Saturday, 18 March 2017

ಅವಳಿ ಹಾಡುಗಳು


ಒಂದೇ ಹಾಡನ್ನು ಪುರುಷ ಮತ್ತು ಸ್ತ್ರೀ ಕಂಠದಲ್ಲಿ ಬೇರೆ ಬೇರೆಯಾಗಿ ಹಾಡಿಸುವ ಪರಿಪಾಠ ಹಿಂದಿ ಚಿತ್ರರಂಗದಲ್ಲಿ 50ರ ದಶಕದ ಆದಿಭಾಗದಲ್ಲೇ ಆರಂಭವಾಗಿತ್ತು.  ಇಂತಹ ಮೊತ್ತ ಮೊದಲ  ಜನಪ್ರಿಯ ಅವಳಿ ಹಾಡು, ನಿಖರವಾಗಿ ಹೇಳಬೇಕಾದರೆ ತ್ರಿವಳಿ ಹಾಡನ್ನು ಶಂಕರ್ ಜೈಕಿಶನ್ ಅವರು 1952ರ ದಾಗ್ ಚಿತ್ರದಲ್ಲಿ ಪರಿಚಯಿಸಿದ್ದರು. ಏ ಮೇರೆ ದಿಲ್ ಕಹಿಂ ಔರ್ ಚಲ್ ಹಾಡಿನ ಎರಡು ಅವತರಣಿಕೆಗಳನ್ನು ತಲತ್ ಮಹಮೂದ್ ಮತ್ತು ಒಂದನ್ನು ಲತಾ ಮಂಗೇಶ್ಕರ್ ಹಾಡಿದ್ದರು. ಇದೇ ಜಾಡಿನಲ್ಲಿ ಮುಂದೆ ಸಿ.ರಾಮಚಂದ್ರ ಅವರ ಧೀರೆ ಸೆ ಆಜಾರಿ ಅಖಿಯನ್ ಮೆಂ, ಈನಾ ಮೀನಾ ಡೀಕಾ, ಬರ್ಮನ್ ದಾದಾ ಅವರ ನ ಯೆ ಚಾಂದ್ ಹೋಗ, ಜಾಯೆ ತೊ ಜಾಯೆ ಕಹಾಂ,ಜೀವನ್ ಕೆ ಸಫರ್ ಮೆ ರಾಹೀ, ನ ತುಮ್ ಹಮೆ ಜಾನೋ  ಮುಂತಾದವು ಅವಳಿ ಹಾಡುಗಳಾಗಿ ಬಂದವು.  ಆದರೆ ಇವು ತದ್ರೂಪಿ ಆಗಿರಲಿಲ್ಲ.  ಧಾಟಿ, ಸಂಗೀತದ arrangement ಇತ್ಯಾದಿ ಕೊಂಚ ಭಿನ್ನವಾಗಿರುತ್ತಿತ್ತು.  ಕೆಲವು ಸಲ ಸಾಹಿತ್ಯವೂ ಬೇರೆಯೇ ಆಗಿರುತ್ತಿತ್ತು.

ತದ್ರೂಪಿ ಅವಳಿಗಳು
1961ರ ಜಂಗ್ಲಿಯಲ್ಲಿ ರಫಿ ಹಾಡಿದ್ದ ಎಹೆಸಾನ್ ತೇರಾ ಹೋಗಾ ಮುಝ್ ಪರ್ ಹಾಡಿನ ಹಿನ್ನೆಲೆ ಸಂಗಿತದ trackನ್ನು ಯಥಾವತ್ ಬಳಸಿ ಲತಾ ಮಂಗೇಶ್ಕರ್ ಅವರಿಂದ ಅದೇ ಸಾಹಿತ್ಯವನ್ನು ಅದೇ ಶ್ರುತಿಯಲ್ಲಿ ಹಾಡಿಸುವ ಮೂಲಕ ಶಂಕರ್ ಜೈಕಿಶನ್ ಹೊಸತೊಂದು ಪ್ರಯೋಗ ಮಾಡಿದರು.  ಮೊದಲು ಈ ಶಮ್ಮಿ ಕಪೂರ್ ಹಾಡನ್ನು ಸಾಯಿರಾಬಾನುವಿನಿಂದಲೂ ಹಾಡಿಸುವ ಆಲೋಚನೆ ಇರಲಿಲ್ಲವಂತೆ.  ರಫಿಯ ಹಾಡಿಗೇ ಸಾಯಿರಾ ಅವರಿಂದ  lip sync ಮಾಡಿಸಿ ಚಿತ್ರೀಕರಣ ಮಾಡಿ ನೋಡಿದಾಗ ಎಲ್ಲರಿಗೂ ಮೆಚ್ಚಿಕೆಯಾಯಿತಂತೆ.  ಮುಂದೆ ಸಾಯಿರಾ ಅಭಿನಯವನ್ನು ತೆರೆಯ ಮೇಲೆ ನೋಡುತ್ತಾ ರಫಿ track ಹಿನ್ನೆಲೆಯಲ್ಲಿ ಲತಾ ಮಂಗೇಶ್ಕರ್ ಇದನ್ನು ಹಾಡಿದರಂತೆ.  ಇದರ ಯಶಸ್ಸಿನಿಂದ ಉತ್ತೇಜಿತರಾದ ಶಂಕರ್ ಜೈಕಿಶನ್ ಜಬ್ ಪ್ಯಾರ್ ಕಿಸೀಸೆ ಹೋತಾ ಹೈಯಲ್ಲಿ ಜಿಯಾ ಓ ಜಿಯಾ ಒ ಕುಛ್ ಬೋಲ್ ದೊ, ಲವ್ ಇನ್ ಟೋಕಿಯೋದಲ್ಲಿ ಓ ಮೇರೆ ಶಾಹೆಖುಬಾ  ಮುಂತಾದ ತದ್ರೂಪಿ ಅವಳಿಗಳನ್ನು  ಸೃಷ್ಟಿಸಿದರು.  1964 ರಿಂದ 1966ರ ಮಧ್ಯದಲ್ಲಿ ಕೆಲ ಕಾಲ ರಫಿ ಮತ್ತು ಲತಾ ಜೊತೆಗೆ ಹಾಡುತ್ತಿರಲಿಲ್ಲ.  ಆಗ ರೆಡಿಯೋ ಸಿಲೋನಿನವರು ಓ ಮೇರೆ ಶಾಹೆಖುಬಾ ಹಾಡಿನ ಎರಡೂ ಆವೃತ್ತಿಗಳನ್ನು ಯುಗಳಗೀತೆಯ ರೀತಿ ಸಮ್ಮಿಳಿತಗೊಳಿಸಿ ಕೇಳುಗರನ್ನು ಖುಶಿಪಡಿಸುತ್ತಿದ್ದುದುಂಟು. ಇತ್ತೀಚೆಗೆ ನಾನೂ ಈ ಪ್ರಯೋಗ ಮಾಡಿ ಜಿಯಾ ಓ ಜಿಯಾ ಓ ಕುಛ್ ಬೋಲ್ ದೋ ಹಾಡಿನ ತದ್ರೂಪಿಗಳನ್ನು ಬಳಸಿ ಯುಗಳ ಗೀತೆ ತಯಾರಿಸಿದ್ದುಂಟು.



ಇತರ ಅವಳಿಗಳು
ತದ್ರೂಪಿ ಅಲ್ಲದಿದ್ದರೂ ಶಂಕರ್ ಜೈಕಿಶನ್ ಇನ್ನೂ ಬಹಳಷ್ಟು ಅವಳಿ ಗೀತೆಗಳನ್ನು ಸೃಷ್ಟಿಸಿದ್ದಾರೆ.  ತುಮ್ ಕಮ್ ಸಿನ್ ಹೋ/ಮೈ ಕಮ್ ಸಿನ್ ಹೂಂ,ಅಜೀ ರೂಠ್ ಕರ್ ಅಬ್ /  ಅಜೀ ಹಮ್ ಸೆ ಬಚ್ ಕರ್, ತುಮ್ ಮುಝೆ ಯೂಂ ಭುಲಾ ನ ಪಾವೋಗೆ, ಗರ್ ತುಮ್ ಭುಲಾ ನ ದೋಗೆ, ರಾತ್ ಔರ್ ದಿನ್ ದಿಯಾ ಜಲೇ, ಚಲೇ ಜಾ ಚಲೇಜಾ ಚಲೇಜಾ ಜಹಾಂ ಪ್ಯಾರ್ ಮಿಲೇ, ಜಿಂದಗೀ ಎಕ್ ಸಫರ್ ಹೈ ಸುಹಾನಾ ಕೆಲವು ಉದಾಹರಣೆಗಳು. ರಫಿ ಧ್ವನಿಯಲ್ಲೇ ಮೈ ಗಾವೂಂ ತುಮ್ ಸೋ ಜಾವೋ ಹಾಡಿನ  ಎರಡು ಆವೃತ್ತಿಗಳಿದ್ದವು.  ಇತರ ಸಂಗೀತ ನಿರ್ದೇಶಕರೂ ಈ ದಿಸೆಯಲ್ಲಿ ಹಿಂದುಳಿಯಲಿಲ್ಲ.  ಲೌಟ್ ಕೆ ಆಜಾ ಮೇರೆ ಮೀತ್, ಹಮ್ ನೆ ತುಝ್ ಕೋ ಪ್ಯಾರ್ ಕಿಯಾ ಹೈ ಕಿತನಾ, ಮುಝ್ ಕೊ ಇಸ್ ತನಹಾಯಿ ಮೆಂ,  ದಿಲ್ ಬೇಕರಾರ್ ಸಾ ಹೈ,  ಅಕೇಲೆ ಹೈಂ ಚಲೇ ಆವೋ, ತ್ರಿವಳಿ ರೂಪದ   ಪರದೇಸಿಯೋಂ ಸೆ ನ ಅಖಿಯಾ ಮಿಲಾನಾ, ಓ ಸಾಥೀರೇ ತೇರೆ ಬಿನಾ ಭೀ ಕ್ಯಾ ಜೀನಾ, ಮೇರೆ ಮೆಹಬೂಬ್ ತುಝೆ,  ವಾದಿಯಾಂ ಮೇರಾ ದಾಮನ್, ರಫಿ-ಕಿಶೋರ್ ಕಂಠಗಳ ತುಮ್ ಬಿನ್ ಜಾವೂಂ ಕಹಾಂ, ಫೂಲೊಂಕಾ ತಾರೊಂಕಾ, ಮೇರೇ ನೈನಾ ಸಾವನ್ ಭಾದೊಂ, ಹಮೆ ತುಮ್ಸೆ ಪ್ಯಾರ್ ಕಿತ್ನಾ, ದಿಲ್ ಜೋ ನ ಕಹ ಸಕಾ, ಖಿಲ್ತೆ ಹೈಂ ಗುಲ್ ಯಹಾಂ, ತೇರಿ ಆಂಖೋ ಕೆ ಸಿವಾ ದುನಿಯಾ ಮೆ, ಗರೀಬೊಂ ಕೀ ಸುನೋ, ಅಜನಬೀ ತುಮ್ ಜಾನೇ ಪಹಚಾನೇ ಸೇ, ಸಾಜನ್ ಸಾಜನ್ ಪುಕಾರೂಂ, ಆಹಾ ಆಹಾ ಆ ಯೇ ಸುಹಾನಾ ಸಫರ್, ಒಂದೇ ಕಂಠದ ಎರಡು ರೂಪಗಳ  ಆನೇ ಸೇ ಉಸ್ ಕೇ ಆಯೇ ಬಹಾರ್, ವಿಭಿನ್ನ ಯುಗಳ ಕಂಠಗಳ ಜಬ್ ಸೆ ಹಮ್ ತುಮ್ ಬಹಾರೋ ಮೆಂ, ಏಕ್ ದೋ ತೀನ್, ಬಹುತ್ ಪ್ಯಾರ್ ಕರತೆ ಹೈಂ, ತೇರೆ ಮೇರೆ ಬೀಚ್ ಮೆಂ, ದಿಲ್ ಹೈ ಕೆ ಮಾನತಾ ನಹೀಂ  ಮುಂತಾದ ಜನಪ್ರಿಯ ಅವಳಿ ಹಾಡುಗಳು ಪುಂಖಾನುಪುಂಖವಾಗಿ ಬಂದವು. ರೇಡಿಯೋ ಸಿಲೋನಿನಲ್ಲಿ ಇಂತಹ ಹಾಡುಗಳಿಗೇ ಮೀಸಲಾದ ದೋ ಪಹಲೂ ದೋರಂಗ್ ದೋ ಗೀತ್ ಎಂಬ ಅಆಪ್ತಾಹಿಕ ಕಾರ್ಯಕ್ರಮವೊಂದಿತ್ತು.
 
ಕನ್ನಡದಲ್ಲಿ
ಕನ್ನಡದಲ್ಲಿ ಅವಳಿ ಹಾಡುಗಳ ಪರಂಪರೆ ಆರಂಭವಾದದ್ದು ಸ್ವಲ್ಪ ತಡವಾಗಿ ಅಂದರೆ 60ರ ದಶಕದ ಆದಿ ಭಾಗದಲ್ಲಿ.  ನನಗೆ ತಿಳಿದಿರುವ ಪ್ರಕಾರ  1961ರಲ್ಲಿ ಬಂದ ಕಣ್ತೆರೆದು ನೋಡು ಚಿತ್ರಕ್ಕಾಗಿ ಒಮ್ಮೆ ಪಿ.ಬಿ.ಶ್ರೀನಿವಾಸ್ ಹಾಗೂ ಇನ್ನೊಮ್ಮೆ ಅವರ ಜೊತೆ ಬೆಂಗಳೂರು ಲತಾ ಹಾಡಿದ್ದ ಬಂಗಾರದೊಡವೆ ಬೇಕೆ ಇಂತಹ ಮೊದಲ ಗೀತೆ.   ನಂತರ 1966ರಲ್ಲಿ ಬಂದ ಬದುಕುವ ದಾರಿ ಚಿತ್ರದಲ್ಲಿ ಪಿ.ಬಿ.ಶ್ರೀನಿವಾಸ್ ಮತ್ತು ಎಸ್.ಜಾನಕಿ ಕಂಠಗಳಲ್ಲಿದ್ದ  ಇಲ್ಲೂ ಇರುವೆ ಅಲ್ಲೂ ಇರುವೆ ಇಂತಹ ಎರಡನೇ ಗೀತೆಯಾಯಿತು. ಮುಂದೆ ಬರೆದೆ ನೀನು ನಿನ್ನ ಹೆಸರ, ಪಂಚಮ ವೇದ, ನೀ ತಂದ ಕಾಣಿಕೆ ನಗೆ ಹೂವ ಮಾಲಿಕೆ, ಒಲವೆ ಜೀವನ ಸಾಕ್ಷಾತ್ಕಾರ, ನಿನ್ನೊಲುಮೆ ನನಗಿರಲಿ ತಂದೆ, ತೂಗುವೆ ರಂಗನ, ನಾ ಅಮ್ಮ ಎಂದಾಗ ಏನೋ, ಈ ಲೋಕವೆಲ್ಲ ನೀನೆ ಇರುವ,   ಯುಗಳ ಸ್ವರಗಳ ಅವಳಿ  ಕಾಣದ ದೇವರು ಊರಿಗೆ ನೂರು, ತ್ರಿವಳಿ ರೂಪದ ನಂಬಿದೆ ನಿನ್ನ ನಾದ ದೇವತೆಯೇ ಮುಂತಾದವು ಬಂದವು.  70ರ ದಶಕದಲ್ಲೂ ನಿನ್ನ ನೀನು ಮರೆತರೇನು, ಬಿಸಿಲಾದರೇನು, ಆಸೆಯ ಭಾವ, ಆಕಾಶ ದೀಪವು ನೀನು, ಈ ಗುಲಾಬಿಯು ನಿನಗಾಗಿ, ಜೋ ಜೋ ಲಾಲಿ ನಾ ಹಾಡುವೆ, ಬಾನದಾರಿಯಲ್ಲಿ ಸೂರ್ಯ, ನೀ ಮೀಟಿದ ನೆನಪೆಲ್ಲವೂ, ರಾಮಾಚಾರಿ ಹಾಡುವಾ ಇತ್ಯಾದಿ ಜನಪ್ರಿಯ ಹಾಡುಗಳು ಸೇರ್ಪಡೆಗೊಂಡವು.  ಇತ್ತೀಚಿನ ಅನಿಸುತಿದೆ ಯಾಕೋ ಇಂದು ವರೆಗೂ ಈ ಪರಿಪಾಠ ಮುಂದುವರಿಯುತ್ತಾ ಬಂದಿದೆ.  ಕೆಲವು ಸಲ ಅವಳಿ-ಜವಳಿಗಳ ಪೈಕಿ ಅವಳಿ ಒಂದು ಚಿತ್ರದಲ್ಲಿದ್ದು  ಜವಳಿ ಅನೇಕ ವರ್ಷಗಳ ನಂತರ ಬಂದ ಇನ್ನೊಂದು ಚಿತ್ರದಲ್ಲಿದ್ದದೂ ಇದೆ!  ಮಂತ್ರಾಲಯ ಮಹಾತ್ಮೆಯಲ್ಲಿ ಪಿ.ಬಿ.ಎಸ್ ಧ್ವನಿಯಲ್ಲಿದ್ದ ಇಂದು ಎನಗೆ ಗೋವಿಂದ ಎರಡು ಕನಸು ಚಿತ್ರದಲ್ಲಿ ಜಾನಕಿ ಧ್ವನಿಯಲ್ಲಿ ಬಂದದ್ದು, ಕಿಟ್ಟು ಪುಟ್ಟು ಚಿತ್ರದಲ್ಲಿ ಜೇಸುದಾಸ್-ಜಾನಕಿ ಧ್ವನಿಯಲ್ಲಿದ್ದ ಕಾಲವನ್ನು ತಡೆಯೋರು ಹಾಡನ್ನು ಆಪ್ತಮಿತ್ರದಲ್ಲಿ ಗುರುಕಿರಣ್-ಶಂಕರ್ ಮಹಾದೇವನ್ ಹಾಡಿದ್ದು, ಗಂಧದ ಗುಡಿಯಲ್ಲಿ ಪಿ.ಬಿ.ಎಸ್ ಧ್ವನಿಯಲ್ಲಿದ್ದ  ನಾವಾಡುವ ನುಡಿಯೇ ಅದೇ ಹೆಸರಿನ ಎರಡನೇ ಭಾಗದ ಚಿತ್ರದಲ್ಲಿ ರಾಜ್ ಕುಮಾರ್ ಸ್ವತಃ ಹಾಡಿದ್ದು ಇದಕ್ಕೆ ಕೆಲವು ಉದಾಹರಣೆಗಳು.  ತುಳು ಚಿತ್ರಗಳಲ್ಲೂ ಅವಳಿ ಹಾಡುಗಳು ಬಂದಿವೆ.  ನಮ್ಮ ಮಂಗಳೂರಿನವರೇ ಆದ ಅಶೋಕ್-ಚರಣ್ ಸಂಗೀತ ನೀಡಿದ ಬೊಳ್ಳಿದೋಟ ಚಿತ್ರದ  ದಾನೇ ಪೊಣ್ಣೆ / ದಾನೆ ಪನ್ಲೆ ಸಾಹಿತ್ಯ ಬೇರೆ ಬೇರೆಯಾಗಿದ್ದರೂ ಉಳಿದಂತೆ ತದ್ರೂಪಿಯಾಗಿದ್ದು ಅವುಗಳನ್ನು ಸೇರಿಸಿ ನಾನು ತಯಾರಿಸಿದ ಯುಗಳ ಗೀತೆ youtubeನಲ್ಲಿ ಲಭ್ಯವಿದೆ.

ಹೋಲಿಕೆ
ಒಂದು ಹಾಡು ಪುರುಷ/ಸ್ತ್ರೀ  ಕಂಠಗಳಲ್ಲಿ ಬೇರೆಬೇರೆಯಾಗಿ ಕೇಳಿಬಂದಾಗ ಯಾವುದು ಹೆಚ್ಚು ಆಕರ್ಷಕ ಎಂಬ ಜಿಜ್ಞಾಸೆ ಉಂಟಾಗುವುದು ಸಹಜ.  ರಫಿ-ಲತಾ ಧ್ವನಿಯ ಅವಳಿ ಗೀತೆಗಳ ಪೈಕಿ ಅಜೀ ರೂಠ್ ಕರ್ / ಅಜೀ ಹಮ್ ಸೆ ಬಚ್ ಕರ್ ಹೊರತು ಪಡಿಸಿ ಎಲ್ಲದರಲ್ಲೂ ರಫಿ ಮೇಲುಗೈ ಸಾಧಿಸಿದ್ದಾರೆ ಎಂದು ನನ್ನ ಅನ್ನಿಸಿಕೆ.   ಕನ್ನಡದಲ್ಲೂ  ಪಂಚಮ ವೇದದಲ್ಲಿ ಜಾನಕಿ ಮಿಂಚಿದ್ದಾರೆ ಎಂಬುದನ್ನು ಬಿಟ್ಟರೆ ಉಳಿದಂತೆ ಪುರುಷ ಕಂಠಗಳದ್ದೇ ಪಾರಮ್ಯ ಎಂದು ಅನೇಕರ ಅಂಬೋಣ. ಏನಿದ್ದರೂ ಇದು ಅವರವರ ಅನಿಸಿಕೆಯೇ ಹೊರತು ಇದಮಿತ್ಥಂ ಎಂದು ಹೇಳುವ  ಹಾಗಿಲ್ಲ.

ಪಂಚಮ ವೇದ
ಗೆಜ್ಜೆ ಪೂಜೆ ಚಿತ್ರದ  ಈ ಹಾಡು ಜಾನಕಿ ಅವರಿಗಾಗಿಯೇ D Sharp ಏರು ಶ್ರುತಿಯಲ್ಲಿ ಸಂಯೋಜಿಸಲ್ಪಟ್ಟಿದ್ದು ಅವರ versionಗೆ ಹೆಚ್ಚು ಉಠಾವ್ ಸಿಗಲು ಕಾರಣವಾಗಿರಬಹುದು. ಆ ಮೇಲೆ ಅದನ್ನು ಪಿ.ಬಿ.ಎಸ್ ಅವರು C Sharp  ತಗ್ಗು ಶ್ರುತಿಯಲ್ಲಿ ಹಾಡಿರುತ್ತಾರೆ. ಎರಡು ವರ್ಷನ್ ಒಂದೇ ಸಾಹಿತ್ಯ ಹೊಂದಿದ್ದರೂ  ಸಂದರ್ಭಗಳ ಮೂಡ್ ಬೇರೆ ಬೇರೆಯಾಗಿದ್ದು  ಅದಕ್ಕೆ ತಕ್ಕಂತೆ ಸಂಗೀತದ arrangement, ಹಾಡಿದ ಶೈಲಿ ಮತ್ತು ಪ್ರತಿ ಸಾಲಿನ ಸಂಗತಿಗಳು ಕೂಡ ವಿಭಿನ್ನವಾಗಿದೆ.  ಹೀಗಾಗಿ ಈ ಹಾಡನ್ನು ಇತರರು ಹಾಡಲು/ನುಡಿಸಲು ಪ್ರಯತ್ನಿಸುವಾಗ ಆ ಶೈಲಿ  ಈ ಶೈಲಿ  ಬೆರೆತು ಕಲಸು ಮೇಲೋಗರವಾಗುವುದಿದೆ. ಸ್ವರಗಳನ್ನು ಗುರುತಿಸಬಲ್ಲ ಆಸಕ್ತರಿಗೆ ಅನುಕೂಲವಾಗಲೆಂದು ಎರಡರ ವ್ಯತ್ಯಾಸ ಸ್ಪಷ್ಟವಾಗುವಂತೆ ಪ್ರತೀ ಸಾಲಿನ ಸ್ವರ ಪ್ರಸ್ತಾರದೊಡನೆ ಎರಡು versionಗಳನ್ನೂ ಪ್ರತ್ಯೇಕವಾಗಿ ಪ್ರಸ್ತುತಪಡಿಸುವ ಪ್ರಯತ್ನವೊಂದನ್ನು ಇಲ್ಲಿ ಮಾಡಿದ್ದೇನೆ. ವಿಶೇಷವಾಗಿ ಗಮಕ/ಮುರ್ಕಿಗಳ ಸಂದರ್ಭದಲ್ಲಿ ಈ ಸ್ವರಗಳು indicative ಅಷ್ಟೇ ಹೊರತು ನೂರು ಶೇಕಡಾ ಸರಿಯಾಗಿವೆ ಎಂದು ಹೇಳಲಾಗದು.  ಎರಡೂ versionಗಳ prelude/interludeಗಳು ಬಿಂಕದ ಸಿಂಗಾರಿಯಲ್ಲಿದಂತೆ ಹಾಡಿನ ಅವಿಭಾಜ್ಯ ಅಂಗಗಳೇನೂ ಅಲ್ಲದ್ದರಿಂದ ಇಲ್ಲಿ ಅವುಗಳಿಗೆ  ಪ್ರಾಮುಖ್ಯ ಕೊಡಲಾಗಿಲ್ಲ. ಸ್ವರಲಿಪಿಯಲ್ಲಿ ಆಸಕ್ತಿಯಿಲ್ಲದವರು ಸಾಹಿತ್ಯ ಓದುತ್ತಾ ಎರಡೂ version ಆಲಿಸಿ ಆನಂದಿಸಬಹುದು. ವಿಜಯ ನಾರಸಿಂಹ ಅವರ ಸಾಹಿತ್ಯದಲ್ಲಿ ಎಲ್ಲೂ ಕ್ರಿಯಾಪದ ಇಲ್ಲದಿರುವುದನ್ನು ಗಮನಿಸಿ.
****
ಪಂಚಮ ವೇದ ಪ್ರೇಮದ ನಾದ
ಪ್ರಣಯದ ಸರಿಗಮ ಭಾವಾನಂದ
ಹೃದಯ ಸಂಗಮ ಅನುರಾಗ ಬಂಧ
ರಾಗ ರಾಗಿಣಿ ಯೋಗಾನುಬಂಧ
ಜೀವಜೀವದ ಸ್ವರಸಂಚಾರ
ಅಮೃತಚೇತನ ರಸಧಾರ
ರಾಧಾ ಮಾಧವ ವೇಣುವಿಹಾರ
ಗೀತೆಯೇ ಪ್ರೀತಿಯ ಜೀವನಸಾರ
ಪ್ರೇಮಗಾನದೆ ಪರವಶ ಈ ಧರೆ
ಮಾನಸಲೋಕದ ಗಂಗೆಯ ಧಾರೆ
ದಿವ್ಯದಿಗಂತದ ಭಾಗ್ಯತಾರೆ
ಭವ್ಯ ರಸಿಕತೆ ಬಾಳಿಗಾಸರೆ
****

ಸ್ವರಲಿಪಿ

ವಿಜಯಭಾಸ್ಕರ್ ಸಂಗೀತ ಸಂಯೋಜಿಸಿರುವ ಈ ಹಾಡು ಭೀಮ್ ಪಲಾಸ್ ಅರ್ಥಾತ್  ಅಭೇರಿ ರಾಗಾಧಾರಿತವಾಗಿದ್ದು ಆರೋಹಣ ಅವರೋಹಣ ಈ ರೀತಿ ಇದೆ.
ಸ ಗ21 ಪ ನಿ2
ಸ ನಿ22 ಪ ಮ12 ರಿ2
ಕೆಲವೆಡೆ 1 ಕೂಡ ಪ್ರಯೋಗಿಸಲಾಗಿದ್ದು ಅದನ್ನು ನಮೂದಿಸಲಾಗಿದೆ.
ಉಳಿದೆಡೆ 2 ಎಂದು ತಿಳಿಯುವುದು.
ಕಪ್ಪ ಬಣ್ಣ ಮಧ್ಯ ಸಪ್ತಕವೆಂದೂ
ಹಸುರು ಬಣ್ಣ ಮಂದ್ರವೆಂದೂ
ಕೆಂಪ ಬಣ್ಣವನ್ನು ತಾರ ಸಪ್ತಕವೆಂದೂ ತಿಳಿಯಬೇಕು.
ರಿಸನಿಸಾನಿ  ಈ ರೀತಿ underline ಇದ್ದರೆ  ಎರಡನೇ ಕಾಲ(ಡಬಲ್ ಸ್ಪೀಡ್).

ಈ ಪಂಚಮ ವೇದ ಹಾಡು ಪಂಚಮದಿಂದಲೇ ಆರಂಭವಾಗುವುದು ಮತ್ತು ಸರಿಗಮ ಪದದ ಸ್ವರಗಳೂ ಸರಿಗಮವೇ ಆಗಿರುವುದನ್ನು ಗಮನಿಸಬೇಕು.


ಎಸ್.ಜಾನಕಿ



ಪಂಚಮ       ವೇದ    ಪ್ರೇಮದ    ನಾದ
ಪಾಪಮ      ನೀಗಾ   ರಿಗರಿಸ    ರೀಸಾ
ಪಂಚಮ       ವೇದ    ಪ್ರೇಮದ   ನಾದ
ಪಾಪಮ      ನೀಗಾ   ರಿಗರಿಸ    ರೀಸಾ
ಪ್ರಣಯದ       ಸರಿಗಮ    ಭಾವಾನಂದ
ಗರೀನಿರೀ     ಸರಿಗಮ   ಪಾನೀಸಾಮಪಾ
ಪಂಚಮ       ವೇದ    ಪ್ರೇಮದ   ನಾದ
ಪಾಪಮ      ನೀಗಾ   ರಿಗರಿಸ    ರೀಸಾ
ಪ್ರಣಯದ     ಸರಿಗಮ    ಭಾವಾನಂದ
ಗರಿನಿರೀ     ಸರಿಗಮ   ಪಾನೀಸಾಪಾ

ಹೃದಯ     ಸಂಗಮ           ಅನುರಾಗ ಬಂಧ
ರಿರೀಗರೀ  ರೀಸಾನೀದಾ  ನಿನೀಸಾಸ ರೀರೀ
ಹೃದಯ        ಸಂಗಮ   ಅನುರಾಗ   ಬಂಧ
ರಿರೀಮಗರಿ  ರಿಸನಿದ   ನಿನೀಸಾಸ ರಿನೀರೀ
ರಾಗ ರಾ           ಗಿಣಿ               ಯೋಗಾನುಬಂಧ
ಮಾದನಿದನಿ     ರಿಸನಿಸಾನಿ  ದಾದಾದನೀಪಾ

ಪಂಚಮ       ವೇದ    ಪ್ರೇಮದ   ನಾದ
ಪಾಪಮ      ನೀಗಾ   ರಿಗರಿಸ    ರೀಸಾ
ಪ್ರಣಯದ     ಸರಿಗಮ    ಭಾವಾನಂದ
ಗರಿನಿರೀ     ಸರಿಗಮ   ಪಾನೀಸಾಪಾ



ಜೀವಜೀವದ    ಸ್ವರಸಂ   ಚಾರ
ಸಾನಿಸಾಸಸ    ನಿಪಮ ಪಪಮಾ
ಅಮೃತ  ಚೇತನ  ರಸಧಾರ
ಸಸನಿಸಾಸಸ   ಪಪಗಾಸಾ

ಜೀವ  ಜೀವದ                    ಸ್ವರಸಂ   ಚಾರ
ನಿಸಸ ಸಗಮಪಮಗಸಾ    ನಿಪಮ ಪಪಮಾ
ಅಮೃತ  ಚೇತನ           ರಸಧಾರ
ನಿಸಸ   ಸರಿಗಾರೀಸಾ  ಪಪನೀಸಾ
ರಾಧಾ ಮಾಧವ     ವೇಣುವಿಹಾರ
ನಿಪನಿಪನಿಪರಿರಿ   ಗರಿಸನಿಸಸನೀ
ಗೀತೆಯೆ    ಪ್ರೀತಿಯ                     ಜೀವನ ಸಾರ
ರೀಮಮ  ಮಾಗರೀಗಮರೀಸಾ   ನೀದಪ ದಪಪಾ

ಪಂಚಮ       ವೇದ     ಪ್ರೇಮದ   ನಾದ
ಪಾಪಮ      ನೀಗಾ   ರಿಗರಿಸ    ರೀಸಾ
ಪ್ರಣಯದ      ಸರಿಗಮ   ಭಾವಾನಂದ
ಗರಿನಿರೀ     ಸರಿಗಮ   ಪಾನೀಸಾಪಾ


ಪ್ರೇಮಗಾನದೆ     ಪರವಶ   ಈ ಧರೆ
ಸಾನಿಸಾಸಸ    ನಿಪಮ ಪಮಮಮ
ಮಾನಸಲೋಕದ      ಗಂಗೆಯ ಧಾರೆ
ನಿಸಾಸನಿಸಾಸಸ   ನೀದಪಸಾಸಾ


ಪ್ರೇಮಗಾನದೆ                  ಪರವಶ   ಈ ಧರೆ
ನಿಸಸಗಮಪಮಗಸಾ  ನಿಪಮ ಪಮಮಮ
ಮಾನಸ   ಲೋಕದ            ಗಂಗೆಯ ಧಾರೆ
ಸಾಸಸ  ಸರಿಗಾರಿಸಸಾ ನೀದಪಸಾಸ

ದಿವ್ಯದಿಗಂತದ   ಭಾಗ್ಯತಾರೆ
ನೀಪಪರೀರಿರಿ   ಗಾರೀನಿಸಾನೀ
ಭವ್ಯ ರಸಿಕತೆ       ಬಾಳಿ                   ಗಾಸರೆ
ರಿಮಮಗಗರಿಸ  ದನಿನಿದನಿದಪ  ದಾಪಪ

ಪಂಚಮ       ವೇದ      ಪ್ರೇಮದ   ನಾದ
ಪಾಪಮ      ನೀಗಾ   ರಿಗರಿಸ    ರೀಸಾ
ಪ್ರಣಯದ    ಸರಿಗಮ   ಭಾವಾನಂದ
ಗರಿನಿರಿ     ಸರಿಗಮ   ಪಾನೀಸಾಮಪಾ

ಹೃದಯ ಸಂಗಮ   ಅನುರಾಗ ಬಂಧ
ರಿರೀಗ  ರಿಸನಿದ   ನಿನೀಸಾಸ ರೀರಿ
ರಾಗ ರಾ            ಗಿಣಿ          ಯೋಗಾನುಬಂಧ
ಮಾದನಿದನಿ     ರಿಸರಿಸನೀದ1  ದಾ1ದಾ1ದನೀಪಾ

ಪಂಚಮ      ವೇದ       ಪ್ರೇಮದ   ನಾದ
ಪಾಪಮ      ನೀಗಾ   ರಿಗರಿಸ    ರೀಸಾ
ಪ್ರಣಯದ       ಸರಿಗಮ    ಭಾವಾ   ನಂದ
ಗರೀನಿರೀ     ಸರಿಗಮ   ಪಾರೀನಿ ನಿಸಾಪಾ

ಪಿ.ಬಿ.ಶ್ರೀನಿವಾಸ್



ಪಂಚಮ    ವೇದ       ಪ್ರೇಮದ ನಾದ
ಪಾಪಮ   ಮನೀಗ   ಸಗರಿಸ ಸರೀ

ಪ್ರಣಯದ   ಸರಿಗಮ  ಭಾವಾ  ನಂದ
ಗರಿನಿರಿ     ಸರಿಗಮ   ಪಾನೀ ನಿಪಾ

ಪಂಚಮ   ವೇದ      ಪ್ರೇಮದ ನಾದ
ಪಾಪಮ   ಮನೀಗ   ಸಗರಿಸ ಸರೀ
ಪ್ರಣಯದ   ಸರಿಗಮ  ಭಾವಾ  ನಂದ
ಗರಿನಿರಿ     ಸರಿಗಮ   ಪಾನೀ ನಿಪಾ

ಹೃದಯ ಸಂಗಮ ಅನುರಾಗ  ಬಂಧ
ರಿರಿಗ    ರಿಸನಿದ ನಿನೀಸಾಸ  ರೀರಿ

ಹೃದಯ ಸಂಗಮ ಅನುರಾಗ  ಬಂಧ
ರಿರಿಗ   ರಿಸನಿದ  ನಿನಿಸಾಸ  ರೀರಿ
ರಾಗ    ರಾಗಿಣಿ              ಯೋಗಾನುಬಂಧ
ಮಾದ ನೀರಿಸರಿಸನಿದ  ದಾದಾದನೀಪ
ಜೀವಜೀವದ     ಸ್ವರ          ಸಂಚಾರ
ನೀನೀಸಸ   ನಿನಿಪಮ ಪಪಮ

ಅಮೃತಚೇತನ     ರಸಧಾರ
ನಿಸಸನಿಸಸರೀನಿ  ಪಪನೀನಿಸಾ

ರಾಧಾ   ಮಾಧವ  ವೇಣುವಿಹಾರ
ಪಾಪನಿ  ಪಾರಿರಿ     ರೀಸನಿ ಸಸನೀ

ಗೀತೆಯೇ   ಪ್ರೀತಿಯ   ಜೀವನಸಾರ
ರೀಮಮಾ  ರೀಸಸ     ನೀದದನಿದಾಪ
ಪಂಚಮ   ವೇದ      ಪ್ರೇಮದ ನಾದ
ಪಾಪಮ   ಮನೀಗ   ಸಗರಿಸ ಸರೀ
ಪ್ರಣಯದ   ಸರಿಗಮ  ಭಾವಾ  ನಂದ
ಗರಿನಿರಿ     ಸರಿಗಮ   ಪಾನೀ ನಿಪಾ


ಪ್ರೇಮಗಾನದೆ  ಪರವಶ ಈ ಧರೆ
ನೀನೀಸಸ   ನಿನಿಪಮ ಪಪಮ

ಮಾನಸಲೋಕದ ಗಂಗೆಯ ಧಾರೆ
ನೀಸಸನಿರೀನಿ  ನೀಪಪ ನಿನಿ ನಿಸಾ

ದಿವ್ಯದಿಗಂತದ      ಭಾಗ್ಯ   ತಾರೆ
ಪಾಪನಿ  ಪಾರಿರಿ   ಗರಿನಿ ಸಸನೀ   

ಭವ್ಯ ರಸಿಕತೆ    ಬಾಳಿಗಾಸರೆ
ರೀಮಗರಿಸಸ  ನಿದದನಿಪಪಪ

ಪಂಚಮ     ವೇದ      ಪ್ರೇಮದ ನಾದ
ಪಾಪಮ   ಮನೀಗ   ಸಗರಿಸ ಸರೀ
ಪ್ರಣಯದ   ಸರಿಗಮ  ಭಾವಾ  ನಂದ
ಗರಿನಿರಿ     ಸರಿಗಮ   ಪಾನೀ ನಿಪಾ


ಹೃದಯ ಸಂಗಮ ಅನುರಾಗ  ಬಂಧ
ರಿರಿಗ    ರಿಸನಿದ ನಿನೀಸಾಸ  ರೀರಿ

ರಾಗ ರಾ            ಗಿಣಿ          ಯೋಗಾನುಬಂಧ
ಮಾದನಿದನಿ     ರಿಸರಿಸನೀದ1  ದಾ1ದಾ1ದನೀಪಾ

ಪಂಚಮ   ವೇದ         ಪ್ರೇಮದ ನಾದ
ಪಾಪಮ   ಮನೀಗ   ಸಗರಿಸ ಸರೀ
ಪ್ರಣಯದ   ಸರಿಗಮ    ಭಾವಾ  ನಂದ
ಗರಿನಿರಿ     ಸರಿಗಮ   ಪಾನೀ
ನಿಸಾಪಾ








Sunday, 12 March 2017

ಮಧುವಿಲ್ಲದೆ ಮದವೇರಿಪ...


ಕೆಲವು ಹಾಡುಗಳು ನಮ್ಮ ಮನಸ್ಸಲ್ಲಿ ಹೇಗೆ ಅಚ್ಚೊತ್ತಿವೆಯೋ ಹಾಗೆಯೇ ಕೇಳಿದರೆ ಮಾತ್ರ ಕೇಳಿದಂತಾಗುವುದು. ಉದಾಹರಣೆಗೆ ರತ್ನಗಿರಿ ರಹಸ್ಯಅಮರ ಮಧುರ ಪ್ರೇಮ ಹಾಡು ಆರಂಭವಾಗುವ ಮೊದಲು ಒಂದಷ್ಟು ಹೊತ್ತು ಗ್ರಾಮೋಫೋನಿನ ಚರಚರ ಕೇಳಿಸಬೇಕು ಮತ್ತು ಕೊನೆಯಲ್ಲಿ  ಗಾಜು ಒಡೆಯುವ ಸದ್ದು ಹಾಗೂ ಕಿಟಾರನೆ  ಕಿರಿಚುವಿಕೆ   ಇರಲೇಬೇಕು. ಕನ್ಯಾರತ್ನಬಿಂಕದ  ಸಿಂಗಾರಿ ಹಾಡು ಗಿಟಾರಿನ ಝೇಂಕಾರದೊಂದಿಗೆ ಆರಂಭವಾಗುವ ಪೂರ್ತಿ prelude ಸಮೇತ ಕೇಳಿಬಂದರೆ ಮಾತ್ರ  ಈ ಹಾಡಿನೊಂದಿಗೆ ಅವಿನಾಭಾವ ಸಂಬಂಧ ಹೊಂದಿದ್ದ ನಮ್ಮ ಅಂದಿನ ಹೊಸ ನ್ಯಾಶನಲ್ ಎಕ್ಕೋ ರೇಡಿಯೋದ ವಾರ್ನಿಶ್  ಪರಿಮಳ ನನ್ನ ಮೂಗಿಗೆ ಅಡರುವುದು.  ಈ ಬಿಂಕದ ಸಿಂಗಾರಿ ಹಾಡು  ಚಿತ್ರಗೀತೆಗಳಲ್ಲೇ ನನಗೆ ಅತ್ಯಂತ ಪ್ರೀತಿಪಾತ್ರವಾದದ್ದು. ಸಾಮಾನ್ಯವಾಗಿ ಶಂಕರ್ ಜೈಕಿಶನ್ ರಚನೆಗಳನ್ನು ಹೊರತುಪಡಿಸಿದರೆ prelude ಮತ್ತು interludeಗಳು ಹಾಡಿನ ಅವಿಭಾಜ್ಯ ಅಂಗವಾಗಿರುವುದು ಕಮ್ಮಿ. ತಮಿಳಿನ ಶಂಕರ್ ಜೈಕಿಶನ್ ಅನ್ನಬಹುದಾದ ವಿಶ್ವನಾಥನ್ ರಾಮಮೂರ್ತಿಯವರ ಬಳಿ ಸಹಾಯಕರಾಗಿದ್ದು ನಂತರ ಕನ್ನಡದ ಶಂಕರ್ ಜೈಕಿಶನ್ ಅನ್ನಿಸಿಕೊಂಡ ಜಿ.ಕೆ.ವೆಂಕಟೇಶ್ ಸಂಗೀತ ನಿರ್ದೇಶನದ ಈ ಹಾಡನ್ನು  ಕೂಡ prelude ಮತ್ತು interludeಗಳಿಲ್ಲದೆ ಕಲ್ಪಿಸಿಕೊಳ್ಳಲೂ ಆಗುವುದಿಲ್ಲ.   ಕೆಲ ವರ್ಷ ಹಿಂದೆ ಆಕಾಶವಾಣಿ ಮಂಗಳೂರಿಂದ ಪ್ರಸಾರವಾಗಿದ್ದ ನನ್ನ ಮೆಚ್ಚಿನ ಹಾಡುಗಳನ್ನೊಳಗೊಂಡ ವಿಶೇಷ ಚಿಟ್ ಚಾಟ್ ಅತಿಥಿ ಕಾರ್ಯಕ್ರಮವನ್ನು ಈ ಹಾಡಿನೊಂದಿಗೇ ಆರಂಭಿಸಿದ್ದೆ.  ಅದರ ಬಗ್ಗೆ ಒಂದಷ್ಟು ವಿಶ್ಲೇಷಣೆಯನ್ನೂ ಮಾಡಿದ್ದೆ.  ಈಗ ಜಿ.ಕೆ.ವೆಂಕಟೇಶ್, ಕು.ರ.ಸೀ, ಪಿ.ಬಿ.ಶ್ರೀನಿವಾಸ್ ಕಾಂಬಿನೇಶನ್ನಿನ ಅದೇ ಹಾಡಿನ ಬಗ್ಗೆ ಇನ್ನೂ ಒಂದಿಷ್ಟು ವಿವರಗಳು.


ಸಂಗೀತ
ಸಾಮಾನ್ಯವಾಗಿ ಲಘು ಧಾಟಿಯ ಚಿತ್ರಗೀತೆಗಳಿಗೆ ಒಂದು ರಾಗವನ್ನು ಆಧಾರವಾಗಿಟ್ಟುಕೊಂಡು ಮಾಧುರ್ಯವನ್ನು ಹೆಚ್ಚಿಸುವುದಕ್ಕಾಗಿ ಅಲ್ಲಲ್ಲಿ ಅನ್ಯ ಸ್ವರಗಳ ಪ್ರಯೋಗ ಮಾಡುವುದು ವಾಡಿಕೆ.  ಆದರೆ ಈ ಹಾಡಿನಲ್ಲಿ 8ನೇ ಮೇಳಕರ್ತ ಹನುಮತೋಡಿ ರಾಗದ  ಸರಿ121ಪದ1ನಿ2 ಸ್ವರಗಳನ್ನು ಮಾತ್ರ ಬಳಸಿಕೊಳ್ಳಲಾಗಿರುವುದು ವಿಶೇಷ. ಇದರ 38 ಸೆಕೆಂಡುಗಳಷ್ಟು ದೀರ್ಘವಾದ prelude ರಿದಂ ಗಿಟಾರುಗಳ ಮಧ್ಯ ಷಡ್ಜದ ಝೇಂಕಾರದೊಂದಿಗೆ ಆರಂಭವಾಗುತ್ತದೆ.   ಝೇಂಕಾರದ ಕೊನೆಯ noteನೊಡನೆ vibraphone ಮೇಳೈಸುತ್ತದೆ. ಈ ಭಾಗವು 78rpm ರೆಕಾರ್ಡಲ್ಲಿ ಮಾತ್ರ ಇದ್ದು ಚಲನಚಿತ್ರ , ನೆಟ್ ಹಾಗೂ ಈಗ ರೇಡಿಯೋದಲ್ಲಿ ಕೇಳಲು ಸಿಗುವ ಆವೃತ್ತಿಯಲ್ಲಿ ಇಲ್ಲ. ನಂತರ group violinಗಳು ಒಂದನೇ ಕಾಲದಲ್ಲಿ ರಾಗದ ಆವರೋಹಣ ಸಾ ನೀ ದಾ ಪಾ ಮಾ ಗಾ ರೀ ಸಾ ನುಡಿಸುವಾಗ ಅತಿ ಮಂದ್ರದ ಡಬಲ್ ಬೇಸ್ ಗಿಟಾರುಗಳು ಅನುಸರಿಸುತ್ತವೆ. ಸಾಮಾನ್ಯವಾಗಿ   ಒಂದೆರಡು counter noteಗಳನ್ನಷ್ಟೇ ಹಿನ್ನೆಲೆಯಲ್ಲಿ ನುಡಿಸುತ್ತಾ ಇರುವ ಡಬಲ್ ಬೇಸ್ ಗಿಟಾರ್ ರೀತಿ ಮುಖ್ಯ ಮೆಲೊಡಿಯನ್ನು ಅನುಸರಿಸುವ ಉದಾಹರಣೆ ಕಮ್ಮಿ. ಮುಂದೆ ಕ್ಲಾರಿನೆಟ್ ಮತ್ತು ಕೊಳಲು ಜೊತೆಯಾಗಿ ಮೂರನೇ ಕಾಲದಲ್ಲಿ ದಾಟು ವರಸೆ ರೀತಿಯ ಸರಿಗರಿಸರಿಮಾಗರಿಸಾ ಮಪದಮಪಮನೀದಪಮಾವನ್ನು ನುಡಿಸುವಾಗ ಬೊಂಗೋ,maracas ಮತ್ತು ಕಿಟಿ ಕಿಟಿ ಕಿಟಿಕ್ ಎಂಬ ಸದ್ದು ಹೊರಡಿಸುವ temple blockಗಳ ರಿದಂ ಆರಂಭವಾಗುತ್ತದೆ. ಇದರ ಕೊನೆಗೆ violinಗಳು ನುಡಿಸುವ ಸಸಮಾ ಮತ್ತು ಮಮನೀ ಎಂಬ ಸಣ್ಣ ತುಣುಕುಗಳು ಕ್ಲಾರಿನೆಟ್ ಮತ್ತು ಕೊಳಲುಗಳು  ಏನೋ ಕೇಳಿದ್ದಕ್ಕೆ ಹೇಳುವ ಉತ್ತರವೇನೋ ಎಂದು ಭಾಸವಾಗುತ್ತದೆ! ನಂತರ ಅದೇ ರಿದಂನಲ್ಲಿ ಮ್ಯಾಂಡೊಲಿನ್ ಕತ್ತಿಯ ಅಂಚಿನಂತಹ ಹರಿತವಾದ toneನಲ್ಲಿ ನೀಸಾ ನೀರೀ ಸಗಾಗ ರೀಗಾರೀಮಾಗರಿಸಾ ನುಡಿಸುತ್ತದೆ. ಮುಂದೆ ಬರುವುದು ಹೊಟ್ಟೆಯೊಳಗೆ ಕೈ ಹಾಕಿ ಕಲಸಿದಂಥ ಅನುಭವ ನೀಡುವ group violinಗಳು ನುಡಿಸುವ ಸಾರೀಸಾಮಾಮಾ ಗಾಮಾಗಾಸಾರೀ ನೀಸಾನೀಗಾಗಾ ರೀಗಾರೀನಿಸಾ. ಇದರ ಪ್ರತೀ ಭಾಗದ ಕೊನೆಯ noteನೊಂದಿಗೆ ಮೇಳೈಸುವ vibraphone ಉಂಟುಮಾಡುವ ಪರಿಣಾಮ ಅತ್ಯದ್ಭುತ. ಇದರ ಮುಂದುವರಿದ ಭಾಗದಲ್ಲಿ ಚೇಲೊ ಮತ್ತು violinಗಳು ಇವೇ ಸ್ವರಗಳನ್ನು ಹಿನ್ನೆಲೆಯಲ್ಲಿ ನುಡಿಸುತ್ತಿರುವಾಗ ಕೊಳಲು ಮತ್ತು ಕ್ಲಾರಿನೆಟ್ ಮೂರನೇ ಕಾಲದಲ್ಲಿ ಮದನಿಸಾ ಮದನಿಸಾ ಗಮದನೀ ಗಮದನೀ ಮದಸಗಾ ಮದಸಗಾ ಸರಿಸನಿದನಿದಪಮಪದನಿಸಾ ನುಡಿಸುತ್ತವೆ.  ಅಲ್ಲಿಗೆ ಬೋಂಗೋ, maracas ಮತ್ತು temple block  ರಿದಂ break ಆಗಿ ಡಬಲ್ ಬೇಸ್ , ಕೊಳಲು, ಕ್ಲಾರಿನೆಟ್, ಮ್ಯಾಂಡೊಲಿನ್ ಜೊತೆಯಾಗಿ ಸಾ...ಪ  ನೀ...ಮ  ದಾಪಾಮಾಗರಿಸಾ ನುಡಿಸಿ prelude ಮುಗಿದಾಗ ಎಲ್ಲೋ ಕಳೆದು ಹೋಗಿದ್ದ ನಾವು ಮರಳಿಬಂದು ಪಿ.ಬಿ.ಶ್ರೀನಿವಾಸ್ ಗಂಧರ್ವ ಗಾಯನದ  ಸಾಹಿತ್ಯ ಭಾಗ  ಕೇಳಲು ಸಿದ್ಧವಾಗುತ್ತೇವೆ. 28 ಸೆಕೆಂಡುಗಳ ಪಲ್ಲವಿ ಭಾಗದಲ್ಲಿ  ಸಮಯೋಚಿತ break ಮತ್ತು take off ಗಳೊಂದಿಗೆ preludeನಲ್ಲಿದ್ದ ರಿದಂ ವಾದ್ಯಗಳೇ ಮುಂದುವರಿಯುತ್ತವೆ.

ಪಲ್ಲವಿ ಮುಗಿಯುತ್ತಲೇ ರಿದಂ break ಆಗಿ  ಚೇಲೋ ಮತ್ತು vibraphoneಗಳ ಚಿಕ್ಕ bridge piece ಇದೆ.  ಮತ್ತೆ take off ಆಗುವ ಅದೇ ರಿದಂನೊಡನೆ  Interludeನಲ್ಲಿ violinಗಳು ಮೂರನೇ ಕಾಲದಲ್ಲಿ ದಪಮಾ ನೀದಪಾ ಸನಿದಪದನಿಸಾ ರಿಸನೀ  ಗರಿಸಾ  ಮಗರಿಸರಿಗಮಾ ನುಡಿಸಿದ ಮೇಲೆ ಮ್ಯಾಂಡೊಲಿನ್ ಮಾಮದಪಾಮಾ ಅಂದಾಗ ಚೇಲೋ ಮಾ ಸಸ ಸಾ ಎಂದು ಉತ್ತರಿಸುತ್ತದೆ. ನಂತರ violinಗಳ ಮಾದಾಪಾಮಾ ಸಾ.... ಆದ ಮೇಲೆ ಮ್ಯಾಂಡೊಲಿನ್, ಕೊಳಲು, ಕ್ಲಾರಿನೆಟ್ ಜೊತೆಯಾಗಿ ಸಾಮಾಮಾಮಾ ನೀಗಾಗಾಗಾ ಸಾರೀನೀಸಾದಾನೀ ಪಾದಾಮಾ ನುಡಿಸಿದಾಗ 14 ಸೆಕೆಂಡುಗಳ interlude ಮುಕ್ತಾಯವಾಗುತ್ತದೆ.

ಚರಣ ಆರಂಭವಾಗುವಾಗ ಅಲ್ಲಿವರೆಗೆ ರಿದಂ ನಿಭಾಯಿಸಿದ ಎಲ್ಲ ವಾದ್ಯಗಳು ಬದಿಗೆ ಸರಿದು ಢೋಲಕ್ ಮತ್ತು ತಬ್ಲಾಗಳಿಗೆ  ಜಾಗ ಬಿಟ್ಟುಕೊಡುತ್ತವೆ..  ಸರಳ ನಡೆಯ ರಿದಂ ಆದರೂ ಎಡದ ಗುಂಕಿಗಳು ಅತ್ಯಾಕರ್ಷಕವಾಗಿವೆ.  ಹಾಗೇ ಕೇಳಿದರೆ ಇದರ ಅನುಭವವಾಗದು. ಹೆಡ್ ಫೋನ್ ಅಥವಾ ಉತ್ತಮ music systemನಲ್ಲಿ ಆಲಿಸಬೇಕು. ಚರಣದ ಸಾಲುಗಳು ಪುನರಾವರ್ತನೆ ಆಗುವಾಗ ಮಧ್ಯದಲ್ಲಿ ಚೇಲೋದ  ಚಿಕ್ಕದಾದ ಸುಂದರ bridge music ಇದೆ. ಪಲ್ಲವಿ ಮತ್ತು ಚರಣಗಳ ಗಾಯನ ಭಾಗದಲ್ಲಿ counter melody, vibraphone, ಬೇಸ್ ಗಿಟಾರ್ ಇತ್ಯಾದಿ ಯಾವುದನ್ನೂ ಬಳಸಲಾಗಿಲ್ಲ. ಚರಣ ಮುಗಿಯುವಾಗ ಸರಳ ಮುಕ್ತಾಯದೊಡನೆ ಢೋಲಕ್ ತಬ್ಲಾ ರಿದಂ break ಆಗಿ ಚೇಲೊ ಮತ್ತು vibraphoneಗಳ bridge ನಂತರ ತನ್ನ ಮೊದಲಿನ ರಿದಂನೊಡನೆ ಪಲ್ಲವಿ ಭಾಗ ಬರುತ್ತದೆ.  ಎರಡು ಚರಣಗಳಿಗೂ ಅದೇ interlude ಇದೆ. Preludeನ ಅತ್ಯಂತ ಪ್ರಭಾವಶಾಲಿ ಭಾಗ  ಡಬಲ್ ಬೇಸ್ vibra phoneಗಳೊಂದಿಗಿನ  group violinಗಳ ಸಾರೀಸಾಮಾಮಾ ಗಾಮಾಗಾಸಾರೀ ನೀಸಾನೀಗಾಗಾ ರೀಗಾರೀನಿಸಾ fadeoutನೊಂದಿಗೆ ಹಾಡು ಮುಗಿಯುತ್ತದೆ.

D sharp ಶ್ರುತಿಯ ಈ ಹಾಡಿನ prelude ಮತ್ತು interludeಗಳು ತಾರ ಸಪ್ತಕದ ಮಧ್ಯಮವನ್ನು ಮುಟ್ಟಿದರೂ ಮಧ್ಯಮ ಲಯದ ಗಾಯನ ಭಾಗ ಮಧ್ಯ ಸಪ್ತಕದಲ್ಲೇ ಸಂಚರಿಸುತ್ತದೆ.  ತೋರಿಕೆಗೆ ಸರಳವೆಂದು ಅನ್ನಿಸಿದರೂ ಪಿ.ಬಿ.ಶ್ರೀನಿವಾಸ್ ಅವರು ಪ್ರತಿ ಸಾಲನ್ನೂ ಸ್ಪಟಿಕ ಸ್ವಚ್ಛ ಉಚ್ಚಾರ ಹಾಗೂ  ತಮ್ಮ ವಿಶಿಷ್ಟ ಮುರ್ಕಿಗಳೊಡನೆ ಇತರರು ಅನುಕರಿಸಲಾಗದಂತೆ ಹಾಡಿದ್ದಾರೆ.  ಯಾರೂ ಯಥಾವತ್ತಾಗಿ ಮರುಸೃಷ್ಟಿಸಲು ಸಾಧ್ಯವಾಗದ ಹಾಡಿದು.  ಇಂತಹ ರಚನೆಗಳನ್ನು ಕಲ್ಪಿಸಿದವರ, ಹಾಡಿದವರ, ವಾದ್ಯಗಳನ್ನು ನುಡಿಸಿದವರ ಮೈ ಮನಗಳಲ್ಲಿ ಆ ಕ್ಷಣಕ್ಕೆ ಗಂಧರ್ವ ಲೋಕದ ಸಂಗೀತ ದೇವತೆಗಳ ಆವಾಹನೆಯಾಗುತ್ತಿದ್ದಿರಬಹುದು ಎಂದು ನನಗೆ ಅನ್ನಿಸುವುದಿದೆ.

ಸಾಹಿತ್ಯ
ಇದು ಪ್ರಾಸಬದ್ಧ ಸಂಭಾಷಣೆ ಮತ್ತು ಹಾಡುಗಳಿಗೆ ಹೆಸರಾದ  ಕು.ರ.ಸೀತಾರಾಮ ಶಾಸ್ತ್ರಿ ಅವರ ರಚನೆ.  ಕನ್ನಡ ಚಿತ್ರಗೀತೆಗಳಲ್ಲಿ ಸಾಮಾನ್ಯವಾಗಿ ಅಂತ್ಯಪ್ರಾಸವಿರುತ್ತದೆ.  ಆದರೆ ಅಂತ್ಯಪ್ರಾಸದ ಜೊತೆಗೆ ಈ ಹಾಡಿನ ಪದ ಪದಗಳೂ   ಆದಿಪ್ರಾಸ, ಒಳಪ್ರಾಸ ಹೊಂದಿವೆ. ಇಡೀ ಹಾಡು ನಾಯಕಿಯ ವರ್ಣನೆಗೆ ಮೀಸಲಾಗಿದ್ದು ಇಲ್ಲಿ ಅವರು ಉಪಯೋಗಿಸಿದ ಉಪಮೆಗಳೂ ಅನನ್ಯ. ಡೊಂಕು ಇದ್ದರೆ ಕೊಂಕು ಮಾತಾಡುವವರೇ ಜಾಸ್ತಿ.  ಆದರೆ ಇಲ್ಲಿ ಮೈಯ ಡೊಂಕು ಸೌಂದರ್ಯದ ಪ್ರತೀಕವಾಗಿದೆ.  ನಾಯಕಿಯ ತೆಳು ನಡುವನ್ನು ವರ್ಣಿಸಲು ಮಧುಪಾನಪಾತ್ರೆ ಎಂಬ ವಿಶಿಷ್ಟ ಪದಪುಂಜವನ್ನೂ ಅವರು ಬಳಸಿದ್ದಾರೆ.  ಹಿಂದಿ, ಉರ್ದು  ಸಾಹಿತ್ಯದಲ್ಲಿ ಮದ್ಯಪಾನ ಮಾಡಲು ಬಳಸುವ,  ಮರಳು ಗಡಿಯಾರದಂತೆ ನಡು ತೆಳ್ಳಗಾಗಿರುವ ice cream bowlನಂತಹ ಪೈಮಾನಾ ಎಂಬ  ಗಾಜಿನ ಪಾತ್ರೆಯ ಉಲ್ಲೇಖ ಇರುತ್ತದೆ.  ಆ ಪೈಮಾನಾವನ್ನು  ಅವರು ಈ ರೀತಿ ಕನ್ನಡೀಕರಿಸಿದ್ದಾರೆ. ಆಕೆಯನ್ನು ಸಿಂಹಕಟಿ ಅಂದ ಹಾಗೂ ಆಯಿತು, ನಿನ್ನಂತರಂಗ ಮಧುರಂಗ ಅನ್ನುವುದಕ್ಕೆ ಪೂರಕವೂ ಆಯಿತು.

ತೆರೆಮರೆಯ ಕಲಾವಿದರು
ಇಂತಹ ಸುಂದರ ಹಾಡುಗಳ ಗಾಯಕರು, ಸಂಗೀತಗಾರರು ಮತ್ತು ಗೀತರಚನೆಕಾರರ ಬಗೆಗಷ್ಟೇ ನಮಗೆ ತಿಳಿದಿರುವುದು.  ಅತ್ಯದ್ಭುತವಾಗಿ ವಿವಿಧ ವಾದ್ಯಗಳನ್ನು ನುಡಿಸಿದ ಕಲಾವಿದರು, ಯಾವ ವಾದ್ಯ ಎಲ್ಲಿ ನುಡಿಯಬೇಕೆಂದು ನಿರ್ಧರಿಸುವ arrangers ಬಗ್ಗೆ ಗೊತ್ತೇ ಇಲ್ಲ. ನಂತರದ ದಿನಗಳಲ್ಲಿ ಎಲ್.ವೈದ್ಯನಾಥನ್ ಮತ್ತು ಇಳೆಯರಾಜಾ ಅವರು ಜಿ.ಕೆ.ವೆಂಕಟೇಶ್ ಅವರಿಗೆ ಸಹಾಯಕರಾಗಿದ್ದರೂ 60ರ ದಶಕದ ಪೂರ್ವಾರ್ಧದಲ್ಲಿ ಅವರ ಆರ್ಕೆಷ್ಟ್ರಾ ನಿರ್ವಹಣೆ ಯಾರು ಮಾಡುತ್ತಿದ್ದರು ಎಂದು ತಿಳಿದಿಲ್ಲ. ಹಿಂದಿ ಚಿತ್ರರಂಗದ ಇಂಥವರ ಬಗ್ಗೆ ಇತ್ತೀಚೆಗೆ ಒಂದಷ್ಟು ಮಾಹಿತಿ ದೊರಕತೊಡಗಿದ್ದು  ಅಕಾರ್ಡಿಯನ್ ನುಡಿಸುತ್ತಿದ್ದ ಗೂಡಿ ಸಿರ್ವಾಯಿ, ಕೊಳಲು ವಾದಕ ಸುಮಂತ್ ರಾಜ್, ಸರೋದ್ ನುಡಿಸುವ ಜರೀನ್ ಶರ್ಮಾ, ಸಿತಾರ್ ನುಡಿಸುವ ರಯೀಸ್ ಖಾನ್, saxophone ಕಲಾವಿದ ಮನೋಹಾರಿ ಸಿಂಗ್, castanets ನುಡಿಸುವ ಹೋಮಿ ಮುಲ್ಲ ಮುಂತಾದವರ ಬಗ್ಗೆ  ನಾವು ತಿಳಿಯುವಂತಾಗಿದೆ. ಇನ್ನೂ ನಮ್ಮೊಡನಿರುವ ದಕ್ಷಿಣ ಭಾರತ ಚಿತ್ರಸಂಗೀತ ಕ್ಷೇತ್ರದ ಕೆಲ  ಹಿರಿಯ ಸಂಗೀತ ನಿರ್ದೇಶಕರ ನೆನಪುಗಳನ್ನು ಕೆದಕಿ ನಮ್ಮಲ್ಲೂ ಇಂತಹ ಮಾಹಿತಿಯ ಕ್ರೋಢೀಕರಣ ಆಗಬೇಕಾಗಿದೆ. ವಾಹನ ಚಾಲಕರು, ಅಡುಗೆಯವರು, ಕಸ ಗುಡಿಸುವವರು ಎಲ್ಲರನ್ನೂ ಸ್ಮರಿಸುವ ಚಿತ್ರಗಳ titleಗಳಲ್ಲಿ ವಿವಿಧ ವಾದ್ಯಗಳನ್ನು ನುಡಿಸಿದ ಕಲಾವಿದರೆಲ್ಲರ ವಿವರಗಳೂ ದಾಖಲಾಗುವ ಪರಿಪಾಠ ಹಿಂದಿನಿಂದಲೂ ಬೆಳೆದು ಬಂದಿದ್ದರೆ ಎಷ್ಟು ಒಳ್ಳೆಯದಿತ್ತು!

ಈಗ ಹಾಡು ಕೇಳಿ
ಇಷ್ಟೆಲ್ಲ ಓದಿದ ಮೇಲೆ ನೀವು ನೂರಾರು ಬಾರಿ ಕೇಳಿರಬಹುದಾದ ಈ ಹಾಡನ್ನು ಇನ್ನೊಮ್ಮೆ ಕೇಳಿ. ಸಾಧ್ಯವಾದರೆ ಹೆಡ್ ಫೋನ್ ಬಳಸಿ.  ಆರಂಭದ ಗಿಟಾರ್ ಝೇಂಕಾರದಿಂದ ಮೊದಲ್ಗೊಂಡು ಪ್ರತೀ ತುಣುಕನ್ನೂ ಆಲಿಸಿ ಆನಂದಿಸಿ. ವಿಶಿಷ್ಟ ಅನುಭವ ನಿಮ್ಮದಾಗಿಸಿಕೊಳ್ಳಿ. 



ಸಾಸಸ  ಸಾಸಸ ಸಾ
ಸಾ ನೀ ದಾ ಪಾ ಮಾ ಗಾ ರೀ ಸಾ

ಸರಿಗರಿಸರಿಮಾಗರಿಸಾ
ಸಸಮಾ
ಮಪದಮಪಮನೀದಪಮಾ
ಮಮನೀ 
ಸರಿಗರಿಸರಿಮಾಗರಿಸಾ 
ಸಸಮಾ
ಮಪದಪಮಪನೀದಪಮಾ
ಮಮನೀ 
ನೀಸಾ ನೀರೀಸಗಾಗ ರೀಗಾರೀಮಾಗರಿಸಾಸ
ನೀಸಾ ನೀರೀಸಗಾಗ ರೀಗಾರೀಮಾಗರಿಸಾ
ಸಾರೀಸಾಮಾಮಾ ಗಾಮಾಗಾಸಾರೀ ನೀಸಾನೀಗಾಗಾ ರೀಗಾರೀನಿಸಾ
ಮದನಿಸಾ ಮದನಿಸಾ ಗಮದನೀ ಗಮದನೀ ಮದಸಗಾ ಮದಸಗಾ ಸರಿಸನಿದನಿದಪಮಪದನಿಸಾ
ಸಾ...ಪ  ನೀ...ಮ  ದಾಪಾಮಾಗರಿಸಾ


ಬಿಂಕದ ಸಿಂಗಾರಿ
ಮೈ ಡೊಂಕಿನ ವೈಯಾರಿ
ಈ ಸವಿಗಳಿಗೆ ರಸದೀವಳಿಗೆ
ನಿನ್ನಂತರಂಗ ಮಧುರಂಗ

ದಪಮಾ ನೀದಪಾ ಸನಿದಪದನಿಸಾ
ರಿಸನೀ  ಗರಿಸಾ  ಮಗರಿಸರಿಗಮಾ
ಮಾಮದಪಾಮಾ ಮಾ ಸಸ ಸಾ
ಮಾಮದಪಾಮಾ ಮಾ ಸಸ ಸಾ
ಮಾದಾಪಾಮಾ ಸಾ....
ಸಾಮಾಮಾಮಾ ನೀಗಾಗಾಗಾ ಸಾರೀನೀಸಾದಾನೀ ಪಾದಾಮಾ
 
ಬಳಿ ನೀನಿರಲು
ಬಿಸಿಲೇ ನೆರಳು
ಮಧುಪಾನಪಾತ್ರೆ ನಿನ್ನೊಡಲು
ಮಧುವಿಲ್ಲದೆ ಮದವೇರಿಪ
ನಿನ್ನಂದಚಂದ ಮಕರಂದ

ದಪಮಾ ನೀದಪಾ ಸನಿದಪದನಿಸಾ
ರಿಸನೀ  ಗರಿಸಾ  ಮಗರಿಸರಿಗಮಾ
ಮಾಮದಪಾಮಾ ಮಾ ಸಸ ಸಾ
ಮಾಮದಪಾಮಾ ಮಾ ಸಸ ಸಾ
ಮಾದಾಪಾಮಾ ಸಾ....
ಸಾಮಾಮಾಮಾ ನೀಗಾಗಾಗಾ ಸಾರೀನೀಸಾದಾನೀ ಪಾದಾಮಾ

ನಿನ್ನೀ ವದನ ಅರವಿಂದವನ
ಹೂಬಾಣ ನಿನ್ನ ಬಿನ್ನಾಣ
ಒಲವೆಂಬ ಧನ ಬಿಡೆ ಹುಂಬತನ
ಬಾ ಚಿನ್ನ ರನ್ನ ವರಿಸೆನ್ನ

ಸಾರೀಸಾಮಾಮಾ ಗಾಮಾಗಾಸಾರೀ 
ನೀಸಾನೀಗಾಗಾ ರೀಗಾರೀನಿಸಾ
ಸಾರೀಸಾಮಾಮಾ ಗಾಮಾಗಾಸಾರೀ 
ನೀಸಾನೀಗಾಗಾ ರೀಗಾರೀನಿಸಾ
 ******

Note:-  ಬಿಂಕದ ಎಂಬುದನ್ನು ಸಾಸಸಕ್ಕೆ ಬದಲಾಗಿ ಪಾಪಪ ಎಂದು ಎತ್ತಿಕೊಂಡರೆ  ಈ ಹಾಡಿನ ರಾಗ 20ನೇ ಮೇಳಕರ್ತ ನಟಭೈರವಿ ಆಗಿ ಸ್ವರಗಳೆಲ್ಲ ಬದಲಾಗುತ್ತವೆ.
*********



 

Tuesday, 7 March 2017

ಸ್ವಪ್ನಯಾನದ ಕಥನ ಕವನ

ತನ್ನನ್ನು ಬಿ.ರಾಮಚಂದ್ರ ಭಟ್ಟ ಎಂದು ಕರೆದುಕೊಳ್ಳುತ್ತಿದ್ದ, ನಮಗೆಲ್ಲ ರಾಮಚಂದ್ರ ಮಾಸ್ಟ್ರು ಆಗಿದ್ದ ಬೆಳ್ತಂಗಡಿ ತಾಲೂಕಿನ ಮುಂಡಾಜೆಯ ಬತ್ರಬೈಲು ರಾಮಚಂದ್ರ ತಾಮ್ಹನಕರ್ ಅವರು ಬರೆದ 300ಕ್ಕೂ ಹೆಚ್ಚು ಸರಳ ಸುಂದರ ಶಿಶುಗೀತೆಗಳ ಪೈಕಿ ಇವತ್ತಿಗೂ ಚಾಲ್ತಿಯಲ್ಲಿರುವ ಟಾಪ್  ಮೂರನ್ನು  ಆರಿಸುವಂತೆ ನನ್ನಲ್ಲಿ ಯಾರಾದರೂ ಕೇಳಿದರೆ ‘ಅ’ಕಾರದ ಅಪ್ಪನು ಮಾಡಿದ ಚೌತಿಯ ಪ್ರತಿಮೆಗೆ, ‘ಕ’ಕಾರದ  ಕರೆವೆನು ನಿನ್ನ ಕಣ್ಮಣಿಯೆನ್ನ ಮತ್ತು  ಕಥನ ಕವನ  ಗೆಳೆಯನೆ ಪೇಳುವೆ ಕೇಳಣ್ಣ ಎಂದು ಕ್ಷಣಮಾತ್ರದಲ್ಲಿ ಹೇಳಿಯೇನು.  ಓರಗೆಯ ನಾಲ್ಕು ಮಂದಿ ಒಂದೆಡೆ ಸೇರಿದರೆ ಇವತ್ತಿಗೂ ಇವುಗಳ ಉಲ್ಲೇಖ ಬಂದೇ ಬರುತ್ತದೆ. ಪಿಕ್ನಿಕ್, ಪ್ರವಾಸಗಳೇನಾದರೂ ಇದ್ದರೆ ಪ್ರಯಾಣದಲ್ಲಿ ಹಾಡುಗಾರಿಕೆ ಆರಂಭವಾಗುವುದೂ ಇವುಗಳಿಂದಲೇ. ಒತ್ತಾಯಕ್ಕೆ ಕಲಿತ ಶಾಲಾ ಪಠ್ಯದ ಪದ್ಯಗಳು ಎಂದೋ ಮರೆತುಹೋಗಿದ್ದರೂ  ರಚನೆಯಾಗಿ ದಶಕಗಳೇ ಸಂದಿರುವ  ಇವು ಮಾತ್ರ ಇಂದಿಗೂ ಎಲ್ಲರಿಗೂ ಕಂಠಪಾಠ. ಅಪ್ಪನು ಮಾಡಿದ ಚೌತಿಯ ಪ್ರತಿಮೆ ಸೇರಿದಂತೆ ಅವರ ಕೆಲವು ಕವನಗಳು 50ರ ದಶಕದ ಚಂದಮಾಮಗಳಲ್ಲೂ ಪ್ರಕಟವಾಗಿದ್ದವು.  ಹಳೆ ಚಂದಮಾಮ ಪುಟ ನೀವು ನೋಡುತ್ತಿದ್ದರೆ  ಮುಂದಿನ ಕೆಲ ವಾರಗಳಲ್ಲಿ ಅವುಗಳನ್ನು ನೀವು ಓದಬಹುದು. ತಮ್ಮನ ಕವಿತೆಗಳು, ಶಿಶುವಿಹಾರ, ಪುಟ್ಟನ ಪಿಟೀಲು, ವಿಕಾಸವಾಣಿ, ಪೀಪಿ, ಗಾನಗೌರಿ, ಮಕ್ಕಳ ಗೀತರಾಮಾಯಣ ಮತ್ತು ರಾಮಣ್ಣನ ರಗಳೆಗಳು ಎಂಬ ಅವರ ಎಲ್ಲ ಕೃತಿಗಳನ್ನೊಳಗೊಂಡ ಸಮಗ್ರ ಪುಸ್ತಕವೊಂದನ್ನು   ಪ್ರೊ. ಎನ್.ಜಿ.ಪಟವರ್ಧನ್ ಅವರು ಸಂಪಾದಿಸಿದ್ದು  ಪ್ರತಿಗಳು  ಉಜಿರೆಯ ಸಿದ್ಧಿವಿನಾಯಕ Enterprisesನಲ್ಲಿ ಲಭ್ಯವಿವೆ.  ಆಸಕ್ತರು 9845384834ನ್ನು ಸಂಪರ್ಕಿಸಬಹುದು.

ಗೆಳೆಯನೆ ಪೇಳುವೆ ಕೇಳಣ್ಣ

     ಈ ಕಥನ ಕವನದಲ್ಲಿ ಬಾಲಕನೊಬ್ಬನು ತಾನು ಕನಸಿನಲ್ಲಿ ಕೈಗೊಂಡ ಬೊಂಬಾಯಿ ರೈಲುಯಾನವನ್ನು ಗೆಳೆಯನೆದುರು ವರ್ಣಿಸುತ್ತಾನೆ.  ಆತ ಅಪ್ಪನ ಕೋಟಿನಿಂದ ಪಚ್ಚೆಯ ನೋಟು ತೆಗೆದುಕೊಂಡು ಹೊರಡುವುದು ಆದರ್ಶ ನಡವಳಿಕೆ ಅಲ್ಲದಿದ್ದರೂ ಆ ಕಾಲದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಿಂದ ಈ ರೀತಿ ಕೈಗೆ ಸಿಕ್ಕ ದುಡ್ಡು ತೆಗೆದುಕೊಂಡು ಬೊಂಬಾಯಿಗೆ ಓಡಿ ಹೋಗುವುದು ಸಾಮಾನ್ಯವಾಗಿದ್ದುದನ್ನು ಕವಿ ಸೂಚ್ಯವಾಗಿ ಇಲ್ಲಿ ನಿರೂಪಿಸಿರಬಹುದು.  ಕೇರಳದ ಕಡೆಗೆ  ಪ್ರಯಾಣಿಸಬೇಕಾದರೆ ದೂರದ ಮಂಗಳೂರಿಗೆ ಮತ್ತು ಉತ್ತರದ ಕಡೆಗೆ ಹೋಗಬೇಕಾದರೆ ಘಟ್ಟ ಹತ್ತಿ ಕಡೂರಿಗೆ ಹೋಗಿ ರೈಲು ಹಿಡಿಯಬೇಕಾಗಿದ್ದರೂ ಆಕಾಲದಲ್ಲೂ ರೈಲು ಪ್ರಯಾಣ ಮಾಡುವವರು ಸಾಕಷ್ಟು ಮಂದಿ ನಮ್ಮೂರಲ್ಲಿ ಇದ್ದರು. ನಮ್ಮ ಚಿಕ್ಕಪ್ಪನಿಗೂ ರೈಲಲ್ಲಿ ದೂರ ಪ್ರಯಾಣ ಮಾಡುವ ಹವ್ಯಾಸವಿತ್ತು.  ಅನೇಕ ಸಲ ನಮ್ಮ ಹಿರಿಯಣ್ಣನನ್ನೂ ಜೊತೆಗೆ ಕರೆದುಕೊಂಡು ಹೋಗಿದ್ದರು. ಅವರು ಉಪಯೋಗಿಸುತ್ತಿದ್ದ ತಿರುಗಣೆಯ ರೈಲು ಚೊಂಬು ಮತ್ತು ಎಂಜಿನಿನ ಇದ್ದಲು ಕಣ್ಣಲ್ಲಿ ಬೀಳದಂತೆ ರಕ್ಷಣೆಗಾಗಿ ಉಪಯೋಗಿಸುತ್ತಿದ್ದ ಕಣ್ಣನ್ನು ಪೂರ್ತಿ ಮುಚ್ಚುತ್ತಿದ್ದ ವಿಶೇಷ ಕಪ್ಪು ಕನ್ನಡಕ ಬಹಳ ಕಾಲ ನಮ್ಮ ಮನೆಯಲ್ಲಿತ್ತು.  ಈ ಕವನದ ಕಥಾನಾಯಕನಾದ ಬಾಲಕನೂ ಕಡೂರಿಗೆ ಹೋಗಿ ರೈಲು ಹಿಡಿದಿರಬಹುದೇನೋ. ಅಥವಾ ಆತನ ಕನಸಿನಲ್ಲಿ ಉಜಿರೆ, ಮುಂಡಾಜೆ ಮೂಲಕ ಸಾಗುವ ರೈಲು ಆಗಲೇ ಇದ್ದಿರಬಹುದು. ಬೊಂಬಾಯಿಗೆ ಟಿಕೇಟು ಪಡೆದುಕೊಂಡು ರೈಲಲ್ಲಿ ಕುಳಿತೊಡನೆ  ಅಪ್ಪನ ಜೇಬಿನಿಂದ ದುಡ್ಡು ತೆಗೆದುಕೊಂಡಿದ್ದರೂ ಆತ ಅಮ್ಮನನ್ನು ಮನದಲ್ಲಿ ನೆನೆಯುವುದನ್ನು ಗಮನಿಸಬೇಕು.  ಅಪ್ಪನ ಜೇಬಿನಲ್ಲಿ ದುಡ್ಡು ಇರುವ ವಿಷಯವನ್ನು ಅಮ್ಮನೇ ಆತನಿಗೆ ಹೇಳಿರಬಹುದೇ ಎಂಬ ಸಂಶಯ ನನ್ನನ್ನು ಕಾಡುತ್ತಿದೆ!  ಕೊಂಚ ಹೊತ್ತು ಹೊರಗಿನ ಸೂರ್ಯೋದಯ, ಹಿಂದಕ್ಕೆ ಸಾಗುವ ಮರಗಿಡ ಇತ್ಯಾದಿಗಳನ್ನು ನೋಡಿದ ಬಾಲಕನ ದೃಷ್ಟಿ ತೂಗುತ್ತಿದ್ದ ಸರಪಳಿಯ ಕಡೆ ಹೊರಳುವುದು ಮಕ್ಕಳಲ್ಲಿರುವ ಕುತೂಹಲ ಪ್ರವೃತ್ತಿಯ ದ್ಯೋತಕ. ಎಳೆಯಿರಿ ಸರಪಳಿ ಎಂದಿದ್ದುದನ್ನು ಓದಿ ಪೂರ್ವಾಪರ ಯೋಚಿಸದೆ ಕಾರ್ಯ ಪ್ರವೃತ್ತನಾದದ್ದು ಬಾಲ್ಯ ಸಹಜವಾದ  ಅಪಕ್ವತೆಯ ಪ್ರತೀಕ.  ರೈಲು ಒಮ್ಮೆಗೇ ನಿಂತಾಗ  ಆತನಿಗೆ ಮೋಜೂ ಅನ್ನಿಸುತ್ತದೆ ಕುಳಿತಿದ್ದವರೆಲ್ಲರೂ ಆತನನ್ನೇ ನೋಡಿದಾಗ ಹೆದರಿಕೆಯೂ ಆಗುತ್ತದೆ. ಮುಂದೆ ಆತನನ್ನು ವಿಚಾರಿಸಲು ಬರುವ ವ್ಯಕ್ತಿಯನ್ನು ವರ್ಣಿಸಲು ಕವಿ ಸಂದರ್ಭಕ್ಕೆ ಬಲು ಸೂಕ್ತವಾದ  ಟೊಣಪ್ಪ ಎಂಬ ಪದ ಬಳಸಿದ್ದಾರೆ. ಆ ಪದ ಕೇಳಿದೊಡನೆ ಗಂಟು ಮೋರೆಯ ಢೃಢಕಾಯನಾದ ಕಠೋರ ವ್ಯಕ್ತಿಯೊಬ್ಬ ತಾನೆ ತಾನಾಗಿ ಕಣ್ಣೆದುರು ಬರುತ್ತಾನೆ.  ಆತನನ್ನು ಕಂಡೊಡನೆ ಬಾಲಕನ ಕನಸು ಭಗ್ನವಾಗಿ ಭಯಗೊಂಡ ಆತನನ್ನು ಅಮ್ಮ ಸಮಾಧಾನಗೊಳಿಸುತ್ತಾಳೆ.


70ರ ದಶಕದಲ್ಲಿ ನಮ್ಮ ಮನೆಯ ಮಕ್ಕಳ ಕೋರಲ್ ಗ್ರೂಪ್ ಹಾಡಿದ್ದ ಈ ಹಾಡಿನ ಧ್ವನಿಮುದ್ರಣವೊಂದು ನನ್ನಲ್ಲಿತ್ತು.  ಅದಕ್ಕೆ ಒಂದಿಷ್ಟು ಮಸಾಲೆ ಸೇರಿಸಿ  ಬೆಂಗಳೂರು-ಮಂಗಳೂರು ಹಗಲು ರೈಲುಪ್ರಯಾಣದ ಸುಂದರ ಪ್ರಕೃತಿ ದೃಶ್ಯಗಳ ವೀಡಿಯೊ ಒಂದರೊಡನೆ ಸಂಯೋಜಿಸಿದ ಪ್ರಸ್ತುತಿಯೊಂದು ಇಲ್ಲಿದೆ.  ಬರೇ audio ಬೇಕಿದ್ದರೂ ಇದೆ. ಸಾಧ್ಯವಾದರೆ headphone ಬಳಸಿ.






ಗೆಳೆಯನೆ ಪೇಳುವೆ ಕೇಳಣ್ಣ
ರೈಲು ಪ್ರವಾಸದ ಕನಸನ್ನ
ನಿನ್ನೆಯ ರಾತ್ರಿಯ ಕನಸಿನಲಿ
ಕುಳಿತೆನು ನಾ ರೈಲ್ ಬಂಡಿಯಲಿ

ತೂಗುತಲಿತ್ತು ಅಪ್ಪನ ಕೋಟು
ಅದರಿಂ ತೆಗೆದೆನು ಪಚ್ಚೆಯ ನೋಟು
ಇನ್ನೂ ಸುತ್ತಲೂ ಕತ್ತಲೆ ಇತ್ತು
ಮನದಲಿ ಹೆದರಿಕೆ ಆಗುತಲಿತ್ತು

ನಡೆದೆನು ರೈಲಿನ ಸ್ಟೇಶನಿಗೆ
ಪಡೆದೆನು ಟಿಕೆಟು ಬೊಂಬಯಿಗೆ
ಕುಳಿತೆನು ಹರುಷದಿ ರೈಲೊಳಗೆ
ಅಮ್ಮನ ನೆನೆದೆನು ಮನದೊಳಗೆ

ಬಂಡಿಯು ಮುಂದಕೆ ಓಡುತಲಿತ್ತು
ಹಿಂದಕೆ ಗಿಡಮರ ಸಾಗುತಲಿತ್ತು
ಸೂರ್ಯನು ಬಾನಿಗೆ ಏರುತಲಿದ್ದ
ಬೆಳಕಿನ ಚೆಲುವನು ಬೀರುತಲಿದ್ದ

ನೋಡಿದೆ ಸುತ್ತಲು ಬೇಸರವಾಯ್ತು
ಮೇಲ್ಗಡೆ ಒಂದು ಸರಪಳಿ ಇತ್ತು
ಅಕ್ಷರ ಏನೋ ಬರೆದಿತ್ತು
ಎಳೆಯಿರಿ ಸರಪಳಿ ಎಂದಿತ್ತು

ಕೂತಲ್ಲಿಂದ ಬೇಗನೆ ಎದ್ದೆ
ತೂಗುವ ಸರಪಳಿಯನು ನಾನೆಳೆದೆ
ಕುಳಿತಿದ್ದ ಜನ ನನ್ನನೆ ನೋಡಲು
ಬಂಡಿಯು ಒಂದೇ ಬಾರಿಗೆ ನಿಲ್ಲಲು

ಆಗಿನ ಮೋಜನು ಕೇಳಣ್ಣ
ಬಲು ಹೆದರಿಕೆ ತಾನಾಯ್ತಣ್ಣ

ಟೊಣಪ್ಪನೊಬ್ಬ ನನ್ನೆಡೆ ಬಂದ
ಸರಪಳಿ ಏತಕೆ ಎಳೆದೆ ಎಂದ
ಅವನ ಕರಿಉಡುಪನು ನಾ ನೋಡಿ
ಅಮ್ಮ ಎಂದೆನು ಭಯದಿಂ ಕೂಡಿ

ಏನೋ ಎಂದಳು ನನ್ನಮ್ಮ
ತಟ್ಟುತ ನನ್ನ ತಲೆಯನ್ನ

ಆಗಲೆ ಕೂಗಿತು ಕೊಕ್ಕೊ ಕೋಳಿ
ಕಣ್ಣುಜ್ಜುತ ನಾ ನೋಡಿದೆ ಪಿಳಿಪಿಳಿ
ಅಮ್ಮನ ಕೇಳಿದೆ ಎಲ್ಲಿದೆ ಸರಪಳಿ
ಅಮ್ಮನು ನುಡಿದಳು ಭಯವಾಯ್ತೇ ಗಿಳಿ

ಅಹುದಹುದಮ್ಮ ಭಯವಾಯ್ತು
ರೈಲುಪ್ರವಾಸದ ಕನಸಾಯ್ತು