂಚೂಣಿಗೆ ಬಂದಂತೆ ಕಂಡರೂ ಆ ಹೊತ್ತಿಗೆ ರಫಿಯ ಧ್ವನಿಯಲ್ಲಿ ಮೊದಲಿನ ಮಾರ್ದವತೆ ಮಾಯವಾಗಿದ್ದನ್ನು ಮುಂದಿನ ಅಮರ್ ಅಕ್ಬರ್ ಅಂತೋಣಿ, ಸರ್‌ಗಮ್, ಆಶಾ ಮುಂತಾದ ಚಿತ್ರಗಳ ಹಾಡುಗಳಲ್ಲಿ ಸ್ಪಷ್ಟವಾಗಿ ಗುರುತಿಸಬಹುದು.  ಸಂದರ್ಭಕ್ಕೆ ತಕ್ಕಂತೆ ಆರೇಳು ವಿಧದ ಧ್ವನಿಗಳಲ್ಲಿ  ಹಾಡಬಲ್ಲವರಾಗಿದ್ದ ಹಳೆ ರಫಿ ಅವರಾಗಿರಲಿಲ್ಲ. ಒಳಗಿಂದೊಳಗೆ ಅವರನ್ನು ಕೊರೆದು ತಿನ್ನುತ್ತಿದ್ದ ಅನಾರೋಗ್ಯವೂ ಇದಕ್ಕೆ ಕಾರಣವಾಗಿರಬಹುದು.  ಕೊನೆ ಕೊನೆಗೆ ಅವರು ಹಾಡುವಾಗ ಶರೀರವೆಲ್ಲ ನೀಲಿಗಟ್ಟುತ್ತಿತ್ತು ಎಂದು ಲತಾ ಮಂಗೇಶ್ಕರ್ ಒಂದೆಡೆ ಹೇಳಿದ್ದಾರೆ.   ಹೀಗೆ 70ರ ದಶಕದ ಆರಂಭದಲ್ಲಿ ಗಾನ ದಾರಿಯಲ್ಲಿ ಜಾರತೊಡಗಿದ ಸೂರ್ಯ ನಡು ನಡುವೆ ಮೋಡಗಳ ಮರೆಯಿಂದ ಮುಖ ತೋರಿಸಿ ಕೊನೆಗೆ  31-7-1980ರಂದು ಅಸ್ತಂಗತನಾದ.

70ರ ದಶಕದಲ್ಲಿ  ರೇಡಿಯೋ ಸಿಲೋನಿನ  ಏಕ್ ಹೀ ಫಿಲ್ಮ್ ಕೇ ಗೀತ್  ಕಾರ್ಯಕ್ರಮದಲ್ಲಿ ಹೊಸ ಚಿತ್ರದ ಗೀತೆಗಳು ಪ್ರಸಾರವಾಗುವಾಗ ಎಲ್ಲಾದರೂ ಒಂದು ರಫಿ ಹಾಡು ಕೇಳಿ ಬಂದೀತೇ ಎಂದು ಕಾಯುವ,  ಬಿನಾಕಾ ಗೀತ್ ಮಾಲಾದಲ್ಲಿ ಅಪರೂಪಕ್ಕೊಂದು ರಫಿ ಹಾಡು ಸರ್ತಾಜ್ ಗೀತ್ ಆದರೆ ಪುಳಕಗೊಂಡು ತೃಪ್ತಿಪಟ್ಟುಕೊಳ್ಳುವ  ಪರಿಸ್ಥಿತಿ ರಫಿ ಅಭಿಮಾನಿಗಳಿಗೆ ಬಂದೊದಗಿತ್ತು.  ಫರ್ಮಾಯಿಶಿ ಕಾರ್ಯಕ್ರಮಗಳಲ್ಲಿ ರಫಿ ಹಾಡುಗಳೇ ಇರುತ್ತಿರಲಿಲ್ಲ.  ಕಾಲಚಕ್ರ ಮತ್ತೆ ತಿರುಗಿತು.  ಒಮ್ಮೆ ಬುಸುಗುಟ್ಟಿ ನೊರೆಯುಕ್ಕಿಸಿದ ಹಾಡುಗಳು ತಣ್ಣಗಾದವು.  50-60ರ ದಶಕದ ಹಾಡುಗಳು ಸುವರ್ಣಯುಗದ  ಸಂಗೀತವಾಗಿ ಹರಳುಗಟ್ಟಿದವು. ಈಗ ಯಾವುದೇ FM ಅಥವಾ ರೇಡಿಯೊ ಸ್ಟೇಶನ್ ಆಲಿಸಿದರೂ 90 ಶೇಕಡಾ ಕಾರ್ಯಕ್ರಮಗಳು ಈ ಸುವರ್ಣಯುಗದ ರಫಿ ಮತ್ತಿತರರ ಹಾಡುಗಳಿಂದಲೇ ತುಂಬಿರುತ್ತವೆ.   ಅಂತರ್ಜಾಲ ಸರ್ವವ್ಯಾಪಿಯಾದಮೇಲಂತೂ ರೇಡಿಯೋ ಸ್ಟೇಶನ್‌ಗಳ ಅವಲಂಬನೆಯೂ ತಪ್ಪಿ  ಯಾರಿಗೆ ಯಾವುದು ಬೇಕೋ ಅದನ್ನು ಆರಿಸಿಕೊಳ್ಳುವ  ವರ ದೊರಕಿದೆ.
----

ರಫಿ ರಜೆಯಿಂದ ಮರಳಿದ ಮೇಲೆ ಆರಾಧನಾದಲ್ಲಿ ಬಾಕಿ ಉಳಿದಿದ್ದ ಗುನ್ ಗುನಾ ರಹೇ ಹೈಂ ಭಂವರೆ ಹಾಡು ಆಶಾ ಭೋಸ್ಲೆಯೊಡನೆ ಹಾಡಿದರಲ್ಲವೇ.  ಒಂದು ವೇಳೆ ಅವರು ಮರಳುವುದು ಇನ್ನಷ್ಟು ತಡವಾಗಿ ಅದನ್ನೂ ಕಿಶೋರ್ ಹಾಡುತ್ತಿದ್ದರೆ ಹೇಗಿರುತ್ತಿತ್ತು ಎಂಬ ಕುತೂಹಲ ಉಂಟಾಗುವುದು ಸಹಜ.  ಅದಕ್ಕೆ ಉತ್ತರ ಇಲ್ಲಿದೆ.  ಆರಾಧನಾ ಹಿಟ್ ಆದ ಮೇಲೆ  ಅದನ್ನು ಬಂಗಾಲಿಗೆ ಡಬ್ ಮಾಡಿದಾಗ  ಅದನ್ನು ಹಾಡಿದ್ದು ಕಿಶೋರ್ ಮತ್ತು ಆಶಾ.   ಅದನ್ನು ಮತ್ತು ಮೂಲ ಹಿಂದಿ ಹಾಡನ್ನು ಇಲ್ಲಿ ಕೇಳಬಹುದು.





***********
ಈ ಲೇಖನ 29-7-2017ರ ವಿಶ್ವವಾಣಿಯಲ್ಲೂ ಪ್ರಕಟವಾಗಿದ್ದು ಓದಲು ಚಿತ್ರದ ಮೇಲೆ ಕ್ಲಿಕ್ಕಿಸಿ.

http://epaper.vishwavani.news/admin/Publish/big-thumbnails/Vishwavani-ALL-29072017-13.gif

****************************************



ಈ ಲೇಖನವನ್ನು ಓದಿ ಬೆಂಗಳೂರಿನ ಮಹೇಶ್ ದೇಶ್‌ಪಾಂಡೆ ಅವರು ಧ್ವನಿರೂಪದಲ್ಲಿ ಕಳಿಸಿರುವ ಪ್ರತಿಕ್ರಿಯೆ ಇಲ್ಲಿದೆ.




13-8-2017ರ ವಿಶ್ವವಾಣಿಯಲ್ಲಿ ಪ್ರಕಟವಾದ  ಮೆಚ್ಚಿಗೆ ಪತ್ರ.
=

11 comments:

  1. Sudarshan Reddy DN - ಸೂಪರ್ ಸಾರ್..ಅಮೂಲ್ಯ ಮಾಹಿತಿ..ಚಲನಚಿತ್ರ ಚರಿತ್ರೆಯಲ್ಲಿ ನಿಮಗೆ ಇರುವ ಜ್ಞಾನ ಈ ಮೂಲಕ ಲಿಖಿತ ರೂಪದಲ್ಲಿ ನಿಲ್ಲುವಂತಾಗಲಿ.

    ReplyDelete
  2. Singer Srinath - ಮಾಹಿತಿಯುಕ್ತ ಒಳ್ಳೆಯ ಲೇಖನ. ನಿಮ್ಮಿಂದ ಮತ್ತಷ್ಟು ಚಿತ್ರಸಂಗೀತ ಕುರಿತಾದ ಇಂತಹ ಲೇಖನಗಳನ್ನು ನಿರೀಕ್ಷಿಸುತ್ತೇನೆ.

    ReplyDelete
  3. Lakshmi GN - ಅತ್ಯುತ್ತಮ ಲೇಖನ. ಧನ್ಯವಾದಗಳು ಸರ್! ಇದು ನಿಜವಾಗಿ ಮೊಹಮ್ಮದ್ ರಫಿಯವರಿಗೆ , ಚಿತ್ರಗೀತೆಗಳಬಗ್ಗೆ ಅಧಿಕೃತವಾಗಿ ಮತ್ತು ಅಧಿಕಾರವಾಣಿಯಲ್ಲಿ ಬರೆಯುವ ಯೋಗ್ಯತೆಯುಳ್ಳ ನಿಮ್ಮಂಥ ಪರಿಣತರು ಕೊಟ್ಟಂಥ ನಿಜವಾದ ಹೃತ್ಪೂರ್ವಕ ಗೌರವ. ನಿಜ. ರಫಿಯವರಂತ ಸಜ್ಜನರರು ಥಳುಕು ಬಳುಕಿನ ಮೋಸ ವಂಚನೆ ಗಳಿಂದ ತುಂಬಿದ ಚಿತ್ರರಂಗದಲ್ಲಿ ತುಂಬಾ ಅಪರೂಪವೆಂದೇ ಹೇಳಬೇಕು. ಅವರು ತಮ್ಮ ವೈಯುಕ್ತಿಕ ಹಾಗು ಚಿತ್ರಜೀವನದಲ್ಲಿ ಅತ್ಯಂತ ಸಭ್ಯರು. ಆದರೂ ಅವರಿಗೆ ಕೊನೆಕೊನೆಯಲ್ಲಿ ಸಿಕ್ಕ ಅವಗಣನೆ ಅಪಮಾನ ತುಂಬಾ ನೋವನ್ನುಂಟುಮಾಡುವ ಸಂಗತಿ. ಅವರ ಒಂದೊಂದು ಗೀತೆಯು ಚಿತ್ರರಂಗ ಮರೆಯಲಾರದ ಕೊಡುಗೆ. ನಾನಂತೂ ಅವರ ಅಭಿಮಾನಿ ಭಕ್ತಳು. ಕಿಶೋರ್ ಕುಮಾರ್ ಲಘು ಗೀತೆಗೆ ಮತ್ತು ಸಂಗೀತ ಆಧಾರಿತ ಅಲ್ಲದ ಗೀತೆಗೆ ಮಾತ್ರ ಹೆಸರುವಾಸಿ. ಆದ್ರೆ ರಫಿ ಎಲ್ಲ ರೀತಿಯ ಗೀತೆಗಳನ್ನು ಹಾಡಬಲ್ಲವರಾಗಿದ್ದರು. ಯಾವಾಗ ಕಿಶೋರ್ ಕುಮಾರ್ ಯುಗ ಶುರುವಾಯ್ತೋ ಆಗಿನಿಂದಲೇ ಅವರ ಲಘು ಶ್ಯಲಿಯ ಹಾಡುಗಳನ್ನು ಸಂಯೋಜಿಸಲು ಅಂದಿನ ಸಂಗೀತ ನಿರ್ದೇಶಕರು ಶುರು ಮಾಡಿದರೆಂದು ಸ್ವತಃ ಲತಾಜಿ ತಮ್ಮ ಒಂದು ಸಂದರ್ಶನದಲ್ಲಿ ಹೇಳಿದ್ದರೆಂದು ನೆನಪು. ಯಾವುದೇ ಹೈ ಪಿಚ್ ಹಾಡು ಹೇಳುವಾಗಲೂ ರಫಿ ಒಂದಿಷ್ಟು ಮುಖಭಾವ ಬದಲಾಯಿಸದೆ ಮುಖ ಕಿವುಚದೇ ಆಕಾಶ ನೋಡದೆ ಹಾಡುತ್ತಿದ್ದರು . ಅವರ ಕೆಲವು ಲೈವ್ ಕಾರ್ಯಕ್ರಮಗಳನ್ನು ಟಿ ವಿ ಯಲ್ಲಿ ನೋಡಿದ್ದೇವೆ. ಕೆಲವೊಂದು ಗೀತೆಗೆ ಕಿಶೋರ್ ಕುಮಾರ್ ನ್ಯಾಯ ಒದಗಿಸುತ್ತಿದ್ದರು. ಅವರ ವಿಚಿತ್ರ ವಿಕ್ಷಿಪ್ತ ನಡವಳಿಕೆಗೆ ವಿಚಿತ್ರಮೂಡ್ ಗೆ ಸಂಗೀತ ನಿರ್ದೇಶಕರೆಲ್ಲರೂ ಬೇಸತ್ತು ಹೋಗಿದ್ದರು ಎಂದು ಪತ್ರಿಕೆಯಲ್ಲಿ ಓದಿದ್ದೆ. ಬೆಂಗಳೂರಲ್ಲಿ ಸ್ಟೇಡಿಯಂನಲ್ಲಿ ನಡೆದ ಲೈವೇಶೋಗೆ ಕಿಶೋರ್ ಕುಮಾರ್ ಪಾನಮತ್ತರಾಗಿ ಬಂದಿದ್ದು ಅಲ್ಲದೆ ತಮ್ಮ ವಿಚಿತ್ರ ಹಾವಭಾವಗಳಿಂದ ಪ್ರೇಕ್ಷಕರೆಲ್ಲರಿಗೂ ಹಾಡಿಗಿಂತ ಹೆಚ್ಚು ಮನರಂಜಿಸಿದ್ದರು. ಕೊನೆಕೊನೆಯಲ್ಲಂತೂ ಎಳೆಯ ಮಕ್ಕಳ ಹಾಗೆ ಸ್ಟೇಜ್ ಮೇಲೆ ಮಲಗಿ ಕೈ ಕಾಲು ಬಡಿಯುತ್ತ ಹಾಡಿದ್ದನ್ನು ನೋಡಿ ನಮಗೆಲ್ಲ ಹೀಗೂ ಉಂಟೆ ಎಂದು ನಕ್ಕು ನಕ್ಕು ಸಾಕಾಯಿತು. ಏನೇ ಆಗ್ಲಿ ನೀವು ಹೇಳಿದ ಹಾಗೆ ರಫಿ ಗೀತೆಗಳು ಹಿಂದಿ ಚಿತ್ರರಂಗದ ಸ್ವರ್ಣ ಯುಗ. ಅವರೆಂದೆಂದು ಅಮರರು ನಮ್ಮೆಲ್ಲರ ಹೃದಯದಲ್ಲಿ. ಧನ್ಯವಾದಗಳು ಮತ್ತೆ ಮತ್ತೆ!

    ReplyDelete
  4. Sudarshan Reddy DN - ನನಗೆ ತಿಳಿದ ಮಾಹಿತಿಯ ಪ್ರಕಾರ ಎಸ್.ಡಿ.ಬರ್ಮನ್ ಗೂ ರಫಿಗೂ ಇದ್ದ ವಿರೋಧದ ಲಾಭ ಆರಾಧನಾದಲ್ಲಿ ಕಿಶೋರ್ ಕುಮಾರ್ ಗೆ ಸಿಕ್ಕಿತು ಎಂಬುದು...

    ಇತಿಹಾಸ ಕೆದಕಿದರೆ ಇಂತಹ ಸಾವಿರ ಕಥೆಗಳಿವೆ..

    ಇತ್ತೀಚಿಗೆ ಗೊತ್ತಾದ ಒಂದು ಮಾಹಿತಿಯಂತೆ ಪಿ.ಸುಶೀಲಾ ಆಗ್ಗಿನ್ನೂ ಅಪ್ರೆಂಟಿಸ್ ಆಗಿದ್ದ ಇಳಯರಾಜಾಗೆ ಮಾಡಿದ ಅವಮಾನ ದಿಂದ ಆತ ನಂತರದ ದಿನಗಳಲ್ಲಿ ಜಾನಕಿಯವರಿಗೆ ಹೆಚ್ಚೆಚ್ಚು ಅವಕಾಶಗಳನ್ನು ಕೊಟ್ಟನಂತೆ..(ಆತನ ಮೊದಲಹಾಡು 'ಅಣ್ಣಕ್ಕಿಳಿಯೆ‌'..ಜಾನಕಿಯವರು ಹಾಡಿದ್ದಾರೆ!)

    ReplyDelete
    Replies
    1. ಇಲ್ಲ. ಎಸ್.ಡಿ.ಬರ್ಮನ್ ಗೂ ರಫಿಗೂ ಯಾವ ವಿರೋಧವೂ ಇರಲಿಲ್ಲ. ಆರಾಧನಾಗಿಂತ ಸ್ವಲ್ಪವೇ ಹಿಂದೆ ಬರ್ಮನ್ ದಾದಾ ಅವರ ತಲಾಷ್ ಮತ್ತು ಇಶ್ಕ್ ಪರ್ ಜೋರ್ ನಹೀಂಯಲ್ಲಿ ರಫಿ ಹಾಡುಗಳೇ ಇದ್ದದ್ದು. ಮೇಲಾಗಿ ವೈಯುಕ್ತಿಕ ಸಂಬಂಧಗಳಿಗಿಂತ ಹೆಚ್ಚಾಗಿ ಆಗಿನವರು ಯಾವುದೇ ನಖ್ರಾ ಮಾಡದೆ ಕಮ್ಮಿ ಸಮಯದಲ್ಲಿ ಅತ್ಯುತ್ತಮ output ಕೊಡುವವರನ್ನು ಇಷ್ಟ ಪಡುತ್ತಿದ್ದರು. ಮುಕೇಶ್ ಅಂತಹ ಉತ್ತಮ ಗಾಯಕನಾದರೂ rehearsalಗೆ ಅತಿ ಹೆಚ್ಚು ಸಮಯ ತೆಗೆದುಕೊಳ್ಳುತ್ತಿದ್ದುದರಿಂದ ಅವರನ್ನು ಬೇರೆ ಉಪಾಯ ಇಲ್ಲದಿದ್ದರೆ ಮಾತ್ರ ಆಯ್ದುಕೊಳ್ಳುತ್ತಿದ್ದರು. ಅಲ್ಲಿವರೆಗೆ ಕಿಶೋರ್ ಅಂತೂ ಮನೆಯಲ್ಲಿದ್ದು ಇಲ್ಲ ಎಂದು ಹೇಳಿಸಿ ಬಂದವರನ್ನು ಹಿಂದೆ ಕಳಿಸುತ್ತಿದ್ದ ನಖ್ರಾ specialist ಆಗಿದ್ದವರು. ಆರಾಧನಾ ನಂತರ ಅವರು ಪಕ್ಕಾ professional ಆಗಿ ಪರಿವರ್ತನೆ ಹೊಂದಿದುದರಿಂದ ಹೆಚ್ಚು ಹೆಚ್ಚು ಅವಕಾಶಗಳು ಅವರನ್ನು ಅರಸಿ ಬರತೊಡಗಿದವು. ಆ ಮೇಲೆ ಅವರು ಫೋನಿನಲ್ಲಿ ಹಾಡಿನ ಟ್ಯೂನ್ ಹೇಳಿದರೂ ತಕ್ಷಣ ರೆಕಾರ್ಡಿಂಗಿಗೆ ಸಿದ್ಧವಾಗುತ್ತಿದ್ದರಂತೆ. ಸಂಗೀತ ನಿರ್ದೇಶಕರಿಗೆ ಬೇರಿನ್ನೇನು ಬೇಕು?

      Delete
  5. Sudarshana Gururajarao - ಒಂದುರೀತಿ ಪಿ.ಬಿ.ಎಸ್ ತೆರೆಮರೆಗೆ ಸರಿದ ಕಥೆಯಂತಿದೆ

    ReplyDelete
    Replies
    1. ಹೌದು. ನಾನೂ ಹಾಗೇ ಯೋಚಿಸ್ತಿದ್ದೆ. ಆದರೆ ಗಾಜು ಎಷ್ಟೋ ಸಲ ಕೆಳಗೆ ಬಿದ್ದಿದ್ದರೂ ಒಡೆದಿರುವುದಿಲ್ಲ. ಕೊನೆಗೊಮ್ಮೆ ಸಣ್ಣ ಪೆಟ್ಟಿಗೂ ನುಚ್ಚುನೂರಾಗುತ್ತದೆ. ರಫಿ ಅಥವಾ ಪಿ.ಬಿ.ಎಸ್ ಮೊದಲು ರಜೆಯಲ್ಲಿ ಹೋಗಿರಲಿಲ್ಲವೇ? ಮಹಿಷಾಸುರ ಮರ್ದಿನಿಯಲ್ಲಿ ರಾಜ್ ಕುಮಾರ್‌ ಮೊದಲೇ ಹಾಡಿರಲಿಲ್ಲವೇ. ಅವರಿಗೆ ಜೇಸುದಾಸ್, ಘಂಟಸಾಲ ಮೊದಲು ಕಂಠದಾನ ಮಾಡಿರಲಿಲ್ಲವೇ? ಕಾಲ ಬಂದಾಗಲಷ್ಟೇ ಎಲ್ಲವೂ ಆಗುವುದು!

      Delete
  6. Jayadeva Prasad Moleyar - Very good article. Just a point.. according to Amit Kumar RDB was very much involved in the making of roop tera mastana. He mentions this in his stage shows quite often. There is some confusion here

    ReplyDelete
    Replies
    1. I have heard Manohari Singh, who played saxophone in the song, telling that it was 100% SDB song. Kersi Lord, who played accordion in the song also has confirmed this. But being Dada's assistant RD also might have helped.

      Delete
  7. The love for Rafi Sahab is very much visible in the article.Very well written.
    -Usha Aaland, Sholapur

    ReplyDelete
  8. ನಿಮ್ಮ ಕಿಶೋರ್ ಗೀತೆಗಳ ಗುಚ್ಛದ ಬರಹವನ್ನು ಓದಿದ ಮೇಲೆ ಮತ್ತೊಮ್ಮೆ ನನ್ನ ಮನಸು ರಾಜೇಶ್ ಖನ್ನಾ ಮತ್ತು ಆರಾಧನ ಚಿತ್ರದ ಕಡೆಗೆ ತಿರುಗಿತ್ತು. ಅಷ್ಟರಲ್ಲಿ ಮತ್ತೆ ಈ ಬರಹ ನೋಡಿದಾಗ ಸಂತೋಷವಾಯಿತು. ದೊಡ್ಡ ಬಜೆಟ್ ಚಿತ್ರ ನಿರ್ಮಿಸುವ ತಯ್ಯಾರಿ ನಡೆಸುತಿದ್ದಾಗ ನಡುವೆ ಗ್ಯಾಪ್ ಬಂತೆಂದು ಹೊಸ ನಟನ ಜೊತೆ ಒಂದು stopgap ಚಿತ್ರ ಮಾಡಲು ಹೊರಟು ಅದೊಂದು ಸಾರ್ವಕಾಲಿಕ ಶ್ರೇಷ್ಠ ಚಿತ್ರಗಳಲ್ಲಿ ಒಂದಾದ ಬಗೆ ಮನಸ್ಸಿಗೆ ಮುದವನ್ನು ಉಂಟುಮಾಡುತ್ತದೆ. ಕಿಶೋರ್ ಮತ್ತು ರಫಿ ಇಬ್ಬರೂ ನನ್ನ ಮೆಚ್ಚಿನ ಗಾಯಕರು. ಆದರೆ ಆರಾಧನಾದಲ್ಲಿ ಕಿಶೋರ್ ಮತ್ತು ರಾಜೇಶ್ ಖನ್ನಾ ಜೋಡಿ ಒಂದು ಮ್ಯಾಜಿಕ್ ಉಂಟು ಮಾಡಿದ್ದರಲ್ಲಿ ಎರಡು ಮಾತಿಲ್ಲ.ರಾಜೇಶ್ ತನ್ನ ಚಿತ್ರದ ಸಂಗೀತದ ಬಗ್ಗೆ ಎಷ್ಟು ಕಾಳಜಿ ವಹಿಸುತಿದ್ದರೆಂದು ಕೇಳಿದ್ದೇನೆ. ಪ್ರತಿ ಸಿಟ್ಟಿಂಗ್ ನಲ್ಲೂ ಹಾಜರಿದ್ದು ನಂತರ ಮನೆಗೂ ಟೇಪ್ ತೆಗೆದುಕೊಂಡು ಹೋಗುತಿದ್ದರಂತೆ. ಹಾಡಿನ ಅಭಿನಯದಲ್ಲಿ ಅವರ ಹಾವಭಾವಗಳೂ ನಮ್ಮನ್ನು ಅವರಿಸುತ್ತಿದ್ದವು. ಇತರ ಕೆಲವು ನಟರಂತೆ ನಾಮ್ಕಾವಾಸ್ತೆಗೆ ಹೆಜ್ಜೆ ಹಾಕುತ್ತಿರಲಿಲ್ಲ. ನೃತ್ಯದಲ್ಲಿ ಅಂತಹ ಪರಿಣಿತಿ ಇಲ್ಲದಿದ್ದರೂ ಕೇವಲ ಮುಖಭಾವ ಅದನ್ನು ಮರೆಮಾಡುತಿತ್ತು. ಸಾಧಾರಣವಾಗಿ ಈಗಲೂ ಸಹ ಹಳೆಯ ಮಧುರ ಗೀತೆಗಳನ್ನು ಯುಟ್ಯೂಬ್ ನಲ್ಲಿ ನೋಡುವಾಗ ಹಾಡಿನ ಚಿತ್ರೀಕರಣವನ್ನು ನೋಡದಿದ್ದರೂ ಏನೂ ನಷ್ಟ ವಾಗುವುದಿಲ್ಲ. ಆದರೆ ರಾಜೇಶ್ ಖನ್ನಾ ಗೀತೆಗಳು ಇದಕ್ಕೆ ಅಪವಾದ.

    ReplyDelete

Your valuable comments/suggestions are welcome