ಚಿತ್ರ : ಕಣ್ತೆರೆದು ನೋಡು
ರಚನೆ: ಜಿ.ವಿ.ಅಯ್ಯರ್
ಸಂಗೀತ: ಜಿ ಕೆ ವೆಂಕಟೇಶ್.
ಗಾಯನ: ಪಿ ಬಿ ಶ್ರೀನಿವಾಸ್ ಮತ್ತು ಸಂಗಡಿಗರು.
ಕಣ್ಣಿನ ಚಿಕಿತ್ಸೆಗೆಂದು ಪಟ್ಟಣಕ್ಕೆ ಹೊರಟಿರುವ ಅಂಧನಾದ ಚಿತ್ರದ ನಾಯಕ ದೋಣಿಯಲ್ಲಿ ನದಿ ದಾಟುತ್ತಿರುವಾಗ ಸಹಪ್ರಯಾಣಿಕರ ಕೋರಿಕೆಯಂತೆ ಹಾಡುವ ಹಾಡು ಇದು. ಜಿ ಕೆ ವೆಂಕಟೇಶ್ ಅವರು ಜಾನಪದ ಶೈಲಿಯಲ್ಲಿ ಸಂಯೋಜಿಸಿದ ಈ ಹಾಡಿನಲ್ಲಿ ದೊಳ್ಳು, ಢೋಲಕ್, ಕೊಳಲು, ಗಿಟಾರ್, violins,ಮ್ಯಾಂಡೊಲಿನ್ ಹಾಗೂ ಕೋರಸ್ ಗಳ ಸುಂದರ ಸಂಗಮವಿದೆ. ಹಾಡಿನುದ್ದಕ್ಕೂ ಕಪ್ಪೆ ವಟಗುಟ್ಟಿದಂತೆ ಕೇಳಿಸುವ ಸದ್ದೊಂದನ್ನು ಗಮನಿಸಿ. ಇದಕ್ಕೆ Castanets (ಎರಡು ಮರದ ಬಿಲ್ಲೆಗಳನ್ನು ದಾರದಲ್ಲಿ ಪೋಣಿಸಿದ ರಚನೆ) ನಂತಹ ಯಾವುದೋ ಉಪಕರಣ ಬಳಸಿರಬೇಕು ಅನ್ನಿಸುತ್ತದೆ. ದೊಳ್ಳಿನ ಸದ್ದಿನೊಂದಿಗೆ ಸಹಗಾಯಕರು ಹಾಡುವ ತೆರೆ ತೆರೆ ತೆರೆ ತೇಲಿಬರೆ ಸರ ಸರವಾಗಿ ನೊರೆ..... ಸಾಲುಗಳು ಈ ಹಾಡಿನ ಹೈಲೈಟ್ . ಮುಂದೆ ಜಿ ಕೆ ವೆಂಕಟೇಶ್ ಅವರು ಇದೇ ತಂತ್ರವನ್ನು ಬಂಗಾರದ ಮನುಷ್ಯದ ಆಹಾ ಮೈಸೂರು ಮಲ್ಲಿಗೆ ಹಾಡಿನಲ್ಲಿ ಅಲೆಅಲೆ ಚಿಮ್ಮುತಿದೆ.. ರೂಪದಲ್ಲಿ ಮತ್ತೆ ಬಳಸಿಕೊಂಡರು.
ನದಿನೀರನ್ನು ಕೇಂದ್ರವಾಗಿರಿಸಿ ಜೀವನ ದರ್ಶನವನ್ನು ಸಾರುವ ಈ ಗೀತೆಯಲ್ಲಿ ಜಿ.ವಿ.ಅಯ್ಯರ್ ಅವರು ರಕಾರಕ್ಕೆ ಪ್ರಾಧಾನ್ಯ ನೀಡಿದ್ದಾರೆ. ಪೂರ್ತಿ ಹಾಡು ಕೇಳಿ ಮುಗಿಸುವುದರೊಳಗೆ 64 ಸಲ ರಕಾರ ನಮ್ಮ ಕಿವಿಗೆ ಬಿದ್ದಿರುತ್ತದೆ!. ಅರುಣಾಚಲಂ ಸ್ಟುಡಿಯೊದವರು ನಿರ್ಮಿಸಿ ಟಿ.ವಿ.ಸಿಂಗ್ ಠಾಕೂರ್ ನಿರ್ದೇಶಿಸಿ ಗುರ್ ಜಾಡ ಕೃಷ್ಣದಾಸ್ ವೆಂಕಟೇಶ್ ಸಂಗೀತವಿರುವ ಕಣ್ತೆರೆದು ನೋಡು ಚಿತ್ರಕ್ಕಾಗಿ ಪಿ.ಬಿ.ಶ್ರೀನಿವಾಸ್ ಮತ್ತು ಕೋರಸ್ ಈ ಹಾಡನ್ನು ಹಾಡಿರುವುದರಿಂದ ಗಣಪತಿ ವೆಂಕಟರಾಮ ಅಯ್ಯರ್ ರಕಾರಕ್ಕೆ ಇಷ್ಟು ಪ್ರಾಧಾನ್ಯ ಕೊಟ್ಟಿರಬಹುದೇ?
ಬಹಳಷ್ಟು ವರುಷ ಬೆಳ್ತಂಗಡಿಯ ಭಾರತ್ ಟಾಕೀಸಿನಲ್ಲಿ ದೀಪಗಳು ಆರಿ ತೆರೆಯಮೇಲೆ ಜಾಹೀರಾತುಗಳು ಬೀಳಲು ಆರಂಭವಾಗುವ ಸಮಯ ಇದೇ ಹಾಡನ್ನು ಹಾಕುತ್ತಿದ್ದರು.
ಪೂರ್ಣ ಸಾಹಿತ್ಯದೊಡನೆ ಈ ಹಾಡು ನಿಮಗಾಗಿ ಇಲ್ಲಿದೆ. ಲಿಖಿತ ರೂಪದ ಹಾಡನ್ನು ಎದುರಿಗಿರಿಸಿ ಆಲಿಸಿದರೆ ಚಿಕ್ಕವರಾಗಿದ್ದಾಗ ಪದ್ಯಾವಳಿ ಎದುರಿಗಿಟ್ಟುಕೊಂಡು ರೇಡಿಯೊದಲ್ಲಿ ಹಾಡು ಕೇಳುತ್ತಿದ್ದುದು ನೆನಪಾಗುತ್ತದೆ. ಪ್ರಯತ್ನಿಸಿ ನೋಡಿ. ಈ ಹಾಡು ಪೂರ್ಣರೂಪದಲ್ಲಿ ನಿಮಗೆ ಬೇರೆಲ್ಲೂ ಸಿಗದು. ಅಂತರ್ಜಾಲದಲ್ಲಿ ಹುಡುಕಿದರೆ ಛಿದ್ರವಿಚ್ಛಿದ್ರವಾದ ವೀಡಿಯೊ ಒಂದು ಸಿಗಬಹುದು.
ಶರಣು ಕಾವೇರಿ ತಾಯೆ
ಶರಣು ಕಾವೇರಿ ತಾಯೆ
ಸಿರಿಯೆ ಕರುನಾಡ ಜೀವನದಿಯೆ ಕಾಯೆ
ಶರಣು ಕಾವೇರಿ ತಾಯೆ
ಶರಣು ಕಾವೇರಿ ತಾಯೆ
ತೆರೆ ತೆರೆ ತೆರೆ ತೇಲಿಬರೆ ಸರ ಸರವಾಗಿ ನೊರೆ
ತುಂತುರು ತುಂತುರು ನೀರಹನಿ
ಕಲ ಕಲ ಮಾಡೆ ದನಿ
ಪುರದ ಪುಣ್ಯವತಿ ..........
ಪುರದ ಪುಣ್ಯವತಿ ಗಂಗೆ ತಾಯೆ
ಪುರದ ಪುಣ್ಯವತಿ ಗಂಗೆ ತಾಯೆ
ಕರೆದು ಕಣ್ತೆರೆದು ನೋಡೆಲೆ ನೀಯೆ
ಓ ----
ಕರೆದು ಕಣ್ತೆರೆದು ನೋಡೆಲೆ ನೀಯೆ
ಕುರುಡು ಬಾಳಿನ ಸಾಗರಕೊಂದೆ
ಕುರುಡು ಬಾಳಿನ ಸಾಗರಕೊಂದೆ
ಹರಿಯ ನಾಮ ಹರಿಗೋಲೆಂಬೆ
ಸಿರಿಯೆ ಕರುನಾಡ ಜೀವನದಿಯೆ ಕಾಯೆ
ಶರಣು ಕಾವೇರಿ ತಾಯೆ
ಶರಣು ಕಾವೇರಿ ತಾಯೆ
ತೆರೆ ತೆರೆ ತೆರೆ ತೇಲಿಬರೆ ಸರ ಸರವಾಗಿ ನೊರೆ
ತುಂತುರು ತುಂತುರು ನೀರಹನಿ
ಕಲ ಕಲ ಮಾಡೆ ದನಿ
ಒಹೊ ಹೊ ...............
ಅಲೆಯ ಒಂದರಲಿ........
ಅಲೆಯ ಒಂದರಲಿ ಆಸೆಯು ಆರು
ಅಲೆಯ ಒಂದರಲಿ ಆಸೆಯು ಆರು
ಬಲೆಯ ತಾ ಬೀಸೆ ಬೀಳದೆ ಜಾರು
ಓ...........
ಬಲೆಯ ತಾ ಬೀಸೆ ಬೀಳದೆ ಜಾರು
ಮದವು ಮೋಹ ತುಂಬಿದ ಮೇಲೆ
ಮದವು ಮೋಹ ತುಂಬಿದ ಮೇಲೆ
ಬದುಕು ಬಾಳೆ ಬರಿ ಸಂಕೋಲೆ
ಸಿರಿಯೆ ಕರುನಾಡ ಜೀವನದಿಯೆ ಕಾಯೆ
ಶರಣು ಕಾವೇರಿ ತಾಯೆ
ಸಿರಿಯೆ ಕರುನಾಡ ಜೀವನದಿಯೆ ಕಾಯೆ
ಶರಣು ಕಾವೇರಿ ತಾಯೆ