ಅನೇಕರು ಲಿಖಿತ ಬರಹಗಳನ್ನು ಧ್ವನಿ ರೂಪಕ್ಕೆ ಪರಿವರ್ತಿಸಿ podcast ಮಾಡುವುದಿದೆ. ಆದರೆ ಇಲ್ಲಿ ಆ ಪ್ರಕ್ರಿಯೆ ತಿರುವು ಮುರುವಾಗಿ ವಾಣಿ ರೂಪದಲ್ಲಿರುವ ಆಕಾಶವಾಣಿ ಸಂದರ್ಶನ ಪಾಣಿ ಮೂಲಕ ಕೀಲಿಮಣೆ ತಲುಪಿ ಅಕ್ಷರ ರೂಪ ಪಡೆದು ನಿಮ್ಮ ಮುಂದೆ ಬಂದಿದೆ. ಈಗಾಗಲೇ ಆ ಧ್ವನಿಮುದ್ರಣವನ್ನು ಅನೇಕರು ಆಲಿಸಿದ್ದೀರಿ. ಅದನ್ನೇ ಲಿಖಿತ ರೂಪದಲ್ಲಿ ಓದುವುದು ಬೇರೆಯೇ ಅನುಭವ ನೀಡಬಹುದು. ಹಾಗಾಗಿ ಈ ಪ್ರಯೋಗ. ಬೇಕೆನಿಸಿದ ಭಾಗವನ್ನಷ್ಟೇ ಆರಿಸಿ ಓದುವ ಅನುಕೂಲವೂ ಇದರಲ್ಲಿದೆ. ಈ ಪರಿವರ್ತಿತ ಬರಹದಲ್ಲಿ ಇರುವುದು typical ದಕ್ಷಿಣ ‘ಕನ್ನಡ’ ಆಡು ಭಾಷೆ.
ಸರಿಯಾಗಿ 12 ವರ್ಷ ಹಿಂದೆ ಇದೇ ದಿನ ಅಂದರೆ 13-8-2005 ಶನಿವಾರದಂದು ನಾನು ಭಾಗವಹಿಸಿದ್ದ ಸುಮಾರು ಒಂದೂವರೆ ತಾಸಿನಷ್ಟು ದೀರ್ಘ ಅವಧಿಯ ಚಿಟ್ ಚಾಟ್ ಅತಿಥಿ ಕಾರ್ಯಕ್ರಮ ಆಕಾಶವಾಣಿ ಮಂಗಳೂರಿನಿಂದ ಪ್ರಸಾರವಾಗಿತ್ತು. ಆಗ ಆಕಾಶವಾಣಿಯ ತಾಂತ್ರಿಕ ಸಿಬ್ಬಂದಿಯ ಮುಷ್ಕರ ನಡೆಯುತ್ತಿದ್ದರೂ ಕಾರ್ಯಕ್ರಮದ ರೂವಾರಿ ನಾರಾಯಣಿ ದಾಮೋದರ್ ಎಲ್ಲವನ್ನೂ ಬಲು ಚೆನ್ನಾಗಿಯೇ ನಿಭಾಯಿಸಿದ್ದರು. ಏಕತಾನತೆ ಕಾಡದಂತೆ ಸಂಭಾಷಣೆಯಲ್ಲಿ ಮುದ್ದು ಮೂಡುಬೆಳ್ಳೆಯವರನ್ನೂ ಸೇರಿಸಿಕೊಳ್ಳಲಾಗಿತ್ತು. ಸಾಕಷ್ಟು ಪೂರ್ವ ತಯಾರಿ, ವಿಭಿನ್ನ ಶೈಲಿಯ ಪ್ರಸ್ತುತಿ ಮತ್ತು ಜೊತೆ ಜೊತೆಗೆ ಬಹುತೇಕ ಅದುವರೆಗೆ ಕೇಳದ ಕರ್ಣಾನಂದಕರ ಹಾಡುಗಳು ಹಾಗೂ ಅವುಗಳ ವಿಶ್ಲೇಷಣೆ ಕಾರ್ಯಕ್ರಮಕ್ಕೆ ವಿಶೇಷ ಮೆರುಗು ನೀಡಿದ್ದವು. ಅತ್ಯುತ್ತಮ ಚಿಟ್ ಚಾಟ್ ಕಾರ್ಯಕ್ರಮಗಳಲ್ಲಿ ಒಂದು ಎಂಬ ಹೆಗ್ಗಳಿಕೆಗೂ ಪಾತ್ರವಾಗಿತ್ತು. ಕಾರ್ಯಕ್ರಮದ ಓಘಕ್ಕೆ ತಡೆಯೊಡ್ಡಬಹುದೆಂಬ ಕಾರಣಕ್ಕೆ ನೇರ ಫೋನ್ ಕರೆಗಳಿಗೆ ಅವಕಾಶ ಬೇಡ ಎಂದು ತೀರ್ಮಾನಿಸಲಾಗಿದ್ದರೂ ಪ್ರಸಾರ ನಡೆಯುತ್ತಿರುವಾಗ ಸ್ಟುಡಿಯೋಗೆ ಕರೆಗಳ ಮಹಾಪೂರವೇ ಹರಿದು ಬಂದಿತ್ತಂತೆ. ಕಾರ್ಯಕ್ರಮ ಮುಗಿಸಿ ಮನೆಗೆ ಬಂದಮೇಲೂ ಗುರುತು ಪರಿಚಯ ಇಲ್ಲದ ಬಹಳ ಮಂದಿ ಅದು ಹೇಗೋ ನನ್ನ ಫೋನ್ ನಂಬರ್ ಸಂಪಾದಿಸಿ ಕರೆಗಳನ್ನು ಮಾಡುತ್ತಲೇ ಇದ್ದರು. ಅನೇಕರು ಆಕಾಶವಾಣಿಗೆ ಮೆಚ್ಚುಗೆಯ ಪತ್ರಗಳನ್ನೂ ಬರೆದಿದ್ದರು. ಈಗ ಇಷ್ಟು ವರ್ಷಗಳ ನಂತರವೂ ಮದುವೆ, ಮುಂಜಿ, ಇತರ ಸಮಾರಂಭಗಳಲ್ಲಿ ಸಿಗುವ ಪರಿಚಯಸ್ಥರು ಕೆಲವೊಮ್ಮೆ ಈ ಕಾರ್ಯಕ್ರಮದ ಉಲ್ಲೇಖ ಮಾಡಿ ಮೆಚ್ಚುಗೆ ವ್ಯಕ್ತ ಪಡಿಸುವುದಿದೆ.
ಅಲ್ಲಿ ಸ್ಟುಡಿಯೊದಿಂದ ಕಾರ್ಯಕ್ರಮ ಪ್ರಸಾರವಾಗುತ್ತಿದ್ದಂತೆ ಮನೆಯ ಕಂಪ್ಯೂಟರಿನಲ್ಲಿ ಸ್ವಯಂಚಾಲಿತವಾಗಿ ರೆಕಾರ್ಡ್ ಆಗುವಂತೆ ಸೆಟ್ ಮಾಡಿಟ್ಟು ಹೋಗಿದ್ದೆ. ನಾರಾಯಣೀ ದಾಮೋದರ್ ಅವರೂ ಒಂದು ಪ್ರತಿ ಕೊಡುವ ವ್ಯವಸ್ಥೆ ಮಾಡಿದ್ದರು. ಹೀಗಾಗಿ ಆ ನೆನಪನ್ನು ಶಾಶ್ವತವಾಗಿ ಉಳಿಸಿಕೊಳ್ಳಲು ಸಾಧ್ಯವಾಯಿತು.

* * * * *
ಶ್ರಾವ್ಯ ರೂಪ ಇಷ್ಟ ಪಡುವವರಿಗೆ 4 ಭಾಗಗಳಲ್ಲಿ ಇಲ್ಲಿದೆ.

ಅಕ್ಷರ ರೂಪ ಮಾತ್ರ ಸಾಕೆನ್ನಿಸಿದರೆ ಓದುತ್ತಾ ಮಧ್ಯದ ಹಾಡುಗಳನ್ನಾಲಿಸಿ ಮುಂದುವರಿಯಬಹುದು.
* * * * *
ಚಿಟ್ ಚಾಟ್ ಅತಿಥಿ ಕಾರ್ಯಕ್ರಮವನ್ನ ಆರಂಭಿಸುತ್ತಿದ್ದೇವೆ. ಇವತ್ತಿನ ನಮ್ಮ ಅತಿಥಿ, ಕಲಾವಿದ, ಕಲಾಭಿಮಾನಿ, ನಿರಂತರ ರೇಡಿಯೋ ಕೇಳುಗ ಚಿದಂಬರ ಕಾಕತ್ಕರ್. ಒಬ್ಬ ಶ್ರೀ ಸಾಮಾನ್ಯ ಮಹಾನುಭಾವ. ಮಂಗಳೂರು ಆಕಾಶವಾಣಿಯ ಪ್ರಥಮ ಯುವವಾಣಿಯಲ್ಲಿ ಯುವ ಕಲಾವಿದರಾಗಿ ಕೊಳಲು ವಾದನ ಕಾರ್ಯಕ್ರಮ ನೀಡಿದವರು ಇವರು. ಇದು 1976ರಲ್ಲಿ. ಈಗ ಮಂಗಳೂರಿನಲ್ಲಿ BSNL ಉದ್ಯೋಗಿ. ಡಿವಿಷನಲ್ ಇಂಜಿನಿಯರ್. ಹೆಂಡತಿ, ಇಬ್ಬರು ಮಕ್ಕಳ ಕುಟುಂಬ ಇವರದು. ಇವೆಲ್ಲವೂ ಸಾಮಾನ್ಯ ಪರಿಚಯವಾಯಿತು. ಇಷ್ಟು ಸಾಲದು. ಚಿದಂಬರ ಕಾಕತ್ಕರ್ ಅವರಲ್ಲಿ ಒಂದು ವಿಶೇಷ ಇದೆ. ಅದೇನು ಅಂದ್ರೆ ಅವರು ಭಾಷಾ ತಾರತಮ್ಯ ಇಲ್ಲದೆ ಎಲ್ಲ ಬಗೆಯ ಮಧುರ ಚಿತ್ರಗೀತೆಗಳ ಉಪಾಸಕ. ಕೇಳಿ ಖುಶಿ ಪಡುವವರು ಎಷ್ಟೋ ಜನ ಇರಬಹುದು. ಆದರೆ ಇವರು ಸ್ವಲ್ಪ ಭಿನ್ನ. ತಮಗೆ ಇಷ್ಟವಾದ ಗೀತೆಗಳ ಬೃಹತ್ ಸಂಗ್ರಹ ಇವರಲ್ಲಿದೆ. ಮನೆಯಲ್ಲೇ ಧ್ವನಿಮುದ್ರಿಸಿಕೊಳ್ಳುವ ವ್ಯವಸ್ಥೆಯನ್ನು ಕೂಡ ಮಾಡಿಕೊಂಡಿದ್ದಾರೆ. ವಿರಳವಾದ ಅಪೂರ್ವ ಗೀತೆಗಳ ಸಾಹಿತ್ಯವನ್ನು ಕೂಡ ಸಂಗ್ರಹಿಸಿದ್ದಾರೆ. ಪ್ರಸಾರ ಭಾರತಿಯ ಹೊಸ ಡಿ.ಟಿ.ಎಚ್ ವ್ಯವಸ್ಥೆಯ ಪೂರ್ಣ ಪ್ರಯೋಜನ ಪಡೆಯುತ್ತಿದ್ದಾರೆ. ಮಂಗಳೂರು ಆಕಾಶವಾಣಿ ಸಂಗ್ರಹದಲ್ಲಿ ಇರದ ಒಂದಿಷ್ಟು ಗೀತೆಗಳನ್ನ ಮಂಗಳೂರು ಆಕಾಶವಾಣಿ ಶ್ರೋತೃಗಳಿಗೆ ಕೇಳಿಸಬೇಕೆಂದೇ ಸಿ.ಡಿ.ಯಲ್ಲಿ ಧ್ವನಿಮುದ್ರಿಸಿಕೊಂಡು ಈಗ ಇಲ್ಲಿಗೆ ಬಂದಿದ್ದಾರೆ. ಇವರು ಚಿದಂಬರ ಕಾಕತ್ಕರ್.
ನಮಸ್ಕಾರ ಕಾಕತ್ಕರ್ ಅವರೇ.
ನಮಸ್ಕಾರ ನಾರಾಯಣಿ ದಾಮೋದರ್ ಅವರಿಗೆ. ಹಾಗೆಯೇ ಮುದ್ದು ಮೂಡುಬೆಳ್ಳೆ ಅವರಿಗೂ ನಮಸ್ಕಾರ.
ಕಾಕತ್ಕರ್ ಅವರ ಒಲವು, ಅಭಿರುಚಿ ಮತ್ತು ಪಕ್ವತೆಗಳನ್ನ ಅವರೇ ಆಯ್ದುಕೊಂಡು, ಸಿ.ಡಿ. ಮಾಡಿ ನಮಗೆಲ್ಲರಿಗೂ ಕೇಳಿಸಲೆಂದೇ ತಂದ ಗೀತೆಗಳನ್ನ ಆಸ್ವಾದಿಸುತ್ತಾ ಕೇಳೋಣ ಅಲ್ಲ.
ನಾರಾಯಣಿ ಅವರೇ, ಈಗ ಈ ಕನ್ಯಾರತ್ನ ಚಿತ್ರದ ಹಾಡು ನಾವು ಕೇಳಿದ್ವಲ್ಲ, ನಾನು ಒಂದು ಕ್ಷಣ 40 ವರ್ಷ ಹಿಂದಕ್ಕೆ ಹೋಗಿ ಬಿಟ್ಟಿದ್ದೆ .
ನಾವೂ 40 ವರ್ಷ ಹಿಂದಕ್ಕೆ ಹೋದ ಹಾಗೆ ಅನ್ನಿಸ್ತಾ ಇತ್ತು.
ಏನಾಯ್ತು ಅಂದ್ರೆ ಒಂದು ಕ್ಷಣ ನಾನು ಈ ಆಕಾಶವಾಣಿ ಮಂಗಳೂರು ಸ್ಟುಡಿಯೋದಲ್ಲಿ ಇದ್ದೇನೆ ಅಂತಲೇ ಮರ್ತು ಹೋಗಿತ್ತು ನನಗೆ. ನಮ್ಮ ಹಳೆ ನ್ಯಾಶನಲ್ ಎಕ್ಕೊ ರೇಡಿಯೋದ ಮುಂದೆ ಕೂತು ಈ ಹಾಡು ಕೇಳ್ತಾ ಇದ್ದೀನೇನೋ ಅಂತ ನನಗೆ ಕಾಣ್ತಾ ಇತ್ತು. ಕನ್ಯಾರತ್ನ ಚಿತ್ರದಲ್ಲಿ ಪಿ.ಬಿ.ಶ್ರೀನಿವಾಸ್, ಜಿ.ಕೆ.ವೆಂಕಟೇಶ್ ಮತ್ತು ಕು.ರ.ಸೀ. ಕಾಂಬಿನೇಶನ್ನಿನಲ್ಲಿ ಮೂಡಿಬಂದ ಅದ್ಭುತ ಹಾಡು ಇದು. ಕನ್ನಡದಲ್ಲಿ ಇಷ್ಟರವರೆಗೆ ಬಂದಂಥ ರೊಮ್ಯಾಂಟಿಕ್ ಗೀತೆಗಳ ಪೈಕಿ ಇದಕ್ಕೆ ಸರಿಸಾಟಿಯಾದ ಇನ್ನೊಂದು ಪದ್ಯ ಬಂದಿದೆ ಅಂತ ನಂಗೇನೂ ಅನ್ನಿಸೋದಿಲ್ಲ. ಈಗ ಹಿಂದಿಯಲ್ಲಾದ್ರೆ ಕ್ರಿಯೇಟಿವಿಟಿ ಬಗ್ಗೆ ಮಾತಾಡುವಾಗ ಶಂಕರ್ ಜೈಕಿಶನ್ ಹೆಸ್ರು ತಗೊಳ್ತೇವೆ. ಕನ್ನಡಕ್ಕೆ ಜಿ.ಕೆ.ವೆಂಕಟೇಶ್ ಅವರು ಶಂಕರ್ ಜೈಕಿಶನ್. ಅದರ ಆರ್ಕೆಸ್ಟ್ರೇಶನ್ ನೋಡಿ ನೀವು ಬೇಕಿದ್ರೆ. ಆ bells, ಆ guitar, ಆ break ಅಂದ್ರೆ ರಿದಂನ break ಅಂತ ಹೇಳ್ತಾರೆ, ಪುನಃ take off - ಅದೊಂದು ಅದ್ಭುತ ಉದಾಹರಣೆ. ಬೇರೆ ಯಾವುದಾದರೂ ಹಾಡಿಗೆ ಇದನ್ನು ಒಂದು ಉದಾಹರಣೆಯಾಗಿ ತಗೋಬಹುದು. ಅದ್ಭುತ ಹಾಡು. ಇನ್ನೊಂದು ವಿಷಯ ನಾವು ಗಮನಿಸಬಹುದು ಇದರಲ್ಲಿ. ನೀವೂ ಕೇಳಿರಬಹುದು. ಆ ಸಾಹಿತ್ಯದ ಸೊಗಸು. ಸಾಮಾನ್ಯವಾಗಿ ಒಂದು ಹಾಡಿನಲ್ಲಿ ಸಾಲಿನ ಕೊನೆಗೆ ಪ್ರಾಸ ಇರ್ತದೆ. ಇಲ್ಲಿ ಕು.ರ.ಸೀ.ಯವರದ್ದು ಪ್ರತಿ ಶಬ್ದ ಶಬ್ದಕ್ಕೂ ಪ್ರಾಸ. ಉದಾಹರಣೆಗೆ ಬಾ ಚಿನ್ನ ರನ್ನ ವರಿಸೆನ್ನ . ಆ ಮೇಲೆ ಇನ್ನೊಂದು ಅದ್ಭುತ ಪದಪುಂಜ ಉಪಯೋಗಿಸಿದ್ದಾರೆ ಅವರಿಲ್ಲಿ. ಹಿಂದಿ ಹಾಡುಗಳಲ್ಲೆಲ್ಲ ಒಂದು ಉರ್ದು word ಸಾಮಾನ್ಯವಾಗಿ ಬರ್ತದೆ. ಪೈಮಾನಾ ಅಂತ. ಪೈಮಾನಾ ಅಂದ್ರೆ ಮಧುಪಾನ ಮಾಡುವಂಥ ಒಂದು ಪಾತ್ರೆ. ಇಲ್ಲಿ ಕು.ರ.ಸೀ.ಯವರು ಪೈಮಾನಾ ಅನ್ನುವ ಒಂದು ಸಣ್ಣ ಶಬ್ದಕ್ಕೆ ಮಧುಪಾನಪಾತ್ರೆ ನಿನ್ನೊಡಲು ಅಂತ ನಾಯಕಿಯನ್ನೇ ಮಧುಪಾನಪಾತ್ರೆ ಅಂತ ಎಷ್ಟು ಚೆನ್ನಾಗಿ ವಿವರಿಸಿದ್ದಾರೆ ನೋಡಿ. ಅದು ಸೊಗಸು ಅಂದಿನ ಆ ಕಾಲದ ಹಾಡುಗಳಲ್ಲಿ.
ಚಿದಂಬರ ಅವರೆ, ನೀವು ಹಾಡನ್ನು ಇಷ್ಟು ಆಳಕ್ಕೆ ಹೋಗಿ ಅನುಭವಿಸ್ತೀರಿ ಅನ್ನೋದೇ ಒಂದು ವಿಶೇಷ. ನಿಮ್ಮ ಹಿನ್ನೆಲೆ, ಬಾಲ್ಯ ಇದರ ಬಗ್ಗೆ ಸ್ವಲ್ಪ ಹೇಳ್ತೀರಾ?
ಅದು ಹೇಳ್ಬೇಕಿದ್ರೆ ಆಗಲೇ ನಾನು ಹೇಳಿದ ಹಾಗೆ 45ವರ್ಷ ಹಿಂದಕ್ಕೆ ಹೋಗ್ಬೇಕಾಗ್ತದೆ. ಸುಮಾರು ವರ್ಷ ಹಿಂದೆ ಉದಯವಾಣಿ ಪತ್ರಿಕೆಯಲ್ಲಿ ಕುಗ್ರಾಮ ಗುರುತಿಸಿ ಅಂತೊಂದು ಸ್ಪರ್ಧೆ ಮಾಡಿದ್ರು. ನಿಮ್ಗೆಲ್ಲ ನೆನ್ಪಿರಬಹುದು. ಅದರಲ್ಲಿ ದಿಡುಪೆಗೆ ಆ ಸ್ಥಾನ ಸಿಕ್ಕಿತು. ನನ್ನ ಊರು ದಿಡುಪೆ ಅಲ್ಲ. ಅದರ ಪಕ್ಕದ ಮುಂಡಾಜೆ. ಆ ಊರಿನ ನಡುವಿನಲ್ಲಿ ಹರಿಯೋದು ಮೃತ್ಯುಂಜಯಾ ನದಿ. ಅದರ ಆಚೆ ಈಚೆ ಎರಡೂ ಬದಿಗಳಲ್ಲಿ ಉದ್ದಕ್ಕೆ ಅಡಿಕೆ ತೋಟಗಳ ಸಾಲು. ಪೂರ್ವ ದಿಕ್ಕಿನಲ್ಲಿ ಸಹ್ಯಾದ್ರಿ ಬೆಟ್ಟ ಅಂದರೆ ಪಶ್ಚಿಮ ಘಟ್ಟಗಳ ಸಾಲು.
ಸುಂದರವಾದ ಪ್ರಕೃತಿಯ ಮಡಿಲಲ್ಲಿ ನಿಮ್ಮ ಬಾಲ್ಯ ಕಳ್ದಿದ್ದೀರಿ.
ಹೌದು. ಅದನ್ನು ನಾವು ದಕ್ಷಿಣ ಕನ್ನಡದ ಕಾಶ್ಮೀರ ಅಂತ ಹೇಳಿದ್ರೆ ತಪ್ಪಾಗ್ಲಿಕ್ಕಿಲ್ಲ. ಸೌಂದರ್ಯ ಅಷ್ಟೆಲ್ಲ ಇದ್ರೂ ಕೂಡ ಸೌಲಭ್ಯಗಳ ಬಗ್ಗೆ ಯೋಚಿಸಿದ್ರೆ ದಿಡುಪೆಗಿಂತ ತುಂಬಾ ಮೇಲೇನೂ ಇರ್ಲಿಲ್ಲ ನಾವು.
ಅಂದ್ರೆ ಕಷ್ಟಗಳಿದ್ವು ಸ್ವಲ್ಪ.
ಕಷ್ಟ ಸ್ವಲ್ಪ ಅಲ್ಲ, ತುಂಬಾನೇ ಇತ್ತು. ಉದಾಹರಣೆಗೆ ನಾವು ಪೇಟೆಗೆ ಬರ್ಬೇಕಿದ್ರೆ ಬೇಸಿಗೆ ಕಾಲದಲ್ಲಾದ್ರೆ ಎರಡು ನದಿಗಳನ್ನು ದಾಟಿ ಅಂದ್ರೆ ಮೃಂತ್ಯುಂಜಯಾ ನದಿ ಮತ್ತು ನೇತ್ರಾವತಿ ನದಿ, ಎರಡನ್ನು ದಾಟಿಕೊಂಡು ಎರಡು ಕಿಲೊಮೀಟರ್ ನಡ್ದು ಬಸ್ ಹಿಡಿಬೇಕು. ಇದು ಬೇಸಿಗೆ ಕಾಲದ ಸಮಾಚಾರ. ಮಳೆಗಾಲದಲ್ಲಾದ್ರೆ ಆರು ಕಿಲೋಮೀಟರ್ ಕಮ್ಮಿಯಲ್ಲಿ. ಇಲ್ಲದಿದ್ರೆ ದೋಣಿಯವ್ನ ಆಸರೆಯಲ್ಲಿ ಎರಡು ನದಿ ದಾಟಿ ಬರ್ಬೇಕು. ಹೀಗೆ ನಮ್ಮ ಬಾಲ್ಯದ ಪರಿಸ್ಥಿತಿ.
ನಿಮ್ಮ ಕೌಟುಂಬಿಕ ಪರಿಸ್ಥಿತಿ ಹೇಗಿತ್ತು, ತಂದೆ, ತಾಯಿ, ಮನೆ.
ನಮ್ಮ ಕುಟುಂಬ ಒಂದು ಅವಿಭಕ್ತ ಕುಟುಂಬ ಮತ್ತು ಸಂಪ್ರದಾಯಸ್ಥ ಕುಟುಂಬ ಅಂತ ಹೇಳ್ಬಹುದು. ಆದ್ರೆ ಶಿಕ್ಷಣಕ್ಕೆ ನಮ್ಮಲ್ಲಿ ಯಾವತ್ತೂ ಪ್ರೋತ್ಸಾಹ ಇತ್ತು. ಅದಕ್ಕೆ ತಕ್ಕ ಹಾಗೆ ನಮ್ಮ ಊರಲ್ಲಿ ಎಲಿಮೆಂಟರಿ ಶಾಲೆ ಅಂತೂ ಅಲ್ಲೇ ಹತ್ರನೇ ಇತ್ತು. ಹೈಯರ್ ಎಲಿಮೆಂಟರಿಗೆ ಸ್ವಲ್ಪ ದೂರ ನಡೀಲಿಕ್ಕೆ. ಎಲಿಮೆಂಟ್ರಿಗೆ ಅರ್ಧ ಕಿಲೋಮೀಟರ್ ಆದ್ರೆ ಇದಕ್ಕೆ ಒಂದು ಎರಡು ಕಿಲೋಮೀಟರ್.
ಅಲ್ಲ ಕಾಕತ್ಕರ್ ಅವರೇ, ಈ ಕಾಕತ್ಕರ್, ತೆಂಡುಲ್ಕರ್, ಅಗರ್ಕರ್, ಗೋಲ್ವಲ್ಕರ್ ಈ ಥರ ಮಹಾರಾಷ್ಟ್ರದ ಒಂದು ಕಲ್ಪನೆ ಬರ್ತದಲ್ಲ.
ನಿಮ್ಮ ಊಹೆ ಸರಿ. ಅಂದ್ರೆ ನಮ್ಮ ಪೂರ್ವಜರು, ಸುಮಾರು 300 ವರ್ಷ ಹಿಂದೆ ಇರಬಹುದು, ಅವರೆಲ್ಲ ರತ್ನಾಗಿರಿಯಿಂದ ಬಂದವರಂತೆ.
ನೀವು ನೋಡಿದ್ದೀರಾ ಆ ಗಿರಿಯನ್ನ.
ರತ್ನಾಗಿರಿಯನ್ನು ನಾನು ನೋಡಿದ್ದು ಹೇಗಂದ್ರೆ ಮುಂಬಯಿಗೆ ಕೊಂಕಣ ರೈಲ್ವೆಯಲ್ಲಿ ಹೋಗುವಾಗ ರೈಲ್ವೇ ಪಟ್ಟಿ ಅಕ್ಕ ಪಕ್ಕ ಎಷ್ಟು ಸಿಗ್ತದೆ ಅಷ್ಟು ರತ್ನಾಗಿರಿ ನೋಡಿದ್ದೇನೆ. ಅಲ್ಲಿಗೇ ಅಂತ ಹೋಗುವ ಒಂದು ಸಂದರ್ಭ ಸಿಗ್ಲಿಲ್ಲ ನಂಗೆ.
ಈಗ ನೀವು ಮಂಗಳೂರಲ್ಲೇ ಕೆಲ್ಸ ಮಾಡ್ತಾ ಇದ್ದೀರಾ.
ಆಗ ನಾನು ಹೇಳ್ತಾ ಇದ್ನಲ್ಲ, ನನ್ನ ಶಿಕ್ಷಣ ಎಲ್ಲ ಅಲ್ಲಿ ನಡೀತು. ಮತ್ತೆ ಹತ್ರದಲ್ಲೇ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು ಕೂಡ ಇತ್ತು, ಉಜಿರೆಯಲ್ಲಿ. ಹಾಗೆ ಅಲ್ಲಿ B.Sc ಡಿಗ್ರಿ ಮುಗ್ಸಿದೆ. ಆ ಮೇಲೆ ಪೇಪರಲ್ಲಿ ಬಂದ ಯಾವುದೋ ಒಂದು ವಾಂಟೆಡ್ ಕಾಲಮ್, ಅದಕ್ಕೊಂದು ಅರ್ಜಿ ಗುಜರಾಯಿಸಿದೆ. ಅದು ಮತ್ತೆ ನೋಡುವಾಗ P&T Department . ಅಲ್ಲಿ ಕ್ಲರ್ಕ್ ಆಗಿ ಸೇರಿದೆ. ಕ್ಲರ್ಕ್ ಆಗಿ ಸೇರಿದ್ಮೇಲೆ ಅಲ್ಲೇ ವಿವಿಧ exam ಇತ್ಯಾದಿ ಬರ್ದು ಮುಂದೆ ಜೂನಿಯರ್ ಎಂಜಿನಿಯರ್ ಆದೆ, ಆ ಮೇಲೆ ಅಸ್ಸಿಸ್ಟಂಟ್ ಎಂಜಿನಿಯರ್ ಆದೆ. ಈಗ ಡಿವಿಷನಲ್ ಎಂಜಿನಿಯರ್ ಆಗುವ ಹಂತಕ್ಕೆ ತಲ್ಪಿದ್ದೇನೆ. ಆಗ ಅದು ನಾನು ಸೇರುವಾಗ P&T ಆಗಿತ್ತು. ಆ ಮೇಲೆ -DOT ಆಯ್ತು. ಈಗ BSNL ಆಗಿದೆ. ಆದ್ರೆ ನನ್ನ ಕರ್ಮಭೂಮಿ ಮಾತ್ರ ಈಗ್ಲೂ ಅದೇ.
ಈ ಹಾಡು ಕೇಳಿದ್ರಲ್ಲ. ಇದು ಕೂಡ ಜಿ.ಕೆ.ವೆಂಕಟೇಶ್ ಅವರದ್ದೇ creation. ಕು.ರ.ಸೀ. ಅವರದ್ದೇ ಸಾಹಿತ್ಯ. ಇದ್ರಲ್ಲಿ ನಾವು ಇನ್ನೊಂದು ವಿಶೇಷ ಗಮನಿಸ್ಬಹುದು ಏನಂದ್ರೆ ಒಂದು ಪುಟ್ಟ ಹುಡುಗಿಯ ಸ್ವರ ನೀವು ಕೇಳಿದ್ರಲ್ಲ ಅದ್ರಲ್ಲಿ, ಅದು ಬೆಂಗಳೂರು ಲತಾ ಅವರ ಸ್ವರ. ಮುಂದೆ ದೊಡ್ಡ ಗಾಯಕಿ ಆದ್ರು ಅವರು. ಈ ಹಾಡಿನ ಇನ್ನೊಂದು ವಿಶೇಷ ಏನಂದ್ರೆ ಈಗ ನಾವು ತುಂಬಾ ಘೋಷಣೆ ಎಲ್ಲ ಕೇಳ್ತಾ ಇರ್ತೇವೆ, ಹೆಣ್ಣು ಮಗು ಉಳ್ಸಿ, ಮಹಿಳೆಯರಿಗೆ ಪ್ರಾಧಾನ್ಯ ಕೊಡಿ ಅಂತೆಲ್ಲ. ಅದಕ್ಕೆ ಘೋಷಣೆ ಗೀಷಣೆ ಏನೂ ಮಾಡದೆ ಒಂದು ಹಾಡಲ್ಲೇ ಎಷ್ಟು ಸುಂದರವಾಗಿ ಅದನ್ನು ನಿರೂಪಿಸಿದ್ರು ನೋಡಿ.
ನಿಮ್ಮ ಪ್ರಯೋಗಶೀಲತೆ ಹೇಗೆ ಆರಂಭ ಆಯ್ತು.
ಹಿಂದಿನಿಂದ್ಲೇ ನಂಗೆ ಆ ಅಭ್ಯಾಸ ಉಂಟು. ಮನೆಯಲ್ಲಿ ಏನಾಗ್ತಿತ್ತು ಅಂದ್ರೆ ಅಡಿಗೆ ಎಲ್ಲ ರೆಡಿ ಆಗಿ ಊಟಕ್ಕೆ ಕರೆದ್ರೆ ಮನೆಯ ಗಂಡಸ್ರು ಒಂದು ಕರೆಗೆಲ್ಲ ಬರ್ಲಿಕ್ಕಿಲ್ಲ ಯಾವತ್ತೂ. ಅದು ಈಗ್ಲೂ ಹಾಗೇ, ಒಂದು ಹತ್ತು ಸಲ ಕರೀಬೇಕು ಕಮ್ಮಿಯಲ್ಲಿ.
ಎಷ್ಟು ವರ್ಷ ಆದ್ರೂ ಹಾಗೇ ಇರ್ತದೆ ಅದು.
ನಾರಾಯಣಿ ಅವ್ರಿಗೆ ಅದ್ರ ಬಗ್ಗೆ ಒಳ್ಳೆ ಅನುಭವ ಇರ್ಬೇಕು.
ಬನ್ನಿ ಬನ್ನಿ ಅಂತ ಕೊನೆಗೆ ತಲೆ ಚಚ್ಚಿಕೊಳ್ಳುವ ಪರಿಸ್ಥಿತಿ ಬರ್ತದೆ.
ನಮ್ಮಲ್ಲೂ ಹಾಗೇ ಬರ್ತಿತ್ತು. ಹೇಳಿ ಕೇಳಿ ಅದು ಹಳ್ಳಿ ಮನೆ ಬೇರೆ. ಅಡುಗೆ ಮನೆ ಒಂದು ಕಡೆ ಇರ್ತದೆ. ಹಜಾರಕ್ಕೆ ಬರ್ಬೇಕಾದ್ರೆ ನಾಲ್ಕು ರೂಮು ದಾಟಿ ಬರ್ಬೇಕು. ನಮ್ಮ ತಾಯಿಗೆ, ಅತ್ತಿಗೆಯಂದಿರಿಗೆಲ್ಲ ಮನೆಯ ಗಂಡಸ್ರನ್ನು ಕರೆಯೋದೊಂದು ತಲೆನೋವು. ಆಗ ನಮ್ಮ ತಾಯಿ ಹೇಳಿದ್ರು ‘ನೀನು ಏನೇನೆಲ್ಲ ಪ್ರಯೋಗ ಮಾಡ್ತಿಯಲ್ಲ, ನಂಗೇನಾದ್ರು ಮಾಡಿಕೊಡು ಮಾರಾಯಾ ಇದಕ್ಕೆ’ ಅಂತ. ಅದಕ್ಕೆ ನಾನೇನು ಮಾಡಿದೆ - ಆಗ ತಾನೇ ನಮ್ಮಲ್ಲಿ ವಿದ್ಯುತ್ ಬಂದಿತ್ತು. ಹಾಗಾಗಿ ನಾನೊಂದು ಹೊಸ ಕರೆಗಂಟೆ ತಯಾರ್ಸಿದೆ. ಅದರ ಸ್ವಿಚ್ ಇರೋದು ಅಡಿಗೆ ಮನೆಯಲ್ಲಿ. ಆದರೆ ಗಂಟೆ ಮೊಳಗೋದು ಹಜಾರದಲ್ಲಿ. ಬರೇ ಗಂಟೆ ಮೊಳಗೋದು ಮಾತ್ರ ಅಲ್ಲ. ಅದಕ್ಕೊಂದು TV ತರ ಸ್ಕ್ರೀನ್ ಮಾಡಿ ಸ್ವಿಚ್ ಅದುಮಿದ ತಕ್ಷಣ ಗಂಟೆ ಮೊಳಗುವಾಗ ಒಂದು ದೀಪ ಬೆಳಗಿ ಅದರ ಜೊತೆಗೆ ‘ಒಳಗೆ ಬನ್ನಿ’ ಅಂತ ದೊಡ್ಡ ಅಕ್ಷರದಲ್ಲಿ ಒಂದು ಕೆಂಪು ಬೋರ್ಡ್ ಬರೋದು. ಆಗ ಏನಾಗ್ತಿತ್ತು. ಕರೆಯುವ ಕೆಲ್ಸ ಇಲ್ಲ ಅವ್ರಿಗೆ. ಅಡಿಗೆ ಆಗಿ ತಟ್ಟೆ ಹಾಕಿತೋ, ಸ್ವಿಚ್ ಒತ್ತಿದ್ರೆ ಆಯ್ತು. ಎಲ್ರಿಗೆ ಆ ಗಂಟೆ ಕೇಳ್ತದೆ, ಬರ್ತಾರೆ.
ಕಂಠ ಶೋಷಣೆ ಇಲ್ಲ.
ಕಂಠ ಶೋಷಣೆ ಇಲ್ಲ. ಅದರ ಬದ್ಲಿಗೆ ಗಂಟೆ ಮೊಳಗುವಿಕೆ. ಈ ಒಂದು ಪ್ರಯೋಗ ಅಥವಾ ನನ್ನ experiment ಏನಿತ್ತು, ನಮ್ಮಲ್ಲಿಗೆ ಬಂದವ್ರಿಗೆಲ್ಲ ಒಂದು ದೊಡ್ಡ attraction ಅದು. ಬಂದವ್ರೆಲ್ಲ ನೋಡೋದು ಏನಿದು ಅಂತ.
ಅಂದ್ರೆ ಊಟ ಮಾಡೋದಕ್ಕಿಂತ ಈ ಗಂಟೆದ್ದೇ attraction ಜೋರು.
ಆದ್ರೆ ಕೆಲವು ಪ್ರಯೋಗಗಳಲ್ಲಿ casuality ಆದದ್ದೂ ಇದೆ. ಅದಕ್ಕೊಂದು ಸಣ್ಣ ಉದಾಹರಣೆ ಹೇಳ್ತೇನೆ. ಉದ್ದ ಹಿಡಿದ್ದೊಂದು ಪಾತ್ರೆ ತೆಕ್ಕೊಂಡು ಅದ್ರಲ್ಲಿ ಕೆಂಡ ಹಾಕಿ ಇಸ್ತ್ರಿ ಹಾಕೋದು. ಅದು ಬೇರೆ ಕೆಲವ್ರೂ ಮಾಡಿರ್ಬಹುದು. ಹಾಗೆ ನಾನೂ ಮಾಡಿದೆ ಒಮ್ಮೆ. ನನ್ನ cotton ಅಂಗಿಗಳಿಗೆಲ್ಲ ಇಸ್ತ್ರಿ ಹಾಕಿದೆ. ಚಂದ ಆಯ್ತು. ಹಾಗೆ ನಮ್ಮ ತಾಯಿಯ ಹತ್ರ ಹೋಗಿ ಹೇಳಿದೆ. ‘ನಾನೀಗ ಹೀಗೆ ಇಸ್ತ್ರಿ ಎಲ್ಲ ಹಾಕ್ತೇನೆ. ನಿಮ್ಮ ರವಿಕೆ ಏನಾದ್ರೂ ಇದ್ರೆ ಕೊಡಿ. ನಾನು ಇಸ್ತ್ರಿ ಹಾಕಿ ಕೊಡ್ತೇನೆ’ ಅಂತ. ಅವ್ರಿಗೆ ಖುಶಿ ಆಯ್ತು ಮಗ ಏನೋ ಮಾಡ್ತಾ ಇದ್ದಾನೆ ಅಂತ. ಅವ್ರದ್ದೊಂದು ಹೊಸಾ ರವಿಕೆ, ಸಿಲ್ಕಿದ್ದು. ನನ್ಗೆ ಕೊಟ್ರು ಇದಕ್ಕೆ ಇಸ್ತ್ರಿ ಹಾಕಿ ಕೊಡು ಅಂತ. ಖುಶಿಯಲ್ಲಿ ಬಂದೆ. ಇಸ್ತ್ರಿ ಹಾಕುವಾ ಅಂತ ಪಾತ್ರೆ ಅದ್ರ ಮೇಲೆ ಇಟ್ರೆ ತೆಗೀವಾಗ ಅಷ್ಟು ಜಾಗದ ರವಿಕೆಯೇ ಮಾಯ! ಆದ್ರೆ ಆಗ ಅವ್ರು ನಂಗೆ ಬಯ್ಲೂ ಇಲ್ಲ, ಹೊಡೀಲೂ ಇಲ್ಲ. ಯಾಕಂತ ನಂಗಿನ್ನೂ ಅರ್ಥ ಆಗ್ಲಿಲ್ಲ. ನಾನಾದ್ರೆ ಖಂಡಿತ ನಾಲ್ಕು ಬಾರಿಸ್ತಿದ್ದೆ ನನ್ನ ಬಟ್ಟೆ ಯಾರಾದ್ರೂ ಹಾಗೆ ಮಾಡ್ತಿದ್ರೆ. ಹೀಗೆ ನನ್ನ ಪ್ರಯೋಗಗಳು ಮುಂದುವರೀತಾನೇ ಇತ್ತು.
ಇದು ಉದ್ಯೋಗ ಕ್ಷೇತ್ರಕ್ಕೂ ವ್ಯಾಪಿಸ್ತಾ ಮತ್ತೆ.
ಅದು ನನ್ನ ನಿರಂತರ ಪ್ರಕ್ರಿಯೆ. ನಿಲ್ಲುವಂಥದ್ದಲ್ಲ. ಈ ಮೊದ್ಲು computerized exchange ಎಲ್ಲ ಇರ್ಲಿಲ್ಲ. ಆಗ strowger technology ಅಂತ, ಅದೆಲ್ಲ mechanical. ಆಗ್ಲೇ ನಾನು ನಂದೇ ಕೆಲವು circuits, ನಂದೇ ಕೆಲವು testers ಎಲ್ಲ ಮಾಡಿ ನಮ್ಮ ಕೆಲ್ಸ ಸುಲಭ ಆಗುವ ಹಾಗೆ ಮಾಡ್ತಿದ್ದೆ.
ನೀವೇ ತಯಾರು ಮಾಡ್ತಿದ್ರಿ.
ನಾನೇ ತಯಾರು ಮಾಡೋದು. ಡಿಸೈನೂ ನಂದೇ, ತಯಾರು ಮಾಡೋದೂ ನಾನೇ.
ನೀವು BSNLನ ಕಂಪ್ಯೂಟರ್ ವಿಭಾಗದಲ್ಲಿ ಕೆಲ್ಸ ಮಾಡ್ತಾ ಇದ್ದೀರಿ. ಈ ಕಂಪ್ಯೂಟರ್ ಹಿನ್ನೆಲೆ, ಪರಿಣಿತಿ ನಿಮಗೇನಾದ್ರೂ ಉಂಟಾ.
ಇದ್ರಿದ್ದೊಂದು ದೊಡ್ಡ ಕಥೆನೇ ಇದೆ. ನಾನು ದೊಡ್ಡ ಕಥೆ ಹೇಳೋದಿಲ್ಲ. ಸಣ್ಣದಾಗಿ ಹೇಳ್ತೇನೆ. ಏನಂದ್ರೆ, ಕಂಪ್ಯೂಟರ್ ಕ್ರಾಂತಿ ಅಂತ ಆರಂಭ ಆಗುವ ಮೊದ್ಲೇ ಸುಮಾರು ಹತ್ತು ಹದಿನೈದು ವರ್ಷ ಹಿಂದೇನೆ ಈ ಮೀಟರ್ ರೀಡಿಂಗ್ಸ್ ಎಲ್ಲ ಇರ್ತದಲ್ಲ, ನಿಮಗೆ ಬಿಲ್ ಬರ್ತದಲ್ಲ, ಅದನ್ನು ಸಂಗ್ರಹಿಸಿ ಇಡ್ಲಿಕ್ಕೆ ಅಂತ ಕಂಪ್ಯೂಟರ್ ಬಂದಿತ್ತು. ಆದ್ರೆ ಯಾಕೋ ಆ ಕಂಪನಿಯವ್ರು ಬರ್ಲೇ ಇಲ್ಲ ತುಂಬಾ ಸಮಯ. ಆ ಕಂಪ್ಯೂಟರು ಮುಸುಕು ಹಾಕ್ಕೊಂಡು ಸುಮ್ನೆ ಇತ್ತು. ನಾನು ಆಲೋಚನೆ ಮಾಡಿದೆ. ಇಷ್ಟೆಲ್ಲ ಲಕ್ಷಗಟ್ಟಲೆ ದುಡ್ಡು ಕೊಟ್ಟು ಕಂಪ್ಯೂಟರ್ ತಂದಿದ್ದಾರೆ, ಸುಮ್ನೆ ಯಾಕೆ ಉಂಟು ಅಂತ. ನಾನೇ ಯಾಕೆ ಒಂದು ಕೈ ನೋಡ್ಬಾರ್ದು ಅಂತ ನೋಡಿದೆ open ಮಾಡಿ. ನಂಗೇನೂ ಗೊತ್ತಿಲ್ಲ ಅದ್ರ ಬಗ್ಗೆ. ನೋಡ್ಲಿಕ್ಕೆ ಹೋದ್ರೆ ಅದ್ರಲ್ಲಿ ಕೆಲವು ತಂತ್ರಾಂಶಗಳೆಲ್ಲ ಇತ್ತು. ಅದನ್ನು use ಮಾಡ್ಕೊಂಡು ನಾನು duty chart ಹಾಕೋದು, inventories ಮಾಡೋದು, ಆ ಮೇಲೆ history sheet ಮಾಡೋದು ಅಂಥದ್ದೆಲ್ಲ ಮಾಡ್ಲಿಕ್ಕೆ ಶುರು ಮಾಡಿದೆ. ಹಾಗೆ ಮಾಡ್ತಾ ಮಾಡ್ತಾ ಮತ್ತೆ ನಮ್ಮ exchangeಗಳೂ computerize ಆಗ್ಲಿಕ್ಕೆ ಶುರು ಆಯ್ತು. ಆಗಂತೂ ನನ್ನ ಪ್ರಯೋಗಗಳು ಮತ್ತೂ ಜಾಸ್ತಿ ಆಯ್ತು. ಈಗಂತೂ ನಾನು ತುಂಬಾನೇ ಉಪಯೋಗಿ programs ಎಲ್ಲ ಮಾಡ್ತಾ ಇದ್ದೇನೆ. ಉದಾಹರಣೆಗೆ ಈಗ internetನಲ್ಲಿ ನಮ್ಮ ಟೆಲಿಫೋನ್ ಡೈರೆಕ್ಟರಿ ಇದೆ. ನೀವು ಯಾವುದೇ ಹೆಸ್ರು ಹಾಕಿದ ತಕ್ಷಣ ನಿಮಗೆ ಟೆಲಿಫೋನ್ ನಂಬರ್ ಸಿಗ್ತದೆ. ಅದ್ರ ಕಲ್ಪನೆಯಿಂದ ಹಿಡಿದು implementation ವರೆಗೆ ನನ್ನದೇ ಅದು. ಹಾಗೆ ಇತ್ತೀಚೆಗೆ ಒಂದು ಹೊಸ ಸೇರ್ಪಡೆ ಮಾಡಿದ್ದೇನೆ. ಟೆಲಿಫೋನ್ ಬಿಲ್ ಕೆಲವು ಸಲ ಪೋಸ್ಟಲ್ಲಿ ಬರುವಾಗ delay ಆಗ್ತದೆ ಅಂತ ನಮ್ಮ customers ಕಂಪ್ಲೇಂಟ್ ಮಾಡ್ತಾರೆ. ಅದಕ್ಕೆ ನನ್ನದೇ ಒಂದು concept ಮಾಡಿ internetನಲ್ಲಿ ಅವರ ಟೆಲಿಫೋನ್ ನಂಬರ್ ಮತ್ತು consumer ನಂಬರ್ ಹಾಹಿದ ತಕ್ಷಣ ಅವರ ಬಿಲ್ screenನಲ್ಲೇ ಬರ್ತದೆ.
ಅಂದ್ರೆ ಕಂಪ್ಯೂಟರನ್ನೂ ನೀವು ಏಕಲವ್ಯನ ತರಹ ಕಲಿತಿರಿ ಮತ್ತು ನಿಮ್ಮ ಇಲಾಖೆಗೆ ಇದ್ರಿಂದ ಪ್ರಯೋಜನ ಆಯ್ತು ಅಲ್ವಾ.
ಹಾಗೆ ಆಯ್ತು ಅಂತ ಅನ್ನಿಸ್ತದೆ.
ನಾರಾಯಣಿ ಅವರೇ, ಮುಂದಿನ ಮಾತು ಹೇಳೋದಕ್ಕಿಂತ ಮೊದ್ಲು ಬೊಳ್ಳಿದೋಟದ್ದೊಂದು ಪದ್ಯ ಉಂಟಲ್ಲ ದಾನೆ ಪೊಣ್ಣೆ ಅಂತ. ಅದನ್ನು ಸ್ವಲ್ಪ ಹಾಕ್ತೀರಾ.
ಈಗ ಹಿಮಾಲಯ್ ಕೀ ಗೋದ್ ಮೆಂ ಚಿತ್ರದ ಹಿಂದಿ ಹಾಡು ಮುಕೇಶ್ ಹಾಡಿದ್ದು ಇತ್ತಲ್ಲ ಚಾಂದ್ ಸೀ ಮೆಹಬೂಬಾ. ಅದ್ರ ನಂತ್ರ ಕೂಡಲೇ ಈ ಹಾಡು ಯಾಕೆ ನಾನು ಹಾಕ್ಲಿಕ್ಕೆ ಹೇಳಿದೆ ಅಂತ ಕೆಲವ್ರಿಗೆ doubt ಬಂದಿರ್ಬಹುದು. ಅದ್ರಲ್ಲೊಂದು ವಿಶೇಷ ಇದೆ. ಆ ಹಾಡಿನ interlude music ನೀವು ಗಮನ ಇಟ್ಟು ಕೇಳಿದ್ರೆ, ಮತ್ತೆ ಈ ದಾನೆ ಪೊಣ್ಣೆ ಹಾಡು ಕೇಳಿದ್ರೆ ಒಂದು ವಿಷಯ ಗೊತ್ತಾಗ್ತದೆ; ಆ interlude musicನ ಸ್ಪೂರ್ತಿಯಿಂದ ಈ ದಾನೆ ಪೊಣ್ಣೆ ಹಾಡಿನ ಜನನ ಆದದ್ದು ಅಂತ. ಆದ್ರೆ ಇದನ್ನು ನಾವು copy ಅಂತ ಹೇಳುವ ಹಾಗಿಲ್ಲ. ಇದೊಂದು ಸ್ಪೂರ್ತಿ. ಇದು ಇಲ್ಲಿ ಮಾತ್ರ ಅಲ್ಲ. ಬೇರೆ ಕಡೆ ಕೂಡ ಇರ್ತದೆ. ಹಿಂದಿಯ famous music directors ಕಲ್ಯಾಣಜೀ ಆನಂದಜೀ ಜೋಡಿಯ ಕಲ್ಯಾಣಜೀ ಅವರು jokes ಹೇಳೋದು ಜಾಸ್ತಿ. ಅವರದ್ದೊಂದು joke ಇದೆ. ಅವ್ರಿಗೆ ಯಾರೋ ಒಮ್ಮೆ ಫೋನ್ ಮಾಡಿದ್ರಂತೆ -‘ನೋಡಿ ಕಲ್ಯಾಣಜೀ ಅವರೆ, ನಿಮ್ಮ tune ಕದ್ದು ಯಾರೋ ಒಂದು ಹಾಡು ಮಾಡಿದ್ದಾರೆ’ ಅಂತ. ಅದಕ್ಕೆ ಅವ್ರು ಕೂಡ್ಲೆ ಹೇಳಿದ್ರಂತೆ -’ತೊಂದ್ರೆ ಇಲ್ಲಪ್ಪ. ನಾನು ಅದನ್ನು ಎಸ್.ಡಿ. ಬರ್ಮನ್ ಅವರಿಂದ ಕದ್ದದ್ದು’ ಅಂತ.
ಕಾಕತ್ಕರ್ ಅವ್ರೇ, ನಿಮಗೆ ಈ tunes, ಸಂಗೀತ ಇತ್ಯಾದಿಗಳ ಆಸಕ್ತಿ ಹುಟ್ಟಿಕೊಂಡದ್ದು ಹೇಗೆ.
ಈ ಆಸಕ್ತಿಗೆ ಕಾರಣ - ಸುಮಾರು ನಾನು ಏಳನೆ ಕ್ಲಾಸ್ ಇರುವಾಗ ಇರ್ಬೇಕು, ನಮ್ಮ ಹಿರಿಯಣ್ಣ ನಮ್ಮ ಮನೆಗೊಂದ್ರು ರೇಡಿಯೋ ತಂದ್ರು. ದೊಡ್ಡ ನ್ಯಾಶನಲ್ ಎಕ್ಕೋ ರೇಡಿಯೋ ಅದು. ಆಗ ಆರಂಭದಲ್ಲಿ ನಾನು ಹೇಳಿದ್ನಲ್ಲ, ನ್ಯಾಶನಲ್ ಎಕ್ಕೋ ರೇಡಿಯೋ ಕೇಳಿದ ಹಾಗೆ ಅನ್ನಿಸಿತು ಅಂತ, ಇದೇ ರೇಡಿಯೋ ಅದು. ಅದಕ್ಕೆ ಗಜಗಾತ್ರದ ಒಂದು ದೊಡ್ಡ ಬ್ಯಾಟರಿ, 50 ವೋಲ್ಟಿದ್ದು. ನಮ್ಮ ಇನ್ನೊಬ್ಬ ಅಣ್ಣ ಅದಕ್ಕೆ ದೊಡ್ಡ antenna, ಎಷ್ಟು ದೊಡ್ಡದಂದ್ರೆ ಇಲ್ಲಿಯ local transmitterನ mast ಇತ್ತಲ್ಲ, ಸಾಧಾರಣ ಅಷ್ಟು ಎತ್ತರದ್ದು antenna ಹಾಕಿ ದೂರ ದೂರದ station ಎಲ್ಲ ಕೇಳುವ ಹಾಗೆ ಮಾಡಿದ್ರು.
ಅಣ್ಣ ತಮ್ಮಂದಿರಿಗೆಲ್ಲ ಒಬ್ರಿಗೊಬ್ರು ಆಗುವ ಮನೋಭಾವ ಇತ್ತು ಹಾಗಿದ್ರೆ. ಆ ಹಳ್ಳಿಯ ವಾತಾವರಣ ಇಂತಹ ಸೃಜನಶೀಲತೆಗೆ ಸ್ಪೂರ್ತಿ ಕೊಡ್ತಿತ್ತೋ ಏನೋ.
ಅದು ಹೌದು. ಅದ್ರಲ್ಲಿ ಇನ್ನೊಂದು ವಿಶೇಷ ಏನಂದ್ರೆ, ರೇಡಿಯೋ ತಂದದ್ದು ನಮ್ಮ ದೊಡ್ಡ ಅಣ್ಣ, ಅದಕ್ಕೆ antenna ಎಲ್ಲ ಹಾಕಿ facility ಮಾಡಿಕೊಟ್ಟದ್ದು ಇನ್ನೊಬ್ರು ಅಣ್ಣ, ಆದ್ರೆ ರೇಡಿಯೋ ಮೇಲೆ ಅಧಿಪತ್ಯ ಮಾತ್ರ ನನ್ನದು! ಅದೂ ಸ್ವಯಂ ಘೋಷಿತ ಅಧಿಪತ್ಯ, ಯಾರೂ ಹೇಳಿದ್ದಲ್ಲ ನೀನು ಅಧಿಪತಿ ಆಗು ಅಂತ.
ತಮ್ಮನ ಪ್ರೀತಿಗಾಗಿ ಏನೆಲ್ಲ ಮಾಡ್ತಾರೆ ನೋಡಿ.
ಆಗ ಏನಾಗ್ತಿತ್ತು ಅಂದ್ರೆ, ನಂಗೆ ವಿವಿಧಭಾರತಿ ಮತ್ತು ರೇಡಿಯೊ ಸಿಲೋನ್ ಮುಖ್ಯ. ಅದು ಕೇಳಿ ಆದ್ಮೇಲೆ ಮತ್ತೆ ಸಮಯ ಉಳ್ದ್ರೆ ಮತ್ತೆ ಉಳ್ದವರಿಗೆಲ್ಲ ಕೇಳುವ ಚಾನ್ಸ್. ಬುಧವಾರ ಅಂದ್ರೆ ಬಿನಾಕಾ ಗೀತ್ ಮಾಲಾ. ಅದು ಬಹಳ famous ಆಗ. ನಮ್ಮ ತಾಯಿಗೂ ಗೊತ್ತಿತ್ತು ಅದು. ಬುಧವಾರ ಅಂದ್ರ ಬಿನಾಕಾ ಗೀತ್ ಮಾಲಾ ವಾರ ಅಂತ. ಆ ದಿನ ರಾತ್ರಿ ಎಳೂವರೆಗೆ ನನ್ನ ಊಟ ಎಲ್ಲ ಆಗಿ ಒಂದು ಕುರ್ಚಿ ಇಟ್ಕೊಂಡು ರೇಡಿಯೋ ಹತ್ರ ಕೂತ್ಬಿಡೋದು, ಬೇರೆ ಯಾರೂ ಅಲ್ಲಿ ಬರ್ಬಾರ್ದು ಅಂತ. ರೇಡಿಯೋ ಕೇಳಿ ಕೇಳಿ ನಾನೂ ಏನಾದ್ರೂ ಮಾಡ್ಬೇಕು ಅಂತ ಆಸಕ್ತಿ ಬಂದದ್ದು ಆವಾಗ.
ಈಗ ಓ.ಪಿ.ನಯ್ಯರ್ music ಕೇಳಿದ್ವಲ್ಲ ನಾವು. ಫಿರ್ ವಹೀ ದಿಲ್ ಲಾಯಾ ಹೂಂ ಚಿತ್ರದ್ದು. ಇದರ ಆರಂಭದಲ್ಲಿ ದೂರ್ ಬಹುತ್ ಮತ್ ಜಾಯಿಯೆ - ಅದು ಕೇಳಿದಾಗ ಹಿಂದುಗಡೆ ಸಂಗೀತ, ವಾದ್ಯಗಳೆಲ್ಲ ಏನೂ ಇಲ್ಲ, ರಫಿಯ voice ಮಾತ್ರ. ಆದ್ರೆ ಅದನ್ನು ಕೇಳಿದಾಗ ಹೊಟ್ಟೆಯೊಳಗೆ ಏನೋ ಒಂಥರ ಆದ ಹಾಗೆ. ಅದು ಬಹುಶ: ಆ ದಿನಗಳ ನೆನಪು ಆಗೋದ್ರಿಂದ ಹಾಗಾಗೋದಾ, musicನ ಅಲೆಗಳ ಇಫೆಕ್ಟಾ ಏನು ಅಂತ ನನಗೆ ಗೊತ್ತಾಗೋದಿಲ್ಲ.
ಅಂದ್ರೆ ಆರಂಭದ ಆಲಾಪ ಭಾಗದ ಬಗ್ಗೆ ಹೇಳ್ತಿದ್ದೀರಿ.
ಹೌದು. ಓ.ಪಿ.ನಯ್ಯರ್ ಅವರ ಇನ್ನೊಂದು ವಿಶೇಷ ಏನಂದ್ರೆ, ಅವ್ರು ತುಂಬಾ ವಾದ್ಯಗಳನ್ನು ಬಳಸ್ತಾರೆ. ಆದ್ರೆ ಎಲ್ಲ ಒಟ್ಟಿಗಿಲ್ಲ. ಎಲ್ಲಿ ಎಷ್ಟು ಬೇಕೋ ಅಷ್ಟೇ. ಈಗ ಇದೇ ಹಾಡಲ್ಲಿ ನೀವು ಗಮನಿಸ್ಬಹುದು, ಆ ಹಾಡಿನ ಎಲ್ಲೋ ಒಂದು ಕಡೆ, drumsಲ್ಲಿ snare ಅಂತೊಂದು use ಮಾಡ್ತಾರೆ, side drums - ಅದ್ರ ಎರಡೇ ಪೆಟ್ಟು ಒಂದು ಕಡೆ ಮಾತ್ರ ಬರೋದು. Ice Cream ಮೇಲೆ cherry ಹಣ್ಣು ಇಡ್ತಾರಲ್ಲ, ಹಾಗೆ. ತುಂಬಾ ಇಲ್ಲ, ಒಂದೇ. ಅದು ಇಫೆಕ್ಟ್ ಜಾಸ್ತಿ ಮಾಡ್ಲಿಕ್ಕೆ. ಅಂಥದ್ದೆಲ್ಲ ಮಾಡ್ತಿದ್ರು ಆಗ ಅವ್ರು.
ಚಿದಂಬರ ಅವ್ರೇ, ನೀವು ಒಳ್ಳೆಯ ಕೊಳಲು ವಾದಕರು ಅಂತ ಗೊತ್ತಿದೆ. ಈ ಕೊಳಲು ವಾದನದ ಆಸಕ್ತಿ ನಿಮಗೆ ಹೇಗೆ ಯಾವಾಗಿಂದ ಹುಟ್ಟಿಕೊಂಡಿತು.
ಕೊಳಲು ಅಂತಲ್ಲ. ನನಗೆ ಮೊದ್ಲಿನಿಂದ್ಲೂ ಯಾವ್ದಾದ್ರೂ ವಾದ್ಯಗಳನ್ನು ಕಂಡ್ರೆ ಬಹಳ ಇಷ್ಟ. ನಾನೂ ಯಾವ್ದಾದ್ರೂ ಒಂದು ವಾದ್ಯ ಕಲೀಬೇಕು. ನಾನೂ ನುಡಿಸ್ಬೇಕು ಅಂತ ಆಸೆ. ಆದ್ರೆ ಬೇರೆ ವಾದ್ಯಗಳೆಲ್ಲ ಆರ್ಥಿಕವಾಗಿ ಸಬಲರಾಗಿದ್ರೆ ಮಾತ್ರ ತಗೋಬಹುದು. ನಂಗೆ ಸುಲಭವಾಗಿ ಕಂಡದ್ದು ಕೊಳಲು. ಧರ್ಮಸ್ಥಳ ನಮ್ಮ ಮನೆಗೆ ಬಹಳ ಹತ್ರ. ಒಳದಾರಿಯಿಂದ ಹೋದ್ರೆ ನಾಲ್ಕು ಕಿಲೋಮೀಟರ್ ಅಷ್ಟೇ. ಪ್ರತೀ ವರ್ಷ ಜಾತ್ರೆಗೆ ನಾವು ಹೋಗ್ತಾ ಇದ್ವಿ. ಅಲ್ಲಿ ನಿಮಗೆ ಗೊತ್ತಿದೆ, ಜಾತ್ರೆಗಳಲ್ಲಿ ಸಾಲು ತೂಗಾಡಿಸ್ಕೊಂಡು ಕೊಳಲು ಮಾರ್ತಾ ಇರ್ತಾರೆ. ಹಾಗೆ ಒಮ್ಮೆ ನಾಲ್ಕಾಣೆ ಕೊಟ್ಟು ಒಂದು ಕೊಳಲು ತೆಕ್ಕೊಂಡೆ ನಾನು. ಮನೆಗೆ ಬಂದು ಮರುದಿನದಿಂದ ಪೀಪೀ ರಾಗ ಶುರು. ಹಾಡು ಏನೂ ಬರೋದಿಲ್ಲ. ಸುಮ್ನೆ ಪೀಪೀ ರಾಗ. ಆ ಕೊಳಲು ಜಾಸ್ತಿ ಸಮಯ ಏನೂ ಬರ್ತಾ ಇರ್ಲಿಲ್ಲ. ಒಂದು ಎರಡು ತಿಂಗ್ಳಲ್ಲಿ ಮುರ್ದು ಹೋಗ್ತಿತ್ತು. ಮತ್ತೆ ಮುಂದಿನ ವರ್ಷ ಧರ್ಮಸ್ಥಳ ಜಾತ್ರೆ. ಮತ್ತೆ ಕೊಳಲು. ಹಾಗೆ ಪೀಪೀ ರಾಗ ಮಾಡಿ ಮಾಡಿ, ಒಂದು ಗಾದೆ ಇದ್ಯಲ್ಲ - ಬೊಗಳಿ ಬೊಗಳಿ ರಾಗ ನರಳಿ ನರಳಿ ರೋಗ ಅಂತ. ಹಾಗೆ ನುಡಿಸ್ತಾ ನುಡಿಸ್ತಾ ನಂಗೇ ಕೆಲವು ಹಾಡು ನುಡಿಸಲು ಬರ್ಲಿಕ್ಕೆ ಪ್ರಾರಂಭ ಆಯ್ತು. ನಾನು ಮೊದ್ಲು ಕಲ್ತ ಹಾಡು ಯಾವ್ದಂದ್ರೆ - ಹಿಂದಿ ಹಾಡೂ ಇದೆ, ಕನ್ನಡ ಹಾಡೂ ಇದೆ ಅದು - ಪಾಪಿಯ ಜೀವನ ಪಾವನ ಗೊಳಿಸುವ ಪರಶಿವ ಲಿಂಗ ನಮೋ. ಯಾಕಂದ್ರೆ ಅದ್ಕೆ ಎರಡೇ ಬೆರಳು ಸಾಕು. ಅದ್ರಲ್ಲಿ ಸ್ವರ ಹೆಚ್ಚು variation ಇಲ್ಲ. ಆ ಮೇಲೆ ನಾನು develop ಮಾಡ್ತಾ ಹೋದೆ. ನನಗೆ ಒಂದೊಂದೇ ಹಾಡು ನುಡಿಸಲು ಬರ್ಲಿಕ್ಕೆ ಆರಂಭ ಆಯ್ತು. ಆದ್ರೆ ಅದ್ರಲ್ಲಿ ಒಂದು ತೊಂದ್ರೆ ಇತ್ತು. ಅದು ಹೀಗೆ ಉದ್ದಕೆ ಹಿಡ್ದು ಬಾರ್ಸುವ ಕೊಳಲು, ಪುಂಗಿ ಊದಿದ ಹಾಗೆ. ಅದ್ರಲ್ಲಿ ಕಾರ್ಯಕ್ರಮ ಕೊಡ್ಲಿಕ್ಕೆ ಅಥವಾ ಎಲ್ಲ ಹಾಡು ನುಡಿಸ್ಲಿಕ್ಕೆ ಆಗೋದಿಲ್ಲ. ಅದಕ್ಕೆ ಏನು ಮಾಡಿದೆ - ನಮ್ಮ ತೋಟದ ಬದಿಯಲ್ಲಿ ನದಿ ಪಕ್ಕಕ್ಕೆ ಈ ಓಟೆ ಅಂತ ಹೇಳ್ತಾರಲ್ಲ , ಅದ್ರ ಗಿಡ ಇತ್ತು. ಒಂದು ಚಂದ ನೇರ ಇದ್ದ ಓಟೆಯನ್ನು ಕತ್ತರ್ಸಿ ಒಂದು ಸಪೂರದ ಕಬ್ಬಿಣದ ಸರಳನ್ನು ಕಾಯ್ಸಿ ರಂಧ್ರ ಮಾಡಿ ನಾನೇ ಒಂದು ಕೊಳಲು ತಯಾರ್ಸಿದೆ. ಶಾಸ್ತ್ರ ಎಲ್ಲ ಏನೂ ಗೊತ್ತಿಲ್ಲ. ಎಷ್ಟು hole ಇರ್ಬೇಕು, ಹೇಗಂತ ಗೊತ್ತಿಲ್ಲ. ಅದನ್ನು ನಾನು ತುಟಿಗಿಟ್ಟು ಬಾರ್ಸಿದ್ರೆ ನಂಗೇ ಆಶ್ಚರ್ಯ! ಅದ್ರ ಧ್ವನಿ ಸೂಪರ್ !!
ಸುಬ್ಬಾ ಶಾಸ್ತ್ರಿ ಚಿತ್ರದ ಹಾಡು ಈಗ ನಾವು ಕೇಳಿದ್ವಲ್ಲ. ಇದ್ರಲ್ಲಿ ಗಮನಿಸಬೇಕಾದ ಅಂಶ ಇದೆ ಒಂದು. ಈ ಹಾಡಿನ ಸೃಷ್ಟಿಕರ್ತರಲ್ಲಿ ಒಬ್ರು ಕೂಡ ಫಿಲ್ಮ್ ಉದ್ಯೋಗದ professionals ಅಲ್ಲ. ಅದನ್ನು ಹಾಡಿದವ್ರು ಶ್ರೀರಂಗಂ ಗೋಪಾಲರತ್ನಂ ಅಂತ. ಅವರು ಪ್ರಖ್ಯಾತ classical singer. ರಚನೆಕಾರರು ಕೂಡ ಸಿನಿಮಾ ರಚನೆಕಾರ ಅಲ್ಲ. ಅವರು ಪು.ತಿ.ನ. ಅವ್ರು ಬಹುಶಃ ಗೋಕುಲ ನಿರ್ಗಮನ ಅನ್ನುವ ನಾಟಕಕ್ಕೆ ಬೇಕಾಗಿ ಈ ಹಾಡು ರಚಿಸಿದ್ದು ಅಂತ ಕೇಳಿದ್ದೇನೆ ನಾನು. ಹಾಗೇ ಇದ್ಕೆ ಸಂಗೀತ ನಿರ್ದೇಶನ ಮಾಡಿದವ್ರು ವೀಣೆ ದೊರೆಸ್ವಾಮಿ ಐಯಂಗಾರ್. ಆದ್ರೂ ಕೂಡ ನೋಡಿ ಚಲನ ಚಿತ್ರ ಗೀತೆಗಳ ಮೂಲ ಲಕ್ಷಣ ಆದ clarity, crispness ಮತ್ತು ಅಚ್ಚುಕಟ್ಟುತನ ಎಷ್ಟು ಇದ್ರಲ್ಲಿ ಕೂಡ ಇದೆ ಅಂತ. ನಂಗೆ ಅನ್ಸೋದು ಆ ಒಂದು ಹತ್ತು ಹದಿನೈದು ವರ್ಷದ ಕಾಲ ಇತ್ತಲ್ಲ - ಆಗ ಯಾರೋ ಗಂಧರ್ವರು ಬಹುಶಃ ಇಲ್ಲಿ ಓಡಾಡ್ತಾ ಇದ್ರಾ ಅಂತ. ಅವ್ರೆಲ್ಲ ಇಂಥ ರಚನೆ ಮಾಡುವಾಗ ಅವರ ಹೃದಯದಲ್ಲಿ ಕೂತು ಇಂತಹ ಉತ್ತಮ ರಚನೆಗಳು ಬರುವ ಹಾಗೆ ಮಾಡ್ತಿದ್ರಾ ಅಂತ ನಂದೊಂದು ಕಲ್ಪನೆ
ಸುಂದರವಾದ ಕಲ್ಪನೆ. ನಿಮ್ಮ ಹವ್ಯಾಸದ ಬಗ್ಗೆ ಇನ್ನೇನಾದ್ರೂ ಹೇಳ್ಳಿಕ್ಕುಂಟಾ.
ಸ್ವಂತ ಕೊಳಲು ತಯಾರ್ಸಿದೆ ಅಂತ ಹೇಳಿದೆ ಅಲ್ಲ. ನಾನು ಅದನ್ನೇ ಉಪಯೋಗ್ಸಿಕೊಂಡು ಮತ್ತೆ ಕೆಲವು ಸಣ್ಣ ಸಣ್ಣ ಕಾರ್ಯಕ್ರಮ ಎಲ್ಲ ಕೋಡೋದಿತ್ತು. ನಮ್ಮ ಶಾಲೆಯ ವಾರ್ಷಿಕೋತ್ಸವಗಳು, ಹಾಗೇ ನಮ್ಮ ದೇವಸ್ಥಾನಗಳಲ್ಲಿ ಜಾತ್ರೆ ಆಗುವಾಗ ಅಲ್ಲಿ ಅಷ್ಟ ಸೇವೆ ಅಂತ ಇರ್ತದೆ. ಅಲ್ಲಿ ಕೊಳಲು ನಾನು ನುಡಿಸ್ತಾ ಇದ್ದೆ. ಆ ಮೇಲೆ ನಮ್ಮ ಕಾಲೇಜು ದಿನಗಳಲ್ಲಿ mouth organ ಕೂಡ ನುಡಿಸ್ತಾ ಇದ್ದದ್ದುಂಟು.
ಶಾಸ್ತ್ರೀಯವಾಗಿ ಸಂಗೀತ ಅಭ್ಯಾಸ ಮಾಡ್ಬೇಕು ಅಂತ ನಿಮ್ಗೆ ಯಾವತ್ತೂ ಅನ್ನಿಸ್ಲಿಲ್ವಾ. ಈ ಥರ ಎಲ್ಲ ನಿಮ್ಮಷ್ಟಕ್ಕೆ ನೀವೇ ಏಕಲವ್ಯ ವಿದ್ಯೆ ಪ್ರಾಪ್ತಿ ಮಾಡ್ಕೊಂಡ್ರಿ.
ಅನ್ನಿಸ್ತಿತ್ತು. ಆದ್ರೆ ನಾನಲ್ಲಿ ಹಳ್ಳಿಯಲ್ಲಿ ಇರುವಾಗ ಅದ್ಕೊಂದು ಸೌಲಭ್ಯ ಇರ್ಲಿಲ್ಲ. ಅಲ್ಲಿ ಕಲ್ಸಿ ಕೊಡ್ಲಿಕ್ಕೆ ಗುರುಗಳು ಯಾರೂ ಇರ್ಲಿಲ್ಲ. ಆದ್ರೆ ಆ ಮೇಲೆ ನಾನು ಇಲ್ಲಿ P&Tಯಲ್ಲಿ ಕೆಲ್ಸಕ್ಕೆ ಸೇರಿದ್ಮೇಲೆ ಮಂಗಳೂರಿನ ಕಲಾ ನಿಕೇತನದಲ್ಲಿ ಗೋಪಾಲಕೃಷ್ಣ ಐಯರ್ ಅವರ ಹತ್ರ ಸಂಗೀತದ ಅ ಆ ಇ, ಅಂದ್ರೆ grammer ಕಲ್ತಿದ್ದೇನೆ. ಈ ವಿಚಾರದಲ್ಲಿ ನಂಗೊಂದು ಒಳ್ಳೆ ಅನುಭವ ಆಗಿದೆ. ನಾನೊಮ್ಮೆ ಯಾವತ್ತೋ ಬೆಂಗಳೂರಿಗೆ ಹೋಗಿದ್ದಾಗ ಅಲ್ಲೊಂದು ಕೊಳಲು ತಗೊಳ್ಳಿಕ್ಕೆ ಹೋದೆ. ಅಲ್ಲಿ ಅರುಣಾ ಮ್ಯೂಸಿಕಲ್ಸ್ ಅಂತ ಇದೆ. ಕಸ್ತೂರಿ ಶಂಕರ್ ಅವರ ಭಾವನ ಅಂಗಡಿ ಅದು. ಅಲ್ಲೊಂದು ಕೊಳಲು ತೆಕೊಂಡು ನಾನು ಹೆಚ್ಚೇನೂ ನುಡಿಸ್ಲಿಲ್ಲ. ಒಂದು ಆಲಾಪ ತೆಗ್ದೆ, ಸಣ್ಣದು. ಕೂಡ್ಲೆ ಅವ್ರು ಕೇಳಿದ್ರು ನಿಮ್ಮ ಗುರುಗಳು ಯಾರು ಅಂತ. ನಾನು ಹೇಳಿದೆ ಗೋಪಾಲಕೃಷ್ಣ ಐಯರ್ ಅಂತ. ಅವ್ರಿಗೆ congratulations ಹೇಳಿ ಅಂತಂದ್ರು. ಅಂದ್ರೆ ಗುರುಗಳು ನಂಗೆ ಹೇಳಿ ಕೊಟ್ಟಂಥ ಒಂದು ಬಾನಿ ಅಂತ ಹೇಳ್ತಾರಲ್ಲ, ಶೈಲಿ,. ಅದು ಕೇಳಿದ ತಕ್ಷಣ ಅವರಿಗೆ ಗೊತ್ತಾಯ್ತು ಬಹುಶಃ ಇವ್ರು ಗೋಪಾಲಕೃಷ್ಣ ಐಯರ್ ಶಿಷ್ಯ ಇರ್ಬೇಕು ಅಂತ. ಹಾಗೆ ಗುರುಗಳ ಹತ್ರ ಕಲ್ತ್ರೆ ಅದಕ್ಕೆ weight ಎಷ್ಟು ಜಾಸ್ತಿ ಇರ್ತದೆ ಅಂತ ನಂಗೆ ಆಗ ಗೊತ್ತಾಯ್ತು.
ನೀವು ಸ್ವತಂತ್ರವಾಗಿ ವೇದಿಕೆಗಳಲ್ಲಿ ನುಡಿಸಿದ್ದು, ಪಕ್ಕ ವಾದ್ಯ ಕೊಟ್ಟದ್ದು ಹೀಗೆಲ್ಲ ಉಂಟಾ.
ಅದು ಇದೆ. ಯಾಕಂದ್ರೆ ನಾನು ಕೊಳಲು ನುಡಿಸ್ತೇನೆ ಅಂತ ಗೊತ್ತಾದ್ಮೇಲೆ ಆಗಾಗ ನಂಗೆ ಕಾರ್ಯಕ್ರಮಗಳಿಗೆ ಕರೆ ಬರ್ಲಿಕ್ಕೆ ಶುರು ಆಯ್ತು. ಹೆಚ್ಚಾಗಿ ಭರತ ನಾಟ್ಯಕ್ಕೆ ನಾನು ಹಿನ್ನೆಲೆ ಸಂಗೀತಕ್ಕೆ ಹೋಗ್ತೇನೆ. ಆ ಮೇಲೆ ನನ್ನ ಇನ್ನೊಂದು ವಿಶೇಷ ಏನಂದ್ರೆ ಜ್ಯೂನಿಯರ್ ಶಂಕರ್ ಮತ್ತು ಪ್ರೊಫೆಸರ್ ಶಂಕರ್ ಅವರ ಗಿಲಿ ಗಿಲಿ ಮ್ಯಾಜಿಕ್ ತಂಡ ಇದೆಯಲ್ಲ - ಅವರ ಒಂದು ಖಾಯಂ ಸದಸ್ಯ ನಾನು. ಅವ್ರ orchestraದಲ್ಲಿ ನಮ್ಮ music ಇಲ್ದಿದ್ರೆ ಅವ್ರ magic ಆಗ್ಲಿಕ್ಕಿಲ್ಲ. ಅವ್ರ magic ಸರಿಯಾಗಿ effective ಆಗ್ಬೇಕಿದ್ರೆ ನಮ್ಮ ತಂಡದ music ಬೇಕು. ಆ musicನಲ್ಲಿ ಏನೇನೋ ಛಾಯೆಗಳು ಕಾಣ್ಬಹುದು ನಿಮ್ಗೆ, ಈ ಹಾಡು ನಾನು ಎಲ್ಲೋ ಕೇಳಿದ್ದೇನಲ್ವಾ ಅಂತ ಅನ್ನಿಸ್ಬಹುದು. ಆದ್ರೆ ಅದು ಹಾಡು ಆಗಿರೋದಿಲ್ಲ. ಅಂಥ ಒಂದು special music. ಅವ್ರ ಜೊತೆ ನಾನು ದೇಶ ವಿದೇಶದಲ್ಲೆಲ್ಲ ಸುತ್ತಾಡಿದ್ದೇನೆ. ಹಾಗೆ ಹೋಗುವಾಗ ಕೆಲವೊಮ್ಮೆ trainನಲ್ಲಿ ಹೋಗ್ಬೇಕಾಗಿ ಬರ್ತದೆ. ಆಗ ನಮ್ಮದೊಂದು mini orchestra ಅಲ್ಲಿ. ನಂದು ಕೊಳಲು. ನಮ್ಮ ತಂಡದ ಇತರ ಸದಸ್ಯರಿದ್ದೆಲ್ಲ ಕೈಗೆ ಸಿಕ್ಕಿದ ವಸ್ತು - ಅದು brief case ಇರ್ಬಹುದು, tumbler ಇರ್ಬಹುದು, ಅದ್ರಲ್ಲಿ ತಾಳ. ಹಾಗೆ ನಾವು orchestra ಮಾಡುವಾಗ ಆಚೆ ಕಡೆಯ ನಾಲ್ಕು ಬೋಗಿಯವ್ರು, ಈಚೆ ಕಡೆಯ ನಾಲ್ಕು ಬೋಗಿಯವ್ರು ನಮ್ಮ ಬೋಗಿಯಲ್ಲಿ ಜಮಾಯ್ಸಿದ ನೆನಪು ಈಗ್ಲೂ ನನ್ನಲ್ಲಿ ಹಚ್ಚ ಹಸಿರಾಗಿ ಉಂಟು.
ಈಗ ನಾವು ಅನ್ನಪೂರ್ಣ ಚಿತ್ರದ ಈ ಒಂದು ಹಾಡು ಕೇಳಿದ್ವಲ್ಲ. ಅದು ಪಿ.ಬಿ.ಶ್ರೀನಿವಾಸ್ ಹಾಡಿದ್ದು. ಚಿ.ಉದಯಶಂಕರ್ ರಚನೆ. ಮ್ಯೂಸಿಕ್ ರಾಜನ್ ನಾಗೇಂದ್ರ. ರಾಜನ್ ನಾಗೇಂದ್ರ ಅಂದ್ರೆ ನಮ್ಮ ಕನ್ನಡದ ಓ.ಪಿ.ನಯ್ಯರ್ ಅಂತ. ಇದ್ರ ಇನ್ನೊಂದು ವಿಶೇಷ ಏನಂದ್ರೆ ಹೆಚ್ಚಾಗಿ ಹಿಂದಿ ಹಾಡುಗಳಲ್ಲಿ ಮುಖ್ಯ ಹಾಡು ಶುರು ಆಗೋದಕ್ಕೆ ಮೊದ್ಲು ಈ ಶಾಯರಿ ಅಥವಾ ಶೇರ್ ಅಂತ ಎರಡು ಲೈನ್ ಹೇಳುವ ಪರಿಪಾಠ ಇತ್ತು. ಈ ಕನ್ನಡ ಹಾಡಲ್ಲೂ ಅದು ಇದೆ ನೋಡಿ. ಪರಿಪರಿಯ ಪರಿಮಳದಿ ಅತಿ ಶ್ರೇಷ್ಠವೆನಿಸಿಹುದು - ಆ ಥರ ಎರಡು ಲೈನ್ ಹೇಳಿ ಈ ಹಾಡು start ಆಯ್ತು. ಉಗಾಭೋಗದ ತರ. ಹಾಡಿನ ಬ್ಯೂಟಿ ಜಾಸ್ತಿ ಮಾಡ್ಲಿಕ್ಕದು.
ನಿಮ್ಮ ಮೇಲೆ ಯಾವ ಮಾಧ್ಯಮದ ಪ್ರಭಾವ ಹೆಚ್ಚು.
ಮಾಧ್ಯಮಗಳ ಬಗ್ಗೆ ಹೇಳ್ಬೇಕಿದ್ರೆ ಆಗ ನಮಗೆ ಇದ್ದದ್ದು ಒಂದೇ ಮಾಧ್ಯಮ ರೇಡಿಯೋ ಮಾತ್ರ. ಈಗ ಬೇರೆ ಬೇರೆ ಬಂದಿರ್ಬಹುದು. ಆದ್ರೆ ಆಗ ರೇಡಿಯೋ. ಈ ರೇಡಿಯೋ ಬಗ್ಗೆ ಹೇಳ್ಬೇಕಿದ್ರೆ, ಕೆಲವ್ರಿಗೆ ಎಲೆ ಅಡಿಕೆ ತಿನ್ನೋದು, ಅಥವಾ ನಸ್ಯ ಎಳಿಯೋದು, ಸಿಗರೇಟ್ ಸೇದೋದು ಅಂಥ ಚಟ ಇರ್ತದಲ್ಲ. ನಂಗೆ ರೇಡಿಯೋ ಕೇಳುವ ಚಟ ಅಂತ ಹೇಳಿದ್ರೆ ತಪ್ಪಾಗ್ಲಿಕ್ಕಿಲ್ಲ.
ಅಷ್ಟು ತೀವ್ರ ಆಸಕ್ತಿ.
ಒಂದು ಆರು ರೇಡಿಯೋ ಇದೆ ನಮ್ಮ ಮನೆಯಲ್ಲಿ. ನಿಮ್ಗೆ ಕೇಳಿ ಆಶ್ಚರ್ಯ ಆಗ್ಲಿಕ್ಕಿಲ್ವಾ. ಅಡಿಗೆ ಮನೆಯಲ್ಲೊಂದು ರೇಡಿಯೊ. ನನ್ನ ದೊಡ್ಡ ಮ್ಯೂಸಿಕ್ ಸಿಸ್ಟಮ್ ಒಂದು ರೇಡಿಯೋ. ಆ ಮೇಲೆ ನನ್ನ ಹಳೇ ಟೂ ಇನ್ ವನ್ ಒಂದು ರೇಡಿಯೊ. ನಾನು ಮಲಗುವಾಗ ತಲೆದಿಂಬಿನ ಪಕ್ಕದಲ್ಲಿ ಇಟ್ಟುಕೊಳ್ಳಿಕ್ಕೆ ಒಂದು ರೇಡಿಯೋ. ನಾನು ಎಲ್ಲಾದ್ರೂ ಹೋಗುವಾಗ ಜೊತೆಯಲ್ಲಿ ಕೊಂಡು ಹೋಗ್ಲಿಕ್ಕೆ ಒಂದು ಸಣ್ಣ ಪಾಕೇಟ್ ರೇಡಿಯೋ. ಇತ್ಯಾದಿ.
80ರ ದಶಕದ ನಂತರ ಟಿ.ವಿ. ನೋಡುವ ಗೀಳು ಏನಾದ್ರೂ ಉಂಟಾ.
ನಾನು ಟಿವಿ. ನೋಡೋದು ಮಾತ್ರ ಭಾರೀ ಕಮ್ಮಿ. ನಾನು ಟಿ.ವಿ. ನೋಡ್ತೇನೆ. ಯಾಕೆ? ಆ ಹಾಡುಗಳಿಗಾಗಿ ನಾನು ಟಿ.ವಿ. ನೋಡೋದು ಉಂಟು. ಕಣ್ಣು ಮುಚ್ಚಿ ನೋಡೋದು ಅಂದ್ರೂ ಆಗ್ಬಹುದು. ನಾನು ಕೇಳೋದು ಮಾತ್ರ. ಹಾಗೆ ಕೇಳೋದ್ರ ಜೊತೆಗೆ ಆ sound trackನ್ನು ಡೈರೆಕ್ಟ್ ಆಗಿ ನನ್ನ ಕಂಪ್ಯೂಟರಿಗೆ ಕನೆಕ್ಟ್ ಮಾಡಿ ರೆಕಾರ್ಡ್ ಮಾಡಿಕೊಳ್ಳುವ ವ್ಯವಸ್ಥೆ ಕೂಡ ನಾನು ಮಾಡ್ಕೊಂಡಿದ್ದೇನೆ. ಈಗ ಕೆಲವು ಹಾಡು ಕೇಳಿದ್ರಲ್ಲ. ಅದ್ರಲ್ಲಿ ಒಂದೆರಡು ಹಾಡು ಹಾಗೆ ಮಾಡಿದ್ದೂ ಇದೆ.
ನೀವು ರೇಡಿಯೋದ ಅನೇಕ ಸ್ಟೇಶನ್ಗಳನ್ನು ಕೇಳಿರ್ಬಹುದಲ್ಲ.
ರೇಡಿಯೋ ಸ್ಟೇಶನ್ಗಳ ಬಗ್ಗೆ ನೀವು ಕೇಳಿದ್ರಲ್ಲ. ಆಗ ನಂಗೆ ನೆನ್ಪಾಗ್ತದೆ. ಆಗ್ಲೇ ಹೇಳಿದ ಹಾಗೆ ನಮ್ಮ ದೊಡ್ಡ ಅಣ್ಣ ರೇಡಿಯೊ ತಂದ್ರು, ಇನ್ನೊಬ್ರು ಅಣ್ಣ ದೊಡ್ಡ antenna ಹಾಕ್ಕೊಟ್ರು, ನಾನು ನಮ್ಮ ಮನೆಯ ರೆಡಿಯೋ ಆಪರೇಟರ್. ಯಾವ ಸ್ಟೇಶನಲ್ಲಿ ಎಷ್ಟು ಹೊತ್ತಿಗೆ ಯಾವ ಉತ್ತಮ ಕಾರ್ಯಕ್ರಮ ಬರ್ತದೆ ಅಂತ ನನ್ನ finger tipsಲ್ಲಿ. ಅದ್ರಲ್ಲಿ ಬೆಂಗಳೂರು, ಭದ್ರಾವತಿ ಆಗ ಮುಖ್ಯ ಕನ್ನಡ ಕೇಳ್ಳಿಕ್ಕೆ. ಆ ಮೇಲೆ ವಾರಕ್ಕೊಮ್ಮೆ ಇರುವಂಥ ಕಾರ್ಯಕ್ರಮ ಕೊಡುವ ಕೆಲವು ಸ್ಟೇಶನ್ ಇತ್ತು. ಉದಾಹರಣೆಗೆ ಮದ್ರಾಸ್ ಸ್ಟೇಶನ್ನಿನಿಂದ Sunday ಮಧ್ಯಾಹ್ನ 12 ಗಂಟೆಗೆ ಹೂ ಮಳೆ ಅಂತ ಒಂದು ಕಾರ್ಯಕ್ರಮ ಬರೋದು. ಅದು ನಾನು ಕೇಳ್ತಿದ್ದೆ. ಆ ಮೇಲೆ ಮುಂಬಯಿ A ಕೇಂದ್ರದಲ್ಲಿ ಸಾಪ್ತಾಹಿಕ ಕಾರ್ಯಕ್ರಮ ಇರ್ತಾ ಇತ್ತು ಶನಿವಾರ, ಏಳು ಕಾಲರಿಂದ ಏಳು ಮುಕ್ಕಾಲರ ವರೆಗೆ. ಅದ್ರಲ್ಲಿ ಒಂದು ವಿಶೇಷ ಇದೆ. ಆಗ ನಮ್ಗೆ ಯಕ್ಷಗಾನ ಕೇಳ್ಳಿಕ್ಕೆಲ್ಲ ಸಿಗೋದಿಲ್ಲ ರೇಡಿಯೊದಲ್ಲಿ. ಈಗ ನಿಮ್ಮಲ್ಲಿಂದ ಸಾಕಷ್ಟು ಪ್ರಸಾರ ಆಗ್ತಾ ಇದೆ, ವಾರ ವಾರ ಹೋಗ್ತಾ ಇದೆ. ಆಗ ಯಾವಾಗಾದ್ರೊಮ್ಮೆ ಅಲ್ಲಿ ಮುಂಬಯಿಯವ್ರು ಸೇರಿ ಒಂದು ಯಕ್ಷಗಾನ ಮಾಡಿದ್ರೆ ನಮ್ಗೆಲ್ಲ ಒಂದು ಥ್ರಿಲ್. ರೇಡಿಯೋದಲ್ಲಿ ಚಂಡೆ ಶಬ್ದ ಕೇಳೋದು ಅಂತ. ಆಗ ಗಣೇಶ ವಿಜಯವೋ ಎಂಥದೋ ಒಂದು ಯಕ್ಷಗಾನ ಬಂದಿತ್ತು, ಚೌತಿ ದಿವಸ. ಆ ಮೇಲೆ ನಮ್ಮ ಅಣ್ಣ ಆ ಸ್ಟೇಶನಿಗೆ ಒಂದು ಹೆಸ್ರೇ ಕೊಟ್ಟು ಬಿಟ್ಟಿದ್ರು - ಇದು ಯಕ್ಷಗಾನದ ಮುಂಬಯಿ ಕೇಂದ್ರ ಅಂತ. ಇವತ್ತು ಯಕ್ಷಗಾನದ ಮುಂಬಯಿ ಸ್ಟೇಶನ್ ಹಾಕೋ ಅಂತ ಹೇಳೋದು ಅವ್ರು ಶನಿವಾರ ಯಾವಾಗ್ಲೂ. ಆ ಥರ ಬೇರೆ ಬೇರೆ ಸ್ಟೇಶನ್ ನಾನು ಕೇಳಿಸ್ತಾ ಇದ್ದೆ.
ಈಗ ನಾವು ಕೇಳಿದ್ದು ತುಮ್ಸೆ ಅಚ್ಛಾ ಕೌನ್ ಹೈ ಚಿತ್ರದ ಹಾಡು. ಇದನ್ನು ಹಾಡಿದ್ದು ನನ್ನ ಮೆಚ್ಚಿನ ಗಾಯಕ ರಫಿ. ಇನ್ನೊಬ್ರು ನನ್ನ ಮೆಚ್ಚಿನ ಗಾಯಕ ನಮ್ಮ ಕನ್ನಡದ ಪಿ.ಬಿ.ಶ್ರೀನಿವಾಸ್. ಈ ಹಾಡಿನ ಬಗ್ಗೆ ಇನ್ನೊಂದೆರಡು ಮುಖ್ಯ ವಿಷಯ ಹೇಳ್ಳಿಕ್ಕಿದೆ. ಇದು ಶಂಕರ್ ಜೈಕಿಶನ್ ಸಂಗೀತ. ಆಗ ಹಿಂದಿ ಇಂಡಸ್ಟ್ರಿಯಲ್ಲಿ ಕೆಲವು ಅಲಿಖಿತ ನಿಯಮಗಳಿರ್ತಿತ್ತು. ಶಂಕರ್ ಜೈಕಿಶನ್ ಸಂಗೀತ ಇದ್ರೆ ಹಸರತ್ ಜೈಪುರಿ - ಶೈಲೇಂದ್ರ ಹಾಡು ಬರೀಬೇಕು - ಹಾಗೆಲ್ಲ ಒಂದು ಅಲಿಖಿತ ನಿಯಮ. ಆದ್ರೆ ಈ ಹಾಡು ಆಗ್ಲಿಕ್ಕಾಗುವಾಗ ಆ ನಿಯಮಗಳು ಮುರೀತಾ ಬಂದಿದ್ವು. ಅದಕ್ಕೆ ಇದೊಂದು ಉದಾಹರಣೆ. ಇದನ್ನು ಬರೆದವ್ರು ರಾಜೇಂದ್ರ ಕೃಷ್ಣ. ಇನ್ನೊಂದು ಇದ್ರ speciality ಅಂದ್ರೆ ಶಮ್ಮಿ ಕಪೂರ್ ಸ್ಟೈಲಿನ ಹಾಡು ಇದು. ದೇಶ ಭಕ್ತಿ ಆದ್ರೂ ಶಮ್ಮಿ ಕಪೂರ್ ಸ್ಟೈಲಿನ ದೇಶ ಭಕ್ತಿ. ಶಮ್ಮಿ ಕಪೂರ್ ಬಗ್ಗೆ ಇನ್ನೊಂದು ನಾವು ಏನು ತಿಳ್ಕೊಳ್ಬೇಕು ಅಂದ್ರೆ - ಕೆಲವು ಸಲ ದೃಶ್ಯ ಮಾಧ್ಯಮದಲ್ಲಿ ಯಾವ್ದಾದ್ರೂ ಹಾಡು ನೋಡಿದಾಗ ಅಯ್ಯೋ ಈ ಹಾಡು ಕೆಡ್ಸಿ ಬಿಟ್ರಲ್ಲಪ್ಪಾ ಅಂತ ಬೇಜಾರಾಗೋದೂ ಇದೆ. ಆದ್ರೆ ಶಮ್ಮಿ ಕಪೂರ್ ವಿಷಯದಲ್ಲಿ ಹಾಗಲ್ಲ. ಅವ್ರ ಹಾಡನ್ನು ನಾವು ಟಿ.ವಿ.ಯಲ್ಲೋ ಪಿಕ್ಚರಲ್ಲೋ ನೋಡಿದ್ರೆ ಆ ಹಾಡಿನ ಮೌಲ್ಯ ವರ್ಧನೆ ಆಗ್ತದೆ. ಮೌಲ್ಯ ವರ್ಧಿತ ಹಾಡಾಗ್ತದೆ ಅದು.
ಕಾಕತ್ಕರ್ ಅವರೆ, ನಿಮ್ಮ ವೈವಿಧ್ಯಮಯವಾದ ಅನೇಕ ವಿವರಗಳನ್ನು ಕೊಟ್ರಿ. ಈಗ ಸಂಗೀತದ ಹಾಗೇನೇ, ಕಂಪ್ಯೂಟರಿನ ಹಾಗೇನೇ ಇನ್ನಿತರ ಹವ್ಯಾಸಗಳೇನಾದ್ರೂ ಇವೆಯೇ ನಿಮಗೆ.
ಹಾಗೆ ಸಣ್ಣ ಪುಟ್ಟ ಬೇರೆ ಬೇರೆ ಹವ್ಯಾಸ ಇದ್ದೇ ಇದೆ. ಅದ್ರಲ್ಲಿ ಒಂದು ಪತ್ರಿಕೆಗಳಿಗೆ ಸಣ್ನ ಸಣ್ಣ ಲೇಖನ ಏನಾದ್ರೂ ಬರಿಯೋದು. ತಾಂತ್ರಿಕ ವಿಷಯ ಇರ್ಬಹುದು ಅಥವಾ ಸಾರ್ವಜನಿಕ ಆಸಕ್ತಿಯ ವಿಷಯ ಇರ್ಬಹುದು. ಮೊನ್ನೆ ಮೊನ್ನೆ ಕೆಲವ್ರೆಲ್ಲ ಗಮನಿಸಿರ್ಬಹುದು - ಒಂದು ಹಳೆ ಹಾಡಿನ ಬಗ್ಗೆ ನಾನೊಂದು ಪುಟ್ಟ ಲೇಖನ ಬರ್ದಿದ್ದೆ. ಜಗನ್ಮೋಹಿನಿ ಚಿತ್ರದ್ದು - ಎಂದೋ ಎಂದೋ ನಿನ್ನ ದರುಶನ - ಆ ಹಾಡು ಈಗ ಸಿಗ್ತಾ ಇಲ್ಲ, ನನಗದ್ರ nostalgia ಬರ್ತಾ ಇದೆ ಅಂತೆಲ್ಲ ಬರ್ದಿದ್ದೆ. ಹೀಗೆ ಬರಿಯೋದ್ರಲ್ಲಿ ಎರಡು ಉದ್ದೇಶ ಇದೆ ನನ್ನದು. ಒಂದು ನಾನು ಹೇಳ್ಬೇಕಾದ್ದನ್ನು ಹೇಳೋದು. ಇನ್ನೊಂದು ನನ್ನ ಸಹಪಾಠಿಗಳಾಗ್ಲಿ, ಸ್ನೇಹಿತರಾಗ್ಲಿ ಎಲ್ಲೋ ಇರ್ತಾರೆ. ಇಂಥ ಪತ್ರಗಳ ಜೊತೆಗೆ ನನ್ನ ಹೆಸ್ರು ನೋಡಿದ್ರೆ ಅವ್ರಿಗೆ ನೆನ್ಪಾಗ್ತದೆ - ಹ್ಞಾ, ನನ್ನ ಕ್ಲಾಸ್ಮೇಟ್ ಇವನು ಅಂತ. ಹೀಗೆ ನೆನಪನ್ನ refresh ಮಾಡ್ಲಿಕ್ಕೆ ನಂದೊಂದು ಸಾಧನ ಇದು ಅಂತ ತಿಳ್ಕೊಂಡಿದ್ದೇನೆ.
ಈ ಹಾಡು ವಿಜಯ ನಗರದ ವೀರ ಪುತ್ರ ಚಿತ್ರದ್ದು. ಸಾಮಾನ್ಯವಾಗಿ ಎಲ್ರೂ ಇಷ್ಟಪಡೋದು ವಿಜಯ ನಗರದ ವೀರ ಪುತ್ರ ಅಂದ ಕೂಡ್ಲೆ ಅಪಾರ ಕೀರ್ತಿ ಗಳಿಸಿ ಮೆರೆವ ಭವ್ಯ ನಾಡಿದು. ಈ ಹಾಡನ್ನು ನೀವು ಯಾಕೆ ಹೆಚ್ಚು ಇಷ್ಟ ಪಡ್ತೀರಿ.
ಅದು ನನ್ನ speciality. ಇತರರು ಮಾಡದ ರೀತಿ ಏನಾದ್ರೂ ಒಂದು ಹೊಸತು ಮಾಡೋದು ನನ್ನ ಹವ್ಯಾಸ. ಇದು ಕೂಡ ಹಾಗೇ. ಈ ಹಾಡು ಹಾಡಿದ್ದು ಪಿ.ಸುಶೀಲ ಒಬ್ರು. ಅವರ ಜೊತೆಗೆ ಮನಮೋಹನ ಠಾಕೂರ್ ಅಂತ ಓರ್ವರು. ಬಹುಶಃ ಅವರ ಜೀವನದಲ್ಲಿ ಅವ್ರು ಈ ಒಂದೇ ಹಾಡು ಹಾಡಿದ್ದು ಅಂತ ಅನ್ನಿಸ್ತದೆ. ವಿಶ್ವನಾಥನ್ ರಾಮಮೂರ್ತಿ - ಅವ್ರು ತಮಿಳಿನ ಶಂಕರ್ ಜೈಕಿಶನ್. ಜಿ.ಕೆ.ವೆಂಕಟೇಶ್ ಹೇಗೆ ನಮ್ಮ ಶಂಕರ್ ಜೈಕಿಶನ್ನೋ ಹಾಗೆ ಅವ್ರು ತಮಿಳಿನ ಶಂಕರ್ ಜೈಕಿಶನ್. ತಮಿಳಲ್ಲಿ ಅವರ ಹಾಡುಗಳು ಮಾತ್ರ ಅದ್ಭುತ. ಪಿ.ಬಿ.ಶ್ರೀನಿವಾಸ್ ಹಾಡಿದ್ದು ಕೆಲವು ಹಾಡಿದೆ. ಉದಾಹರಣೆಗೆ - ನಿನೈಪದೆಲ್ಲಾಂ ನಡಂದುವಿಟ್ಟಾಲ್ ದೈವಂ ಏದುಮಿಲ್ಲೈ ನಡಂದದಯೇ ನಿನೈತಿರುಂದಾಲ್ ಅಮೈದಿ ಎಂಡ್ರುಮಿಲ್ಲೈ. ಇಂಥ ಹಾಡೆಲ್ಲ ಇದೆ. ನಾನು ಈ ಬೇರೆ ಬೇರೆ ಭಾಷೆಯ ಹಾಡು ಸ್ವಲ್ಪ ಸ್ವಲ್ಪ ಯಾಕೆ ಕಲ್ತುಕೊಳ್ತೇನೆ ಅಂದ್ರೆ ನಮ್ಮ ಇಲಾಖೆಯ training ಇತ್ಯಾದಿಗಾಗಿ ಬೇರೆ ಕಡೆಗೆಲ್ಲ ಹೋಗ್ಲಿಕ್ಕಿರ್ತದೆ ಒಮ್ಮೊಮ್ಮೆ. ಆಗ ಬೇರೆ ಬೇರೆ ರಾಜ್ಯಗಳಿಂದ ನನ್ನ ಸ್ನೇಹಿತ್ರೆಲ್ಲ ಬರ್ತಾರೆ. ಅವ್ರ ಮುಂದೆ ಈ ಒಂದು ಸಣ್ಣ ಹಾಡು ಹಾಡಿದ್ರೆ ಅವ್ರಿಗೊಂದು ಥ್ರಿಲ್ ಆಗಿ ಬಿಡ್ತದೆ - ಕರ್ನಾಟಕದವನಾಗಿ ಇವ್ನು ತಮಿಳು ಹಾಡು ಹಾಡ್ತಾನೆ ಅಂತ.
ಚಿದಂಬರ ಅವರೇ. ಕೊನೆ ಹಂತಕ್ಕೆ ಬಂದಿದ್ದೇವೆ. ಆದ್ರೆ ಒಂದು ಪ್ರಶ್ನೆ ಕೇಳದೆ ಗತ್ಯಂತರ ಇಲ್ಲ. ಹೌದು, ನೀವು ಇಷ್ಟು ವಿವರಗಳನ್ನ ಹೇಗೆ ನೆನ್ಪಿಟ್ಟುಕೊಂಡಿರ್ತೀರಿ. ನಾವೂ ಎಲ್ಲ ಪದ್ಯಗಳನ್ನ ಬಾಲ್ಯದಲ್ಲಿ ಕೇಳಿರ್ತೀವಿ. ಆದ್ರೆ ಇಂಥವ್ರ ರಚನೆ, ಇಂಥವ್ರ ಸಂಗೀತ, ಇಂಥವ್ರು ಹಾಡಿದ್ದು , ಇದು ಮೊದಲಿನ ಹಾಡು, ಅದ್ರ ಬಗ್ಗೆ ಇನ್ಯಾರೋ ಹಿಂದಿಯವ್ರು ಹೀಗೆ ಹೇಳಿದ್ರು - ಇಷ್ಟೆಲ್ಲ ಹೇಗೆ ನೆನ್ಪಿಟ್ಟುಕೊಳ್ಯೀರಿ.
ಇದು ನಾನು ಕಲಿಬೇಕೂಂತ ಬರ್ದಾಗ್ಲೀ, ಓದಿ ಆಗ್ಲೀ ಕಲೀಲಿಲ್ಲ. ಅದು ನನ್ನ ಮನಸ್ಸಿನ ಆಳಕ್ಕೆ ಹೋಗಿದೆ ಆಗ್ಲೇ ,ಕೇಳುವಾಗ್ಲೇ. ಅಲ್ಲಿ ರೆಕಾರ್ಡ್ ಆಗಿಬಿಟ್ಟಿದೆ ಅದು. ನೀವು ಈಗ ಈ ಹಾಡೆಲ್ಲ ಹೇಗೆ ಕಂಪ್ಯೂಟರಲ್ಲಿ retrieve ಮಾಡಿದ್ರಿ, ಹಾಗೆ ಒಂದು pulse ಕೊಟ್ಟ ತಕ್ಷಣ automatic ಬಂದು ಬಿಡ್ತದೆ ಅದು.
ಅಂದ್ರೆ ನಿಮ್ಮ ಕಂಪ್ಯೂಟರ್ ಬಹಳ ಸುಸ್ಥಿತಿಯಲ್ಲಿದೆ ಅಂತ ಆಯ್ತು.
ಇಷ್ಟರ ವರೆಗೆ ಇದೆ ದೇವರ ದಯದಿಂದ.
ನಾವು ಕಾರ್ಯಕ್ರಮದ ಕೊನೆಯ ಹಂತಕ್ಕೆ ಬಂದು ನಿಂತಿದ್ದೇವೆ. ಈ ಬದುಕಿನಲ್ಲಿ ಪ್ರತೀಯೊಬ್ರಿಗೆ ಒಂದಲ್ಲ ಒಂದು ಹುಚ್ಚು - ಅಂದ್ರೆ ತೀವ್ರವಾದ ಸೆಳೆತ ಇದ್ದೇ ಇರ್ತದೆ. ಕೆಲವು ಜೀವನ್ಮುಖಿಯಾಗಿ ಅವರನ್ನು ಎತ್ತರಕ್ಕೆ ಕೊಂಡೊಯ್ತದೆ. ಇನ್ನು ಕೆಲವು ಬದುಕನ್ನು ರಾಡಿಗೊಳಿಸಿ ಪ್ರಪಾತಕ್ಕಿಳಿಸ್ತದೆ. ಜೀವನ್ಮುಖಿಯಾದ ಮೃದು ಮಧುರ ಆಸಕ್ತಿಯನ್ನು ಬೆಳೆಸಿಕೊಂಡಿರುವ ಚಿದಂಬರ ಕಾಕತ್ಕರ್ ಅವರ ಜೀವನೋತ್ಸಾಹ ಎಂದಿಗೂ ಕುಂದದಿರಲಿ ಅನ್ನುವುದು ಆಕಾಶವಾಣಿಯ ಮತ್ತು ನಮ್ಮ ಕೇಳುಗರ ಹಾರೈಕೆ.
********
ಕಾರ್ಯಕ್ರಮವನ್ನು ಮೆಚ್ಚಿದ ಕೇಳುಗರಿಂದ ಬಂದ ಕೆಲವು ಪತ್ರಗಳು.

ಭಗೀರಥ ಶ್ರಮವು ಎದ್ದು ಕಾಣುತ್ತಿದೆ. ನಿಮ್ಮ ಜೀವನೋತ್ಸಾಹವು ಹೀಗೇ ಉತ್ತುಂಗದಲ್ಲಿರಲಿ ಎಂದು ಮತ್ತೊಮ್ಮೆ ಹಾರೈಸುತ್ತಿದ್ದೇನೆ. - ನಾರಾಯಣಿ.
ReplyDeleteTo hear your " Dhati ondu Hadu yeradu" songs how to login? Please.....
ReplyDeleteNo need to login. Just wait till the black player shows up and click on the play button. If player does not show up open the blog in alternate browser.
DeleteRegards
Sir Liked Chandamama book. excited to read your blog... all the best sir.
ReplyDelete