ವೆಂಕಟೇಶ್ವರ ರಾವ್ ಹಾಡಿದ ನಿಮ್ಮ ಇಷ್ಟದ ಹಾಡು ಯಾವುದು ಎಂದು ನಿಮ್ಮನ್ನು ಕೇಳಿದರೆ "ಯಾರ್ರೀ ಅದು ವೆಂಕಟೇಶ್ವರ ರಾವ್?" ಎಂದು ನೀವು ಮರು ಪ್ರಶ್ನೆ ಎಸೆಯುವುದು ಖಂಡಿತ. ಅದೇ ಘಂಟಸಾಲ ಹಾಡಿದ್ದು ಅಂದರೆ ಕ್ಷಣವೂ ತಡ ಮಾಡದೆ ಶಿವಶಂಕರಿ ಎಂದೋ ಬಾಳೊಂದು ನಂದನ ಎಂದೋ ಉತ್ತರ ಬಂದೀತು. ಒಂದು ವೇಳೆ ಮೆಲ್ಲುಸಿರೇ ಸವಿಗಾನ ಎಂದೇನಾದರೂ ನೀವು ಹೇಳಿದರೆ ನಾನು ಮತ್ತೆ "ರೀ, ಅದು ರೇ ಅಲ್ಲ ರೀ" ಎಂದು ಎಚ್ಚರಿಸಬೇಕಾದೀತು!
ಘಂಟಸಾಲ ಎಂದೇ ಪ್ರಸಿದ್ಧರಾದ ಘಂಟಸಾಲ ವೆಂಕಟೇಶ್ವರ ರಾವ್ ಅವರನ್ನು ಕುರಿತ ಈ ಬರಹ ಈ ಹಿಂದಿನ ಮುರಿಯದ ಮನೆಯ ಮರೆಯಾದ ಗೀತಗುಚ್ಛದ sequel ಅರ್ಥಾತ್ ಮುಂದುವರಿದ ಭಾಗ ಅಂದರೆ ತಪ್ಪಾಗಲಾರದು. ಯಾವುದಾದರೂ ಒಂದು ವಿಷಯದ ಬಗ್ಗೆ ಬರೆದರೆ ಉಳಿದವರು ಅದನ್ನೊಮ್ಮೆ ಓದಿ ಮರೆತರೂ ನಾನು ಮತ್ತೂ ಕೆಲವು ದಿನ ಅದೇ ಗುಂಗಿನಲ್ಲಿರುತ್ತೇನೆ. ಆ ವಿಷಯಕ್ಕೆ ಸಂಬಂಧಿಸಿದ ವಿಷಯಗಳ ಹುಡುಕಾಟ ಮುಂದುವರೆಸಿ ಹೊಸತೇನಾದರೂ ಸಿಕ್ಕಿದರೆ ಅದನ್ನು ಲೇಖನಕ್ಕೆ ಸೇರಿಸುವುದೂ ಇದೆ. ಮುರಿಯದ ಮನೆ ಇತರ ಭಾಷೆಗಳಲ್ಲೂ ತಯಾರಾಗಿತ್ತಲ್ಲವೇ. ಅದರ ಹಿಂದಿ ರೂಪ ಖಾನ್‌ದಾನ್ ಚಿತ್ರವನ್ನು ಅಂತರ್ಜಾಲದಲ್ಲಿ ವೀಕ್ಷಿಸುತ್ತಿರುವಾಗ ರಫಿ ಮತ್ತು ಆಶಾ ಭೋಸ್ಲೆ ಹಾಡಿದ ಪ್ರಸಿದ್ಧ ಹಾಡು ಬಡಿ ದೇರ್ ಭಯೀ ನಂದ್ ಲಾಲಾ ಆರಂಭವಾಗುವುದಕ್ಕಿಂತ ಮೊದಲು ಘಂಟಸಾಲ ಹಾಡಿರುವ ಶ್ಲೋಕವೊಂದು ಇರುವುದು ಕಂಡು ಆಶ್ಚರ್ಯಚಕಿತನಾಗಿ ಆ ವಿಷಯವನ್ನು ಕೂಡಲೇ face bookನಲ್ಲಿ ಹಂಚಿಕೊಂಡೆ. ಹೆಚ್ಚಿನವರಿಗೆ ಅದು ಗಮನಿಸಲು ಯೋಗ್ಯವಾದ ವಿಷಯವೆಂದು ಅನ್ನಿಸದಿದ್ದರೂ ಇಂತಹ ವಿಚಾರಗಳಲ್ಲಿ ನನಗೆ ಸಮಾನಾಂತರ ತರಂಗಾಂತರ ಹೊಂದಿರುವ face book ಗೆಳೆಯ ಸುದರ್ಶನ ರೆಡ್ಡಿ ಅವರಲ್ಲಿ ಕಿಡಿಯೊಂದು ಹೊತ್ತಿಕೊಂಡಿತು. ಅವರು ಕೂಡಲೇ ಕಾರ್ಯಪ್ರವೃತ್ತರಾಗಿ ಘಂಟಸಾಲ ಬಗ್ಗೆ ಬಹಳಷ್ಟು ಮಾಹಿತಿ ಒದಗಿಸಿದರು. ಆ ಕಿಡಿ ನನ್ನಲ್ಲಿ ಜ್ವಾಲೆಯಾಗಿ ಹಬ್ಬಿ ಈ ಲೇಖನಕ್ಕೆ ಕಾರಣವಾಯಿತು!
ನಮ್ಮ ಮನೆಗೆ 1962ರಲ್ಲಿ ರೇಡಿಯೋ ಬಂದಾಗ ಆಗ ಪ್ರತಿ ಸೋಮವಾರ ರಾತ್ರೆ 8ರಿಂದ 8-30ರ ವರೆಗೆ ಬೆಂಗಳೂರು ಆಕಾಶವಾಣಿಯಿಂದ ಪ್ರಸಾರವಾಗುತ್ತಿದ್ದ ನಿಮ್ಮ ಮೆಚ್ಚಿನ ಚಿತ್ರಗೀತೆಗಳು ಕಾರ್ಯಕ್ರಮದ ಮುಖಾಂತರ ಮೊತ್ತ ಮೊದಲು ನನ್ನ ಕಿವಿಗೆ ಬಿದ್ದ ಕನ್ನಡ ಹಾಡು ಓಹಿಲೇಶ್ವರ ಚಿತ್ರಕ್ಕಾಗಿ ಘಂಟಸಾಲ ಹಾಡಿದ ಈ ದೇಹದಿಂದ ದೂರನಾದೆ ಏಕೆ ಆತ್ಮನೆ. ಆ ಧ್ವನಿ ಕೇಳಿದ ಕೂಡಲೇ ಇದು ತುಂಬುಗಲ್ಲದ ವ್ಯಕ್ತಿಯೊಬ್ಬರು ಹಾಡಿದ ಹಾಡು ಎಂದು ನನಗನ್ನಿಸಿತ್ತು! ಎಸ್. ಜಾನಕಿ ಹಾಡಿದ ಹಾಡುಗಳನ್ನು ಕೇಳಿದಾಗಲೂ ನನಗೆ ಹಾಗೆಯೇ ಅನ್ನಿಸುವುದು. ಎಲ್. ಆರ್. ಈಶ್ವರಿ ಅವರ ಹಾಡುಗಾರಿಕೆಯಲ್ಲಿ ತುಂಟತನ ಅಂತರ್ಗತವಾಗಿರುವ ಹಾಗೆ ಇವರಿಬ್ಬರ ಧ್ವನಿಯಲ್ಲಿ ಒಂದು ಮುದ್ದುತನವಿದೆ.

1945ರಲ್ಲಿ ಸ್ವರ್ಗ ಸೀಮಾ ಎಂಬ ಚಿತ್ರದಲ್ಲಿ ಓ ನಾ ರಾಜಾ ಎಂಬ ಹಾಡಿನ ಮೂಲಕ ಗಾಯಕರಾಗಿ ಚಿತ್ರರಂಗ ಪ್ರವೇಶಿಸಿದ ಇವರ ಹೆಸರು 1950ರ ವರೆಗೆ ಜಿ. ವೆಂಕಟೇಶ್ವರ ರಾವ್ ಅಥವಾ ಘಂಟಸಾಲ ವೆಂಕಟೇಶ್ವರ ರಾವ್ ಎಂದೇ ಉಲ್ಲೇಖಿಸಲ್ಪಡುತ್ತಿತ್ತು. ಅವರು ಪ್ರಥಮವಾಗಿ ಸಂಗೀತ ನಿರ್ದೇಶನ ಮಾಡಿದ ಮನ ದೇಶಂ, ನಂತರದ ಕೀಲು ಗುರ್ರಂ, ಶಾವುಕಾರು ಚಿತ್ರಗಳ ಟೈಟಲ್‌ಗಳನ್ನು ನೋಡಿದರೆ ಈ ವಿಷಯ ವೇದ್ಯವಾಗುತ್ತದೆ. 1951ರಲ್ಲಿ ಬಂದ ಪಾತಾಳ ಭೈರವಿ ಚಿತ್ರದಲ್ಲಿ ಮೊತ್ತಮೊದಲು ಅವರ ಹೆಸರು ಹ್ರಸ್ವವಾಗಿ ಘಂಟಸಾಲ ಎಂದು ನಮೂದಿಸಲ್ಪಟ್ಟಿರುವುದು ಕಂಡು ಬರುತ್ತದೆ. ಅಲ್ಲಿಂದ ಮುಂದೆ ಈಗಿನ ಗಾಯಕರ ನಾಲ್ಕು ಪಟ್ಟು ಧ್ವನಿಭಾರವುಳ್ಳ, ಗುಡಿ ಗೋಪುರಗಳ ಘಂಟಾನಾದದಂಥ ಅವರ ಕಂಚಿನ ಕಂಠಕ್ಕೆ ಘಂಟಸಾಲ ಎಂಬ ನಾಲ್ಕಕ್ಷರದ ಘನ ನಾಮಧೇಯ ಅನ್ವರ್ಥವೇ ಆಗಿ ಹೋಯಿತು. ಚಿತ್ರರಂಗದಲ್ಲಿ ಚಾಲ್ತಿಯಲ್ಲಿರಲು ಚಿಕ್ಕ ಹೆಸರೇ ತಕ್ಕುದೆಂದು ಅವರೇ ಸ್ವತಃ ನಿರ್ಧರಿಸಿದರೋ ಅಥವಾ ಇನ್ಯಾರಾದರೂ ಈ ಬಗ್ಗೆ ಸಲಹೆ ನೀಡಿದರೋ ಎನ್ನುವ ಬಗ್ಗೆ ಮಾಹಿತಿ ಇಲ್ಲ.
4-12-1922ರಂದು ಆಂಧ್ರದ ಗುಡಿವಾಡ ಸಮೀಪದ ಚೌಟಪಲ್ಲಿ ಎಂಬಲ್ಲಿ ಜನಿಸಿದ ಅವರಿಗೂ ಸಮೀಪದ ಘಂಟಸಾಲ ಎಂಬ ಊರಿಗೂ ಯಾವ ನೇರವಾದ ಸಂಬಂಧವೂ ಇಲ್ಲವಂತೆ. ಪುರಾತನ ಕಾಲದಲ್ಲಿ ಅವರ ಕುಟುಂಬದವರು ಅಲ್ಲಿ ನೆಲೆಸಿದ್ದರಿಂದ ಈ ಘಂಟಸಾಲ ಎಂಬ ಹೆಸರು ಅವರ ವಂಶಕ್ಕೆ ಅಂಟಿಕೊಂಡಿತು ಎಂದು ಹೇಳಲಾಗುತ್ತದೆ. ಅಂತೂ ಆ ಊರಿಗೆ ಜಗದ್ವಿಖ್ಯಾತವಾಗುವ ಯೋಗವಿತ್ತು!
ಅವರಿಗೆ ಸಂಗೀತ ತಂದೆಯಿಂದಲೇ ಬಳುವಳಿಯಾಗಿ ಬಂದಿತ್ತು. ಯೌವನದಲ್ಲಿ ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಭಾಗವಹಿಸಿ ಜೈಲುವಾಸವನ್ನೂ ಅನುಭವಿಸಿದ್ದರು. ಈ ರಾಜಕೀಯ ತನಗಲ್ಲವೆಂದು ನಿರ್ಧರಿಸಿದ ಅವರು ಬಳಿಕ ವಿವಿಧ ಗುರುಗಳ ಬಳಿ ಶಾಸ್ತ್ರೀಯ ಸಂಗೀತಾಭ್ಯಾಸ ಮಾಡಿ ವಿಜಯನಗರಂ ಸಂಗೀತ ನೃತ್ಯ ಕಾಲೇಜಿನಿಂದ ವಿದ್ವತ್ ಪದವಿ ಪಡೆದರು. ವಿದ್ಯಾಭ್ಯಾಸ ಕಾಲದಲ್ಲಿ ವಾರಾನ್ನ, ಭಿಕ್ಷಾನ್ನಗಳಿಗೂ ಮೊರೆ ಹೋಗಬೇಕಾಗಿ ಬಂದಿತ್ತಂತೆ. ವಿದ್ವತ್ ಪದವಿ ಪಡೆದ ಮೇಲೆ ಕೆಲಕಾಲ ಆಕಾಶವಾಣಿಯಲ್ಲಿ ಕಾರ್ಯಕ್ರಮಗಳನ್ನು ನೀಡಿದ ಅವರು ತನ್ನದೇ ತಂಡ ಕಟ್ಟಿಕೊಂಡು ಮದುವೆ ಇತ್ಯಾದಿ ಸಮಾರಂಭಗಳಲ್ಲಿ ಸಂಗೀತ ಗೋಷ್ಟಿಗಳನ್ನು ನಡೆಸುತ್ತಿದ್ದರು. ಅವರ ಕಂಠದಲ್ಲಿದ್ದ ಮಾಧುರ್ಯವನ್ನು ಗುರುತಿಸಿದ ಸಮುದ್ರಾಲ ಸೀನಿಯರ್ ಚಿತ್ರರಂಗದಲ್ಲಿ ಅದೃಷ್ಟ ಪರೀಕ್ಷಿಸುವಂತೆ ಅವರಿಗೆ ಸಲಹೆ ನೀಡಿದರು. ಆರಂಭದಲ್ಲಿ ಕೋರಸ್ ಗಾಯಕನಾಗಿ ಚಿತ್ರರಂಗಕ್ಕೆ ಅಡಿಯಿಸಿದ ಅವರು ಹಂತಹಂತವಾಗಿ ಮೇಲೇರತೊಡಗಿದರು. ಆಗಲೇ ಹೇಳಿದಂತೆ ಸ್ವರ್ಗ ಸೀಮಾ ಎಂಬ ಚಿತ್ರದಲ್ಲಿ ಓ ನಾ ರಾಜಾ ಎಂಬ ಹಾಡಿನ ಮೂಲಕ ಗಾಯಕನಾಗಿ 1949ರಲ್ಲಿ ಎನ್.ಟಿ. ರಾಮ ರಾವ್ ಅವರ ಪ್ರಥಮ ಚಿತ್ರ ಮನ ದೇಶಂ ಮೂಲಕ ಸಂಗೀತ ನಿರ್ದೇಶನ ಕ್ಷೇತ್ರಕ್ಕೂ ಕಾಲಿರಿಸಿ ತ್ರಿವಿಕ್ರಮನಾಗಿ ಬೆಳೆದರು. ಹಿಂದಿಯ ಹೇಮಂತ್ ಕುಮಾರ್ ಮೊದಲಾದ ಗಾಯಕರೂ ಸಂಗೀತ ನಿರ್ದೇಶನ ಮಾಡಿದ್ದಿದೆ. ಆದರೆ ನಂಬರ್ ವನ್ ಗಾಯಕನೊಬ್ಬ ಇತರ ಸಮಕಾಲೀನ ದಿಗ್ಗಜ ಸಂಗೀತಗಾರರಿಗೆ ಸರಿಸಾಟಿಯಾದ ನಂಬರ್ ವನ್ ಸಂಗೀತ ನಿರ್ದೇಶಕನೂ ಆದ ಉದಾಹರಣೆ ಇನ್ಯಾವ ಚಿತ್ರರಂಗದಲ್ಲೂ ಸಿಗಲಾರದು. ಇತರ ಸಂಗೀತ ನಿರ್ದೇಶನದ ಚಿತ್ರಗಳಲ್ಲಿ ಎಷ್ಟು ಮಧುರಾತಿ ಮಧುರ ಗೀತೆಗಳನ್ನು ಹಾಡಿದರೋ ಅಷ್ಟೇ ಸುಮಧುರ ಗೀತೆಗಳನ್ನು ತನ್ನ ಸಂಗೀತ ನಿರ್ದೇಶನದ ಚಿತ್ರಗಳಲ್ಲಿ ಹಾಡಿದ / ಹಾಡಿಸಿದ ಹೆಗ್ಗಳಿಕೆ ಅವರದು. ಎಲ್ಲ ಗಾಯಕ ಗಾಯಕಿಯರೊಡನೆ ಅವರು ಹಾಡಿದ್ದರೂ ಸುಶೀಲ ಮತ್ತು ಪಿ. ಲೀಲ ಅವರೊಂದಿಗಿನ ಹಾಡುಗಳು ಹೆಚ್ಚು ಜನಪ್ರಿಯ.
ಘಂಟಸಾಲ ಹಾಡಿರುವ ಸಾವಿರಾರು ಗೀತೆಗಳಲ್ಲಿ ಹುಡುಕಿದರೂ ಒಂದು ಜೊಳ್ಳು ಸಿಗಲಾರದು. ತಾನು ಸ್ವತಃ ಸಂಗೀತ ನಿರ್ದೇಶಕನಾಗಿದ್ದುದರಿಂದ ಇತರರ ಹಾಡುಗಳಲ್ಲೂ ಹೆಚ್ಚು ಹೆಚ್ಚು ಮಾಧುರ್ಯ ತುಂಬಲು ಅವರಿಗೆ ಸಾಧ್ಯವಾಗುತ್ತಿತ್ತೋ ಏನೋ. ಈ ಲೇಖನಕ್ಕಾಗಿ ಅಂತರ್ಜಾಲವನ್ನು ಜಾಲಾಡುತ್ತಿರುವಾಗ ತೆಲುಗಿನಲ್ಲಿ ಇತರ ಭಾಷೆಗಳಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಶಾಸ್ತ್ರೀಯ ಸಂಗೀತವನ್ನು ಆಧರಿಸಿದ ಗೀತೆಗಳಿರುವುದು ಗಮನಕ್ಕೆ ಬಂತು. ಶಾಸ್ತ್ರೀಯ ಸಂಗೀತದಲ್ಲಿ ನುರಿತ ಅನೇಕ ಸಂಗೀತ ನಿರ್ದೇಶಕರನ್ನು ಹೊಂದಿರುವುದು ಮಾತ್ರವಲ್ಲ, ಅದನ್ನು ಅರೆದು ಕುಡಿದ ಘಂಟಸಾಲ ಅವರಂಥ ಗಾಯಕ ಅವರಿಗೆ ದೊರಕಿದ್ದು ಇದಕ್ಕೆ ಮುಖ್ಯ ಕಾರಣ ಎಂದು ನನಗನ್ನಿಸಿತು.
1947ರ ಯೋಗಿ ವೇಮನ ಚಿತ್ರದ ಒಂದು ಹಾಡಿನಲ್ಲಿ ಅವರು ನೃತ್ಯದ ನಟ್ಟುವಾಂಗ ವಾದಕನಾಗಿ ಕಾಣಿಸಿಕೊಂಡಿದ್ದರು. 1960ರ ವೆಂಕಟೇಶ್ವರ ಮಹಾತ್ಮ್ಯಂ ಚಿತ್ರದಲ್ಲಿ ಅವರು ತಿರುಪತಿ ದೇವಳದ ಗರ್ಭಗುಡಿಯ ಎದುರು ಕುಳಿತು ಹಾಡುವ ದೃಶ್ಯವಿದೆ. 15ನೇ ಶತಮಾನದ ಸಂತ ಅನ್ನಮಯ್ಯ ಅರ್ಥಾತ್ ಅನ್ನಮಾಚಾರ್ಯರನ್ನು ಹೊರತು ಪಡಿಸಿದರೆ ವೆಂಕಟೇಶ್ವರನ ಎದುರು ಕುಳಿತು ಹಾಡುವ ಸೌಭಾಗ್ಯ ಸಿಕ್ಕಿದ್ದು ಇವರಿಗೆ ಮಾತ್ರವಂತೆ.
ಚಿತ್ರರಂಗದೊಡನೆ ಸಂಬಂಧ ಹೊಂದಿರುವುದರಿಂದ ಶ್ರೇಷ್ಠ ಶಾಸ್ತ್ರೀಯ ಸಂಗೀತ ವಿದ್ವಾಂಸನಾಗಿದ್ದರೂ ಇತರ ಸಮಕಾಲೀನ ಶಾಸ್ತ್ರೀಯ ಸಂಗೀತ ಕಲಾವಿದರು ಇವರಿಗೆ ಸೂಕ್ತ ಮನ್ನಣೆ ಕೊಡುತ್ತಿರಲಿಲ್ಲವಂತೆ. ಆದರೆ 1959ರಲ್ಲಿ ಬಂದ ಜಯಭೇರಿ ಚಿತ್ರದ ಅದುವರೆಗೆ ಕೇಳದ ರಾಗದಲ್ಲಿದ್ದ ರಸಿಕ ರಾಜ ತಗುವಾರಮು ಎಂಬ ಶಾಸ್ತ್ರೀಯ ಹಾಡಿನಲ್ಲಿ ಇವರ ನಿರ್ವಹಣೆಯನ್ನು ನೋಡಿದ ಮೇಲೆ ಅವರೆಲ್ಲ ಚಿತ್ ಆಗಿ ತಮ್ಮ ಅಭಿಪ್ರಾಯ ಬದಲಿಸಿದರೆಂದು ಪ್ರತೀತಿ. ಆ ಚಿತ್ರದ ಸಂಗೀತ ನಿರ್ದೇಶಕ ಪೆಂಡ್ಯಾಲ ನಾಗೇಶ್ವರ ರಾವ್ ಆರೋಹಣದಲ್ಲಿ ಕಾನಡಾ ಮತ್ತು ಅವರೋಹಣದಲ್ಲಿ ಚಕ್ರವಾಕ ಸ್ವರಗಳನ್ನು ಹೊಂದಿಸಿ ಸಂಯೋಜಿಸಿದ ಈ ಹೊಸ ರಾಗಕ್ಕೆ ವಿಜಯಾನಂದ ಚಂದ್ರಿಕಾ ಎಂಬ ಹೆಸರು ಕೊಟ್ಟಿದ್ದರು. ಜಗದೇಕವೀರನ ಕಥೆ ಚಿತ್ರದ ಹಿಂದುಸ್ತಾನಿ ಶೈಲಿಯ ಶಿವಶಂಕರಿ ಮತ್ತು ಶುದ್ಧ ಕರ್ನಾಟಕ ಸಂಗೀತ ಶೈಲಿಯ ಈ ಹಾಡು, ಇವುಗಳ ಮೂಲಕ ಎರಡೂ ಪದ್ಧತಿಗಳಲ್ಲಿ ತನ್ನ ಪಾಂಡಿತ್ಯವೆಂತಹುದು ಎಂದು ಘಂಟಸಾಲ ಜಗತ್ತಿಗೆ ಜಾಹೀರುಪಡಿಸಿದರು. ಈ ರಸಿಕ ರಾಜ ಹಾಡು ಕೂಡ ಶಿವಶಂಕರಿಯಂತೆಯೇ ರಿಯಲ್ ಟೈಮ್ ಶೋಗಳಲ್ಲಿ ಭಾಗವಹಿಸುವ ಯುವ ಕಲಾವಿದರ ಮೆಚ್ಚಿನದಾಗಿದ್ದು ಅನೇಕರು ಇವುಗಳನ್ನು ಚೆನ್ನಾಗಿಯೇ ಹಾಡುತ್ತಾರೆ.
ಈ ಜಯಭೇರಿ ಚಿತ್ರದ ಬಗ್ಗೆ ಇನ್ನಷ್ಟು ಮಾಹಿತಿ ಕಲೆ ಹಾಕಲು ನಾನು ಪ್ರಯತ್ನಿಸುತ್ತಿದ್ದಾಗ ಅರಸುತ್ತಿದ್ದ ಬಳ್ಳಿಯೊಂದು ಕಾಲಿಗೆ ತೊಡರಿತು. ಪಿ. ಬಿ. ಶ್ರೀನಿವಾಸ್ ಮತ್ತು ಘಂಟಸಾಲ ಜೊತೆಯಾಗಿ ಹಾಡಿದ ಹಾಡು ಯಾವುದಾದರೂ ಇದೆಯೇ ಎಂದು ತುಂಬಾ ಸಮಯದಿಂದ ನಾನು ಹುಡುಕುತ್ತಿದ್ದೆ. ಈ ಚಿತ್ರದಲ್ಲಿ ಮದಿ ಶಾರದಾ ದೇವಿ ಮಂದಿರಮೇ ಎಂಬ ಹಾಡಿನಲ್ಲಿ ಘಂಟಸಾಲ ಜೊತೆಗೆ ಪಿ. ಬಿ. ಶ್ರೀನಿವಾಸ್ ತಾನೇ ತೆರೆಯ ಮೇಲೆ ಕಾಣಿಸಿಕೊಂಡು ಹಾಡಿರುವುದನ್ನು ತಿಳಿದು ನನ್ನ ಆನಂದಕ್ಕೆ ಪಾರವೇ ಇಲ್ಲದಂತಾಯಿತು. ಇನ್ನೊಬ್ಬ ಗಾಯಕ ರಘುನಾಥ ಪಾಣಿಗ್ರಾಹಿ ಕೂಡ ಕಾಣಿಸಿಕೊಂಡ ಈ ಹಾಡಿನಲ್ಲಿ ಪಿ.ಬಿ.ಎಸ್ ವೀಣೆ ನುಡಿಸುವ ದೃಶ್ಯವೂ ಇದೆ! ಆದರೆ ಎಳೆ ಪ್ರಾಯ ಮತ್ತು ಪಾತ್ರಕ್ಕೆ ತಕ್ಕ ವೇಷ ಭೂಷಣ ಧರಿಸಿರುವುದರಿಂದ ಅವರನ್ನು ಗುರುತಿಸುವುದು ಸ್ವಲ್ಪ ಕಷ್ಟ. ಆರಂಭದ ಶ್ಲೋಕವನ್ನು ಹಾಡಿದವರು ಬಾಲಮುರಳಿಕೃಷ್ಣ.
ಗ್ರಾಮೊಫೋನ್‍ಗಳ ಕಾಲದ ಯಾವುದೇ ಸಮಾರಂಭಗಳಲ್ಲಿ ಧ್ವನಿವರ್ಧಕದ ಮೂಲಕ ಮೊದಲು ಕೇಳಿಬರುತ್ತಿದ್ದುದು ವಿನಾಯಕ ಚೌತಿ ಚಿತ್ರದಲ್ಲಿ ಅವರು ಹಾಡಿದ ವಾತಾಪಿ ಗಣಪತಿಂ ಮತ್ತು ಅದೇ ರೆಕಾರ್ಡಿನ ಇನ್ನೊಂದು ಬದಿಯಲ್ಲಿದ್ದ ದಿನಕರಾ ಶುಭಕರಾ ಹಾಡುಗಳು. ಅವರ ಅನೇಕ ಪ್ರೈವೇಟ್ ಧ್ವನಿಮುದ್ರಿಕೆಗಳೂ ಪ್ರಸಿದ್ಧವಾಗಿದ್ದು ಭಗವದ್ಗೀತೆಯ ಆಯ್ದ 107 ಶ್ಲೋಕಗಳನ್ನು ಸುಶ್ರಾವ್ಯವಾಗಿ ಹಾಡಿ ತಾನೇ ಅರ್ಥ ವಿವರಣೆ ನೀಡಿದ LP ಬಲು ಜನಪ್ರಿಯ. ಪಾರ್ಥಾಯ ಪ್ರತಿಬೋಧಿತಾಂ ಭಗವತಾ ನಾರಾಯಣೇನ ಸ್ವಯಂ ಎಂದು ಅವರ ಗೀತಾ ಪಾರಾಯಣ ಆರಂಭವಾದರೆ ಆ ಸ್ಥಳದಲ್ಲಿ ಮರಾಠಾ ದರ್ಬಾರ್ ಅಗರಬತ್ತಿ ತಾನಾಗಿ ಹೊತ್ತಿಕೊಂಡಂತಾಗಿ ದೈವೀಕ ವಾತಾವರಣ ಸೃಷ್ಠಿಯಾಗುತ್ತದೆ. ಇಲ್ಲಿ ಅವರು ಬಳಸಿರುವ ರಾಗಗಳೆಲ್ಲವನ್ನೂ ಗುರುತಿಸಲು ಸಾಧ್ಯವಾದರೆ ಕರ್ನಾಟಕ ಸಂಗೀತದ ಬಗ್ಗೆ ಪಿ.ಹೆಚ್. ಡಿ ಪ್ರಬಂಧವನ್ನೇ ಬರೆಯಬಹುದು!
ಅವರು ತೆಲುಗು ಚಿತ್ರಸಂಗೀತದ ಕುಲದೇವರಾದರೂ ದಕ್ಷಿಣದ ಇತರ ಭಾಷೆಗಳ ಪಂಚಾಯತನದಲ್ಲೂ ಅವರಿಗೆ ಆದರದ ಸ್ಥಾನವಿತ್ತು. ಕನ್ನಡದಲ್ಲಿ ಸ್ವಲ್ಪ ಹೆಚ್ಚೇ ಇತ್ತು. ಕನ್ನಡದಲ್ಲಿ ಅವರು ಹಾಡಿದ, ಸಂಗೀತ ನೀಡಿದ ಚಿತ್ರಗಳ ಸಂಖ್ಯೆ ಸೀಮಿತವಾದರೂ ಎಂದಾದರೊಮ್ಮೆ ಸೌಂದರರಾಜನ್ ಅಥವಾ ಸಿರ್ಕಾಳಿ ಗೋವಿಂದರಾಜನ್ ಹಾಡಿದಾಗ ಅನ್ನಿಸುತ್ತಿದ್ದಂತೆ ಬೇರೆ ಭಾಷೆಯವರಾರೋ ಹಾಡಿದರು ಅನ್ನಿಸುತ್ತಿರಲಿಲ್ಲ. ಹಳೆಯ ತಲೆಮಾರಿನ ಸಂಗೀತ ನಿರ್ದೇಶಕರೆಲ್ಲರೂ 1956ರಿಂದ ಅವರ ಪ್ರತಿಭೆ ಬಳಸಿಕೊಂಡರೂ ಯಾಕೋ ರಾಜನ್ ನಾಗೇಂದ್ರ ನಿರ್ದೇಶನದಲ್ಲಿ ಅವರು ಒಂದೂ ಕನ್ನಡ ಹಾಡು ಹಾಡಿಲ್ಲ. ಕನ್ನಡದಲ್ಲಿ ಅವರು ಎಸ್. ಜಾನಕಿ ಅವರೊಡನೆಯೂ ಒಂದೇ ಒಂದು ಹಾಡು ಹಾಡದಿರುವುದು ಗಮನ ಸೆಳೆಯುವ ಅಂಶ. ಸೋದರಿ, ಓಹಿಲೇಶ್ವರ ಕಾಲದಿಂದ ಆಗಾಗ ರಾಜಕುಮಾರ್ ಧ್ವನಿಯಾಗುತ್ತಿದ್ದ ಅವರು ರಾಜ್ ಮತ್ತು ಪಿ.ಬಿ.ಸ್ ಅವರ ನಡುವೆ ಶರೀರ - ಶಾರೀರ ಸಂಬಂಧ ನೆಲೆಗೊಂಡ ನಂತರವೂ ಅನೇಕ ಬಾರಿ ಅವರಿಗಾಗಿ ಹಾಡಿದಾಗ ಅಸಹಜ ಎಂದೇನೂ ಅನ್ನಿಸುತ್ತಿರಲಿಲ್ಲ. ಡಬ್ಬಿಂಗ್ ಚಿತ್ರಗಳನ್ನು ಹೊರತುಪಡಿಸಿದರೆ ಕನ್ನಡದಲ್ಲಿ ಅವರು ಮೊತ್ತ ಮೊದಲು ಸಂಗೀತ ನಿರ್ದೇಶನ ಮಾಡಿದ ಚಿತ್ರ ವಾಲ್ಮೀಕಿ. 1970ರಲ್ಲಿ ಕೊನೆಯದಾಗಿ ನನ್ನ ತಮ್ಮ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡಿದರೂ ತಾನು ಒಂದೂ ಹಾಡು ಹಾಡದೆ ಪಿ.ಬಿ.ಎಸ್ ಧ್ವನಿಯನ್ನು ಬಳಸಿಕೊಂಡಿದ್ದರು. ಧರ್ಮಸ್ಥಳ ಮಹಾತ್ಮೆಯ ಜಯ ಜಯ ಲೋಕಾವನ ಹಾಡು 1975ರ ಮಹದೇಶ್ವರ ಪೂಜಾಫಲ ಚಿತ್ರದಲ್ಲಿ ಮರುಬಳಕೆಯಾಗಿತ್ತು.
ಅವರ ಪ್ರಮುಖ ಕನ್ನಡ ಚಿತ್ರಗಳ ವಿವರಗಳುಳ್ಳ ready reckoner ರೀತಿಯ ತಖ್ತೆಯೊಂದನ್ನು ಇಲ್ಲಿ ನೋಡಬಹುದು. ಆಯಾ ಚಿತ್ರಗಳ ಒಂದೊಂದು ಪ್ರಾತಿನಿಧಿಕ ಹಾಡಿನ ಉಲ್ಲೇಖವೂ ಇದೆ. ಈ ಪಟ್ಟಿ ಪರಿಪೂರ್ಣವೆಂದು ನಾನು ಹೇಳಲಾರೆ. ಪಾಂಡವ ವನವಾಸಮು, ಸಂಪೂರ್ಣ ರಾಮಾಯಣದಂತಹ ಇನ್ನೂ ಕೆಲವು ಡಬ್ಬಿಂಗ್ ಚಿತ್ರಗಳು ಇರಬಹುದು. ಕನ್ನಡದ ಅವರ ಹಾಡುಗಳೆಲ್ಲವೂ ಅತಿ ಪ್ರಸಿದ್ಧವಾಗಿದ್ದು ಅಂತರ್ಜಾಲದಲ್ಲೂ ಸುಲಭವಾಗಿ ಸಿಗುವುದರಿಂದ ಇಲ್ಲಿ ಯಾವುದನ್ನೂ ಕೇಳಿಸುವುದಿಲ್ಲ.
ದೀರ್ಘ ಕಾಲ ಅನಾರೋಗ್ಯದಿಂದ ಬಳಲಿ 11 ಫೆಬ್ರವರಿ1974ರಂದು ನಿಧನರಾದಾಗ ಅವರಿಗೆ ಕೇವಲ 52ರ ವಯಸ್ಸು. ಹೀಗಾಗದಿರುತ್ತಿದ್ದರೆ ಕನಿಷ್ಠ ಮುಂದಿನ ಇನ್ನೂ ಇಪ್ಪತ್ತು ವರುಷ ಅವರ ಸಾರ್ವಭೌಮತ್ವವನ್ನು ಯಾರೂ ಕಸಿಯಲು ಸಾಧ್ಯವಾಗುತ್ತಿರಲಿಲ್ಲ. ಘಂಟಸಾಲ ಇಲ್ಲದೆ ದಶಕಗಳೇ ಸಂದು ಹೋದರೂ ಅಭಿಮಾನಿಗಳ ಹೃದಯದಲ್ಲಿ ಅವರ ಸ್ಥಾನವನ್ನು ತುಂಬಲು ಯಾರಿಗೂ ಸಾಧ್ಯವಾಗಿಲ್ಲ. ತೆಲುಗು ಚಿತ್ರ ಸಂಗೀತದಲ್ಲಿ ಪ್ರಥಮ 100 ಸ್ಥಾನಗಳು ಅವರಿಗೇ. 101ರಿಂದ ಇತರರ ಗಣನೆ ಆರಂಭವಾಗುತ್ತದೆ ಎಂದು ಅವರ ಕಟ್ಟಾ ಅಭಿಮಾನಿಗಳು ಹೇಳುವುದಿದೆ. ಸಂಗೀತದ ಶೋ ರೂಮ್‌ಗಳ ತೆಲುಗು ವಿಭಾಗದಲ್ಲಿ ಇಂದಿಗೂ ಅರ್ಧಕ್ಕಿಂತ ಹೆಚ್ಚಿನ ಶೆಲ್ಫುಗಳು ಅವರಿಗೇ ಮೀಸಲಾಗಿರುತ್ತವೆ. ಘಂಟಸಾಲ ಮಾಸ್ಟರ್ ಹೆಸರು ಹೇಳಿಕೊಂಡು ಬದುಕು ಕಟ್ಟಿಕೊಂಡವರು ಅಸಂಖ್ಯ ಮಂದಿ ಇದ್ದಾರೆ.