Saturday 18 May 2019

ಪೇಚಿನ ಪ್ರಸಂಗಗಳು


ಜೀವನದಲ್ಲಿ ಪೇಚಿನ ಪ್ರಸಂಗ ಎದುರಾಗದವರು ಅಥವಾ ಒಮ್ಮೆಯಾದರೂ ಬೇಸ್ತು ಬೀಳದವರು ಯಾರೂ ಇರಲಾರರು. ನಮ್ಮ ಕಡೆ ಬೇಸ್ತು ಬೀಳುವುದಕ್ಕೆ ಮಂಗ ಆಗುವುದು ಅಥವಾ ಬೈರಾಸ್ ಆಗುವುದು ಎಂಬ ಹೆಸರೂ ಇದೆ. ಕೆಲವಕ್ಕೆ  ಆಗಿನ ಸಮಯ ಸಂದರ್ಭ ಕಾರಣವಾದರೆ ಇನ್ನು ಕೆಲವಕ್ಕೆ ಕಾರಣ ನಮ್ಮದೇ ಮೂಢತನ. ಆಗ ಇರುಸುಮುರುಸು ಅನುಭವಿಸುವಂತಾಗಿದ್ದರೂ ಈಗ ಅವುಗಳನ್ನು ನೆನಸಿಕೊಂಡರೆ ನಗು ಬರದಿರುವುದಿಲ್ಲ.

ನಾನು ತೀರಾ ಚಿಕ್ಕವನಾಗಿದ್ದಾಗ ನಮ್ಮ ಹಿರಿಯಣ್ಣ ಮಹಾಯಾಗವೊಂದರಲ್ಲಿ ಭಾಗವಹಿಸಲು ಉತ್ತರಭಾರತಕ್ಕೆ ಹೋಗಿ ಹಿಂದಿರುಗಿ ಬಂದವರು ಬಣ್ಣ ಬಣ್ಣದ ಪಟ್ಟಿಗಳಿದ್ದ ಉದ್ದನೆಯ ವಸ್ತುವೊಂದನ್ನು ನನ್ನ ಕೈಗಿತ್ತರು. ಎಲ್ಲಿಗೆ ಹೋದರೂ ಮನೆಯ ಮಕ್ಕಳಿಗೆ ಮಿಠಾಯಿ ಕಟ್ಟಿಸಿಕೊಂಡು ಬರುವುದು ಆಗ ಸಾಮಾನ್ಯವಾಗಿದ್ದರಿಂದ ಇದ್ಯಾವುದೋ ಹೊಸ ಮಿಠಾಯಿ ಇರಬೇಕೆಂದೆಣಿಸಿ ನಾನದನ್ನು ಬಾಯಿಗೆ ಹಾಕಿಕೊಂಡಾಗ ಏಕೋ ಬರೇ ಸಪ್ಪೆ ಎನಿಸಿತು.    ಮತ್ತೆ ನೋಡುವಾಗ ಅದು ನಾನು ಅದುವರೆಗೆ ನೋಡದಿದ್ದ ಬಣ್ಣದ ಬಳಪ ಆಗಿತ್ತು. 

ಐದನೇ ತರಗತಿ ವರೆಗೆ ಮನೆಯ ಸಮೀಪದ ಸಿದ್‌ಬೈಲ್ ಪರಾರಿ ಶಾಲೆಗೆ ಹೋದ ನಾನು ಆರು ಏಳನೇ ತರಗತಿಗಳಿಗೆ ಗುಂಡಿ ಲಕ್ಷ್ಮೀನಾರಾಯಣ ದೇವಳದ ಪೂಜಾ ಕೈಂಕರ್ಯ ಕೈಗೊಂಡು ಅಲ್ಲೇ ಬಿಡಾರ ಹೂಡಿದ್ದ ಹಿರಿಯಣ್ಣನ ಮನೆಯಲ್ಲಿ ಉಳಿದುಕೊಂಡು ಕೊಂಚ ದೂರದ ಮುಂಡಾಜೆ ಹಿರಿಯ ಪ್ರಾಥಮಿಕ ಶಾಲೆಗೆ ಹೋಗಬೇಕಾಯಿತು. ದೇವಳದಲ್ಲಿ ಇಬ್ಬರು ಅರ್ಚಕರಿದ್ದು ಪೂಜಾಕಾರ್ಯ ಮತ್ತು ದೇವರಿಗೆ ನೈವೇದ್ಯ ಬೇಯಿಸುವುದರ ಜೊತೆಗೆ ಇತರ ಪರಿಚಾರಕ ಕಾರ್ಯಗಳು ಪ್ರತೀ ತಿಂಗಳು ಅದಲು ಬದಲಾಗುತ್ತಿದ್ದವು.  ಆ ನೈವೇದ್ಯ ಅರ್ಚಕರಿಗೇ ಸೇರುವುದಾದ್ದರಿಂದ ನಮ್ಮ ಅತ್ತಿಗೆಗೆ ಮನೆಯಲ್ಲಿ ಅನ್ನ ಬೇಯಿಸುವ ಕೆಲಸ ಇರುತ್ತಿರಲಿಲ್ಲ.  ನೈವೇದ್ಯ ಬೇಯಿಸುವ ಪಾಳಿಯ ಅರ್ಚಕರಿಗೆ ಇತರ ಕೆಲಸಗಳೂ ಇರುತ್ತಿದ್ದುದರಿಂದ ಅತ್ತ ಹೆಚ್ಚು ಗಮನವೀಯಲು ಸಾಧ್ಯವಾಗದೆ ಅನ್ನ ಮುದ್ದೆ ಆಗುವುದು ಸಾಮಾನ್ಯವಾಗಿತ್ತು.  ಇನ್ನೋರ್ವ ಅರ್ಚಕರ ಪಾಳಿಯಲ್ಲಿ ಹಾಗಾದಾಗ ನಮ್ಮಣ್ಣ ಸೇರಿದಂತೆ ಮನೆಯಲ್ಲಿ ಎಲ್ಲರೂ ಆ ಬಗ್ಗೆ ಆಡಿಕೊಳ್ಳುವುದು ಸಾಮಾನ್ಯವಾಗಿತ್ತು.  ಒಮ್ಮೆ ನಮ್ಮಣ್ಣನ ಪರಿಚಾರಕದ ಪಾಳಿಯಿದ್ದಾಗ ಅನ್ನವೇಕೋ ತುಂಬಾನೇ ಮುದ್ದೆ ಆಗಿತ್ತು.  ಶಾಲೆಯಿಂದ ಬಂದು ಊಟಕ್ಕೆ ಕುಳಿತ ನಾನು ಪೂರ್ವಾಪರ ಯೋಚಿಸದೆ ‘ಇವತ್ಯಾಕೋ ಅನ್ನ ಎದುರು ಮನೆಯವರು ಮಾಡಿದ್ದಕಿಂತಲೂ ಮುದ್ದೆಯಾಗಿ ಬಿಟ್ಟಿದೆಯಲ್ಲ’ ಅಂದು ಬಿಟ್ಟೆ.  ಅದನ್ನು ಕೇಳಿ ಕೆಂಡಾಮಂಡಲವಾದ ನಮ್ಮಣ್ಣ ‘ತಟ್ಟೆಯ ಎದುರು ಕುಳಿತು ಅನ್ನವನ್ನು ಹಳಿದರೆ ಹುಷಾರ್’ಎಂದು ಚೆನ್ನಾಗಿ ಝಾಡಿಸಿದರು! ‘ಸತ್ಯಂ ಬ್ರೂಯಾತ್ ಪ್ರಿಯಂ ಬ್ರೂಯಾತ್ ನ ಬ್ರೂಯಾತ್ ಸತ್ಯಮಪ್ರಿಯಂ’ ಎಂದು ಆಗ ನನಗೆ ಗೊತ್ತಿರಲಿಲ್ಲ!

ನಮಗೆ ಬಳಪ ಪೆನ್ಸಿಲುಗಳಿಂದ ಪೆನ್ನಿಗೆ ಪ್ರೋಮೋಷನ್ ಸಿಗುತ್ತಿದ್ದುದು ಆರನೇ ತರಗತಿ ಸೇರಿದಾಗ. ಅಧ್ಯಾಪಕರು ಬಳಸುತ್ತಿದ್ದ ಕೆಂಪು ಶಾಯಿಯ ಪೆನ್ನೊಂದು ನನಗೂ ಬೇಕು ಎಂದು ನನಗೆ ಬಲು ಆಸೆ.  ಆ ವರ್ಷ ಧರ್ಮಸ್ಥಳ ದೀಪೋತ್ಸವಕ್ಕೆ ಹೋದಾಗ ಆರುವರೆ ಆಣೆ ಮಹಲ್‌ನಿಂದ ಒಂದು ಪೆನ್ ಖರೀದಿಸಿ ಆ ಆಸೆ ಪೂರೈಸಿಕೊಂಡೆ.  ಆದರೆ ಕೆಂಪು ಶಾಯಿ ಬಳಸಲು ನಮಗೆಲ್ಲಿ ಅವಕಾಶವಿರುತ್ತದೆ.  ಒಂದು ಸಲ ಕನ್ನಡ ಪ್ರಬಂಧವೊಂದನ್ನು ಬರೆಯಲು ತಡವಾಗಿ ಅದನ್ನು ಉಪಾಧ್ಯಾಯರಿಗೆ ತೋರಿಸಲಾಗಿರಲಿಲ್ಲ. ಅದು  ಗೊತ್ತಾದರೆ ಅಪಾಯ ತಪ್ಪಿದ್ದಲ್ಲ ಎನಿಸಿ  ನನ್ನ ಕೆಂಪು ಶಾಯಿಯ ಪೆನ್ನು ಬಳಸಿ ಪ್ರಬಂಧದ ಕೆಳಗೆ ಕನ್ನಡದ ಕಾರಂತ ಮಾಸ್ಟ್ರ ಶೈಲಿಯಲ್ಲಿ ‘Seen' ಎಂದು ಬರೆದು ಬಿಟ್ಟೆ.  ಮುಂದಿನ  ಪ್ರಬಂಧಗಳನ್ನು ಸಕಾಲದಲ್ಲೇ ಬರೆದು ಒಪ್ಪಿಸುತ್ತಿದ್ದೆ.  ಒಂದು ದಿನ ಕ್ಲಾಸಲ್ಲಿ ಏಕೋ ನನ್ನ ಪ್ರಬಂಧ ಪುಸ್ತಕದ ಪುಟಗಳನ್ನು  ತಿರುವಿ ಹಾಕಿದ ಕಾರಂತ ಮಾಸ್ಟ್ರಿಗೆ ಈ ‘Seen' ಕಾಣಿಸಿತು!  ‘ನಾನು ಪ್ರಬಂಧಗಳಿಗೆ ಯಾವತ್ತೂ Seen ಎಂದು ಬರೆಯುವುದಿಲ್ಲ. ಕಾಪಿ ಪುಸ್ತಕದಲ್ಲಿ ಮಾತ್ರ  ಬರೆಯುವುದು.  ಇದು ಯಾರ ಕೆಲಸ?’ ಎಂದು ವಿಚಾರಣೆ ಆರಂಭಿಸಿದರು. Red Penned ಆಗಿ ಸಿಕ್ಕಿ ಬಿದ್ದಿದ್ದ ನಾನು ಅದೇನೋ ಮೊಂಡು ಧೈರ್ಯ ತಾಳಿ  ‘ನನಗೇನೂ ಗೊತ್ತಿಲ್ಲ’  ಎಂದು ವಾದಿಸಿ ಅದೇ ನಿಲುವಿಗೆ ಅಂಟಿಕೊಂಡೆ.  ಪ್ರಕರಣವನ್ನು ಅವರು ಅಷ್ಟಕ್ಕೇ ಬಿಟ್ಟು ಬಿಟ್ಟದ್ದರಿಂದ ಬದುಕಿದೆ!

ಅಣ್ಣನ ಮನೆಯಿಂದ ಪ್ರತೀ ವಾರಾಂತ್ಯಕ್ಕೆ ಮೂಲ ಮನೆಗೆ ಹೋಗುತ್ತಿದ್ದೆ.  ಹೀಗೆ ಹೋದಾಗ ಸೋಮವಾರದಂದು ಬೆಳಗ್ಗೆ 5:30ರಿಂದ 6ರ ಒಳಗೆ ಎದ್ದು ಸ್ನಾನ ಪಾನಾದಿ ಸಕಲ ನಿತ್ಯವಿಧಿಗಳನ್ನು  ತೀರಿಸಿ ಹೊರಡಲು ತಯಾರಾಗಬೇಕಾಗುತ್ತಿತ್ತು. ತಾಯಿಯವರು ಅಥವಾ ಅತ್ತಿಗೆ ಅದಕ್ಕೂ ಮುಂಚಿತವಾಗಿ ಎದ್ದು ಬಚ್ಚಲೊಲೆಗೆ ಬೆಂಕಿ ಹಾಕಿ ಕಾಪಿ ತಿಂಡಿ ತಯಾರಿಯಲ್ಲಿ ತೊಡಗಿರುತ್ತಿದ್ದರು. ಹೀಗೆ ಒಂದು ಸೋಮವಾರ ಕಣ್ಣು ತೆರೆದಾಗ ಬೆಳ್ಳಂಬೆಳಗಾಗಿದೆ. ಗಡಿಯಾರ ನೋಡಿದರೆ ಗಂಟೆ ಆರು ಕಳೆದಿದೆ.  ಆದರೆ ಒಬ್ಬರೂ ಇನ್ನೂ ಎದ್ದಿಲ್ಲ.  ಇಂದು ಶಾಲೆಗೆ ತಡವಾಗುವುದು ಖಂಡಿತ ಎಂದೆನಿಸಿ ತಾಯಿ, ಅತ್ತಿಗೆ ಎಲ್ಲರನ್ನು ಎಬ್ಬಿಸಿದೆ.  ಈ ಗಲಾಟೆಯಿಂದ ತಂದೆಯವರೂ ಎದ್ದು ಬಂದು ಟಾರ್ಚು ಹಾಕಿ   ನೋಡಿದರೆ ಇನ್ನೂ ಮಧ್ಯ ರಾತ್ರಿ ಹನ್ನೆರಡುವರೆ ಅಷ್ಟೇ!  ಮಬ್ಬು ಬೆಳಕಿನಲ್ಲಿ ನನಗದು ಆರು ಗಂಟೆಯಂತೆ ಗೋಚರಿಸಿತ್ತು! ಹೊರಗೆ ಕಾಣಿಸುತ್ತಿದ್ದ ಬೆಳಕು ಹುಣ್ಣಿಮೆಯ ಬೆಳದಿಂಗಳಿನದ್ದು! ತಂದೆಯವರಿಂದ ಚೆನ್ನಾಗಿ ಬೈಸಿಕೊಂಡು ಮತ್ತೆ ಮಲಗಿದ್ದೆ.

ಮನೆಯಲ್ಲಿ ಏನಾದರೂ ಹೊಸ ಪ್ರಯೋಗಗಳನ್ನು ನಾನು ಮಾಡುತ್ತಿದ್ದೆ. ಆಗ ನಮ್ಮಲ್ಲಿ ಇಸ್ತ್ರಿ ಪೆಟ್ಟಿಗೆ ಇರಲಿಲ್ಲ. ಇನ್ನೂ ಹಲವರು ಮಾಡಿರಬಹುದಾದಂತೆ  ಉದ್ದ ಹಿಡಿಯ ಪಾತ್ರೆಯಲ್ಲಿ  ಕೆಂಡ ಹಾಕಿ ಬಟ್ಟೆಗೆ ಇಸ್ತ್ರಿ ಹಾಕಿದರೆ ಹೇಗೆ ಎಂಬ ಯೋಚನೆ ನನಗೆ ಬಂತು. ಅದನ್ನು ಕಾರ್ಯರೂಪಕ್ಕಿಳಿಸಿ ನನ್ನ cotton ಅಂಗಿಗಳಿಗೆಲ್ಲ ಇಸ್ತ್ರಿ ಹಾಕಿದೆ.  Experiment success ಅನ್ನಿಸಿದ್ದರಿಂದ  ತಾಯಿಯವರ ಬಳಿ ಹೋಗಿ  ‘ನಿಮ್ಮ ರವಿಕೆ ಯಾವುದಾದರೂ ಇದ್ದರೆ ಕೊಡಿ.  ನಾನು ಇಸ್ತ್ರಿ ಹಾಕಿ ಚಂದ ಮಾಡಿ ಕೊಡ್ತೇನೆ’ ಅಂದೆ.  ಖುಶಿಪಟ್ಟ ಅವರು ಸಮಾರಂಭಗಳಲ್ಲಿ ಮಾತ್ರ ಧರಿಸುತ್ತಿದ್ದ ಹೊಸ ಸಿಲ್ಕಿನ ರವಿಕೆಯೊಂದನ್ನು ಕೊಟ್ಟರು.  ಇಸ್ತ್ರಿ ಹಾಕಲೆಂದು ಕೆಂಡ ತುಂಬಿದ್ದ ಅಲ್ಯುಮೀನಿಯಂ ಪಾತ್ರೆಯನ್ನು ಅದರ ಮೇಲೆ ಇಟ್ಟೊಡನೆ ಏನೋ ಕರಟಿದ ವಾಸನೆ ಬಂತೆಂದು ಪಾತ್ರೆ ಎತ್ತಿದರೆ ಅಷ್ಟು ಜಾಗದ ರವಿಕೆಯೇ ಮಾಯವಾಗಿ ಹೋಗಿತ್ತು!  ಆದರೆ ಅವರು ಅದನ್ನೊಂದು issue ಮಾಡಲಿಲ್ಲ.  ಅಷ್ಟೇ ಅಲ್ಲ ಮನೆಯ ಗಂಡಸರಿಗೆ ತಿಳಿಸಲೂ ಇಲ್ಲ!

7ನೇ ಕ್ಲಾಸಲ್ಲಿರುವಾಗ ನನ್ನ ಉಪನಯನವಾಯಿತು.  ನಂತರ ಒಂದು ವರ್ಷ ಕಟ್ಟುನಿಟ್ಟಾಗಿ ಪಾಲಿಸಬೇಕಾದ ಕೆಲವು ನಿಯಮಗಳಿರುತ್ತವೆ. ಇತರರ ಮನೆಯ ಔತಣಕೂಟಗಳಲ್ಲಿ ಭೋಜನ ಮಾಡಬಾರದು, ಅಗತ್ಯವಿದ್ದರೆ ಲಘು ಉಪಹಾರ ಸ್ವೀಕರಿಸಬಹುದು ಎಂಬುದು ಅವುಗಳಲ್ಲೊಂದು.  ಕೆಲ ದಿನಗಳ ನಂತರ ಊರಲ್ಲೇ ಬಂಧುವೊಬ್ಬರ ಮನೆಯಲ್ಲಿ ಒಂದು ಉಪನಯನವಿತ್ತು. ಮನೆಯವರೆಲ್ಲರೂ ಅಲ್ಲಿಗೆ ಹೋಗುವವವರು. ‘ನೀನೂ ಬಾ, ಅಲ್ಲಿ ಉಪಾಹಾರದ ವ್ಯವಸ್ಥೆ ಇರುತ್ತದೆ’ ಎಂದು ನನಗಂದರು. ಮಧ್ಯಾಹ್ನ ಎಲ್ಲರೂ ಎಲೆಗಳ ಮುಂದೆ ಕುಳಿತು ಭೂರಿ ಭೋಜನ ಸವಿಯತೊಡಗಿದರು. ನಾನು ಪಿಳಿ ಪಿಳಿ ನೋಡುತ್ತಾ ನಿಂತೆ.  ನನ್ನನ್ನು ಯಾರೂ ಗಮನಿಸಲೂ ಇಲ್ಲ, ಉಪಾಹಾರ ಒದಗಿಸಲೂ ಇಲ್ಲ.  ನಾನಾಗಿ ಹೋಗಿ ಇನ್ನೊಬ್ಬರನ್ನು ಕೇಳುವುದು ಅಂದಿಗೂ ನನ್ನ ಜಾಯಮಾನವಾಗಿರಲಿಲ್ಲ ಇಂದಿಗೂ ಅಲ್ಲ.  ಕೊಂಚ ಹೊತ್ತು ಕಾದೆ.  ಸದ್ದಿಲ್ಲದೆ ಮನೆಗೆ ಮರಳಿ ನೈವೇದ್ಯಕ್ಕೆ ಮಾಡಿದ್ದ ಅನ್ನಕ್ಕೆ ಮಜ್ಜಿಗೆ ಬೆರೆಸಿ ಉಂಡೆ.

8ನೇ ತರಗತಿಗೆ ಉಜಿರೆ ಹೈಸ್ಕೂಲಿಗೆ ಭರ್ತಿಯಾಗಿ ಹಾಸ್ಟೆಲ್ ಸೇರಿಕೊಂಡೆ.  ಮನೆಯಿಂದ ದೀರ್ಘಕಾಲ ಹೊರಗುಳಿಯುವ ಮೊದಲ ಅನುಭವ ಅದಾದ್ದರಿಂದ home sickness ತೀವ್ರವಾಗಿ ಬಾಧಿಸುತ್ತಿತ್ತು.  ಒಮ್ಮೆ ದೀಪಾವಳಿಯ ಸಮಯದ ಮೂರ್ನಾಲ್ಕು ದಿನಗಳ ರಜೆಯನ್ನು ಮುಗಿಸಿ ಮನಸ್ಸಿಲ್ಲದ ಮನಸ್ಸಿನಿಂದ ಸೋಮವಾರ ಬೆಳಗ್ಗೆ ಹಾಸ್ಟೆಲ್ ತಲುಪಿ ನೋಡಿದರೆ ಟ್ರಂಕಿನ ಬೀಗದ ಕೈ ಮನೆಯಲ್ಲೇ ಬಿಟ್ಟು ಬಂದಿದ್ದೆ. ಇದನ್ನೇ ಪಿಳ್ಳೆ ನೆವವಾಗಿಸಿಕೊಂಡು ಯಾರಲ್ಲೂ ಹೇಳದೆ ಕೇಳದೆ ತಕ್ಷಣ ಮನೆಗೆ ವಾಪಸು ಬಂದು ‘ಅನೇಕ ಮಕ್ಕಳು ಬರದೆ ಇದ್ದುದರಿಂದ ಈ ದಿನ ಶಾಲೆಗೆ ರಜೆ ಕೊಟ್ಟರು’ ಅಂದೆ. ಮರುದಿನ ಅಣ್ಣನೂ ಉಜಿರೆಗೆ ಬರುವವರಿದ್ದುದರಿಂದ ನಾನೂ ಅವರ ಜೊತೆಗೇ ಬಂದು ಹಾಸ್ಟೆಲಿಗೆ ಹೋಗಿ ಪುಸ್ತಕ ಜೋಡಿಸಿಕೊಂಡು ಕ್ಲಾಸಿಗೆ ಹೋದೆ. ಆ ದಿನ ಸಂಸ್ಕೃತ ಪೀರಿಯಡ್ ಕೂಡ ಇತ್ತು. ನಮಗೆ ಸಂಸ್ಕೃತ ಅಧ್ಯಾಪಕರಾಗಿದ್ದದ್ದು ಉಜಿರೆ ಪೇಟೆಯಲ್ಲಿ ಪ್ರಭಾತ್ ಸ್ಟೋರನ್ನೂ ಹೊಂದಿದ್ದ ಗೋಪಾಲ ಮಾಸ್ಟ್ರು. ಕ್ಲಾಸಿಗೆ ಬಂದವರೇ ನನ್ನನ್ನು ಎದ್ದು ನಿಲ್ಲಲು ಹೇಳಿ ’ಏನೋ, ನಿನ್ನೆ ಶಾಲೆಗೆ ರಜೆ ಕೊಟ್ರು ಅಂತ ಮನೆಯಲ್ಲಿ ಹೋಗಿ ಹೇಳಿದ್ಯಂತೆ’ ಅಂದಾಗ ನನ್ನ ಜಂಘಾಬಲವೇ ಉಡುಗಿಹೋಯ್ತು! ಆದದ್ದಿಷ್ಟೇ. ನನ್ನೊಡನೆ ಪೇಟೆಗೆ ಬಂದ ಅಣ್ಣ ಎಂದಿನಂತೆ ಪ್ರಭಾತ್ ಸ್ಟೋರಿಗೆ ಹೋಗಿ ಅಲ್ಲೇ ಇದ್ದ ಗೋಪಾಲ ಮಾಸ್ಟ್ರೊಂದಿಗಿನ ಲೋಕಾಭಿರಾಮ ಮಾತುಕತೆಯಲ್ಲಿ ‘ನಿನ್ನೆ ಶಾಲೆಗೆ ರಜೆ ಅಂತೆ’ ಎಂದು ಹೇಳಿದಾಗ ನನ್ನ ಬಂಡವಾಳ ಬಯಲಾಗಿತ್ತು! ಆ ಮೇಲೆ ನಾಚಿಕೆಯಿಂದ ಕೆಲವು ವಾರ ಮನೆಗೇ ಹೋಗಲಿಲ್ಲ. 

ವಾರ್ಷಿಕ ಖರೀದಿಗೆ ಮಂಗಳೂರಿಗೆ ಹೋಗುವಾಗ ನಮ್ಮಣ್ಣ ಸಾಮಾನ್ಯವಾಗಿ ನನ್ನನ್ನೂ ಕರೆದೊಯ್ಯುತ್ತಿದ್ದರು. ಅಲ್ಲಿ ಗಣೇಶ  ಭವನದಲ್ಲಿ ರೂಮು ಮಾಡಿ ಅವರ ಬಂದರಿನ ಕೆಲಸಗಳೆಲ್ಲ ಮುಗಿದ ಮೇಲೆ ಒಂದೋ ಎರಡೋ ಸಿನಿಮಾ ನೋಡಿ ಮರುದಿನ ಊರಿಗೆ ಹಿಂತಿರುಗುತ್ತಿದ್ದುದು ವಾಡಿಕೆ.  ಹೀಗೆ ಒಂದು ಸಲ ಹೋಗುವಾಗ ಬಾಬು ಶೆಟ್ರ ಶಂಕರ್ ವಿಠಲ್ ಬಸ್ಸಿನಲ್ಲಿ ಕಿಟಿಕಿ ಬದಿ ಸೀಟು ಆಯ್ದುಕೊಂಡಿದ್ದೆ.  ಸುತ್ತ ಮುತ್ತಲಿನ ಪ್ರಕೃತಿ ಸೌಂದರ್ಯ ಸವಿಯುತ್ತಾ ಸವಿಯುತ್ತಾ ಇನ್ನೇನು ಮಂಗಳೂರು ಹತ್ತಿರ ಬಂತೆನ್ನುವಾಗ ಅದು ಹೇಗೋ ಬಗ್ಗಿಸಿದ ನನ್ನ ಮೊಣ ಕೈ ಬಸ್ಸಿನ ಕಿಟಿಕಿಯ ಸರಳುಗಳೆಡೆಯಲ್ಲಿ ಸಿಕ್ಕಿಹಾಕಿಕೊಂಡು ಬಿಟ್ಟಿತು. ಏನು ಮಾಡಿದರೂ ತೆಗೆಯಲು ಬಾರದು.  ಎಲ್ಲರೂ ಬಸ್ಸಿನಿಂದಿಳಿದರೂ ನಾನು ಅಲ್ಲೇ ಉಳಿಯುವಂತಾದರೆ ಏನು ಮಾಡುವುದು.  ಸರಳನ್ನು ಕತ್ತರಿಸಿಯೆ ಕೈ ತೆಗೆಯಬೇಕಾಗುತ್ತದೋ ಏನೋ ಇತ್ಯಾದಿ ಯೋಚನೆಗಳು  ಮನೋಪಟಲದಲ್ಲಿ ಮೂಡತೊಡಗಿದವು.  ಇನ್ನೇನು ಪಕ್ಕದಲ್ಲಿ ಕುಳಿತ ಅಣ್ಣನಿಗೆ ವಿಷಯ ತಿಳಿಸಬೇಕು. ಅದಕ್ಕೆ ಮುನ್ನ ಕೊನೆಯ ಪ್ರಯತ್ನವಾಗಿ  ಪೂರ್ತಿ ಕೈ ಹೊರ ಹಾಕಿ ನೇರಗೊಳಿಸಿ ಕೊಂಚ ತಿರುಗಿಸಿದಾಗ ಸಮಸ್ಯೆ ಬಗೆಹರಿಯಿತು.  ಬದುಕಿದೆಯಾ ಬಡ ಜೀವವೇ ಅಂದುಕೊಂಡೆ!

ನಾನು ಹೈಸ್ಕೂಲಲ್ಲಿರುವಾಗಲೇ ಧರ್ಮಸ್ಥಳ ಜಾತ್ರೆಯಿಂದ ಕೊಳಲು ಖರೀದಿಸಿ ಅಷ್ಟಿಷ್ಟು ನುಡಿಸತೊಡಗಿದ್ದೆ. ಆದರೆ ರೇಡಿಯೊದಲ್ಲಿ ಕೇಳಿಸುವಷ್ಟು ಸಿನಿಮಾಗಳಲ್ಲಿ ಕಾಣಿಸುವಷ್ಟು ಇಂಪಾಗಿ ಅದು ಯಾಕೆ ನುಡಿಯುತ್ತಿಲ್ಲ ಎಂಬ ಚಿಂತೆ ನನ್ನನ್ನು ಕಾಡುತ್ತಿತ್ತು. ಆಗ ನಮ್ಮ ಹಾಸ್ಟೆಲಲ್ಲಿ ಮಡಿಕೇರಿಯಿಂದ ಬಂದ ಕೃಷ್ಣಪ್ಪ ಎಂಬ ಒಬ್ಬ ಹುಡುಗನಿದ್ದ. ಒಂದು ದಿನ ಹೀಗೇ ಮಾತಾಡುತ್ತಿರುವಾಗ ‘ಮಡಿಕೇರಿಯಲ್ಲಿ ಒಂದು ರೂಪಾಯಿಗೆ ಬಹಳ ಒಳ್ಳೆಯ ಕೊಳಲು ಸಿಗುತ್ತದೆ’ ಎಂದು ನನ್ನಲ್ಲಿ ಆಸೆ ಹುಟ್ಟಿಸಿ ಬಿಟ್ಟ. ಆದರೆ ಅಲ್ಲಿಂದ ತರಿಸುವುದು ಹೇಗೆ ಎಂಬ ಸಮಸ್ಯೆ ಎದುರಾಯಿತು. ‘ಧರ್ಮಸ್ಥಳ ಮಡಿಕೇರಿ CPC ಬಸ್ಸಿನ ಡ್ರೈವರಲ್ಲಿ ಒಂದು ರೂಪಾಯಿ ಕೊಟ್ಟರೆ ತಂದು ಕೊಡುತ್ತಾನೆ ' ಎಂದು ಆತನೇ ಪರಿಹಾರ ಸೂಚಿಸಿದ. ಸರಿ. ಮರುದಿನವೇ ಹಾಸ್ಟೆಲ್ ಎದುರು ಬಸ್ಸನ್ನು ನಿಲ್ಲಿಸಿ ಡ್ರೈವರನಿಗೆ ಒಂದು ರೂಪಾಯಿ ಕೊಟ್ಟು ವಿಷಯ ತಿಳಿಸಿದ್ದಾಯಿತು. ಆತ ಅತ್ಯುತ್ತಮ ಕೊಳಲೊಂದನ್ನು ತಂದು ಕೊಟ್ಟು ನಾನದನ್ನು ಸುಮಧುರವಾಗಿ ನುಡಿಸಿದಂತೆ ಕನಸೂ ಕಾಣತೊಡಗಿದೆ. ಆದರೆ ಎಷ್ಟು ದಿನ ಕಳೆದರೂ ಆತ ಕೊಳಲು ತಂದು ಕೊಡುವ ಸೂಚನೆಯೇ ಕಾಣಲಿಲ್ಲ. ಉಜಿರೆ ಪೇಟೆಯಲ್ಲಿದ್ದ CPC ಅಫೀಸಿನಲ್ಲೇನಾದರೂ ಕೊಟ್ಟಿರಬಹುದೇ ಎಂದು ಕೆಲವು ದಿನ ಅಲ್ಲಿ ಹೋಗಿ ವಿಚಾರಿಸಿದ್ದಾಯಿತು. ಅಲ್ಲೂ ಉಹೂಂ. ಹೀಗೆ ಸುಮಾರು ಒಂದು ತಿಂಗಳ ನಿರೀಕ್ಷೆಯ ನಂತರ ಕೃಷ್ಣಪ್ಪನೇ ಮತ್ತೆ ಬಸ್ಸನ್ನು ಹಾಸ್ಟೆಲ್ ಎದುರು ತಡೆದು ಡ್ರೈವರನೊಡನೆ ವಿಚಾರಿಸಿದಾಗ ಆತ ಒಂದು ರೂಪಾಯಿಯನ್ನು ಹಿಂತಿರುಗಿಸಿ ‘ಕ್ಷಮಿಸಿ, ನನಗೆ ಇದಕ್ಕೆಲ್ಲ ಅಲ್ಲಿ ಸಮಯ ಸಿಗುವುದಿಲ್ಲ’ ಎಂದು ಕೈ ಆಡಿಸಿಬಿಟ್ಟಾಗ ನನ್ನ ಬಣ್ಣ ಬಣ್ಣದ ಕನಸು ಠುಸ್ ಆಯಿತು. ವಾಸ್ತವವಾಗಿ ಮಡಿಕೇರಿ ಉತ್ತಮ ಕೊಳಲು ಸಿಗುವ ತಾಣವೂ ಆಗಿರಲಿಲ್ಲ. ಒಂದು ವೇಳೆ ಆಗಿದ್ದರೂ ಬಸ್ ಡ್ರೈವರನೊಬ್ಬ ಉತ್ತಮ ಕೊಳಲು ಆಯ್ದು ತಂದು ಕೊಡಲು ಸಾಧ್ಯವೂ ಇರಲಿಲ್ಲ. ಏನೇ ಇರಲಿ, ನಾನು ಉತ್ತಮವಾದ ನಾಗರಕೋಯಿಲ್ ಕೊಳಲೊಂದನ್ನು ಪಡೆಯಲು ಮತ್ತು ಕೊಳಲು ಉತ್ತಮವಾಗಿದ್ದ ಮಾತ್ರಕ್ಕೆ ಅದು ಮಧುರವಾಗಿ ನುಡಿಯುವುದಿಲ್ಲ ಎಂದು ತಿಳಿಯಲು ಮಂಗಳೂರಲ್ಲಿ ಕಲಾನಿಕೇತನಕ್ಕೆ ಸೇರುವ ವರೆಗೆ ಕಾಯಬೇಕಾಯಿತು.

10ನೇ ತರಗತಿ ನಂತರ SDM ಕಾಲೇಜು ಸೇರಿದರೂ ಕಾರಣಾಂತರಗಳಿಂದ ಹಾಸ್ಟೆಲ್ ವಾಸ ಮುಂದುವರಿಸಲಾಗದೆ ಮುಂಡಾಜೆಯಿಂದ up and down ಮಾಡಬೇಕಾಯಿತು. ಮೊದಲ ಎರಡು ವರ್ಷ ಖಾಸಗಿ ಬಸ್ಸುಗಳೇ ಇದ್ದು ಅವು ಸರಿಯಾಗಿ ಸಮಯ ಪಾಲನೆ ಮಾಡುತ್ತಿದ್ದುದರಿಂದ ಏನೂ ತೊಂದರೆ ಆಗುತ್ತಿರಲಿಲ್ಲ.  ಆದರೆ ಆ  ಮೇಲೆ ದಕ್ಷಿಣ ಕನ್ನಡದ ದಕ್ಷಿಣ ಭಾಗ ರಾಷ್ಟ್ರೀಕರಣವಾದುದರಿಂದ ಬಸ್ಸುಗಳಿಗೆ ವೇಳಾಪಟ್ಟಿಯೆಂಬುದೇ ಇಲ್ಲವೆಂದಾಯಿತು.  ಕೊನೆಗೆ ಬಹು ಜನರ ಮನವಿ ಮೇರೆಗೆ ಶಾಲಾ ಸಮಯಕ್ಕೆ ಒಂದು ಕೆಂಪು ಬಸ್ಸು ಬರತೊಡಗಿ ಉಜಿರೆ ಪೇಟೆಯಿಂದ ಸಾಕಷ್ಟು ದೂರವಿರುವ ಸಿದ್ಧವನದಲ್ಲಿ ಕಾರ್ಯಾಚರಿಸುತ್ತಿದ್ದ ಕಾಲೇಜು ವರೆಗೆ ನಮ್ಮನ್ನು ಬಿಡುವ ವ್ಯವಸ್ಥೆ ಆಯಿತು.  ಆದರೆ ಕೆಲವೇ ದಿನಗಳಲ್ಲಿ ವಿದ್ಯಾರ್ಥಿಗಳನ್ನು ಉಜಿರೆ ಪೇಟೆಯಲ್ಲೇ ಇಳಿಸಿ ಬಸ್ಸು ನೇರವಾಗಿ ಬೆಳ್ತಂಗಡಿಗೆ ಸಾಗತೊಡಗಿತು.  ಒಂದು ದಿನ ಹೈಸ್ಕೂಲು, ಕಾಲೇಜಿನವರು ಸೇರಿ ಸುಮಾರು 25ರಷ್ಟು ಇದ್ದ ವಿದ್ಯಾರ್ಥಿಗಳು ಉಜಿರೆಯಲ್ಲಿ ಬಸ್ಸಿಂದ ಇಳಿಯದೆ ಹಿಂದಿನಂತೆ ಸಿದ್ಧವನದ ವರೆಗೆ  ಬಿಡಬೇಕೆಂದು ಹಕ್ಕೊತ್ತಾಯ ಮಾಡತೊಡಗಿದೆವು. ಈ ಸುದ್ದಿ ಅದು ಹೇಗೋ ಹೈಸ್ಕೂಲಿನ ಮುಖ್ಯೋಪಾಧ್ಯಾಯ ಆರ್.ಎನ್. ಭಿಡೆ ಅವರಿಗೆ ಮುಟ್ಟಿತು. ಅವರು ಬಸ್ ಸ್ಟೇಂಡಿಗೆ ಬಂದು ‘ನಮ್ಮ ಮಕ್ಕಳೆಲ್ಲ ಇಳೀರೋ’ ಎಂದು ಬಹುಸಂಖ್ಯಾತರಾಗಿದ್ದ ಹೈ ಸ್ಕೂಲ್ ಮಕ್ಕಳನ್ನೆಲ್ಲ ಕರಕೊಂಡು ಹೋದರು.  ಬಾಕಿ ಉಳಿದ  ಬೆರಳೆಣಿಕೆಯಷ್ಟು ಸಂಖ್ಯೆಯ ನಾವೂ ಉಪಾಯಗಾಣದೆ ಬಸ್ಸಿನಿಂದಿಳಿದು ಜೋಲು ಮೋರೆ ಹಾಕಿಕೊಂಡು ಕಾಲೇಜಿಗೆ ನಡೆದೇ ಹೋದೆವು.  ತಕ್ಷಣ ಕಾಲೇಜಿನಲ್ಲಿ ಈ ಬಗ್ಗೆ ಯಾರೂ ಚಕಾರವೆತ್ತದೆ ಇದ್ದರೂ  ಆ ದಿನಗಳಲ್ಲಿ ಪ್ರಿನ್ಸಿಪಾಲರಿಗಿಂತಲೂ ಪ್ರಭಾವಿಯಾಗಿದ್ದ   ಆಫೀಸ್ ಮ್ಯಾನೇಜರ್ ನಾವಡರು ಒಂದು ದಿನ ನಮ್ಮನ್ನು ಕಂಡವರು ‘ಏನೋ, ಸ್ಟ್ರೈಕ್ ಎಲ್ಲ ಮಾಡ್ತೀರಂತೆ’ ಎಂದು ಗುರ್ರಾಯಿಸದೆ ಇರಲಿಲ್ಲ.

ಕಾಲೇಜಿಗೆ ರಜೆ ಇದ್ದಾಗಲೊಮ್ಮೆ ಹಿರಿಯಣ್ಣನೊಂದಿಗೆ ಗೋಕರ್ಣ ಯಾತ್ರೆ ಕೈಗೊಳ್ಳುವ ಸಂದರ್ಭ ಒದಗಿ ಬಂದಿತ್ತು.  ಮಂಗಳೂರಿನ ಕಂಬೈಂಡ್ ಬುಕಿಂಗ್ ಏಜನ್ಸಿಯಿಂದ ಟಿಕೆಟ್ ಪಡೆದು ಕನೆಕ್ಟಿಂಗ್ ಬಸ್ಸುಗಳ ಮೂಲಕ ಬೈಂದೂರು ತಲುಪಿ ಅಲ್ಲಿಂದ ಗವರ್ಮೆಂಟ್ ಬಸ್ಸುಗಳಲ್ಲಿ ಪ್ರಯಾಣ ಮುಂದುವರೆಸುವುದೆಂದು ನಿಶ್ಚಯಿಸಲಾಯಿತು. ಬೆಳಗ್ಗೆ ಮಂಗಳೂರಿನಿಂದ ಹೊರಟ ಸಿ.ಪಿ.ಸಿ ಬಸ್ಸು ಗಡಗಡ ಎನ್ನುತ್ತಾ ಕುಂದಾಪುರ ತಲುಪುವಾಗ ಸ್ವಲ್ಪ ತಡವಾಗಿ ಕನೆಕ್ಟಿಂಗ್ ಬಸ್ಸು ಹೋಗಿ ಆಗಿತ್ತು.  ಕುಂದಾಪುರದಿಂದ ಗಂಗೊಳ್ಳಿಗೆ ದೋಣಿಯಲ್ಲಿ ಪಯಣಿಸಿದರೆ ಅಲ್ಲಿಂದ ಮುಂದೆ ಬಸ್ಸುಗಳು ಸಿಗುತ್ತವೆ ಎಂದು ಯಾರೋ ನೀಡಿದ ಸಲಹೆಯನ್ನು ಅಂಗೀಕರಿಸದೆ ನಮಗೆ ಬೇರೆ ದಾರಿ ಇರಲಿಲ್ಲ.  ಗಂಗೊಳ್ಳಿಯಲ್ಲಿ ತಯಾರಿದ್ದ ಬಸ್ಸಿನಲ್ಲಿ ಬೈಂದೂರು,  ಅಲ್ಲಿಂದ ಇನ್ನೊಂದು ಬಸ್ಸಿನಲ್ಲಿ ಶರಾವತಿ ತಟದ ಕಾಸರಕೋಡು ತಲುಪಿದೆವು. ಆಗ ಹೊನ್ನಾವರ ಸೇತುವೆಯ ಕಾರ್ಯ ಪ್ರಗತಿಯಲ್ಲಿತ್ತಷ್ಟೇ.  ಹೀಗಾಗಿ ಅಲ್ಲಿ ಸಿದ್ಧವಾಗಿದ್ದ ಲಾಂಚಿನಲ್ಲಿ ಆಚೆ ದಡದ ಹೊನ್ನಾವರ ಸೇರಿ ಅಲ್ಲಿಂದ ಕುಮ್ಟಾ ತಲುಪಿದೆವು.  ಅಲ್ಲಿ ಬಸ್ಸು ಬದಲಿಸಿ ಗೋಕರ್ಣ ತಲುಪುವಾಗ ಸಂಜೆ ಆಗಿತ್ತು.  ಗೋಕರ್ಣದಲ್ಲಿ ಎರಡು ದಿನವಿದ್ದು ನಾವು ಹೋದ ಕೆಲಸ ಮುಗಿದ ಮೇಲೆ ಬಸ್ಸುಗಳನ್ನು ಬದಲಿಸುತ್ತಾ ಮತ್ತೆ ಹೊನ್ನಾವರದ ನದಿ ತೀರ ತಲುಪುವಾಗ ಲಾಂಚೊಂದು ಹೊರಟು ಹತ್ತಡಿ ದೂರ ಹೋಗಿ ಆಗಿತ್ತು.  ನಮ್ಮನ್ನು ಕಂಡು ಮತ್ತೆ ತೀರಕ್ಕೆ ಬಂದ ಅದನ್ನೇರಿ ಕುಳಿತಾಗ ಸಮಯಕ್ಕೆ ಸರಿಯಾಗಿ ಲಾಂಚು ಸಿಕ್ಕಿತಲ್ಲಾ ಎಂದು ಖುಶಿ ಆಯಿತು. ಲಾಂಚು ವೇಗವಾಗಿ ಸಾಗತೊಡಗಿತು. ಆದರೆ ಎಷ್ಟು ಹೊತ್ತಾದರೂ ಏಕೋ ಆಚೆ ದಡವೇ ಕಾಣಿಸಲಿಲ್ಲ.  ಅಷ್ಟರಲ್ಲಿ ಟಿಕೆಟು ಕೊಡುತ್ತಿದ್ದ ವ್ಯಕ್ತಿ ಬಂದು ‘ಎಲ್ಲಿಗೆ’ ಎಂದು ಕೇಳಿದಾಗಲೇ ನಮಗೆ ವಿಷಯ ಗೊತ್ತಾದದ್ದು.  ಅದು ನದಿಯ ಗುಂಟ ಸಾಗಿ ಗೆರಸೊಪ್ಪೆಗೆ ಹೋಗುವ ಲಾಂಚ್ ಆಗಿತ್ತು!  ಅಲ್ಲಿರುವ ಲಾಂಚುಗಳೆಲ್ಲ ಆಚೆ ದಡವನ್ನು ಸೇರಿಸುವವೇ ಎಂದು ತಿಳಿದು ನಾವದನ್ನು ಏರಿದ್ದಾಗಿತ್ತು. ಏನು ಮಾಡುವುದೆಂದು ತಿಳಿಯದೆ ದಿಙ್ಮೂಢರಾಗಿದ್ದ ನಮಗೆ ಸಹಪ್ರಯಾಣಿಕ ಸದ್ಗೃಹಸ್ಥರೋರ್ವರು   ‘ಮುಂದೆ ಲಾಂಚು ನಿಲ್ಲುವ ಸ್ಥಳದಲ್ಲಿ ಇಳಿದುಕೊಂಡರೆ ಇಡಗುಂಜಿ ಕ್ಷೇತ್ರಕ್ಕೆ ಹೋಗಬಹುದು. ಅಲ್ಲಿಂದ ಮಂಕಿ ಎಂಬಲ್ಲಿಗೆ ಹೋದರೆ ಬಸ್ಸುಗಳು ಸಿಗುತ್ತವೆ.  ನಾನೂ ಇಡಗುಂಜಿಗೇ ಹೋಗುವವನು’ ಎಂದು ಧೈರ್ಯ ಹೇಳಿದರು.  ಅವರೊಡನೆ ಲಾಂಚಿನಿಂದಿಳಿದು ಇಡಗುಂಜಿಗೆ ಪಾದಯಾತ್ರೆ ಮಾಡಿ ಗಣಪನ ದರ್ಶನಗೈದೆವು.  ಅಲ್ಲಿಂದ ಬಿರು ಬಿಸಿಲಿನಲ್ಲಿ ಮಂಕಿ ವರೆಗೆ ನಡೆದು ಸಿಕ್ಕಿದ ವಾಹನಗಳಲ್ಲಿ ಪಯಣಿಸಿ ಮಂಗಳೂರು ತಲುಪುವಾಗ ರಾತ್ರಿಯಾಗಿತ್ತು.  ಹೋಗುವಾಗ ಕನೆಕ್ಟಿಂಗ್ ಬಸ್ಸು ತಪ್ಪಿದ ವಿಷಯವನ್ನು ಕಂಬೈಂಡ್ ಬುಕಿಂಗ್ ಏಜೆನ್ಸಿಯ ಏಜೆಂಟರಿಗೆ ತಿಳಿಸಿದಾಗ ಅವರು ಸೂಕ್ತ ಮೊಬಲಗನ್ನು ಹಿಂದಿರುಗಿಸುವ ವ್ಯವಸ್ಥೆ ಮಾಡಿಕೊಟ್ಟರು.

ಯಾರೋ ಆಸೆ ಹುಟ್ಟಿಸಿದರೆಂದು ನಮ್ಮಣ್ಣ  ಕಂತಿನಲ್ಲಿ ದುಡ್ಡು ಕಟ್ಟಿ ಲಕ್ಕಿ ಡಿಪ್ಪಿನಲ್ಲಿ ಸೈಕಲ್ ಸಿಗಬಹುದಾದ ಸ್ಕೀಮೊಂದಕ್ಕೆ ಸೇರಿದ್ದರು.  ಸಮಯಪ್ರಜ್ಞೆ ಇಲ್ಲದ ಸರ್ಕಾರಿ ಬಸ್ಸುಗಳಿಂದಾಗಿ  ನನಗೆ ಕಾಲೇಜಿಗೆ ಹೋಗಲು ತೊಂದರೆ ಆಗುತ್ತಿತ್ತು. ಇದು ಅವರಿಗೆ ತಿಳಿದು ಬಸ್ಸುಗಳ ಉಸಾಬರಿಯೇ ಬೇಡವೆಂದು ಎಲ್ಲ ಕಂತುಗಳನ್ನು ಒಮ್ಮೆಗೇ ಕಟ್ಟಿ ನನಗೆ ಸೈಕಲ್ ತೆಗೆಸಿ ಕೊಟ್ಟರು.  ಅದನ್ನು ಬೆಳ್ತಂಗಡಿಯಿಂದ ತರಲು ನಾನೂ ಹೋಗಿದ್ದೆ.  ಅದುವರೆಗೆ ಮೈದಾನಿನಲ್ಲಿ ಬಾಡಿಗೆ ಸೈಕಲನ್ನು ಓಡಿಸಿ ಮಾತ್ರ ಗೊತ್ತಿದ್ದ  ನಾನು ಧೈರ್ಯ ವಹಿಸಿ ಅದನ್ನೇರಿ ಮನೆಯತ್ತ ಹೊರಟೆ.  ದನಗಳಿಗೆ ಹಾಕಲೆಂದು ಅಣ್ಣ ಖರೀದಿಸಿದ್ದ ಹುರುಳಿಯಿದ್ದ ಚೀಲವೂ ಕ್ಯಾರಿಯರಲ್ಲಿತ್ತು.  ಸ್ವಲ್ಪ ದೂರ ಸಾಗುತ್ತಲೇ ರಸ್ತೆಯ ಏರು ಎದುರಾದಾಗ ಇದು ಮೈದಾನಿನ  ಸೈಕಲ್ ಸವಾರಿಯಂತಲ್ಲ ಎಂಬ ಸತ್ಯ ಅರಿವಾಗತೊಡಗಿತು. ಕೈ ಕಾಲುಗಳ ಶಕ್ತಿಯೆಲ್ಲ ಉಡುಗಿ ಹೋದಂತಾಗಿ ಏದುಸಿರು ಬರತೊಡಗಿತು.  ಆದರೂ ಮರ್ಯಾದೆಯ ಪ್ರಶ್ನೆಯಾಗಿದ್ದರಿಂದ ಪೆಡಲ್ ತುಳಿಯುವುದನ್ನು ಮುಂದುವರಿಸಿದೆ.  ಹೀಗೆ ಉಜಿರೆ ದಾಟಿ ಸ್ವಲ್ಪ ದೂರ ಬರುತ್ತಲೇ  ಸ್ಪ್ರಿಂಗಿನ ಒತ್ತಡಕ್ಕೆ ಕ್ಯಾರಿಯರಲ್ಲಿದ್ದ ಚೀಲ ಒಡೆದು ಅದರಲ್ಲಿದ್ದ ಹುರುಳಿಯೆಲ್ಲ ರಸ್ತೆ ಪಾಲಾಯಿತು. ತುಂಬಿಸಿಕೊಳ್ಳೋಣವೆಂದರೆ ಬೇರೆ ಚೀಲ ನನ್ನಲ್ಲಿರಲಿಲ್ಲ.  ಅಲ್ಲೇ ಸಾಗುತ್ತಿದ್ದ  ಹಳ್ಳಿಗನೋರ್ವನಿಗೆ  ತನ್ನ ಅಂಗವಸ್ತ್ರದಲ್ಲಿ ಕಟ್ಟಿಕೊಂಡು ಅದನ್ನೊಯ್ಯುವಂತೆ ಹೇಳಿ ಪಯಣ ಮುಂದುವರೆಸಿದೆ.  ಈ ರೀತಿ ಹೊಸ ಸೈಕಲಿಗೆ ಪ್ರಥಮ ದಿನ ಹುರುಳಿಯ ಬಲಿ ಸಂದಿತು.

ಆ ಮೇಲೆ ನೌಕರಿಗಾಗಿ ಊರು ಬಿಡುವ ವರೆಗೂ ಆ ಸೈಕಲ್ ನನ್ನ ನೆಚ್ಚಿನ ಸಂಗಾತಿಯಾಗಿ  ಸವಾರಿಯ ಸುಖ, ಪಂಕ್ಚರ್, ರಿಪೇರಿ  ಇತ್ಯಾದಿಗಳ ಕಷ್ಟ ಎಲ್ಲದರ ಪರಿಚಯ ಮಾಡಿಸಿತು. ಮಳೆ, ಬಿಸಿಲೆನ್ನದೆ ದಿನಕ್ಕೆ ಸುಮಾರು 20 ಕಿ.ಮೀ ಸವಾರಿ ಮಾಡುತ್ತಾ ಮಾಡುತ್ತಾ ಸಾಕಷ್ಟು ಪರಿಣಿತಿ ಸಾಧಿಸಿದೆ.  ಎಂಥ ಏರುಗಳಲ್ಲೂ ಪೆಡಲ್ ಮಾಡಿಯೇ ಸಾಗುತ್ತಿದ್ದೆ. ನಿಂತಲ್ಲೇ ನಿಲ್ಲುವುದು, ಪೆಡಲ್ ಮೇಲೆ ಕಾಲಿಡದೆ ನೆಲದಿಂದ ಹಾರಿ ನೇರವಾಗಿ ಸೀಟ್ ಮೇಲೆ ಕುಳಿತು ಕೊಳ್ಳುವುದು, ಎರಡೂ ಕೈ ಬಿಟ್ಟು ಓಡಿಸುವುದು ಮುಂತಾದ ಸ್ಟಂಟ್‌ಗಳನ್ನೂ ಮಾಡುತ್ತಿದ್ದೆ.   ಒಂದು ದಿನ ಕಾಲೇಜಿಂದ ಹಿಂತಿರುಗುತ್ತಾ ಇಳಿಜಾರೊಂದರಲ್ಲಿ ಹೀಗೆ ಎರಡೂ ಕೈಗಳನ್ನು ಬಿಟ್ಟುಕೊಂಡು ವೇಗವಾಗಿ ಬರುತ್ತಿದ್ದೆ.  ಬಹುಶಃ ರಾಂಗ್ ಸೈಡಲ್ಲೂ ಇದ್ದೆ ಅನ್ನಿಸುತ್ತದೆ. ಇಳಿಜಾರಿನ ಕೊನೆಯಲ್ಲಿದ್ದ ತಿರುವಿನಲ್ಲಿ  ಒಮ್ಮೆಗೇ ಎದುರಿಂದ ಕಾರೊಂದು ಪ್ರತ್ಯಕ್ಷವಾಯಿತು.  ತಕ್ಷಣ ಎರಡೂ ಬ್ರೇಕುಗಳನ್ನು ಹೇಗೆ ಒತ್ತಿದೆ ಎಂದು ಗೊತ್ತಿಲ್ಲ.  ಕಾರಿನವನೂ ಇದ್ದ ಶಕ್ತಿಯೆಲ್ಲ ಬಳಸಿ ಬ್ರೇಕ್ ಹಾಕಿದ್ದರಿಂದ ಅವಘಡವೊಂದು ಕೂದಲೆಳೆಯ ಅಂತರದಲ್ಲಿ ತಪ್ಪಿತು.  ಸಾವರಿಸಿಕೊಂಡ ಕಾರಿನವನು ಬೈಯಲು ಬಾಯಿ ತೆರೆಯುವಷ್ಟರಲ್ಲಿ ನಾನು ಕಾಣದಂತೆ ಮಂಗಮಾಯವಾಗಿದ್ದೆ!

ರಾತ್ರಿ ಸವಾರಿಯ ಸಂದರ್ಭವೇ ಇರದ್ದರಿಂದ ಡೈನಮೋ ಹಾಕಿಕೊಂಡು ಸೈಕಲ್ ಓಡಿಸುವ ಅನುಭವ ಹೊಂದಲಾಗಿರಲಿಲ್ಲ.  ಆ ವರ್ಷ ಕಾಲೇಜು ಡೇ ದಿನ ಇದಕ್ಕೆ ಮುಹೂರ್ತ ಒದಗಿ ಬಂತು.  ಕಾರ್ಯಕ್ರಮಗಳೆಲ್ಲ ಮುಗಿದು ಸೈಕಲ್ ಹೊರಡಿಸಿ ಡೈನಮೋ ಗುಂಡಿ ಅದುಮಿದರೆ ಯಾಕೋ ಲೈಟ್ ಹೊತ್ತಲೇ ಇಲ್ಲ.  ನೋಡಿದರೆ ಯಾರೋ ಕಿಡಿಗೇಡಿಗಳು ಬಲ್ಬ್ ಹಾರಿಸಿ ರಾತ್ರಿಯ ತಂಪಾದ ವಾತಾವರಣದಲ್ಲಿ  ಡೈನಮೋ ಬೆಳಕಿನಲ್ಲಿ ಪೆಡಲ್ ಮಾಡುತ್ತಾ ಸಾಗುವ ನನ್ನ ಕನಸಿಗೆ ತಣ್ಣೀರೆರಚಿದ್ದರು. ಬೆಳದಿಂಗಳ ಬೆಳಕಿನಲ್ಲಿ ಹೇಗೋ ಮನೆ ಸೇರಿದೆನೆನ್ನಿ.

ಸೈಕಲ್ ತುಳಿಯುತ್ತಾ ತುಳಿಯುತ್ತಾ ಕಾಲೇಜು ದಿನಗಳು ಮುಗಿದವು. ನಾನೂ ಪದವೀಧರ ಅನ್ನಿಸಿಕೊಂಡೆ. ಮುಂದೇನೆಂದು ನಮಗೆ ಗೊತ್ತಿರಲಿಲ್ಲ. ಹೇಳುವವರೂ ಇರಲಿಲ್ಲ.  ಉದ್ಯೋಗ ವಿನಿಮಯ ಕೇಂದ್ರದಲ್ಲಿ ರಿಜಿಸ್ಟ್ರೇಷನ್ ಮಾಡಿಸಿ ಪತ್ರಿಕೆಗಳ ಬೇಕಾಗಿದ್ದಾರೆ ಕಾಲಂ ನೋಡುತ್ತಿದ್ದು ಅರ್ಜಿ ಗುಜರಾಯಿಸುತ್ತಾ ಇರುವುದು ಆಗಿನ ಸಂಪ್ರದಾಯ.  ನಾನೂ ಹಾಗೇ ಮಾಡಲು ಆರಂಭಿಸಿದೆ.  ಕಲ್ಲು ಎಸೆಯುತ್ತಾ ಇದ್ದರೆ ಒಂದಾದರೂ ಮಾವಿನ ಹಣ್ಣು ಬೀಳುವಂತೆ  ಕೆಲ ಕಾಲದ ನಂತರ  ಮೈಸೂರಿಗೆ ಬಂದು ಸಂದರ್ಶನಕ್ಕೆ ಹಾಜರಾಗುವಂತೆ ಒಂದು ಕಂಪನಿಯ ಕರೆ ಬಂದಾಗ ಆ ಉದ್ಯೋಗ ನನಗೇ ಸಿಕ್ಕಿದಷ್ಟು ಖುಶಿ ಆಯಿತು. ಆದರೆ ಒಂದು ಸಮಸ್ಯೆ ಇತ್ತು.  ಮೈಸೂರಿಗೆ ಹೋಗಲು ನನ್ನಲ್ಲಿ ಒಂದೂ ಪ್ಯಾಂಟ್ ಇರಲಿಲ್ಲ!  ನಾನೂ ಸೇರಿದಂತೆ ಹೆಚ್ಚಿನವರು  ಪಂಚೆ ಉಟ್ಟುಕೊಂಡೇ ಕಾಲೇಜು ಶಿಕ್ಷಣ ಮುಗಿಸಿದವರು.  ಆಗ ಬಹುತೇಕ ಕುಟುಂಬಗಳ ಆರ್ಥಿಕ ಪರಿಸ್ಥಿತಿ ಆಧುನಿಕ ಬಟ್ಟೆ ಬರೆ ಹೊಲಿಸಿಕೊಳ್ಳುವುದಿರಲಿ, ಕಾಲೇಜಿನಿಂದ ಶಿಫಾರಸು ಮಾಡಲ್ಪಟ್ಟ ಪುಸ್ತಕಗಳನ್ನು ಕೊಳ್ಳುವಷ್ಟೂ ಸಶಕ್ತವಾಗಿರುತ್ತಿರಲಿಲ್ಲ. ಆದರೆ ಈಗ ಬೇರೆ ಉಪಾಯವಿರಲಿಲ್ಲ.  ಸುಮಾರಾದ ಬಟ್ಟೆ ಖರೀದಿಸಿ ಒಂದು ಪ್ಯಾಂಟ್ ಹೊಲಿಯಲು ಹಾಕಿದ್ದಾಯಿತು.  ಆಗ ಟೈಟ್ ಪ್ಯಾಂಟುಗಳ ಕಾಲ.  ಬಾಟಂ ಎಷ್ಟು ಎಂದು ಟೈಲರ್ ಕೇಳಿದಾಗ  ತತ್ಕಾಲೀನ ಫಾಷನ್ನಿನಂತೆ ಇರಲಿ ಎಂದೆ. ನಿಗದಿತ ದಿನ ಪ್ಯಾಂಟ್ ತರಲು ಹೋದರೆ  ಟೈಲರ್ ಇನ್ನೂ ಬಟ್ಟೆಗೆ ಮುಟ್ಟಿಯೇ ಇರಲಿಲ್ಲ!  ಮರುದಿನ ನಾನು ಇಂಟರ್‌ವ್ಯೂಗೆ ಹೊರಡಬೇಕಾಗಿತ್ತು.  ಆತನಿಗೆ ವಿಷಯ ತಿಳಿಸಿ ಅಲ್ಲೇ ನಿಂತು ಹೊಲಿಸಿಕೊಂಡು ಬಂದೆ.  ಮನೆಗೆ ಬಂದು ಧರಿಸಲು ನೋಡಿದರೆ ಪಾದ ಪ್ಯಾಂಟಿನೊಳಗೆ ತೂರುತ್ತಲೇ ಇಲ್ಲ! ಬಾಟಂ ಅಷ್ಟು ಟೈಟ್! ಮತ್ತೆ ಅಷ್ಟು ದೂರ ಹೋಗಿ ಸರಿಪಡಿಸಿಕೊಳ್ಳುವಷ್ಟು ಸಮಯವಿರಲಿಲ್ಲ.  ಮನೆಯಲ್ಲಿ  ಮಷೀನ್ ಇದ್ದು ತಂಗಿಗೆ ತಕ್ಕಮಟ್ಟಿನ ಹೊಲಿಗೆ ಕೆಲಸ ಬರುತ್ತಿತ್ತು.  ಅವಳೇ ಪ್ಯಾಂಟಿನ ಹೊಲಿಗೆ ಬಿಚ್ಚಿ ಹೇಗಾದರೂ ಪಾದ  ತೂರುವಂತೆ ವ್ಯವಸ್ಥೆ ಮಾಡಿಕೊಟ್ಟಳು.  ಆದರೆ ಮರು ಹೊಲಿಗೆ ಹಾಕಿದ ಭಾಗದಲ್ಲಿ V ಆಕಾರದ ಮಾರ್ಕ್ ಸ್ಪಷ್ಟವಾಗಿ ಕಾಣಿಸಿ ನಾನು ಬೇಸ್ತು ಬಿದ್ದುದನ್ನು ಜಗಜ್ಜಾಹೀರು ಮಾಡುತ್ತಿತ್ತು!  ಆ ಇಂಟರ್‍ವ್ಯೂ ಫಲಪ್ರದವೂ ಆಗಲಿಲ್ಲ.

ಹೀಗೆ ನಿರುದ್ಯೋಗ ಪರ್ವ ಮುಂದುವರಿಯುತ್ತಾ ಇರುವಾಗ ನಮ್ಮ ಸೋದರಮಾವನಿಗೆ ಪರಿಚಯವಿದ್ದ ಜನಾನುರಾಗಿ ಪ್ರಭಾವಿಯೋರ್ವರ ವಶೀಲಿಗೆ ಯಾಕೆ ಪ್ರಯತ್ನಿಸಬಾರದೆಂಬ ಯೋಚನೆ ನನಗೆ ಬಂತು.  ಮಾವನೂ ಇದಕ್ಕೆ ಒಪ್ಪಿ ಫೋನ್ ಮೂಲಕ ಅವರು ಲಭ್ಯರಿರುವ ದಿನ ತಿಳಿದುಕೊಳ್ಳುವಂತೆ ಸೂಚಿಸಿದರು. . ಇದಕ್ಕಾಗಿ ಬೆಳ್ತಂಗಡಿ ಪೋಸ್ಟ್ ಆಫೀಸಿನಿಂದ ಮಂಗಳೂರಿಗೆ ಟ್ರಂಕ್ ಕಾಲ್ ಬುಕ್ ಮಾಡಿ ಮಾತಾಡಿದ್ದೆ.  ಅದು ನನ್ನ ಜೀವನದ ಮೊದಲ ಟೆಲಿಫೋನ್ ಸಂಭಾಷಣೆ. ನಿಗದಿತ ದಿನದಂದು ಮಂಗಳೂರಿಗೆ ಹೋದಾಗ ಅವರನ್ನು ಭೇಟಿಯಾಗಲು ಬಂದವರ ಗಡಣವೇ ನೆರೆದಿತ್ತು.  ನಾವು ಹೋಗುವಾಗ ಅವರು  ಯಾರೋ ಒಬ್ಬ ಯುವಕನಿಗೆ ಆತ ಮಾಡಿದ ಯಾವುದೋ ತಪ್ಪಿನ ಬಗ್ಗೆ ‘ಕ್ಲಾಸ್’ ತೆಗೆದುಕೊಳ್ಳುತ್ತಿದ್ದರು. ಮಧ್ಯೆ ನಮ್ಮ ಕಡೆ ನೋಡಿ ‘ಒಂದು ಮನೆಯಲ್ಲಿ ವೆಂಕು ಎಂಬ ಆಳೊಬ್ಬನಿದ್ದನಂತೆ.  ಒಂದು ರಾತ್ರಿ 'ವೆಂಕುವನ್ನು ನಾಳೆ ಪಣಂಬೂರಿಗೆ ಕಳಿಸಬೇಕು' ಎಂದು ಮನೆಯೊಡೆಯ ಅಂದದ್ದು ಆತನಿಗೆ ಕೇಳಿಸಿತು.  ಮುಂದಿನದನ್ನು ಕೇಳಿಸಿಕೊಳ್ಳುವ ಗೋಜಿಗೆ ಹೋಗದೆ  ಬೆಳಗ್ಗೆ ಎದ್ದವನೇ ಸೀದಾ ಪಣಂಬೂರಿಗೆ ಹೋಗಿ ಬಂದ. ಕೊಂಚ ಹೊತ್ತಲ್ಲಿ ಯಜಮಾನ ಆತನನ್ನು ಕರೆದು 'ವೆಂಕೂ, ನೀನೊಮ್ಮೆ ಪಣಂಬೂರಿಗೆ ಹೋಗಿ.... ' ಎಂದು ಮಾತು ಮುಗಿಸುವ ಮುನ್ನವೇ ನಾನು ಆಗಲೇ ಹೋಗಿ ಬಂದಾಯ್ತು ಯಜಮಾನ್ರೇ ಅಂದನಂತೆ.  ಈ ಮಹಾಶಯನೂ ಹಾಗೇ ಮಾಡಿದ್ದಾನೆ’ ಅಂದರು. ಆಗಷ್ಟೇ ಪಣಂಬೂರು ಬಂದರು ಕಾರ್ಯಾರಂಭ ಮಾಡಿತ್ತು.  ಅವರು ನಮ್ಮ ಕಡೆ ನೋಡಿ ಈ ಕಥೆ ಹೇಳಿದ್ದ ಕಾರಣ ನಾನು ಸಮಯಸ್ಪೂರ್ತಿಯಿಂದ ‘ಈಗಾದ್ರೆ ವೆಂಕು ಬಂದರನ್ನಾದರೂ ನೋಡಿಕೊಂಡು ಬರ್ತಿದ್ನೋ ಏನೋ’ ಅಂದೆ.  ಅಲ್ಲಿದ್ದವರೆಲ್ಲರೂ ನಕ್ಕರು.  ಕೊಂಚ ಹೊತ್ತಿಗೆ ನಮ್ಮ ಸರದಿ ಬಂದಾಗ ನಮ್ಮ ಮಾವ ನನ್ನ ಬಗ್ಗೆ ಎಲ್ಲ ಹೇಳಿ, ಡಾಕ್ಯುಮೆಂಟ್ಸ್ ಎಲ್ಲ ತೋರಿಸಿ ಎಲ್ಲಾದರೂ ಉದ್ಯೋಗಕ್ಕೆ ಸಹಾಯ ಮಾಡಬೇಕೆಂದು ವಿನಂತಿಸಿದಾಗ ‘ಒಬ್ಬರು ಮಾತಾಡುವಾಗ ಮಧ್ಯೆ ಬಾಯಿ ಹಾಕುವವರಿಗೆ ನಾನು ಯಾವ ಸಹಾಯವನ್ನೂ ಮಾಡಲಾರೆ’ ಅಂದು ಬಿಟ್ಟರು!  ನಾನು ಹೇಳಿದ ಜೋಕ್ ಅವರ egoವನ್ನು ಘಾಸಿಗೊಳಿಸಿತ್ತೋ ಏನೋ.  ಆದರೂ ಮತ್ತೆ ‘ಇಂಥಿಂಥ ಕಡೆ ಅಪ್ಲೈ ಮಾಡಲಿ, ನಾನು ಒಂದು ಮಾತು ಹೇಳುತ್ತೇನೆ’ ಎಂದು ಪ್ರೋತ್ಸಾಹದ ಮಾತುಗಳನ್ನಾಡಿ ನಮ್ಮನ್ನು ಬೀಳ್ಕೊಟ್ಟರು. ಸಮಯ ಸಂದರ್ಭ ನೋಡದೆ ಎಂದಿಗೂ ಮಾತನಾಡಬಾರದು ಎಂಬ ಪಾಠವನ್ನು ನಾನು ಅಂದು ಕಲಿತೆ. ಆದರೆ ಈ ಭೇಟಿಯಿಂದ ಪ್ರಯೋಜನವೇನೂ ಆಗಲಿಲ್ಲ.

ಕೊನೆಗೆ ಯಾವುದೇ ವಶೀಲಿ, written test, ಇಂಟರ್‌ವ್ಯೂ ಇಲ್ಲದೆ ಕೇವಲ SSLC ಅಂಕಗಳ ಆಧಾರದ ಮೇಲೆ ದೂರವಾಣಿ ಇಲಾಖೆಯಲ್ಲಿ ನನಗೆ ನೌಕರಿ ಸಿಕ್ಕಿ ಮಂಗಳೂರಲ್ಲಿ ಬಾಡಿಗೆ ರೂಮು ಹಿಡಿದಿದ್ದೆ.  ನೀರಿಗಾಗಿ ಅಲ್ಲಿ  ಗಡಗಡೆ ಇದ್ದ ಬಾವಿ ಒಂದಿತ್ತು.  ಇನ್ನೂ ಮೊದಲ ಸಂಬಳ ದೊರಕಿರಲಿಲ್ಲ.  ಅವರಿವರಿಂದ ಸ್ವಲ್ಪ ಕೈಗಡ ಪಡೆದು ಅಗತ್ಯ ವಸ್ತುಗಳ ಜೊತೆಗೆ ಒಂದು ಪ್ಲಾಸ್ಟಿಕ್ ಬಕೆಟನ್ನೂ ಖರೀದಿಸಿದ್ದೆ. ಉಜಿರೆ ಹಾಸ್ಟೆಲಲ್ಲಿರುವಾಗ  ಬಕೆಟಿಗೆ ಹಗ್ಗ ಕಟ್ಟಿ ರಾಟೆಯ ಬಾವಿಯಿಂದ ನೀರು ಸೇದಿ ಅಭ್ಯಾಸ ಇತ್ತು.  ಈ ಗಡಗಡೆಯ ಹೊಸ ಅನುಭವ ಪಡೆಯುವ ಉತ್ಸಾಹದಿಂದ ಹೊಸ ಬಕೆಟಿನ ಹ್ಯಾಂಡಲ್ಲಿಗೆ ಹಗ್ಗ ಬಿಗಿದು ಬಾವಿಗಿಳಿಸಿ ನೀರು ತುಂಬಿದೊಡನೆ ಮೇಲಕ್ಕೆಳೆದಾಗ  ತುಂಬಾ ಹಗುರ ಎನ್ನಿಸಿತು.  ಇದು ಗಡಗಡೆಯ ಪ್ರಭಾವ ಇರಬೇಕು ಎಂದುಕೊಂಡು ನೋಡಿದರೆ ಕಳಚಿಕೊಂಡ ಹ್ಯಾಂಡಲ್ ಮಾತ್ರ ಹಗ್ಗದೊಡನೆ ಬಂದು  ಬಕೆಟ್ ಬಾವಿಯಲ್ಲೇ ಉಳಿದಿತ್ತು! ಪ್ಲಾಸ್ಟಿಕ್ ಬಕೆಟ್ಟಿನ ಹ್ಯಾಂಡಲ್ ಎರಡು ರಂಧ್ರಗಳಿಗೆ ಹಾಗೆಯೇ ಸಿಕ್ಕಿಸಲ್ಪಟ್ಟಿರುತ್ತದೆ ಎಂದು ಗಮನಿಸದೆ ಮೆಟಲ್ ಬಕೆಟಿನಂತೆಯೇ ದೃಢ ರಚನೆ ಹೊಂದಿರುತ್ತದೆ ಎಂದು ತಿಳಿದದ್ದು ನನ್ನ ತಪ್ಪಾಗಿತ್ತು. ಕೂಡಲೇ ಇನ್ನೊಂದು ಬಕೆಟ್ ಖರೀದಿಸಲು ಆರ್ಥಿಕ ಪರಿಸ್ಥಿತಿ ಅನುಮತಿ ಕೊಡುತ್ತಿರಲಿಲ್ಲ. ಮೊದಲ ಸಂಬಳ ಸಿಗುವ ವರೆಗೆ ಪಕ್ಕದ ರೂಮಿನವರ ಬಕೆಟ್ ಉಪಯೋಗಿಸಬೇಕಾಯಿತು.

ನಾನು ವಿವಿಧ ಕಲಾತಂಡಗಳೊಡನೆ ಬಹಳಷ್ಟು ತಿರುಗಾಡಿದ್ದೇನೆ. ವೈವಿಧ್ಯಮಯ ಅನುಭವಗಳೂ ಆಗಿವೆ.  ಒಮ್ಮೆ ಮಂಗಳೂರಿನ ಮಾಸ್ಟರ್ ವಿಠಲ್ ನೇತೃತ್ವದಲ್ಲಿ ದೋಣಿಮಲೈ Townshipನಲ್ಲಿ ನೃತ್ಯ ಕಾರ್ಯಕ್ರಮ ಏರ್ಪಾಡಾಗಿತ್ತು.  ಉಳಿದವರೆಲ್ಲ ಮುಂಚಿತವಾಗಿಯೇ ಹೋಗಿದ್ದರೂ ಡ್ಯೂಟಿ ಇದ್ದುದರಿಂದ ನಾನು ಬಸ್ಸಿನಲ್ಲಿ ಆ ಮೇಲೆ ಸೇರಿಕೊಳ್ಳುವುದೆಂದು ನಿರ್ಧಾರವಾಯಿತು.  ಬಳ್ಳಾರಿಗೆ ಹೋಗುವ ಬಸ್ಸಿನಲ್ಲಿ ಚಳ್ಳಕೆರೆಯಲ್ಲಿ ಇಳಿದುಕೊಂಡರೆ  ದೋಣಿಮಲೈಗೆ ಹೋಗಬಹುದು ಎಂದು ಯಾರೋ ಹೇಳಿದ್ದರಿಂದ ಅಲ್ಲಿಗೆ ಮುಂಗಡ ಟಿಕೆಟ್ ಕಾದಿರಿಸಿದೆ.  ಆದರೆ ಬಸ್ಸು ಹೊರಟ ಮೇಲೆ ದೋಣಿಮಲೈಗೆ ಹೋಗಲು ಬಳ್ಳಾರಿಯಿಂದಲೇ ವಾಹನಗಳು ಸಿಗುವುದು  ಎಂದು ತಿಳಿಯಿತು.  ಹೊಳಲ್ಕೆರೆ ಬರುತ್ತಲೇ  ಕಂಡಕ್ಟರನನ್ನು ಸಂಪರ್ಕಿಸಿ ಬಳ್ಳಾರಿಗೆ extension  ಟಿಕೆಟ್  ಪಡೆದೆ.  ಹೀಗೆ ಪ್ರಯಾಣ ಸಾಗುತ್ತಿರಬೇಕಾದರೆ  ಕಂಡಕ್ಟರ್ ಪ್ರಯಾಣಿಕರನ್ನು ಪದೇ ಪದೇ ಎಣಿಸುತ್ತಾ ಪ್ರತಿಯೊಬ್ಬರ ಟಿಕೆಟ್ ಪರೀಕ್ಷಿಸುತ್ತಿರುವುದು ಕಂಡು ಬಂತು.  ಎಣಿಕೆಗೆ ಒಂದು ತಲೆ ಕಮ್ಮಿ ಸಿಕ್ಕಿ ಟಿಕೆಟ್ ಮತ್ತು ಪ್ರಯಾಣಿಕರ ಸಂಖ್ಯೆ ತಾಳೆಯಾಗುತ್ತಿರಲಿಲ್ಲವಂತೆ. ಬಹಳಷ್ಟು ಹೊತ್ತು ತಲೆಕೆಡಿಸಿಕೊಂಡ ಮೇಲೆ ಕಂಡಕ್ಟರ್ ನನ್ನ ಬಳಿ ಬಂದು ನನ್ನ ಕಾದಿರಿಸಿದ ಟಿಕೆಟ್ ಮತ್ತು extension ಟಿಕೆಟುಗಳನ್ನು ಸರಿಯಾಗಿ ಪರೀಕ್ಷಿಸಿದಾಗ ವಿಷಯ ಗೊತ್ತಾಯಿತು.  ನಾನು ಚಳ್ಳಕೆರೆ ಮತ್ತು ಹೊಳಲ್ಕೆರೆಗಳನ್ನು confuse ಮಾಡಿಕೊಂಡು ಮೊದಲ ಟಿಕೆಟ್ ಚಳ್ಳಕೆರೆ ವರೆಗೆ ಇದ್ದರೂ ಅದರ ಮೊದಲೇ ಸಿಗುವ ಹೊಳಲ್ಕೆರೆಯಿಂದ ಟಿಕೆಟ್  extend ಮಾಡಿಸಿದ್ದೆ! ಹೀಗಾಗಿ ಹೊಳಲ್ಕೆರೆಯಿಂದ ಚಳ್ಳಕೆರೆ ವರೆಗೆ ನಾನು ಎರಡು ಟಿಕೆಟ್  ಪಡೆದಂತಾಗಿ ಲೆಕ್ಕಕ್ಕೆ ಒಬ್ಬ ಪ್ರಯಾಣಿಕ ಕಮ್ಮಿ ಸಿಗುತ್ತಿದ್ದ!  ಇಷ್ಟೆಲ್ಲ ಆಗಿ ದೋಣಿಮಲೈ ತಲುಪಿದಾಗ ರಾಜಕೀಯ ಗಣ್ಯರೊಬ್ಬರ ನಿಧನದಿಂದಾಗಿ ನೃತ್ಯ ಕಾರ್ಯಕ್ರಮ ರದ್ದಾಗಿದ್ದದ್ದು ತಿಳಿಯಿತು. ಪ್ರಭಾವಿಯೊಬ್ಬರ ಸಹಾಯದಿಂದ ಅಲ್ಲಿಯ ಪ್ಲಾಂಟಿನ iron ore mining ಕಾರ್ಯವಿಧಾನಗಳನ್ನೆಲ್ಲ ವೀಕ್ಷಿಸಿ, ಹಂಪೆಗೆ ಭೇಟಿ ಕೊಟ್ಟು ಮರಳಿದೆವು.

ಸಭೆ ಸಮಾರಂಭಗಳಲ್ಲಿ ಸಿಗುವ ಕೆಲವರು ‘ನನ್ನ ಗುರುತು ಸಿಕ್ಕಿತೇ ’ ಎಂದು ಕೇಳುವುದುಂಟು.  ಬಹಳ ಕಾಲದಿಂದ ಭೇಟಿಯಾಗದಿದ್ದು ಚಹರೆ ಬದಲಾಗಿರುವ ಕೆಲವರ ಗುರುತು ನಿಜವಾಗಿ ಸಿಕ್ಕಿರುವುದಿಲ್ಲ. ದಾಕ್ಷಿಣ್ಯಕ್ಕೆ ‘ಓ, ಸಿಗದೇ ಏನು’ ಎಂದು ಹೇಳಿ ಆ ಮೇಲೆ ಮಾತು ಶುರು ಮಾಡಿ ಪೇಚಿಗೀಡಾಗುವುದನ್ನು ತಪ್ಪಿಸಲು ಈಗೀಗ ‘ಕ್ಷಮಿಸಿ, ನಿಮ್ಮನ್ನು ನೋಡಿದ್ದೇನೆ.  ಆದರೆ ಈಗ ನೆನಪಾಗುತ್ತಿಲ್ಲ’ ಎಂದು ಹೇಳುವುದನ್ನು ರೂಢಿಸಿಕೊಂಡಿದ್ದೇನೆ.  ‘ಇವನೇನೋ ನಾಟಕ ಆಡ್ತಾ ಇದ್ದಾನೆ’ ಎಂದು ಇದನ್ನು ತಪ್ಪಾಗಿ ಅರ್ಥೈಸಿಕೊಂಡು  ಆ ಮೇಲೆ ಅಂತರ ಕಾಯ್ದುಕೊಂಡವರೂ ಅನೇಕರಿದ್ದಾರೆ.  ಯಾವುದೋ ನಿರ್ದಿಷ್ಟ ಸನ್ನಿವೇಶದಲ್ಲಿ ದಿನಾ ನೋಡುತ್ತಿರುವ ವ್ಯಕ್ತಿಗಳು ಬೇರೆಡೆ ಸಿಕ್ಕಿದಾಗ ಗುರುತು ಸಿಗದಿರುವ ಸಮಸ್ಯೆ ನನಗಿದೆ. ಉದಾಹರಣೆಗೆ  ಪರಿಚಯದ ಬಸ್ ಕಂಡಕ್ಟರ್ ಓರ್ವರು ಮಾರ್ಕೆಟಲ್ಲಿ ಕಾಣ ಸಿಕ್ಕಿದರೆ ಯಾರೆಂದೇ  ಗೊತ್ತಾಗುವುದಿಲ್ಲ. ಕೆಲವು ಫೇಸ್‌ಬುಕ್ ಪರಿಚಯಸ್ಥರು ಎದುರಿಗೆ ಸಿಕ್ಕಾಗಲೂ ಹೀಗೆ ಆಗಿ ಆ ಮೇಲೆ ಅವರ ಲೈಕುಗಳು, ಕಮೆಂಟುಗಳು ಕಮ್ಮಿಯಾದದ್ದಿದೆ. ಪ್ರಪಂಚದಲ್ಲಿ ಒಬ್ಬರಂತೆ ಇರುವ ಏಳು ಮಂದಿ ಇರುತ್ತಾರಂತೆ. ಅಂಥವರಲ್ಲಿ ಒಬ್ಬಿಬ್ಬರು ನಮ್ಮ ಸಂಪರ್ಕ ಪರಿಧಿಯಲ್ಲೂ ಇರುತ್ತಾರೆ. ಅಂಥವರ ಪೈಕಿ ಯಾರನ್ನೋ ಇನ್ಯಾರೋ ಎಂದು ತಿಳಿದು ನಾನೇ ಮೇಲೆ ಬಿದ್ದು ಮಾತಾಡಿಸಿ ಮಂಗನಾದ ಪ್ರಸಂಗಗಳೂ ಇವೆ.

ನಿಮ್ಮ ಮನದಾಳದ ಸಂಗ್ರಹಾಗಾರದಲ್ಲೂ ಇಂಥ ಇರುಸುಮುರುಸಿನ ಪ್ರಸಂಗಗಳು ಕೆಲವಾದರೂ ಇರಬಹುದಲ್ಲವೇ.
    

 


5 comments:

  1. ತುಂಬಾ ಸೊಗಸಾದ ಲೇಖನ ಸರ್. ನಿಮ್ಮ ಪೇಚಿನ ಪ್ರಸಂಗಗಳ ಹಾಗೆ ನಮ್ಮೆಲ್ಲರ ಜೀವನದಲ್ಲೂ ಇದೆಯಾದರೂ ಇಷ್ಟು ರಸವತ್ತಾಗಿರಲಾರದು ಎಂದೆನಿಸುತ್ತಿದ್ದೆ. ನಿಜಕ್ಕೂ ನಿಮ್ಮ ಬ್ಲಾಗ್ ಓದುತ್ತಿದ್ದರೆ ೫೦-೬೦ ದಶಕದ ದಕ್ಷಿಣ ಕನ್ನಡದ ಚರಿತ್ರೆಯನ್ನೇ ಓದಿದ ಅನುಭವವಾಗುತ್ತದೆ . ಅಂದಿನ ವಿದ್ಯಾಭ್ಯಾಸದ ರೀತಿ ನೀತಿಗಳು ,cpc ಬಸ್ ಪ್ರಯಾಣಗಳು , ಗ್ರಾಮೀಣ ಪ್ರದೇಶದಿಂದ ಹತ್ತಿರದ ಪಟ್ಟಣದಲ್ಲಿ ಓದಲು ಹೊರಟಾಗ ನೀವು ಅನುಭವಿಸಿದ ಕಷ್ಟಗಳು ಪೇಚಿನ ಪ್ರಸಂಗಗಳನ್ನು ಸೊಗಸಾಗಿ ವರ್ಣಿಸಿದ್ದೀರಿ. ಅದೇ ಪಟ್ಟಣದಲ್ಲೇ ಹುಟ್ಟಿ ಬೆಳೆದು ಓದಿದವರ ಅನುಭವ ಇಷ್ಟು ವರ್ಣರಂಜಿತ ಹಾಗು ಸಮೃದ್ಧ ವಾಗಿ , ಹುಲುಸಾಗಿರಲು ಸಾಧ್ಯವಿಲ್ಲ. ನಿಮ್ಮ ಪ್ಯಾಂಟ್ ಪ್ರಕರಣವಂತೂ ಹೊಟ್ಟೆ ಹುಣ್ಣಾಗುವಷ್ಟು ನಗಿಸಿತು. ಆಗಿನ ಸಮಾಜದ ಕಾಲೇಜು ವಿದ್ಯಾಭ್ಯಾಸ ಮುಗಿದಿದ್ರೂ ಹುಡುಗ ಹುಡುಗಿಯರಿಲ್ಲಿದ್ದ ಮುಗ್ದ ತನ ಇಂದಿನ ಚಿಕ್ಕಮಕ್ಕಳಲ್ಲೂ ಕಾಣಲು ಸಾಧ್ಯವಿಲ್ಲವೇನೋ. ನಿಮ್ಮ ಗೋಕರ್ಣದ ಟ್ರಿಪ್ ಕೂಡ ಚೆನ್ನಾಗಿತ್ತು. ಆಗೆಷ್ಟು ಕಷ್ಟವಿತ್ತು. ಈಗ ನೋಡಿ ಮಂಗಳೂರಲ್ಲೇ ಕೊಂಕಣ ರೈಲ್ವೆ ಬೋಗಿಯಲ್ಲಿ ಮಡಂಗಾವ್ ರೈಲ್ ಹತ್ತಿದರೆ ಗೋಕರ್ಣ ಕ್ಕೆ ನೇರವಾಗಿ ಹೋಗಬಹುದೇನೋ ಅಲ್ವೇ . ಏನೇ ಆಗಲಿ ಇಂಥ ಲೇಖನಗಳನ್ನು ಬರೆಯುತ್ತ ನಮ್ಮೆಲ್ಲ ಮನರಂಜಿಸುತ್ತಿರಿ .
    ಧನ್ಯವಾದಗಳು.

    Laxmi GN (FB)

    ReplyDelete
    Replies
    1. ಇಷ್ಟು ದೀರ್ಘ ಲೇಖನವನ್ನು ಕ್ಷಿಪ್ರವಾಗಿ ಓದಿ ಪ್ರತಿಕ್ರಿಯೆ ಬರೆದ ನಿಮಗೆ ಧನ್ಯವಾದಗಳು.

      Delete
    2. ಅದು ನಿಮ್ಮ ಲೇಖನಕ್ಕಿರುವ ಆಕರ್ಷಣೆ ಎಂದರೆ ತಪ್ಪಾಗಲಾರದು. ಏನೇ ಕೆಲಸವಿದ್ದರೂ ಕೆಲವರ ಬರವಣಿಗೆ ಎಂದರೆ ಎಲ್ಲವನ್ನು ಬದಿಗೊತ್ತಿ ಓದೋಣವೆನಿಸುತ್ತದೆ. ಮುಂದೂಡಲು ಮನಸ್ಸಾಗುವುದಿಲ್ಲ. ಅದರಲ್ಲೂ ನಿಮ್ಮ ಬ್ಲಾಗ್ನ ಅತ್ಯಂತ ಆಸಕ್ತಿಯಿಂದ ಓದುವವಳು ನಾನು.

      Laxmi GN (FB)

      Delete
  2. venkuvina bandaru joku sakattagittu sir

    ReplyDelete

Your valuable comments/suggestions are welcome