Tuesday 5 March 2019

ಕನ್ನಡ ಚಿತ್ರ ಸಂಗೀತದ ಮೇಲೆ ಹಿಂದಿಯ ಪ್ರಭಾವ


ಹಿರಿಯಕ್ಕನ ಚಾಳಿ ಮನೆಮಂದಿಗೆಲ್ಲ ಅನ್ನುತ್ತಾರೆ.  ಭಾರತೀಯ ಚಿತ್ರರಂಗಕ್ಕೆ ಹಿಂದಿಯೇ ಹಿರಿಯಕ್ಕ ಏಕೆಂದರೆ 1931ರ ಮಾರ್ಚ್ ತಿಂಗಳಲ್ಲಿ ಪ್ರದರ್ಶಿತವಾದ ಆಲಂ ಆರಾ ಎಂಬ ಮಾತನಾಡುವ ಹಾಡುವ ಹಿಂದಿ ಚಿತ್ರದೊಂದಿಗೆ ಭಾರತದಲ್ಲಿ ಟಾಕಿ ಸಿನಿಮಾಗಳ ಯುಗ ಆರಂಭವಾದದ್ದು.  ಅದೇ ವರ್ಷ ಅಕ್ಟೋಬರ್ ತಿಂಗಳಲ್ಲಿ ತಮಿಳು ಚಿತ್ರ ಕಾಳಿದಾಸ ತೆರೆ ಕಂಡಿತು. ಮರು ವರ್ಷ ಅಂದರೆ 1932ರಲ್ಲಿ ತೆಲುಗಿನ ಭಕ್ತ ಪ್ರಹ್ಲಾದ ಬಂತು.  ಕನ್ನಡವೂ ಹೆಚ್ಚೇನೂ ಹಿಂದುಳಿಯದೆ 1934ರಲ್ಲಿ ಸತಿ ಸುಲೋಚನ ಚಿತ್ರವನ್ನು ತೆರೆಗಿತ್ತು ನಾನೂ ನಿಮ್ಮೊಂದಿಗಿದ್ದೇನೆ ಅಂದಿತು.  ಕೊನೆಯದಾಗಿ ಬಾಲನ್ ಎಂಬ ಚಿತ್ರದೊಂದಿಗೆ ಮಲಯಾಳಂ ಕೂಡ ಈ ಪಟ್ಟಿಗೆ ಸೇರ್ಪಡೆಯಾಯಿತು. ಹೀಗಾಗಿ ಹಿರಿಯಕ್ಕ ಹಿಂದಿ ಚಿತ್ರಸಂಗೀತದ ಛಾಯೆ ಉಳಿದ ಭಾಷೆಗಳ ಮೇಲೆ ಬಿದ್ದುದರಲ್ಲಿ ಆಶ್ಚರ್ಯವೇನೂ ಇಲ್ಲ.  ಸಹಜವಾಗಿಯೇ ಹಿಂದಿ ಸಿನೆಮಾ ಆರಂಭಿಸಿದ ಪಲ್ಲವಿ, ಎರಡು ಚರಣಗಳ ಮೂರು ನಿಮಿಷದ ಹಾಡುಗಳ ಪರಂಪರೆಯನ್ನು ಇತರ ಭಾಷೆಗಳು ಅನುಕರಿಸಿದವು.  ಅಲ್ಲಿ ಮೊದಲು ನಟರೇ ಹಾಡುತ್ತಿದ್ದು ನಂತರ ಹಿನ್ನೆಲೆ ಗಾಯನ ಆರಂಭ ಆದಂತೆ ಇಲ್ಲೂ ಆಯಿತು. ಮೊದಲು ಅತ್ಯಂತ ಸರಳ ರೂಪದಲ್ಲಿದ್ದು ಕ್ರಮೇಣ ಅಸಂಖ್ಯ ವಾದ್ಯಗಳ ಸಮ್ಮಿಲನದ ಆರ್ಕೆಷ್ಟ್ರೇಶನ್; ಶಾಸ್ತ್ರೀಯ, ಜಾನಪದ, ಪಾಶ್ಚಾತ್ಯ, ಅರೇಬಿಕ್ ಸಂಗೀತದ ಸಮ್ಮಿಶ್ರಣ   ಇತ್ಯಾದಿ ಹಿಂದಿಯಲ್ಲಿ  ಆಗತೊಡಗಿದಾಗ  ಇತರ ಭಾಷೆಗಳ ಮೇಲೂ ಇದರ ಪರಿಣಾಮ ಗೋಚರಿಸತೊಡಗಿತು.  ಆದರೆ ತಮಿಳು, ತೆಲುಗು ಸಿನಿಮಾ ಸಂಗೀತದಲ್ಲಿ  ಆದಷ್ಟು ಕ್ಷಿಪ್ರಗತಿಯಲ್ಲಿ ಈ updation  ಕನ್ನಡದಲ್ಲಿ ಆಗಲಿಲ್ಲ.  ಸುಮಾರು 1950ರ ದಶಕದ ಆರಂಭದ ವರೆಗೆ ಕನ್ನಡ ಚಿತ್ರ ಸಂಗೀತ ಶಾಸ್ತ್ರೀಯ - ರಂಗಸಂಗೀತದ ಚೌಕಟ್ಟಿನಲ್ಲೇ ಮುಂದುವರಿಯಿತು.

1951ರಲ್ಲಿ ಮಹಾತ್ಮಾ ಪಿಕ್ಚರ್ಸ್ ತಯಾರಿಸಿದ ಜಗನ್ಮೋಹಿನಿಯ ಮೂಲಕ ಹಿಂದಿಯ ಜನಪ್ರಿಯ  ಹಾಡುಗಳ ಧಾಟಿಗಳನ್ನು ಯಥಾವತ್ ಕನ್ನಡದಲ್ಲಿ ಬಳಸುವ ಪರಿಪಾಠ ಆರಂಭವಾಯಿತು.  ಅಷ್ಟರಲ್ಲಿ ಹಿಂದಿ ಸಿನಿಮಾ ಹಾಡುಗಳು ರೇಡಿಯೋ ಸಿಲೋನ್ ಮುಖಾಂತರ ಆ ಸಿನಿಮಾಗಳನ್ನು ನೋಡದಿದ್ದವರ ಬಾಯಲ್ಲೂ ನಲಿದಾಡತೊಡಗಿದ್ದವು.  ಈ ಜನಪ್ರಿಯತೆಯನ್ನು ಏಕೆ encash ಮಾಡಿಕೊಳ್ಳಬಾರದು ಎಂಬ ಯೋಚನೆ  ನಿರ್ಮಾಪಕರಿಗೆ ಬಂದಿರಬಹುದು.  ಅವರ ಯೋಚನೆ ನಿಜ ಕೂಡ ಆಯಿತು.  ಪಿ.ಶಾಮಣ್ಣ ಅವರ ನಿರ್ವಹಣೆಯಲ್ಲಿ ಬಹುತೇಕ ಹಿಂದಿ ಧಾಟಿಗಳನ್ನೇ ಆಧರಿಸಿದ್ದ 12 ಹಾಡುಗಳನ್ನು ಹೊಂದಿದ್ದ ಆ ಚಿತ್ರ ಕನ್ನಡದ ಮೊದಲ block buster ಎನಿಸಿತು.  ಅವುಗಳ ಪೈಕಿ ಮಹಲ್ ಚಿತ್ರದ ಆಯೇಗಾ ಆಯೇಗಾ ಧಾಟಿಯಲ್ಲಿದ್ದ ಎಂದೋ ನಿನ್ನ ದರುಶನ  ಎಷ್ಟು ಜನಪ್ರಿಯವಾಯಿತೆಂದರೆ ಈ ಹಾಡೇ ಮೂಲ,  ಮಹಲ್ ಚಿತ್ರದಲ್ಲಿರುವುದು ಅದರ ಕಾಪಿ ಎಂದು ಕೆಲವರು ಅನ್ನುತ್ತಿದ್ದರಂತೆ! 50ರ ದಶಕದ ಕೊನೆವರೆಗೂ ಮಹಾತ್ಮಾ ಸಂಸ್ಥೆಯ ಚಿತ್ರಗಳಲ್ಲಿ  ಹೆಚ್ಚಾಗಿ ಹಿಂದಿ ಧಾಟಿಗಳೇ ಇರುತ್ತಿದ್ದವು.  ಇತರ ಕೆಲ ನಿರ್ಮಾಪಕರೂ ಈ ತಂತ್ರವನ್ನು ಅನುಸರಿಸಿದರು.

ಆದರೆ ಈ ನಡುವೆ  1953ರ ಸೌಭಾಗ್ಯಲಕ್ಷ್ಮಿ ಮೂಲಕ ಬಂದ ರಾಜನ್-ನಾಗೇಂದ್ರ,  1955ರಲ್ಲಿ ಸೋದರಿ ಮೂಲಕ ಬಂದ ಜಿ.ಕೆ. ವೆಂಕಟೇಶ್, ಶ್ರೀ ರಾಮ ಪೂಜಾ ಮೂಲಕ  ಬಂದ ವಿಜಯಭಾಸ್ಕರ್,  ಶಿವಶರಣೆ ನಂಬೆಕ್ಕ ಮೂಲಕ ಬಂದ ಟಿ.ಜಿ.ಲಿಂಗಪ್ಪ ಈ ಪದ್ಧತಿಗೆ ಸಡ್ಡು ಹೊಡೆದು ಇತರ ಭಾಷೆಗಳಿಗೇನೂ ಕಮ್ಮಿ ಇಲ್ಲದಂಥ ಆಕರ್ಷಕ ಧಾಟಿಗಳನ್ನು ಸೃಷ್ಟಿಸಿ ಸ್ವಂತಿಕೆ ಮೆರೆಯತೊಡಗಿದರು. ಆದರೂ ರಾಜನ್-ನಾಗೇಂದ್ರ ಮೊದಲ ಚಿತ್ರದಲ್ಲಿ ಬಹುಶ: ನಿರ್ಮಾಕರ ಒತ್ತಾಯಕ್ಕೆ ಮಣಿದು ಕನಸಲ್ಲಿ ಒಬ್ಬ ಕಳ್ಳ ಬಂದ ಎಂಬ ಹಾಡಿಗೆ ಆವಾರಾ ಚಿತ್ರದ ಧಾಟಿ ಬಳಸಬೇಕಾಯಿತು.  ಹಿಂದಿಯಿಂದ ಕನ್ನಡಕ್ಕೆ ಡಬ್ ಆದ ವೀರ ಜಬಕ್, ಜಿಂಬೊ ನಗರ ಪ್ರವೇಶ, ಸಂಪೂರ್ಣ ರಾಮಾಯಣ  ಮುಂತಾದ  ಚಿತ್ರಗಳಿಗೆ ವಿಜಯಭಾಸ್ಕರ್ ಕೂಡ ಮೂಲ ಹಿಂದಿ ಧಾಟಿಗಳಲ್ಲಿ ಸಂಗೀತ ನಿರ್ವಹಣೆ ಮಾಡಬೇಕಾಯಿತು.  ಉಳಿದಂತೆ ಇವರೆಲ್ಲ ಇತರ ಭಾಷೆಗಳವರೂ ಮೂಗಿನ ಮೇಲೆ ಬೆರಳಿಡುವಂಥ creativity ತೋರಿಸುತ್ತಾ ಹೋದರು.

ಆದರೆ ಎಷ್ಟು ಒಳ್ಳೆಯ ಕೊಡೆಯಾದರೇನು.  ಜಡಿ ಮಳೆಗೆ ಕೊಂಚವಾದರೂ ತೇವ ಒಳಗೆ ಬರದಿದ್ದೀತೇ. ಮಾಧುರ್ಯ ಪ್ರಪಂಚವನ್ನು ಆಳುತ್ತಿದ್ದ ಹಿಂದಿ ಸಿನಿಮಾ ಸಂಗೀತದ ಪ್ರಭಾವದಿಂದ ಸಂಪೂರ್ಣ ಹೊರತಾಗಲು ಕನ್ನಡ ಚಿತ್ರಗಳಿಗೆ ಸಾಧ್ಯವಾಗಲಿಲ್ಲ. ನೇರ ಹಾಡುಗಳ ನಕಲು ಅಲ್ಲದಿದ್ದರೂ ಯಾವುದಾದರೂ ಒಂದು ರೂಪದಲ್ಲಿ ಅದರ ಛಾಯೆ ಇಲ್ಲಿ ಕಾಣಿಸುತ್ತಲೇ ಬಂತು.

ಮೊದಲ ತೇದಿ ಚಿತ್ರದ ಒಂದರಿಂದ ಇಪ್ಪತ್ತೊಂದರ ವರೆಗೆ ಎಂಬ ಹಾಡಿಗೆ ಕಿಶೋರ್ ಕುಮಾರನ ಖುಶ್ ಹೈ ಜಮಾನಾ ಆಜ್ ಪಹಲೀ ತಾರೀಕ್ ಹೈ ಸ್ಪೂರ್ತಿ.  ಪಿ.ಬಿ. ಶ್ರೀನಿವಾಸ್  ಸ್ವತಃ ತೆರೆಯ ಮೇಲೆ ಕಾಣಿಸಿಕೊಂಡು ಅನಾಥ ಮಕ್ಕಳನ್ನು ಮುನ್ನಡೆಸುತ್ತಾ ಹಾಡಿದ್ದ ತೂಗು ದೀಪ ಚಿತ್ರದ ನಿಮ್ಮ ಮುದ್ದಿನ ಕಂದ ನಾವು ಹಾಡು ಮೂಡಿ ಬರಲು  ಬೂಟ್ ಪಾಲಿಶ್ ಚಿತ್ರದ ತುಮ್ಹಾರೆ ಹೈಂ ತುಮ್  ಸೆ ದುವಾ ಮಾಂಗ್‌ತೇ ಹೈಂ ಹಾಡಿನ ದೃಶ್ಯ ಕಾರಣವಂತೆ. ಕಣ್ತೆರೆದು ನೋಡು ಚಿತ್ರದಲ್ಲಿ ಸ್ಟ್ರೀಟ್ ಸಿಂಗರ್ ಗೋಪುವಿನ mentor ದಾಸಣ್ಣನ ಪಾತ್ರದ ಬಾಲಣ್ಣ ಹೇಳುವ ‘ನಿನ್ನ ಹಾಡೇ ಇಷ್ಟು ರಂಗು ಕಟ್ಟಿದೆ ಅಂದ ಮೇಲೆ  ಆ ರಫಿ ಹಾಡಿದಂಥದ್ದು ಒಂದು ಎತ್ತಿ ನೋಡು. ದೇವ್ರು ತಬ್ಬಿಬ್ಬಾಗಿ ಬಗ್ಗಿಸಿ ಬಿಡ್ತಾನೆ ಭಂಡಾರಾನ.’ ಎಂಬ ಡಯಲಾಗ್ ಒಂದಿದೆ.  ನಾಗರಹಾವು ಸಿನಿಮಾದಲ್ಲಿ ಅಲಮೇಲುವನ್ನು ಜಲೀಲ್ ಚುಡಾಯಿಸಿವುದು ಆರಾಧನಾ ಚಿತ್ರದ ಮೇರೆ ಸಪ್‌ನೋಂಕಿ ರಾನಿ ಹಾಡಿನಿಂದಲ್ಲವೇ.  ಆ ದೃಶ್ಯದ ಹಿನ್ನೆಲೆಯಲ್ಲಿ ಏಕ್ ನಾರಿ ಏಕ್ ಬ್ರಹ್ಮಚಾರಿ ಚಿತ್ರದ ಪೋಸ್ಟರ್ ಕಾಣಿಸುವುದನ್ನೂ ಗಮನಿಸಬಹುದು.  ಕುಳ್ಳ ಏಜಂಟ್ 000 ಚಿತ್ರದ ಸಿಂಗಾಪುರಿಂದ ಬಂದೆ ಹಾಡಿನ ದೃಶ್ಯದಲ್ಲಿ  ದ್ವಾರಕೀಶ್ ಮೇರಾ ನಾಮ್ ಜೋಕರ್‌ನ ರಾಜ್‌ಕಪೂರನನ್ನು ಮತ್ತು ಜ್ಯೋತಿಲಕ್ಷ್ಮಿ ಚೋರಿ ಚೋರಿ ಚಿತ್ರದ ಜಹಾಂ ಮೆಂ ಜಾತಿ ಹೂಂ ಹಾಡಿನ ನರ್ಗಿಸಳನ್ನು ನಕಲು ಮಾಡುತ್ತಾರೆ.  ಬಿಳಿ ಹೆಂಡ್ತಿಯ ರಂಗೇನ ಹಳ್ಳಿಯಾಗೆ ಹಾಡಿನ ಆರಂಭದಲ್ಲಿ ಇರುವ ಹಾಲ್ಲಿಯಲ್ಲಮ್ಮ ಹಳ್ಳಿ, ಹಳ್ಳಿ ಎನ್ನುವ ಸಾಲು ಮಿಲನ್ ಚಿತ್ರದ ಸಾವನ್ ಕಾ ಮಹೀನಾ ಹಾಡಿನ ಅರೇ ಬಾಬಾ ಶೋರ್ ನಹೀಂ ಸೋರ್, ಸೋರ್ ಎನ್ನುವುದರ ಪ್ರತಿಬಿಂಬ. ಬರೆದೆ ನೀನು ನಿನ್ನ ಹೆಸರ ನನ್ನ ಬಾಳ ಪುಟದಲಿ ಎಂಬುದು ಹಿಂದಿಯ ಕೊರಾ ಕಾಗಜ್ ಥಾ ಯೆ ಮನ್ ಮೇರಾ ಲಿಖ್ ಕಿಯಾ ನಾಮ್ ಇಸ್ ಪೆ ತೇರಾದ ಇನ್ನೊಂದು ರೂಪ. ಎರಡು ಕನಸು ಚಿತ್ರದ ಬಾಡಿ ಹೋದ ಬಳ್ಳಿಯಿಂದ ಹಾಡಿನ ಸುಳಿಗೆ ದೋಣಿ ಮುಳುಗಿದಾಗ ಬದುಕಲೆಲ್ಲಿ ಓಡುವೆ ಮುಂತಾದ ಸಾಲುಗಳಲ್ಲಿ ಅಮರ್ ಪ್ರೇಮ್ ಚಿತ್ರದ ಚಿಂಗಾರಿ ಕೋಯಿ ಭಡ್‌ಕೇ ಹಾಡಿನ ಸಾಹಿತ್ಯದ ಛಾಯೆ ಇದೆ.  ಧಾಟಿಯಲ್ಲಿ ಸಾಮ್ಯ ಇಲ್ಲದಿದ್ದರೂ ಆನ್ ಮಿಲೊ ಸಜನಾ ಚಿತ್ರದ ಅಚ್ಛಾ ತೊ ಹಮ್ ಚಲ್‌ತೆ ಹೈಂ ಪ್ರತಿಧ್ವನಿಯ ಸರಿ ನಾ ಹೋಗಿ ಬರುವೆ ಆಗಿ ಕಾಣಿಸಿಕೊಂಡಿತು. ಪ್ರೊಫೆಸರ್ ಹುಚ್ಚೂರಾಯದ ಹರೆ ರಾಮ ಹರೆ ಕೃಷ್ಣ ಹಾಡು ಅದೇ ಹೆಸರಿನ ಹಿಂದಿ ಸಿನೆಮಾದ ಹಾಡುಗಳ ಸ್ಪೂರ್ತಿಯಿಂದ ಜನ್ಮ ತಾಳಿದ್ದು ಅನ್ನುವುದರಲ್ಲಿ ಸಂಶಯ ಇಲ್ಲ. ಬಂಗಾರದ ಪಂಜರದ ಸುಂಯ್ ಅಂತ ಬೀಸೋ ಗಾಳಿ ಹಾಡಿನಲ್ಲಿ ಬರುವ ಪೊನ್ನಮ್ಮ, ಚಿನ್ನಮ್ಮರಿಗೆ ಶತ್ರಂಜ್ ಚಿತ್ರದ ಬದ್ಕಮ್ಮಳೇ ಮೂಲ. ರಣಧೀರದ ಪ್ರೀತಿ ಮಾಡಬಾರದು ಮಾಡಿದರೆ ಜಗಕೆ ಹೆದರಬಾರದು ಹಾಡಿನ ಹಿಂದೆ ಇದ್ದದ್ದು ಮುಗಲ್-ಎ-ಆಜಮ್ ಚಿತ್ರದ ಪ್ಯಾರ್ ಕಿಯಾ ತೊ ಡರ್‌ನಾ ಕ್ಯಾ ಎಂದು ಹಂಸಲೇಖಾ ಅವರೇ ಹೇಳುವುದನ್ನು ಕೇಳಿದ್ದೇನೆ. .

ಯಾವುದೋ ಹಿಂದಿ ಹಾಡಿನ ಧಾಟಿಯ ಅಂಶ ಹೊಂದಿ ಎಲ್ಲೋ ಕೇಳಿದ್ದೇನೆ ಎನ್ನಿಸುವ ಕನ್ನಡ ಹಾಡುಗಳು ಅನೇಕ ಇವೆ.  ರಾಜನ್ ನಾಗೇಂದ್ರರ ದೇವರ ಗುಡಿ ಚಿತ್ರದ ಕಣ್ಣು ಕಣ್ಣು ಒಂದಾಯಿತು ಹಾಡಿನ ಯಾರು ಒಲಿದರೇನು ಚರಣ  ಗಾತಾ ರಹೇ ಮೇರಾ ದಿಲ್ ಹಾಡಿನ ಓ ಮೇರೇ ಹಮ್‌ರಾಹಿಯನ್ನು ಹೋಲುತ್ತದೆ.  ಶ್ರೀನಿವಾಸ ಕಲ್ಯಾಣದ ಚೆಲುವಿನ ತಾರೆ ಹಾಡಿನ ನೆನೆಯುತ ನಿನ್ನ ಕರೆಯುವ ಮುನ್ನ ಚರಣ ಭಾಭೀ ಕೀ ಚೂಡಿಯಾಂ ಚಿತ್ರದ ಮುಕೇಶ್-ಆಶಾ ಹಾಡಿದ ಕಹಾಂ ಊಡ್ ಚಲೇ ಹೈಂ ಹಾಡಿನ ಚರಣದಂತಿದೆ.  ದೇವರ ದುಡ್ಡು ಚಿತ್ರದ ನಾನೇ ಎಂಬ ಭಾವ ಹಾಡಿನ  ಒಂದು interlude ಮೇರೆ ಮನ್ ಕೀ ಗಂಗಾದ ಪೆಪ್ಪೆ ಪೇಪೆ ಪೇಪೇಪೆಯ ಹಾಗಿದೆ. ಎರಡು ಕನಸು ಚಿತ್ರದ ತಂ ನಂ ತಂ ನಂ ಹಾಡಿನ ಒಂದು ಆಲಾಪ ಕೇಳುವಾಗ ಹರೇ ರಾಮ ಹರೇ ಕೃಷ್ಣದ ದಂ ಮಾರೊ ದಮ್ ನೆನಪಾಗುತ್ತದೆ. ಅದೇ ಚಿತ್ರದ ಎಂದು ನಿನ್ನ ನೋಡುವೆ ಹಾಡಿನ interludeನಲ್ಲಿ ರಾಜೇಶ್ ಖನ್ನನ ಮೇರೆ ಜೀವನ್ ಸಾಥಿಯ ಓ ಮೇರೆ ದಿಲ್ ಕೆ ಚೈನ್ guitar piece ಕೇಳಿಸುತ್ತದೆ. ನಾ ನಿನ್ನ ಮರೆಯಲಾರೆ ಚಿತ್ರದ  ಎಲ್ಲೆಲ್ಲಿ ನೋಡಲಿ ಹಾಡಿನ ಮೂಲ ಸಂಗಂ ಚಿತ್ರದ ಐಫೆಲ್ ಟವರ್ ವೀಕ್ಷಣೆ ಸಂದರ್ಭದ ಹಿನ್ನೆಲೆ ಸಂಗೀತ.



ಜಿ.ಕೆ. ವೆಂಕಟೇಶ್ ಮೊದಲಿನಿಂದಲೂ ಹಿಂದಿ ಧಾಟಿಗಳಿಂದ ದೂರವೇ ಉಳಿದಿದ್ದರು.  ಆದರೆ 70ರ ದಶಕ ಬರುತ್ತಿದ್ದಂತೆ ಅವರೂ ಸೋತರು.  ಹಿಂದಿಯ ಬೇಟಿ ಬೇಟೆ ಕನ್ನಡದ ತಂದೆ ಮಕ್ಕಳು ಆದಾಗ ರಾಧಿಕೆ ಹಾಡಿಗೆ ಮೂಲ ಹಿಂದಿ ಧಾಟಿಯನ್ನೇ ಅವರು ಬಳಸಬೇಕಾಯಿತು.  ಆದರೂ ಸಂಜೆಗೆಂಪು ಮೂಡಿತು ಹಾಡನ್ನು ಆಜ್ ಕಲ್ ಮೆ ಢಲ್ ಗಯಾದ ಛಾಯೆಗಷ್ಟೇ ಸೀಮಿತಗೊಳಿಸಿದರು.   ಭಕ್ತ ಜ್ಞಾನದೇವದ ನಿನ್ನೊಳಗಿರುವ ಪರಮಾತ್ಮನನು ಹಾಡನ್ನು ಜ್ಯೋತ್ ಸೆ ಜ್ಯೋತ್ ಹಾಗೂ ಒಂದು ಎರಡು ಮೂರು ನಾಲ್ಕನ್ನು ಏಕ್ ದೋ ತೀನ್ ಚಾರ್ ಛಾಯೆಯಿಂದ ತಪ್ಪಿಸಲಾಗಲಿಲ್ಲ.  ಎಸ್.ಡಿ. ಬರ್ಮನ್ ಅವರ ಯೇ ದಿಲ್ ದೀವಾನಾ ಹೈ ಹಾಡಿನಿಂದ ನೀ ಬಂದು ನಿಂತಾಗ ಜನ್ಮ ತಾಳಿದ್ದಂತೂ ಎಲ್ಲರಿಗೂ ಗೊತ್ತೇ ಇದೆ.

ಸಂಗೀತ ನಿರ್ದೇಶಕ  ಸತ್ಯಂ ತಾನು ಶಂಕರ್ ಜೈಕಿಶನ್ ಅನುಯಾಯಿ ಎಂದು ಎದೆ ತಟ್ಟಿ ಹೇಳುತ್ತಿದ್ದರು.  ಅವರ ಒಂದೇ ಬಳ್ಳಿಯ ಹೂಗಳು ಚಿತ್ರದ ದಾರಿ ಕಾಣದೆ ಬಂದವಳೆ ಕೇಳಿದಾಗ ಆಯಿ ಮಿಲನ್ ಕಿ ಬೇಲಾದ ಓ ಸನಮ್ ತೆರೆ ಹೋಗಯೆ ಹಮ್ ನೆನಪಾಗುತ್ತದೆ.  ರಫಿಯ ಏಕೈಕ ಕನ್ನಡ ಹಾಡು ನೀನೆಲ್ಲಿ ನಡೆವೆ ದೂರ ಹಾಡಿನ ಬೇರುಗಳು ಆರ್‌ಜೂ ಚಿತ್ರದ ಬೇದರ್ದಿ ಬಾಲಮಾ ತುಝ್ ಕೊ ಹಾಡಿನಲ್ಲಿವೆ.  ಸಹೋದರರ ಸವಾಲಿನ ನಿನಗಾಗಿಯೇ ಹಾಡಿಗೆ ಪ್ರಿನ್ಸ್ ಚಿತ್ರದ ಬದನ್ ಪೆ ಸಿತಾರೆ ಪ್ರೇರಣೆ. ಅದೇ ಚಿತ್ರದ ನಲ್ಲನೆ ಸವಿ ಮಾತೊಂದ ಜನ್ಮ ತಾಳಿದ್ದು ಸ್ವತಃ ಶಂಕರ್ ಜೈಕಿಶನ್ ಅನುಯಾಯಿಗಳಾಗಿದ್ದ ಲಕ್ಷ್ಮಿಕಾಂತ್ ಪ್ಯಾರೆಲಾಲ್ ಅವರ ಮೇರಾ ಗಾಂವ್ ಮೇರಾ ದೇಶ್ ಚಿತ್ರದ ಕುಛ್ ಕಹತಾ ಹೈ ಯೆ ಸಾವನ್ ಧಾಟಿಯನ್ನಾಧರಿಸಿ. ಹೆಚ್ಚೇನೂ ಸದ್ದು ಮಾಡದ 1973ರ ಚಿತ್ರ ಬಂಗಾರದ ಕಳ್ಳದಲ್ಲಿ ಜೀವನ ಮೋಜಿನ ಆಟ ಎಂಬ ಎಸ್.ಪಿ.ಬಿ ಹಾಡಿದ ಮೋಟರ್ ಸೈಕಲ್  ಹಾಡೊಂದಿತ್ತು.  ಅದರಲ್ಲಿ ಅಂದಾಜ್ ಚಿತ್ರದ ಜಿಂದಗಿ ಎಕ್ ಸಫರ್ ಹೈ ಸುಹಾನಾ ಹಾಡಿನ ಒಡ್ಲೆರಿ ಒಡ್ಲೆರಿ ಯೂಡ್ಲಿಂಗ್ ಬಳಕೆಯಾಗಿತ್ತು. ಗಾಂಧಿನಗರದ ನೀ ಮುಡಿದಾ ಮಲ್ಲಿಗೆ ಹೂವಿನಮಾಲೆಯಲ್ಲಿ ಫಿರ್ ವಹೀ ದಿಲ್ ಲಾಯಾ ಹೂಂ ಚಿತ್ರದ ಆಂಖೊಂ ಸೆ ಜೊ ಉತ್‌ರೀ ಹೈ ದಿಲ್ ಮೆ ಹಾಡಿನ ಪರಿಮಳ ಇದೆ.

ಎಂ.ರಂಗರಾವ್ ಅವರ ಹೊಸ ಬೆಳಕು ಚಿತ್ರದ ಕಣ್ಣೀರ ಧಾರೆಯನ್ನು ರಾಜ‌ಕುಮಾರ್ ಅವರು ಇಷ್ಟ ಪಟ್ಟು ಲೀಡರ್ ಚಿತ್ರದ ರಾಗ ಲಲಿತ್ ಆಧಾರಿತ ಎಕ್ ಶಹನ್‌ಶಾಹನೆ ಬನ್‌ವಾಕೆ ಹಸೀಂ ತಾಜ್‌ಮಹಲ್  ಛಾಯೆಯಲ್ಲಿ ಕಂಪೋಸ್ ಮಾಡಿಸಿಕೊಂಡದ್ದಂತೆ.  ಜ್ವಾಲಾಮುಖಿ ಚಿತ್ರದ ಬಾಳೆ ಪ್ರೇಮಗೀತೆ ಹಾಡಿನ ಚರಣ ಗೈಡ್ ಚಿತ್ರದ ತೇರೆ ಮೇರೆ ಸಪ್‌ನೆಯ ಚರಣವನ್ನು ಬಹುವಾಗಿ ಹೋಲುತ್ತದೆ. ವಸಂತಗೀತ ಚಿತ್ರದ ಆಟವೇನು ನೋಟವೇನು ಹಾಡಿನಲ್ಲಿ ಹೌದೋ ಅಲ್ಲವೋ ಅನ್ನುವಂತೆ ಓ.ಪಿ. ನಯ್ಯರ್ ಅವರ ಹಮ್‌ಸಾಯಾ ಚಿತ್ರದ ವೊ ಹಸೀನ್ ದರ್ದ್ ದೇದೋದ ಛಾಯೆ ಗೋಚರಿಸುತ್ತದೆ. ಆದರೆ ಕವಿರತ್ನ ಕಾಳಿದಾಸ ಚಿತ್ರದ ಸದಾ ಕಣ್ಣಲಿ ಹಾಡಿನ ಪಲ್ಲವಿ ಮೆಹದಿ ಹಸನ್ ಅವರು 1967ರ ಎ.ಹಮೀದ್ ಎಂಬವರ ಸಂಗೀತ ನಿರ್ದೇಶನದಲ್ಲಿ ಪಾಕಿಸ್ಥಾನಿ ಚಿತ್ರ ಮೈ ವೊ ನಹಿಂಗಾಗಿ ಹಾಡಿದ್ದ ನವಾಜಿಶ್ ಕರಮ್ ಶುಕ್ರಿಯಾ ಮೆಹರ್‌ಬಾನಿ ಎಂಬ ಗಜಲನ್ನು 100% ಹೋಲುತ್ತದೆ!




ಹಿಂದಿಯ ಪರಿಣಾಮ ಹೆಚ್ಚು ಕಾಣಸಿಗುವುದು ವಿಜಯಭಾಸ್ಕರ್ ರಚನೆಗಳಲ್ಲಿ.  ಅವರು ಕೆಲ ಕಾಲ ಹಿಂದಿ ಚಿತ್ರರಂಗದಲ್ಲಿ ನೌಷಾದ್ ಮುಂತಾದವರ ಒಡನಾಟದಲ್ಲಿದ್ದುದು ಮತ್ತು  ಹಿಂದಿಯಿಂದ ಕನ್ನಡಕ್ಕೆ ಡಬ್ ಆದ ಕೆಲ ಚಿತ್ರಗಳಿಗೆ ಮೂಲ ಧಾಟಿಯಲ್ಲಿ ಸಂಗೀತ ಸಂಯೋಜಿಸಬೇಕಾಗಿ ಬಂದುದು ಇದಕ್ಕೆ ಕಾರಣ ಇರಬಹುದು. ತೂಗು ದೀಪ ಚಿತ್ರದ ಅವರ ಹಾಡು ಮೌನವೇ ಆಭರಣದ ಮೊದಲ ಸಾಲು  ಫಿರ್ ವಹೀ ದಿಲ್ ಲಾಯಾ ಹೂಂ ಚಿತ್ರದ ಆಂಖೊಂ ಸೆ ಜೊ ಉತ್‌ರೀ ಹೈ ದಿಲ್ ಮೆ ಹಾಡಿನ ಆರಂಭದ ಆಲಾಪ್‌ನಂತಿದೆ. ರಾಣಿ ಹೊನ್ನಮ್ಮ ಚಿತ್ರದ ಹಾರುತ ದೂರ ದೂರ ಹಾಡಿನ ಆರ್ಕೆಸ್ಟ್ರೇಶನ್‌ನಲ್ಲಿ ಶಂಕರ್ ಜೈಕಿಶನ್ ಅವರ ಹಲಾಕೂ ಛಾಯೆ ಇದ್ದರೆ ಅದೇ ಚಿತ್ರದ ಈ ಜೀವನ ಹೂವಿನ ಹಾಸಿಗೆಯಲ್ಲಿ ನೌಷಾದ್ ಶೈಲಿ ಇದೆ.  ಹೃದಯ ಸಂಗಮ ಚಿತ್ರದ ನಡೆ ನಡೆ ನಡೆ ಮನವೆ ಹಾಡಿನ ಚರಣದಲ್ಲಿ ಪ್ರತಿ ಸಾಲಿನ ನಂತರ ಆರಾಧನಾದ ಮೇರೆ ಸಪ್‌ನೊಂ ಕೀ ರಾನಿಯ ಚರಣದಲ್ಲಿದ್ದಂತೆ ಜಂಜ ಜಂಜಜಂ ಎಂದು ಗಿಟಾರ್ ನುಡಿಯುತ್ತದೆ.  ಮನೆಯೆ ಬೃಂದಾವನ ಹಾಡಿನ ಮೊದಲ ಸಾಲು ಚಿತ್ರಗುಪ್ತ ಅವರ ಟವರ್ ಹೌಸ್ ಚಿತ್ರದ  ಬಲ್‌ಮಾ ಮಾನೇನದಂತೆ ಕೇಳಿಸುತ್ತದೆ. ಅವರು ಸಂಗೀತ ನೀಡಿದ ತುಳು ಚಿತ್ರ ಕೋಟಿ ಚೆನ್ನಯದ ಜೋಡು ನಂದಾ ದೀಪ ಬೆಳಗ್‌ಂಡ್ ಹಾಡಿನ ಕೆಲವು ಸಾಲುಗಳು ಗೈಡ್ ಚಿತ್ರದ ಪಿಯಾ ತೋಸೆ ನೈನಾ ಲಾಗೆ ರೆಯಂತೆ ಕೇಳಿಸುತ್ತವೆ,  ಹಾಡುಗಳ ಧಾಟಿಗಳಿಗಿಂತಲೂ ಅವರು ಹೆಚ್ಚು ಬಳಸಿಕೊಂಡಿರುವುದು ಹಿಂದಿ interludeಗಳನ್ನು. ಅವುಗಳನ್ನು ತನ್ನ ಹಾಡುಗಳ interlude ಆಗಿ ಬಳಸುವುದಲ್ಲದೆ ಆಯಿ ಮಿಲನ್ ಕಿ ಬೇಲಾದ ತುಮ್ ಕಮ್ ಸಿನ್ ಹೋ ಮತ್ತು ಪ್ರೊಫೆಸರ್ ಚಿತ್ರದ ಏ ಗುಲ್‌ಬದನ್ ಹಾಡಿನ interludeಗಳನ್ನು ಜೋಡಿಸಿ ಬೆಳ್ಳಿಮೋಡದ ಹಿನ್ನೆಲೆ ಸಂಗೀತವಾಗಿ ಬಳಸಿದ್ದಾರೆ. ಕೆಲವು ಹಾಡುಗಳಲ್ಲಿ ಅವರು recycle ಮಾಡಿದ interlude ಅಂಶಗಳ ವಿವರ ಹೀಗಿದೆ.

ಮನ ಮೆಚ್ಚಿದ ಮಡದಿಯ ಸಿರಿತನ ಬೇಕೆ - ದಿಲ್ ದೇಕೆ ದೇಖೊ ಚಿತ್ರದ ಮೇಘಾರೆ ಬೋಲೆ - ಉಷಾ ಖನ್ನಾ


ಪ್ರೇಮಕ್ಕೂ ಪಮಿಟ್ಟೇ ಚಿತ್ರದ ಕೆಂಪು ರೋಜಾ ಮೊಗದವಳೆ - ಜಾನ್‌ವರ್‌ನ ತುಮ್ ಸೆ ಅಚ್ಛಾ ಕೌನ್ ಹೈ -  ಶಂಕರ್ ಜೈಕಿಶನ್


ಸಿಗ್ನಲ್ ಮ್ಯಾನ್ ಸಿದ್ದಪ್ಪದ ಶ್ರೀ ಮಂಜುನಾಥೇಶ್ವರ - ಎಪ್ರಿಲ್ ಫೂಲ್ ಚಿತ್ರದ ಟೈಟಲ್ ಹಾಡು - ಶಂಕರ್ ಜೈಕಿಶನ್


ಸೀತಾ ಚಿತ್ರದ ಬರೆದೆ ನೀನು - ಬ್ರಹ್ಮಚಾರಿಯ ದಿಲ್ ಕೆ ಝರೋಕೆ ಮೆ ಹಾಡಿನ ಕೋರಸ್ - ಶಂಕರ್ ಜೈಕಿಶನ್


ನಮ್ಮ ಮಕ್ಕಳು ಚಿತ್ರದ ತಾರೆಗಳ ತೊಟದಿಂದ - ಸಂಗಂ ಚಿತ್ರದ ಯೆ ಮೇರಾ ಪ್ರೇಮ್ ಪತ್ರ್ - ಶಂಕರ್ ಜೈಕಿಶನ್


ಬೆಳ್ಳಿಮೋಡದ ಒಡೆಯಿತು ಒಲವಿನ ಕನ್ನಡಿ - ತೀಸ್ರೀ ಕಸಂನ ದುನಿಯಾ ಬನಾನೆವಾಲೆ - ಶಂಕರ್ ಜೈಕಿಶನ್


ತುಳಸಿ ಚಿತ್ರದ ಶ್ರೀ ತುಳಸಿ  ದಯೆ ತೋರಮ್ಮಾ - ಸಂತ್ ಜ್ಞಾನೇಶ್ವರ್ ಚಿತ್ರದ ಜ್ಯೋತ್ ಸೆ ಜ್ಯೋತ್ - ಲಕ್ಷ್ಮಿ ಪ್ಯಾರೆ


ಲಕ್ಷ್ಮೀ ಸರಸ್ವತಿ ಚಿತ್ರದ ಚಂದಿರ  ಭೂಮಿಗೆ - ಸರಸ್ವತಿ ಚಂದ್ರದ ಫೂಲ್ ತುಮ್ಹೆ ಭೇಜಾ - ಕಲ್ಯಾಣಜೀ ಆನಂದಜೀ


ಉಯ್ಯಾಲೆಯ ನಗುತ ಹಾಡಲೆ - ಖಾನ್‌ದಾನ್ ಚಿತ್ರದ ತುಮ್ಹೀ ಮೇರೆ ಮಂದಿರ್ - ರವಿ


ತುಳು ಕೋಟಿ ಚೆನ್ನಯದ ಕೆಮ್ಮಲೆತ ಬ್ರಹ್ಮ - ಮಧುಮತಿಯ ಟೂಟೆ ಹುವೆ ಖ್ವಾಬೋನೆ - ಸಲಿಲ್ ಚೌಧರಿ



ಸುವರ್ಣ ಭೂಮಿ ಚಿತ್ರದ ಭಲೇ ಸಂಚುಗಾರ ಹಾಡಿನಲ್ಲಿ ಎಸ್.ಡಿ. ಬರ್ಮನ್ ಅವರ ಬಾತ್ ಏಕ್ ರಾತ್ ಕೀ ಚಿತ್ರದ ನ ತುಮ್ ಹಮೆ ಜಾನೊ  ಹಾಡಿನ ಇಂಟರ್‌ಲೂಡ್ ನುಸುಳಿದೆ.

ಆದರೆ ತಮಿಳಿನ ಪಾಲುಂ ಪಳಮುಂ ಬೆರೆತ ಜೀವವಾಗಿ ಮತ್ತು ಹಿಂದಿಯ ಘರಾನಾ ಪತಿಯೇ ದೈವವಾಗಿ ಕನ್ನಡಕ್ಕೆ ಬಂದಾಗ ಇದೇ ವಿಜಯ ಭಾಸ್ಕರ್ ಅತಿ ಜನಪ್ರಿಯವಾಗಿದ್ದ ಮೂಲ ಧಾಟಿಗಳ ಘಾಟೂ ಹೊಡೆಯದಂತಹ ಹಾಡುಗಳನ್ನು ಸಂಯೋಜಿಸಿ ತನ್ನ ಸಾಮರ್ಥ್ಯವೇನು ಎಂದು ತೋರಿಸಿ ಕೊಟ್ಟರು. ಆದರೂ ಪತಿಯೇ ದೈವದ ಕೋಪವೇಕೆ ಕೋಪವೇಕೆ ಅಜ್ಜಿ ಧಾಟಿ ಸಂಪೂರ್ಣ ಬೇರೆಯಾದರೂ ಹಿಂದಿಯ ದಾದಿಯಮ್ಮಾ ದಾದಿಯಮ್ಮಾ ಮಾನ್ ಜಾವೊ ಹಾಡಿಗೆ ಹೇಗೆ ಫ್ರೇಮ್ ಟು ಫ್ರೇಮ್ match ಆಗಿದೆ ಈ ಸಂಯೋಜಿತ ವಿಡಿಯೋದಲ್ಲಿ ನೋಡಿ.



ಇವರೆಲ್ಲರ ಸಮಕಾಲೀನ ಟಿ.ಜಿ.ಲಿಂಗಪ್ಪ ಮಾತ್ರ ವೃತ್ತಿ ಜೀವನದ ಕೊನೆವರೆಗೂ ತಮ್ಮನ್ನು ಹಿಂದಿ ಪ್ರಭಾವದಿಂದ ರಕ್ಷಿಸಿಕೊಂಡರು. ಎಂ. ವೆಂಕಟರಾಜು ಮತ್ತು ಉಪೇಂದ್ರ ಕುಮಾರ್  ರಚನೆಗಳಲ್ಲೂ ನನಗೆ ನೇರ ಹಿಂದಿ ಪ್ರಭಾವ ಗೋಚರಿಸಲಿಲ್ಲ.   ಆದರೆ ಕನ್ನಡದ ಅಪ್ಪಟ ದೇಸೀ ಪ್ರತಿಭೆ ಸಿ. ಅಶ್ವಥ್ ಅವರಿಗೆ ಇದರಿಂದ ತಪ್ಪಿಸಿಕೊಳ್ಳಲಾಗಲಿಲ್ಲ. ನಾಗಮಂಡಲದ ಆರತಿ ಹಾಡಿನಲ್ಲಿ ಪಹಚಾನ್ ಚಿತ್ರದ ಬಸ್ ಯಹೀ ಅಪರಾಧ್ ಮೈ ಹರ್ ಬಾರ್ ಕರ್‌ತಾ ಹೂಂ ಹಾಡಿನ ಶಂಕರ್ ಜೈಕಿಶನ್ interlude ಇಣುಕಿತು.


ಕೆಲವು ಸಲ ಕನ್ನಡ ಹಾಡುಗಳ ಛಾಯೆ ಹಿಂದಿಯಲ್ಲಿ ಕಾಣಿಸಿಕೊಂಡದ್ದೂ ಇದೆ.  ಬಯಲು ದಾರಿಯ ಕನಸಲೂ ನೀನೆ  ಶಾರುಖ್ ಖಾನನ ದೀವಾನಾ ಚಿತ್ರದಲ್ಲಿ  ಐಸಿ ದೀವಾನ್‌ಗೀ ಆಗಿತ್ತು.  ಆದರೆ ಇದು ಕೆರೆಯ ನೀರನು ಕೆರೆಗೆ ಚೆಲ್ಲಿದಂತೆ ಏಕೆಂದರೆ ಬಯಲು ದಾರಿಯ ಆ ಹಾಡು ಜನ್ಮ ತಾಳಿದ್ದು ಆಂಧೀ ಚಿತ್ರದ ತೇರೆ ಬಿನಾ ಜಿಂದಜಿ ಸೆ ಕೋಯಿ ಹಾಡಿನ ಒಂದು ಎಳೆಯನ್ನಾಧರಿಸಿ! ವಿಜಯನಗರದ ವೀರಪುತ್ರದ ಮಾತಿನ ಮಲ್ಲ ತೋರುತ ಹಲ್ಲ ಮತ್ತು ಸಾವನ್ ಭಾದೋಂ ಚಿತ್ರದ ಕಾನ್ ಮೆಂ ಝುಂಕಾ ಚಾಲ್ ಮೆಂ ಠುಂಕಾ ನಡುವೆ ಹೋಲಿಕೆ ಇದೆ.  ಅಣ್ಣ ತಂಗಿ ಚಿತ್ರದ ಕಂಡರೂ ಕಾಣದಾಂಗೆ ಹಾಡಿನಲ್ಲಿ ಬರುವ ಒಂದು ಆಲಾಪ್ ಹಮ್ ಕಹಾಂ ಜಾ ರಹೇ ಹೈಂ ಎಂಬ ಅಷ್ಟೊಂದು ಜನಪ್ರಿಯವಲ್ಲದ ಚಿತ್ರದ  ರಫ್ತಾ ರಫ್ತಾ ವೊ ಹಮಾರೆ  ಎಂಬ ಹಾಡಿನಲ್ಲಿ ಕಾಣಿಸಿಕೊಂಡಿತ್ತು.

ಚಿತ್ರ ಸಂಗೀತದ ಬಗೆಗಿನ ನನ್ನ ಜ್ಞಾನ 1980ರ ದಶಕದ ವರೆಗಿನ ಅವಧಿಗೆ ಸೀಮಿತ.  ಹಾಗಾಗಿ ನನ್ನ ಅರಿವಿಗೆ ಬಾರದ ಇನ್ನೂ ಎಷ್ಟೋ ಇಂತಹ ಉದಾಹರಣೆಗಳಿರಬಹುದು.



2 comments:

  1. ಸರ್...ಮತ್ತೊಂದು ಸೊಗಸಾದ ಲೇಖನ!ಜಿ.ಕೆ.ವೆಂಕಟೇಶ್ ತಮ್ಮ ಪ್ರಥಮ ಚಿತ್ರದಲ್ಲಿಯೇ..ಹರಿಭಕ್ತ ಚಿತ್ರದ "ತಾಯಿ ತಂದೆಯ ಸೇವೆಯಾ ಯೋಗ" ಗೀತೆಯಲ್ಲಿ ಹಿಂದಿಯ ಬೈಜುಬಾವ್ರಾದ ಓ ದುನಿಯಾ ಕೆ ರಖ್‌ವಾಲೆ ಹಾಡಿನ ದಟ್ಟ ಛಾಯೆ ಕಾಣಬಹುದು!

    ಹಾಗೆಯೇ ಸತ್ಯ ಹರಿಶ್ಚಂದ್ರ ಚಿತ್ರದ ನಮೋ ಭೂತನಾಥ ನಮೋ ದೇವದೇವಾ...ಹಾಡೂ ಕೂಡಾ ಹಿಂದಿಯ ಮೊಘಲ್ ಏ ಆಜಾಮ್ ಚಿತ್ರದ ಹಾಡಿನ‌ಧಾಟಿ ಕಾಣಬಹುದು!

    ಶಂಕರ್‌ಗುರು ಚಿತ್ರದ "ಏನೇನೋ ಆಸೆ ನೀ ತಂದ ಭಾಷೆ" ಹಾಡು ಹಿಂದಿಯ ಗೋರಿ ತೇರ ಗಾಂವ್ ಬಢಾ ಪ್ಯಾರಾ ಗೀತೆಯ ನಕಲಿನಂತೆಯೇ ಕೇಳಿಸುತ್ತದೆ!

    ReplyDelete
  2. ಈ ವಿಷಯದಲ್ಲಿ ನೀವು ಒಂದು ಜ್ಞಾನ ಕೋಶದಷ್ಟು (dictionary) ಬರೆದಿರುವಿರಿ.( ನಿಮ್ಮ ಬ್ಲಾಗ್ , ಬೇರೆ ಬೇರೆ ವಿಷಯ ಕುರಿತು ಬರೆದಿರುವುದನ್ನೂ ಓದಲು ಪ್ರಾರಂಭಿಸುವಂತಾಗಿದೆ ��. ).
    ಹಣ್ಣೆಲೆ ಚಿಗುರಿದಾಗ ಚಿತ್ರದ ಹಾಡು ಹೂವು ಚೆಲುವೆಲ್ಲಾ... ಹಿಂದಿಯ ಮೇರಾ ಸಾಯಾದ ನೈನೋಂಮೆ ಬದರಾ ಛಾಯೆ ಛಾಪು ಬಹಳ ಇದೆ ಅನ್ನಿಸುವುದು. Especially ಕೋಗಿಲೆಯು ಗಾನದಲ್ಲಿ.. ಮದಿರಾ ಮೆ ಡೂಬೆ ಅಖಿಯಾಂ..
    ಹಾಗೆಯೆ ಭೂಪತಿ ರಂಗ ಚಿತ್ರ ಹಾಡಿನ Instrumental ವಾದನ : ಹಿಂದಿಯ ಮಹಲ್ : ದೇವಾನಂದ್ ಆಶಾ ಪಾರೇಖ್ ಹಾಡು ಏ ದುನಿಯಾವಾಲೆ ಪೂಛೇಂಗೆ, copy.

    Nagamani Narayana (FB)

    ReplyDelete

Your valuable comments/suggestions are welcome