Friday 25 March 2016

ಮನದ ಕಿರು ಕಿಟಿಕಿ ತೆರೆಯುವ ಹಳೆ ಹಾಡುಗಳು


ಆಲಿಸಿರಿ ಒಂದೊಂದೆ ಹಳೆ ಹಾಡು ಹುಡುಕಿ
ನೆನಪುಗಳು ತೆರೆಯುವವು ಮನದ ಕಿರು ಕಿಟಿಕಿ
ಒಂದು ಹಾಡಲಿ ನೀವು ಆರನೇ ಕ್ಲಾಸು
ಇನ್ನೊಂದರಲಿ ಊರ ಸಿನಿಮ ಟಾಕೀಸು

ಎಷ್ಟೋ ಸಲ ಸಿನಿಮಾ ಹಾಡುಗಳಿಗೆ ಅವು ಸಿನಿಮಾವೊಂದರ ಭಾಗವಾಗಿರುವುದರ ಜೊತೆಗೆ ಬೇರೊಂದು ಅಸ್ತಿತ್ವವೂ ಇರುತ್ತದೆ.  ಯಾವುದೋ  ಸಂದರ್ಭದಲ್ಲಿ ಅವು ನಮ್ಮ ಜೀವನದ  ಒಂದು ಕ್ಷಣಕ್ಕೆ ತಳುಕುಹಾಕಿಕೊಂಡಿರುತ್ತವೆ. ಒಂದು ವೇಳೆ ನಾವು ಆ ಸಿನಿಮಾ ನೋಡಿದ್ದರೂ ಅವುಗಳನ್ನು ಮತ್ತೆ ಆಲಿಸಿದಾಗ ಸಂಬಂಧಿಸಿದ ಸಿನಿಮಾ ದೃಶ್ಯದ ಬದಲು  ಆ ಕ್ಷಣವನ್ನೇ ಕಣ್ಣೆದುರಿಗೆ ತರುತ್ತವೆ. ಎಷ್ಟೋ ಸಲ ಸಿಹಿ ಕಹಿ ನೆನಪುಗಳನ್ನು ಹೊತ್ತು ತರುವ ಇಂಥ  ಹಾಡುಗಳನ್ನು ನಾವು ಬರೀ ರೇಡಿಯೋದಲ್ಲೋ, ಇನ್ನಾರಾದರೂ ಹಾಡಿದ್ದನ್ನೋ ಕೇಳಿರುತ್ತೇವಷ್ಟೇ ಹೊರತು ಆ ಸಿನಿಮಾ ನೋಡಿರುವುದೂ ಇಲ್ಲ.

ಎಂದೋ ಎಂದೋ ಎಂದೋ  ಎಂದೋ ನಿನ್ನ ದರುಶನ ಹಾಡಿನ ಉಲ್ಲೇಖ ಬಂದಾಗ ನನಗೆ ಜಗನ್ಮೋಹಿನಿ ಸಿನಿಮಾ ಆಗಲಿ ಆ ಹಾಡಿನ ಮೂಲವಾದ ಮಹಲ್ ಚಿತ್ರದ ಆಯೇಗಾ ಆಯೇಗಾ ಆಯೇಗಾ ಆಯೇಗಾ ಆನೇವಾಲ ಆಗಲಿ ನೆನಪಾಗುವ ಬದಲು ನಮ್ಮಕ್ಕ ನನ್ನನ್ನು ತೊಟ್ಟಿಲಲ್ಲಿ ಮಲಗಿಸಿ ಇದನ್ನು ಹಾಡುತ್ತಿದ್ದ ದೃಶ್ಯದ flash back  ಕಣ್ಣಮುಂದೆ ಬರುತ್ತದೆ.  ರಮಯ್ಯಾ ವಸ್ತಾವಯ್ಯಾ ಹಾಡು ಕೇಳಿದರೆ ನನಗೆ ನೆನಪಾಗುವುದು  ಅದೇ ಧಾಟಿಯ ಒಹೊಯ್ಯ ಹೊಯ್ಯ ಹೊಯ್ಯ ಎಂಬ ಹಾಡಿಗೆ ನಮ್ಮ ಎಲಿಮೆಂಟರಿ ಶಾಲೆಯ ಮಾಸ್ಟರು ಮಾಡಿಸುತ್ತಿದ್ದ ಕುಮ್ಮಿ ಡ್ಯಾನ್ಸು. ಆರತಿ ಚಿತ್ರದ ಬಾರ್ ಬಾರ್ ತೊಹೆ ಕ್ಯಾ ಸಮ್‌ಝಾಯೆಂ  ಅಂದೊಡನೆ ನಾನು 5ನೇ ಕ್ಲಾಸ್ ಇದ್ದಾಗ ನಮ್ಮ ಮನೆಯ ಬಂದ ಮೊದಲ  second hand ನ್ಯಾಶನಲ್ ಎಕ್ಕೊ ರೇಡಿಯೊ ಕಣ್ಣ ಮುಂದೆ ಬರುತ್ತದೆ.  ನಾನು ಸ್ವತಃ ಟ್ಯೂನ್ ಮಾಡಿ ಅದರಲ್ಲಿ ಮೊದಲು ಕೇಳಿದ  ಹಾಡು ಅದು. ಅದನ್ನು ಹಾಡಿದವರ ವಿವರಗಳನ್ನೂ ಗಮನಿಸಿದ ನಾನು "ಇವತ್ತು ನಾನು ಲತಾ ಮಂಗೇಷ್ಕರ್ ಮತ್ತು ಮಹಮ್ಮದ್ ರಹಿ ಹಾಡಿದ್ದ ಹಾಡೊಂದನ್ನು ಕೇಳಿದೆ" ಎಂದು  ರೇಡಿಯೊ ಹಾಗೂ ಹಾಡುಗಳ ಬಗ್ಗೆ ಅದಾಗಲೇ ಒಂದಷ್ಟು ಅನುಭವಿಯಾಗಿದ್ದ ನಮ್ಮ ಅಣ್ಣನಿಗೆ ವರದಿಯೊಪ್ಪಿಸಿದೆ.  ಆಗ ಅವರು ನಕ್ಕು ಅದು ಮಹಮ್ಮದ್ ರಹಿ ಅಲ್ಲ. ಅವರ ಹೆಸರು ಮಹಮ್ಮದ್ ರಫಿ ಎಂದು ತಿದ್ದಿದರು.  ಕೆಲವೇ ತಿಂಗಳುಗಳಲ್ಲಿ 50 ವೋಲ್ಟಿನ ಗಜಗಾತ್ರದ ಬ್ಯಾಟರಿಯನ್ನು ಬಯಸುತ್ತಿದ್ದ ಈ ರೇಡಿಯೊ ಇನ್ಯಾರದೋ ಮನೆಯ ಮೇಜನ್ನು ಅಲಂಕರಿಸಿ 9 ವೋಲ್ಟ್  ಬ್ಯಾಟರಿಯಿಂದ ನಡೆಯುವ ಹೊಸ ನ್ಯಾಷನಲ್ ಎಕ್ಕೋ ಟೇಬಲ್  ಟ್ರಾನ್‌ಸಿಸ್ಟರ್ ನಮ್ಮ ಮನೆಗೆ ಪಾದಾರ್ಪಣೆ ಮಾಡಿತು. ಈ ಸಂದರ್ಭಕ್ಕೂ ಒಂದು ಹಾಡಿನ ಲಿಂಕ್ ಇದೆ.  ಹಳೆ ರೇಡಿಯೊ ಇದ್ದಾಗಲೇ ಅದಕ್ಕೆಂದೇ ಅರ್ಧ  ಭಾಗ ಗಾಜು ಅರ್ಧ ಭಾಗ ತಂತಿ ಜಾಳಿಗೆ ಇರುವ ಶಟರ್ ಹೊಂದಿದ ಒಂದು ಮರದ ಕಪಾಟು ತಯಾರಾಗಿತ್ತು.  ಈ ಹೊಸ ರೇಡಿಯೊ ಉಳ್ಳ ದೊಡ್ಡ ರಟ್ಟಿನ ಪೆಟ್ಟಿಗೆಯನ್ನು ನಮ್ಮ ಇಬ್ಬರು ಹಿರಿ ಅಣ್ಣಂದಿರು ಹೊತ್ತು ತಂದು ಮನೆಯೊಳಗೆ ಪ್ರವೇಶಿಸಿವುದಕ್ಕೂ ಮೊದಲು ಈ ದೊಡ್ಡ ರೇಡಿಯೊ ಆ ಕಪಾಟಿನೊಳಗೆ ಹೋಗಲಾರದು ಎಂದುಕೊಂಡು ಆಗ ಜನಪ್ರಿಯವಾಗಿದ್ದ ಹೊಠೊಂಪೆ ಲಾಲಿ ಅಲ್ಲಾ ಅಲ್ಲಾ  ಮೈ ಮರ್ ಗಯಾ ಮೈ ಮರ್ ಗಯಾ ಎಂಬ ಹಾಡಿನ ಸ್ಪೂರ್ತಿಯಿಂದ "ಕಪಾಟು ಮರ್ ಗಯಾ ಕಪಾಟು ಮರ್ ಗಯಾ" ಎಂದು ಗಟ್ಟಿಯಾಗಿ ಹಾಡಿದೆ. ಆಗ ಇಬ್ಬರು ಅಣ್ಣಂದಿರೂ ಒಂದೇ ಧ್ವನಿಯಲ್ಲಿ  "ಹೊಸ ರೇಡಿಯೊ ತಂದಾಗ ಏನದು ಮರ್ ಗಯಾ ಅಂತ ನಿನ್ನದು ಅಪಶಕುನ" ಎಂದು ಚೆನ್ನಾಗಿ ನನ್ನನ್ನು ಝಾಡಿಸಿದರು!  ಬಾಕ್ಸಿನಿಂದ ಹೊರತೆಗೆದ ಹೊಸ ರೇಡಿಯೊ ಕಪಾಟಿನೊಳಗೆ ಸುಸೂತ್ರವಾಗಿ ಕೂತಾಗ ಪ್ರಕರಣ ಸುಖಾಂತ್ಯಗೊಂಡಿತು.  ಮುಂದೆ ಆ ದಿನಗಳಲ್ಲಿ ದಿನನಿತ್ಯವೆಂಬಂತೆ ಬಿತ್ತರವಾಗುತ್ತಿದ್ದ ಬಿಂಕದ ಸಿಂಗಾರಿ  ಹಾಡು ಆ ರೇಡಿಯೋದ ವಾರ್ನಿಷ್ ಸುವಾಸನೆಯನ್ನು ನೆನಪಿಸುವ ಹಾಡಾಗಿ ಮನದಲ್ಲಿ ಸ್ಥಾಪಿತವಾಯಿತು.

ನನಗೆ ಚೌದವೀಂ ಕಾ ಚಾಂದ್ ಚಿತ್ರದ ದಿಲ್ ಕೀ ಕಹಾನಿ ರಂಗ್ ಲಾಯಿ ಹೈ ಅಂದರೆ ಕರೆಂಟ್ ಹೋಗುವ ಹಾಡು.  ಬೆಳ್ತಂಗಡಿಯ ಟೂರಿಂಗ್ ಟಾಕೀಸಿನಲ್ಲಿ  ನಾವೊಮ್ಮೆ ಮಹಿಷಾಸುರ ಮರ್ದಿನಿ ಸಿನಿಮಾ ನೋಡಲು ಹೋಗಿದ್ದಾಗ ಈ ಹಾಡು  ಹಾಕಿದಾಕ್ಷಣ  ಕರೆಂಟು ಹೋಗುವ ಘಟನೆ ಪದೇ ಪದೇ ಮರುಕಳಿಸಿದ್ದು ಇದಕ್ಕೆ ಕಾರಣ.  ಶರಣು ಕಾವೇರಿ ತಾಯೆ ಅಂದರೆ ಆ ಟಾಕೀಸಿನಲ್ಲಿ ಕತ್ತಲಾವರಿಸಿ ತೆರೆ ಮೇಲೆ ಜಾಹೀರಾತು ಮೂಡಲು ಆರಂಭವಾಗುವ  ಕ್ಷಣದ ಮುನ್ಸೂಚನೆ. ಬೊಂಬೆಯಾಟವಯ್ಯಹಾಡು ನೆನಪಿಗೆ  ತರುವುದು  "ಹತ್ತೂವರೆಯಿಂದ ಮುಗಿಯುವ ವರೆಗೆ ಮಾತ್ರ, ಬೇಕಿದ್ದವರು ಬೇಕಿದ್ರೆ ಮಾತ್ರ ಕೇಳಿ ಕುಡಿಯಿರಿ -  ಬೊಂಬೆಯಾಟವಯ್ಯಾ ಬ್ರಹ್ಮಾಂಡವೇ..." ಅನ್ನುತ್ತಾ   ಗುಣಸಾಗರಿ ರಸಾಯನ ಮಾರುತ್ತಿದ್ದ  ಉಜಿರೆಯ ಲೈಟ್ ಭಟ್ಟರನ್ನು.    ಫಿರ್ ವಹೀ ದಿಲ್ ಲಾಯಾ ಹೂಂ ಚಿತ್ರದ ಹಮ್ ದಮ್ ಮೆರೆ ಖೇಲ್ ನ ಜಾನೊ ಅಂದರೆ ಉಜಿರೆಯಿಂದ ನಡೆದುಕೊಂಡು ಮನೆಗೆ ಬರುವಾಗ ನಿಡ್ಗಲ್ಲಿನಲ್ಲಿ ಟಾರ್ ರಸ್ತೆ ಬಿಟ್ಟು ಒಳದಾರಿಗೆ ಹೊರಳುವ ಜಾಗದ ಹಾಡು.  ಯಾಕೋ ಏನೋ, ಅಲ್ಲಿಗೆ ಬಂದಾಗಲೇ ಈ ಹಾಡು ಮನದಲ್ಲಿ ಮೂಡುತ್ತಿದ್ದುದು ಇದಕ್ಕೆ ಕಾರಣ.  ಘೂಂಘರ್ ವಾ ಮೋರಾ ಛನ್ನ್ ಛನ್ನ್ ಬಾಜೆ ಅಂದರೆ ಉಜಿರೆ ಹಾಸ್ಟೆಲಿನ ಸಹಪಾಠಿಯೊಬ್ಬ  ನೆನಪಾಗುತ್ತಾನೆ. ಆತ ಸ್ನಾನ ಮುಗಿಸಿ ಬಕೆಟು ತುಂಬಾ ನೀರಿನೊಡನೆ ರೂಮಿಗೆ ಬರುವಾಗ ಘೂಂಘರ್ ವಾ ಮೋರಾ ಚುಂಗು ಚುಂಗು ಬಾಜೆ ಅನ್ನುತ್ತಾ ಬರುತ್ತಿದ್ದ.  ಜಯತು ಜಯ ವಿಠಲ ಹಾಡೆಂದರೆ ಉಜಿರೆ ರಥಬೀದಿಯಲ್ಲಿ ನಡೆಯುತ್ತಿದ್ದ ಟೆಂಟ್ ಆಟದ ಪ್ರತೀಕ.  ಲೌಡ್ ಸ್ಪೀಕರ್ ಸೆಟ್ಟಿಂಗ್ ಆದೊಡನೆ ಮೊತ್ತಮೊದಲು ಈ ಹಾಡೇ ಅಲ್ಲಿ ಮೊಳಗುತ್ತಿದ್ದುದು.  ಕನ್ಯಾರತ್ನ ಚಿತ್ರದ ಒಂದೇ ಮಾತು ಒಂದೇ ಮನಸು ಇದು ಧರ್ಮಸ್ಥಳ ಜಾತ್ರೆಯ ಬಂಬಯ್ ದೇಖೋ ಮದ್ರಾಸ್ ದೇಖೊವನ್ನು ನೆನಪಿಗೆ ತರುತ್ತದೆ. ಅಲ್ಲಿಯ ಬಯಾಸ್ಕೋಪಿನವ ಗ್ರಾಮೊಫೋನ್ ಒಂದಕ್ಕೆ ಹಾರ್ನಿನ ಬದಲು ಅಂಗಡಿಯಲ್ಲಿ ಸಾಮಾನು ಕಟ್ಟಿಕೊಡುವ ರೀತಿಯ ಪೇಪರಿನ ಕೋನ್  ಬಳಸಿ ಈ ಹಾಡು ಕೇಳಿಸುತ್ತಿದ್ದ!  ಉಡ್‌ಕೆ ಪವನ್ ಕೆ ಸಂಗ್ ಚಲೂಂಗಿ ಅಂದೊಡನೆ ನೆನಪಾಗುವುದು ನಮ್ಮೂರಿನ ಶಾಲೆಯ ವಾರ್ಷಿಕೋತ್ಸವದ ದಿನ  ಮೈಕ್ ಸೆಟ್ಟಿನವನೊಡನೆ ದೋಸ್ತಿ ಮಾಡಿ ಹ್ಯಾಂಡಲ್ ತಿರುಗಿಸಿ ನಡೆಸುವ ಗ್ರಾಮಫೋನನ್ನು ನಾನು ಸ್ವತಃ operate ಮಾಡಿ ಆ ಹಾಡನ್ನು ಪದೇ ಪದೇ ನುಡಿಸಿದ್ದು.  ತೇರಿ ಪ್ಯಾರಿ ಪ್ಯಾರಿ ಸೂರತ್ ಕೊ ಹಾಡಿನ ಹಿಂದೆ ಶಾಲೆಯಲ್ಲಿ ಸಿನಿಮಾ  ಎಂಬ ಶಬ್ದದ ಉಲ್ಲೇಖವೇ ಅಪರಾಧವೆನ್ನಿಸಿಕೊಳ್ಳುತ್ತಿದ್ದ ಕಾಲದಲ್ಲೂ ನಮ್ಮ 6ನೇ ತರಗತಿಯ ಹಿಂದಿ ಅಧ್ಯಾಪಕರು "ಅದು ಸಿನಿಮಾ ಹಾಡಾದರೂ ಒಳ್ಳೆಯ ಸಾಹಿತ್ಯ ಹೊಂದಿದೆ" ಎಂದು ಹೊಗಳಿದ ದೃಶ್ಯವಿದ್ದರೆ  ಲಾಲ್ ಛಡಿ ಮೈದಾನ್ ಖಡಿ  ಹಾಡಿಗೆ ಲಿಂಕ್ ಆಗಿರುವುದು 9ನೇ ತರಗತಿಯ ಹಿಂದಿ ಪಠ್ಯದಲ್ಲಿದ್ದ ಉಠ್ ಜಾಗ್ ಮುಸಾಫಿರ್ ಭೋರ್ ಭಯಿ ಎಂಬ  ಕವನವನ್ನು ಆ ಧಾಟಿಯಲ್ಲಿ ಹಾಡಿ ಅಧ್ಯಾಪಕರಿಂದ ಶಹಬ್ಬಾಸ್ ಅನಿಸಿಕೊಂಡ ಘಟನೆ.  ಛಲಿಯಾ ಮೇರಾ ನಾಮ್ ನನ್ನನ್ನು ಬೆಳ್ತಂಗಡಿ ಹೈಸ್ಕೂಲಲ್ಲಿ ನಡೆದ zonal sportsಗೆ ಕರೆದೊಯ್ದರೆ ಏ ನರ್ಗಿಸೆ ಮಸ್ತಾನ ಮರುವರ್ಷ ಉಜಿರೆಯಲ್ಲಿ ನಡೆದ Greg Memorial Sportsನ ಪೆವಿಲಿಯನ್ ಹಿಂಭಾಗದಲ್ಲಿ ನಿಲ್ಲಿಸುತ್ತದೆ ಏಕೆಂದರೆ ಅಲ್ಲಿಯ ಧ್ವನಿವರ್ಧಕಗಳಲ್ಲಿ ಈ ಹಾಡುಗಳು ಪದೇ ಪದೇ ಕೇಳಿಬರುತ್ತಿದ್ದವು.  ನಮ್ಮ ಮನೆ ಸಮೀಪದ ಮೈದಾನಿನಲ್ಲಿ ಬೀಡು ಬಿಟ್ಟಿದ್ದ ಸೈಕಲ್ ಬ್ಯಾಲೆನ್ಸಿನವನು ಹಗಲು ರಾತ್ರಿಯೆನ್ನದೆ ಊರೆಲ್ಲ ಕೇಳುವಂತೆ ಹಾಕುತ್ತಿದ್ದ ಹೀರೊ ಹೀರೊ ಹೀರೊ ನಾನೇ ಎಂಬ ಹಾಡು ಆಗ ನಾನು ಇಲಾಖೆಯ ಸ್ಪರ್ಧಾತ್ಮಕ ಪರೀಕ್ಷೆಗೆ ಓದುತ್ತಿದ್ದುದನ್ನು ನೆನಪಿಗೆ ತರುತ್ತದೆ.  ಪರೀಕ್ಷೆಗೆ ತಯಾರಿ ನಡೆಸುವಾಗ ಹಿನ್ನೆಲೆಯಲ್ಲಿ ಸಣ್ಣದಾಗಿ ರೇಡಿಯೊ  ಇಟ್ಟುಕೊಂಡು  ಓದನ್ನು ಹಾಡುಗಳಿಗೆ ಲಿಂಕ್ ಮಾಡಿಕೊಂಡರೆ "ಹೋ, ಈ ಪ್ರಶ್ನೆಗೆ  ಆ ಹಾಡನ್ನು ಕೇಳ್ತಾ ಓದಿದ್ದೇ ಸರಿಯಾದ ಉತ್ತರ" ಎಂದು ಓದಿದ್ದನ್ನು  retrieve ಮಾಡಲು ಸಹಾಯವಾಗುವುದೂ ಇದೆ.  ಆದರೆ ಕೆಲವು ಸಲ ಒಂದು ಹಾಡಿನ ಸಾಲು ನೆನಪುಮಾಡಿಕೊಳ್ಳಲು ಇನ್ನೇನನ್ನೋ ಲಿಂಕ್ ಮಾಡಿಕೊಳ್ಳಬೇಕಾಗಿ ಬರುವುದೂ ಇದೆ.  ಒಮ್ಮೆ ನನಗೆ ಬೇಖುದೀ ಮೆಂ ಸನಮ್ ಉಠ್ ಗಯೇ ಜೋ ಕದಮ್ ಹಾಡಿನ ಸಾಲುಗಳು ಏನು ಮಾಡಿದರೂ ನೆನಪಿಗೆ ಬಾರದಂತಾಯಿತು. ಅಂತೂ ಕೊನೆಗೆ  ಕಷ್ಟಪಟ್ಟು ನೆನಪು ಮಾಡಿಕೊಂಡಮೇಲೆ ಅದರಲ್ಲಿರುವ ಕದಂ ಪದಕ್ಕೆ ಅಲ್ಲೇ ಪಕ್ಕದಲ್ಲಿದ್ದ ಮೇಜಿನ ಕಾಲುಗಳನ್ನು ಲಿಂಕ್ ಮಾಡಿಕೊಂಡೆ.  ಆ ಮೇಲೆ ಯಾವತ್ತೂ ಆ ಹಾಡು ಮರೆತುಹೋಗಿಲ್ಲ!

ಒ ಮೇರೆ ಬೇಚೈನ್ ದಿಲ್ ಕೊ ಚೈನ್ ಎಂಬ ಹಾಡು ಮಂಗಳೂರಿನ ರೂಪವಾಣಿ ಟಾಕೀಸನ್ನು ಯಾವಾಗಲೂ ನೆನಪಿಸುವಂತೆ ಮಾಡಿದ್ದು  ಅಲ್ಲಿ ಸಿನಿಮಾ ಆರಂಭವಾಗುವುದಕ್ಕೆ ಮೊದಲು ನುಡಿಸುತ್ತಿದ್ದ ಹಾಡುಗಳ Hi Fi ಗುಣಮಟ್ಟ.  ಮೊತ್ತ ಮೊದಲ ಬಾರಿ  ಈ ಹಾಡನ್ನು ಅಲ್ಲಿ ಕೇಳಿದಾಗ ಆದ ರಸಪೂರ್ಣ ಅನುಭವ  ಈಗ ಅದನ್ನು ಯಾವ multichannel sound systemನಲ್ಲಿ ಕೇಳಿದರೂ ರೂಪವಾಣಿಯಲ್ಲಿ ಕೇಳಿದಂತಾಗುತ್ತಿಲ್ಲ ಎಂದೆನಿಸುವಂತೆ ಮಾಡಿದೆ.

ಅಧಿಕಾರ್ ಎಂಬ ಚಿತ್ರದಲ್ಲಿ ರೇಖಾ ಓ ರೇಖಾ ಅನ್ನುವ ಅಷ್ಟೇನೂ ಜನಪ್ರಿಯವಲ್ಲದ ಹಾಡೊಂದಿದೆ.  ಅದರ ಚರಣದಲ್ಲಿ ಬರುವ ಮೆಹೆನತ್ ಜೊ ಕೀ ಹೈ ತೊ ಫಲ್ ಭೀ ಮಿಲೇಗಾ ಎಂಬ ಸಾಲು ನಾನು ಈಗಲೂ ಯಾವುದಾದರೂ ಹೊಸ ಕೆಲಸ ಮಾಡುವಾಗ ಗುಣುಗುಣಿಸುವಂಥಾದ್ದು.

ಯಾವುದೇ ಕಾರಣ ಇಲ್ಲದಿದ್ದರೂ ಕೆಲವು ಹಾಡುಗಳನ್ನು ಕೇಳುವಾಗ ವಿಶಿಷ್ಟ ಅನುಭವವಾಗುವುದಿದೆ.  ಆಯೀ ಮಿಲನ್ ಕೀ ಬೇಲಾ ಚಿತ್ರದ ವೊ ಬುರಾ ಮಾನ್ ಗಯೆ ಎಂಬ ಹಾಡಿನಲ್ಲಿ ಏನನ್ನೂ ಕುಡಿಯುವ ಉಲ್ಲೇಖವಿಲ್ಲ.  ನಾನೂ ಅದನ್ನು ಕೇಳುತ್ತಾ ನೀರೂ ಸಹ ಕುಡಿದದ್ದಿಲ್ಲ.  ಆದರೆ ಅದರ prelude  ಕೇಳುವಾಗ ಈಗಲೂ ನನಗೆ ದಶಮೂಲಾರಿಷ್ಟ ಕುಡಿದಂತೆನಿಸುತ್ತದೆ!

ಶ್ರೀನಿವಾಸ ಕಲ್ಯಾಣ ಚಿತ್ರದ ನಾನೇ ಭಾಗ್ಯವತಿ ನನಗೆ ನೆನಪಿರುವುದು ಒಂದು ವಿಶಿಷ್ಠವಾದ ಘಟನೆಯಿಂದ.  ಆಗ ನಮ್ಮ ಮಿತ್ರಬಳಗದಲ್ಲಿ ಸ್ವತಃ ಉತ್ತಮ ಗಾಯಕರಾಗಿದ್ದು ಅಶೋಕ್ ಚರಣ್ ನೈಟ್‌ಗಳಲ್ಲಿ ಭಾಗವಹಿಸುತ್ತಿದ್ದ ಡಾ|ವಿಜಯ ಕುಮಾರ್ ಎಂಬುವವರಿದ್ದರು. ಯಾವುದೇ ಹೊಸ ಹಾಡು ಬಂದರೂ ಅದರ ಬಗ್ಗೆ ನಮ್ಮ ವಿಮರ್ಶೆ, ವಿಚಾರ ವಿನಿಮಯಗಳು ನಡೆಯುತ್ತಿದ್ದವು. ಒಮ್ಮೆ ನಾನು "ಶ್ರೀನಿವಾಸ ಕಲ್ಯಾಣ ಚಿತ್ರದಲ್ಲಿ ರಾಜ್ ಕುಮಾರ್ ಮತ್ತು ಎಸ್. ಜಾನಕಿ ಅವರು ನಾನೇ ಭಾಗ್ಯವತಿ ಎಂಬ ಹಾಡನ್ನು ಎಷ್ಟು ಚೆನ್ನಾಗಿ ಹಾಡಿದ್ದಾರೆ" ಅಂದೆ. ಆಗ ಅವರು "ರಾಜ್ ಕುಮಾರ್ ಹಾಡಿದ್ದೇ? ಸಾಧ್ಯವೇ ಇಲ್ಲ. ಅವರು ಎಮ್ಮೆ ಹಾಡು, ಮುತ್ತಿನಂಥ ಮಾತೊಂದು ಗೊತ್ತೇನಮ್ಮದಂಥ ಲಘು ಶೈಲಿಯ ಗೀತೆಗಳನ್ನು ಹಾಡಬಲ್ಲರೇ ಹೊರತು ಈ ರೀತಿ ವೃತ್ತಿಪರರಂತೆ ಶಾಸ್ತ್ರೀಯ ರಾಗಾಧಾರಿತ ಹಾಡನ್ನು ಹಾಡಲಾರರು. ಅದನ್ನು ಹಾಡಿದ್ದು ಎಸ್.ಪಿ.ಬಾಲಸುಬ್ರಹ್ಮಣ್ಯಂ. ಬೇಕಿದ್ದರೆ ನಾನು ಬೆಟ್ ಕಟ್ಟಲು ರೆಡಿ" ಅಂದರು. ನಾನೂ ಈ ಸವಾಲಿಗೆ ಒಪ್ಪಿದೆ. ಆಗಿನ್ನೂ ಕ್ಯಾಸೆಟ್, CDಗಳ ಯುಗ ಆರಂಭವಾಗಿರಲಿಲ್ಲ. ಏನಿದ್ದರೂ ರೇಡಿಯೊ ಅಥವಾ ಗ್ರಾಮೊಫೋನ್ ರೆಕಾರ್ಡುಗಳು ಮಾತ್ರ. ರೇಡಿಯೊದಲ್ಲಿ ಆ ಹಾಡು ಯಾವಾಗ ಬರುತ್ತದೆ ಎಂದು ಕಾಯುವುದಕ್ಕಿಂತ ಗ್ರಾಮೊಫೋನ್ ರೆಕಾರ್ಡುಗಳ ಅಂಗಡಿಗೆ ಹೋಗಿ ಅಲ್ಲಿ ಸಂಶಯ ಪರಿಹರಿಸಿಕೊಳ್ಳುವುದೇ ಸರಿಯಾದ ಮಾರ್ಗ ಎಂದು ಕೂಡಲೇ ಮನೋಹರ್ ರೇಡಿಯೋ ಹೌಸಿಗೆ ಹೋಗಿ ಆ ಹಾಡಿನ ರೆಕಾರ್ಡ್ ತೋರಿಸುವಂತೆ ಕೇಳಿಕೊಂಡೆವು. ರೆಕಾರ್ಡು ಕೊಳ್ಳುವ ಗಿರಾಕಿಯೊಬ್ಬರು ಸಿಕ್ಕಿದರು ಎಂಬ ಖುಶಿಯಲ್ಲಿ ಅವರು ರೆಕಾರ್ಡ್ ಪ್ಲೇಯರಲ್ಲಿ ಆ ಹಾಡು ನುಡಿಸಿಯೂ ತೋರಿಸಿದರು. ಧ್ವನಿ ಕೇಳಿಯೇ ಅದು ರಾಜ್ ಕುಮಾರ್ ಎಂದು ಗೊತ್ತಾದರೂ ಲೇಬಲ್ ನೋಡಿದ ಮೇಲೆಯೇ ವಿಜಯಕುಮಾರ್ ಅವರು ಸೋತೆ ಎಂದು ಒಪ್ಪಿಕೊಂಡದ್ದು! ಅಂಗಡಿಯ ಒಡೆಯರು ಅದನ್ನು ಪ್ಯಾಕ್ ಮಾಡಿ ನಮಗೆ ಕೊಡಲು ಮುಂದಾದಾಗ "ನಾವು ಬಂದದ್ದು ಅದನ್ನು ಯಾರು ಹಾಡಿದ್ದೆಂದು ತಿಳಿದುಕೊಳ್ಳಲಷ್ಟೇ ಹೊರತು ರೆಕಾರ್ಡ್ ಕೊಳ್ಳಲು ಅಲ್ಲ." ಎಂದು ಹೇಳಿ ಅವರ ಮರುಉತ್ತರ ಕೇಳಿಸಿಕೊಳ್ಳುವ ಧೈರ್ಯ ಸಾಲದೆ ಕೂಡಲೇ ಜಾಗ ಖಾಲಿ ಮಾಡಿದೆವು!

ಹಾಡುಗಳಷ್ಟೇ ಅಲ್ಲದೆ ಕೆಲವು ಬರಿಯ ಟ್ಯೂನ್‌ಗಳೂ ನಮ್ಮ ಮನದಲ್ಲಿ ಶಾಶ್ವತವಾಗಿ ರೆಕಾರ್ಡ್ ಆಗಿರುವುದುಂಟು.  ಮಂಗಳೂರಿನಲ್ಲಿ ಈಗಿಲ್ಲದಿರುವ ಅಮೃತ್ ಟಾಕೀಸನ್ನು ಮರೆಯದಂತೆ ಮಾಡಿರುವುದು ಅಲ್ಲಿಯ  ಬೆಳ್ಳಿತೆರೆಯ ಮೇಲಿನ ಪರದೆ ಸರಿಯುವಾಗ ಕೇಳಿಬರುತ್ತಿದ್ದ  For a few dollars more  ಚಿತ್ರದ  ಟೈಟಲ್ ಮ್ಯೂಸಿಕ್.  ಬಂಧನಬಣ್ಣ ನನ್ನ ಒಲವಿನ ಬಣ್ಣ ಹಾಡಿಗೆ ಸ್ಪೂರ್ತಿಯಾದ ಆ ಟ್ಯೂನ್ ಇಲ್ಲಿದೆ ಕೇಳಿ.  ಹಾಗೆಯೇ ನಿಮ್ಮ ಮನದ ಕಿರು ಕಿಟಿಕಿ ತೆರೆಯುವ ಹಾಡುಗಳ ಪಟ್ಟಿ ಮಾಡುತ್ತಾ ಹೋಗಿ.

4 comments:

  1. Nice memories indeed. This type of memories can not be erased from our brain by any means as they make permanent home in our brain!

    ReplyDelete
  2. ನಾನು ಮೂರ್ತಿ ದೇರಾಜೆ ಬರೀತಾ ಇದ್ದೇನೆ > ತುಂಬಾ ಖುಶಿಯಾಯ್ತು. ನಿಮ್ಮ ನೆನಪುಗಳು ಇನ್ನೂ ಬಾಕಿ ಇವೆ ಅಲ್ಲವೇ ....!! ಬೆಳ್ತಂಗಡಿಯಲ್ಲಿ ನನ್ನ ಬಾಲ್ಯದ ದಿನಗಳಾದ್ದರಿಂದ .... ಕೆಲವು ಹಾಡುಗಳ ನೆನಪು ನನ್ನಲ್ಲಿಯೂ ...ನಿಮಗಾದಂತೆ ...ಅದೇ ನೆನಪನ್ನು ಎಳೆದು ತರುತ್ತದೆ.
    ಹಾಗೆ ...Come septeMbar ... ನಿಮಗೆ ಬೆಳ್ತಂಗಡಿ ಉಜ್ರೆಯ ಜ಼ೋನಲ್ ಕ್ರೀಡಾ ಕೂಟಗಳನ್ನು ನೆನಪಿಸುವುದಿಲ್ಲವೇ .... ಆ ಇಂಗ್ಲಿಷ್ ಸಿನೀಮಾ ಟ್ಯೂನ್ ನ ಆಧಾರದಲ್ಲಿ ಸುಮನ್ ಕಲ್ಯಾಣ್ ಪುರ್ ಹಾಡಿದ ಹಾಡೂ ರೇಡಿಯೋ ಸಿಲೋನ್ ನಲ್ಲಿ ಬೆಳಿಗ್ಗೆ 9.30 ರ ಹೊತ್ತಿಗೆ ಬರ್ತಾ ಇತ್ತು.ಜೊತೆಗೆ ರಫಿಯ ಸ್ವರದಲ್ಲೇ ಬಹಾರೋಂ ಫೂಲ್ ಬರ್ಸಾವೋ ದಾಟಿಯ ಮತ್ತು ..... ಹಂ ಕಾಲೇ ಹೈ ತೊ ಕ್ಯಾ ಹುವಾ ...ದಾಟಿಯ .. ಇಂಗ್ಲಿಷ್ ಹಾಡು ಕೂಡಾ ಅದೇ ಹೊತ್ತಿಗೆ ಬರ್ತಾ ಇತ್ತು.... ನೀವು ಹೇಳಿದಂತೆ ... ಒಂದೊಂದು ಹಾಡಿಗೂ ...ಏನಾದರೂ ಒಂದು ಲಿಂಕ್ ಇದೆ .... ಕೆಲವು ತುಂಬಾ ಮಧುರ ನೆನಪನ್ನು ಹುಟ್ಟಿಸುತ್ತವೆ. ಕೆಲವು ಹಾಡುಗಳನ್ನು ಕೇಳುವಾಗ .... ಯಾವುದೋ ಮಾವಿನಹಣ್ಣಿನ ಪರಿಮಳ ... ಯಾವುದೋ ಗೂಡಂಗಡಿ ಹೋಟೆಲಿನ ... ಲೈಟ್ ಕಾಫಿಯ ಪರಿಮಳ ..... ಬ್ರೆಡ್ ಬೇಯುವ ಪರಿಮಳ ... ತುಪ್ಪದ ಪರಿಮಳ ...ಹೀಗೆಲ್ಲಾ ಬರುವುದುಂಟು ಅಲ್ಲವೇ .... ಹಿಂದೊಮ್ಮೆ ಉದಯವಾಣಿಯಲ್ಲಿ "... ಹಾಡು ಹಾದಿ ...ಹೆಜ್ಜೆ ಗುರುತು " ...ಎನ್ನುವ ಅಂಕಣ ಇತ್ತು .... ನಾನೂ ಒಂದು ಬರೆದಿದ್ದೆ .... ನೀವು ನೋಡಿರಲೂ ಬಹುದು ... ಇಲ್ಲಿದೆ ಬಿಡುವಾದರೆ ಓದಿ ..... ಹಾಡು ಹಾದಿ ಹೆಜ್ಜೆ ಗುರುತು............


    ಆಡೋಣ ಬಾ ಬಾ ಗೋಪಾಲ..... ಓಡೋಡಿ ಬಾ ಬಾ ಭೂಪಾಲಾ.....
    ಇದು, ’ಮಲ್ಲಿ ಮದುವೆ’ ಸಿನಿಮಾದ ಹಾಡು.
    ಈ ಹಾಡು ’ಬಾ......ಕೃಷ್ಣ..ಒಮ್ಮೆ..ಕೊಳಲನೂದು......’ ಎನ್ನುವ ನಮ್ಮ ಮಕ್ಕಳ ನಾಟಕವೊಂದರಲ್ಲಿ ನುಸುಳಿಕೊಂಡಿತ್ತು.
    ಮಕ್ಕಳು ಅದನ್ನು ಹಾಡುತ್ತಾ ಸಂಭ್ರಮದಿಂದ ಕುಣಿಯುತ್ತಿದ್ದರು.
    ನಂದಗೋಕುಲದ ಪ್ರೀತಿ,ಸ್ನೇಹ ರಂಗು ಎಲ್ಲವು ಅಲ್ಲಿ ಮರುಸೃಷ್ಟಿಯಾಗಿತ್ತು.
    ಅದು ನನ್ನಲ್ಲಿ ಅದೇನೋ ಗೊತ್ತಿಲ್ಲದ ಪುಳಕವನ್ನೂ, ಆನಂದವನ್ನೂ ಉಂಟು ಮಾಡಿತ್ತು.
    ಮತ್ತೆ ಮತ್ತೆ ಆ ಹಾಡನ್ನು ಮಕ್ಕಳ ಮೂಲಕ ದೃಶ್ಯವಾಗಿಸಬೇಕು,
    ಅದು ನಿರಂತರವಾಗಿರಬೇಕು......... ಎನ್ನುವ ಆಸೆ.

    ಆ ಹಾಡಿನ ಹಾದಿ ಹಿಡಿದರೆ.........

    ನಲುವತ್ತು ವರ್ಷಗಳ ಹಿಂದೆ......., ಮೂಡಿಗೆರೆಯ ಸೈಂಟ್ ಮಾರ್ಥಾಸ್ ಶಾಲೆಯಲ್ಲಿ-
    ನಾನು, ರಿಚ್ಚಿ, ಉದಯ, ವಿನ್ಸಿ, ಕುಮಾರ, ಸತ್ಯ, ಸಿರಿಲ್, ಹಸನಬ್ಬ- ಮುಂತಾದ ಗೆಳೆಯರ ಗುಂಪು,
    ಸಣ ಪುಟ್ಟ ಕಾರಣಗಳಿಗಾಗಿ, ಒಬ್ಬರಿಗೊಬ್ಬರು ಮಾತು ಬಿಡುವುದು -
    ಮರುದಿನವೋ, ವಾರದ ನಂತರವೋ ರಾಜಿಯಾಗುವುದು - ಸಹಜವಾಗಿದ್ದ ಪ್ರಾಯ.
    ಪ್ರತಿಯೊಬ್ಬರಿಗೂ ಒಬ್ಬ ’ಎನ್ವಿ’ !! ಇರಲೇ ಬೇಕು.(ಪ್ರಾಯಷಃ ಅದು ’ಎನಿಮಿ’ ಆಗಿರಬೇಕು)
    ಯಾರೊಂದಿಗೂ ಜಗಳ ಮಾಡಲು ಮನಸ್ಸಿಲ್ಲದ ನನಗೆ ಈ ’ಎನ್ವಿ’ ಅರ್ಥವೇ ಆಗುತ್ತಿರಲಿಲ್ಲ.
    ಆದರೂ, ಒಮ್ಮೆ ಸುಮ್ಮನೆ ’ಬರೀ ತಮಾಷೆಗೆಂದು’ ಸತ್ಯನಲ್ಲಿ ಮಾತು ಬಿಟ್ಟದ್ದು,
    ಮಾತು ಬಿಟ್ಟ ಕಾರಣವನ್ನು ಕೇಳುತ್ತಾ, ಸತ್ಯ ನನ್ನ ಹಿಂದೆ ಹಿಂದೆ ಸುತ್ತುತ್ತಿದ್ದುದು,
    ಅವನ ದೈನ್ಯದ ಭಾವ, ಮಾತಾಡಬೇಕೆನ್ನುವ ಆಸೆ, ಅಳುಮುಖ,
    ಮಾತಾಡಲೇಬೇಕೆಂಬ ಆಸೆ ನನಗಿದ್ದರೂ, ಬಿಗುಮಾನ - ಹೀಗೆ ಕೆಲವಾರು ದಿನಗಳ ನಂತರ,
    ವಾರ್ಷಿಕ ಹಬ್ಬವೊಂದರ ಸಂದರ್ಭ....., ಮುಸ್ಸಂಜೆ...... ಇನ್ನೇನು ಕಾರ್ಯಕ್ರಮ ಸುರುವಾಗುವ ಹೊತ್ತು.....
    ಸತ್ಯ ನನ್ನ ಪಕ್ಕದಲ್ಲೇ ನಿಂತದ್ದು ಉಳಿದವರಿಗೆ ಗೊತ್ತಾಗದೇ ಇದ್ದರೂ, ನನ್ನ ಅರಿವಿಗೆ ಬಂದಿತ್ತು.
    ಅರಿವಾಗದವನಂತೆ ನಟಿಸಿ ಸತ್ಯನ ಹೆಗಲ ಮೇಲೆ ಕೈ ಇಟ್ಟಿದ್ದೆ.
    ಆಗ ದ್ವನಿವರ್ಧಕದಲ್ಲಿ, ’ಆಡೋಣ ಬಾ ಬಾ...... ಹಾಡು ಕೇಳುತ್ತಿತ್ತು.
    ನಾನು ಅದೇನೋ ಒಂದು ರೀತಿಯ ಆನಂದದಲ್ಲಿ ತೇಲುತ್ತಿದ್ದೆ.
    .............................
    ಹಾಡು ಮುಗಿಯುವ ಹೊತ್ತಿಗೆ, ಗೆಳೆಯರ ಗುಂಪು ಇದನ್ನು ಕಂಡು,
    ’ಹೋ......! ರಾಜಿಯಾಯ್ತೂ~~~ .....’ ಎಂದುಕಿರುಚಿತ್ತು.
    ಆದರೆ, ನನ್ನ ಅಹಂಕಾರಕ್ಕೆ ಪೆಟ್ಟಾಗಿ, ’ಇದು ನನ್ನ ಸೋಲು’ ಎಂದು ಭಾವಿಸಿ, ದೂರ ಓಡಿದ್ದೆ.
    ಆ ನಂತರದ ದಿನಗಳಲ್ಲಿ, ’ಯಾರಾದರೂ ರಾಜಿ ಮಾಡಿಸಲಿ’ ಎಂದು ನನ್ನ ಮನಸ್ಸು ಬಯಸುತ್ತಿದ್ದರೂ,
    ಯಾಕೋ ! ಯಾರೂ ಅದಕ್ಕೆ ಮುಂದಾಗಿರಲಿಲ್ಲ.
    ಶಾಲಾ ದಿನಗಳು ಕಳೆದು, ಮತ್ತೆ ಸತ್ಯನನ್ನು ನಾನೆಂದೂ ನೋಡಲಿಲ್ಲ.
    ................................
    ಹಾಗಾದರೆ.........
    ಹಾಡು-ದೃಶ್ಯ ನಿರಂತರವಾಗಿರಬೇಕೆಂದು ನನ್ನ ಮನಸ್ಸು ಬಯಸುತ್ತಿದ್ದ ಕಾರಣ......

    ವಿನಾಕಾರಣ ಮಾತು ಬಿಟ್ಟು, ಕೆಟ್ಟ ಬಿಗುಮಾನದಿಂದ, ಸತ್ಯನಲ್ಲಿ ಮತ್ತೆಂದೂ ಮಾತಾಡದೇ,
    ಕಳೆದುಕೊಂಡ ಗೆಳೆತನವೇ ......!!
    ..................................... !!
    ..................................... !!
    ಆ ಗೆಳೆಯ ಈಗೆಲ್ಲಿದ್ದಾನೋ...........!!!

    ಮೂರ್ತಿದೇರಾಜೆ, ವಿಟ್ಲ
    (ಉದಯವಾಣಿ ಸಾಪ್ತಾಹಿಕ ಸಂಪದ ರವಿವಾರ ೨೬.೬.೨೦೦೫)

    ReplyDelete
  3. ನನ್ನ ಹಳೆ ಹಾಡಿನ ಇನ್ನೊಂದು ನೆನಪು: ನಮ್ಮ ಪುಣೆಯ ಮನೆಯಲ್ಲಿ ಕಪ್ಪು ಬಿಳುಪು ಕ್ರೌನ್ ಟೀವಿ ಇದ್ದಾಗಿನ ದಿನಗಳವು. ನನಗೆ ತುಂಬಾ ಜ್ವರ ಬಂದದ್ದರಿಂದ ನಾನು ಆಫೀಸಿಗೆ ದಾಂಡಿ ಹೊಡೆದಿದ್ದೆ. ಆ ದಿನ ದೂರ ದರ್ಶನದಲ್ಲಿ (ಆಗ ಅದು ಮಾತ್ರ ಇದ್ದದ್ದು) ಆರತಿ ಸಿನಿಮಾ ಬಂದಿತ್ತು. ನನಗೆ ಅದರ ಹಾಡುಗಳೆಂದರೆ, ಅದರಲ್ಲೂ ರಫಿಯ " ವೋ ತೀರ್ ದಿಲ್ಪೆ ಚಲಾ " ಹಾಡು ತುಂಬಾ ಇಷ್ಟ. ನಾನು ಮೈಯಲ್ಲಿ ೧೦೨ ಡಿಗ್ರೀ ಜ್ವರ ಇದ್ದರೂ ಕೂಡಾ ಟೇಪ್ ರೆಕಾರ್ಡರ್ ಕನೆಕ್ಷನ್ ಟಿವಿಗೆ ಜೋಡಿಸಿ ಹಾಡುಗಳನ್ನು ರೆಕಾರ್ಡ್ ಮಾಡಲು ಕೂತೆ. ಎಲ್ಲಾ ಹಾಡುಗಳನ್ನು ರೆಕಾರ್ಡ್ ಮಾಡಿದ್ದಾಯಿತು ( ನನ್ನ ಇಷ್ಟದ ಹಾಡು ಸಮೇತ). ಈಗಲೂ ಈ ಹಾಡು ಬಂದಾಗ ನನ್ನ 102 ಡಿಗ್ರೀ ನೆನಪಾಗದೆ ಇರುವುದಿಲ್ಲ.

    ReplyDelete
  4. Yes, I vividly remember how the rich and posh screen in Amrith theatre used to slowly go up and this song used to be played in the background........ Apart from that, after the Annual Elections, in Government College, Mangalore they used to take procession of winning candidates in some of the main roads of Mangalore. We used to run from our Karangalpady fields residence to see the procession... I remember the beaming faces of the winning candidates in their black suit, and the loud but soothing instrumental bonanza of 'For a few Dollars' signature tune...

    ReplyDelete

Your valuable comments/suggestions are welcome