Tuesday 2 May 2023

ಮನ ಮೆಚ್ಚಿದ ಹಾಡುಗಳು



ಅನೇಕ ಸಲ ಯಾವುದಾದರೂ  ಒಂದು ಹಾಡು ಅತಿ ಜನಪ್ರಿಯವಾದರೆ ಅದರ ಪ್ರಖರತೆಗೆ ಆ ಸಿನಿಮಾದ ಇನ್ನುಳಿದ ಉತ್ತಮ ಹಾಡುಗಳು ಮಂಕಾಗಿ ಹಿನ್ನೆಲೆಗೆ ಸರಿದು ಬಿಡುವುದಿದೆ. ಮನ ಮೆಚ್ಚಿದ ಮಡದಿ ಚಿತ್ರದ ಹಾಡುಗಳಿಗೆ ಈ ಮಾತು ಚೆನ್ನಾಗಿ ಅನ್ವಯಿಸುತ್ತದೆ.  ಅತ್ಯಂತ ಜನಪ್ರಿಯವಾದ ತುಟಿಯ ಮೇಲೆ ತುಂಟ ಕಿರುನಗೆ ಹಾಡಿನ ಪ್ರಭಾವದಿಂದಾಗಿ ಉಳಿದ ಹಾಡುಗಳು ಈಗ ಕೇಳ ಸಿಗುವುದು ಬಲು ಕಮ್ಮಿ.  ಚಿತ್ರ ಬಿಡುಗಡೆ ಆಗಿದ್ದ 60ರ ದಶಕದಲ್ಲಿ ಭಾರತ ಜನನಿಯ ತನುಜಾತೆ, ಲವ್ ಲವ್ ಎಂದರೇನು ಮತ್ತು ಸಿರಿತನ ಬೇಕೆ ಹಾಡುಗಳು ರೇಡಿಯೋದಲ್ಲಿ ಕೆಲವೊಮ್ಮೆ ಕೇಳಿಬರುತ್ತಿದ್ದರೂ ಅತ್ಯಂತ ಮಧುರವಾದ   ಮನೆ ತುಂಬಿಸಿಕೊಳ್ಳುವ ಹಾಡು ಏಸು ನದಿಗಳ ದಾಟಿ ಆಗಲೂ ಅಪರೂಪದ್ದೇ ಆಗಿತ್ತು.  ಅನೇಕರು ಅದನ್ನು ಒಮ್ಮೆಯೂ ಕೇಳಿಯೇ ಇರಲಾರರು.  ಆ ಸದಭಿರುಚಿಯ ಚಿತ್ರದ ಎಲ್ಲ ಹಾಡುಗಳನ್ನೂ ಈಗ ಆಲಿಸೋಣ. ಜೊತೆಗೆ ಅವುಗಳ  ಕೆಲ ವೈಶಿಷ್ಠ್ಯಗಳನ್ನು ಮೆಲುಕು ಹಾಕೋಣ.

ಏಸು ನದಿಗಳ ದಾಟಿ
ಉತ್ತರ ಕರ್ನಾಟಕದ ಕಡೆ ಹೆಚ್ಚು ಪ್ರಚಲಿತವಿದ್ದ, ಮನೆ ತುಂಬಿಸಿಕೊಳ್ಳುವ ಸಂದರ್ಭದಲ್ಲಿ ಒಗಟುಗಳ ಮೂಲಕ ಮದುಮಕ್ಕಳು ಪರಸ್ಪರರ ಹೆಸರುಗಳನ್ನು ಹೇಳುವ  ಪದ್ಧತಿಯನ್ನು ಬಿಂಬಿಸುವ ಸಾಂಪ್ರದಾಯಿಕ ಶೈಲಿಯ ಈ ರಚನೆಗೆ ವಿಜಯ ಭಾಸ್ಕರ್ ಅವರು ಹೆಚ್ಚು ವಾದ್ಯಗಳನ್ನು ಉಪಯೋಗಿಸದೆ  ಸರಳ ರಾಗ ಸಂಯೋಜನೆ ಮಾಡಿದ್ದಾರೆ.  ಡೋಲಿನ ಲಯದೊಡನೆ ಶಹನಾಯಿಯ ಬಳಕೆ ಸನ್ನಿವೇಶದ ಸಂಭ್ರಮವನ್ನು ಎತ್ತಿ ತೋರಿಸುತ್ತದೆ.  ಗಾಯನ ಭಾಗಕ್ಕೆ ಆಕರ್ಷಕ ತಬ್ಲಾ  ಹಿನ್ನೆಲೆ ಇದೆ. ಕು.ರ.ಸೀ ಅವರ ಪದ ಲಾಲಿತ್ಯದ ಬಗ್ಗೆ ಹೇಳಬೇಕಾಗಿಯೇ ಇಲ್ಲ.  ಒಲವೆಂಬ ಹಿರಿಯೂರ ಬಲಶಾಲಿ ಸರದಾರ ಒಲಿದವಳ ಮೇಲೆ ಸರ್ವಾಧಿಕಾರ ಎಂಬ ಸಾಲುಗಳು ಎಷ್ಟು ಅರ್ಥಪೂರ್ಣವಾಗಿವೆ.  ಪರಸ್ಪರ ಒಲಿದವರ ಪ್ರಪಂಚವೇ ಹಾಗಲ್ಲವೇ. ಒಲವೆಂಬ ಊರಿಗೆ  ಆತನೇ ರಾಜ. ಆಕೆಯೇ  ರಾಣಿ.  ಪರಸ್ಪರರ ಮೇಲೆ ಇಬ್ಬರಿಗೂ ಸರ್ವಾಧಿಕಾರ!   ಇನ್ನೊಂದೆಡೆ ಅರಸಿ ನಾ ಕರೆತಂದ ಮನದನ್ನೆ ಎಂಬ ಸಾಲಿನಲ್ಲಿ ಅರಸಿ ಪದವನ್ನು ನಾ ಹುಡುಕಿ ಕರೆತಂದ ಮನದನ್ನೆ ಮತ್ತು ನಾ ಕರೆತಂದ ಮನದನ್ನೆ ರಾಣಿ ಎಂದು  ಎರಡು ರೀತಿ ಅರ್ಥೈಸಲಾಗುವಂತೆ ಬಳಸಿ ಚಮತ್ಕಾರ ಮೆರೆದಿದ್ದಾರೆ!


ಪ್ರೇಮ ವಿವಾಹ ಮಾಡಿಕೊಂಡು ಮಡದಿಯೊಂದಿಗೆ ಮನೆಗೆ ಬಂದ ಮೊಮ್ಮಗನನ್ನು ಒಬ್ಬಂಟಿಯಾದ ತಾತನು ನೆರೆಕರೆಯ ಮಹಿಳೆಯರ ಸಹಕಾರದಿಂದ ಮನೆ ತುಂಬಿಸಿಕೊಳ್ಳುವ ಈ ಹಾಡಿನ ಸನ್ನಿವೇಶವೂ  ಹೃದಯಸ್ಪರ್ಶಿಯಾಗಿದೆ. ಅಂತರ್ಜಾಲದಲ್ಲಿ ಈ  ಚಿತ್ರ  ಲಭ್ಯವಿದ್ದು ಆಸಕ್ತರು  ಇಲ್ಲಿ  ವೀಕ್ಷಿಸಬಹುದು
  


    
ಭಾರತ ಜನನಿಯ ತನುಜಾತೆ
ಈಗ ನಾಡಗೀತೆಯ ಸ್ಥಾನ ಪಡೆದಿರುವ ಕುವೆಂಪು ವಿರಚಿತ ಕಲ್ಯಾಣಿ ರಾಗಾಧಾರಿತವಾದ ಈ ಹಾಡನ್ನು  ಚಿತ್ರದ ಟೈಟಲ್ಸ್ ಜೊತೆ ಹಿನ್ನೆಲೆಯಲ್ಲಿ ಬಳಸಿಕೊಳ್ಳಲಾಗಿದೆ.   ಇದನ್ನು ರೇಡಿಯೊದಲ್ಲಿ ಕೇಳುತ್ತಿದ್ದ ಕಾಲದಲ್ಲಿ ಇದು ಗ್ರಾಮಫೋನ್ ತಟ್ಟೆಯ ಎರಡೂ ಬದಿಗಳನ್ನು ಆವರಿಸಿಕೊಂಡಿರುವ ಹಾಡಾಗಿರಬಹುದೆಂದು ನನ್ನ ಊಹೆಯಾಗಿತ್ತು.  ಸರ್ವ ಜನಾಂಗದ ಶಾಂತಿಯ ತೋಟ ಸಾಲು ಆರಂಭವಾಗುವ ಮುನ್ನ ಒಂದು ಚಿಕ್ಕ pause ಇರುವುದು ಇದಕ್ಕೆ ಕಾರಣ.  ವಾಸ್ತವವಾಗಿ ಇದು ಇತರ ಸಾಮಾನ್ಯ ಹಾಡುಗಳಂತೆ ಮೂರುವರೆ ನಿಮಿಷ ಕಾಲಾವಧಿಯದ್ದೇ ಆಗಿದೆ.



ಸಿರಿತನ ಬೇಕೆ
ಮನ ಮೆಚ್ಚಿದ ಮಡದಿಯ ಮನದಾಳದ ಈ ಹಾಡಿನಲ್ಲಿ ನವ ವಿವಾಹಿತೆಯ ನವೋಲ್ಲಾಸ ತುಂಬಿ ತುಳುಕುತ್ತಿದೆ  ಇದರ interludeನ ಒಂದು ಭಾಗ ದಿಲ್ ದೇಕೆ ದೇಖೋ ಚಿತ್ರದ ಮೇಘಾರೆ ಬೋಲೆ ಹಾಡಿನ ತುಣುಕನ್ನು ಹೋಲುತ್ತದೆ.  ವಿಜಯ ಭಾಸ್ಕರ್ ಅವರ ಅನೇಕ ಹಾಡುಗಳ interludeಗಳಲ್ಲಿ ಹಿಂದಿ ಹಾಡುಗಳ ಛಾಯೆ ಗುರುತಿಸಬಹುದು.  ಉದಾ: ತಾರೆಗಳ ತೋಟದಿಂದ ಚಂದಿರ ಬಂದ -  ಯೆ ಮೇರಾ ಪ್ರೇಮ್ ಪತ್ರ್ ಪಢ್ ಕರ್, ಚಂದಿರ ಭೂಮಿಗೆ ಬೆಳಕನು ಚೆಲ್ಲಲು - ಫೂಲ್ ತುಮ್ಹೆ ಭೇಜಾ ಹೈ ಖತ್ ಮೆ ಇತ್ಯಾದಿ.




ಲವ್ ಲವ್ ಲವ್ ಅಂದರೇನು
ಬಹುಶಃ ಬಾಲಣ್ಣ ತನ್ನ ಸುದೀರ್ಘ ಚಿತ್ರರಂಗ ಪಯಣದಲ್ಲಿ   ಪಾರ್ಕಲ್ಲಿ ಮರ ಸುತ್ತುತ್ತಾ ಹಾಡಿದ ಏಕೈಕ ಡ್ಯುಯಟ್ ಇದಾಗಿರಬಹುದು!  ಕನ್ನಡದ ಒಲವ್ ಮತ್ತು ಇಂಗ್ಲೀಷಿನ ಲವ್ ಬಗೆಗಿನ ಸ್ವಾರಸ್ಯಕರ ಜಿಜ್ಞಾಸೆ  ಇದರಲ್ಲಿದೆ. ಹಾಡಿನ ಪುಸ್ತಕದ ಮಾಹಿತಿಯ ಪ್ರಕಾರ ಇದನ್ನು ಜಮುನಾರಾಣಿ ಅವರ ಜೊತೆಗೆ ಹಾಡಿದ್ದು ರಘುನಾಥ ಪಾಣಿಗ್ರಾಹಿ.  ಆದರೆ ಚಿತ್ರದಲ್ಲಿರುವ versionನಲ್ಲಿ ಪಿ.ಬಿ.ಶ್ರೀನಿವಾಸ್ ಹಾಡಿದ್ದಾರೆ.  ಗ್ರಾಮಫೋನ್ ರೆಕಾರ್ಡಿಗಾಗಿ ಪಾಣಿಗ್ರಾಹಿ ಹಾಡಿದ್ದರೇ ಎಂಬ ಬಗ್ಗೆ ಮಾಹಿತಿಯಿಲ್ಲ.  ಪ್ರಖ್ಯಾತ ಒಡಿಸ್ಸಿ ನೃತ್ಯಗಾತಿ ಸಂಯುಕ್ತಾ ಪಾಣಿಗ್ರಾಹಿ ಅವರ ಪತಿ ರಘುನಾಥ ಪಾಣಿಗ್ರಾಹಿ ಅವರ ಬಗ್ಗೆ ಇನ್ನಷ್ಟು ವಿವರಗಳನ್ನು ಈ ಗಾಯಕ ಗೊತ್ತೇ ಲೇಖನದಲ್ಲಿ ಓದಬಹುದು.




ತುಟಿಯ ಮೇಲೆ ತುಂಟ ಕಿರುನಗೆ
ಮೊದಲೇ ಹೇಳಿದಂತೆ ಇದು ಈ ಚಿತ್ರದ ಅತ್ಯಂತ ಜನಪ್ರಿಯ ಹಾಡಾಗಿದ್ದು ಎಲ್ಲ ಕಡೆ ಕೇಳಲು ಸಿಗುತ್ತದೆ. ಆದರೆ ಇದಕ್ಕೆ ಸಂಬಂಧಪಟ್ಟಂತೆ  ಸ್ವಾರಸ್ಯಕರ ವಿಚಾರವೊಂದಿದೆ.  ಇದರ ಒಂದು ಸಾಲನ್ನು ಗಾಯಕರು ಒಲವಿನೋಸಗೆ ಎದೆಯ ಬೇಸಗೆ ಎಂದು ಹಾಡಿದ್ದು ಎಷ್ಟೋ ವರ್ಷಗಳಿಂದ ಕೇಳಿ ಕೇಳಿ ನಾವೂ ಇದನ್ನು ಒಪ್ಪಿಕೊಂಡು ಬಿಟ್ಟಿದ್ದೇವೆ.  ವಾಸ್ತವವಾಗಿ ಇದು ಒಲವಿನೊಸಗೆ ಎದೆಯ ಬೆಸಗೆ ಎಂದಾಗಬೇಕು. ಪ್ರೇಮಿಗಳ ಎದೆ ವಸಂತದಂತೆ ಹಸುರಿನಿಂದ ನಳನಳಿಸೀತೆ ಹೊರತು ಬೇಸಗೆಯಂತೆ ಎಂದೂ ಒಣಗಲಾರದಲ್ಲವೇ. ಇಲ್ಲಿ  ಹೃದಯಗಳ ಮಿಲನ ಎಂಬರ್ಥದಲ್ಲಿ ಎದೆಯ ಬೆಸಗೆ ಎಂದು ಕವಿ ಬರೆದಿರಬಹುದು.  ಹಾಡು ಆರಂಭವಾಗುವುದಕ್ಕೆ ಮುನ್ನ ನಟಿ ಲೀಲಾವತಿ  ಇದನ್ನು ಗದ್ಯ ರೂಪದಲ್ಲಿ ಸರಿಯಾಗಿಯೇ ಹೇಳಿದ್ದಾರೆ.  ಹಾಡಿನ ಪುಸ್ತಕದಲ್ಲೂ ಹೀಗೆಯೇ ಇದೆ.  ಬಹುಶಃ  ಟ್ಯೂನಿನ ‘ಮೀಟರ್’ಗೆ ಹೊಂದಿಕೊಳ್ಳಲು ಹೀಗೆ ಮಾಡಿರಬಹುದು. ವಿಜಯ ಭಾಸ್ಕರ್ ಅವರು  ಈ  ಹೊಸಬಗೆಯ ಹಾಡಿಗೆ   ಹೊ-ಸ-ಬ-ಗೆಯ ರಾಗ ಸಂಯೋಜನೆಯನ್ನೇ ಮಾಡಿದ್ದಾರೆ. ಪಲ್ಲವಿ ಮತ್ತು interlude ಭಾಗಕ್ಕೆ ಬೇಕರಾರ್ ಕರ್ ಕೆ ಹಮೆ ರೀತಿಯ ಗಿಟಾರಿನ ರಿದಂ ಮಾತ್ರ ಇದ್ದು ಚರಣ ಪ್ರಾರಂಭವಾಗುತ್ತಿದ್ದಂತೆ ಢೋಲಕ್ take over ಮಾಡುತ್ತದೆ.  ಹಾಡಿನುದ್ದಕ್ಕೂ ಅಕಾರ್ಡಿಯನ್,  ಲೀಡ್ ಗಿಟಾರ್ ಮತ್ತು ಕೊಳಲುಗಳ ಕುಸುರಿ ಕೆಲಸ ಇದೆ.

ಈ ಸಿನಿಮಾ ಬಂದದ್ದು ನಾನು 8ನೇ ತರಗತಿಯಲ್ಲಿದ್ದಾಗ. ಈ ಹಾಡಿನಲ್ಲಿ ಒಂದು ಕಡೆ ಬರುವ ಬಣ್ಣನೆಗೆ ಎಂಬುದನ್ನು ನಾನು ಬಣ್ಣ ನಗೆ ಎಂದು ಸಂಧಿ ವಿಂಗಡಿಸಿಕೊಂಡು ನಗೆಯಲ್ಲೂ ಬಣ್ಣ ಇರುವ ನಗೆ ಮತ್ತು ಬಣ್ಣ ರಹಿತ ನಗೆ ಎಂಬ ಪ್ರಭೇದಗಳಿವೆಯೇ ಎಂದು ಆಶ್ಚರ್ಯ ಪಡುತ್ತಿದ್ದೆ! 




ಈ ಎಲ್ಲ ಹಾಡುಗಳನ್ನು ಆಲಿಸುವಾಗ ಜೊತೆಗೆ ಸಾಹಿತ್ಯ ಓದಿಕೊಳ್ಳಲು ಆ ಚಿತ್ರದ ಹಾಡಿನ ಪುಸ್ತಕ ಇಲ್ಲಿದೆ ನೋಡಿ. ಹಿಗ್ಗಿಸಿ, ಕುಗ್ಗಿಸಿ, ಪುಟ ತಿರುಗಿಸಿ ಹೇಗೆ ಬೇಕಾದರೂ ಓದಬಹುದು. ಹಾಡುಗಳ ಜೊತೆ ಕಥಾ ಸಾರಾಂಶ, ನಟ ನಟಿಯರು, ಪಾರಿಭಾಷಿಕ ವರ್ಗ ಇತ್ಯಾದಿ ಎಲ್ಲ ವಿವರಗಳಿವೆ ಅದರಲ್ಲಿ. ನಮ್ಮ ಕಡೆ ಪದ್ಯಾವಳಿ ಎಂದು ಕರೆಯಲ್ಪಡುವ  ಹಾಡಿನ ಪುಸ್ತಕಗಳ ಬಗ್ಗೆ ಪದ್ಯಾವಳಿಯಿಂದ ಒಂದು ಪದ್ಯದಲ್ಲಿ ಇನ್ನಷ್ಟು ಮಾಹಿತಿ ಇದೆ.




ಆ ಕಾಲದಲ್ಲಿ ಇನ್ನೂ ಪ್ರಕಟವಾಗುತ್ತಿದ್ದ ಅತ್ಯಂತ ಹಳೆಯ ಕನ್ನಡ ನಿಯತಕಾಲಿಕ ಎಂಬ ಖ್ಯಾತಿಗೊಳಗಾಗಿದ್ದ ಹಾಸ್ಯ ಪ್ರಧಾನ ಮಾಸ ಪತ್ರಿಕೆ ವಿಕಟ ವಿನೋದಿನಿಯ ಸೆಪ್ಟಂಬರ್ 1963ರ ಸಂಚಿಕೆಯ ಮುಖಪುಟವಲ್ಲಿ ಮನ ಮೆಚ್ಚಿದ ಮಡದಿ ಹೀಗೆ ಕಾಣಿಸಿಕೊಂಡಿದ್ದಳು.


ಆ ಪತ್ರಿಕೆಯ ಜೂನ್ ತಿಂಗಳ ಸಂಚಿಕೆಯ ಚಿತ್ರರಂಗದಿಂದ ಬೆಳಕಿಗೆ ವಿಭಾಗದಲ್ಲಿ ಈ ಚಿತ್ರದ ಬಗ್ಗೆ ಒಂದು ಕಿರು ಸುದ್ದಿಯೂ  ಪ್ರಕಟವಾಗಿತ್ತು. ಅದರಲ್ಲಿ ಈ ಚಿತ್ರದ ಸಂಗೀತದ ಬಗ್ಗೆ ವ್ಯಕ್ತಪಡಿಸಲಾದೆ ಊಹೆ ಎಷ್ಟೊಂದು ನಿಜವಾಯಿತು!  ಆದರೆ ಆಗ ಆ ಸುದ್ದಿಯನ್ನು ನೋಡಿದ ಓದುಗರಿಗೆ ಈ ಹಾಡುಗಳ ಬಗ್ಗೆ ಏನೊಂದೂ ಗೊತ್ತಿಲ್ಲದ್ದರಿಂದ ಎಷ್ಟು ಕುತೂಹಲ ಉಂಟಾಗಿತ್ತೋ ಏನೋ.  ಅಂದಿನ ದಿನಗಳಲ್ಲಿ ಕನ್ನಡ ಚಿತ್ರಗಳು ಬಿಡುಗಡೆ ಆಗಿ ಸುಮಾರು ಒಂದು ತಿಂಗಳಷ್ಟು ಕಾಲದ ನಂತರವೇ ಧ್ವನಿಮುದ್ರಿಕೆಗಳು ತಯಾರಾಗಿ ರೇಡಿಯೊದಲ್ಲಿ ಹಾಡುಗಳು ಪ್ರಸಾರವಾಗತೊಡಗುತ್ತಿದ್ದವು.

4-1-2017

No comments:

Post a Comment

Your valuable comments/suggestions are welcome