
ಆರಾಧನಾದಲ್ಲಿ ರಾಜೇಶ್ ಖನ್ನಾಗೆ ಕಿಶೋರ್ ಕುಮಾರ್ ಕೆಲವು ಹಾಡುಗಳನ್ನು ಹಾಡಿದ್ದೇ ನೆಪವಾಗಿ ರಫಿ ಕ್ರಮೇಣ ಹಿನ್ನೆಲೆಗೆ ಸರಿಯುವಂತಾದಾಗ ಅವರ ಅನೇಕ ಅಭಿಮಾನಿಗಳಿಗೆ ಅನ್ನಿಸಿದ್ದು ಹೀಗೆ. ಆದರೆ ಆರಾಧನಾದಲ್ಲಿ ರಫಿ ಹಾಡುಗಳೂ ಇದ್ದವು. ಅದೇ ಸಮಯಕ್ಕೆ ಬಂದ ರಾಜೇಶ್ ಖನ್ನಾ ಚಿತ್ರಗಳಾದ ದೋ ರಾಸ್ತೆ, ದ ಟ್ರೇನ್ ಚಿತ್ರಗಳು ಗೆದ್ದದ್ದೇ ರಫಿ ಹಾಡುಗಳಿಂದ. ಆದರೂ ಹೀಗೇಕಾಯಿತು? ಕಾರಣ ಯಾರಿಗೂ ಗೊತ್ತಿಲ್ಲ.
ಆಗ ಚಾಲ್ತಿಯಲ್ಲಿದ್ದ ಅಲಿಖಿತ ನಿಯಮದ ಪ್ರಕಾರ ರಾಜ್ ಕಪೂರ್ ಅವರಿಗೆ ಮತ್ತು ಆಗೊಮ್ಮೆ ಈಗೊಮ್ಮೆ ಇತರ pathos ಹಾಡುಗಳಿಗೆ ಮುಕೇಶ್, ತನಗಾಗಿ ಮತ್ತು ದೇವಾನಂದ್‌ಗಾಗಿ ಕಿಶೋರ್ ಕುಮಾರ್, ಬಿ.ಆರ್. ಫಿಲ್ಮ್ಸ್‌ನ ಚಿತ್ರಗಳಿಗೆ ಮಹೇಂದ್ರ ಕಪೂರ್, ತನ್ನ ಸಂಗೀತ ನಿರ್ದೇಶನದ ಚಿತ್ರಗಳಿಗೆ ಹೇಮಂತ್ ಕುಮಾರ್, ಹಾಸ್ಯ ಮತ್ತು ಶಾಸ್ತ್ರೀಯ ಹಾಡುಗಳಿಗೆ ಮನ್ನಾಡೇ ಹಾಡುತ್ತಿದ್ದುದನ್ನು ಬಿಟ್ಟರೆ ಇತರೆಲ್ಲ ಹಾಡುಗಳಿಗೆ ರಫಿಯೇ ಧ್ವನಿಯಾಗುತ್ತಿದ್ದುದು. ಹೀಗಾಗಿ ಆರಾಧನಾ ಹಾಡುಗಳನ್ನೂ ರಫಿಯೇ ಹಾಡುವುದೆಂದು ನಿರ್ಧಾರವಾಗಿತ್ತು. ಒಂದು ಹಾಡು ಬಾಗೊ ಮೆಂ ಬಹಾರ್ ಹೈ ರಫಿ-ಲತಾ ಧ್ವನಿಯಲ್ಲಿ ರೆಕಾರ್ಡ್ ಕೂಡ ಆಗಿತ್ತು. ಅಷ್ಟರಲ್ಲಿ ರಫಿ ದೀರ್ಘ ರಜೆಯ ಮೇಲೆ ಹಜ್ ಯಾತ್ರೆಗೆ ತೆರಳಿದರು. ಶಕ್ತಿ ಸಾಮಂತ್ ನಿರ್ಮಿಸುತ್ತಿದ್ದ ದೊಡ್ಡ ಬಜಟ್ ಚಿತ್ರ ಪಗ್ಲಾ ಕಹೀಂ ಕಾ ಯಾವುದೋ ಕಾರಣಕ್ಕೆ ಅರ್ಧದಲ್ಲಿ ನಿಂತಿತ್ತು. ಹೀಗಾಗಿ ಅವರು stop gap arrangement ಆಗಿ ಶರ್ಮಿಳಾ ಠಾಗೋರ್ ಮತ್ತು ಆಗಿನ್ನೂ ನವ ನಟನೇ ಆಗಿದ್ದ ರಾಜೇಶ್ ಖನ್ನಾ ಮುಖ್ಯ ಭೂಮಿಕೆಯಲ್ಲಿ ನಟಿಸಲಿರುವ ಆರಾಧನಾ ನಿರ್ಮಾಣಕ್ಕೆ ಕೈ ಹಾಕಿದ್ದರು. ಬೇಗ ಚಿತ್ರೀಕರಣ ಮುಗಿಸಿ ಚಿತ್ರ ಬಿಡುಗಡೆ ಮಾಡುವುದು ಅವರಿಗೆ ಅನಿವಾರ್ಯವಾಗಿತ್ತು. ಅದಕ್ಕಾಗಿ ತಕ್ಷಣ ಹಾಡುಗಳು ಬೇಕಾಗಿದ್ದವು. ಈ ಕುರಿತು ಸಂಗೀತ ನಿರ್ದೇಶಕ ಎಸ್.ಡಿ.ಬರ್ಮನ್ ಅವರೊಂದಿಗೆ ಚರ್ಚಿಸುತ್ತಿದ್ದಾಗ ಅವರ ಆಪ್ತರಾದ ಕಿಶೋರ್ ಕುಮಾರ್ ಅವರಿಂದ ಉಳಿದ ಹಾಡುಗಳನ್ನು ಹಾಡಿಸಿದರೆ ಹೇಗೆ ಎಂಬ ಯೋಚನೆ ಶಕ್ತಿ ಸಾಮಂತ್ ಅವರಿಗೆ ಬಂತು. ಕೂಡಲೇ ‘ಬರ್ಮನ್ ದಾದಾ ನಿಮ್ಮನ್ನು ಬರಹೇಳಿದ್ದಾರೆ’ ಎಂದು ಫೋನ್ ಮಾಡಿ ಕಿಶೋರ್ ಕುಮಾರ್ ಅವರನ್ನು ಕರೆಸಲಾಯಿತು. ಇನ್ಯಾರಿಗೂ ಕ್ಯಾರೇ ಅನ್ನದಿದ್ದರೂ ಬರ್ಮನ್ ದಾದಾಗೆ ಬಹಳ ಗೌರವ ಕೊಡುತ್ತಿದ್ದ ಕಿಶೋರ್ ತಡ ಮಾಡದೆ ಬಂದರು. ಬಂದೊಡನೆ ‘ಏನು ವಿಷಯ’ ಎಂದು ಬರ್ಮನ್ ದಾದಾ ಅವರಲ್ಲಿ ವಿಚಾರಿಸಿದಾಗ ‘ಕರೆದದ್ದು ನಾನಲ್ಲ, ಶಕ್ತಿ ಸಾಮಂತ್ ನಿನ್ನಲ್ಲಿ ಏನೋ ಮಾತಾಡಬೇಕಂತೆ’ ಅಂದಾಗ ಶಕ್ತಿ ಸಾಮಂತ್ ಕಕ್ಕಾಬಿಕ್ಕಿಯಾದರೂ ಕಿಶೋರ್‌ಗೆ ವಿಷಯ ತಿಳಿಸಿದರು. ಚಿತ್ರದ ನಾಯಕ ರಾಜೇಶ್ ಖನ್ನಾ ಎಂದು ತಿಳಿಯುತ್ತಲೇ ಕಿಶೋರ್ ‘ಇಲ್ಲ ಇಲ್ಲ. ನಾನು ದೇವಾನಂದ್‌ಗೆ ಮಾತ್ರ ಹಾಡುವುದು. ಇತರರಿಗೆ ಹಾಡಿದರೆ ಜನ ಒಪ್ಪಲಾರರು’ ಎಂದು ಖಡಾಖಂಡಿತವಾಗಿ ನಿರಾಕರಿಸಿದರು. ವಾಸ್ತವವಾಗಿ ತಾನೊಬ್ಬ ನಟನೇ ಹೊರತು ಹಿನ್ನೆಲೆ ಗಾಯಕ ಅಲ್ಲ. ತನ್ನ ಹಾಡುಗಳಿಂದ ಇತರರೇಕೆ ಖ್ಯಾತಿ ಗಳಿಸಬೇಕು ಎಂಬ ಭಾವನೆ ಅವರ ತಲೆಯಲ್ಲಿತ್ತು. ರಾಗಿಣಿ, ಶರಾರತ್, ಬಾಘಿ ಶಹಜಾದಾ ಮುಂತಾದ ಚಿತ್ರಗಳಲ್ಲಿ ರಫಿಯ ಹಾಡಿಗೆ ಅಭಿನಯಿಸಲು ಅವರು ಒಪ್ಪಿದ್ದೂ ಇದೇ ಕಾರಣಕ್ಕಾಗಿ. ಕಲ್ಯಾಣಜೀ ಆನಂದಜೀ ಅವರಿಗೆ ಉಪಕಾರ್ ಚಿತ್ರದ ಕಸಮೆ ವಾದೇ ಪ್ಯಾರ್ ವಫಾ ಹಾಡನ್ನು ಕಿಶೋರ್ ಅವರಿಂದ ಹಾಡಿಸಬೇಕೆಂದು ಆಸೆ ಇತ್ತು. ಇದಕ್ಕಾಗಿ ಅವರನ್ನು ಸಂಪರ್ಕಿಸಿದಾಗ ‘ನಾನೇ ಬೇರೆಯವರಿಂದ playback ಹಾಡಿಸಿಕೊಳ್ಳುವ ನಟ. ಇನ್ನೊಬ್ಬರಿಗಾಗಿ ಹಾಡುವಂತೆ ನನ್ನನ್ನೇನು ಕೇಳುತ್ತೀರಿ’ ಅಂದಿದ್ದರಂತೆ. ಆದರೆ ಬರ್ಮನ್ ದಾದಾ ಬಿಟ್ಟಾರೆಯೇ. ‘ಏಕೆ ನಖ್ರಾ ಮಾಡುತ್ತಿ. ಸುಮ್ಮನೆ ನಾನು ಹೇಳಿದಂತೆ ಕೇಳು’ ಎಂದು ದಬಾಯಿಸಿದಾಗ ಕಿಶೋರ್ ವಿಧಿಯಿಲ್ಲದೆ ಒಪ್ಪಬೇಕಾಯಿತು. ಹೀಗೆ ಚಿತ್ರೀಕರಣಕ್ಕಾಗಿ ಕೂಡಲೇ ಬೇಕಾಗಿದ್ದ ಕೋರಾ ಕಾಗಜ್ ಥಾ ಯೆ ಮನ್ ಮೇರಾ, ಮೇರೆ ಸಪನೋಂ ಕಿ ರಾನಿ ಮತ್ತು ರೂಪ್ ತೇರಾ ಮಸ್ತಾನಾ ಕಿಶೋರ್ ಧ್ವನಿಯಲ್ಲಿ ರೆಕಾರ್ಡ್ ಆದವು. ಅಷ್ಟರಲ್ಲಿ ವಿದೇಶದಿಂದ ಮರಳಿದ ರಫಿ ತಾನು ಹೋಗುವ ಮೊದಲು ಆರಾಧನಾದ ಒಂದೇ ಹಾಡು ರೆಕಾರ್ಡ್ ಆಗಿದ್ದುದನ್ನು ನೆನಪಿಸಿಕೊಂಡು ‘ನಾನು ಬಂದಿದ್ದೇನೆ. ನನ್ನಿಂದ ಏನಾದರೂ ಸೇವೆ ಬೇಕಿದ್ದರೆ ಹೇಳಿ’ ಎಂದು ಶಕ್ತಿ ಸಾಮಂತ್‌ಗೆ ಫೋನ್ ಮಾಡಿದರು. ಅದುವರೆಗಿನ ತನ್ನ ಎಲ್ಲ ಚಿತ್ರಗಳಲ್ಲೂ ಹಾಡಿದ್ದ ರಫಿ ಬಗ್ಗೆ ಸಾಮಂತ್‌ಗೆ ಅಪಾರ ಗೌರವವಿತ್ತು. ಅವರಿಗೆ ವಿಷಯ ತಿಳಿಸಿ ‘ಒಂದು ಹಾಡು ಉಳಿದಿದೆ. ಅದನ್ನು ನೀವು ಹಾಡಿ ಬಿಡಿ’ ಎಂದರು. ಆ ಹಾಡು ಗುನ್ ಗುನಾ ರಹೇ ಹೈಂ ಭಂವರೆ. ಇವಿಷ್ಟು ವಿವರಗಳನ್ನು ಸ್ವತಃ ಶಕ್ತಿ ಸಾಮಂತ್ ಒಂದು ರೇಡಿಯೋ ಸಂದರ್ಶನದಲ್ಲಿ ಹೇಳಿದ್ದಾರೆ. ಆದ್ದರಿಂದ ಕೆಲವು ಹಾಡುಗಳ ಧ್ವನಿಮುದ್ರಣದ ನಂತರ ಎಸ್.ಡಿ.ಬರ್ಮನ್ ಅವರಿಗೆ ಅಸೌಖ್ಯ ಉಂಟಾಯಿತು. ಉಳಿದ ಹಾಡುಗಳನ್ನು ಆರ್. ಡಿ. ಬರ್ಮನ್ ತನಗೆ ಪ್ರಿಯರಾದ ಕಿಶೋರ್ ಅವರಿಂದ ಹಾಡಿಸಿದರು ಎಂದೆಲ್ಲ ಕೆಲವೆಡೆ ಉಲ್ಲೇಖವಾಗಿರುವುದು ಸತ್ಯಕ್ಕೆ ದೂರವಾದ ಮಾತು. ಆರಾಧನಾದ ಯಾವ ಹಾಡಿನ ರೆಕಾರ್ಡಿಂಗ್ ಸಂದರ್ಭದಲ್ಲೂ ಆರ್.ಡಿ. ಬರ್ಮನ್ ಇರಲೇ ಇಲ್ಲ ಎಂದು ರೂಪ್ ತೇರಾ ಮಸ್ತಾನಾ ಹಾಡಿನಲ್ಲಿ saxophone ನುಡಿಸಿದ ಮನೋಹಾರಿ ಸಿಂಗ್ ಒಂದೆಡೆ ಹೇಳಿರುವುದು ಈ ಮಾತಿಗೆ ಪುಷ್ಟಿ ನೀಡುತ್ತದೆ.
ಯಾರು ಹಾಡಿದ್ದೆಂಬುದರ ಬಗ್ಗೆ ಹೆಚ್ಚು ಗಮನ ನೀಡದೆ ಆರಾಧನಾದ ಹಾಡುಗಳ ವೈವಿಧ್ಯ ಮತ್ತು ಮಾಧುರ್ಯವನ್ನು ರಫಿ ಪ್ರಿಯರೂ ಸೇರಿದಂತೆ ಎಲ್ಲರೂ ಆಸ್ವಾದಿಸಿದ್ದರು. ತನಗಾಗಿ ಅಥವಾ ದೇವಾನಂದ್‌ಗಾಗಿ ಅಲ್ಲದೆಯೂ ಕಿಶೋರ್ ಈ ಮೊದಲೂ ಭೂತ್ ಬಂಗ್ಲಾ, ಹೋಲಿ ಆಯಿರೇ, ತೀನ್ ಬಹೂರಾನಿಯಾಂ, ಪ್ಯಾರ್ ಕಾ ಮೌಸಮ್, ಅಭಿಲಾಷಾ, ನನ್ಹಾ ಫರಿಶ್ತಾ, ಹಮ್‌ಜೋಲಿ, ಕಾರವಾಂ ಮುಂತಾದ ಚಿತ್ರಗಳಲ್ಲಿ ಹಾಡಿದ ಉದಾಹರಣೆಗಳಿದ್ದವು. ಆದರೂ ಕೆಲವು ಪತ್ರಿಕೆಗಳು ಮೊತ್ತ ಮೊದಲಬಾರಿ ಕಿಶೋರ್ ಕುಮಾರ್ ಆರಾಧನಾದಲ್ಲಿ ಬೇರೊಬ್ಬ ಹೀರೊಗೆ ಹಾಡಿದರು ಎಂದು ಬರೆದವು. ಅಂದಿನ ದಿನಗಳಲ್ಲಿ ಹಾಡುಗಳ ಜನಪ್ರಿಯತೆಯ ಏಕೈಕ ಮಾನದಂಡವಾಗಿದ್ದ ಬಿನಾಕಾ ಗೀತ್ ಮಾಲಾದಲ್ಲಿ ಆರಾಧನಾದ ಕಿಶೋರ್ ಹಾಡುಗಳು ಅಂತಹ ಸದ್ದೇನೂ ಮಾಡಿರಲಿಲ್ಲ.
ಕಾಲ ಕ್ರಮೇಣ ರಫಿ ಮುಖ್ಯ ಗಾಯಕನಾಗಿದ್ದ ಚಿತ್ರಗಳಲ್ಲಿ ಒಂದೊಂದು ಕಿಶೋರ್ ಹಾಡು ಬರಲು ಆರಂಭವಾಗಿ ಹಿಟ್ ಆಗತೊಡಗಿತು. ಅಂದಾಜ್ ಚಿತ್ರದ ಜಿಂದಗಿ ಎಕ್ ಸಫರ್ ಹೈ ಸುಹಾನಾ, ತುಮ್ ಹಸೀನ್ ಮೈ ಜವಾನ್ ಚಿತ್ರದ ಮುನ್ನೆ ಕೀ ಅಮ್ಮಾ ಇದಕ್ಕೆ ಕೆಲವು ಉದಾಹರಣೆಗಳು. ಇನ್ನಷ್ಟು ಸಮಯ ಕಳೆದಂತೆ ಇದು ತಿರುವು ಮುರುವು ಆಗಿ ಕಿಶೋರ್ ಮುಖ್ಯ ಗಾಯಕನಾಗಿ ರಫಿಯ ಒಂದೊಂದು ಹಾಡು ಬರತೊಡಗಿತು. ಉದಾಹರಣೆಗೆ ಸಚ್ಚಾ ಝೂಟಾ ಚಿತ್ರದ ಯೂಂ ಹಿ ತುಮ್ ಮುಝ್ ಸೆ ಬಾತ್ ಕರ್‌ತೀ ಹೊ, ಹಾಥಿ ಮೇರೆ ಸಾಥಿಯ ನಫ್‌ರತ್ ಕೀ ದುನಿಯಾ ಕೊ ಛೋಡ್ ಕೆ ಇತ್ಯಾದಿ. ಆ ಮೇಲೆ ರಫಿ ದೃಶ್ಯದಿಂದ ಮರೆಯಾಗಿ ಬಹುತೇಕ ಚಿತ್ರಗಳಲ್ಲಿ ಹಿನ್ನೆಲೆ ಗಾಯಕನಾಗಿ ಕಿಶೋರ್ ಕುಮಾರ್ ಹೆಸರು ಮಾತ್ರ ಕಾಣಿಸಿಕೊಳ್ಳತೊಡಗಿತು. ಕಾರಣಾಂತರಗಳಿಂದ ಕಿಶೋರ್ ಲಭ್ಯರಾಗದ ಸಂದರ್ಭ ಅಥವಾ ಇಬ್ಬರು ಗಾಯಕರು ಹಾಡಬೇಕಾಗಿ ಬಂದಾಗ ರಫಿ ಬದಲು ಮನ್ನಾಡೇ, ಮುಕೇಶ್ , ಮಹೇಂದ್ರ ಕಪೂರ್, ಭೂಪೇಂದ್ರ ಮುಂತಾದವರು ಸಂಗೀತ ನಿರ್ದೇಶಕರ ಆಯ್ಕೆ ಆಗತೊಡಗಿದರು. ವಾಸ್ತವವಾಗಿ ಸೀತಾ ಔರ್ ಗೀತಾದ ಅಭೀ ತೊ ಹಾಥ್ ಮೆಂ ಜಾಮ್ ಹೈ, ಶೋಲೆ ಚಿತ್ರದ ಯೇ ದೋಸ್ತಿ ಮುಂತಾದ ಹಾಡುಗಳು ರಫಿಯ ಪಾಲಿಗೆ ಬರಬೇಕಾಗಿದ್ದವುಗಳು. ರಫಿಯ ಹಾಡುಗಳಿಂದಲೇ ಜನಪ್ರಿಯತೆಯ ತುತ್ತ ತುದಿಗೇರಿದ್ದ ರಾಜೇಂದ್ರ ಕುಮಾರ್ ಕೂಡ ಆಪ್ ಆಯೇ ಬಹಾರ್ ಆಯೀ ಚಿತ್ರದ ತುಮ್ ಕೊ ಭೀ ತೊ ಐಸಾ ಹಿ ಕುಛ್ ಎಂದು ಕಿಶೋರ್ ಧ್ವನಿಯಲ್ಲಿ ಹಾಡಿದ್ದು, ದಿಲೀಪ್ ಕುಮಾರ್ ಅಭಿನಯದ ಸಗೀನ ಚಿತ್ರದ ಎಲ್ಲ ಹಾಡುಗಳು ಕಿಶೋರ್ ಪಾಲಾದದ್ದು ರಫಿ ಅಭಿಮಾನಿಗಳಿಗೆ ತೀವ್ರ ನಿರಾಸೆ ಉಂಟು ಮಾಡಿತ್ತು.
ಇದಕ್ಕೆ ಅಂದಿನ ನಿರ್ಮಾಪಕರು ಮತ್ತು ಸಂಗೀತ ನಿರ್ದೇಶಕರೇ ಕಾರಣ ಎಂದು ಹೇಳಲಾಗದು. ಯಾವ ಶ್ರುತಿಯಲ್ಲೂ ಯಾವ ಶೈಲಿಯಲ್ಲೂ ಯಾರೊಂದಿಗೂ ಯಾವುದೇ ರೀತಿಯ ಹಾಡನ್ನು ಅತಿ ಶೀಘ್ರವಾಗಿ ಕಲಿತು ತಪ್ಪಿಲ್ಲದೆ ಹಾಡಬಲ್ಲವರಾಗಿದ್ದ ರಫಿ ಎಲ್ಲರ ಪ್ರಥಮ ಆಯ್ಕೆಯೇ ಆಗಿದ್ದರು. ಆದರೆ ಹಜ್ ಯಾತ್ರೆಯನ್ನು ಮುಗಿಸಿ ಬಂದ ರಫಿ ಆಧ್ಯಾತ್ಮದತ್ತ ಹೆಚ್ಚು ವಾಲಿದ್ದರು ಮತ್ತು ಹೆಚ್ಚು ಸಮಯ ವಿದೇಶದಲ್ಲೇ ವಾಸ್ತವ್ಯ ಹೂಡುತ್ತಿದ್ದುದರಿಂದ ಬೇಕಿದ್ದಾಗ ಧ್ವನಿಮುದ್ರಣಕ್ಕೆ ಸಿಗುತ್ತಿರಲಿಲ್ಲ ಎಂದು ಕೆಲವರು ಹೇಳುತ್ತಾರೆ. ಓರ್ವ ವ್ಯಕ್ತಿ ಅವರ ಮನೆಯಲ್ಲೇ ಠಿಕಾಣಿ ಹೂಡಿ ಹಾಡಿನ ಮೂಲಕ ಸಂಪತ್ತು ಗಳಿಸುವುದು ಪಾಪ ಕಾರ್ಯ ಎಂಬ ವಿಚಾರವನ್ನು ಅವರ ತಲೆಯಲ್ಲಿ ತುಂಬಿದ್ದರು ಎಂದೂ ಹೇಳಲಾಗುತ್ತಿದೆ. ಈ ವಿಚಾರವನ್ನು ರಫಿಯ ಪುತ್ರ ಪಕ್ಕದಲ್ಲೇ ವಾಸವಾಗಿದ್ದ ಪ್ರಖ್ಯಾತ ಅರೇಂಜರ್ ಮತ್ತು ಸರ್ವ ವಾದ್ಯ ಪರಿಣತ ಕೇರ್ಸಿ ಲಾರ್ಡ್ ಅವರಲ್ಲಿ ಹೇಳಿಕೊಂಡಾಗ ಅವರು ಉಪಾಯವಾಗಿ ಆ ವ್ಯಕ್ತಿಯನ್ನು ಸಾಗಹಾಕಿದ ಮೇಲೆ ಮತ್ತೆ ರಫಿ ಹಾಡತೊಡಗಿದರು ಎಂದು ಸ್ವತಃ ಲಾರ್ಡ್ ಒಂದು ಸಂದರ್ಶನದಲ್ಲಿ ಹೇಳಿದ್ದಾರೆ.
ಈ ಮಧ್ಯೆಯೂ ಲಕ್ಷ್ಮೀ ಪ್ಯಾರೆ ತಮ್ಮ ಚಿತ್ರಗಳಲ್ಲಿ ಒಂದಾದರೂ ರಫಿ ಹಾಡಿರುವಂತೆ ನೋಡಿಕೊಳ್ಳುತ್ತಿದ್ದರು. ರಫಿ ಅಭಿಮಾನಿಗಳಾದ ನಾಸಿರ್ ಹುಸೇನ್, ಮನಮೋಹನ್ ದೇಸಾಯಿ ಮುಂತಾದವರು ಕೂಡ ಸಾಧ್ಯವಾದಾಗಲೆಲ್ಲ ಅವರನ್ನು ಬಳಸಿಕೊಳ್ಳುತ್ತಿದ್ದರು. ಆದರೆ ಅಷ್ಟರಲ್ಲಿ ಅವರ ಧ್ವನಿಯಲ್ಲಿ ತೆರೆಮೇಲೆ ಹಾಡುತ್ತಿದ್ದ ನಾಯಕ ನಟರು ಒಬ್ಬೊಬ್ಬರಾಗಿ ನಿವೃತ್ತರಾಗಿದ್ದರು. ತನ್ನ ಅತಿ ಮೆಚ್ಚಿನ ಗಾಯಕ ರಫಿ ಎಂದು ಘಂಟಾ ಘೋಷವಾಗಿ ಸಾರುತ್ತಿದ್ದ ಓ.ಪಿ.ನಯ್ಯರ್ ಆಶಾ ಭೋಸ್ಲೆಯೊಂದಿಗೆ ಜಗಳವಾಡಿ ಮರೆಗೆ ಸರಿದಿದ್ದರು. ಜೈಕಿಶನ್ ನಿಧನದ ನಂತರ ಅವರ ಬಲಗೈ ಬಂಟರಾಗಿದ್ದ ಸೆಬಾಸ್ಟಿಯನ್ ಶಸ್ತ್ರ ತ್ಯಾಗ ಮಾಡಿ ಗೋವೆಗೆ ಹಿಂತಿರುಗಿದ ಮೇಲೆ ಅದುವರೆಗೆ ಅವರನ್ನೇ ಅನುಸರಿಸಿ ತಮ್ಮ ರಚನೆಗಳಲ್ಲೂ ಮಾಧುರ್ಯ ತುಂಬಿ ತುಳುಕುವಂತೆ ಮಾಡುತ್ತಿದ್ದ ಇತರ ಸಂಗೀತ ನಿರ್ದೇಶಕರು ಸಂಗೀತೋಪಕರಣಗಳ ಬದಲಿಗೆ oscillatorಗಳ ಸದ್ದನ್ನು ಬಳಸಲಾರಂಭಿಸಿದ್ದರು. ಹಾಡುಗಳಲ್ಲೂ ಮೊದಲಿನ ವೈವಿಧ್ಯ ಇರದೆ ಏಕತಾನತೆ ಕಾಣಿಸತೊಡಗಿತ್ತು. ಜಯದೇವ್ ಮತ್ತು ಮದನ್ ಮೋಹನ್ ಅವರ ಜಂಟಿ ಸಂಗೀತ ನಿರ್ದೇಶನದ ಲೈಲಾ ಮಜ್ನೂದಲ್ಲಿ ಯುವ ನಟ ಋಷಿ ಕಪೂರ್ ಅವರ ಎಲ್ಲ ಹಾಡುಗಳನ್ನು ಹಾಡುವ ಮೂಲಕ ಮತ್ತೆ ಮುಂಚೂಣಿಗೆ ಬಂದಂತೆ ಕಂಡರೂ ಆ ಹೊತ್ತಿಗೆ ರಫಿಯ ಧ್ವನಿಯಲ್ಲಿ ಮೊದಲಿನ ಮಾರ್ದವತೆ ಮಾಯವಾಗಿದ್ದನ್ನು ಮುಂದಿನ ಅಮರ್ ಅಕ್ಬರ್ ಅಂತೋಣಿ, ಸರ್‌ಗಮ್, ಆಶಾ ಮುಂತಾದ ಚಿತ್ರಗಳ ಹಾಡುಗಳಲ್ಲಿ ಸ್ಪಷ್ಟವಾಗಿ ಗುರುತಿಸಬಹುದು. ಸಂದರ್ಭಕ್ಕೆ ತಕ್ಕಂತೆ ಆರೇಳು ವಿಧದ ಧ್ವನಿಗಳಲ್ಲಿ ಹಾಡಬಲ್ಲವರಾಗಿದ್ದ ಹಳೆ ರಫಿ ಅವರಾಗಿರಲಿಲ್ಲ. ಒಳಗಿಂದೊಳಗೆ ಅವರನ್ನು ಕೊರೆದು ತಿನ್ನುತ್ತಿದ್ದ ಅನಾರೋಗ್ಯವೂ ಇದಕ್ಕೆ ಕಾರಣವಾಗಿರಬಹುದು. ಕೊನೆ ಕೊನೆಗೆ ಅವರು ಹಾಡುವಾಗ ಶರೀರವೆಲ್ಲ ನೀಲಿಗಟ್ಟುತ್ತಿತ್ತು ಎಂದು ಲತಾ ಮಂಗೇಶ್ಕರ್ ಒಂದೆಡೆ ಹೇಳಿದ್ದಾರೆ. ಹೀಗೆ 70ರ ದಶಕದ ಆರಂಭದಲ್ಲಿ ಗಾನ ದಾರಿಯಲ್ಲಿ ಜಾರತೊಡಗಿದ ಸೂರ್ಯ ನಡು ನಡುವೆ ಮೋಡಗಳ ಮರೆಯಿಂದ ಮುಖ ತೋರಿಸಿ ಕೊನೆಗೆ 31-7-1980ರಂದು ಅಸ್ತಂಗತನಾದ.
70ರ ದಶಕದಲ್ಲಿ ರೇಡಿಯೋ ಸಿಲೋನಿನ ಏಕ್ ಹೀ ಫಿಲ್ಮ್ ಕೇ ಗೀತ್ ಕಾರ್ಯಕ್ರಮದಲ್ಲಿ ಹೊಸ ಚಿತ್ರದ ಗೀತೆಗಳು ಪ್ರಸಾರವಾಗುವಾಗ ಎಲ್ಲಾದರೂ ಒಂದು ರಫಿ ಹಾಡು ಕೇಳಿ ಬಂದೀತೇ ಎಂದು ಕಾಯುವ, ಬಿನಾಕಾ ಗೀತ್ ಮಾಲಾದಲ್ಲಿ ಅಪರೂಪಕ್ಕೊಂದು ರಫಿ ಹಾಡು ಸರ್ತಾಜ್ ಗೀತ್ ಆದರೆ ಪುಳಕಗೊಂಡು ತೃಪ್ತಿಪಟ್ಟುಕೊಳ್ಳುವ ಪರಿಸ್ಥಿತಿ ರಫಿ ಅಭಿಮಾನಿಗಳಿಗೆ ಬಂದೊದಗಿತ್ತು. ಫರ್ಮಾಯಿಶಿ ಕಾರ್ಯಕ್ರಮಗಳಲ್ಲಿ ರಫಿ ಹಾಡುಗಳೇ ಇರುತ್ತಿರಲಿಲ್ಲ. ಕಾಲಚಕ್ರ ಮತ್ತೆ ತಿರುಗಿತು. ಒಮ್ಮೆ ಬುಸುಗುಟ್ಟಿ ನೊರೆಯುಕ್ಕಿಸಿದ ಹಾಡುಗಳು ತಣ್ಣಗಾದವು. 50-60ರ ದಶಕದ ಹಾಡುಗಳು ಸುವರ್ಣಯುಗದ ಸಂಗೀತವಾಗಿ ಹರಳುಗಟ್ಟಿದವು. ಈಗ ಯಾವುದೇ FM ಅಥವಾ ರೇಡಿಯೊ ಸ್ಟೇಶನ್ ಆಲಿಸಿದರೂ 90 ಶೇಕಡಾ ಕಾರ್ಯಕ್ರಮಗಳು ಈ ಸುವರ್ಣಯುಗದ ರಫಿ ಮತ್ತಿತರರ ಹಾಡುಗಳಿಂದಲೇ ತುಂಬಿರುತ್ತವೆ. ಅಂತರ್ಜಾಲ ಸರ್ವವ್ಯಾಪಿಯಾದಮೇಲಂತೂ ರೇಡಿಯೋ ಸ್ಟೇಶನ್‌ಗಳ ಅವಲಂಬನೆಯೂ ತಪ್ಪಿ ಯಾರಿಗೆ ಯಾವುದು ಬೇಕೋ ಅದನ್ನು ಆರಿಸಿಕೊಳ್ಳುವ ವರ ದೊರಕಿದೆ.
----
ರಫಿ ರಜೆಯಿಂದ ಮರಳಿದ ಮೇಲೆ ಆರಾಧನಾದಲ್ಲಿ ಬಾಕಿ ಉಳಿದಿದ್ದ ಗುನ್ ಗುನಾ ರಹೇ ಹೈಂ ಭಂವರೆ ಹಾಡು ಆಶಾ ಭೋಸ್ಲೆಯೊಡನೆ ಹಾಡಿದರಲ್ಲವೇ. ಒಂದು ವೇಳೆ ಅವರು ಮರಳುವುದು ಇನ್ನಷ್ಟು ತಡವಾಗಿ ಅದನ್ನೂ ಕಿಶೋರ್ ಹಾಡುತ್ತಿದ್ದರೆ ಹೇಗಿರುತ್ತಿತ್ತು ಎಂಬ ಕುತೂಹಲ ಉಂಟಾಗುವುದು ಸಹಜ. ಅದಕ್ಕೆ ಉತ್ತರ ಇಲ್ಲಿದೆ. ಆರಾಧನಾ ಹಿಟ್ ಆದ ಮೇಲೆ ಅದನ್ನು ಬಂಗಾಲಿಗೆ ಡಬ್ ಮಾಡಿದಾಗ ಅದನ್ನು ಹಾಡಿದ್ದು ಕಿಶೋರ್ ಮತ್ತು ಆಶಾ. ಅದನ್ನು ಮತ್ತು ಮೂಲ ಹಿಂದಿ ಹಾಡನ್ನು ಇಲ್ಲಿ ಕೇಳಬಹುದು.
***********
ಈ ಲೇಖನ 29-7-2017ರ ವಿಶ್ವವಾಣಿಯಲ್ಲೂ ಪ್ರಕಟವಾಗಿದ್ದು ಓದಲು ಚಿತ್ರದ ಮೇಲೆ ಕ್ಲಿಕ್ಕಿಸಿ.
****************************************
ಈ ಲೇಖನವನ್ನು ಓದಿ ಬೆಂಗಳೂರಿನ ಮಹೇಶ್ ದೇಶ್‌ಪಾಂಡೆ ಅವರು ಧ್ವನಿರೂಪದಲ್ಲಿ ಕಳಿಸಿರುವ ಪ್ರತಿಕ್ರಿಯೆ ಇಲ್ಲಿದೆ.
13-8-2017ರ ವಿಶ್ವವಾಣಿಯಲ್ಲಿ ಪ್ರಕಟವಾದ ಮೆಚ್ಚಿಗೆ ಪತ್ರ.
70ರ ದಶಕದಲ್ಲಿ ರೇಡಿಯೋ ಸಿಲೋನಿನ ಏಕ್ ಹೀ ಫಿಲ್ಮ್ ಕೇ ಗೀತ್ ಕಾರ್ಯಕ್ರಮದಲ್ಲಿ ಹೊಸ ಚಿತ್ರದ ಗೀತೆಗಳು ಪ್ರಸಾರವಾಗುವಾಗ ಎಲ್ಲಾದರೂ ಒಂದು ರಫಿ ಹಾಡು ಕೇಳಿ ಬಂದೀತೇ ಎಂದು ಕಾಯುವ, ಬಿನಾಕಾ ಗೀತ್ ಮಾಲಾದಲ್ಲಿ ಅಪರೂಪಕ್ಕೊಂದು ರಫಿ ಹಾಡು ಸರ್ತಾಜ್ ಗೀತ್ ಆದರೆ ಪುಳಕಗೊಂಡು ತೃಪ್ತಿಪಟ್ಟುಕೊಳ್ಳುವ ಪರಿಸ್ಥಿತಿ ರಫಿ ಅಭಿಮಾನಿಗಳಿಗೆ ಬಂದೊದಗಿತ್ತು. ಫರ್ಮಾಯಿಶಿ ಕಾರ್ಯಕ್ರಮಗಳಲ್ಲಿ ರಫಿ ಹಾಡುಗಳೇ ಇರುತ್ತಿರಲಿಲ್ಲ. ಕಾಲಚಕ್ರ ಮತ್ತೆ ತಿರುಗಿತು. ಒಮ್ಮೆ ಬುಸುಗುಟ್ಟಿ ನೊರೆಯುಕ್ಕಿಸಿದ ಹಾಡುಗಳು ತಣ್ಣಗಾದವು. 50-60ರ ದಶಕದ ಹಾಡುಗಳು ಸುವರ್ಣಯುಗದ ಸಂಗೀತವಾಗಿ ಹರಳುಗಟ್ಟಿದವು. ಈಗ ಯಾವುದೇ FM ಅಥವಾ ರೇಡಿಯೊ ಸ್ಟೇಶನ್ ಆಲಿಸಿದರೂ 90 ಶೇಕಡಾ ಕಾರ್ಯಕ್ರಮಗಳು ಈ ಸುವರ್ಣಯುಗದ ರಫಿ ಮತ್ತಿತರರ ಹಾಡುಗಳಿಂದಲೇ ತುಂಬಿರುತ್ತವೆ. ಅಂತರ್ಜಾಲ ಸರ್ವವ್ಯಾಪಿಯಾದಮೇಲಂತೂ ರೇಡಿಯೋ ಸ್ಟೇಶನ್‌ಗಳ ಅವಲಂಬನೆಯೂ ತಪ್ಪಿ ಯಾರಿಗೆ ಯಾವುದು ಬೇಕೋ ಅದನ್ನು ಆರಿಸಿಕೊಳ್ಳುವ ವರ ದೊರಕಿದೆ.
----
ರಫಿ ರಜೆಯಿಂದ ಮರಳಿದ ಮೇಲೆ ಆರಾಧನಾದಲ್ಲಿ ಬಾಕಿ ಉಳಿದಿದ್ದ ಗುನ್ ಗುನಾ ರಹೇ ಹೈಂ ಭಂವರೆ ಹಾಡು ಆಶಾ ಭೋಸ್ಲೆಯೊಡನೆ ಹಾಡಿದರಲ್ಲವೇ. ಒಂದು ವೇಳೆ ಅವರು ಮರಳುವುದು ಇನ್ನಷ್ಟು ತಡವಾಗಿ ಅದನ್ನೂ ಕಿಶೋರ್ ಹಾಡುತ್ತಿದ್ದರೆ ಹೇಗಿರುತ್ತಿತ್ತು ಎಂಬ ಕುತೂಹಲ ಉಂಟಾಗುವುದು ಸಹಜ. ಅದಕ್ಕೆ ಉತ್ತರ ಇಲ್ಲಿದೆ. ಆರಾಧನಾ ಹಿಟ್ ಆದ ಮೇಲೆ ಅದನ್ನು ಬಂಗಾಲಿಗೆ ಡಬ್ ಮಾಡಿದಾಗ ಅದನ್ನು ಹಾಡಿದ್ದು ಕಿಶೋರ್ ಮತ್ತು ಆಶಾ. ಅದನ್ನು ಮತ್ತು ಮೂಲ ಹಿಂದಿ ಹಾಡನ್ನು ಇಲ್ಲಿ ಕೇಳಬಹುದು.
***********
ಈ ಲೇಖನ 29-7-2017ರ ವಿಶ್ವವಾಣಿಯಲ್ಲೂ ಪ್ರಕಟವಾಗಿದ್ದು ಓದಲು ಚಿತ್ರದ ಮೇಲೆ ಕ್ಲಿಕ್ಕಿಸಿ.
****************************************
ಈ ಲೇಖನವನ್ನು ಓದಿ ಬೆಂಗಳೂರಿನ ಮಹೇಶ್ ದೇಶ್‌ಪಾಂಡೆ ಅವರು ಧ್ವನಿರೂಪದಲ್ಲಿ ಕಳಿಸಿರುವ ಪ್ರತಿಕ್ರಿಯೆ ಇಲ್ಲಿದೆ.
13-8-2017ರ ವಿಶ್ವವಾಣಿಯಲ್ಲಿ ಪ್ರಕಟವಾದ ಮೆಚ್ಚಿಗೆ ಪತ್ರ.
=
