Sunday, 7 May 2023

ನಕಾರಗಳ ಸಕಾರಾತ್ಮಕ ಹಾಡು!


30ಕ್ಕೂ ಹೆಚ್ಚು ನಕಾರಗಳನ್ನೊಳಗೊಂಡ ಈ ಹಾಡಿನ ತುಂಬೆಲ್ಲ ಇರುವುದು ಸಕಾರಾತ್ಮಕ ಸಾಲುಗಳೇ. ಇಷ್ಟೊಂದು  ನಕಾರಗಳನ್ನು  ಸದಭಿರುಚಿಯ ಚಿತ್ರ ನಂದಾದೀಪಕ್ಕಾಗಿ ಸಕಾರಾತ್ಮಕವಾಗಿ  ಸಾಕಾರಗೊಳಿಸಿದವರು ಸೋರಟ್ ಅಶ್ವತ್ಥ್. ಆಕರ್ಷಕವಾಗಿ ಸ್ವರ ಸಂಯೋಜನೆ ಮಾಡಿದವರು ಎಂ. ವೆಂಕಟರಾಜು.  ಸುಶ್ರಾವ್ಯವಾಗಿ ಹಾಡಿದವರು ಪಿ.ಬಿ.ಶ್ರೀನಿವಾಸ್ ಮತ್ತು ಎಸ್. ಜಾನಕಿ.

ನಲಿವ ಮನ ಹೊಂದೀ ದಿನ
ಚೆನ್ನಾದ ಸಮ್ಮಿಲನ ಹೊನ್ನಾದ ಮಹಾ ದಿನ
ಒಲುಮೆಯ ವಿನೂತನ ಭಾವನ ಜೀವನ        
ನಲಿವ ಮನ

ಬಳಸಿದೆ ತನುಮನ ಸುಪ್ರೇಮ ಬಂಧನ    
ಬೆಳಗಲಿ ಉಲ್ಲಾಸದೆ ನಮ್ಮಾಸೆ ಸಾಧನ
ಗೆಲುವಿನ ಸಂಜೀವನ ಸವಿಯುವ ಚಿರಂತನ
ಗಳಿಸುವ ವಿನೋದದ ಬಾಳಿನ ಚೇತನ         
ಒಲುಮೆಯ ವಿನೂತನ ಭಾವನ ಜೀವನ

ಲತೆಗೆ ನಿರಂತರ ಆಸರೆಯಾಗುನೀ
ತರುವೇ ಸದಾ ಚಿರ ಆಶ್ರಯ ನಂಬು ನೀ
ಮನಸಿನ ಮಹಾಶಯ ಫಲಿಸಿದ ಶುಭೋದಯ
ಬದುಕಿನ ವಿಕಾಸದ ಗಾನವ ಪಾಡುವ
ಒಲುಮೆಯ ವಿನೂತನ ಭಾವನ ಜೀವನ        

ಬೆಳಗುವ ಮನೋಹರ ಚಂದ್ರಮನಾಗುನೀ
ಬೆಳಕಿನ ಸಮೀಪದ ಛಾಯೆ ನೀ ಭಾಮಿನಿ
ಬೆರೆಯುವೆ ವಿಲಾಸದಿ ಮೆರೆಯುವೆ ಸುಮೋದದಿ
ಬಳಲದೆ ಸರಾಗದ ಬಾಳನೆ ನೋಡುವ           
ಒಲುಮೆಯ ವಿನೂತನ ಭಾವನ ಜೀವನ

ಚಿತ್ರದಲ್ಲಿ ಇದು ಓರ್ವ ಕವಿ ಮತ್ತು ಆತನ ಪ್ರಿಯತಮೆ ತಮ್ಮ ಭಾವಿ ಜೀವನದ ಬಗ್ಗೆ ಹೊಂಗನಸು ಕಾಣುತ್ತಾ ಹಾಡುವ ಹಾಡು. ಹೆಚ್ಚು ವಿಭಕ್ತಿ ಪ್ರತ್ಯಯಗಳನ್ನು ಬಳಸದ ವಿಜಯನಾರಸಿಂಹ ಮತ್ತು ಒಗಟಿನಂಥ ಸಾಲುಗಳನ್ನು ಬರೆಯುವ   ಕು.ರ.ಸೀ. ಅವರ ಶೈಲಿಗಳನ್ನು ಸಮ್ಮಿಲನಗೊಳಿಸಿ ಸೋರಟ್ ಅಶ್ವತ್ಥ್ ಇದನ್ನು ರಚಿಸಿದಂತೆ ಕಾಣುತ್ತದೆ. ಈ ಹಾಡನ್ನು ಕೇಳಿದ  ಕು.ರ.ಸೀ ಅವರು ‘ಸಾಹಿತಿ ಅಂದ್ರೆ ನೀನೇ ಕಣಯ್ಯ.  ನಿನ್ನಂಥ ಸಾಹಿತಿ ಇನ್ನೊಬ್ರಿಲ್ಲ’ ಎಂದು ಅಭಿಮಾನದಿಂದ ಸೋರಟ್ ಅಶ್ವತ್ಥ್ ಅವರ  ಬೆನ್ನು ತಟ್ಟಿದ್ದರಂತೆ. ಹೀಗೆ ಇನ್ನೊಬ್ಬರ ಬೆನ್ನು ತಟ್ಟುವ ಪರಿಪಾಠ ಅಂದು ಚಿತ್ರರಂಗದಲ್ಲಿ ಸಾಮಾನ್ಯವಾಗಿತ್ತು.  ಮದನ್ ಮೋಹನ್ ಅವರ ಆಪ್‌ ಕೀ ನಜರೋ ನೆ ಸಮಝಾ ಹಾಡು ಕೇಳಿದ ನೌಷಾದ್ ‘ನನ್ನ ಎಲ್ಲ ಹಾಡುಗಳನ್ನು ನೀನು ತೆಗೆದು ಕೋ.  ಈ ಒಂದು ಹಾಡುನನಗೆ ಕೊಡು’ ಅಂದಿದ್ದರಂತೆ.

ಪಲ್ಲವಿ ಭಾಗದಲ್ಲಿ ಪ್ರೇಮಿಗಳು ಚಿನ್ನದಂಥ ಈ ಮಹಾದಿನದಂದು ಒಂದಕ್ಕೊಂದು ಶ್ರುತಿ ಸೇರಿ ಚೆನ್ನಾಗಿ ಸಮ್ಮಿಲನಗೊಂಡ ತಮ್ಮ ನಲಿವ  ಮನಗಳು  ಜೀವನವಿಡೀ  ಒಲುಮೆಯ ವಿನೂತನ ಭಾವನೆಯನ್ನು ಸದಾ ಸೂಸುತ್ತಿರಲಿ ಎಂಬ ಆಶಾ ಭಾವನೆಯನ್ನು ಜಂಟಿಯಾಗಿ ವ್ಯಕ್ತಪಡಿಸುತ್ತಾರೆ. ಚರಣಗಳಲ್ಲಿ ಇಬ್ಬರೂ ತಮ್ಮ ಆಕಾಂಕ್ಷೆಗಳನ್ನು ಬಿಂಬಿಸುವ ಸಾಲುಗಳನ್ನು ಹಂಚಿಕೊಂಡು ಹಾಡುತ್ತಾರೆ.  ಎರಡನೆ ಚರಣದಲ್ಲಿ ಆಕೆ ಲತೆಗೆ ನಿರಂತರ ಆಸರೆಯಾಗುನೀ ಎಂದಾಗ ಆತ ತರುವೇ ಸದಾ ಚಿರ ಆಶ್ರಯ ನಂಬು ನೀ ಎನ್ನುವುದು ಮತ್ತು  ಮೂರನೆ ಚರಣದಲ್ಲಿ ಬೆಳಗುವ ಮನೋಹರ ಚಂದ್ರಮನಾಗುನೀ ಎಂದಾಗ ಬೆಳಕಿನ ಸಮೀಪದ ಛಾಯೆ ನೀ ಭಾಮಿನಿ ಎನ್ನುವುದು ಸಂಬಂಧಿಸದೆಯೂ ಸಂಬಂಧಿಸಿದಂತೆ ಇರುವ ಸಾಲುಗಳನ್ನು ಬೆನ್ನು ಬೆನ್ನಿಗೆ ಬರೆಯುವ ಹಿಂದಿಯ ಮಜರೂಹ್ ಸುಲ್ತಾನ್‌ಪುರಿ ಶೈಲಿಯನ್ನು ನೆನಪಿಸುತ್ತದೆ. ಉದಾಹರಣೆಗೆ ಓ ಹಸೀನಾ ಜುಲ್ಫೋವಾಲಿ ಹಾಡಿನಲ್ಲಿ ಬರುವ ಛುಪ್ ರಹೇ ಹೈ ಯೆ ಕ್ಯಾ ಢಂಗ್ ಹೈ ಆಪ್‌ಕಾ  ಸಾಲಿನ ನಂತರ ಆಜ್ ತೊ ಕುಛ್ ನಯಾ ರಂಗ್ ಹೈ ಆಪ್‌ಕಾ, ಕತ್ಲ್ ಕರ್ ಕೇ ಚಲೆ ಯೆ ಅದಾ ಖೂಬ್ ಹೈ ಸಾಲಿನ ನಂತರ ಹಾಯೆ ನಾದಾಂ ತೇರೀ ಯೆ ಅದಾ ಖೂಬ್ ಹೈ ಇತ್ಯಾದಿಗಳನ್ನು ಗಮನಿಸಬಹುದು.

ಪ್ರತಿ ಚರಣದ ನಂತರ ಪಲ್ಲವಿಯ ಮೂರನೆ ಸಾಲು ಒಲುಮೆಯ ವಿನೂತನ   ಎತ್ತುಗಡೆಯಾಗುವುದು ಈ ಹಾಡಿನ ವಿಶೇಷ.  ಈ ಹಾಡು ಮೊದಲು ರಚನೆಯಾಗಿ ಆ ಮೇಲೆ ವೆಂಕಟರಾಜು ಅದಕ್ಕೆ ರಾಗ ಸಂಯೋಜನೆ ಮಾಡಿದರೋ ಅಥವಾ ಮೊದಲೇ ತಯಾರಾದ ಧಾಟಿಗೆ ತಕ್ಕಂತೆ ಹಾಡು ರಚನೆಯಾಯಿತೋ ಗೊತ್ತಿಲ್ಲ.  ಆದರೆ ಈ ಹಾಡಿನ, ಅದರಲ್ಲೂ ಪಲ್ಲವಿಯ ಸಾಲುಗಳನ್ನು ನೋಡಿದರೆ ಮಾತ್ರೆಗಳ ನಿರ್ದಿಷ್ಟ ಹರವು ಇಲ್ಲದಿರುವುದನ್ನು ಗಮನಿಸಬಹುದು.  ಆದರೂ ಈಗಿನ ಕಾಲದಲ್ಲಿ ಟಪ್ಪಾಂಗುಚ್ಚಿ ಎಂದು ಕರೆಯಲ್ಪಡುವ ಶೈಲಿಯಲ್ಲಿ ವ್ಯಾಪಕವಾಗಿ ಬಳಸಲಾಗುತ್ತಿರುವ 6/8 ತಿಶ್ರ ನಡೆಯಲ್ಲಿ jumping notes ಬಳಸಿ ವೆಂಕಟರಾಜು ಅವರು ಅದು ಹೇಗೆ ಇಷ್ಟೊಂದು ಮಧುರ ರಾಗ ಸಂಯೋಜನೆ ಮಾಡಿದರು ಎಂದು ಆಶ್ಚರ್ಯವಾಗುತ್ತದೆ.  ಒಲುಮೆಯ ವಿನೂತನ ಎಂಬ ಭಾಗವನ್ನು ಪಿ.ಬಿ.ಎಸ್ ಮತ್ತು ಜಾನಕಿ ಅವರು ಏಣಿ ಏರುವಾಗ ಮೇಲೆ ಒಂದು ಕಾಲಿಟ್ಟ ಮೇಲೆ ಕೆಳಗಿನ ಮೆಟ್ಟಲಿನಿಂದ ಇನ್ನೊಂದು ಕಾಲು ಎತ್ತಿದಂತೆ ಗಮಕಯುಕ್ತವಾಗಿ ಹಾಡಿದ ರೀತಿಯಂತೂ ಅತ್ಯದ್ಭುತ. ವೆಂಕಟರಾಜು ಅವರ ಕುಲ ಕುಲ ಕುಲವೆಂದು ಹೊಡೆದಾಡದಿರಿ, ನುಡಿಮನ ಶಿವಗುಣ ಸಂಕೀರ್ತನ ಮತ್ತು ಈ ಹಾಡು ಯಮನ್ ರಾಗಾಧಾರಿತವಾಗಿದ್ದರೂ ಮೂರರಲ್ಲಿ ಒಂದಿನಿತೂ ಸಾಮ್ಯ ಗೋಚರಿಸದಿರುವುದು ಅವರ ನೈಪುಣ್ಯಕ್ಕೆ ಸಾಕ್ಷಿ. ಇದೇ ರೀತಿ  ಶಂಕರ ಜೈಕಿಶನ್ ಕೂಡ ಅನೇಕ ಹಾಡುಗಳಿಗೆ ಭೈರವಿ ರಾಗವನ್ನು ಬಳಸಿದರೂ ಅವು ವಿಭಿನ್ನವಾಗಿರುತ್ತಿದ್ದವು.


ನಂದಾದೀಪ ಚಿತ್ರದ ನಾಯಕಿ ತನ್ನ ಪ್ರಿಯಕರನನ್ನು ಮದುವೆಯಾಗಲು ಸಾಧ್ಯವಾಗದೆ ಓರ್ವ ಸಿರಿವಂತ ವಿಧುರನ ಮನೆಯೊಡತಿಯಾಗಬೇಕಾಗುತ್ತದೆ.  ನಮಗೇ ಈ ಹಾಡಿನ ಗುಂಗಿನಿಂದ ಹೊರಗೆ ಬರಲು ಕಷ್ಟವಾಗುವಾವಾಗ ಸ್ವತಃ ಪ್ರೇಮಿಯೊಡನೆ ಹಾಡಿದ ಆಕೆಗೆ ಹೇಗಾಗಿರಬೇಡ. ಪತಿಯ ಮನೆಯಲ್ಲಿ ಕರ್ನಾಟ ಭಾರತ ಕಥಾಮಂಜರಿ ಓದುವಾಗಲೂ ಅದರ ಪುಟಗಳಲ್ಲಿ ಆಕೆಗೆ ಈ ಹಾಡೇ ಕಾಣಿಸುತ್ತದೆ. 70ರ ದಶಕದಲ್ಲಿ ಕಾರ್ಯ ನಿಮಿತ್ತ ಧಾರವಾಡಕ್ಕೆ ಹೋಗಿದ್ದಾಗ ಅಲ್ಲಿಯ ಚಿತ್ರಮಂದಿರವೊಂದಲ್ಲಿ ಮರು ಬಿಡುಗಡೆಯಾಗಿದ್ದ ಈ ಚಿತ್ರ ನೋಡುವ ಅವಕಾಶ ನನಗೆ ದೊರಕಿತ್ತು. ಅಂದು ಪುಸ್ತಕದಲ್ಲಿ ಆ ಗೀತೆ ಕಾಣಿಸುವ ದೃಶ್ಯ ಏಕೋ ನನ್ನ ಮನಃಪಟಲದಲ್ಲಿ ಶಾಶ್ವತವಾಗಿ ದಾಖಲಾಗಿ  ಇಂದೂ ಅದನ್ನು ಕೇಳುವಾಗಲೆಲ್ಲ  ನನಗೆ ಆ ಸನ್ನಿವೇಶವೇ ಕಣ್ಣೆದುರು ಬರುವುದು!  


ಈ ನಕಾರಗಳ ಸಕಾರಾತ್ಮಕ ಹಾಡು ಬರೆದ ಸೋರಟ್ ಅಶ್ವತ್ಥ್ ಅವರ ನಿಜ ಹೆಸರು ಅಶ್ವತ್ಥ ನಾರಾಯಣ ಶಾಸ್ತ್ರಿ.  ಎಚ್.ಎಲ್.ಎನ್ ಸಿಂಹ ಅವರ ಪ್ರೇಮಲೀಲಾ ನಾಟಕದಲ್ಲಿ ಅವರು ನಿರ್ವಹಿಸುತ್ತಿದ್ದ  ಸೋರಟ್ ರಾಮನಾಥ್ ಪಾತ್ರದ ಜನಪ್ರಿಯತೆಯಿಂದಾಗಿ ಈ ಸೋರಟ್ ಹೆಸರು ಅವರಿಗಂಟಿತಂತೆ.  ಅವರು ಹಾಡುಗಳನ್ನು ರಚಿಸುವುದರ ಜೊತೆಗೆ ಸಂಭಾಷಣೆ, ಚಿತ್ರನಾಟಕವನ್ನೂ ಬರೆಯುತ್ತಿದ್ದುದಲ್ಲದೆ  ಚಿತ್ರಗಳಲ್ಲಿ ಪೋಷಕ ಪಾತ್ರಗಳಲ್ಲೂ ಕಾಣಿಸಿಕೊಳ್ಳುತ್ತಿದ್ದರು. ಕನ್ನಡದ ಬಹುತೇಕ ಗೀತರಚನಕಾರರು ಸಂಭಾಷಣೆಗಳನ್ನೂ ಬರೆಯುತ್ತಿದ್ದುದು ಒಂದು ವಿಶೇಷ. ಆದರೆ ಆಗಿನ ಕಾಲದಲ್ಲಿ ಹಿಂದಿಯಲ್ಲಿ  ರಾಜೇಂದ್ರ ಕೃಷ್ಣ ಬಿಟ್ಟರೆ ಹಸರತ್ ಜೈಪುರಿ, ಶೈಲೇಂದ್ರ, ಮಜರೂಹ್ ಸುಲ್ತಾನ್‌ಪುರಿ, ಶಕೀಲ್ ಬದಾಯೂನಿ, ಆನಂದ್ ಬಕ್ಷಿ ಮುಂತಾದವರೆಲ್ಲ ಹಾಡು ಬರೆಯುವುದಕ್ಕಷ್ಟೇ ತಮ್ಮನ್ನು ಸೀಮಿತಗೊಳಿಸಿಕೊಂಡಿದ್ದರು.

ಜಿಗಿಜಿಗಿಯುತ ನಲಿ,  ಗಾಳಿ ಗೋಪುರ ನಿನ್ನಾಶಾ ತೀರ,  ಕರೆಯೇ ಕೋಗಿಲೆ ಮಾಧವನ ಇತ್ಯಾದಿ ಸೋರಟ್ ಅಶ್ವತ್ಥ್ ಹೆಸರು ಹೇಳಿದಾಕ್ಷಣ ಫಕ್ಕನೆ ನೆನಪಾಗುವ ಜನಪ್ರಿಯ ಹಾಡುಗಳು.  ಪಡುವಾರಹಳ್ಳಿ ಪಾಂಡವರು ಚಿತ್ರದ ತೂಕಡಿಸಿ ತೂಕಡಿಸಿ ಬೀಳದಿರೊ ತಮ್ಮ ಅವರು ಬರೆದದ್ದೆಂದು ಇತ್ತೀಚಿನವರೆಗೂ ನನಗೆ ಗೊತ್ತಿರಲಿಲ್ಲ - ಏಕೆಂದರೆ ಅದು ಸಿನಿಮಾ ಕವಿಯ ರಚನೆಯಂತೆ ಇಲ್ಲ!  ಅವರು ಸ್ವತಃ ನಿರ್ಮಿಸಿದ ಶನಿ ಪ್ರಭಾವ ಚಿತ್ರದಲ್ಲಿ ಎಸ್.ಪಿ.ಬಿ. ಜೊತೆ ಆನಂದದ ನಂದನ ಎಂದು ಪಿ.ಸುಶೀಲಾ ಧ್ವನಿಯೇನೋ ಎನ್ನಿಸುವಂತೆ  ಹಾಡಿದ ಜ್ಯೋತಿ  ಅವರ ಪುತ್ರಿ. ಭಾಗ್ಯದೇವತೆ, ಬಾಂಧವ್ಯ, ಸವಿ ನೆನಪು ಇತ್ಯಾದಿ ಚಿತ್ರಗಳನ್ನು  ನಿರ್ಮಿಸಿ ಕೂಡ ಅವರು ಕೈ ಸುಟ್ಟುಕೊಂಡಿದ್ದರು. ಚಿತ್ರಗಳಲ್ಲಿ ಅವರು ಒಂದೋ, ಎರಡೋ ಗೀತೆಗಳನ್ನು ಬರೆದದ್ದೇ ಹೆಚ್ಚು. ಜಯಗೋಪಾಲ್, ಉದಯಶಂಕರ್, ಕು.ರ.ಸೀ ಮುಂತಾದವರಂತೆ  ಎಲ್ಲ ಹಾಡುಗಳನ್ನು ಬರೆಯುವ ಅವಕಾಶ ಅವರಿಗೆ ಸಿಕ್ಕಿದ್ದು ಕಮ್ಮಿಯೇ.  ಸರಸ್ವತಿಯ ಸಂಪೂರ್ಣ ಕೃಪೆ ಅವರ ಮೇಲಿದ್ದು ಕೀರ್ತಿಲಕ್ಷ್ಮಿ ಅವರಿಗೊಲಿದರೂ  ಧನಲಕ್ಷ್ಮಿ ಏಕೋ ಮುನಿಸಿಕೊಂಡು ದೂರವೇ ನಿಂತಳು. Heart attack ಆಗಿ ಆಸ್ಪತ್ರೆಗೆ ಸೇರಿ ಸಾಯುವ ದಿನ ಬೆಳಗ್ಗೆ   ‘ನಾನು ಸತ್ತರೂ ನನ್ನ ಹಾಡಿನ ಮೂಲಕ ಜೀವಂತವಾಗಿರುತ್ತೇನೆ.  ನಾನು ಬರೆದ ನಾಡಿನಂದ ಈ ದೀಪಾವಳಿ ಹಾಡು ಇಲ್ಲದೆ  ಕನ್ನಡ ನಾಡಿನ ಯಾವ ಮನೆಯಲ್ಲೂ ದೀಪಾವಳಿ ಸಂಪೂರ್ಣವೆಂದೆನ್ನಿಸದು’ ಎಂದು ವೈದ್ಯರಲ್ಲಿ ಹೇಳಿದ್ದರಂತೆ.

ಈಗ ಅವರನ್ನು ನೆನೆಸಿಕೊಳ್ಳುತ್ತಾ  ಈ ನಕಾರಗಳ ಸಕಾರಾತ್ಮಕ ಹಾಡು ಆಲಿಸಿ.




************
ಸುಮಾರು 23 ನಕಾರಗಳ ಇನ್ನೊಂದು ಸಕಾರಾತ್ಮಕ ಹಾಡು 60ರ ದಶಕದಲ್ಲಿ ಬಂದಿತ್ತು. ಯಾವುದೆಂದು ಹೇಳಬಲ್ಲಿರಾ?

4 comments:

  1. ಈ ಮುನ್ನವೂ ಹೇಳಿದ್ದೆ - ಮತ್ತೆ ಹೇಳುತ್ತಿದ್ದೇನೆ.
    ನಿಮ್ಮದು ಪಿ ಎಚ್ ಡಿ ಮಟ್ಟದ ವಿಶ್ಲೇಷಣೆ.
    ಅದನ್ನು ವ್ಯವಸ್ಥಿತವಾಗಿ ಮಾಡಬಹುದೇ ಪರಿಶೀಲಿಸಿ. ನೀವು ಡಾ. ಕಾಕತ್ಕರ್ ಆದರೆ ಹೆಚ್ಚು ಸಂಭ್ರಮಿಸುವುದು ನಾನೇ.
    ನಿಮಗಾಗಿ ಅಲ್ಲದಿದ್ದರೂ ಮುಂಬರುವ ಪೀಳಿಗೆಗಳ ಸ್ಫೂರ್ತಿಗಾಗಿ ಆಲೋಚಿಸಿ.
    ಧನ್ಯವಾದಗಳು.

    Kiran Surya(FB)

    ReplyDelete
  2. ಅನೇಕ ವರ್ಷಗಳ ನಂತರ ಒಂದು ಪರಿಪೂರ್ಣ ಲೇಖನವನ್ನು ಓದಿದ ಖುಷಿಯಾಯಿತು. ಈ ಹಿಂದೆ "The Illustrated Weekly of India" ದಲ್ಲಿ ಈ ರೀತಿಯ-ಈ ಗುಣಮಟ್ಟದ ಲೇಖನಗಳು- ಸಿಗುತ್ತಿದ್ದವು. "The Illustrated Weekly of India" ಮುಚ್ಚಿ ಹೋಗಿ ಬಹಳ ವರ್ಷಗಳೇ ಕಳೆದಿವೆ. ಕಾಕತ್ಕರ್ ಅವರಿಗೆ ಒಂದು ಗೌರವಯುತ ಸಲಾಂ ಹಾಗೂ kudos!!

    Chandrashekhar M Dongre (FB)

    ReplyDelete
  3. ಅದೆಷ್ಟು ಅದ್ಭುತ ವಿಷಯ, ವಿವರಗಳನ್ನು ಕೊಡುತ್ತಾ ಸುಂದರವಾಗಿ ಬರೆದಿದ್ದೀರಿ, Chidambar ಮಾವ, so wonderful to read!

    Sowmya Lakshmi (FB)

    ReplyDelete
  4. ಅದ್ಭುತ ವಿಶ್ಲೇಷಣೆ! ಚಲನಚಿತ್ರಗಳ ಬಗ್ಗೆ,ಹಾಗೂ ಅವುಗಳ ಹಾಡಿನ ಬಗ್ಗೆ ನೀವು ಬರೆಯುವಷ್ಟು ವಿವರಣೆ ಬೇರಾರಲ್ಲೂ ನಾನು ಕಂಡಿಲ್ಲ! ನಿಮ್ಮ ಪ್ರತಿಯೊಂದು ಲೇಖನವೂ ಪುಸ್ತಕರೂಪದಲ್ಲಿ ದೊರೆಯುವಂತಾಗಬೇಕು! ಮೇಲೆ Kiran Surya ರವರು ಹೇಳಿರುವ ಮಾತುಗಳಲ್ಲಿ ಯಾವ ಉತ್ಪ್ರೇಕ್ಷೆಯೂ ಇಲ್ಲ!

    Krushna Prasad (FB)

    ReplyDelete

Your valuable comments/suggestions are welcome