Sunday 31 March 2019

ಬಂದಿಹ ನೋಡಿ ಭಲೇ ಭಲೇ ಗಾರುಡಿ



‘ಚಿತ್ರಗೀತೆಗಳನ್ನು ಕೇಳುತ್ತಿರುವಿರಿ.  ಇನ್ನು ಮುಂದೆ ಶ್ರೀಕೃಷ್ಣಗಾರುಡಿ  ಚಿತ್ರಕ್ಕಾಗಿ ಹುಣಸೂರು ಕೃಷ್ಣಮೂರ್ತಿ ರಚಿಸಿದ ಗೀತೆ.  ಸಂಗೀತ ನಿರ್ದೇಶಕರು ಪೆಂಡ್ಯಾಲ ನಾಗೇಶ್ವರ ರಾವ್.  ಹಾಡಿದವರು...’. ಇಷ್ಟನ್ನು ಕೇಳಿದರೆ ಸಾಕು. ಮುಂದಿನ ವಿವರಗಳ ಅಗತ್ಯವೇ ಇಲ್ಲದೆ  ಕಿವಿಗಳಿಗೆ ರಸದೌತಣ ಕಾದಿದೆ ಎಂದು ಖಾತ್ರಿಯಾಗುತ್ತಿತ್ತು.  ಕಾರಣ ಯಾವಾಗಲೂ ರೇಡಿಯೋದಲ್ಲಿ ಕೇಳಿಬರುತ್ತಿದ್ದುದು ಆ ಚಿತ್ರದ ಎರಡೇ ಹಾಡುಗಳು.  ಒಂದೋ ಬೊಂಬೆಯಾಟವಯ್ಯ.  ಇಲ್ಲವಾದರೆ ಭಲೇ ಭಲೇ ಗಾರುಡಿ.  ಎರಡೂ ಆನಂದ ಸಾಗರದಲ್ಲಿ ತೇಲಾಡಿಸುವಂಥ ಹಾಡುಗಳೇ.  ಬೊಂಬೆಯಾಟವಯ್ಯ ಹಾಡಿನ ಬಗ್ಗೆ  ‘ಮುಗಿಯುವ ವರೆಗೆ ಮಾತ್ರ...’ ಲೇಖನದಲ್ಲಿ ವಿವರಗಳಿವೆ.  ಈಗ ಈ  ಗಾರುಡಿಯ ಬಗ್ಗೆ ತಿಳಿದುಕೊಳ್ಳೋಣ.

1958ರಲ್ಲಿ ತೆರೆ ಕಂಡ ಶ್ರೀಕೃಷ್ಣಗಾರುಡಿ ಚಿತ್ರ ಮಹಾಭಾರತದ ಕಾಲ್ಪನಿಕ ಘಟನೆಗಳನ್ನಾಧರಿಸಿ ಬೆಳ್ಳಾವೆ ನರಹರಿ ಶಾಸ್ತ್ರಿಗಳು ರಚಿಸಿದ ಕಥೆಯನ್ನಾಧರಿಸಿತ್ತು. ಯುದ್ಧ ಮುಗಿದು ಧರ್ಮರಾಯನಿಗೆ ಪಟ್ಟಾಭಿಷೇಕ ಆದ ಮೇಲೆ ಕೃಷ್ಣನ ಸಲಹೆಯಂತೆ ನಕುಲ ಮಹಾಮಂತ್ರಿಯಾಗಿಯೂ ಸಹದೇವ ಉಪಮಂತ್ರಿಯಾಗಿಯೂ ನಿಯುಕ್ತರಾಗುತ್ತಾರೆ.  ಭೀಮನಿಗೆ ಗಜತುರಗ  ಚತುರಂಗಗಳ  ಮೇಲ್ವಿಚಾರಣೆಯನ್ನೂ ಅರ್ಜುನನಿಗೆ ಅತಿಥಿ ಸತ್ಕಾರ ಮತ್ತು ದೀನ ದಲಿತರ ಉದ್ಧಾರದ ಜವಾಬ್ದಾರಿಯನ್ನೂ ವಹಿಸಲಾಗುತ್ತದೆ.  ಪ್ರಮುಖ ಖಾತೆಗಳು ನಕುಲ ಸಹದೇವರ ಪಾಲಾದ ಕಾರಣ ಭೀಮಾರ್ಜುನರು ಬಂಡಾಯವೆದ್ದು ರಾಜ್ಯದಲ್ಲಿ ಪಾಲು ಕೇಳುತ್ತಾರೆ.  ಇದಕ್ಕೆ ಕಾರಣನಾದ ಕೃಷ್ಣನ ಮೇಲೂ ಸಿಟ್ಟಾಗುತ್ತಾರೆ.  ತನ್ನ ಶಿಷ್ಯ ಮಕರಂದ ಮತ್ತು ಹೆಣ್ಣು ರೂಪ ಧರಿಸಿದ ಮಾಯೆಯೊಂದಿಗೆ ಗಾರುಡಿಗನಾಗಿ ಬಂದ ಕೃಷ್ಣ ಹೇಗೆ ಅವರಿಬ್ಬರ ಸೊಕ್ಕು ಮುರಿಯುತ್ತಾನೆ ಎಂಬುದನ್ನು ಚಿತ್ರದಲ್ಲಿ ತೋರಿಸಲಾಗಿದೆ.  ಬಭ್ರುವಾಹನ ಚಿತ್ರದ್ದೂ ಇದನ್ನೇ ಹೋಲುವ ಥೀಮ್ ಅಲ್ಲವೇ.

ಸಹಾಯಕರೊಂದಿಗೆ ಗಾರುಡಿಯ ವೇಷದಲ್ಲಿ ಕೃಷ್ಣನ ಪ್ರವೇಶದ ಈ ಹಾಡನ್ನು ಹಾಡಿದವರು ಪೀಠಾಪುರಂ ನಾಗೇಶ್ವರ ರಾವ್, ಮಾಧವಪೆದ್ದಿ ಸತ್ಯಂ ಮತ್ತು ಎಸ್. ಜಾನಕಿ.  1957ರಲ್ಲೇ ಎಸ್. ಜಾನಕಿಯವರು ರಾಯರ ಸೊಸೆ ಚಿತ್ರದಲ್ಲಿ ತಾಳಲೆಂತು ಶೋಕಾವೇಗ ಎಂಬ ಹಾಡು ಹಾಡಿದ್ದರಾದರೂ ಅವರ ಹೆಸರು ಮೊದಲ ಬಾರಿ ಕನ್ನಡಿಗರ ನಾಲಿಗೆ ಮೇಲೆ ನಲಿದಾಡುವಂತಾದದ್ದು ಈ ಹಾಡಿನ ಮೂಲಕವೇ.  ಆದರೆ ಸಂಗೀತ ನಿರ್ದೇಶಕ ಪೆಂಡ್ಯಾಲ ನಾಗೇಶ್ವರ ರಾವ್  ಆ ಮೇಲೆ ಜಾನಕಿ ಅವರ ಧ್ವನಿಯನ್ನು ನನಗೆ ತಿಳಿದ ಮಟ್ಟಿಗೆ ಕನ್ನಡದಲ್ಲಿ ಬಳಸಿಕೊಂಡಿಲ್ಲ. ಈ ಚಿತ್ರದಲ್ಲಿ ಬೊಂಬೆಯಾಟವಯ್ಯಾ ಹಾಡಿದ ಪಿ.ಬಿ.ಶ್ರೀನಿವಾಸ್ ಅವರ ಧ್ವನಿಯೂ ಅವರ ಸಂಗೀತ ನಿರ್ದೇಶನದ ಮುಂದಿನ ಯಾವ ಕನ್ನಡ ಚಿತ್ರದಲ್ಲೂ ಕೇಳಿಸಲಿಲ್ಲ.  ಘಂಟಸಾಲ, ಪಿ.ಲೀಲ, ಪಿ.ಸುಶೀಲ ಮುಂತಾದವರನ್ನೇ ಅವರು ಹೆಚ್ಚು ಇಷ್ಟಪಡುತ್ತಿದ್ದರು.  ಎಸ್. ಜಾನಕಿ ಕೂಡ ಮುಂದೆ ಯಾವುದೇ ಕನ್ನಡ ಚಿತ್ರದಲ್ಲಿ ಪೀಠಾಪುರಂ ಅವರೊಂದಿಗಾಗಲೀ ಮಾಧವಪೆದ್ದಿ ಸತ್ಯಂ ಅವರೊಂದಿಗಾಗಲೀ ಹಾಡಿದಂತಿಲ್ಲ!

ಅಪ್ಪಟ ಬೀದಿ ಬದಿ ದೊಂಬರಾಟದವರ ಶೈಲಿಯಲ್ಲಿರುವ ಈ ಹಾಡಿನಲ್ಲಿ ಢೋಲಕ್, ಗೆಜ್ಜೆ, ಟಕ್ ಟಕ್ ಸದ್ದಿಗಾಗಿ ಮರದ ತುಂಡುಗಳು, ಜೋಡಿ ಕೊಳಲು ಮತ್ತು ಪುಂಗಿ ನಾದಕ್ಕಾಗಿ ಸೋಲೊವೊಕ್ಸನ್ನು ಮಾತ್ರ ಬಳಸಲಾಗಿದೆ.  ಎರಡನೇ ಮತ್ತು ನಾಲ್ಕನೇ interludeನಲ್ಲಿ ಕೇಳಿಸುವ  ಜೋಡಿ ಕೊಳಲುಗಳ ನಾದ ಮತ್ತು ಅದರ ನಂತರ ಬರುವ ‘ಧಿತ್ತೊಂ ತಾಕಿಟತಕ ಧಿತ್ತೊಂ ತಾಕಿಟತಕ ಧೀಂಕಿಟತಕ ತಾಕಿಟತಕ ತಾಕಿಟತಕ ತಾಕಿಟತಕ ಧೀಂ ತಕ ಧೀಂ ತಕ ಧೀಂ ತಕ ಧಿಂ’ ಎಂಬ ಢೋಲಕ್ ಉರುಳಿಕೆ ಅತಿ ಸುಂದರ.  ಈ ರೀತಿ ಮಿಂಚಿನ ವೇಗದಲ್ಲಿ  ಬೆರಳುಗಳನ್ನು ಕುಣಿಸಿದ ಆ ಅಜ್ಞಾತ ಕಲಾವಿದನಿಗೆ ಮೆಚ್ಚುಗೆ ಸಲ್ಲಲೇ ಬೇಕು. ಶಂಕರಾಭರಣ ರಾಗದ ಸ್ವರಗಳನ್ನು ಮುಖ್ಯವಾಗಿ ಹೊಂದಿರುವ ಈ ಹಾಡಿನಲ್ಲಿ ಕೆಲವೆಡೆ ಗ2 ಮತ್ತು ನಿ2 ಸ್ವರಗಳ ಸ್ಪರ್ಶ ಇದೆ.  ಭಲೆ ಭಲೆ ಎಂಬುದನ್ನು ಬಲೆ ಬಲೆ ಎಂದು ಉಚ್ಚರಿಸಿರುವುದು ಗ್ರಾಮ್ಯ ಶೈಲಿಯ ದ್ಯೋತಕ ಎಂದು ತಿಳಿದುಕೊಳ್ಳಬಹುದು.  ಪೀಠಾಪುರಂ ಮತ್ತು ಮಾಧವಪೆದ್ದಿ ಅವರು ಪ್ರತೀ ಸಲ ಗಾರುಡಿ ಎಂದೇ ಉಚ್ಚರಿಸಿದ್ದಾರಾದರೂ ಜಾನಕಿ ಅವರು ಅನೇಕ ಕಡೆ ‘ಗಾರುರಿ’ ಎಂದಂತೆ ಕೇಳಿಸುತ್ತದೆಯೇ.  ಹೆಡ್ ಫೋನಿನಲ್ಲಿ ಗಮನವಿಟ್ಟು ಆಲಿಸಿದಾಗ ನನಗೆ ಹಾಗನ್ನಿಸಿತು. ಅವರ ಮೊದಮೊದಲ ಹಾಡಾಗಿದ್ದು ತೆಲುಗಿನಲ್ಲಿ ಬರೆದುಕೊಂಡದ್ದರಿಂದ ಹೀಗಾಗಿರಬಹುದೇನೋ. ನೀವೂ ಸೂಕ್ಷ್ಮವಾಗಿ ಗಮನಿಸಿ.   ನಿಮಗೆ ಏನೆಂದು ಕೇಳಿಸಿತು  ಎಂದು ತಿಳಿಸಿ.

ಹುಣಸೂರು ಕೃಷ್ಣಮೂರ್ತಿ ನಿರ್ದೇಶನದ ಈ ಚಿತ್ರದಲ್ಲಿ ರಾಜಕುಮಾರ್, ನರಸಿಂಹ ರಾಜು, ರಾಮಚಂದ್ರ ಶಾಸ್ತ್ರಿ, ರಮಾದೇವಿ ಮತ್ತು ಒಂದು ಚಿಕ್ಕ ಪಾತ್ರದಲ್ಲಿ ಕಾಣಿಸಿಕೊಂಡ ವಾದಿರಾಜ್ ಬಿಟ್ಟರೆ ಉಳಿದ ಕಲಾವಿದರೆಲ್ಲ ಹೆಚ್ಚು ಚಿತ್ರಗಳಲ್ಲಿ ಕಾಣಿಸಿಕೊಂಡವರಲ್ಲ.  ಆದರೆ  ಸ್ಪಷ್ಟ ಉಚ್ಚಾರ ಗಮನಿಸಿದರೆ  ಅವರೆಲ್ಲ ರಂಗಭೂಮಿಯ ಹಿನ್ನೆಲೆ  ಇದ್ದವರಿರಬಹುದು ಅನ್ನಿಸುತ್ತದೆ.  ಯಾವಾಗಲೂ ಗಯ್ಯಾಳಿ ಪಾತ್ರದಲ್ಲೇ ಕಾಣಿಸಿಕೊಳ್ಳುವ ರಮಾದೇವಿ ಈ ಚಿತ್ರದಲ್ಲಿ ಕುಂತಿಯ ಪಾತ್ರ ವಹಿಸಿದ್ದು ವಿಶೇಷ.

ಚಿತ್ರದುದ್ದಕ್ಕೂ ಹಾಗೂ ವಿಶೇಷವಾಗಿ ಈ ಹಾಡಿನಲ್ಲಿ ನರಸಿಂಹರಾಜು ಪ್ರಮುಖ ಆಕರ್ಷಣೆ.  ಹಾಸ್ಯ ಕಲಾವಿದರ ಮೇಲೆ ಚಿತ್ರೀಕರಿಸಿದ ಬಹುತೇಕ ಹಾಡುಗಳು ಅತಿ ಜನಪ್ರಿಯವಾಗಿರುವುದು ಒಂದು ಗಮನಾರ್ಹ ಅಂಶ.  ಹಿಂದಿಯಲ್ಲೂ ಜಾನಿವಾಕರ್, ಮೆಹಮೂದ್ ಮುಂತಾದವರ ಹಾಡುಗಳು ಯಾವಾಗಲೂ ಸೂಪರ್ ಹಿಟ್.





ಭಲೇ ಭಲೇ ಗಾರುಡಿ
ಬರುತಿಹ ನೋಡಿ
ಕಲೆಗೂ ಕಲ್ಪನೆಗೂ ಸಿಲುಕದ ಗಾರುಡಿ
ಭಲೇ ಭಲೇ ಗಾರುಡಿ

ಕನಸಲಿ ಕಾಣದ ನೆನೆಸಲಿ ನೋಡದ
ಕಲಾಮಯ ನೋಟಗಳ ಕಾಣಲಿದೋ ಬನ್ನಿರಿ
ಭಲೇ ಭಲೇ ಗಾರುಡಿ

ಮನುಷನ ಕೋತಿಯ ಶುನಕನ ನಾತಿಯ
ಧರಾತಲಾ ಸ್ವರ್ಗವನು ಮಾಡುವ ಗುರುದೇವನು

ನಾಕವ ತೋರುವ ನರಕವ ತೋರುವ
ಮಹೇಂದ್ರನ ಕರೆತರುವ ಮೈಮರೆಸಿ ತೋರುವ
ಭಲೇ ಭಲೇ ಗಾರುಡಿ

ಪರಕಾಯ ಪ್ರವೇಶವೋ ಕಾಮರೂಪ ಧಾರಣವೋ
ದೂರವಸ್ತು ದರುಶನವೋ ಕೋರಿದರೆ ಕಾಣಿರಿ
ಸಿಡಿಲಿನ ಆರ್ಭಟ ಬಿಡಿಗಿನ ಭೋರ್ಭಟ
ಝಟಾಪಟಾ ಝೂಂತಕಟಾ ತೋರುವನು ಈ ಭಟ
ಭಲೇ ಭಲೇ ಗಾರುಡಿ

ಮುರಳಿಗಾನವೋ ಮೋಹನ ರಾಸವೋ
ವಿಶ್ವರೂಪ ದರುಶನವೋ ಕೇಳೀಗ ತೋರುವ
ಭಲೇ ಭಲೇ ಗಾರುಡಿ


5 comments:

  1. 1969 ರಲ್ಲಿ ಹೆಚ್.ಎಂ.ವಿ. ರೆಕಾರ್ಡ್ ಕಂಪನಿಯವರು1969ಕ್ಕಿಂತ ಹಳೆಚಿತ್ರಗಳ ೨ ಜನಪ್ರಿಯ ಗೀತೆಗಳನ್ನು 45rpm ರೆಕಾರ್ಡ್‌ಗಳಲ್ಲಿ ಮರುಬಿಡುಗಡೆ ಮಾಡಿದರು... ಅದಕ್ಕೂ ಮುನ್ನ ಎಲ್ಲ ಚಿತ್ರದ ಹಾಡುಗಳು 78rpmನ ಮಣ್ಣಿನ(ಶೆಲ್ಲಾಕ್)ರೆಕಾರ್ಡ್ ತಟ್ಟೆಗಳಲ್ಲಿ ದ್ವನಿಮುದ್ರಕೆ ಬರುತ್ತಿದ್ದವು.. ಆ ದಿನಗಳಲ್ಲಿ 78 rpm ರೆಕಾರ್ಡ್‌ಗಳಲ್ಲಿ (ಒಂದು ಪ್ಲೇಟ್‌ನಲ್ಲಿ ೨ ಹಾಡಿಗೆ ಮಾತ್ರ ಅವಕಾಶ) ಒಂದು ಚಿತ್ರದ ಎಲ್ಲಾ ಹಾಡುಗಳು ಬಿಡುಗಡೆಯಾಗುತಿತ್ತು ೧೯೬೮ರವೇಳೆಗೆ ಪ್ಲಾಸ್ಟಿಕ್ ನvinyl ರೆಕಾರ್ಡ್‌ಗಳ ಜನಪ್ರಿಯಗೊಂಡು 78rpm ನ ಮಣ್ಣಿನ ತಟ್ಟೆ ಬಳಕೆ ಅಪರೂಪವಾಯಿತು. ಕಾರಣ 78 rpm ರೆಕಾರ್ಡ್ ಬಳಸಿದರೆ ಗ್ರಾಮೋಫೋನ್ ನ ನೀಡಲ್(ಮುಳ್ಳು,stylus) ಬೇಗ ಹಾಳಾಗಿ ಬೇರೆ ರೆಕಾರ್ಡ್‌ಗಳು ಗಾಳಗುತ್ತಿದ್ದವು ಹಾಗೂ ದ್ವನಿಮುದ್ರಣದ ಅವದಿಯೂ ಕಡಿಮೆ..ಹಾಗಾಗಿ 45 rpm formate ರೆಕಾರ್ಡ್ಸ್‌ನ ಬಳಕೆ ಜನಪ್ರಿಯವಾದ ಕಾರಣ 1969 ಕ್ಕೂ ಮುನ್ನ ಬಿಡುಗಡೆಯಾದ ಎಲ್ಲಾ ಹಳೆಚಿತ್ರಗಳ ಎರೆಡೆರಡು ಹಾಡುಗಳುನ್ನ ಮಾತ್ರ 45rpm ರೆಕಾರ್ಡ್ಸ್‌ನಲ್ಲಿ ಬಿಡುಗಡೆಗೊಂಡವು ಆ ಎರಡು ಗೀತೆಗಳು ಮಾತ್ರವೆ ಹೆಚ್ಚು ಬಳಕೆಯಾದ್ದರಿಂದ (ಆಕಾಶವಾಣಿ ಕೂಡ ಈ ಎರಡೆ ಗೀತೆ ಹೆಚ್ಚು ಪ್ರಸಾರಮಾಡಿದ್ದರಿಂದ ..ಆ ಗೀತೆಗಳು ಮಾತ್ರ ಹೆಚ್ಚು ಜನಪ್ರಿಯಗೊಂಡವು.....೧೯೭೦ ರ ನಂತರದ ಚಿತ್ರದ ಎಲ್ಲ ಹಾಡುಗಳು ಪ್ಲಾಸ್ಟಿಕ್‌ನ 45rpm (ಒಂದುಚಿಕ್ಕ ಪ್ಲೇಟ್‌ನಲ್ಲಿ ಎರಡೂ ಬದಿ ೧೪ ನಿಮಿಷ ಅಂದರೆ ಗರಿಷ್ಠ ೪ ಹಾಡುಗಳಿಗೆ ಅವಕಾಶ) ಮುದ್ರಣವಾದ್ದರಿಂದ ಎಲ್ಲಾ ಗೀತೆಗಳು ಜನಪ್ರಿಯಗೊಂಡವು..ಆದರೆ ಹಿಂದಿಯ ಹಳೆ ಚಿತ್ರದ ಎಲ್ಲಾ ಹಾಡುಗಳು 33rpm Lp ರೆಕಾರ್ಡ್‌ನಲ್ಲಿ (lp ರೆಕಾರ್ಡ್ಸ್ ನ ಎರಡೂ ಬದಿಯಲ್ಲಿ ೧೨ ಹಾಡಿಗೆ ಅವಕಾಶವಿರುತ್ತೆ) ಬಿಡಗಡೆಯಾದವು

    ReplyDelete
    Replies
    1. ಮಾಹಿತಿಯುಕ್ತ ಪ್ರತಿಕ್ರಿಯೆಗಾಗಿ ಧನ್ಯವಾದಗಳು.

      Delete
    2. ಆ ಕಾಲದಲ್ಲಿ flexible rexin ನಲ್ಲಿ ಮುದ್ರಿಸಲ್ಪಟ್ಟ foldable ರೆಕಾರ್ಡ್ಸ್ ಕೂಡಾ ಬಿದುಗದೆಯಾಗಿದ್ದುವು. ಅಂತಹ ಎರಡು ಇಂಗ್ಲಿಷ್ ಹಾಡುಗಳ ರೆಕಾರ್ಡ್ಗಳು ನನ್ನ ಹತ್ತಿರ ಇದ್ದುವು. ಆ ರೆಕಾರ್ಡ್ ಕೇಳಬೇಕಾದರೆ ಅದರ ಅಡಿಯಲ್ಲಿ support ಗಾಗಿ ಇನ್ನೊಂದು ರೆಕಾರ್ಡ್ ಇಡಬೇಕಾಗುತ್ತಿತ್ತು.

      Delete
  2. ಎಂದಿನಂತೆಯೇ ಲೇಖನ ಬಹಳ ಚೆನ್ನಾಗಿದೆ ಸರ್. ನೀವು ಹಾಡಿನಲ್ಲಿ ಅಷ್ಟೊಂದು ಸೂಕ್ಷ್ಮಗಳನ್ನು ಹೇಗೆ ಗಮನಿಸುತ್ತೀರಿ?! ನನಗಂತೂ ಹಾಡು ಕೇಳುತ್ತಾ ಖುಷಿ ಪಡುವುದು ಮಾತ್ರ ಗೊತ್ತು! ಎಷ್ಟೋ ಬಾರಿ ಅದರ ಸಾಹಿತ್ಯದ ಕಡೆ ಕೂಡ ಗಮನ ಹರಿಯುವುದಿಲ್ಲ!!

    Kiran Surya(FB)

    ReplyDelete
  3. ಮತ್ತೊಂದು ಮಾಹಿತಿಪೂರ್ಣ ,ಸಂಗ್ರಹಯೋಗ್ಯ ಲೇಖನ! ಹಾಡುಗಳಲ್ಲಿನ ಸೂಕ್ಷ್ಮತೆಯನ್ನು ನಿಮ್ಮ ಹಾಗೆ ಎಳೆ ಎಳೆಯಾಗಿ ಬಿಡಿಸಿಡುವ ಕಲೆ ನಾ ಇದುವರೆಗೆ ಬೇರೆ ಯಾರಲ್ಲೂ ಕಂಡಿಲ್ಲ...ನಮೋ ನಮಃ ಸರ್

    Krishna Prasad (FB)

    ReplyDelete

Your valuable comments/suggestions are welcome