1919ರ ಸುಮಾರಿಗೆ ಬ್ರಿಟಿಷರು ಸುಲಲಿತ ರಸ್ತೆ ಸಂಪರ್ಕಕ್ಕಾಗಿ ದಕ್ಷಿಣ ಕನ್ನಡದಲ್ಲಿ ಅನೇಕ ಸೇತುವೆಗಳನ್ನು ನಿರ್ಮಿಸಿದ್ದರು. ಪಾಣೆಮಂಗಳೂರು, ಉಪ್ಪಿನಂಗಡಿ, ನಿಡಿಗಲ್ ಇತ್ಯಾದಿ ಸೇತುವೆಗಳ ಜೊತೆ ಮೃತ್ಯುಂಜಯಾ ನದಿಗಡ್ಡವಾಗಿ ಮುಂಡಾಜೆಯ ಸೇತುವೆಯೂ ಅದೇ ಸಮಯದಲ್ಲಿ ನಿರ್ಮಿಸಲ್ಪಟ್ಟಿರಬಹುದು ಎಂದು ನನ್ನ ಅಂದಾಜು. ಇಲ್ಲಿ ಕೆಲವರ್ಷಗಳ ಹಿಂದೆ ಹೊಸ ಸೇತುವೆ ನಿರ್ಮಾಣವಾಗಿದ್ದರೂ ಸಾಕಷ್ಟು ಗಟ್ಟಿಮುಟ್ಟಾಗಿದ್ದ ಹಳೇ ಸೇತುವೆ ಹಾಗೆಯೇ ಇತ್ತು. ಪುಂಜಾಲಕಟ್ಟೆಯಿಂದ ಚಾರ್ಮಾಡಿ ವರೆಗೆ ರಸ್ತೆ ಅಭಿವೃದ್ಧಿಯ ಕಾರ್ಯ ನಡೆಯುತ್ತಿರುವುದರಿಂದ ಇನ್ನೊಂದು ಹೊಸ ಸೇತುವೆ ನಿರ್ಮಾಣಕ್ಕಾಗಿ ಈ ಹಳೆ ಸೇತುವೆಯನ್ನು ಈಗ ತೆರವುಗೊಳಿಸಲಾಗಿದೆಯಂತೆ.
ನಮ್ಮ ಬಾಲ್ಯಕಾಲದ ಅನೇಕ ನೆನಪುಗಳು ಈ ಸೇತುವೆಯೊಂದಿಗೆ ಬೆಸೆಯಲ್ಪಟ್ಟಿವೆ. ನಾವು ಮುಂಡಾಜೆ ಶಾಲೆಯಲ್ಲಿ ಓದುತ್ತಿದ್ದಾಗ ಮೃತ್ಯುಂಜಯಾ ನದಿ ದಾಟಿ ಹೋಗಲು ಹತ್ತಿರದ ದಾರಿ ಇತ್ತು. ಮಳೆಗಾಲದ ಆರಂಭ ಮತ್ತು ಕೊನೆಯಲ್ಲಿ ನೀರು ಸ್ವಲ್ಪ ಹೆಚ್ಚಾದರೂ ಎಚ್ಚರ ವಹಿಸಿ ನದಿ ದಾಟಲು ಆಗುತ್ತಿತ್ತು. ನಾವು ಹುಡುಗರು ಕೌಪೀನ ಧಾರಿಗಳಾಗಿ, ಹುಡುಗಿಯರು ಸೊಂಟಕ್ಕೊಂದು ಬಟ್ಟೆ ಸುತ್ತಿಕೊಂಡು ಪುಸ್ತಕಗಳ ಚೀಲ ಎತ್ತಿ ಹಿಡಿದು, ಸಹಾಯಕ್ಕೆ ಬರುತ್ತಿದ್ದ ನಮ್ಮ ದೊಡ್ಡಣ್ಣ ಅಥವಾ ಅನಂತ ಭಟ್ಟರ ಕೈ ಹಿಡಿದು ಮೆಲ್ಲ ಮೆಲ್ಲನೆ ಒಬ್ಬೊಬ್ಬರಾಗಿ ಆಚೆ ದಡ ಸೇರುತ್ತಿದ್ದೆವು. ನೀರಿನ ರಭಸ ಕಂಡರೆ ತಲೆ ತಿರುಗುವಂತಾಗುವುದರಿಂದ ನೇರವಾಗಿ ಮುಂದಕ್ಕೆ ನೋಡುತ್ತಾ ಸಾಗಬೇಕೆಂದು ನಮಗೆ ಹೇಳುತ್ತಿದ್ದರು. ಸಂಜೆ ಹಿಂತಿರುಗುವಾಗ ನದಿ ದಡದಿಂದ ಕೂಕುಳು ಹಾಕಿದರೆ ಅಣ್ಣ ಅಥವಾ ಅನಂತ ಭಟ್ಟರು ಮತ್ತೆ ಸಹಾಯಕ್ಕೆ ಬರುತ್ತಿದ್ದರು.
ಕೆಲವರು ಸಂಜೆ ಹಿಂತಿರುಗುವಾಗ ಕಮ್ಮಿ ನೀರಿರಬಹುದೆಂದು ನದಿ ವರೆಗೆ ಬಂದು ನಿರಾಶರಾಗಿ ಮತ್ತೆ ಮುಂಡಾಜೆ ವರೆಗೆ ನಡೆದು ಸೇತುವೆಯ ಮೇಲಿಂದ ಬರಬೇಕಾದ ಪ್ರಸಂಗವೂ ಬರುತ್ತಿತ್ತು. ಆದರೆ ನಾನು ಒಮ್ಮೆಯೂ ಹೀಗೆ ಹಿಂದೆ ಹೋದದ್ದಿಲ್ಲ. ಅಪಾಯಕಾರಿ ಮಟ್ಟದ ನೀರಿನಲ್ಲಿ ಯಾರಾದರೂ ದಾಟುವ ಸಾಹಸ ಮಾಡಿದರೆ ಹಿರಿಯರಿಂದ ಬೈಸಿಕೊಳ್ಳಬೇಕಾಗುತ್ತಿತ್ತು. ಹೀಗೆ ಬೈದುದಕ್ಕೆ ಉಡಾಫೆ ಹುಡುಗನೊಬ್ಬ ‘ನಮಗೇನಾದರೂ ಆದರೆ ನಿಮಗೇನು?’ ಎಂದು ನಮ್ಮಣ್ಣನಿಗೆ ಎದುರುತ್ತರ ಕೊಟ್ಟಿದ್ದನಂತೆ. ಹಾಗೆಂದು ಅವರು ನದಿ ದಾಟಿಸುವ ಕಾಯಕವನ್ನೇನೂ ನಿಲ್ಲಿಸಲಿಲ್ಲ.
ಆದರೆ ಅನೇಕ ವರ್ಷಗಳ ನಂತರ ಒಂದು ಸಲ ನಮ್ಮ ಇನ್ನೊಬ್ಬ ಅಣ್ಣನ ಮಗಳು ನದಿ ದಾಟುವಾಗ ನೀರಿನ ಸೆಳೆತಕ್ಕೆ ಬ್ಯಾಲೆನ್ಸ್ ತಪ್ಪಿ ಬಿದ್ದು ಹತ್ತು ಹದಿನೈದು ಮೀಟರ್ ಕೊಚ್ಚಿಕೊಂಡು ಹೋಗಿದ್ದಳು. ಜೊತೆಗಿದ್ದವರು ಬೊಬ್ಬೆ ಹೊಡೆದಾಗ ಅಲ್ಲೇ ಇದ್ದ ಕೆಲಸದ ಆಳೊಬ್ಬ ಆಕೆಯನ್ನು ಅಂದು ರಕ್ಷಿಸಿದ್ದ.
ಮಳೆ ಜೋರಾಗಿ ನದಿ ತುಂಬಿ ಹರಿಯತೊಡಗಿದ ಮೇಲೆ ಮೂರು ತಿಂಗಳು ಮುಂಡಾಜೆ ಪೇಟೆಗೆ ಬಂದು ಈ ಸೇತುವೆ ಮೇಲಿಂದ ಸುತ್ತು ಬಳಸು ದಾರಿಯಲ್ಲಿ ಶಾಲೆಗೆ ಹೋಗುವುದು ನಿತ್ಯದ ಕಾಯಕವಾಗುತ್ತಿತ್ತು. ಎರಡು ವರ್ಷಗಳ ಅವಧಿಯಲ್ಲಿ ಸುಮಾರು ಆರು ತಿಂಗಳು ದಿನಕ್ಕೆರಡು ಬಾರಿಯಂತೆ ನಾನು ಈ ಸೇತುವೆ ಮೇಲಿನಿಂದ ನಡೆದು ಹೋಗಿದ್ದೇನೆ.
ಈ ಸೇತುವೆಯಲ್ಲಿ ಒಂದು ವಿಶೇಷವಿತ್ತು. ಸಂಪೂರ್ಣವಾಗಿ ಕಬ್ಬಿಣವನ್ನು ಬಳಸಿ ರಚಿಸಲ್ಪಟ್ಟುದರಿಂದ ಬಸ್ಸು ಲಾರಿಗಳು ಸಂಚರಿಸುವಾಗ ಇದು ಗಡ ಗಡ ನಡುಗುತ್ತಿತ್ತು! ಆ ಕಂಪನವನ್ನು ಅನುಭವಿಸಲು ಒಂದೆರಡು ಘನ ವಾಹನಗಳು ಬರುವ ವರೆಗೆ ನಾವು ಸೇತುವೆ ಮೇಲೆ ನಿಂತು ಕಾಯುವುದಿತ್ತು. ಇದರ ಕುಂದಗಳು ಸೇತುವೆಯಿಂದ ಎರಡೆರಡು ಮೀಟರ್ ಹೊರ ಚಾಚಿದ್ದುದು ಇನ್ನೊಂದು ವಿಶೇಷ.
ಬಸ್ಸುಗಳು ಟಾಟಾ ಮರ್ಸಿಡಿಸ್ ಬೆಂಜ್ ಅಥವಾ ಫಾರ್ಗೋ ಮತ್ತು ಲಾರಿಗಳು ಬೆಂಜ್, ಫಾರ್ಗೊ, ಫೋರ್ಡ್ ಅಥವಾ ಬೆಡ್‌ಫೋರ್ಡ್ ಎಂಜಿನ್ ಹೊಂದಿರುತ್ತವೆ ಎಂದು ನಮಗೆ ತಿಳಿದದ್ದು ಆ ಸಮಯದಲ್ಲೇ. ಆಗ ಲೇಲ್ಯಾಂಡ್ ಎಂಜಿನಿನ ಬಸ್ಸುಗಳಾಗಲಿ ಲಾರಿಗಳಾಗಲಿ ಇರಲಿಲ್ಲ.
ಹೇರು ತುಂಬಿದ ಲಾರಿಗಳು ಸೋಮಂತಡ್ಕ ತಿರುವಿನ ಏರಿನಲ್ಲಿ ಏದುಸಿರು ಬಿಡುತ್ತಾ ಸಾಗುವಾಗ ಕೆರೆ ದೇವಸ್ಥಾನದ ಪಕ್ಕದ ಒಳದಾರಿಯಿಂದ ನಡೆದು ಹೋಗುವ ನಾವು ಅವುಗಳಿಂದ ಮೊದಲು ಸೋಮಂತಡ್ಕ ಸೇರಿ ವಿಜಯದ ನಗೆ ಬೀರುವುದಿತ್ತು.
ಶಂಕರ್ ವಿಟ್ಠಲ್, CPC, PV, ಹನುಮಾನ್, ಆಂಜನೇಯ, ಜಯಪದ್ಮ, ಶಾರದಾಂಬಾ, CKMS, ಕೃಷ್ಣಾ, ಭಾರತ್, ಶೆಟ್ಟಿ ಬಸ್ ಅದೆಷ್ಟು ಸಲ ಈ ಸೇತುವೆಯ ಮೇಲೆ ಸಂಚರಿಸಿರಬಹುದೋ ಏನೋ. ಸೇತುವೆಗೆ ಪ್ರವೇಶಿಸುವಲ್ಲಿ ಕಡಿದಾದ ತಿರುವೊಂದಿತ್ತು. ಏಕ ಕಾಲಕ್ಕೆ ಎರಡು ವಾಹನಗಳು ಹಾದು ಹೋಗುವಷ್ಟು ಅಗಲವಿಲ್ಲದ ಸೇತುವೆಯಾದ್ದರಿಂದ ಆ ತಿರುವಿನ ಬಳಿ ಬಂದೊಡನೆ ಶಾರದಾಂಬಾ ಬಸ್ಸಿನ ಚಂದು ಎಂಬ ಡ್ರೈವರ್ ಆಗ ಆ ಬಸ್ಸಿನಲ್ಲಿ ಮಾತ್ರ ಇದ್ದ ವ್ಯಾಕ್ಯೂಮ್ ಹಾರ್ನ್ ಬಾರಿಸುತ್ತಿದ್ದ. ಆ ಹಾರ್ನನ್ನು ಆತ ಬೇರೆಲ್ಲೂ ಉಪಯೋಗಿಸದಿದ್ದುದೂ ವಿಶೇಷವೇ. ಆಗ ಉಳಿದ ಬಸ್ಸುಗಳಿಗೆ ಪೋಂ ಪೋಂ ಸದ್ದಿನ ಬಲ್ಬ್ ಹಾರ್ನ್ ಮತ್ತು ಬೆಂಜ್ ಬಸ್ಸುಗಳಾದರೆ ಸ್ಟೇರಿಂಗಿನ ಮಧ್ಯದಲ್ಲಿ ಇರುತ್ತಿದ್ದ ಗುಂಡಿ ಒತ್ತಿ ಬಾರಿಸುವ ಎಲೆಕ್ಟ್ರಿಕ್ ಹಾರ್ನ್ ಮಾತ್ರ ಇರುತ್ತಿದ್ದುದು. ವಾಹನಗಳ ವೇಗ ತಾನಾಗಿ ಕಡಿಮೆಯಾಗಲಿ ಎಂದು ಸೇತುವೆ ಸಮೀಪ ತಿರುವು ಇರುವಂತೆ ರಸ್ತೆಗಳನ್ನು ರಚಿಸುತ್ತಿದ್ದರು ಎಂದು ಕೆಲವರು ಹೇಳುವುದಿದೆ.
ನಾನು ಉಜಿರೆ ಕಾಲೇಜಿಗೆ ಮುಂಡಾಜೆಯಿಂದ up and down ಮಾಡುತ್ತಿದ್ದ ಕಾಲದಲ್ಲಿ ಒಮ್ಮೆ ಈ ಸೇತುವೆ ದುರಸ್ತಿಗೆಂದು ಮುಚ್ಚಲ್ಪಟ್ಟಾಗ ಒಂದು ವಾರ ಕಾಲ ಶೆಟ್ಟಿ ಬಸ್ಸು ಸೇರಿದಂತೆ ಎಲ್ಲ ವಾಹನಗಳು ಪಂಚಾಯತು ರಸ್ತೆ ಮೂಲಕ ಗುಂಡಿ ದೇವಸ್ಥಾನದ ಎದುರಿಂದ ಹಾದು ಮೃತ್ಯುಂಜಯಾ ನದಿಗಿಳಿದು ದಾಟಿ ಚಲಿಸುತ್ತಿದ್ದುದು ಇನ್ನೊಂದು ಮರೆಯಲಾಗದ ಅನುಭವ. ಯಾವಾಗಲೂ ಎರಡು ಕಿಲೋಮೀಟರ್ ನಡೆದು ಬಸ್ ಹಿಡಿಯಬೇಕಾಗಿದ್ದ ನಮಗೆ ಆ ಒಂದು ವಾರ ಮನೆಯೆದುರೇ ಬಸ್ಸನ್ನೇರಿ ಸಂಜೆ ಮನೆ ಮುಂದೆಯೇ ಇಳಿಯುವ ಸಂಭ್ರಮ! ಈಗ ಅಲ್ಲಿ ಅಗಲ ಕಿರಿದಾದ ಬಂಡಿ ಸೇತುವೆಯೊಂದು ನಿರ್ಮಾಣವಾಗಿದ್ದು ಘನ ವಾಹನಗಳೆಂದೂ ಆ ದಾರಿಯಲ್ಲಿ ಹೋಗದಂತಾಗಿದೆ.
ಕೆಲವರ್ಷಗಳ ಹಿಂದೆ ಈ ಸೇತುವೆಯ ಫೋಟೊ ಒಂದು ತೆಗೆದಿಟ್ಟುಕೊಂಡಿದ್ದೆ. ಈಗ ನನ್ನ ಕಲ್ಪನೆಯ ಶೆಟ್ಟಿ ಬಸ್ಸೂ ಅಲ್ಲಿ ಕಾಣಿಸಿಕೊಂಡು ನನ್ನನ್ನು ನೇರವಾಗಿ 1960ರ ದಶಕಕ್ಕೆ ಒಯ್ದು ಇಷ್ಟೆಲ್ಲಾ ನೆನಪುಗಳನ್ನು ಹೊರ ಹೊಮ್ಮಿಸಿತು.
ಇಲ್ಲಿ ಕಾಣುವಂತೆ ಅದು ಆವರಣ ರಹಿತ ಮುಳುಗು ಸೇತುವೆ ಆಗಿರಲಿಲ್ಲ. ಕಬ್ಬಿಣದ ಪೈಪುಗಳ ಸಧೃಡ ತಡೆಬೇಲಿ ಅದಕ್ಕಿತ್ತು. ಹೊಸ ಸೇತುವೆ ಆಗಿ ಇದು ನಿರುಪಯುಕ್ತ ಅನಿಸಿದ ಮೇಲೆ ಸಂಬಂಧಿಸಿದ ಇಲಾಖೆಯವರು ಅದನ್ನು ತೆಗೆದರೋ ಅಥವಾ ಪೈಪುಗಳು ಕಳ್ಳರ ಪಾಲಾದವೋ ಗೊತ್ತಿಲ್ಲ.
ನಿಮ್ಮ ಬರಹ ನನಗೆ ಕಾರಂತ,ವೈದೇಹಿ,ಎಂ ಕೆ ಇಂದಿರಾ ಮುಂತಾದವರ ಕಾದಂಬರಿಗಳನ್ನು
ReplyDeleteನೆನಪಿಸಿತು.
Subrahmanya Soravana Halli Nagappa (FB)
ಕರೆಕ್ಟ್ ಸುಬ್ಬಣ್ಣ....
Deleteಚಿದಂಬರ್ ಅವರ ಬರಹಗಳೆಲ್ಲ...
ತೀರಾ ಸಹಜ ಚಿತ್ರಣ.
ಕಣ್ಣಿಗೆ ಕಟ್ಟಿದ ಹಾಗೆ.
ತರ್ಕಬದ್ಧವಾಗಿ ಯೋಚನೆ ಮಾಡುವವರು ಅವರು
ಅವರ ನೆನಪು ಶಕ್ತಿಯೂ ಅದ್ಭುತವಾದದ್ದು.
Moorthy Deraje (FB)
* ನಾವು ಮತ್ತು ಹಳೆ ಸೇತುವೆಗಳು,ಬಸ್ ಗಳು*
ReplyDeleteಚಿದಂಬರ ರಹಸ್ಯ, ಅವರ ಫೇಸ್ಬುಕ್ ನಲ್ಲಿ ಪ್ರಕಟವಾಗುತ್ತಾನೆ ಇದೆ, ಹಳೆ ಚಿತ್ರ ಗೀತೆಗಳು, ಹಳೆ ಚಂದಮಾಮ ಕಥೆಗಳ ನೆನಪುಗಳು ,ಕೊಳಲಿನ ನಾದ ದೊಡನೆ ಹೊರಬರುತ್ತಿವೆ. ಇದಕ್ಕೆ ನಮ್ಮ ಹಳೆ ನೆನಪುಗಳನ್ನು ಸೇರಿಸುವಲ್ಲಿ ಸಹಕಾರಿಯಾಗುತ್ತಿದೆ. ಅವರ ಮುಖ ಪರಿಚಯ ಅಲ್ಲಿ, ಇಲ್ಲಿ ಇದೆ ಆದರೆ ಮುಖ ಪುಸ್ತಕದಲ್ಲಿ ದಿನಕ್ಕೊಮ್ಮ ಭೇಟಿಯಾಗುತ್ತೇವೆ.🙏🙏
1960 ರ ದಶಕದಲ್ಲಿ ಅಳದಂಗಡಿ ಮೂಲಕ ಕಾರ್ಕಳಕ್ಕೆ ಸೇತುವೆಗಳ ನಿರ್ಮಾಣ ಆಗುತ್ತಿದ್ದ ಕಾಲ .ಕಾಮಗಾರಿ ಸಮಯ ರಾತ್ರಿ ಹೊತ್ತಲ್ಲಿ ಹೋದರೆ ಬಲಿ ಕೊಡುತ್ತಾರೆ ಎಂಬ ಪ್ರತೀತಿ ಇತ್ತು, ಬೇಸಿಗೆಯಲ್ಲಿ ಮಾತ್ರ ಅಂದರೆ ಹೊಳೆ ತುಂಬುವಲರೇಗೆ ವೆಸ್ಟ್ ಕೊಸ್ಟ ಎಂಬ ಲಟಾರಿ ಬಸ್ಸು ಬಂದರೆ ಬಂತು ಇಲ್ಲಾಂದರೆ ಇಲ್ಲಾ ಎಂಬಂತಿತ್ತು.
ಅಲ್ಲಲ್ಲಿ ನಿಂತರೂ ನಿಂತೀತು. ಆಗ ನಮ್ಮ ಪದ್ಮನಾಭಣ್ಣ ಸೈಕಲ್ ಮೇಲೆ ಪೌರೋಹಿತ್ಯ ಕ್ಕೆ ಹೋಗಲು ಪ್ರಾರಂಭಿಸಿದ್ದರು.
ನಮ್ಮ ಮನೆಗೆ ವರ್ಷಕ್ಕೆ ಹಲವು ಬಾರಿ ಪೌರೋಹಿತ್ಯ ಕ್ಕೆ ಬರುತ್ತಿದ್ದರು. ಅಂಗಳಕ್ಕೆ ಬರುತ್ತಿದ್ದಂತೆ ಬಸ್ಸಿನ ಬಗ್ಗೆ, ಇವತ್ತು ಏಕ್ಸೆಲ್ ಮುರಿದು ಕೆದ್ದುನಲ್ಲಿ ನಿಂತಿದೆ ರಿಪೇರಿ ಮಾಡುತ್ತಾ ಇದ್ದಾರೆ, ಮನ್ನೆ ನಾನು ಕಾರ್ಕಳಕ್ಕೆ ಹೋಗಿದ್ದೆ ಮಳೆ ಬಂದು ಸೋರುತ್ತಿತ್ತು ,ಕಿಟಿಕಿಯಿಂದ ನೀರು ಹೀಗೆಲ್ಲಾ ಬಸ್ಸಿನ ಖುಷಿಯನ್ನು ವರ್ಣಿಸುತ್ತಿದ್ದರು.
ಅವರ ಬಗ್ಗೆ ಬರಿಯ ಬೇಕಂದರು ಪುಠಗಳೇ ಬೇಕು!!
ಕೂದಲ ಬಣ್ಣ ಬದಲಾದರೂ ಲವಲವಿಕೆಯ ಮನುಷ್ಯ.
ನಂತರ ಮಂಜುನಾಥ ಮೋಟರ್ಸ್, ಇದು ಮುಲ್ಕಿ ಗೆ ಹೊಗಿ ಬರುತ್ತಿತ್ತು ಈಗಲೂ ಅದೆ ಸಮಯದಲ್ಲಿ ಬರುತ್ತಿದೆ.
ಸೇತುವೆಗಳು ಆದ ಮೇಲೆ ಶೆಟ್ಟರ ಹನುಮಾನ್, ಶಾಲಾಮಕ್ಕಳೀಗೆ ನಮಸ್ಕಾರ, ಹೇಳುತ್ತಾ,ಅವರಿವರ ಪಾರ್ಸೆಲ್ ಗಳನ್ನು ಒಯ್ಯುತ್ತಾ, ಸುದೀರ್ಘ ಸೇವೆ ಕೊಟ್ಟವರು.
ಈ ಚಾನಲ್ ಗೆ ಇಷ್ಟು ಸಾಕು.
ಧನ್ಯವಾದಗಳು ಚಿದಂಬರ ರೇ , ಇಂತಾಹಾ ಲೇಖನಗಳು ಈಗಿನ ತಲೆಮಾರಿಗೆ ಹಿಡಿಸದ್ದರೂ , ಹಳೆ ಶಾಲೆಗಳು, ಗೀತೆಗಳು, ನಾವು ಬೆಳೆದು ಬಂದ ಪರಿಸರ ವನ್ನು ಉಳಿಸೋಣ, ನೆನಪಿಸೊಣ.
Shankara Hebbar (FB)
1965 ರಲ್ಲಿ ಇರಬೇಕು ನಾವು ಸ್ವಾತಂತ್ರ ದಿನಾಚರಣೆ ಗೆ ಮುಂಡಾಜೆ ಶಾಲೆಗೆ ನಮ್ಮ ಮನೆಯ ಹತ್ತಿರದ ಇದೇ ಸೇತುವೆ ಇರುವ ನದಿಯನ್ನು ನಮ್ಮ ಮನೆ ಹತ್ತಿರ ದಾಟಿ ಶಾಲೆಗೆ ಹೋದೆವು.ದಾಟಿದ್ದು ಎಂದರೆ ನನ್ನನ್ನು ಮತ್ತೆ ನನ್ನಂಥ ಇತರರನ್ನು ಶ್ರೀಯುತ ನಾರಾಯಣ ಶೆಟ್ಟಿ ಎಂಬ ವರು ತಮ್ಮ ಹೆಗಲ ಮೇಲೆ ಕೂಡಿಸಿ ಕೊಂಡು ದಾಟಿಸಿದರು.
ReplyDeleteಸಮಾರಂಭ ಮುಗಿದು ಮನೆಗೆ ಬರೋಣ ವೆಂದರೆ ಬಲ್ಯಾರ್ ಕಾಪು ಮತ್ತು ನಮ್ಮ ಮನೆಯ ತೋಟದಲ್ಲಿ ನೀರು ಬಿದ್ದಿತ್ತು. ಅಂದರೆ ಸುಮಾರು ಹತ್ತು ಹದಿನೈದು ಅಡಿ ನೀರು .
ನಾವು ವಾಪಸ್ ಹೋಗಿ ಚಿತ್ರದಲ್ಲಿ ತೋರಿಸಿದ ಮುಂಡಾಜೆ ಸೇತುವೆ ಮೇಲೆ ಬಂದೆವು ಸೇತುವೆ ಮುಳುಗಲು ಒಂದು ಅಡಿ ಅಷ್ಟೇ ಬಾಕಿ ಇತ್ತು.
ನಾವು ಹತ್ತಾರು ವಿದ್ಯಾರ್ಥಿಗಳು ದಾಟಿ ಬಂದ ಮೇಲೆ ಸೇತುವೆಯ ಮೇಲೆ ಮೂರಡಿ ನೀರು.
ನಮ್ಮ ಮನೆಗೆ ತಲುಪುವಷ್ಟರಲ್ಲಿ ನನ್ನ ತಾಯಿಯವರು
ಗಂಗೆಪೂಜೆ ಗೆ ತಯ್ಯಾರಿ ಮಾಡುತ್ತಿದ್ದರು ನೀವು ಹೇಗೆ ಬಂದಿರಿ ( ನಾನು ಮತ್ತು ನನ್ನ ಅಣ್ಣನಿಗೆ ) ಅಂತ ಕೇಳಿದರು ಸೇತುವೆ ಮೇಲೆ ಅಂತ ಹೇಳಿದ್ದಕ್ಕೆ .ನಾವು ಶಾಲೆಗೆ ಹೋಗಲು ಹೊಳೆ ದಾಟಿದ ಮೇಲೆ ಕೂಗು ಹಾಕಿ ಹೇಳಿದ್ದರಂತೆ ನನ್ನ ಮಾವ್ಶಿ ಮನೆಗೆ ಹೋಗಲು ತಾಯಿಯ ಅಕ್ಕ ಮಲ್ಲನ ಬೆಟ್ಟು ಎಂಬಲ್ಲಿ..ನಾವಾದರೂ ಕುಣಿಯುತ್ತಾ ಬೇರೆಲ್ಲಾ ಮರೆತು ಬಿಟ್ಟಿದ್ವಿ.. ರಾತ್ರೆ ಸಿಕ್ಕಾ ಪಟ್ಟೆ ಮಳೆ .ಮರುದಿನ ನಮ್ಮ ಮನೆಯ ಹತ್ತಿರದ ದೇವಸ್ಥಾನ ದ ಮುಂದಿನ ಗುಡ್ಡ ಏರಿ ಸಿದ್ದ ಬೈಲು ಪರಾರಿ ಯ ಹತ್ತಿರದ ಸಂಗಮ ದಲ್ಲಿಯ ನೀರು ನೋಡಲು ಸಿಕ್ಕಿತು. ನಮ್ಮೂರ ನದ ಅಂದರೆ ಗಂಡು ತನ್ನ ಪ್ರಿಯತಮೆ ನೇತ್ರಾವತಿ ನದಿಯನ್ನು ಸೇರುವ ಜಾಗ ಕೆಂಪು ನೀರಿನ ಚಾಪೆ .. ನಾಲ್ಕೈದು ದಿನಗಳ ಕಾಲ ಕೆಂಪು ನೀರಿನ ಕನಸು ಬೀಳುತ್ತಿತ್ತು . ನೆರೆ ನೀರು ಕನಸಿನಲ್ಲಿ ನೋಡಿದರೆ ಒಳ್ಳೆಯದು ಅಂತ ನಮ್ಮ ತಂದೆಯವರು ಹೇಳಿದರು.
Raghupathi Tamhankar (FB)
ಚಿದಂಬರ ಕಾಕತ್ಕರ ರ ಬರಹ ಎಷ್ಟೊಂದು ಜನರಿಗೆ ತಮ್ಮ ಬಾಲ್ಯದ ನೆನಪನ್ನು ಹಂಚಿಕೊಳ್ಳಲು ಪ್ರೇರಣೆ!!. ಎಲ್ಲರ ಬರಹಗಳು ಒಂದಕ್ಕಿಂತ ಒಂದು ಚೆಂದ. ನನ್ನ ಮನಸೂ ಸಹ ನನ್ನ ಬಾಲ್ಯದೆಡೆಗೆ ಜಾರಿತು ಎಂದು ಬೇರೆಯಾಗಿ ಹೇಳಬೇಕಿಲ್ಲ. ಎಲ್ಲರಿಗೂ ಸ್ಪೂರ್ತಿ ಕೊಟ್ಟ ಕಾಕತ್ಕರರಿಗೆ ಒಂದು ದೊಡ್ಡ ನಮಸ್ಕಾರ
ReplyDeleteAdekhamdi Venkatramanaiah Madhava Rao (FB)