ಮೊದಲೆಲ್ಲ ಗಾಯಕ ಗಾಯಕಿಯರ ಧ್ವನಿಯ ಪರಿಚಯ ನಮಗಿರುತ್ತಿತ್ತೇ ಹೊರತು ಅವರು ನೋಡಲು ಹೇಗಿರುತ್ತಾರೆಂದು ನಾವು ಕಲ್ಪನೆಯಷ್ಟೇ ಮಾಡಿಕೊಳ್ಳಬೇಕಿತ್ತು. ಪತ್ರಿಕೆಗಳಲ್ಲೂ ತೆರೆಯ ಹಿಂದಿನವರ ಚಿತ್ರ ಕಾಣಸಿಗುತ್ತಿದ್ದುದು ಇಲ್ಲವೆನ್ನುವಷ್ಟು ಕಮ್ಮಿ. ನಾನು ಮೊದಲು ಪಿ.ಬಿ.ಶ್ರೀನಿವಾಸ್ ಅವರ ಚಿತ್ರ ನೋಡಿದ್ದು ಸುಧಾ ಪತ್ರಿಕೆ ಆರಂಭವಾದ ವರ್ಷ ಅದರ ಹಿಂಬದಿಯ ರಕ್ಷಾಪುಟದ ಒಳಭಾಗದಲ್ಲಿ. ಆಗ ಖ್ಯಾತನಾಮರ ಪೂರ್ಣ ಪುಟದ ಚಿತ್ರವನ್ನು ಈ ರೀತಿ ಪ್ರಕಟಿಸಿ ಅವರ ಬಗ್ಗೆ ವಿವರಗಳನ್ನು ನೀಡುವ ಪರಿಪಾಠವನ್ನು ಸುಧಾ ಪಾಲಿಸಿಕೊಂಡು ಬಂದಿತ್ತು. ಟಿ.ವಿ. ಯುಗ ಆರಂಭವಾದ ಮೇಲೆ ನೇಪಥ್ಯದಲ್ಲಿದ್ದವರೆಲ್ಲ ನಮ್ಮ ಮನೆ ಹಜಾರಕ್ಕೇ ಬರುವಂತಾಯಿತು. ಇತರ ಕಲಾವಿದರ ಜೊತೆ ಪಿ.ಬಿ.ಎಸ್ ಕೂಡ ಕಿರುತೆರೆಯಲ್ಲಿ ಕಾಣಿಸಿಕೊಂಡರು. ಅವರ ಬಗ್ಗೆ ಚಂದನ ವಾಹಿನಿಯಲ್ಲಿ ಒಂದು ಧಾರಾವಾಹಿ ಕೂಡ ಪ್ರಸಾರವಾಯಿತು. ಈಗ ಅಂತರ್ಜಾಲದಲ್ಲಿ, ಪತ್ರಿಕೆಗಳಲ್ಲಿ ಅವರ ಚಿತ್ರಗಳು ಸಿಗುತ್ತವೆ. ಆದರೆ ಅಲ್ಲೆಲ್ಲ ನಮಗೆ ಕಾಣಿಸುವುದು ಜರಿ ರುಮಾಲು ಧರಿಸಿ ಬಣ್ಣದ ಶಾಲು ಹೊದ್ದ ಪಿ.ಬಿ.ಎಸ್ ರೂಪ ಮಾತ್ರ. ತಮ್ಮ ವೃತ್ತಿಜೀವನದ ವಿವಿಧ ಘಟ್ಟಗಳಲ್ಲಿ ಅವರು ಹೇಗಿದ್ದರೆಂದು ಬಹಳ ಮಂದಿಗೆ ಗೊತ್ತಿಲ್ಲ. ನನ್ನ ಸಂಗ್ರಹದಲ್ಲಿರುವ ಅಂಥ ಕೆಲವು ಚಿತ್ರಗಳು ಇಲ್ಲಿವೆ.
ಇದು ಪಿ.ಬಿ.ಎಸ್ ಅವರ ಹದಿಹರೆಯದ ಫೋಟೊ ಆಗಿರಬಹುದು. ಯಾವುದೋ ಭಜನೆ ಹಾಡುತ್ತಿದ್ದಂತಿದೆ.
ಇದು ಅವರ ಯೌವನ ಕಾಲದ ಫೋಟೊ. ಪದವೀಧರರಾದ ಕಾಲದ್ದಿರಬಹುದು.
ರಘುನಾಥ ಪಾಣಿಗ್ರಾಹಿ ಮತ್ತಿತರರೊಂದಿಗೆ ರೆಕಾರ್ಡಿಂಗ್
ಪಿ.ಬಿ.ಎಸ್ ತೂಗುದೀಪ, ಅರಶಿನ ಕುಂಕುಮ ಮತ್ತು ಭಾಗ್ಯಜ್ಯೋತಿ ಚಿತ್ರಗಳಲ್ಲಿ ಕಾಣಿಸಿಕೊಂಡದ್ದು ಎಲ್ಲರೂ ಬಲ್ಲ ವಿಚಾರ. ಅದಕ್ಕೂ ಮೊದಲು 1959ರ ಜಯಭೇರಿ ತೆಲುಗು ಚಿತ್ರದಲ್ಲಿ ಅವರು ಮದಿ ಶಾರದಾ ದೇವಿ ಹಾಡಿನಲ್ಲಿ ವೀಣೆ ನುಡಿಸಿ ಹಾಡುವ ಗಾಯಕನಾಗಿ ಅಭಿನಯಿಸಿದ್ದರು.
ತಮ್ಮ ಮನೆಯೆದುರು ಕಾರಿನ ಬಳಿ
ಲತಾ ಮಂಗೇಶ್ಕರ್ ಮತ್ತು ಸಂಗೀತ ನಿರ್ದೇಶಕ ಚಿತ್ರಗುಪ್ತ ಅವರೊಂದಿಗೆ
ಸಂಗೀತ ನಿರ್ದೇಶಕ ಚಿತ್ರಗುಪ್ತ ಅವರು ಮೈ ಭೀ ಲಡಕೀ ಹೂಂ ಚಿತ್ರದಲ್ಲಿ ಪಿ.ಬಿ.ಎಸ್ ಅವರಿಗೆ ಲತಾ ಮಂಗೇಶ್ಕರ್ ಜೊತೆಗೆ ಚಂದಾ ಸೆ ಹೋಗಾ ವೊ ಪ್ಯಾರಾ
ಹಾಡುವ ಅವಕಾಶ ನೀಡಿದಾಗ ಸ್ಥಾಪಿತ ಹಿಂದಿ ಗಾಯಕರು "ಒಬ್ಬ ಮದರಾಸಿಯಿಂದ ಹಾಡಿಸಿದರಲ್ಲ.
ನಾವಿರಲಿಲ್ಲವೇ" ಎಂದು ಅಸಮಾಧಾನ ವ್ಯಕ್ತ ಪಡಿಸಿದ್ದರಂತೆ. ಆ ಕಾಲದಲ್ಲಿ ದಕ್ಷಿಣದವರ ಬಗ್ಗೆ ಹಿಂದಿ ವಲಯದಲ್ಲಿ ತುಂಬಾ ಅಸಡ್ಡೆ ಇತ್ತು. ಅವರ ಪ್ರತಿಭೆಯ ಅರಿವಿದ್ದ ಓರ್ವರು "ಶ್ರೀನಿವಾಸ್ , ಎಲ್ಲ ಕಡೆ ಇರುವಂತೆ ಹಿಂದಿ ಚಿತ್ರರಂಗದಲ್ಲೂ ಬಹಳ ರಾಜಕೀಯ ಇದೆ. ನನಗೆ
ನಿಮ್ಮ ಸಾಮರ್ಥ್ಯ ಗೊತ್ತು. ಆದರೇನು ಮಾಡೋಣ. ನೀವು ಪಂಜಾಬ್, ಬಂಗಾಳ ಅಥವಾ ಉತ್ತರ
ಪ್ರದೇಶದಲ್ಲಿ ಹುಟ್ಟಲಿಲ್ಲವಲ್ಲ. ಅಲ್ಲಿಯವರು ಓರ್ವ ‘ಮದರಾಸೀ’ಯನ್ನು ಎಂದೂ
ಒಪ್ಪಿಕೊಳ್ಳಲಾರರು" ಅಂದಿದ್ದರಂತೆ. ಹೀಗಾಗಿ ಪಿ.ಬಿ.ಎಸ್ ಅವರು ದಕ್ಷಿಣದಲ್ಲಿ ಅದ್ವಿತೀಯರಾಗಿ ಮೆರೆದರೂ ಹಿಂದಿಯ ಮಟ್ಟಿಗೆ ಡಬ್ ಆದ ಮತ್ತು ಕೆಲ ಲೊ ಬಜಟ್ ಚಿತ್ರಗಳಿಗೆ ಮಾತ್ರ ತಮ್ಮನ್ನು ಸೀಮಿತಗೊಳಿಸಬೇಕಾಯಿತು.
ಘಂಟಸಾಲ ಅವರೊಂದಿಗೆ ಸಮಾಲೋಚನೆ.
ವೇದಿಕೆಯಲ್ಲಿ ನೆಲದ ಮೇಲೆ ಕೂತು ಹಾಡು.
ಎಸ್. ಜಾನಕಿ ಅವರೊಂದಿಗೆ ವೇದಿಕೆ ಹಂಚಿಕೊಂಡಾಗ.
ವಿಜಯ ಭಾಸ್ಕರ್ ಜೊತೆ ತಬ್ಲಾ ಮೇಲೆ ಕೈ ಆಡಿಸುತ್ತಾ! ರಫಿ ಅವರದ್ದೂ ಇಂಥದೇ ಫೋಟೊ ಇರುವುದು ಕಾಕತಾಳೀಯವಾಗಿರಬಹುದು.
ಧೋತಿ ಧರಿಸಿ ಟಿ.ಎಂ. ಸೌಂದರರಾಜನ್, ಎಸ್.ಪಿ. ಬಿ, ವಿಜಯಭಾಸ್ಕರ್ ಮುಂತಾದವರೊಂದಿಗೆ.
ರಾಜ್ ಅವರ ಜೊತೆ P.B. Srinivas Sings for Raj Kumar ಧ್ವನಿಮುದ್ರಿಕೆಯೊಂದಿಗೆ. ಇಲ್ಲಿ ರಾಜ್ ಅವರು ಕುಲಗೌರವ ಚಿತ್ರದ ಮೇಕಪ್‌ನಲ್ಲಿ ಕಾಣಿಸಿಕೊಂಡಿದ್ದಾರೆ.
ಕೋರಸ್ ಕಲಾವಿದರೊಂದಿಗೆ ವಿಜಯ ಭಾಸ್ಕರ್ ಧ್ವನಿಮುದ್ರಣದಲ್ಲಿ.
ಎಸ್.ಪಿ.ಬಿ ಮತ್ತು ಘಂಟಸಾಲ ಅವರೊಂದಿಗೆ.
ವಿಜಯಭಾಸ್ಕರ್ ನಿರ್ದೇಶನದಲ್ಲಿ ಪಿ.ಸುಶಿಲಾ ಜೊತೆ ಯುಗಳ ಗೀತೆ ರೆಕಾರ್ಡಿಂಗ್.
ವಿಜಯಭಾಸ್ಕರ್ ಸಾರಥ್ಯದ ಸ್ಟೇಜ್ ಕಾರ್ಯಕ್ರಮದಲ್ಲಿ.
ಬಿ.ಕೆ. ಸುಮಿತ್ರಾ ಅವರೊಂದಿಗೆ.
ಎಸ್. ಜಾನಕಿ ಅವರೊಂದಿಗೆ ಸ್ಟುಡಿಯೊದಲ್ಲಿ.
ರಾಜ್ ಅವರ ಹಸ್ತದಿಂದ ಭೂತಯ್ಯನ ಮಗ ಅಯ್ಯು ಚಿತ್ರದ ಶತದಿನೋತ್ಸವ ಸ್ಮರಣಿಕೆ ಸ್ವೀಕಾರ.
ಈ ಚಿತ್ರದಲ್ಲಿ ಎಸ್.ಪಿ. ಬಿ ತನ್ನಿಂದ ಬಹಳ ಹಿರಿಯರಾದ ಪಿ.ಬಿ.ಎಸ್ ಹೆಗಲ ಮೇಲೆ ಕೈ ಹಾಕಿ ನಿಂತಿರುವುದು ಅಚ್ಚರಿದಾಯಕ. ಭಾಗ್ಯದ ಬಾಗಿಲು ಚಿತ್ರದ ಹಗಲೇನು ಇರುಳೇನು ಹಾಡಿನಿಂದ ಆರಂಭವಾಗಿ ಇವರಿಬ್ಬರು ವಿಜಯಭಾಸ್ಕರ್ ನಿರ್ದೇಶನದಲ್ಲಿ ಅನೇಕ ಯುಗಳ ಗೀತೆಗಳನ್ನು ಹಾಡಿದ್ದರು.
ಕೊನೆ ಕ್ಷಣದ ತಯಾರಿ.
ಮೊದಲು ಹೆಚ್. ಎಂ. ವಿ. ಯಲ್ಲಿ ಅಧಿಕಾರಿಯಾಗಿದ್ದು ನಂತರ ತನ್ನದೇ ಸಂಗೀತಾ ಸಂಸ್ಥೆ ಸ್ಥಾಪಿಸಿದ ಹೆಚ್. ಎಂ. ಮಹೇಶ್ ಅವರೊಂದಿಗೆ ಮುಂಬೈ ಷಣ್ಮುಖಾನಂದ ಹಾಲಿನ ವೇದಿಕೆಯಲ್ಲಿ ಕೋಟಿ ಚೆನ್ನಯ ತುಳು ಚಿತ್ರದ ಕೆಮ್ಮಲೆತಾ ಬ್ರಹ್ಮಾ ಹಾಡುತ್ತಿರುವುದು.
ನಾಗರ ಹಾವು ಚಿತ್ರದ ಧ್ವನಿಮುದ್ರಣ ಸಂದರ್ಭದ ಈ ಚಿತ್ರದಲ್ಲಿ ಪಿ.ಸುಶೀಲಾ, ವಿಷ್ಣುವರ್ಧನ್, ವಿಜಯಭಾಸ್ಕರ್ ಮುಂತಾದವರನ್ನೂ ಕಾಣಬಹುದು. ಬಲಗಡೆಯಲ್ಲಿ ಮೊದಲಿನವರು ಪುಟ್ಟಣ್ಣ ಅನಿಸುತ್ತದೆ. ಪುಟ್ಟಣ್ಣ, ವಿಜಯಭಾಸ್ಕರ್ ಮತ್ತು ಕಣಗಾಲ್ ಪ್ರಭಾಕರ ಶಾಸ್ತ್ರಿ ಪಿ.ಬಿ.ಎಸ್ ಅವರಿಗೆ ಕಡ್ಡಾಯ ನಿವೃತ್ತಿ ಆದ ಮೇಲೂ ಸಾಧ್ಯವಾದಾಗಲೆಲ್ಲ ಅವಕಾಶ ಕೊಡುತ್ತಾ ಬಂದವರು. ಪ್ರಭಾಕರ ಶಾಸ್ತ್ರಿ ಅವರಂತೂ ಪಿ.ಬಿ.ಎಸ್ ಹಾಡುವುದಿದ್ದರೆ ಮಾತ್ರ ಹಾಡು ಬರೆಯುವುದಾಗಿ ಹೇಳುತ್ತಿದ್ದರಂತೆ.
ಇಷ್ಟೆಲ್ಲ ಚಿತ್ರಗಳನ್ನು ನೋಡಿದ ಮೇಲೆ ಒಂದಾದರೂ ಪಿ.ಬಿ.ಎಸ್ ಹಾಡು ಇಲ್ಲದಿದ್ದರೆ ಹೇಗೆ. ಇಲ್ಲಿದೆ ನೋಡಿ ಇದೇ ನಾಗರಹಾವು ಚಿತ್ರದ ಕನ್ನಡ ನಾಡಿನ ವೀರ ರಮಣಿಯ ಚರಿತೆ. ಇದರಲ್ಲೇನು ವಿಶೇಷ, ಇದು ಯಾವಾಗಲೂ ನೋಡಲು ಸಿಗುವ ಹಾಡು ಅಂದಿರಾ. ಗ್ರಾಮೊಫೋನ್ ತಟ್ಟೆಯ ಎರಡೂ ಬದಿಗಳನ್ನು ಆವರಿಸಿದ್ದ ಈ ಹಾಡಿಗೂ ಚಿತ್ರದಲ್ಲಿರುವ ವರ್ಷನ್‌ಗೂ ವ್ಯತ್ಯಾಸ ಇದೆ. ಚಿತ್ರದಲ್ಲಿ ಸುದೀರ್ಘವಾಗಿ ಚಿತ್ರಿತವಾಗಿರುವ ಕೆಲವು ಸನ್ನಿವೇಶಗಳನ್ನು ಇಲ್ಲಿ ಪಿ.ಬಿ.ಎಸ್ ಚುಟುಕಾಗಿ ಮಾತಿನಲ್ಲಿ ನಿರೂಪಿಸಿದ್ದಾರೆ. ಮೊದಲಿನಿಂದಲೂ ರೇಡಿಯೋದಲ್ಲಿ ಈ ಹಾಡು ಕೇಳಿಕೊಂಡು ಬಂದವರಿಗೆ ಇದು ಗೊತ್ತಿರುತ್ತದೆ. ಈಗ ರೆಕಾರ್ಡಿನ ಎರಡೂ ಬದಿಗಳ ಭಾಗ ಕೇಳಿಸುವಷ್ಟು ವ್ಯವಧಾನ ಇಲ್ಲದಿರುವುದರಿಂದ ರೇಡಿಯೋದವರು ಹೆಚ್ಚಾಗಿ ಹಾಡನ್ನು ಅರ್ಧಕ್ಕೇ ಮೊಟಕುಗೊಳಿಸುತ್ತಾರೆ. ಈಗ ಪೂರ್ತಿ ಹಾಡು ಮತ್ತೊಮ್ಮೆ ಕೇಳಿ ಎರಡರ ವ್ಯತ್ಯಾಸ ಗಮನಿಸಿ.
ಧನ್ಯವಾದಗಳು ಸರ್
ReplyDelete