Sunday 16 June 2019

ಹತ್ತು ಹಾರ್ಮೋನಿಯಂ ಹಾಡುಗಳು


ಮೆಚ್ಚಿನ ಸಂಗೀತೋಪಕರಣ ಯಾವುದು ಎಂದು ಯಾರಾದರೂ ಕೇಳಿದ್ದೇ ಆದರೆ ನನ್ನ ಉತ್ತರ ಹಾರ್ಮೋನಿಯಂ ಎಂದೇ ಆಗಿದ್ದೀತು. ಯೋಗ್ಯ ಕೈಗಳಿಗೆ ಸಿಕ್ಕಿದರೆ ಇದರಿಂದ ಹೊರಡುವ ನಾದ ಮಾಧುರ್ಯಕ್ಕೆ ಸರಿಸಾಟಿ ಯಾವುದೂ ಇಲ್ಲ.  ಇಂಥ ಕೈಗಳು ಶಾಸ್ತ್ರೀಯ ಸಂಗೀತ ಕೋವಿದರದ್ದೇ ಆಗಿರಬೇಕಾಗಿಲ್ಲ.  ಕತ್ತಿಗೆ ನೇತುಹಾಕಿಕೊಂಡ ಹಾರ್ಮೋನಿಯಂ ನುಡಿಸುತ್ತಾ ಜೊತೆಯಲ್ಲಿ ಹಾಡುವ ಸ ಪ ಸ ಎಂದರೇನೆಂದು ಅರಿಯದ ಅನೇಕ ಬೀದಿ ಬದಿ ಹಾಡುಗಾರರ ಶ್ರುತಿಶುದ್ಧತೆ ನನ್ನನ್ನು ಬೆರಗುಗೊಳಿಸಿದ್ದಿದೆ.  ವರ್ಷಕ್ಕೆ ಒಂದೆರಡು ಸಲವಾದರೂ ನಮ್ಮ ಮನೆಗೆ ಇಂಥ  ಸಂಚಾರಿ ಕಲಾವಿದರು ಬರುವುದಿತ್ತು. ನಮ್ಮ ತಾಯಿಯ ಮನೆಯಲ್ಲಿ ಹಾರ್ಮೋನಿಯಂ ಇತ್ತು.  ಆದರೆ ಮರದ ಪೆಟ್ಟಿಗೆಯಲ್ಲಿ ಭದ್ರವಾಗಿರುತ್ತಿದ್ದ ಅದನ್ನು ಮುಟ್ಟುವ ಅಧಿಕಾರ ನಮಗೆ ಇರಲಿಲ್ಲ.  ಬೇಸಿಗೆ ರಜೆಯಲ್ಲಿ ಅಲ್ಲಿಗೆ ಹೋದಾಗ ಎಲ್ಲರ ಕಣ್ತಪ್ಪಿಸಿ ಮೆಲ್ಲಗೆ ರೀಡುಗಳ ಮೇಲೆ ಕೈಯಾಡಿಸಲು ಪ್ರಯತ್ನಿಸುವುದಿತ್ತು.  ನಮ್ಮ ಮನೆಯಲ್ಲೂ ಹಾರ್ಮೋನಿಯಂ ಇರುತ್ತಿದ್ದರೆ ನಾನು ಕೊಳಲಿನ ಬದಲು ಅದನ್ನೇ ಆರಿಸಿಕೊಳ್ಳುತ್ತಿದ್ದೆನೋ ಏನೋ.

ವಿದೇಶಿ ವಾದ್ಯವಾದರೂ ಪಿಟೀಲಿನಂತೆ ಹಾರ್ಮೋನಿಯಂ ಕೂಡ ಭಾರತೀಯ ಸಂಗೀತ ಕ್ಷೇತ್ರದಲ್ಲಿ ಹಾಸುಹೊಕ್ಕಾಗಿ ಸೇರಿಕೊಂಡಿದೆ. ವಿದೇಶಗಳಲ್ಲಿ ಪಂಪ್ ಆರ್ಗನ್, ರೀಡ್ ಆರ್ಗನ್, ಮೇಲೋಡಿಯನ್ ಇತ್ಯಾದಿ ನಾಮಧೇಯಗಳನ್ನು ಹೊಂದಿದ ಇದು ನಮ್ಮಲ್ಲಿ ಪೇಟಿ, ಬಾಜಾ ಎಂದೂ ಕರೆಸಿಕೊಳ್ಳುತ್ತದೆ. ಹಿಂದುಸ್ಥಾನಿ ಶಾಸ್ತ್ರೀಯ ಸಂಗೀತ ವಲಯದಲ್ಲಿ ಇದಕ್ಕೆ ಸಂವಾದಿನಿ ಎಂಬ ಆಕರ್ಷಕ ಹೆಸರೂ ಇದೆ.  ಸಿನಿಮಾ  ಸಂಗೀತಕ್ಕೂ ಹಾರ್ಮೋನಿಯಂಗೂ ಗಾಢ ನಂಟಿದೆ.  ನಾವು ಸುವರ್ಣಯುಗ ಎಂದು ಕರೆಯುವ ಕಾಲದ ಸಂಗೀತ ನಿರ್ದೇಶಕರೆಲ್ಲ ಹಾರ್ಮೋನಿಯಂನಲ್ಲೇ ಹಾಡುಗಳನ್ನು ಕಂಪೋಸ್ ಮಾಡುತ್ತಿದ್ದುದು. ಆ ಮೇಲೆ ಅರೇಂಜರುಗಳು ವೈವಿಧ್ಯಮಯ ವಾದ್ಯಗಳನ್ನು ಬಳಸಿ  ಆ ಹಾಡುಗಳನ್ನು ಸಜ್ಜುಗೊಳಿಸುತ್ತಿದ್ದರು.  ಚಿತ್ರಸಂಗೀತದಲ್ಲಿ ಹೆಚ್ಚಾಗಿ ಬಳಕೆಯಾಗುತ್ತಿದ್ದುದು ಡಾ|| ರಾಜ್  ಎದೆ ಹಾರ್ಮೋನಿಯಂ ಅನ್ನುತ್ತಿದ್ದ  ಎಕಾರ್ಡಿಯನ್ ಆದರೂ ಹಾರ್ಮೋನಿಯಂಗೂ ಕೆಲವು ಹಾಡುಗಳ ಭಾಗವಾಗುಳಿಯುವ ಭಾಗ್ಯ ಸಿಗುತ್ತಿತ್ತು.  ಇಂಥ ಹಾಡುಗಳನ್ನು ರೇಡಿಯೋದಲ್ಲಿ ಆಲಿಸುವುದು ಆಗಿನ ಕಾಲದಲ್ಲಿ ವಿಶೇಷ ಥ್ರಿಲ್ ಉಂಟುಮಾಡುತ್ತಿತ್ತು ಏಕೆಂದರೆ ಈ ಹಾಡುಗಳ ಭಾಗವಾಗಿ ಮಾತ್ರ ಆಗ ಹಾರ್ಮೋನಿಯಂ ಧ್ವನಿ ನಮ್ಮ ಕಿವಿಗೆ ಬೀಳುತ್ತಿದ್ದುದು. 1940ರಿಂದ 1974ರ ವರೆಗೆ  ಆಕಾಶವಾಣಿಯಲ್ಲಿ ಹಾರ್ಮೋನಿಯಂ ಬಳಕೆಗೆ ಇದ್ದ ನಿಷೇಧವೇ ಇದಕ್ಕೆ ಕಾರಣ.  

ಈ ರೀತಿ ಹಾರ್ಮೋನಿಯಂ ಬಳಕೆಯಾದ ನನ್ನ ಮೆಚ್ಚಿನ   ಹತ್ತು ಪ್ರಾತಿನಿಧಿಕ ಹಾಡುಗಳು ಇಲ್ಲಿವೆ.

1. ಸಿಗದಣ್ಣಾ ಇದು ನಾಳೆಗೆ ಸಿಗದು

ಇದು ಕಣ್ತೆರೆದು ನೋಡು ಚಿತ್ರದಲ್ಲಿ ಚಿಕ್ಕ ಚಿಕ್ಕ ತುಣುಕುಗಳ ರೂಪದಲ್ಲಿ ಇರುವ ಹಾಡಿನ ಭಾಗ.  ಪಿ.ಬಿ. ಶ್ರೀನಿವಾಸ್ ಹಾಡಿರುವ ಈ ಹಾಡಿನಲ್ಲಿ ಬಾಲಕೃಷ್ಣ ಅವರ ಧ್ವನಿಯೂ ಇದೆ. ಒಂದು ಕಡೆ ರಫಿಯ ಉಲ್ಲೇಖ ಇರುವುದನ್ನೂ ಗಮನಿಸಬಹುದು.  ಭಕ್ತ ಕನಕದಾಸ ಚಿತ್ರದಲ್ಲಿ ರಾಜ್ ಅವರ ಎಲ್ಲ ಹಾಡುಗಳನ್ನು ಹಾಡಿದ ಪಿ.ಬಿ.ಎಸ್ ಅವರಿಗೆ ಜಿ.ಕೆ. ವೆಂಕಟೇಶ್ ಸಂಗೀತವಿದ್ದ ಈ ಚಿತ್ರದ  ಹಾಡುಗಳು ಕನ್ನಡದಲ್ಲಿ ಭದ್ರವಾದ ನೆಲೆ ಕಂಡುಕೊಳ್ಳಲು ಸಹಾಯ ಮಾಡಿದವು.  ಹೆಚ್ಚು ಕೇಳಲು ಸಿಗದ ಈ ಸ್ಟ್ರೀಟ್ ಸಿಂಗರ್ ಹಾಡಿನಲ್ಲಿ ಹಾರ್ಮೋನಿಯಂ ಜತೆಗೆ ವೈವಿಧ್ಯಕ್ಕಾಗಿ ಇತರ ವಾದ್ಯಗಳನ್ನೂ ಬಳಸಲಾಗಿದೆ.



2. ಬಂತು ನವಜೀವನ

ಜೀವನತರಂಗ ಚಿತ್ರದ  ಕವ್ವಾಲಿ ಶೈಲಿಯ ಈ ಹಾಡಿನಲ್ಲಿ ಬಳಕೆಯಾಗಿರುವುದು ತಬ್ಲಾ, ಹಾರ್ಮೋನಿಯಮ್ ಮತ್ತು ಕ್ಲಾರಿನೆಟ್ ಮಾತ್ರ. ಹಾಡಿನುದ್ದಕ್ಕೂ ಇರುವ ಹಾರ್ಮೋನಿಯಂ ಪಲುಕುಗಳು ಅತ್ಯಾಕರ್ಷಕ.  ಇದನ್ನು ಹಾಡಿದವರು  ಸತ್ಯ ರಾವ್ ಮತ್ತು ಸೌಮಿತ್ರಿ ಎಂಬ ಹೆಸರೇ ಕೇಳಿರದ ಕಲಾವಿದರು! ಚಿತ್ರದ ನಾಮಾವಳಿಯಲ್ಲೂ ಇವರ ಉಲ್ಲೇಖವೇ ಇಲ್ಲ! ಆದರೂ ಅದೆಂತಹ ಧ್ವನಿಭಾರ, ಅದೆಂತಹ voice throw, ಅದೆಂತಹ ಶ್ರುತಿ ಶುದ್ಧತೆ, ಅದೆಂತಹ ವೃತ್ತಿಪರತೆ!  ಈ ಗಾಯಕರು ಬಹುಶಃ ನಾಟಕರಂಗದಲ್ಲಿ ಪಳಗಿದವರಿರಬೇಕು. ಇದರ ಸಂಗೀತ ನಿರ್ದೇಶಕ  ಎಂ. ವೆಂಕಟರಾಜು ಅವರೂ ನಾಟಕದ ಹಿನ್ನೆಲೆಯಿಂದ ಬಂದವರೇ ಆಗಿದ್ದರಿಂದ ಈ ಪ್ರಯೋಗ ಮಾಡಿರಬಹುದು.


3. ನೀನೇ ಆಸೆ ಆಸರೆ

ಚಂದ್ರಕುಮಾರ ಚಿತ್ರಕ್ಕಾಗಿ ಪಿ.ಸುಶೀಲ ಹಾಡಿರುವ ಮುಜ್ರಾ ಶೈಲಿಯ ಈ ಹಾಡಿನಲ್ಲಿ ಸಾರಂಗಿ ಮತ್ತು ಹಾರ್ಮೋನಿಯಂಗಳ ವ್ಯಾಪಕ ಬಳಕೆ ಇದೆ.  ಹಿಂದಿಯ ದೇವದಾಸ್ ಚಿತ್ರದ ಆಗೆ ತೇರಿ ಮರ್ಜಿ ಹಾಡನ್ನು ಹೋಲುತ್ತದೆ ಇದು.  ಎಂ.ವೆಂಕಟರಾಜು ನಿಧನದ ನಂತರ ಟಿ. ಚಲಪತಿರಾವ್ ಈ ಚಿತ್ರದ ಸಂಗೀತದ ಹೊಣೆ ಹೊತ್ತಿದ್ದರು


4. ದೇಹಕೆ ಉಸಿರೇ ಸದಾ ಭಾರ

ಚಿನ್ನಾ ನಿನ್ನ ಮುದ್ದಾಡುವೆ ಚಿತ್ರಕ್ಕಾಗಿ ಎಸ್.ಪಿ. ಬಾಲಸುಬ್ರಹ್ಮಣ್ಯಂ ಮತ್ತು ಅನಿತಾ ಚೌಧರಿ ಎಂಬ ಬಾಲಕಿ ಹಾಡಿದ ಈ ಹಾಡಿನ ಸಂಗೀತ ನಿರ್ದೇಶಕರು ಸಲಿಲ್ ಚೌಧರಿ.  ಅವರಿಗೆ ತನ್ನ ಹಿಂದಿ, ಬಂಗ್ಲಾ ಹಾಡುಗಳ ಧಾಟಿಯನ್ನು ಇತರ ಭಾಷೆಗಳಲ್ಲಿ ಬಳಸುವ ಹವ್ಯಾಸವಿತ್ತು.  ದೂರದಿಂದ ಬಂದಂಥ ಸುಂದರಾಂಗ ಜಾಣ ಹಿಂದಿಯ ನಾಮ್ ಮೇರಾ ನಿಮ್ಮೊ ಮುಕಾಮ್ ಲುಧಿಯಾನಾ ಎಂಬ ಹಾಡಿನ ಧಾಟಿ ಹೊಂದಿತ್ತು ಎಂದು ಅನೇಕರಿಗೆ ಗೊತ್ತಿರಲಾರದು.  ಆದರೆ ಇಲ್ಲಿ ಹಿಂದಿಯ ಮೀನೂ ಎಂಬ ಚಿತ್ರದಲ್ಲಿ ಮನ್ನಾಡೇ ಮತ್ತು ಅಂತರಾ ಚೌಧರಿ ಎಂಬ ಬಾಲಕಿ ಹಾಡಿದ ತೇರಿ ಗಲಿಯೊಂ ಮೆ ಹಮ್ ಆಯೇ ಎಂಬ ಹಾಡಿನ ಶೈಲಿಯನ್ನಷ್ಟೇ ಬಳಸಿದ್ದಾರೆ.  ರಾಗ ತಾಳ ಎರಡನ್ನೂ ಬದಲಿಸಿದ್ದಾರೆ.



ಇದಕ್ಕೆ ಸ್ಪೂರ್ತಿಯಾದ ಹಿಂದಿ ಹಾಡಿನ ತುಣುಕು ಇದು.


5. ಹೊಸ ಪ್ರೇಮದಲಿ

ರಾಜ್‌ಕುಮಾರ್ ಅವರು ಇಷ್ಟ ಪಟ್ಟು ಹಿಂದಿಯ ರೋಶನ್ ಅವರ ಶೈಲಿಯಲ್ಲಿ   ಉಪೇಂದ್ರಕುಮಾರ್ ಅವರಿಂದ ಈ  ಯಮನ್ ರಾಗಾಧಾರಿತ ಸಂಯೋಜನೆ ಮಾಡಿಸಿರಬಹುದು.  ರಾಘವೇಂದ್ರ ರಾಜ್‌ಕುಮಾರ್ ಹಾಡಿರುವ ಈ ಹಾಡಿನಲ್ಲಿ ಚಿತ್ರದ ಸನ್ನಿವೇಶಕ್ಕನುಗುಣವಾಗಿ ಹವ್ಯಾಸಿ ಹಾರ್ಮೋನಿಯಮ್ ವಾದಕನೋರ್ವ ಒಮ್ಮೆಗೆ ಒಂದೇ ರೀಡ್ ಒತ್ತಿ ನುಡಿಸುವಾಗ ಹೊರಡುವ ಟಕ್ ಟಕ್ ಸದ್ದೂ ಕೇಳಿಸುತ್ತದೆ!


6. ಬಹುತ್ ಶುಕ್ರಿಯಾ

ಓ.ಪಿ. ನಯ್ಯರ್ ಅವರಷ್ಟು ಚೆನ್ನಾಗಿ ಚಿತ್ರಸಂಗೀತದಲ್ಲಿ ಹಾರ್ಮೋನಿಯಂ ಬಳಸಿದವರು ಇನ್ಯಾರೂ ಇರಲಾರರು.  ಇದು ಏಕ್ ಮುಸಾಫಿರ್ ಏಕ್ ಹಸೀನಾ ಚಿತ್ರಕ್ಕಾಗಿ ರಫಿ-ಆಶಾ ಹಾಡಿದ ಹಾಡು.  ರಫಿ ಹತ್ತು ಹನ್ನೆರಡು ರೀತಿಯ ಧ್ವನಿಗಳಲ್ಲಿ ಹಾಡಬಲ್ಲವರಾಗಿದ್ದವರು.  ಈ ಹಾಡಲ್ಲಿ ಎಲ್ಲ ಸ್ಥಾಯಿಗಳಲ್ಲೂ ಅವರ ಧ್ವನಿ ಹಸನಾದ ಬೆಣ್ಣೆಯಂತಿದೆ!


7. ಸುಭಾನಲ್ಲಾ ಹಸೀಂ ಚೆಹರಾ


ಕಶ್ಮೀರ್ ಕೀ ಕಲಿ ಚಿತ್ರದ ನಯ್ಯರ್ ಅವರ ಈ ರಫಿ ಮಾಸ್ಟರ್ ಪೀಸ್ ನನ್ನ ಅತಿ ಮೆಚ್ಚಿನದ್ದು.  ಆ ಕಾಲದಲ್ಲಿ ರೇಡಿಯೋ ಸಿಲೋನಿನಲ್ಲಿ ಇದು ದಿನ ನಿತ್ಯವೆಂಬಂತೆ ಕೇಳಲು ಸಿಗುತ್ತಿತ್ತು.  ಒಂದು ವಿಶೇಷವೆಂದರೆ ರೆಕಾರ್ಡಲ್ಲಿ ಇದ್ದ ಒಂದು ಚರಣ ಸಿನಿಮಾದಲ್ಲಿಲ್ಲ, ಸಿನಿಮಾದಲ್ಲಿರುವ ಒಂದು ಚರಣ ರೆಕಾರ್ಡಲ್ಲಿಲ್ಲ.  ನಾನು ಅವೆರಡನ್ನೂ ಮೇಳೈಸಿ ಮಾಡಿದ ಮೂರೂ ಚರಣಗಳುಳ್ಳ  ವರ್ಷನ್ ಇಲ್ಲಿದೆ.  ಬೇರೆಲ್ಲೂ ಇದು ಕೇಳಲು ಸಿಗದು. 


8. ಕಜ್‌ರಾ ಮೊಹಬ್ಬತ್ ವಾಲಾ

ಒಂದು ಕಾಲದಲ್ಲಿ ತನ್ನ ಮುಖ್ಯ ಗಾಯಕಿಯಾಗಿದ್ದ ಶಂಶಾದ್ ಬೇಗಂ ಅವರ ಧ್ವನಿಯನ್ನು ಅನೇಕ ವರ್ಷಗಳ ನಂತರ ನಯ್ಯರ್ ಅವರು ಆಶಾ ಜತೆ ಬಳಸಿಕೊಂಡ ಈ ಹಾಡು ಕಿಸ್ಮತ್ ಚಿತ್ರದ್ದು. ತನ್ನ ಉತ್ತುಂಗದ ದಿನಗಳಲ್ಲಿ ಹಾಡೊಂದಕ್ಕೆ 300ರಿಂದ 400 ರೂಪಾಯಿ ದೊರಕುತ್ತಿದ್ದು ಅಪರೂಪಕ್ಕೆ ಹಾಡಿದ ಈ ಹಾಡಿಗೆ 1000 ರೂಪಾಯಿಗಳ ಸಂಭಾವನೆ ಸಿಕ್ಕಿತ್ತು ಎಂದು ಶಂಶಾದ್ ಬೇಗಂ ಒಂದು ಇಂಟರ್‌ವ್ಯೂದಲ್ಲಿ ಹೇಳಿದ್ದರು. ಕಿಸ್ಮತ್ ಚಿತ್ರ ಯಾರಿಗೂ ನೆನಪಿಲ್ಲದಿದ್ದರೂ ಈ ಹಾಡು ಅಜರಾಮರವಾಗಿ ಉಳಿಯಿತು.  


9. ಚಲತ್ ಮುಸಾಫಿರ್ ಮೋಹ್ ಲಿಯಾರೇ

ಕವಿ ಶೈಲೇಂದ್ರ ಅವರು ಸ್ವತಃ ನಿರ್ಮಿಸಿದ ತೀಸ್ರೀ ಕಸಂ ಚಿತ್ರದ ಹಳ್ಳಿಗಾಡು ಶೈಲಿಯ ಹಾಡಿದು. ಯಾವಾಗಲೂ  ವೈವಿಧ್ಯಮಯ ವಾದ್ಯಗಳ ದೊಡ್ಡ ಆರ್ಕೆಷ್ಟ್ರಾ ಬಳಸುತ್ತಿದ್ದ ಶಂಕರ್ ಜೈಕಿಶನ್ ಅವರ ಈ ಸರಳ ಹಾಡಿನಲ್ಲಿ ಮನ್ನಾಡೇ ಮತ್ತು ಕೋರಸ್ ಧ್ವನಿಯ ಜೊತೆ ಹಾರ್ಮೋನಿಯಂ ಮತ್ತು ಢೋಲಕ್‌ನದ್ದೇ ಪ್ರಮುಖ ಪಾತ್ರ. ಹಾಯಾಗಿ ಹಾಡು ಬರೆದುಕೊಂಡು ಇರುವುದು ಬಿಟ್ಟು ಈ ಚಿತ್ರ ತಯಾರಿಸಲು ಹೋಗಿ ತನ್ನವರೆನ್ನಿಸಿಕೊಂಡವರಿಂದಲೇ ಮೋಸ ಹೋಗಿ ಅದೇ ಕೊರಗಿನಲ್ಲಿ ಶೈಲೇಂದ್ರ ಬದುಕಿಗೆ ವಿದಾಯ ಹೇಳಿದರು. ಶಂಕರ್ ಜೈಕಿಶನ್ ತಂಡದ ಈ ಪ್ರಮುಖ ಕೊಂಡಿ ಈ ರೀತಿ ಕಳಚಿದ ಮೇಲೆ ಅವರ ಸಂಗೀತದಲ್ಲಿದ್ದ ಹಿಂದಿನ ವೈಭವ  ಮತ್ತೆಂದೂ ಮರಳಲಿಲ್ಲ.


10. ದೀವಾನೆ ಹೈಂ ದೀವಾನೊಂ ಕೋ ನ

ಅಮಿತಾಭ್ ಬಚ್ಚನ್ angry young man ಆಗಿ ಕಾಣಿಸಿಕೊಂಡ ಕಲ್ಯಾಣ್‌ಜೀ ಆನಂದಜೀ ಸಂಗೀತವಿದ್ದ ಜಂಜೀರ್ ಚಿತ್ರದ ಈ ರಫಿ-ಲತಾ ಹಾಡಿನಲ್ಲೂ ಢೋಲಕ್‌, ಹಾರ್ಮೋನಿಯಂಗಳದ್ದೇ ಪ್ರಮುಖ ಪಾತ್ರ.  ಇದನ್ನು ತೆರೆಯ ಮೇಲೆ ಅಭಿನಯಿಸಿದವರು ಈ ಹಾಡನ್ನು ಬರೆದ  ಗುಲ್ಶನ್ ಬಾವ್ರಾ ಮತ್ತು ಅವರ ಪತ್ನಿ ಸಂಜನಾ.  ಆ ಚಿತ್ರದಲ್ಲಿ ಹೀರೋ ಅಮಿತಾಭ್ ಅವರಿಗೆ ಒಂದೂ ಹಾಡಿಲ್ಲದಿರುವುದು ಗಮನಾರ್ಹ.  ದೇವಾನಂದ್ ಇದೇ ಕಾರಣಕ್ಕಾಗಿ ಆ ಚಿತ್ರದಲ್ಲಿ ನಟಿಸಲು ಒಪ್ಪಿರಲಿಲ್ಲವಂತೆ.  ಪೋಲಿಸ್ ಇನ್ಸ್ಪೆಕ್ಟರ್ ಎಲ್ಲಾದರೂ ಮರ ಸುತ್ತಿ ಹಾಡುವುದುಂಟೇ ಎಂದು ನಿರ್ದೇಶಕ ಪ್ರಕಾಶ್ ಮೆಹ್ರಾ ಅವರ ವಾದವಾಗಿತ್ತು. ಇದೇ ಚಿತ್ರದ ಪಠಾಣ್ ಹಾಡು ಯಾರಿ ಹೈ ಈಮಾನ್ ಮೇರಾ ಹಾಡಿನ ಅಪಾರ ಜನಪ್ರಿಯತೆಯ ಮುಂದೆ ಈ ಹಾಡು ಮಂಕಾಯಿತು.  ಅದು ರಫಿ ಅವರು ಹಿನ್ನೆಲೆಗೆ ಸರಿದಿದ್ದ ಸಮಯವೂ ಆಗಿತ್ತು.



ಹಾರ್ಮೋನಿಯಂ ಬಳಸಿದ ಇನ್ನೂ ಎಷ್ಟೋ ಹಾಡುಗಳು ನಿಮಗೂ ಗೊತ್ತಿರಬಹುದಲ್ಲವೇ.

 

1 comment:

  1. ವಿಶೇಷವೆಂದರೆ ವಿಶೇಷವಾದ ವಿಷಯಗಳು... ಧನ್ಯವಾದಗಳು ☺️🙏

    ReplyDelete

Your valuable comments/suggestions are welcome