Thursday, 14 August 2014

ಕೇಳುವ ಒಗಟನು ಒಡೆದು



1964ರಲ್ಲಿ ಬಿಡುಗಡೆಯಾದ ಮನೆ ಅಳಿಯ ಚಿತ್ರದ ಅಷ್ಟೂ ಹಾಡುಗಳ ಪೈಕಿ ಅತ್ಯಂತ ಜನಪ್ರಿಯವಾಗಿದ್ದ ಈ ಒಗಟಿನ ಹಾಡು ಆಕಾಶವಾಣಿಯ ಒಂದಲ್ಲ ಒಂದು ಕೇಂದ್ರದಿಂದ ದಿನ ನಿತ್ಯ ಕೇಳಲು ಸಿಗುತ್ತಿತ್ತು. ನಾನು ಇದನ್ನು ಶಾರ್ಟ್ ವೇವ್ ವಿವಿಧ ಭಾರತಿಯಲ್ಲಿ ಸಂಜೆ ಪ್ರಸಾರವಾಗುತ್ತಿದ್ದ ದಕ್ಷಿಣ ಭಾರತೀಯ ಚಿತ್ರಸಂಗೀತದ ಕಾರ್ಯಕ್ರಮ ಮಧುರ್ ಗೀತಂನಲ್ಲಿ ಉಜಿರೆ ಗೋಪಾಲ ಮಾಸ್ಟ್ರ ಪ್ರಭಾತ್ ಸ್ಟೋರ್ಸ್ ಅಂಗಡಿಯ ಮೇಲ್ಗಡೆ ಇದ್ದ ಗ್ರಾಮ ಪಂಚಾಯತಿನ ರೇಡಿಯೊ ಪೆವಿಲಿಯನ್ನಿನ ಧ್ವನಿವರ್ಧಕದಲ್ಲಿ ಕೇಳಿದ್ದು ಹೆಚ್ಚು. ಉಜಿರೆ ಹೈಸ್ಕೂಲ್ ವಿದ್ಯಾರ್ಥಿಯಾಗಿ ಹಾಸ್ಟೆಲ್ ವಾಸಿಯಾಗಿದ್ದ ಆ ಸಮಯದಲ್ಲಿ ಸಂಜೆಯ ಹೊತ್ತು ಪೇಟೆಗೆ ಹೋಗಲು ನಮಗೆ ಅನುಮತಿ ಇತ್ತು. ಈ ಸೌಲಭ್ಯವನ್ನು ಹಾಸ್ಟೆಲ್ ವಾಸಿಗಳೆಲ್ಲ ತಪ್ಪದೆ ಸದುಪಯೋಗಪಡಿಸಿಕೊಳ್ಳುತ್ತಿದ್ದೆವು. ಈ ಮಧುರ್ ಗೀತಂ ದಕ್ಷಿಣ ಭಾರತೀಯ ಚಿತ್ರಗೀತೆಗಳ ಕಾರ್ಯಕ್ರಮವಾದರೂ ಅನೌನ್ಸರ್ಸ್ ಹಿಂದಿ ಭಾಷೀಯರೇ ಆಗಿರುತ್ತಿದ್ದರು. ಹೀಗಾಗಿ ಅನೇಕ ಸಲ ಚಿತ್ರಗಳ ಹೆಸರುಗಳನ್ನು ತಪ್ಪಾಗಿ ಉಚ್ಚರಿಸುವುದೂ ಇತ್ತು. ಈ ಹಾಡು ಪ್ರಸಾರ ಮಾಡುವಾಗ "ಅಬ್ ಸುನಿಯೆ ಮನೆ ಅಳಿಯೆ ಫಿಲ್ಮ್ ಮೆಂ ಪಿ.ಬಿ.ಶ್ರೀನಿವಾಸ್, ಎಸ್.ಜಾನಕೀ ಔರ್ ಸಾಥಿಯೋಂಕೊ" ಅನ್ನುತ್ತಿದ್ದುದು ನನಗೆ ಚೆನ್ನಾಗಿ ನೆನಪಿದೆ. ಕಾಲ ಕಳೆದಂತೆ ಯಾಕೋ ಈ ಹಾಡು ಮರೆಗೆ ಸರಿಯಿತು. ಈಗಂತೂ ವಿವಿಧ ಭಾರತಿಯ ಮಧುರ್ ಗೀತಂ ನಿಂತೇ ಹೋಗಿದೆ. ಈಗಿನ FM ವಾಹಿನಿಗಳಲ್ಲಿ ಇರುವವರಿಗೆ ಇಂಥ ಹಾಡುಗಳಲ್ಲಿ ಆಸಕ್ತಿ ಇಲ್ಲ. ಇಂಥ 6 ನಿಮಿಷದ ಹಾಡುಗಳನ್ನು ಪೂರ್ತಿ ಪ್ರಸಾರ ಮಾಡುವ ವ್ಯವಧಾನವೂ ಅವರಿಗಿಲ್ಲ.

ಪಿ.ಬಿ.ಶ್ರೀನಿವಾಸ್, ಎಸ್.ಜಾನಕಿ ಮತ್ತು ಸಂಗಡಿಗರು ಹಾಡಿರುವ ಈ ಹಾಡಿನ ಸಾಹಿತ್ಯ ನರೇಂದ್ರ ಬಾಬು ಅವರದ್ದು ಮತ್ತು ಚಿತ್ರದ ಸಂಗೀತ ನಿರ್ದೇಶಕರು ಟಿ.ಚಲಪತಿ ರಾವ್. ಇದರ ಸ್ವರ ಸಂಯೋಜನೆ,  ವಾದ್ಯ ವೃಂದ, ಗಾಯನ, ಕೋರಸ್ ಎಲ್ಲದರಲ್ಲೂ ಒ.ಪಿ.ನಯ್ಯರ್ ಶೈಲಿಯ ಲವಲವಿಕೆ ತುಂಬಿ ತುಳುಕುವುದನ್ನು ಗಮನಿಸಬಹುದು.  ಆರಂಭದ ಮತ್ತು ಚರಣಗಳ ಮಧ್ಯದ ಹಿನ್ನೆಲೆ ಸಂಗೀತಕ್ಕೆ ಗಿಟಾರ್, ಡಬಲ್ ಬೇಸ್, ಟ್ರಂಪೆಟ್, ಮ್ಯಾಂಡೊಲಿನ್, ವಯಲಿನ್ಸ್, ಕೊಳಲು, ಕ್ಲಾರಿನೆಟ್ ,ಯುನಿವಾಕ್ಸ್, ಕಾಂಗೊ, ಬೊಂಗೊ  ಮುಂತಾದ ವಾದ್ಯಗಳನ್ನು ಬಳಸಲಾಗಿದೆ.  ಐಸ್ ಕ್ರೀಮಿನಲ್ಲಿ ಒಂದೇ ಒಂದು ಚೆರ್ರಿ ಇದ್ದಂತೆ ಒಂದೆಡೆ ಅಕಾರ್ಡಿಯನ್ನಿನಲ್ಲಿ ನುಡಿಸಿದ ಒಂದು ಚಿಕ್ಕ ತುಣುಕು ಇದೆ.  ಗಾಯನ ಭಾಗದಲ್ಲಿ ಆಕರ್ಷಕ break, take off ಗಳುಳ್ಳ ಮಹಾರಾಷ್ಟ್ರದ ಢೋಲಕಿಯ ಸುಂದರ ಲಯ ವಿನ್ಯಾಸವಿದೆ.  ಹಾಡಿನುದ್ದಕ್ಕೂ ಗೆಜ್ಜೆಸದ್ದಿನ ಆಧಾರ ಲಯವೂ ಇದೆ. ಹಿಂದಿ ದೂರ್ ಕೀ ಆವಾಜ್ ಚಿತ್ರದ  ಹಮ್ ಭಿ ಅಗರ್ ಬಚ್ಚೆ ಹೋತೆ ಹಾಡಿನಲ್ಲಿರುವಂತೆ  ಒಂದೆರಡು ಕಡೆ ಬರೇ ಡಬಲ್ ಬೇಸ್ ನ ಉಪಯೋಗ ತುಂಬಾ ಆಕರ್ಷಕ. ಕೊನೆಯ ಭಾಗದಲ್ಲಿ ಕೈ ಚಪ್ಪಾಳೆಯ ಸದ್ದನ್ನೂ ಸಂಯೋಜಿಸಲಾಗಿದೆ.  ಅಂದಿನ RCA ಸೌಂಡ್ ಸಿಸ್ಟಮಿನಲ್ಲಿ ದೊರಕುತ್ತಿದ್ದ presence of voice and instruments ಗೆ ಈ ಹಾಡು ಒಳ್ಳೆಯ ಉದಾಹರಣೆ.  ಹೆಡ್ ಫೋನ್ ಅಥವಾ ಉತ್ತಮ ಸ್ಟೀರಿಯೊ ಸಿಸ್ಟಂನಲ್ಲಿ ಆಲಿಸಿದರೆ ಈ ಎಲ್ಲ ವೈಶಿಷ್ಟ್ಯಗಳ ಸಂಪೂರ್ಣ ಅನುಭವ ಹೊಂದಬಹುದು.

ಕಲ್ಯಾಣ್ ಕುಮಾರ್, ಜಯ ಲಲಿತಾ ಅಭಿನಯದ   ಮನೆ ಅಳಿಯ  ಹಿಂದಿಯ ಸಸುರಾಲ್ ಚಿತ್ರದ ಕನ್ನಡ ಅವತರಣಿಕೆ.  ಛದ್ಮವೇಷ ಸ್ಪರ್ಧೆಯಲ್ಲಿ ಚಿತ್ರದ ನಾಯಕ ನಾಯಕಿಯರ ಮಧ್ಯೆ ಟೈ ಆದಾಗ  ಫಲಿತಾಂಶ ನಿರ್ಣಯಕ್ಕಾಗಿ ಈ ಒಗಟಿನ ಸ್ಪರ್ಧೆಯನ್ನು ಏರ್ಪಡಿಸಲಾಗುತ್ತದೆ. ಹಿಂದಿಯಲ್ಲಿ ಈ ಸನ್ನಿವೇಶಕ್ಕೆ ಏಕ್ ಸವಾಲ್ ಮೈ ಹರೂಂ ಏಕ್ ಸವಾಲ್ ತುಮ್ ಕರೊ ಎಂದು ನಾಯಕ ನಾಯಕಿ ಇಬ್ಬರಿಗೂ ಒಗಟು ಹೇಳುವ ಸಮಾನ ಅವಕಾಶ ಇತ್ತು. ಆದರೆ  ಕನ್ನಡದಲ್ಲಿ  ನಾಯಕ   ಒಗಟು ಹೇಳುತ್ತಾನೆ.  ನಾಯಕಿ  ಅವುಗಳನ್ನು ಬಿಡಿಸಲು ಪ್ರಯತ್ನಿಸಿ ಕೊನೆಗೆ ಸೋಲುತ್ತಾಳೆ.  ಆಕೆಗೂ ಒಗಟು ಹೇಳುವ ಅವಕಾಶ ನೀಡದೆ ಸ್ತ್ರೀವರ್ಗಕ್ಕೆ  ಅನ್ಯಾಯ ಮಾಡಲಾಗಿದೆ ಎಂದು ಅಂದಿನ ದಿನಗಳಲ್ಲಿ ಯಾವುದೇ ಸಂಘಟನೆಗಳು   ತಕರಾರು ಮಾಡಿದ ದಾಖಲೆಗಳಿಲ್ಲ!

ಇದೋ, ಹಾಡು ಇಲ್ಲಿದೆ. ಆಲಿಸಿ.






























































































ಪದ್ಯಾವಳಿಯಲ್ಲಿ ಮುದ್ರಿತವಾದ ಈ ಹಾಡಿನಲ್ಲಿ ಅನೇಕ ತಪ್ಪುಗಳು ನುಸುಳಿವೆ. ಯಾವುವೆಂದು ಗುರುತಿಸಬಲ್ಲಿರಾ?


ಗ್ರಾಮೊಫೋನ್ ತಟ್ಟೆಯ ಎರಡೂ ಬದಿಗಳನ್ನು ಆವರಿಸಿರುವ  ರೂಪದಲ್ಲಿ ಈ ಹಾಡು ಕೇಳಬಯಸುವಿರಾದರೆ ಇಲ್ಲಿದೆ.

 


ಇದೇ ಚಿತ್ರದ ಇನ್ನೊಂದು ಅಪರೂಪದ ಹಾಡು ನಿಲ್ಲೆ ಗೊಲ್ಲರು ಬಾಲೆ ನಿಲ್ಲೆಗಾಗಿ ಪದ್ಯಾವಳಿಯಿಂದ ಒಂದು ಪದ್ಯ ನೋಡಿ.

2016ರ update:  ಈಗ ಅಂತರ್ಜಾಲದಲ್ಲಿ ಈ ಹಾಡು ಮಾತ್ರ ಅಲ್ಲ, ಮನೆ ಅಳಿಯ ಚಿತ್ರವೇ ವೀಕ್ಷಣೆಗೆ ಲಭ್ಯವಿದೆ.

Monday, 2 June 2014

ಪರವಶಗೊಳಿಸಿದ್ದ ಪರಶಿವನ ಹಾಡು


ಪಿ.ಬಿ. ಶ್ರೀನಿವಾಸ್ ಅವರು 1953ರಲ್ಲೇ ಆರ್. ನಾಗೇಂದ್ರ ರಾಯರ ಜಾತಕ ಫಲ ಚಿತ್ರದ ಮೂಲಕ ಕನ್ನಡ ಚಿತ್ರರಂಗದಲ್ಲಿ ಮೊದಲ ಹೆಜ್ಜೆ ಇರಿಸಿದ್ದರೂ 1956ರಲ್ಲಿ ಬಂದ ಏ.ವಿ.ಎಂ ರವರ ಆದರ್ಶ ಸತಿ ಚಿತ್ರದ ಪಾಪಿಯ ಜೀವನ ಪಾವನ ಗೊಳಿಸುವ  ಪರಶಿವ ಲಿಂಗ ನಮೋ ಅವರ ಮೊದಲ ಸೂಪರ್ ಹಿಟ್ ಹಾಡು.  ಆ ಕಾಲದಲ್ಲಿ ಅನೇಕ ಕನ್ನಡ ಹಾಡುಗಳು ಹಿಂದಿ ಗೀತೆಗಳ ಧಾಟಿಯನ್ನು ಆಧರಿಸಿರುತ್ತಿದ್ದವು.  ಜಾತಕ ಫಲ ಚಿತ್ರದ ಈ ಮೂಢತನವಿದೇಕೆ ಹಾಡು ಹಿಂದಿಯಲ್ಲಿ ರಫಿ ಹಾಡಿದ್ದ ಮೇಲಾ ಚಿತ್ರದ ಯೆ ಜಿಂದಗೀ ಕೆ ಮೇಲೆ ಯ ಧಾಟಿಯಲ್ಲಿದ್ದರೆ ಈ ಹಾಡು ನಾಸ್ತಿಕ್ ಚಿತ್ರದಲ್ಲಿ ಕವಿ ಪ್ರದೀಪ್ ಸ್ವತಃ ಹಾಡಿದ್ದ ದೇಖ್ ತೆರೆ ಸಂಸಾರ್ ಕಿ ಹಾಲತ್ ಧಾಟಿಯಲ್ಲಿತ್ತು.  ಪಿ.ಬಿ.ಎಸ್ ಧ್ವನಿಯ ಮಾಧುರ್ಯದಿಂದಾಗಿ ಮೂಲ ಹಾಡಿಗೂ ಮೀರಿದ ಅಪಾರ ಜನಪ್ರಿಯತೆಯನ್ನು  ಈ ಹಾಡು ಗಳಿಸಿತು. ಹಿಂದಿ ಟ್ಯೂನ್‍ ಒಂದರ ಕಾಪಿ ಕೂಡ  ಇಷ್ಟೊಂದು ಜನಪ್ರಿಯವಾಗುವಂತೆ ಮಾಡಿದ್ದರಿಂದ "ಕಾಪಿಯ ಜೀವನ ಪಾವನ ಗೊಳಿಸಿದ ಪಿ.ಬಿ.ಎಸ್ ನಿನಗೆ ನಮೋ" ಅನ್ನಬಹುದೇನೋ!  ಸಿ. ರಾಮಚಂದ್ರ ಸಂಗೀತ ನಿರ್ದೇಶನದ ದೇಖ್ ತೆರೇ ಸಂಸಾರ್ ಕೀ ಹಾಲತ್ ಕ್ಯಾ ಹೋಗಯಿ ಭಗವಾನ್ ಹಾಡು ಸುನಿಲ್ ದತ್ತ್ ಅವರ ಪ್ರಥಮ ಚಿತ್ರ ರೇಲ್ವೆ ಪ್ಲಾಟ್‌ಫಾರ್ಮ್‌ನಲ್ಲಿ  ಮದನ್ ಮೋಹನ್ ಅವರ ಸಂಗೀತದಲ್ಲಿ ದೇಖ್ ತೇರೇ ಭಗವಾನ್ ಕೀ ಹಾಲತ್ ಕ್ಯಾ ಹೋಗಯಿ ಇನ್‍ಸಾನ್ ಎಂಬ ಅಣಕವಾಡಾಗಿ ಕಾಣಿಸಿಕೊಂಡಿತ್ತು! 


ಶಾಲಾ ವಾರ್ಷಿಕೋತ್ಸವಗಳಿರಲಿ, ಸಿರಿವಂತರ ಮನೆಯ ಮದುವೆ-ಮುಂಜಿ ಸಮಾರಂಭಗಳಿರಲಿ, ಸಿನಿಮಾ ಟಾಕೀಸುಗಳಿರಲಿ, ಯಕ್ಷಗಾನ ಬಯಲಾಟದ ಟೆಂಟುಗಳಿರಲಿ  ಎಲ್ಲೆಲ್ಲಿ ಗ್ರಾಮೊಫೋನ್ ಇರುತ್ತಿತ್ತೋ ಅಲ್ಲೆಲ್ಲ ಈ ಹಾಡು ಅನುರಣಿಸುತ್ತಿತ್ತು.  ಆಬಾಲ ವೃದ್ಧರಾದಿಯಾಗಿ ಎಲ್ಲರ ಬಾಯಲ್ಲೂ ಈ ಹಾಡು ನಲಿದಾಡುತ್ತಿತ್ತು. ಎಷ್ಟು ಭಜನಾಕೂಟಗಳಲ್ಲಿ ಈ ಹಾಡು ಹಾಡಲ್ಪಟ್ಟಿತ್ತೋ, ಈ ಹಾಡಿನ ಧಾಟಿಯಲ್ಲಿ ಅದೆಷ್ಟು ಭಕ್ತಿ ಗೀತೆಗಳು, ನಾಟಕದ ಹಾಡುಗಳು ರಚನೆಯಾಗಿದ್ದವೋ !  ಆದರೆ ವರ್ಷಗಳು ಕಳೆದಂತೆ ಹಿನ್ನೆಲೆಗೆ ಸರಿದ ಈ ಹಾಡು ಈಚೆಗೆ ಯಾಕೋ ಎಲ್ಲೂ ಕೇಳಸಿಗುತ್ತಿರಲಿಲ್ಲ.  ಹಳೆಯ ನಿಲಯಗಳಾದ ಬೆಂಗಳೂರು, ಧಾರವಾಡ ಸೇರಿದಂತೆ ಆಕಾಶವಾಣಿಯ ಯಾವುದೇ ಕೇಂದ್ರಗಳಲ್ಲೂ ಇದರ ಧ್ವನಿಮುದ್ರಿಕೆ ಇದ್ದಂತಿಲ್ಲ.

ಕೆಲ ವರ್ಷಗಳ ಹಿಂದೆ ಈ ಆದರ್ಶ ಸತಿ ಚಿತ್ರದ ಹೊಸ ಪ್ರಿಂಟ್  ಮಂಗಳೂರಿನ ಚಿತ್ರಮಂದಿರವೊಂದರಲ್ಲಿ ಬೆಳಗಿನ ದೇಖಾವೆಯಾಗಿ ಪ್ರದರ್ಶಿತಗೊಂಡಾಗ ನನಗೆ ನೋಡುವ ಅವಕಾಶ ಸಿಕ್ಕಿತ್ತು.  ಆ ಚಿತ್ರದ ಟೈಟಲ್ಸ್ ನಲ್ಲಿ ನಾಗಕನ್ನಿಕೆಯ ನೃತ್ಯ ಸನ್ನಿವೇಶಕ್ಕೆ ನಾಗಿನ್ ಖ್ಯಾತಿಯ ಕಲ್ಯಾಣಜೀ ಅವರು ಬೀನ್ ಸಂಗೀತ ನುಡಿಸಿದ್ದಾರೆ ಎಂಬ ಉಲ್ಲೇಖ ಇತ್ತು!   ವೀಡಿಯೊ ರೂಪದಲ್ಲಿ ಈ  ಚಿತ್ರ  ಲಭ್ಯ ಇದ್ದಂತಿಲ್ಲ. ಇದ್ದದ್ದೇ ಆದರೆ ಇಷ್ಟರಲ್ಲಿ ಯಾರಾದರೂ ಅಂತರ್ಜಾಲಕ್ಕೇರಿಸುತ್ತಿದ್ದರು. ಟಿ.ವಿ.ಯಲ್ಲೂ ಈ ಚಿತ್ರವನ್ನಾಗಲೀ ಹಾಡುಗಳನ್ನಾಗಲೀ ನೋಡಿದ ನೆನಪಿಲ್ಲ. ಹ್ಙಾಂ, ಆದರ್ಶ ಸತಿಯ ತೆಲುಗು ಅವತರಣಿಕೆಯಾದ ನಾಗುಲ ಚವಿತಿಯ ಹಾಡುಗಳು ಮಾತ್ರವಲ್ಲ, ಆ  ಚಿತ್ರವೇ ಅಂತರ್ಜಾಲದಲ್ಲಿ ವೀಕ್ಷಣೆಗೆ  ಲಭ್ಯವಿದೆ.

ಹಳೆ ಗ್ರಾಮೊಫೋನ್ ರೆಕಾರ್ಡುಗಳ ಸಂಗ್ರಹಕಾರ ಕಿರಣ್ ಕೃಷ್ಣ ಅವರ ಸಂಗ್ರಹದಲ್ಲಿದ್ದ 78 RPM ಡಿಸ್ಕಿನ ಈ ಹಾಡು ಇನ್ನೋರ್ವ ಹಳೆ ಹಾಡುಗಳ ಅಭಿಮಾನಿ ಮತ್ತು ಸಂಗ್ರಹಕಾರ ಬಿ.ಆರ್. ಉಮೇಶ್ ಅವರ ಸಹಕಾರದಿಂದ ಡಿಜಿಟಲ್ ರೂಪಕ್ಕೆ ಪರಿವರ್ತಿತವಾಗಿ ಈಗ ನಮಗೆ ಕೇಳಲು ಸಿಕ್ಕಿದೆ. ಹಳೆ ರೆಕಾರ್ಡುಗಳಲ್ಲಿ ಸಹಜವಾದ ಇರುವ surface noise ಸಾಧ್ಯವಾದಷ್ಟು ಮಟ್ಟಿಗೆ ನಿವಾರಿಸಲು ನಾನು ಪ್ರಯತ್ನಿಸಿದ್ದೇನೆ.




ಪಾಪಿಯ ಜೀವನ
ಚಿತ್ರ : ಆದರ್ಶ ಸತಿ  
ಗಾಯಕ : ಪಿ ಬಿ ಶ್ರೀನಿವಾಸ್
ಸಂಗೀತ : ಆರ್.ಸುದರ್ಶನಂ
ರಚನೆ : ಕು.ರ.ಸೀ.
ಗ್ರಾಮಫೋನ್ ರೆಕಾರ್ಡಿನ ಲೇಬಲ್‌ನಲ್ಲಿ ಗಾಯಕರ ಹೆಸರಾಗಲಿ, ಹಾಡನ್ನು ಬರೆದವರ ಹೆಸರಾಗಲಿ ದಾಖಲಾಗದಿರುವುದನ್ನು ಗಮನಿಸಬಹುದು.  ಅದರಲ್ಲಿ ಕಾಣಿಸುತ್ತಿರುವ ಪಿ.ಬಿ.ಎಸ್ ಚಿತ್ರ ನಾನು ಅಂಟಿಸಿದ್ದು.





ಪಾಪಿಯ ಜೀವನ ಪಾವನಗೊಳಿಸುವ
ಪರಶಿವ ಲಿಂಗ ನಮೋ
ಹರ ಹರ ಶಂಭೋ ಮಹಾದೇವ
ಮಾಯಾ ಸಮುದ್ರವ ಹಾಯುವ 
ಪರಮೋಪಾಯವ ನೀ ತೋರೋ
ಹರ ಹರ ಶಂಭೋ ಮಹಾದೇವ

ತನುವನು ಧರಿಸಿದೆ ಕರ್ಮದ ಕೂಪ
ಜನುಮ ಜನುಮಕೂ ಗಳಿಸಿದೆ ಪಾಪ
ಮನತಾನಾದುದು ವಿಷಯದ ದೀಪ
ಅನುಭವಿಸಿದೆ ನಾನತಿಶಯ ತಾಪ
ಕೊನೆಗಾಣಿಸು ಈ ಕರ್ಮದ ಲೇಪ
ಪೊರೆ ಚಿನ್ಮಯ ರೂಪ
ಹರ ಹರ ಶಂಭೋ ಮಹಾದೇವ

ನೀರಿನ ಮೇಲಣ ಗುಳ್ಳೆಯ ತೆರದಿ
ಮೂರುದಿನದ ಬಾಳಿದು ಜಗದಿ
ಹೇಳದೆ ಕೇಳದೆ ಬರುವುದು ಮರಣ
ಕಾಲನ ಪಾಶದ ಕಂಠಾಭರಣ
ಬೆಳೆದ ಕೂಡಲೇ ನಿನ್ನೊಳು ಭಕ್ತಿ
ಗಳಿಸುವ ನರತಾ ಪರಮ ವಿರಕ್ತಿ
ಕರುಣಿಸು ಭಕ್ತಿ ನೀಡು ವಿರಕ್ತಿ
ಕೊಡು ಜೀವನ್ಮುಕ್ತಿ
ಹರ ಹರ ಶಂಭೋ ಮಹಾದೇವ


ಸಂಪದದ ಲೇಖನವೊಂದರಲ್ಲಿ ಈ ಹಾಡಿನ ಉಲ್ಲೇಖ ಇದೆ.
ಇದೇ ಚಿತ್ರದ ನಮೋ ನಮೋ ನಟರಾಜ ಹಾಡಿಗಾಗಿ ಇಲ್ಲಿ ಕ್ಲಿಕ್ಕಿಸಿ.


Friday, 24 January 2014

ಮುಗಿಯುವವರೆಗೆ ಮಾತ್ರ : ಬೊಂಬೆಯಾಟವಯ್ಯ


       "ಹತ್ತೂವರೆಯಿಂದ ಮುಗಿಯುವ ವರೆಗೆ ಮಾತ್ರ.  ಬೇಕಿದ್ದವರು ಬೇಕಿದ್ದರೆ ಮಾತ್ರ ಕೇಳಿ ಕುಡಿಯಿರಿ.  ಏಲಕ್ಕಿ, ದ್ರಾಕ್ಷಿ, ಗೋಡಂಬಿಗಳನ್ನು ಹಾಕಿದ ರುಚಿಕರವಾದ ಗುಣಸಾಗರಿ ರಸಾಯನ ....  ಬೊಂಬೆಯಾಟವಯ್ಯಾ  ಬ್ರಹ್ಮಾಂಡವೇ ಆ ದೇವನಾಡುವ....".   ಧರ್ಮಸ್ಥಳ ಸಮೀಪದ ಉಜಿರೆ ಆಸುಪಾಸಿನ  ಯಾವ  ಹಿರಿಯರೂ  ಈ ಸಾಲುಗಳನ್ನು ಮರೆತಿರಲಾರರು.  ಪತ್ರಿಕಾ ವಿತರಣೆ, ಕಾಫಿ, ತಂಪು ಪಾನೀಯ ಇತ್ಯಾದಿಗಳ ಜೊತೆಗೆ ಗ್ಯಾಸ್ ಲೈಟು ಬಾಡಿಗೆಗೆ ಕೊಡುವ  ವ್ಯವಸ್ಥೆಯೂ ಇದ್ದುದರಿಂದ "ಲೈಟ್ ಭಟ್ರು" ಎಂದೇ ಖ್ಯಾತರಾದ ಉಜಿರೆಯ ಗೂಡಂಗಡಿಯೊಂದರ ಮಾಲೀಕ ಜನಾರ್ದನ ಭಟ್ಟರು ಗುಣಸಾಗರಿ ರಸಾಯನವೆಂಬ ಹೆಸರಲ್ಲಿ ಸಾಬಕ್ಕಿ ತಿಳಿ ಪಾಯಸವನ್ನು ಬಸ್ಸು ಪ್ರಯಾಣಿಕರಿಗೆ ಮಾರುತ್ತಿದ್ದ ಪರಿ ಇದು.  ಕೃಷ್ಣ ಗಾರುಡಿ ಚಿತ್ರದ ಈ ಹಾಡಿಗೆ ಮನಸೋತೋ ಅಥವಾ ಗುಣಸಾಗರಿ ರಸಾಯನದ ಗುಣದಿಂದಲೋ ಅವರ ಕೈಯ ತಟ್ಟೆಯಲ್ಲಿದ್ದ ಲೋಟಗಳು ಕ್ಷಣಮಾತ್ರದಲ್ಲಿ ಖಾಲಿಯಾಗುತ್ತಿದ್ದುದಂತೂ ನಿಜ.  ಅವರು ಈಗಿಲ್ಲವಾದರೂ ಈ ಹಾಡನ್ನು ಕೇಳಿದಾಗಲೆಲ್ಲ ರಸಾಯನವನ್ನು ಸವಿದ ಅನುಭವ ಇಂದಿಗೂ ಆಗುತ್ತದೆ.

      ಪಿ.ಬಿ.ಎಸ್ Top Ten ನಲ್ಲಿ  ಈ ಹಾಡಿನ ಬಗ್ಗೆ ಈಗಾಗಲೇ ಉಲ್ಲೇಖ ಆಗಿದ್ದರೂ ಇಂದು ಇದರ ಬಗ್ಗೆ ಇನ್ನೊಂದಿಷ್ಟು. ಇದುವರೆಗೆ ಬಂದ ನಾರದನ ಹಾಡುಗಳ ಪೈಕಿ ಇದಕ್ಕೆ ನಂಬರ್ ವನ್ ಸ್ಥಾನ.  ಪಿ. ಬಿ. ಶ್ರೀನಿವಾಸ್ ಅವರ ಮಂದ್ರ ಸ್ಥಾಯಿಯ ಗಾಯನ ನಾರದನೊಡನೆ ಕೇಳುಗರನ್ನೂ ಮೋಡಗಳಲ್ಲಿ ತೇಲಾಡಿಸುತ್ತದೆ.  "ನೀ ಸಾಕಿ ಸಲಹೆ ಸ್ವಾರ್ಥವೇನೋ"  ಎಂಬಲ್ಲಿ ಬಿಳಿ ಒಂದು ಶ್ರುತಿಯ ಮಂದ್ರ ದೈವತವನ್ನು ಸ್ಪರ್ಶಿಸುವ ಭಾಗದಲ್ಲಿ ಪಿ.ಬಿ.ಎಸ್ ದನಿಯಲ್ಲಿನ ಜೀರು ಬಲು ಮಧುರ. ಎರಡನೇ ಚರಣದ ಆಲಾಪವಂತೂ ಮಧುರಾತಿಮಧುರ.  ಈ ಹಾಡಿನ ಗಾನತಟ್ಟೆಯ ಆವೃತ್ತಿಯಲ್ಲಿ ಎರಡೇ ಚರಣಗಳಿದ್ದು ಚಿತ್ರದಲ್ಲಿ  ಎರಡು ಬೇರೆ ಚರಣಗಳೊಂದಿಗೆ ಹಾಡು ಪುನರಾವರ್ತನೆಯಾಗುತ್ತದೆ.  ಇದು ದರ್ಬಾರಿ ಕಾನಡಾ ರಾಗಾಧಾರಿತವಾದರೂ  ಪುನರಾವರ್ತನೆಯಲ್ಲಿರುವ ಒಂದು ಚರಣ ಈ ರಾಗಕ್ಕೆ ಸಮೀಪವಾದ ಅಠಾಣಾದಲ್ಲಿದೆ. ಅತ್ಯಂತ ಕ್ಲಿಷ್ಟ ಸಂಗತಿಗಳನ್ನೊಳಗೊಂಡ ಈ ಹಾಡನ್ನು ಸಾಮಾನ್ಯವಾಗಿ ಯಾರೂ ವೇದಿಕೆಗಳಲ್ಲಿ ಹಾಡುವ ಸಾಹಸ ಮಾಡುವುದಿಲ್ಲ.

   ಪೆಂಡ್ಯಾಲ ನಾಗೇಶ್ವರ ರಾವ್  ಸಂಗೀತವಿರುವ ಈ ಹಾಡಿನ ಸಾಹಿತ್ಯ ಹುಣಸೂರು ಕೃಷ್ಣಮೂರ್ತಿ  ಅವರದ್ದು.  ಇದರಲ್ಲಿ ಒಂದು ಕಡೆ ಕೇಳಿಸುವ "ವಳಮರ್ಮತೋದಯ...." ಎಂದರೆ ಏನೆಂದು ನನಗೆ ಬಹಳ ಸಮಯ ಅರ್ಥವಾಗುತ್ತಿರಲಿಲ್ಲ. ಬ್ರಹ್ಮಾಂಡನಾಯಕ ಮುಂತಾದವುಗಳಂತೆ ಇದೂ ಒಂದು ವಿಶೇಷಣವಿರಬಹುದೆಂದೇ ಅಂದುಕೊಂಡಿದ್ದೆ.   ಕೊನೆಗೆ ಮಿತ್ರರೋರ್ವರು ಅದು "ಒಳ ಮರ್ಮ ತೋರೆಯಾ"  ಎಂದು ಸ್ಪಷ್ಟಪಡಿಸಿದರು !

       ಆಕಾಶವಾಣಿ ಮಂಗಳೂರು ಆರಂಭವಾದಾಗಲೇ ಅಲ್ಲಿಯ ಸಂಗ್ರಹ ಸೇರಿದ್ದ ಬೆರಳೆಣಿಕೆಯ ಹಳೆ ಹಾಡುಗಳಲ್ಲಿ ಇದೂ ಒಂದು.  ಎರಡು ಚರಣಗಳ ಆ ಗಾನತಟ್ಟೆ ಅವೃತ್ತಿ ಈಗಲೂ ಅಲ್ಲಿಂದ ಒಮ್ಮೊಮ್ಮೆ ಕೇಳಿಬರುವುದಿದೆ.  ಈಗ ಚಲನಚಿತ್ರದ ಧ್ವನಿವಾಹಿನಿಯಿಂದ ಪಡೆದ ನಾಲ್ಕೂ ಚರಣಗಳನ್ನು ಒಳಗೊಂಡ ಈ ಹಾಡಿನ ಇನ್ನೊಂದು ಆವೃತ್ತಿ ಎಫ್ ಎಂ ವಾಹಿನಿಗಳಲ್ಲಿ ಆಗಾಗ ಕೇಳಲು ಸಿಗುತ್ತದೆ. ಅಂತರ್ಜಾಲದ ವಿವಿಧ ತಾಣಗಳಲ್ಲೂ ಲಭ್ಯವಿದೆ. ಆದರೆ ಇದರಲ್ಲಿ "ಹಾಗೊಮ್ಮೆ ಹೀಗೊಮ್ಮೆ ಆಡಿಸಿ ತಾ ನಲಿವ" ಎಂಬ ಸಾಲಿನ "ಹಾಗೊಮ್ಮೆ". ಭಾಗವು ಲುಪ್ತವಾಗಿರುವುದು ರಸಭಂಗವುಂಟುಮಾಡುತ್ತದೆ.  ನನ್ನ ಸಂಗ್ರಹದಲ್ಲಿದ್ದ ಗಾನತಟ್ಟೆ ಆವೃತ್ತಿಯಿಂದ ಪ್ಲಾಸ್ಟಿಕ್ ಸರ್ಜರಿ ಮಾಡಿ  ಆ ಭಾಗವನ್ನು ಸರಿಪಡಿಸಿದ  ಪೂರ್ತಿ ಹಾಡು ಸಾಹಿತ್ಯದೊಡನೆ ನಿಮಗಾಗಿ ಇಲ್ಲಿದೆ.  ಇದರಲ್ಲಿ ಎಲ್ಲ ಕಡೆ ಬೊಂಬೆಯಾಟವಿದ್ದರೂ ಒಂದೆಡೆ ಮಾತ್ರ ಗೊಂಬೆಯಾಟ ಇದೆ.   1:37 ನಿಮಿಷದ ಸಮಯವನ್ನು ಗಮನವಿಟ್ಟು ಆಲಿಸಿ. ಅದರ ಮೊದಲು "ಹಾಗೊಮ್ಮೆ ಹೀಗೊಮ್ಮೆ ಆಡಿಸಿ ತಾ ನಲಿವ" ಸಾಲಿನಲ್ಲಿ(ಕೆಲವರು ಇದನ್ನು "ಆ ಗೊಂಬೆ ಈ ಗೊಂಬೆ" ಎಂದು ಕೇಳಿಸಿಕೊಳ್ಳುವುದೂ ಇದೆ!) ಎರಡು ಸಲ "ಗ"ಕಾರ ಇದ್ದುದರಿಂದ "ಕಪ್ಪು ಕುಂಕುಮ ಕೆಂಪು ಕುಂಕುಮ" ಪರಿಣಾಮದಿಂದ ಅಯಾಚಿತವಾಗಿ ಬೊಂಬೆಯು ಗೊಂಬೆ ಆಗಿರಬಹುದು! ಇದನ್ನು ಯಾರೂ ಗಮನಿಸಿಲ್ಲವೋ ಅಥವಾ ಅರ್ಥ ವ್ಯತ್ಯಾಸವೇನೂ ಇಲ್ಲದ್ದರಿಂದ ಹಾಗೇ ಇರಗೊಟ್ಟರೋ ತಿಳಿಯದು.



ಬೊಂಬೆಯಾಟವಯ್ಯ

 
ಬೊಂಬೆಯಾಟವಯ್ಯ ಬ್ರಹ್ಮಾಂಡವೇ
ಆ ದೇವನಾಡುವ ಬೊಂಬೆಯಾಟವಯ್ಯ
ಅಂಬುಜನಾಭನ ಅಂತ್ಯವಿಲ್ಲದಾತನ
ತುಂಬು ಮಾಯವಯ್ಯಾ ಈ ಲೀಲೆಯ
ಬೊಂಬೆಯಾಟವಯ್ಯ

ಜಗವ ಸೃಜಿಸಿ ಗತಿ ಸೂತ್ರವನಾಡಿಸಿ
ನಗು ನಗುತಾ ಕುಣಿಸಿ ಮಾಯೆ ಬೀಸಿ
ರಾಗದ ಭೋಗದ ಉರಿಯೊಳು ನಿಲ್ಲಿಸಿ
ಹಾಗೊಮ್ಮೆ ಹೀಗೊಮ್ಮೆ ಆಡಿಸಿ ತಾ ನಲಿವ
ಬೊಂಬೆಯಾಟವಯ್ಯ

ನೀ ಸಾಕಿ ಸಲಹೆ  ಸ್ವಾರ್ಥವೇನೋ
ನೀ ಕಾಡಿ ಕನಲೆ ಆಂತರ್ಯವೇನೋ
ತಿಳಿ ಹೇಳೆಯಾ ಒಳ ಮರ್ಮ ತೋರೆಯಾ
ನಳಿನಾಕ್ಷ ನಿನ್ನಯ ಸಂಕಲ್ಪವೇನಯ್ಯ
ಬೊಂಬೆಯಾಟವಯ್ಯ

ನಿನ್ನವರ ಸ್ಥಿತಿ ಗತಿ ನೆಲೆಯಿಲ್ಲದಾಗೆ
ನಿನಗೆ ಸಮ್ಮತವೆ ಈ ರೀತಿ ಮೌನ
ಕಿವಿಗೊಟ್ಟು ದಯವಿಟ್ಟು ಪೊರೆಯೊ ಮಹಾರಾಯ
ಅವತಾರಮೂರ್ತಿ ಇನ್ನೇಕಯ್ಯ ಈ ಶಾಂತಿ
ಬೊಂಬೆಯಾಟವಯ್ಯ

ಅಭಿಮಾನ ನೀಗಿಸಿ ಅರಿವನು ತೋರಿಸಿ
ಅಂಧತೆ ಕಳೆವಂಥ ಅಖಿಲಾಂಡ ನಾಯಕ
ವಿರಸವೊ ಸರಸವೊ ಸಾಕೋ ಸಾಕಯ್ಯ
ಕರುಣಿಸೊ ಜೀಯ ಸುರನುತ ಚಿನ್ಮಯ
ಬೊಂಬೆಯಾಟವಯ್ಯ

 
ತೆಲುಗು ಅವತರಣಿಕೆ


     ಈ ಚಿತ್ರವು ಕೃಷ್ಣ ಗಾರಡಿ ಎಂಬ ಹೆಸರಲ್ಲಿ ತೆಲುಗಿನಲ್ಲಿಯೂ ತಯಾರಾಗಿದ್ದು ಬೊಂಬೆಯಾಟವಯ್ಯ ಹಾಡು ಅದರಲ್ಲಿ  ಎಂತ ಘನುಡವಯ್ಯ ಆಗಿದೆ.  ಪಿ.ಬಿ.ಶ್ರೀನಿವಾಸ್ ಅವರೇ ಹಾಡಿದ್ದಾರೆ.  ಬಹಳ ಹಿಂದೆ ಎಂದೋ ರೇಡಿಯೊದಲ್ಲಿ ಒಮ್ಮೆ ಇದನ್ನು ಕೇಳಿದ ನೆನಪಿತ್ತು.  ಹೋಲಿಕೆಗಾಗಿ ಇಲ್ಲಿ ಅದನ್ನು ದಾಖಲಿಸಬೇಕೆಂದು ಹುಡುಕಾಡಿದರೂ ಇದು ಸುಲಭದಲ್ಲಿ ಸಿಗಲಿಲ್ಲ.  ಛಲಬಿಡದ ತ್ರಿವಿಕ್ರಮನಂತೆ ಗೊತ್ತಿರುವ ವರಸೆಗಳನ್ನೆಲ್ಲ ಉಪಯೋಗಿಸಿ  ಅಂತರ್ಜಾಲ ಸಾಗರವನ್ನು ಜಾಲಾಡಿದಾಗ ಕೊನೆಗೂ ಸಿಕ್ಕಿಯೇ ಬಿಟ್ಟಿತು. ಹಾಡು ಮಾತ್ರವಲ್ಲ ಜೊತೆಗೆ ಪದ್ಯಾವಳಿ ಕೂಡ ! ಸಾಹಿತ್ಯ ಒಂದು ಹೊರತು ಪಡಿಸಿ ಹಿನ್ನೆಲೆ ಸಂಗೀತ, ವಾದ್ಯಗಳ ನುಡಿಸುವಿಕೆ, ಆಲಾಪ ಎಲ್ಲದರಲ್ಲೂ ಕನ್ನಡ ಹಾಡಿನ ಪ್ರತಿರೂಪ ಆಗಿರುವ ಇದನ್ನು ಕೇಳಿ  Multi Track, Cut and Paste ಯಾವುದೂ ಇಲ್ಲದ ಅಂದಿನ ಕಾಲದಲ್ಲಿ ಕಲಾವಿದರು ಧ್ವನಿಮುದ್ರಣಕ್ಕೆ ಮುನ್ನ  ಎಷ್ಟೊಂದು ಅಭ್ಯಾಸ ನಡೆಸುತ್ತಿದ್ದರು, ಎಷ್ಟೊಂದು ಶ್ರಮ ವಹಿಸಿ ಪರಿಪೂರ್ಣತೆಗೆ ಪ್ರಾಧಾನ್ಯ ನೀಡುತ್ತಿದ್ದರು ಎನ್ನುವುದನ್ನು ಊಹಿಸಬಹುದು.






ಈ ಹಾಡನ್ನು ಸಮಾರಂಭವೊಂದರಲ್ಲಿ ನಾನು ನುಡಿಸಿದ್ದು ಹೀಗೆ.