Wednesday, 8 May 2019

ಮಹಿಷಿಯ ಹಾಡೂ ಅಲ್ಲ ಮಹಿಷನ ಹಾಡೂ ಅಲ್ಲ


ರಾಜ್‌ಕುಮಾರ್ ಅವರು ಮೊತ್ತ ಮೊದಲು ಹಾಡಿದ್ದು ಸಂಪತ್ತಿಗೆ ಸವಾಲ್ ಚಿತ್ರದ ಎಮ್ಮೆ ಹಾಡು ಎಂದು ಅಂದುಕೊಂಡವರು ಅನೇಕರಿದ್ದಾರೆ.  ಅದಕ್ಕಿಂತ ಮೊದಲೇ ಮಹಿಷಾಸುರಮರ್ದಿನಿ ಚಿತ್ರದಲ್ಲಿ ಎಸ್.ಜಾನಕಿಯೊಂದಿಗೆ ಅವರು ಹಾಡಿದ ಹಾಡೊಂದಿತ್ತು ಎಂದು  ಗೊತ್ತಿದ್ದವರೂ ಸಾಕಷ್ಟಿದ್ದಾರೆ.  ಈ ಮಹಿಷಿ ಮತ್ತು ಮಹಿಷನ ಹಾಡುಗಳಿಗಿಂತಲೂ ಮೊದಲೇ ಕೆಲವು ಚಿತ್ರಗಳಲ್ಲಿ   ಅವರು ಹಾಡಿದ್ದರು  ಎಂದು ಕೆಲವರಿಗೆ ಮಾತ್ರ ಗೊತ್ತು. ಬೇರೆಯವರಿಗೆ ಹಿನ್ನೆಲೆಗಾಯನದ ರೂಪದಲ್ಲೂ ಅವರ ಧ್ವನಿಯ ಬಳಕೆಯಾಗಿತ್ತು.  ಆದರೆ ಕನ್ನಡ ಚಿತ್ರಸಂಗೀತದ ನವಮನ್ವಂತರವೊಂದರ ಆರಂಭಕ್ಕೆ ಎಮ್ಮೆ ಹಾಡಿನವರೆಗೆ  ಯಾಕೆ ಕಾಯಬೇಕಾಯಿತು ಎಂಬ ಪ್ರಶ್ನೆಗೆ ಉತ್ತರ ಹುಡುಕುವುದು ಸುಲಭವಲ್ಲ.


ಬೇಡರ ಕಣ್ಣಪ್ಪ ಚಿತ್ರದಲ್ಲೇ ರಾಜ್ ಹಾಡಿದ್ದರು!
ರಂಗಭೂಮಿ ಹಿನ್ನೆಲೆಯಿಂದ ಬಂದ ರಾಜ್‌ಕುಮಾರ್ ಅವರು ಅಪಾರ ಸಂಗೀತ ಜ್ಞಾನ ಮತ್ತು ಸುಶ್ರಾವ್ಯ ಕಂಠದ ಒಡೆಯರಾಗಿದ್ದರೂ ಆಗಲೇ ಹಿನ್ನೆಲೆ ಗಾಯನ ಪದ್ಧತಿ ಚಾಲ್ತಿಗೆ ಬಂದಿದ್ದರಿಂದ ಬೇಡರ ಕಣ್ಣಪ್ಪ ಚಿತ್ರದಲ್ಲಿ  ಅವರಿಗಾಗಿ ಹಾಡಿದ್ದವರು ಸಿ.ಎಸ್. ಜಯರಾಮನ್. ಆದರೆ ಆ ಚಿತ್ರದಲ್ಲಿ ರಾಜ್‌ಕುಮಾರ್ ಅವರು ಜಿ.ವಿ.ಅಯ್ಯರ್‌ಗಾಗಿ ಶಿವ ಕ್ಷಮಾಪಣಾ ಸ್ತೋತ್ರದ ಎರಡು ಸಾಲುಗಳನ್ನು ಹಾಡಿದ್ದರು.   ಮುಂದೆ ಇದೇ ಸ್ತೋತ್ರವನ್ನು ಸಾಕ್ಷಾತ್ಕಾರ ಚಿತ್ರದಲ್ಲಿ ಪಿ.ಬಿ.ಎಸ್ ರಾಜ್ ಅವರಿಗೆ ಹಾಡಿದರು.

ಹೆಡ್‌ಫೋನ್ ಧರಿಸಿ ಆಲಿಸಿ.



ನಂತರದ ಸೋದರಿ ಚಿತ್ರದಲ್ಲಿ ಎ. ಎಂ.  ರಾಜಾ  ರಾಜ್‌ಕುಮಾರ್ ಅವರ ಧ್ವನಿಯಾದರು. ಜಿ.ಕೆ. ವೆಂಕಟೇಶ್ ಅವರು ಸ್ವತಂತ್ರವಾಗಿ ಸಂಗೀತ  ನಿರ್ದೇಶನ ಮಾಡಿದ ಮೊದಲ ಚಿತ್ರ ಹರಿಭಕ್ತದಲ್ಲಿ ಘಂಟಸಾಲ ಮುಖ್ಯ ಗಾಯಕರಾಗಿದ್ದರೂ ಚಿತ್ರದ ಕೊನೆಯ ಭಾಗದ  ಕೆಲವು ಶ್ಲೋಕಗಳನ್ನು ರಾಜ್‌ಕುಮಾರ್ ಅವರಿಂದಲೇ ಹಾಡಿಸಿದರು.

ಓಹಿಲೇಶ್ವರಕ್ಕಿಂತಲೂ ಮೊದಲು ಹರಿಭಕ್ತ ಚಿತ್ರದಲ್ಲಿ ಹಾಡಿದ ಶ್ಲೋಕ.



ಓಹಿಲೇಶ್ವರ ಚಿತ್ರದಲ್ಲಿ ಜಿ.ಕೆ. ವೆಂಕಟೇಶ್ ಒಂದು ದೊಡ್ಡ ಪ್ರಯೋಗಕ್ಕೆ ಕೈ ಹಾಕಿದರು.  ಒಟ್ಟು 12 ಹಿನ್ನೆಲೆ ಗಾಯಕ ಗಾಯಕಿಯರನ್ನು ದುಡಿಸಿಕೊಂಡ ಅವರು ರಾಜ್ ಅವರಿಗೆ  ಪಿ.ಬಿ.ಶ್ರೀನಿವಾಸ್, ಘಂಟಸಾಲ, ಟಿ.ಎಮ್. ಸೌಂದರರಾಜನ್  ಮತ್ತು ಸ್ವತಃ ರಾಜ್ ಅವರ ಧ್ವನಿಯನ್ನು ಬಳಸಿ ಮಹಾರಾಜ ಪಾತ್ರದ ಸಿದ್ದಯ್ಯಸ್ವಾಮಿಗೂ ರಾಜ್ ಅವರಿಂದ ಹಿನ್ನೆಲೆ ಗಾಯನ ಮಾಡಿಸಿದರು. ಸ್ವತಃ ತಾನು ಸೇರಿದಂತೆ ತನಗಾಗಿ ಹಾಡಿದ ನಾಲ್ಕು ಧ್ವನಿಗಳ ಪೈಕಿ ಪಾಪವದೇನಾ ಮಾಡಿದೆನೋ ಎಂದ ಪಿ.ಬಿ. ಶ್ರೀನಿವಾಸ್  ಕಂಠವೇ ತನಗೆ ಸೂಕ್ತ ಎಂದು ಆಗಲೇ ರಾಜ್ ನಿರ್ಧರಿಸಿದರಂತೆ.

ಓಹಿಲೇಶ್ವರದ ಶರಣು ಶಂಭೊ


ಓಹಿಲೇಶ್ವರದಲ್ಲಿ ಬೇರೆ ಕಲಾವಿದನಿಗಾಗಿ ಹಾಡಿದ ಶ್ಲೋಕ



ತನಗಿಂತ ಇಂಪಂತ ಅನ್ನಿಸಿದ ಪಿ.ಬಿ.ಶ್ರೀನಿವಾಸ್ ಧ್ವನಿ


ಓಹಿಲೇಶ್ವರದ ನಂತರ ಪಿ.ಕಾಳಿಂಗ ರಾವ್ ಸಂಗೀತದ  ಅಬ್ಬಾ ಆ ಹುಡುಗಿ ಚಿತ್ರದಲ್ಲಿ ರಾಜ್ ಅವರಿಗಾಗಿ ಪಿ.ಬಿ.ಎಸ್ ಎರಡು ಯುಗಳ ಗೀತೆಗಳನ್ನು ಹಾಡಿದರು. ಆದರೆ ನಂತರ ಜಿ.ಕೆ. ವೆಂಕಟೇಶ್ ಸಾರಥ್ಯದ  ಮಹಿಷಾಸುರ ಮರ್ದಿನಿ ಚಿತ್ರದಲ್ಲಿ ಪಿ.ಬಿ.ಎಸ್ ಇದ್ದರೂ ಮಹಿಷಾಸುರನ ಪಾತ್ರದ ರಾಜ್ ಕುಮಾರ್ ಅವರು ಕ್ಲಿಷ್ಟಕರವಾದ ತುಂಬಿತು ಮನವ ತಂದಿತು ಸುಖವ ಹಾಡನ್ನು ಎಸ್. ಜಾನಕಿ  ಅವರೊಂದಿಗೆ  ಘಂಟಸಾಲ ಮತ್ತು ಮನ್ನಾಡೇ ಅವರಿಗೆ ಸರಿಸಾಟಿಯಾಗಿ ಸ್ವತಃ ಹಾಡಿ ಸೈ ಎನ್ನಿಸಿಕೊಂಡರು.  ಈ ಹೋಲಿಕೆ ಯಾಕೆಂದರೆ ಆ ಹಾಡಿನ ತೆಲುಗು ಮತ್ತು ಹಿಂದಿ ಅವತರಣಿಕೆಗಳನ್ನು ಹಾಡಿದ್ದು ಈ ಮೇರು ಗಾಯಕರು.

ಮಹಿಷಾಸುರಮರ್ದಿನಿಯ ತುಂಬಿತು ಮನವ

ಸಂಗೀತ ನಿರ್ದೇಶಕ ಜಿ.ಕೆ. ವೆಂಕಟೇಶ್ ಸ್ವತಃ ನುಡಿಸಿದ ವೀಣೆಯ ಝೇಂಕಾರದೊಂದಿಗೆ ಹಾಡು ಆರಂಭವಾಗುತ್ತದೆ. ಜಾನಕಿ ಹಾಡಿರುವ ಪಲ್ಲವಿ ಭಾಗದ ನಂತರ ಚರಣದಲ್ಲಿ ಆಲಾಪದೊಂದಿಗೆ ರಾಜಕುಮಾರ್ ಪ್ರವೇಶವಾಗುತ್ತದೆ. ಯಮನ್ ಕಲ್ಯಾಣ್ ಛಾಯೆಯ ಈ ಹಾಡಿನಲ್ಲಿರುವ ಪ್ರಶ್ನೆಗೆ ಪ್ರಶ್ನೆಯನ್ನೇ ಉತ್ತರವಾಗಿ ಹೇಳುವ ತಂತ್ರವನ್ನು ಮರುವರ್ಷ ಬಂದ ಸಸುರಾಲ್ ಚಿತ್ರದ ಏಕ್ ಸವಾಲ್ ಮೈ ಕರೂಂ ಏಕ್ ಸವಾಲ್ ತುಮ್ ಕರೋ ಹಾಡಿನಲ್ಲೂ ಬಳಸಲಾಯಿತು!.




ತೆಲುಗು ಮಹಿಷಾಸುರಮರ್ದಿನಿಯಲ್ಲಿ ಘಂಟಸಾಲ ಮತ್ತು ಪಿ. ಲೀಲಾ



ಹಿಂದಿ ಅವತರಣಿಕೆ ದುರ್ಗಾಮಾತಾದಲ್ಲಿ ಮನ್ನಾಡೇ ಮತ್ತು ಗೀತಾ ದತ್


ಮಹಿಷಾಸುರಮರ್ದಿನಿಯ ಹಾಡು ಬಹಳ ಜನಪ್ರಿಯವಾದರೂ ರಾಜ್ ಅವರು ಸ್ವತಃ ಹಾಡುವುದನ್ನು ಆಗ ಮುಂದುವರಿಸಲಿಲ್ಲ. ಆಗ ಬಹುತೇಕ ಚಿತ್ರಗಳಲ್ಲಿ ಅವರೇ ನಾಯಕರಾಗಿರುತ್ತಿದ್ದು ಹೆಚ್ಚಿನ ಸಮಯ ಶೂಟಿಂಗ್ ಇತ್ಯಾದಿಗಳಲ್ಲಿ ವ್ಯಸ್ತವಾಗಿರುತ್ತಿದ್ದುದು ಮತ್ತು ಹಿನ್ನೆಲೆ ಗಾಯಕರ ಹಾಡುಗಳಿಗೆ ಲಿಪ್ ಮೂವ್‌ಮೆಂಟ್  ಕೊಡುವುದು ಪ್ರತಿಷ್ಠೆಯ ವಿಷಯ ಎಂದು ತಿಳಿಯಲ್ಪಡುತ್ತಿದ್ದುದು ಇದಕ್ಕೆ ಕಾರಣ ಇರಬಹುದು.  ಕರುಣೆಯೇ ಕುಟುಂಬದ ಕಣ್ಣು ಚಿತ್ರದಲ್ಲಿರುವ  ನರಸಿಂಹರಾಜು ಮತ್ತು ಬಾಲಣ್ಣ ಅವರ ಈ ಕುರಿತಾದ ಡಯಲಾಗ್ ಒಂದನ್ನು ಸಾಂದರ್ಭಿಕವಾಗಿ ಇಲ್ಲಿ ಕೇಳಿ.


ಎಂ. ವೆಂಕಟರಾಜು ಸಂಗೀತ ನಿರ್ದೇಶನದ  ಭಕ್ತ ಕನಕದಾಸ ಚಿತ್ರದಲ್ಲಿ ರಾಜ್‌ಕುಮಾರ್ ಅವರ ಎಲ್ಲ ಹಾಡುಗಳನ್ನು ಪಿ.ಬಿ.ಶ್ರೀನಿವಾಸ್ ಹಾಡುವುದರೊಂದಿಗೆ  ಅವರಿಬ್ಬರ ಶರೀರ ಶಾರೀರ ಸಂಬಂಧಕ್ಕೆ ಭದ್ರ ನೆಲೆಯೊದಗಿತು. ಹಾಗೆಂದು ಆ ಮೇಲೆ ಸಂಪತ್ತಿಗೆ ಸವಾಲ್ ವರೆಗೆ ರಾಜ್ ಅವರ ಎಲ್ಲ ಹಾಡುಗಳನ್ನೇನೂ ಪಿ.ಬಿ.ಶ್ರೀನಿವಾಸ್ ಅವರೇ ಹಾಡಲಿಲ್ಲ  ಎಂಬುದು ಎಲ್ಲರಿಗೂ ತಿಳಿದಿರುವ ವಿಷಯವೇ.  ಅವರ ಸಾಕಷ್ಟು ಹಾಡುಗಳನ್ನು ಘಂಟಸಾಲ, ಕೆಲವನ್ನು ಪೀಠಾಪುರಂ, ಜೇಸುದಾಸ್, ಎ.ಎಲ್.ರಾಘವನ್, ಎಸ್.ಪಿ. ಬಾಲಸುಬ್ರಹ್ಮಣ್ಯಂ ಮುಂತಾದವರು ಹಾಡಿದ್ದಾರೆ. ನಡು ನಡುವೆ ದಶಾವತಾರ, ಮಹಾಸತಿ ಅನುಸೂಯ, ಕ್ರಾಂತಿವೀರ ಮುಂತಾದ ಚಿತ್ರಗಳಲ್ಲಿ ಸ್ವತಃ ರಾಜ್ ಅವರ ಹಾಡುವ ಧ್ವನಿಯೂ ಕೇಳಿಸಿದ್ದುಂಟು. ದೇವಸುಂದರಿ ಎಂಬ ಚಿತ್ರದಲ್ಲಿ ರಾಜ್‌ಕುಮಾರ್  ನರಸಿಂಹರಾಜು ಅವರಿಗಾಗಿ ಒಂದು ಹಾಡು ಹಾಡಿದ್ದರು ಎನ್ನಲಾಗಿದೆ.  ಅವರು ವೇದಿಕೆಗಳಲ್ಲಿ ಕಾಣಿಸಿಕೊಂಡಾಗಲೆಲ್ಲ ಜನರ ‘ಹಾಡು, ಹಾಡು’ ಎಂಬ ಒತ್ತಾಯಕ್ಕೆ ಮಣಿದು ತಮ್ಮ ಚಿತ್ರಗಳ ಒಂದಾದರೂ ಹಾಡು ಹಾಡುವುದು ಸಾಮಾನ್ಯವಾಗಿತ್ತು.  ಇಂಥ ಸಂದರ್ಭಗಳಲ್ಲಿ ಹೆಚ್ಚಾಗಿ ಭಕ್ತ ಕನಕದಾಸದ ಬದುಕಿದೆನು ಬದುಕಿದೆನು ಭವ ಎನಗೆ ಹಿಂಗಿತು ಅವರ ಆಯ್ಕೆಯಾಗಿರುತ್ತಿತ್ತು.  ಮದರಾಸು ಆಕಾಶವಾಣಿಯಿಂದ ಪ್ರತಿ ಭಾನುವಾರ ಪ್ರಸಾರವಾಗುತ್ತಿದ್ದ ಹೂ ಮಳೆ ಕಾರ್ಯಕ್ರಮದಲ್ಲೂ ಒಮ್ಮೆ ಅವರು ಈ ಹಾಡು ಹಾಡಿದ್ದರು.

ದಶಾವತಾರ


ಮಹಾಸತಿ ಅನಸೂಯಾ


ಕ್ರಾಂತಿವೀರ



ಹೀಗೆ ಹೆಚ್ಚಿನ ಬದಲಾವಣೆಗಳೇನೂ ಇಲ್ಲದೆ ವರ್ಷಗಳು ಉರುಳುತ್ತಿದ್ದಾಗ  ಬಂತು ಸಂಪತ್ತಿಗೆ ಸವಾಲ್.  ಅದರ ಯಾರೇ ಕೂಗಾಡಲಿ ಹಾಡನ್ನು ಹಾಡಬೇಕಿದ್ದ ಪಿ.ಬಿ.ಶ್ರೀನಿವಾಸ್ ವಿದೇಶ ಯಾತ್ರೆ ಕೈಗೊಂಡಿದ್ದರು.  ಶೂಟಿಂಗಿಗೆ ಹಾಡು ಅರ್ಜೆಂಟಾಗಿ ಬೇಕಿತ್ತು.  ಸಂಗೀತ ನಿರ್ದೇಶಕ ಜಿ.ಕೆ. ವೆಂಕಟೇಶ್ ಅವರು ಹಾಡಿನ ಶ್ರುತಿಯನ್ನು ರಾಜ್ ಧ್ವನಿಗೆ ಹೊಂದುವಂತೆ ಒಂದು ಪಟ್ಟಿ ಏರಿಸಿ  ಅವರೊಂದಿಗೆ  ತನಗಿದ್ದ ಸಲುಗೆಯನ್ನು ಬಳಸಿ ಬೆನ್ನ ಮೇಲೆ ಕೈ ಆಡಿಸುತ್ತಾ  ‘ನೀವೇ ಹಾಡಿ ಬಿಡಿ ತಮ್ಮಯ್ಯಾ’ ಎಂದು ಬಲವಂತ ಮಾಡಿದರಂತೆ.  ‘ಅದಕ್ಕೋಸ್ಕರವೇ ವೃತ್ತಿಪರರು ಇರುವಾಗ ನನ್ನನ್ಯಾಕೆ ಎಳೀತೀರಿ.  ಅದೆಲ್ಲ ಚೆನ್ನಾಗಿರೋದಿಲ್ಲ’ ಎಂದು ವಾದಿಸಿದ ರಾಜ್ ಸುಲಭದಲ್ಲಿ ಒಪ್ಪಲಿಲ್ಲ.  ಕೊನೆಗೆ ಎಲ್ಲರೂ ಒತ್ತಾಯಿಸಿದಾಗ ಒಲ್ಲದ ಮನಸ್ಸಿನಿಂದಲೇ ಹಾಡಿ ಮುಗಿಸಿದರು. ಮುಂದಿನದು ಇತಿಹಾಸ.  ಈ ಘಟನೆ ಬಗ್ಗೆ ಸ್ವತಃ ರಾಜ್‌ಕುಮಾರ್  ಏನೆಂದಿದ್ದರೆಂದು ಅವರ ಧ್ವನಿಯಲ್ಲೇ ಇಲ್ಲಿ ಕೇಳಿ.


ಇದರ ನಂತರ ಬಹದ್ದೂರ್ ಗಂಡು ಚಿತ್ರದಲ್ಲಿ ಅವರು ಹಾಡಿದ ಮುತ್ತಿನಂಥ ಮಾತೊಂದು ಗೊತ್ತೇನಮ್ಮ ಕೂಡ ಸೂಪರ್ ಹಿಟ್ ಆದ ಮೇಲೂ ತನಗೆ ಪಿ.ಬಿ.ಎಸ್ ಧ್ವನಿಯ ಮಾಧುರ್ಯವೇ ಇಷ್ಟ, ತಾನು ಮುಂದಿನ ಪ್ರತಿ ಚಿತ್ರದಲ್ಲಿ ಒಂದೋ ಎರಡೋ ಗೀತೆಗಳನ್ನು ಮಾತ್ರ ಹಾಡುವುದಾಗಿ ರಾಜ್‌ಕುಮಾರ್  ಹೇಳಿದ್ದರು. ಆದರೆ ಈ ನಿಲುವಿಗೆ ಸಂಪೂರ್ಣ ಬದ್ಧರಾಗಿರಲು ಅವರಿಗೆ ಸಾಧ್ಯವಾಗಲಿಲ್ಲ. ಬಾಹ್ಯ ಒತ್ತಡಗಳೂ ಇದಕ್ಕೆ ಕಾರಣವಾಗಿರಬಹುದು.  ಕೆಲ ವರ್ಷಗಳ ಹಿಂದೆ ಆರಾಧನಾ ಚಿತ್ರದ ನಂತರ ಹಿಂದಿ ಚಿತ್ರ ಸಂಗೀತದ ನವಮನ್ವಂತರ ಆರಂಭವಾದಂತೆ  ಇಲ್ಲಿಯೂ ಆಗುವುದು ನಿಶ್ಚಿತವಾಗಿತ್ತು.  ಒಂದೆಡೆ  ರಾಜ್‌ಕುಮಾರ್ ಅವರ ಹಾಡುಗಳ ಜನಪ್ರಿಯತೆ ವೃದ್ಧಿಸುತ್ತ ಹೋಯಿತು.  ಇನ್ನೊಂದೆಡೆ ಎಸ್.ಪಿ. ಬಾಲಸುಬ್ರಹ್ಮಣ್ಯಂ ಪ್ರವರ್ಧಮಾನಕ್ಕೆ ಬರತೊಡಗಿದರು. ‘ಗಾನೆ ಗಾನೆ ಪೆ ಲಿಖಾ ಹೈ ಗಾನೇವಾಲೇ ಕಾ ನಾಮ್’ ಎನ್ನುತ್ತ ಬಾರೇ ಬಾರೇ ಹಾಡಿನ ಮಾರ್ಗರೇಟ್‌ನಂತೆ  ಪಿ.ಬಿ. ಶ್ರೀನಿವಾಸ್ ನೇಪಥ್ಯಕ್ಕೆ ಸರಿಯುತ್ತಾ ಹೋದರು. Nothing succeeds like success ಎಂಬ ಹೇಳಿಕೆಯಂತೆ ಅದರ ವಿಲೋಮವೂ ಸತ್ಯವೇ ಆಗಿರುವುದು ಪಿ.ಬಿ.ಎಸ್ ಅವರ ಕಾರ್ಯಕ್ಷಮತೆಯ ಮೇಲೂ ಪರಿಣಾಮ ಬೀರಿರಬಹುದಾದ ಸಾಧ್ಯತೆಯೂ ಇದೆ. ಆದರೂ ಮತ್ತೂ ಕೆಲ ಕಾಲ ಅಪರೂಪಕ್ಕೆ ಸಿಗುತ್ತಿದ್ದ ಅವಕಾಶಗಳಲ್ಲಿ ಮಿಂಚಲು ಅವರಿಗೆ ಸಾಧ್ಯವಾಯಿತು. ಆಗೊಮ್ಮೆ ಈಗೊಮ್ಮೆ ಹಾಡಿ ವೈವಿಧ್ಯ ಒದಗಿಸುತ್ತಿದ್ದ ಪೀಠಾಪುರಂ ನಾಗೇಶ್ವರ ರಾವ್ , ಮಾಧವಪೆದ್ದಿ ಸತ್ಯಂ,  ಟಿ. ಆರ್. ಜಯದೇವ್ ಮುಂತಾದವರು ದೃಶ್ಯದಿಂದ ಸಂಪೂರ್ಣ ಮರೆಯಾಗಿಯೇ ಹೋದರು. ಘಂಟಸಾಲ ಅಷ್ಟರೊಳಗೆ ಇಹಲೋಕ ತ್ಯಜಿಸಿದ್ದರು.

ಘಟಾನುಘಟಿ ಹಿನ್ನೆಲೆಗಾಯಕರು ಇದ್ದ ಹಿಂದಿ ಚಿತ್ರರಂಗದಲ್ಲೂ ಕೆಲವು ನಟರು ಸ್ವತಃ ಹಾಡಲು ಪ್ರಯತ್ನಿಸಿದ್ದುಂಟು.  ರಾಜ್‌ಕಪೂರ್ ಮತ್ತು ದಿಲೀಪ್ ಕುಮಾರ್  ಸ್ವತಃ ಹಾಡಿರುವುದು ನಿಮಗೆ ಗೊತ್ತೇ.

ದಿಲ್ ಕೀ ರಾನಿ ಚಿತ್ರದಲ್ಲಿ ರಾಜ್ ಕಪೂರ್ ಹಾಡಿದ ಹಾಡು.


ಮುಸಾಫಿರ್ ಚಿತ್ರಕ್ಕಾಗಿ ದಿಲೀಪ್ ಕುಮಾರ್ ಲತಾ ಅವರೊಂದಿಗೆ ಹಾಡಿದ ಹಾಡು.


ಛಬೀಲಿ ಚಿತ್ರದಲ್ಲಿ ನೂತನ್ ಹಾಡಿದ್ದು ಹೀಗೆ.


ಆರಂಭದ ದಿನಗಳಲ್ಲಿ ಸ್ವತಃ ಹಾಡುತ್ತಿದ್ದ ಅಶೋಕ್ ಕುಮಾರ್ ಕೂಡ ಮತ್ತೆ ಆಶೀರ್ವಾದ್ ಚಿತ್ರದಲ್ಲಿ ರೇಲ್ ಗಾಡಿ ಮತ್ತು ನಾನಿ ಕೀ ನಾಂವ್ ಹಾಡುಗಳನ್ನು ಹಾಡಿದ್ದು ಅನೇಕರಿಗೆ ನೆನಪಿರಬಹುದು. ಅಮಿತಾಭ್ ಬಚ್ಚನ್ ಹಾಡಿದ ಅನೇಕ ಹಾಡುಗಳು ಜನಪ್ರಿಯವಾಗಿವೆ.  ಮೆಹಮೂದ್, ಶತ್ರುಘನ್ ಸಿನ್ಹಾ, ಡೇನಿ ಡೆಗ್ಝೋಂಪಾ ಮುಂತಾದವರೂ ಹಾಡಲು ಪ್ರಯತ್ನಿಸಿದ್ದುಂಟು.
 
ಆದರೆ ಸುಮಾರು 45 ವರ್ಷಗಳಷ್ಟು ಕಾಲ ಬೂದಿ ಮುಚ್ಚಿದ ಕೆಂಡದಂತೆ ಸುಪ್ತವಾಗಿದ್ದ ಗಾಯನ ಪ್ರತಿಭೆ  ಒಮ್ಮೆಲೇ ಜಾಜ್ವಲ್ಯಮಾನವಾಗಿ  ಬೆಳಗತೊಡಗಿ ಆ ಕ್ಷೇತ್ರದಲ್ಲಿ ಜನಪ್ರಿಯತೆಯ ತುತ್ತತುದಿಗೇರಿದವರು ನಮ್ಮ ರಾಜ್‌ಕುಮಾರ್ ಮಾತ್ರ.

ಮುಗಿಸುವ ಮುನ್ನ ರಾಜ್‌ಕುಮಾರ್ ಅವರು ಮರಳಿ ಹಾಡತೊಡಗಿದ ಸಮಯದ ನನ್ನ ಅನುಭವವೊಂದನ್ನು ಇಲ್ಲಿ ದಾಖಲಿಸಲೇ ಬೇಕು. ಆಗ ನಮ್ಮ ಮಿತ್ರಬಳಗದಲ್ಲಿ ಸ್ವತಃ ಉತ್ತಮ ಗಾಯಕರಾಗಿದ್ದು ಆರ್ಕೆಷ್ಟ್ರಾಗಳಲ್ಲಿ ಭಾಗವಹಿಸುತ್ತಿದ್ದ ಡಾ|ವಿಜಯ ಕುಮಾರ್ ಎಂಬುವವರಿದ್ದರು. ಯಾವುದೇ ಹೊಸ ಹಾಡು ಬಂದರೂ ಅದರ ಬಗ್ಗೆ ನಮ್ಮ ವಿಮರ್ಶೆ, ವಿಚಾರ ವಿನಿಮಯಗಳು ನಡೆಯುತ್ತಿದ್ದವು. ಒಮ್ಮೆ ನಾನು "ಶ್ರೀನಿವಾಸ ಕಲ್ಯಾಣ ಚಿತ್ರದಲ್ಲಿ ರಾಜ್‌‌ಕುಮಾರ್ ಮತ್ತು ಎಸ್. ಜಾನಕಿ ಅವರು ನಾನೇ ಭಾಗ್ಯವತಿ ಎಂಬ ಹಾಡನ್ನು ಎಷ್ಟು ಚೆನ್ನಾಗಿ ಹಾಡಿದ್ದಾರೆ" ಅಂದೆ. ಆಗ ಅವರು "ರಾಜ್‌ಕುಮಾರ್ ಹಾಡಿದ್ದೇ? ಸಾಧ್ಯವೇ ಇಲ್ಲ. ಅವರು ಎಮ್ಮೆ ಹಾಡು, ಮುತ್ತಿನಂಥ ಮಾತೊಂದು ಗೊತ್ತೇನಮ್ಮದಂಥ ಲಘು ಶೈಲಿಯ ಗೀತೆಗಳನ್ನು ಹಾಡಬಲ್ಲರೇ ಹೊರತು ಈ ರೀತಿ ವೃತ್ತಿಪರರಂತೆ ಶಾಸ್ತ್ರೀಯ ರಾಗಾಧಾರಿತ ಹಾಡನ್ನು ಹಾಡಲಾರರು. ಅದನ್ನು ಹಾಡಿದ್ದು ಎಸ್.ಪಿ.ಬಾಲಸುಬ್ರಹ್ಮಣ್ಯಂ. ಬೇಕಿದ್ದರೆ ನಾನು ಬೆಟ್ ಕಟ್ಟಲು ರೆಡಿ" ಅಂದರು. ನಾನೂ ಈ ಸವಾಲಿಗೆ ಒಪ್ಪಿದೆ. ಆಗಿನ್ನೂ ಕ್ಯಾಸೆಟ್, CDಗಳ ಯುಗ ಆರಂಭವಾಗಿರಲಿಲ್ಲ. ಏನಿದ್ದರೂ ರೇಡಿಯೊ ಅಥವಾ ಗ್ರಾಮೊಫೋನ್ ರೆಕಾರ್ಡುಗಳು ಮಾತ್ರ. ರೇಡಿಯೊದಲ್ಲಿ ಆ ಹಾಡು ಯಾವಾಗ ಬರುತ್ತದೆ ಎಂದು ಕಾಯುವುದಕ್ಕಿಂತ ಗ್ರಾಮೊಫೋನ್ ರೆಕಾರ್ಡಿನಲ್ಲಿ ನೋಡಿ ಸಂಶಯ ಪರಿಹರಿಸಿಕೊಳ್ಳುವುದೇ ಸರಿಯಾದ ಮಾರ್ಗ ಎಂದು ಕೂಡಲೇ ಪರಿಚಯದ ಅಂಗಡಿಗೆ ಹೋಗಿ ಆ ಹಾಡಿನ ರೆಕಾರ್ಡ್ ತೋರಿಸುವಂತೆ ಕೇಳಿಕೊಂಡೆವು. ರೆಕಾರ್ಡು ಕೊಳ್ಳುವ ಗಿರಾಕಿಯೊಬ್ಬರು ಸಿಕ್ಕಿದರು ಎಂಬ ಖುಶಿಯಲ್ಲಿ ಅವರು ರೆಕಾರ್ಡ್ ಪ್ಲೇಯರಲ್ಲಿ ಆ ಹಾಡು ನುಡಿಸಿಯೂ ತೋರಿಸಿದರು. ಧ್ವನಿ ಕೇಳಿಯೇ ಅದು ರಾಜ್‌ಕುಮಾರ್ ಎಂದು ಗೊತ್ತಾದರೂ ಲೇಬಲ್ ನೋಡಿದ ಮೇಲೆಯೇ ವಿಜಯಕುಮಾರ್ ಅವರು ಸೋತೆ ಎಂದು ಒಪ್ಪಿಕೊಂಡದ್ದು! ಅಂಗಡಿಯ ಒಡೆಯರು ಅದನ್ನು ಪ್ಯಾಕ್ ಮಾಡಿ ನಮಗೆ ಕೊಡಲು ಮುಂದಾದಾಗ "ನಾವು ಬಂದದ್ದು ಅದನ್ನು ಯಾರು ಹಾಡಿದ್ದೆಂದು ತಿಳಿದುಕೊಳ್ಳಲಷ್ಟೇ ಹೊರತು ರೆಕಾರ್ಡ್ ಕೊಳ್ಳಲು ಅಲ್ಲ." ಎಂದು ಹೇಳಿ ಅವರ ಮರುಉತ್ತರ ಕೇಳಿಸಿಕೊಳ್ಳುವ ಧೈರ್ಯ ಸಾಲದೆ ಕೂಡಲೇ ಜಾಗ ಖಾಲಿ ಮಾಡಿದೆವು! ಪಂದ್ಯ ಸೋತ ಮಿತ್ರರು ನನಗೇನು ಕೊಟ್ಟರು ಎಂಬುದು ಇಲ್ಲಿ ಅಪ್ರಸ್ತುತ.
 
8-5-2019

3 comments:

  1. ವಿಸ್ತೃತ ಲೇಖನ ಚಿದಂಬರ್ ಅವರೇ .. ನಾನೂ ಕೂಡ ರಾಜ್ಕುಮಾರ್ ಹಾಡಿದ ಮೊದಲ ಹಾಡು " ತುಂಬಿತು ಮನವ " ಎಂದೇ ತಿಳಿದಿದ್ದೆ . ಆದರೆ ಬೇಡರ ಕಣ್ಣಪ್ಪ ಎಂದು ತಿಳಿದು ಆಶ್ಚರ್ಯವಾಯಿತು . ಬಹುಶ: ರಂಗಭೂಮಿಯಿಂದ ಬಂದ ಅನೇಕ ಕಲಾವಿದರು , ಅಂದಿನ ದಿನಗಳಲ್ಲಿ , ಒಬ್ಬರು ಮತ್ತೊಬ್ಬರಿಗೆ ಧ್ವನಿಯಾಗಿತ್ಯಿದ್ದರು ಎನಿಸುತ್ತದೆ . ನಿಮ್ಮ observation ಮತ್ತು ಮಾಹಿತಿಗೆ ನಮೋ ನಮಃ 🙏🙏

    ReplyDelete
  2. ನನ್ನ ಹೆಸರು ಹೇಳಲು ಮರೆತೆ , ಸರಸ್ವತಿ ವಟ್ಟಂ 🙏🙏🙏

    ReplyDelete
    Replies
    1. ಬರಹ ಓದಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.

      Delete

Your valuable comments/suggestions are welcome