Thursday, 11 January 2018

ಸುವ್ವಿ ಸುವ್ವಿ ಸುವ್ವಾಲೆ ಪ್ರಾಸಬದ್ಧ ಪದಮಾಲೆ


ಹಿಂದಿಯ ಮಜರೂಹ್ ಸುಲ್ತಾನ್‌ಪುರಿಯವರಂತೆ ಕನ್ನಡದ ಕಣಗಾಲ್ ಪ್ರಭಾಕರ ಶಾಸ್ತ್ರಿ ಅವರು ಸುಲಭದಲ್ಲಿ ಅರ್ಥವಾಗದ ಒಗಟಿನಂಥ ಕ್ಲಿಷ್ಟ ಪದಪುಂಜಗಳನ್ನು ತಮ್ಮ ಗೀತೆಗಳಲ್ಲಿ ಹೆಚ್ಚಾಗಿ ಬಳಸುತ್ತಿದ್ದರು. ಆದರೆ ಕೆಲವೊಮ್ಮೆ ಅವರು ಲಾಲಿತ್ಯಪೂರ್ಣ ಸರಳ ಪದಗಳನ್ನೇ ಬಳಸಿ ಹಾಡು ಬರೆದದ್ದೂ ಇದೆ.  ಅಂಥವುಗಳಲ್ಲಿ ಕನ್ಯಾರತ್ನ ಚಿತ್ರದ ಜಾನಪದ ಸೊಗಡಿನ ಸುವ್ವಿ ಸುವ್ವಿ ಸುವ್ವಾಲೆ ಹಾಡೂ ಒಂದು.  ಗ್ರಾಮೀಣ ಬಾಲೆಯೊಬ್ಬಳು ತನ್ನ ಇನಿಯನೊಡನೆ   ನಡೆಸುವ ಸರಸ ಸಂವಾದ ರೂಪದ ಈ  ಹಾಡಲ್ಲಿ ಆಕೆ ಆತನ ಪೊಳ್ಳು ಮಾತುಗಳಿಗೆ ಸುಲಭದಲ್ಲಿ ಸೊಪ್ಪು ಹಾಕದೆ ಚೆನ್ನಾಗಿ ಪರೀಕ್ಷಿಸಿ ಮುಂದಡಿ ಇಡುವ ಚಿತ್ರಣ ಇದೆ.  ಪಲ್ಲವಿ, ಚಿತ್ರಗೀತೆಗಳಲ್ಲಿ ಬಲು ಅಪರೂಪವಾದ ಅನುಪಲ್ಲವಿ ಮತ್ತು ಚರಣಗಳ  ಪ್ರತಿ ಸಾಲಲ್ಲೂ   ಲಕಾರ ಅಂತ್ಯಪ್ರಾಸ ಇದೆ.  ಹಿಂದಿನ ಕಾಲದ ಬಹುತೇಕ ಗೀತೆಗಳು ಪ್ರಾಸಬದ್ಧವಾಗಿಯೇ ಇರುತ್ತಿದ್ದರೂ ಈ ರೀತಿ ಒಂದೇ ಅಕ್ಷರದ ನಿಯಮ ಪಾಲಿಸಿದ ಉದಾಹರಣೆಗಳು ಕಮ್ಮಿ.  ಸುವ್ವಿ,  ದುವ್ವಿ, ಸುವ್ವಾಲೆ, ದುವ್ವಾಲೆ,  ಅಂಬಾಲೆ,  ಜೋಮಾಲೆ,  ಜೋಲೆ,  ಹೊನ್ನಾಲೆ,  ಹೊಂದಾಳೆ ಮುಂತಾದ ಶಬ್ದಕೋಶಗಳಲ್ಲಿ ಸಿಗಲಾರದ ಜಾನಪದ ಪದಗಳು ಹಾಡಿನುದ್ದಕ್ಕೂ ಇವೆ.  ಇಂಥವೇ ಪದಗಳನ್ನು ಪ್ರಭಾಕರ ಶಾಸ್ತ್ರಿ ಅವರು ನಂತರ ವಾಲ್ಮೀಕಿ ಚಿತ್ರದ ಜಲಲ ಜಲಲ ಜಲ ಧಾರೆ ಹಾಡಿನಲ್ಲೂ  ಉಪಯೋಗಿಸಿದರು.  ಆರಂಭದ ಪಲ್ಲವಿ ಭಾಗ ಚರಣಗಳ ಮಧ್ಯೆ ಒಮ್ಮೆಯೂ ಪುನರಾವರ್ತನೆಯಾಗದೆ ಕೊನೆಯಲ್ಲಿ ಮಾತ್ರ ಬರುವುದು ಕೂಡ ಇತರ ಚಿತ್ರಗೀತೆಗಳಲ್ಲಿ ಕಾಣಸಿಗದ ವಿಶೇಷ.

ಆಂಗ್ಲರ ಬಳುವಳಿಯಾದ ಪ್ಯಾಂಟು ಶರ್ಟುಗಳನ್ನು ನಮ್ಮವೇ ಎಂದು ಎಲ್ಲರೂ ಒಪ್ಪಿಕೊಂಡ ಹಾಗೆ ಕನ್ನಡ ಸಿನಿಮಾ ಹಾಡುಗಳಿಗೆ ಹಿಂದಿ  ಧಾಟಿಗಳನ್ನು ಬಳಸುವುದೂ ಸರ್ವಮಾನ್ಯವಾಗಿದ್ದ 50ರ ದಶಕದಲ್ಲೇ   ಆ ಪದ್ಧತಿಗೆ ತಿಲಾಂಜಲಿ ಇತ್ತು ಸ್ವಂತಿಕೆ ಮೆರೆಯತೊಡಗಿ ಆರಂಭದಿಂದಲೇ ಹೊಸ ಹೊಸ ಪ್ರಯೋಗಗಳನ್ನು ಮಾಡುತ್ತಾ ಬಂದವರು ಜಿ.ಕೆ.ವೆಂಕಟೇಶ್.  ಹಳ್ಳಿ ಹಿನ್ನೆಲೆಯ ಈ ಹಾಡಿನಲ್ಲೂ ಅವರು  ದೇಸಿ ವಾದ್ಯಗಳಾದ  ಢೋಲಕ್ , ಸಂತೂರ್, ಕೊಳಲುಗಳ ಜೊತೆಗೆ ಶಿಷ್ಟ ವಾದ್ಯ ಸಿತಾರ್ ಹಾಗೂ ಪಾಶ್ಚಾತ್ಯ ಕ್ಲಾರಿನೆಟ್, ಗಿಟಾರುಗಳನ್ನು ಬಳಸುವುದು ಮಾತ್ರವಲ್ಲದೆ ಎರಡು ವಾದ್ಯಗಳನ್ನು ವಿಭಿನ್ನ ಪೂರಕ ಶ್ರುತಿಗಳಲ್ಲಿ ಒಟ್ಟಿಗೆ ನುಡಿಸುವ ಪಾಶ್ಚಾತ್ಯ ಸಂಗೀತ ಪದ್ಧತಿಯ harmaonization ಪ್ರಯೋಗವನ್ನೂ ಮಾಡಿದ್ದಾರೆ.  1.18 ನಿಮಿಷದಿಂದ ಆರಂಭವಾಗುವ ಅನುಪಲ್ಲವಿ ನಂತರದ interludeನಲ್ಲಿ ಸಂತೂರ್ ಮತ್ತು ಗಿಟಾರ್‌ಗಳಿಗೆ counter ಆಗಿ  ಹಿನ್ನೆಲೆಯಲ್ಲಿ ಭಿನ್ನ ಶ್ರುತಿಯ  ಎರಡು ಕೊಳಲುಗಳ harmonized ನುಡಿಸುವಿಕೆ ಗಮನಿಸಬಹುದು. ಹಿಂದಿ ಹಾಡುಗಳಲ್ಲಿ ಈ harmonized ನುಡಿಸುವಿಕೆ ಹೆಚ್ಚಾಗಿ ಕಂಡುಬರುತ್ತಿದ್ದು ಜಾನೆಮನ್ ಜಾನೆಮನ್ ತೇರೆ ದೊ ನಯನ್ ಹಾಡಿನ ಆರಂಭದ bit ಸುಲಭವಾಗಿ ನೆನಪಾಗುವ ಉದಾಹರಣೆ. ಜಾನಪದ ಶೈಲಿಯ ಈ ಹಾಡಿನಲ್ಲಿ ಇಂತಹ ಪಾಶ್ಚಾತ್ಯ ತಂತ್ರಗಳ ಬಳಕೆ  ಚಂದದ ಸೀರೆ ಕುಪ್ಪುಸ ತೊಟ್ಟು ಹಣೆಗೆ ಕುಂಕುಮ ಧರಿಸಿದ  ಹಳ್ಳಿಯ ಹೆಣ್ಣುಮಗಳೊಬ್ಬಳು ಕೈಗೆ ವಾಚ್ ಕಟ್ಟಿ ಹೆಗಲಿಗೆ ವ್ಯಾನಿಟಿ ಬ್ಯಾಗ್ ತೂಗು ಹಾಕಿಕೊಂಡಂತೆ ಎಂದು  ನಾವು ಅರ್ಥೈಸಬಹುದು! 

ಸಂತೂರಿನ ಸಣ್ಣ ಪಲುಕಿನ ನಂತರ ಪಿ ಬಿ ಶ್ರೀನಿವಾಸ್ ಸುವ್ವೀ ಅಂದೊಡನೆ ಕೋಗಿಲೆ ಉಲಿಯ ರೂಪದ ಶಿಳ್ಳೆ, ಮತ್ತೆ ಅದೇ ಸಂತೂರಿನ ಪಲುಕು ಮತ್ತು  ಸುವ್ವೀಯ ನಂತರ  ಗಿಟಾರ್ ರಿದಮಿನ ಜೊತೆಗೆ ಕೊಳಲು ಕ್ಲಾರಿನೆಟ್ ಮತ್ತು ಸಂತೂರ್ ಸಮ್ಮಿಲನದ ಒಟ್ಟು ಮೂವತ್ತೆರಡು ಸೆಕೆಂಡುಗಳ, ಸುಗ್ರಾಸ ಭೋಜನದ ಮುಂಚಿನ ಅಪೆಟೈಸರಿನಂತಹ ಪ್ರೀಲ್ಯೂಡ್ ಗೆಜ್ಜೆ ಸದ್ದಿನೊಂದಿಗೆ ಮುಕ್ತಾಯವಾಗುತ್ತದೆ.
 
 Interludeಗಳ ಕೆಲವು ಭಾಗಗಳಲ್ಲಿ ರಿದಂ ಗಿಟಾರಿಗೆ ಬಿಟ್ಟುಕೊಟ್ಟು ಉಳಿದಂತೆ ಹಾಡಿನುದ್ದಕ್ಕೂ ನುಡಿಯುವ ಶ್ರುತಿಬದ್ಧ ಢೋಲಕ್ ನಡೆ ಬಲು ಸುಂದರ. ಗಿಟಾರ್ ರಿದಂ ನಂತರ ಢೋಲಕ್ ನಡೆ ಎತ್ತಿಕೊಳ್ಳುವ ಸಂದರ್ಭದ ಉರುಳಿಕೆಯ ಅಂದವನ್ನು ಆಲಿಸಿಯೇ ಆನಂದಿಸಬೇಕು.  ಪ್ರತಿ ಚರಣದ ಕೊನೆಭಾಗದಲ್ಲಿ  ಜಾನಕಿ ಮತ್ತು ಪಿ.ಬಿ. ಶ್ರೀನಿವಾಸ್  ಅವರ ಸುರುಳಿಯಾಕಾರದ  ಅತ್ಯಾಕರ್ಷಕ ಆಲಾಪಗಳಿವೆ. ಇವನ್ನು ಆಲಿಸಿದಾಗ  ಜಾನಕಿ  ನಮ್ಮನ್ನು ತಿರುಗಣೆ ಮೆಟ್ಟಲುಗಳಲ್ಲಿ   ಕೆಳಗಿಳಿಸಿದಂತೆಯೂ ಪಿ.ಬಿ.ಎಸ್ ಮತ್ತೆ ಮೇಲಕ್ಕೆ ಕರೆದುಕೊಂಡು ಬಂದಂತೆಯೂ  ಭಾಸವಾಗುತ್ತದೆ!  ಈ ಭಾಗದಲ್ಲಿ ಅದುವರೆಗೆ ನೇರವಾಗಿದ್ದ ಢೋಲಕ್‌ ನಡೆ ‘ಥೋಡಾ ಥೋಡಾ ಜ್ಯಾದಾ ಜ್ಯಾದಾ ಥೋಡಾ ಥೋಡಾ ಜ್ಯಾದಾ ಜ್ಯಾದಾ’ ಶೈಲಿಗೆ ಬದಲಾಗುತ್ತದೆ.  ಈ ರೀತಿಯ ನಡೆಯನ್ನು ಮುಂದೆ  ಎಸ್.ಡಿ. ಬರ್ಮನ್ ಅವರು ಜ್ಯೂಯಲ್ ತೀಫ್ ಚಿತ್ರದ ದಿಲ್ ಪುಕಾರೆ ಆರೆ ಆರೆ ಆರೆ ಹಾಡಲ್ಲಿ ಬಳಸಿಕೊಂಡಿದ್ದಾರೆ.

ಸ ಗ21 ಪ ನಿ2 ಸ್ವರಗಳ   ಶುದ್ಧ ಧನ್ಯಾಸಿ ರಾಗಾಧಾರಿತ ಈ ಹಾಡಿನ interludeಗಳ ಭಾಗದಲ್ಲಿ ದ1 ಮತ್ತು ದ2 ಸ್ವರಗಳ ಸ್ಪರ್ಶ ಇದ್ದು ಅಭೇರಿ ಅರ್ಥಾತ್ ಭೀಮ್ ಪಲಾಸ್ ಛಾಯೆ ಗೋಚರಿಸುತ್ತದೆ. ಆದರೆ ಆ ರಾಗಗಳ ಬೇರೆ ಯಾವುದೇ ರಚನೆಯನ್ನು ಒಂದಿನಿತೂ ಹೋಲದಿರುವುದು ಸಂಗೀತಕಾರನ ಜಾಣ್ಮೆಯ ದ್ಯೋತಕ.  ಬಹುಶಃ ಕನ್ನಡ ಚಿತ್ರಸಂಗೀತದಲ್ಲಿ ಕರುಣೆಯೇ ಕುಟುಂಬದ ಕಣ್ಣು ಚಿತ್ರದ ಪ್ರೇಮಗಾನ ತಂದ ಯೌವನ ಹಾಡಲ್ಲಿ ಮೊತ್ತ ಮೊದಲು ಜಿ.ಕೆ.ವೆಂಕಟೇಶ್ ಅವರು ಕಾಶ್ಮೀರದ ಜಾನಪದ ವಾದ್ಯ ಸಂತೂರ್ ಬಳಕೆ ಮಾಡಿದರು.  ಈ ಹಾಡಿನ ಅಂದ ಹೆಚ್ಚಿಸುವಲ್ಲೂ ಸಂತೂರ್ ಪಾತ್ರ ಹಿರಿದು. ಗಿಟಾರ್ chordನೊಂದಿಗೆ ಕೊನೆಗೊಳ್ಳುವ ಆರಂಭದ ಎರಡು ಸಂತೂರ್ ತುಣುಕುಗಳು ಪ್ರೇಮಿಗಳ ರೋಮಾಂಚನವನ್ನು ಪ್ರತಿನಿಧೀಕರಿಸುವಂತಿವೆ.   ಕ್ಲಾರಿನೆಟ್-ಕೊಳಲಿನ ಪಲುಕುಗಳ ಅಂದದ ಬಗ್ಗೆ ಹೇಳಬೇಕಾಗಿಯೇ ಇಲ್ಲ. ಹಾಡಿನ ಕೊನೆಯ ಭಾಗದ  ಹಿನ್ನೆಲೆಯಲ್ಲಿ ಬರುವ ಗಮಪನಿ ಸಾ...   ಗಸನಿ ಸಾ.... ನಿಸಗಮ ಪಾ ಮಾಗಸಾನೀ ಸಾ.... ಎಂಬ ಕೊಳಲ ತಾನವಂತೂ  ದೈವೀ ಅನುಭೂತಿ ನೀಡುತ್ತದೆ. 



ಪಿ.ಬಿ.ಶ್ರೀನಿವಾಸ್ ಮತ್ತು ಎಸ್. ಜಾನಕಿ ಅವರ ಮಧುರ ಧ್ವನಿಗಳು ಮೇಳೈಸಿರುವ ಈ ಹಾಡನ್ನು ಸಿನಿಮಾದಲ್ಲಿ  ಹಾಡಿದ್ದು ನಾಯಕ ನಾಯಕಿ ಅಲ್ಲ,  ನಾಯಕನ ಅಕ್ಕ ಮತ್ತು ಆಕೆಯ ಆಕೆಯನ್ನು ಮದುವೆಯಾಗಲಿದ್ದ ಪೋಲಿಸ್ ಅಧಿಕಾರಿ. ಆದರೆ ಆಕೆ ತಮ್ಮನಿಗಾಗಿ ಮದುವೆಯ ಮಾತು ಮರೆತು ಕನ್ಯೆಯಾಗಿಯೇ ಉಳಿಯಬಯಸುತ್ತಾಳೆ.  ಕಥೆಯ ಕೊನೆಗೆ ಎಲ್ಲ ಸುಖಾಂತ್ಯವಾಗಿ ಆಕೆಗೆ ಕನ್ಯಾರತ್ನ ಎಂಬ ಬಿರುದು ಸಿಗುತ್ತದೆ.  ಈ ಪಾತ್ರಗಳನ್ನು ಸಾಹುಕಾರ್ ಜಾನಕಿ ಮತ್ತು ರಾಜಾ ಶಂಕರ್ ನಿರ್ವಹಿಸಿದ್ದರು.  Youtube ವಾಹಿನಿಯಲ್ಲಿ ಈ ಹಾಡು ಮಾತ್ರವಲ್ಲ , ಕನ್ಯಾರತ್ನ ಚಿತ್ರವೇ ಲಭ್ಯವಿದೆ.  ಆಸಕ್ತರು ವೀಕ್ಷಿಸಬಹುದು.  ಹಾಡಿನ ವಿಡಿಯೊ ನೋಡುವುದಾದರೆ 2.33 ನಿಮಿಷಕ್ಕೆ ಆರಂಭವಾಗುವ ಸಾಹುಕಾರ್ ಜಾನಕಿ ಅವರ ಆಕರ್ಷಕ ಸರಳ dance steps ನೋಡಲು ಮರೆಯದಿರಿ.



ಚಿತ್ರ : ಕನ್ಯಾರತ್ನ
ಗಾಯಕರು : ಪಿ.ಬಿ.ಶ್ರೀನಿವಾಸ್ ಮತ್ತು ಎಸ್. ಜಾನಕಿ
ರಚನೆ : ಕಣಗಾಲ್ ಪ್ರಭಾಕರ ಶಾಸ್ತ್ರಿ
ಸಂಗೀತ : ಜಿ.ಕೆ. ವೆಂಕಟೇಶ್



ಸುವ್ವೀ ಸುವ್ವೀ ಸುವ್ವಾಲೆ ಕಣ್ಣೆ ಕರೆಯೋಲೆ
ದುವ್ವಿ ದುವ್ವಿ ದುವ್ವಾಲೆ ಒಲವೇ ಉಯ್ಯಾಲೆ
ಸುವ್ವಿ ಸುವ್ವಾಲೆ    ||ಪ||

ಕುಲುಕಿ ಬಳುಕಿ ನಡೆಯೋಳೆ ಜಾಣೆ ಜೋಮಾಲೆ
ನಿಲ್ಲೆ ಅಂಬಾಲೆ ಹೋಯ್
ಬಲ್ಲೆ ಬಲ್ಲೆ ನಾ ನಿನ್ನ ಕಣ್ಣ ಮುಚ್ಚಾಲೆ
ಕಣ್ಣು ಮುಚ್ಚಾಲೆ   ||ಅನು ಪ||


ಜೇನಿನಂಥ ಮಾತನಾಡಿ ಓಟ ಆ ಮೇಲೆ

ಓಟ ಆಮೇಲೆ
ಕಣ್ಣಿನಾಣೆ ಓಡಲಾರೆ ನಂಬೆ ಹೊಂಬಾಳೆ

ನಂಬೆ ಹೊಂಬಾಳೆ
ಬಾಳ್ವೆ ಹೂಮಾಲೆ
ಅನುರಾಗದ ಸುವ್ವಾಲೆ
ಓ....
ಒಹೋ ಓ...    ||೧||

ಮಾತು ಮನಸು ಹೊಮ್ಮಿದಂತೆ ಹಾಡೋಣ ಜೋಲೆ
ಹಾ..
ಹಾಡೋಣ ಜೋಲೆ
ಸೋತು ಗೆದ್ದು ಸೇರಿದಂತೆ ಆಡೋಣ ಲೀಲೆ
ಆ..
ಆಡೋಣ ಲೀಲೆ
ಅದುವೇ ಹೊನ್ನಾಲೆ
ಮನದಾಸೆಗೆ ಹೊಂದಾಳೆ
ಓ....
ಒಹೋ ಓ...     ||೨||

ಸುವ್ವೀ ಸುವ್ವೀ ಸುವ್ವಾಲೆ ಕಣ್ಣೆ ಕರೆಯೋಲೆ
ದುವ್ವಿ ದುವ್ವಿ ದುವ್ವಾಲೆ ಒಲವೇ ಉಯ್ಯಾಲೆ
ಸುವ್ವಿ ಸುವ್ವಾಲೆ
ನಿಲ್ಲೆ ಅಂಬಾಲೆ












5 comments:

  1. Excellent. good explanations. Mohana Murali song is very nice

    ReplyDelete
  2. ನಮ್ಮ ಕಾಲೇಜಿನ ಒಂದು ಸಮಾರಂಭಕ್ಕೆ ಪ್ರಭಾಕರಶಾಸ್ತ್ರಿ ಅತಿಥಿಯಾಗಿ ಬಂದಿದ್ರು...ಅವತ್ತು 'ಕಣ್ಣಾಮುಚ್ಚೆ ಕಾಡೇಗೂಡೆ' ಪದದ ಅರ್ಥ ವಿವರಿಸಿದ್ದರು...
    ಈ ವಿಷಯ ಗೊತ್ತಿದ್ರೆ ಕೇಳಿಬಿಡ್ತಿದ್ದೆ...'ದುವ್ವಾಲೆ' ಅಂದ್ರೇನು..'ಅಂಬಾಲೆ' ಅಂದ್ರೇನೂ ಅಂತ..
    ಸುಮ್ಮನೆ ಹಾಡುಕೇಳಿ ಸಂತೋಷಪಡೋದಷ್ಟೇ ಗೊತ್ತು ನನಗೆ...ನಿಮ್ಮ ವಿವರಣೆ ಓದಿದಮೇಲೆ ಪ್ರತ್ಯೇಕವಾಗಿ ಒಂದೊಂದೂ ವಾಧ್ಯಗಳನ್ನು ಗುರುತಿಸಿ ಆನಂದಿಸುವಂತಾಯ್ತು...

    ಸ್Sudarshana Reddy (FB)

    ReplyDelete
  3. ಇಂತಹ ಅಮೂಲ್ಯ ಗೀತರತ್ನಗಳ ಕುರಿತ ವಿಶ್ಲೇಷಣೆ ಇವತ್ತಿಗೆ ಬಹು ಪ್ರಸ್ತುತ. ಇವನ್ನು ಓದಿಯಾದರೂ, ನಮ್ಮ ಸಾಹಿತಿ/ಸಂಗೀತ ನಿರ್ದೇಶಕರುಗಳಿಂದ ಹೊಸ ಚಿತ್ರಗೀತೆಗಳ ಮಟ್ಟದಲ್ಲಿ ಸುಧಾರಣೆ ಕಂಡೀತೇನೋ.

    Sreenath(FB)

    ReplyDelete
  4. ಅದ್ಬುತ ಸಾರ್! ಗಮನಿಸದೇ ಹೋಗಬಹುದಾದ ಹಲವಾರು ವಿಷಯಗಳನ್ನು ಚೆನ್ನಾಗೇ ತೆರೆದಿಟ್ಟಿದ್ದೀರಾ.
    ಕೆಲವೊಂದು ಸಾರಿ ಸುಮ್ಮನೆ ಕೇಳ್ತೀವಿ ಸಾಹಿತ್ಯದ ಕಡೆ ಗಮನ ಕೊಡೋಲ್ಲ .. ಸಾಹಿತ್ಯ ಗಮನಕೊಟ್ಟಾಗ ಸಂಗೀತ ಬಿಡ್ತೀವಿ, ಅಲಂಕಾರ ಮರೀತೀವಿ ... ಒಂದು ಹಾಡು ಬಾಳೆಯ ಎಲೆಯ ಮೇಲಿನ ಊಟದಂತೆ.

    Srinath Bhalle (FB)

    ReplyDelete
  5. ಒಳ್ಳೆಯ ವಿವರಣೆ+ವಿಶ್ಲೇಷಣೆ... ಬಾಲ್ಯದ ಆಕಾಶವಾಣಿ ರೇಡಿಯೋ ಚಿತ್ರಗೀತೆ ಗಳ ನೆನಪುಗಳ ಮೆರವಣಿಗೆ ! ಥ್ಯಾಂಕ್ಯೂ ಸರ್.

    Vijayalaxmi Maliye (FB)

    ReplyDelete

Your valuable comments/suggestions are welcome