Sunday, 29 September 2019

ಹೀಗೊಂದು ರಾಜಕುಮಾರ್ ಹುಡುಕಾಟ

ನಾನು ರೇಡಿಯೊ ಸಿಲೋನ್ ನಿಯಮಿತವಾಗಿ ಕೇಳುವುದು ಬಿಟ್ಟು ವರ್ಷಗಳೇ ಕಳೆದಿವೆ.  ಒಂದು ಕಾಲದಲ್ಲಿ ಕಮರ್ಷಿಯಲ್  ರೇಡಿಯೊ ಸ್ಟೇಷ‌ನ್‌ಗಳ ರಾಜನೆನಿಸಿಕೊಂಡಿದ್ದ ಈ ನಿಲಯ ಅಹೋಬನ್ ಎಂಬ ಬಂಗಾಲಿ ಭಾಷೆಯ ಏಕೈಕ ಪ್ರಾಯೋಜಿತ ಕ್ರೈಸ್ತ ಧಾರ್ಮಿಕ ಕಾರ್ಯಕ್ರಮದ ಆಧಾರದಿಂದ ಈಗಲೂ  ಬೆಳಗ್ಗೆ 6ರಿಂದ 8 ಗಂಟೆ ವರೆಗೆ ದಿನಕ್ಕೆ ಎರಡು ತಾಸು ಹಿಂದಿ ಕಾರ್ಯಕ್ರಮಗಳನ್ನು ಪ್ರಸಾರ ಮಾಡುತ್ತಿದೆ. ತಾಂತ್ರಿಕ ಕಾರಣಗಳಿಂದಾಗಿ ಮಧ್ಯೆ 6-30ರಿಂದ 7-30ರ ವರೆಗೆ  25 ಮೀಟರ್‌ 11905 KHz ಶಾರ್ಟ್ ವೇವ್ ಪ್ರಸಾರ ಸ್ಥಗಿತಗೊಳ್ಳುತ್ತದೆ.   ಆದರೆ ಈ ಸಮಯದಲ್ಲೂ www.slbc.lk ಜಾಲತಾಣದ ವೆಬ್ ಸ್ಟ್ರೀಮಿಂಗ್ ಚಾಲ್ತಿಯಲ್ಲಿರುತ್ತದೆ.  ಅದರ ಅನೇಕ ಆಕರ್ಷಕ ಕಾರ್ಯಕ್ರಮಗಳು ನಿಂತು ಹೋಗಿದ್ದರೂ ಬೆಳಗ್ಗೆ 7-30ರಿಂದ 8ರ ವರೆಗೆ ಪ್ರಸಾರವಾಗುವ ಪುರಾನೀ ಫಿಲ್ಮೋಂ ಕಾ ಸಂಗೀತ್  ಈಗಲೂ ಇದೆ.  ಅದರ ಕೊನೆಯಲ್ಲಿ  ಕೆ.ಎಲ್.ಸೈಗಲ್ ಹಾಡು ಕೇಳಿಸುವ ಸಂಪ್ರದಾಯವೂ ಮುಂದುವರಿದಿದೆ.

ಮೊನ್ನೆ ಏಕೋ ಆ ನಿಲಯವನ್ನು ಮತ್ತೆ ಕೇಳುವ ಮನಸ್ಸಾಗಿ ಅಂತರ್ಜಾಲದ ಮೂಲಕ ಟ್ಯೂನ್ ಮಾಡಿಕೊಂಡಿದ್ದೆ.  ಅಂದು ಬುಧವಾರವಾಗಿದ್ದು ಆ ದಿನ ಅಲ್ಲಿಯ ಉದ್ಘೋಷಕಿ ಜ್ಯೋತಿ ಪರ್‌ಮಾರ್(ಈಕೆ ಸಿಲೋನಿನ ಉತ್ತುಂಗ ಕಾಲದ ಅನೌಂಸರ್ ದಲವೀರ್ ಸಿಂಗ್ ಪರಮಾರ್ ಅವರ ಪುತ್ರಿ) ಪುರಾನೀ ಫಿಲ್ಮೋಂ ಕಾ ಸಂಗೀತ್ ಕಾರ್ಯಕ್ರಮದಲ್ಲಿ ಕಮ್ ಸುನೇ ಮತ್ತು ಅನ್ ಸುನೇ ಹಾಡುಗಳನ್ನು ಕೇಳಿಸುತ್ತಾರೆ. ‘ಮೊದಲಿಗೆ ಸುಬ್ಬರಾಮನ್ ಮತ್ತು ವಿಶ್ವನಾಥನ್ ಸಂಗೀತ ನಿರ್ದೇಶನದಲ್ಲಿ ಚಂಡಿರಾಣಿ ಚಿತ್ರಕ್ಕಾಗಿ ಭಾನುಮತಿ ಹಾಡಿರುವ ಗೀತೆ ಆಲಿಸಿ’ ಎಂದು ಆಕೆ ಹೇಳುತ್ತಲೇ ನನ್ನ ಕಿವಿ ನೆಟ್ಟಗಾಯಿತು. ಚಂಡಿರಾಣಿ ಎಂಬ ತೆಲುಗು ಚಿತ್ರದ ಜಾಹೀರಾತುಗಳನ್ನು ಹಳೆ ಚಂದಮಾಮಗಳಲ್ಲಿ ನೋಡಿದ್ದೆ.  ಆದರೆ ಆ ಚಿತ್ರ ಹಿಂದಿಯಲ್ಲೂ ಇರುವುದು ಗೊತ್ತಿರಲಿಲ್ಲ.  ಬಹುಶಃ ಹಿಂದಿಗೆ ಡಬ್ ಆಗಿರಬಹುದು ಎಂದೆಣಿಸಿ ಗೂಗಲೇಶ್ವರನ ಮೊರೆ ಹೋದಾಗ ಅದು 1953ರಲ್ಲಿ ಏಕ ಕಾಲದಲ್ಲಿ ತೆಲುಗು, ತಮಿಳು ಮತ್ತು ಹಿಂದಿಯಲ್ಲಿ ಬೇರೆ ಬೇರೆಯಾಗಿ ತಯಾರಾದದ್ದು, ತಮಿಳು ತೆಲುಗಲ್ಲಿ ರೇಲಂಗಿ ವಹಿಸಿದ್ದ ಪಾತ್ರವನ್ನು ಹಿಂದಿಯಲ್ಲಿ ಆಗಾ ನಿರ್ವಹಿಸಿದ್ದು ಬಿಟ್ಟರೆ ಎನ್.ಟಿ.ರಾಮರಾವ್, ಎಸ್.ವಿ.ರಂಗರಾವ್, ಭಾನುಮತಿ ಮುಂತಾದವರ  ತಾರಾಗಣವೇ ಎಲ್ಲ ಭಾಷೆಗಳಲ್ಲಿ  ಇದ್ದದ್ದು, ಸಂಗೀತ ನಿರ್ದೇಶಕ ಸುಬ್ಬರಾಮನ್ ಅರ್ಧ ಚಿತ್ರ ಮುಗಿಯುವಾಗ ನಿಧನರಾಗಿ ಅವರ ಶಿಷ್ಯ ಎಂ.ಎಸ್. ವಿಶ್ವನಾಥನ್  ಆ ಕೆಲಸ ಮುಂದುವರಿಸಿದ್ದು, ಭಾನುಮತಿ ಚಿತ್ರರಂಗದ ಮೊದಲ ಮಹಿಳಾ ನಿರ್ದೇಶಕಿಯಾಗಿ ಇತಿಹಾಸ ರಚಿಸಿದ್ದು, ಮೂರು ಭಾಷೆಗಳಲ್ಲಿ ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಒಂದೇ ದಿನ  ಬಿಡುಗಡೆ ಆದ ಮೊದಲ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾದದ್ದು ಮುಂತಾದ ಅನೇಕ ವಿಷಯಗಳು ತಿಳಿದವು. ಹಿಂದಿ ಆವೃತ್ತಿಯಲ್ಲಿ ಎನ್.ಟಿ. ರಾಮರಾವ್ ಸ್ಥಾನದಲ್ಲಿ ದಿಲೀಪ್ ಕುಮಾರ್ ನಟಿಸಿದ್ದರು ಎಂಬ ತಪ್ಪು ಮಾಹಿತಿಯೂ ಕೆಲವೆಡೆ ಇತ್ತು! ಹಿಂದೂ ಪತ್ರಿಕೆಯಲ್ಲಿ ಈ ಚಿತ್ರದ ಬಗ್ಗೆ ಪ್ರಕಟವಾಗಿದ್ದ ಒಂದು ವಿಸ್ತೃತ ಲೇಖನವೂ ದೊರೆಯಿತು.  ಸಂಗೀತ ನಿರ್ದೇಶಕ ಸುಬ್ಬರಾಮನ್ ದಕ್ಷಿಣ ಭಾರತದ ಸಿನಿಮಾ ಸಂಗೀತ ಕ್ಷೇತ್ರದ ಭೀಷ್ಮ ಪಿತಾಮಹರಂತೆ ಇದ್ದವರು.  ವಿಶ್ವನಾಥನ್ ಮತ್ತು ನಂತರ ಅವರೊಡನೆ ಸೇರಿಕೊಂಡ ರಾಮಮೂರ್ತಿ, ಟಿ.ಜಿ. ಲಿಂಗಪ್ಪ, ಜಿ.ಕೆ. ವೆಂಕಟೇಶ್ ಮುಂತಾದ ಖ್ಯಾತನಾಮರೆಲ್ಲ ಅವರ ಗರಡಿಯಲ್ಲೇ ಪಳಗಿದವರು. ಚಂಡಿರಾಣಿಯಂತೆ ದೇವದಾಸು ಕೂಡ ಅವರು ಅರ್ಧ ಮುಗಿಸಿ ವಿಶ್ವನಾಥನ್  ಪೂರ್ತಿಗೊಳಿಸಿದ ಚಿತ್ರ.



ಹೀಗೆ ಹಿಂದಿ ಚಂಡಿರಾಣಿಯ ಹಾಡನ್ನು ರೇಡಿಯೊ ಸಿಲೋನಿನಲ್ಲಿ ಕೇಳಿ ಆ ಚಿತ್ರದ ಚರಿತ್ರೆಯನ್ನೂ ಒಂದಷ್ಟು ಅರಿತಮೇಲೆ  ಆ ಚಿತ್ರವನ್ನು ವೀಕ್ಷಿಸಬೇಕೆಂಬ ಆಸೆ ಉತ್ಕಟವಾಯಿತು.  ಈಗೇನೂ ಇಂಥ ಚಿತ್ರಗಳು ಥಿಯೇಟರುಗಳಲ್ಲಿ ಯಾವಾಗ ಮಾರ್ನಿಂಗ್ ಶೋಗೆ ಬರುತ್ತವೆ ಅಥವಾ ಟಿ.ವಿ.ಯಲ್ಲಿ ಪ್ರಸಾರವಾಗುತ್ತವೆ ಎಂದು ಕಾಯಬೇಕಾಗಿಲ್ಲವಲ್ಲ. ನೇರವಾಗಿ ಯೂಟ್ಯೂಬ್‌ಗೆ ಮೊರೆ ಹೋದೆ.  ಹಿಂದಿ ಮತ್ತು ತಮಿಳು ವರ್ಶನ್‌ಗಳು ಇಲ್ಲದಿದ್ದರೂ ತೆಲುಗಿನ ಉತ್ತಮ ಪ್ರತಿ ಲಭ್ಯವಿತ್ತು. ವೀಕ್ಷಿಸಲು ಆರಂಭಿಸಿ ಟೈಟಲ್‌ಗಳು ತೆರೆಯಮೇಲೆ ಮೂಡುತ್ತಾ ಹೋಗುವಾಗ ರಾಜ್‌ಕುಮಾರ್ ಎಂಬ ಹೆಸರು ಕಂಡಂತಾಯಿತು.  ರೀವೈಂಡ್ ಮಾಡಿ ಮತ್ತೆ ನೋಡಿದೆ.  ಹೌದು, ರಾಜ್‌ಕುಮಾರ್ ಎಂಬ ಹೆಸರೇ!


ನನ್ನ ಆಶ್ಚರ್ಯಕ್ಕೆ ಪಾರವೇ ಇಲ್ಲವಾಯಿತು.  ಮುತ್ತುರಾಜ್ ಆಗಿದ್ದವರು ರಾಜ್‌ಕುಮಾರ್ ಎಂದು ಹೆಚ್.ಎಲ್.ಎನ್. ಸಿಂಹ ಅವರಿಂದ ಹೊಸ ಹೆಸರು ಹೊಂದಿ 1954ರ ಬೇಡರ ಕಣ್ಣಪ್ಪ ಸಿನಿಮಾ ಮೂಲಕ ಚಿತ್ರರಂಗ ಪ್ರವೇಶ ಮಾಡಿದ್ದು ಗೊತ್ತಿತ್ತು.  ಬೇಡರ ಕಣ್ಣಪ್ಪ ಚಿತ್ರೀಕರಣದ ಮಧ್ಯೆ ಬಿಡುವು ಸಿಕ್ಕಾಗ ಅವರೇ ಈ ಚಿತ್ರದಲ್ಲಿ ಚಿಕ್ಕ ಪಾತ್ರವನ್ನೇನಾದರೂ ಮಾಡಿರಬಹುದೇ ಎಂಬ ಸಂದೇಹ ನನ್ನನ್ನು ಕಾಡತೊಡಗಿತು. ಚಿತ್ರವನ್ನು ವೀಕ್ಷಿಸುತ್ತಾ ಹೋದಾಗ ವೀರಸಿಂಹ ಎಂಬ ರಾಜನ ಪಾತ್ರದಲ್ಲಿ ರಾಜ್ ಹೋಲಿಕೆಯೂ ಕಂಡಿತು!  ಇಂಥ ಸಂದರ್ಭಗಳಲ್ಲಿ ನನಗೆ ನೆರವಾಗುವವರು ಫೇಸ್ ಬುಕ್ ಗೆಳೆಯ ಸುದರ್ಶನ ರೆಡ್ಡಿ.  ಕೂಡಲೇ ಫೋಟೊಗಳನ್ನೊಳಗೊಂಡ ಪೋಸ್ಟ್ ಒಂದರ ಮೂಲಕ ಈ ವಿಚಾರವನ್ನು ಅವರ ಮುಂದಿಟ್ಟೆ.  ತಕ್ಷಣ ಸ್ಪಂದಿಸಿದ ಅವರು ಅದು ನಮ್ಮ ರಾಜ್‌ಕುಮಾರ್ ಆಗಿರಲು ಸಾಧ್ಯವಿಲ್ಲ, ಅದೇ ಹೆಸರಿನ ಬೇರೆ ನಟ ಆಗಿರಬಹುದು ಅಂದರು.  ಆದರೆ ಮೊದಲೇ ಆ ಹೆಸರಿನ ನಟ ಮದರಾಸು ಕೇಂದ್ರವಾದ ದಕ್ಷಿಣ ಚಿತ್ರರಂಗದಲ್ಲಿ ಇದ್ದಿದ್ದರೆ ಸಿಂಹ ಅವರು ಆ ಹೆಸರು ಸೂಚಿಸುತ್ತಿರಲಿಲ್ಲ ಎಂದು ನನ್ನ ತರ್ಕವಾಗಿತ್ತು. ಇನ್ನು ಕೆಲವರು 1954ರಲ್ಲಿ ಅವರಿಗೆ ಆ ಹೆಸರು ಬಂದದ್ದರಿಂದ ಅವರಾಗಿರಲು ಸಾಧ್ಯವಿಲ್ಲ ಅಂದರು.  ಆದರೆ ಬೇಡರ ಕಣ್ಣಪ್ಪ 1954ರಲ್ಲಿ ಬಿಡುಗಡೆಯಾದರೂ ಚಿತ್ರೀಕರಣ ಸಾಕಷ್ಟು ಮುಂಚಿತವಾಗಿ ಆರಂಭವಾಗಿ ಅಷ್ಟರೊಳಗೆ ಅವರಿಗೆ ನವನಾಮಕರಣವಾಗಿರುವ ಸಾಧ್ಯತೆ ಇದೆಯೆಂದು ನನ್ನ ಅನಿಸಿಕೆಯಾಗಿತ್ತು.

ಅಷ್ಟರಲ್ಲಿ ಸುದರ್ಶನ ರೆಡ್ಡಿ ತಮ್ಮ ತೆಲುಗು ಗೆಳೆಯರ ಬಳಗದಲ್ಲಿ ವಿಚಾರಿಸಿ ರಾಜನ ಪಾತ್ರ ವಹಿಸಿದ ನಟನ ಹೆಸರು ಅಮರನಾಥ್ ಎಂಬ ಮಾಹಿತಿ ನೀಡಿದರು.  ನಾನೂ ಅಷ್ಟರಲ್ಲೇ ಗೂಗಲೇಶ್ವರನ ಸಹಾಯದಿಂದ ಈ ಮಾಹಿತಿ ಪಡೆದಿದ್ದೆ.  ಆದರೆ  ಗೂಗಲ್/ವಿಕಿಪೀಡಿಯಾಗಳಲ್ಲಿ ತಪ್ಪುಗಳಿರುವುದು ಸಾಮಾನ್ಯ ಎಂದು ಗೊತ್ತಿರುವುದರಿಂದ ಅದಕ್ಕೆ ಮಹತ್ವ ಕೊಟ್ಟಿರಲಿಲ್ಲ.  ಆದರೆ ಚಿತ್ರದ ಆ ಭಾಗವನ್ನು ಮತ್ತೆ ಮತ್ತೆ ನೋಡಿದಾಗ ಕೆಲವು ಕೋನಗಳಲ್ಲಿ ರಾಜ್ ಹೋಲಿಕೆ ಇದ್ದರೂ ಅದು ಅವರಲ್ಲ ಎಂಬ ಅಂಶ ನನಗೂ ಖಚಿತವಾಯಿತು. ಹಾಗಿದ್ದರೆ ರಾಜ್‌ಕುಮಾರ್ ಕಾಣಿಸಿಕೊಂಡದ್ದು ಯಾವ ಪಾತ್ರದಲ್ಲಿ? ನಾನು ಮತ್ತು ಸುದರ್ಶನ ರೆಡ್ಡಿ ಚಿತ್ರವನ್ನು ಎಷ್ಟು ಸಲ ನೋಡಿದರೂ ರಾಜ್‌ಕುಮಾರ್ ಮಾತ್ರ ಎಲ್ಲೂ ಕಾಣಿಸಲಿಲ್ಲ.

ಈ ಮಧ್ಯೆ ಚಿತ್ರರಂಗದ ಹಿರಿಯರಾದ ಎಸ್.ಕೆ. ಭಗವಾನ್ ಅಥವಾ ಎಂ.ಶಿವರಾಂ ಅವರಿಗೆ ಈ ಬಗ್ಗೆ ಏನಾದರೂ ಗೊತ್ತಿರಬಹುದು ಎಂದೆನಿಸಿ ಈ ವಿಚಾರವನ್ನು ಎನ್.ಎಸ್. ಶ್ರೀಧರಮೂರ್ತಿಯವರ ಮುಂದಿಟ್ಟೆ. ಆ  ಮಹನೀಯರು ರಾಜ್ ಚಂಡಿರಾಣಿ ಚಿತ್ರದಲ್ಲಿ ಅಭಿನಯಿಸಿರುವ ಸಾಧ್ಯತೆಯನ್ನು ಸಂಪೂರ್ಣವಾಗಿ ಅಲ್ಲಗಳೆದರು ಎಂದ ಶ್ರೀಧರಮೂರ್ತಿ ರಾಜ್ ಅವರ ಜೀವನ ಚರಿತ್ರೆ ಬರೆದ ಪ್ರಹ್ಲಾದ ರಾವ್ ಈ ಕುರಿತು  ದಾಖಲೆಗಳನ್ನು ಹುಡುಕಿ ತಿಳಿಸುವುದಾಗಿ ಹೇಳಿದ್ದಾರೆ ಎಂಬ ಸುದ್ದಿ ನೀಡಿದರು.



ನಮ್ಮ ರಾಜ್‌ಕುಮಾರ್ ಅಲ್ಲದಿದ್ದರೆ ಆ ಹೆಸರಿನ ಬೇರೆ ನಟ ಇರಬೇಕು.  ಯಾರಾತ ಎಂದು ಹುಡುಕುವ ಸರದಿ ಈಗ ನಮ್ಮದಾಯಿತು. ನಾನು ಛಲ ಬಿಡದೆ ಅಂತರ್ಜಾಲಕ್ಕೆ ಪಾತಾಳಗರಡಿ ಹಾಕಿ ಇನ್ನಷ್ಟು ಆಳದಲ್ಲಿ ಹುಡುಕಿದಾಗ ಚಂಡಿರಾಣಿ ಸಿನಿಮಾದ ಹಾಡುಗಳ ಪುಸ್ತಕವೊಂದು ದೊರಕಿತು.  ಸುದೈವಕ್ಕೆ ಅದರಲ್ಲಿ ನಟರ ಹೆಸರು ಮತ್ತು ಅವರು ವಹಿಸಿದ ಪಾತ್ರದ ಹೆಸರುಗಳೂ ಇದ್ದವು.  ಆದರೆ ರಾಜ್‌ಕುಮಾರ್ ಹೆಸರಿನ ನಟ ನಿರ್ವಹಿಸಿದ ಪಾತ್ರದ ‘ದೊ’ ಅಕ್ಷರ ಮಾತ್ರ ಕಾಣಿಸುತ್ತಿದ್ದು ಅಳಿದ ಭಾಗ ಹರಿದು ಹೋಗಿತ್ತು!  ಇದನ್ನು ಸುದರ್ಶನ ರೆಡ್ಡಿ ಅವರ ಗಮನಕ್ಕೆ ತಂದಾಗ ಇದು ದೊರ ಅಥವಾ ದೊಂಗ ಇರುವ ಸಾಧ್ಯತೆ ಇದ್ದು ಅಲ್ಲಿ ಒಂದೇ ಅಕ್ಷರದ ಜಾಗ ಹರಿದು ಹೋದದ್ದರಿಂದ ಅದು ದೊರ ಆಗಿರಬೇಕು ಎಂಬ ತೀರ್ಮಾನಕ್ಕೆ ಬಂದರು.  ಈಗ ಚಂಡಿರಾಣಿ ಸಿನಿಮಾದಲ್ಲಿ ದೊರ ಅಂದರೆ ಯಾರು ಎಂದು ಹುಡುಕುವ ಹೊಸ ಸವಾಲು  ಎದುರಾಯಿತು.  ಇನ್ಯಾರಾದರೂ ಆಗಿದ್ದರೆ ಹೋಗಲಿ ಎಂದು ಅಷ್ಟಕ್ಕೆ ಬಿಟ್ಟು ಬಿಡುತ್ತಿದ್ದರು. ಆದರೆ ಕಣ್ಣಲ್ಲಿ ಎಣ್ಣೆ ಹಾಕಿ ಮತ್ತೆ ಚಿತ್ರವನ್ನು ವೀಕ್ಷಿಸಿದ ಸುದರ್ಶನ ರೆಡ್ಡಿ ಚಂಡಿ ಪಾತ್ರದೊಡನೆ ಕತ್ತಿ ಕಾಳಗ ಮಾಡುವ ಖಳನನ್ನು ಆತನ ಸಹಚರರು ಒಂದೇ ಒಂದು ಸನ್ನಿವೇಶದಲ್ಲಿ ದೊರ ಎಂದು ಸಂಬೋಧಿಸುವುದನ್ನು ಕಂಡು ಹಿಡಿದೇ ಬಿಟ್ಟರು! ಅಲ್ಲಿಗೆ ಚಂಡಿರಾಣಿಯಲ್ಲಿ ನಟಿಸಿದ ರಾಜ್‌ಕುಮಾರ್ ರಹಸ್ಯ ಬಯಲಾದಂತಾಯಿತು. ಸದ್ಯ ಅದು ನಮ್ಮ ರಾಜ್‌ಕುಮಾರ್ ಅಲ್ಲ ಎಂದು ಮೀನಾ ಭಾರದ್ವಾಜ್ ಸಹಿತ ಅನೇಕ ರಾಜ್ ಅಭಿಮಾನಿಗಳಿಗೆ ಸಮಾಧಾನವೂ ಆಯಿತು. ಪುರುಷೋತ್ತಮನಾದರೂ ಇಷ್ಟು ಸೂಕ್ಷ್ಮವಾಗಿ ಪತ್ತೇದಾರಿ ನಡೆಸುತ್ತಿದ್ದನೋ ಇಲ್ಲವೋ ಎಂದು ನನಗೆ ಅನ್ನಿಸಿತು.



ಇಷ್ಟಕ್ಕೇ ಸುಮ್ಮನಿರದೆ ಆ ನಟ ಇನ್ಯಾವುದಾದರೂ ಚಿತ್ರದಲ್ಲಿ ನಟಿಸಿದ್ದಾನೆಯೇ ಎಂದು ತಿಳಿಯಬೇಕೆಂದು ನನಗನ್ನಿಸಿತು.  ಸ್ವಲ್ಪ  ಹುಡುಕಾಟ ನಡೆಸಿದಾಗ ಆಡಪಡುಚು(ಕನ್ನಡದ ಒಂದೇ ಬಳ್ಳಿಯ ಹೂಗಳು) ಚಿತ್ರದಲ್ಲಿ  ಆತ ಇರುವುದು ತಿಳಿಯಿತು.  ಬೇರೆ ಚಿತ್ರಗಳಲ್ಲೂ  ನಟಿಸಿರಬಹುದು. ಆಗಲೇ ಹಿಂದಿಯಲ್ಲೊಬ್ಬ ರಾಜ್‌ಕುಮಾರ್ ಇದ್ದರೂ ಅದೇನೋ ದೂರದ ಸಂಗತಿ.  ಆದರೆ ದಕ್ಷಿಣ ಭಾರತದಲ್ಲೇ ಆ ಹೆಸರಿನ ನಟ ಮೊದಲೇ ಇದ್ದುದು ಸಿಂಹ ಅವರಿಗಾಗಲಿ ಎ.ವಿ.ಎಂ.ನ ಮೇಯಪ್ಪನ್ ಅವರಿಗಾಗಲಿ ಏಕೆ ತಿಳಿಯದೆ ಹೋಯಿತು ಎಂಬುದು ಉತ್ತರ ಸಿಗದ ಪ್ರಶ್ನೆ. ಕಾಳಹಸ್ತಿ ಮಹಾತ್ಮ್ಯಂ ತೆರೆ ಕಂಡಾಗ ರಾಜ್‌ಕುಮಾರ್ ಎಂಬ ಹೆಸರು ನೋಡಿ  ಕೆಲವರಿಗಾದರೂ(ಕನಿಷ್ಠ ಆ ನಟನಿಗಾದರೂ!) ಖಂಡಿತ ಗೊಂದಲ ಉಂಟಾಗಿರಬಹುದು.

 




Sunday, 22 September 2019

ಪಿ.ಬಿ.ಎಸ್ ಚಿತ್ರ ಸಂಪುಟ


ಮೊದಲೆಲ್ಲ ಗಾಯಕ ಗಾಯಕಿಯರ ಧ್ವನಿಯ ಪರಿಚಯ ನಮಗಿರುತ್ತಿತ್ತೇ ಹೊರತು ಅವರು ನೋಡಲು ಹೇಗಿರುತ್ತಾರೆಂದು ನಾವು ಕಲ್ಪನೆಯಷ್ಟೇ ಮಾಡಿಕೊಳ್ಳಬೇಕಿತ್ತು. ಪತ್ರಿಕೆಗಳಲ್ಲೂ ತೆರೆಯ ಹಿಂದಿನವರ ಚಿತ್ರ ಕಾಣಸಿಗುತ್ತಿದ್ದುದು ಇಲ್ಲವೆನ್ನುವಷ್ಟು ಕಮ್ಮಿ. ನಾನು ಮೊದಲು ಪಿ.ಬಿ.ಶ್ರೀನಿವಾಸ್ ಅವರ ಚಿತ್ರ ನೋಡಿದ್ದು ಸುಧಾ ಪತ್ರಿಕೆ ಆರಂಭವಾದ ವರ್ಷ ಅದರ ಹಿಂಬದಿಯ ರಕ್ಷಾಪುಟದ ಒಳಭಾಗದಲ್ಲಿ.  ಆಗ ಖ್ಯಾತನಾಮರ ಪೂರ್ಣ ಪುಟದ ಚಿತ್ರವನ್ನು ಈ ರೀತಿ ಪ್ರಕಟಿಸಿ ಅವರ ಬಗ್ಗೆ ವಿವರಗಳನ್ನು ನೀಡುವ ಪರಿಪಾಠವನ್ನು ಸುಧಾ ಪಾಲಿಸಿಕೊಂಡು ಬಂದಿತ್ತು.   ಟಿ.ವಿ. ಯುಗ ಆರಂಭವಾದ ಮೇಲೆ ನೇಪಥ್ಯದಲ್ಲಿದ್ದವರೆಲ್ಲ ನಮ್ಮ ಮನೆ ಹಜಾರಕ್ಕೇ ಬರುವಂತಾಯಿತು.  ಇತರ ಕಲಾವಿದರ ಜೊತೆ ಪಿ.ಬಿ.ಎಸ್ ಕೂಡ ಕಿರುತೆರೆಯಲ್ಲಿ ಕಾಣಿಸಿಕೊಂಡರು. ಅವರ ಬಗ್ಗೆ ಚಂದನ ವಾಹಿನಿಯಲ್ಲಿ ಒಂದು ಧಾರಾವಾಹಿ ಕೂಡ ಪ್ರಸಾರವಾಯಿತು. ಈಗ ಅಂತರ್ಜಾಲದಲ್ಲಿ, ಪತ್ರಿಕೆಗಳಲ್ಲಿ ಅವರ ಚಿತ್ರಗಳು ಸಿಗುತ್ತವೆ. ಆದರೆ ಅಲ್ಲೆಲ್ಲ ನಮಗೆ ಕಾಣಿಸುವುದು ಜರಿ ರುಮಾಲು ಧರಿಸಿ ಬಣ್ಣದ ಶಾಲು ಹೊದ್ದ ಪಿ.ಬಿ.ಎಸ್  ರೂಪ ಮಾತ್ರ.  ತಮ್ಮ ವೃತ್ತಿಜೀವನದ ವಿವಿಧ ಘಟ್ಟಗಳಲ್ಲಿ ಅವರು ಹೇಗಿದ್ದರೆಂದು ಬಹಳ ಮಂದಿಗೆ ಗೊತ್ತಿಲ್ಲ. ನನ್ನ ಸಂಗ್ರಹದಲ್ಲಿರುವ ಅಂಥ ಕೆಲವು ಚಿತ್ರಗಳು ಇಲ್ಲಿವೆ.

ಇದು ಪಿ.ಬಿ.ಎಸ್ ಅವರ ಹದಿಹರೆಯದ ಫೋಟೊ ಆಗಿರಬಹುದು.  ಯಾವುದೋ ಭಜನೆ ಹಾಡುತ್ತಿದ್ದಂತಿದೆ.

  

ಇದು ಅವರ ಯೌವನ ಕಾಲದ ಫೋಟೊ.  ಪದವೀಧರರಾದ ಕಾಲದ್ದಿರಬಹುದು.

  

ರಘುನಾಥ ಪಾಣಿಗ್ರಾಹಿ ಮತ್ತಿತರರೊಂದಿಗೆ ರೆಕಾರ್ಡಿಂಗ್

  

ಪಿ.ಬಿ.ಎಸ್ ತೂಗುದೀಪ, ಅರಶಿನ ಕುಂಕುಮ ಮತ್ತು ಭಾಗ್ಯಜ್ಯೋತಿ ಚಿತ್ರಗಳಲ್ಲಿ ಕಾಣಿಸಿಕೊಂಡದ್ದು ಎಲ್ಲರೂ ಬಲ್ಲ ವಿಚಾರ. ಅದಕ್ಕೂ ಮೊದಲು 1959ರ ಜಯಭೇರಿ ತೆಲುಗು ಚಿತ್ರದಲ್ಲಿ ಅವರು ಮದಿ ಶಾರದಾ ದೇವಿ ಹಾಡಿನಲ್ಲಿ ವೀಣೆ ನುಡಿಸಿ ಹಾಡುವ ಗಾಯಕನಾಗಿ ಅಭಿನಯಿಸಿದ್ದರು.



ತಮ್ಮ ಮನೆಯೆದುರು ಕಾರಿನ ಬಳಿ

  

ಲತಾ ಮಂಗೇಶ್ಕರ್ ಮತ್ತು ಸಂಗೀತ ನಿರ್ದೇಶಕ ಚಿತ್ರಗುಪ್ತ ಅವರೊಂದಿಗೆ


ಸಂಗೀತ ನಿರ್ದೇಶಕ ಚಿತ್ರಗುಪ್ತ ಅವರು ಮೈ ಭೀ ಲಡಕೀ ಹೂಂ ಚಿತ್ರದಲ್ಲಿ ಪಿ.ಬಿ.ಎಸ್ ಅವರಿಗೆ ಲತಾ ಮಂಗೇಶ್ಕರ್ ಜೊತೆಗೆ  ಚಂದಾ ಸೆ ಹೋಗಾ ವೊ ಪ್ಯಾರಾ ಹಾಡುವ ಅವಕಾಶ ನೀಡಿದಾಗ ಸ್ಥಾಪಿತ ಹಿಂದಿ ಗಾಯಕರು "ಒಬ್ಬ ಮದರಾಸಿಯಿಂದ ಹಾಡಿಸಿದರಲ್ಲ.  ನಾವಿರಲಿಲ್ಲವೇ" ಎಂದು ಅಸಮಾಧಾನ ವ್ಯಕ್ತ ಪಡಿಸಿದ್ದರಂತೆ. ಆ ಕಾಲದಲ್ಲಿ ದಕ್ಷಿಣದವರ ಬಗ್ಗೆ ಹಿಂದಿ ವಲಯದಲ್ಲಿ ತುಂಬಾ ಅಸಡ್ಡೆ ಇತ್ತು. ಅವರ ಪ್ರತಿಭೆಯ ಅರಿವಿದ್ದ ಓರ್ವರು "ಶ್ರೀನಿವಾಸ್ , ಎಲ್ಲ ಕಡೆ ಇರುವಂತೆ ಹಿಂದಿ ಚಿತ್ರರಂಗದಲ್ಲೂ ಬಹಳ ರಾಜಕೀಯ ಇದೆ. ನನಗೆ ನಿಮ್ಮ ಸಾಮರ್ಥ್ಯ ಗೊತ್ತು.  ಆದರೇನು ಮಾಡೋಣ. ನೀವು ಪಂಜಾಬ್, ಬಂಗಾಳ ಅಥವಾ ಉತ್ತರ ಪ್ರದೇಶದಲ್ಲಿ ಹುಟ್ಟಲಿಲ್ಲವಲ್ಲ. ಅಲ್ಲಿಯವರು ಓರ್ವ ‘ಮದರಾಸೀ’ಯನ್ನು ಎಂದೂ ಒಪ್ಪಿಕೊಳ್ಳಲಾರರು" ಅಂದಿದ್ದರಂತೆ. ಹೀಗಾಗಿ ಪಿ.ಬಿ.ಎಸ್ ಅವರು ದಕ್ಷಿಣದಲ್ಲಿ ಅದ್ವಿತೀಯರಾಗಿ ಮೆರೆದರೂ ಹಿಂದಿಯ ಮಟ್ಟಿಗೆ ಡಬ್ ಆದ ಮತ್ತು ಕೆಲ ಲೊ ಬಜಟ್ ಚಿತ್ರಗಳಿಗೆ ಮಾತ್ರ ತಮ್ಮನ್ನು ಸೀಮಿತಗೊಳಿಸಬೇಕಾಯಿತು.
 
ಘಂಟಸಾಲ ಅವರೊಂದಿಗೆ ಸಮಾಲೋಚನೆ.

  


ವೇದಿಕೆಯಲ್ಲಿ ನೆಲದ ಮೇಲೆ ಕೂತು ಹಾಡು.
  

ಎಸ್. ಜಾನಕಿ ಅವರೊಂದಿಗೆ ವೇದಿಕೆ ಹಂಚಿಕೊಂಡಾಗ.

  

ತಮಿಳಿನ ಟಿ. ಎಂ. ಸೌಂದರರಾಜನ್ ಅವರೊಂದಿಗೆ. ಇವರಿಬ್ಬರು ಹಾಡಿದ ಪಡಿತ್ತಾಲ ಮಟ್ಟುಂ ಪೋದುಮಾ ಚಿತ್ರದ ಪೊಣ್ ಒಂಡ್ರು ಕಂಡೇನ್ ಹಾಡು ಬಲು ಪ್ರಸಿದ್ಧ. ತಮಿಳಲ್ಲಿ ಇವರಿಬ್ಬರ ಅನೇಕ ಹಾಡುಗಳಿದ್ದು ಅತ್ತಿ ಕಾಯ್ ಕಾಯ್ ಕಾಯ್  ಎಂಬ ಭಲೇ ಪಾಂಡ್ಯನ್ ಚಿತ್ರದ ಕ್ವಾಡ್ರುಪ್ಲೆಟ್ ಹಾಡಲ್ಲಿ ಇವರ ಜೊತೆಗೆ ಪಿ.ಸುಶೀಲಾ ಮತ್ತು ಜಮುನಾರಾಣಿ ಧ್ವನಿಗಳಿವೆ.


ವಿಜಯ ಭಾಸ್ಕರ್ ಜೊತೆ ತಬ್ಲಾ ಮೇಲೆ ಕೈ ಆಡಿಸುತ್ತಾ! ರಫಿ ಅವರದ್ದೂ ಇಂಥದೇ ಫೋಟೊ ಇರುವುದು ಕಾಕತಾಳೀಯವಾಗಿರಬಹುದು.



ಧೋತಿ ಧರಿಸಿ ಟಿ.ಎಂ. ಸೌಂದರರಾಜನ್, ಎಸ್.ಪಿ. ಬಿ, ವಿಜಯಭಾಸ್ಕರ್ ಮುಂತಾದವರೊಂದಿಗೆ.

  

ರಾಜ್ ಅವರ ಜೊತೆ  P.B. Srinivas Sings for Raj Kumar ಧ್ವನಿಮುದ್ರಿಕೆಯೊಂದಿಗೆ. ಇಲ್ಲಿ ರಾಜ್ ಅವರು ಕುಲಗೌರವ ಚಿತ್ರದ ಮೇಕಪ್‌ನಲ್ಲಿ ಕಾಣಿಸಿಕೊಂಡಿದ್ದಾರೆ.

  

ಕೋರಸ್ ಕಲಾವಿದರೊಂದಿಗೆ ವಿಜಯ ಭಾಸ್ಕರ್ ಧ್ವನಿಮುದ್ರಣದಲ್ಲಿ.

  

ಎಸ್.ಪಿ.ಬಿ ಮತ್ತು ಘಂಟಸಾಲ ಅವರೊಂದಿಗೆ.

  

ವಿಜಯಭಾಸ್ಕರ್ ನಿರ್ದೇಶನದಲ್ಲಿ ಪಿ.ಸುಶಿಲಾ ಜೊತೆ ಯುಗಳ ಗೀತೆ ರೆಕಾರ್ಡಿಂಗ್.

  

ವಿಜಯಭಾಸ್ಕರ್ ಸಾರಥ್ಯದ ಸ್ಟೇಜ್ ಕಾರ್ಯಕ್ರಮದಲ್ಲಿ.

  

ಬಿ.ಕೆ. ಸುಮಿತ್ರಾ ಅವರೊಂದಿಗೆ.

  

ಎಸ್. ಜಾನಕಿ ಅವರೊಂದಿಗೆ ಸ್ಟುಡಿಯೊದಲ್ಲಿ.



ರಾಜ್ ಅವರ ಹಸ್ತದಿಂದ ಭೂತಯ್ಯನ ಮಗ ಅಯ್ಯು ಚಿತ್ರದ ಶತದಿನೋತ್ಸವ ಸ್ಮರಣಿಕೆ ಸ್ವೀಕಾರ.

  

ಈ ಚಿತ್ರದಲ್ಲಿ ಎಸ್.ಪಿ. ಬಿ  ತನ್ನಿಂದ ಬಹಳ ಹಿರಿಯರಾದ ಪಿ.ಬಿ.ಎಸ್  ಹೆಗಲ ಮೇಲೆ  ಕೈ ಹಾಕಿ ನಿಂತಿರುವುದು ಅಚ್ಚರಿದಾಯಕ. ಭಾಗ್ಯದ ಬಾಗಿಲು ಚಿತ್ರದ ಹಗಲೇನು ಇರುಳೇನು ಹಾಡಿನಿಂದ ಆರಂಭವಾಗಿ ಇವರಿಬ್ಬರು ವಿಜಯಭಾಸ್ಕರ್ ನಿರ್ದೇಶನದಲ್ಲಿ ಅನೇಕ ಯುಗಳ ಗೀತೆಗಳನ್ನು ಹಾಡಿದ್ದರು.


ಕೊನೆ ಕ್ಷಣದ ತಯಾರಿ.



ಮೊದಲು ಹೆಚ್. ಎಂ. ವಿ. ಯಲ್ಲಿ ಅಧಿಕಾರಿಯಾಗಿದ್ದು ನಂತರ ತನ್ನದೇ ಸಂಗೀತಾ ಸಂಸ್ಥೆ ಸ್ಥಾಪಿಸಿದ ಹೆಚ್. ಎಂ. ಮಹೇಶ್ ಅವರೊಂದಿಗೆ ಮುಂಬೈ ಷಣ್ಮುಖಾನಂದ ಹಾಲಿನ ವೇದಿಕೆಯಲ್ಲಿ ಕೋಟಿ ಚೆನ್ನಯ ತುಳು ಚಿತ್ರದ ಕೆಮ್ಮಲೆತಾ ಬ್ರಹ್ಮಾ ಹಾಡುತ್ತಿರುವುದು.

 

ನಾಗರ ಹಾವು ಚಿತ್ರದ ಧ್ವನಿಮುದ್ರಣ ಸಂದರ್ಭದ ಈ ಚಿತ್ರದಲ್ಲಿ ಪಿ.ಸುಶೀಲಾ, ವಿಷ್ಣುವರ್ಧನ್, ವಿಜಯಭಾಸ್ಕರ್ ಮುಂತಾದವರನ್ನೂ ಕಾಣಬಹುದು. ಬಲಗಡೆಯಲ್ಲಿ ಮೊದಲಿನವರು ಪುಟ್ಟಣ್ಣ ಅನಿಸುತ್ತದೆ. ಪುಟ್ಟಣ್ಣ, ವಿಜಯಭಾಸ್ಕರ್ ಮತ್ತು ಕಣಗಾಲ್ ಪ್ರಭಾಕರ ಶಾಸ್ತ್ರಿ  ಪಿ.ಬಿ.ಎಸ್ ಅವರಿಗೆ ಕಡ್ಡಾಯ ನಿವೃತ್ತಿ ಆದ ಮೇಲೂ ಸಾಧ್ಯವಾದಾಗಲೆಲ್ಲ ಅವಕಾಶ ಕೊಡುತ್ತಾ ಬಂದವರು. ಪ್ರಭಾಕರ ಶಾಸ್ತ್ರಿ ಅವರಂತೂ ಪಿ.ಬಿ.ಎಸ್ ಹಾಡುವುದಿದ್ದರೆ ಮಾತ್ರ  ಹಾಡು ಬರೆಯುವುದಾಗಿ ಹೇಳುತ್ತಿದ್ದರಂತೆ.

  

1972ರಲ್ಲಿ ನೆಲ್ಕೋ ರೇಡಿಯೋದ ಜಾಹೀರಾತಲ್ಲಿ ಪಿ.ಬಿ.ಶ್ರೀನಿವಾಸ್ ಹೀಗೆ ಕಾಣಿಸಿಕೊಂಡಿದ್ದರು.



ಇಷ್ಟೆಲ್ಲ ಚಿತ್ರಗಳನ್ನು ನೋಡಿದ ಮೇಲೆ ಒಂದಾದರೂ ಪಿ.ಬಿ.ಎಸ್ ಹಾಡು ಇಲ್ಲದಿದ್ದರೆ ಹೇಗೆ.  ಇಲ್ಲಿದೆ ನೋಡಿ ಇದೇ ನಾಗರಹಾವು ಚಿತ್ರದ ಕನ್ನಡ ನಾಡಿನ ವೀರ ರಮಣಿಯ ಚರಿತೆ.  ಇದರಲ್ಲೇನು ವಿಶೇಷ, ಇದು ಯಾವಾಗಲೂ ನೋಡಲು ಸಿಗುವ ಹಾಡು ಅಂದಿರಾ. ಗ್ರಾಮೊಫೋನ್ ತಟ್ಟೆಯ ಎರಡೂ ಬದಿಗಳನ್ನು ಆವರಿಸಿದ್ದ ಈ  ಹಾಡಿಗೂ ಚಿತ್ರದಲ್ಲಿರುವ ವರ್ಷನ್‌ಗೂ ವ್ಯತ್ಯಾಸ ಇದೆ. ಚಿತ್ರದಲ್ಲಿ ಸುದೀರ್ಘವಾಗಿ ಚಿತ್ರಿತವಾಗಿರುವ ಕೆಲವು ಸನ್ನಿವೇಶಗಳನ್ನು ಇಲ್ಲಿ ಪಿ.ಬಿ.ಎಸ್ ಚುಟುಕಾಗಿ ಮಾತಿನಲ್ಲಿ ನಿರೂಪಿಸಿದ್ದಾರೆ.  ಮೊದಲಿನಿಂದಲೂ ರೇಡಿಯೋದಲ್ಲಿ ಈ ಹಾಡು ಕೇಳಿಕೊಂಡು ಬಂದವರಿಗೆ ಇದು ಗೊತ್ತಿರುತ್ತದೆ.  ಈಗ ರೆಕಾರ್ಡಿನ ಎರಡೂ ಬದಿಗಳ ಭಾಗ ಕೇಳಿಸುವಷ್ಟು ವ್ಯವಧಾನ ಇಲ್ಲದಿರುವುದರಿಂದ ರೇಡಿಯೋದವರು ಹೆಚ್ಚಾಗಿ ಹಾಡನ್ನು ಅರ್ಧಕ್ಕೇ ಮೊಟಕುಗೊಳಿಸುತ್ತಾರೆ. ಈಗ ಪೂರ್ತಿ ಹಾಡು ಮತ್ತೊಮ್ಮೆ ಕೇಳಿ ಎರಡರ ವ್ಯತ್ಯಾಸ ಗಮನಿಸಿ.