Wednesday, 30 March 2016

ಪಿ. ಸುಶೀಲ - ಹತ್ತು ಹಾಡು

     ವಿವಿಧ ಭಾಷೆಗಳಲ್ಲಿ ಅತಿ ಹೆಚ್ಚು ಹಾಡುಗಳನ್ನು ಹಾಡಿ ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್‌ನಲ್ಲಿ ಸ್ಥಾನ ಪಡೆದುದಕ್ಕಾಗಿ ಪಿ.ಸುಶೀಲ(ಪುಲಪಾಕ ಸುಶೀಲ ಮೋಹನ್)  ಅವರು ಸುದ್ದಿಯಲ್ಲಿದ್ದಾರೆ. 60-70ರ ದಶಕಗಳಲ್ಲಿ ಒಮ್ಮೆಗೆ ಓರ್ವ ಪುರುಷ ಗಾಯಕ ಮಾತ್ರ ಮುಂಚೂಣಿಯಲ್ಲಿರುತ್ತಿದ್ದರೂ  ಪಿ.ಸುಶೀಲ ಮತ್ತು ಎಸ್. ಜಾನಕಿ ಹಿಂದಿಯ ಲತಾ ಮಂಗೇಶ್ಕರ್ ಮತ್ತು ಆಶಾ ಭೋಸ್ಲೆಯಂತೆ ಸಮಾನಾಂತರವಾಗಿದ್ದುಕೊಂಡು ಬಹು ವರ್ಷಗಳ ಕಾಲ ನಮ್ಮನ್ನು ರಂಜಿಸಿದವರು.  ಆದರೂ ಸೂಕ್ಷ್ಮವಾಗಿ ಗಮನಿಸಿದರೆ ಕೆಲವು ಚಿತ್ರಗಳಲ್ಲಿ ಸುಶೀಲ ಮಾತ್ರ,  ಕೆಲವಲ್ಲಿ ಜಾನಕಿ ಮಾತ್ರ ಇನ್ನು ಕೆಲವಲ್ಲಿ ಇಬ್ಬರೂ ಹಾಡಿರುವುದು ಕಂಡುಬರುತ್ತದೆ.  ಉದಾಹರಣೆಗಾಗಿ ಬಂಗಾರದ ಮನುಷ್ಯ, ಶರಪಂಜರ ಮುಂತಾದ ಚಿತ್ರಗಳಲ್ಲಿ ಸುಶೀಲ ಮಾತ್ರ ಇದ್ದರು.  ಕನ್ಯಾರತ್ನ , ಕುಲವಧು ಚಿತ್ರಗಳಲ್ಲಿ ಜಾನಕಿ ಮಾತ್ರ ಹಾಡಿದ್ದರು. ಶ್ರೀ ಕೃಷ್ಣ ದೇವರಾಯ, ಮನ ಮೆಚ್ಚಿದ ಮಡದಿ ಚಿತ್ರಗಳಲ್ಲಿ ಇಬ್ಬರ ಹಾಡುಗಳೂ ಇದ್ದವು.  ಆದರೆ PBS-SPB ಸ್ಥಿತ್ಯಂತರ ಆಗುವ ಹೊತ್ತಿಗೆ ವಾಣಿ ಜಯರಾಮ್ ಆಗಮನವೂ ಆದದ್ದು ಜಾನಕಿಯವರ ಮೇಲೆ ಅಷ್ಟೇನೂ ಪರಿಣಾಮ ಬೀರದಿದ್ದರೂ ಸುಶೀಲ ಅವರು ಕೊಂಚ ಹಿನ್ನೆಲೆಗೆ ಸರಿಯುವಂತಾಯ್ತು.

     ಪಿ.ಸುಶೀಲ ಹಾಡಿದ ಸೋಲೊ ಹಾಡುಗಳು ಎಷ್ಟು ಆಕರ್ಷಕವೋ ಅವರ ಯುಗಳ ಗೀತೆಗಳೂ ಅಷ್ಟೇ ಮನಮೋಹಕ.  ಅವುಗಳ ಪೈಕಿ ನನ್ನಿಷ್ಟದ 10 ಹಾಡುಗಳು ಇಲ್ಲಿವೆ.  ಇದು ಟಾಪ್ ಟೆನ್ ಅಲ್ಲ.  ಎಲ್ಲೆಡೆ ಕೇಳ ಸಿಗುವ ಹೂವು ಚೆಲುವೆಲ್ಲವಿರಹ ನೂರು ತರಹ ಮುಂತಾದವುಗಳನ್ನು ಸೇರಿಸಿಲ್ಲ.


1.  ಅಮರ ಮಧುರ ಪ್ರೇಮ

ಟಿ.ಜಿ.ಲಿಂಗಪ್ಪ ಸಂಗೀತ ನಿರ್ದೇಶನವಿರುವ ರತ್ನಗಿರಿ ರಹಸ್ಯ ಚಿತ್ರದ ಈ ಹಾಡು ಅವರ ಅತ್ಯಂತ ಜನಪ್ರಿಯ ಗೀತೆಗಳ ಪೈಕಿ ಒಂದು. ತಗಡುಗಳ ಶೆಡ್ಡೊಂದರಲ್ಲಿ ಇದನ್ನು ಧ್ವನಿಮುದ್ರಿಸಲಾಗಿತ್ತು ಎಂದು ಪಂತುಲು ಅವರ ಸಹಾಯಕರಾಗಿದ್ದ ಪುಟ್ಟಣ್ಣ ಕಣಗಾಲ್ ಒಂದು ಕಡೆ ಹೇಳಿದ್ದರು. ಒಂದು ಕಾಲದಲ್ಲಿ ಈ ಹಾಡು, ಅದರ ಧಾಟಿ ಗೊತ್ತಿಲ್ಲದವರೇ ಇರಲಿಲ್ಲ ಎಂದರೆ ಅತಿಶಯೋಕ್ತಿ ಆಗಲಾರದು.   ಈ ಧಾಟಿಯನ್ನಾಧರಿಸಿ ರಚಿಸಲಾದ ಭಜನೆಗಳಿಗೆ, ನಾಟಕದ ಹಾಡುಗಳಿಗೆ ಲೆಕ್ಕವೇ ಇರಲಿಕ್ಕಿಲ್ಲ.  ಹಾರ್ಮೋನಿಯಮ್  ನುಡಿಸುತ್ತಾ ಮನೆ ಮನೆಗೆ ಹೋಗುವ ವೃತ್ತಿಯ ಸ್ಟ್ರೀಟ್ ಸಿಂಗರ್‌ಗಳಿಗಂತೂ ಇದು ಬಲು ಮೆಚ್ಚು. ಗ್ರಾಮಫೋನ್ ತಟ್ಟೆಯ ಚರ ಚರ ಸದ್ದು ಮತ್ತು ಕೊನೆ ಭಾಗದಲ್ಲಿರುವ ಕಿರಿಚುವಿಕೆ ಈ ಹಾಡಿನ ಅವಿಭಾಜ್ಯ ಅಂಗಗಳು.  ಹೀಗಾಗಿ ವೇದಿಕೆಗಳಲ್ಲಿ ಈ ಹಾಡು ಅಷ್ಟೊಂದು ಕಳೆಗಟ್ಟುವುದಿಲ್ಲ.  ಇದರ ತಮಿಳು, ತೆಲುಗು ಅವತರಣಿಕೆಗಳನ್ನೂ ಸುಶೀಲಾ ಅವರು ಇಷ್ಟೇ ಸೊಗಸಾಗಿ ಹಾಡಿದ್ದಾರೆ.  ಪಂತುಲು ಅವರು ಈ ಚಿತ್ರವನ್ನು ಹಿಂದಿಯಲ್ಲೂ ಸುಹಾಗ್ ಎಂಬ ಹೆಸರಲ್ಲಿ ಬಿಡುಗಡೆಗೊಳಿಸಿದ್ದರು.  ಅದರಲ್ಲಿ ಈ ಹಾಡು ಹಾಡಿದ್ದು ಆಶಾ ಭೋಸ್ಲೆ



2.  ಜಲಲ ಜಲಲ ಜಲ ಧಾರೆ

ವಾಲ್ಮೀಕಿ ಚಿತ್ರದ ಇದು ಸಮೂಹ ಗಾನ ಸ್ಪರ್ಧೆಗಳಿಗೆ ಹೇಳಿ ಮಾಡಿಸಿದ ಹಾಡು.  ಯಾವುದೇ ಸಂಗೀತೋಪಕರಣಗಳ ಸಹಾಯವಿಲ್ಲದೆ ಹಾಡಿದರೂ ರಂಜಿಸುತ್ತದೆ.  ಸಂಗೀತ ಘಂಟಸಾಲ.



3.  ಅಂಕದ ಪರದೆ ಜಾರಿದ ಮೇಲೆ

ಪಾಲುಂ ಪಳಮುಂ ಚಿತ್ರದ ಕನ್ನಡ ಅವತರಣಿಕೆ ಬೆರೆತ ಜೀವದ ಹಾಡಿದು.  ಈ ಚಿತ್ರಕ್ಕೆ ವಿಜಯ ಭಾಸ್ಕರ್ ಅವರು ಮೂಲ ತಮಿಳು ಹಾಡುಗಳ ಒಂದಿಷ್ಟು ಛಾಯೆಯೂ ಇರದ ಆಕರ್ಷಕ ರಾಗ ಸಂಯೋಜನೆ ಮಾಡಿದ್ದಾರೆ.



4.  ಚೆಲುವಿನ ಕಲೆ ಬಾಳ ಲೀಲೆ

ಉಯ್ಯಾಲೆ ಚಿತ್ರಕ್ಕಾಗಿ ಯಮನ್ ಕಲ್ಯಾಣ್ ರಾಗವನ್ನಾಧರಿಸಿ ರಚಿತವಾದ ಬಲು ಸುಂದರ ಹಾಡಿದು. ಇದೂ ವಿಜಯ ಭಾಸ್ಕರ್ ಅವರದ್ದೇ ಸಂಗೀತ ಸಂಯೋಜನೆ.



5.  ಪ್ರಿಯ ಜೀವನದ ಪರ್ಣ ಕುಟಿಯೊಳ್

ಹಿಂದಿಯಿಂದ ಕನ್ನಡಕ್ಕೆ ಡಬ್ ಆದ ಸಂಪೂರ್ಣ ರಾಮಾಯಣ ಚಿತ್ರದ ಈ ಹಾಡು ಬಲು ಆಕರ್ಷಕ.  ಸುಮಾರು ಒಂದು ನಿಮಿಷದ ವರೆಗಿನ  prelude, ಕೋರಸ್ ಇತ್ಯಾದಿಗಳ ನಂತರ ಆರಂಭವಾಗುವ ಹಾಡಲ್ಲಿ ಒಂದು ಚರಣ ಮಾತ್ರ ಇದೆ.  ಕನ್ನಡದಲ್ಲಿ ಕಪ್ಪು ಬಿಳುಪು ಚಿತ್ರಗಳು ಮಾತ್ರ ಬರುತ್ತಿದ್ದ ಆ ಕಾಲದಲ್ಲಿ ಈ ಸಂಪೂರ್ಣ ವರ್ಣರಂಜಿತ ರಾಮಾಯಣವನ್ನು ನೋಡಲು ದೂರ ದೂರದ ಊರುಗಳಿಂದ ಜನರು ಸಿನಿಮಾ ಟಾಕೀಸಿಗೆ ಬರುತ್ತಿದ್ದರು. ಹಿಂದಿಯ ವಸಂತ ದೇಸಾಯಿ ಸಂಗೀತವನ್ನು ಕನ್ನಡಕ್ಕೆ ಅಳವಡಿಸಿದ್ದು ವಿಜಯ ಭಾಸ್ಕರ್.



6.  ಪ್ರೀತಿ ಹೊನಲೆ

ನವಜೀವನ ಚಿತ್ರದ ವಿಭಿನ್ನ ಶೈಲಿಯ ಜೋಗುಳ ಹಾಡು.  ಬೆರಳೆಣಿಕೆಯ ಸಂಗೀತ ಪರಿಕರಗಳನ್ನುಪಯೋಗಿಸಿ ರಾಜನ್ ನಾಗೇಂದ್ರ ಅವರು ರಾತ್ರಿಯ ನೀರವತೆ ಮತ್ತು ತಾಯಿಯ ತುಮುಲವನ್ನು ಪರಿಣಾಮಕಾರಿಯಾಗಿ ಚಿತ್ರಿಸಿದ್ದಾರೆ.  ಸೋರಟ್ ಅಶ್ವತ್ಥ್ ಅವರ ಸಾಹಿತ್ಯವೂ ಅಷ್ಟೇ ಅರ್ಥಪೂರ್ಣ.



7.  ಚೆಲುವಾಂತ ಚೆನ್ನಿಗನೆ

ಕನ್ನಡದ ಮೊದಲ ವರ್ಣ ಚಿತ್ರ ಎಂಬ ಖ್ಯಾತಿಯ ಅಮರ ಶಿಲ್ಪಿ ಜಕ್ಕಣ್ಣ  ಶಾಸ್ತ್ರೀಯ ಶೈಲಿಯ ನೃತ್ಯಗೀತೆ.  ಸಂಗೀತ ನಿರ್ದೇಶನ ಎಸ್.ರಾಜೇಶ್ವರ ರಾವ್..



8.  ಹಾರುತ ದೂರ ದೂರ

ರಾಣಿ ಹೊನ್ನಮ್ಮ ಚಿತ್ರಕ್ಕಾಗಿ    ಪಿ.ಬಿ.ಶ್ರೀನಿವಾಸ್ ಜೊತೆ ಹಾಡಿದ ಯುಗಳ ಗೀತೆ.  ವಿಜಯ ಭಾಸ್ಕರ್ ಅವರ ಆಕರ್ಷಕ  ವಾದ್ಯ ಸಂಯೋಜನೆ ಶಂಕರ್ ಜೈಕಿಶನ್ ಶೈಲಿಯನ್ನು ನೆನಪಿಸುತ್ತದೆ.



9.  ಜೇನಿರುಳು ಜೊತೆಗೂಡಿರಲು

ಹಿಂದಿಯ ಭಾಭಿ ಚಿತ್ರ ಕನ್ನಡದಲ್ಲಿ ಜೇನು ಗೂಡು ಆಗಿ ಬಂದಿತ್ತು.  ಆ ಚಿತ್ರಕ್ಕಾಗಿ ಸ್ವತಃ ಉತ್ತಮ arranger ಆಗಿದ್ದ ವಿಜಯಾ ಕೃಷ್ಣಮೂರ್ತಿ ರಾಗ ಸಂಯೋಜನೆಯಲ್ಲಿ ಪಿ.ಬಿ.ಎಸ್ ಜೊತೆ ಹಾಡಿದ ಬಲು ಸುಂದರ ಯುಗಳ ಗೀತೆ.



10.  ನೀ ನಡೆವ ಹಾದಿಯಲ್ಲಿ

ಬಂಗಾರದ ಹೂವು ಚಿತ್ರಕ್ಕಾಗಿ ಎಸ್. ಜಾನಕಿ ಅವರೊಂದಿಗೆ ರಾಜನ್ ನಾಗೇಂದ್ರ ಸಂಗೀತ ನಿರ್ದೇಶನದಲ್ಲಿ ಹಾಡಿದ ಬಂಗಾರದಂಥ ಹಾಡು.
 

Friday, 25 March 2016

ಮನದ ಕಿರು ಕಿಟಿಕಿ ತೆರೆಯುವ ಹಳೆ ಹಾಡುಗಳು


ಆಲಿಸಿರಿ ಒಂದೊಂದೆ ಹಳೆ ಹಾಡು ಹುಡುಕಿ
ನೆನಪುಗಳು ತೆರೆಯುವವು ಮನದ ಕಿರು ಕಿಟಿಕಿ
ಒಂದು ಹಾಡಲಿ ನೀವು ಆರನೇ ಕ್ಲಾಸು
ಇನ್ನೊಂದರಲಿ ಊರ ಸಿನಿಮ ಟಾಕೀಸು

ಎಷ್ಟೋ ಸಲ ಸಿನಿಮಾ ಹಾಡುಗಳಿಗೆ ಅವು ಸಿನಿಮಾವೊಂದರ ಭಾಗವಾಗಿರುವುದರ ಜೊತೆಗೆ ಬೇರೊಂದು ಅಸ್ತಿತ್ವವೂ ಇರುತ್ತದೆ.  ಯಾವುದೋ  ಸಂದರ್ಭದಲ್ಲಿ ಅವು ನಮ್ಮ ಜೀವನದ  ಒಂದು ಕ್ಷಣಕ್ಕೆ ತಳುಕುಹಾಕಿಕೊಂಡಿರುತ್ತವೆ. ಒಂದು ವೇಳೆ ನಾವು ಆ ಸಿನಿಮಾ ನೋಡಿದ್ದರೂ ಅವುಗಳನ್ನು ಮತ್ತೆ ಆಲಿಸಿದಾಗ ಸಂಬಂಧಿಸಿದ ಸಿನಿಮಾ ದೃಶ್ಯದ ಬದಲು  ಆ ಕ್ಷಣವನ್ನೇ ಕಣ್ಣೆದುರಿಗೆ ತರುತ್ತವೆ. ಎಷ್ಟೋ ಸಲ ಸಿಹಿ ಕಹಿ ನೆನಪುಗಳನ್ನು ಹೊತ್ತು ತರುವ ಇಂಥ  ಹಾಡುಗಳನ್ನು ನಾವು ಬರೀ ರೇಡಿಯೋದಲ್ಲೋ, ಇನ್ನಾರಾದರೂ ಹಾಡಿದ್ದನ್ನೋ ಕೇಳಿರುತ್ತೇವಷ್ಟೇ ಹೊರತು ಆ ಸಿನಿಮಾ ನೋಡಿರುವುದೂ ಇಲ್ಲ.

ಎಂದೋ ಎಂದೋ ಎಂದೋ  ಎಂದೋ ನಿನ್ನ ದರುಶನ ಹಾಡಿನ ಉಲ್ಲೇಖ ಬಂದಾಗ ನನಗೆ ಜಗನ್ಮೋಹಿನಿ ಸಿನಿಮಾ ಆಗಲಿ ಆ ಹಾಡಿನ ಮೂಲವಾದ ಮಹಲ್ ಚಿತ್ರದ ಆಯೇಗಾ ಆಯೇಗಾ ಆಯೇಗಾ ಆಯೇಗಾ ಆನೇವಾಲ ಆಗಲಿ ನೆನಪಾಗುವ ಬದಲು ನಮ್ಮಕ್ಕ ನನ್ನನ್ನು ತೊಟ್ಟಿಲಲ್ಲಿ ಮಲಗಿಸಿ ಇದನ್ನು ಹಾಡುತ್ತಿದ್ದ ದೃಶ್ಯದ flash back  ಕಣ್ಣಮುಂದೆ ಬರುತ್ತದೆ.  ರಮಯ್ಯಾ ವಸ್ತಾವಯ್ಯಾ ಹಾಡು ಕೇಳಿದರೆ ನನಗೆ ನೆನಪಾಗುವುದು  ಅದೇ ಧಾಟಿಯ ಒಹೊಯ್ಯ ಹೊಯ್ಯ ಹೊಯ್ಯ ಎಂಬ ಹಾಡಿಗೆ ನಮ್ಮ ಎಲಿಮೆಂಟರಿ ಶಾಲೆಯ ಮಾಸ್ಟರು ಮಾಡಿಸುತ್ತಿದ್ದ ಕುಮ್ಮಿ ಡ್ಯಾನ್ಸು. ಆರತಿ ಚಿತ್ರದ ಬಾರ್ ಬಾರ್ ತೊಹೆ ಕ್ಯಾ ಸಮ್‌ಝಾಯೆಂ  ಅಂದೊಡನೆ ನಾನು 5ನೇ ಕ್ಲಾಸ್ ಇದ್ದಾಗ ನಮ್ಮ ಮನೆಯ ಬಂದ ಮೊದಲ  second hand ನ್ಯಾಶನಲ್ ಎಕ್ಕೊ ರೇಡಿಯೊ ಕಣ್ಣ ಮುಂದೆ ಬರುತ್ತದೆ.  ನಾನು ಸ್ವತಃ ಟ್ಯೂನ್ ಮಾಡಿ ಅದರಲ್ಲಿ ಮೊದಲು ಕೇಳಿದ  ಹಾಡು ಅದು. ಅದನ್ನು ಹಾಡಿದವರ ವಿವರಗಳನ್ನೂ ಗಮನಿಸಿದ ನಾನು "ಇವತ್ತು ನಾನು ಲತಾ ಮಂಗೇಷ್ಕರ್ ಮತ್ತು ಮಹಮ್ಮದ್ ರಹಿ ಹಾಡಿದ್ದ ಹಾಡೊಂದನ್ನು ಕೇಳಿದೆ" ಎಂದು  ರೇಡಿಯೊ ಹಾಗೂ ಹಾಡುಗಳ ಬಗ್ಗೆ ಅದಾಗಲೇ ಒಂದಷ್ಟು ಅನುಭವಿಯಾಗಿದ್ದ ನಮ್ಮ ಅಣ್ಣನಿಗೆ ವರದಿಯೊಪ್ಪಿಸಿದೆ.  ಆಗ ಅವರು ನಕ್ಕು ಅದು ಮಹಮ್ಮದ್ ರಹಿ ಅಲ್ಲ. ಅವರ ಹೆಸರು ಮಹಮ್ಮದ್ ರಫಿ ಎಂದು ತಿದ್ದಿದರು.  ಕೆಲವೇ ತಿಂಗಳುಗಳಲ್ಲಿ 50 ವೋಲ್ಟಿನ ಗಜಗಾತ್ರದ ಬ್ಯಾಟರಿಯನ್ನು ಬಯಸುತ್ತಿದ್ದ ಈ ರೇಡಿಯೊ ಇನ್ಯಾರದೋ ಮನೆಯ ಮೇಜನ್ನು ಅಲಂಕರಿಸಿ 9 ವೋಲ್ಟ್  ಬ್ಯಾಟರಿಯಿಂದ ನಡೆಯುವ ಹೊಸ ನ್ಯಾಷನಲ್ ಎಕ್ಕೋ ಟೇಬಲ್  ಟ್ರಾನ್‌ಸಿಸ್ಟರ್ ನಮ್ಮ ಮನೆಗೆ ಪಾದಾರ್ಪಣೆ ಮಾಡಿತು. ಈ ಸಂದರ್ಭಕ್ಕೂ ಒಂದು ಹಾಡಿನ ಲಿಂಕ್ ಇದೆ.  ಹಳೆ ರೇಡಿಯೊ ಇದ್ದಾಗಲೇ ಅದಕ್ಕೆಂದೇ ಅರ್ಧ  ಭಾಗ ಗಾಜು ಅರ್ಧ ಭಾಗ ತಂತಿ ಜಾಳಿಗೆ ಇರುವ ಶಟರ್ ಹೊಂದಿದ ಒಂದು ಮರದ ಕಪಾಟು ತಯಾರಾಗಿತ್ತು.  ಈ ಹೊಸ ರೇಡಿಯೊ ಉಳ್ಳ ದೊಡ್ಡ ರಟ್ಟಿನ ಪೆಟ್ಟಿಗೆಯನ್ನು ನಮ್ಮ ಇಬ್ಬರು ಹಿರಿ ಅಣ್ಣಂದಿರು ಹೊತ್ತು ತಂದು ಮನೆಯೊಳಗೆ ಪ್ರವೇಶಿಸಿವುದಕ್ಕೂ ಮೊದಲು ಈ ದೊಡ್ಡ ರೇಡಿಯೊ ಆ ಕಪಾಟಿನೊಳಗೆ ಹೋಗಲಾರದು ಎಂದುಕೊಂಡು ಆಗ ಜನಪ್ರಿಯವಾಗಿದ್ದ ಹೊಠೊಂಪೆ ಲಾಲಿ ಅಲ್ಲಾ ಅಲ್ಲಾ  ಮೈ ಮರ್ ಗಯಾ ಮೈ ಮರ್ ಗಯಾ ಎಂಬ ಹಾಡಿನ ಸ್ಪೂರ್ತಿಯಿಂದ "ಕಪಾಟು ಮರ್ ಗಯಾ ಕಪಾಟು ಮರ್ ಗಯಾ" ಎಂದು ಗಟ್ಟಿಯಾಗಿ ಹಾಡಿದೆ. ಆಗ ಇಬ್ಬರು ಅಣ್ಣಂದಿರೂ ಒಂದೇ ಧ್ವನಿಯಲ್ಲಿ  "ಹೊಸ ರೇಡಿಯೊ ತಂದಾಗ ಏನದು ಮರ್ ಗಯಾ ಅಂತ ನಿನ್ನದು ಅಪಶಕುನ" ಎಂದು ಚೆನ್ನಾಗಿ ನನ್ನನ್ನು ಝಾಡಿಸಿದರು!  ಬಾಕ್ಸಿನಿಂದ ಹೊರತೆಗೆದ ಹೊಸ ರೇಡಿಯೊ ಕಪಾಟಿನೊಳಗೆ ಸುಸೂತ್ರವಾಗಿ ಕೂತಾಗ ಪ್ರಕರಣ ಸುಖಾಂತ್ಯಗೊಂಡಿತು.  ಮುಂದೆ ಆ ದಿನಗಳಲ್ಲಿ ದಿನನಿತ್ಯವೆಂಬಂತೆ ಬಿತ್ತರವಾಗುತ್ತಿದ್ದ ಬಿಂಕದ ಸಿಂಗಾರಿ  ಹಾಡು ಆ ರೇಡಿಯೋದ ವಾರ್ನಿಷ್ ಸುವಾಸನೆಯನ್ನು ನೆನಪಿಸುವ ಹಾಡಾಗಿ ಮನದಲ್ಲಿ ಸ್ಥಾಪಿತವಾಯಿತು.

ನನಗೆ ಚೌದವೀಂ ಕಾ ಚಾಂದ್ ಚಿತ್ರದ ದಿಲ್ ಕೀ ಕಹಾನಿ ರಂಗ್ ಲಾಯಿ ಹೈ ಅಂದರೆ ಕರೆಂಟ್ ಹೋಗುವ ಹಾಡು.  ಬೆಳ್ತಂಗಡಿಯ ಟೂರಿಂಗ್ ಟಾಕೀಸಿನಲ್ಲಿ  ನಾವೊಮ್ಮೆ ಮಹಿಷಾಸುರ ಮರ್ದಿನಿ ಸಿನಿಮಾ ನೋಡಲು ಹೋಗಿದ್ದಾಗ ಈ ಹಾಡು  ಹಾಕಿದಾಕ್ಷಣ  ಕರೆಂಟು ಹೋಗುವ ಘಟನೆ ಪದೇ ಪದೇ ಮರುಕಳಿಸಿದ್ದು ಇದಕ್ಕೆ ಕಾರಣ.  ಶರಣು ಕಾವೇರಿ ತಾಯೆ ಅಂದರೆ ಆ ಟಾಕೀಸಿನಲ್ಲಿ ಕತ್ತಲಾವರಿಸಿ ತೆರೆ ಮೇಲೆ ಜಾಹೀರಾತು ಮೂಡಲು ಆರಂಭವಾಗುವ  ಕ್ಷಣದ ಮುನ್ಸೂಚನೆ. ಬೊಂಬೆಯಾಟವಯ್ಯಹಾಡು ನೆನಪಿಗೆ  ತರುವುದು  "ಹತ್ತೂವರೆಯಿಂದ ಮುಗಿಯುವ ವರೆಗೆ ಮಾತ್ರ, ಬೇಕಿದ್ದವರು ಬೇಕಿದ್ರೆ ಮಾತ್ರ ಕೇಳಿ ಕುಡಿಯಿರಿ -  ಬೊಂಬೆಯಾಟವಯ್ಯಾ ಬ್ರಹ್ಮಾಂಡವೇ..." ಅನ್ನುತ್ತಾ   ಗುಣಸಾಗರಿ ರಸಾಯನ ಮಾರುತ್ತಿದ್ದ  ಉಜಿರೆಯ ಲೈಟ್ ಭಟ್ಟರನ್ನು.    ಫಿರ್ ವಹೀ ದಿಲ್ ಲಾಯಾ ಹೂಂ ಚಿತ್ರದ ಹಮ್ ದಮ್ ಮೆರೆ ಖೇಲ್ ನ ಜಾನೊ ಅಂದರೆ ಉಜಿರೆಯಿಂದ ನಡೆದುಕೊಂಡು ಮನೆಗೆ ಬರುವಾಗ ನಿಡ್ಗಲ್ಲಿನಲ್ಲಿ ಟಾರ್ ರಸ್ತೆ ಬಿಟ್ಟು ಒಳದಾರಿಗೆ ಹೊರಳುವ ಜಾಗದ ಹಾಡು.  ಯಾಕೋ ಏನೋ, ಅಲ್ಲಿಗೆ ಬಂದಾಗಲೇ ಈ ಹಾಡು ಮನದಲ್ಲಿ ಮೂಡುತ್ತಿದ್ದುದು ಇದಕ್ಕೆ ಕಾರಣ.  ಘೂಂಘರ್ ವಾ ಮೋರಾ ಛನ್ನ್ ಛನ್ನ್ ಬಾಜೆ ಅಂದರೆ ಉಜಿರೆ ಹಾಸ್ಟೆಲಿನ ಸಹಪಾಠಿಯೊಬ್ಬ  ನೆನಪಾಗುತ್ತಾನೆ. ಆತ ಸ್ನಾನ ಮುಗಿಸಿ ಬಕೆಟು ತುಂಬಾ ನೀರಿನೊಡನೆ ರೂಮಿಗೆ ಬರುವಾಗ ಘೂಂಘರ್ ವಾ ಮೋರಾ ಚುಂಗು ಚುಂಗು ಬಾಜೆ ಅನ್ನುತ್ತಾ ಬರುತ್ತಿದ್ದ.  ಜಯತು ಜಯ ವಿಠಲ ಹಾಡೆಂದರೆ ಉಜಿರೆ ರಥಬೀದಿಯಲ್ಲಿ ನಡೆಯುತ್ತಿದ್ದ ಟೆಂಟ್ ಆಟದ ಪ್ರತೀಕ.  ಲೌಡ್ ಸ್ಪೀಕರ್ ಸೆಟ್ಟಿಂಗ್ ಆದೊಡನೆ ಮೊತ್ತಮೊದಲು ಈ ಹಾಡೇ ಅಲ್ಲಿ ಮೊಳಗುತ್ತಿದ್ದುದು.  ಕನ್ಯಾರತ್ನ ಚಿತ್ರದ ಒಂದೇ ಮಾತು ಒಂದೇ ಮನಸು ಇದು ಧರ್ಮಸ್ಥಳ ಜಾತ್ರೆಯ ಬಂಬಯ್ ದೇಖೋ ಮದ್ರಾಸ್ ದೇಖೊವನ್ನು ನೆನಪಿಗೆ ತರುತ್ತದೆ. ಅಲ್ಲಿಯ ಬಯಾಸ್ಕೋಪಿನವ ಗ್ರಾಮೊಫೋನ್ ಒಂದಕ್ಕೆ ಹಾರ್ನಿನ ಬದಲು ಅಂಗಡಿಯಲ್ಲಿ ಸಾಮಾನು ಕಟ್ಟಿಕೊಡುವ ರೀತಿಯ ಪೇಪರಿನ ಕೋನ್  ಬಳಸಿ ಈ ಹಾಡು ಕೇಳಿಸುತ್ತಿದ್ದ!  ಉಡ್‌ಕೆ ಪವನ್ ಕೆ ಸಂಗ್ ಚಲೂಂಗಿ ಅಂದೊಡನೆ ನೆನಪಾಗುವುದು ನಮ್ಮೂರಿನ ಶಾಲೆಯ ವಾರ್ಷಿಕೋತ್ಸವದ ದಿನ  ಮೈಕ್ ಸೆಟ್ಟಿನವನೊಡನೆ ದೋಸ್ತಿ ಮಾಡಿ ಹ್ಯಾಂಡಲ್ ತಿರುಗಿಸಿ ನಡೆಸುವ ಗ್ರಾಮಫೋನನ್ನು ನಾನು ಸ್ವತಃ operate ಮಾಡಿ ಆ ಹಾಡನ್ನು ಪದೇ ಪದೇ ನುಡಿಸಿದ್ದು.  ತೇರಿ ಪ್ಯಾರಿ ಪ್ಯಾರಿ ಸೂರತ್ ಕೊ ಹಾಡಿನ ಹಿಂದೆ ಶಾಲೆಯಲ್ಲಿ ಸಿನಿಮಾ  ಎಂಬ ಶಬ್ದದ ಉಲ್ಲೇಖವೇ ಅಪರಾಧವೆನ್ನಿಸಿಕೊಳ್ಳುತ್ತಿದ್ದ ಕಾಲದಲ್ಲೂ ನಮ್ಮ 6ನೇ ತರಗತಿಯ ಹಿಂದಿ ಅಧ್ಯಾಪಕರು "ಅದು ಸಿನಿಮಾ ಹಾಡಾದರೂ ಒಳ್ಳೆಯ ಸಾಹಿತ್ಯ ಹೊಂದಿದೆ" ಎಂದು ಹೊಗಳಿದ ದೃಶ್ಯವಿದ್ದರೆ  ಲಾಲ್ ಛಡಿ ಮೈದಾನ್ ಖಡಿ  ಹಾಡಿಗೆ ಲಿಂಕ್ ಆಗಿರುವುದು 9ನೇ ತರಗತಿಯ ಹಿಂದಿ ಪಠ್ಯದಲ್ಲಿದ್ದ ಉಠ್ ಜಾಗ್ ಮುಸಾಫಿರ್ ಭೋರ್ ಭಯಿ ಎಂಬ  ಕವನವನ್ನು ಆ ಧಾಟಿಯಲ್ಲಿ ಹಾಡಿ ಅಧ್ಯಾಪಕರಿಂದ ಶಹಬ್ಬಾಸ್ ಅನಿಸಿಕೊಂಡ ಘಟನೆ.  ಛಲಿಯಾ ಮೇರಾ ನಾಮ್ ನನ್ನನ್ನು ಬೆಳ್ತಂಗಡಿ ಹೈಸ್ಕೂಲಲ್ಲಿ ನಡೆದ zonal sportsಗೆ ಕರೆದೊಯ್ದರೆ ಏ ನರ್ಗಿಸೆ ಮಸ್ತಾನ ಮರುವರ್ಷ ಉಜಿರೆಯಲ್ಲಿ ನಡೆದ Greg Memorial Sportsನ ಪೆವಿಲಿಯನ್ ಹಿಂಭಾಗದಲ್ಲಿ ನಿಲ್ಲಿಸುತ್ತದೆ ಏಕೆಂದರೆ ಅಲ್ಲಿಯ ಧ್ವನಿವರ್ಧಕಗಳಲ್ಲಿ ಈ ಹಾಡುಗಳು ಪದೇ ಪದೇ ಕೇಳಿಬರುತ್ತಿದ್ದವು.  ನಮ್ಮ ಮನೆ ಸಮೀಪದ ಮೈದಾನಿನಲ್ಲಿ ಬೀಡು ಬಿಟ್ಟಿದ್ದ ಸೈಕಲ್ ಬ್ಯಾಲೆನ್ಸಿನವನು ಹಗಲು ರಾತ್ರಿಯೆನ್ನದೆ ಊರೆಲ್ಲ ಕೇಳುವಂತೆ ಹಾಕುತ್ತಿದ್ದ ಹೀರೊ ಹೀರೊ ಹೀರೊ ನಾನೇ ಎಂಬ ಹಾಡು ಆಗ ನಾನು ಇಲಾಖೆಯ ಸ್ಪರ್ಧಾತ್ಮಕ ಪರೀಕ್ಷೆಗೆ ಓದುತ್ತಿದ್ದುದನ್ನು ನೆನಪಿಗೆ ತರುತ್ತದೆ.  ಪರೀಕ್ಷೆಗೆ ತಯಾರಿ ನಡೆಸುವಾಗ ಹಿನ್ನೆಲೆಯಲ್ಲಿ ಸಣ್ಣದಾಗಿ ರೇಡಿಯೊ  ಇಟ್ಟುಕೊಂಡು  ಓದನ್ನು ಹಾಡುಗಳಿಗೆ ಲಿಂಕ್ ಮಾಡಿಕೊಂಡರೆ "ಹೋ, ಈ ಪ್ರಶ್ನೆಗೆ  ಆ ಹಾಡನ್ನು ಕೇಳ್ತಾ ಓದಿದ್ದೇ ಸರಿಯಾದ ಉತ್ತರ" ಎಂದು ಓದಿದ್ದನ್ನು  retrieve ಮಾಡಲು ಸಹಾಯವಾಗುವುದೂ ಇದೆ.  ಆದರೆ ಕೆಲವು ಸಲ ಒಂದು ಹಾಡಿನ ಸಾಲು ನೆನಪುಮಾಡಿಕೊಳ್ಳಲು ಇನ್ನೇನನ್ನೋ ಲಿಂಕ್ ಮಾಡಿಕೊಳ್ಳಬೇಕಾಗಿ ಬರುವುದೂ ಇದೆ.  ಒಮ್ಮೆ ನನಗೆ ಬೇಖುದೀ ಮೆಂ ಸನಮ್ ಉಠ್ ಗಯೇ ಜೋ ಕದಮ್ ಹಾಡಿನ ಸಾಲುಗಳು ಏನು ಮಾಡಿದರೂ ನೆನಪಿಗೆ ಬಾರದಂತಾಯಿತು. ಅಂತೂ ಕೊನೆಗೆ  ಕಷ್ಟಪಟ್ಟು ನೆನಪು ಮಾಡಿಕೊಂಡಮೇಲೆ ಅದರಲ್ಲಿರುವ ಕದಂ ಪದಕ್ಕೆ ಅಲ್ಲೇ ಪಕ್ಕದಲ್ಲಿದ್ದ ಮೇಜಿನ ಕಾಲುಗಳನ್ನು ಲಿಂಕ್ ಮಾಡಿಕೊಂಡೆ.  ಆ ಮೇಲೆ ಯಾವತ್ತೂ ಆ ಹಾಡು ಮರೆತುಹೋಗಿಲ್ಲ!

ಒ ಮೇರೆ ಬೇಚೈನ್ ದಿಲ್ ಕೊ ಚೈನ್ ಎಂಬ ಹಾಡು ಮಂಗಳೂರಿನ ರೂಪವಾಣಿ ಟಾಕೀಸನ್ನು ಯಾವಾಗಲೂ ನೆನಪಿಸುವಂತೆ ಮಾಡಿದ್ದು  ಅಲ್ಲಿ ಸಿನಿಮಾ ಆರಂಭವಾಗುವುದಕ್ಕೆ ಮೊದಲು ನುಡಿಸುತ್ತಿದ್ದ ಹಾಡುಗಳ Hi Fi ಗುಣಮಟ್ಟ.  ಮೊತ್ತ ಮೊದಲ ಬಾರಿ  ಈ ಹಾಡನ್ನು ಅಲ್ಲಿ ಕೇಳಿದಾಗ ಆದ ರಸಪೂರ್ಣ ಅನುಭವ  ಈಗ ಅದನ್ನು ಯಾವ multichannel sound systemನಲ್ಲಿ ಕೇಳಿದರೂ ರೂಪವಾಣಿಯಲ್ಲಿ ಕೇಳಿದಂತಾಗುತ್ತಿಲ್ಲ ಎಂದೆನಿಸುವಂತೆ ಮಾಡಿದೆ.

ಅಧಿಕಾರ್ ಎಂಬ ಚಿತ್ರದಲ್ಲಿ ರೇಖಾ ಓ ರೇಖಾ ಅನ್ನುವ ಅಷ್ಟೇನೂ ಜನಪ್ರಿಯವಲ್ಲದ ಹಾಡೊಂದಿದೆ.  ಅದರ ಚರಣದಲ್ಲಿ ಬರುವ ಮೆಹೆನತ್ ಜೊ ಕೀ ಹೈ ತೊ ಫಲ್ ಭೀ ಮಿಲೇಗಾ ಎಂಬ ಸಾಲು ನಾನು ಈಗಲೂ ಯಾವುದಾದರೂ ಹೊಸ ಕೆಲಸ ಮಾಡುವಾಗ ಗುಣುಗುಣಿಸುವಂಥಾದ್ದು.

ಯಾವುದೇ ಕಾರಣ ಇಲ್ಲದಿದ್ದರೂ ಕೆಲವು ಹಾಡುಗಳನ್ನು ಕೇಳುವಾಗ ವಿಶಿಷ್ಟ ಅನುಭವವಾಗುವುದಿದೆ.  ಆಯೀ ಮಿಲನ್ ಕೀ ಬೇಲಾ ಚಿತ್ರದ ವೊ ಬುರಾ ಮಾನ್ ಗಯೆ ಎಂಬ ಹಾಡಿನಲ್ಲಿ ಏನನ್ನೂ ಕುಡಿಯುವ ಉಲ್ಲೇಖವಿಲ್ಲ.  ನಾನೂ ಅದನ್ನು ಕೇಳುತ್ತಾ ನೀರೂ ಸಹ ಕುಡಿದದ್ದಿಲ್ಲ.  ಆದರೆ ಅದರ prelude  ಕೇಳುವಾಗ ಈಗಲೂ ನನಗೆ ದಶಮೂಲಾರಿಷ್ಟ ಕುಡಿದಂತೆನಿಸುತ್ತದೆ!

ಶ್ರೀನಿವಾಸ ಕಲ್ಯಾಣ ಚಿತ್ರದ ನಾನೇ ಭಾಗ್ಯವತಿ ನನಗೆ ನೆನಪಿರುವುದು ಒಂದು ವಿಶಿಷ್ಠವಾದ ಘಟನೆಯಿಂದ.  ಆಗ ನಮ್ಮ ಮಿತ್ರಬಳಗದಲ್ಲಿ ಸ್ವತಃ ಉತ್ತಮ ಗಾಯಕರಾಗಿದ್ದು ಅಶೋಕ್ ಚರಣ್ ನೈಟ್‌ಗಳಲ್ಲಿ ಭಾಗವಹಿಸುತ್ತಿದ್ದ ಡಾ|ವಿಜಯ ಕುಮಾರ್ ಎಂಬುವವರಿದ್ದರು. ಯಾವುದೇ ಹೊಸ ಹಾಡು ಬಂದರೂ ಅದರ ಬಗ್ಗೆ ನಮ್ಮ ವಿಮರ್ಶೆ, ವಿಚಾರ ವಿನಿಮಯಗಳು ನಡೆಯುತ್ತಿದ್ದವು. ಒಮ್ಮೆ ನಾನು "ಶ್ರೀನಿವಾಸ ಕಲ್ಯಾಣ ಚಿತ್ರದಲ್ಲಿ ರಾಜ್ ಕುಮಾರ್ ಮತ್ತು ಎಸ್. ಜಾನಕಿ ಅವರು ನಾನೇ ಭಾಗ್ಯವತಿ ಎಂಬ ಹಾಡನ್ನು ಎಷ್ಟು ಚೆನ್ನಾಗಿ ಹಾಡಿದ್ದಾರೆ" ಅಂದೆ. ಆಗ ಅವರು "ರಾಜ್ ಕುಮಾರ್ ಹಾಡಿದ್ದೇ? ಸಾಧ್ಯವೇ ಇಲ್ಲ. ಅವರು ಎಮ್ಮೆ ಹಾಡು, ಮುತ್ತಿನಂಥ ಮಾತೊಂದು ಗೊತ್ತೇನಮ್ಮದಂಥ ಲಘು ಶೈಲಿಯ ಗೀತೆಗಳನ್ನು ಹಾಡಬಲ್ಲರೇ ಹೊರತು ಈ ರೀತಿ ವೃತ್ತಿಪರರಂತೆ ಶಾಸ್ತ್ರೀಯ ರಾಗಾಧಾರಿತ ಹಾಡನ್ನು ಹಾಡಲಾರರು. ಅದನ್ನು ಹಾಡಿದ್ದು ಎಸ್.ಪಿ.ಬಾಲಸುಬ್ರಹ್ಮಣ್ಯಂ. ಬೇಕಿದ್ದರೆ ನಾನು ಬೆಟ್ ಕಟ್ಟಲು ರೆಡಿ" ಅಂದರು. ನಾನೂ ಈ ಸವಾಲಿಗೆ ಒಪ್ಪಿದೆ. ಆಗಿನ್ನೂ ಕ್ಯಾಸೆಟ್, CDಗಳ ಯುಗ ಆರಂಭವಾಗಿರಲಿಲ್ಲ. ಏನಿದ್ದರೂ ರೇಡಿಯೊ ಅಥವಾ ಗ್ರಾಮೊಫೋನ್ ರೆಕಾರ್ಡುಗಳು ಮಾತ್ರ. ರೇಡಿಯೊದಲ್ಲಿ ಆ ಹಾಡು ಯಾವಾಗ ಬರುತ್ತದೆ ಎಂದು ಕಾಯುವುದಕ್ಕಿಂತ ಗ್ರಾಮೊಫೋನ್ ರೆಕಾರ್ಡುಗಳ ಅಂಗಡಿಗೆ ಹೋಗಿ ಅಲ್ಲಿ ಸಂಶಯ ಪರಿಹರಿಸಿಕೊಳ್ಳುವುದೇ ಸರಿಯಾದ ಮಾರ್ಗ ಎಂದು ಕೂಡಲೇ ಮನೋಹರ್ ರೇಡಿಯೋ ಹೌಸಿಗೆ ಹೋಗಿ ಆ ಹಾಡಿನ ರೆಕಾರ್ಡ್ ತೋರಿಸುವಂತೆ ಕೇಳಿಕೊಂಡೆವು. ರೆಕಾರ್ಡು ಕೊಳ್ಳುವ ಗಿರಾಕಿಯೊಬ್ಬರು ಸಿಕ್ಕಿದರು ಎಂಬ ಖುಶಿಯಲ್ಲಿ ಅವರು ರೆಕಾರ್ಡ್ ಪ್ಲೇಯರಲ್ಲಿ ಆ ಹಾಡು ನುಡಿಸಿಯೂ ತೋರಿಸಿದರು. ಧ್ವನಿ ಕೇಳಿಯೇ ಅದು ರಾಜ್ ಕುಮಾರ್ ಎಂದು ಗೊತ್ತಾದರೂ ಲೇಬಲ್ ನೋಡಿದ ಮೇಲೆಯೇ ವಿಜಯಕುಮಾರ್ ಅವರು ಸೋತೆ ಎಂದು ಒಪ್ಪಿಕೊಂಡದ್ದು! ಅಂಗಡಿಯ ಒಡೆಯರು ಅದನ್ನು ಪ್ಯಾಕ್ ಮಾಡಿ ನಮಗೆ ಕೊಡಲು ಮುಂದಾದಾಗ "ನಾವು ಬಂದದ್ದು ಅದನ್ನು ಯಾರು ಹಾಡಿದ್ದೆಂದು ತಿಳಿದುಕೊಳ್ಳಲಷ್ಟೇ ಹೊರತು ರೆಕಾರ್ಡ್ ಕೊಳ್ಳಲು ಅಲ್ಲ." ಎಂದು ಹೇಳಿ ಅವರ ಮರುಉತ್ತರ ಕೇಳಿಸಿಕೊಳ್ಳುವ ಧೈರ್ಯ ಸಾಲದೆ ಕೂಡಲೇ ಜಾಗ ಖಾಲಿ ಮಾಡಿದೆವು!

ಹಾಡುಗಳಷ್ಟೇ ಅಲ್ಲದೆ ಕೆಲವು ಬರಿಯ ಟ್ಯೂನ್‌ಗಳೂ ನಮ್ಮ ಮನದಲ್ಲಿ ಶಾಶ್ವತವಾಗಿ ರೆಕಾರ್ಡ್ ಆಗಿರುವುದುಂಟು.  ಮಂಗಳೂರಿನಲ್ಲಿ ಈಗಿಲ್ಲದಿರುವ ಅಮೃತ್ ಟಾಕೀಸನ್ನು ಮರೆಯದಂತೆ ಮಾಡಿರುವುದು ಅಲ್ಲಿಯ  ಬೆಳ್ಳಿತೆರೆಯ ಮೇಲಿನ ಪರದೆ ಸರಿಯುವಾಗ ಕೇಳಿಬರುತ್ತಿದ್ದ  For a few dollars more  ಚಿತ್ರದ  ಟೈಟಲ್ ಮ್ಯೂಸಿಕ್.  ಬಂಧನಬಣ್ಣ ನನ್ನ ಒಲವಿನ ಬಣ್ಣ ಹಾಡಿಗೆ ಸ್ಪೂರ್ತಿಯಾದ ಆ ಟ್ಯೂನ್ ಇಲ್ಲಿದೆ ಕೇಳಿ.  ಹಾಗೆಯೇ ನಿಮ್ಮ ಮನದ ಕಿರು ಕಿಟಿಕಿ ತೆರೆಯುವ ಹಾಡುಗಳ ಪಟ್ಟಿ ಮಾಡುತ್ತಾ ಹೋಗಿ.

Wednesday, 16 March 2016

60ರ ದಶಕದಲ್ಲಿ ರೇಡಿಯೊ ಸಿಲೋನ್ ವಾರಾಂತ್ಯ

     ಆಗ ರೇಡಿಯೊ ಸಿಲೋನ್ ಎಂದರೆ ರೇಡಿಯೊ ಸ್ಟೇಷನ್‌ಗಳ ರಾಜ. ಸಿಲೋನ್ ಸರಿಯಾಗಿ ಬರುತ್ತಿದೆಯೇ ಎಂದು ಪರೀಕ್ಷಿಸದೆ ಯಾರೂ  ಹೊಸ ರೇಡಿಯೋ ಕೊಳ್ಳುತ್ತಿರಲಿಲ್ಲ. ಶಾರ್ಟ್ ವೇವ್ ಬ್ಯಾಂಡಲ್ಲಿ ಸಿಲೋನ್ ಸ್ಟೇಷನ್ ಕ್ಷಣಾರ್ಧದಲ್ಲಿ ಟ್ಯೂನ್ ಮಾಡಬಲ್ಲವ ಹೀರೊ ಅನ್ನಿಸಿಕೊಳ್ಳುತ್ತಿದ್ದ.   ವಾರದ ದಿನಗಳಲ್ಲಿ ಬೆಳಗ್ಗೆ 7 ರಿಂದ 10ರ ವರೆಗೆ ಹಾಗೂ ರಾತ್ರೆ 7 ರಿಂದ 11ರ ವರೆಗೆ ಹಿಂದಿ ಕಾರ್ಯಕ್ರಮಗಳಿದ್ದರೂ ರೇಡಿಯೊ ಸಿಲೋನ್  ರಂಗೇರುತ್ತಿದ್ದುದು ಬಿನಾಕಾ ವಾರವೆಂದೇ ಕರೆಯಲ್ಪಡುತ್ತಿದ್ದ ಬುಧವಾರ ಮತ್ತು ವಾರಾಂತ್ಯಗಳಲ್ಲಿ.  ವಿದ್ಯಾರ್ಥಿಗಳಿಗೆ, ಉದ್ಯೋಗಸ್ಥರಿಗೆ ಕಾರ್ಯಕ್ರಮಗಳನ್ನು ಆಸ್ವಾದಿಸುವ ವ್ಯವಧಾನವಿರುತ್ತಿದ್ದುದೂ ವಾರಾಂತ್ಯಗಳಲ್ಲೇ.

     60ರ ದಶಕದ ಅಂದಿನ ದಿನಗಳಲ್ಲಿ ಶನಿವಾರ ಸಂಜೆಯಾಗುತ್ತಿದ್ದಂತೆ ರೇಡಿಯೊ ಸಿಲೋನಿನಲ್ಲಿ ಹಬ್ಬದ ವಾತಾವರಣ ಆರಂಭವಾಗುತ್ತಿತ್ತು.  ಸಂಜೆಯ ಹಿಂದಿ ಪ್ರಸಾರ 7 ಗಂಟೆಗೆ ಬದಲ್ತೆ ಹುವೆ ಸಾಥಿ ಎಂಬ ಕಾರ್ಯಕ್ರಮದೊಂದಿಗೆ ಆರಂಭ.  ಇದರಲ್ಲಿ ಒಂದು ಹಾಡನ್ನು ಲತಾ - ರಫಿ ಹಾಡಿದರೆ ಮುಂದಿನ ಹಾಡಿನಲ್ಲಿ ರಫಿ ಜೊತೆ ಸುಮನ್ ಕಲ್ಯಾಣ್‌ಪುರ್, ಆ ಮೇಲೆ ಸುಮನ್ ಕಲ್ಯಾಣ್‌ಪುರ್  ಜೊತೆ ಮುಕೇಶ್ ಈ ರೀತಿ ಸಾಥಿಯನ್ನು ಬದಲಾಯಿಸುತ್ತಾ 7-30 ವರೆಗೆ ಈ ಕಾರ್ಯಕ್ರಮ ಸಾಗುತ್ತಿತ್ತು.   8 ರಿಂದ 8-30ವರೆಗೆ ಕ್ಯಾಡ್‌ಬರಿಸ್ ಫುಲ್‌ವಾರಿ ಎಂಬ ಕಾರ್ಯಕ್ರಮ.  ಇದರಲ್ಲಿ ಇತರರು ಹಾಡಿದ ಜನಪ್ರಿಯ ಹಿಂದಿ ಹಾಡುಗಳು ಇರುತ್ತಿದ್ದವು.  ಪ್ರಸಿದ್ಧ ನಿರ್ಮಾಪಕ ನಿರ್ದೇಶಕ ರಾಜ್ ಖೋಸ್ಲಾ ಅವರು ಸೈಗಲ್ ಹಾಡುಗಳನ್ನು ಹಾಡಿದರೆ ರಫಿ ಗೀತೆಗಳನ್ನು ಮಹೇಂದ್ರ ಕಪೂರ್   ಹಾಡುತ್ತಿದ್ದರು.  ಕೆಲವೊಮ್ಮೆ ಇತರ ಶ್ರೋತೃಗಳು ಧ್ವನಿಮುದ್ರಿಸಿ ಕಳಿಸಿದ ಮೌತ್ ಆರ್ಗನ್ ಮುಂತಾದ ವಾದ್ಯಗಳಲ್ಲಿ ನುಡಿಸಿದ ಹಾಡುಗಳೂ ಇರುವುದಿತ್ತು.  ಈ ಕಾರ್ಯಕ್ರಮದ ವಿಶೇಷವೆಂದರೆ ಇದನ್ನು ಪ್ರಸ್ತುತ ಪಡಿಸುತ್ತಿದ್ದುದು  ಪ್ರಸಿದ್ಧ ಹಿಂದಿ ನಟ ಮನಮೋಹನ್ ಕೃಷ್ಣ. ಆದರೆ ನಡುವೆ ಬರುವ ಕ್ಯಾಡ್‌ಬರಿಸ್ ಚಾಕಲೇಟು ಮತ್ತು ಬೋರ್ನ್‌ವಿಟಾದ ಜಾಹೀರಾತಿನ ಭಾಗ ಮಾತ್ರ ಅಮೀನ್ ಸಯಾನಿಯ  ಧ್ವನಿಯಲ್ಲಿರುತ್ತಿತ್ತು.  ಇನ್ನೊಂದು ವಿಶೇಷವೆಂದರೆ ಈ  ಕ್ಯಾಡ್‌ಬರಿಸ್ ಫುಲ್‌ವಾರಿಯ ಪೂರ್ವಾವತಾರವಾಗಿದ್ದ ಓವಲ್ಟೀನ್ ಫುಲ್‌ವಾರಿ ಅಮೀನ್ ಸಯಾನಿಯವರ ಮೊತ್ತ ಮೊದಲ ಕಾರ್ಯಕ್ರಮವಾಗಿತ್ತಂತೆ. ಮುಂದೆ 8-30ರಿಂದ 8-45ರವರೆಗೆ ಸಾನ್ಫೊರೈಜ್‌ಡ್ ಕೆ ಮೆಹಮಾನ್ ಎಂಬ ವಿವಿಧ ರಂಗಗಳಲ್ಲಿ ಸಾಧನೆ ಮಾಡಿದವರನ್ನು ಪರಿಚಯಿಸುವ ಕಾರ್ಯಕ್ರಮ. ಗ್ರಾಹಕ ಉತ್ಪನ್ನಗಳಿಗೆ ISI ಮಾರ್ಕ್ ಇದ್ದ ಹಾಗೆ ಆಗ ಹತ್ತಿ ಬಟ್ಟೆಗಳಿಗೆ sanforization ಎಂಬ ಒಂದು ಮಾನಕ ಇತ್ತು.  Sanforize ಕಿಯೇ ಹುವೆ ಕಪ್‌ಡೇ ಕಭೀ ಸಿಕುಡ್‌ಕರ್   ತಂಗ್ ನಹೀಂ ಹೋಂಗೇ(Sanforize ಮಾಡಲ್ಪಟ್ಟ ವಸ್ತ್ರಗಳು ಎಂದೂ ಸಂಕುಚಿತಗೊಂಡು ಬಿಗಿಯಾಗಲಾರವು) ಎಂಬುದು ಇದರ tag line ಆಗಿತ್ತು.  ರಾತ್ರಿ 9 ರಿಂದ 9-30ರ ವರೆಗೆ ಯೇ ಭೀ ಸುನಿಯೆ ಎಂಬ ಒಂದು ವಿಶೇಷ ಕಾರ್ಯಕ್ರಮ.  ಆಗ ಸಾಮಾನ್ಯವಾಗಿದ್ದ 78 rpmನ ರೆಕಾರ್ಡುಗಳ ಒಂದೊಂದು ಬದಿಯಲ್ಲಿ ಒಂದೊಂದು ಹಾಡು ಇರುತ್ತಿತ್ತು.  ಈ ಕಾರ್ಯಕ್ರಮದಲ್ಲಿ ಒಂದು ಬದಿಯ ಹಾಡಿನ ಒಂದು ಸಾಲು ಕೇಳಿಸಿ "ಅಬ್ ದೂಸ್ರೀ ಓರ್ ಛುಪಾ ಹುವಾ ಯೆ ಗೀತ್ ಭೀ ಸುನಿಯೆ" ಎಂದು ಇನ್ನೊಂದು ಬದಿಯ ಹಾಡನ್ನು ಪೂರ್ತಿ ಕೇಳಿಸಲಾಗುತ್ತಿತ್ತು. ಕೆಲವೊಮ್ಮೆ ಇನ್ನೊಂದು ಬದಿಯ ಹಾಡನ್ನು ಊಹಿಸಲು ಕೇಳುಗರಿಗೆ ಕಾಲಾವಕಾಶ ನೀಡುವ ಸಲುವಾಗಿ ನಗೆಹನಿಗಳನ್ನು ಹೇಳುವುದೂ ಇತ್ತು.

     ಭಾನುವಾರಗಳಂದು ಬೆಳಗ್ಗೆ 7  ಗಂಟೆಗೆ ಆರಂಭವಾದ ಪ್ರಸಾರ ಮಧ್ಯಾಹ್ನ 1 ಗಂಟೆ ವರೆಗೂ  ಸಾಗುತ್ತಿತ್ತು.  7 ರಿಂದ 7-15ರ ವರೆಗೆ ದಿನನಿತ್ಯದಂತೆ ವಾದ್ಯ ಸಂಗೀತ್ ಕಾರ್ಯಕ್ರಮದಲ್ಲಿ ವಾದ್ಯಗಳಲ್ಲಿ ನುಡಿಸಿದ ಹಾಡುಗಳು.  ಪಿಯಾನೋ   ಅಕಾರ್ಡಿಯನ್ ಅಥವಾ ಕ್ಲಾರಿನೆಟ್ಟಲ್ಲಿ ನುಡಿಸಿದ ಹಾಡುಗಳು ಆಗ ನಮಗೆ ಬಲು ಅಚ್ಚು ಮೆಚ್ಚು.  ಹವಾಯಿಯನ್ ಗಿಟಾರ್ ಅಥವಾ ಸೊಲೊವೋಕ್ಸ್ ಇತ್ಯಾದಿಗಳಲ್ಲಿ ನುಡಿಸಿದವು ಅಷ್ಟೊಂದು ಇಷ್ಟವಾಗುತ್ತಿರಲಿಲ್ಲ.  7-15 ರಿಂದ 7-30ರ ವರೆಗೆ ಏಕ್ ಹೀ ಫಿಲ್ಮ್ ಕೆ ಗೀತ್.  ಯಾವುದಾದರೂ ಹೊಸ ಚಿತ್ರದ ಹಾಡುಗಳು ಇದರಲ್ಲಿದ್ದರೆ ಬಲು ಖುಶಿ.  ಏಕಪಾಠಿಯಂತೆ ಅವುಗಳ ಒಂದೊಂದು ಸಾಲನ್ನಾದರೂ ಆಗಲೇ ಕಲಿತು ಹಾಡಲು ಆರಂಭಿಸುತ್ತಿದ್ದೆವು.  7-30ರಿಂದ 8 ರ ವರೆಗೆ ನನಗೆ ಅಷ್ಟೊಂದು ಇಷ್ಟವಾಗದ   ಪುರಾನೀ ಫಿಲ್ಮೋಂಕಾ ಸಂಗೀತ್. "ಲೋಮಾ ಟೈಮ್ - ಠಿಂಗ್ - ಸವೇರೆ ಕೆ ಠೀಕ್ ಆಠ್ ಬಜೆ ಹೈಂ" ಅನ್ನುತ್ತಾ 8 ಗಂಟೆಯಿಂದ ವಿಶೇಷ ಕಾರ್ಯಕ್ರಮಗಳ ಆರಂಭ. ಒಂದು ವಿಶೇಷ gongಗೆ ಬೆತ್ತದಿಂದ ಮೃದುವಾಗಿ ಹೊಡೆದು ಹೊರಡಿಸುವ ಈ ಠಿಂಗ್ ಶಬ್ದಕ್ಕೂ ರೇಡಿಯೊ ಸಿಲೋನಿಗೂ ಅವಿನಾಭಾವ ಸಂಬಂಧ. ಒಂದು ಜಾಹೀರಾತನ್ನು ಇನ್ನೊಂದರಿಂದ ಪ್ರತ್ಯೇಕಿಸಲು, ಜಾಹೀರಾತು ಸರಣಿ ಮುಗಿದುದನ್ನು ಸೂಚಿಸಲು, ಸರಿಯಾದ ಸಮಯ ಸೂಚಿಸಲು ಬೇರೆ ಬೇರೆ ರೀತಿಯಲ್ಲಿ ಇದನ್ನು ನುಡಿಸಲಾಗುತ್ತಿತ್ತು. 8-30ರ ವರೆಗೆ ಏಕ್ ಔರ್ ಅನೇಕ್.  ಇದರಲ್ಲಿ ಯಾರಾದರೂ ಓರ್ವ ಗಾಯಕ ಅಥವಾ ಗಾಯಕಿಯೊಡನೆ ಬೇರೆ ಬೇರೆ ಗಾಯಕ ಗಾಯಕಿಯರು ಹಾಡಿರುವ ಹಾಡುಗಳು. ರಫಿ, ಕಿಶೋರ್, ಮುಕೇಶ್, ಲತಾ, ಆಶಾ, ಸುಮನ್ ಕಲ್ಯಾಣ್‌ಪುರ್ ಮುಂತಾದವರು ಅಂದಿನ ಏಕ್ ಆಗಿದ್ದರೆ ಅಂದು ರಸದೌತಣವೆಂದೇ ಅರ್ಥ. ಖಯಾಲೊ ಮೆ....,  ಚೂನಿಯಾ ಕಿಧರ್ ಹೈ ರಿ ತೂ, ಬದ್ಕಮ್ಮಾ ಓ ಬದ್ಕಮ್ಮಾ ಇತ್ಯಾದಿ ಉದ್ಗಾರಗಳನ್ನು ಹಾಡುಗಳ ಮಧ್ಯೆ ತನ್ನ ವಿಶಿಷ್ಠ ಶೈಲಿಯಲ್ಲಿ ಹೊರಡಿಸುತ್ತಿದ್ದ ಮೆಹಮೂದ್ ಕೂಡ ಕೆಲವು ಸಲ ಏಕ್ ಗಾಯಕ್ ಆಗುವುದಿತ್ತು! ಅಂತಹ ದಿನ ಅರ್ಧ ಗಂಟೆ ಹಾಸ್ಯಗೀತೆಗಳ ಮೋಜಿನ ಮೇಜವಾನಿ ಕೇಳುಗರನ್ನು ರಂಜಿಸುತ್ತಿತ್ತು. 9 ರಿಂದ 9-30ರ ವರೆಗೆ ಹಸನ್ ರಜ್ವಿ ಎಂಬವರು ನಡೆಸಿಕೊಡುತ್ತಿದ್ದ ಅಫಘಾನ್ ಸ್ನೋ ತಯಾರಕರು ಪ್ರಾಯೋಜಿಸುತ್ತಿದ್ದ ಲೆಸ್‍ಲೀನ್ ಸಂಗೀತ್ ಬಹಾರ್ ಎಂಬ ಜನಪ್ರಿಯ ಗೀತೆಗಳ ಕಾರ್ಯಕ್ರಮ.  10-15 ರಿಂದ 10-30ರ ವರೆಗೆ ಬಾಲ್‌ಸಖಾ ಎಂಬ ಮಕ್ಕಳಿಗಾಗಿರುವ ಕಾರ್ಯಕ್ರಮ.  10-30ರಿಂದ 11ರ ವರೆಗಿನ ಸಮಯ ಅಮೀನ್ ಸಯಾನಿ ಪ್ರಸ್ತುತ ಪಡಿಸುತ್ತಿದ್ದ ವಿವಿಧ ಕಾರ್ಯಕ್ರಮಗಳಿಗೆ ಮೀಸಲು.  ಇವುಗಳಲ್ಲಿ ಹಾಡುಗಳಿಗೆ ಕ್ರಮ ಕೊಟ್ಟು ಬಹುಮಾನವಾಗಿ ಪ್ಯಾರಗಾನ್ ಮಿಲ್ಲಿನ  pant piece ಗೆಲ್ಲುವ  ಪ್ಯಾರಗಾನ್ ಸಂಗೀತ್ ಖಜಾನಾ, ಆಪ್ ಕಾ ಗೋಲ್ಡ್ ಸ್ಪಾಟ್ ಆಪ್ ಕೆ ಸಿತಾರೆ ಎಂಬ ಚಲನಚಿತ್ರ ಜಗತ್ತಿಗೆ ಸಂಬಂಧಿಸಿದವರ ಇಂಟರ್‌ವ್ಯೂಗಳನ್ನಾಧರಿಸಿದ ಕಾರ್ಯಕ್ರಮ, ಎಸ್ ಕುಮಾರ್ಸ್ ಕಾ ಫಿಲ್ಮೀ ಮುಕದ್ದಮಾ  ಮುಂತಾದವು ಬಲು ಜನಪ್ರಿಯವಾಗಿದ್ದವು.  ಈ ಫಿಲ್ಮೀ ಮುಕದ್ದಮಾ ಕಾರ್ಯಕ್ರಮದಲ್ಲಿ ಅಮೀನ್ ಸಯಾನಿ ವಕೀಲನಾಗಿ ಆ ದಿನದ ಅತಿಥಿಯ ಮೇಲೆ ಒಂದೊಂದೇ ಸ್ವಾರಸ್ಯಕರವಾದ ‘ಆರೋಪ’ ಹೊರಿಸುತ್ತಾ ಹೋಗುತ್ತಿದ್ದರು. ಆ ಆರೋಪಗಳಿಗೆ ಅತಿಥಿಗಳು ಅಷ್ಟೇ ಸ್ವಾರಸ್ಯಕರವಾದ  ಉತ್ತರ ನೀಡುತ್ತಿದ್ದರು. ಬುಧವಾರದ ಬಿನಾಕಾ ಗೀತ್ ಮಾಲಾ ಸೇರಿದಂತೆ ಅಮೀನ್ ಸಯಾನಿ ಹಾಗೂ ಈ ಇತರರು ಪ್ರಸ್ತುತ ಪಡಿಸುತ್ತಿದ್ದ ಕಮರ್ಷಿಯಲ್ ಕಾರ್ಯಕ್ರಮಗಳೆಲ್ಲವೂ ಮುಂಬಯಿಯಲ್ಲಿ ಟೇಪ್ ಮೇಲೆ ಧ್ವನಿಮುದ್ರಣಗೊಂಡು ವಿಮಾನ ಮೂಲಕ ಕೊಲಂಬೊ ತಲುಪಿ ಪ್ರಸಾರವಾಗುತ್ತಿದ್ದರೆ ಚಿತ್ರ ಸಂಗೀತದ ಇತರ ಕಾರ್ಯಕ್ರಮಗಳು ಕೊಲಂಬೊ ಸ್ಟುಡಿಯೊದಿಂದಲೇ ಲೈವ್ ಆಗಿ ಪ್ರಸಾರಗೊಳ್ಳುತ್ತಿದ್ದವು. ಶಿವಕುಮಾರ್ ಸರೋಜ್ ಮತ್ತು ಗೋಪಾಲ್ ಶರ್ಮಾ ಆಗ ಕೊಲಂಬೊದಲ್ಲಿದ್ದು ಕಾರ್ಯಾಚರಿಸುತ್ತಿದ್ದ ಜನಪ್ರಿಯ ಉದ್ಘೋಷಕರು. ವಾರದ ದಿನಗಳಲ್ಲಿ 8 ರಿಂದ 9ರ ವರೆಗೆ ಇರುತ್ತಿದ್ದ ಕೇಳುಗರ ಮೆಚ್ಚಿನ ಗೀತೆಗಳ ಆಪ್ ಹೀ ಕೆ ಗೀತ್ ಭಾನುವಾರಗಳಂದು 11 ರಿಂದ ಆರಂಭವಾಗಿ 1 ಗಂಟೆ ವರೆಗೂ ಸಾಗುತ್ತಿತ್ತು.  ನಡು ನಡುವೆ ಹೊಸ ಸಿನಿಮಾಗಳ ಪ್ರಚಾರದ 15 ನಿಮಿಷ ಅವಧಿಯ ರೇಡಿಯೊ ಪ್ರೋಗ್ರಾಂಗಳು ಇರುತ್ತಿದ್ದವು. ಚಿತ್ರದ ಕಥಾ ಸಾರಾಂಶ, ಹಾಡುಗಳು  ಹಾಗೂ ಇನ್ನಿತರ ಮಾಹಿತಿಗಳನ್ನೊಳಗೊಳ್ಳುತ್ತಿದ್ದ ಇವು ಚಿತ್ರ ಬಿಡುಗಡೆ ಆಗುವ ಸಾಕಷ್ಟು ಮೊದಲೇ ಪ್ರಸಾರವಾಗತೊಡಗಿ ಕೇಳುಗರು ಚಿತ್ರ ವೀಕ್ಷಿಸಲು ತುದಿಗಾಲಲ್ಲಿ  ನಿಲ್ಲುವಂತೆ ಮಾಡುತ್ತಿದ್ದವು. ರೇಡಿಯೊ ಪ್ರೋಗ್ರಾಂ ಇರುವ ಚಿತ್ರಗಳ ಸಂಭಾಷಣೆ ಅಂಶ, ಹಾಡುಗಳ ತುಣುಕುಗಳನ್ನೊಳಗೊಂಡ ಚಿಕ್ಕ ಚಿಕ್ಕ commercial spotಗಳೂ  ಇತರ jingleಗಳ   ಜೊತೆ ವಾರವಿಡೀ ಪ್ರಸಾರವಾಗುತ್ತಿದ್ದವು. ಹೆಚ್ಚಾಗಿ ರೇಡಿಯೊ ಪ್ರೋಗ್ರಾಂಗಳನ್ನು ಅಮೀನ್ ಸಯಾನಿಯೇ ಪ್ರಸ್ತುತ ಪಡಿಸುತ್ತಿದ್ದರೂ ಕೆಲವನ್ನು ಬ್ರಿಜ್ ಭೂಷಣ್, ಶೀಲ್ ಕುಮಾರ್, ಹಸನ್ ರಜ್ವಿ ಮುಂತಾದವರು ನಡೆಸಿಕೊಡುತ್ತಿದ್ದರು. (ಬಿನಾಕಾ ಗೀತ್ ಮಾಲಾ ಹೊರತು ಪಡಿಸಿ ಯಾವುದೇ ಕಾರ್ಯಕ್ರಮದಲ್ಲಿ ಅಮೀನ್ ಸಯಾನಿ ತನ್ನ ಹೆಸರನ್ನು ಉಲ್ಲೇಖಿಸದಿರುತ್ತಿದ್ದುದು ಒಂದು ವಿಶೇಷ!)  ಪ್ರತೀ ಚಿತ್ರದ  ರೇಡಿಯೊ ಪ್ರೋಗ್ರಾಂ ವಾರಕ್ಕೆ ಎರಡು ದಿನ ಇರುತ್ತಿತ್ತು.  ಬುಧವಾರ ರಾತ್ರೆ - ಭಾನುವಾರ ಹಗಲು ಒಂದು ಕಾಂಬಿನೇಶನ್ ಆದರೆ ಮಂಗಳವಾರ ರಾತ್ರೆ ಮತ್ತು ಶುಕ್ರವಾರ ರಾತ್ರೆಯದ್ದು ಇನ್ನೊಂದು ಕಾಂಬಿನೇಶನ್.  ತಿಂಗಳುಗಟ್ಟಲೆ ಪ್ರಸಾರವಾಗುತ್ತಿದ್ದ ಇವುಗಳ ಪ್ರತಿ ಕಂತು ಹೊಸತೇ ಆಗಿರುತ್ತಿದ್ದು ಎಂದಿಗೂ ಪುನರಾವರ್ತನೆ ಇರುತ್ತಿರಲಿಲ್ಲ. ಈ ಕಾರ್ಯಕ್ರಮಗಳ ನಂತರ 1 ಗಂಟೆಯವರೆಗೂ ಆಪ್ ಹೀ ಕೆ ಗೀತ್ ಮುಂದುವರಿದು ಪ್ರಸಾರ ಕೊನೆಗೊಳ್ಳುತ್ತಿತ್ತು. ಅಪರಾಹ್ನ ವಿವಿಧಭಾರತಿಮನೋರಂಜನ್, 15 ನಿಮಿಷ ಕನ್ನಡ ಹಾಡುಗಳೂ ಇರುತ್ತಿದ್ದ ದಕ್ಷಿಣ ಭಾರತೀಯ ಭಾಷಾ ಹಾಡುಗಳ ಮಧುರ ಗೀತಂ, ಸಂಜೆ ಫೌಜಿ ಭಾಯಿಗಳಿಗಾಗಿದ್ದ ಜಯಮಾಲಾ ಇತ್ಯಾದಿ ಕೇಳಿ ಮತ್ತೆ ರಾತ್ರೆ 9-30ಕ್ಕೆ ರೇಡಿಯೊ ಸಿಲೋನಿನಿಂದ ಬಾಲಗೋವಿಂದ ಶ್ರೀವಾಸ್ತವ್ ಎಂಬವರು ಪ್ರಸ್ತುತ ಪಡಿಸುತ್ತಿದ್ದ ಹಿಂದಿ ಚಿತ್ರಲೋಕದ ಸಮಾಚಾರಗಳನ್ನೊಳಗೊಂಡ ಸಿತಾರೋಂ ಕೀ ದುನಿಯಾ ಕೀ ಸೈರ್ ಎಂಬ ಕಾರ್ಯಕ್ರಮದೊಂದಿಗೆ ಸಿಲೋನಿನ ಸಂಡೆ ಸಂಭ್ರಮ ಮುಕ್ತಾಯವಾಗಿ ಪೂರ್ತಿ ಚಾರ್ಜ್ ಆದ ಕೇಳುಗರು ಮರುದಿನ ಆರಂಭವಾಗುವ ಹೊಸ ವಾರವನ್ನು ಎದುರಿಸಲು ಸಜ್ಜಾಗುತ್ತಿದ್ದರು.

     ಆಗ ರೇಡಿಯೊ ಸಿಲೋನಿನ ದಕ್ಷಿಣ ಭಾರತೀಯ ವಿಭಾಗದಲ್ಲಿ ತಮಿಳು ಪ್ರಮುಖ ಭಾಷೆ ಆಗಿದ್ದು ವಾರಾಂತ್ಯ ವಿಶೇಷವೆಂದೇನೂ ಇರುತ್ತಿರಲಿಲ್ಲ. ದಿನವೂ ಸಂಜೆ 4 ರಿಂದ 7ರ ವರೆಗೆ ಈ ಪ್ರಸಾರ ಇರುತ್ತಿತ್ತು. 60ರ ದಶಕದಲ್ಲಿ ಕನ್ನಡ, ಮಲಯಾಳಂ ಹಾಗೂ ತೆಲುಗು ಭಾಷೆಗಳ ಹಾಡುಗಳಿಗೆ ವಾರಕ್ಕೆ 15 ನಿಮಿಷದ ಅವಕಾಶ ಮಾತ್ರ ಇರುತ್ತಿತ್ತು.  ಕನ್ನಡಕ್ಕೆ ಗುರುವಾರ ನಿಗದಿ ಆಗಿತ್ತು.  ಹಾಡುಗಳು ಕನ್ನಡವಾದರೂ announcement ತಮಿಳಲ್ಲೇ ಇರುತ್ತಿತ್ತು.  70ರ ದಶಕದಲ್ಲಿ ಜನಪ್ರಿಯತೆಯ ಉತ್ತುಂಗದಲ್ಲಿದ್ದ ರೇಡಿಯೊ ಸಿಲೋನ್ ತನ್ನ ಪ್ರಸಾರದ ಅವಧಿಯನ್ನು ಹೆಚ್ಚಿಸಿ ದಿನ ನಿತ್ಯ ಮಧ್ಯಾಹ್ನದ ಹಿಂದಿ ಪ್ರಸಾರ ಆರಂಭಿಸಿದಾಗ ದಕ್ಷಿಣ ಭಾರತೀಯ ವಿಭಾಗಕ್ಕೂ ಹೆಚ್ಚುವರಿ ಸಮಯ ದೊರೆತು ಅಪರಾಹ್ನ 2  ರಿಂದ 7ರ ವರೆಗೆ ಸಮಯ ವಿಸ್ತರಣೆಯಾಯಿತು.  ಆಗ HMVಯಲ್ಲಿ ಅಧಿಕಾರಿಯಾಗಿದ್ದ ಕನ್ನಡಿಗ H.M. ಮಹೇಶ್ ಅವರ ಪ್ರಯತ್ನದಿಂದ ದಿನವೂ ಅರ್ಧ ಗಂಟೆ ಕನ್ನಡ ಹಾಡುಗಳು ಪ್ರಸಾರವಾಗತೊಡಗಿದವು.  ಅದುವರೆಗೆ ಸೀಮಿತ ಹಾಡುಗಳನ್ನಷ್ಟೇ ಹೊಂದಿದ್ದ ಕನ್ನಡ ಲೈಬ್ರರಿಗೆ ಇವರ ಪ್ರಯತ್ನದಿಂದ ಹೊಸ ಹೊಸ ಚಿತ್ರಗೀತೆ ಹಾಗೂ ಚಿತ್ರೇತರ ಹಾಡುಗಳ  ಸೇರ್ಪಡೆಯಾಗತೊಡಗಿತು.  ತುಳು ಚಿತ್ರಗಳ ಹಾಡುಗಳೂ ಮೊದಲು ಪ್ರಸಾರವಾದದ್ದು ರೇಡಿಯೊ ಸಿಲೋನಿನಲ್ಲಿಯೇ.  ಈ ಸಮಯದಲ್ಲೂ announcements ತಮಿಳಿನಲ್ಲಿಯೇ ಇರುತ್ತಿತ್ತು.  70ರ ದಶಕದ ಮಧ್ಯಭಾಗದಲ್ಲಿ ತುಳಸಿ ಸಮೀರ್ ಮತ್ತು ಮೀನಾಕ್ಷಿ ಪೊಣ್ಣುದೊರೈ ಮುಂತಾದವರು  ತಮಗೆ ಬರುತ್ತಿದ್ದ ಅರೆ ಬರೆ ಕನ್ನಡದಲ್ಲಿ announcements ಮಾಡತೊಡಗಿದರು.  ಅವರ ಉಚ್ಚಾರಗಳು ಹೇಗೇ ಇದ್ದಿರಲಿ, ವಿದೇಶಿ ನೆಲದಿಂದ ಕನ್ನಡ ಮಾತುಗಳನ್ನು ಆಲಿಸುವುದು ಖುಶಿ ಅಂತೂ ನೀಡುತ್ತಿತ್ತು. 

.     50ರ ದಶಕದಲ್ಲಿ informationa and broadcasting ಮಂತ್ರಿ ಆಗಿದ್ದ ಬಿ.ವಿ.ಕೇಸ್ಕರ್ ಅವರು ಭಾರತೀಯ ಆಕಾಶವಾಣಿಯಲ್ಲಿ ಚಿತ್ರಗೀತೆಗಳಿಗೆ ನಿರ್ಬಂಧ ಹೇರಿದ್ದು ರೇಡಿಯೊ ಸಿಲೋನಿನ ಜನನಕ್ಕೆ ಕಾರಣ. ಚಿತ್ರ ಸಂಗೀತಾಧಾರಿತ ಕಾರ್ಯಕ್ರಮಗಳಿಂದಲೇ ಜಾಹೀರಾತುದಾರರನ್ನು ಮತ್ತು ಶ್ರೋತೃಗಳನ್ನು ಆಕರ್ಷಿಸಿ ಅದು ಉತ್ತುಂಗಕ್ಕೇರಿದ್ದು ಈಗ ಇತಿಹಾಸ. ಭಾರತದಲ್ಲಿ TV ಜಾಲ ವಿಸ್ತಾರವಾಗತೊಡಗಿದಂತೆ ಜಾಹೀರಾತುದಾರರೆಲ್ಲ ಅತ್ತ ಮುಖ ಮಾಡಿದ್ದರಿಂದ ಹಾಗೂ ಸರ್ಕಾರವು ವಿದೇಶಿ ವಿನಿಮಯದ ಮೇಲೆ ನಿರ್ಬಂಧ ಹೇರಿದ್ದರಿಂದ ಜಾಹೀರಾತುಗಳಿಂದಲೇ  ಹೊಟ್ಟೆ ಹೊರೆಯುತ್ತಿದ್ದ ರೇಡಿಯೋ ಸಿಲೋನ್  ಸಂಕಷ್ಟಕ್ಕೆ ಸಿಲುಕಿ  ಕ್ರಮೇಣ ತನ್ನ ಪ್ರಸಾರದ ಅವಧಿಯನ್ನು ಮೊಟಕುಗೊಳಿಸುತ್ತಾ ಬಂದು ಒಮ್ಮೆ ಬಾಗಿಲೆಳೆಯುವ ಹಂತಕ್ಕೂ ಬಂತು.  ಅಂತೂ ಕ್ರಿಶ್ಚಿಯನ್ ಧಾರ್ಮಿಕ ಕಾರ್ಯಕ್ರಮಗಳ ಬೆಂಬಲದಿಂದ ಇಂದಿಗೂ ಕುಟುಕು ಜೀವ ಹಿಡಿದುಕೊಂಡಿರುವ ಅದು ಈಗ ಬೆಳಗ್ಗೆ 6-45 ರಿಂದ 8-00ರ ವರೆಗೆ SW 11905 KHzನಲ್ಲಿ  ಹಿಂದಿ ಹಾಗೂ ಸಂಜೆ 4-45 ರಿಂದ  5-45ರ ವರೆಗೆ SW 9720 KHzನಲ್ಲಿ  ತಮಿಳು/ತೆಲುಗು/ಮಲಯಾಳಂ ಹಾಡುಗಳನ್ನು ಪ್ರಸಾರ ಮಾಡುತ್ತಿದೆ. ಕನ್ನಡ ಕಾರ್ಯಕ್ರಮ ಇತಿಹಾಸ ಸೇರಿದೆ. ವಿಶೇಷವೆಂದರೆ ಈ ಸೀಮಿತ ಅವಧಿಯ ಕಾರ್ಯಕ್ರಮಗಳು ಅಂತರ್ಜಾಲದಲ್ಲೂ ಲಭ್ಯವಿದ್ದು www.slbc.lk ಯಲ್ಲಿ ಆಲಿಸಬಹುದಾಗಿದೆ.

70ರ ದಶಕದಲ್ಲಿ ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿದ್ದ ರೇಡಿಯೊ ಸಿಲೋನ್ ಜಾಹೀರಾತು.

ಕೆಲವು ಪ್ರಸಿದ್ಧ ಕಾರ್ಯಕ್ರಮಗಳ signature tuneಗಳನ್ನು ಈ ವೀಡಿಯೊದಲ್ಲಿ ಆಲಿಸಬಹುದು. ನಡು ನಡುವೆ gongನ ಠಿಂಗ್ ಧ್ವನಿಯೂ ಇದೆ!  ಇದನ್ನು ಸಂಯೋಜಿಸಿದವರು ರೇಡಿಯೊ ಸಿಲೋನಿನ ಪರಮ ಭಕ್ತರಾದ ಅಶ್ವನಿ ಕುಮಾರ್ ಎಂಬುವರು.  ನಾನು ಒದಗಿಸಿದ ಒಂದೆರಡು signature tuneಗಳೂ ಇದರಲ್ಲಿವೆ.