Monday 4 June 2018

ಚೆಂದದ ಚೆಲುವಿನ ತಾರೆಯ ಹಾಡು


ಅದು 1973ರಲ್ಲಿ ನಾನು ದೂರವಾಣಿ ಇಲಾಖೆಗೆ ಆಯ್ಕೆಯಾಗಿ ತರಬೇತಿಗೆ ಯಾವಾಗ ಕರೆ ಬರುತ್ತದೆಂದು ಕಾಯುತ್ತಿದ್ದ ಕಾಲ. ಆಗ ತಾನೆ ನಾಗರಹಾವು ಚಿತ್ರದ ಹಾಡುಗಳು ಬಿಡುಗಡೆಯಾಗಿ ಆಕಾಶವಾಣಿಯಲ್ಲಿ ಪ್ರಸಾರವಾತೊಡಗಿದ್ದವು.  ಕನ್ನಡ ನಾಡಿನ ವೀರ ರಮಣಿಯ, ಹಾವಿನ ದ್ವೇಷ  ಇತ್ಯಾದಿ ಹಾಡುಗಳನ್ನು ಕೇಳಿದಾಗ ಅದು ಐತಿಹಾಸಿಕ ಚಿತ್ರವಾಗಿರಬಹುದೆಂದು ನನಗನ್ನಿಸಿತ್ತು!  ಚಿತ್ರದುರ್ಗದ ಕಲ್ಲಿನ ಕೋಟೆಯ ಓಬವ್ವನ ಕಥಾನಕ, ಹಾವಿನ ದ್ವೇಷ ಹಾಡಲ್ಲಿ ಇದ್ದ ರಾಮಾಚಾರಿ ಎಂಬ ಉಲ್ಲೇಖ ಮತ್ತು ರೋಷಾವೇಶದ ಸಾಲುಗಳು, ಐತಿಹಾಸಿಕ ಕಾದಂಬರಿಗಳಿಗೆ ಪ್ರಸಿದ್ಧರಾಗಿದ್ದ ತ.ರಾ.ಸು ಕೃತಿಯಾಧಾರಿತ ಎಂದು ಪತ್ರಿಕೆಗಳಲ್ಲಿ ಬಂದಿದ್ದ ವರದಿಗಳು ನನ್ನ ಊಹೆಗೆ ಕಾರಣ.  ಆಗ ನಾನು ಚಿತ್ರಗೀತೆಗಳ ಮಟ್ಟಿಗೆ ಏಕಪಾಠಿಯಾಗಿದ್ದೆ.  ಹಾಡುಗಳನ್ನು ರೇಡಿಯೋದಲ್ಲಿ ಒಮ್ಮೆ ಕೇಳಿದರೆ ಸಾಕು, ಥಟ್ಟಂತ ಅವುಗಳನ್ನು ಕೊಳಲಿನಲ್ಲಿ ನುಡಿಸಬಲ್ಲವನಾದ್ದೆ.  ಆದರೆ ಈ ಚಿತ್ರದ ಉಳಿದೆಲ್ಲ ಹಾಡುಗಳನ್ನು ಕೇಳಿ ಮನನ ಮಾಡಿಕೊಳ್ಳುವಷ್ಟರಲ್ಲಿ ತರಬೇತಿಗೆ ಕರೆ ಬಂದು ಬೆಂಗಳೂರಿಗೆ ಹೊರಟು ನಿಂತೆ.  ಅಲ್ಲಿ ನಾನು ಉಳಿದುಕೊಂಡಿದ್ದ ಮಿತ್ರರ ರೂಮಲ್ಲಿ ಟ್ರಾನ್ಸಿಸ್ಟರ್ ಇದ್ದುದರಿಂದ ಚಿತ್ರದ ಎಲ್ಲ ಹಾಡುಗಳ ತಕ್ಕಮಟ್ಟಿನ ಪರಿಚಯವೂ ಆಯಿತು. ಅದು ಐತಿಹಾಸಿಕ ಅಲ್ಲ ಸಾಮಾಜಿಕ ಚಿತ್ರ ಎಂಬ ವಿಷಯವೂ ತಿಳಿಯಿತು. ಕರ್ಪೂರದ ಗೊಂಬೆ ನಾನು ಹಾಡು ನನ್ನನ್ನು ಬಲು ಬೇಗ ಆಕರ್ಷಿಸಿತು. ಸುಲಭವಾಗಿ ಅದನ್ನು ಕೊಳಲಲ್ಲಿ ನುಡಿಸಲು ಕಲಿತೆ.  ಆದರೆ ನನ್ನನ್ನು ಹೆಚ್ಚು ಕಾಡಿದ್ದು ಚೆಂದದ ಚೆಲುವಿನ ತಾರೆಯನ್ನು ಕರೆಯುವ ಬಾರೇ ಬಾರೇ ಹಾಡು.  ಒಂದು ವಾರಾಂತ್ಯದಲ್ಲಿ ಸಂಜಯ್ ಟಾಕೀಸಿನಲ್ಲಿ  ಸಿನಿಮಾ ನೋಡಿದ ಮೇಲಂತೂ ಆ ಹಾಡಿನ ಮೇಲಿನ ಮೋಹ ಇನ್ನೂ ಹೆಚ್ಚಾಯಿತು.  ಆದರೆ ಇತರ ಹಾಡುಗಳನ್ನು ಸುಲಭವಾಗಿ ಗ್ರಹಿಸಿದ ನನಗೆ  ಇದೇಕೋ ಕಬ್ಬಿಣದ ಕಡಲೆ ಅನ್ನಿಸಿತ್ತು.  ಅದರ ಏರಿಳಿತಗಳೇ ಅರ್ಥವಾಗುತ್ತಿರಲಿಲ್ಲ.  ಗಾಂಧಿ ಬಜಾರ್ ಸಮೀಪದ ಡಿ.ವಿ.ಜಿ ರೋಡಲ್ಲಿದ್ದ ಭಾರತಿ ಎಂಬ ಹೋಟೆಲಲ್ಲಿ ಒಮ್ಮೆ ಕಾಫಿ ಕುಡಿಯಲು ಹೋಗಿದ್ದಾಗ ಅಲ್ಲಿದ್ದ ಜೂಕ್ ಬಾಕ್ಸಲ್ಲಿ ಈ ಹಾಡು ಕೇಳಿ ಬರುತ್ತಿತ್ತು.  ಅದನ್ನು ಮತ್ತೆ ಮತ್ತೆ ಕೇಳುವ ಸಲುವಾಗಿ ಆ ಮೇಲೆ  ಅನೇಕ ಸಾರಿ ಆ ಹೋಟೆಲಿಗೆ ಭೇಟಿ ನೀಡಿದ್ದೆ.  ಆದರೆ ಆ ಹಾಡನ್ನು ನಾನು ಗೆದ್ದದ್ದು ಎಷ್ಟೋ ವರ್ಷಗಳ ನಂತರ ಕ್ಯಾಸೆಟ್, CDಗಳ ಯುಗ ಆರಂಭವಾದ ನಂತರವೇ.  ಅಷ್ಟೇನೂ ಕಠಿಣವಲ್ಲದ ಇದು ಅದೇಕೆ ನನ್ನನ್ನು ಅಷ್ಟು ಸಮಯ ಸತಾಯಿಸಿತು ಎಂದು ಆ ಮೇಲೆ ನನಗೆ ಅನ್ನಿಸಿದ್ದಿದೆ.

ಶಂಕರ್ ಜೈಕಿಶನ್, ಓ.ಪಿ.ನಯ್ಯರ್,  ಹಿರಿಯ ಸಂಗೀತ ನಿರ್ದೇಶಕ ಎಸ್.ಡಿ. ಬರ್ಮನ್ ಮುಂತಾದ ಪ್ರಸಿದ್ಧರ ಅನೇಕ ರಚನೆಗಳಿಗೆ  ಪಾಶ್ಚಾತ್ಯ ಸಂಗೀತದ ರೆಕಾರ್ಡುಗಳು ಸ್ಪೂರ್ತಿಯಾಗಿದ್ದುದು  ರಹಸ್ಯವೇನೂ ಅಲ್ಲ. ಹಿರಿಯಕ್ಕನ ಚಾಳಿ ಮನೆಮಂದಿಗೆಲ್ಲ ಎಂಬಂತೆ  ಹಿಂದಿಯ ಪ್ರಸಿದ್ಧ ಹಾಡುಗಳು ಕನ್ನಡ ಸೇರಿದಂತೆ ದಕ್ಷಿಣದ ಎಲ್ಲ ಭಾಷೆಗಳ ಅನೇಕ ಹಾಡುಗಳ ಮೇಲೆ ಪ್ರಭಾವ ಬೀರಿರುವುದೂ ಗೊತ್ತಿರುವ ವಿಷಯವೇ.  ಆರಂಭದಲ್ಲಿ ಕೆಲವು ಡಬ್ಬಿಂಗ್ ಸಿನಿಮಾಗಳಿಗೆ ಮೂಲ ಹಿಂದಿ ಹಾಡುಗಳ ಧಾಟಿಯಲ್ಲಿ ಕನ್ನಡ ಹಾಡುಗಳನ್ನು ಮರು ಸೃಷ್ಟಿಸಿದ  ವಿಜಯ ಭಾಸ್ಕರ್ ಅವರ ನಂತರದ ಅನೇಕ ಹಾಡುಗಳ interludeಗಳಲ್ಲಿ ಹಿಂದಿಯ ಛಾಯೆ ಗುರುತಿಸಬಹುದು.  ಆದರೆ ಈ ಬಾರೆ ಬಾರೆ ಹಾಡು ಕ್ಲಿಫ್ ರಿಚಾರ್ಡ್ ಅವರ ಎವರ್ ಗ್ರೀನ್ ಟ್ರೀ ಎಂಬ ಪಾಶ್ಚಾತ್ಯ ಹಾಡಿನ ಸ್ಪೂರ್ತಿಯಿಂದ ಜನ್ಮ ತಾಳಿದ್ದು ಎಂದು ಅನೇಕರಿಗೆ ಗೊತ್ತಿರಲಾರದು.  ಈ ಹಾಡಿನ prelude  ಮತ್ತು ಒಂದು interlude ಆಗಿ ಬಳಸಲಾದ ನೀ ಪನಿ ಸಾ ಪಾ ಸಾ   ನೀ ಪಮ ಪಸಾ ಎಂಬ ಸಾಲು ಆ ರೆಕಾರ್ಡಿನಿಂದ   ಎತ್ತಿಕೊಂಡದ್ದು. ನನಗೆ ಈ ಮಾಹಿತಿ ಒದಗಿಸಿದವರು ಮಿತ್ರ ಮೂರ್ತಿ ದೇರಾಜೆ. ಆದರೆ ಈ ತಳಪಾಯದ ಮೇಲೆ ಸ್ವಂತ ಶೈಲಿಯ ಸುಂದರ ಸೌಧವನ್ನು ವಿಜಯ ಭಾಸ್ಕರ್ ನಿರ್ಮಿಸಿದರು ಎಂಬುದರಲ್ಲಿ ಎರಡು ಮಾತಿಲ್ಲ.  ಇದೊಂದು ರೀತಿ ವಿದೇಶಿ ಮಾವಿನ ಗಿಡಕ್ಕೆ ದೇಸೀ ತಳಿಯ ಕಸಿ ಕಟ್ಟಿದಂತೆ! 

ಸ ಗ21 ಪ ನಿ2 ಸ - ಸ ನಿ22 ಪ ಮ12 ರಿ2 ಎಂಬ ಭೀಮ್ ಪಲಾಸ್ ರಾಗದ ಸ್ವರಗಳನ್ನು ಆಧಾರವಾಗುಳ್ಳ ಈ ಹಾಡಿನ ಚಲನೆ ಪಹಾಡಿ ರಾಗವನ್ನು ಹೋಲುತ್ತದೆ ಎನ್ನುವುದು ಹೆಚ್ಚು ಸೂಕ್ತ. ಮಧ್ಯದಲ್ಲಿ 1 ರ ಸ್ಪರ್ಶವೂ ಇದೆ. ಮಂದ್ರ ನಿಷಾದದಿಂದ ತಾರ ಸಪ್ತಕದ ಗಾಂಧಾರದ ವರೆಗೆ ಹರಹು ಇರುವ ಹಾಡು ಮಧ್ಯ ಸಪ್ತಕದಲ್ಲೇ ಹೆಚ್ಚು ಸಂಚರಿಸುತ್ತದೆ.  ಪಿ.ಬಿ. ಶ್ರೀನಿವಾಸ್ ಅವರ ಹೆಚ್ಚಿನ ಹಾಡುಗಳಲ್ಲಿ ಕಾಣ ಸಿಗುವ ವಿಶಿಷ್ಟ ಮುರ್ಕಿಗಳು ಇಲ್ಲಿಲ್ಲ.  ಹಾಡಿನುದ್ದಕ್ಕೂ ಸ್ವರಗಳ ಏರಿಳಿತಗಳು ಬಹಳವೇ ಇದ್ದರೂ ಎಲ್ಲ ನೇರ noteಗಳು. ಎಲ್ಲ ಸಾಲುಗಳ landing noteಗಳು  ಬಲು ದೀರ್ಘ. ಶ್ರುತಿ ಸಾಧನೆಗೆ ಬಲು ಅನುಕೂಲ.  ಶ್ರುತಿ ಶುದ್ಧತೆಗೆ ಅಗ್ನಿ ಪರೀಕ್ಷೆಯೂ ಹೌದು. ಇಲ್ಲಿ ಕಾಣಿಸುವ ಪಿ.ಬಿ.ಎಸ್ ಅವರ ವೃತ್ತಿಪರತೆ, ಸ್ಪಷ್ಟ ಉಚ್ಚಾರ, ಧ್ವನಿಯ ಮಾರ್ದವತೆ , ಉಸಿರಿನ ನಿಯಂತ್ರಣ ಇತ್ಯಾದಿಗಳ ಬಗ್ಗೆ ಹೇಳಬೇಕಾದ ಅಗತ್ಯವೇ ಇಲ್ಲ.

ಈ ಹಾಡು ಕೇವಲ 8 ಸೆಕೆಂಡುಗಳ ಅವಧಿಯ ಅತಿ ಚಿಕ್ಕ prelude ಮತ್ತು  interludeಗಳನ್ನು ಹೊಂದಿರುವುದು ಒಂದು ವಿಶೇಷ. ಇಂತಹ ಉದಾಹರಣೆ ಇನ್ನೊಂದು ಸಿಗುವುದು ಕಷ್ಟ.   ಆದರೆ ಈ  interlude ಹಾಡಿನ ಅವಿಭಾಜ್ಯ ಅಂಗವೇ ಆಗಿದ್ದು ಇದಿಲ್ಲದೆ ಈ ಹಾಡನ್ನು ಕಲ್ಪಿಸಿಕೊಳ್ಳುವುದೂ ಕಷ್ಟ. ನಾನು ಕಾರ್ಯಕ್ರಮಗಳಲ್ಲಿ  ನುಡಿಸುವ ಹಾಡುಗಳು ಹೆಚ್ಚಾಗಿ interlude ಒಳಗೊಂಡಿರುವುದಿಲ್ಲ.  ಆದರೆ ಈ ಹಾಡನ್ನು interlude ಸೇರಿಸಿಯೇ ನಾನು ನುಡಿಸುವುದು. ಶಂಕರ್ ಜೈಕಿಶನ್ ಅವರ ಅನೇಕ ಹಾಡುಗಳಲ್ಲೂ ಚಿಕ್ಕ ಚಿಕ್ಕ interlude ಮತ್ತು bridge musicಗಳು ಹಾಡಿನ ಒಂದು ಭಾಗವೇ ಆಗಿರುತ್ತಿದ್ದವು.  ಎಸ್.ಡಿ. ಬರ್ಮನ್ ಕೂಡ ಯಾವಾಗಲೂ ಚಿಕ್ಕ interludeಗಳನ್ನು ಇಷ್ಟಪಡುತ್ತಿದ್ದರು. Interlude ಜಾಸ್ತಿ ಉದ್ದ ಇದ್ದರೆ ಮುಖ್ಯ ಹಾಡಿನ ಪ್ರಾಮುಖ್ಯ ಕಡಿಮೆಯಾಗುತ್ತದೆಂದು ಅವರು ತಮ್ಮ arrangersಗೆ ಹೇಳುತ್ತಿದ್ದರಂತೆ.

ಇದರ orchestration ಕೂಡ ಸರಳವಾಗಿದ್ದು ಸೀಮಿತ ಸಂಖ್ಯೆಯ ವಾದ್ಯೋಪಕರಣಗಳನ್ನು ಬಳಸಲಾಗಿದೆ.  ವಯಲಿನ್ಸ್, ಕೊಳಲು, ಬೊಂಗೊ, ಕಾಂಗೋ ಮತ್ತು ತಬ್ಲಾಗಳ ಜೊತೆಗೆ ಬೆಟ್ಟಗುಡ್ಡಗಳ ಅನುಭವ ನೀಡುವ ಸನಾದಿ ಅಥವಾ ಮೌರಿಯಂಥ ವಾದ್ಯ ವಿಶೇಷವೊಂದರ ಬಳಕೆ ಗಮನ ಸೆಳೆಯುತ್ತದೆ. ಇದು ರಷ್ಯಾ ಮೂಲದ Zhaleika ಎಂಬ ಹೆಸರಿನ ವಾದ್ಯ ಎನ್ನಲಾಗಿದೆ.  ಇದೇ ವಾದ್ಯದ ಬಳಕೆಯನ್ನು ನಾವಾಡುವ ನುಡಿಯೇ ಕನ್ನಡ ನುಡಿ ಹಾಡಲ್ಲೂ ಗುರುತಿಸಬಹುದು.  ಹಿಂದಿಯ ತುಮ್ ಅಗರ್ ಸಾಥ್ ದೇನೇ ಕಾ ವಾದಾ ಕರೊ ಮತ್ತು ಏಕ್ ಥಾ ಗುಲ್ ಔರ್ ಏಕ್ ಥೀ ಬುಲ್ ಬುಲ್  ಹಾಡುಗಳಲ್ಲೂ ಇಂಥದೇ ವಾದ್ಯವನ್ನು ಬಳಸಲಾಗಿದೆ.  ಇವೆಲ್ಲವೂ ಬೆಟ್ಟ ಗುಡ್ಡಗಳ ಹಿನ್ನೆಲೆಯ ಹಾಡುಗಳು ಎಂಬುದು ಗಮನಾರ್ಹ.  ಯುವವಾಣಿಯ signature tuneನಲ್ಲೂ ಇದೇ ರೀತಿಯ ವಾದ್ಯ ಇದೆ. ಬಾರೇ ಬಾರೇ ಹಾಡಿನುದ್ದಕ್ಕೂ ಹಿನ್ನೆಲೆಯಲ್ಲಿ ಹದವಾಗಿ ನುಡಿಯುವ ವಯಲಿನ್ಸ್, ಕೊಳಲು ಇತ್ಯಾದಿಗಳ counter melody ಇದೆ. ಈ ಚಿತ್ರದ ಸಂದರ್ಭದಲ್ಲಿ ಎಸ್.ಪಿ. ವೆಂಕಟೇಶ್ ಅನ್ನುವವರು ವಿಜಯ ಭಾಸ್ಕರ್ ಅವರಿಗೆ  ಸಹಾಯಕರಾಗಿದ್ದರು ಎಂದು ಕೇಳಿದ್ದೇನೆ.

ವಿಜಯನಾರಸಿಂಹ ಅವರು ‘ರೆ’ಕಾರವನ್ನು ಮುಖ್ಯವಾಗಿಟ್ಟುಕೊಂಡು ಚಿತ್ರದ ಸನ್ನಿವೇಶಕ್ಕೆ ತಕ್ಕಂತೆ ಸರಳ ಸುಂದರ ಹಾಡು ಬರೆದಿದ್ದಾರೆ.  ಇದು ಬಾರೆ ಶಬ್ದದಿಂದ ಏಕೆ ಆರಂಭವಾಗುತ್ತದೆ ಎಂದು ನಾಗರ ಹಾವು ಚಿತ್ರ ನೋಡಿದವರಿಗೆ ಗೊತ್ತಿರುತ್ತದೆ.  ಚಿತ್ರದಲ್ಲಿ ಮಾರ್ಗರೆಟ್ ರಾಮಾಚಾರಿಯನ್ನು ಪ್ರೀತಿಸಲಾರಂಭಿಸುತ್ತಾಳೆ.  ಆದರೆ ತಾನು ಅಲಮೇಲುವನ್ನು ಪ್ರೀತಿಸುತ್ತಿದ್ದು ‘ನಿನಗಾಗಿ ಪ್ರಾಣ ಬೇಕಾದ್ರೂ ಕೊಡ್ತೀನಿ’ ಎಂಬುದಾಗಿ ಈಗಾಗಲೇ ಆಕೆಗೆ ಮಾತು ಕೊಟ್ಟಿರುವುದಾಗಿ ರಾಮಾಚಾರಿ ಹೇಳುತ್ತಾನೆ.  ‘ಮಾರ್ಗರೆಟ್ ಬೇಕೋ ಅಲಮೇಲು ಬೇಕೋ ಆಯ್ಕೆ ನಿನ್ನದು’ ಎಂದು ಹೇಳಿ ಮಾರ್ಗರೆಟ್  ನಿರ್ಗಮಿಸುತ್ತಾಳೆ.  ರಾಮಾಚಾರಿಯ ಮನಃಪಟಲದಿಂದಲೂ  ನಿಧಾನವಾಗಿ ಮಾರ್ಗರೆಟ್  ನಿರ್ಗಮಿಸಿ ಅಲಮೇಲು ಪ್ರವೇಶಿಸುವಾಗ ಆಕೆಯನ್ನು ಬಾರೇ ಬಾರೇ ಎಂದು ಕರೆಯುತ್ತಾನೆ.  ವಾಸ್ತವವಾಗಿ ಮಾರ್ಗರೆಟನ್ನು ಉದ್ದೇಶಿಸಿ ಹೇಳುವ   ಹೋಗೆ ಹೋಗೆ ಎಂಬ silent  ಸಾಲೊಂದನ್ನು ಈ  ಹಾಡಿಗಿಂತ  ಮುಂಚೆ ಕಲ್ಪಿಸಿಕೊಳ್ಳಬೇಕಾಗುತ್ತದೆ.  ಚಿತ್ರದಲ್ಲಿ ಇದನ್ನು ಹಿನ್ನೆಲೆ ಸಂಗೀತದ ಮೂಲಕ ಅಭಿವ್ಯಕ್ತಿಗೊಳಿಸಲಾಗಿದೆ.  ಹಾಡಿನುದ್ದಕ್ಕೂ ಅನೇಕ ಬಾರಿ ಪುನರಾವರ್ತನೆಯಾಗುವ ಬಾರೆ ಪದವು ಕೇಳುಗರ ಮನದಲ್ಲಿ ಅಚ್ಚೊತ್ತಿ ನಿಲ್ಲುತ್ತದೆ. ಸೀಮಿತ ತಂತ್ರಜ್ಞಾನದ ಆ ದಿನಗಳಲ್ಲಿ ನಾಯಕನ ಸಾಮಾನ್ಯ ವೇಗದ ನಡಿಗೆ ಮತ್ತು ನಾಯಕಿಯ slow motion ಓಟವನ್ನು ಒಂದೇ ಫ್ರೇಮಲ್ಲಿ ಅಳವಡಿಸಿದ್ದು ಈ ಹಾಡಿನ  ಹೆಚ್ಚುಗಾರಿಕೆ.

ಹಾಡಿಗೆ ಸ್ಪೂರ್ತಿಯಾದ ಕ್ಲಿಫ್ ರಿಚಾರ್ಡ್ ಅವರ ಟ್ಯೂನ್ ಇಲ್ಲಿ ಕೇಳಬಹುದು.



ಇದು ಗ್ರಾಮೊಫೋನ್ ರೆಕಾರ್ಡಲ್ಲಿ  ಇರುವ ಹಾಡಿನ ವರ್ಷನ್.  ಚಿತ್ರದಲ್ಲಿರುವ ಹಾಡಿಗೂ ಇದಕ್ಕೂ ಸ್ವಲ್ಪ ವ್ಯತ್ಯಾಸ ಇರುವುದನ್ನು ಗಮನಿಸಬಹುದು.  ಹಾಡಿನ ವಿಡಿಯೊ ಬೇಕಿದ್ದರೆ ಯೂಟ್ಯೂಬಲ್ಲಿ ಲಭ್ಯವಿದೆ.



ಬಾರೆ…ಬಾರೆ…
ಚೆಂದದ ಚೆಲುವಿನ ತಾರೆ
ಬಾರೆ…ಬಾರೆ…
ಒಲವಿನ ಚಿಲುಮೆಯ ಧಾರೆ

ಕಣ್ಣಿನ ಸನ್ನೆಯ
ಸ್ವಾಗತ ಮರೆಯಲಾರ
ಚೆಂದುಟಿ ಮೇಲಿನ
ಹೂ ನಗೆ ಮರೆಯಲಾರೆ
ಅಂದದ ಹೆಣ್ಣಿನ
ನಾಚಿಕೆ ಮರೆಯಲಾರೆ
ಮೌನ ಗೌರಿಯ
ಮೋಹದಾ ಕೈ ಬಿಡಲಾರೆ

ಬಾ.. ರೇ.. ಬಾ.. ರೇ..
ಚೆಂದದ ಚೆಲುವಿನ ತಾ..ರೆ
ಒಲವಿನ ಚಿಲುಮೆಯ ಧಾರೆ

ಕೈ ಬಳೆ ನಾದದ
ಗುಂಗನು ಅಳಿಸಲಾರೆ
ಮೈಮನ ಸೋಲುವ
ಮತ್ತನು ಮರೆಯಲಾರೆ
ರೂಪಸಿ ರಂಭೆಯ
ಸಂಗವ ತೊರೆಯಲಾರೆ
ಮೌನ ಗೌರಿಯ
ಮೋಹದಾ ಕೈ ಬಿಡಲಾರೆ

ಬಾ.. ರೇ.. ಬಾ.. ರೇ..
ಚೆಂದದ ಚೆಲುವಿನ ತಾ..ರೆ
ಒಲವಿನ ಚಿಲುಮೆಯ ಧಾರೆ



ಈ ಹಾಡನ್ನು ಕೊಳಲು ಅಥವಾ  ಇತರ ಸಂಗೀತೋಪಕರಣಗಳಲ್ಲಿ ನುಡಿಸಬಯಸುವವರಿಗಾಗಿ ಸಾಹಿತ್ಯ ಮತ್ತು ಸ್ವರಗಳೊಡನೆ ನಾನು ತಯಾರಿಸಿದ ವಿಶೇಷ ವಿಡಿಯೊ ಒಂದು ಇಲ್ಲಿದೆ. ಇದರಲ್ಲಿ ಬಳಸಲಾದ ಸ್ವರಗಳು
ಸ ಗ21 ಪ ನಿ2 ಸ - ಸ ನಿ22 ಪ ಮ12 ರಿ2.  ಸ್ವರದ ಮೇಲೆ ಚುಕ್ಕಿ ಇದ್ದರೆ ತಾರ ಸಪ್ತಕವೆಂದೂ ಕೆಳಗಡೆ ಚುಕ್ಕಿ ಇದ್ದರೆ ಮಂದ್ರ ಸಪ್ತಕವೆಂದೂ ತಿಳಿಯುವುದು.  1 ಪ್ರಯೋಗವಿರುವಲ್ಲಿ ಗುರುತು ಮಾಡಲಾಗಿದೆ.  ಇದು ನಾನು ತಯಾರಿಸಿರುವ ಸೆಲ್ಫಿ ವೀಡಿಯೊ!


5 comments:

  1. ಈ ಹಾಡಿನ ಸೊಬಗಿಗೆ ಮನಸೋಲದವರಿಲ್ಲ, ನಿಮ್ಮ ಕೊಳಲುವಾದನದಲ್ಲಿ ಈ ಹಾಡು ಮತ್ತಷ್ಟು ಮೋಹಕವೆನಿಸಿತು.

    Triveni Rao (FB)

    ReplyDelete
  2. ಎಷ್ಟು ಸೂಕ್ಷ್ಮಗಳನ್ನು ಗುರುತಿಸಿದ್ದೀರಿ! ಕನ್ನಡ ಚಿತ್ರಗೀತೆಗಳಲ್ಲಿ ಶಾಸ್ತ್ರೀಯ ಸಂಗೀತದ ಪ್ರಭಾವ ಎನ್ನುವ ವಿಷಯದ ಬಗ್ಗೆ ನೀವು PhD ಮಾಡಬಹುದು!

    Kiran Surya (FB)

    ReplyDelete
  3. ಬಾರ್ಬಿ, ಬಾರ್ಬಿ ಚೆಂದದ ಚೆಲುವಿನ ಬಾರ್ಬಿ...

    ReplyDelete
    Replies
    1. ಬಾರ್ಬಿಯನ್ನು ಗಮನಿಸಿದ್ದಕ್ಕೆ ನಿಮಗೆ ಧನ್ಯವಾದಗಳು.

      Delete
  4. ನನ್ನ ಇಷ್ಟವಾದ ಹಾಡು.ತುಂಬ ಧನ್ಯವಾದಗಳು ಸರ್.

    ReplyDelete

Your valuable comments/suggestions are welcome