Friday 30 August 2024

ರಾಶಿಚಕ್ರ, ಲಗ್ನ ಮತ್ತು ಸಂಕ್ರಾಂತಿ

 

ಕಲಿಕೆಗೆ ಕೊನೆ ಇಲ್ಲ. ಸೂರ್ಯ ತಿಂಗಳಿಗೊಂದು ರಾಶಿಯಲ್ಲಿ ಇರುತ್ತಾನೆ ಎಂದು ನನಗೆ ಗೊತ್ತಿತ್ತು. ಆದರೆ ಉದಯ ಕಾಲದಲ್ಲಿ ಇದ್ದ ರಾಶಿ ಆತ ಮೇಲೆ ಬಂದಾಗ ಬದಲಾಗುವುದಿಲ್ಲವೇ, ಉತ್ತರಾಯಣ ದಕ್ಷಿಣಾಯನಗಳಲ್ಲಿ ಆತ ಅತ್ತಿತ್ತ ಚಲಿಸಿದಾಗ ಏನಾಗುತ್ತದೆ ಎಂಬ ಪ್ರಶ್ನೆಗಳಿಗೆಲ್ಲ ನನ್ನ ತಲೆಗೆ ಉತ್ತರ ಹೊಳೆಯುತ್ತಿರಲಿಲ್ಲ. ಈ ಎಲ್ಲ ಸಂದರ್ಭಗಳಲ್ಲಿ ರಾಶಿಗಳೂ ಆತನೊಂದಿಗೇ ಚಲಿಸುತ್ತವೆ ಎಂದು ಯಾರೂ ನನಗೆ ಹೇಳಿ ಕೊಟ್ಟಿರಲಿಲ್ಲ. ಅನೇಕರಿಗೆ ಇದರ ಅರಿವಿದ್ದರೂ ಸರಳವಾಗಿ ತಿಳಿಹೇಳಲು ಗೊತ್ತಿರುವುದಿಲ್ಲ. ಶಾಲಾ ಕಾಲೇಜುಗಳಲ್ಲಿಯೂ ಈ ಬಗ್ಗೆ ಏನೂ ಕಲಿಸಿರಲಿಲ್ಲ. ಅಂತರ್ಜಾಲದಲ್ಲೂ ಈ ಬಗ್ಗೆ ಸ್ಪಷ್ಟ ವಿವರಗಳಿಲ್ಲ. ಇತ್ತೀಚೆಗೆ ಪಂಚಾಂಗ, ಕುಂಡಲಿಗಳಲ್ಲಿ ಉಲ್ಲೇಖಿಸಲ್ಪಡುವ 'ಲಗ್ನ'ದ ಬಗ್ಗೆ ಅರಿಯುವ ಪ್ರಯತ್ನ ಮಾಡಿದಾಗಲಷ್ಟೇ ಒಂದಷ್ಟು ವಿಚಾರಗಳು ತಿಳಿದವು.
ನಕ್ಷತ್ರಪುಂಜಗಳನ್ನೊಂಡ ಸುಮಾರು 8 ಡಿಗ್ರಿ ಅಗಲದ ರಾಶಿಚಕ್ರವು ಸೂರ್ಯನಂತೆ ಆಕಾಶದಲ್ಲಿ ಪೂರ್ವದಿಂದ ಪಶ್ಚಿಮಕ್ಕೆ ಚಲಿಸಿದಂತೆ ಕಾಣುತ್ತದೆ. ಭೂಮಿಯು ದಿನಕ್ಕೊಮ್ಮೆ ತನ್ನ ಅಕ್ಷದಲ್ಲಿ 360 ಡಿಗ್ರಿ ತಿರುಗುವುದು ಇದಕ್ಕೆ ಕಾರಣ.
‘ಲಗ್ನ’ ಅಂದರೆ ನಿರ್ದಿಷ್ಟ ರಾಶಿಯೊಂದು ಪೂರ್ವ ದಿಗಂತದಲ್ಲಿ ಕಾಣಿಸಿಕೊಳ್ಳುವ ಸುಮಾರು ಎರಡು ಗಂಟೆಯ ಸಮಯ. ಸೂರ್ಯನ ಸುತ್ತ 365.25 ದಿನಗಳಲ್ಲಿ 360 ಡಿಗ್ರಿ ಪ್ರದಕ್ಷಿಣೆ ಮುಗಿಸುವ ದಾರಿಯಲ್ಲಿ ಭೂಮಿಯು ಒಂದು ದಿನದಲ್ಲಿ ಸುಮಾರು 0.985 ಡಿಗ್ರಿಯಷ್ಟು ಮುಂದೆ ಸಾಗುವುದು ನಿರ್ದಿಷ್ಟ ರಾಶಿಯ ಲಗ್ನದ ಆರಂಭ ಕಾಲ ದಿನಕ್ಕೆ ಸುಮಾರು 4 ನಿಮಿಷದಷ್ಟು ಹಿಂದೆ ಸರಿಯುವುದಕ್ಕೆ ಮತ್ತು ಒಂದು ತಿಂಗಳಲ್ಲಿ ಸೂರ್ಯನ ರಾಶಿ ಬದಲಾಗುವುದಕ್ಕೆ ಕಾರಣ. ಭೂಮಿ 0.985 ಡಿಗ್ರಿಯಷ್ಟು ಮುಂದೆ ಸಾಗುವುದು ಎಂದರೆ ನಕ್ಷತ್ರಗಳನ್ನು ಒಳಗೊಂಡ ರಾಶಿಚಕ್ರ ಸಾಪೇಕ್ಷವಾಗಿ ಅಷ್ಟೇ ಹಿಂದೆ ಸರಿಯುವುದು ಎಂದು ತಿಳಿಯಬೇಕು.

ಮೇಲ್ಗಡೆ ಇರುವ ಚಿತ್ರ ಈ ವಿದ್ಯಮಾನವನ್ನು ಮನದಲ್ಲಿ ಚಿತ್ರಿಸಿಕೊಳ್ಳಲು ಸಹಾಯ ಮಾಡಬಹುದು.

ಉದಯಕಾಲದ ಲಗ್ನ ಬದಲಾಗುವ ದಿನ ಸಾಮಾನ್ಯವಾಗಿ ಆಯಾ ರಾಶಿಯ ಹೆಸರಿನ  ಸಂಕ್ರಾಂತಿ ಅನಿಸುತ್ತದೆ. ಕುಂಡಲಿಯಲ್ಲಿ ಲಗ್ನದ ಸ್ಥಾನವನ್ನು ಓರೆ ಗೆರೆಯ ಮೂಲಕ ಅಥವಾ ಲಗ್ನ ಎಂದು ಬರೆಯುವ ಮೂಲಕ ಸೂಚಿಸಲಾಗುತ್ತದೆ.


ಮೇಲೆ ಕಾಣಿಸುವ ಎರಡು ಚಿತ್ರಗಳಲ್ಲಿ 30-8-2024ರ ಕುಂಡಲಿಯಲ್ಲಿ ಬೆಳಗ್ಗೆ 9 ಗಂಟೆಗೆ ಕನ್ಯಾ ಲಗ್ನ, 14-1-2025ರ ಕುಂಡಲಿಯಲ್ಲಿ ಬೆಳಗ್ಗೆ 7 ಗಂಟೆಗೆ ಮಕರ ಲಗ್ನ ಇರುವುದನ್ನೂ ಗಮನಿಸಬಹುದು.

ಅಗಸ್ಟ್ 2024ರ  31 ದಿನಗಳಲ್ಲಿ ಸೂರ್ಯೋದಯ ಕಾಲದ ಲಗ್ನದ ರಾಶಿ, ಲಗ್ನ ಆರಂಭವಾಗುವ ಸಮಯ ಮತ್ತು ಸೂರ್ಯೋದಯ ಸಮಯವನ್ನು ಈ ಪಟ್ಟಿಯಲ್ಲಿ ನೋಡಬಹುದು. 



ವರ್ಷದ ನಿರ್ದಿಷ್ಟ ದಿನ ನಿರ್ದಿಷ್ಟ ರಾಶಿಯ ಉದಯಕಾಲದ ಲಗ್ನ ಪ್ರತೀ ವರ್ಷ ಅದೇ ಸಮಯಕ್ಕೆ ಆರಂಭವಾಗುತ್ತದೆಯೇ ಎಂಬ ಕುತೂಹಲ ನನ್ನಲ್ಲಿ ಮೂಡಿತು. ಇದಕ್ಕೆ ಸಂಬಂಧಿಸಿ ಅಂತರ್ಜಾಲದಲ್ಲಿರುವ ಮಾಹಿತಿಯನ್ನು ಗಮನಿಸುತ್ತಾ ಹೋದಾಗ ಸ್ವಾರಸ್ಯಕರ ವಿಷಯಗಳು ಬೆಳಕಿಗೆ ಬಂದವು.  ಯಾವುದೇ ಒಂದು  ರಾಶಿಯ ಲಗ್ನ ಪ್ರತೀ ವರ್ಷ ಒಂದು ನಿಮಿಷದಷ್ಟು ತಡವಾಗಿ ಆರಂಭವಾಗುತ್ತಾ ಹೋಗಿ 4 ವರ್ಷಕ್ಕೊಮ್ಮೆ 366 ದಿನಗಳಿರುವ ಅಧಿಕ ವರ್ಷ ಬಂದಾಗ ಮತ್ತೆ ಮೂಲ ಸಮಯಕ್ಕೆ  ಮರಳುವುದು ತಿಳಿಯಿತು. 

ಮಕರ ಸಂಕ್ರಮಣ ಬರುವ ಜನವರಿ ತಿಂಗಳ ಭಾಗದ ಮಾಹಿತಿಯನ್ನು ವಿಶ್ಲೇಷಿಸಿದಾಗ ಹೆಚ್ಚಾಗಿ ಜನವರಿ 14ಕ್ಕೆ ಬರುವ ಮಕರ ಸಂಕ್ರಾಂತಿ ಕೆಲವು ವರ್ಷ ಜನವರಿ  15ಕ್ಕೆ ಏಕೆ ಬರುತ್ತದೆ ಎಂಬುದೂ ಸ್ಪಷ್ಟವಾಯಿತು.

ಜನವರಿ ತಿಂಗಳಿನ 13, 14 ಮತ್ತು 15ರಂದು  ಉದಯಕಾಲದ ಮಕರ ರಾಶಿಯ ಲಗ್ನ ಆರಂಭವಾಗುವ ಸಮಯದ ವಿವರ ಮತ್ತು ಹಸಿರು ಬಣ್ಣದಲ್ಲಿರುವ ಮಕರ ಸಂಕ್ರಾಂತಿ ದಿನಗಳನ್ನು ಇಲ್ಲಿರುವ  ಟೇಬಲ್‌ನಲ್ಲಿ ನೋಡಬಹುದು. 2025ರಿಂದ ಫೆಬ್ರವರಿಯಲ್ಲಿ 29 ದಿನಗಳಿರುವ 2028ರ ವರೆಗೆ ವರ್ಷಕ್ಕೆ ಒಂದೊಂದು ನಿಮಿಷ ತಡವಾಗಿ ಆರಂಭವಾಗುವ  ಮಕರ ಲಗ್ನ ಆ ವರ್ಷ ಫೆಬ್ರವರಿಯಲ್ಲಿ ಒಂದು ಅಧಿಕ ದಿನ ಸೇರಿದ್ದರಿಂದ 4 ನಿಮಿಷಗಳ ವ್ಯತ್ಯಾಸವನ್ನು ಸರಿಪಡಿಸಿಕೊಂಡು ಮರು ವರ್ಷ ಮತ್ತೆ ಮೂಲ ಸಮಯದಲ್ಲಿ ಆರಂಭವಾಗುತ್ತದೆ.  ಲಗ್ನ ಆರಂಭದ ಒಂದೊಂದು  ನಿಮಿಷದ   ವ್ಯತ್ಯಾಸದಿಂದ, ಸೂರ್ಯ ಮಕರ ರಾಶಿಗೆ ಪ್ರವೇಶಿಸುವ ಸಮಯವು ವರ್ಷಕ್ಕೆ ಸುಮಾರು 6 ಗಂಟೆಗಳಷ್ಟು ಮುಂದೂಡಲ್ಪಡುತ್ತಾ ನಾಲ್ಕನೆಯ 2028ರ ಅಧಿಕ  ವರ್ಷದಲ್ಲಿ ಜನವರಿ 14ರ ನಡುರಾತ್ರಿಯನ್ನು ಮೀರುತ್ತದೆ ಮತ್ತು ಆ ವರ್ಷ ಸಂಕ್ರಾಂತಿ ಆಚರಣೆ ಜನವರಿ 15ರಂದು ಇರುತ್ತದೆ. 2029ರಲ್ಲಿ ವ್ಯತ್ಯಾಸ ಸರಿಪಡಿಸಲ್ಪಟ್ಟು ಮತ್ತೆ ಮೂರು ವರ್ಷ ಮಕರ ಸಂಕ್ರಾಂತಿ ಜನವರಿ 14ಕ್ಕೆ ಇರುತ್ತದೆ. ಅಧಿಕ ವರ್ಷವಾಗಿದ್ದ 2024ರ ಮಕರ ಸಂಕ್ರಾಂತಿಯೂ ಇದೇ ಕಾರಣದಿಂದ ಜನವರಿ 15ಕ್ಕೆ ಇತ್ತು.   2024 ಮತ್ತು 2028ರ ಜನವರಿ 14ರ ನಡುರಾತ್ರಿ ಕಳೆದು ಸಂಭವಿಸುವ ಸೂರ್ಯನ ಮಕರ ರಾಶಿ ಪ್ರವೇಶದ ಸಮಯವನ್ನು ಕೆಂಪು ಬಣ್ಣದಲ್ಲಿ ಗುರುತಿಸಲಾಗಿದೆ.



ಅಕ್ಷಾಂಶ ರೇಖಾಂಶಗಳು ಹಾಗೂ ಲಗ್ನದ ಆರಂಭ ಮತ್ತು ಸೂರ್ಯೋದಯ ಸಮಯ.

ಇಲ್ಲಿ ರೇಖಾಂಶ ಸಮಾನವಾಗಿದ್ದು ಅಕ್ಷಾಂಶ ಬೇರೆ ಆಗಿರುವ ಕೇರಳದ ಇಡುಕ್ಕಿ ಮತ್ತು  ಉತ್ತರದ ಡೆಲ್ಲಿ ಹಾಗೂ ಅಕ್ಷಾಂಶ ಒಂದೇ ಆಗಿದ್ದು ರೇಖಾಂಶ ಬೇರೆ ಆಗಿರುವ ಅಹಮದಾಬಾದ್ ಮತ್ತು ಪಶ್ಚಿಮ ಬಂಗಾಳದ ಹರಿಣ್‌ಘಾಟ್‌ಗಳಲ್ಲಿ 14 ಜನವರಿ 2025ರಂದು  ಮಕರ ಲಗ್ನದ ಆರಂಭ ಮತ್ತು ಸೂರ್ಯೋದಯ ಸಮಯಗಳನ್ನು ನೋಡಬಹುದು.  ಅಕ್ಷಾಂಶ ರೇಖಾಂಶಗಳನ್ನು ಹೊಂದಿಕೊಂಡು ಸಮಯಗಳು ಬೇರೆ ಬೇರೆಯಾಗಿದ್ದರೂ ಮಕರ ಲಗ್ನ ಆರಂಭ ಮತ್ತು ಸೂರ್ಯೋದಯದ ನಡುವ ಎಲ್ಲ ಕಡೆ 3 ನಿಮಿಷದ ಸಮಾನ ವ್ಯತ್ಯಾಸ ಇರುವುದು ತಿಳಿಯುತ್ತದೆ. ಆದರೆ ಅಂದು ಹರಿಣ್‌ಘಾಟ್ ಮತ್ತು ಇಡುಕ್ಕಿಯಲ್ಲಿ 7 ಗಂಟೆಗೆ ಜನಿಸಿದ ಮಕ್ಕಳ ಕುಂಡಲಿಯಲ್ಲಿ ಮಕರ ಲಗ್ನ  ಹಾಗೂ  ಅಷ್ಟೇ ಹೊತ್ತಿಗೆ ಅಹಮದಾಬಾದ್ ಮತ್ತು ಡೆಲ್ಲಿಯಲ್ಲಿ  ಹುಟ್ಟಿದವರ ಕುಂಡಲಿಯಲ್ಲಿ  ಧನುರ್ಲಗ್ನ ಇರುತ್ತದೆ.



ಜ್ಯೋತಿಷ್ಯ ಶಾಸ್ತ್ರದಲ್ಲಿ ಲಗ್ನದ ಪಾತ್ರದ ಬಗ್ಗೆ ನನಗೆ ಆಸಕ್ತಿಯೂ, ಜ್ಞಾನವೂ ಇಲ್ಲದುದರಿಂದ ಆ ಬಗ್ಗೆ ಬರೆದಿಲ್ಲ.

- ಚಿದಂಬರ ಕಾಕತ್ಕರ್.



No comments:

Post a Comment

Your valuable comments/suggestions are welcome