Saturday, 29 June 2019

ಸದಾರಮೆಯ ಸದಾರಮ್ಯ ಗಾನ



ರಂಗಭೂಮಿಯಲ್ಲಿ ಆಸಕ್ತಿ ಇರುವವರಿಗೆಲ್ಲ ಸದಾರಮೆಯ ಕಥೆ ಗೊತ್ತಿರುವಂಥದ್ದೇ. ಒಬ್ಬ ರಾಜ.  ಆತನಿಗೊಬ್ಬ ರಾಜಕುಮಾರ. ವೇದಾಂತದತ್ತ ವಾಲಿದ್ದ ಆತ ಶ್ರೇಷ್ಠಿಯ ಮಗಳು ಸದಾರಮೆಯಲ್ಲಿ ಅನುರಕ್ತನಾಗುತ್ತಾನೆ.  ಆಕೆಯ ಸೋದರ ಆದಿಮೂರ್ತಿ  ಈ ವಿವಾಹವಾಗಬೇಕಾದರೆ ತನಗೆ ಪಟ್ಟಾಭಿಷೇಕವಾಗಬೇಕೆಂಬ ಪಟ್ಟು ಹಿಡಿಯುತ್ತಾನೆ.  ಮಗನ ಸುಖಕ್ಕಾಗಿ ಏನು ಮಾಡಲೂ ಸಿದ್ಧನಿದ್ದ ರಾಜ ಇದಕ್ಕೊಪ್ಪುತ್ತಾನೆ.  ರಾಜ್ಯವಿಹೀನನಾದ ರಾಜಕುಮಾರ ಸದಾರಮೆಯೊಡನೆ ಕಾಡುಮೇಡು ಅಲೆಯಬೇಕಾಗುತ್ತದೆ.  ಅರಣ್ಯದಲ್ಲಿ ಸದಾರಮೆ ಕ್ಷುದ್ಬಾಧೆಗೊಳಗಾದಾಗ ಆಕೆ ಕೈಯಾರೆ ತಯಾರು ಮಾಡಿದ್ದ ಕಸೂತಿಯ ಕರವಸ್ತ್ರವನ್ನು ವಿಕ್ರಯಿಸಿ ಆಹಾರ ತರಲು ರಾಜಕುಮಾರ ಸಮೀಪದ ರಾಜ್ಯಕ್ಕೆ ಹೋಗುತ್ತಾನೆ.  ವಿಷಯ ತಿಳಿದ  ಆ ರಾಜ್ಯದ ದುಷ್ಟನಾದ ರಾಜ ಆತನನ್ನು ಬಂಧಿಸಿ ಸುಳ್ಳು ಹೇಳಿ ಸದಾರಮೆಯನ್ನೂ ಕರೆಸಿಕೊಂಡು ಆಕೆಯಲ್ಲಿ ಪ್ರಣಯಭಿಕ್ಷೆ ಬೇಡುತ್ತಾನೆ. ಚತುರೆಯಾದ ಆಕೆ ಒಂದು ತಿಂಗಳ ಕಾಲಾವಕಾಶ ಕೇಳಿ ಅಲ್ಲಿಯ ವರೆಗೆ ತಾನು ಏಕಾಂತವಾಗಿರಲು  ಒಂದು ವಿಶೇಷ ಮಹಲನ್ನು ನಿರ್ಮಿಸಿ ಕೊಡಬೇಕೆಂದೂ ರಾಜಕುಮಾರನನ್ನು ಸೆರೆಯಿಂದ ಮುಕ್ತಗೊಳಿಸಬೇಕೆಂದೂ ಷರತ್ತು ವಿಧಿಸುತ್ತಾಳೆ.  ಕಾಮಾಂಧನಾದ ದುಷ್ಟ ರಾಜ ಇದಕ್ಕೊಪ್ಪುತ್ತಾನೆ.  ಅದೃಷ್ಟವಶಾತ್ ಆ ಮಹಲಿನ ಸಮೀಪ ರಾಜಕುಮಾರ ಆಕೆಗೆ ಕಾಣಸಿಗುತ್ತಾನೆ.  ರಾತ್ರಿ ಹನ್ನೆರಡು ಗಂಟೆಗೆ ಸರಿಯಾಗಿ ಅಲ್ಲಿಂದ ತಪ್ಪಿಸಿಕೊಳ್ಳುವುದೆಂದೂ, ಅದಕ್ಕಾಗಿ ಮಹಲಿನ ಮಹಡಿಯಿಂದಿಳಿಯಲು ನೂಲೇಣಿ ಮತ್ತು ತನಗೆ ಧರಿಸಲು ಗಂಡುಡುಗೆಯೊಂದಿಗೆ  ರಾಜಕುಮಾರ ಸಿದ್ಧನಾಗಿ ಬರಬೇಕೆಂದೂ ಇಬ್ಬರೂ ಮಾತನಾಡಿಕೊಳ್ಳುತ್ತಾರೆ.  ಅಲ್ಲೇ ಮರೆಯಲ್ಲಿದ್ದ ಕಳ್ಳನೊಬ್ಬ ಇದನ್ನು ಕೇಳಿಸಿಕೊಳ್ಳುತ್ತಾನೆ. ವಸ್ತುಗಳನ್ನೆಲ್ಲ ಸಿದ್ಧಪಡಿಸಿಕೊಂಡು ಆತುರದಲ್ಲಿ ಒಂದು ತಾಸು ಮೊದಲೇ ಅಲ್ಲಿಗೆ ಬಂದ ರಾಜಕುಮಾರ ಅಲ್ಲೇ ನಿದ್ರಿಸುತ್ತಾನೆ.  ಇದನ್ನೇ ಕಾಯುತ್ತಿದ್ದ ಕಳ್ಳ ನೂಲೇಣಿ ಮತ್ತು ಗಂಡುಡುಗೆ ಸಂಪಾದಿಸಿ ತಾನೇ ರಾಜಕುಮಾರನಂತೆ ನಟಿಸಿ ಸದಾರಮೆಯೊಂದಿಗೆ ಅಲ್ಲಿಂದ ಪಲಾಯನಗೈಯುತ್ತಾನೆ.  ಮೋಸವರಿತ ಸದಾರಮೆ ಹೊಟ್ಟೆ ನೋವೆಂದು ನಾಟಕವಾಡಿ ನೀರು ತರಲು ಕಳ್ಳನನ್ನು ದೂರ ಕಳಿಸುತ್ತಾಳೆ.  ಆತ ಹಿಂತಿರುಗುವಷ್ಟರಲ್ಲಿ ಅಲ್ಲಿಂದ ತಪ್ಪಿಸಿಕೊಂಡ ಆಕೆ ಇನ್ನೊಂದು ರಾಜ್ಯವನ್ನು ಸೇರುತ್ತಾಳೆ.  ಒಳ್ಳೆಯವಳಾದ ಅಲ್ಲಿಯ ರಾಣಿ ಛತ್ರದಲ್ಲಿ ಸದಾರಮೆಯ ಚಿತ್ರವನ್ನಿರಿಸುತ್ತಾಳೆ.  ಸದಾರಮೆಯನ್ನು ಹುಡುಕುತ್ತಾ ಬಂದ ದುಷ್ಟ ರಾಜ ಮತ್ತು ಕಳ್ಳ  ಛತ್ರದಲ್ಲಿದ್ದ ಆಕೆಯ ಚಿತ್ರವನ್ನು ದೂಷಿಸುತ್ತಾರೆ.  ರಾಣಿಯು ಅವರನ್ನು ಸೆರೆಮನೆಗಟ್ಟುತ್ತಾಳೆ.  ಕೆಲಕಾಲದ ನಂತರ ಅದೇ ಛತ್ರಕ್ಕೆ ಬಂದ ರಾಜಕುಮಾರ ಚಿತ್ರವನ್ನು ಕಂಡು ದುಃಖಿಸುತ್ತಾನೆ. ಈತನೇ ಸದಾರಮೆಯ ಪತಿ ಎಂದು ರಾಣಿಗೆ ತಿಳಿಯುತ್ತದೆ. ಪತಿ ಪತ್ನಿಯರ ಮಿಲನವಾಗುತ್ತದೆ.

ಚಂದಮಾಮದ ಕಥೆಯಂತಿರುವ ಇದರ ಮೂಲ ಕರ್ತೃ ಕೇರಳದ  ಕೆ.ಸಿ. ಕೇಶವ ಪಿಳ್ಳೈ ಎಂದು ಕೆಲವರು ಹೇಳುತ್ತಾರೆ.  ಕಳ್ಳನ ಪಾತ್ರದಲ್ಲಿ ನಟಿಸಿ ಇದನ್ನು ಅತಿ ಜನಪ್ರಿಯಗೊಳಿಸಿದ ಗುಬ್ಬಿ ವೀರಣ್ಣನವರಿಗಾಗಿ ಬೆಳ್ಳಾವೆ ನರಹರಿ ಶಾಸ್ತ್ರಿಗಳು ಈ ಕಥೆ ಬರೆದರೆಂದೂ ಕೆಲವರ ಅಂಬೋಣ.  ಆದರೆ ಇದೆಲ್ಲ ಅಂತರ್ಜಾಲದಲ್ಲಿ ಸಿಕ್ಕಿದ ಮಾಹಿತಿ.  ಇಲ್ಲಿ ನಾನು ಬರೆದದ್ದನ್ನೂ ಸೇರಿಸಿ ಇಂಥ ಯಾವುದೇ ಮಾಹಿತಿಯನ್ನು ಪರಾಂಬರಿಸಿ ನೋಡದೆ ನಂಬಬಾರದು ಎಂಬುದು ಆರ್ಯೋಕ್ತಿ.

ಸಾಂಪ್ರದಾಯಿಕ  ಮತ್ತು ಆಧುನಿಕ ರಂಗಭೂಮಿ ಎರಡರಲ್ಲೂ ಈ ನಾಟಕ ಇಂದಿಗೂ ಜನಪ್ರಿಯ.  ಕಥೆಗಿಂತಲೂ ಆದಿಮೂರ್ತಿ, ಸದಾರಮೆ ಮತ್ತು ವಿಶೇಷವಾಗಿ ಕಳ್ಳನ ಪಾತ್ರಗಳಿಂದಾಗಿಯೇ ಇದು ಇನ್ನೂ ಜೀವಂತವಾಗಿರುವುದು ಎಂದರೆ ತಪ್ಪಾಗಲಾರದೇನೋ.



ಸದಾರಮೆಯ ಕಥೆ  ಎರಡು ಸಲ ಬೆಳ್ಳಿತೆರೆಯ ಮೇಲೆ ಕಾಣಿಸಿಕೊಂಡಿತು.  ಮೊದಲ ಸಲ ಕನ್ನಡದ ಮೂರನೆ ಮಾತನಾಡುವ ಚಲನಚಿತ್ರವಾಗಿ  1935ರಲ್ಲಿ.  ಇದನ್ನು ಶಕುಂತಲ ಫಿಲಂಸ್ ಲಾಂಛನದಲ್ಲಿ ಗುಬ್ಬಿ ವೀರಣ್ಣ ಮತ್ತು ಷಣ್ಮುಖ ಚೆಟ್ಟಿಯಾರ್ ನಿರ್ಮಿಸಿ ರಾಜಾ ಚಂದ್ರಶೇಖರ್ ನಿರ್ದೇಶಿಸಿದ್ದರು.  ಎರಡನೆಯ ಸಲ 1956ರಲ್ಲಿ ಕು.ರ.ಸೀ ಅವರ ನಿರ್ದೇಶನದಲ್ಲಿ ಕಲ್ಯಾಣ್ ಕುಮಾರ್, ಸಾಹುಕಾರ್ ಜಾನಕಿ, ನರಸಿಂಹರಾಜು ಮುಂತಾದವರ ತಾರಾಗಣದಲ್ಲಿ ಸದಾರಮೆ ತೆರೆ ಕಂಡಿತು. ಇದು ಭಾಗಶಃ ವರ್ಣದಲ್ಲಿತ್ತಂತೆ.  ದುರದೃಷ್ಟವಶಾತ್ ಈ ಎರಡೂ ಚಿತ್ರಗಳ ಪ್ರಿಂಟ್ ಆಗಲಿ ವೀಡಿಯೊ ಆಗಲಿ ಇದ್ದಂತಿಲ್ಲ. ಆದರೆ ಅದೃಷ್ಟವಶಾತ್ 1956ರ ಸದಾರಮೆಯ ಹತ್ತು ಸುಮಧುರ ಹಾಡುಗಳು ಲಭ್ಯವಿವೆ. ಕು.ರ.ಸೀ ನಿರ್ದೇಶನದ ಸದಾರಮೆ ತೆಲುಗಿನಲ್ಲೂ ತಯಾರಾಗಿತ್ತು. 

ಆಗ ಪ್ರಕಟವಾಗುತ್ತಿದ್ದ ನಗುವ ನಂದ ಎಂಬ ಮಾಸಪತ್ರಿಕೆಯ ಜೂನ್ 1956ರ ಸಂಚಿಕೆಯಲ್ಲಿ ಪ್ರಕಟವಾಗಿದ್ದ ಸದಾರಮೆ ಚಿತ್ರದ ವಿಮರ್ಶೆಯನ್ನು ಇಲ್ಲಿ ನೋಡಬಹುದು.





ಕು.ರ.ಸೀ ನಿರ್ದೇಶನದ ಸದಾರಮೆ ಚಿತ್ರದ ಸಂಗೀತ ನಿರ್ದೇಶಕರು ಆರ್. ಸುದರ್ಶನಂ ಮತ್ತು ಗೋವರ್ಧನ್.  ಸಂಭಾಷಣೆ ಹಾಡುಗಳನ್ನು  ಬರೆದವರು ಸ್ವತಃ ಕು.ರ.ಸೀ. ಮಾಧವಪೆದ್ದಿ ಸತ್ಯಂ ಮತ್ತು ಎ.ಎಂ ರಾಜಾ ಅವರ ಧ್ವನಿ ಒಂದೊಂದು ಹಾಡಿನಲ್ಲಿ ಕೇಳಿಸುತ್ತದೆ. ಉಳಿದೆಲ್ಲವುಗಳನ್ನು ಹಾಡಿದವರು ಟಿ.ಎಂ. ಸೌಂದರರಾಜನ್ ಮತ್ತು ಪಿ.ಸುಶೀಲಾ. ಆಗಿನ ಚಿತ್ರಗಳಲ್ಲಿ ಪಿ.ಲೀಲಾ, ಸೂಲಮಂಗಲಂ ರಾಜಲಕ್ಷ್ಮಿ, ಜಿಕ್ಕಿ, ಜಮುನಾ ರಾಣಿ  ಮುಂತಾದವರ ಜೊತೆಯಲ್ಲಿ  ಪಿ. ಸುಶೀಲಾ  ಅವರ ಧ್ವನಿ ಆಗೊಮ್ಮೆ ಈಗೊಮ್ಮೆ ಅಷ್ಟೇ ಕೇಳಿ ಬರುತ್ತಿತ್ತು.  ಅವರೇ ಎಲ್ಲ ಹಾಡುಗಳನ್ನು ಹಾಡಿದ ಪ್ರಥಮ ಕನ್ನಡ ಚಿತ್ರ ಇದಾಗಿರಬಹುದೇನೋ ಎಂದು ನನ್ನ ಗುಮಾನಿ. ತಮಿಳು ಚಿತ್ರರಂಗದ ಆಥೆಂಟಿಕ್ ಧ್ವನಿ ಎಂದೇ ಖ್ಯಾತರಾದ ಟಿ.ಎಂ. ಸೌಂದರರಾಜನ್ ಈ ಚಿತ್ರದ ಮುಖ್ಯ ಗಾಯಕರಾಗಿದ್ದುದೂ ಒಂದು ವಿಶೇಷ.  ಇದನ್ನು ಬಿಟ್ಟರೆ ಕನ್ನಡದ ರತ್ನಗಿರಿ ರಹಸ್ಯ ಚಿತ್ರದಲ್ಲಿ ಒಂದೆರಡು ಹಾಡುಗಳು, ಓಹಿಲೇಶ್ವರ,  ಭಕ್ತ ಮಲ್ಲಿಕಾರ್ಜುನ, ಪ್ರೇಮಮಯಿ, ಸಿಂಹಸ್ವಪ್ನ ಮುಂತಾದ ಕೆಲ ಚಿತ್ರಗಳಲ್ಲಿ ಒಂದೊಂದು  ಹಾಡನ್ನಷ್ಟೇ ಅವರು ಹಾಡಿರುವುದು.  ಸದಾರಮೆಯಲ್ಲಿ ಹತ್ತು ಹಾಡುಗಳಿದ್ದರೂ ಅಂದಿನ ದಿನಗಳಲ್ಲಿ ಇವರು ಹಾಡಿದ ಬಾರೆ ಬಾರೆ ನನ್ನ ಹಿಂದೆ ಹಿಂದೆ ಮತ್ತು  ಚಿನ್ನ ಕೇಳ್ ಬ್ಯಾಡ್ವೆ ನನ್ನ ಪುರಾಣ ಮಾತ್ರ ರೇಡಿಯೋದಲ್ಲಿ ಕೇಳಿಬರುತ್ತಿದ್ದುದು.   ಇವರ ಕತ್ತಿಯ ಅಂಚಿನಂಥ ಕಂಚಿನ ಕಂಠದಲ್ಲಿ ಈ ಹಾಡುಗಳನ್ನು ಕೇಳಿದ ಮೇಲೆ ಸೌಮ್ಯ ಧ್ವನಿಯ ಇತರ ಗಾಯಕರ ಹಾಡುಗಳು ಸಪ್ಪೆ ಎನಿಸಿ ಇವರೇ ಇನ್ನಷ್ಟು ಕನ್ನಡ ಹಾಡುಗಳನ್ನು ಹಾಡಬೇಕಿತ್ತು ಅನ್ನಿಸುತ್ತಿದ್ದುದೂ ಉಂಟು. ಸ್ವಲ್ಪ ಅನುನಾಸಿಕತೆ, ತಮಿಳು ಹಾಡುಗಳಿಗೆ ಬೇಕಾದ ಒರಟುತನ,  ಸ್ಪಷ್ಟ ಉಚ್ಚಾರ, ಶ್ರುತಿ ಶುದ್ಧತೆ, ಶಕ್ತಿ ಶಾಲಿ voice throw ಇವೆಲ್ಲ ಮೇಳೈಸಿದ ಇವರ ಧ್ವನಿಯನ್ನು ನಾನು ಹುಳಿ, ಸಿಹಿ, ಒಗರು ಎಲ್ಲ ರುಚಿಗಳು ಸೇರಿದ  ಹಾಗಲಕಾಯಿಯ ಚಟ್ಟುಹುಳಿಗೆ ಹೋಲಿಸುವುದುಂಟು!


ಇದಿಷ್ಟು ಪೂರ್ವರಂಗದ ನಂತರ ಈಗ ಆ ಹತ್ತು ಹಾಡುಗಳನ್ನು ಒಂದೊಂದಾಗಿ ಆಸ್ವಾದಿಸೋಣ. ಅತ್ಯುತ್ತಮ ಗುಣಮಟ್ಟದ ಧ್ವನಿಯ ಇವುಗಳನ್ನು ಹೆಡ್ ಫೋನಲ್ಲಿ ಆಲಿಸಿದರೆ ಹೆಚ್ಚಿನ ಆನಂದ ಹೊಂದಬಹುದು.

1. ವನರಾಣಿ ಎಲ್ಲಿಂದ ತಂದೆ
ಇದು ಪಿ.ಸುಶೀಲಾ ಧ್ವನಿಯಲ್ಲಿದೆ. ಸಖಿಯರೊಂದಿಗೆ ಉದ್ಯಾನವನದಲ್ಲಿ ವಿಹರಿಸುತ್ತಿರುವ ಸದಾರಮೆ ಇದನ್ನು ಹಾಡಿರಬಹುದೆಂದು ನನ್ನ ಊಹೆ.  ಪ್ರಕೃತಿಯನ್ನು ವರ್ಣಿಸುವ ಇಂತಹ ಇತರ ಚಿತ್ರಗೀತೆಗಳಿಂದ ಭಿನ್ನವೇನಲ್ಲ.  ಕೇಳಲು ಇಂಪಾಗಿದೆ.



ವನರಾಣಿ ಎಲ್ಲಿಂದ ತಂದೆ ಚೆಲುವ
ಮನವ ಸೆಳೆವ ಸುಂದರ ಭಾವ
ಹೇಳೆ ವನರಾಣಿ ಎಲ್ಲಿಂದ ತಂದೆ

ಎಲ್ಲ ಸಿಂಗಾರ ವೈಯಾರ ಯಾವುದೇ
ನಲ್ಲೆ ನಿನಗಿಂತ ಮಂದಾರ ಯಾವುದೇ
ಈ ಪರಿಯ ಮೈ ಸಿರಿಯ
ಯಾರಲ್ಲಿ ನೀ ತಂದೆ ಜಾಣೆ

ಬಿಡುವೇ ಇಲ್ಲದ ಸಡಗರವೇನೆ
ಸಂತಸವೀವ ಸಂಭ್ರಮವೇನೆ
ಎಲ್ಲೆಲ್ಲೂ ತುಂಬಿರುವೆ
ನೂರಾರು ಸಾಧನ
ಸಖಿ ನಿನ್ನ ಜೀವನ ಪಾವನ
ತಣಿಸಿರುವೆ ಕಣ್ಮನ



2. ಪ್ರೇಮವೇ ಲೋಕದ ಜೀವ
ಈ ಚಿತ್ರದಲ್ಲಿ ಎ.ಎಂ ರಾಜಾ ಹಾಡಿರುವ ಏಕೈಕ ಹಾಡಿದು.  ಜೊತೆಯಲ್ಲಿ ಪಿ.ಸುಶೀಲಾ ಕೂಡ ಇದ್ದಾರೆ. ಕಥೆಯಲ್ಲಿ ಕ್ಷತ್ರಿಯ ರಾಜಕುಮಾರನು ವೈಶ್ಯ ಕುಲದ ಸದಾರಮೆಯನ್ನು ವಿವಾಹವಾಗಿರುವುದರಿಂದ ಜಾತಿ ಮತ ಮೀರಿದ ನವೋದಯದ ಉಲ್ಲೇಖ ಇದರಲ್ಲಿರುವುದನ್ನು ಗಮನಿಸಬಹುದು. ರಾಜ್ಯ ಕಳೆದುಕೊಂಡರೂ ಹೊಸದಾಗಿ ವಿವಾಹವಾದ ಖುಶಿಯಲ್ಲಿ ನವದಂಪತಿಗಳು ಇದನ್ನು ಹಾಡಿರಬಹುದು.



ಪ್ರೇಮವೇ ಲೋಕದ ಜೀವ
ಆನಂದವೀ ಭಾವ
ಮನ್ಮಂದಿರದಧಿದೈವ
ನಿರಂತರ ತೇಜೋ ವೈಭವ

ಪ್ರೇಮಕೆನೆ ಬೇರೆ ಸೌಖ್ಯ
ಬೇರೆ ಭಾಗ್ಯ ನಾ ಕಾಣೆನೇ
ಪ್ರೇಮ ಗುರು ಪಾದ ಪೂಜೆ ಆರಾಧನೆ
ಪ್ರೇಮವೇ ಲೋಕದ ಜೀವ

ನಿರಾತಂಕವೀ ರೀತಿ
ಈ ನೀತಿ ನಿರ್ಮಲ ಪ್ರೀತಿ
ಪುರಾತನ ಪ್ರೀತಿ ಪಥಕೆ
ಜಾತಿ ಮತದ ಭೀತಿ
ನವೋದಯಕೆ ನೀನೇ ಜ್ಯೋತಿ
ನೀನೇ ಎನ್ನಯ ಕಾಂತಿ
ಪ್ರೇಮಿಗಳ ಪ್ರೀತಿ ಮುಂದು
ಜಾತಿ ಹಿಂದು ಎಂದಾದರೂ
ಪ್ರೇಮಿಗಳ ಕೀರ್ತಿಯೊಂದೇ
ಸ್ಪೂರ್ತಿ ಮುಂದೆ ಎಂದೆಂದಿಗೂ


3. ಬಿರುಗಾಳಿ ಬಡಿದ
ವಿಷಾದ ಭಾವದ ಈ ಹಾಡು ಪಿ.ಸುಶೀಲಾ ಅವರ ಧ್ವನಿಯಲ್ಲಿದೆ. ರಾಜಕುಮಾರನಿಂದ  ಬೇರ್ಪಟ್ಟು ಇತರರಿಂದ ಕಿರುಕುಳಕ್ಕೊಳಗಾದ ಸದಾರಮೆಯ ವೇದನೆ ಇದಾಗಿರಬಹುದು.



ಕೊನೆಯೇ ಕಾಣೆ ಈ ವೇದನಾ ಪರಂಪರೆಗೆ
ರಾಜಕುವರನ ಕೈ ಹಿಡಿದ ಅಪೂರ್ವ ಭಾಗ್ಯದ ಫಲ ಇದೇನೆ
ಇದೇನೆ

ಬಿರುಗಾಳಿ ಬಡಿದ ಹರಿಗೋಲ ತೆರದಿ
ಬದುಕೆಲ್ಲ ಬಯಲಾಯಿತೇ
ಬದುಕೆಲ್ಲ ಬಯಲಾಯಿತೇ ನೆನೆದ
ಸಿಹಿಯೆಲ್ಲ ಕಹಿಯಾಯಿತೇ

ಹೃದಯದ ವೇದನೆ ಅದರಲಿ ಶೋಧನೆ
ಹದಗೈವೆ ವಿಧಿ ನೀನೆ
ವಿಧಿ ನೀನೆ

ಮುಗಿಲೇರಿತೇ ಸೊಗ ಸಿಗದೆ ನೋಟಕೆ
ಜಗವೆಲ್ಲ ಹಗೆಯಾಯಿತೇಕೆ
ಮಾನವತೆ ತೊರೆದಾ ಜಗದಲ್ಲಿ
ಮಾನದಿ ಜೀವಿಸುವ ಸತಿಗೆ
ಮರುಭೂಮಿ ಧರೆಯಾಯಿತೇ


4. ಕರುಣಾಳು ಕಾಯೊ ದೇವ
ಪಿ.ಸುಶೀಲಾ ಅವರ ಧ್ವನಿಯಲ್ಲಿರುವ ಇದು ಕೂಡ ವಿಷಾದ ಭಾವದ ಗೀತೆ.



ಕರುಣಾಳು ಕಾಯೊ ದೇವ
ಪರದೇಸಿಯಾದೆ ನಾ
ಮೊರೆ ಲಾಲಿಸಿ ಪೊರೆ ಶೀಲವ
ಚಿರ ಕಾಲ ದೇವ ದೇವ

ತೆರೆದೀತೆ ಮರಳಿ ಬಾಳು
ಹರಿದೀತೆ ಸೆರೆವಾಸ
ಪರಿಹಾರದ ಪರಿ ಕಾಣೆನೊ
ಪೊರೆಯೈ ಮಹಾನುಭಾವ

ಮೊರೆ ಕೇಳಿ ಸತಿಯ ಕಾದೆ
ಕುರುರಾಜ ಸಭೆಯಲ್ಲಿ
ವರ ನೀಡಿದೆ ಕೃಪೆ ತೋರಿದೆ
ಅಪಮಾನ ದೂರಗೈದೆ

ದಯ ತೋರು ದಿವ್ಯ ರೂಪ
ಹರಿಸೆನ್ನ ಸಂತಾಪ
ತಡ ಮಾಡದೆ ಬಡ ದಾಸಿಯ
ಕೈ ನೀಡಿ ಕಾಯೊ ದೇವ


5. ಬಾಳುವೆಯ ದೇಗುಲದ
ಓ.ಪಿ. ನಯ್ಯರ್ ಅವರು ಹೊಸತನದ ಹಾಡುಗಳಿಗೆ ನಾಂದಿ ಬರೆದ  Mr and Mrs 55 ಚಿತ್ರದ ಥಂಡಿ ಹವಾ ಕಾಲಿ ಘಟಾ ಆ ಹೀ ಗಯಿ ಝೂಮ್ ಕೆ ಧಾಟಿಯಲ್ಲಿದೆ ಇದು.  50ರ ದಶಕದಲ್ಲಿ ಕನ್ನಡ ಚಿತ್ರಗಳಲ್ಲಿ ಹಿಂದಿ ಧಾಟಿಗಳನ್ನು ಬಳಸುವುದು ಸಾಮಾನ್ಯವಾಗಿತ್ತು.



ಬಾಳುವೆಯ ದೇಗುಲದ ಬಾಗಿಲ ನೀ ತೆರೆದೆಯಾ
ತಾಳಿಮಣಿ ತಂದೀವ ದೇವನಾಗಿ ಮೆರೆದೆಯಾ

ಬಾರಿ ಬಾರಿ ಹಾತೊರೆದ ಸಂತಸವ ತಂದೆಯಾ
ಕ್ರೂರ ಸೆರೆ ಕೊನೆಗೈದ ನನ್ನ ದೊರೆ ಬಂದೆಯಾ
ಪ್ರೇಮಜಲ ಭಕ್ತಿ ಸುಮ ಪೂಜೆಗಾಗಿ ತಂದಿಹೆ
ನಿನ್ನಡಿಯ ನೂರು ಬಗೆ ಸೇವೆಗಾಗಿ ಬಂದಿಹೆ

ಹೇಳಿ ಕೇಳಿ ಕಾಣದಿರುವ ಲೋಕಕೆಳೆವ ಸುಂದರ
ನಿನ್ನೊಲವೇ ಸ್ವರ್ಗ ಸುಖ ನೀಡೈ ನಿರಂತರ
ಎಡವಿದೆನೇ ದುಡುಕಿದೆನೇ ಘನತೆ ಮೀರಿ ನಡೆದೆನೇ
ವಿರಹಿಣಿಯ ಸರಳತೆಯ ಮನ್ನಿಸೈ ಮಹಾಶಯ

6.ಕಾಣದ ಹೆಣ್ಣ ಕರೆ ತಂದೋನೆ
ಪಿ.ಸುಶೀಲಾ ಮತ್ತು ಸೌಂದರರಾಜನ್ ಅವರ ಧ್ವನಿಯಲ್ಲಿರುವ ಈ ಹಾಡನ್ನು ಕೇಳಿದೊಡನೆ ನಿಮಗೆ ಬಂಬಯಿ ಕಾ ಬಾಬು ಚಿತ್ರದ ದೇಖನೆ ಮೆ ಭೋಲಾ ಹೈ ಬಾಬು ಚಿನ್ನನ್ನ ನೆನಪಾಗಬಹುದು.  ಆದರೆ ಗಮನಿಸಿ - ಅದು 1960ರ ಚಿತ್ರ.  ಸದಾರಮೆ ಬಂದದ್ದು 1957ರಲ್ಲಿ.  ಹೌದು, ಸರಿಯಾಗಿ ಊಹಿಸಿದಿರಿ. ಈ ಧಾಟಿ ದಕ್ಷಿಣದಿಂದಲೇ ಉತ್ತರಕ್ಕೆ ಹೋದದ್ದು.  ಆದರೆ ಕನ್ನಡದಿಂದಲ್ಲ.  ಈ ಮೊದಲೇ ಮದುರೈ ವೀರನ್ ಎಂಬ ತಮಿಳು ಚಿತ್ರದಲ್ಲಿ  ಮತ್ತು ವಹೀದಾ ರಹಮಾನ್ ನಟಿಸಿದ ಮೊದಲ ಚಿತ್ರ ತೆಲುಗಿನ ರೋಜುಲು ಮಾರಾಯಿ ಚಿತ್ರಗಳಲ್ಲಿ ಬಳಕೆಯಾಗಿತ್ತು. ಈ ಧಾಟಿಯನ್ನು ವಹೀದಾ ಅವರೇ ಮುಂಬಯಿಗೆ ಒಯ್ದದ್ದಂತೆ.  ಅಲ್ಲಿ ಇದು ಬಂಬಯಿ ಕಾ ಬಾಬು ಅಲ್ಲದೆ ಇನ್ನೂ ಒಂದೆರಡು ಚಿತ್ರಗಳಲ್ಲಿ ಬಳಕೆಯಾಯಿತು.



ಕಾಣದ ಹೆಣ್ಣ ಕರೆ ತಂದೋನೆ
ಜಾಣರ ಮೋರೆಗೆ ಮಸಿ ಬಳೆದೋನೆ
ಹ್ಯಾಂಗ ತಾನೇ ನಂಬಲೋ ಗೆಳೆಯ ನಾ ನಿನ್ನ
ಈ ಆಟವೆಲ್ಲ ಮೂರು ದಿನ ಬಲ್ಲೆ ನಾ ನಿನ್ನ

ಜೀವ ಇರೋ ತನಕ ದೇವರಾಂಗೆ ಕಾಣ್ತೀನಿ
ಜೀವ ನನ್ನ
ಜೀವ ಇರೋ ತನಕ ದೇವರಾಂಗೆ ಕಾಣ್ತೀನಿ
ನಿನ್ನ ಜೀವ ಇರೋ ತನಕ ದೇವರಾಂಗೆ ಕಾಣ್ತೀನಿ
ಆಸೆ ಇಟ್ಟ ಮ್ಯಾಲೆ ನಾನು ಮೋಸ ಮಾಡೊ ಹೈದ ಅಲ್ಲ
ಅಲ್ಲ ಅಲ್ಲ ಅಲ್ಲ
ದಿಟವೋ ಸಟೆಯೊ ಬರಿಯುಪ್ಪಟೆಯೊ
ದಿವಸದ ಬಾಳೋ ಜನುಮದ ಹಾಳೊ
ಹುತ್ತದಾಗೆ ಕೈಯ ಮಡಗಿದ ಮ್ಯಾಲೆ
ಮೆತ್ತಗಿರೊ ಮಣ್ಣೊ ಹಾವೊ ಚೇಳೊ
ಹ್ಯಾಂಗ ತಾನೇ ..

ಅಂಜಿಕೆಗೊಂದೇ ನಂಬಿಕೆ ಮದ್ದು
ಸುಖವೇ ಚಿಂತೆಗೆ ಸಿಡಿಮದ್ದು
ಅದಕೆ ಚಿನ್ನ ನಿನ್ನ ಕೈಯಾರೆ ಕದ್ದು
ನಾಜೂಕಿನಿಂದ ನಾ ಕರೆತಂದದ್ದು

ಅಂಜಿಕೆ ಬಿಟ್ಟು ನಂಬಿಕೆಯಿಟ್ಟು
ಮುಂಜಾನಿಂದ ಸಂಜೆ ತನಕ
ಆಡಿ ಹಾಡಿ ಕುಣಿಯೋಣು
ಜೋಕ ಆಡೋಣು
ಈ ಮೋಜಿನಾಗೆ ಗೆಣೆತನವ
ಬೆಳಸಿ ಬಾಳೋಣು

7. ಏಳುವೆ ಕಣಿ
ಸೌಂದರರಾಜನ್ ಹಾಡಿರುವ ಈ ಹಾಡು ಚಿತ್ರದ ಯಾವ ಸನ್ನಿವೇಶದ್ದಿರಬಹುದು ಎಂದು ಗೊತ್ತಿಲ್ಲ. ಸದಾರಮೆ ಕಥೆಯಲ್ಲಿ ಕೊರವಂಜಿ ಪಾತ್ರ ಇದ್ದಂತಿಲ್ಲ.  ಚಿತ್ರದಲ್ಲಿ ರಂಜನೆಗಾಗಿ ಸೇರಿಸಿರಬಹುದು.



ಏಳುವೆ ಕಣಿಯ ಏಳುವೆ ಕಣಿಯ
ಹೊಯ್
ಏಳುವೆ ಕಣಿಯ ಏಳುವೆ ಕಣಿಯ
ಏಳುವೆ ಕಣಿ ಏಳುವೆ ಕಣಿ  ಏಳುವೆ ಕಣಿಯ
ಕಣಿ ಕಣಿ ಕಣಿ ಕಣಿ ಏಳುವೆ ಕಣಿಯ

ಇದ್ದುದೆಲ್ಲ ಇದ್ದಾಂಗೆ ಹೇಳುವೆ ಕಣಿಯ
ಮನಸಿನಾಗೆ ನೆನೆಸಿದಾಂಗ
ಎಳಿಯಾ ಬಿಳಿಯಾ ಗೆಳೆಯಾ
                           
ಹಾಳಿ ಮೂಳಿ ಗಾಳಿ ನನ್ನ ಕರ್ಣ ಪಿಸಾಚಿ
ಯಂತ್ರ ಮಂತ್ರ ತಂತ್ರ ಎಲ್ಲ ಬಲ್ಲೆ ಕುತಂತ್ರ
ಮದ್ದಿನ ಕಣಿ ಮಾಟದ ಕಣಿ ಭೂತದ ಕಣಿ ಪ್ರೇತದ ಕಣಿ
ಜಂಟಿ ಬಂದು ಕುಂತಳಕ್ಕೆ ಜಾರಿದ ಹಾರಿದ ಕಣಿಯಾ

ಹೊಸ ಸುದ್ದಿ ಕೇಳಿ ಹೊಸ ಸುದ್ದಿ
ಹೊಸ ಸುದ್ದಿ ಹೊಸ ಸುದ್ದಿ ಬಿಸಿ ಬಿಸಿ ಸುದ್ದಿ
ಹೊಳೆ ಸುದ್ದಿ ಮಳೆ ಸುದ್ದಿ ಹೇಳುವೆ ಬುದ್ಧಿ
ರೊಕ್ಕದ ಸುದ್ದಿ ಮಕ್ಕಳ ಸುದ್ದಿ
ಅಕ್ಕರೆಯ ಸಕ್ಕರೆಯ
ಚಿಕ್ಕ ಹೆಣ್ಣ ಕೈ ಹಿಡಿಯೊ ಲೆಕ್ಕದ ಕಣಿಯ


8. ಚಿನ್ನ ಕೇಳ್ ಬ್ಯಾಡ್ವೆ ನನ್ನ ಪುರಾಣ
ಗ್ರಾಂಥಿಕ ಭಾಷೆಯ ಪದಪುಂಜಗಳನ್ನೊಳಗೊಂಡ ಪ್ರಾಸಬದ್ಧ ಹಾಡುಗಳಿಗೆ ಹೆಸರಾದ ಕು.ರ.ಸೀ ಅವರು ಚಿತ್ರದ ಸನ್ನಿವೇಶಕ್ಕೆ ತಕ್ಕಂತೆ ದೇಸೀ ಶೈಲಿಯಲ್ಲಿ ರಚಿಸಿದ ಗೀತೆ ಇದು.  ಸೌಂದರರಾಜನ್ ಅವರ ಗಾಯನ ಪ್ರತಿಭೆಯ ಪೂರ್ಣ ಅನಾವರಣ ಇಲ್ಲಾಗಿದೆ ಅನ್ನಬಹುದು. ಪಲ್ಲವಿ ಭಾಗ ಮಾತ್ರ ತಾಳದಲ್ಲಿದ್ದು ಸುದೀರ್ಘವಾದ ಮೂರೂ ಚರಣಗಳು ಆಲಾಪ ರೂಪದಲ್ಲಿವೆ. ಪಂಜಾಬಿನ ಹೀರ್ ಮತ್ತು ಮಹಾರಾಷ್ಟ್ರದ ಲಾವ್ಣಿ ಶೈಲಿಯಲ್ಲಿರುವ  ಈ ಆಲಾಪಗಳಲ್ಲಿ ಬರುವ ಡಿಜಿಟಲ್ ಶೈಲಿಯ ಒರಟುತನ ಹಾಡಿಗೆ ವಿಶೇಷ ಮೆರುಗು ನೀಡಿದೆ. ಸದಾರಮೆಯನ್ನು ಕದ್ದೊಯ್ದ ಮೇಲೆ ಕಳ್ಳನು ಆಕೆಗೆ ತನ್ನನ್ನು ಪರಿಚಯಿಸುವ ಸಂದರ್ಭದ ಹಾಡಾಗಿರಬಹುದು ಇದು. ಇದರ ಮೂರನೆ ಚರಣದಲ್ಲಿ ಮಂದಿಯ ಹೊಟ್ಟೆ ಮೇಲೆ ಹೊಡೆದು ಹಣಗಾರ ಸಂಪತ್ತು ಸಂಪಾದಿಸುತ್ತಾನೆ, ಅರಸ ತೆರಿಗೆ ರೂಪದಲ್ಲಿ ಆ ಹಣಗಾರನ ಸುಲಿಗೆ ಮಾಡುತ್ತಾನೆ ಎಂಬರ್ಥದ ಸಾಲುಗಳು ಗಮನ ಸೆಳೆಯುತ್ತವೆ.



ಚಿನ್ನ ಕೇಳ್ ಬ್ಯಾಡ್ವೆ ನನ್ನ ಪುರಾಣ
ಈ ಸೀಮೆಗೆಲ್ಲ ಒಬ್ಬನೆ ನಾ ಜಾಣ
ಚಿನ್ನ ಕೇಳ್ ಬ್ಯಾಡ್ವೆ ನನ್ನ ಪುರಾಣ
ಬಿಲ್ಲಿನಿಂದ ಬಿಟ್ಟ ಹಾಂಗೆ ಸುಂಯ್ ಬಾಣ
ನೀ ಬೀರಿ ಬೀರಿ ವಾರೆಗಣ್ಣ ಬಿನ್ನಾಣ

ಕೈ ಕೆಸರಾಗದೆ ಮಾಡುವೆ ಮೈ ಬೆವರದ ದುಡಿಮೆಯ
ನನಗಾಗಿ ಕೂಡ್ಸವ್ನೆ ಹಣಗಾರ ರಾಸಿ ಬಂಗಾರ
ಕೊಟ್ಟೇನೆ ಅಂತ ಕಾದವ್ನೆ ಪೂರ
ಸದ್ಯ ಕೊಟ್ಟೇನೆ ಅಂತ ಕಾದವ್ನೆ ಪೂರ
ಅವನ ಬುರುಡೆಗೆ ಕಾಸುವೆ ಬಿಸಿ ನೀರ
ಚಿನ್ನ ಕೇಳ್ ಬ್ಯಾಡ್ವೆ ನನ್ನ ಪುರಾಣ
ಚಿನ್ನ ನನ್ನ ಪುರಾಣವ ಕೇಳ್ ಬ್ಯಾಡ್ವೆ  ಕೇಳ್ ಬ್ಯಾಡ್ವೆ ಕೇಳ್ ಬ್ಯಾಡ್ವೆ
ಚಿನ್ನ ಕೇಳ್ ಬ್ಯಾಡ್ವೆ ನನ್ನ ಪುರಾಣ

ಕೋಟೆ ಮ್ಯಾಲೆ ನಿನ್ನ ಬಚ್ಚಿಟ್ಟು
ಕಣ್ ಮುಚ್ಚಿದನೊಬ್ಬ ಹುಲಿಯಣ್ಣ
ಮೂಟೆ ನೂಲೇಣಿ ಬಲವಾಗಿ ಕಟ್ಟಿ
ಕಾದಿದ್ದನಿನ್ನೊಬ್ಬ ಕಿರುಗಣ್ಣ
ಇಬ್ಬರಿಗೂ ಕೈ ಕೊಟ್ಟ ಮತ್ತೊಬ್ಬ ಅಣ್ಣ
ಆ ಇಬ್ಬರಿಗೂ ಕೈ ಕೊಟ್ಟ ಮತ್ತೊಬ್ಬ ಅಣ್ಣ
ಆ  ಭೂಪತಿ ನಾನೇ ನರಿಯಣ್ಣ
ಚಿನ್ನ ಕೇಳ್ ಬ್ಯಾಡ್ವೆ ನನ್ನ ಪುರಾಣ

ಹತ್ತು ಜೀವಗಳ ತುತ್ತಿಗೆ ಕೈ ಇಕ್ಕಿ
ಹೊತ್ತು ಕೂಳುಣ್ಣುವ ನರ ಮಾನವ
ನೂರು ಮಂದಿಯ ಹೊಟ್ಟೆ ಮ್ಯಾಲೆ ಹೊಡೆದು
ಹಣಗಾರ ಹೇರುವ ಬಂಗಾರವ
ಹಣಗಾರರ ಸುಲಿಗೆ ಮಾಡ್ಯಾನೊ ಅರಸ
ಈ ಹಣಗಾರರ ಸುಲಿಗೆ ಮಾಡ್ಯಾನೊ ಅರಸ
ಈ ಸುಲಿಗೆಯ ಕಸುಬಿಗೆ ಗುರು ನಾನೇ
ಚಿನ್ನ ಕೇಳ್ ಬ್ಯಾಡ್ವೆ ನನ್ನ ಪುರಾಣ

9. ಬಾರೆ ಬಾರೆ ನನ್ನ
ಚಿತ್ರದ ಅತಿ ಜನಪ್ರಿಯ ಹಾಡಿದು. ಪುರುಷ ಧ್ವನಿಗೆ ಹೆಚ್ಚಾಗಿ ಬಳಸದ G  ಅಂದರೆ ಬಿಳಿ 5 ಶ್ರುತಿಯಲ್ಲಿ ಸೌಂದರರಾಜನ್ ಇದನ್ನು ಹಾಡಿದ್ದಾರೆ.  ಚಲನಚಿತ್ರ ಗೀತೆಗಳ ಸಿದ್ಧ ಶೈಲಿಗೆ ಹೊರತಾದ ಇದರ ಎರಡು ಮತ್ತು ಮೂರನೆಯ ಚರಣಗಳು ಎಷ್ಟು ದೀರ್ಘವಾಗಿವೆ ಎಂಬುದನ್ನು ಗಮನಿಸಿ. ಟಂಗ್ ಟ್ವಿಸ್ಟರ್ ಮತ್ತು RAP ಸಂಗೀತಗಳ ಮಿಶ್ರಣವಾಗಿರುವ ಇದು ಕನ್ನಡದ ಈ ರೀತಿಯ ಏಕೈಕ ಹಾಡು ಅನ್ನಬಹುದು.



ಬಾರೆ ಬಾರೆ ನನ್ನ ಹಿಂದೆ ಹಿಂದೆ
ಹೆಣ್ಣೆ ಮೆಚ್ಚಿ ಬಂದ ಪುರುಸರೆಲ್ಲ ಒಂದೇ ಒಂದೇ
ಬ್ಯಾರೆ ದಾರಿ ನಿಂಗೆ ತೋರ್ಸ್ತೀನ್ ಮುಂದೆ
ನೀ ಬೆಚ್ಚಿ ಬಿದ್ದು ನೋಡಬ್ಯಾಡ ಹಿಂದೆ ಮುಂದೆ

ಗತ್ತು ತಿಂದ ಗಂಡನೋ ಸುತ್ತು ಹೊಡೆದ ಭಂಡನೋ
ಸಿಟ್ಟಿನಿಂದ ಕೈ ಹಿಡಿದ ಪುಂಡನೋ ಪ್ರಚಂಡನೋ
ಕುಂತಲ್ಲೇ ಕಾಯಿಸದೆ ಬಂದೋನೆ ಮನ್ಮಥ
ಬಾರೆ ಬಾರೆ ಬಾ ಬಾರೆ ನನ್ನ ಹಿಂದೆ ಹಿಂದೆ

ಬಿಂಕವಾಗಿ ಕರೆತಂದೆ ಮಂಕು ಬೂದಿ  ಊದಿ ಬಂದೆ
ಶಂಖವಾದ್ಯ ಮಾಡ್ತಾರಲ್ಲೋ ಹರಹರಾ
ಕಿಂಕರರ ಕಾಪಾಡೋ ಶಂಕರ
ಸರಸರ ಮುಂದೆ ಸರಿ ಕಿರಿ ಕಿರಿ ಕಿನ್ನರಿ
ಸರಸರಸರ ಮುಂದೆ ಸರಿ ಕಿರಿ ಕಿರಿ ಕಿರಿ ಕಿನ್ನರಿ
ಚಿರುಮುರಿ ಜಾಣಮರಿ ಠಾಕು ಠೀಕು ಠಿಂಗರಿ
ಚಿರುಮುರಿ ಜಾಣಮರಿ ಠಕುಟಿ ಕುಟಿಕು ಠಿಂಗರಿ
ನಗುತ್ತಾ...  ಅಳುತ್ತಾ...
ಬಡಬಡನೆ...
ಹಾಗೆ ಹೀಂಗೆ ಇಡು ಅಡಿ ಬಿಡುಗಡಿ ನಡಿನಡಿ
ಗಡಿಬಿಡಿ ಇಡುಅಡಿ ನಡಿನಡಿ ಹಿಂದಡಿ ಮುಂದಡಿ ನಡಿನಡಿ
ತಾಂಗಿಡ್ತ ತಾಂಗಿಡ್ತ ತಾ
ಸುಸ್ಸಾಂಗ್ಡ್ತ್ ತತ್ತಾಂಗ್ ತಾ
ತಳಾಂಗು ಧಿನ್ನ ತಕ್ಕತಾ

ಒಂಟಿಯಾಗಿ ಕಾದಿದ್ದೆ......
ಒಂಟಿಯಾಗಿ ಕಾದಿದ್ದೆ ಜಂಟಿಗಾಗಿ ನಾ ಬಂದೆ
ತಂಟೆಗಿಂಟೆ ಮ್ಯಾಡ್ ಬ್ಯಾಡವೇ ಜಂಜೂಟಿ
ತುಂಟತನ ತೋರ್ ಬ್ಯಾಡ್ವೆ ಬಿತ್ತರಿ
ನೀ ತುಂಟತನ ತೋರ್ ಬ್ಯಾಡ್ವೆ ಬಿತ್ತರಿ
ಕುಡಿ ಕುಡಿ ನೋಟ ಹುಡುಗಾಟ
ಉಲ್ಟಾ ಪಲ್ಟಾ
ಬಾ ಝಣಕ್ಕ್ ಝಣಕ್ಕ್
ಕುಣಿಯುತ ಬಾ
ಝಂ ಝಂ ಝಂ ಝಂ ಜಿಗಿಯುತ ಬಾ
ನೆಟ್ಟಗೆ ಬಾ ಸೊಟ್ಟಗೆ ಬಾ
ಮದ್ದಾನೆ ಮರಿಯಾನೆ
ಕಿರ್ರಾ ಮರ್ರಾ ಕುಯ್ಯೋ ಮರ್ರೋ
ಚಿನ್ನ ರನ್ನ ಸೀಮೆ ಸುಣ್ಣ
ಗುಡುಗುಡುಗುಡುಗುಡು ಗುರ್ರ್ ತಕಝಣುತಾ
ಹಾಂ ಣಕಣಕಣಕಣಕ ಠರ್ರ್ ತಕಧಿಮಿತಾ
ಹಾಂ ಡುಂಡುಂಡುಂಡುಂ ತೆರೀಪ್ಪಡಿತ್ತೊಂತಾ
ಬಾರೆ ಬಾರೆ ನನ್ನ ಹಿಂದೆ ಹಿಂದೆ

10. ಪಟ್ಟಾಭಿಷೇಕ

ಮಾಧವಪೆದ್ದಿ ಸತ್ಯಂ ಹಾಡಿರುವ ಇಷ್ಟೊಂದು ಸುಂದರವಾದ ಈ ಹಾಡನ್ನು ನಾನು ಕೇಳಿದ್ದೇ ಇತ್ತೀಚೆಗೆ.  ಎಲ್ಲಿ ಅಡಗಿತ್ತೋ ಏನೋ ಇದು ಇಷ್ಟೊಂದು ದಿನ! ಆದಿಮೂರ್ತಿ ತನ್ನ ಪಟ್ಟಾಭಿಷೇಕ ಸಂದರ್ಭದಲ್ಲಿ ಹಾಡುವ ಹಾಡಿದು ಎಂಬುದರಲ್ಲಿ ಸಂಶಯವಿಲ್ಲ. ಆತನ ಮಡದಿ ವೆಂಕಟಸುಬ್ಬಿಯ ಉಲ್ಲೇಖವೂ ಇದೆ ಇದರಲ್ಲಿ. ಆತನ ಮನೆ ಮಾತು ತೆಲುಗಿಗೆ ಪ್ರಾತಿನಿಧಿಕವಾಗಿ ಪಾಕಂ ಪಪ್ಪು ಕೂಡ ಇದೆ.  ಆ ಪಾತ್ರದಲ್ಲಿ ನಟಿಸಿದವರು ನರಸಿಂಹರಾಜು ಎಂದು ನನ್ನ ಊಹೆ.  ಈ ಹಾಡನ್ನು ಕೇಳುತ್ತಿದ್ದಂತೆ ಅವರ ಹಾವಭಾವಗಳು ತಾನಾಗಿ ಕಣ್ಣ ಮುಂದೆ ಬರುತ್ತವೆ.



ಪಟ್ಟಾಭಿಷೇಕ ಹೊಯ್
ಪಟ್ಟಾಭಿಷೇಕ ಹೊಯ್
ಸಿಕ್ಕಿದ ದಕ್ಕಿದ ಬೆಕ್ಕಸ ಬೆರಗಿನ ಪಟ್ಟಾಭಿಷೇಕ
ಹೋ ಪಟ್ಟಾಭಿಷೇಕ
ಹೋ ಹೋ ಪಟ್ಟಾಭಿಷೇಕ
ಪಟ್ಟಾಭಿಷೇಕ ಪಟ್ಟಾಭಿಷೇಕ
ಸಿಕ್ಕಿದ ದಕ್ಕಿದ ಸೊಗಸಿನ
ಪಟ್ಟಾಭಿಷೇಕ ಪಟ್ಟಾಭಿಷೇಕ
ಪ ಟ್ಟಾ ಭಿ ಷೇ ಕ

ತಕ್ಕಡಿ ಬಟ್ಟು ಎತ್ತಿಟ್ಟು
ಲೆಕ್ಕದ ಕಟ್ಟು ಮುಚ್ಚಿಟ್ಟು
ತೊಲಗಿಸು ಅಂಗಡಿ ಇಕ್ಕಟ್ಟು
ಭಲೆ ಭಲೆ ಅರಮನೆ ಬಿಕ್ಕಟ್ಟು
ಗದ್ದುಗೆ ಏರಿ ಹದ್ದನು ಮೀರಿ
ಗೆದ್ದವ ಗದ್ದಲ ಮಾಡುವ
ಪ ಟ್ಟಾ ಭಿ ಷೇ ಕ

ಅರಮನೆ ಸೊಂಪು ನನಗೆ ನನಗೆ
ಪಾಕಂ ಪಪ್ಪು ನಿನಗೆ ನಿನಗೆ
ಕಾಡಿನ ಸೊಪ್ಪು ನನ್ನ ಭಾವನಿಗೆ
ಪಾಪ ಅಯ್ಯೊ ಪಾಪ
ಪಾಪ ತುಂಬಾ ಪಾಪ
ಪಾಪ ಪುಟ್ಟ ಪಾಪ
ಮುದ್ದು ಪಾಪ
ಪಾಪಪಪ್ಪಪಪ್ಪಪ್ಪಪ್ಪ
ಪಟ್ಟಾಭಿಷೇಕ
ಹೇ
ಪಟ್ಟಾಭಿಷೇಕ ಪಟ್ಟಾಭಿಷೇಕ
ಪ ಟ್ಟಾ ಭಿ ಷೇ ಕ

ಕಾಪಿನ ಭಟರೇ ಬನ್ನಿ ಬನ್ನಿ
ಕಾಲಿನ ಹೆಜ್ಜೆ ಹಾಕಿ ಹಾಕಿ
ಕಾಲಿನ ಹೆಜ್ಜೆ ಹಾಕಿ ಹಾಕಿ
ಕಾಲಿನ ಹೆಜ್ಜೆ ಹಾಕಿ ಹಾಕಿ
ಎಡ ಬಲ ಎಡ ಬಲ  ಎಡ ಬಲ
ಬಲ ಎಡ ಬಲ ಎಡ ಬಲ ಎಡ
ಎಡಬಲ ಎಡಬಲ ಎಡಬಲ
ಧಣ ಧಣ
ದಡ್ಡ ಬಂತು ದಡ್ಡ ಬಂತು
ದಡಬಡ ದಡಬಡ ದಡಬಡ ಬಂತು
ಪಟ್ಟಾಭಿಷೇಕ

ಸುಬ್ಬಿ
ಯೆಂಕಟ್ ಸುಬ್ಬಿ
ಸುಬ್ಬಿ ಸುಬ್ಬಿ
ಯೆಂಕಟ್ ಸುಬ್ಬಿ ಸುಬ್ಬಿ
ಕಷ್ಟವಿಲ್ಲದೆ ಬಾರೆ
ದೃಷ್ಟಿ ತೆಗೆದು ಹೋಗೆ
ಸುಬ್ಬಿ ಸುಬ್ಬಿ
ಯೆಂಕಟ್ ಸುಬ್ಬಿ ಸುಬ್ಬಿ

ಅಪ್ಪ ನೀನೆ ಮಗಳ ಕೊಟ್ಟ ಜಾಣ
ಬೆಪ್ಪ ರಾಜ ರಾಜ್ಯ ಬಿಟ್ಟ ಕೋಣ
ದುಡ್ಡು ಕಾಸು ಸುರಿಯಲಿಲ್ಲ ಝಣ ಝಣ
ಪುಕ್ಕಟ್ಟೆ ರಾಜ್ಯ ಬಂತು
ಥಣ ಥಣ ಥಣ ಥಣ ಥಣ ಥಣ
ಪಟ್ಟಾಭಿಷೇಕ ಪಟ್ಟಾಭಿಷೇಕ
ಪ ಟ್ಟಾ ಭಿ ಷೇ ಕ

ಪಟ್ಟಾಭಿಷೇಕ ಪಟ್ಟಾಭಿಷೇಕ
ಪ ಟ್ಟಾ ಭಿ ಷೇ ಕ

ಈ ಚಿತ್ರದ ಧ್ವನಿವಾಹಿನಿಯಾದರೂ ಲಭ್ಯವಿದ್ದಿದ್ದರೆ ಕು.ರ.ಸೀ ಅವರ ಪ್ರಾಸಬದ್ಧ ಸಂಭಾಷಣೆಗಳ ಸ್ವಾದವೂ ನಮಗೆ ದೊರಕುತ್ತಿತ್ತು.  ಈ ಹತ್ತು ಹಾಡುಗಳಾದರೂ ಇರುವುದು ನಮ್ಮ ಸುದೈವವೆಂದುಕೊಳ್ಳೋಣ.

1955ರ ಚಂದಮಾಮ ದೀಪಾವಳಿ ಸಂಚಿಕೆಯ ಜಾಹೀರಾತಿನಲ್ಲಿ ಈ ಚಿತ್ರದ ಉಲ್ಲೇಖ ಇರುವುದನ್ನು ಕಾಣಬಹುದು. ಇಲ್ಲಿರುವ ಮೂರೂ ಚಿತ್ರಗಳು ಈಗ ವೀಕ್ಷಣೆಗೆ ಲಭ್ಯವಿಲ್ಲದಿರುವುದು ಕಾಕತಾಳೀಯವಾಗಿರಬಹುದು. ಆಗ ಚಲನಚಿತ್ರಗಳ ಪ್ರಚಾರಕ್ಕೂ ಎಂತಹ ಶಿಷ್ಟ ಭಾಷೆಯ ಪ್ರಯೋಗವಾಗುತ್ತಿತ್ತು ಎಂಬುದನ್ನೂ ಈ ಜಾಹೀರಾತಲ್ಲಿ ಗಮನಿಸಬಹುದು.













1 comment:

  1. ಸದಾರಮೆ ...ಗುಬ್ಬಿ ವೀರಣ್ಣ ನವರಿಂದಾಗಿ ಪ್ರಖ್ಯಾತಿಯನ್ನು ಪಡೆದದ್ದಂತೆ. ಆ ನಾಟಕವನ್ನು ಆಧುನಿಕ ನಾಟಕ ಪ್ರಿಯರಿಗಾಗಿ "ಮಿಸ್ ಸದಾರಮೆ" ಎನ್ನುವ ಹೆಸರಿನಲ್ಲಿ ಕೆ.ವಿ.ಸುಬ್ಬಣ್ಣ ಅವರು.. ಮರು ರಚಿಸಿ.. ನೀನಾಸಂ ತಿರುಗಾಟದಲ್ಲಿ ಭಾರೀ ಪ್ರಸಿದ್ದಿಯನ್ನು ಪಡೆದ ನಾಟಕ. ಏಣಗಿ ನಟರಾಜನ ಕಳ್ಳ.... ಹುಲುಗಪ್ಪ ಕಟ್ಟಿಮನಿಯ ಶೆಟ್ಟಿ.... ಮಂಡ್ಯ ರಮೇಶನ ಆದಿಮೂರ್ತಿ ... ಹೀಗೆ. ಚಂದಮಾಮದ ಕತೆಯೇ ಆಗಿರುವ ಆ ನಾಟಕದಲ್ಲಿ ಏಣಗಿ ನಟರಾಜ್ ಕಳ್ಳನಾಗಿ ಚ್ಚಂದ್ಮಾಮ್ದಾಮದ ಉಲ್ಲೇಖ ಮಾಡ್ತಾರೆ. ಕಿಸೆಯಲ್ಲೇ ಒಂದು ಚಂದಮಾಮ ಇರ್ತದೆ. " ಬಡ್ಡೀಮಗಂದು .. ಈ ಚಂದಮಾಮ ಒಂದು ಇದ್ದರೆ .. ಒಳ್ಳೆ ಎನ್ಸೈಕ್ಲೋಪೀಡಿಯ ಇದ್ದ ಹಾಗೆ .. ಏನು ಬೇಕಾದ್ರೂ ಮಾಡ್ಬಹುದು ...." ಹೀಗೆಲ್ಲಾ ಆಗಾಗ ಹೇಳ್ತಿರ್ತಾರೆ. -
    ಮೂರ್ತಿ ದೇರಾಜೆ

    ReplyDelete

Your valuable comments/suggestions are welcome