Thursday 23 February 2023

ಉಜಿರೆ ಹೈಸ್ಕೂಲಿನ ಆ ಮೂರು ವರ್ಷಗಳು


ಇತ್ತೀಚೆಗೆ  ನನ್ನ ಸಹಪಾಠಿ ಓರ್ವರು ನನ್ನಲ್ಲಿ ಇಲ್ಲದಿದ್ದ ಉಜಿರೆಯ ಎಸ್.ಡಿ.ಎಂ ಹೈಯರ್ ಸೆಕೆಂಡರಿ ಸ್ಕೂಲಿನ 1966-67ರ  ಎಸ್.ಎಸ್.ಎಲ್.ಸಿ ಬ್ಯಾಚಿನ ಫೋಟೊ  ಶೇರ್ ಮಾಡಿದರು. A, B, C ಮೂರೂ ಬ್ಯಾಚುಗಳ ವಿದ್ಯಾರ್ಥಿಗಳು ಅದರಲ್ಲಿದ್ದು ನೋಡಿದಾಗ  ಎಲ್ಲರ ಹೆಸರುಗಳು ನೆನಪಾದವು ಎಂದಾಗಲೀ, ಅವರ ಮುಖ ಕಣ್ಣ ಮುಂದೆ ಬಂತು ಎಂದಾಗಲೀ ಹೇಳಲಾರೆ. ಆದರೆ ಆ ಮೂರು ವರ್ಷಗಳ ಹೈಸ್ಕೂಲ್ ಜೀವನದ ದೃಶ್ಯಗಳು ಸಿನಿಮಾ ರೀಲಿನಂತೆ ನನ್ನ  ಕಣ್ಣ ಮುಂದೆ  ಓಡತೊಡಗಿದವು.



ನಾನು 5ನೇ ತರಗತಿ ವರೆಗಿನ ಪ್ರಾಥಮಿಕ ಶಿಕ್ಷಣವನ್ನು ಆನಂಗಳಿಯ ನಮ್ಮ ಮನೆ ಸಮೀಪದ ಸಿದ್ದಬೈಲು ಪರಾರಿ ಶಾಲೆಯಲ್ಲಿ ಪಡೆದೆ. ನಂತರ 6 ಮತ್ತು  7ನೇ ತರಗತಿಗಳನ್ನು ಮುಂಡಾಜೆ ಹೈಯರ್ ಎಲಿಮೆಂಟರಿ ಶಾಲೆಯಲ್ಲಿ ಪೂರೈಸಿದೆ. 8ನೆಯ ತರಗತಿಗೆ ಉಜಿರೆ ಹೈಸ್ಕೂಲಿಗೆ ಹೋಗಬೇಕಾಗಿತ್ತು. ಅಷ್ಟರಲ್ಲೇ ನನ್ನ ಅಣ್ಣ ಹಾಸ್ಟೆಲಲ್ಲಿ ಉಳಿದುಕೊಂಡು SSLC ಮುಗಿಸಿದ್ದರಿಂದ ನಾನೂ ಹಾಗೆಯೇ ಮಾಡುವುದೆಂದು ನಿಶ್ಚಯವಾಗಿ ಮಾನಸಿಕವಾಗಿ ಅದಕ್ಕೆ ಸಿದ್ಧನಾಗಿದ್ದೆ. 1964ರ ಜೂನಿನಲ್ಲಿ ಹೈಸ್ಕೂಲ್ ತರಗತಿಗಳು ಆರಂಭವಾಗುವುದಕ್ಕೆ ಮುನ್ನ  ಮೇ ಕೊನೆಯ ವಾರದಲ್ಲಿ  ಹಾಸ್ಟೆಲ್ ಸೇರಿ ಶಾಲೆಯ ದಾಖಲಾತಿ ಪ್ರಕ್ರಿಯೆಗಳನ್ನು ಪೂರೈಸಲೆಂದು  ನಮ್ಮ ಎರಡನೇ ಹಿರಿಯಣ್ಣನ ಜೊತೆಗೆ ಉಜಿರೆಗೆ ಹೋದೆ.    ಹೈಸ್ಕೂಲಿಗೆ ದಾಖಲಾಗಲು ಬಂದ ನಮ್ಮೂರಿನ ಇತರ ಕೆಲವು ಹುಡುಗರೂ ಪೇಟೆಯಲ್ಲಿ ಸಿಕ್ಕರು. ಆಗ ಉಜಿರೆಯಲ್ಲಿ ಹುಡುಗರಿಗೆ ಉಳಿದುಕೊಳ್ಳಲು  ಹಾಸ್ಟೆಲ್ ಮಾತ್ರವಲ್ಲದೆ ಶುಲ್ಕರಹಿತವಾಗಿ ಅಥವಾ ನಾಮಮಾತ್ರದ ಶುಲ್ಕ ತೆತ್ತು ಸಿದ್ಧವನ ಗುರುಕುಲವನ್ನು ಸೇರುವ ಆಯ್ಕೆಯೂ ಇತ್ತು. ಆ ಹುಡುಗರೆಲ್ಲ ಸಿದ್ಧವನ ಗುರುಕುಲಕ್ಕೆ ಸೇರುವವರೆಂದು ತಿಳಿದ ನಮ್ಮಣ್ಣ ನನ್ನನ್ನೂ ಹಾಸ್ಟೆಲ್ ಬದಲಿಗೆ ಸಿದ್ಧವನಕ್ಕೆ ಸೇರಿಸುವ ದಿಢೀರ್ ನಿರ್ಧಾರ ಕೈಗೊಂಡರು.  ಸಿದ್ಧವನ ಅಂದರೆ ಬಲು ಕಟ್ಟು ನಿಟ್ಟು,  ಅಲ್ಲಿ ಕಡ್ಡಾಯವಾಗಿ ಬೆಳಗಿನ ಜಾವ ಏಳಬೇಕು, ತಣ್ಣೀರ ಸ್ನಾನ ಮಾಡಬೇಕು, ಜೈನಧರ್ಮ ಕಲಿಯಬೇಕು, ಹಾಗೆ ಹೀಗೆ  ಎಂದೆಲ್ಲ ಕೇಳಿ ತಿಳಿದಿದ್ದ ನನ್ನ ಪ್ರಬಲ ವಿರೋಧ ಕೆಲಸ ಮಾಡಲಿಲ್ಲ.  ಒತ್ತಾಯಪೂರ್ವಕವಾಗಿ ಸಿದ್ಧವನಕ್ಕೆ ನನ್ನ ಸೇರ್ಪಡೆಯಾಯಿತು.  ಶಾಲಾರಂಭಕ್ಕೆ ಇನ್ನೂ ಕೆಲವು ದಿನ ಇದ್ದುದರಿಂದ ಅಡ್ಮಿಶನ್ ಪ್ರಕ್ರಿಯೆಯನ್ನು ಮುಗಿಸಿ ಮನೆಗೆ ಮರಳಿದೆವು. ಆಗ ಸಿದ್ಧವನ ಪರಿಸರವಿಡೀ ಮೈ ತುಂಬಾ ಹೂ ಹೊತ್ತ  ಮೇ ಫ್ಲವರ್ ಮರಗಳಿಂದ ತುಂಬಿ ಕೆಂಪಾಗಿ ಕಾಣಿಸುತ್ತಿದ್ದರೂ ಅಂದು  ಆ ಅಂದವನ್ನು ಆನಂದಿಸುವ ಮನಸ್ಥಿತಿಯಲ್ಲಿ ನಾನಿರಲಿಲ್ಲ.



ಕೆಲವೇ ದಿನಗಳಲ್ಲಿ ಶಾಲಾರಂಭ ಆಗಿ ಒಂದು ತಗಡಿನ ಟ್ರಂಕಿನಲ್ಲಿ ಅಗತ್ಯವಾದ ಸಾಮಗ್ರಿಗಳನ್ನು ತುಂಬಿಕೊಂಡು ನಾನು ಸಿದ್ಧವನ ಪ್ರವೇಶಿಸಿದೆ. ಮೊತ್ತಮೊದಲ ಬಾರಿಗೆ ದೀರ್ಘ ಸಮಯ ಮನೆಯಿಂದ ದೂರವುಳಿಯುವ ಸಂದರ್ಭ ಅದಾಗಿತ್ತು. ಆದರೆ ನಮ್ಮೂರಿನ ಇನ್ನೂ ಕೆಲ ಹುಡುಗರೂ ಜೊತೆಗಿದ್ದುದು ಸ್ವಲ್ಪ ಸಮಾಧಾನ ತರುವ ಅಂಶವಾಗಿತ್ತು.  ಪುಸ್ತಕಗಳು, ಪೆನ್ನು ಪೆನ್ಸಿಲಿನಂಥ ಸ್ಟೇಶನರಿ ಸಾಮಗ್ರಿ ಇತ್ಯಾದಿಗಳನ್ನು ನಗದು ಕೊಡದೆ ಕೊಳ್ಳಲಾಗುವಂತೆ ಉಜಿರೆಯ ಏಕೈಕ ಸ್ಟೇಶನರಿ ಅಂಗಡಿ ಆಗಿದ್ದ ಪ್ರಭಾತ್ ಸ್ಟೋರಿನಲ್ಲಿ ಒಂದಷ್ಟು ಅಡ್ವಾನ್ಸ್ ಕೊಟ್ಟು ಒಂದು ಲೆಕ್ಕದ ಪುಸ್ತಕದ ವ್ಯವಸ್ಥೆಯನ್ನು ನಮ್ಮಣ್ಣ ಮಾಡಿಕೊಟ್ಟಿದ್ದರು. ಅದು ಹೈಸ್ಕೂಲಿನ ಸಂಸ್ಕೃತ ಅಧ್ಯಾಪಕ ಗೋಪಾಲ ಮಾಸ್ಟ್ರ ಅಂಗಡಿಯಾಗಿತ್ತು. ಅವರ ತಮ್ಮ ಗೋವಿಂದ ಅದನ್ನು ನೋಡಿಕೊಳ್ಳುತ್ತಿದ್ದರ ಅಲ್ಲಿ ಬೆಳಗ್ಗೆ  ಪಟ್ಟಿ ಕೊಟ್ಟರೆ ಸಂಜೆಗೆ  ಬೈಂಡ್ ಪೇಪರಲ್ಲಿ ಸುತ್ತಿದ್ದ ಪುಸ್ತಕದ ಅಟ್ಟಿ ರೆಡಿ ಮಾಡಿಟ್ಟಿರುತ್ತಿದ್ದರು. ಆಗಲೇ ನಮ್ಮಣ್ಣನ ಹಳೆ ವಾಟರ್ ಕಲರ್ ಬಳಸಿ ನಾನು ಚಿತ್ರ ಬರೆಯುತ್ತಿದ್ದು ಹೈಸ್ಕೂಲಿನಲ್ಲಿ ಶಿಫಾರಸು ಮಾಡಿದ ಗಿಟಾರ್ ಕಂಪನಿಯ ಟ್ಯೂಬ್ ಕಲರ್ ನನ್ನ ಕೈ ಸೇರಿದ್ದು ಹೆಚ್ಚಿನ ಉತ್ಸಾಹ  ಮೂಡಿಸಿತ್ತು. ಎಲ್ಲ ವಿದ್ಯಾರ್ಥಿಗಳಂತೆ ಕೊಡೆ ರಿಪೇರಿಯ  ಮುರ್ಡಿತ್ತಾಯರಲ್ಲಿ ಸಾಬೂನುಗಳು ಪ್ಯಾಕ್ ಆಗಿ ಬರುವ ದೇವದಾರು ಮರದ ಪೆಟ್ಟಿಗೆಗಳ ಹಲಗೆಯಿಂದ ಬಿಜಾಗಿರಿ ಇಲ್ಲದ, ಆದರೆ ಮುಚ್ಚಳಕ್ಕೆ ಕೊಂಡಿ ಇದ್ದು ಬೀಗ ಹಾಕಬಹುದಾದ ಪುಸ್ತಕ ಇಡುವ  ಪೆಟ್ಟಿಗೆ ಮಾಡಿಸಿಕೊಂಡೆ.  

ಸಿದ್ಧವನದಲ್ಲಿ ಬೆಳಗ್ಗೆ 5 ಗಂಟೆಗೆ ಬೆಲ್ಲು ಬಾರಿಸಿದೊಡನೆ ಏಳಬೇಕಾಗಿರುವುದು ಹಿಂಸೆ ಎನಿಸುತ್ತಿತ್ತು. ಯಾರಾದರೂ ಏಳದಿದ್ದರೆ ವಾರ್ಡನ್ ಜಿನರಾಜ ಶಾಸ್ತ್ರಿಗಳ ಬೆತ್ತದ ರುಚಿ ನೋಡಬೇಕಾಗುತ್ತಿತ್ತು. ಜ್ವರದಿಂದ ನರಳುತ್ತಾ ಮಲಗಿದ್ದ ರೂಮ್ ಮೇಟ್ ಒಬ್ಬನಿಗೆ ಎನು ಎತ್ತ ಎಂದು ವಿಚಾರಿಸದೆ ಅವರು ಬೆತ್ತದಿಂದ ಥಳಿಸಿದ್ದನ್ನು ಒಮ್ಮೆ ಕಣ್ಣಾರೆ ಕಂಡೆ. 

ಎದ್ದೊಡನೆ ಮುಖಮಾರ್ಜನ ಮಾಡಿ ‘ಓಂ ಹ್ರಾಂ ಹ್ರೀಂ ಹ್ರೂಂ ಅಪ್ರತಿ ಛತ್ರೆ ಪಟುವಿತ ಕಾಯಾ ಯಾಂ ಯಾಂ ಮಮ ಆತ್ಮ ವಿಚಾರಾ’ ಎಂಬ ಪ್ರಾರ್ಥನೆಗೆ ಸಿದ್ಧವಾಗಬೇಕಿತ್ತು. 

ಆಗ ಸಾಮಾನ್ಯವಾಗಿ ಎಲ್ಲೆಡೆ ಇದ್ದಂತೆ ಇಲ್ಲೂ ಬಯಲೇ ಶೌಚಾಲಯವಾಗಿತ್ತು. ಆಗಿನ್ನೂ ಮಳೆಗಾಲ ಆರಂಭ ಆಗಿರದಿದ್ದುದರಿಂದ ಉಜಿರೆಯ ಬಾವಿಗಳೆಲ್ಲ ಜಲ ಬತ್ತಿ ಬರಿದಾಗಿದ್ದವು.  ಹೀಗಾಗಿ  ಪಾಚಿ ಕಟ್ಟಿದ ಕೆರೆಯೊಂದರ ಹಸಿರು ನೀರನ್ನು ಮೈ ಮೇಲೆ ಹೊಯ್ದುಕೊಂಡು ಸ್ನಾನ ಮಾಡಬೇಕಾಗಿತ್ತು.  ಮಳೆಗಾಲ ಶುರು ಆಗಿ ಬಾವಿಗಳು ತುಂಬಿದ ಮೇಲೆ ನೀರು ಸೇದಿ ಬಾವಿ ಕಟ್ಟೆಯಲ್ಲೇ ಸ್ನಾನ.   ಹುರುಳಿ ಚಟ್ನಿಯೊಂದಿಗಿನ  ಕುಚ್ಚಲಕ್ಕಿ ಗಂಜಿ ಊಟದ ಮೊದಲು ದೇವರೆದುರು ನಿಂತು  ಜೈನರಾದರೆ ‘ಬಾಹುಬಲಿ ಸ್ವಾಮಿ ಜಗಕೆ ನೀ ಸ್ವಾಮಿ’, ಇತರರಾದರೆ ‘ಹರೇ ಕೃಷ್ಣ ಪೊರೆ ಕೇಶವ ದುರಿತ ದೂರ’ ಎಂಬ ಪ್ರಾರ್ಥನೆ ಹಾಡಲಿಕ್ಕಿತ್ತು. ಮಧ್ಯಾಹ್ಮ ಅನ್ನ, ಸಾಂಬಾರು, ಮಜ್ಜಿಗೆಯ ಊಟ,   ಜೈನ ಸಮುದಾಯದ ಸಂಸ್ಥೆಯಾದುದರಿಂದ ಕತ್ತಲಾಗುವುದರೊಳಗೆ  ಸಂಜೆಯ ಪೋಸದ ಊಟ.  ಆ ಮೇಲೆ ವಾರ್ಡನ್ ಜಿನರಾಜ ಶಾಸ್ತ್ರಿಗಳ  ಪ್ರವಚನ.  ಮೊದಲು ಭಗವದ್ಗೀತೆಯ ಕೆಲವು ಶ್ಲೋಕಗಳ ವಾಚನ ಮತ್ತು ವಿಶ್ಲೇಷಣೆ. ನಂತರ  ರತ್ನ ಕರಂಡಕ ಶ್ರಾವಕಾಚಾರ ಗ್ರಂಥದ ಪಾಠ. ಆ ಮೇಲೆ ಶಾಲಾ ಪಾಠಗಳ ಓದು.  ರಾತ್ರಿ 9 ಗಂಟೆ ಸುಮಾರಿಗೆ ಬೆಲ್ ಬಾರಿಸಿದೊಡನೆ ಮಲಗಿದರೆ ನಾಳೆ ಬೆಳಗೇ ಆಗದಿರಲಿ ಎಂದು ಮನ ಹಾರೈಸುತ್ತಿತ್ತು.

ಶಾಸ್ತ್ರಿಗಳು ತಮ್ಮ ಆಫೀಸ್ ಕೋಣೆಯಲ್ಲಿ ಆಜಾದ್ ಬಿಸ್ಕೆಟ್ಟುಗಳ ಡಬ್ಬವೊಂದನ್ನು ಇಟ್ಟುಕೊಂಡು ಮಕ್ಕಳಿಗೆ ರಹಸ್ಯವಾಗಿ ಮಾರುತ್ತಿದ್ದರು. ಇದರಿಂದ ಅವರಿಗೆ BMS ಅಂದರೆ ‘ಬಿಸ್ಕೆಟ್ ಮಾರುವ ಶಾಸ್ತ್ರಿ’ ಎಂಬ ನಾಮಕರಣವನ್ನು ಹುಡುಗರು ಮಾಡಿದ್ದರು. ಪೋಕರಿಯೇನಾದರೂ ಮಾಡಿ ಸಿಕ್ಕಿ ಹಾಕಿಕೊಂಡರೆ  ಬಿಸ್ಕೆಟ್ ಖರೀದಿಸಿ ಅವರ ಸಿಟ್ಟನ್ನು ಶಾಂತಗೊಳಿಸಲು  ಸಾಧ್ಯವಾಗುತ್ತಿತ್ತು.  ನಾನೊಮ್ಮೆ ಅವರ ಅನುಮತಿ ಇಲ್ಲದೆ ವಾರಾಂತ್ಯದಲ್ಲಿ ಮನೆಗೆ ಹೋದ ಸಂದರ್ಭದಲ್ಲಿ ಈ ತಂತ್ರ ಉಪಯೋಗಿಸಿದ್ದೆ. 



ಅದು ವರೆಗೆ ಡಿ.ಕೆ.ವಿ. ಹೈಸ್ಕೂಲ್ ಅರ್ಥಾತ್ ಧರ್ಮಸ್ಥಳ ಕರ್ನಾಟಕ ವಿದ್ಯಾಲಯ ಆಗಿದ್ದ ಶಿಕ್ಷಣ ಸಂಸ್ಥೆ ಆಗಷ್ಟೇ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಹೈಯರ್ ಸೆಕೆಂಡರಿ ಸ್ಕೂಲ್ ಎಂಬ ಹೊಸ ಹೆಸರು ಪಡೆದಿತ್ತು. ಇಂಗ್ಲೀಷ್ ಎಲ್ ಆಕಾರದಲ್ಲಿ ಬಾಹುಗಳನ್ನು ಹರವಿಕೊಂಡಿದ್ದ ಅದರ ಕಟ್ಟಡ ನೋಡಿದರೆ ಭಯ ಭಕ್ತಿ ಹುಟ್ಟಿಸುವಂತಿತ್ತು.  ಪೂರ್ವ ಪಶ್ಚಿಮ ಮತ್ತು ಉತ್ತರ ದಕ್ಷಿಣಕ್ಕೆ ಚಾಚಿಕೊಂಡ ಭಾಗಗಳು ಕೂಡುವಲ್ಲಿ ಆಫೀಸ್ ಮತ್ತು ಸ್ಟಾಫ್ ರೂಮ್.  ಆ ಭಾಗಕ್ಕೆ ಮಹಡಿಯೂ ಇತ್ತು. ಇಲ್ಲಿ ಕಾಣಿಸುತ್ತಿರುವ ತಾಂತ್ರಿಕವಾಗಿ ಮುಂಭಾಗ, ಆದರೆ ವಾಸ್ತವದಲ್ಲಿ ಹಿಂಭಾಗದ ಅದರ  ಚಿತ್ರ ನೋಡಿದರೆ ಸಿನಿಮಾ ಟಾಕೀಸೇನೋ ಎನ್ನುವ ಭ್ರಮೆ ಉಂಟಾಗುತ್ತದೆ!  ಮುಂಭಾಗದ ವಿಶಾಲ ಅಂಗಳದ ಇನ್ನೊಂದು ಬದಿಯಲ್ಲಿ ರಂಗ ಮಂಟಪ ಮತ್ತು ಆಫೀಸ್ ಸಂಕೀರ್ಣ ಆಗ ನಿರ್ಮಾಣ ಹಂತದಲ್ಲಿತ್ತು. ಸ್ವಲ್ಪ ದೂರದಲ್ಲಿ ಕೆಳಗಡೆ ದೊಡ್ಡ ಆಟದ ಬಯಲು ಇತ್ತು.  ವಿಶಾಲವಾದ ಆವರಣದಲ್ಲಿ ಎತ್ತರವಾಗಿ ಬೆಳೆದಿದ್ದ  ಗಾಳಿಮರಗಳ ಸಾಲುಗಳು ಪರಿಸರದ ಗಾಂಭೀರ್ಯವನ್ನು ಹೆಚ್ಚಿಸುತ್ತಿದ್ದವು.

ಹೈಸ್ಕೂಲಿನ 8ನೇ ತರಗತಿಗೆ ಸೇರಿದ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿದ್ದುದರಿಂದ  ಆರ್ಟ್ಸ್ ಆಯ್ಕೆ ಮಾಡಿದವರಿಗೆ 8th A, ಸೈನ್ಸ್ ಮತ್ತು ಪೂರ್ಣ ಸಂಸ್ಕೃತ ಅಥವಾ ಪೂರ್ಣ ಕನ್ನಡ ಆರಿಸಿದವರಿಗೆ 8th B ಹಾಗೂ ಸೈನ್ಸ್ ಮತ್ತು ಅರ್ಧ ಸಂಸ್ಕೃತ ಅರ್ಧ ಕನ್ನಡ ಆರಿಸಿದವರಿಗಾಗಿ 8th C ಎಂಬ ಮೂರು ವಿಭಾಗಗಳನ್ನು ಮಾಡಿದ್ದರು. ಇವು ಕ್ರಮವಾಗಿ ಪೂರ್ವ ಪಶ್ಚಿಮಕ್ಕೆ ಹರಡಿಕೊಂಡ ಕಟ್ಟಡ ಭಾಗದ ಒಂದು, ಎರಡು ಮತ್ತು ಮೂರನೇ ಕೋಣೆಯಲ್ಲಿ ಇದ್ದವು.  ನಾನು ಪೂರ್ಣ ಸಂಸ್ಕೃತ ಆಯ್ದುಕೊಂಡು 8th Bಯಲ್ಲಿದ್ದೆ.  ಆದರೇಕೋ ವಾತಾವರಣವೇ ಪರಕೀಯವೆನಿಸುತ್ತಿತ್ತು. ಎಲಿಮೆಂಟರಿ, ಹೈಯರ್ ಎಲಿಮೆಂಟರಿಗಳಲ್ಲಿ ಪ್ರಥಮ ಬೆಂಚಿನ ವಿದ್ಯಾರ್ಥಿಯಾಗಿದ್ದ ನನಗೆ  ಮಧ್ಯದಲ್ಲೆಲ್ಲೋ ಜಾಗ ಸಿಕ್ಕಿತ್ತು.  ಗಿಡವನ್ನು ಒಂದು ಕಡೆಯಿಂದ ಕಿತ್ತು ಬೇರೆಡೆ ನೆಟ್ಟಂಥ ಸ್ಥಿತಿ ನನ್ನದಾಗಿತ್ತು. 

ಹೀಗಿರುವಾಗ ಅಲ್ಲಿಯ ದೊಡ್ಡ ಕ್ಲಾಸ್ ರೂಮಿನ ಕರಿಹಲಗೆಯಲ್ಲಿ ಬರೆದದ್ದು ಸ್ಪಷ್ಟವಾಗಿ ಕಾಣಿಸುತ್ತಿಲ್ಲವೆಂಬ ವಿಷಯ ನನ್ನ ಗಮನಕ್ಕೆ ಬಂತು. ಇದೇ ಶಾಲೆಯಲ್ಲಿ SSLC ಮುಗಿಸಿ ಈಗ ಪಾಲಿಟೆಕ್ನಿಕ್ ಓದುತ್ತಿದ್ದ  ಅಣ್ಣನಿಗೂ ಇದೇ ಸಮಸ್ಯೆ ಕಾಣಿಸಿಕೊಂಡ ಅನುಭವ ಇದ್ದುದರಿಂದ ಮನೆಯಲ್ಲಿ ತಿಳಿಸಿದಾಗ ತಡ ಮಾಡದೇ ನನ್ನನ್ನು ಮಂಗಳೂರಿನ ನೇತ್ರ ವೈದ್ಯರಲ್ಲಿಗೆ ಕರೆದುಕೊಂಡು ಹೋದರು. ಪರಿಣಾಮವಾಗಿ  ಶಾರ್ಟ್ ಸೈಟ್ ದೋಷ ಪರಿಹಾರಕ ಕನ್ನಡಕ ನನ್ನ ಮೂಗನ್ನೇರಿ ಮುಂದೆ ಸುಮಾರು 30 ವರ್ಷ ಮುಖದಲ್ಲಿ ರಾರಾಜಿಸಿತು. 

ಆ ವರ್ಷ ಕೆಲವು  ಅನುಭವಿ ಅಧ್ಯಾಪಕರು ತರಬೇತಿಗಾಗಿ ತೆರಳಿದ್ದರಿಂದ  ಪಿ.ಟಿ. ಮಾಸ್ಟ್ರಾಗಿದ್ದ ಕೆ.ವಿ. ಶೆಣೈ ವಿಜ್ಞಾನ, ವೃತ್ತಿ ತರಬೇತಿದಾರ ಸಾಂತಪ್ಪ ಸಾಲಿಯಾನ್ ಗಣಿತ ಕಲಿಸಬೇಕಾಯಿತು. ಸೋಶಲ್ ಸ್ಟಡೀಸಿಗೆ ಜಗತ್ಪಾಲ ಎಂಬ ಹೊಸಬರಿದ್ದರು. ಆರ್.ಡಿ. ಶಾಸ್ತ್ರಿ ಇಂಗ್ಲೀಷ್, ಗೋಪಾಲ ಮಾಸ್ಟ್ರು ಸಂಸ್ಕೃತ, ಸೋಮಯಾಜಿ ಮತ್ತು ಶರ್ಮ ಕನ್ನಡ ತರಗತಿ ತೆಗೆದುಕೊಳ್ಳುತ್ತಿದ್ದರು. ಹಿಂದಿಗೆ ನಾಗರಾಜ ಪೂವಣಿ ಇದ್ದರು. 

ವೃತ್ತಿ ಶಿಕ್ಷಣದ ಭಾಗವಾಗಿ ಪ್ರಿಂಟಿಂಗ್, ವೀವಿಂಗ್ ಅಥವಾ ಸಂಗೀತ  ಆಯ್ದುಕೊಳ್ಳುವ ಅವಕಾಶ ಇತ್ತು.  ಆಗಲೇ ರಾಮಚಂದ್ರ ಅವರು ಇನ್ ಚಾರ್ಜ್ ಆಗಿದ್ದ ಸುಸಜ್ಜಿತ ಮುದ್ರಣಾಲಯ ಶಾಲೆಯಲ್ಲಿತ್ತು. ಹೀಗಾಗಿ  ಎಲ್ಲರ ಮೊದಲ ಆಯ್ಕೆ ಪ್ರಿಂಟಿಂಗ್ ಆಗಿತ್ತು. ಆನಂದ ಆಚಾರ್ ಎಂಬವರು ಕಲಿಸುತ್ತಿದ್ದ ಸಂಗೀತವನ್ನು ಏಕೋ ಹುಡುಗಿಯರು ಮಾತ್ರ ಆಯ್ದು ಕೊಳ್ಳುತ್ತಿದ್ದರು. ಆದರೆ ನಾನು ಕಣ್ಣು ಪರೀಕ್ಷೆಗೆಂದು ಗೈರು ಹಾಜರಾಗಿದ್ದ ಸಂದರ್ಭದಲ್ಲಿ ಈ ಆಯ್ಕೆ ಪ್ರಕ್ರಿಯೆ ನಡೆದು ಹೋಗಿದ್ದರಿಂದ ಯಾರಿಗೂ ಬೇಡದ ವೀವಿಂಗ್ ಮಾತ್ರ ನನ್ನ ಪಾಲಿಗೆ ಉಳಿದಿತ್ತು.  ಶಾಲೆಯಲ್ಲಿ ಮಗ್ಗ ಇದ್ದರೂ ನೇಯ್ಗೆ  ಕ್ಲಾಸ್ ತೆಗೆದುಕೊಳ್ಳಬೇಕಾಗಿದ್ದ ಸಾಂತಪ್ಪ ಸಾಲಿಯಾನರು ಒಂದು ದಿನವೂ ಅದರ ಪ್ರಾತ್ಯಕ್ಷಿಕೆಯನ್ನು ನಮಗೆ ತೋರಿಸಲಿಲ್ಲ. ನೇಯ್ಗೆ  ಕಲಿಸುವುದಿರಲಿ, ಹಾಸು ಎಂದರೇನು ಹೊಕ್ಕು ಎಂದರೇನು ಎಂದೂ ತಿಳಿಸಿಕೊಡಲಿಲ್ಲ! ನಮ್ಮ ಅಣ್ಣ ಇಲ್ಲಿ ಕಲಿಯುತ್ತಿದ್ದಾಗ ಫೋಟೊಗ್ರಫಿ ಕೂಡ ಇತ್ತು.  ಕ್ಯಾಮರಾವನ್ನು ಮನೆಗೆ ಒಯ್ಯಲೂ ಕೊಡುತ್ತಿದ್ದರು.  ಅವರು ಆ ಕ್ಯಾಮರಾ ಬಳಸಿ ತೆಗೆದು, ಸ್ವತಃ ಸಂಸ್ಕರಿಸಿ ಪ್ರಿಂಟ್ ಮಾಡಿದ ಅನೇಕ  ಫೋಟೊಗಳು ಈಗಲೂ ಇವೆ.  ಆದರೆ ನಾನು ಸೇರುವ ಕಾಲಕ್ಕೆ ಫೋಟೊಗ್ರಫಿ ಇರಲಿಲ್ಲ.

ಆರಂಭದಲ್ಲಿ ಶಾಲೆಯ ಪಾಠಗಳು ರುಚಿಸುತ್ತಿರಲಿಲ್ಲ. Social Studies ಅಂತೂ ತಲೆಗೇ ಹೋಗುತ್ತಿರಲಿಲ್ಲ. ಅದರಲ್ಲಿ ಒಂದೆರಡು ಸಲ ಕೆಂಪು ಗೆರೆ ಬಿದ್ದದ್ದೂ ಇದೆ.  ಆದರೆ ಹಿಂದಿ ತುಂಬಾ ಇಷ್ಟವಾಗುತ್ತಿತ್ತು. ಹಿಂದಿ ಕಲಿಸುತ್ತಿದ್ದ ನಾಗರಾಜ ಪೂವಣಿ ಮೆಚ್ಚಿನ ಅಧ್ಯಾಪಕರೆನ್ನಿಸತೊಡಗಿದರು.  ಅಣ್ಣನ ಹಳೆ ವಾಟರ್ ಕಲರ್ ಉಪಯೋಗಿಸಿ ಆಗಲೇ ಕುಂಚದಲ್ಲಿ ಕೈಯಾಡಿಸತೊಡಗಿದ್ದರಿಂದ  ಶ್ರೀನಿವಾಸ್ ರಾವ್ ಸಾರಥ್ಯದ ಡ್ರಾಯಿಂಗ್ ಪೀರಿಯಡ್ ಕೂಡ ಆಕರ್ಷಕವೆನ್ನಿಸುತ್ತಿತ್ತು. ಕನ್ನಡದಲ್ಲೇ ಹೆಚ್ಚಿನ ಉತ್ತರ ಬರೆಯುವ ಸಂಸ್ಕೃತದಲ್ಲಿ ಉತ್ತಮ ಅಂಕಗಳು ದೊರೆಯುತ್ತಿದ್ದವು. A ಮತ್ತು  B ವಿಭಾಗದಿಂದ ಪೂರ್ಣ ಸಂಸ್ಕೃತ ಆಯ್ದುಕೊಂಡವರು ಒಂದೆಡೆ ಸೇರಬೇಕಾಗಿದ್ದ ಸಂಸ್ಕೃತ ಕ್ಲಾಸ್ ಸೂಕ್ತ ಸ್ಥಳಾವಕಾಶದ ಕೊರತೆ ಇದ್ದುದರಿಂದ   ವಾಚನಾಲಯದಲ್ಲಿ ನಡೆಯುತ್ತಿತ್ತು.  ಹೀಗಾಗಿ  ಸಂಸ್ಕೃತ ಶಿಕ್ಷಣಕ್ಕೆ ಕರಿಹಲಗೆಯ ಸೌಲಭ್ಯವೇ ಇರಲಿಲ್ಲ! ಬೇಸಗೆಯಲ್ಲಿ ಗಾಳಿಮರಗಳ ಅಡಿಯಲ್ಲಿ ಸಂಸ್ಕೃತದ ಓಪನ್ ಏರ್  ಕ್ಲಾಸ್ ನಡೆದದ್ದೂ ಇದೆ.

ಫಿಸಿಕಲ್ ಟ್ರೈನಿಂಗ್ ಎಂಬ ಪೀರಿಯಡ್ ನಮಗೆ ಹೊಸ ಅನುಭವವಾಗಿತ್ತು.  ಮೊದಲು ಕೆಲವು ದಿನ ಕೆ.ವರದರಾಜ ಶೆಣೈ ಪಿ.ಟಿ. ಮಾಸ್ಟರಾಗಿದ್ದರು. ಇವರು ಮಾಳಿಗೆ ಡಾಕ್ಟ್ರು ಎಂದೇ ಪ್ರಸಿದ್ಧರಾಗಿದ್ದ ಕೆ. ವೆಂಕಟೇಶ ಶೆಣೈ ಅವರ ತಮ್ಮ.  ವನ್, ಟೂ, ಥ್ರೀ, ಫೋರ್, ಫೈವ್,  ಸಿಕ್ಸ್, ಸೆವೆನ್ , ಎಯ್ಟ್, ಎಯ್ಟ್, ಸೆವೆನ್  ....  ಫೋರ್, ಥ್ರೀ, ನೆಕ್ಸ್ಟ್ ಚೇಂಜ್ ಎಂದು  ಡ್ರಿಲ್ ಹೇಳಿ ಕೊಡುವುದಷ್ಟೇ ಅಲ್ಲದೆ ಧಿಮ್ಡೊ ಘೇರಿ ಮೆಂ ಆಯೊ ಪೀಲೊಂ ಪರ್ ಬಾತ್ ಛಾಯೊ ಎಂಬ ರಾಜಸ್ಥಾನಿ ಹಾಡನ್ನು ಅವರು ಕಲಿಸಿ ಕೊಟ್ಟಿದ್ದರು. ನಂತರ ಅವರು ಎನ್.ಸಿ.ಸಿ ಜವಾಬ್ದಾರಿ ವಹಿಸಿಕೊಂಡರು.   ಅಷ್ಟು ಹೊತ್ತಿಗೆ ‘ನಿಮ್ಮನ್ನೆಲ್ಲ ರಿಪೇರಿ ಮಾಡ್ತೇನೆ ಗೊತ್ತಾಯ್ತಲ್ಲ’  ಎಂದು ಆವಾಜ್ ಹಾಕುವ ಪದ್ಮರಾಜ ಶೆಟ್ಟರು ಟ್ರೈನಿಂಗ್ ಮುಗಿಸಿ ಬಂದು  ಪಿ.ಟಿ.  ಇನ್ ಚಾರ್ಜ್ ಆದರು.  ಅವರು ವನ್, ಟೂ, ಥ್ರೀ ಬದಲಿಗೆ ಏಕ್, ದೋ, ತೀನ್, ...  ಬದಲೀ ಕರ್ ಎಂದು ಹಿಂದಿಯಲ್ಲಿ ಡ್ರಿಲ್ ಮಾಡಿಸುತ್ತಿದ್ದರು.   ನೌ ಜವಾನೋ ಭಾರತ್ ಕೀ ತಕದೀರ್ ಬನಾದೋ, ಕೌಮೀ ತಿರಂಗೆ ಝಂಡೆ ಉಂಚೇ ರಹೋ ಜಹಾಂ ಮೆಂ ಮುಂತಾದವು ಅವರು ಕಲಿಸಿದ ಹಾಡುಗಳು. ಒಂದು ಪುಸ್ತಕದಲ್ಲಿ ಆ ಹಾಡುಗಳನ್ನೆಲ್ಲ ಬರೆದು ರಾಷ್ಟ್ರ ನಾಯಕರ ಚಿತ್ರಗಳನ್ನು ಅದರಲ್ಲಿ ಅಂಟಿಸುವ ಪ್ರಾಜೆಕ್ಟ್ ವರ್ಕನ್ನೂ ಅವರಾಗಲೇ ನಮಗೆ ಪರಿಚಯಿಸಿದ್ದರು. ಇದಕ್ಕೆ ಬೇಕಾದ ಚಿತ್ರಗಳು ಗೋಪಾಲ ಮಾಸ್ಟ್ರ ಅಂಗಡಿಯಲ್ಲಿ ಸಿಗುತ್ತಿದ್ದವು.

ಕೆ.ವಿ. ಶೆಣೈ ಅವರು ಕಲಿಸಿದ ಧಿಮ್ಡೊ ಘೇರಿ ಮೆಂ ಆಯೊ.


ಆ ವರ್ಷ ಆಟದ ಬಯಲನ್ನು ವಿಸ್ತರಿಸುವ ಕಾರ್ಯವೂ  ಆರಂಭವಾಗಿತ್ತು. ಜೆ.ಸಿ.ಬಿ, ಹಿಟಾಚಿಯಂತಹ ದೈತ್ಯ ಯಂತ್ರಗಳು  ಆಗ ಇರಲಿಲ್ಲ. ಹೀಗಾಗಿ ಪಿ. ಟಿ. ಪೀರಿಯಡ್ಡಿನಲ್ಲಿ ವಿದ್ಯಾರ್ಥಿಗಳಿಂದ ಶ್ರಮದಾನ ಮಾಡಿಸುತ್ತಿದ್ದರು. ಹಿರಿಯ ವಿದ್ಯಾರ್ಥಿಗಳು ಹಾರೆ ಪಿಕ್ಕಾಸು ಹಿಡಿದು ಅಗೆದ ಮಣ್ಣನ್ನು ಬುಟ್ಟಿಯಲ್ಲಿ ತುಂಬಿಸುತ್ತಿದ್ದರು. ಕಿರಿಯರಾದ ನಾವಿಬ್ಬಿಬ್ಬರು ಸೇರಿ ಬುಟ್ಟಿಗಳನ್ನು ಹೊತ್ತೊಯ್ದು ಮಣ್ಣನ್ನು ಹರವುತ್ತಿದ್ದೆವು. ಅಂತಹ ಕೆಲಸ ಮಾಡಿ ಅಭ್ಯಾಸ ಇಲ್ಲದ್ದರಿಂದ ಕೈಗೆ ಬೊಬ್ಬೆಗಳೆದ್ದಿದ್ದವು. 

ಶಾಲೆಯಿಂದ ಸಿದ್ಧವನಕ್ಕೆ ಹೋಗುವಾಗ ಸಮೀಪದ ಇಂದ್ರರ ಗೂಡಂಗಡಿಯಿಂದ ಅಕ್ರೋಟು, ಚಿಕ್ಕಿ ಮುಂತಾದವುಗಳನ್ನು ಕೊಳ್ಳಲು ಸಾಧ್ಯವಾಗುತ್ತಿದ್ದುದು ಇದ್ದುದರಲ್ಲೇ ಸ್ವಲ್ಪ ಸಮಾಧಾನ ನೀಡುತ್ತಿತ್ತು.  ಸಂಜೆ ಹೊತ್ತು ಉಜಿರೆ ಪೇಟೆಗೆ ಹೋಗಿ ಬಸ್ಸುಗಳ ಅಬ್ಬರ ನೋಡುವ ಅವಕಾಶ ಸಿಗುತ್ತಿತ್ತು.   ಆದರೂ ಮನೆಯ ಸೆಳೆತ ಜಾಸ್ತಿಯಾಗಿ ಯಾವಾಗ ಶನಿವಾರ ಬರುವುದೋ ಎಂದು ಕಾಯುವಂತಾಗುತ್ತಿತ್ತು. 

ಹೀಗೆ ದಿನಗಳು ಸಾಗುತ್ತಿದ್ದವು.  ಆದರೆ  ನನ್ನ ಮನಸ್ಸು ಸಿದ್ಧವನವನ್ನು ಒಪ್ಪಿಕೊಂಡಿರಲೇ ಇಲ್ಲ.  ಹಾಸ್ಟೆಲಿಗೆ ದಾಖಲಾಗಲೆಂದು  ಹೊರಟು ಕೊನೆ ಕ್ಷಣದಲ್ಲಿ ಸಿದ್ಧವನ ಸೇರುವಂತಾದದ್ದು ಮನಸ್ಸನ್ನು ಕೊರೆಯುತ್ತಿತ್ತು.  ಭಾನುವಾರಗಳಂದು ಮನೆಗೆ ಬಂದಾಗ ಸಿದ್ಧವನದಲ್ಲಿ ಇಲ್ಲದ ತೊಂದರೆಗಳನ್ನೆಲ್ಲ ಕಲ್ಪಿಸಿ ಬಣ್ಣಿಸುತ್ತಾ ನಾನು ಅಲ್ಲಿರುವುದಿಲ್ಲ ಎಂದು ರಂಪ ಮಾಡತೊಡಗಿದೆ.  ಸೋಮವಾರ ಬೆಳಗ್ಗೆ ಹೊರಡುವಾಗಲಂತೂ ಇದು ತಾರಕಕ್ಕೇರುತ್ತಿತ್ತು.  ಆದರೆ ಇದರಿಂದ ಯಾವ ಪರಿಣಾಮವೂ ಉಂಟಾಗಲಿಲ್ಲ. ಹಾಗೆಯೇ ಸುಮಾರು ಎರಡು ತಿಂಗಳುಗಳು ಕಳೆದರೂ ನನ್ನ ಮನಸ್ಸು ಸಿದ್ಧವನವನ್ನು ಒಪ್ಪಿಕೊಳ್ಳಲೇ ಇಲ್ಲ. ಶಾಲೆಯಲ್ಲಿ ಪಾಠಗಳೂ ರುಚಿಸುತ್ತಿರಲಿಲ್ಲ.  ಕೊನೆಗೊಂದು ವಾರಮಧ್ಯದ  ದಿನ ಬೆಳಗ್ಗೆ  ಯಾರಲ್ಲೂ ಹೇಳದೆ ಕೇಳದೆ ಸಿದ್ಧವನದಿಂದ  ಮನೆಗೆ ಹೊರಟೆ. ಮುಂಡಾಜೆಯಲ್ಲಿ  ಬಸ್ಸಿಳಿದು ಮನೆಗೆ ನಡೆದುಕೊಂಡು ಹೋಗುತ್ತಿರುವಾಗ ಉಜಿರೆಗೆಂದು ಹೊರಟಿದ್ದ ನಮ್ಮ ಮೂರನೇ ಅಣ್ಣ ಎದುರಿನಿಂದ ಬರುತ್ತಿರುವುದು ಕಂಡಿತು. ನನ್ನನ್ನು ಕಂಡು ಆಶ್ಚರ್ಯ ಚಕಿತರಾದ ಅವರು  ಕಾರಣ ಕೇಳಿದಾಗ   ‘ಕಣ್ಣ ಮುಂದೆ ಚುಕ್ಕಿಗಳು ಕಾಣಿಸುತ್ತವೆ’ ಎಂದು ನಾನು ಹೇಳಿದ್ದು ಸುಳ್ಳೆಂದು ಅವರಿಗೆ ಗೊತ್ತಾಗಿ ‘ನಾನು ನಿನ್ನನ್ನು ಹಾಸ್ಟೆಲಿಗೆ ಸೇರಿಸುತ್ತೇನೆ’ ಎಂದು ಹೇಳಿ ನನ್ನನ್ನು ಕರಕೊಂಡು ಹೈಸ್ಕೂಲಿನ ಹೆಡ್ ಮಾಸ್ಟರ್ ಆರ್.ಎನ್. ಭಿಡೆಯವರ ಮನೆಗೆ ಹೋದರು.  ಅವರಿಗೆ ವಿಷಯವನ್ನೆಲ್ಲ ವಿವರಿಸಿದಾಗ ‘ಅದಕ್ಕೇಕೆ ಚಿಂತೆ.  ಅವನನ್ನು ಹಾಸ್ಟೆಲಿಗೆ ಸೇರಿಸುವಾ’ ಎಂದು ಹೇಳಿ  ಸಿದ್ಧವನದ ಮ್ಯಾನೇಜರ್ ಮಾರ್ಪಳ್ಳಿ ಸುಬ್ರಾಯರಿಗೆ ಮತ್ತು ಹಾಸ್ಟೆಲಿನ  ವಾರ್ಡನ್ ನಾಗಪ್ಪಯ್ಯ ಅವರಿಗೆ ಕಾಗದ ಬರೆದು ಕೊಟ್ಟರು.  ಈ ರೀತಿ ಆ ದಿನ ಸುಲಭವಾಗಿ ಸಿದ್ಧವನದಿಂದ ಹಾಸ್ಟೆಲಿಗೆ ನನ್ನ ವಾಸ್ತವ್ಯ ಬದಲಾಯಿತು.



ಚಿತ್ರದಲ್ಲಿ ಕಾಣುತ್ತಿರುವ ಕಟ್ಟಡ ಆಗ ಹಾಸ್ಟೆಲ್ ಆಗಿತ್ತು.  ಹಾಸ್ಟೆಲಿನಲ್ಲಿ ನಮ್ಮ ಮನೆ ಪಕ್ಕದ ಒಂದಿಬ್ಬರು ಹುಡುಗರು ಆಗಲೇ ಇದ್ದರು. ಪರಿಚಯದ ಇತರ ಸೀನಿಯರ್ ಹುಡುಗರೂ ಇದ್ದರು.  ಹೀಗಾಗಿ ಅಲ್ಲಿಗೆ ಬೇಗನೆ ಹೊಂದಿಕೊಂಡೆ.  ಅಲ್ಲಿ ಮಲಗಲು  ಬೆಂಚುಗಳನ್ನು ಜೋಡಿಸಿದ ಮಂಚದ ವ್ಯವಸ್ಥೆ ಇತ್ತು.  ಬೆಳಗ್ಗೆ 6 ಗಂಟೆಗೆ ಎದ್ದರೆ ಸಾಕಾಗುತ್ತಿತ್ತು.  ಸಿದ್ಧವನದಲ್ಲಿದ್ದಾಗ ಸಾರ್ವತ್ರಿಕವಾಗಿದ್ದ ಲಂಗೋಟಿ ಸ್ನಾನಕ್ಕೆ ಇಲ್ಲಿ ತಿಲಾಂಜಲಿ ಇತ್ತು ನಾನೂ ಇತರ ಹುಡುಗರಂತೆ ಪಟ್ಟಾಪಟ್ಟಿ ಬಟ್ಟೆಯ  ಅಂಡರ್ ವೇರ್ ಹೊಲಿಸಿಕೊಂಡೆ.  ಮೂರು ದೊಡ್ಡ ಗುಡಾಣಗಳನ್ನು ಹೊಂದಿದ್ದ ಉದ್ದನೆಯ ನೀರೊಲೆಯಲ್ಲಿ ಗಾಳಿ ಮರದ ಒಣ ರೆಂಬೆಗಳನ್ನುರಿಸಿ ಸ್ನಾನಕ್ಕೆ ನೀರು ಕಾಯಿಸುವ ವ್ಯವಸ್ಥೆ ಇದ್ದರೂ ಒಂದೆರಡು ತಿಂಗಳಲ್ಲಿ ಅದೇಕೋ ನಿಂತು ಹೋಯಿತು.  ಆ ಮೇಲೆ  ಬಕೆಟಲ್ಲಿ ನೀರು ಸೇದಿ ಬಾವಿಕಟ್ಟೆಯಲ್ಲೇ ತಣ್ಣೀರು ಸ್ನಾನ ಮಾಡುತ್ತಿದ್ದುದು. ಕೆಲವೇ ದಿನಗಳಲ್ಲಿ ಕ್ರಾಪ್ ಜತೆ ಸಹಬಾಳ್ವೆ ನಡೆಸಿಕೊಂಡು ಬಂದಿದ್ದ ಜುಟ್ಟಿಗೂ ಸಲೂನಿನಲ್ಲಿ ಕತ್ತರಿ ಬಿತ್ತು.  

ಈ ಜುಟ್ಟಿನ ಕಥೆಯನ್ನೂ ಹೇಳಲೇ ಬೇಕು.  ನಮ್ಮದು ಕಟ್ಟಾ ಸಂಪ್ರದಾಯಬದ್ಧ ಕುಟುಂಬವಾಗಿದ್ದು ಗಂಡುಮಕ್ಕಳು ಜುಟ್ಟು ಬಿಟ್ಟು ಟೊಪ್ಪಿ ಧರಿಸುವುದು ಕಡ್ಡಾಯವಾಗಿತ್ತು.  ನಾನೂ ಸುಮಾರು ಮೂರನೆಯ ಕ್ಲಾಸ್ ವರೆಗೆ ಟೊಪ್ಪಿ ಧರಿಸಿಯೇ ಶಾಲೆಗೆ ಹೋದದ್ದು ನೆನಪಿದೆ.  ಅಷ್ಟರಲ್ಲಿ ಬೀಸತೊಡಗಿದ್ದ ಆಧುನಿಕತೆಯ ಗಾಳಿ  ನಮ್ಮಲ್ಲೂ ಹೊಕ್ಕು  ಸಣ್ಣ ಕ್ರಾಪ್ ಬೆಳೆಸಲು ಅನುಮತಿ ಸಿಕ್ಕಿತ್ತು.  ಆದರೆ ಜೊತೆಗೆ ಪುಟ್ಟದಾದರೂ ಜುಟ್ಟು ಬೇಕೇ ಬೇಕಿತ್ತು. ಆ ಕಾಲದಲ್ಲಿ ಸಾಮಾನ್ಯವಾಗಿ  4-5ನೇ ಕ್ಲಾಸಿನ ಹುಡುಗರಿಗೆ ಉಪನಯನ  ಮಾಡುತ್ತಿದ್ದರೂ ಗುರುಬಲವಿಲ್ಲದ್ದರಿಂದ ನನ್ನ ಉಪನಯನ 7ನೇ ಕ್ಲಾಸ್ ಇರುವಾಗ ಆಯಿತು.  ಆ ಸಂದರ್ಭದಲ್ಲಿ ತಲೆಗೆ ಮುಂಡನ ಮಾಡಿ ಶಿಖೆ ಮಾತ್ರ ಉಳಿಸಬೇಕಾಗಿತ್ತು. ಆದರೆ ಶಾಲೆಯ ಸಹಪಾಠಿಗಳು ಕೀಟಲೆ ಮಾಡಬಹುದೆಂಬ ಭಯದಿಂದ ಹಿರಿಯಣ್ಣನ ಒತ್ತಾಯವಿದ್ದರೂ ಈ ಬದಲಾವಣೆಗೆ ಒಪ್ಪದೆ ಶಿಖೆಯ ಜೊತೆಗೆ  ಸಣ್ಣ ಕ್ರಾಪ್ ಉಳಿಸಿಕೊಳ್ಳುವಲ್ಲಿ ಸಫಲನಾಗಿದ್ದೆ. ನನ್ನ ನಂತರ ಜನಿಸಿದ ಅಣ್ಣಂದಿರ ಮಕ್ಕಳ ಕಾಲಕ್ಕೆ ಜುಟ್ಟಿನ ಸಂಪ್ರದಾಯ ನಿಂತು ಹೋಗಿತ್ತು. ಆದರೆ ಈಗ ಯುವಜನರು ಜುಟ್ಟು ಬಿಟ್ಟುಕೊಳ್ಳುವುದು ಒಂದು ಫ್ಯಾಶನ್ ಆಗಿದೆ.

ಹಾಸ್ಟೆಲಿನಲ್ಲಿ  ಬೆಳಗಿನ ಕುಚ್ಚಲಕ್ಕಿ ಗಂಜಿ ಮತ್ತು ಶುಂಠಿ ಹಾಕಿದ ಕಾಯಿ ಚಟ್ನಿ ಬಲು ಪಸಂದಾಗಿರುತ್ತಿತ್ತು. ಗಂಜಿ ಉಣ್ಣುವುದಕ್ಕಿಂತ ಮೊದಲು ಸಾಲಾಗಿ ನಿಂತು ‘ಎಲ್ಲಿ ಮನ ಕಳುಕಿರದೊ ಎಲ್ಲಿ ತಲೆ ಬಾಗಿರದೊ’ ಎಂಬ ಪ್ರಾರ್ಥನೆ ಹಾಡಲಿಕ್ಕಿತ್ತು.  ರಾತ್ರಿಯ ಪ್ರಾರ್ಥನೆ ‘ವೈಷ್ಣವ ಜನತೊ ತೇಣೆ ಕಹಿಯೆರೆ’    ಮಧ್ಯಾಹ್ನ ಮತ್ತು ರಾತ್ರಿ ಊಟಕ್ಕೆ ಸಾರು, ಸಾಂಬಾರು ಮತ್ತು ಮಜ್ಜಿಗೆ. ಊಟ ಆರಂಭಿಸುವ ಮುನ್ನ ‘ಊರ್ವೀ ಸರ್ವ ಜನೇಶ್ವರೀ ಭಗವತೀ ಮಾತಾನ್ನ ಪೂರ್ಣೇಶ್ವರೀ’ ಎಂಬ ಸ್ತೋತ್ರ ಹೇಳಲಿಕ್ಕಿತ್ತು. ಮಧ್ಯಾಹ್ನ ಊಟಕ್ಕೆ ಕೆಲವು ಅಧ್ಯಾಪಕರೂ ಹಾಸ್ಟೆಲಿಗೆ ಬರುತ್ತಿದ್ದರು.

ನಮ್ಮ ಮನೆಯಲ್ಲಿ ಅಂತಹ ಪದ್ಧತಿ ಇಲ್ಲದಿದ್ದರೂ ಇತರ ಹುಡುಗರಂತೆ ಊಟದ ಬಟ್ಟಲಿನ ಪಕ್ಕದಲ್ಲಿ  ಚಟ್ನಿ, ಪಲ್ಯ, ಸಾಂಬಾರು ಇತ್ಯಾದಿಗಳನ್ನು ಹಾಕಿಸಿಕೊಳ್ಳಲು ಇನ್ನೊಂದು ಚಿಕ್ಕ ತಟ್ಟೆಯನ್ನು ನಾನೂ ಇಟ್ಟುಕೊಳ್ಳುತ್ತಿದ್ದೆ.  ಗಂಜಿಯ ಜೊತೆ ಕಲ್ಲುಪ್ಪು ಬಡಿಸುತ್ತಿದ್ದುದರಿಂದ ಅದನ್ನು ಒತ್ತಿ ಹುಡಿ ಮಾಡಲೂ ಆ ಚಿಕ್ಕ ತಟ್ಟೆ ಉಪಯೋಗವಾಗುತ್ತಿತ್ತು.
  
ಸಂಜೆ ಶಾಲೆಯಿಂದ ಬಂದೊಡನೆ ಕಡ್ಲೆ ಉಸ್ಲಿ ಅಥವಾ ಅವಲಕ್ಕಿ ಉಪ್ಕರಿ ಮತ್ತು ಗರಂ ಕಷಾಯ ಇರುತ್ತಿತ್ತು. ವಾರ್ಡನ್ ನಾಗಪ್ಪಯ್ಯ ಅವರು ದೈವ ಭೀರು ಆಗಿದ್ದು ಚಂದದ ಭಜನೆಗಳನ್ನೂ ಹಾಡಬಲ್ಲವರಾಗಿದ್ದುದರಿಂದ ಪ್ರತೀ ಶುಕ್ರವಾರ ಹಾಸ್ಟೆಲಿನಲ್ಲಿ ಭಜನೆ ಇರುತ್ತಿತ್ತು. ವಿದ್ಯಾರ್ಥಿಗಳಿಗೂ ಹಾಡುವ ಅವಕಾಶ ಇತ್ತು. ಶ್ರೀ ರಾಮ ಚಂದಿರನೆ ಶ್ರೀ ಲೋಲ ಸುಂದರನೆ ಶ್ರೀಮನ್ನಾರಾಯಣನೆ ರಾಂ ರಾಂ ರಾಂ, ಬಾ ಬಾರೊ ಶಂಕರಾ ಗುಡಿಯಲ್ಲಿ ತೋರೊ ನಿನ್ನ ರೂಪವನು ಎದುರಿನಲ್ಲಿ ಮುಂತಾದ ಭಜನೆಗಳನ್ನು ನಾವು ಹಾಡುತ್ತಿದ್ದೆವು.   ಕೊನೆಯಲ್ಲಿ ಅವರು  ಹಾಡುತ್ತಿದ್ದ ಸರಸ್ವತಿಗೆ ಮಂಗಳಂ ವರಬ್ರಹ್ಮನ ಸತಿಗೆ ಜಯ ಮಂಗಳಂ ಈಗಲೂ ನನಗೆ ನೆನಪಿದೆ. ಸಂಪ್ರದಾಯದಂತೆ ನೈವೇದ್ಯಕ್ಕೆ  ಅವಲಕ್ಕಿ ಪಂಚಕಜ್ಜಾಯವೂ ಇರುತ್ತಿತ್ತು.

ವಾರ್ಡನ್ ನಾಗಪ್ಪಯ್ಯ ಹಾಸ್ಟೆಲ್ ಊಟ ಸೇವಿಸುತ್ತಿರಲಿಲ್ಲ.  ತಮ್ಮ ರೂಮಿನಲ್ಲಿ ಸ್ಟವ್ ಇಟ್ಟುಕೊಂಡು ಸ್ವಂತ ಅಡುಗೆ ಮಾಡಿಕೊಳ್ಳುತ್ತಿದ್ದರು. ಸುಮಾರು ಎರಡು ವಾರಕ್ಕೊಮ್ಮೆ ವಿಟ್ಲ ಸಮೀಪದ ತಮ್ಮ ಊರಿಗೆ ಹೋಗುವಾಗ ಮದ್ದಳೆಯಾಕಾರದ ತುಂಬಿದ ದೊಡ್ಡ ಚೀಲವೊಂದನ್ನು ಹೊತ್ತೊಯ್ಯುತ್ತಿದ್ದರು.  ಅದರಲ್ಲಿರುವುದೇನು ಎಂಬ ಕುತೂಹಲ ಹುಡುಗರಲ್ಲಿರುತ್ತಿತ್ತು.  ಹಾಸ್ಟೆಲಿನಿಂದ ದಿನಸಿಗಳನ್ನು ಕದ್ದು ಸಾಗಿಸುತ್ತಾರೆ ಎಂಬ ಗುಮಾನಿಯೂ ಕೆಲವರಲ್ಲಿತ್ತು. ಆದರೆ ಸಾತ್ವಿಕ ಗುಣದವರಾದ ಅವರು ಇಂಥ ಕೆಲಸ ಮಾಡಿರಲಾರರು ಎಂದು ನನ್ನ ಅನಿಸಿಕೆ.  ಹಿಂತಿರುವಾಗಲೂ ಚೀಲ ಅಷ್ಟೇ ದೊಡ್ಡದಾಗಿರುತ್ತಿತ್ತು.

ಆಗ ಹಾಸ್ಟೆಲಿನಲ್ಲಿ ಉಜಿರೆಗೆ ಸಮೀಪದ ಕೋಡಿಬೈಲಿನ ಕೃಷ್ಣ  ಕಾರಂತರು ಅಡುಗೆಗೆ ಇದ್ದದ್ದು. ಕೆಲವು ತಿಂಗಳುಗಳ ನಂತರ ಅವರು ಕೊಯಮತ್ತೂರಿಗೆ ತೆರಳಿದರು.  ಆಗ ಆ ಸ್ಥಾನ ತುಂಬಿದವರು ಅವರ ಅಣ್ಣ ವೆಂಕಟರಮಣ ಕಾರಂತರು. ಇವರು ನಮ್ಮೂರಲ್ಲಿ ಸಮಾರಂಭಗಳಿಗೆ ಅಡುಗೆ ಮಾಡಲು ಬರುತ್ತಿದ್ದುದರಿಂದ ನಮಗೆ ಚಿರ ಪರಿಚಿತರಾಗಿದ್ದವರು.  ಸದಭಿರುಚಿಯ ತಮಾಷೆ ಮಾತುಗಳನ್ನು  ಆಡುತ್ತಿದ್ದ ಅವರು ನಮ್ಮ ಚಿತ್ಪಾವನಿ ಭಾಷೆಯಲ್ಲೂ ಸಂಭಾಷಿಸಬಲ್ಲವರಾಗಿದ್ದರು. 



ಆ ವರ್ಷ ಬೆಳ್ತಂಗಡಿಯ ಭಾರತ್ ಟಾಕೀಸಿಗೆ ಸಂತ ತುಕಾರಾಂ ಚಿತ್ರ ಬಂತು. ಮರುಳ ಸಿದ್ದೇಶ್ವರ ಎಂಬ ಟೂರಿಂಗ್ ಟೆಂಟನ್ನು ಬೆಳ್ತಂಗಡಿಯ ಭಾರತ್ ಕೋಲ್ಡ್ ಹೌಸಿನ  ಸೋಡಾ ನಾರಾಯಣರು ಖರೀದಿಸಿ ಸೋಗೆ ಮಾಡಿನ ಭಾರತ್ ಟಾಕೀಸ್ ಮಾಡಿದ್ದಾಗಿತ್ತು.  ನಮಗೆಲ್ಲ ಸಂತ ತುಕಾರಾಂ ಚಿತ್ರ ವೀಕ್ಷಿಸಲೇ ಬೇಕೆಂಬ ಉತ್ಕಟೇಚ್ಛೆ ಉಂಟಾಯಿತು.  ವಾರ್ಡನ್ ನಾಗಪ್ಪಯ್ಯ ಅವರನ್ನು ಭೇಟಿ ಮಾಡಿ ಗೊತ್ತಿರುವ ವಿಶೇಷಣಗಳನ್ನೆಲ್ಲ ಬಳಸಿ ಆ ಚಿತ್ರದ ಪ್ರಶಂಸೆ ಮಾಡಿ ಅವರಿಂದ ಚಿತ್ರ ವೀಕ್ಷಿಸಲು ವಿಶೇಷ ಅನುಮತಿ ಪಡೆದೆವು.  ಆ ಒಂದು ಸಲದ ಅನುಮತಿಯನ್ನು ಸೀಸನ್ ಟಿಕೆಟ್ ಆಗಿ ಪರಿವರ್ತಿಸಿಕೊಂಡು ಆ ಮೇಲೆ ನಾವು ಅನೇಕ ಚಿತ್ರಗಳನ್ನು ನೋಡಿದೆವು. ಆದರೆ ಕಳ್ಳತನದಲ್ಲಿ! ರಾತ್ರಿ ಊಟವಾದೊಡನೆ ಸದ್ದಿಲ್ಲದೆ ಹೊರಬೀಳುತ್ತಿದ್ದ ನಾವು ಬಸ್ಸಲ್ಲಿ ಬೆಳ್ತಂಗಡಿ ತಲುಪಿ ಎರಡನೇ ದೇಖಾವೆ ನೋಡಿ ಸಿಕ್ಕಿದ ವಾಹನದಲ್ಲಿ ಉಜಿರೆಗೆ ಮರಳಿ ಸರಳು ಕೀಳಲು ಬರುತ್ತಿದ್ದ ಕಿಟಿಕಿಯೊಂದರ ಮೂಲಕ ರೂಮಿನೊಳಗೆ ಸೇರಿ ಏನೂ ಗೊತ್ತಿಲ್ಲದವರಂತೆ ಮಲಗಿ ಬಿಡುತ್ತಿದ್ದೆವು. ಜಂಗ್ಲಿ, ಪೂರ್ಣಿಮಾ, ಮಹಾಸತಿ ಅನಸೂಯ, ಸುಬ್ಬಾಶಾಸ್ತ್ರಿ, ಮಂಗಳ ಮುಹೂರ್ತ, ತೂಗುದೀಪ ಮುಂತಾದವು ನಾವು ಈ ರೀತಿ ನೋಡಿದ ಸಿನಿಮಾಗಳು.

ಬಿನಾಕಾ, ಕೆಂಪು ಬಣ್ಣದ ಪಟ್ಟಿಗಳ ಸಿಗ್ನಲ್, ಕೋಲ್ಗೇಟ್ ಮುಂತಾದ ವಿವಿಧ ಪೇಸ್ಟುಗಳನ್ನು ನಾನು ಕೊಳ್ಳುತ್ತಿದ್ದೆ. ತಲೆಗೆ ಹಚ್ಚಲು ಮಲ್ಲಿಗೆ ಪರಿಮಳದ ಟಾಟಾ ಕೋಕೊನಟ್ ಆಯಿಲ್,  ಕೆಂಪು ಬಣ್ಣದ ಸ್ವಸ್ತಿಕ್ ಕ್ಯಾಸ್ಟರ್ ಆಯಿಲ್ ಅಥವಾ ಸುವಾಸನೆಯ ವ್ಯಾಸಲೀನುಗಳನ್ನು ಬಳಸುತ್ತಿದ್ದೆ. ಒಂದೆರಡು ಸಲ ರೇಡಿಯೋ ಸಿಲೋನಿನ ಲೋಮಾ ಟೈಮ್ ಖ್ಯಾತಿಯ ಲೋಮಾ ಪೊಮೇಡನ್ನೂ ಕೊಂಡದ್ದುಂಟು.  ನೋವಾ ಹೆಸರಿನ ವ್ಯಾಸಲೀನ್ ಆಗ ಪ್ರಸಿದ್ಧವಾಗಿತ್ತು. ಎಲ್ಲ ಹುಡುಗರಂತೆ ನಾನೂ ಮುಖಕ್ಕೆ ಅಫ್ಘಾನ್ ಸ್ನೋ ಬಳಿದು ಪಾಂಡ್ಸ್ ಪೌಡರ್ ಲೇಪಿಸುತ್ತಿದ್ದೆ. ಸ್ನಾನಕ್ಕೆ ಲಕ್ಸ್, ರೆಕ್ಸೋನಾ, ಚಂದ್ರಿಕಾ ಮುಂತಾದವು ಮತ್ತು ಬಟ್ಟೆ ಒಗೆಯಲು ಸನ್ ಲೈಟ್ ನನ್ನ ನೆಚ್ಚಿನ ಸಾಬೂನುಗಳಾಗಿದ್ದವು.  ಇವೆಲ್ಲವನ್ನೂ ಗೋಪಾಲ ಮಾಸ್ಟ್ರ ಅಂಗಡಿಯ ಲೆಕ್ಕ ಪುಸ್ತಕದಲ್ಲಿ ಬರೆಸಿ ಖರೀದಿಸುವುದಕ್ಕೆ ಮನೆಯವರ ಆಕ್ಷೇಪ ಇರಲಿಲ್ಲ. ಚಾಕಲೇಟು, ಬಿಸ್ಕೆಟುಗಳನ್ನೇನಾದರೂ ಕೊಂಡರೆ ಅದೇನೆಂದು ಗೊತ್ತಾಗದ ರೀತಿ ಮೋಡಿ ಅಕ್ಷರದಲ್ಲಿ ಬರೆಯುತ್ತಿದ್ದರು! ಗೋಪಾಲ ಮಾಸ್ಟ್ರಾಗಲಿ ಅವರ ತಮ್ಮ ಗೋವಿಂದ ಆಗಲಿ ಯಾವಾಗ ದುಡ್ಡು ಕೊಡುತ್ತಿ ಎಂದು ಒಮ್ಮೆಯೂ ಕೇಳಿದ್ದಿಲ್ಲ.  ಅಣ್ಣ ಎಂದಾದರೂ ಉಜಿರೆಗೆ ಬಂದವರು ಒಂದಷ್ಟು ದುಡ್ಡು ತುಂಬುತ್ತಿದ್ದರು.

ಆ ಸಲದ ದಸರಾ  ರಜೆಯಲ್ಲಿ ಪ್ರೈಮರಿ ವಿಭಾಗದ ಅಧ್ಯಾಪಕರಾಗಿದ್ದ ರಘುನಾಥ ರೈ ಅವರ ನೇತೃತ್ವದಲ್ಲಿ  ವೇಣೂರು, ಕಾರ್ಕಳ, ಉಡುಪಿ, ಮಲ್ಪೆ, ಮಂಗಳೂರು ಪ್ರವಾಸದ ಏರ್ಪಾಡಾಯಿತು.  ಪ್ರವಾಸಕ್ಕೆ ಹೋಗಲು ನನಗೂ ಮನೆಯಲ್ಲಿ ಅನುಮತಿ ದೊರಕಿತು.  ಬಂಗಾಡಿ ಸಮೀಪದ ಆಲಂತಡ್ಕದಿಂದ ದಿನ ನಿತ್ಯ ಬೆಳ್ತಂಗಡಿಗೆ ಸರ್ವಿಸ್ ನಡೆಸುತ್ತಿದ್ದ ವ್ಯಾನನ್ನು ಪ್ರವಾಸಕ್ಕಾಗಿ ಗೊತ್ತುಪಡಿಸಲಾಗಿತ್ತು.  ಭೂಮಿಗಿಂತ ಎತ್ತರದಲ್ಲಿರುವ ಸಮುದ್ರವನ್ನು ಮೊದಲ ಬಾರಿ ಮಲ್ಪೆಯಲ್ಲಿ ನೋಡಿ ಅಚ್ಚರಿ ಹೊಂದಿದೆ. ಮಂಗಳೂರಿನ ಹಂಪನಕಟ್ಟೆಯ ಜಯಕೆಫೆ ಲಾಡ್ಜಿನ ದೊಡ್ಡ ಡಾರ್ಮಿಟರಿಯಲ್ಲಿ ಹಾಲ್ಟ್ ಮಾಡಿದೆವೆಂದು ನೆನಪು.  ಜ್ಯೋತಿ ಟಾಕೀಸಿನಲ್ಲಿ ಮುರಿಯದ ಮನೆ ಮತ್ತು ಸೆಂಟ್ರಲ್ ಟಾಕೀಸಿನಲ್ಲಿ ಎರಡು ಇಂಟರ್ವಲ್‌ಗಳ ಸಂಗಂ ಚಿತ್ರಗಳನ್ನು ವೀಕ್ಷಿಸುವ ಅಪೂರ್ವ ಅವಕಾಶ ಆ ಪ್ರವಾಸದಲ್ಲಿ ದೊರಕಿತು. ಅನೇಕ ವರ್ಷಗಳ ನಂತರ ಮಂಗಳೂರು ಆಕಾಶವಾಣಿಯಲ್ಲಿ ಕೆಂಚನ ಕುರ್ಲರಿ ಕಾರ್ಯಕ್ರಮದಿಂದ ಪ್ರಸಿದ್ಧರಾದ ರಮಾನಂದ ರೈ ಈ ರಘುನಾಥ ರೈಗಳ ತಮ್ಮ.

ನಾನು ಆಟೋಟಗಳಲ್ಲಿ ಆಸಕ್ತಿ ತೋರದಿದ್ದರೂ ಉಜಿರೆ ಹೈಸ್ಕೂಲಲ್ಲಿ ಕಬಡ್ಡಿ, ವಾಲಿಬಾಲ್, ಬಾಲ್ ಬ್ಯಾಡ್‌ಮಿಂಟನ್, ಖೋ ಖೋ, ಟೆನ್ನಿಕಾಯ್ಟ್ ಮುಂತಾದ ಕ್ರೀಡೆಗಳಿಗೆ ವಿಶೇಷ ಪ್ರೋತ್ಸಾಹ ಇತ್ತು. ಶಾಲೆಯ ಕಬಡ್ಡಿ ಟೀಮ್ ಶಕ್ತಿಶಾಲಿಯಾಗಿದ್ದು ಬಹುತೇಕ ಅಂತರ್ಶಾಲಾ ಪಂದ್ಯಗಳನ್ನು ಗೆಲ್ಲುತ್ತಿತ್ತು.  ಬೆಳ್ತಂಗಡಿ ಬೋರ್ಡ್ ಹೈಸ್ಕೂಲಿನ ಟೀಮ್ ಹೆಚ್ಚಾಗಿ ಉಜಿರೆಯ ಪ್ರತಿಸ್ಪರ್ಧಿಯಾಗಿರುತ್ತಿತ್ತು.  ಬೆಳ್ತಂಗಡಿಯಲ್ಲಿ  ಕಬಡ್ಡಿ ಪಂದ್ಯ ನಡೆದರೆ ನಾವೆಲ್ಲ ನೋಡಲು ಹೋಗುತ್ತಿದ್ದೆವು.  ಆ ವರ್ಷ ಬೆಳ್ತಂಗಡಿ ಬೋರ್ಡ್ ಹೈಸ್ಕೂಲ್ ಆತಿಥ್ಯದಲ್ಲಿ ನಡೆದ ಜೋನಲ್ ಸ್ಪೋರ್ಟ್ಸ್ ಮೀಟಿನಲ್ಲಿ ಉಜಿರೆಗೇ ಹೆಚ್ಚು ಪದಕಗಳು ಲಭಿಸಿದ್ದವು.   

9ನೇ ತರಗತಿಗೆ ಬರುತ್ತಿದ್ದಂತೆ ಹೈಸ್ಕೂಲ್ ಎಂಬ ಮಣ್ಣಿನಲ್ಲಿ ಬೇರುಗಳು ಗಟ್ಟಿಯಾಗಿ ಇಳಿದು ಮನಸ್ಸಲ್ಲಿ  ಸ್ಥಿರತೆ ಉಂಟಾಯಿತು. ಪೂರ್ವ ಪಶ್ಚಿಮ ಹರಹಿನ ಕಟ್ಟಡದ 4, 5 ಮತ್ತು 6ನೇ ಕೋಣೆಗಳಲ್ಲಿ IX A, ನಮ್ಮ  IX B ಮತ್ತು IX C ತರಗತಿಗಳು ನಡೆದವು.  ವಿಜ್ಞಾನವನ್ನು ಆಯ್ದುಕೊಂಡಿದ್ದವರು ಈ ವರ್ಷದಿಂದ ಸಾಮಾನ್ಯ ವಿಜ್ಞಾನ ಮತ್ತು ಸಾಮಾನ್ಯ  ಗಣಿತಗಳ ಜೊತೆಗೆ ಆಪ್ಷನಲ್  ಭೌತ ಶಾಸ್ತ್ರ, ರಸಾಯನ ಶಾಸ್ತ್ರ  ಮತ್ತು  ಗಣಿತವನ್ನು ಹೆಚ್ಚುವರಿಯಾಗಿ ಕಲಿಯಬೇಕಿತ್ತು. ತರಬೇತಿ ಪಡೆದು ಹಿಂದಿರುಗಿದ್ದ ಶಂಕರನಾರಾಯಣ ರಾವ್ ಭೌತ ಶಾಸ್ತ್ರ ಮತ್ತು ರಸಾಯನ ಶಾಸ್ತ್ರ, ಶಂಕರನಾರಾಯಣ ಭಟ್ ಎಂಬ ಹೊಸಬರು ಗಣಿತ ಹಾಗೂ ಇನ್ನೊಬ್ಬ ಹೊಸಬರಾದ ಲಕ್ಷ್ಮಣ ಶೆಣೈ ಸಾಮಾನ್ಯ ವಿಜ್ಞಾನ ಕಲಿಸುತ್ತಿದ್ದರು.  ಲಕ್ಷ್ಮಣ ಶೆಣೈ ಉತ್ಸಾಹದಿಂದ ಚೆನ್ನಾಗಿ ಪಾಠ ಮಾಡುತ್ತಿದ್ದರೂ ಅವರಿಗೆ ಅಕಾರ, ಹಕಾರ ಉಚ್ಚಾರದ ಸಮಸ್ಯೆ ಇತ್ತು.  ಸಸ್ಯದ ಅಸುರು ಭಾಗದಲ್ಲಿ ಅರಿತ್ತು ಇರುತ್ತದೆ ಎಂದು ಹೇಳುತ್ತಿದ್ದರು. ಸರಿಯೋ ತಪ್ಪೋ,  ಅವರು ಹಾಗೆ ಹೇಳುತ್ತಿದ್ದುದರಿಂದಲೇ ನನಗೆ ಈಗಲೂ ಆ ವಾಕ್ಯ ನೆನಪಿರುವುದು!  ಇಂಗ್ಲಿಷ್ ಕಲಿಸಲು ಮಾರಾರ್ ಎಂಬ ವಯೋವೃದ್ಧ  ಅಧ್ಯಾಪಕರೊಬ್ಬರು  ಹೊಸದಾಗಿ ಬಂದಿದ್ದರು.  ಆದರೆ ಅವರು ಹೆಚ್ಚು ದಿನ  ಮುಂದುವರಿಯಲಿಲ್ಲ.  ಆ ಮೇಲೆ ಆನಂದ ಸಾಲಿಯಾನರು  ಇಂಗ್ಲೀಷಿಗೆ ಬಂದರು. ಶಂಕರನಾರಾಯಣ ರಾಯರು  ನಮ್ಮೂರಿನ ಜನಪ್ರಿಯ ವೈದ್ಯರಾಗಿದ್ದ ಶ್ರೀನಿವಾಸರಾಯರ ಪುತ್ರ.

ಪೂವಣಿಯವರಿಂದಾಗಿ ಹಿಂದಿಯಂತೂ ಹೆಚ್ಚು ಆಪ್ತವಾಗುತ್ತಾ ಹೋಯಿತು. ಒಮ್ಮೆ ಪಠ್ಯ ಪುಸ್ತಕದಲ್ಲಿದ್ದ ಉಠ್ ಜಾಗ್ ಮುಸಾಫಿರ್ ಭೋರ್ ಭಯೀ ಎಂಬ ಕವನವನ್ನು ಕ್ಲಾಸಿನಲ್ಲಿ ಲಾಲ್ ಛಡಿ ಮೈದಾನ್ ಖಡಿ ಧಾಟಿಯಲ್ಲಿ ಹಾಡಿ ಅವರ ಮೆಚ್ಚುಗೆ ಗಳಿಸಿದ್ದೆ.   ಆ ವರ್ಷ ಜರುಗಿದ ವರ್ಧಂತ್ಯುತ್ಸವದಲ್ಲಿ ಅವರ ನಿರ್ದೇಶನದಲ್ಲಿ  ಅಂಧೇರ್ ನಗರಿ ಚೌಪಟ್ ರಾಜಾ ಎಂಬ  ಪಾಠವನ್ನಾಧರಿಸಿದ ನಾಟಕದ ಮುಖ್ಯ ಪಾತ್ರದಲ್ಲಿ ನಟಿಸಿದ್ದೆ. ನಾಟಕವನ್ನು ವೀಕ್ಷಿಸಿದ ಊರಿನ ಗಣ್ಯರೊಬ್ಬರು ನಮಗೆ ವಿಶೇಷ ಬಹುಮಾನವನ್ನೂ ಘೋಷಿಸಿದ್ದರು. ಈ ಹೊತ್ತಿಗೆ ಹೊಸ ತೆರೆದ ರಂಗಮಂದಿರ ಮತ್ತು ಆಫೀಸ್ ಸಂಕೀರ್ಣದ ಕೆಲಸ ಪೂರ್ತಿಯಾಗಿ ಅದರಲ್ಲೇ ವಾರ್ಷಿಕೋತ್ಸವ ನಡೆಯಿತು. ವಾರಾಂತ್ಯ ಮತ್ತು ರಜಾದಿನಗಳಲ್ಲಿ ಮನೆಗೆ ಹೋದಾಗ ನಿರಂತರವಾಗಿ ಆಲಿಸುತ್ತಿದ್ದ ಸಿಲೋನ್ ಮತ್ತು ವಿವಿಧಭಾರತಿ ಹಿಂದಿಯತ್ತ ಒಲವು ಹೆಚ್ಚಾಗುವಲ್ಲಿ ಪ್ರಮುಖ ಪಾತ್ರ ವಹಿಸಿದ್ದವು.  ಹೊಸ ಹಾಡಿನ ಯಾವುದಾದರೊಂದು ಪದ ಅರ್ಥವಾಗದಿದ್ದಾಗ ಅದನ್ನು  ನಾಗರಾಜ ಪೂವಣಿಯವರಲ್ಲಿ ಕೇಳುತ್ತಿದ್ದೆ.  ಅವರು ಸಂತೋಷದಿಂದಲೇ ಅದರ ಅರ್ಥ ಹೇಳುತ್ತಿದ್ದರು. ಕೆಲವೊಮ್ಮೆ ನನ್ನ ಹಿಂದಿ ಹಾಡುಗಳ ಜ್ಞಾನವನ್ನು ಪರೀಕ್ಷೆಯಲ್ಲೂ ಪ್ರಯೋಗಿಸುವುದಿತ್ತು.   ಒಮ್ಮೆ  ಫೂಲಾ ನ ಸಮಾನಾ ಎಂಬುದನ್ನು ಉಪಯೋಗಿಸಿ ವಾಕ್ಯ ರಚಿಸಲಿಕ್ಕಿತ್ತು. ನಾನು ‘ನೀಲ್ ಗಗನ್ ಪರ್ ಉಡತೆ ಬಾದಲ್ ’ ಹಾಡಿನ ಒಂದು ಸಾಲನ್ನು ಕೊಂಚ ಬದಲಾಯಿಸಿ ‘ಕ್ಯಾರಿಯೊ ಮೆಂ ಬಹತಾ ಠಂಡಾ ಠಂಡಾ ಪಾನೀ ದೇಖ್ ಕರ್ ಕಿಸಾನ್ ಫೂಲಾ ನಹೀಂ ಸಮಾತಾ’ ಎಂಬ ವಾಕ್ಯ ರಚಿಸಿದ್ದೆ. 
 
ಪೂವಣಿಯವರು ಕ್ರಿಯೇಟಿವಿಟಿಯನ್ನು ಯಾವಾಗಲೂ ಪ್ರೋತ್ಸಾಹಿಸುತ್ತಿದ್ದರು ಅನ್ನುವುದಕ್ಕೆ ಒಂದು ಉದಾಹರಣೆ ಇದೆ. ಒಮ್ಮೆ ಅವರ ಕ್ಲಾಸಲ್ಲಿ 'ಸಮಾನ್ ಹೋನಾ' ಎಂಬುದನ್ನು ಬಳಸಿ ವಾಕ್ಯ ಮಾಡಲಿಕ್ಕಿತ್ತು. ಎಲ್ಲರಿಗಿಂತ ಮೊದಲು ನಾನು ಕೈ ಎತ್ತಿ 'ಹಮಾರೀ ಕಕ್ಷಾ ಮೆಂ ಲಡಕಿಯಾಂ ಲಡಕೋಂಕೆ ಸಮಾನ್ ನಹೀಂ ಹೈ' ಎಂದು ಹೇಳಿದಾಗ ಹುಡುಗರೆಲ್ಲ ಹೋ ಎಂದು ಸಹಮತ ವ್ಯಕ್ತ ಪಡಿಸಿದ್ದರು! ಚುರುಕುತನ ಮತ್ತು ಪ್ರಶ್ನೆಗಳಿಗೆ ಉತ್ತರ ಹೇಳುವುದರಲ್ಲಿ ಯಾವಾಗಲೂ ಹುಡುಗರೇ ಮೇಲುಗೈ ಸಾಧಿಸುತ್ತಿದ್ದುದರಿಂದ ಇದು ನಿಜವೇ ಆಗಿತ್ತು. ಪೂವಣಿಯವರೂ ಇದನ್ನು ಮೆಚ್ಚಿ ಈ ಪ್ರಸಂಗವನ್ನು ಸಹೋದ್ಯೋಗಿಗಳೊಂದಿಗೆ ಹಂಚಿಕೊಂಡಿದ್ದರು!


ಲಾಲ್ ಛಡಿ ಧಾಟಿಯಲ್ಲಿ ಉಠ್ ಜಾಗ್ ಮುಸಾಫಿರ್.


ಆದರೂ ಹೋಮ್ ಸಿಕ್‌ನೆಸ್ ಪೂರ್ತಿ ಹೋಗಿರಲಿಲ್ಲ. ಆ ವರ್ಷ ದೀಪಾವಳಿ ಸಮಯದ ಮೂರ್ನಾಲ್ಕು ದಿನಗಳ ರಜೆಯನ್ನು ಮುಗಿಸಿ ಮನಸ್ಸಿಲ್ಲದ ಮನಸ್ಸಿನಿಂದ ಸೋಮವಾರ ಬೆಳಗ್ಗೆ ಹಾಸ್ಟೆಲ್ ತಲುಪಿ ನೋಡಿದರೆ ಪುಸ್ತಕಗಳೆಲ್ಲ ಇದ್ದ ಟ್ರಂಕಿನ ಬೀಗದ ಕೈ ಮನೆಯಲ್ಲೇ ಬಿಟ್ಟು ಬಂದಿದ್ದೆ.  ಇದನ್ನೇ ಪಿಳ್ಳೆ ನೆವವಾಗಿಸಿಕೊಂಡು ಯಾರಲ್ಲೂ ಹೇಳದೆ ಕೇಳದೆ ತಕ್ಷಣ ಮನೆಗೆ ವಾಪಸು ಬಂದು ಬೀಗದ ಕೈ ಮರೆತ ವಿಷಯ ತಿಳಿಸುವ ಬದಲು ‘ಅನೇಕ ಮಕ್ಕಳು ಬರದೆ ಇದ್ದುದರಿಂದ ಈ ದಿನ ಶಾಲೆಗೆ ರಜೆ ಕೊಟ್ಟಿದ್ದಾರೆ’  ಎಂದು ಸುಳ್ಳು ಹೇಳಿದೆ. ಮರುದಿನ ಹಿರಿಯಣ್ನನೂ ಉಜಿರೆಗೆ ಬರುವವರಿದ್ದುದರಿಂದ ಅವರ ಜೊತೆಗೇ ಬಂದು ಹಾಸ್ಟೆಲಿಗೆ ಹೋಗಿ ಪುಸ್ತಕ ಜೋಡಿಸಿಕೊಂಡು ಕ್ಲಾಸಿಗೆ ಹೋದೆ.  ಆ ದಿನ ಸಂಸ್ಕೃತ ಪೀರಿಯಡ್ ಕೂಡ ಇತ್ತು. ಆಗಲೇ ಹೇಳಿದ ಹಾಗೆ   ನಮಗೆ ಸಂಸ್ಕೃತ ಅಧ್ಯಾಪಕರಾಗಿದ್ದದ್ದು ಉಜಿರೆ ಪೇಟೆಯಲ್ಲಿ ಪ್ರಭಾತ್ ಸ್ಟೋರನ್ನು ಹೊಂದಿದ್ದ ಗೋಪಾಲ ಮಾಸ್ಟ್ರು. ಅ ದಿನ  ಕ್ಲಾಸಿಗೆ ಬಂದವರೇ ನನ್ನನ್ನು ಎದ್ದು ನಿಲ್ಲಲು ಹೇಳಿ ‘ಏನೋ, ನಿನ್ನೆ ಶಾಲೆಗೆ ರಜೆ ಕೊಟ್ರು ಅಂತ ಮನೆಯಲ್ಲಿ ಹೋಗಿ ಹೇಳಿದ್ಯಂತೆ’ ಅಂದಾಗ ನನ್ನ ಜಂಘಾಬಲವೇ ಉಡುಗಿಹೋಯ್ತು!  ಆದದ್ದಿಷ್ಟೇ.  ನನ್ನೊಡನೆ ಪೇಟೆಗೆ ಬಂದ ಅಣ್ಣ ಎಂದಿನಂತೆ ಪ್ರಭಾತ್ ಸ್ಟೋರಿಗೆ ಹೋಗಿ ಅಲ್ಲೇ ಇದ್ದ  ಗೋಪಾಲ ಮಾಸ್ಟ್ರೊಂದಿಗಿನ   ಲೋಕಾಭಿರಾಮ ಮಾತುಕತೆಯಲ್ಲಿ ‘ನಿನ್ನೆ ಶಾಲೆಗೆ ರಜೆ ಅಂತೆ’ ಎಂದು ಹೇಳಿದಾಗ ನನ್ನ ಬಂಡವಾಳ ಬಯಲಾಗಿತ್ತು!  ಆ ಮೇಲೆ ನಾಚಿಕೆಯಿಂದ ಕೆಲವು ವಾರ ಮನೆಗೇ ಹೋಗಲಿಲ್ಲ.  ಕೆಲವು ವರ್ಷ ಹಿಂದೆ ಎಸ್.ಪಿ.ಬಿ ಅವರು ಒಂದು ಇಂಟರ್‌ವ್ಯೂದಲ್ಲಿ ಅಧ್ಯಾಪಕರೊಬ್ಬರು ತೀರಿ ಹೋದದ್ದರಿಂದ  ಶಾಲೆಗೆ ರಜೆ ಕೊಟ್ಟರು ಎಂದು ಮನೆಯಲ್ಲಿ ಸುಳ್ಳು ಹೇಳಿದುದಾಗಿ ತಿಳಿಸಿದ್ದರು.  ಇದನ್ನು ಕೇಳಿ  ಹೀಗೆ ಮಾಡಿದ್ದು ನಾನೊಬ್ಬನೇ ಅಲ್ಲ ಎಂದು ಸಮಾಧಾನ ಪಟ್ಟುಕೊಂಡಿದ್ದೆ.

ಆ ವರ್ಷ ಶಾಲೆಯಲ್ಲಿ ಪಿ.ಯು.ಸಿ ತರಗತಿ ಆರಂಭ ಆದದ್ದರಿಂದ ಹಾಸ್ಟೆಲ್ ವಾಸಿಗಳಾದ ನಾವು ವಸ್ತುಶಃ ಧರಾಶಾಯಿಗಳಾಗಬೇಕಾಯಿತು.  ಅಂದರೆ ನಾವಿದ್ದ ಹಾಸ್ಟೆಲ್ ರೂಮನ್ನು ಫರ್ನಿಚರ್ ಸಮೇತ ಆ ಉದ್ದೇಶಕ್ಕಾಗಿ  ತ್ಯಾಗ ಮಾಡಿ ಅದು ವರೆಗೆ ಡೈನಿಂಗ ಹಾಲ್ ಆಗಿದ್ದಲ್ಲಿಗೆ ಸ್ಥಳಾಂತರ ಹೊಂದಿ ನಮ್ಮ ಸರಂಜಾಮುಗಳನ್ನು ನೆಲದ ಮೇಲಿರಿಸಿ ನೆಲದ ಮೇಲೆಯೇ ಚಾಪೆ ಹಾಸಿ ಮಲಗಬೇಕಾಯಿತು. ಹೊರ ಜಗಲಿಗೆ ಮಡಲಿನ ತಟ್ಟಿ ಕಟ್ಟಿ ನೂತನ ಡೈನಿಂಗ್ ಹಾಲ್ ತಯಾರಾಯಿತು.  ಬೇಕಿದ್ದವರಿಗೆ  ಬೆಳಗ್ಗಿನ ಸ್ಪೆಷಲ್ ಕಾಪಿಯ ಸೌಲಭ್ಯ ಹಾಸ್ಟೆಲಿನಲ್ಲಿ ಆರಂಭವಾದದ್ದು ಈ ವರ್ಷದ ವಿಶೇಷ.

ಬಟ್ಟೆಗಳನ್ನು ಸಾಮಾನ್ಯವಾಗಿ ನಾವೇ ಒಗೆದುಕೊಳ್ಳುತ್ತಿದ್ದುದು. ಬೇಕಿದ್ದರೆ  ಹಾಸ್ಟೆಲಿನ  ಸಹಾಯಕ ಶೇಷಪ್ಪ  ಸೋಪು ತಂದು ಕೊಟ್ಟರೆ ನಮ್ಮ ಬಟ್ಟೆಗಳನ್ನು ಒಗೆದು ಕೊಡುತ್ತಿದ್ದ. ಒಂದು ಸಲ ಹಾಗೆ ಒಗೆಯಲು ಕೊಟ್ಟ ನನ್ನ ಒಂದು T ಶರ್ಟ್ ಕಾಣೆಯಾಗಿ ಬಿಟ್ಟಿತು. ಅದು ಈಗಿನ ರೀತಿಯ ರೆಡಿಮೇಡ್ ಟೀ ಶರ್ಟ್ ಅಲ್ಲ.  ಆಗಿನ ಕಾಲದಲ್ಲಿ ಟೈಲರ್‌ಗಳ ಬಳಿ ಬಟ್ಟೆಯ T ಶರ್ಟ್ ಹೊಲಿಸುವ ಪರಿಪಾಠವಿತ್ತು. ಆಗ ಮಂಗಳೂರಿನ ಕರ್ನಾಟಕ ಪೊಲಿಟೆಕ್ನಿಕ್‌ನಲ್ಲಿ ಓದುತ್ತಿದ್ದ ನನ್ನ ಅಣ್ಣ ಒಮ್ಮೆ ದಕ್ಷಿಣ ಭಾರತ ಟೂರಿಗೆ ಹೋದಾಗ ನನಗೆ ಒಂದು ಚಂದದ ಬಟ್ಟೆ ತಂದು ಕೊಟ್ಟಿದ್ದರು. ಆ ಬಟ್ಟೆಯಿಂದ ಆಗ ಉಜಿರೆಯಲ್ಲಿ ಪ್ರಸಿದ್ಧರಾಗಿದ್ದ ಗಂಗಾಧರ ಟೈಲರ್ ಬಳಿ ನಾನು ಈ ಟೀ ಶರ್ಟ್  ಹೊಲಿಸಿಕೊಂಡಿದ್ದೆ.  ಟೀ ಶರ್ಟ್ ಏನಾಯಿತು ಎಂದು ಕೇಳಿದ್ದಕ್ಕೆ ಆತ ನನಗೇನೂ ತಿಳಿಯದೆಂದು ಕೈ ತಿರುಗಿಸಿ ಸುಮ್ಮನಾದ. ಮೆಚ್ಚಿನ ವಸ್ತು ಕಳೆದು ಹೋದರೆ ಬೇಸರವಾಗದಿರುತ್ತದೆಯೇ. ನನಗೂ ಆಯಿತು. ಆದರೆ ‘ಜೊ ಖೋ ಗಯಾ ಮೆ ಉಸ್‌ಕೊ ಭುಲಾತಾ ಚಲಾ ಗಯಾ’ ಎಂಬ ಹಾಡಿನಂತೆ ಕೆಲ ಸಮಯದ ನಂತರ ಅದನ್ನು ಮರೆತೂ ಬಿಟ್ಟೆ. ಸುಮಾರು ಆರು ತಿಂಗಳು ಕಳೆದ ಮೇಲೆ ಒಂದು ರಜೆಯ ದಿನ ಹಾಸ್ಟೆಲಿನ ಪರಿಸರದಲ್ಲಿ ಅಡ್ಡಾಡುತ್ತಿರುವಾಗ ಅಡಿಗೆಗೆ ಉಪಯೋಗಿಸಲು ಪೇರಿಸಿಟ್ಟಿದ್ದ ಕಟ್ಟಿಗೆ ರಾಶಿಯ ಮಧ್ಯೆ ಬಟ್ಟೆ ಚೂರೊಂದು ಕಂಡಂತಾಯಿತು. ಸಮೀಪ ಹೋಗಿ ನೋಡಿದರೆ ಅದು ನನ್ನ ಕಳೆದು ಹೋಗಿದ್ದ ಟೀ ಶರ್ಟ್! ಬಹುಶಃ ಅಂದು ಒಗೆದು ಒಣಗಲು ಹಾಕಿದಲ್ಲಿಂದ ಗಾಳಿಗೆ ಹಾರಿ ಅಲ್ಲಿ ಸೇರಿಕೊಂಡಿರಬಹುದು. ಈಚೆ ಎಳೆದು ನೋಡಿದಾಗ ಕೊಂಚ ಮಣ್ಣಾಗಿದ್ದದ್ದು ಬಿಟ್ಟರೆ ಬೇರೇನೂ ಹಾಯಾಗಿರಲಿಲ್ಲ. ನನ್ನ ಆನಂದಕ್ಕೆ ಪಾರವೇ ಇಲ್ಲದಂತಾಯ್ತು. ಅದನ್ನೊಮ್ಮೆ ಚೆನ್ನಾಗಿ ಒಗೆದು ಮತ್ತೆ ಬಹಳ ಕಾಲ ಧರಿಸಿ ಸಂಭ್ರಮಿಸುತ್ತಿದ್ದೆ.  ಕೆಳಗಿನ ಫೋಟೊದಲ್ಲಿರುವುದು ಅದೇ ಟೀ ಶರ್ಟ್.


ಶಾಲೆಯಲ್ಲಿ ಸುಸಜ್ಜಿತವಾದ ಲ್ಯಾಬೋರೇಟರಿ ಇದ್ದು ಈ ವರ್ಷದಿಂದ ಭೌತ ಶಾಸ್ತ್ರ ಮತ್ತು ರಸಾಯನ ಶಾಸ್ತ್ರದ ಪ್ರಯೋಗಗಳನ್ನು ಸ್ವತಃ ಮಾಡುವ ಅವಕಾಶ ನಮಗೆ ದೊರೆಯಿತು.  ಶಂಕರನಾರಾಯಣ ರಾವ್  ಪ್ರಯೋಗ ಶಾಲೆಯ ಉಪಕರಣಗಳನ್ನು ಕ್ಲಾಸಿಗೆ ತಂದು ಪ್ರಾತ್ಯಕ್ಷಿಕೆ ತೋರಿಸುತ್ತಿದ್ದರು.  ಒಮ್ಮೆ ಕಪ್ಪೆಯ ಡಿಸೆಕ್ಷನ್ ಕೂಡ ಮಾಡಿದ್ದರು.

ಈ ವರ್ಷ ಬೇಲೂರು, ಹಳೆಬೀಡು, ಶ್ರವಣಬೆಳಗೊಳ, ಮೈಸೂರು ಇತ್ಯಾದಿ  ಸ್ಥಳಗಳಿಗೆ ಪ್ರವಾಸ ಏರ್ಪಡಿಸಲಾಗಿತ್ತು. ಆದರೆ ನನಗೆ ಮನೆಯಿಂದ ಅನುಮತಿ ದೊರೆಯುವಷ್ಟರಲ್ಲಿ ಸೀಟುಗಳೆಲ್ಲ ಭರ್ತಿಯಾಗಿ ಹೋದವು. ಪ್ರವಾಸಿಗರನ್ನು ಒಯ್ದಿದ್ದ ಹನುಮಾನ್ ಬಸ್ಸಿನ   ಕಂಡಕ್ಟರನನ್ನು ಹಿಂತಿರುಗುವಾಗ ಒಂದೆಡೆ ಬಿಟ್ಟು ಬಂದದ್ದು ಆ ಪ್ರವಾಸದ ವಿಶೇಷ!

ಕೈಬರಹದ ಪತ್ರಿಕೆ ಉದಯ ಆ ವರ್ಷ ಪ್ರಕಟವಾಯಿತು.  ನಾನು ರಚಿಸಿದ ಜಲವರ್ಣ ಚಿತ್ರ ಅದರ ಮುಖಪುಟದಲ್ಲಿತ್ತು. ವಾಲ್ ಮ್ಯಾಗಜೀನಿನಲ್ಲೂ ನಾನು ರಚಿಸಿದ ಚಿತ್ರಗಳು ಆಗಾಗ ಕಾಣಿಸಿಕೊಳ್ಳುತ್ತಿದ್ದವು. ಡ್ರಾಯಿಂಗ್ ಮಾಸ್ಟರ್ ಶ್ರೀನಿವಾಸ ರಾಯರ ಮುತುವರ್ಜಿಯಲ್ಲಿ ಜಲವರ್ಣದಲ್ಲಿ ಪ್ರಕೃತಿಚಿತ್ರವೊಂದನ್ನು ರಚಿಸಿ  ಕಟ್ಟು ಹಾಕಿಸಿ ಶಾಲೆಗೆ ಉಡುಗೊರೆಯಾಗಿಯೂ ಕೊಟ್ಟಿದ್ದೆ.  ಶ್ರೀನಿವಾಸ ರಾಯರು ಎಂದೂ ಕುರ್ಚಿಯಲ್ಲಿ ಕೂತದ್ದಿಲ್ಲ.  ವಿದ್ಯಾರ್ಥಿಗಳ ಮಧ್ಯೆ ಕುಳಿತೇ ಡ್ರಾಯಿಂಗ್ ಕಲಿಸುತ್ತಿದ್ದರು.  ಒಂದು ದಿನ ಜಗಲಿಯಲ್ಲಿ ಹೋಗುತ್ತಿದ್ದ  ಆನಂದ ಸಾಲಿಯಾನರು ಒಳಗೆ ಇಣುಕಿ ‘ಎಲ್ಲಾ ಸೇರಿ ಏನು ಮಾಡ್ತಾ ಇದ್ದೀರಿ?’ ಎಂದು ಗದರಿಸಿ ಆ ಮೇಲೆ ಅವರನ್ನು ಕಂಡು ಪೆಚ್ಚಾಗಿದ್ದರು.

ನಾನು ಒಂಭತ್ತನೆ ತರಗತಿಯಲ್ಲಿ ಇರುವಾಗ ಉಜಿರೆ ಹೈಸ್ಕೂಲಿನಲ್ಲಿ ಜಿಲ್ಲಾ ಮಟ್ಟದ ಗ್ರಿಗ್ ಮೆಮೋರಿಯಲ್ ಸ್ಪೋರ್ಟ್ಸ್ ನಡೆಯಿತು. ಆ ವರ್ಷ  ವೇಗದ ಓಟಗಾರ ಕೆ. ಎಂ ದಿವಾಕರ್ ಮತ್ತು ಹೈ ಜಂಪ್ ನಿಪುಣ ವಿಶ್ವನಾಥ್ ಅವರನ್ನು ವಿಶೇಷವಾಗಿ ನಮ್ಮ ಶಾಲೆಗೆ ಸೇರಿಸಿಕೊಳ್ಳಲಾಗಿತ್ತು.  ಹೀಗಾಗಿ ಈ ಕ್ರೀಡಾಕೂಟದಲ್ಲಿ ನಮ್ಮ ಶಾಲೆಗೆ ಹೆಚ್ಚು ಪದಕಗಳು ದೊರೆತವು.  ಮಂಜುಳಾ ಎಂಬ ಸ್ಥಳೀಯ ಬಾಲಕಿ ಕೂಡ ಅನೇಕ ಪದಕಗಳನ್ನು ಗೆದ್ದಿದ್ದಳು. ಆದರೆ ನನಗೆ  ಗ್ರಿಗ್ ಸ್ಪೋರ್ಟ್ಸ್ ನೆನಪಿರುವುದು ಪುತ್ತೂರಿನಿಂದ ತರಿಸಲಾಗಿದ್ದ ಮೈಕ್ ಸೆಟ್ಟಿನವರು ಪದೇ ಪದೇ ಹಾಕುತ್ತಿದ್ದ ಕಮ್ ಸಪ್ಟಂಬರ್ ಟ್ಯೂನ್, ಆರಜೂ ಚಿತ್ರದ ಏ ನರ್ಗಿಸೇ ಮಸ್ತಾನಾ, ಫೂಲೋಂ ಕಿ ರಾನಿ ಬಹಾರೋಂ ಕಿ ಮಲ್ಲಿಕಾ, ಕಹೀಂ ಔರ್ ಚಲ್ ಚಿತ್ರದ ಓ ಲಕ್ಷ್ಮೀ ಓ ಸರಸೂ ಓ ಶೀಲಾ ಮುಂತಾದ ರೆಕಾರ್ಡುಗಳಿಂದ!

ಗ್ರಿಗ್ ಸ್ಪೋರ್ಟ್ಸ್ ದೃಶ್ಯಗಳನ್ನು ಕಣ್ಣ ಮುಂದೆ ತರುವ ಹಾಡಿನ ತುಣುಕುಗಳು.


ಬೆಳ್ತಂಗಡಿಗೆ ಅನೇಕ ವರ್ಷ ಮೊದಲೇ ವಿದ್ಯುತ್ ಬಂದಿತ್ತು ಅನಿಸುತ್ತದೆ ಏಕೆಂದರೆ ಅಲ್ಲಿ ಆಗಲೇ ಭಾರತ್ ಕೋಲ್ಡ್ ಹೌಸ್ ಇತ್ತು. ಆದರೆ  ಉಜಿರೆಗೆ ವಿದ್ಯುತ್ ಜಾಲ ವಿಸ್ತರಣೆ ಆಗಿ ಹಾಸ್ಟೆಲಿಗೆ ವಿದ್ಯುತ್ ಸಂಪರ್ಕ ದೊರಕಿದ್ದು ನಾನು ಒಂಭತ್ತನೆಯ ತರಗತಿಯಲ್ಲಿರುವಾಗ. ಅದುವರೆಗೆ ಬಳಸುತ್ತಿದ್ದ ಸೀಮೆ ಎಣ್ಣೆ ಲ್ಯಾಂಪುಗಳು ಮೂಲೆ ಸೇರಿದವು.  ಮನೆಯಿಂದ ತರುತ್ತಿದ್ದ ಹಪ್ಪಳ ಸುಡಲೂ ಅವುಗಳ ಉಪಯೋಗ ಆಗುತ್ತಿದ್ದ ವಿಚಾರವೂ ಇತಿಹಾಸ ಸೇರಿತು.  

ಅಷ್ಟು ಹೊತ್ತಿಗೆ ನಾನು ಧರ್ಮಸ್ಥಳ ಜಾತ್ರೆಯಿಂದ ಕೊಳಲು ಖರೀದಿಸಿ ಪಾಪಿಯ ಜೀವನ ಪಾವನ ಗೊಳಿಸುವ, ಜಯತು ಜಯ ವಿಠಲಾ ಮುಂತಾದ ಹಾಡುಗಳನ್ನು  ನುಡಿಸಲು ಪ್ರಯತ್ನಿಸುವ ಕಾಯಕ ಆರಂಭಿಸಿದ್ದೆ. ಹಾಸ್ಟೆಲಿಗೂ ಅದನ್ನು ಒಯ್ಯುತ್ತಿದ್ದೆ.  ಆದರೆ ರೇಡಿಯೊದಲ್ಲಿ ಕೇಳಿಸುವಷ್ಟು, ಸಿನಿಮಾಗಳಲ್ಲಿ ಕಾಣಿಸುವಷ್ಟು, ಕೊನೆ ಪಕ್ಷ ದೊಂಬರಾಟದವರು ನುಡಿಸುವಷ್ಟಾದರೂ ಇಂಪಾಗಿ ಅದು ಯಾಕೆ ನುಡಿಯುತ್ತಿಲ್ಲ ಎಂಬ ಚಿಂತೆ ನನ್ನನ್ನು ಕಾಡುತ್ತಿತ್ತು. ಆಗ ಹಾಸ್ಟೆಲಲ್ಲಿ ಮಡಿಕೇರಿಯಿಂದ ಬಂದ ಕೃಷ್ಣಪ್ಪ ಎಂಬ ಒಬ್ಬ ಹುಡುಗನಿದ್ದ. ಒಂದು ದಿನ ಹೀಗೇ ಮಾತಾಡುತ್ತಿರುವಾಗ ‘ಮಡಿಕೇರಿಯಲ್ಲಿ ಒಂದು ರೂಪಾಯಿಗೆ ಬಹಳ ಒಳ್ಳೆಯ ಕೊಳಲು ಸಿಗುತ್ತದೆ’ ಎಂದು ನನ್ನಲ್ಲಿ ಆಸೆ ಹುಟ್ಟಿಸಿ ಬಿಟ್ಟ. ಆದರೆ ಅಲ್ಲಿಂದ ತರಿಸುವುದು ಹೇಗೆ ಎಂಬ ಸಮಸ್ಯೆ ಎದುರಾಯಿತು. ‘ಧರ್ಮಸ್ಥಳ ಮಡಿಕೇರಿ CPC ಬಸ್ಸಿನ ಡ್ರೈವರಲ್ಲಿ ಒಂದು ರೂಪಾಯಿ ಕೊಟ್ಟರೆ ತಂದು ಕೊಡುತ್ತಾನೆ ' ಎಂದು ಆತನೇ ಪರಿಹಾರ ಸೂಚಿಸಿದ. ಸರಿ. ಮರುದಿನವೇ ಹಾಸ್ಟೆಲ್ ಎದುರು ಬಸ್ಸನ್ನು ನಿಲ್ಲಿಸಿ ಡ್ರೈವರನಿಗೆ ಒಂದು ರೂಪಾಯಿ ಕೊಟ್ಟು ವಿಷಯ ತಿಳಿಸಿದ್ದಾಯಿತು. ಆತ ಅತ್ಯುತ್ತಮ ಕೊಳಲೊಂದನ್ನು ತಂದು ಕೊಟ್ಟು ನಾನದನ್ನು ಸುಮಧುರವಾಗಿ ನುಡಿಸಿದಂತೆ ಕನಸೂ ಕಾಣತೊಡಗಿದೆ. ಆದರೆ ಎಷ್ಟು ದಿನ ಕಳೆದರೂ ಆತ ಕೊಳಲು ತಂದು ಕೊಡುವ ಸೂಚನೆಯೇ ಕಾಣಲಿಲ್ಲ. ಉಜಿರೆ ಪೇಟೆಯಲ್ಲಿದ್ದ CPC ಅಫೀಸಿನಲ್ಲೇನಾದರೂ ಕೊಟ್ಟಿರಬಹುದೇ ಎಂದು ಕೆಲವು ದಿನ ಅಲ್ಲಿ ಹೋಗಿ ವಿಚಾರಿಸಿದ್ದಾಯಿತು. ಅಲ್ಲೂ ಉಹೂಂ. ಹೀಗೆ ಸುಮಾರು ಒಂದು ತಿಂಗಳ ನಿರೀಕ್ಷೆಯ ನಂತರ ಕೃಷ್ಣಪ್ಪನೇ ಮತ್ತೆ ಬಸ್ಸನ್ನು ಹಾಸ್ಟೆಲ್ ಎದುರು ತಡೆದು ಡ್ರೈವರನೊಡನೆ ವಿಚಾರಿಸಿದಾಗ ಆತ ಒಂದು ರೂಪಾಯಿಯನ್ನು ಹಿಂತಿರುಗಿಸಿ ‘ಕ್ಷಮಿಸಿ, ನನಗೆ ಇದಕ್ಕೆಲ್ಲ ಅಲ್ಲಿ ಸಮಯ ಸಿಗುವುದಿಲ್ಲ’ ಎಂದು ಕೈ ಆಡಿಸಿಬಿಟ್ಟಾಗ ನನ್ನ ಬಣ್ಣ ಬಣ್ಣದ ಕನಸು ಠುಸ್ ಆಯಿತು. ವಾಸ್ತವವಾಗಿ ಮಡಿಕೇರಿ ಉತ್ತಮ ಕೊಳಲು ಸಿಗುವ ತಾಣವೂ ಆಗಿರಲಿಲ್ಲ. ಒಂದು ವೇಳೆ ಆಗಿದ್ದರೂ ಬಸ್ ಡ್ರೈವರನೊಬ್ಬ ಉತ್ತಮ ಕೊಳಲು ಆಯ್ದು ತಂದು ಕೊಡಲು ಸಾಧ್ಯವೂ ಇರಲಿಲ್ಲ. ಏನೇ ಇರಲಿ, ನಾನು ಉತ್ತಮವಾದ ನಾಗರಕೋಯಿಲ್ ಕೊಳಲೊಂದನ್ನು ಪಡೆಯಲು ಮತ್ತು ಕೊಳಲು ಉತ್ತಮವಾಗಿದ್ದ ಮಾತ್ರಕ್ಕೆ ಅದು ಮಧುರವಾಗಿ ನುಡಿಯುವುದಿಲ್ಲ ಎಂದು ತಿಳಿಯಲು ಮಂಗಳೂರಲ್ಲಿ ಕಲಾನಿಕೇತನಕ್ಕೆ ಸೇರುವ ವರೆಗೆ ಕಾಯಬೇಕಾಯಿತು.

ನಾನು ಹತ್ತನೆಯ ತರಗತಿ ತಲುಪಿದ ವರುಷ ಹಾಸ್ಟೆಲಿನಲ್ಲಿ ಬೆಳಗ್ಗಿನ ಗಂಜಿ ಊಟದ ಬದಲು ಇಡ್ಲಿ ಚಟ್ಣಿ, ರಾತ್ರೆ ಊಟಕ್ಕೆ ಅನ್ನದ ಜೊತೆ ಚಪಾತಿ ಇತ್ಯಾದಿಗಳ ವೈವಿಧ್ಯ ಆರಂಭವಾಯಿತು.  ಇದಕ್ಕಾಗಿ ಹೆಚ್ಚುವರಿ ಅಡುಗೆಯವರೊಬ್ಬರನ್ನು ನೇಮಿಸಿಕೊಳ್ಳಲಾಗಿತ್ತು.  ಕೆಲವು ತಿಂಗಳುಗಳ ನಂತರ ಅವರು ಜಗಳಾಡಿ ಕೆಲಸ ಬಿಟ್ಟು ಹೋದದ್ದರಿಂದ  ಆ ಪ್ರಯೋಗ ಮುಂದುವರಿಯಲಿಲ್ಲ.   ಆ ಮೇಲೆ ಸ್ವಲ್ಪ ದಿನಗಳಲ್ಲಿ ಏನೋ ಮನಸ್ತಾಪ ಬಂದು ವೆಂಕಟರಮಣ ಕಾರಂತರೂ ಕೆಲಸ ಬಿಟ್ಟರು.  ನಂತರ ಬಂದ ಅಡುಗೆಯವರ ಕೈ ರುಚಿಗೆ ಹೊಂದಿಕೊಳ್ಳಲು ನಮಗೆ ಸ್ವಲ್ಪ ಕಾಲ ಬೇಕಾಯಿತು.  ಅಷ್ಟು ಹೊತ್ತಿಗೆ ಪಕ್ಕದ ಇಂದ್ರರು  ತನ್ನ ಗೂಡಂಗಡಿಯನ್ನು ಕಿರು ಹೋಟೆಲ್ ಆಗಿ ಪರಿವರ್ತಿಸಿದ್ದರು. ಅವರು  ಮನೆಯಲ್ಲೇ ತಯಾರಿಸಿ ತರುತ್ತಿದ್ದ  ಇಡ್ಲಿ ಚಟ್ನಿ ಅದ್ಭುತ ರುಚಿ ಹೊಂದಿರುತ್ತಿದ್ದು ನಮ್ಮನ್ನು ಹೆಚ್ಚು ಹೆಚ್ಚು ಆಕರ್ಷಿಸತೊಡಗಿತು. 

ಆ ವರ್ಷ ಸಿದ್ಧವನ ಪರಿಸರದಲ್ಲಿ BA, B.Com, B.Sc ತರಗತಿಗಳಿದ್ದ  ಎಸ್.ಡಿ.ಎಮ್  ಕಾಲೇಜು ಆರಂಭಗೊಂಡದ್ದರಿಂದ ತಾತ್ಕಾಲಿಕವಾಗಿ  ಹಾಸ್ಟೆಲ್ ಕಟ್ಟಡದಲ್ಲಿದ್ದ ಪಿ.ಯು.ಸಿ ಕೂಡ ಅಲ್ಲಿಗೇ ಹೋಯಿತು.  ಹೀಗಾಗಿ ಬೆಂಚುಗಳ ಮಂಚ ಇದ್ದ ರೂಮುಗಳು ಮತ್ತೆ ನಮಗೆ ದೊರಕಿದವು. ಕಾಲೇಜು ಉದ್ಘಾಟನೆಗೆ ಆಗಿನ ಮುಖ್ಯ ಮಂತ್ರಿ ನಿಜಲಿಂಗಪ್ಪ ಬಂದಿದ್ದರು.  
 
ಶಾಲೆಯಲ್ಲಿ  ಹತ್ತನೆ ತರಗತಿಯ ವಾತಾವರಣ ಅತ್ಯಂತ ಉತ್ಸಾಹಭರಿತವಾಗಿತ್ತು. ನನ್ನ ಗೃಹ ಮೋಹವೂ ಆ ಹೊತ್ತಿಗೆ ಕಮ್ಮಿ ಆಗಿದ್ದು ಪ್ರತೀ ವಾರಾಂತ್ಯದಲ್ಲಿ ಮನೆಗೆ ಹೋಗುತ್ತಿರಲಿಲ್ಲ.  ಎಂದಾದರೂ ಹೋದರೆ ಭಾನುವಾರ ಸಂಜೆಗೇ ಹಾಸ್ಟೆಲಿಗೆ ಹಿಂತಿರುಗುತ್ತಿದ್ದೆ.  ಈ ಮಧ್ಯೆ ವಾರ್ಡನ್ ನಾಗಪ್ಪಯ್ಯ ತಾವಾಗಿ ಇಷ್ಟ ಪಟ್ಟು ಒಮ್ಮೆ ನಮ್ಮ ಮನೆಗೆ ಬಂದು ಒಂದು ದಿನ ಇದ್ದರು.

ಈ ವರ್ಷ ನಮ್ಮ ತರಗತಿಗಳು ಕಟ್ಟಡದ  ಉತ್ತರ ದಕ್ಷಿಣ ಪಾರ್ಶ್ವದ ಭಾಗದಲ್ಲಿದ್ದವು. ಗೋಪಾಲಕೃಷ್ಣ ಭಟ್ ಎಂಬ ನೂತನ  ಉಪಾಧ್ಯಾಯರು ಕೆಮೆಸ್ಟ್ರಿ ಮತ್ತು ಸಾಮಾನ್ಯ ಗಣಿತ, ಲಕ್ಷ್ಮಣ ಶೆಣೈ ಭೌತ ಶಾಸ್ತ್ರ,  ಆರ್. ಡಿ. ಶಾಸ್ತ್ರಿ ಸಮಾಜ, ಆನಂದ ಸಾಲ್ಯಾನ್ ಇಂಗ್ಲೀಷ್, ಶಂಕರನಾರಾಯಣ ರಾವ್ ವಿಜ್ಞಾನ, ಎಂದಿನಂತೆ ನಾಗರಾಜ ಪೂವಣಿ  ಹಿಂದಿ ಮತ್ತು ಗೋಪಾಲ ಮಾಸ್ಟ್ರು ಸಂಸ್ಕೃತ, ವಿಶೇಷ  ತರಬೇತಿ ಮುಗಿಸಿ ಹಿಂದಿರುಗಿದ ಶೇಷಗಿರಿ ರಾವ್ ಐಚ್ಛಿಕ ಗಣಿತ ಕಲಿಸಿದರು. ‘ಇದೊಂದು ವೃತ್ತವೆಂದಿರಲಿ’ ಅನ್ನುತ್ತಾ ಅವರು ಬೋರ್ಡ್ ಮೇಲೆ ಕೈಯಲ್ಲಿ ರಚಿಸುತ್ತಿದ್ದ ವೃತ್ತಾಕಾರವನ್ನು ನೋಡುವುದೇ ಒಂದು ಚಂದವಾಗಿತ್ತು.

ಆ ಕಾಲದಲ್ಲಿ SSLC ಎಂಬುದು ನಿರ್ಣಾಯಕ ಘಟ್ಟವಾಗಿದ್ದರೂ ನಮಗೆ ಸ್ಪೆಶಲ್ ಕ್ಲಾಸ್, ಟ್ಯೂಶನ್ ಇತ್ಯಾದಿ ಏನೂ ಇರಲಿಲ್ಲ. ಪಬ್ಲಿಕ್ ಪರೀಕ್ಷೆಯ ಬಗ್ಗೆ ನಮ್ಮನ್ನು ಯಾರೂ ಹೆದರಿಸಲೂ ಇಲ್ಲ. ಬದಲಾಗಿ ಅದು ಶಾಲಾ ಪರೀಕ್ಷೆಗಳಿಗಿಂತಲೂ ಸುಲಭವಾಗಿರುತ್ತದೆ ಎಂದು ಧೈರ್ಯ ತುಂಬುತ್ತಿದ್ದರು. ನಿಜಕ್ಕೂ ಅದು ಹಾಗೆಯೇ ಇತ್ತು. ಪರೀಕ್ಷಾಪೂರ್ವದ ಕೊನೆ ಹಂತದ ತಯಾರಿಯ ಸಮಯ ಬೆಳಗ್ಗೆ ತುಂಬಾ ಬೇಗ ಎದ್ದು ಓದುತ್ತಿದ್ದೆ. ಸ್ನೇಹಿತರ ಬಳಗಕ್ಕೆ ಗ್ರೂಪ್ ಸ್ಟಡಿ ರೂಪದಲ್ಲಿ   ಗಣಿತದ ಟ್ಯೂಷನ್ ಕೂಡ ಕೊಟ್ಟದ್ದುಂಟು. ಮನೆಯಿಂದ ತಂದಿದ್ದ ಫ್ಲಾಸ್ಕಿನಲ್ಲಿ  ಮುನ್ನಾ ದಿನ ಸಂಜೆಯೇ ಸಮೀಪದ ಅಂದು ಭಟ್ಟರ ಹೋಟೆಲಿನಿಂದ ಬಿಸಿ ಬಿಸಿ ಕಾಪಿ ತಂದಿಟ್ಟುಕೊಳ್ಳುತ್ತಿದ್ದೆ. ಈ ಅಂದು ಭಟ್ಟರ ನಿಜ ನಾಮಧೇಯ ಗೊತ್ತಿಲ್ಲ.  ಅವರು ಜೀವಮಾನದಲ್ಲಿ ಕಾಲಿ ಟೋಪಿ ಲಾಲ್ ರುಮಾಲ್ ಎಂಬ ಒಂದೇ ಹಿಂದಿ ಸಿನೆಮಾ ನೋಡಿದ್ದಂತೆ.  ಹೋಟೆಲಿಗೆ ಹೋದವರಿಗೆಲ್ಲ ಅದರ ಬಗ್ಗೆಯೇ ಹೇಳುತ್ತಿದ್ದರು.  

ಅದು ವರೆಗೆ ಬಂಟ್ವಾಳ, ಉಪ್ಪಿನಂಗಡಿ ಮುಂತಾದೆಡೆ ಹೋಗಿ ಬರೆಯಬೇಕಾಗಿದ್ದ ಪಬ್ಲಿಕ್ ಪರೀಕ್ಷೆ ಈಗ ಉಜಿರೆಯಲ್ಲೇ ನಡೆಯುವಂತಾದದ್ದು ನಮಗೆ ಅನುಕೂಲಕರವಾಯಿತು. ಬೆಳ್ತಂಗಡಿ, ಪುಂಜಾಲಕಟ್ಟೆ ಹೈಸ್ಕೂಲಿನ ವಿದ್ಯಾರ್ಥಿಗಳು ನಮ್ಮ ಶಾಲೆಯಲ್ಲೇ ಪರೀಕ್ಷೆ ಬರೆದಿದ್ದರು ಎಂದು ನೆನಪು. ನಾನು ಆತ್ಮ ವಿಶ್ವಾಸದಿಂದ ಪರೀಕ್ಷೆ ಎದುರಿಸಿ ಶಾಲೆಗೆ ಎರಡನೇ ಸ್ಥಾನ ಪಡೆದು ಉತ್ತೀರ್ಣನಾದೆ. ಆ ವರ್ಷದ ಉತ್ತಮ ಸರ್ವತೋಮುಖ ನಿರ್ವಹಣೆಗೆ ಪ್ರಶಸ್ತಿಪತ್ರವನ್ನು ಮರುವರ್ಷದ ವರ್ಧಂತ್ಯುತ್ಸವದಲ್ಲಿ ನನಗೆ ಕೊಟ್ಟರು. College Composition ಎಂಬ Orient Longman ಸಂಸ್ಥೆ ಪ್ರಕಟಿಸಿದ ಪುಸ್ತಕದ ಉಡುಗೊರೆಯೂ ಇತ್ತು. ಆ ಮೇಲೆ ನಾನು S.D.M ಕಾಲೇಜಲ್ಲಿ B.Sc ಡಿಗ್ರಿ ಪಡೆದರೂ ನನಗೆ ದೂರವಾಣಿ ಇಲಾಖೆಯಲ್ಲಿ ಉದ್ಯೋಗ ದೊರೆತದ್ದು SSLC ಅಂಕಗಳ ಆಧಾರದಲ್ಲೇ. 

ಒಟ್ಟಿನಲ್ಲಿ  ಆ ಮೂರು ವರ್ಷಗಳ ಹಾಸ್ಟೆಲ್ ವಾಸ ಮತ್ತು ಹೈಸ್ಕೂಲ್ ಜೀವನ ಬಲು ವರ್ಣರಂಜಿತವಾಗಿತ್ತು.  ಕ್ಲಾಸಲ್ಲೇ ಪಾಠಗಳು ಚೆನ್ನಾಗಿ ಅರ್ಥವಾಗುತ್ತಿದ್ದುದರಿಂದ ಹೆಚ್ಚು ಓದಿಕೊಳ್ಳುವುದೇನೂ ಇರುತ್ತಿರಲಿಲ್ಲ. ಹೆಚ್ಚಿನ ಹೋಮ್ ವರ್ಕ್ ಕೂಡ ಇರುತ್ತಿರಲಿಲ್ಲ ಎಂದು ನೆನಪು. ಹೀಗಾಗಿ ನಮ್ಮ ಹೆಚ್ಚಿನ ಸಮಯ ಸಿನಿಮಾ ಹಾಡುಗಳನ್ನು ಹಾಡುತ್ತಾ, ಅವುಗಳ ಬಗ್ಗೆ ಚರ್ಚಿಸುತ್ತಾ ಕಳೆಯುತ್ತಿತ್ತು. ಸಂಜೆ ಪೇಟೆಗೆ ಹೋದಾಗ ಅಲ್ಲಿಯ ಪಂಚಾಯತ್ ರೇಡಿಯೋದಿಂದ ವಿವಿಧಭಾರತಿಯ ಮಧುರ್ ಗೀತಂ ಕಾರ್ಯಕ್ರಮ ಕೇಳಲು  ಸಿಗುತ್ತಿತ್ತು. ವೀರ ಕೇಸರಿ ಚಿತ್ರದ ಸ್ವಾಭಿಮಾನದ ನಲ್ಲೆ, ಮನೆ ಅಳಿಯ ಚಿತ್ರದ ಕೇಳುವ ಒಗಟನು ಒಡೆದು ಮುಂತಾದವೂ ದಿನ ನಿತ್ಯ ಕೇಳಸಿಗುವ ಹಾಡುಗಳಾಗಿದ್ದವು.  ಜನವರಿಯಲ್ಲಿ ನಡೆಯುವ ಜನಾರ್ದನ ದೇವಸ್ಥಾನದ ಜಾತ್ರೆಗೆ ಕೊಡಿ ಏರಿದ ದಿನದಿಂದ ನಿತ್ಯವೂ ಹೋಗುತ್ತಿದ್ದೆವು.  ಅಲ್ಲಿ ಇರುತ್ತಿದ್ದ ಮರದ ತೊಟ್ಟಿಲುಗಳಲ್ಲಿ ಬ್ಯಾಲೆನ್ಸಿಗೆ ಜನ ಕಮ್ಮಿ ಆದರೆ ನಮ್ಮನ್ನು ಫ್ರೀ  ಆಗಿ ಕೂರಿಸಿಕೊಳ್ಳುತ್ತಿದ್ದರು. 

ಹೈಸ್ಕೂಲಲ್ಲಿ ಉತ್ತಮವಾದ ಲೈಬ್ರರಿ ಇದ್ದರೂ ನಾನು ಅದನ್ನು ಬಳಸಿದ್ದು ಕಮ್ಮಿ.  ಒಂದೆರಡು ಸಲ ಹಿಂದಿ, ಇಂಗ್ಲಿಷ್ ಕಥೆ ಪುಸ್ತಕಗಳನ್ನು ಪಡೆದು ಓದಿರಬಹುದಷ್ಟೇ.  ಆದರೆ ಇತರ ಹುಡುಗರು ಪಂಚಾಯತ್ ಲೈಬ್ರರಿಯಿಂದ ತರುತ್ತಿದ್ದ ಪತ್ತೇದಾರಿ ಕಾದಂಬರಿಗಳು, ತ್ರಿವೇಣಿ ಕಾದಂಬರಿಗಳನ್ನು ಓದುತ್ತಿದ್ದೆ. ವಯೋ ಸಹಜವಾಗಿ ಒಂದೆರಡು ‘ಶೃಂಗಾರ’ಭರಿತ ಕಾದಂಬರಿಗಳ ಮೇಲೂ ಕಣ್ಣು ಹಾಯಿಸಿದ್ದುಂಟು. ಮಿತ್ರರೊಂದಿಗಿನ ಸಂಭಾಷಣೆಯಲ್ಲಿ 64 ವಿದ್ಯೆಗಳಿಗೂ ಸ್ಥಾನ ಇರುತ್ತಿತ್ತು.  ಚಂದಮಾಮ ಅಥವಾ ಬಾಲಮಿತ್ರ ದೊರಕಿದರೆ ಕಿಸೆಯಲ್ಲಿ ತುಂಬಿಕೊಂಡ  ಇಂದ್ರರ ಅಂಗಡಿಯ ಕುರುಕಲು ತಿಂಡಿಯೊಡನೆ ಅವುಗಳ ಕಥೆಗಳನ್ನೂ ಚಪ್ಪರಿಸುತ್ತಿದ್ದೆ.

ಶಾಲೆಯ ರೀಡಿಂಗ್ ರೂಮಿಗೆ ನಿಯಮಿತ ಭೇಟಿ ನೀಡುತ್ತಿದ್ದೆ.  ಅಲ್ಲಿಗೆ ಬರುತ್ತಿದ್ದ ಹಿಂದಿ  ಧರ್ಮಯುಗ ಮ್ಯಾಗಜೀನು ಓದುತ್ತಿದ್ದೆ.  ಅದರಲ್ಲಿ ಬರುತ್ತಿದ್ದ ಢಬ್ಬೂಜಿ ಎಂಬ ಕಾರ್ಟೂನ್ ಸ್ಟ್ರಿಪ್ ನನಗೆ ಇಷ್ಟವಾಗುತ್ತಿತ್ತು.  ಹಿನ್ನೆಲೆ ಗಾಯಕ ಮುಕೇಶ್ ಫೋಟೊವನ್ನು ನಾನು ಮೊದಲ ಬಾರಿ ನೋಡಿದ್ದು ಧರ್ಮಯುಗದಲ್ಲೇ. ರೀಡಿಂಗ್ ರೂಮಿನ ಒಂದು ಮೂಲೆಯಲ್ಲಿ ಒಂದು ದೊಡ್ಡ ವಾಲ್ವ್ ರೇಡಿಯೋ ಕೂಡ ಇತ್ತು.  ಗಣಿತ ಅಧ್ಯಾಪಕ ಶೇಷಗಿರಿ ರಾಯರು ಒಮ್ಮೊಮ್ಮೆ ಮಧ್ಯಾಹ್ನದ ಹೊತ್ತು ಅದನ್ನು ಆನ್ ಮಾಡುತ್ತಿದ್ದರು.  ಆಗ ಹೈದರಾಬಾದ್ ಕೇಂದ್ರದಿಂದ ಮಧ್ಯಾಹ್ನ 1-20 ರಿಂದ 1-30ರ ವರೆಗೆ ಹಿಂದಿ ಚಿತ್ರಗೀತೆಗಳು ಬರುತ್ತಿದ್ದವು.  ಒಂದು ಸಲ ಲೀಡರ್ ಚಿತ್ರದ ದಯ್ಯಾರೆ ದಯ್ಯಾ  ಲಾಜ್ ಮೊಹೆ ಲಾಗೆ ಹಾಡು  ಪ್ರಸಾರವಾದದ್ದು ನನಗೆ ನೆನಪಿದೆ.

ನಾನಿದ್ದ ಮೂರು ವರ್ಷ ಕೂಡ ಆರ್. ಎನ್. ಭಿಡೆಯವರು ಯಾವ ಕ್ಲಾಸನ್ನೂ ತೆಗೆದುಕೊಳ್ಳದೆ ಮುಖ್ಯೋಪಾಧ್ಯಾಯ ಹುದ್ದೆಯ ನಿರ್ವಹಣೆಯ ಕಾರ್ಯದಲ್ಲಿ ತನ್ನನ್ನು ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದರು.  ಪ್ರತೀ ಸೋಮವಾರ ಶಾಲೆಯ ಅಂಗಳದಲ್ಲಿ ಅವರ ನೇತೃತ್ವದ ಸಾಮೂಹಿಕ ಪ್ರಾರ್ಥನೆ ಇರುತ್ತಿತ್ತು.  ಶಾಲಾ ನಾಯಕನು ಚೌಕಾಕಾರದಲ್ಲಿ ಚಲಿಸಿ ನೀಡುತ್ತಿದ್ದ ವಂದನೆಯನ್ನು ಸ್ವೀಕರಿಸಿದ ಮೇಲೆ ಅವರು ಆ ವಾರದಲ್ಲಿ ನಡೆದ ಪ್ರಮುಖ ಆಗು ಹೋಗುಗಳನ್ನು, ಮುಂಬರುವ ಪ್ರಮುಖ ವಿಚಾರಗಳನ್ನು ಹೇಳುತ್ತಿದ್ದರು.  ಇದು ಪತ್ರಿಕೆಯೊಂದರ ಸಂಪಾದಕೀಯದಂತೆ ಇರುತ್ತಿತ್ತು.  ನಾನು SSLC ತಲುಪುವ ಹೊತ್ತಿಗೆ ಅವರು ತಮ್ಮನ್ನು ಶಾಲೆಗೆ ಪೂರ್ತಿ ಮುಡಿಪಾಗಿಸಿ ವಾಸ್ತವ್ಯವನ್ನು ಶಾಲಾ ಆಫೀಸು ಕಟ್ಟಡಕ್ಕೆ ವರ್ಗಾಯಿಸಿಕೊಂಡಿದ್ದರು.  ಸ್ವಲ್ಪವೂ ಖಾರ ಇರದ, ಹೆಚ್ಚು ತೆಂಗಿನ ಕಾಯಿ ಕಡೆದು ಹಾಕಿದ ವಿಶೇಷ ಅಡಿಗೆಯನ್ನು ಅವರಿಗಾಗಿ ಹಾಸ್ಟೆಲಿನಿಂದ ಕಳಿಸಲಾಗುತ್ತಿತ್ತು.  ಹಾಸ್ಟೆಲಿನಲ್ಲಿ  ಬಡಿಸುವ ಡ್ಯೂಟಿ ಇದ್ದವರಿಗೂ ಅದರಿಂದ ಸ್ವಲ್ಪ ಪಾಲು ಸಲ್ಲುತ್ತಿತ್ತು.  

ಹುಡುಗರಿಗೆ ಕಾಕಿ ಚಡ್ಡಿ ಮತ್ತು ಬಿಳಿ ಶರ್ಟ್ ಹಾಗೂ ಹುಡುಗಿಯರಿಗೆ ನೀಲಿ ಲಂಗ / ಸೀರೆ ಯಾ ಹಾಫ್ ಸೀರೆ  ಮತ್ತು ಬಿಳಿ ಬ್ಲೌಸ್ ಸಮವಸ್ತ್ರ ಆಗಿತ್ತು. ಪಂಜಾಬಿ ಡ್ರೆಸ್ ಎಂದು ಕರೆಯಲಾಗುತ್ತಿದ್ದ  ಚೂಡಿದಾರ್ ಇನ್ನೂ ಅಲ್ಲಿ ಚಾಲ್ತಿಗೆ ಬಂದಿರಲಿಲ್ಲ.  ಶನಿವಾರ ಸಮವಸ್ತ್ರಕ್ಕೆ ವಿನಾಯಿತಿ.

ಈ ಸಂದರ್ಭದಲ್ಲಿ ವಿವಿಧ  ಅಧ್ಯಾಪಕರ ದಿರಿಸಿನ ಉಲ್ಲೇಖವೂ ಅಪ್ರಸ್ತುತ ಆಗಲಾರದು. ಮುಖ್ಯೋಪಾಧ್ಯಾಯ ಆರ್.ಎನ್. ಭೀಡೆಯವರದ್ದು ಯಾವಾಗಲೂ ಕಚ್ಚೆ ಪಂಚೆ ಮತ್ತು ಬಿಳಿ ಬಣ್ಣದ  ಖಾದಿ  ಜುಬ್ಬ. ಆರ್.ಡಿ. ಶಾಸ್ತ್ರಿ ಕಚ್ಚೆ ಪಂಚೆ ಉಟ್ಟು ಕಫ್ ಲಿಂಕ್ಸ್  ಇರುವ ಉದ್ದ ತೋಳಿನ ಬಿಳಿ ಶರ್ಟ್ ಮತ್ತು ಪಂಪ್ ಶೂ ಧರಿಸುತ್ತಿದ್ದರು.  ಕನ್ನಡದ ಸೋಮಯಾಜಿ ಹಾಗೂ ಶರ್ಮಾ ಅವರು ಬಿಳಿ ಮುಂಡು ಉಟ್ಟು  ಬಿಳಿ ಪೈರನ್  ತೊಟ್ಟುಕೊಳ್ಳುತ್ತಿದ್ದರು. ಸಂಸ್ಕೃತದ ಗೋಪಾಲ ಮಾಸ್ಟರದ್ದು ಬಿಳಿ ಮುಂಡು, ತಿಳಿ ಬಣ್ಣದ ಶರ್ಟು ಮತ್ತು ತಲೆಗೆ ಬಿಳಿ ಗಾಂಧೀ ಟೋಪಿ. ಉಳಿದವರೆಲ್ಲ  ಪ್ಯಾಂಟು, ಶರ್ಟು / ಬುಷ್ ಶರ್ಟು ಧರಿಸುತ್ತಿದ್ದರು.  ಆನಂದ ಸಾಲಿಯಾನ್ ಯಾವಾಗಲೂ  ಇನ್ಸರ್ಟ್ ಮಾಡಿ ಫಳ ಫಳ ಹೊಳೆಯುವ ಶೂ ಧರಿಸುತ್ತಿದ್ದ ಸೊಗಸುಗಾರ.

ಅದು ವರೆಗೆ ಉಜಿರೆಯಲ್ಲಿ ಕಾಣಿಸುತ್ತಿದ್ದ ಟೂ ವ್ಹೀಲರುಗಳೆಂದರೆ ಮಾಳಿಗೆ ಡಾಕ್ಟ್ರು ಮತ್ತು ಉಜಿರೆಯ ಆಢ್ಯ ಮಹನೀಯರಲ್ಲೊಬ್ಬರಾದ  ಪಡ್ವೆಟ್ಣಾಯರು ಬಳಸುತ್ತಿದ್ದ, ನಂತರ ಬಂದ ಸುವೇಗಾವನ್ನು ಹೋಲುತ್ತಿದ್ದ ಲ್ಯಾಂಬ್ರೆಟ್ಟಾ  ಸ್ಕೂಟರೆಟ್ಟುಗಳು ಮಾತ್ರ. ಪಡ್ವೆಟ್ನಾಯರಲ್ಲಿ ಚಲ್ತೀ ಕಾ ನಾಮ್ ಗಾಡಿ ಮಾದರಿಯ ಕಾರೂ ಇತ್ತು.  ಅದಕ್ಕೆ ಜನರು ಚಂದ್ರಮಂಡಲ ಎಂದು ಹೆಸರಿಟ್ಟಿದ್ದರು.  ನಾನು ಒಂಭತ್ತನೇ ತರಗತಿಯಲ್ಲಿರುವಾಗ ಶಂಕರನಾರಾಯಣ ರಾವ್ ಲ್ಯಾಂಬ್ರೆಟ್ಟಾ ಸ್ಕೂಟರ್ ಖರೀದಿಸಿದರು. ಕೆಲವೇ ದಿನಗಳಲ್ಲಿ ಆರ್.ಡಿ. ಶಾಸ್ತ್ರಿಯವರಿಗೆ  ರಾಜದೂತ್ ಮೋಟರ್ ಸೈಕಲ್  ಬಂತು.  ಸ್ವಲ್ಪ ಸಮಯದ ನಂತರ ಸಂಸ್ಕೃತದ ಗೋಪಾಲ ಮಾಸ್ಟ್ರು ಒಂದು ಬೇಬಿ ಫಿಯೆಟ್ ಕಾರು ಕೊಂಡರು.  ನಂತರ ಅದನ್ನು ಅಂಬಾಸೆಡರಿಗೆ ಬದಲಾಯಿಸಿದರು.    ನಾಗರಾಜ ಪೂವಣಿಯವರು ಸೈಕಲಲ್ಲಿ ಶಾಲೆಗೆ ಬರುತ್ತಿದ್ದರು. ‘ನಾವುಜಿರೆ’ ಎಂಬ ಹೆಸರಲ್ಲಿ ಅವರು ಪತ್ರಿಕೆಗಳಿಗೆ ಲೇಖನಗಳನ್ನು ಬರೆಯುತ್ತಿದ್ದರು.

ನಾನಿದ್ದ ಮೂರು ವರ್ಷವೂ ನಮ್ಮ ಕ್ಲಾಸಿನ  ಯಾವುದೇ ವಿದ್ಯಾರ್ಥಿಯನ್ನು ಕಠಿಣವಾಗಿ ದಂಡಿಸಿದ್ದಾಗಲಿ, ಕ್ಲಾಸಿನಿಂದ ಹೊರ ಹಾಕಿದ್ದಾಗಲೀ ಇಲ್ಲ.  ಪಿ.ಟಿ. ಮಾಸ್ಟ್ರಾಗಿದ್ದ ಪದ್ಮರಾಜರು ಮಾತ್ರ  ‘ನಿಮ್ಮನ್ನೆಲ್ಲ ರಿಪೇರಿ ಮಾಡ್ತೇನೆ ಗೊತ್ತಾಯ್ತಲ್ಲ’ ಅನ್ನುತ್ತಾ ವಿನಾ ಕಾರಣ ಎರಡೂ ಕೈ ಮೇಲೆತ್ತಿಕೊಂಡು  ಗ್ರೌಂಡ್ ಸುತ್ತ ಓಡುವ ಸಾಮೂಹಿಕ ದಂಡನೆ ಕೊಡುತ್ತಿದ್ದರು.  ಆರ್. ಡಿ. ಶಾಸ್ತ್ರಿಗಳಿಗೆ ಸಿಟ್ಟು ಬಂದರೆ ತಪ್ಪಿತಸ್ಥನ  ಕಿವಿ ಹಿಂಡಿ ಅಲ್ಲಿಂದಲೇ ಕೈ ಜಾರಿಸಿ ಮೆತ್ತಗೆ ಕೆನ್ನೆಗೆ ಹೊಡೆದಂತೆ ಮಾಡುತ್ತಿದ್ದರು.  ನಾಗರಾಜ ಪೂವಣಿಯವರ  ಕ್ಲಾಸಿನಲ್ಲಿ ಯಾರಾದರೂ ಆಕಳಿಸಿದರೆ ಅವರ ಮುಖದ ಸುತ್ತ ಚಿಟಿಕೆ ಹೊಡೆಯುತ್ತಿದ್ದರು. ಆನಂದ ಸಾಲಿಯಾನರಿಗೆ ಮಾತ್ರ ಸಿಟ್ಟು ಸ್ವಲ್ಪ ಜಾಸ್ತಿ.  10ನೇ ತರಗತಿಯಲ್ಲಿರುವಾಗೊಮ್ಮೆ ಅವರು ಕೊಟ್ಟಿದ್ದ ಅರ್ಥವಾಗದ ಇಂಗ್ಲೀಷ್ ಗ್ರಾಮರಿನ ಒಂದು ಅಸೈನ್‍‍ಮೆಂಟ್ ಮಾಡದಿದ್ದ ವಿದ್ಯಾರ್ಥಿಗಳ ಕೆನ್ನೆ ಬಿಸಿ ಮಾಡಿದ್ದರು.  ನಾನು ಪೂರ್ತಿ ಆಗಿದೆ ಎಂದು ಸುಳ್ಳು ಹೇಳಿ ತಪ್ಪಿಸಿಕೊಂಡಿದ್ದೆ.  ಸಂಸ್ಕೃತದ ಗೋಪಾಲ ಮಾಸ್ಟರು ಕುರುಚಲು ಗಡ್ಡ ಇದ್ದಾಗ ಸೌಮ್ಯವಾಗಿಯೂ ಗಡ್ಡ ತೆಗೆದುಕೊಂಡ ದಿನ ಮುಂಗೋಪಿಯಾಗಿಯೂ ಇರುತ್ತಿದ್ದರು.  ಪಾಠ ಮಾಡಲು ಮನಸ್ಸಿಲ್ಲದ ದಿನ ಅವರು  ‘ವೋದಿ ಮಕ್ಳೇ, ಇವತ್ತು ವೋದೋದು ವೋದೋದು’ ಅನ್ನುತ್ತಿದ್ದರು. ಒಂದು ದಿನ ಅವರು ಎಷ್ಟು ಹೊತ್ತಾದರೂ ಕ್ಲಾಸಿಗೆ ಬರದಿದ್ದಾಗ ಹುಡುಗನೊಬ್ಬ ಅವರನ್ನು ಅಣಕಿಸುತ್ತಾ ‘ವೋದಿ ಮಕ್ಳೇ,  ವೋದೋದು ವೋದೋದು’ ಎಂದು ಗಟ್ಟಿಯಾಗಿ ಹೇಳಿದ.  ಅದೇ ಹೊತ್ತಿಗೆ ಕ್ಲಾಸನ್ನು ಪ್ರವೇಶಿಸಿದ ಅವರ ಕಿವಿಗೂ ಅದು ಬಿತ್ತು.  ಆದರೆ ಆ ದಿನ ಅವರು ಕುರುಚಲು ಗಡ್ಡದ  ಸೌಮ್ಯ ಸ್ಥಿತಿಯಲ್ಲಿದ್ದುದರಿಂದ ಹಾಗೇ  ನಕ್ಕು ಸುಮ್ಮನಾದರು.

ಹಾಸ್ಟೆಲ್ ಬಿಲ್ಡಿಂಗಿನ ಒಂದು ರೂಮಿನಲ್ಲಿ ವಾಸ್ತವ್ಯ  ಮಾಡಿ ಸ್ವಂತ ಅಡುಗೆ ಮಾಡಿಕೊಳ್ಳುತ್ತಿದ್ದ ಬಿ.ಎಲ್. ರಾವ್ ಎಂಬ ಪ್ರೈಮರಿ ವಿಭಾಗದ ಅಧ್ಯಾಪಕರಿದ್ದರು. ಯಕ್ಷಗಾನದವರಂತೆ ಕೂದಲು ಬೆಳೆಸಿ ಜುಟ್ಟು ಕಟ್ಟಿಕೊಂಡು  ಕಚ್ಚೆ ಪಂಚೆ,  ಬಿಳಿ ಪೈರನ್ ಧರಿಸುತ್ತಿದ್ದ ಅವರು ಶಿಕ್ಷೆಯ ರೂಪದಲ್ಲಿ ವಿದ್ಯಾರ್ಥಿನಿಯರ ಕೆನ್ನೆಯ ಬೆಣ್ಣೆ ತೆಗೆಯುವುದಿತ್ತೆಂದು ಹೇಳುವುದನ್ನು ಕೇಳಿದ್ದೇನೆ. ಒಮ್ಮೊಮ್ಮೆ  ಹಾಸ್ಟೆಲಿನ  ಕಿಲಾಡಿ ಹುಡುಗರನ್ನು ಗದರಿಸಲು ವಾರ್ಡನ್ ನಾಗಪ್ಪಯ್ಯರಿಗೆ ಸಹಾಯಕರಾಗಿ ಅವರು ಬರುವುದಿತ್ತು.

ಎಲ್ಲ ಅಧ್ಯಾಪಕರು ಗಂಟೆ ಹೊಡೆದ ತಕ್ಷಣ ತಮ್ಮ ಪೀರಿಯಡಿನ , ವಿಶೇಷವಾಗಿ ಪೂರ್ವಾಹ್ನದ ಕೊನೆಯ ಪೀರಿಯಡಿನ ಪಾಠ ಕೊನೆಗೊಳಿಸುತ್ತಿದ್ದುದು  ನನಗೆ ತುಂಬಾ ಇಷ್ಟವಾಗುತ್ತಿತ್ತು.  ಎಲ್ಲ ಅಧ್ಯಾಪಕರು ವಿದ್ಯಾರ್ಥಿಗಳೊಂದಿಗೆ ಇಂಟರಾಕ್ಟಿವ್ ಆಗಿದ್ದುಕೊಂಡು ಕ್ಲಾಸುಗಳನ್ನು ಉಲ್ಲಾಸಭರಿತವಾಗಿಸುತ್ತಿದ್ದರು.  ಆರ್.ಡಿ. ಶಾಸ್ತ್ರಿ ಅವರು ‘ವನ್ ಟೂ ಥ್ರೀ ಫೋರ್ ಫೈವ್ ಎನ್ನಿರೊ, ಕ್ರಿಯಾಪದವ ಸೇರ್ಸಿ ಕೊಂಡು ಪ್ರಶ್ನೆ ಕೇಳಿರೋ, ಹೂ ಎಂಬ ಪ್ರಶ್ನೆ ಕೇಳಿ ಬೆಚ್ಚಿ ಬಿದ್ದಿದ್ದಾ , ಕರ್ತೃ ಪದವು ತಾನೆ ಎಂದು ಸಾರಿ ಹೇಳಿದಾ’ ಎಂಬ ಪದ್ಯ ಹೇಳುತ್ತಿದ್ದರು. ಏನಾದರೂ ಲೆಕ್ಕಾಚಾರ ಮಾಡಬೇಕಾದರೆ ನಮಗೆ ಗೊತ್ತಿಲ್ಲದ ಭಾಷೆಯಲ್ಲಿ ಮಗ್ಗಿ ಹೇಳುತ್ತಿದ್ದರು.  ಕೆಲವೊಮ್ಮೆ ಜೋಕ್ ಮಾಡುತ್ತಿದ್ದರು.  ಒಮ್ಮೆ ‘ಇಲ್ಲಿ ಮಲಬಾರದವರು ಯಾರಿದ್ದೀರಿ’ ಎಂದು ಕೇಳಿದರು.  ಕೇರಳ ಮೂಲದ ಒಬ್ಬ ಹುಡುಗ ಎದ್ದು ನಿಂತು ‘ನಾನು ಸಾರ್’ ಅಂದಾಗ ‘ಒಂದೋ ಒಂಚೂರು ಹರಳೆಣ್ಣೆ ತೆಗೊ, ಇಲ್ಲವಾದರೆ ಡಾಕ್ಟರ್ ಬಳಿ ಹೋಗು’ ಎಂದು ಸಲಹೆ ಕೊಟ್ಟರು!

ಆಗ ರುಕ್ಮಯ್ಯ ಎಂಬ ಸರಳ ಸಜ್ಜನರು ಆಫೀಸ್ ಕೆಲಸ ನೋಡಿಕೊಳ್ಳುತ್ತಿದ್ದರು. ಲಿಂಗಪ್ಪ ಎಂಬವರು ಹೈಸ್ಕೂಲಿನ ಎಟೆಂಡರ್ ಆಗಿದ್ದರು.  ಅವರು ಪುಸ್ತಕವೊಂದನ್ನು ಹಿಡಿದು ಕ್ಲಾಸಿಗೆ ಪ್ರವೇಶಿಸಿದರೆ ರಜೆ ಕುರಿತಾದ ಮಾಹಿತಿಯೇನಾದರೂ ಇರಬಹುದೇ ಎಂಬ ಕುತೂಹಲ ನಮ್ಮಲ್ಲಿ ಮೂಡುತ್ತಿತ್ತು. 1964ರಲ್ಲಿ ನೆಹರೂ ನಿಧನಕ್ಕೆ ಸಂಬಂಧಿಸಿದ ರಜೆಯ ಕುರಿತಾದ ನೋಟೀಸನ್ನು ಅವರು ಈ ರೀತಿ ತಂದಾಗ ನಾನು ಅವರನ್ನು ಮೊದಲು ನೋಡಿದ್ದು. ನಾವು ಅವರ ಹೆಸರನ್ನು Gender Father ಎಂದು ಇಂಗ್ಲೀಷಿಗೆ ಭಾಷಾಂತರಿಸಿದ್ದೆವು. ಅದನ್ನೇ ವಿಸ್ತರಿಸಿ ಮುಖ್ಯ ಮಂತ್ರಿಯವರನ್ನು True Gender Father ಮಾಡಿದ್ದೆವು. ಆ ಮೇಲೆ ಅಣ್ಣಿ ಪೂಜಾರಿ ಎಂಬವರೂ ಅಟೆಂಡರ್ ಆಗಿ ಸೇರಿಕೊಂಡರು.  ಅವರಿಗೆ ಆರ್.ಎನ್. ಭಿಡೆಯವರು ಹೊಸ ಸೈಕಲೊಂದನ್ನು ಕೊಡಿಸಿದ್ದು ಅದನ್ನು ಅವರು ಒಮ್ಮೊಮ್ಮೆ  ನಮಗೂ ಓಡಿಸಲು ಕೊಡುತ್ತಿದ್ದರು.  ಕಾಕ್ಯೆ ಮತ್ತು ಕರಿಯ ಎಂಬವರು ಪರಿಸರದ ಸ್ವಚ್ಛತೆ ಕಾಪಾಡುವ ಕೆಲಸ ನಿರ್ವಹಿಸುತ್ತಿದ್ದರು.

ಉಜಿರೆ ಹೈಸ್ಕೂಲ್   ಸಹಶಿಕ್ಷಣ ಸಂಸ್ಥೆಯಾಗಿದ್ದರೂ ಬಾಲಕ ಬಾಲಕಿಯರು ಪರಸ್ಪರ ಮಾತನಾಡಿಕೊಳ್ಳುವಂತಿರಲಿಲ್ಲ. ಇದು ಅಲಿಖಿತ ನಿಯಮವಾದರೂ  ಯಾರೂ ಇದನ್ನು ಮುರಿಯುತ್ತಿರಲಿಲ್ಲ.  ಹುಡುಗಿಯರು ಗರ್ಲ್ಸ್ ರೂಮಿನಲ್ಲಿದ್ದು ಪಾಠಗಳು ಆರಂಭವಾಗುವ ಹೊತ್ತಿಗೆ ಸರಿಯಾಗಿಯಷ್ಟೇ ಕ್ಲಾಸನ್ನು ಪ್ರವೇಶಿಸುತ್ತಿದ್ದರು.  ನಾನು ಡಿಗ್ರಿ ಮುಗಿಸುವ ವರೆಗೂ  ಇದೇ ಪದ್ಧತಿ ಆಗ ಎಸ್. ಡಿ. ಎಂ. ಕಾಲೇಜಿನಲ್ಲೂ  ಇತ್ತು ಎಂದು ಹೇಳಿದರೆ ಈಗಿನವರಿಗೆ ನಂಬಲು ಕಷ್ಟವಾಗಬಹುದು!  ಆದರೆ ಓರೆ ಕಣ್ಣಿನಿಂದ ಹುಡುಗಿಯರನ್ನು ಕದ್ದು ನೋಡುವ ‘ತೋಟೆ ಹೊಡೆಯುವುದು’ ಎನ್ನಲಾಗುತ್ತಿದ್ದ ವಿದ್ಯಮಾನ ಆಗ ಇರಲಿಲ್ಲ ಎಂದರೆ ಸುಳ್ಳು ಹೇಳಿದಂತಾದೀತು! 

ನೋಡಿದಿರಾ,  ಶಾಲಾ ಗ್ರೂಪ್ ಫೋಟೊ ಒಂದು ಎಷ್ಟೊಂದು ನೆನಪುಗಳನ್ನು ಹೊರ ತಂದಿತು.



ಮೇಲೆ ಕಾಣುತ್ತಿರುವ ಗ್ರೂಪ್ ಫೋಟೊದಲ್ಲಿ  ನೆಲದ ಮೇಲೆ ಕುಳಿತಿರುವ ಹುಡುಗಿಯರ ಸಾಲಿನ ಮಧ್ಯದಲ್ಲಿರುವ ಸರಸ್ವತಿಯ ಮೂರ್ತಿಯನ್ನು ಗಮನಿಸಿ. ಹೈಸ್ಕೂಲ್ ಕಟ್ಟಡದ ಮುಖಮಂಟಪದ ಮೇಲ್ಭಾಗದಲ್ಲಿದ್ದ ಖಾಲಿ ಜಾಗದಲ್ಲಿ ಇರಿಸಲೆಂದು ನಮ್ಮ ಬ್ಯಾಚಿನವರು ಶಾಲೆಗೆ ನೀಡಿದ ಉಡುಗೊರೆ ಅದು. ಅದನ್ನು ಅಲ್ಲಿಟ್ಟಿದ್ದರೋ ಇಲ್ಲವೋ ತಿಳಿಯದು.

ಮನೆಯವರಿಗೆ ಆರ್ಥಿಕ ಹೊರೆ ಕಮ್ಮಿ ಆಗಲೆಂದು ಆಗ ನಾವು ಮುಂದಿನ ಕ್ಲಾಸಿಗೆ ಹೋಗುವಾಗ ಬಳಸಿದ ಪಠ್ಯ ಪುಸ್ತಕಗಳ ಇಡೀ ಸೆಟ್ಟನ್ನು ಅಗತ್ಯ ಇರುವವರಿಗೆ ವಿಕ್ರಯಿಸುತ್ತಿದ್ದೆವು. ಚೆನ್ನಾಗಿ ಇಟ್ಟುಕೊಂಡ ಮುಂದಿನ ಕ್ಲಾಸಿನ  ಸೆಟ್ಟು ಸಿಕ್ಕಿದರೆ ನಾವೂ ಅಂಥದ್ದನ್ನೇ ಕೊಳ್ಳುತ್ತಿದ್ದುದು.  ಹೀಗಾಗಿ ಎಲ್ಲ ಕ್ಲಾಸುಗಳ  ಪುಸ್ತಕಗಳನ್ನು ಸಂಗ್ರಹಿಸಿ ಇಟ್ಟುಕೊಳ್ಳಲು ಸಾಧ್ಯವಾಗಲಿಲ್ಲ.  ಇಲ್ಲದಿದ್ದರೆ ಫೋಟೊದಂತೆ ಅವು ನೆನಪಿನ ದೊಡ್ಡ ಭಂಡಾರವೇ ಆಗಿರುತ್ತಿದ್ದವು.














3 comments:

  1. Estondu swachchawada chayachitra, Sudeegha lekhanakke bhesh.

    ReplyDelete
    Replies
    1. ಪ್ರತಿಕ್ರಿಯೆಗೆ ಧನ್ಯವಾದ. ದಯವಿಟ್ಟು ನಿಮ್ಮ ಪರಿಚಯ ತಿಳಿಸಿ.

      Delete
    2. ನಿಮ್ಮ ಅನುಭವಗಳ ನಿರೂಪಣೆ ತುಂಬಾ ವಿವರವಾಗಿ ಸೊಗಸಾಗಿ ಇದೆ.... ಡಿ.ವಾಸುದೇವ ಪಟ್ವರ್ಧನ್

      Delete

Your valuable comments/suggestions are welcome