Sunday, 21 April 2013

ಪಿ.ಬಿ.ಶ್ರೀನಿವಾಸ್ ರೇಡಿಯೊ ಸಂದರ್ಶನ


     ಇಂದಿನ ನೂರಾರು  ಚಾನಲ್ ಗಳ  ಕೇಬಲ್ ಟಿ.ವಿ,  ಅಂತರ್ಜಾಲ, CD, MP3 ಮುಂತಾದವುಗಳ ಮಧ್ಯೆಯೂ ನನ್ನ ಮೊದಲ ಪ್ರೀತಿ ರೇಡಿಯೊ. ಸ್ಥಳೀಯ ಕೇಂದ್ರಗಳ ಕಾರ್ಯಕ್ರಮಗಳಿಗಿಂತಲೂ ವಿಶೇಷ ಪ್ರಯತ್ನದ ಮೂಲಕ ದೂರ ದೂರದ ಕೇಂದ್ರಗಳ ಕಾರ್ಯಕ್ರಮಗಳನ್ನು ಆಲಿಸುವುದು ನನಗೆ ಹೆಚ್ಚು ಖುಶಿ ನೀಡುತ್ತದೆ.  ಹಗಲು ಹೊತ್ತಿನಲ್ಲಿ  short wave ಹಾಗೂ ರಾತ್ರಿ ಹೊತ್ತು medium wave ನಲ್ಲಿ ಖಂಡಾಂತರದ ಕಾರ್ಯಕ್ರಮಗಳನ್ನೂ ಸುಲಭವಾಗಿ ಆಲಿಸಬಹುದು.  ಆದರೆ FM ಕೇಂದ್ರಗಳ ಸಾಮಾನ್ಯ 60 ರಿಂದ 70 ಕಿ.ಮೀ ವ್ಯಾಪ್ತಿಯನ್ನು ಮೀರಬೇಕಾದರೆ ಕೊಂಚ ಶ್ರಮ ಪಡಬೇಕಾಗುತ್ತದೆ.   ಮಂಗಳೂರಿನಿಂದ 140 ಕಿ.ಮೀ ದೂರದ ಮಡಿಕೇರಿ ಕೇಂದ್ರದ ಕಾರ್ಯಕ್ರಮಗಳನ್ನು ಹಳೆಯ TV  antenna ಉಪಯೋಗಿಸಿ ಕೆಲವು ವರ್ಷಗಳಿಂದ ಆಲಿಸುತ್ತಾ ಬಂದಿದ್ದೇನೆ.  ಇತ್ತೀಚೆಗೆ antenna ಎತ್ತರವನ್ನು ಮತ್ತಷ್ಟು ಏರಿಸಿ ಕೆಲವು ಪ್ರಯೋಗಗಳನ್ನು ನಡೆಸಿದಾಗ ನನ್ನ Samsug Home Theater ನಲ್ಲಿ 170 ಕಿ.ಮೀ ದೂರದ ಹಾಸನ FM ಕೇಂದ್ರದ ಕಾರ್ಯಕ್ರಮಗಳೂ ಸ್ಪಷ್ಟವಾಗಿ ಕೇಳಿಸತೊಡಗಿದವು. ಪಿ.ಬಿ ಶ್ರೀನಿವಾಸ್ ಜತೆ ಹಾಸನ ಆಕಾಶವಾಣಿ ನಡೆಸಿದ್ದ ಸಂದರ್ಶನವೊಂದು ಇಂದು ಪ್ರಸಾರವಾದಾಗ  ನನ್ನ ಈ ಪರಿಶ್ರಮ ಸಾರ್ಥಕವೆನಿಸುವ  ಅಪೂರ್ವ ಕ್ಷಣವೊಂದು ಪ್ರಾಪ್ತವಾಯಿತು.   USB ತಂತ್ರಜ್ಞಾನದ ಕೃಪೆಯಿಂದ ಸ್ಪಷ್ಟ ಧ್ವನಿಮುದ್ರಣವೂ ಸಾಧ್ಯವಾಯಿತು. ಬೇರೆಲ್ಲೂ ಕೇಳ ಸಿಗಲಾರದ ಆ ಕಾರ್ಯಕ್ರಮದ ಆಯ್ದ ಭಾಗವನ್ನು ಇಲ್ಲಿ ಪ್ರಸ್ತುತಪಡಿಸಿದ್ದೇನೆ.




 
ಹಾಸನ ಆಕಾಶವಾಣಿಯಿಂದಲೇ ಲಭ್ಯವಾದ ಪಿ.ಬಿ.ಎಸ್ ಅವರ ಮೊದಲ ಕನ್ನಡ ಚಿತ್ರ ‘ಜಾತಕಫಲ’ದ  ‘ಚಿಂತಿಸದಿರು ರಮಣಿ’ ಹಾಡು ಇಲ್ಲಿದೆ.



     ಇದಕ್ಕೆ ಪೂರಕವಾಗಿ ತನ್ನ ವೈವಿಧ್ಯಮಯ ಕಾರ್ಯಕ್ರಮಗಳಿಗೆ ಹೆಸರಾದ ಮಡಿಕೇರಿ ಆಕಾಶವಾಣಿ ಪ್ರಸಾರ ಮಾಡಿದ ಪಿ.ಬಿ.ಎಸ್ ಬಹುಭಾಷಾ ಗೀತೆಗಳನ್ನೊಳಗೊಂಡ ಪ್ರಸ್ತುತಿಯೊಂದು ಇಲ್ಲಿದೆ. 

Sunday, 14 April 2013

ಹೊರಟೆ ಸೇರೆ ನಮ್ಮ ಊರ ನಿಮಗೆ ನನ್ನ ನಮಸ್ಕಾರ



ಕನ್ನಡ, ತುಳು, ತಮಿಳು, ತೆಲುಗು, ಮಲೆಯಾಳ, ಕೊಂಕಣಿ , ಸಂಸ್ಕೃತ, ಹಿಂದಿ ಇತ್ಯಾದಿ ಭಾಷೆಗಳ ರಚನೆಗಳನ್ನು ಆಯಾ ಭಾಷಿಗರೇ ನಾಚುವಷ್ಟು ಸಹಜವಾಗಿ ಹಾಡುತ್ತಿದ್ದ, ಅದ್ಭುತ ಉಸಿರಿನ ನಿಯಂತ್ರಣ, ಧ್ವನಿ ಭಾರ, ಮಂದ್ರದ ಜೀರು, ಸ್ಪಷ್ಟ ಉಚ್ಚಾರಗಳ ಒಡೆಯ, ಗಾನೆ ಗಾನೆ ಪೆ  ಲಿಖಾ ಹೈ ಗಾನೆ ವಾಲೆ ಕಾ ನಾಮ್ ಅನ್ನುತ್ತಾ ಕೊನೆ ಉಸಿರಿನವರೆಗೂ ಉಲ್ಲಾಸಪೂರ್ಣ ಜೀವನ ನಡೆಸಿ ಇಂದು ಪಂಚತ್ವವನ್ನು ಹೊಂದಿದ    ಗಾನ ಗಂಧರ್ವ ಪಿ.ಬಿ ಶ್ರೀನಿವಾಸ್ ಅವರಿಗೆ  ಆಯ್ದ ಐದು ಹಾಡುಗಳ ಪಂಚ  ಗಾನ ನಮನ.  ಭೌತಿಕವಾಗಿ ಇನ್ನು ಅವರನ್ನು ನಾವು ಕಾಣಲಾರೆವಾದರೂ ನಮ್ಮೆಲ್ಲರ ಮನಗಳಲ್ಲಿ ನೆಲೆಯಾಗಿರುವ ಸಹಸ್ರಾರು ಹಾಡುಗಳ ಮೂಲಕ ಅವರು ಸದಾ ನಮ್ಮೊಂದಿಗೆ ಇರುತ್ತಾರೆ. 70ರ ದಶಕದ ಮಧ್ಯಭಾಗದಲ್ಲಿ  ಕ್ಷಮತೆಯ ಉತ್ತುಂಗದಲ್ಲಿದ್ದಾಗಲೇ ಚಿತ್ರರಂಗ ಅವರನ್ನು ಕಡೆಗಣಿಸತೊಡಗಿ  ಇನ್ನಷ್ಟು ಮಧುರ ಗೀತೆಗಳು ನಮ್ಮದಾಗುವ ಅವಕಾಶ ತಪ್ಪಿ ಹೋದ ದುರಂತ ಮಾತ್ರ ಮರೆಯಲಾಗದ್ದು.

1.  ನವಜೀವನ ಚಿತ್ರದ ಸರ್ವ ಧರ್ಮ ಸಮನ್ವಯದ ಪ್ರಾರ್ಥನೆ.



2.  ಬದುಕಿದೆನು ಬದುಕಿದೆನು - ಭಕ್ತ ಕನಕದಾಸ



3.  ತೂಗುದೀಪವಿದು  ನಿಜ ಬಾಳಿನ ರೂಪವಿದು -  ತೂಗುದೀಪ



4.  ನಾ ಪಾಪವದೇನ ಮಾಡಿದೆನೊ - ಓಹಿಲೇಶ್ವರ



5.  ಸಂತ ತುಕಾರಾಂ ಚಿತ್ರದ ಹೊರಟೆ ಸೇರೆ ನಮ್ಮ ಊರ ನಿಮಗೆ ನನ್ನ ನಮಸ್ಕಾರ  ಹಾಗೂ  ಶಿವ ಕ್ಷಮಾಪಣಾ ಸ್ತೋತ್ರ



ಇನ್ನಷ್ಟು ಆಯ್ದ ಪಿ.ಬಿ.ಎಸ್ ಹಾಡುಗಳಿಗೆ  ವಿವಿಧ ಸಂಗೀತ ನಿರ್ದೇಶಕರ ಒಡನಾಟದಲ್ಲಿ ಪಿ.ಬಿ.ಎಸ್ Top 10 ಮತ್ತು  ಮಂದ್ರದಲ್ಲಿ ಪಿ.ಬಿ.ಎಸ್ ಮಾಂತ್ರಿಕತೆ  ನೋಡಿ.