Friday 30 August 2024

ರಾಶಿಚಕ್ರ, ಲಗ್ನ ಮತ್ತು ಸಂಕ್ರಾಂತಿ

 

ಕಲಿಕೆಗೆ ಕೊನೆ ಇಲ್ಲ. ಸೂರ್ಯ ತಿಂಗಳಿಗೊಂದು ರಾಶಿಯಲ್ಲಿ ಇರುತ್ತಾನೆ ಎಂದು ನನಗೆ ಗೊತ್ತಿತ್ತು. ಆದರೆ ಉದಯ ಕಾಲದಲ್ಲಿ ಇದ್ದ ರಾಶಿ ಆತ ಮೇಲೆ ಬಂದಾಗ ಬದಲಾಗುವುದಿಲ್ಲವೇ, ಉತ್ತರಾಯಣ ದಕ್ಷಿಣಾಯನಗಳಲ್ಲಿ ಆತ ಅತ್ತಿತ್ತ ಚಲಿಸಿದಾಗ ಏನಾಗುತ್ತದೆ ಎಂಬ ಪ್ರಶ್ನೆಗಳಿಗೆಲ್ಲ ನನ್ನ ತಲೆಗೆ ಉತ್ತರ ಹೊಳೆಯುತ್ತಿರಲಿಲ್ಲ. ಈ ಎಲ್ಲ ಸಂದರ್ಭಗಳಲ್ಲಿ ರಾಶಿಗಳೂ ಆತನೊಂದಿಗೇ ಚಲಿಸುತ್ತವೆ ಎಂದು ಯಾರೂ ನನಗೆ ಹೇಳಿ ಕೊಟ್ಟಿರಲಿಲ್ಲ. ಅನೇಕರಿಗೆ ಇದರ ಅರಿವಿದ್ದರೂ ಸರಳವಾಗಿ ತಿಳಿಹೇಳಲು ಗೊತ್ತಿರುವುದಿಲ್ಲ. ಶಾಲಾ ಕಾಲೇಜುಗಳಲ್ಲಿಯೂ ಈ ಬಗ್ಗೆ ಏನೂ ಕಲಿಸಿರಲಿಲ್ಲ. ಅಂತರ್ಜಾಲದಲ್ಲೂ ಈ ಬಗ್ಗೆ ಸ್ಪಷ್ಟ ವಿವರಗಳಿಲ್ಲ. ಇತ್ತೀಚೆಗೆ ಪಂಚಾಂಗ, ಕುಂಡಲಿಗಳಲ್ಲಿ ಉಲ್ಲೇಖಿಸಲ್ಪಡುವ 'ಲಗ್ನ'ದ ಬಗ್ಗೆ ಅರಿಯುವ ಪ್ರಯತ್ನ ಮಾಡಿದಾಗಲಷ್ಟೇ ಒಂದಷ್ಟು ವಿಚಾರಗಳು ತಿಳಿದವು.
ನಕ್ಷತ್ರಪುಂಜಗಳನ್ನೊಂಡ ಸುಮಾರು 8 ಡಿಗ್ರಿ ಅಗಲದ ರಾಶಿಚಕ್ರವು ಸೂರ್ಯನಂತೆ ಆಕಾಶದಲ್ಲಿ ಪೂರ್ವದಿಂದ ಪಶ್ಚಿಮಕ್ಕೆ ಚಲಿಸಿದಂತೆ ಕಾಣುತ್ತದೆ. ಭೂಮಿಯು ದಿನಕ್ಕೊಮ್ಮೆ ತನ್ನ ಅಕ್ಷದಲ್ಲಿ 360 ಡಿಗ್ರಿ ತಿರುಗುವುದು ಇದಕ್ಕೆ ಕಾರಣ.
‘ಲಗ್ನ’ ಅಂದರೆ ನಿರ್ದಿಷ್ಟ ರಾಶಿಯೊಂದು ಪೂರ್ವ ದಿಗಂತದಲ್ಲಿ ಕಾಣಿಸಿಕೊಳ್ಳುವ ಸುಮಾರು ಎರಡು ಗಂಟೆಯ ಸಮಯ. ಸೂರ್ಯನ ಸುತ್ತ 365.25 ದಿನಗಳಲ್ಲಿ 360 ಡಿಗ್ರಿ ಪ್ರದಕ್ಷಿಣೆ ಮುಗಿಸುವ ದಾರಿಯಲ್ಲಿ ಭೂಮಿಯು ಒಂದು ದಿನದಲ್ಲಿ ಸುಮಾರು 0.985 ಡಿಗ್ರಿಯಷ್ಟು ಮುಂದೆ ಸಾಗುವುದು ನಿರ್ದಿಷ್ಟ ರಾಶಿಯ ಲಗ್ನದ ಆರಂಭ ಕಾಲ ದಿನಕ್ಕೆ ಸುಮಾರು 4 ನಿಮಿಷದಷ್ಟು ಹಿಂದೆ ಸರಿಯುವುದಕ್ಕೆ ಮತ್ತು ಒಂದು ತಿಂಗಳಲ್ಲಿ ಸೂರ್ಯನ ರಾಶಿ ಬದಲಾಗುವುದಕ್ಕೆ ಕಾರಣ. ಭೂಮಿ 0.985 ಡಿಗ್ರಿಯಷ್ಟು ಮುಂದೆ ಸಾಗುವುದು ಎಂದರೆ ನಕ್ಷತ್ರಗಳನ್ನು ಒಳಗೊಂಡ ರಾಶಿಚಕ್ರ ಸಾಪೇಕ್ಷವಾಗಿ ಅಷ್ಟೇ ಹಿಂದೆ ಸರಿಯುವುದು ಎಂದು ತಿಳಿಯಬೇಕು.

ಮೇಲ್ಗಡೆ ಇರುವ ಚಿತ್ರ ಈ ವಿದ್ಯಮಾನವನ್ನು ಮನದಲ್ಲಿ ಚಿತ್ರಿಸಿಕೊಳ್ಳಲು ಸಹಾಯ ಮಾಡಬಹುದು.

ಉದಯಕಾಲದ ಲಗ್ನ ಬದಲಾಗುವ ದಿನ ಸಾಮಾನ್ಯವಾಗಿ ಆಯಾ ರಾಶಿಯ ಹೆಸರಿನ  ಸಂಕ್ರಾಂತಿ ಅನಿಸುತ್ತದೆ. ಕುಂಡಲಿಯಲ್ಲಿ ಲಗ್ನದ ಸ್ಥಾನವನ್ನು ಓರೆ ಗೆರೆಯ ಮೂಲಕ ಅಥವಾ ಲಗ್ನ ಎಂದು ಬರೆಯುವ ಮೂಲಕ ಸೂಚಿಸಲಾಗುತ್ತದೆ.


ಮೇಲೆ ಕಾಣಿಸುವ ಎರಡು ಚಿತ್ರಗಳಲ್ಲಿ 30-8-2024ರ ಕುಂಡಲಿಯಲ್ಲಿ ಬೆಳಗ್ಗೆ 9 ಗಂಟೆಗೆ ಕನ್ಯಾ ಲಗ್ನ, 14-1-2025ರ ಕುಂಡಲಿಯಲ್ಲಿ ಬೆಳಗ್ಗೆ 7 ಗಂಟೆಗೆ ಮಕರ ಲಗ್ನ ಇರುವುದನ್ನೂ ಗಮನಿಸಬಹುದು.

ಅಗಸ್ಟ್ 2024ರ  31 ದಿನಗಳಲ್ಲಿ ಸೂರ್ಯೋದಯ ಕಾಲದ ಲಗ್ನದ ರಾಶಿ, ಲಗ್ನ ಆರಂಭವಾಗುವ ಸಮಯ ಮತ್ತು ಸೂರ್ಯೋದಯ ಸಮಯವನ್ನು ಈ ಪಟ್ಟಿಯಲ್ಲಿ ನೋಡಬಹುದು. 



ವರ್ಷದ ನಿರ್ದಿಷ್ಟ ದಿನ ನಿರ್ದಿಷ್ಟ ರಾಶಿಯ ಉದಯಕಾಲದ ಲಗ್ನ ಪ್ರತೀ ವರ್ಷ ಅದೇ ಸಮಯಕ್ಕೆ ಆರಂಭವಾಗುತ್ತದೆಯೇ ಎಂಬ ಕುತೂಹಲ ನನ್ನಲ್ಲಿ ಮೂಡಿತು. ಇದಕ್ಕೆ ಸಂಬಂಧಿಸಿ ಅಂತರ್ಜಾಲದಲ್ಲಿರುವ ಮಾಹಿತಿಯನ್ನು ಗಮನಿಸುತ್ತಾ ಹೋದಾಗ ಸ್ವಾರಸ್ಯಕರ ವಿಷಯಗಳು ಬೆಳಕಿಗೆ ಬಂದವು.  ಯಾವುದೇ ಒಂದು  ರಾಶಿಯ ಲಗ್ನ ಪ್ರತೀ ವರ್ಷ ಒಂದು ನಿಮಿಷದಷ್ಟು ತಡವಾಗಿ ಆರಂಭವಾಗುತ್ತಾ ಹೋಗಿ 4 ವರ್ಷಕ್ಕೊಮ್ಮೆ 366 ದಿನಗಳಿರುವ ಅಧಿಕ ವರ್ಷ ಬಂದಾಗ ಮತ್ತೆ ಮೂಲ ಸಮಯಕ್ಕೆ  ಮರಳುವುದು ತಿಳಿಯಿತು. 

ಮಕರ ಸಂಕ್ರಮಣ ಬರುವ ಜನವರಿ ತಿಂಗಳ ಭಾಗದ ಮಾಹಿತಿಯನ್ನು ವಿಶ್ಲೇಷಿಸಿದಾಗ ಹೆಚ್ಚಾಗಿ ಜನವರಿ 14ಕ್ಕೆ ಬರುವ ಮಕರ ಸಂಕ್ರಾಂತಿ ಕೆಲವು ವರ್ಷ ಜನವರಿ  15ಕ್ಕೆ ಏಕೆ ಬರುತ್ತದೆ ಎಂಬುದೂ ಸ್ಪಷ್ಟವಾಯಿತು.

ಜನವರಿ ತಿಂಗಳಿನ 13, 14 ಮತ್ತು 15ರಂದು  ಉದಯಕಾಲದ ಮಕರ ರಾಶಿಯ ಲಗ್ನ ಆರಂಭವಾಗುವ ಸಮಯದ ವಿವರ ಮತ್ತು ಹಸಿರು ಬಣ್ಣದಲ್ಲಿರುವ ಮಕರ ಸಂಕ್ರಾಂತಿ ದಿನಗಳನ್ನು ಇಲ್ಲಿರುವ  ಟೇಬಲ್‌ನಲ್ಲಿ ನೋಡಬಹುದು. 2025ರಿಂದ ಫೆಬ್ರವರಿಯಲ್ಲಿ 29 ದಿನಗಳಿರುವ 2028ರ ವರೆಗೆ ವರ್ಷಕ್ಕೆ ಒಂದೊಂದು ನಿಮಿಷ ತಡವಾಗಿ ಆರಂಭವಾಗುವ  ಮಕರ ಲಗ್ನ ಆ ವರ್ಷ ಫೆಬ್ರವರಿಯಲ್ಲಿ ಒಂದು ಅಧಿಕ ದಿನ ಸೇರಿದ್ದರಿಂದ 4 ನಿಮಿಷಗಳ ವ್ಯತ್ಯಾಸವನ್ನು ಸರಿಪಡಿಸಿಕೊಂಡು ಮರು ವರ್ಷ ಮತ್ತೆ ಮೂಲ ಸಮಯದಲ್ಲಿ ಆರಂಭವಾಗುತ್ತದೆ.  ಲಗ್ನ ಆರಂಭದ ಒಂದೊಂದು  ನಿಮಿಷದ   ವ್ಯತ್ಯಾಸದಿಂದ, ಸೂರ್ಯ ಮಕರ ರಾಶಿಗೆ ಪ್ರವೇಶಿಸುವ ಸಮಯವು ವರ್ಷಕ್ಕೆ ಸುಮಾರು 6 ಗಂಟೆಗಳಷ್ಟು ಮುಂದೂಡಲ್ಪಡುತ್ತಾ ನಾಲ್ಕನೆಯ 2028ರ ಅಧಿಕ  ವರ್ಷದಲ್ಲಿ ಜನವರಿ 14ರ ನಡುರಾತ್ರಿಯನ್ನು ಮೀರುತ್ತದೆ ಮತ್ತು ಆ ವರ್ಷ ಸಂಕ್ರಾಂತಿ ಆಚರಣೆ ಜನವರಿ 15ರಂದು ಇರುತ್ತದೆ. 2029ರಲ್ಲಿ ವ್ಯತ್ಯಾಸ ಸರಿಪಡಿಸಲ್ಪಟ್ಟು ಮತ್ತೆ ಮೂರು ವರ್ಷ ಮಕರ ಸಂಕ್ರಾಂತಿ ಜನವರಿ 14ಕ್ಕೆ ಇರುತ್ತದೆ. ಅಧಿಕ ವರ್ಷವಾಗಿದ್ದ 2024ರ ಮಕರ ಸಂಕ್ರಾಂತಿಯೂ ಇದೇ ಕಾರಣದಿಂದ ಜನವರಿ 15ಕ್ಕೆ ಇತ್ತು.   2024 ಮತ್ತು 2028ರ ಜನವರಿ 14ರ ನಡುರಾತ್ರಿ ಕಳೆದು ಸಂಭವಿಸುವ ಸೂರ್ಯನ ಮಕರ ರಾಶಿ ಪ್ರವೇಶದ ಸಮಯವನ್ನು ಕೆಂಪು ಬಣ್ಣದಲ್ಲಿ ಗುರುತಿಸಲಾಗಿದೆ.



ಅಕ್ಷಾಂಶ ರೇಖಾಂಶಗಳು ಹಾಗೂ ಲಗ್ನದ ಆರಂಭ ಮತ್ತು ಸೂರ್ಯೋದಯ ಸಮಯ.

ಇಲ್ಲಿ ರೇಖಾಂಶ ಸಮಾನವಾಗಿದ್ದು ಅಕ್ಷಾಂಶ ಬೇರೆ ಆಗಿರುವ ಕೇರಳದ ಇಡುಕ್ಕಿ ಮತ್ತು  ಉತ್ತರದ ಡೆಲ್ಲಿ ಹಾಗೂ ಅಕ್ಷಾಂಶ ಒಂದೇ ಆಗಿದ್ದು ರೇಖಾಂಶ ಬೇರೆ ಆಗಿರುವ ಅಹಮದಾಬಾದ್ ಮತ್ತು ಪಶ್ಚಿಮ ಬಂಗಾಳದ ಹರಿಣ್‌ಘಾಟ್‌ಗಳಲ್ಲಿ 14 ಜನವರಿ 2025ರಂದು  ಮಕರ ಲಗ್ನದ ಆರಂಭ ಮತ್ತು ಸೂರ್ಯೋದಯ ಸಮಯಗಳನ್ನು ನೋಡಬಹುದು.  ಅಕ್ಷಾಂಶ ರೇಖಾಂಶಗಳನ್ನು ಹೊಂದಿಕೊಂಡು ಸಮಯಗಳು ಬೇರೆ ಬೇರೆಯಾಗಿದ್ದರೂ ಮಕರ ಲಗ್ನ ಆರಂಭ ಮತ್ತು ಸೂರ್ಯೋದಯದ ನಡುವ ಎಲ್ಲ ಕಡೆ 3 ನಿಮಿಷದ ಸಮಾನ ವ್ಯತ್ಯಾಸ ಇರುವುದು ತಿಳಿಯುತ್ತದೆ. ಆದರೆ ಅಂದು ಹರಿಣ್‌ಘಾಟ್ ಮತ್ತು ಇಡುಕ್ಕಿಯಲ್ಲಿ 7 ಗಂಟೆಗೆ ಜನಿಸಿದ ಮಕ್ಕಳ ಕುಂಡಲಿಯಲ್ಲಿ ಮಕರ ಲಗ್ನ  ಹಾಗೂ  ಅಷ್ಟೇ ಹೊತ್ತಿಗೆ ಅಹಮದಾಬಾದ್ ಮತ್ತು ಡೆಲ್ಲಿಯಲ್ಲಿ  ಹುಟ್ಟಿದವರ ಕುಂಡಲಿಯಲ್ಲಿ  ಧನುರ್ಲಗ್ನ ಇರುತ್ತದೆ.



ಜ್ಯೋತಿಷ್ಯ ಶಾಸ್ತ್ರದಲ್ಲಿ ಲಗ್ನದ ಪಾತ್ರದ ಬಗ್ಗೆ ನನಗೆ ಆಸಕ್ತಿಯೂ, ಜ್ಞಾನವೂ ಇಲ್ಲದುದರಿಂದ ಆ ಬಗ್ಗೆ ಬರೆದಿಲ್ಲ.

- ಚಿದಂಬರ ಕಾಕತ್ಕರ್.



Tuesday 27 August 2024

Mukesh माधुर्य ಮಂಜರಿ



    
ಜೋನ್ ಜಾನಿ ಜನಾರ್ದನ್ ಇದ್ದ ಹಾಗೆ ಇದೇನಪ್ಪಾ ಮುಕೇಶ್ ಮಾಧುರ್ಯ ಮಂಜರಿ ಎಂಬ ತಲೆಬರಹದಲ್ಲಿ ಭಾಷೆಗಳ  ಕಲಸು ಮೇಲೋಗರ ಎಂದು ಅಚ್ಚರಿಯಾಯಿತೇ.  ಮಧುರ ಸಂಗೀತ ದೇಶ-ಭಾಷೆ-ಕಾಲಾತೀತ. ಹಾಗಾಗಿ ಈ ಹೊಸ ವರಸೆ ಅಷ್ಟೇ. ಆಗಸ್ಟ್ 27ಕ್ಕೆ ಮುಕೇಶ್  ಪುಣ್ಯತಿಥಿ.  ಅವರ ಕೆಲವು ಹಾಡುಗಳನ್ನು ನೆನಪಿಸಿಕೊಳ್ಳಲು ನಮಗೊಂದು ನೆವ.

    
ರಫಿ, ತಲತ್, ಮನ್ನಾಡೆ, ಕಿಶೋರ್ ಸಮಕಾಲೀನರಾಗಿದ್ದ ಮುಕೇಶ್ ತಮ್ಮ  ವೃತ್ತಿ ಜೀವನದಲ್ಲೆಂದೂ ಆರಕ್ಕೇರಿದವರಲ್ಲ ಮೂರಕ್ಕಿಳಿದವರಲ್ಲ.  ಅದು ತಲತ್ ಯುಗವಿರಲಿ, ರಫಿ ಯುಗವಿರಲಿ, ನಂತರದ ಕಿಶೋರ್ ಯುಗವಿರಲಿ, ತಮ್ಮ ಅವಕಾಶಗಳನ್ನು ತಮ್ಮದಾಗಿಯೇ ಉಳಿಸಿಕೊಂಡವರು, ಅವುಗಳ ಸದುಪಯೋಗ ಮಾಡಿಕೊಂಡವರು.  ಚಿತ್ರ ನಿರ್ಮಾಣ, ನಟನೆಯಲ್ಲೂ  ಅದೃಷ್ಟ ಪರೀಕ್ಷಿಸಿದ್ದ ಅವರು ಅದು ತಮಗಲ್ಲ ಎಂದು ನಿಶ್ಚಯಿಸಿ ಹಾಡುಗಾರಿಕೆಯನ್ನೇ ಉಸಿರಾಗಿಸಿಕೊಂಡು ಹಾಡುವುದಕ್ಕೆಂದೇ ತೆರಳಿ  ಅಮೇರಿಕದ ಡೆಟ್ರಾಯಿಟ್‍ನಲ್ಲಿ 1976 ಅಗಸ್ಟ್ 27ರಂದು ಐವತ್ತಮೂರರ ಹರೆಯದಲ್ಲಿ ಕೊನೆಯುಸಿರೆಳೆದವರು.

    
ತಮ್ಮ ಇತರ ಸಮಕಾಲೀನರಷ್ಟೇ ವೃತ್ತಿಪರರಾಗಿದ್ದ ಅವರು ಸ್ಪಷ್ಟ ಉಚ್ಚಾರ, ಧ್ವನಿಭಾರ, ಉಸಿರಿನ ನಿಯಂತ್ರಣ, voice throw ಗಳ ವಿಷಯದಲ್ಲಿ ಯಾರಿಗೂ ಕಮ್ಮಿ ಇರಲಿಲ್ಲ.  ಆದರೆ ಅವರು  ಏಕಪಾಠಿ ಮಾತ್ರ ಅಲ್ಲವಂತೆ.  ರಫಿ, ಕಿಶೋರ್ ಅವರಂತೆ ಹಾಡಿನ ಟ್ಯೂನ್ ಒಂದೇ ಸಲ ಕೇಳಿ ರೆಕಾರ್ಡಿಂಗಿಗೆ ತಯಾರಾಗಲು ಅವರಿಗೆ ಕಷ್ಟವಾಗುತ್ತಿತ್ತಂತೆ.  ಶ್ರುತಿ ಶುದ್ಧತೆ ಬಗ್ಗೆಯೂ ಅವರಲ್ಲಿ ಆತ್ಮವಿಶ್ವಾಸ ಕೊಂಚ ಕಮ್ಮಿ ಇತ್ತೆಂದು ಹೇಳುತ್ತಾರೆ.  ಹೀಗಾಗಿ ರೆಕಾರ್ಡಿಂಗ್ ಆರಂಭವಾಗುವ ವರೆಗೂ ಹಾರ್ಮೋನಿಯಮ್ ನುಡಿಸುತ್ತಾ ಅಭ್ಯಾಸ ಮಾಡುತ್ತಲೇ ಇರುತ್ತಿದ್ದರಂತೆ. ರೆಕಾರ್ಡಿಂಗ್ ನಲ್ಲೂ ಟೇಕ್ ಗಳ ಸಂಖ್ಯೆ ಹೆಚ್ಚೇ ಇರುತ್ತಿತ್ತಂತೆ.  ಸ್ಟೇಜ್ ಕಾರ್ಯಕ್ರಮಗಳಲ್ಲೂ ಅವರು ಹಾರ್ಮೋನಿಯಮ್ ನುಡಿಸುತ್ತಲೇ ಹಾಡುತ್ತಿದ್ದುದನ್ನು ಗಮನಿಸಬಹುದು. ಆದರೂ ಆ ಕಾಲದ ಸಂಗೀತ ನಿರ್ದೇಶಕರು  ಸಂದರ್ಭ ಸಿಕ್ಕಿದಾಗಲೆಲ್ಲ ಅವರಿಂದ ಹಾಡುಗಳನ್ನು ಹಾಡಿಸಿರುವುದಕ್ಕೆ   ಅವರ ಕಂಠ ಅಲೌಕಿಕ ಆಗಿದ್ದುದೇ ಕಾರಣವಿರಬಹುದು . ಅವರನ್ನು  ಹೆಚ್ಚು ವೈವಿಧ್ಯಪೂರ್ಣವಾಗಿ  ಬಳಸಿಕೊಂಡದ್ದು ಶಂಕರ್-ಜೈಕಿಶನ್ .
    
ಇವರು ಹಾಡಿದ ಹಾಡುಗಳು ಸಂಖ್ಯೆಯಲ್ಲಿ ರಫಿ, ಕಿಶೋರ್ ಅವರಿಗಿಂತ ಕಮ್ಮಿ ಇರಬಹುದು.  ಆದರೆ ಇವುಗಳಲ್ಲಿ ಕಾಳು ಜಾಸ್ತಿ, ಜೊಳ್ಳು ಬಹಳ ಕಮ್ಮಿ. ಹಾಡಿದ ಹಾಡುಗಳಲ್ಲಿ ಉತ್ತಮವಾದವುಗಳ ಪ್ರತಿಶತ ಲೆಕ್ಕ ಹಾಕಿದರೆ ಪ್ರಥಮ ಸ್ಥಾನದಲ್ಲಿ ನಿಲ್ಲುವುದು ಅವರೇ. ಅಂತಹವುಗಳಲ್ಲಿ ನನ್ನ ನೆನಪಿಗೆ ಬಂದ, ನನಗಿಷ್ಟವಾದ 10 ಹಾಡುಗಳು ಇಲ್ಲಿವೆ.  ನಿಮಗೆಲ್ಲರಿಗೂ ಮೆಚ್ಚುಗೆಯಾಗುತ್ತವೆ ಅಂದುಕೊಂಡಿದ್ದೇನೆ.

    

1. ಆವಾರಾ ಹೂಂ - ಆವಾರಾ
    Awara Hoon - Awara 

ಪ್ರೇಮಗೀತೆಗಳೂ ಸೇರಿದಂತೆ ಎಲ್ಲ ಹಾಡುಗಳೂ ಒಂದು ರೀತಿ ವಿಷಾದ ಭಾವವನ್ನು ಹೊಂದಿರುತ್ತಿದ್ದ ಕಾಲದಲ್ಲಿ ಲವಲವಿಕೆಯನ್ನು ಮೈಗೂಡಿಸಿಕೊಂಡು ಬಂದ ಆ ಕಾಲಕ್ಕೆ ahead of time ಎನ್ನಬಹುದಾದ ಶಂಕರ್ ಜೈಕಿಶನ್ ಹಾಡು  ಇದು.  ಮುಂದೆ ಆರ್ ಪಾರ್, ತುಮ್‍ ಸಾ ನಹೀಂ ದೇಖಾ ನಂತರವಷ್ಟೇ ಎಲ್ಲ ಹಾಡುಗಳಲ್ಲಿ ಲವಲವಿಕೆ ಕಾಣಿಸಿಕೊಳ್ಳತೊಡಗಿತು. ತಮ್ಮ ಮೆಚ್ಚಿನ ಹಿರಿಯ ಸಂಗೀತ ನಿರ್ದೇಶಕ ಎಸ್.ಡಿ.ಬರ್ಮನ್ ಈ ಹಾಡಿನಲ್ಲಿಯ ಎಕಾರ್ಡಿಯನ್ ವಾದ್ಯದ ಅತಿ ಸುಂದರ ಕುಸುರಿ ಕೆಲಸ  ಮೆಚ್ಚಿ ಶಹಬ್ಬಾಸ್ ಎಂದು ಬೆನ್ನು ತಟ್ಟಿದಾಗ ಶಂಕರ್ ಅವರಿಗೆ ಬಹಳ ಖುಶಿ ಆಗಿತ್ತಂತೆ.  ಈ ಹಾಡು  ರಷ್ಯಾದಲ್ಲೂ ಬಹು ಜನಪ್ರಿಯ ಆಗಿ ರಾಜ್ ಕಪೂರ್ ಹಾಗೂ ಆ ದೇಶದ ನಡುವೆ  ನಂಟು ಬೆಳೆಯಲು ಕಾರಣವಾಯಿತು.  ನಂತರದ ಅನೇಕ ರಾಜ್ ಕಪೂರ್ ಚಿತ್ರಗಳ ಹಾಡುಗಳಲ್ಲಿ ರಷ್ಯನ್ ಸಂಗೀತದ ಛಾಯೆಯನ್ನೂ  ಗುರುತಿಸಬಹುದು. 



2. ಮುಝಕೊ ಇಸ್ ರಾತ್ ಕೀ - ದಿಲ್ ಭೀ ತೇರಾ ಹಮ್ ಭೀ ತೇರೆ
    Mujh Ko Is Raat Ki - Dil Bhi Tera Hum Bhi Tere

ಧರ್ಮೇಂದ್ರ ಅವರ ಮೊದಲ ಚಿತ್ರದ ಗೀತೆಯಿದು.  ಕಲ್ಯಾಣಜೀ-ಆನಂದಜೀ ಅವರು ಶಂಕರ್-ಜೈಕಿಶನ್ ಹೆಜ್ಜೆ ಜಾಡಿನಲ್ಲಿ ಗದ್ದಲಕ್ಕೆ ಹೆಸರಾದ ಸ್ಯಾಕ್ಸೊಫೋನ್, ಗ್ರೂಪ್ ವಯಲಿನ್ಸ್ ನಂತಹ ವಾದ್ಯಗಳನ್ನು ಬಳಸಿಯೂ ರಾತ್ರಿಯ ನೀರವತೆಯನ್ನು ಸೃಷ್ಟಿಸುವಲ್ಲಿ ಯಶಸ್ವಿಯಾಗಿದ್ದಾರೆ. ವೈಬ್ರೋಫೋನ್ ಬಳಕೆ ಹಾಡಿಗೆ ವಿಶೇಷ ಮೆರುಗು ನೀಡಿದೆ.  ಒಂದು ಚಿತ್ರಕ್ಕೆ ಒಂದು  ಹಿಟ್ ಮುಕೇಶ್ ಹಾಡು ಕೆಟಗರಿಯಲ್ಲಿ  ಕಲ್ಯಾಣಜೀ-ಆನಂದಜೀ ನಂಬರ್ ವನ್.




3. ರುಕ್ ಜಾ ಒ ಜಾನೆವಾಲಿ - ಕನ್ಹಯ್ಯಾ
    Ruk Ja O Janewali - Kanhayya

ನಾಯಕನು ಸ್ವಗತದಲ್ಲಿ ಹಾಡುವುದನ್ನು ಕೇಳಿ ನಾಯಕಿ ಅದು ತನಗಾಗಿಯೇ ಅಂದುಕೊಳ್ಳುವ ಶೈಲಿಯಲ್ಲಿದೆ ಇದು. ವಿವಿಧ ರೀತಿಯ ಕೊಳಲುಗಳ ಬಳಕೆ, ವೇಗದ ನಡೆ ಈ ಹಾಡಿನಲ್ಲಿ ಅಂತರ್ಗತವಾದ ಉತ್ಸಾಹಕ್ಕೆ ಪೂರಕವಾಗಿವೆ.  ರುಕ್ ಜಾ ಅಂದೊಡನೆ ಕೊಳಲುಗಳ ಮೂರು ಸಲದ ಮಾರ್ನುಡಿ ಈ ಹಾಡಿನ ಪಂಚ್ ಲೈನ್ ಅನ್ನಬಹುದು.  ತಿಕ್ಕುಜಾ ಈ ದಾಯೆ ಪನ್ ತಿಕ್ಕುಜಾ (ಸಿಕ್ಕೊಲ್ಲ ನೀ ಯಾಕೆ ಹೇಳು ಸಿಕ್ಕೊಲ್ಲ) ಎಂದು ಬದಲಾಯಿಸಿ ಈ ಹಾಡನ್ನು ತುಳು ನಾಟಕಗಳಲ್ಲಿ ಅಳವಡಿಸಿಕೊಳ್ಳುತ್ತಿದ್ದರು.





4. ಲೌಟ್ ಕೆ ಆಜಾ ಮೇರೆ ಮೀತ್ - ರಾಣಿ ರೂಪಮತಿ
    Laut Ke Aja Mere Meet - Rani Rupamati

ನಟ, ನಿರ್ದೇಶಕರೂ ಆಗಿದ್ದ ಎಸ್.ಎನ್.ತ್ರಿಪಾಠಿ ಅವರ ಸಂಗೀತ ನಿರ್ದೇಶನದ ಈ ಗೀತೆ ಸರಳತೆಗೆ ಒಳ್ಳೆಯ ಉದಾಹರಣೆ.  ಇಲ್ಲಿ ಹೆಚ್ಚಿನ ವಾದ್ಯಗಳ ಬಳಕೆ ಇಲ್ಲ.  ಆದರೂ  ಕೇಳುಗರ ಮೇಲೆ ಬೀರುವ ಪರಿಣಾಮಕ್ಕೇನೂ ಕೊರತೆ ಇಲ್ಲ. ಮಧುಮಾದ್ ಸಾರಂಗ್  ಅರ್ಥಾತ್ ಮಧ್ಯಮಾವತಿ ರಾಗಾಧಾರಿತವಾದ ಈ ಸರಳ ರಚನೆ ಮಾಧುರ್ಯದಲ್ಲಿ ಅದ್ದಿ ತೆಗೆದಂತಿದೆ.




5. ರಾತ್ ಔರ್ ದಿನ್ - ಟೈಟಲ್ ಹಾಡು
    Raat Aur Din - Title song

ನರ್ಗಿಸ್ ಅವರ ಕೊನೆಯ ಚಿತ್ರದ ಈ ಹಾಡಿನ ನಡೆ  ಯಾವುದೆ ಲಗುಬಗೆ, ಉದ್ವೇಗ ಇಲ್ಲದ್ದು. ಕೇಳುಗರಲ್ಲಿ ಉದ್ವೇಗ ಇದ್ದರೆ ಹೋಗಲಾಡಿಸಬಲ್ಲಂಥದ್ದು.  ಕೇಳಿದರೆ ಹಾಗೆಯೇ ಕೇಳುತ್ತಲೇ ಇರೋಣ ಅನ್ನಿಸುತ್ತದೆ, ಬಜಾಜ್ ಸ್ಕೂಟರಿನಲ್ಲಿ ಟ್ರಾಫಿಕ್ ಇಲ್ಲದ ರೋಡಿನಲ್ಲಿ ಹದವಾದ ವೇಗದಲ್ಲಿ ಹೋಗುತ್ತಾ ಇರುವ ಅನುಭವ  ನೀಡುತ್ತದೆ.




6. ಓ ಜಾನೆವಾಲೆ ಹೋ ಸಕೆ ತೊ - ಬಂದಿನಿ
    O Janewale Ho Sake To - Bandini

ಮುಕೇಶ್ ಅವರನ್ನು ಸಚಿನ್ ದೇವ್ ಬರ್ಮನ್  ಬಳಸಿದ್ದು ಕಮ್ಮಿಯೇ.  ಆದರೆ ಬಳಸಿಕೊಂಡಾಗಲೆಲ್ಲ ಜನ್ಮ ತಾಳಿದ್ದು ಇಂತಹ ರತ್ನಗಳೇ.  ಬರ್ಮನ್ ಸಂಗೀತದಲ್ಲಿ ಹೆಚ್ಚಾಗಿ ಕೇಳಸಿಗದ ಕೋರಸ್ ಬಳಕೆ ಇದರಲ್ಲಿದೆ.  ಹೋ ಸಕೆ ತೊ ಲೌಟ್ ಕೆ  ಆನಾ ಎಂಬ ಸಾಲು ಕಪ್ಪು ಒಂದು ಶ್ರುತಿಯ ಷಡ್ಜ ಹಾಗೂ ಮಂದ್ರ ನಿಷಾದದಲ್ಲಿ ನುಡಿಯುವಾಗ ಆಗುವ ಆನಂದ ಅವರ್ಣನೀಯ.   ಪಿ.ಬಿ.ಎಸ್ ಅವರಂತೆ ಮುಕೇಶ್ ಧ್ವನಿಯೂ ಕೆಳ ಶ್ರುತಿಯ ಮಧ್ಯ ಹಾಗೂ ಮಂದ್ರ ಸಪ್ತಕಗಳಿಗೆ ಹೇಳಿ ಮಾಡಿಸಿದಂಥದ್ದು.




7. ಸಜನ್ ರ್ ಝೂಟ್ ಮತ್ ಬೋಲೊ - ತೀಸ್ರಿ ಕಸಂ
    Sajan Re Jhoot Mat Bolo - Teesri Kasam

ಕವಿ ಶೈಲೇಂದ್ರ ಅವರು ಮಾರೇ ಗಯೆ ಗುಲ್‍ಫಾಮ್ ಕಾದಂಬರಿ ಆಧರಿಸಿ ಸ್ವತಃ ನಿರ್ಮಿಸಿ ಕೈ ಸುಟ್ಟುಕೊಂಡ ಚಿತ್ರದ ಹಾಡು ಇದು.  ಚಿತ್ರ ಹಾಗೂ ಅದರ ಶಂಕರ್-ಜೈಕಿಶನ್ ಸಂಗೀತ ಶ್ರೇಷ್ಠವಾಗಿದ್ದರೂ ಅನನುಭವಿ ಶೈಲೇಂದ್ರ ಅವರಿಗೆ ಅದನ್ನು ವ್ಯಾವಹಾರಿಕವಾಗಿ  ಗೆಲ್ಲಿಸುವುದು ಸಾಧ್ಯವಾಗಲಿಲ್ಲ.  ಆ ಮೇಲೆ ಇದಕ್ಕೆ ರಾಷ್ಟ್ರೀಯ ಪುರಸ್ಕಾರ, ವಿಮರ್ಶಕರ ಮನ್ನಣೆ ಇತ್ಯಾದಿ  ಸಿಕ್ಕಿದರೂ ಮೊದಲೇ ಕುಡಿತದ ಚಟಕ್ಕೆ ಬಲಿಯಾಗಿದ್ದ ಶೈಲೇಂದ್ರ ಚಿತ್ರದ ಸೋಲಿನಿಂದ ಕಂಗೆಟ್ಟು  1966 ರಲ್ಲಿ ಕೇವಲ 43 ರ ಪ್ರಾಯದಲ್ಲಿ  ಖುದಾ ಕೆ ಪಾಸ್ ಜಾನಾ ಹೈ ಎನ್ನುತ್ತಾ ಇಹ ಲೋಕ ತ್ಯಜಿಸಿದರು.  ಈ ರೀತಿ ರಾಜ್ ಕಪೂರ್ ಯಶಸ್ವಿ ತಂಡದ ಮೊದಲ ಕೊಂಡಿ ಕಳಚಿತು.  ಮುಂದೆ 1971 ರಲ್ಲಿ ಜೈಕಿಶನ್ ಕೂಡ ಕುಡಿತದಿಂದಾಗಿ 41 ರ ವಯಸ್ಸಿನಲ್ಲಿ ಇದೇ ಹಾದಿ ಹಿಡಿದಾಗ ಎರಡನೇ ಕೊಂಡಿಯೂ ಕಳಚಿ  ಈ ತಂಡಕ್ಕೆ  ಸರಿಪಡಿಸಲಾಗದ ಹಾನಿಯುಂಟಾಯಿತು. ಕುಡಿತ ಕೆಟ್ಟದ್ದೇ. ಶೈಲೇಂದ್ರ, ಜೈಕಿಶನ್ರೋಶನ್, ಮದನ್ ಮೋಹನ್ ಇವರೆಲ್ಲ  ಕುಡಿತದಿಂದ ಕರುಳನ್ನು ಕರಗಿಸಿಕೊಂಡು ಚಿಕ್ಕ ಪ್ರಾಯದಲ್ಲೇ ಇಹಲೋಕ ತ್ಯಜಿಸಿದವರು. ಮುಕೇಶ್ ಕೂಡ ಕುಡಿತದ ಅಭ್ಯಾಸ ಇದ್ದವರು ಅನ್ನುತ್ತಾರೆ.  ಆದರೂ ನಾವು ಇಂದಿಗೂ ಮೆಚ್ಚಿಕೊಂಡು ಆಸ್ವಾದಿಸುವ ಅನೇಕ ಅಮರ ಹಾಡುಗಳು ಮಧುಪಾನದ ನಶೆಯಲ್ಲಿಯೇ ಜನ್ಮ ತಾಳಿರಬಹುದು ಎಂದು ಎಣಿಸುವಾಗ ತನ್ನನ್ನೇ ಕರಗಿಸಿಕೊಂಡು ಬೆಳಕು ನೀಡುವ ಮೊಂಬತ್ತಿಯಂತೆ ಇವರೂ ತಮ್ಮ ಜೀವವನ್ನೇ ಸವೆಸಿ   ನಮಗಾಗಿ ಇಂತಹ ಕೊಡುಗೆಗಳನ್ನು ಕೊಟ್ಟು ಹೋದರು ಎಂಬ ಭಾವನೆ ಬರುವುದಿಲ್ಲವೇ.




8. ತುಮ್ ಆಜ್ ಮೇರೆ ಸಂಗ್ ಹಸ್ ಲೊ - ಆಶಿಕ್ 
    Tum Aaj Mere Sang  Haslo - Ashiq

ಈ ಶಂಕರ್-ಜೈಕಿಶನ್ ಹಾಡಿನಲ್ಲಿ ಬಾಯಿಂದ ಹೊರಡಿಸುವ ವಿಚಿತ್ರ ಸದ್ದೊಂದನ್ನು ಬಳಸಿಕೊಳ್ಳಲಾಗಿದೆ.  ನಮ್ಮೂರಲ್ಲಿ ಐತು ಎಂಬವನೊಬ್ಬ ತೆಂಬರೆ ಎಂಬ ಜಾನಪದ ಚರ್ಮ ವಾದ್ಯವನ್ನು ನುಡಿಸಿಕೊಂಡು ಬಾಯಿಂದ ಇದೇ ರೀತಿಯ ಸದ್ದು ಹೊರಡಿಸಿ ಕುಣಿಯುತ್ತಾ ಮಕ್ಕಳನ್ನು ಖುಶಿ ಪಡಿಸುತ್ತಿದ್ದ !  ಈ ಹಾಡನ್ನು ಅವನೆಂದೂ ಕೇಳಿರುವ ಸಾಧ್ಯತೆ ಇಲ್ಲ,  ಶಂಕರ್-ಜೈಕಿಶನ್, ರಾಜ್ ಕಪೂರ್ ಇವರೆಲ್ಲ ಯಾರು ಎಂದೂ  ಅವನಿಗೆ ಗೊತ್ತಿದ್ದಿರಲೂ ಸಾಧ್ಯವಿಲ್ಲ.    ರಾಜ್ ಕಪೂರ್ - ಪದ್ಮಿನಿ ನಟನೆ,  ಶಂಕರ್-ಜೈಕಿಶನ್ ಸಂಗೀತ, ಹೃಷಿಕೇಶ ಮುಖರ್ಜಿ ನಿರ್ದೇಶನದ ಈ ಚಿತ್ರ ನಿರ್ಮಿಸಿದವರು ಒಂದು ಕಾಲದಲ್ಲಿ ರೇಡಿಯೋ ಸಿಲೋನ್ ಅನೌಂಸರ್ ಆಗಿದ್ದು ನಂತರ HMV ಯ ಮಖ್ಯಸ್ಥರಾದ ವಿಜಯ ಕಿಶೋರ್ ದೂಬೆ ಹಾಗೂ ಪತ್ರಕರ್ತ ಬನ್ನಿ ರೂಬೆನ್.  ಇವರೀರ್ವರೂ ಈ ಕ್ಷೇತ್ರದಲ್ಲಿ ಅನನುಭವಿಗಳಾದ್ದರಿಂದ ಈ ಚಿತ್ರವೂ ಆರ್ಥಿಕವಾಗಿ ನೆಲ ಕಚ್ಚಿತಂತೆ.  ಕೊಳಲಿನ ದೇಹದಲ್ಲೆಲ್ಲ ಛೇದಗಳಿದ್ದರೂ ಅದು ಮಧುರ ಗೀತೆಗಳನ್ನು ನುಡಿಯುವಂತೆ ನಗು ನಗುತಾ ನಲಿ ಏನೇ ಆಗಲಿ ಎಂಬ ಸಂದೇಶ ಈ ಹಾಡಿನದ್ದು.  ಶೈಲೇಂದ್ರ ಅವರ ಅರ್ಥಪೂರ್ಣ ಸಾಹಿತ್ಯ ಇದರಲ್ಲಿದೆ.




9.  ಆ ಅಬ್ ಲೌಟ್ ಚಲೆಂ - ಜಿಸ್ ದೇಶ್ ಮೆಂ ಗಂಗಾ ಬಹತೀ ಹೈ
    Aa Ab Laut Chalen - Jis Desh Me Ganga Behati Hai

ಶಂಕರ್-ಜೈಕಿಶನ್ ಪ್ರತಿಭೆಯ ಮೇರು ಸಂಯೋಜನೆ ಇದು.  ಚಿತ್ರದ ಸನ್ನಿವೇಶವೂ ಪರಾಕಾಷ್ಟೆಯದ್ದೇ. ಟ್ರಂಪೆಟ್ಸ್ ಹಾಗೂ ಕೋರಸ್ ಬಳಕೆ ಅತ್ಯದ್ಭುತ. ಇದರಲ್ಲಿ ಲತಾ ಮಂಗೇಷ್ಕರ್ ನುಡಿಯುವುದು ಆಜಾರೇ... ಎಂಬ ಒಂದು ಸೊಲ್ಲು ಮಾತ್ರ. ನಂತರದ  ಆಲಾಪದಲ್ಲಿ ಅವರು ಅತಿ ತಾರ ಸಪ್ತಕವನ್ನು ಸ್ಪರ್ಶಿಸುವ ರೀತಿ ಬೆರಗು ಹುಟ್ಟಿಸುವಂಥದ್ದು.  ಅಂದಿನ ಸೀಮಿತ ತಾಂತ್ರಿಕತೆಯಲ್ಲಿ ಈ ಹಾಡಿನ ರೆಕಾರ್ಡಿಂಗ್ ಹೇಗೆ ನಡೆಸಿರಬಹುದು ಎಂದು ಈಗಿನ ಸಂಗೀತ ನಿರ್ದೇಶಕರೋರ್ವರು ಸಂದರ್ಶನವೊಂದರಲ್ಲಿ ಅಚ್ಚರಿ ವ್ಯಕ್ತಪಡಿಸಿದ್ದರು.   ದಿಲ್ ಅಪನಾ ಔರ್ ಪ್ರೀತ್ ಪರಾಯೀಸಂಗಂ, ಬ್ರಹ್ಮಚಾರಿ , An evening in Paris ಮುಂತಾದ ಚಿತ್ರಗಳಲ್ಲಿ ನಾವು ನೋಡಿದಂತೆ ಕೋರಸ್ ಅನ್ನು   ಶಂಕರ್-ಜೈಕಿಶನ್ ಅವರಷ್ಟು ಪರಿಣಾಮಕಾರಿಯಾಗಿ ಬಳಸಿಕೊಂಡವರು ಇನ್ಯಾರೂ ಇರಲಾರರು. 





10. ಮೇರೆ ಮನ್ ಕೀ ಗಂಗಾ - ಸಂಗಂ
     Mere Man Ki Ganga - Sangam

     ಈ ಹಾಡಿನಲ್ಲಿ ರಾಜ್ ಕಪೂರ್ ಕೈಯಲ್ಲಿರುವುದು ಈಜಿಪ್ಟ್ ಮೂಲದ್ದೆಂದು ನಂಬಲಾದ ಬ್ಯಾಗ್ ಪೈಪ್ ಎಂಬ, ಕಂಕುಳಿಂದ ತಿದಿಯಂತಹ ಚರ್ಮದ ಚೀಲವೊಂದನ್ನೊತ್ತಿ ಗಾಳಿತುಂಬಿ ನುಡಿಸುವ ವಾದ್ಯ. ನೀರಿನಲ್ಲಿ ಈಜಾಡುವ ಸದ್ದಿನ ಪರಿಣಾಮ ಉಂಟುಮಾಡಲು  ಬುಡಬುಡಿಕೆಯಂತಹ ತಾಳವಾದ್ಯವನ್ನು ಉಪಯೋಗಿಸಲಾಗಿದೆ. ಶಂಕರ್-ಜೈಕಿಶನ್ ತಂಡದಲ್ಲಿ ರಿದಂ ವಿಭಾಗವನ್ನು ನೋಡಿಕೊಳ್ಳುತ್ತಿದ್ದ ದತ್ತಾರಾಮ್ ಇಂತಹ ಪ್ರಯೋಗಗಳ ರೂವಾರಿ.

     ಈ ಹಾಡಿನ ಹಿಂದೆ ಗೋಪಿಕಾ ವಸ್ತ್ರಾಪಹರಣದ ಕಲ್ಪನೆಯೂ ಇದ್ದಂತಿದೆ.  ಕಿರೀಟದ ಸಂಕೇತವಾಗಿ ನಾಯಕ ತಲೆಗೆ ಸಿಕ್ಕಿಸಿಕೊಳ್ಳುವ ಗರಿ ಹಾಗೂ ಚಿತ್ರದಲ್ಲಿ ಹಾಡಿನ ಮೊದಲು ಬರುವ dialog ಇದನ್ನು ಪುಷ್ಟೀಕರಿಸುತ್ತವೆ.  ಆದರೆ ಆತ ಧರಿಸಿಕೊಂಡಿರುವುದು ಈಗಿನ ಯುವ ಜನಾಂಗದಲ್ಲಿ ಜನಪ್ರಿಯವಾಗಿರುವ ಬರ್ಮುಡಾ!  ಇನ್ನೊಂದು ಅಚ್ಚರಿಯ ವಿಷಯವೆಂದರೆ ಶ್ರೀಮಂತರ ಮನೆಯ ಹುಡುಗಿಯೊಬ್ಬಳು  ಸ್ವಿಮ್ಮಿಂಗ್ ಪೂಲಿಗೆ ಹೋಗುವುದನ್ನು ಬಿಟ್ಟು ಸ್ವಿಮ್ ಸೂಟ್ ಧರಿಸಿ ನದಿಯಲ್ಲಿ ಈಜಾಡಲು ಬರುತ್ತಾಳೆಯೇ ಎಂಬ ಪ್ರಶ್ನೆಯನ್ನು ಯಾವ ವಿಮರ್ಶಕರೂ ಇದುವರೆಗೆ ಎತ್ತಿಲ್ಲ.  ಏನೇ ಇರಲಿ,  ಇದು ಜನಪ್ರಿಯತೆಯ ಮಾನದಂಡದಲ್ಲಿ ಸರ್ತಾಜ್ ಅಂದರೆ ಸರ್ವ ಶ್ರೇಷ್ಠ  ಪದವಿಗೆ ಅರ್ಹವಾದ ಹಾಡು.  ಹಳ್ಳಿ ಹಳ್ಳಿಗಳ ಮೂಲೆಗಳನ್ನೂ ತಲುಪುವಲ್ಲಿ ಇದು ತೇರಿ ಪ್ಯಾರೀ ಪ್ಯಾರೀ ಸೂರತ್ ಕೊ ಹಾಡನ್ನೂ ಹಿಮ್ಮೆಟ್ಟಿಸಿತ್ತು.  ಈ ಹಾಡನ್ನು ಗುಣುಗುಣಿಸದ ಬಾಯಿಗಳಿರಲಿಲ್ಲ, ಧಾಟಿಯನ್ನು ಅಳವಡಿಸದ ನಾಟಕಗಳಿರಲಿಲ್ಲ, ಪೆ ಪೆ ಪೆ ಪೆ ಪೇ ಪೇ ಪೆ ಎಂಬ BGM ಸಮೇತ ಇದನ್ನು ನುಡಿಸದ ವಾಲಗದವರಿರಲಿಲ್ಲ! ಅಂತಹ ಮೋಡಿ ಈ ಹಾಡಿನದ್ದು.

          60ರ ದಶಕದ   ಹಿಂದಿ ಚಲನ ಚಿತ್ರಗಳ ಹಾಡುಗಳಲ್ಲಿ ಸಾಮಾನ್ಯವಾಗಿ 3 ಚರಣಗಳಿರುತ್ತಿದ್ದು ಬಿಡುಗಡೆಯಾಗುತ್ತಿದ್ದ 78 RPM ಗ್ರಾಮಫೋನ್ ತಟ್ಟೆಗಳಲ್ಲಿ  2 ಚರಣಗಳು ಮಾತ್ರ ಇರುತ್ತಿದ್ದವು. ಆದರೆ ಸಂಗಂನ ಈ ಹಾಡಿಗೆ ಚಿತ್ರದಲ್ಲೂ ಎರಡೇ ಚರಣಗಳಿದ್ದವು.  ಗ್ರಾಮಫೋನ್ ತಟ್ಟೆಯಲ್ಲಿ 3ನೆಯ ಚರಣ ತೇರೀ ಖಾತಿರ್ ಮೈ ತಡಪಾ ಯೂಂ ಇರಲಿಲ್ಲ.  ಚಲನಚಿತ್ರದಲ್ಲಿ  2 ನೆಯ ಚರಣ ದೋ ನದಿಯೊಂ ಕಾ ಮೇಲ್ ಅಗರ್ ಇರಲಿಲ್ಲ.  ಆ ಮೇಲೆ ಬಿಡುಗಡೆಯಾದ  LP  ಯಲ್ಲಿ ಮೂರೂ ಚರಣಗಳಿದ್ದವೆನ್ನಿ.   ಆದರೆ ಚಿತ್ರದಲ್ಲಿ ಮೂರು ಚರಣಗಳ ಹಾಡು ನೋಡುವ ಅವಕಾಶ ಇರಲಿಲ್ಲ.  ಈಗ ಲಭ್ಯವಿರುವ  VCD, DVD, You Tube Video ಗಳಲ್ಲೂ  ಎರಡೇ ಚರಣಗಳಿವೆ. 


Wednesday 21 August 2024

ಬೇತಾಳ ಕಥೆಗಳ ಕಥೆ



ನಮಗೆಲ್ಲ ಬೇತಾಳ ಕಥೆಗಳ ಪರಿಚಯವಾದದ್ದು ಚಂದಮಾಮದಿಂದಲೇ ಆದರೂ ಮೂಲ ಬೇತಾಳ ಪಂಚವಿಂಶತಿ ಇರುವುದು ಕ್ರಿ.ಶ. 1080ರ ಆಸುಪಾಸು ಮಹಾಕವಿ ಸೋಮದೇವ ಭಟ್ಟನಿಂದ ರಚಿಸಲ್ಪಟ್ಟ ಕಥಾಸರಿತ್ಸಾಗರದಲ್ಲಿ. ಆದರೆ ಇದು ಕೂಡ ಮೂಲ ಗ್ರಂಥ ಅಲ್ಲ, ಮಹಾಕವಿ ಗುಣಾಡ್ಯ ಎಂಬವನು ಪೈಶಾಚ ಭಾಷೆಯಲ್ಲಿ ಬರೆದ ಬೃಹತ್ಕಥಾ ಎಂಬ ಗ್ರಂಥದ ಸಂಕ್ಷಿಪ್ತ ಸಂಸ್ಕೃತ ರೂಪ.

ಪಾರ್ವತಿಗೆ ದಿನವೂ ಶಿವನಿಂದ ಹೊಸ ಹೊಸ ಕಥೆಗಳನ್ನು ಕೇಳುವ ಹವ್ಯಾಸ. ಒಮ್ಮೆ ಶಿವ  ಹೊಸದೊಂದು ಕಥೆ ಹೇಳುವಾಗ ಗಣಗಳಲ್ಲೊಬ್ಬನಾದ ಪುಷ್ಪದಂತ ರಹಸ್ಯವಾಗಿ ಕೇಳಿಸಿಕೊಂಡ. ಮನೆಗೆ ಹೋಗಿ ತನ್ನ ಪತ್ನಿಗೆ ಆ ಕಥೆ ಹೇಳಿದ.  ಆಕೆ ಮರುದಿನ ಪಾರ್ವತಿಗೆ ಅದೇ ಕಥೆ ಹೇಳಿದಳು. ಶಿವ ಹೇಳಿದ ಕಥೆ ಮೊದಲೇ ಬೇರೆಯವರಿಗೆ ಗೊತ್ತಿತ್ತೆಂದು ಪಾರ್ವತಿ ಕೋಪಿಸಿಕೊಂಡಳು.  ಕೊನೆಗೆ ಇದು ಪುಷ್ಪದಂತನ ಕಾರುಬಾರು ಎಂದು ಗೊತ್ತಾಗಿ ಆತನಿಗೆ ಭೂಮಿಯಲ್ಲಿ ನರ ರೂಪದಲ್ಲಿ ಜನಿಸುವಂತೆ ಶಾಪ ನೀಡಿದಳು. ಆತನ ಪರವಾಗಿ ವಾದಿಸಿದ ಸಹಚರ ಮಾಲ್ಯವಾನ ಎಂಬ ಗಣಕ್ಕೂ ಇದೇ ಶಾಪ ಕೊಟ್ಟಳು.  ಅವರು ಪರಿಪರಿಯಾಗಿ ಕ್ಷಮಿಸುವಂತೆ ಬೇಡಿಕೊಂಡಾಗ ವಿಂಧ್ಯಾಚಲ ಪರ್ವತದಲ್ಲಿರುವ ಕಾಣಭೂತಿ ಎಂಬ ಪಿಶಾಚಿಗೆ ಎಲ್ಲ ಕಥೆಗಳನ್ನು ಹೇಳಿದಾಗ ಶಾಪ ವಿಮುಕ್ತಿ ಎಂದು ಪರಿಹಾರ ಸೂಚಿಸಿದಳು.

ಪುಷ್ಪದಂತನು  ವರರುಚಿ ಎಂಬ ಹೆಸರಿನಲ್ಲಿ ಮತ್ತು ಮಾಲ್ಯವಾನನು ಗುಣಾಢ್ಯ ಎಂಬ ಹೆಸರಿನಲ್ಲಿ ಭೂಮಿಯಲ್ಲಿ ಜನಿಸಿದರು. ವರರುಚಿಯು ಕಾಣಭೂತಿಗೆ ಹೇಳಿದ ಕಥೆಗಳನ್ನು ಆತ ತಿರುಗಿ ಗುಣಾಢ್ಯನಿಗೆ ಹೇಳಿದ. . ಗುಣಾಢ್ಯನು ಕಾಣಭೂತಿಯಿಂದ ಕೇಳಿದ ಕಥೆಗಳನ್ನು ಏಳು ಲಕ್ಷ ಶ್ಲೋಕಗಳಲ್ಲಿ ಬರೆದ. ಈ ಕಾರ್ಯಕ್ಕೆ ಆತನಿಗೆ ಏಳು ವರ್ಷಗಳು ತಗಲಿದವು. ಇವುಗಳನ್ನು ಪ್ರಕಟಿಸುವಂತೆ ಸಾತವಾಹನನೆಂಬ ರಾಜನನ್ನು ಕೇಳಿಕೊಂಡ.  ಆದರೆ ಆತ ಆಸಕ್ತಿ ತೋರಲಿಲ್ಲ.  ಇದರಿಂದ ಮನನೊಂದ ಗುಣಾಢ್ಯನು ಕಾಡಿಗೆ ಹೋಗಿ ಒಂದೊಂದೇ ಪುಟಗಳನ್ನು ಬೆಂಕಿಯಲ್ಲಿ ಸುಡತೊಡಗಿದ.  ವಿಷಯ ತಿಳಿದ ಸಾತವಾಹನನು  ಅಲ್ಲಿಗೆ ತೆರಳಿ ಕಥೆಗಳನ್ನು ತಾನು ಪ್ರಕಟಿಸಲು ಸಿದ್ಧನಿರುವುದಾಗಿ ತಿಳಿಸಿದಾಗ ಕೇವಲ ಒಂದು ಲಕ್ಷ ಶ್ಲೋಕಗಳಷ್ಟೇ ಉಳಿದಿದ್ದವು. ಆತ ಪ್ರಚುರಪಡಿಸಿದ ಈ ಸಂಗ್ರಹವೇ ಕಥಾಸರಿತ್ಸಾಗರ. ಇದರಲ್ಲಿ 18 ಖಂಡಗಳಿದ್ದು ಪಂಚತಂತ್ರ, ಅರೇಬಿಯನ್ ನೈಟ್ಸ್‌ಗಳಂತೆ ಕಥೆಗಳೊಳಗೆ ಕಥೆಗಳೊಳಗೆ ಕಥೆಗಳಿವೆ. 12ನೇ ಖಂಡದ  8ರಿಂದ 32ರ ವರೆಗಿನ 25 ಕಥೆಗಳೇ ಬೇತಾಳ ಪಂಚವಿಂಶತಿ. ಮೃಗಾಂಕದತ್ತನೆಂಬ ರಾಜನ ಮಂತ್ರಿ ವಿಕ್ರಮಕೇಸರಿಗೆ ಬ್ರಾಹ್ಮಣನೊಬ್ಬನು ಈ ಕಥೆಗಳನ್ನು ಹೇಳುತ್ತಾನೆ. ಇವುಗಳಿಗೆ ಸ್ವತಂತ್ರ ಶೀರ್ಷಿಕೆಗಳಿಲ್ಲದಿದ್ದು ಒಂದನೇ ಬೇತಾಳ, ಎರಡನೇ ಬೇತಾಳ ಹೀಗೆ ಹೆಸರಿಸಲಾಗಿದೆ. ಕೆಲವು ಕಥೆಗಳೊಳಗೆ ಕಥೆಗಳಿವೆ.  ಇತರ ಖಂಡಗಳಲ್ಲಿ ಬಂದ ಕೆಲವು ಕಥೆಗಳ ಪುನರಾವೃತ್ತಿಯೂ ಬೇತಾಳ ಕಥೆ ರೂಪದಲ್ಲಿ ಕಾಣಿಸಿಕೊಂಡಿದೆ.  ಬೇತಾಳನನ್ನು ಹೊತ್ತು ತರುವ ರಾಜನ ಹೆಸರು ತ್ರಿವಿಕ್ರಮಸೇನ ಎಂದಾಗಿದ್ದು ಅನೇಕರು ವಿಕ್ರಮ, ವಿಕ್ರಮಾದಿತ್ಯ ಎಂದೆಲ್ಲ ತಪ್ಪಾಗಿ ಉಲ್ಲೇಖಿಸುವುದಿದೆ.

ಮೊದಲನೆ ಕಂತಿನಲ್ಲಿ ತ್ರಿವಿಕ್ರಮನು ಶವವನ್ನು ಹೆಗಲ ಮೇಲೆ ಹೊತ್ತುಕೊಂಡು ಹೋಗಬೇಕಾದ ಪ್ರಮೇಯ ಏಕೆ ಬಂತು ಎಂಬ ವಿವರಗಳೊಂದಿಗೆ ಬೇತಾಳ ಹೇಳುವ ಮೊದಲನೆ ಕಥೆ ಇದೆ.  23 ಕಥೆಗಳ ಕೊನೆಯಲ್ಲಿ ಕೇಳುವ ಪ್ರಶ್ನೆಗೆ ತ್ರಿವಿಕ್ರಮನಿಗೆ ಉತ್ತರ ಗೊತ್ತಿದ್ದು ಆತ ಮೌನ ಮುರಿದುದರಿಂದ ಬೇತಾಳ ಶವದೊಂದಿಗೆ ಮತ್ತೆ ಮರದಲ್ಲಿ ತೂಗಾಡುತ್ತದೆ. 24ನೇ ಕಥೆಯಲ್ಲಿ ಓರ್ವ ವರ್ತಕ ಮತ್ತು ಆತನ ಪುತ್ರ ಅನುಕ್ರಮವಾಗಿ ಓರ್ವ ಮಗಳು ಮತ್ತು ಆಕೆಯ ತಾಯಿಯನ್ನು ವಿವಾಹವಾಗಬೇಕಾಗಿ ಬಂದು ಆ ದಂಪತಿಗಳಿಗೆ ಜನಿಸಿದ ಮಕ್ಕಳ ಪರಸ್ಪರ ಸಂಬಂಧ ಏನು ಎಂಬ ಪ್ರಶ್ನೆಗೆ ತ್ರಿವಿಕ್ರಮ ನಿರುತ್ತರನಾಗುತ್ತಾನೆ.  ಆಗ  ತ್ರಿವಿಕ್ರಮನ ತಾಳ್ಮೆ ಮತ್ತು ಶೌರ್ಯಕ್ಕೆ ಮೆಚ್ಚಿದ ಬೇತಾಳವು  ಶವ ತರಲು ಹೇಳಿದ ಭಿಕ್ಷುವು  ಆತನನ್ನು ಬಲಿಕೊಡಲಿದ್ದಾನೆಂದೂ, ಆತ ನಮಸ್ಕಾರ ಮಾಡಲು ಹೇಳಿದಾಗ ಮೊದಲು ನೀನೇ ಮಾಡಿ ತೋರಿಸು ಅನ್ನಬೇಕೆಂದೂ, ಆತ ನಮಸ್ಕಾರ ಮಾಡಿದಾಗ ಆತನ ಶಿರಚ್ಛೇದ ಮಾಡಬೇಕೆಂದೂ ಹೇಳುತ್ತದೆ.  ಉಪಸಂಹಾರ ರೂಪದ 25ನೇ ಕಂತಿನಲ್ಲಿ ತ್ರಿವಿಕ್ರಮನು ಹಾಗೆಯೇ ಮಾಡಿ ಅಖಂಡ ಸಾಮ್ರಾಜ್ಯದ ಒಡೆಯನಾಗುತ್ತಾನೆ.

ಕಥಾಸರಿತ್ಸಾಗರದಲ್ಲಿ ಬೇತಾಳ ಪಂಚವಿಂಶತಿ ಅಲ್ಲದೆ ನಾವು ಚಂದಮಾಮ ಮತ್ತು ಇತರೆಡೆ ಓದಿರುವ, ನಾಟಕ, ಸಿನಿಮಾಗಳಲ್ಲಿ ನೋಡಿರುವ  ನೂರಾರು ಕಥೆಗಳಿವೆ.  ನಮಗೆ ಸಸೇಮಿರಾ ಎಂಬ ಹೆಸರಿನಿಂದ ಗೊತ್ತಿರುವ, ರಾಜಕುಮಾರನು ಕರಡಿಯನ್ನು ಮರದಿಂದ ಕೆಳಗೆ ತಳ್ಳುವ ಕಥೆಯೂ ಇದೆ.  ಆದರೆ ಅದರಲ್ಲಿ ಕರಡಿಯು ರಾಜಕುಮಾರನ ನಾಲಗೆಯ ಮೇಲೆ ಸಸೇಮಿರಾ ಎಂದು ಬರೆಯುವುದಿಲ್ಲ ಮತ್ತು ಮತಿಭ್ರಮಣೆಯಾದಾಗ ಆತ ಅದನ್ನು ಉಚ್ಚರಿಸುವುದೂ ಇಲ್ಲ.

ತೆಲುಗು ಚಂದಮಾಮದಲ್ಲಿ ಸಪ್ಟಂಬರ್ 1955ರ ಸಪ್ಟಂಬರ್‌ನಲ್ಲಿ ಹಾಗೂ ಕನ್ನಡ ಮತ್ತು ಇತರ ಭಾಷೆಗಳಲ್ಲಿ ಆ ವರ್ಷದ ಅಕ್ಟೋಬರ್‌ ತಿಂಗಳಲ್ಲಿ ಬೇತಾಳ ಕಥೆಗಳ ಪ್ರಕಟಣೆ ಆರಂಭವಾಯಿತು. ತೆಲುಗಿನ ಕಥೆಗಳೇ ಇತರ ಭಾಷೆಗಳಲ್ಲಿ ಬರುತ್ತಿದ್ದುದರಿಂದ ಹೀಗೆ ಒಂದು ತಿಂಗಳ ಅಂತರ ಇರುತ್ತಿತ್ತು. ಮೊದಲ ಕಥೆಗೆ ಚಿತ್ರಾ ಅವರ ಚಿತ್ರಗಳಿದ್ದವು. ತ್ರಿವಿಕ್ರಮನು ಶವವನ್ನು ಹೆಗಲ ಮೇಲೆ ಹೊತ್ತುಕೊಂಡು ಹೋಗುವ ಶೀರ್ಷಿಕೆ ಚಿತ್ರವನ್ನು  1960 ಮತ್ತು 62ರಲ್ಲಿ ಅವರು ಹೊಸದಾಗಿ ಬರೆದರು. 1964ರಲ್ಲಿ ಶಂಕರ್ ಬೇರೆ ಶೀರ್ಷಿಕೆ ಚಿತ್ರ ರಚಿಸಿದರು. ಚಂದಮಾಮ ಜೀವಂತ ಇರುವವರೆಗೂ ವರ್ಣಮಯ ಅವತಾರದೊಂದಿಗೆ ಈ ಚಿತ್ರವೇ ಮುಂದುವರೆಯಿತು. ಇಲ್ಲಿ ಕಾಣಿಸುವ ಚಿತ್ರಗಳಲ್ಲಿ ಎಡಗಡೆಯ ಮೂರು ಚಿತ್ರಾ ಚಿತ್ರಿಸಿದವು.  ಉಳಿದೆರಡು ಶಂಕರ್ ರಚನೆಗಳು.



ಸ್ವಾರಸ್ಯವೆಂದರೆ  ಚಂದಮಾಮದಲ್ಲಿ  ಮೊದಲ ಕಂತಿನಲ್ಲಿ ಕಾಣಿಸಿಕೊಂಡದ್ದು ಬೇತಾಳ ಪಂಚವಿಂಶತಿಯ ಮೊದಲ ಕಥೆ ಆಗಿರದೆ 12ನೆಯದಾಗಿತ್ತು!  ನಂತರ ಪ್ರಕಟವಾದ ಬೇತಾಳ ಕಥೆಗಳಲ್ಲಿ ಕೂಡ ಕೆಲವು ಮಾತ್ರ ಮೂಲ ಪಂಚವಿಂಶತಿಯಿಂದ ಆಯ್ದವುಗಳು.  ಉಳಿದವೆಲ್ಲ ಕಲ್ಪಿತ ಕಥೆಗಳು. ಪಂಚವಿಂಶತಿಯ ಕೆಲವು ಕಥೆಗಳು ತುಂಬಾ ದೀರ್ಘ ಮತ್ತು ಕೆಲವು ತುಂಬಾ ಚುಟುಕಾಗಿರುವುದು ಇದಕ್ಕೆ ಕಾರಣವಾಗಿರಬಹುದು. ಇದನ್ನು ಚಂದಮಾಮ ಹೇಳಿಕೊಂಡಿತ್ತು ಕೂಡ.  ಕೆಲವು ವರ್ಷಗಳ ನಂತರ ಬೇತಾಳ ಕಥೆಗಳು ಎಂಬ ಉಪಶೀರ್ಷಿಕೆಯ ಮುಂದೆ ಪ್ರಶ್ನ ಚಿಹ್ನೆ ಇರುತ್ತಿದ್ದುದನ್ನೂ ಅನೇಕರು ಗಮನಿಸಿರಬಹುದು.

ಕನ್ನಡದಲ್ಲಿ ಬೇತಾಳ ಕಥೆ ಆರಂಭವಾದ 1955ರ ಅಕ್ಟೋಬರ್ ತಿಂಗಳ  ಚಂದಮಾಮ ಲಭ್ಯವಿಲ್ಲ.  ಆದರೆ ಸುದೈವವಶಾತ್  ಆ ಸಂಚಿಕೆಯ ಬೇತಾಳ ಕಥೆಯ ಭಾಗ ನನ್ನ ಸಂಗ್ರಹದಲ್ಲಿದ್ದು  ಅದನ್ನು ಇಲ್ಲಿ ಪ್ರಸ್ತುತಪಡಿಸುತ್ತಿದ್ದೇನೆ.  ಇದರಲ್ಲಿ ತ್ರಿವಿಕ್ರಮನು ಬೇತಾಳನನ್ನು ಹೊತ್ತು ತರಬೇಕಾಗಿ ಬಂದ ಸಂದರ್ಭದ ವಿವರಗಳು ಮತ್ತು ಮೊದಲ ಕಥೆ ಇವೆ. ತ್ರಿವಿಕ್ರಮನು ಶವವನ್ನು ಹೊತ್ತುಕೊಂಡು ಹೋಗುವ  ಚಿತ್ರ ಮತ್ತು ಕೆಲವೊಮ್ಮೆ ಕಥೆಯ ಕೊನೇ ಪುಟದಲ್ಲಿ  ಮತ್ತೆ ಮರವನ್ನೇರಿದ ಬೇತಾಳನ ಹಿಂದೆ ಆತ ಓಡುತ್ತಿರುವ  silhoutte ಶೈಲಿಯ ಚಿತ್ರಗಳನ್ನು ಮಾತ್ರ ನಾವು ನೋಡಿರುತ್ತೇವೆ. ಈ ಸಂಚಿಕೆಯಲ್ಲಿ ಆತ ಭಿಕ್ಷುವಿನ ಮುಂದೆ ನಿಂತಿರುವ ಅಪರೂಪದ ಒಂದು ಚಿತ್ರವೂ ನೋಡಲು ಸಿಗುತ್ತದೆ. ಆದರೆ ಕಲ್ಪಿತ ಬೇತಾಳ ಕಥೆಗಳು ನಿರಂತರವಾಗಿ ಮುಂದುವರೆದುದರಿಂದ ಉಪಸಂಹಾರದಲ್ಲಿ ಆತನ ಇನ್ನಷ್ಟು ಚಿತ್ರಗಳನ್ನು ಬರೆಯುವ ಅವಕಾಶ ಚಂದಮಾಮದ ಚಿತ್ರಕಾರರಿಗೆ ಮತ್ತು ನೋಡುವ ಅವಕಾಶ  ನಮಗೆ  ಸಿಗದೇ ಹೋಯಿತು.