"ಹತ್ತೂವರೆಯಿಂದ ಮುಗಿಯುವ ವರೆಗೆ ಮಾತ್ರ. ಬೇಕಿದ್ದವರು ಬೇಕಿದ್ದರೆ ಮಾತ್ರ ಕೇಳಿ ಕುಡಿಯಿರಿ. ಏಲಕ್ಕಿ, ದ್ರಾಕ್ಷಿ, ಗೋಡಂಬಿಗಳನ್ನು ಹಾಕಿದ ರುಚಿಕರವಾದ ಗುಣಸಾಗರಿ ರಸಾಯನ .... ಬೊಂಬೆಯಾಟವಯ್ಯಾ ಬ್ರಹ್ಮಾಂಡವೇ ಆ ದೇವನಾಡುವ....". ಧರ್ಮಸ್ಥಳ ಸಮೀಪದ ಉಜಿರೆ ಆಸುಪಾಸಿನ ಯಾವ ಹಿರಿಯರೂ ಈ ಸಾಲುಗಳನ್ನು ಮರೆತಿರಲಾರರು. ಪತ್ರಿಕಾ ವಿತರಣೆ, ಕಾಫಿ, ತಂಪು ಪಾನೀಯ ಇತ್ಯಾದಿಗಳ ಜೊತೆಗೆ ಗ್ಯಾಸ್ ಲೈಟು ಬಾಡಿಗೆಗೆ ಕೊಡುವ ವ್ಯವಸ್ಥೆಯೂ ಇದ್ದುದರಿಂದ "ಲೈಟ್ ಭಟ್ರು" ಎಂದೇ ಖ್ಯಾತರಾದ ಉಜಿರೆಯ ಗೂಡಂಗಡಿಯೊಂದರ ಮಾಲೀಕ ಜನಾರ್ದನ ಭಟ್ಟರು ಗುಣಸಾಗರಿ ರಸಾಯನವೆಂಬ ಹೆಸರಲ್ಲಿ ಸಾಬಕ್ಕಿ ತಿಳಿ ಪಾಯಸವನ್ನು ಬಸ್ಸು ಪ್ರಯಾಣಿಕರಿಗೆ ಮಾರುತ್ತಿದ್ದ ಪರಿ ಇದು. ಕೃಷ್ಣ ಗಾರುಡಿ ಚಿತ್ರದ ಈ ಹಾಡಿಗೆ ಮನಸೋತೋ ಅಥವಾ ಗುಣಸಾಗರಿ ರಸಾಯನದ ಗುಣದಿಂದಲೋ ಅವರ ಕೈಯ ತಟ್ಟೆಯಲ್ಲಿದ್ದ ಲೋಟಗಳು ಕ್ಷಣಮಾತ್ರದಲ್ಲಿ ಖಾಲಿಯಾಗುತ್ತಿದ್ದುದಂತೂ ನಿಜ. ಅವರು ಈಗಿಲ್ಲವಾದರೂ ಈ ಹಾಡನ್ನು ಕೇಳಿದಾಗಲೆಲ್ಲ ರಸಾಯನವನ್ನು ಸವಿದ ಅನುಭವ ಇಂದಿಗೂ ಆಗುತ್ತದೆ.
ಪಿ.ಬಿ.ಎಸ್ Top Ten ನಲ್ಲಿ ಈ ಹಾಡಿನ ಬಗ್ಗೆ ಈಗಾಗಲೇ ಉಲ್ಲೇಖ ಆಗಿದ್ದರೂ ಇಂದು ಇದರ ಬಗ್ಗೆ ಇನ್ನೊಂದಿಷ್ಟು. ಇದುವರೆಗೆ ಬಂದ ನಾರದನ ಹಾಡುಗಳ ಪೈಕಿ ಇದಕ್ಕೆ ನಂಬರ್ ವನ್ ಸ್ಥಾನ. ಪಿ. ಬಿ. ಶ್ರೀನಿವಾಸ್ ಅವರ ಮಂದ್ರ ಸ್ಥಾಯಿಯ ಗಾಯನ ನಾರದನೊಡನೆ ಕೇಳುಗರನ್ನೂ ಮೋಡಗಳಲ್ಲಿ ತೇಲಾಡಿಸುತ್ತದೆ. "ನೀ ಸಾಕಿ ಸಲಹೆ ಸ್ವಾರ್ಥವೇನೋ" ಎಂಬಲ್ಲಿ ಬಿಳಿ ಒಂದು ಶ್ರುತಿಯ ಮಂದ್ರ ದೈವತವನ್ನು ಸ್ಪರ್ಶಿಸುವ ಭಾಗದಲ್ಲಿ ಪಿ.ಬಿ.ಎಸ್ ದನಿಯಲ್ಲಿನ ಜೀರು ಬಲು ಮಧುರ. ಎರಡನೇ ಚರಣದ ಆಲಾಪವಂತೂ ಮಧುರಾತಿಮಧುರ. ಈ ಹಾಡಿನ ಗಾನತಟ್ಟೆಯ ಆವೃತ್ತಿಯಲ್ಲಿ ಎರಡೇ ಚರಣಗಳಿದ್ದು ಚಿತ್ರದಲ್ಲಿ ಎರಡು ಬೇರೆ ಚರಣಗಳೊಂದಿಗೆ ಹಾಡು ಪುನರಾವರ್ತನೆಯಾಗುತ್ತದೆ. ಇದು ದರ್ಬಾರಿ ಕಾನಡಾ ರಾಗಾಧಾರಿತವಾದರೂ ಪುನರಾವರ್ತನೆಯಲ್ಲಿರುವ ಒಂದು ಚರಣ ಈ ರಾಗಕ್ಕೆ ಸಮೀಪವಾದ ಅಠಾಣಾದಲ್ಲಿದೆ. ಅತ್ಯಂತ ಕ್ಲಿಷ್ಟ ಸಂಗತಿಗಳನ್ನೊಳಗೊಂಡ ಈ ಹಾಡನ್ನು ಸಾಮಾನ್ಯವಾಗಿ ಯಾರೂ ವೇದಿಕೆಗಳಲ್ಲಿ ಹಾಡುವ ಸಾಹಸ ಮಾಡುವುದಿಲ್ಲ.
ಪೆಂಡ್ಯಾಲ ನಾಗೇಶ್ವರ ರಾವ್ ಸಂಗೀತವಿರುವ ಈ ಹಾಡಿನ ಸಾಹಿತ್ಯ ಹುಣಸೂರು ಕೃಷ್ಣಮೂರ್ತಿ ಅವರದ್ದು. ಇದರಲ್ಲಿ ಒಂದು ಕಡೆ ಕೇಳಿಸುವ "ವಳಮರ್ಮತೋದಯ...." ಎಂದರೆ ಏನೆಂದು ನನಗೆ ಬಹಳ ಸಮಯ ಅರ್ಥವಾಗುತ್ತಿರಲಿಲ್ಲ. ಬ್ರಹ್ಮಾಂಡನಾಯಕ ಮುಂತಾದವುಗಳಂತೆ ಇದೂ ಒಂದು ವಿಶೇಷಣವಿರಬಹುದೆಂದೇ ಅಂದುಕೊಂಡಿದ್ದೆ. ಕೊನೆಗೆ ಮಿತ್ರರೋರ್ವರು ಅದು "ಒಳ ಮರ್ಮ ತೋರೆಯಾ" ಎಂದು ಸ್ಪಷ್ಟಪಡಿಸಿದರು !
ಆಕಾಶವಾಣಿ ಮಂಗಳೂರು ಆರಂಭವಾದಾಗಲೇ ಅಲ್ಲಿಯ ಸಂಗ್ರಹ ಸೇರಿದ್ದ ಬೆರಳೆಣಿಕೆಯ ಹಳೆ ಹಾಡುಗಳಲ್ಲಿ ಇದೂ ಒಂದು. ಎರಡು ಚರಣಗಳ ಆ ಗಾನತಟ್ಟೆ ಅವೃತ್ತಿ ಈಗಲೂ ಅಲ್ಲಿಂದ ಒಮ್ಮೊಮ್ಮೆ ಕೇಳಿಬರುವುದಿದೆ. ಈಗ ಚಲನಚಿತ್ರದ ಧ್ವನಿವಾಹಿನಿಯಿಂದ ಪಡೆದ ನಾಲ್ಕೂ ಚರಣಗಳನ್ನು ಒಳಗೊಂಡ ಈ ಹಾಡಿನ ಇನ್ನೊಂದು ಆವೃತ್ತಿ ಎಫ್ ಎಂ ವಾಹಿನಿಗಳಲ್ಲಿ ಆಗಾಗ ಕೇಳಲು ಸಿಗುತ್ತದೆ. ಅಂತರ್ಜಾಲದ ವಿವಿಧ ತಾಣಗಳಲ್ಲೂ ಲಭ್ಯವಿದೆ. ಆದರೆ ಇದರಲ್ಲಿ "ಹಾಗೊಮ್ಮೆ ಹೀಗೊಮ್ಮೆ ಆಡಿಸಿ ತಾ ನಲಿವ" ಎಂಬ ಸಾಲಿನ "ಹಾಗೊಮ್ಮೆ". ಭಾಗವು ಲುಪ್ತವಾಗಿರುವುದು ರಸಭಂಗವುಂಟುಮಾಡುತ್ತದೆ. ನನ್ನ ಸಂಗ್ರಹದಲ್ಲಿದ್ದ ಗಾನತಟ್ಟೆ ಆವೃತ್ತಿಯಿಂದ ಪ್ಲಾಸ್ಟಿಕ್ ಸರ್ಜರಿ ಮಾಡಿ ಆ ಭಾಗವನ್ನು ಸರಿಪಡಿಸಿದ ಪೂರ್ತಿ ಹಾಡು ಸಾಹಿತ್ಯದೊಡನೆ ನಿಮಗಾಗಿ ಇಲ್ಲಿದೆ. ಇದರಲ್ಲಿ ಎಲ್ಲ ಕಡೆ ಬೊಂಬೆಯಾಟವಿದ್ದರೂ ಒಂದೆಡೆ ಮಾತ್ರ ಗೊಂಬೆಯಾಟ ಇದೆ. 1:37 ನಿಮಿಷದ ಸಮಯವನ್ನು ಗಮನವಿಟ್ಟು ಆಲಿಸಿ. ಅದರ ಮೊದಲು "ಹಾಗೊಮ್ಮೆ ಹೀಗೊಮ್ಮೆ ಆಡಿಸಿ ತಾ ನಲಿವ" ಸಾಲಿನಲ್ಲಿ(ಕೆಲವರು ಇದನ್ನು "ಆ ಗೊಂಬೆ ಈ ಗೊಂಬೆ" ಎಂದು ಕೇಳಿಸಿಕೊಳ್ಳುವುದೂ ಇದೆ!) ಎರಡು ಸಲ "ಗ"ಕಾರ ಇದ್ದುದರಿಂದ "ಕಪ್ಪು ಕುಂಕುಮ ಕೆಂಪು ಕುಂಕುಮ" ಪರಿಣಾಮದಿಂದ ಅಯಾಚಿತವಾಗಿ ಬೊಂಬೆಯು ಗೊಂಬೆ ಆಗಿರಬಹುದು! ಇದನ್ನು ಯಾರೂ ಗಮನಿಸಿಲ್ಲವೋ ಅಥವಾ ಅರ್ಥ ವ್ಯತ್ಯಾಸವೇನೂ ಇಲ್ಲದ್ದರಿಂದ ಹಾಗೇ ಇರಗೊಟ್ಟರೋ ತಿಳಿಯದು.
ಬೊಂಬೆಯಾಟವಯ್ಯ
ಬೊಂಬೆಯಾಟವಯ್ಯ ಬ್ರಹ್ಮಾಂಡವೇ
ಆ ದೇವನಾಡುವ ಬೊಂಬೆಯಾಟವಯ್ಯ
ಅಂಬುಜನಾಭನ ಅಂತ್ಯವಿಲ್ಲದಾತನ
ಆ ದೇವನಾಡುವ ಬೊಂಬೆಯಾಟವಯ್ಯ
ಅಂಬುಜನಾಭನ ಅಂತ್ಯವಿಲ್ಲದಾತನ
ತುಂಬು ಮಾಯವಯ್ಯಾ ಈ ಲೀಲೆಯ
ಬೊಂಬೆಯಾಟವಯ್ಯ
ಜಗವ ಸೃಜಿಸಿ ಗತಿ ಸೂತ್ರವನಾಡಿಸಿ
ನಗು ನಗುತಾ ಕುಣಿಸಿ ಮಾಯೆ ಬೀಸಿ
ರಾಗದ ಭೋಗದ ಉರಿಯೊಳು ನಿಲ್ಲಿಸಿ
ಹಾಗೊಮ್ಮೆ ಹೀಗೊಮ್ಮೆ ಆಡಿಸಿ ತಾ ನಲಿವ
ಹಾಗೊಮ್ಮೆ ಹೀಗೊಮ್ಮೆ ಆಡಿಸಿ ತಾ ನಲಿವ
ಬೊಂಬೆಯಾಟವಯ್ಯ
ನೀ ಸಾಕಿ ಸಲಹೆ ಸ್ವಾರ್ಥವೇನೋ
ನೀ ಕಾಡಿ ಕನಲೆ ಆಂತರ್ಯವೇನೋ
ತಿಳಿ ಹೇಳೆಯಾ ಒಳ ಮರ್ಮ ತೋರೆಯಾ
ತಿಳಿ ಹೇಳೆಯಾ ಒಳ ಮರ್ಮ ತೋರೆಯಾ
ನಳಿನಾಕ್ಷ ನಿನ್ನಯ ಸಂಕಲ್ಪವೇನಯ್ಯ
ಬೊಂಬೆಯಾಟವಯ್ಯ
ನಿನ್ನವರ ಸ್ಥಿತಿ ಗತಿ ನೆಲೆಯಿಲ್ಲದಾಗೆ
ನಿನಗೆ ಸಮ್ಮತವೆ ಈ ರೀತಿ ಮೌನ
ಕಿವಿಗೊಟ್ಟು ದಯವಿಟ್ಟು ಪೊರೆಯೊ ಮಹಾರಾಯ
ಅವತಾರಮೂರ್ತಿ ಇನ್ನೇಕಯ್ಯ ಈ ಶಾಂತಿ
ಅವತಾರಮೂರ್ತಿ ಇನ್ನೇಕಯ್ಯ ಈ ಶಾಂತಿ
ಬೊಂಬೆಯಾಟವಯ್ಯ
ಅಭಿಮಾನ ನೀಗಿಸಿ ಅರಿವನು ತೋರಿಸಿ
ಅಂಧತೆ ಕಳೆವಂಥ ಅಖಿಲಾಂಡ ನಾಯಕ
ವಿರಸವೊ ಸರಸವೊ ಸಾಕೋ ಸಾಕಯ್ಯ
ಕರುಣಿಸೊ ಜೀಯ ಸುರನುತ ಚಿನ್ಮಯ
ಬೊಂಬೆಯಾಟವಯ್ಯ
ತೆಲುಗು ಅವತರಣಿಕೆ
ಈ ಚಿತ್ರವು ಕೃಷ್ಣ ಗಾರಡಿ ಎಂಬ ಹೆಸರಲ್ಲಿ ತೆಲುಗಿನಲ್ಲಿಯೂ ತಯಾರಾಗಿದ್ದು ಬೊಂಬೆಯಾಟವಯ್ಯ ಹಾಡು ಅದರಲ್ಲಿ ಎಂತ ಘನುಡವಯ್ಯ ಆಗಿದೆ. ಪಿ.ಬಿ.ಶ್ರೀನಿವಾಸ್ ಅವರೇ ಹಾಡಿದ್ದಾರೆ. ಬಹಳ ಹಿಂದೆ ಎಂದೋ ರೇಡಿಯೊದಲ್ಲಿ ಒಮ್ಮೆ ಇದನ್ನು ಕೇಳಿದ ನೆನಪಿತ್ತು. ಹೋಲಿಕೆಗಾಗಿ ಇಲ್ಲಿ ಅದನ್ನು ದಾಖಲಿಸಬೇಕೆಂದು ಹುಡುಕಾಡಿದರೂ ಇದು ಸುಲಭದಲ್ಲಿ ಸಿಗಲಿಲ್ಲ. ಛಲಬಿಡದ ತ್ರಿವಿಕ್ರಮನಂತೆ ಗೊತ್ತಿರುವ ವರಸೆಗಳನ್ನೆಲ್ಲ ಉಪಯೋಗಿಸಿ ಅಂತರ್ಜಾಲ ಸಾಗರವನ್ನು ಜಾಲಾಡಿದಾಗ ಕೊನೆಗೂ ಸಿಕ್ಕಿಯೇ ಬಿಟ್ಟಿತು. ಹಾಡು ಮಾತ್ರವಲ್ಲ ಜೊತೆಗೆ ಪದ್ಯಾವಳಿ ಕೂಡ ! ಸಾಹಿತ್ಯ ಒಂದು ಹೊರತು ಪಡಿಸಿ ಹಿನ್ನೆಲೆ ಸಂಗೀತ, ವಾದ್ಯಗಳ ನುಡಿಸುವಿಕೆ, ಆಲಾಪ ಎಲ್ಲದರಲ್ಲೂ ಕನ್ನಡ ಹಾಡಿನ ಪ್ರತಿರೂಪ ಆಗಿರುವ ಇದನ್ನು ಕೇಳಿ Multi Track, Cut and Paste ಯಾವುದೂ ಇಲ್ಲದ ಅಂದಿನ ಕಾಲದಲ್ಲಿ ಕಲಾವಿದರು ಧ್ವನಿಮುದ್ರಣಕ್ಕೆ ಮುನ್ನ ಎಷ್ಟೊಂದು ಅಭ್ಯಾಸ ನಡೆಸುತ್ತಿದ್ದರು, ಎಷ್ಟೊಂದು ಶ್ರಮ ವಹಿಸಿ ಪರಿಪೂರ್ಣತೆಗೆ ಪ್ರಾಧಾನ್ಯ ನೀಡುತ್ತಿದ್ದರು ಎನ್ನುವುದನ್ನು ಊಹಿಸಬಹುದು.
ತೆಲುಗು ಅವತರಣಿಕೆ
ಈ ಚಿತ್ರವು ಕೃಷ್ಣ ಗಾರಡಿ ಎಂಬ ಹೆಸರಲ್ಲಿ ತೆಲುಗಿನಲ್ಲಿಯೂ ತಯಾರಾಗಿದ್ದು ಬೊಂಬೆಯಾಟವಯ್ಯ ಹಾಡು ಅದರಲ್ಲಿ ಎಂತ ಘನುಡವಯ್ಯ ಆಗಿದೆ. ಪಿ.ಬಿ.ಶ್ರೀನಿವಾಸ್ ಅವರೇ ಹಾಡಿದ್ದಾರೆ. ಬಹಳ ಹಿಂದೆ ಎಂದೋ ರೇಡಿಯೊದಲ್ಲಿ ಒಮ್ಮೆ ಇದನ್ನು ಕೇಳಿದ ನೆನಪಿತ್ತು. ಹೋಲಿಕೆಗಾಗಿ ಇಲ್ಲಿ ಅದನ್ನು ದಾಖಲಿಸಬೇಕೆಂದು ಹುಡುಕಾಡಿದರೂ ಇದು ಸುಲಭದಲ್ಲಿ ಸಿಗಲಿಲ್ಲ. ಛಲಬಿಡದ ತ್ರಿವಿಕ್ರಮನಂತೆ ಗೊತ್ತಿರುವ ವರಸೆಗಳನ್ನೆಲ್ಲ ಉಪಯೋಗಿಸಿ ಅಂತರ್ಜಾಲ ಸಾಗರವನ್ನು ಜಾಲಾಡಿದಾಗ ಕೊನೆಗೂ ಸಿಕ್ಕಿಯೇ ಬಿಟ್ಟಿತು. ಹಾಡು ಮಾತ್ರವಲ್ಲ ಜೊತೆಗೆ ಪದ್ಯಾವಳಿ ಕೂಡ ! ಸಾಹಿತ್ಯ ಒಂದು ಹೊರತು ಪಡಿಸಿ ಹಿನ್ನೆಲೆ ಸಂಗೀತ, ವಾದ್ಯಗಳ ನುಡಿಸುವಿಕೆ, ಆಲಾಪ ಎಲ್ಲದರಲ್ಲೂ ಕನ್ನಡ ಹಾಡಿನ ಪ್ರತಿರೂಪ ಆಗಿರುವ ಇದನ್ನು ಕೇಳಿ Multi Track, Cut and Paste ಯಾವುದೂ ಇಲ್ಲದ ಅಂದಿನ ಕಾಲದಲ್ಲಿ ಕಲಾವಿದರು ಧ್ವನಿಮುದ್ರಣಕ್ಕೆ ಮುನ್ನ ಎಷ್ಟೊಂದು ಅಭ್ಯಾಸ ನಡೆಸುತ್ತಿದ್ದರು, ಎಷ್ಟೊಂದು ಶ್ರಮ ವಹಿಸಿ ಪರಿಪೂರ್ಣತೆಗೆ ಪ್ರಾಧಾನ್ಯ ನೀಡುತ್ತಿದ್ದರು ಎನ್ನುವುದನ್ನು ಊಹಿಸಬಹುದು.
ಈ ಹಾಡನ್ನು ಸಮಾರಂಭವೊಂದರಲ್ಲಿ ನಾನು ನುಡಿಸಿದ್ದು ಹೀಗೆ.
"tiLi hELayya oLa marma torayya " endirabeku. Aaga artha, praasa erdu sari hoMduttade.
ReplyDeleteAnalysis and observations are superb. ಒಂದೆರಡು ಕಡೆ ಘಂಟಸಾಲರ ದ್ವನಿ ತರಹ ಅನಿಸುತ್ತದೆ. (ನನ್ನ ಅಮೆಚೂರ್ ಕಿವಿಗಳಿಗೆ). ಇದು ಸ್ವಾಭಾವಿಕವೋ ಅಥವಾ ಪ್ರಯತ್ನಪುರ್ವಕವೋ ಗೊತ್ತಿಲ್ಲ. I may be wrong.... But that doesn't take anything away from PBS ದೈತ್ಯ ಪ್ರತಿಭೆ !!!
ReplyDelete- ವಿನೋದ್ ಫಡ್ಕೆ- Facebook
ನಾನು ಸಹ ಪಿ ಬಿ ಅವರ ಉತ್ಕಟ ಅಭಿಮಾನಿ
ReplyDeleteಬೊಂಬೆಯಾಟವಯ್ಯ ಎಸ್ ಕೆ ಕರೀಂ ಖಾನ್ ಅವರ ಅಪೂರ್ವ ರಚನೆ