Monday, 19 October 2026

ಮಂಗಳೂರು ಅಂದು ಮತ್ತು ಇಂದು.




ಕಾಲಯಂತ್ರದಲ್ಲಿ ಹಿಂದಕ್ಕೆ ಪಯಣಿಸಿದಾಗ ಸಿಗುವ ಅನುಭವ ಯಾವಾಗಲೂ ಬಲು ಆಪ್ಯಾಯಮಾನ. ಅಂತರ್ಜಾಲವನ್ನು ಜಾಲಾಡುತ್ತಿರುವಾಗ ದೊರಕಿದ ಈ ಚಿತ್ರದಲ್ಲಿ 1890ರ ಸುಮಾರಿನ, ಅಂದರೆ ಒಂದೂಕಾಲು ಶತಮಾನಕ್ಕೂ ಹಿಂದಿನ ಮಂಗಳಾದೇವಿ ದೇವಸ್ಥಾನದ ತೇರನ್ನು ನೋಡಬಹುದು. ಸ್ಪಷ್ಟತೆಗಾಗಿ ಚಿತ್ರವನ್ನು ಮರು ಪರಿಷ್ಕರಿಸಿ  ವರ್ಣಮಯಗೊಳಿಸಲಾಗಿದೆ.  ಹೋಲಿಕೆಗಾಗಿ ಇತ್ತೀಚಿನ ಚಿತ್ರವೂ ಪಕ್ಕದಲ್ಲಿ ಇದೆ.    ಎರಡೂ ಚಿತ್ರಗಳನ್ನು ಗಮನಿಸಿದರೆ ತೇರಿನ ರಚನೆ ಅಂದೂ ಇಂದೂ ಬಹುತೇಕ ಒಂದೇ ರೀತಿ ಇರುವುದು ತಿಳಿಯುತ್ತದೆ. ಹಳೆಯ ಚಿತ್ರದಲ್ಲಿ ಉತ್ಸವಕ್ಕೆ ಸಿದ್ಧವಾದ ತೇರಿನ ಎದುರು ನಿಂತವರು ದೇವಸ್ಥಾನದ ಅರ್ಚಕ ಸಿಬ್ಬಂದಿಗಳು ಮತ್ತು ಫೋಟೊ ತೆಗೆಯುವುದನ್ನು ನೋಡಲು ಬಂದ  ಸ್ಥಳೀಯ ಜನರಿರಬಹುದು. ಆಗಿನ ನಾಗರಿಕರ ಉಡುಗೆ ತೊಡುಗೆ ಬಗೆಗಿನ ಮಾಹಿತಿಯೂ ನಮಗೆ ಈ ಚಿತ್ರದಲ್ಲಿ ದೊರೆಯುತ್ತದೆ  ಹಿಂಭಾಗದಲ್ಲಿ  ಅಶ್ವತ್ಥ ವೃಕ್ಷ ಮತ್ತು ನಾಡ ಹಂಚು ಹೊದಿಸಿದ ದೇವಸ್ಥಾನ ಕಾಣಿಸುತ್ತಿದೆ.

ಅಂತರ್ಜಾಲವನ್ನು ಮತ್ತಷ್ಟು ಜಾಲಾಡಿದಾಗ ಅದೇ ಕಾಲಘಟ್ಟದ ಮಂಗಳೂರಿನ Topographic Map ಕೂಡ ದೊರಕಿತು. ಅದರಲ್ಲಿರುವ ಮಂಗಳೂರಿನ ಕೆಲವು ಭಾಗಗಳನ್ನು ಈಗಿನ ಮಂಗಳೂರಿಗೆ ಹೋಲಿಸಿದಾಗ ಕೆಲವು ಕುತೂಹಲಕರ ಮಾಹಿತಿಗಳು ದೊರಕಿದವು. 

ಮಂಗಳಾದೇವಿ.

ಜಾತ್ರೆಯ ಸಮಯದಲ್ಲಿ ತೇರನ್ನೇರಿ ಆಗಮಿಸುವ ಮಂಗಳಾದೇವಿಯು ವಿರಾಜಮಾನಳಾಗಿ ಪೂಜೆ ಸ್ವೀಕರಿಸುವ ಶಮೀ ಕಟ್ಟೆಯನ್ನು ಮಂಗಳಾದೇವಿ ಕಟ್ಟ  ಎಂದು ಹೆಸರಿಸಲಾಗಿದೆ. ಆದರೆ ರೈಲ್ವೆ ಬಂದು ಬ್ರಿಜ್ ಆಗುವ ಮೊದಲು ದೇವಿ ಪೂಜೆ ಕೈಗೊಳ್ಳುತ್ತಿದ್ದದ್ದು ಎಂದು ನಂಬಲಾಗಿದ್ದ ಮಾರ್ನಮಿಕಟ್ಟ ಪ್ರದೇಶವನ್ನು ಈ ಮ್ಯಾಪಿನಲ್ಲಿ  ಗುರುತಿಸಲಾಗಿಲ್ಲ. ಮಂಕಿಸ್ಟೇಂಡ್, ಮುಳಿಹಿತ್ಲು ಕೂಡ ಇಲ್ಲ. ಈ ಪರಿಸರವನ್ನು ಈಗ ಗುರುತಿಸಲಾಗುವ ಬೋಳಾರ  ಎಂಬ ಹೆಸರಿನ ಉಲ್ಲೇಖವೂ ಎಲ್ಲೂ ಇಲ್ಲ.  ದಕ್ಷಿಣ ದಿಕ್ಕಿನಲ್ಲಿ ಈಗ ಜೆಪ್ಪು ಮಾರ್ಕೆಟ್ ಇರುವ ಸ್ಥಾನದಲ್ಲಿ Gun Powder Magazine ಅಂದರೆ ಮದ್ದು ಗುಂಡುಗಳ ದಾಸ್ತಾನಿನ ಕೊಠಡಿ ಇರುವುದು ಕಾಣಿಸುತ್ತದೆ.  ಎಮ್ಮೆಕೆರೆ ಆಗ ಗುಜ್ಜರಕೆರೆಯಷ್ಟೇ ವಿಸ್ತೀರ್ಣ ಹೊಂದಿದ್ದುದನ್ನು ಗಮನಿಸಬಹುದು.

ಮೋರ್ಗನ್ಸ್ ಗೇಟ್.



ಈಗ ಮೋರ್ಗನ್ಸ್ ಗೇಟ್ ಎಂದು ಕರೆಯಲ್ಪಡುವ ಪ್ರದೇಶದಲ್ಲಿ Morgan and Sons ಸಂಸ್ಥೆಯ ಪ್ರಾಬಲ್ಯ ಇದ್ದುದನ್ನು ಕಾಣಬಹುದು. ಅವರ Coffee Works ಮತ್ತು ಹಂಚಿನ ಕಾರ್ಖಾನೆ ಅಲ್ಲದೆ Basel Missionನವರ ಎರಡು ಹಂಚಿನ ಕಾರ್ಖಾನೆಗಳು ಇದ್ದದ್ದು ಕಾಣುತ್ತದೆ. ನೇತ್ರಾವತಿ ನದಿ ಅಳಿವೆಯ ತೀರದ ಗುಂಟ ಲೋಬೋ ಅಂಡ್ ಸನ್ಸ್, ಕೋಯಿಲೋ ಬ್ರದರ್ಸ್, ಅಲ್ಬುಕರ್ಕ್ ಅಂಡ್ ಸನ್ಸ್ ಅವರ ಹಂಚಿನ ಕಾರ್ಖಾನೆಗಳೂ ಇದ್ದವು. ಆಗಿನ್ನೂ ನೇತ್ರಾವತಿ ನದಿಗೆ ಸೇತುವೆ ಇಲ್ಲದಿದ್ದುದರಿಂದ ದೋಣಿ ಕಡವಿಗೆ ಸೇರುವ ಜಪ್ಪು ಫೆರಿ ರಸ್ತೆ ಇದ್ದುದು ಕಾಣಿಸುತ್ತದೆ.

ಪಾಂಡೇಶ್ವರ.

ಈಗ ಪಾಂಡೇಶ್ವರ ಪೋಲೀಸ್ ಸ್ಟ್ಟೇಶನ್ ಮತ್ತು ಶಾಲೆ ಇರುವಲ್ಲಿ  ಉಪ್ಪು ಮತ್ತು ಅಬಕಾರಿ ಆಫೀಸ್ ಇತ್ತು, ಓಲ್ಡ್ ಕೆಂಟ್ ರೋಡ್  Burrial Ground Road ಎಂದು ಕರೆಯಲ್ಪಡುತ್ತಿತ್ತು. ಈಗ ಫೈರ್ ಸ್ಟೇಶನ್  ಇರುವಲ್ಲಿಂದ ಸ್ವಲ್ಪ ಮುಂದೆ  Burrial Ground ಇದ್ದುದನ್ನು ತೋರಿಸಲಾಗಿದೆ. ಈಗ ಮಾಲ್ ಇರುವ ಸ್ಥಳದಲ್ಲಿ Arbuthnot & Co Coffee Store ಇತ್ತು. ಮಾಲ್ ಬರುವ ವರೆಗೂ ಅದು ಬೇರೆ ಬೇರೆ ಹೆಸರುಗಳಲ್ಲಿ ಮುಂದುವರೆದಿತ್ತು. ಈಗ ಟೆಲಿಫೋನ್ ಎಕ್ಸ್‌ಚೇಂಜ್ ಮತ್ತು ಪೋಸ್ಟ್ ಆಫೀಸ್ ಇರುವ ಜಾಗ ಆಗ ಖಾಲಿ ಇತ್ತು.

ಸ್ಟೇಟ್ ಬ್ಯಾಂಕ್ .


ಈಗಿನ  ಸ್ಟೇಟ್ ಬ್ಯಾಂಕ್ ಆಗ ಮೆಡ್ರಾಸ್ ಬ್ಯಾಂಕ್ ಆಗಿತ್ತು.  St Ann's ಸಂಸ್ಥೆಗಳ ಎದುರಿನ ರಸ್ತೆ ಮತ್ತು ಈಗಿನ RTO ಸರ್ಕಲಿನಿಂದ ಟೌನ್ ಹಾಲಿಗೆ  ಹೋಗುವ ರಸ್ತೆಗಳಿಗೆ Contonment Road ಎಂದು ಹೆಸರಿತ್ತು.  ಈಗ ಬಸ್ ಸ್ಟೇಂಡ್, ಫುಟ್ ಬಾಲ್ ಮೈದಾನ ಮತ್ತು ಟೌನ್ ಹಾಲ್ ಇರುವ ಪ್ರದೇಶ ಪೂರ್ತಿ ಖಾಲಿ ಇತ್ತು. ಮೆಡ್ರಾಸ್ ಬ್ಯಾಂಕ್ ಪಕ್ಕದಲ್ಲಿ ಪೋಸ್ಟ್ ಆಫೀಸ್ ಇತ್ತು.  ಅವುಗಳೆದುರಿನಿಂದ ಬಂದರ್ ಕಡೆಗೆ ಹೊಗುವ ರಸ್ತೆಗೆ Flag Staff Road ಎಂದು ಹೆಸರಿತ್ತು. ಈಗಿನ ನೆಲ್ಲಿಕಾಯ್ ರೋಡ್ ಆಗ ಚರ್ಚ್ ರೋಡ್ ಆಗಿತ್ತು.  ಅದರ ಬಲ ಬದಿಯಲ್ಲಿ Basel Mission ಬುಕ್ ಡಿಪೊ ಇತ್ತು.

ಮಾರ್ಕೆಟ್.


ಈಗಿನ ಸೆಂಟ್ರಲ್ ಮಾರ್ಕೆಟ್ ಆಗ Webster Market ಆಗಿತ್ತು. ಲೇಡಿ ಗೋಷನ್ ಆಸ್ಪತ್ರೆ ಇರುವಲ್ಲಿ  Female Dispensary ಇತ್ತು. ಅದರ ಪಕ್ಕದಲ್ಲಿ ಟೆಲಿಗ್ರಾಫ್ ಆಫೀಸ್ ಇತ್ತು.  ಈಗಿನ Rao &Rao ಸರ್ಕಲಿನಿಂದ ಮುಂದಿನ ಮೈದಾನ್ ರೋಡ್ ಆಗ Court Road  ಆಗಿತ್ತು. ಭವಂತಿ ಸ್ಟ್ರೀಟಿಗೆ ಆಗ ಭವಂತಿ ಕೇರಿ ಸ್ಟ್ರೀಟ್ ಎಂಬ ಹೆಸರಿತ್ತು.

ಹಂಪನಕಟ್ಟೆ.


ಶರವು ದೇವಸ್ಥಾನ Ganapati Temple ಎಂದು ಉಲ್ಲೇಖಿಸಲ್ಪಟ್ಟಿದೆ. ಈಗಿನ Gnapati Highschool Road ಆಗ Ganapati Temple Street ಆಗಿತ್ತು. ಆಗಿನ್ನೂ ಗಣಪತಿ ಹೈಸ್ಕೂಲ್ ಇರಲಿಲ್ಲ.  ಮಹಾಮಾಯೀ ದೇವಸ್ಥಾನದ ಬಳಿ  ಗಣಪತಿ ಮಿಡಲ್ ಸ್ಕೂಲ್ ಮಾತ್ರ ಇತ್ತು.  ಹಂಪನಕಟ್ಟೆ ಸರ್ಕಲಿನಿಂದ ಮಾರ್ಕೆಟ್ ಕಡೆ ಸಾಗುವ ಕಿರು ರಸ್ತೆಗೆ Hampanakatta Road  ಎಂಬ ಹೆಸರಿತ್ತು. ಈಗಿನ ಕಾರ್ನಾಡ್ ಸದಾಶಿವ ರಾವ್ ರೋಡ್ ಆಗ  ರಾವ್ ಅಂಡ್ ರಾವ್ ಸರ್ಕಲಿನಿಂದ ಆರಂಭವಾಗುವ ಕೋರ್ಟ್ ರೋಡ್ ಆಗಿ ಮುಂದುವರಿಯುತ್ತಿತ್ತು. ಕೋರ್ಟ್ ಗುಡ್ಡದ ಬಳಿ ಎಡಕ್ಕೆ ತಿರುಗಿದ ಮೇಲೆ ಇದು ಕೊಡಿಯಾಲ್ ಬೈಲ್ ರೋಡ್ ಆಗುತ್ತಿತ್ತು. ಕೆನರಾ ಹೈಸ್ಕೂಲ್ ಹಿಂಭಾಗದಿಂದ ಹಾದು ಬರುತ್ತಿದ್ದ ಕೋಯಿಲೊ ರೋಡ್  ಕೊಡಿಯಾಲ್ ಬೈಲ್ ದಾಟಿ ಎಡಕ್ಕೆ ತಿರುಗಿ ಉರ್ವದತ್ತ  ಸಾಗುತ್ತಿತ್ತು.  ಈಗ ಅದು MG Road ಆಗಿದೆ. 

ಅತ್ತಾವರ.


ಪೋಲೀಸ್ ಲೈನ್ ಮತ್ತು ತಾಲೂಕು ಆಫೀಸುಗಳ ಮಧ್ಯದ ಈಗಿನ ರೈಲ್ವೇ ಸ್ಟೇಷನ್ ರೋಡ್ ಆಗ ನಂದಿಗುಡ್ಡ ರೋಡ್ ಅನಿಸಿಕೊಳ್ಳುತ್ತಿತ್ತು.  ಆಗಿನ್ನೂ ಮಂಗಳೂರಿಗೆ ರೈಲು ಸಂಪರ್ಕ ಇರದಿದ್ದುದರಿಂದ ಆ ರೋಡು ಈಗ ರೈಲ್ವೇ ಸ್ಟೇಷನ್ ಇರುವ ಜಾಗದ ಮೂಲಕ ಮುಂದುವರೆದು ಈಗಿನ   ಶಂಕರ್ ವಿಟ್ಠಲ್ ಗ್ಯಾರೇಜಿನ ಎದುರು ಫಳ್ನೀರ್ ಕಡೆಯಿಂದ ಬರುವ Sturock ರೋಡನ್ನು  ಸೇರಿ ಚಕ್ರೆಪಾಣಿ ದೇವಸ್ಥಾನದ ಎದುರಿನಿಂದ ನಂದಿಗುಡ್ಡೆಯತ್ತ ಸಾಗುತ್ತಿತ್ತು.  ಚಕ್ರಪಾಣಿ ದೇವಸ್ಥಾನವನ್ನು ಕೃಷ್ಣದೇವರ ಟೆಂಪಲ್ ಎಂದು ಗುರುತಿಸಿರುವುದನ್ನು ಕಾಣಬಹುದು.

ಉತ್ತರದ ಉರ್ವದಿಂದ ದಕ್ಷಿಣದ ಮಂಗಳಾದೇವಿ ಪ್ರದೇಶದ ತನಕ ಇರುವ ಎಂಟು ವಾರ್ಡುಗಳು ಮಾತ್ರ ಈ mapನಲ್ಲಿ ಇದ್ದು ಬಹುಶಃ ಇಷ್ಟನ್ನೇ ಮಂಗಳೂರು ಟೌನ್ ಎಂದು ಆಗ ಪರಿಗಣಿಸಲಾಗುತ್ತಿತ್ತೋ ಏನೋ.  ಕಂಕನಾಡಿ, ಕದ್ರಿ ಮುಂತಾದ ಪ್ರದೇಶಗಳ ವಿವರಗಳು ಇದರಲ್ಲಿ ಇಲ್ಲ. 

ಸಾಂಕೇತಿಕವಾಗಿ ಕೆಲವು ಪ್ರದೇಶಗಳ  ವಿವರಗಳನ್ನು ಮಾತ್ರ ಇಲ್ಲಿ ಉಲ್ಲೇಖಿಸಲಾಗಿದೆ..

- ಚಿದಂಬರ ಕಾಕತ್ಕರ್.



1 comment:

Anonymous said...

ಚಿದಂಬರ್ ಕಾಕತ್ಕರ್, ಅದ್ಬುತವಾದ ಮಾಹಿತಿ! ಅಭಿನಂದನೆಗಳು. ನನಗಂತೂ ಬಹಳ ದೊಡ್ಡ ನಿಧಿಯನ್ನು ನೀವು ಅಗೆದು ಮತ್ತು ಮೊಗೆದು ಕೊಟ್ಟ ಅನುಭವ.
ನಿಮ್ಮ ಮಾಹಿತಿಗೆ ನನ್ನ ವತಿಯಿಂದ ಇನ್ನೊಂದು ಡಚ್ ಕ್ಯಾಪ್ಟನ್ ರಚಿನಿದ ನಕ್ಷೆ ಇದೆ.
ಕಳುಹಿಸಿ ಕೊಡುತ್ತೇನೆ.
ಹುಡುಕಿ ಕೊಡಬೇಕು.