
1919ರ ಸುಮಾರಿಗೆ ಬ್ರಿಟಿಷರು ಸುಲಲಿತ ರಸ್ತೆ ಸಂಪರ್ಕಕ್ಕಾಗಿ ದಕ್ಷಿಣ ಕನ್ನಡದಲ್ಲಿ ಅನೇಕ ಸೇತುವೆಗಳನ್ನು ನಿರ್ಮಿಸಿದ್ದರು. ಪಾಣೆಮಂಗಳೂರು, ಉಪ್ಪಿನಂಗಡಿ, ನಿಡಿಗಲ್ ಇತ್ಯಾದಿ ಸೇತುವೆಗಳ ಜೊತೆ ಮೃತ್ಯುಂಜಯಾ ನದಿಗಡ್ಡವಾಗಿ ಮುಂಡಾಜೆಯ ಸೇತುವೆಯೂ ಅದೇ ಸಮಯದಲ್ಲಿ ನಿರ್ಮಿಸಲ್ಪಟ್ಟಿರಬಹುದು ಎಂದು ನನ್ನ ಅಂದಾಜು. ಇಲ್ಲಿ ಕೆಲವರ್ಷಗಳ ಹಿಂದೆ ಹೊಸ ಸೇತುವೆ ನಿರ್ಮಾಣವಾಗಿದ್ದರೂ ಸಾಕಷ್ಟು ಗಟ್ಟಿಮುಟ್ಟಾಗಿದ್ದ ಹಳೇ ಸೇತುವೆ ಹಾಗೆಯೇ ಇತ್ತು. ಪುಂಜಾಲಕಟ್ಟೆಯಿಂದ ಚಾರ್ಮಾಡಿ ವರೆಗೆ ರಸ್ತೆ ಅಭಿವೃದ್ಧಿಯ ಕಾರ್ಯ ನಡೆಯುತ್ತಿರುವುದರಿಂದ ಇನ್ನೊಂದು ಹೊಸ ಸೇತುವೆ ನಿರ್ಮಾಣಕ್ಕಾಗಿ ಈ ಹಳೆ ಸೇತುವೆಯನ್ನು ಈಗ ತೆರವುಗೊಳಿಸಲಾಗಿದೆಯಂತೆ.
ನಮ್ಮ ಬಾಲ್ಯಕಾಲದ ಅನೇಕ ನೆನಪುಗಳು ಈ ಸೇತುವೆಯೊಂದಿಗೆ ಬೆಸೆಯಲ್ಪಟ್ಟಿವೆ. ನಾವು ಮುಂಡಾಜೆ ಶಾಲೆಯಲ್ಲಿ ಓದುತ್ತಿದ್ದಾಗ ಮೃತ್ಯುಂಜಯಾ ನದಿ ದಾಟಿ ಹೋಗಲು ಹತ್ತಿರದ ದಾರಿ ಇತ್ತು. ಮಳೆಗಾಲದ ಆರಂಭ ಮತ್ತು ಕೊನೆಯಲ್ಲಿ ನೀರು ಸ್ವಲ್ಪ ಹೆಚ್ಚಾದರೂ ಎಚ್ಚರ ವಹಿಸಿ ನದಿ ದಾಟಲು ಆಗುತ್ತಿತ್ತು. ನಾವು ಹುಡುಗರು ಕೌಪೀನ ಧಾರಿಗಳಾಗಿ, ಹುಡುಗಿಯರು ಸೊಂಟಕ್ಕೊಂದು ಬಟ್ಟೆ ಸುತ್ತಿಕೊಂಡು ಪುಸ್ತಕಗಳ ಚೀಲ ಎತ್ತಿ ಹಿಡಿದು, ಸಹಾಯಕ್ಕೆ ಬರುತ್ತಿದ್ದ ನಮ್ಮ ದೊಡ್ಡಣ್ಣ ಅಥವಾ ಅನಂತ ಭಟ್ಟರ ಕೈ ಹಿಡಿದು ಮೆಲ್ಲ ಮೆಲ್ಲನೆ ಒಬ್ಬೊಬ್ಬರಾಗಿ ಆಚೆ ದಡ ಸೇರುತ್ತಿದ್ದೆವು. ನೀರಿನ ರಭಸ ಕಂಡರೆ ತಲೆ ತಿರುಗುವಂತಾಗುವುದರಿಂದ ನೇರವಾಗಿ ಮುಂದಕ್ಕೆ ನೋಡುತ್ತಾ ಸಾಗಬೇಕೆಂದು ನಮಗೆ ಹೇಳುತ್ತಿದ್ದರು. ಸಂಜೆ ಹಿಂತಿರುಗುವಾಗ ನದಿ ದಡದಿಂದ ಕೂಕುಳು ಹಾಕಿದರೆ ಅಣ್ಣ ಅಥವಾ ಅನಂತ ಭಟ್ಟರು ಮತ್ತೆ ಸಹಾಯಕ್ಕೆ ಬರುತ್ತಿದ್ದರು.
ಕೆಲವರು ಸಂಜೆ ಹಿಂತಿರುಗುವಾಗ ಕಮ್ಮಿ ನೀರಿರಬಹುದೆಂದು ನದಿ ವರೆಗೆ ಬಂದು ನಿರಾಶರಾಗಿ ಮತ್ತೆ ಮುಂಡಾಜೆ ವರೆಗೆ ನಡೆದು ಸೇತುವೆಯ ಮೇಲಿಂದ ಬರಬೇಕಾದ ಪ್ರಸಂಗವೂ ಬರುತ್ತಿತ್ತು. ಆದರೆ ನಾನು ಒಮ್ಮೆಯೂ ಹೀಗೆ ಹಿಂದೆ ಹೋದದ್ದಿಲ್ಲ. ಅಪಾಯಕಾರಿ ಮಟ್ಟದ ನೀರಿನಲ್ಲಿ ಯಾರಾದರೂ ದಾಟುವ ಸಾಹಸ ಮಾಡಿದರೆ ಹಿರಿಯರಿಂದ ಬೈಸಿಕೊಳ್ಳಬೇಕಾಗುತ್ತಿತ್ತು. ಹೀಗೆ ಬೈದುದಕ್ಕೆ ಉಡಾಫೆ ಹುಡುಗನೊಬ್ಬ ‘ನಮಗೇನಾದರೂ ಆದರೆ ನಿಮಗೇನು?’ ಎಂದು ನಮ್ಮಣ್ಣನಿಗೆ ಎದುರುತ್ತರ ಕೊಟ್ಟಿದ್ದನಂತೆ. ಹಾಗೆಂದು ಅವರು ನದಿ ದಾಟಿಸುವ ಕಾಯಕವನ್ನೇನೂ ನಿಲ್ಲಿಸಲಿಲ್ಲ.
ಆದರೆ ಅನೇಕ ವರ್ಷಗಳ ನಂತರ ಒಂದು ಸಲ ನಮ್ಮ ಇನ್ನೊಬ್ಬ ಅಣ್ಣನ ಮಗಳು ನದಿ ದಾಟುವಾಗ ನೀರಿನ ಸೆಳೆತಕ್ಕೆ ಬ್ಯಾಲೆನ್ಸ್ ತಪ್ಪಿ ಬಿದ್ದು ಹತ್ತು ಹದಿನೈದು ಮೀಟರ್ ಕೊಚ್ಚಿಕೊಂಡು ಹೋಗಿದ್ದಳು. ಜೊತೆಗಿದ್ದವರು ಬೊಬ್ಬೆ ಹೊಡೆದಾಗ ಅಲ್ಲೇ ಇದ್ದ ಕೆಲಸದ ಆಳೊಬ್ಬ ಆಕೆಯನ್ನು ಅಂದು ರಕ್ಷಿಸಿದ್ದ.
ಮಳೆ ಜೋರಾಗಿ ನದಿ ತುಂಬಿ ಹರಿಯತೊಡಗಿದ ಮೇಲೆ ಮೂರು ತಿಂಗಳು ಮುಂಡಾಜೆ ಪೇಟೆಗೆ ಬಂದು ಈ ಸೇತುವೆ ಮೇಲಿಂದ ಸುತ್ತು ಬಳಸು ದಾರಿಯಲ್ಲಿ ಶಾಲೆಗೆ ಹೋಗುವುದು ನಿತ್ಯದ ಕಾಯಕವಾಗುತ್ತಿತ್ತು. ಎರಡು ವರ್ಷಗಳ ಅವಧಿಯಲ್ಲಿ ಸುಮಾರು ಆರು ತಿಂಗಳು ದಿನಕ್ಕೆರಡು ಬಾರಿಯಂತೆ ನಾನು ಈ ಸೇತುವೆ ಮೇಲಿನಿಂದ ನಡೆದು ಹೋಗಿದ್ದೇನೆ.
ಈ ಸೇತುವೆಯಲ್ಲಿ ಒಂದು ವಿಶೇಷವಿತ್ತು. ಸಂಪೂರ್ಣವಾಗಿ ಕಬ್ಬಿಣವನ್ನು ಬಳಸಿ ರಚಿಸಲ್ಪಟ್ಟುದರಿಂದ ಬಸ್ಸು ಲಾರಿಗಳು ಸಂಚರಿಸುವಾಗ ಇದು ಗಡ ಗಡ ನಡುಗುತ್ತಿತ್ತು! ಆ ಕಂಪನವನ್ನು ಅನುಭವಿಸಲು ಒಂದೆರಡು ಘನ ವಾಹನಗಳು ಬರುವ ವರೆಗೆ ನಾವು ಸೇತುವೆ ಮೇಲೆ ನಿಂತು ಕಾಯುವುದಿತ್ತು. ಇದರ ಕುಂದಗಳು ಸೇತುವೆಯಿಂದ ಎರಡೆರಡು ಮೀಟರ್ ಹೊರ ಚಾಚಿದ್ದುದು ಇನ್ನೊಂದು ವಿಶೇಷ.
ಬಸ್ಸುಗಳು ಟಾಟಾ ಮರ್ಸಿಡಿಸ್ ಬೆಂಜ್ ಅಥವಾ ಫಾರ್ಗೋ ಮತ್ತು ಲಾರಿಗಳು ಬೆಂಜ್, ಫಾರ್ಗೊ, ಫೋರ್ಡ್ ಅಥವಾ ಬೆಡ್‌ಫೋರ್ಡ್ ಎಂಜಿನ್ ಹೊಂದಿರುತ್ತವೆ ಎಂದು ನಮಗೆ ತಿಳಿದದ್ದು ಆ ಸಮಯದಲ್ಲೇ. ಆಗ ಲೇಲ್ಯಾಂಡ್ ಎಂಜಿನಿನ ಬಸ್ಸುಗಳಾಗಲಿ ಲಾರಿಗಳಾಗಲಿ ಇರಲಿಲ್ಲ.
ಹೇರು ತುಂಬಿದ ಲಾರಿಗಳು ಸೋಮಂತಡ್ಕ ತಿರುವಿನ ಏರಿನಲ್ಲಿ ಏದುಸಿರು ಬಿಡುತ್ತಾ ಸಾಗುವಾಗ ಕೆರೆ ದೇವಸ್ಥಾನದ ಪಕ್ಕದ ಒಳದಾರಿಯಿಂದ ನಡೆದು ಹೋಗುವ ನಾವು ಅವುಗಳಿಂದ ಮೊದಲು ಸೋಮಂತಡ್ಕ ಸೇರಿ ವಿಜಯದ ನಗೆ ಬೀರುವುದಿತ್ತು.
ಶಂಕರ್ ವಿಟ್ಠಲ್, CPC, PV, ಹನುಮಾನ್, ಆಂಜನೇಯ, ಜಯಪದ್ಮ, ಶಾರದಾಂಬಾ, CKMS, ಕೃಷ್ಣಾ, ಭಾರತ್, ಶೆಟ್ಟಿ ಬಸ್ ಅದೆಷ್ಟು ಸಲ ಈ ಸೇತುವೆಯ ಮೇಲೆ ಸಂಚರಿಸಿರಬಹುದೋ ಏನೋ. ಸೇತುವೆಗೆ ಪ್ರವೇಶಿಸುವಲ್ಲಿ ಕಡಿದಾದ ತಿರುವೊಂದಿತ್ತು. ಏಕ ಕಾಲಕ್ಕೆ ಎರಡು ವಾಹನಗಳು ಹಾದು ಹೋಗುವಷ್ಟು ಅಗಲವಿಲ್ಲದ ಸೇತುವೆಯಾದ್ದರಿಂದ ಆ ತಿರುವಿನ ಬಳಿ ಬಂದೊಡನೆ ಶಾರದಾಂಬಾ ಬಸ್ಸಿನ ಚಂದು ಎಂಬ ಡ್ರೈವರ್ ಆಗ ಆ ಬಸ್ಸಿನಲ್ಲಿ ಮಾತ್ರ ಇದ್ದ ವ್ಯಾಕ್ಯೂಮ್ ಹಾರ್ನ್ ಬಾರಿಸುತ್ತಿದ್ದ. ಆ ಹಾರ್ನನ್ನು ಆತ ಬೇರೆಲ್ಲೂ ಉಪಯೋಗಿಸದಿದ್ದುದೂ ವಿಶೇಷವೇ. ಆಗ ಉಳಿದ ಬಸ್ಸುಗಳಿಗೆ ಪೋಂ ಪೋಂ ಸದ್ದಿನ ಬಲ್ಬ್ ಹಾರ್ನ್ ಮತ್ತು ಬೆಂಜ್ ಬಸ್ಸುಗಳಾದರೆ ಸ್ಟೇರಿಂಗಿನ ಮಧ್ಯದಲ್ಲಿ ಇರುತ್ತಿದ್ದ ಗುಂಡಿ ಒತ್ತಿ ಬಾರಿಸುವ ಎಲೆಕ್ಟ್ರಿಕ್ ಹಾರ್ನ್ ಮಾತ್ರ ಇರುತ್ತಿದ್ದುದು. ವಾಹನಗಳ ವೇಗ ತಾನಾಗಿ ಕಡಿಮೆಯಾಗಲಿ ಎಂದು ಸೇತುವೆ ಸಮೀಪ ತಿರುವು ಇರುವಂತೆ ರಸ್ತೆಗಳನ್ನು ರಚಿಸುತ್ತಿದ್ದರು ಎಂದು ಕೆಲವರು ಹೇಳುವುದಿದೆ.
ನಾನು ಉಜಿರೆ ಕಾಲೇಜಿಗೆ ಮುಂಡಾಜೆಯಿಂದ up and down ಮಾಡುತ್ತಿದ್ದ ಕಾಲದಲ್ಲಿ ಒಮ್ಮೆ ಈ ಸೇತುವೆ ದುರಸ್ತಿಗೆಂದು ಮುಚ್ಚಲ್ಪಟ್ಟಾಗ ಒಂದು ವಾರ ಕಾಲ ಶೆಟ್ಟಿ ಬಸ್ಸು ಸೇರಿದಂತೆ ಎಲ್ಲ ವಾಹನಗಳು ಪಂಚಾಯತು ರಸ್ತೆ ಮೂಲಕ ಗುಂಡಿ ದೇವಸ್ಥಾನದ ಎದುರಿಂದ ಹಾದು ಮೃತ್ಯುಂಜಯಾ ನದಿಗಿಳಿದು ದಾಟಿ ಚಲಿಸುತ್ತಿದ್ದುದು ಇನ್ನೊಂದು ಮರೆಯಲಾಗದ ಅನುಭವ. ಯಾವಾಗಲೂ ಎರಡು ಕಿಲೋಮೀಟರ್ ನಡೆದು ಬಸ್ ಹಿಡಿಯಬೇಕಾಗಿದ್ದ ನಮಗೆ ಆ ಒಂದು ವಾರ ಮನೆಯೆದುರೇ ಬಸ್ಸನ್ನೇರಿ ಸಂಜೆ ಮನೆ ಮುಂದೆಯೇ ಇಳಿಯುವ ಸಂಭ್ರಮ! ಈಗ ಅಲ್ಲಿ ಅಗಲ ಕಿರಿದಾದ ಬಂಡಿ ಸೇತುವೆಯೊಂದು ನಿರ್ಮಾಣವಾಗಿದ್ದು ಘನ ವಾಹನಗಳೆಂದೂ ಆ ದಾರಿಯಲ್ಲಿ ಹೋಗದಂತಾಗಿದೆ.
ಕೆಲವರ್ಷಗಳ ಹಿಂದೆ ಈ ಸೇತುವೆಯ ಫೋಟೊ ಒಂದು ತೆಗೆದಿಟ್ಟುಕೊಂಡಿದ್ದೆ. ಈಗ ನನ್ನ ಕಲ್ಪನೆಯ ಶೆಟ್ಟಿ ಬಸ್ಸೂ ಅಲ್ಲಿ ಕಾಣಿಸಿಕೊಂಡು ನನ್ನನ್ನು ನೇರವಾಗಿ 1960ರ ದಶಕಕ್ಕೆ ಒಯ್ದು ಇಷ್ಟೆಲ್ಲಾ ನೆನಪುಗಳನ್ನು ಹೊರ ಹೊಮ್ಮಿಸಿತು.
ಇಲ್ಲಿ ಕಾಣುವಂತೆ ಅದು ಆವರಣ ರಹಿತ ಮುಳುಗು ಸೇತುವೆ ಆಗಿರಲಿಲ್ಲ. ಕಬ್ಬಿಣದ ಪೈಪುಗಳ ಸಧೃಡ ತಡೆಬೇಲಿ ಅದಕ್ಕಿತ್ತು. ಹೊಸ ಸೇತುವೆ ಆಗಿ ಇದು ನಿರುಪಯುಕ್ತ ಅನಿಸಿದ ಮೇಲೆ ಸಂಬಂಧಿಸಿದ ಇಲಾಖೆಯವರು ಅದನ್ನು ತೆಗೆದರೋ ಅಥವಾ ಪೈಪುಗಳು ಕಳ್ಳರ ಪಾಲಾದವೋ ಗೊತ್ತಿಲ್ಲ.