ವಿವಿಧ ಭಾಷೆಗಳಲ್ಲಿ ಅತಿ ಹೆಚ್ಚು ಹಾಡುಗಳನ್ನು ಹಾಡಿ ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್‌ನಲ್ಲಿ ಸ್ಥಾನ ಪಡೆದುದಕ್ಕಾಗಿ ಪಿ.ಸುಶೀಲ(ಪುಲಪಾಕ ಸುಶೀಲ ಮೋಹನ್) ಅವರು ಸುದ್ದಿಯಲ್ಲಿದ್ದಾರೆ. 60-70ರ ದಶಕಗಳಲ್ಲಿ ಒಮ್ಮೆಗೆ ಓರ್ವ ಪುರುಷ ಗಾಯಕ ಮಾತ್ರ ಮುಂಚೂಣಿಯಲ್ಲಿರುತ್ತಿದ್ದರೂ ಪಿ.ಸುಶೀಲ ಮತ್ತು ಎಸ್. ಜಾನಕಿ ಹಿಂದಿಯ ಲತಾ ಮಂಗೇಶ್ಕರ್ ಮತ್ತು ಆಶಾ ಭೋಸ್ಲೆಯಂತೆ ಸಮಾನಾಂತರವಾಗಿದ್ದುಕೊಂಡು ಬಹು ವರ್ಷಗಳ ಕಾಲ ನಮ್ಮನ್ನು ರಂಜಿಸಿದವರು. ಆದರೂ ಸೂಕ್ಷ್ಮವಾಗಿ ಗಮನಿಸಿದರೆ ಕೆಲವು ಚಿತ್ರಗಳಲ್ಲಿ ಸುಶೀಲ ಮಾತ್ರ, ಕೆಲವಲ್ಲಿ ಜಾನಕಿ ಮಾತ್ರ ಇನ್ನು ಕೆಲವಲ್ಲಿ ಇಬ್ಬರೂ ಹಾಡಿರುವುದು ಕಂಡುಬರುತ್ತದೆ. ಉದಾಹರಣೆಗಾಗಿ ಬಂಗಾರದ ಮನುಷ್ಯ, ಶರಪಂಜರ ಮುಂತಾದ ಚಿತ್ರಗಳಲ್ಲಿ ಸುಶೀಲ ಮಾತ್ರ ಇದ್ದರು. ಕನ್ಯಾರತ್ನ , ಕುಲವಧು ಚಿತ್ರಗಳಲ್ಲಿ ಜಾನಕಿ ಮಾತ್ರ ಹಾಡಿದ್ದರು. ಶ್ರೀ ಕೃಷ್ಣ ದೇವರಾಯ, ಮನ ಮೆಚ್ಚಿದ ಮಡದಿ ಚಿತ್ರಗಳಲ್ಲಿ ಇಬ್ಬರ ಹಾಡುಗಳೂ ಇದ್ದವು. ಆದರೆ PBS-SPB ಸ್ಥಿತ್ಯಂತರ ಆಗುವ ಹೊತ್ತಿಗೆ ವಾಣಿ ಜಯರಾಮ್ ಆಗಮನವೂ ಆದದ್ದು ಜಾನಕಿಯವರ ಮೇಲೆ ಅಷ್ಟೇನೂ ಪರಿಣಾಮ ಬೀರದಿದ್ದರೂ ಸುಶೀಲ ಅವರು ಕೊಂಚ ಹಿನ್ನೆಲೆಗೆ ಸರಿಯುವಂತಾಯ್ತು.
ಪಿ.ಸುಶೀಲ ಹಾಡಿದ ಸೋಲೊ ಹಾಡುಗಳು ಎಷ್ಟು ಆಕರ್ಷಕವೋ ಅವರ ಯುಗಳ ಗೀತೆಗಳೂ ಅಷ್ಟೇ ಮನಮೋಹಕ. ಅವುಗಳ ಪೈಕಿ ನನ್ನಿಷ್ಟದ 10 ಹಾಡುಗಳು ಇಲ್ಲಿವೆ. ಇದು ಟಾಪ್ ಟೆನ್ ಅಲ್ಲ. ಎಲ್ಲೆಡೆ ಕೇಳ ಸಿಗುವ ಹೂವು ಚೆಲುವೆಲ್ಲ, ವಿರಹ ನೂರು ತರಹ ಮುಂತಾದವುಗಳನ್ನು ಸೇರಿಸಿಲ್ಲ.
1. ಅಮರ ಮಧುರ ಪ್ರೇಮ
ಟಿ.ಜಿ.ಲಿಂಗಪ್ಪ ಸಂಗೀತ ನಿರ್ದೇಶನವಿರುವ ರತ್ನಗಿರಿ ರಹಸ್ಯ ಚಿತ್ರದ ಈ ಹಾಡು ಅವರ ಅತ್ಯಂತ ಜನಪ್ರಿಯ ಗೀತೆಗಳ ಪೈಕಿ ಒಂದು. ತಗಡುಗಳ ಶೆಡ್ಡೊಂದರಲ್ಲಿ ಇದನ್ನು ಧ್ವನಿಮುದ್ರಿಸಲಾಗಿತ್ತು ಎಂದು ಪಂತುಲು ಅವರ ಸಹಾಯಕರಾಗಿದ್ದ ಪುಟ್ಟಣ್ಣ ಕಣಗಾಲ್ ಒಂದು ಕಡೆ ಹೇಳಿದ್ದರು. ಒಂದು ಕಾಲದಲ್ಲಿ ಈ ಹಾಡು, ಅದರ ಧಾಟಿ ಗೊತ್ತಿಲ್ಲದವರೇ ಇರಲಿಲ್ಲ ಎಂದರೆ ಅತಿಶಯೋಕ್ತಿ ಆಗಲಾರದು. ಈ ಧಾಟಿಯನ್ನಾಧರಿಸಿ ರಚಿಸಲಾದ ಭಜನೆಗಳಿಗೆ, ನಾಟಕದ ಹಾಡುಗಳಿಗೆ ಲೆಕ್ಕವೇ ಇರಲಿಕ್ಕಿಲ್ಲ. ಹಾರ್ಮೋನಿಯಮ್ ನುಡಿಸುತ್ತಾ ಮನೆ ಮನೆಗೆ ಹೋಗುವ ವೃತ್ತಿಯ ಸ್ಟ್ರೀಟ್ ಸಿಂಗರ್‌ಗಳಿಗಂತೂ ಇದು ಬಲು ಮೆಚ್ಚು. ಗ್ರಾಮಫೋನ್ ತಟ್ಟೆಯ ಚರ ಚರ ಸದ್ದು ಮತ್ತು ಕೊನೆ ಭಾಗದಲ್ಲಿರುವ ಕಿರಿಚುವಿಕೆ ಈ ಹಾಡಿನ ಅವಿಭಾಜ್ಯ ಅಂಗಗಳು. ಹೀಗಾಗಿ ವೇದಿಕೆಗಳಲ್ಲಿ ಈ ಹಾಡು ಅಷ್ಟೊಂದು ಕಳೆಗಟ್ಟುವುದಿಲ್ಲ. ಇದರ ತಮಿಳು, ತೆಲುಗು ಅವತರಣಿಕೆಗಳನ್ನೂ ಸುಶೀಲಾ ಅವರು ಇಷ್ಟೇ ಸೊಗಸಾಗಿ ಹಾಡಿದ್ದಾರೆ. ಪಂತುಲು ಅವರು ಈ ಚಿತ್ರವನ್ನು ಹಿಂದಿಯಲ್ಲೂ ಸುಹಾಗ್ ಎಂಬ ಹೆಸರಲ್ಲಿ ಬಿಡುಗಡೆಗೊಳಿಸಿದ್ದರು. ಅದರಲ್ಲಿ ಈ ಹಾಡು ಹಾಡಿದ್ದು ಆಶಾ ಭೋಸ್ಲೆ.
2. ಜಲಲ ಜಲಲ ಜಲ ಧಾರೆ
ವಾಲ್ಮೀಕಿ ಚಿತ್ರದ ಇದು ಸಮೂಹ ಗಾನ ಸ್ಪರ್ಧೆಗಳಿಗೆ ಹೇಳಿ ಮಾಡಿಸಿದ ಹಾಡು. ಯಾವುದೇ ಸಂಗೀತೋಪಕರಣಗಳ ಸಹಾಯವಿಲ್ಲದೆ ಹಾಡಿದರೂ ರಂಜಿಸುತ್ತದೆ. ಸಂಗೀತ ಘಂಟಸಾಲ.
3. ಅಂಕದ ಪರದೆ ಜಾರಿದ ಮೇಲೆ
ಪಾಲುಂ ಪಳಮುಂ ಚಿತ್ರದ ಕನ್ನಡ ಅವತರಣಿಕೆ ಬೆರೆತ ಜೀವದ ಹಾಡಿದು. ಈ ಚಿತ್ರಕ್ಕೆ ವಿಜಯ ಭಾಸ್ಕರ್ ಅವರು ಮೂಲ ತಮಿಳು ಹಾಡುಗಳ ಒಂದಿಷ್ಟು ಛಾಯೆಯೂ ಇರದ ಆಕರ್ಷಕ ರಾಗ ಸಂಯೋಜನೆ ಮಾಡಿದ್ದಾರೆ.
4. ಚೆಲುವಿನ ಕಲೆ ಬಾಳ ಲೀಲೆ
ಉಯ್ಯಾಲೆ ಚಿತ್ರಕ್ಕಾಗಿ ಯಮನ್ ಕಲ್ಯಾಣ್ ರಾಗವನ್ನಾಧರಿಸಿ ರಚಿತವಾದ ಬಲು ಸುಂದರ ಹಾಡಿದು. ಇದೂ ವಿಜಯ ಭಾಸ್ಕರ್ ಅವರದ್ದೇ ಸಂಗೀತ ಸಂಯೋಜನೆ.
5. ಪ್ರಿಯ ಜೀವನದ ಪರ್ಣ ಕುಟಿಯೊಳ್
ಹಿಂದಿಯಿಂದ ಕನ್ನಡಕ್ಕೆ ಡಬ್ ಆದ ಸಂಪೂರ್ಣ ರಾಮಾಯಣ ಚಿತ್ರದ ಈ ಹಾಡು ಬಲು ಆಕರ್ಷಕ. ಸುಮಾರು ಒಂದು ನಿಮಿಷದ ವರೆಗಿನ prelude, ಕೋರಸ್ ಇತ್ಯಾದಿಗಳ ನಂತರ ಆರಂಭವಾಗುವ ಹಾಡಲ್ಲಿ ಒಂದು ಚರಣ ಮಾತ್ರ ಇದೆ. ಕನ್ನಡದಲ್ಲಿ ಕಪ್ಪು ಬಿಳುಪು ಚಿತ್ರಗಳು ಮಾತ್ರ ಬರುತ್ತಿದ್ದ ಆ ಕಾಲದಲ್ಲಿ ಈ ಸಂಪೂರ್ಣ ವರ್ಣರಂಜಿತ ರಾಮಾಯಣವನ್ನು ನೋಡಲು ದೂರ ದೂರದ ಊರುಗಳಿಂದ ಜನರು ಸಿನಿಮಾ ಟಾಕೀಸಿಗೆ ಬರುತ್ತಿದ್ದರು. ಹಿಂದಿಯ ವಸಂತ ದೇಸಾಯಿ ಸಂಗೀತವನ್ನು ಕನ್ನಡಕ್ಕೆ ಅಳವಡಿಸಿದ್ದು ವಿಜಯ ಭಾಸ್ಕರ್.
6. ಪ್ರೀತಿ ಹೊನಲೆ
ನವಜೀವನ ಚಿತ್ರದ ವಿಭಿನ್ನ ಶೈಲಿಯ ಜೋಗುಳ ಹಾಡು. ಬೆರಳೆಣಿಕೆಯ ಸಂಗೀತ ಪರಿಕರಗಳನ್ನುಪಯೋಗಿಸಿ ರಾಜನ್ ನಾಗೇಂದ್ರ ಅವರು ರಾತ್ರಿಯ ನೀರವತೆ ಮತ್ತು ತಾಯಿಯ ತುಮುಲವನ್ನು ಪರಿಣಾಮಕಾರಿಯಾಗಿ ಚಿತ್ರಿಸಿದ್ದಾರೆ. ಸೋರಟ್ ಅಶ್ವತ್ಥ್ ಅವರ ಸಾಹಿತ್ಯವೂ ಅಷ್ಟೇ ಅರ್ಥಪೂರ್ಣ.
7. ಚೆಲುವಾಂತ ಚೆನ್ನಿಗನೆ
ಕನ್ನಡದ ಮೊದಲ ವರ್ಣ ಚಿತ್ರ ಎಂಬ ಖ್ಯಾತಿಯ ಅಮರ ಶಿಲ್ಪಿ ಜಕ್ಕಣ್ಣ ಶಾಸ್ತ್ರೀಯ ಶೈಲಿಯ ನೃತ್ಯಗೀತೆ. ಸಂಗೀತ ನಿರ್ದೇಶನ ಎಸ್.ರಾಜೇಶ್ವರ ರಾವ್..
8. ಹಾರುತ ದೂರ ದೂರ
ರಾಣಿ ಹೊನ್ನಮ್ಮ ಚಿತ್ರಕ್ಕಾಗಿ ಪಿ.ಬಿ.ಶ್ರೀನಿವಾಸ್ ಜೊತೆ ಹಾಡಿದ ಯುಗಳ ಗೀತೆ. ವಿಜಯ ಭಾಸ್ಕರ್ ಅವರ ಆಕರ್ಷಕ ವಾದ್ಯ ಸಂಯೋಜನೆ ಶಂಕರ್ ಜೈಕಿಶನ್ ಶೈಲಿಯನ್ನು ನೆನಪಿಸುತ್ತದೆ.
9. ಜೇನಿರುಳು ಜೊತೆಗೂಡಿರಲು
ಹಿಂದಿಯ ಭಾಭಿ ಚಿತ್ರ ಕನ್ನಡದಲ್ಲಿ ಜೇನು ಗೂಡು ಆಗಿ ಬಂದಿತ್ತು. ಆ ಚಿತ್ರಕ್ಕಾಗಿ ಸ್ವತಃ ಉತ್ತಮ arranger ಆಗಿದ್ದ ವಿಜಯಾ ಕೃಷ್ಣಮೂರ್ತಿ ರಾಗ ಸಂಯೋಜನೆಯಲ್ಲಿ ಪಿ.ಬಿ.ಎಸ್ ಜೊತೆ ಹಾಡಿದ ಬಲು ಸುಂದರ ಯುಗಳ ಗೀತೆ.
10. ನೀ ನಡೆವ ಹಾದಿಯಲ್ಲಿ
ಬಂಗಾರದ ಹೂವು ಚಿತ್ರಕ್ಕಾಗಿ ಎಸ್. ಜಾನಕಿ ಅವರೊಂದಿಗೆ ರಾಜನ್ ನಾಗೇಂದ್ರ ಸಂಗೀತ ನಿರ್ದೇಶನದಲ್ಲಿ ಹಾಡಿದ ಬಂಗಾರದಂಥ ಹಾಡು.
ಹಲವು ವಿಷಯಗಳನ್ನು ತಿಳಿದುಕೊಂಡಂತಾಯ್ತು. ' ಪ್ರಿಯ ಜೀವನದ ಪರ್ಣಕುಟಿಯೊಳ್ ...' ಹಾಡನ್ನು ಇದೇ ಮೊದಲ ಬಾರಿ ಇಲ್ಲಿ ಕೇಳುತ್ತಿದ್ದೇನೆ. ವಂದನೆಗಳು ಸರ್.
ReplyDeleteಸುಂದರ ಹಾಡುಗಳ ಪೂರಕ ಮಾಹಿತಿಯನ್ನು ಸ್ಪುಟವಾಗಿ ತಿಳಿಸಿ ಆಸಕ್ತಿ ಹೆಚ್ಚಿಸಿದ್ದೀರಿ. ಈ ಪ್ರಯತ್ನ ಇನ್ನೂ ಮುಂದುವರೆಯಲಿ.
ReplyDeleteಅಭಿನಂದನೆಗಳು.
ಪ್ರತಿಕ್ರಿಯೆಗಾಗಿ ಧನ್ಯವಾದ.
Delete