Tuesday, 26 November 2024

ಧರ್ಮಸ್ಥಳ ದೀಪ ಅಂದು


ಕಾರ್ತಿಕ ಮಾಸದ ಕೃಷ್ಣಪಕ್ಷದಲ್ಲಿ ಜರಗುವ ಧರ್ಮಸ್ಥಳ ಲಕ್ಷದೀಪೋತ್ಸವವನ್ನು ನಾವು ಧರ್ಮಸ್ಥಳ ದೀಪ ಎಂದೇ ಕರೆಯುತ್ತಿದ್ದುದು.  ಗಣೇಶ ಚತುರ್ಥಿ, ನವರಾತ್ರಿ, ದೀಪಾವಳಿ ಮತ್ತು  ಆಗ ತಾನೇ ಮುಗಿದಿರುತ್ತಿದ್ದ ನಮ್ಮೂರಿನ ಗುಂಡಿ ದೀಪದ ನಂತರ ಇದು ನಮಗೆಲ್ಲ  ಸಂಭ್ರಮದ ಇನ್ನೊಂದು ರಸಘಟ್ಟ. ಆ ಹೊತ್ತಿಗೆ ಮನೆಮುಂದಿನ ಅಂಗಳ, ಅಡಿಕೆ ಒಣಗಿಸುವ ಮೇಲಿನಂಗಳಗಳು ಕೆತ್ತಲ್ಪಟ್ಟು ಚೊಕ್ಕಟವಾಗಿರುತ್ತಿದ್ದವು. ಚುಮು ಚುಮು ಚಳಿಯ ಬೆಳಗುಗಳಲ್ಲಿ ಕಾಣಿಸುವ ಶುಭ್ರ ನೀಲಾಕಾಶ ಮತ್ತು   ಎಲೆಗಳ ಮೇಲಿನ ಇಬ್ಬನಿ ಹನಿಗಳು ಮನೋಲ್ಲಾಸವನ್ನು ಉಕ್ಕಿಸುವ ವರ್ಷದ ಆ ಸಮಯ ವೈಯಕ್ತಿಕವಾಗಿ ನನಗೆ ಅತ್ಯಂತ ಪ್ರಿಯವಾದದ್ದು.  ಅರಿವು ಮೂಡಿದಾಗಿನಿಂದ ಉದ್ಯೋಗ ನಿಮಿತ್ತ ಊರು ತೊರೆಯುವ ವರೆಗೆ ಇಂಥ ಕಾಲ ಘಟ್ಟದಲ್ಲಿ ಬರುವ  ಧರ್ಮಸ್ಥಳ ದೀಪವನ್ನು ಒಮ್ಮೆಯೂ ನಾನು ತಪ್ಪಿಸಿಕೊಂಡದ್ದಿಲ್ಲ. ತೀರಾ ಚಿಕ್ಕವನಿದ್ದಾಗ ತಂದೆಯವರ ಜೊತೆ ಹಗಲು ಹೊತ್ತು ಹೋಗಿ ಬರುತ್ತಿದ್ದೆ.  ನಂತರ ಅಣ್ಣಂದಿರು ಮತ್ತು ಅಕ್ಕಪಕ್ಕದ ಮನೆಯವರೊಡನೆ ಸಂಜೆ ಹೊರಟು ರಾತ್ರಿಯ ಜಾತ್ರೆಯನ್ನು ಆನಂದಿಸಿ ಬೆಳಗಿನ ಜಾವ ಮನೆಗೆ ಮರಳುವ ಪರಿಪಾಠ ಆರಂಭವಾಯಿತು. ಕೆಲವು ಸಲ ತಂದೆಯವರು ರಾತ್ರೆಯ ಜಾತ್ರೆಗೂ ಬರುತ್ತಿದ್ದರು.  ಸುಮಾರು ಏಳು ಕಿಲೋ ಮೀಟರ್ ದೂರದಲ್ಲಿರುವ ಧರ್ಮಸ್ಥಳಕ್ಕೆ ನಾವು ನಡೆದುಕೊಂಡೇ ಹೋಗುತ್ತಿದ್ದುದು.  
  
ಮೊದಲ ಕೆಲವು ವರ್ಷ ಗುಡ್ಡ ಮತ್ತು ಗದ್ದೆಗಳ ಸರಣಿಯ ಕಾಲುದಾರಿಯಲ್ಲಿ ಸಾಗಿ ಹೋಗುವಾಗಿನ  ಅನುಭವ ಅನನ್ಯವಾಗಿರುತ್ತಿತ್ತು.  ಊರ ಪರಿಧಿ ದಾಟಿದೊಡನೆ ಸಿಗುವ ಒಂದು ಮೈದಾನಿನಲ್ಲಿ ಆಳೆತ್ತರಕ್ಕೆ ಮುಳಿಹುಲ್ಲು ಬೆಳೆದಿರುತ್ತಿತ್ತು.  ಅದರ ನಡುವೆ ಕಿರಿದಾದ ಕಾಲುದಾರಿಯಲ್ಲಿ ಸಾಗುವಾಗ ಹೆಚ್ಚಿನ ಎಚ್ಚರ ಬೇಕಾಗುತ್ತಿತ್ತು.  ಹಾವು ಹುಳು ಹುಪ್ಪಟೆಗಳ ಭಯಕ್ಕಲ್ಲ.  ಕಿಲಾಡಿ ಹುಡುಗರು ಕೆಲವೊಮ್ಮೆ ದಾರಿಯ ಆಚೀಚೆ ಇರುವ ಮುಳಿಹುಲ್ಲನ್ನು ಸೇರಿಸಿ ಗಂಟು ಹಾಕಿಡುತ್ತಿದ್ದರು.  ಇದನ್ನು ಗಮನಿಸದೆ ನೇರವಾಗಿ ನಡೆದರೆ ಮುಗ್ಗರಿಸಿ  ಮೂಗು ಮುರಿಸಿಕೊಳ್ಳಬೇಕಾಗುತ್ತಿತ್ತು. ಸಮವಯಸ್ಕ ಹುಡುಗರು ಜೊತೆಗಿದ್ದರೆ ಬಾಣದಂತೆ ಚೂಪಾದ ಮುಳಿಹುಲ್ಲಿನ ಕುಸುಮಗಳನ್ನು ಕಿತ್ತು ಬೆನ್ನಿಗೆಸೆಯುವ ಆಟ ನಾವು ಆಡುವುದಿತ್ತು. ಇದನ್ನು ನಾವು ಏಟುಕೋಳಿ ಎಂದು ಕರೆಯುತ್ತಿದ್ದೆವು. ಮುಂದೆ ಸಿಗುವ  ಭತ್ತದ ಗದ್ದೆಗಳ ಅಗಲ ಕಿರಿದಾದ ಬದುಗಳಲ್ಲಿ ಸಾಗುವಾಗ ಪ್ರಕೃತಿ ಸೌಂದರ್ಯವನ್ನು ಸವಿಯಲೆಂದು ಅಚೀಚೆ ನೋಡಿದರೆ ಗದ್ದೆಯಲ್ಲಿ  ಬಿದ್ದು ಮೈಗೆಲ್ಲ ಕೆಸರು ಮೆತ್ತಿಸಿಕೊಳ್ಳುವುದು ಖಚಿತವಾಗಿತ್ತು.  ಒಂದು ಕಡೆಯಂತೂ ಕುತ್ತಿಗೆವರೆಗೆ ಹೂತು ಹೋಗುವಷ್ಟು ಗಂಪವೆಂದು ಕರೆಯುತ್ತಿದ್ದ ಕೆಸರು. ಊರವರೊಬ್ಬರು ಅಜಾಕರೂಕತೆಯಿಂದ ಹಾಗೆ ಹೂತು ಹೋಗಿ ಅವರನ್ನು ಮೇಲೆಳೆಯಲು ಹರಸಾಹಸ ಪಡಬೇಕಾಗಿ ಬಂದಿತ್ತಂತೆ. ಅರ್ಧದಾರಿಯಲ್ಲಿ ಸಿಗುವ ಕಟ್ಟದ ಬೈಲು ಎಂಬಲ್ಲಿ ಅಗಲವಾದ ತೋಡಿಗಡ್ಡವಾಗಿ ಒಂದು ಬಡಿಗೆಯ ಸಂಕವೊಂದಿತ್ತು.  ಯಾರೋ ಪುಣ್ಯಾತ್ಮರು  ಆಧಾರವಾಗಿ ಕೈ ಸಾಂಕನ್ನು ಕಟ್ಟಿದ್ದರೂ ಬಡಿಗೆಯ ಮೇಲಿನಿಂದ ಸಾಗುವಾಗ ಹೆದರಿ ಹೃದಯ ಬಾಯಿಗೆ ಬರುತ್ತಿತ್ತು.  ನಮ್ಮ ತಂದೆಯವರು ಮತ್ತು ನಮ್ಮೊಡನೆ ಸೇರಿಕೊಳ್ಳುತ್ತಿದ್ದ ಅವರ ಸಮವಯಸ್ಕ ಮತ್ತು ಸಮಾನ ವ್ಯಸನಿಯಾಗಿದ್ದು ನಮ್ಮ ಸಂಬಂಧಿಯೂ ಆಗಿದ್ದ ಊರ ಇನ್ನೊಬ್ಬ ಹಿರಿಯರಿಗೆ ಅದು ಎಲೆ ಅಡಿಕೆಗೆ ಬ್ರೇಕ್ ತೆಗೆದುಕೊಳ್ಳುವ ತಾಣವೂ ಆಗಿತ್ತು. ಆಗ ಸುಮಾರು 50ರ ಆಸುಪಾಸು ವಯಸ್ಸು  ಇದ್ದಿರಬಹುದಾದ ಅವರಿಬ್ಬರಿಗೂ ನಡೆಯುವಾಗ ಕೋಲಿನ ಸಹಾಯ ಬೇಕಾಗುತ್ತಿದ್ದುದು ಏಕೆ ಎಂದು ಗೊತ್ತಿಲ್ಲ.  ಧರ್ಮಸ್ಥಳ ತಲುಪಿದೊಡನೆ ಚರ್ಮದ ಚಪ್ಪಲಿಗಳು ಮತ್ತು  ಕೈಯ ಕೋಲುಗಳನ್ನು ಪರಿಚಯದ ಶೆಟ್ಟರ ಅಂಗಡಿಯಲ್ಲಿ ಇಡುತ್ತಿದ್ದರು. ಪ್ರತೀ ವರ್ಷ ಮನೆಬಳಕೆಯ ಯಾವುದಾದರೂ ವಸ್ತುವನ್ನು ಅವರಲ್ಲಿ ಖರೀದಿಸುತ್ತಿದ್ದುದರಿಂದ ಅವರೂ ಬೇಡವೆನ್ನುತ್ತಿರಲಿಲ್ಲ.  50ರ ದಶಕದಲ್ಲಿ ಅಲ್ಲಿ ಕೊಂಡ ಸ್ಟೇನ್‌ಲೆಸ್ ಸ್ಟೀಲಿನ ದಪ್ಪದ ತಟ್ಟೆಯನ್ನು ನಾನು ಈಗಲೂ ಉಣ್ಣಲು ಉಪಯೋಗಿಸುತ್ತಿದ್ದೇನೆ. ಆ ಮೇಲೆ ಕೂಡ ವರ್ಷಕ್ಕೊಂದರಂತೆ ಮನೆಯ ಎಲ್ಲರಿಗೂ  ಸ್ಟೀಲ್ ತಟ್ಟೆಗಳನ್ನು  ಅವರ ಅಂಗಡಿಯಿಂದಲೇ  ಖರೀದಿಸಲಾಗಿತ್ತು.  ಆದರೆ ಐವತ್ತರ ದಶಕದಲ್ಲಿದ್ದ ತಟ್ಟೆಗಳ ಗುಣಮಟ್ಟ ಆ ಮೇಲಿನವುಗಳಿಗಿರಲಿಲ್ಲ. ಅಲ್ಲಿಂದ ಖರೀದಿಸಿದ ಅತ್ಯುತ್ತಮವಾದ ಫೌಂಟನ್ ಪೆನ್ನೊಂದನ್ನು ನಮ್ಮ ಅಣ್ಣ ಬಹಳ ವರ್ಷ ಬಳಸಿದ್ದರು. ಅಗತ್ಯವಿದ್ದಾಗ ಹಿತ್ತಾಳೆಯ ಎವರೆಡಿ ಟಾರ್ಚುಗಳನ್ನೂ ಅಲ್ಲಿಂದಲೇ ಕೊಳ್ಳಲಾಗುತ್ತಿತ್ತು ಎಂದು ನೆನಪು.

ನಂತರ ನೇರವಾಗಿ ದೇವಸ್ಥಾನಕ್ಕೆ ಭೇಟಿ. ಅಲ್ಲಿ ಬಣ್ಣ ಬಣ್ಣದ ದಿರಿಸು ಧರಿಸಿರುತ್ತಿದ್ದ ಪಟ್ಟೆಪಟ್ಟೆಯ ಪೇಟದ ಪಹರೆಯವರನ್ನು ಕಂಡು ಚಿಕ್ಕವರಾದ ನಮಗೆ ಭಯವಾಗುವುದೂ ಇತ್ತು.  ಆಗ ಪ್ರವೇಶಕ್ಕೆ ಸರತಿಯ ಸಾಲು ಇತ್ಯಾದಿ ಇರಲಿಲ್ಲ. ಅಲ್ಲಿ ಅಮ್ಮನವರಿಗೆ ಕುಂಕುಮಾರ್ಚನೆ ಮತ್ತು ಗಣಪತಿಗೆ ಪಂಚಕಜ್ಜಾಯ ಸೇವೆ ಮಾಡಿಸುತ್ತಿದ್ದರು. ಕೂವೆಯ ಎಲೆಯಲ್ಲಿ ಕಟ್ಟಿಕೊಡುತ್ತಿದ್ದ ಆ ಪಂಚ ಕಜ್ಜಾಯದ ಕಂಪು ಈಗಲೂ ನನಗೆ ನೆನಪಿದೆ. ಅಲ್ಲಿಂದ ನೇರವಾಗಿ ಊಟದ ಛತ್ರದತ್ತ ಪಯಣ.  ತಡವಾದರೆ ಜಾಗ ಸಿಗುವುದು ಕಷ್ಟವಾದ್ದರಿಂದ ಸಾಕಷ್ಟು ಮುಂಚಿತವಾಗಿಯೇ ಛತ್ರ ಪ್ರವೇಶಿಸಿ ಸಾಲು ಕಟ್ಟಿ ಕುಳಿತುಕೊಳ್ಳುವುದು ಆಗ ರೂಢಿಯಾಗಿತ್ತು.  ದೇವಸ್ಥಾನದಲ್ಲಿ ಮಹಾಮಂಗಳಾರತಿ ಆಗಿ ಛತ್ರದ ಗಣಪತಿಯ ಪೂಜೆ ಆದ ಮೇಲಷ್ಟೇ ಊಟಕ್ಕೆ ಎಲೆ ಹಾಕುತ್ತಿದ್ದುದು. ಊಟ ನಡೆಯುತ್ತಿರುವಾಗ ಗಣಪತಿಯ ಗಂಟೆಯನ್ನು ನುಡಿಸುತ್ತಾ ಇರುವುದು ಅಲ್ಲಿಯ ಸಂಪ್ರದಾಯ. ಊಟ ಮುಗಿದ ಮೇಲೆ ಎಂಜಲು ಇನ್ನೊಬ್ಬರಿಗೆ ತಾಗದಂತೆ ಕೈ ಮೇಲೆತ್ತಿ  ಸೀಮಿತ ಸಂಖ್ಯೆಯಲ್ಲಿದ್ದ  ನೀರಿನ ಕೊಳಾಯಿಗಳತ್ತ ಎಲ್ಲರೂ ಸಾಗುತ್ತಿದ್ದರು. ನಂತರ ಹೂವಿನ ಕೊಪ್ಪಲೆಂದು ಕರೆಯುತ್ತಿದ್ದ ಲಲಿತೋದ್ಯಾನಕ್ಕೆ ಒಮ್ಮೆ ಭೇಟಿ.  ಅಲ್ಲಿದ್ದ ಅಂಚೆಯಣ್ಣ ಮತ್ತು ತಲೆ ಮೇಲೆ ಕೈ ಹೊತ್ತು ಕುಳಿತ ದಫೇದಾರನ ಮೂರ್ತಿಗಳು ನಮಗಾಗ ಆಕರ್ಷಣೆಯ ಕೇಂದ್ರಗಳು. ಕೊಡದಿಂದ ನಿರಂತರವಾಗಿ ನೀರು ಸುರಿಸುತ್ತಿದ್ದ ಮೂರ್ತಿಯೂ ಅಚ್ಚರಿ ಮೂಡಿಸುತ್ತಿತ್ತು. ದೇವಸ್ಥಾನದ ಎದುರಿಗೆ ನಿಂತ ಆನೆಗಳಿಗೆ ಫುಟ್‌ಬಾಲ್ ಗಾತ್ರದ ಅನ್ನದ ಉಂಡೆಗಳನ್ನು ತಿನ್ನಿಸುವುದನ್ನು ಬೆರಗಾಗಿ ನೋಡುತ್ತಿದ್ದೆವು.  ಆ ಮೇಲೆ ಜಾತ್ರೆಗೊಂದು ಸುತ್ತು.  ತಂದೆಯವರು ಹೆಚ್ಚಾಗಿ ನಮ್ಮ ಕೂಡು ಕುಟುಂಬದ ಎಲ್ಲರಿಗೂ ಸಾಕಾಗುವಷ್ಟು ಕಿತ್ತಳೆ ಹಣ್ಣುಗಳು ಅಥವಾ ಖರ್ಜೂರ ಕೊಳ್ಳುತ್ತಿದ್ದರು. ಗುಂಡ್ರಾಯರ ಅಂಗಡಿಯಿಂದ ಸಕ್ಕರೆ ಪಾಕದಲ್ಲಿ ಮುಳುಗಿಸಿದ ಕಡಲೆಗಳ ಗೋಣಿ ಮಿಠಾಯಿ ಮತ್ತು ಸಕ್ಕರೆ ಕೋಟಿಂಗಿನ ಉದ್ದುದ್ದ ಖಾರಕಡ್ಡಿಯನ್ನೂ ಮನೆಗೆ ಒಯ್ಯುವುದಿತ್ತು. ಅವರ ಅಂಗಡಿಯಲ್ಲಿ ಪೇರಿಸಿಟ್ಟಿರುತ್ತಿದ್ದ ಆಯತಾಕಾರದ ಬಣ್ಣಬಣ್ಣದ ಸಕ್ಕರೆ ಅಚ್ಚುಗಳನ್ನು ಕೊಳ್ಳುವ ಅನುಮತಿ ನಮಗೆ ಸಿಗುತ್ತಿರಲಿಲ್ಲ.  ತಿರುಗಿಸಿದಾಗ ಕಿರ್ರೆಂದು ಸದ್ದು ಮಾಡುವ ಜೀರುಂಡೆ ಆಟಿಕೆಯೊಂದನ್ನು ನಾನು ಕೊಳ್ಳುತ್ತಿದ್ದೆ.  ಆ ಮೇಲೆ ವಸಂತ ಮಹಲಿನಲ್ಲಿ ನಡೆಯುತ್ತಿದ್ದ ನಾಗಸ್ವರ ವಾದನ ಇತ್ಯಾದಿಗಳನ್ನು ಸ್ವಲ್ಪ ಹೊತ್ತು ಆಲಿಸಿ ಸಂಜೆಯೊಳಗೆ ಮನೆಗೆ ಮರಳುತ್ತಿದ್ದೆವು.

ಕ್ರಮೇಣ ಈ ರೀತಿಯ ಹಗಲು ಭೇಟಿಯ ಕಾರ್ಯಕ್ರಮ ಕಮ್ಮಿಯಾಗಿ ರಾತ್ರಿಯ ಜಾತ್ರಾವೈಭವದ ಆಕರ್ಷಣೆ ಹೆಚ್ಚಾಯಿತು.  ಅಷ್ಟರಲ್ಲಿ ನಮ್ಮೂರ ಮೂಲಕ ಧರ್ಮಸ್ಥಳಕ್ಕೆ  ಒಂದು ಒಳರಸ್ತೆಯ ನಿರ್ಮಾಣ ಆರಂಭವಾಗಿ ವಾಹನ ಸಂಚಾರಕ್ಕೆ ಯೋಗ್ಯವಲ್ಲದಿದ್ದರೂ ನಡೆದುಕೊಂಡು ಹೋಗಲು ಸ್ವಲ್ಪ ಸುತ್ತಾದರೂ ಸುಲಭವಾದ ಪರ್ಯಾಯವೊಂದು ಲಭಿಸಿತು.  ಅಣ್ಣ ಅಕ್ಕಂದಿರು, ಅಕ್ಕ ಪಕ್ಕದ ಮನೆಯವರು ಎಲ್ಲ ಸೇರಿ ಸುಮಾರು ಹತ್ತು ಹನ್ನೆರಡು ಮಂದಿಯ ತಂಡ ಪೂರ್ವ ನಿಗದಿತ ದಿನದಂದು ಹೊರಡಲು ಸಿದ್ಧವಾಗುತ್ತಿತ್ತು. ಆಗ ಧರ್ಮಸ್ಥಳ ದೀಪಕ್ಕೆಂದು ಶಾಲೆಗೆ ರಜೆ ಇಲ್ಲದಿರುತ್ತಿದ್ದುದರಿಂದ ಇದಕ್ಕಾಗಿ ಆದಿತ್ಯವಾರವೇ ಆಯ್ಕೆಯಾಗುತ್ತಿತ್ತೆಂದು ನೆನಪು. ಹಿಂತಿರುವಾಗ ಬೆಳಕಿನ ಆಸರೆಗಾಗಿ  ಟಾರ್ಚ್ ಲೈಟುಗಳು, ಲಾಟೀನುಗಳು ಮತ್ತು ಅಡಿಕೆ ಮರದ ಸಲಾಕೆಗಳ ಸೂಟೆಗಳನ್ನು ಹೊಂದಿಸಿಕೊಂಡ ನಮ್ಮ ಪಟಾಲಂ ಸಂಜೆ ಸುಮಾರು ನಾಲ್ಕು ಗಂಟೆಗೆ ಹೊರಟು ಸಂಜೆಯೊಳಗೆ ಧರ್ಮಸ್ಥಳ ಸೇರುತ್ತಿತ್ತು.  ಕೆಲವು ವರ್ಷಗಳ ನಂತರ ಇವುಗಳೆಲ್ಲವುಗಳ ಬದಲಾಗಿ ಉಪಯೋಗಿಸಲೆಂದು  ಸೆಕೆಂಡ್ ಹ್ಯಾಂಡ್ ಗ್ಯಾಸ್ ಲೈಟೊಂದನ್ನು ನಮ್ಮ ಅಣ್ಣ ಖರೀದಿಸಿದ್ದರು.  ಮಾಮೂಲಿನಂತೆ  ಈ ಪರಿಕರಗಳನ್ನೆಲ್ಲ  ಶೆಟ್ಟರ ಅಂಗಡಿಯಲ್ಲಿ ಇರಿಸಿ ನಮ್ಮ ಪರ್ಯಟನೆ ಆರಂಭವಾಗುತ್ತಿತ್ತು. 



ಧರ್ಮಸ್ಥಳ ದೀಪ ಅಂದರೆ ನಮಗೆ ಅನೇಕ ಪ್ರಥಮಗಳನ್ನು ಪರಿಚಯಿಸಿದ ತಾಣ.  ಊರಿಗೆ ವಿದ್ಯುತ್ ಸಂಪರ್ಕ ಬರುವ ಎಷ್ಟೋ ವರ್ಷ ಮೊದಲೇ ಬೃಹದಾಕಾರದ ಜನರೇಟರುಗಳನ್ನು ಉಪಯೋಗಿಸಿ ದೇವಸ್ಥಾನ ಮಾತ್ರವಲ್ಲ, ಸುತ್ತಮುತ್ತಲಿನ ಕಟ್ಟಡಗಳನ್ನೂ  ಜಗಮಗಿಸಲಾಗುತ್ತಿತ್ತು.  ಮೊತ್ತ ಮೊದಲು ಬಲ್ಬು, ಟ್ಯೂಬ್ ಲೈಟುಗಳನ್ನು ನಾವು ನೋಡಿದ್ದು ಅಲ್ಲಿ.  ಆಗ ನಾವು ಟ್ಯೂಬ್ ಲೈಟನ್ನು ರೋಲ್ ಬಲ್ಬು ಅನ್ನುತ್ತಿದ್ದೆವು!  ಐಸ್  ಕ್ಯಾಂಡಿಯ ಪ್ರಥಮ ಪರಿಚಯ ನಮಗಾದದ್ದೂ ಅಲ್ಲಿಯೇ.  ತಲುಪಿದಾಕ್ಷಣ 5 ಪೈಸೆಗೆ ದೊರಕುತ್ತಿದ್ದ ನಮ್ಮಿಷ್ಟದ ಬಣ್ಣದ ಐಸ್ ಕ್ಯಾಂಡಿ ಕೊಳ್ಳುವುದು ಒಂದು ಪರಿಪಾಠವೇ ಆಗಿತ್ತು. ನನ್ನ ಆಯ್ಕೆ ತಿಳಿ ನೇರಳೆ ಬಣ್ಣದ ಕ್ಯಾಂಡಿ ಆಗಿರುತ್ತಿತ್ತು. ಸ್ವಾರಸ್ಯವೆಂದರೆ ಆಗ ನಾವು ಅದನ್ನು ಐಸ್ ಕಡ್ಡಿ ಅನ್ನುತ್ತಿದ್ದುದು! ಐಸಿಗೆ ಕಡ್ಡಿ ಚುಚ್ಚಿರುತ್ತಿದ್ದುದರಿಂದ ಆ ಹೆಸರು. ನಂತರ ವಿವಿಧ ಅಂಗಡಿಗಳ ವೀಕ್ಷಣೆ ಶುರು. ಆಗ ಹೆಚ್ಚು ಅಂಗಡಿಗಳಿರುತ್ತಿದ್ದುದು ದೇವಸ್ಥಾನದ ಎದುರಿನ ಬೀದಿ ಮತ್ತು ಹೂವಿನ ಕೊಪ್ಪಲಿನ ಪೂರ್ವ ಭಾಗದ ಅಗಲ ಕಿರಿದಾದ ರಸ್ತೆಯ ಇಕ್ಕೆಲಗಳಲ್ಲಿ. ಪ್ರತಿ ವರ್ಷ ಅಲ್ಲಿರುತ್ತಿದ್ದ ಒಂದಾಣೆ ಮಹಲು ಕೆಲವು ವರ್ಷಗಳ ನಂತರ  ಆರೂವರಾಣೆ ಮಹಲು ಆಗಿ ಆ ಮೇಲೆ `ಅರ್ಧ ಬೆಲೆ 95'  ಆಗಿ ಭಡ್ತಿ ಹೊಂದಿತ್ತು. ಅಲ್ಲಿ ಜನರು ಕೊಳ್ಳುತ್ತಿದ್ದುದು ಆ ಬೆಲೆಗೆ ಅಗ್ಗ ಅನಿಸಿದ ಸರಕುಗಳನ್ನು ಮಾತ್ರ.   ಗಂಟೆಯ ಮುಳ್ಳು ಮತ್ತು ಮಿನಿಟಿನ ಮುಳ್ಳು ಒಟ್ಟಿಗೆ ತಿರುಗುವ ಕೈಗಡಿಯಾರ, ಕೆಂಪು ಕನ್ನಡಕ(ತಂಪು ಅಲ್ಲ!), ಲೋಹದ ಉಂಗುರ, ತಗಡಿನ ಮೋಟರು ಕಾರು, ಪಟ್ಟೆ ಪಟ್ಟೆಗಳ ರಬ್ಬರ್ ಚೆಂಡು, ಒಡಲಲ್ಲಿ ನೀರು ತುಂಬಿ ಪೀಪಿಯಂತೆ ಊದಿದಾಗ ಚಿವ್ ಚಿವ್ ಅನ್ನುವ ಗುಬ್ಬಿ, ಬಿದಿರಿನ ಪೀಪಿಗೆ ಸಿಕ್ಕಿಸಿದ ಪುಗ್ಗೆ, ಕಾಳು ತಿನ್ನುವ ಕೋಳಿ, ಒಂದು ಲಿವರ್ ಒತ್ತಿ ಬಿಟ್ಟರೆ ಓಡುವ ದೊಡ್ಡ ಚಕ್ರಗಳ ಫಿರಂಗಿ ಗಾಡಿ, ಹೆಬ್ಬೆರಳಿನಿಂದ ಒತ್ತುವ ಕಿಟಿಕಿಟಿ, ಕಡ್ಡಿಯ ರೂಪದ ತೆಂಗಿನ ಮರದಿಂದ  ಸರಸರನೆ ಕೆಳಗಿಳಿಯುವ ಸ್ಪ್ರಿಂಗಿನ ಮಂಗ, ಕ್ಯಾಂಡಲಿನಿಂದ ಓಡುವ ಸ್ಟೀಮ್ ಬೋಟ್, ಸಿನಿಮಾ ರೀಲಿನ ತುಂಡುಗಳನ್ನು ಸಿಕ್ಕಿಸಿ ವೀಕ್ಷಿಸುವ ವ್ಯೂಮಾಸ್ಟರನ್ನು ಹೋಲುವ ಆಟಿಕೆ ಮುಂತಾದವುಗಳಲ್ಲಿ ಯಾವುದಾದರೊಂದು ನಮ್ಮ ವರ್ಷದ ಆಯ್ಕೆಗಳಾಗಿರುತ್ತಿದ್ದವು.  ನಾವು ‘ಸಿನಿಮಾ’ ಎಂದೇ ಕರೆಯುತ್ತಿದ್ದ ಆ ಆಟಿಕೆಯಲ್ಲಿ   ಹಳೆ ಅಜ್ಞಾತ ಸಿನಿಮಾಗಳ ದೃಶ್ಯಗಳನ್ನು ನೋಡುವಾಗಿನ ಕಲ್ಪನಾಲೋಕದ ಆನಂದ ಆ ಮೇಲೆ  ಥಿಯೇಟರುಗಳಲ್ಲಿ  ಸಿನಿಮಾಗಳನ್ನು ನೋಡುವಾಗಲೂ ಸಿಗಲಿಲ್ಲ.  ಮನೆಯ ಕೋಣೆಯ ಕಿಟಿಕಿಯಿಂದ ನುಸುಳುತ್ತಿದ್ದ ಬಿಸಿಲುಕೋಲಿನ ಮುಂದೆ ಆ ರೀಲಿನ ತುಂಡುಗಳನ್ನು ಹಿಡಿದು ಭೂತಕನ್ನಡಿಯ ಸಹಾಯದಿಂದ ಎದುರಿನ ಗೋಡೆಯ ಮೇಲೆ ದೊಡ್ಡ ಬಿಂಬವನ್ನು ಮೂಡಿಸುವುದನ್ನೂ ನಾನು ಕಲಿತುಕೊಂಡಿದ್ದೆ.


ಹೈಯರ್ ಎಲಿಮೆಂಟರಿಗೆ ಸೇರಿದ ಮೇಲೆ ಆದ್ಯತೆ ಬದಲಾಗಿ ಆರಾಣೆಯ ಏರ್‌ಮೇಲ್ ಪೆನ್, ಅಗ್ಗದ ಹವಾಯಿ ಚಪ್ಪಲ್ ಮುಂತಾದವು ನಮ್ಮ ವಿಶ್ ಲಿಸ್ಟಿಗೆ ಸೇರಿದವು.  ಅಂಗಡಿಯವನು ಶಾಯಿ ತುಂಬಿಸಿ ಚಂದವಾಗಿ ಅಕ್ಷರ ಮೂಡಿಸಿ ತೋರಿಸುತ್ತಿದ್ದ ಪೆನ್ನು ಮನೆಗೆ ಹೋಗುವಷ್ಟರಲ್ಲಿ ಬರೆಯಲಾರೆನೆಂದು ಮುಷ್ಕರ ಹೂಡುತ್ತಿತ್ತು, ಹಿಡಿದರೆ ಕೈಗೆಲ್ಲ ಶಾಯಿಯೂ ಮೆತ್ತುತ್ತಿತ್ತು.   ಕೊಂಡ ತಪ್ಪಿಗೆ ಥ್ರೆಡ್ಡಿಗೆ ವ್ಯಾಸಲೀನ್ ಸವರಿ ನಿಬ್ಬಲ್ಲಿ ಬ್ಲೇಡ್ ತೂರಿಸಿ ಹೇಗೋ ಸುಧಾರಿಸುತ್ತಿದ್ದೆವು. ಕನ್ನಡಿಯ ಮೇಲೆ ಗೀಚಿ ನಿಬ್ಬನ್ನು ನಯಗೊಳಿಸುವ  ಚಿಕಿತ್ಸೆಯ ಪ್ರಯೋಗವೂ ನಡೆಯುತ್ತಿತ್ತು.  ಹೈಸ್ಕೂಲ್ ಹಂತಕ್ಕೆ ತಲುಪಿದ ಮೇಲೆ  ಆಟಿಕೆಗಳ ಸಂಚಾರಿ ಅಂಗಡಿಯಿಂದ ವರ್ಷಕ್ಕೊಂದು ಕೊಳಲು ಕೊಳ್ಳಲು ಆರಂಭಿಸಿ ಪಾಪಿಯ ಜೀವನ ಪಾವನಗೊಳಿಸುವ ಹಾಡು ನುಡಿಸಲು ಪ್ರಯತ್ನಿಸುತ್ತಾ ನಾನು ಏಕಲವ್ಯನಾದದ್ದು.


ಪುಸ್ತಕದ ಅಂಗಡಿಗಳು ಯಾವುದೇ ಜಾತ್ರೆಯ ಅವಿಭಾಜ್ಯ ಅಂಗ.  ನಮ್ಮ ಅಣ್ಣನಿಗೆ ಉತ್ತಮ ಪುಸ್ತಕಗಳನ್ನು ಕೊಂಡು ಸಂಗ್ರಹಿಸುವ ಹವ್ಯಾಸವಿತ್ತು.  ವರ್ಷಕ್ಕೊಂದು ಆಯ್ದ ಪುಸ್ತಕವನ್ನು ತಪ್ಪದೆ ಕೊಳ್ಳುತ್ತಿದ್ದರು. ಇಸೋಪನ ನೀತಿ ಕಥೆಗಳು, ಅರೇಬಿಯನ್ ನೈಟ್ಸ್, ಸರ್ವಜ್ಞ ವಚನಗಳು, ಯೋಗಾಸನಗಳು,  ಸಚಿತ್ರ ಯಮಶಾಸನ ಮುಂತಾದವು ನನಗೆ ನೆನಪಿರುವಂತೆ ಅವರು ಕೊಂಡ, ನಾನೂ ಓದಿ ಆನಂದಿಸಿದ ಪುಸ್ತಕಗಳು. ಅವರ ಬಾಲ್ಯದಲ್ಲಿ ಮನೆಯಲ್ಲೇ ‘ಗಣೇಶ ಲೈಬ್ರರಿ’ ಎಂಬ ಹೆಸರಿನ ಪುಸ್ತಕಾಲಯವನ್ನು ಸ್ಥಾಪಿಸಿ ಪುಸ್ತಕಗಳಿಗೆ ಗುರುತಿನ ಸಂಖ್ಯೆಗಳನ್ನು ನೀಡಿ ಅಚ್ಚುಕಟ್ಟಾಗಿ ಸಂಗ್ರಹಿಸಿಡುತ್ತಿದ್ದರಂತೆ.  

ಜಾತ್ರೆಯಲ್ಲಿ ಒಂದೆರಡು ಕಂಬಳಿಗಳ ಸ್ಟಾಲುಗಳೂ ಇರುತ್ತಿದ್ದವು.  ಅವುಗಳ ಛಾವಣಿ, ಗೋಡೆ, ನೆಲದ ಹಾಸು ಎಲ್ಲವೂ ಕಂಬಳಿಗಳದ್ದೇ ಆಗಿರುತ್ತಿದ್ದುದು ವಿಶೇಷ. ನಮ್ಮಲ್ಲಿ ಕಂಬಳಿಗಳ ಉಪಯೋಗ ಕಮ್ಮಿ.  ಆದರೆ ಆಗ ಹೆರಿಗೆಗಳು ಮನೆಯಲ್ಲೇ ಆಗುತ್ತಿದ್ದುದರಿಂದ ಬಾಣಂತಿಯರಿಗಾಗಿ ಒಂದೆರಡು ವರ್ಷಕ್ಕೊಮ್ಮೆ ಹೊಸ ಕಂಬಳಿಯ ಅಗತ್ಯ ಬೀಳುತ್ತಿತ್ತು. ಅಣ್ಣಂದಿರು ಮತ್ತು ತಂದೆಯವರು  ಅಂಗಡಿಯ ಕಂಬಳಿ ಹಾಸಿನ ಮೇಲೆ ಕೂತು ಅಷ್ಟು ಹೊತ್ತು ನಡೆದಾಡಿದ ಕಾಲುಗಳಿಗೆ ಸ್ವಲ್ಪ ವಿಶ್ರಾಂತಿ ಕೊಟ್ಟು ಕಂಬಳಿ ಗೌಡರೊಡನೆ ಚರ್ಚೆ ಮಾಡಿ ಬಣ್ಣದ ಉಲ್ಲನ್ ದಾರದಿಂದ ಅಂಚನ್ನು ಹೆಣೆಯಲು ಹೇಳಿ ಅಗ್ಗದ ದರದಲ್ಲಿ ಗಿಟ್ಟಿಸುತ್ತಿದ್ದರು.

ನಾವು ಮೊದಲ ಬಾರಿಗೆ ಮಸಾಲೆ ದೋಸೆ ಸವಿದದ್ದೂ ಧರ್ಮಸ್ಥಳದಲ್ಲೇ.  ಆಗ ಅಲ್ಲಿ ಮಿತ್ರ ಸಮಾಜ ಎಂಬ ಒಂದೇ ಒಂದು ಚಿಕ್ಕ ಹೋಟೆಲು ಇದ್ದದ್ದು. ಜಾತ್ರೆಯ ಜನಸಂದಣಿಯಿಂದಾಗಿ ಅಲ್ಲಿ ಕುಳಿತುಕೊಳ್ಳಲು ಜಾಗ ಸಿಗುವುದೇ ಕಷ್ಟ. ಒಂದೊಮ್ಮೆ ಜಾಗ ಸಿಕ್ಕಿದರೂ  ಸಪ್ಲಯರ್ ನಮ್ಮ ಟೇಬಲ್ ಬಳಿಗೆ ಬಂದು  ಆರ್ಡರ್ ಪಡೆದು ಮಸಾಲೆ ದೋಸೆ ನಮ್ಮ ಮುಂದೆ ಪ್ರತ್ಯಕ್ಷವಾಗಲು ಬಹಳ ತಡವಾಗುತ್ತಿತ್ತು. ಕೆಲವೊಮ್ಮೆ ಆತ ನಮ್ಮನ್ನು ಮರೆತೇ ಬಿಟ್ಟನೇನೋ ಎಂದೂ ಅನ್ನಿಸುವುದಿತ್ತು. ಕೊನೆಗೂ ಆತ ದೋಸೆಗಳ ಪ್ಲೇಟುಗಳೊಡನೆ ನಮ್ಮತ್ತ ಬಂದಾಗ ನಿಧಿ ದೊರಕಿದಷ್ಟು ಸಂತೋಷ.  ಆಗ ಮಸಾಲೆ ದೋಸೆಯ ಜೊತೆ ಚಟ್ನಿ, ಸಾಂಬಾರ್ ಇತ್ಯಾದಿ ಕೊಡುವ ಕ್ರಮ ಇರಲಿಲ್ಲ.

ಈಗ ಶಾಲಾ ಕಾಲೇಜುಗಳ ವಾರ್ಷಿಕೋತ್ಸವದ ಅವಿಭಾಜ್ಯ ಅಂಗವಾಗಿರುವ ಫಿಲ್ಮಿ ಡಾನ್ಸಿನ ಪರಿಚಯ ನಮಗಾದದ್ದೂ ಧರ್ಮಸ್ಥಳ ದೀಪದಲ್ಲೇ.  ಆಗ ಈಗಿನಂತೆ ಮೈದಾನದಲ್ಲಿ ನಡೆಯುವ ವಸ್ತು ಪ್ರದರ್ಶನ ಇತ್ಯಾದಿ ಇರಲಿಲ್ಲ.  ಮಹಾದ್ವಾರದ ಪರಿಸರದಲ್ಲಿ ಮೋಟಾರ್ ಬೈಕಿನ ಮೃತ್ಯು ಕೂಪ,  ಅದ್ಭುತ ಮತ್ಸ್ಯಕನ್ಯೆ, ಬೊಂಬೆಯಾಟ, ಮ್ಯಾಜಿಕ್ ಶೋ ಮುಂತಾದವುಗಳ ಟೆಂಟುಗಳಿರುತ್ತಿದ್ದವು.  ಜನರನ್ನು ತಮ್ಮತ್ತ ಆಕರ್ಷಿಸಲು  ಟೆಂಟಿನ ಎದುರು ಎತ್ತರವಾದ ಅಟ್ಟಳಿಗೆಯ ಮೇಲೆ ಗ್ರಾಮೊಫೋನಿನಲ್ಲಿ  ಜನಪ್ರಿಯ ಸಿನಿಮಾ ಹಾಡುಗಳನ್ನು ಹಚ್ಚಿ ಚಿತ್ರ ವಿಚಿತ್ರ ಉಡುಗೆ ಧರಿಸಿದ ನರ್ತಕ ನರ್ತಕಿ ಕುಣಿಯುತ್ತಿದ್ದರು. ಒಂಟೆಗೆ ಮೂತಿ ಒಳಗಿಡಲು ಜಾಗ ಕೊಟ್ಟರೆ ಟೆಂಟಿನ ಮಾಲೀಕನನ್ನೇ ಹೊರಗೆ ಹಾಕಿತ್ತಂತೆ ಎಂಬ ಗಾದೆಯಂತೆ  ನಾನು ಕಾಲೇಜು ಸೇರುವ ಹೊತ್ತಿಗೆ  ಟಿಕೆಟಿಟ್ಟು ಇಂತಹ ಫಿಲ್ಮಿ ಡಾನ್ಸುಗಳನ್ನು ತೋರಿಸುವ ಟೆಂಟೇ ಕಾಣಿಸಿಕೊಂಡಿತ್ತು. ಅದರಲ್ಲಿ ದಸ್ ಲಾಖ್ ಚಿತ್ರದ ಆಗ್ರೇಕಾ ಲಾಲಾ ಅಂಗ್ರೇಜಿ ದುಲ್ಹನ್ ಲಾಯಾರೇ ಮತ್ತು ತೇರಿ ಪತ್ಲಿ ಕಮರ್ ತೇರಿ ಬಾಲಿ ಉಮರ್ ಹಾಡುಗಳಿಗೆ ಇಬ್ಬರು ಯುವತಿಯರು ಮತ್ತು ಓರ್ವ ಯುವಕ ದಪ್ಪ ಮೇಕಪ್ ಮೆತ್ತಿಕೊಂಡು ಕುಣಿದದ್ದನ್ನು ದುಡ್ಡು ಕೊಟ್ಟು ನೋಡಿದ್ದು ನೆನಪಿದೆ!

ಆಗ ಸರ್ವಧರ್ಮ ಮತ್ತು ಸಾಹಿತ್ಯ ಸಮ್ಮೇಳನಗಳು ನಡೆಯುತ್ತಿದ್ದುದು ಮಳೆಗಾಲದಲ್ಲಿ ಭತ್ತ ಬೆಳೆಯುವ  ಗದ್ದೆಯಲ್ಲಿ ಕಟ್ಟಿದ ತಾತ್ಕಾಲಿಕ ಸಭಾ ಭವನದಲ್ಲಿ. ಆದರೆ ಮರದ ಚೌಕಟ್ಟು ಮತ್ತು ಬಿಳಿ ಬಟ್ಟೆ ಬಳಸಿ ರಚಿಸಿದ ಅದರ ಕಂಬ ಮತ್ತು ಛಾವಣಿಗಳು  ಅದು ವಾಸ್ತವವಾದ ತಾರಸಿ ಕಟ್ಟಡವೇನೋ ಎಂಬ ಭ್ರಮೆ ಮೂಡಿಸುತ್ತಿತ್ತು.  ನಾವು ಆಗ ಅಲ್ಲಿ ಕೂತು ಕಾರ್ಯಕ್ರಮಗಳನ್ನೇನೂ ಆಸ್ವಾದಿಸುತ್ತಿರಲಿಲ್ಲ.  ಆದರೂ ಅಲ್ಲಿಯ ಕಲಾಪಗಳು ಹೊರಗೆ ಅಡ್ಡಾಡುವವರ ಕಿವಿಗೂ ಬೀಳುತ್ತಿದ್ದವು.  ಒಂದು ವರ್ಷ ಯಾರೋ ಕಲಾವಿದರು ಕಂಚಿನ ಕಂಠದಲ್ಲಿ ಮಾತಾಡ್ ಮಾತಾಡು ಮಲ್ಲಿಗೆ ಸೇವಂತಿಗೆ ಎಂದು ಹಾಡಿದ್ದು ನನ್ನ ಮನದಲ್ಲಿ ಅಚ್ಚು ಮೂಡಿಸಿದೆ.  ಧರ್ಮಸ್ಥಳ ದೀಪದೊಡನೆ ನಂಟು ಹೊಂದಿರುವ ಒಂದೆರಡು ಸಿನಿಮಾ ಹಾಡುಗಳೂ ಇವೆ.  ಒಂದು ವರ್ಷ ಅಲ್ಲಿ ಯಾವುದೋ ಧ್ವನಿ ವರ್ಧಕದಲ್ಲಿ ಪದೇ ಪದೇ ಕೇಳಿ ಬರುತ್ತಿದ್ದ ಶ್ರೀ ಶೈಲ ಮಹಾತ್ಮೆ ಚಿತ್ರದ ಮಲ್ಲಿಕಾರ್ಜುನನು ನೆಲೆಸಿಹ ಹಾಡಿನ ಏನೆಂಬೆ ಗಿರಿಯ ಮಹಿಮೆ ಎಂಬ ಸಾಲು ಮತ್ತು ಧರ್ಮಸ್ಥಳ ಮಹಾತ್ಮೆ ಚಿತ್ರದ ಜಗ ಹಿತಕಾಗಿ ತಾಮಸ ನ್ಯಾಯವೇ ಹಾಡಿನ ಮಂಜುನಾಥಾ ಮಂಜುನಾಥಾ ಎಂಬ ಪುನರಾವರ್ತನೆಗೊಳ್ಳುವ ಸಾಲುಗಳು ಏಕೋ ನನ್ನ ಮನದಲ್ಲಿ ಶಾಶ್ವತವಾಗಿ ನೆಲೆಗೊಂಡಿವೆ.  ಎರಡೂ ಪಿ.ಬಿ. ಶ್ರೀನಿವಾಸ್  ಹಾಡಿದವುಗಳು.  ಬಂಬಯಿ ದೇಖೊ ಮದ್ರಾಸ್ ದೇಖೊ ಎನ್ನುತ್ತಾ  ಒಂದು ಪೆಟ್ಟಿಗೆಯೊಳಗೆ ಚಿಮಿಣಿ ದೀಪದ ಬೆಳಕಿನಲ್ಲಿ ಕೆಲವು ದೃಶ್ಯಗಳನ್ನು ತೋರಿಸುತ್ತಿದ್ದವನು ಗ್ರಾಮೊಫೋನಿನ ಹಾರ್ನ್ ಬದಲಿಗೆ ಕಾಗದದ ಕೋನ್ ಒಂದನ್ನು ಸಿಕ್ಕಿಸಿ ನುಡಿಸುತ್ತಿದ್ದ  ಕನ್ಯಾರತ್ನ ಚಿತ್ರದ ಒಂದೇ ಮಾತು ಒಂದೇ ಮನಸು ಇಂಥ ಇನ್ನೊಂದು ಹಾಡು.  ಇವುಗಳನ್ನು ಕೇಳಿದಾಗ ಈಗಲೂ ಆ ದೃಶ್ಯಗಳೇ ಕಣ್ಣೆದುರು ಬರುವುದು.

ಬಹುತೇಕ ದೇವಸ್ಥಾನಗಳ ದೀಪೋತ್ಸವಗಳ ಸಂದರ್ಭದಲ್ಲಿರುವ ಸುಡುಮದ್ದುಗಳ ಸಂಭ್ರಮ ಧರ್ಮಸ್ಥಳದಲ್ಲಿಲ್ಲದಿರುವುದು ಗಮನಾರ್ಹ.  ಮಂಜಯ್ಯ ಹೆಗ್ಗಡೆಯವರ ಕಾಲದಲ್ಲಿ  ಒಮ್ಮೆ ಅಗ್ನಿ ಆಕಸ್ಮಿಕ ಉಂಟಾದ ಮೇಲೆ ಇದಕ್ಕೆ ಅಲ್ಲಿ ನಿಷೇಧ ಹೇರಲಾಯಿತು ಎಂದು ಹಿರಿಯರು ಹೇಳುತ್ತಿದ್ದುದನ್ನು ಕೇಳಿದ್ದೇನೆ.

ರಾತ್ರಿಯ ಸಮಯದಲ್ಲಿ ದೀಪೋತ್ಸವಕ್ಕೆ ಹೋದಾಗ ನಾವು ದೇವಸ್ಥಾನದ ಒಳಗೆ ಹೋಗುತ್ತಿದ್ದುದು ಕಮ್ಮಿ.  ಹೋದರೂ ಒಂದೈದು ನಿಮಿಷ ಅಲ್ಲಿದ್ದು ದೇವರಿಗೆ ಕೈ ಮುಗಿದು ಹೊರಗೆ ಬರುತ್ತಿದ್ದೆವು.  ಕಾಲು ನೋಯುವ ವರೆಗೆ  ಮತ್ತೆ ಪ್ರದಕ್ಷಿಣಾಕಾರ ಮತ್ತು ಅಪ್ರದಕ್ಷಿಣಾಕಾರವಾಗಿ ಅಂಗಡಿಗಳನ್ನು ಸುತ್ತಿ ದೇವರು ತೇರನ್ನೇರುವ ಹೊತ್ತಿಗೆ ಮನೆಯತ್ತ ಮುಖ ಮಾಡುತ್ತಿದ್ದೆವು. ಮೊದಲ ಕೆಲವು ವರ್ಷಗಳು ಸೂಟೆ ನಂತರ ಗ್ಯಾಸ್ ಲೈಟಿನ  ಬೆಳಕಿನಲ್ಲಿ ಬೇತಾಳನಂತೆ ಕಾಣುವ ಕಾಲುಗಳ ಉದ್ದುದ್ದ ನೆರಳುಗಳನ್ನು ನೋಡುತ್ತಾ, ಅದು ಇದು ಮಾತನಾಡುತ್ತಾ ಏಳು ಕಿಲೋ ಮೀಟರ್ ನಡೆದು ಮನೆ ಸೇರುವಾಗ ಬೆಳಗಿನ ಜಾವ ಮೂರು ಮೂರುವರೆ ಆಗುತ್ತಿತ್ತು.  ತಣ್ಣೀರಿನಲ್ಲಿ ಕೈಕಾಲು ಮುಖ ತೊಳೆದು  ಹಾಸಿಗೆ ಹಾಸಿ ಒರಗಿದಾಗ ದಣಿದ ಕಾಲುಗಳಿಗೆ ಸಿಗುತ್ತಿದ್ದ ಸುಖವನ್ನು ವರ್ಣಿಸಲಸಾಧ್ಯ.  ಕ್ಷಣಾರ್ಧದಲ್ಲಿ ನಿದ್ರೆ ಆವರಿಸಿ ನಾವು ಕೊಂಡು ತಂದ ವಸ್ತು ವಿಶೇಷದ ಕುರಿತಾದ ಕನಸು ಬೀಳುತ್ತಿತ್ತು.



Friday, 22 November 2024

ಮರೆಯಲ್ಲಡಗಿದ ಮಾಧುರ್ಯ - ಮದುವೆ ಮಾಡಿ ನೋಡು


ನಮ್ಮ ಊರ ಮನೆಯಂಗಳದಲ್ಲಿ ಒಂದು ಆಲ್ಫೊನ್ಸೊ ಮಾವಿನ ಮರವಿತ್ತು.  ಬುಡದಿಂದಲೇ ಗೆಲ್ಲುಗಳಿದ್ದ ಅದನ್ನು ಏರುವುದು ಬಲು ಸುಲಭವಾಗಿತ್ತು.   ಹೀಗಾಗಿ ತುದಿಗೆ ಗೋಣಿಚೀಲ ಅಳವಡಿಸಿದ ರಿಂಗ್ ಇರುವ ದೋಟಿಯ ಸಹಾಯದಿಂದ ಕೆಂಬಣ್ಣಕ್ಕೆ ತಿರುಗಿದ ಹಣ್ಣುಗಳನ್ನು ಕೊಯ್ಯುವ ಜವಾಬ್ದಾರಿಯನ್ನು ಸ್ವ ಇಚ್ಛೆಯಿಂದ ನಾನು ವಹಿಸಿಕೊಳ್ಳುತ್ತಿದ್ದೆ.  ಎದುರಿಗೆ ಕಾಣಿಸುವ ಹಣ್ಣುಗಳನ್ನೆಲ್ಲ ಕೊಯ್ದಾದ ಮೇಲೆ  ಎಲೆಗಳ ಮರೆಯಲ್ಲಿ ಅಡಗಿ ಕುಳಿತವುಗಳೇನಾದರೂ ಇನ್ನೂ ಇವೆಯೇ ಎಂದು ಪುನಃ ಪುನಃ ಪರಿಶೀಲಿಸುವುದಿತ್ತು.  ಹೀಗೆ ಮಾಡುವಾಗ ಮಾಗಿದ ಹಣ್ಣುಗಳ ಗೊಂಚಲೇನಾದರೂ   ಕಣ್ಣಿಗೆ ಬಿದ್ದರೆ ಆಗುತ್ತಿದ್ದ ಖುಶಿ ವರ್ಣಿಸಲಸದಳವಾದದ್ದು. ಇಂಥದ್ದೇ ಅನುಭವ ನನಗೆ ಮೊನ್ನೆ ಆದದ್ದು 1952ರಲ್ಲಿ ತೆಲುಗು ಮತ್ತು ತಮಿಳಿನಲ್ಲಿ ಸಂಯೋಜಿಸಲ್ಪಟ್ಟ ಮಾಧುರ್ಯಭರಿತ ಹಾಡುಗಳು 1965ರಲ್ಲಿ   ಕನ್ನಡ ರೂಪ ಪಡೆದುಕೊಂಡು ನಾನು ಅವುಗಳಲ್ಲಿ ಕೆಲವನ್ನು  2020ರಲ್ಲಿ ಮೊದಲ ಬಾರಿ ಆಲಿಸಿದಾಗ!

ಚಂದಮಾಮದ ವಿಜಯಾ ಸಂಸ್ಥೆ  1952ರಲ್ಲಿ ತೆಲುಗು ಭಾಷೆಯಲ್ಲಿ  ಪೆಳ್ಳಿ ಚೇಸಿ ಚೂಡು ಮತ್ತು ತಮಿಳಿನಲ್ಲಿ ಕಲ್ಯಾಣಮ್ ಪಣ್ಣಿ ಪಾರ್ ಎಂಬ ಹೆಸರಲ್ಲಿ ಏಕಕಾಲದಲ್ಲಿ ತಯಾರಿಸಿ ಜಯಭೇರಿ ಬಾರಿಸಿದ್ದ ಚಿತ್ರವನ್ನು   13 ವರ್ಷಗಳ ನಂತರ 1965ರಲ್ಲಿ ಮದುವೆ ಮಾಡಿ ನೋಡು ಎಂಬ ಹೆಸರಲ್ಲಿ ಮರು ನಿರ್ಮಿಸಿತ್ತು.  ಎನ್.ಟಿ. ರಾಮರಾವ್, ವರಲಕ್ಷ್ಮೀ, ಸಾವಿತ್ರಿ, ಎಸ್.ವಿ. ರಂಗರಾವ್ ಮುಂತಾದವರು ನಟಿಸಿದ್ದ ಮೂಲ ಚಿತ್ರವನ್ನು ನಿರ್ದೇಶಿಸಿದ್ದವರು ಆ ಮೇಲೆ ತನ್ನದೇ ಪ್ರಸಾದ್ ಪ್ರೊಡಕ್ಷನ್ಸ್ ಸಂಸ್ಥೆಯನ್ನು ಸ್ಥಾಪಿಸಿದ ಎಲ್.ವಿ. ಪ್ರಸಾದ್.  ಕನ್ನಡದಲ್ಲಿ ರಾಜಕುಮಾರ್, ಉದಯಕುಮಾರ್, ಕೆ.ಎಸ್. ಅಶ್ವತ್ಥ್,  ನರಸಿಂಹರಾಜು, ಆರ್. ನಾಗೇಂದ್ರ ರಾವ್, ಎಚ್.ಆರ್.ಶಾಸ್ತ್ರಿ,  ದ್ವಾರಕೀಶ್, ಲೀಲಾವತಿ, ವಂದನಾ, ರಮಾದೇವಿ,  ಜಯಶ್ರೀ ಮುಂತಾದವರ ತಾರಾಗಣವಿದ್ದ ಚಿತ್ರವನ್ನು ಹುಣಸೂರ್ ಕೃಷ್ಣಮೂರ್ತಿ ನಿರ್ದೇಶಿಸಿದ್ದರು.  ವಿಜಯಾ ಸಂಸ್ಥೆಯ ಮಹೋನ್ನತ ಚಿತ್ರ ಸತ್ಯಹರಿಶ್ಚಂದ್ರ ತಯಾರಾದದ್ದೂ ಅದೇ ವರ್ಷ. ಎರಡೂ ಚಿತ್ರಗಳ ನಿರ್ದೇಶಕರು ಹುಣಸೂರು ಅವರೇ ಆಗಿದ್ದು, ತಾರಾಗಣ ಕೂಡ ಸರಿಸುಮಾರಾಗಿ ಒಂದೇ ಇದ್ದದ್ದರಿಂದ ಹರಿಶ್ಚಂದ್ರದ ಚಿತ್ರೀಕರಣದ ವೇಳೆ ಇದ್ದಿರಬಹುದಾದ ಬಿಡುವನ್ನು ಬಳಸಿಕೊಂಡು ಮದುವೆ ಮಾಡಿ ನೋಡು  ಚಿತ್ರವನ್ನು ಹೆಚ್ಚು ಬಜೆಟ್ ಇಲ್ಲದೆ ಮರು ನಿರ್ಮಿಸಿರಬಹುದು ಎಂದು ನನ್ನ ಊಹೆ.  ಅದುವರೆಗೆ ತೆಲುಗಿನಿಂದ ಕನ್ನಡಕ್ಕೆ ತನ್ನ ಚಿತ್ರಗಳನ್ನು ಡಬ್ ಮಾಡುತ್ತಿದ್ದ ವಿಜಯಾ ಸಂಸ್ಥೆ ಈ ಚಿತ್ರಗಳನ್ನು ಕನ್ನಡ ತಾರಾಗಣದೊಂದಿಗೆ ಮರು ನಿರ್ಮಿಸುವ ಮೂಲಕ ಆ ಪದ್ಧತಿಯನ್ನು ಕೈ ಬಿಟ್ಟಿತು.


ವಿಧವೆ ಕಾವೇರಮ್ಮನಿಗೆ(ಜಯಶ್ರೀ)   ರಾಜು(ನರಸಿಂಹರಾಜು), ಸರಸು(ಲೀಲಾವತಿ) ಮತ್ತು ಗೋಪಿ(ಮಾಸ್ಟರ್ ಬಸವರಾಜ್) ಎಂಬ ಮೂರು ಜನ ಮಕ್ಕಳು.  ವೃತ್ತಿಯಲ್ಲಿ ಅಧ್ಯಾಪಕನಾಗಿದ್ದ ರಾಜು ಮದುವೆಗೆ ಬೆಳೆದು ನಿಂತ ತಂಗಿಯ ಬಗ್ಗೆ ಯೋಚಿಸದೆ ತಮ್ಮ ಗೋಪಿ ಜೊತೆ ಸೇರಿಕೊಂಡು ನಾಟಕ ಗೀಟಕ ಎಂದು ಊರೂರು ಸುತ್ತುತ್ತಿರುವುದು ಕಾವೇರಮ್ಮನಿಗೆ ಎಳ್ಳಷ್ಟೂ ಇಷ್ಟವಿರಲಿಲ್ಲ. ತನ್ನ ಮನೆಗೆ ಆಗಾಗ ಬರುತ್ತಿದ್ದ ಗೋವಿಂದಯ್ಯನೊಡನೆ(ಹೆಚ್.ಆರ್. ಶಾಸ್ತ್ರಿ) ತನ್ನ ಮಗಳಿಗೊಂದು ಗಂಡು ಹುಡುಕಿಕೊಡು ಎಂದು ಗೋಗರೆಯುತ್ತಿದ್ದಳು. ಗೋವಿಂದಯ್ಯನಿಗಾದರೋ ತನ್ನ ಮಗಳು ಪುಟ್ಟಿಯನ್ನು(ರಮಾ) ಆಕೆಯ ಮೇಲೆ ಕಣ್ಣಿಟ್ಟಿದ್ದ ತನ್ನ ತಂಗಿಯ ಮಗ ಒರಟ ಪೈಲ್ವಾನ್ ಭೀಮಣ್ಣನಿಂದ(ಉದಯ ಕುಮಾರ್) ದೂರ ಮಾಡಿ ರಾಜುವಿನ ಕೊರಳಿಗೆ ಕಟ್ಟಬೇಕೆಂಬ ಅಭಿಲಾಷೆ. ಗೋವಿಂದಯ್ಯ ತನ್ನ ತಂಗಿಗೆ ಗಂಡು ಹುಡುಕಿ ಕೊಡುವುದು ಅಷ್ಟರಲ್ಲೇ ಇದೆ ಎಂದು ಅರಿತ ರಾಜು  ಈ ಕೆಲಸ ಮುಗಿಸದೆ ಮರಳುವುದಿಲ್ಲ ಎಂದು ಶಪಥ ಮಾಡಿ ತನ್ನ ತಮ್ಮ ಗೋಪಿಯ ಜೊತೆ ಊರು ಬಿಟ್ಟು ಹೊರಡುತ್ತಾನೆ.  ಹೀಗೆ ತಿರುಗುತ್ತಿರುವಾಗ ಒಂದೂರಿನಲ್ಲಿ ವಿಕ್ಷಿಪ್ತ ಪ್ರವೃತ್ತಿಯ ಪರಮೇಶ್ವರಯ್ಯ(ಕೆ.ಎಸ್. ಅಶ್ವತ್ಥ್) ಎಂಬವರ  ಮನೆ ಸೇರುತ್ತಾನೆ. ತಾನು ಹೊರಟದ್ದು ತಂಗಿಗೆ ಗಂಡು ಹುಡುಕಲೆಂದಾದರೂ  ಯೋಗಾಯೋಗದಿಂದ ಪರಮೇಶ್ವರಯ್ಯನ ಮಗಳ ಜೊತೆ ಆತನ ಮದುವೆಯೇ ಮೊದಲು ನಡೆಯುತ್ತದೆ. ಸರಸುಗೆ ತಾನು ಮದುವೆ ಮಾಡಿಸುವುದಾಗಿ  ಪರಮೇಶ್ವರಯ್ಯ ಮಾತು ಕೊಡುತ್ತಾನೆ. ಅದರಂತೆ ತನ್ನ ಸ್ನೇಹಿತ ವೆಂಕಟಪತಿಯ(ಅರ್.ನಾಗೇಂದ್ರ ರಾವ್) ಮಗ ಲಾಯರ್ ಶ್ರೀನಿವಾಸನ(ರಾಜಕುಮಾರ್) ಜೊತೆ ಸಂಬಂಧವನ್ನೂ ಕುದುರಿಸುತ್ತಾನೆ.  ಆದರೆ ಕಡು ಲೋಭಿಯಾದ ವೆಂಕಟಪತಿ ದೊಡ್ಡ ಮೊತ್ತದ ವರದಕ್ಷಿಣೆ ಕೇಳುತ್ತಾನೆ.  ತನ್ನಲ್ಲಿ ಬಿಡುಗಾಸಿಲ್ಲದಿದ್ದರೂ ಮದುವೆಯೊಂದು ಆಗಿ ಹೋಗಲಿ, ಆ ಮೇಲೆ ನೋಡಿಕೊಂಡರಾಯಿತು ಎಂದು ಯೋಚಿಸಿದ ಪರಮೇಶ್ವರಯ್ಯ ಇದಕ್ಕೆ ಒಪ್ಪುತ್ತಾನೆ. ತನ್ನ ಮಗಳು ಪುಟ್ಟಿಯ ಸಂಬಂಧ ತಪ್ಪಿ ಹೋಯಿತಲ್ಲಾ ಎಂದು ಕರುಬಿದ ಗೋವಿಂದಯ್ಯ ಮದುವೆ ಮಂಟಪದಲ್ಲಿ ಹಾಜರಾಗಿ ಸ್ಥಳದಲ್ಲೇ ನಗದು ರೂಪದ ವರದಕ್ಷಿಣೆ ಬೇಕೆಂದು ಪಟ್ಟು ಹಿಡಿಯುವಂತೆ ವೆಂಕಟಪತಿಯ ಕಿವಿಯೂದುತ್ತಾನೆ. ಪರಮೇಶ್ವರಯ್ಯ ಏನೇನೋ ಉಪಾಯ ಹೂಡಿದರೂ ಪ್ರಯೋಜನವಾಗದೆ ಮದುವೆ ಮುರಿದು ಬೀಳುತ್ತದೆ.  ಆದರೆ ವರ ಶ್ರೀನಿವಾಸನಿಗೆ ವಿಷಯ ತಿಳಿದು ಆತ ರಹಸ್ಯವಾಗಿ ಸರಸುವನ್ನು ತನ್ನ ಜೊತೆ ಕರೆದೊಯ್ಯುತ್ತಾನೆ.  ತಂದೆ ವೆಂಕಟಪತಿಗೆ ಈ ವಿಷಯ ತಿಳಿಯಬಾರದೆಂದು ತಾನು ಹುಚ್ಚನಂತೆ ನಟಿಸುತ್ತಾ ರಾಜುವನ್ನು ಡಾಕ್ಟರಾಗಿಸಿ ಸರಸು ನರ್ಸ್ ವೇಷ ಧರಿಸುವಂತೆ ಮಾಡುತ್ತಾನೆ. ವೆಂಕಟಪತಿಗೆ ನರ್ಸಮ್ಮನ ನಡವಳಿಕೆ ಇಷ್ಟವಾಗತೊಡಗುತ್ತದೆ. ಆಕೆಯೇ ತನ್ನ ಸೊಸೆ ಸರಸು ಎಂದೂ ಆತನಿಗೆ ತಿಳಿಯುತ್ತದೆ.  ಎಲ್ಲವೂ ಸುಖಾಂತ್ಯವಾಗುತ್ತದೆ.

ಮೂಲ ತಮಿಳು ತೆಲುಗು ಭಾಷೆಗಳಲ್ಲಿದ್ದ ಚಿತ್ರಕ್ಕೆ  ಸಂಗೀತ ನಿರ್ದೇಶನ ಮಾಡಿದ್ದ ಘಂಟಸಾಲ ಅವರೇ ಕನ್ನಡದಲ್ಲೂ ಆ ಹೊಣೆಯನ್ನು ವಹಿಸಿಕೊಂಡು 13 ವರ್ಷ ಹಿಂದಿನ ಅವೇ ಧಾಟಿಯ ಹಾಡುಗಳನ್ನು ಹುಣಸೂರರ ಸಾಹಿತ್ಯದೊಂದಿಗೆ ಮರುಸೃಷ್ಟಿ ಮಾಡಿದ್ದರು.  ದೂರದರ್ಶನದಲ್ಲೂ ಒಂದೆರಡು ಬಾರಿ ಪ್ರಸಾರವಾಗಿದ್ದ ಮದುವೆ ಮಾಡಿ ನೋಡು ಚಿತ್ರ  ಯೂಟ್ಯೂಬಲ್ಲಿ ಲಭ್ಯವಿದ್ದರೂ ನಾನು ಅದನ್ನು ಪೂರ್ತಿಯಾಗಿ ನೋಡಿದ್ದು ಇತ್ತೀಚೆಗೆ. ಒಂದೆರಡು ಹಾಡುಗಳನ್ನು ಕ್ಯಾಸೆಟ್, ರೇಡಿಯೊಗಳಲ್ಲಿ ಮೊದಲೇ ಕೇಳಿದ್ದರೂ ಇನ್ನೂ ಇಷ್ಟೊಂದು ಆಕರ್ಷಕ ಹಾಡುಗಳು ಅದರಲ್ಲಿವೆಯೆಂದು ಗೊತ್ತಿರಲಿಲ್ಲ. ಅಂದಿನವರು ಸರಳ ವಾದ್ಯೋಪಕರಣಗಳನ್ನು ಬಳಸಿ ವೈವಿಧ್ಯಮಯ ಹಾಡುಗಳನ್ನು ಸೃಷ್ಟಿಸುತ್ತಿದ್ದ ರೀತಿ ಅಚ್ಚರಿ ಮೂಡಿಸುತ್ತದೆ. ಈಗಿನ ಕಾಲದ ಹತ್ತು ಹಾಡುಗಳ ಪೈಕಿ ಒಂಭತ್ತರಲ್ಲಿ ಒಂದೇ ರಿದಂ ಪ್ಯಾಟರ್ನ್ ಮರುಕಳಿಸುವುದನ್ನು ನಾವು ಕಾಣುತ್ತೇವೆ.  ಆದರೆ ತಾಳವಾದ್ಯಗಳು ಮತ್ತು ಇತರ ಸಂಗೀತೋಪಕರಣಗಳ  ಬಳಕೆಯಲ್ಲಿ ಇರುತ್ತಿದ್ದ ವೈವಿಧ್ಯ ಆ ಕಾಲದ ಹಾಡುಗಳ ಯಶಸ್ಸಿನ ಗುಟ್ಟು ಅನಿಸುತ್ತದೆ.  ಆಗಿನ ಸುಸ್ಪಷ್ಟ ಧ್ವನಿಮುದ್ರಣದ ತಂತ್ರಜ್ಞಾನವಂತೂ ಅತ್ಯದ್ಭುತ.

ಈಗ ಮರೆಯಲ್ಲಿ ಅಡಗಿದ್ದ ಆ ಹಾಡುಗಳ ಮಾಧುರ್ಯವನ್ನು ಒಂದೊಂದಾಗಿ ಸವಿಯೋಣ. ಹೆಡ್ ಫೋನ್ ಬಳಸಿ ಆಲಿಸಿದರೆ ಒಳ್ಳೆಯದು.

1. ಮದುವೆ ಮಾಡಿ ನೋಡೋಣ ನಾವು

ಇದು ರಾಜು ಮತ್ತು ಗೋಪಿ ಸರಸುಗೆ ಗಂಡು ಹುಡುಕಲು ಹೋಗುವ ಸಂದರ್ಭದ ಹಾಡು. ಧ್ವನಿಗಳು ಪೀಠಾಪುರಂ ನಾಗೇಶ್ವರ ರಾವ್ ಮತ್ತು ಬಿ.ಕೆ.ಸುಮಿತ್ರಾ ಅವರವು.  ಘಂಟಸಾಲ ಅವರು ತಾನು ಹಾಡದ  ಇತರ ಪಾತ್ರಗಳಿಗೆ ಬಳಸುತ್ತಿದ್ದ ಮಾಧವಪೆದ್ದಿ ಸತ್ಯಂ ಅವರ ಬದಲಿಗೆ ಇಲ್ಲಿ ಪೀಠಾಪುರಂ ಇರುವುದು ವಿಶೇಷ. ಮಾಯಾ ಬಜಾರ್ ಚಿತ್ರದ ‘ಸುಂದರಿ ನಾವಿಂಥ ದಿವ್ಯ ಸ್ವರೂಪವ’ ಹಾಡನ್ನು ಮೊದಲು ಪೀಠಾಪುರಂ ಅವರಿಂದ ಹಾಡಿಸಿ ಸರಿ ಕಾಣದೆ ಮತ್ತೆ ತಾವೇ ಹಾಡಿದ್ದಂತೆ.



2. ಯಾರ್ ಬರ್ತಾರೋ ನೋಡೋಣ

ಅಪ್ಪ ತನ್ನನ್ನು ಇನ್ಯಾರಿಗಾದರೂ ಮದುವೆ ಮಾಡಿ ಕೊಟ್ಟರೆ ಏನು ಮಾಡುವುದು ಎಂದು ಪುಟ್ಟಿ ಆತಂಕ ವ್ಯಕ್ತ ಪಡಿಸಿದಾಗ ಆಕೆಗೆ ಧೈರ್ಯ ತುಂಬುತ್ತಾ ಪೈಲ್ವಾನ್ ಭೀಮಣ್ಣ  ಹಾಡುವ ಹಾಡು ಇದು. ಘಂಟಸಾಲ ಮತ್ತು ಬಿ.ಕೆ.ಸುಮಿತ್ರಾ ಹಾಡಿದ್ದಾರೆ.   ಸಂಭಾಷಣಾ ರೂಪದಲ್ಲಿರುವ ಸಾಲುಗಳ ಸ್ಪಷ್ಟ ಉಚ್ಚಾರ ಗಮನಿಸಿದರೆ ಘಂಟಸಾಲ ಕನ್ನಡದವರಲ್ಲ ಎಂದು ಯಾರೂ ಹೇಳಲಾರರು.



3. ಮದುವೆ ಮಾಡಿಕೊಂಡು ಮನೆಯ ಹೂಡಿಕೊಂಡು

ಪತ್ನಿಯ ಮನೆಯಲ್ಲಿ ರಹಸ್ಯವಾಗಿ ಇರುವಾಗ ಶ್ರೀನಿವಾಸ ಸ್ವತಃ ಹಾರ್ಮೋನಿಯಮ್ ನುಡಿಸಿಕೊಂಡು ಹಾಡುವ ಈ ಹಾಡು ಘಂಟಸಾಲ ಅವರ ಹಾಡುಗಳ HMV ಕ್ಯಾಸೆಟ್ಟಲ್ಲಿ ಇತ್ತು.   ಹಾರ್ಮೋನಿಯಮ್ ನುಡಿಸುವುದು ಸಹಜವಾಗಿ ಕಾಣಬೇಕೆಂದು ಘಂಟಸಾಲ ಅವರು ಇದರ ತೆಲುಗು  ಅವತರಣಿಕೆಯಲ್ಲಿ ನಟಿಸಿದ ಎನ್.ಟಿ. ರಾಮರಾವ್ ಅವರಿಗೆ ಕೆಲವು ದಿನ ಸಂಗೀತ ಪಾಠ ಹೇಳಿಕೊಟ್ಟಿದ್ದರಂತೆ.  ಆದರೆ ಶ್ರೀನಿವಾಸನ ಪಾತ್ರದ  ರಾಜಕುಮಾರ್ ಅವರಿಗೆ ಅದರ ಅಗತ್ಯ ಬಿದ್ದಿರಲಿಕ್ಕಿಲ್ಲ. ಇದರ ಸಾಹಿತ್ಯವೂ ಬಲು ಅರ್ಥಪೂರ್ಣವಾಗಿದ್ದು 60ರ ದಶಕದಲ್ಲಿ ಆಗಷ್ಟೇ ಆರಂಭವಾಗಿದ್ದ ಕುಟುಂಬ ಯೋಜನೆಯ ಕಿರು ಸಂದೇಶವನ್ನೂ ಒಳಗೊಂಡಿದೆ.  ಆದರೆ 1952ರ ಮೂಲ ತೆಲುಗು ಹಾಡಿನಲ್ಲಿ ಅದರ ಉಲ್ಲೇಖ ಇದ್ದಿರಲಾರದು.



4. ಪುರಾಣ ವಾಚನ

ವೆಂಕಟಪತಿಯ ಪಾತ್ರ ವಹಿಸಿದ ಆರ್. ನಾಗೇಂದ್ರರಾಯರು ಸ್ವತಃ ವಾಚಿಸಿದ ಈ ಪುರಾಣ ಕೇಳಿದವರು ಮೂಗಿನ ಮೇಲೆ ಬೆರಳಿಡುವಂತಿದೆ. ವಸಂತಸೇನಾ ಮತ್ತು ಆನಂದ ಬಾಷ್ಪ ಚಿತ್ರದ ಹಾಡುಗಳಲ್ಲಿ ರಾಯರ ಧ್ವನಿ ಕೇಳಿಸಿತ್ತಾದರೂ  ಅವರು ಇಷ್ಟು ಒಳ್ಳೆಯ ಗಮಕಿ ಎಂಬ ಕಲ್ಪನೆಯೂ ನನಗಿರಲಿಲ್ಲ.   ಅವರ ಈ ಪ್ರತಿಭೆಯನ್ನು ಹೆಚ್ಚು ಯಾಕೆ ಬಳಸಿಕೊಳ್ಳಲಾಗಿಲ್ಲವೋ ತಿಳಿಯದು.



 
5. ಮನಸೇ ನಾ ಯಾರೋ ನೀನು ಬಲ್ಲೆಯಾ

ಪಿ. ಸುಶಿಲಾ ಅವರ ಧ್ವನಿಯಲ್ಲಿರುವ ಈ ಹಾಡು ನರ್ಸ್ ರೂಪದಲ್ಲಿರುವ ಸರಸು ಹಾಡುವುದು. ಇದನ್ನು ಶಾರ್ಟ್ ವೇವ್ ವಿವಿಧಭಾರತಿಯ ಮಧುರ್ ಗೀತಂ ಕಾರ್ಯಕ್ರಮದಲ್ಲಿ ಕೆಲವು ಸಲ ಕೇಳಿದ ನೆನಪಿದೆ.



6. ಮನಸನಾಳೊ ಮನಸೆ

ನಾ ಯಾರೋ ನೀನು ಬಲ್ಲೆಯಾ ಹಾಡಿಗೆ ಉತ್ತರ ರೂಪದಲ್ಲಿರುವಂತಿದೆ ಘಂಟಸಾಲ ಅವರ ಧ್ವನಿಯಲ್ಲಿರುವ ಈ ಹಾಡು. ಮನಸು ಶಬ್ದದ ಪುನರಾವರ್ತನೆ ಇದರ ವಿಶೇಷ. ಚಂದ್ರಮುಖಿ ಪ್ರಾಣಸಖಿಯ ಮನಸಿನ ಹಾಡಿಗೆ ಇದೇ ಸ್ಪೂರ್ತಿಯೋ ಏನೋ!  ಅನೇಕರ ಈಗಿನ  ಕೆಲವು  FB ಪೋಸ್ಟುಗಳನ್ನು ಗಮನಿಸಿ ಎಚ್ಚರಿಕೆ ನೀಡಿದಂತಿದೆ ದಶಕಗಳ ಹಿಂದಿನ ಇದರ ಸಾಹಿತ್ಯ.



7. ವೇಂಕಟಾಚಲ ವಾಸ ಹೇ ಶ್ರೀನಿವಾಸ

ಚಿತ್ರದ ಅತಿ ಜನಪ್ರಿಯ ಹಾಡು ಇದು.  ರೇಡಿಯೊದಲ್ಲೂ ಆಗಾಗ ಕೇಳಲು ಸಿಗುತ್ತಿತ್ತು. ಮೇಲ್ನೋಟಕ್ಕೆ ವೇಂಕಟಾಚಲವಾಸ ಎಂಬುದು ತಪ್ಪು ಉಚ್ಚಾರವೆಂದು ಭಾಸವಾದರೂ ಭಾಷಾ ಶಾಸ್ತ್ರಿಗಳು ಹೇಳುವಂತೆ ವೇಂಕಟೇಶ, ವೇಂಕಟಾಚಲ  ಇವೇ ಸರಿಯಾದ ರೂಪಗಳು. ಸಂಸ್ಕೃತದಲ್ಲಿ ‘ವೆ’ ಎಂಬ ಹೃಸ್ವ ರೂಪವೇ ಇಲ್ಲ. ಚಕ್ರವಾಕ ರಾಗದ ಈ ರಚನೆಯನ್ನು ಪಿ. ಸುಶೀಲಾ ಅವರು ಕಪ್ಪು1(C Sharp) ಶ್ರುತಿಯಲ್ಲಿ ಅತಿ ಮಧುರವಾಗಿ ಹಾಡಿದ್ದಾರೆ. ಇದರ ತೆಲುಗು ವರ್ಷನ್ ಏಳು ಕೊಂಡಲವಾಡವನ್ನು ಪಿ. ಲೀಲಾ ಕೆಳಗಿನ ಕಪ್ಪು5(A Sharp) ಶ್ರುತಿಯಲ್ಲಿ ಅಷ್ಟೇ ಮಧುರವಾಗಿ ಹಾಡಿದ್ದರು. ಎರಡೂ ಹಾಡುಗಳನ್ನು ಇಲ್ಲಿ ಕೇಳಬಹುದು.  ಈ ಹಾಡನ್ನು ತೆಲುಗಿನಲ್ಲಿ ಮೊದಲು ಜಿಕ್ಕಿ ಅವರ ಧ್ವನಿಯಲ್ಲಿ ಧ್ವನಿಮುದ್ರಿಸಿ ಆ ಮೇಲೆ ಲೀಲಾ ಅವರಿಂದ ಹಾಡಿಸಲಾಯಿತಂತೆ. ಇದನ್ನು ಕೇಳಿದಾಗ ಶ್ರೀನಿವಾಸ ಕಲ್ಯಾಣ ಚಿತ್ರದ ಸ್ವಾಮಿ ಶ್ರೀನಿವಾಸ ಮತ್ತು ಪವಡಿಸು ಪರಮಾತ್ಮ ಹಾಡುಗಳು ನೆನಪಾಗುತ್ತವೆ.




8. ಅಳಬೇಡ ಮುದ್ದು ಕಂದಯ್ಯ

ಜೆ.ವಿ.ರಾಘವುಲು, ಬಿ.ವಸಂತ ಮತ್ತು ಬಿ.ಕೆ.ಸುಮಿತ್ರಾ ಅವರ ಧ್ವನಿಯಲ್ಲಿ ಆನಂದಭೈರವಿ ರಾಗದಲ್ಲಿರುವ ವಿಶಿಷ್ಟ ಶೈಲಿಯ  ಜೋಗುಳ ಇದು.  ಸೇವಕ ಸಿಂಹಾದ್ರಿಯ ತಮಾಷೆ ಶೈಲಿಯಲ್ಲಿ ಆರಂಭವಾಗಿ ಅತ್ತಿಗೆ ನಾದಿನಿಯರ ಸರಸ ಸಂವಾದವಾಗಿ ಮುಂದುವರೆಯುತ್ತದೆ.



9. ಭಯವ್ಯಾತಕೆ ಪುಟ್ಟಿ ಭಯವ್ಯಾತಕೆ

ಪರಸ್ಪರ ಪ್ರೀತಿಸುತ್ತಿದ್ದ ಪುಟ್ಟಿ ಮತ್ತು ಪೈಲ್ವಾನ್ ಭೀಮಣ್ಣನ ಮದುವೆಯನ್ನು ಪರಮೇಶ್ವರಯ್ಯ ಸರಳವಾಗಿ ಮಾಡಿಸುತ್ತಾರೆ. ಇದನ್ನು ವಿರೋಧಿಸುತ್ತಿದ್ದ ತಂದೆ ತಾಯಿಗಳು ಏನು ಮಾಡುವರೋ ಎಂದು ಆಕೆ ಭಯಪಟ್ಟಾಗ ಭೀಮಣ್ಣ ಘಂಟಸಾಲ ಅವರ ಧ್ವನಿಯಲ್ಲಿ ಈ ರೀತಿ ಸಮಾಧಾನ ಹೇಳುತ್ತಾನೆ.



10. ಏನಮ್ಮಾ ಮುಂದೇನಮ್ಮಾ

ಹಿನ್ನೆಲೆಯ ಈ ಹಾಡನ್ನು ಜೆ.ವಿ. ರಾಘವುಲು ಹಾಡಿದ್ದಾರೆ.  ಜೇನುಗೂಡು ಚಿತ್ರದ ಜಿಗಿಜಿಗಿಯುತ ನಲಿ ಅವರ ಜನಪ್ರಿಯ ಹಾಡು. ಅವರು ಸ್ವತಃ ಸಂಗೀತ ನಿರ್ದೇಶಕ ಕೂಡ ಆಗಿದ್ದವರು. ಟೈಟಲ್ಸಲ್ಲಿ ಉಲ್ಲೇಖ ಇಲ್ಲದಿದ್ದರೂ ಈ ಚಿತ್ರದ  ಸಹಾಯಕ ಸಂಗೀತ ನಿರ್ದೇಶಕ/ಅರೇಂಜರ್  ಕೂಡ ಅವರೇ ಆಗಿರಬಹುದು. ವೀರಕೇಸರಿ ಮುಂತಾದ ಘಂಟಸಾಲ ಸಂಗೀತದ ಚಿತ್ರಗಳಲ್ಲಿ ಸಹಾಯಕನಾಗಿ ಅವರ ಹೆಸರಿದೆ. ಈ ಹಾಡಿನ  ಶಹನಾಯಿ interlude  ಪಾರ್ ಮಗಳೆ ಪಾರ್ ಚಿತ್ರದ ಮಧುರಾ ನಗರಿಲ್ ತಮಿಳ್ ಸಂಗಂ ಹಾಡನ್ನು ನೆನಪಿಸುತ್ತದೆ.



11. ಯಾರೋ ಯಾರೋ

ಎಕಾರ್ಡಿಯನ್, ಗಿಟಾರ್ ಇತ್ಯಾದಿಗಳ ಆಧುನಿಕ ಆರ್ಕೆಸ್ಟ್ರೇಶನ್ ಉಳ್ಳ ಈ  ಯುಗಳ ಗೀತೆಯನ್ನು ಘಂಟಸಾಲ ಮತ್ತು ಪಿ.ಸುಶೀಲಾ ಹಾಡಿದ್ದಾರೆ.  ಯೂಟ್ಯೂಬಲ್ಲಿರುವ ಚಿತ್ರದಲ್ಲಿ ಈ ಹಾಡು ಇಲ್ಲ. ಆದರೆ ಹಾಡಿನ  ಆಡಿಯೋ ಲಭ್ಯವಿದೆ. ಕೆಲವೊಮ್ಮೆ ರೇಡಿಯೊದಲ್ಲೂ ಕೇಳಿಬರುತ್ತದೆ.



ಈ ಚಿತ್ರದಲ್ಲಿ ಬ್ರಹ್ಮಯ್ಯಾ ಓ ಬ್ರಹ್ಮಯ್ಯಾ, ಎಲ್ಲಿರುವೆ ಪ್ರಿಯಾ ಮತ್ತು ಅಮ್ಮಾ ವೇದನೆ ಎಂಬ ಇನ್ನೂ ಮೂರು ಹಾಡುಗಳಿವೆ. ಅವು ಇನ್ನೂ ಸಿಕ್ಕಿಲ್ಲ.

ಹಳೆ ಹಾಡುಗಳು ಹಿಂದಿನ ನೆನಪುಗಳಿಗೆ ತಳಕು ಹಾಕಿಕೊಂಡಿರುವುದರಿಂದ ಇಷ್ಟವಾಗುತ್ತವೆ ಎಂದು ಹೇಳುವುದುಂಟು.  ಆದರೆ ಹಿಂದೆ ಒಮ್ಮೆಯೂ ಕೇಳದಿದ್ದರೂ ಇಂಥ ಹಾಡುಗಳೇಕೆ ಹಿತವೆನಿಸುತ್ತವೆ ಎಂಬುದು ಯೋಚಿಸಬೇಕಾದ ವಿಚಾರ.

ಇದೇ ಚಿತ್ರವನ್ನು ಎಲ್.ವಿ.ಪ್ರಸಾದ್ ಅವರು 1972ರಲ್ಲಿ ಜಿತೇಂದ್ರ, ರಾಖಿ, ಶತ್ರುಘ್ನ ಸಿನ್ಹಾ ಮುಂತಾದವರ ತಾರಾಗಣದೊಂದಿಗೆ ಶಾದೀ ಕೆ ಬಾದ್ ಎಂಬ ಹೆಸರಲ್ಲಿ ಮರು ನಿರ್ಮಿಸಿದರು. ಸಂಗೀತ ನಿರ್ದೇಶಕ  ಲಕ್ಷ್ಮೀ-ಪ್ಯಾರೇ ಯಾವುದೇ ಧಾಟಿಗಳ ಮರುಬಳಕೆ ಮಾಡದೆ ಸ್ವಂತ ಹಾಡುಗಳನ್ನು ಸೃಷ್ಟಿಸಿದ್ದರು.  ಆ ಸಮಯದಲ್ಲಿ ಖಗ್ರಾಸ ಕಿಶೋರ್  ಗ್ರಹಣಗ್ರಸ್ತರಾಗಿದ್ದ ರಫಿಯ ಒಂದು ಹಾಡು ಅದರಲ್ಲಿತ್ತೆಂಬ ಒಂದೇ ಕಾರಣಕ್ಕಾಗಿ ನಾನು ಆ ಚಿತ್ರವನ್ನು ನೋಡಿದ್ದೆ! ಅದು ಮದುವೆ ಮಾಡಿ ನೋಡು ಚಿತ್ರದ ಅವತರಣಿಕೆ ಎಂದು ನನಗಾಗ ಗೊತ್ತಿರಲಿಲ್ಲ.
<!- 2-2-2020 -->










Tuesday, 12 November 2024

ನಮಗೆ ದೀಪಾವಳಿಯಾಗಿದ್ದ ಗುಂಡಿ ದೀಪ

   
    
ಎಲ್ಲ ಕಡೆ ದೀಪಾವಳಿ ಸಮಯದಲ್ಲಿ ಸುಡುಮದ್ದು ಸಿಡಿಸುವ ಸಂಪ್ರದಾಯವಿದ್ದರೆ ಆ ಕಾಲದಲ್ಲಿ  ನಮ್ಮ ಕೈಗೆ ಪಟಾಕಿ, ಸುರುಸುರು ಕಡ್ಡಿಗಳು ಬರುತ್ತಿದ್ದುದು  ಗುಂಡಿ   ದೀಪವೆಂದೇ ಖ್ಯಾತವಾದ,  ಉತ್ಥಾನ ದ್ವಾದಶಿಯಂದು ಆರಂಭಗೊಂಡು ಹುಣ್ಣಿಮೆಯ ದಿನ ಸಮಾಪನಗೊಳ್ಳುವ ಮುಂಡಾಜೆ ಶ್ರೀ ಗುಂಡಿ ಲಕ್ಷ್ಮೀನಾರಾಯಣ ದೇವಸ್ಥಾನದ  ಕಾರ್ತಿಕ ದೀಪೋತ್ಸವದ ಸಮಯದಲ್ಲಿ.  ಇದು ಒಂದು ಮನೆತನಕ್ಕೆ ಸೇರಿದ ಖಾಸಗಿ ದೇವಸ್ಥಾನವಾದರೂ  ಊರಿನವರಿಗೆಲ್ಲ ಅದು "ನಮ್ಮ ದೇವಸ್ಥಾನ".  ನಾವು "ಮನೆಗೆ ಹೋಗುತ್ತೇನೆ" ಎಂದು ಹೇಳಿದರೆ  ಹೇಗೆ ನಮ್ಮ ಮನೆಗೆಂದು ಅರ್ಥವೋ ಹಾಗೆಯೇ "ದೇವಸ್ಥಾನಕ್ಕೆ ಹೋಗಿ ಬರುತ್ತೇನೆ" ಎಂದರೆ ಗುಂಡಿ ದೇವಸ್ಥಾನಕ್ಕೆ ಎಂದೇ ಅರ್ಥ. ನಮ್ಮ ಕುಟುಂಬಕ್ಕಂತೂ ಅದರೊಡನೆ ಅವಿನಾಭಾವ ಸಂಬಂಧ. ನಮ್ಮ ಹಿರಿಯಣ್ಣ ಅಲ್ಲಿ  ನಾಲ್ಕು ದಶಕಗಳಿಗೂ ಹೆಚ್ಚು ಸಮಯ ಪೂಜಾ ಕೈಂಕರ್ಯ ಕೈಗೊಂಡವರು.  ನಾನೂ ಶಾಲಾ ಜೀವನದ ಹೆಚ್ಚಿನ ವರ್ಷಗಳನ್ನು ಆ ದೇವಸ್ಥಾನದ ವಠಾರದಲ್ಲೇ ಕಳೆದವನು. ಇಲ್ಲಿರುವಂತಹ ಅಚ್ಚುಕಟ್ಟು, ಸ್ವಚ್ಛತೆಗಳನ್ನು ನಾನು ಬೇರೆಲ್ಲಿಯೂ ಕಂಡಿಲ್ಲ.  ಇಲ್ಲಿಯಂತಹ  ನೀಟಾಗಿ ಕತ್ತರಿಸಿದ ಹುಲ್ಲುಗಾವಲಿನ  ಹೊರಸುತ್ತೂ ಬೇರೆಡೆ ಇಲ್ಲ.

ಕಾರ್ತೀಕ ಶುದ್ಧ ಏಕಾದಶಿಯಂದು ರಾತ್ರೆ ಸರಳ ದೀಪಾರಾಧನೆಯೊಂದಿಗೆ ಇಲ್ಲಿಯ ದೀಪೋತ್ಸವಕ್ಕೆ ಚಾಲನೆ ಸಿಗುತ್ತಿತ್ತು.  ಆ ದಿನ ಸಕ್ಕರೆ ಬೆರೆಸಿದ  ಕೊಬ್ಬರಿಯ ಪ್ರಸಾದ. ಮರುದಿನ ದ್ವಾದಶಿಯಂದು ಬೆಳಗ್ಗೆ ತುಳಸಿಪೂಜೆ ಹಾಗೂ ದೇವಳದ ಎದುರಿನ ಗುಡ್ಡಕ್ಕೆ ದೇವರ ಬಲಿ ಹೋಗಿ ನೆಲ್ಲಿಮರದ ಅಡಿಯಲ್ಲಿ ನಡೆಯುವ ಧಾತ್ರಿ ಪೂಜನ. ದ್ವಾದಶಿಯಿಂದ ಹುಣ್ಣಿಮೆವರೆಗೂ  ಮಧ್ಯಾಹ್ನ ಹವನ, ಪಾರಾಯಣಗಳಂತಹ ವೈದಿಕ ಕಾರ್ಯಕ್ರಮಗಳು, ರಾತ್ರೆ  ದೇವರ ಉತ್ಸವ.  ಅಷ್ಟು ದಿನವೂ ಮಧ್ಯಾಹ್ನ ಅನ್ನ ಸಂತರ್ಪಣೆ ಹಾಗೂ ರಾತ್ರೆ ಉತ್ಸವದ ನಂತರ  ಒಗ್ಗರಣೆ ಅವಲಕ್ಕಿ, ಬಾಳೆಹಣ್ಣು ಮತ್ತು ಶುಂಠಿ ಏಲಕ್ಕಿ ಮಿಶ್ರಿತ ಬಿಸಿ ನೀರು.  ಸಂಜೆ ಗ್ಯಾಸ್ ಲೈಟುಗಳನ್ನು ಉರಿಸುವಾಗ ಪಕ್ಕದಲ್ಲಿ ನಿಂತು ಅವುಗಳ ಹೊಳೆಯುವ ಮೈಯಲ್ಲಿ ಕಾಣಿಸುವ ಅಕರಾಳ ವಿಕರಾಳ ಮುಖಗಳನ್ನು ನೋಡುವುದು ಆಗಿನ ಒಂದು ಪ್ರಮುಖ ಆಕರ್ಷಣೆ.  ಆ ಹೊತ್ತಿಗೆ ಆಯ್ದ ಮಂದಿಗೆ ಪಾಕ ಶಾಲೆಯಲ್ಲಿ ವಿಶೇಷ ಚಹಾ ಪಾನದ ವ್ಯವಸ್ಥೆಯೂ ಇತ್ತು. 

ದೀವಟಿಗೆ ಸಲಾಂ



ನಮ್ಮ ಜಿಲ್ಲೆಯ ಅನೇಕ ಕಡೆ ಇರುವಂತೆ ಇಲ್ಲಿಯೂ ದೀವಟಿಗೆ ಸಲಾಂ ಸಂಪ್ರದಾಯ ಇತ್ತು. ಹಿಂದೆ ಪ್ರತಿ ದಿನವೂ  ವೇಸ್ಟಿ ಉಡಿಸಿದ ಮರದ ಬೊಂಬೆಗಳು ಹೊರುವ ಪಲ್ಲಕ್ಕಿಯನ್ನೊಳಗೊಂಡ ಬಂಡಿಯಲ್ಲಿ ದೇವರನ್ನು ಕೂರಿಸಿ ಎಳೆಯುವ ಸಂಪ್ರದಾಯವಿತ್ತು.   ಹುಣ್ಣಿಮೆಯ ದೊಡ್ಡ ದೀಪೋತ್ಸವದ ದಿನ ಎದುರಿನ ಗುಡ್ಡದ ಮೇಲಿನ ಕಟ್ಟೆಯಲ್ಲಿ ಅಷ್ಟ ಸೇವಾದಿಗಳು ನಡೆದರೆ ಉಳಿದ ದಿನ  ದೇವಸ್ಥಾನದ ಸಮೀಪದ ಓಲಗ ಮಂಟಪದಲ್ಲಿ ಈ ಸೇವೆಗಳು ನಡೆಯುತ್ತಿದ್ದವು. ದೇವಸ್ಥಾನದ ನಾಲ್ಕೂ ಬದಿಗಳಲ್ಲಿ ಕಟ್ಟಿದ ಅಡಿಕೆ ಸಲಾಕೆಗಳ ಮೇಲೆ ಸಾವಿರಾರು ಮಣ್ಣಿನ  ಹಣತೆಗಳನ್ನು ಉರಿಸಲಾಗುತ್ತಿತ್ತು.  ಊರಿನ ಉತ್ಸಾಹಿ ತರುಣರು ಪಟಾಕಿ, ಬಾಣ ಬಿರುಸು, ಬಲೂನು ಇತ್ಯಾದಿಗಳ ಅಂಗಡಿ ತೆರೆಯುವುದೂ ಇತ್ತು.  ಭರ್ಜರಿ ವ್ಯಾಪಾರವೂ ಆಗುತ್ತಿತ್ತು.  ಶಬ್ದ ಮಾಲಿನ್ಯ ಉಂಟುಮಾಡುವ  ಪಟಾಕಿಗಳಿಗಿಂತ ನೋಟಕ್ಕೆ ರಮ್ಯ ಎನಿಸುವ ಸುರು ಸುರು ಕಡ್ಡಿ, ಸೂರ್ಯ-ಚಂದ್ರ ಬೆಂಕಿ ಪೆಟ್ಟಿಗೆ, ನೆಲ ಚಕ್ರ, ಹೂ ದಾನಿ, ಬಲೂನು ಇತ್ಯಾದಿಗಳಿಗೆ  ಕೊಳ್ಳುಗರ ಪ್ರಾಶಸ್ತ್ಯ ಇತ್ತು. ಶ್ರೀನಿವಾಸ ಅಸರ್ಣರು ತಯಾರಿಸಿದ  ವೈವಿಧ್ಯಮಯ ಗೂಡುದೀಪಗಳು  ದೀಪೋತ್ಸವಕ್ಕೆ ಹೆಚ್ಚಿನ  ಮೆರುಗು ನೀಡುತ್ತಿದ್ದವು. ಓಲಗ ಮಂಟಪದ ಮೇಲ್ಮಾಳಿಗೆ ಮೇಲಿದ್ದ ಮರದ ಗರುಡ ಹನುಮಂತ ವಿಗ್ರಹಗಳ ಮುಂದೆ ತಿರುಗುವ ಗೂಡುದೀಪಗಳನ್ನೂ ಅವರು ಇರಿಸುತ್ತಿದ್ದರು.  ಗರುಡ ಹನುಮಂತ ಮೂರ್ತಿಗಳಿಗೆ ಚಕ್ರಗಳನ್ನು ಅಳವಡಿಸಿ ಭಂಡಿಯೊಂದಿಗೆ ಅವುಗಳನ್ನೂ  ಉತ್ಸವದ ಜೊತೆ ಎಳೆದುಕೊಂಡು ಹೋಗುವ  ಯೋಚನೆಯೂ ಇತ್ತಂತೆ.  ಆದರೆ ಅದು ಏಕೋ ಕಾರ್ಯರೂಪಕ್ಕೆ ಬರಲಿಲ್ಲ.  ಈಗ ಓಲಗ ಮಂಟಪದ ಮೇಲ್ಮಾಳಿಗೆ ದುರ್ಬಲವಾದದ್ದರಿಂದ ಗರುಡ ಹನುಮಂತರು ಕೆಳಗಿಳಿದು  ಬಂದಿದ್ದಾರೆ. 



60ರ ದಶಕದಲ್ಲಿ ಚೀನಾ ಯುದ್ಧದ ನಂತರ ಕೆಲ ವರ್ಷ ಭಂಡಿ ಉತ್ಸವ ಸ್ಥಗಿತಗೊಂಡು ದೇವರ ಬಲಿ ದೇವಸ್ಥಾನದ  ಒಳ ಸುತ್ತಿಗೆ  ಸೀಮಿತಗೊಂಡಿತು. ಒಳಗಿನ ಅಂಬಲದ ಮೇಲೆ ತಾತ್ಕಾಲಿಕವಾಗಿ ರಚಿಸಲಾಗುತ್ತಿದ್ದ ಮಂಟಪದಲ್ಲಿ ಉತ್ಸವಮೂರ್ತಿಯನ್ನಿಟ್ಟು ಅಷ್ಟಸೇವೆಗಳನ್ನು ನಡೆಸಲಾಗುತ್ತಿತ್ತು.  ಅಲ್ಲಿ ವರೆಗೆ ರಾಮನವಮಿ ಮತ್ತು ಅಕ್ಷಯತೃತೀಯಾಗಳಂದು ನಡೆಯುತ್ತಿದ್ದ ಭಂಡಿ ಉತ್ಸವಗಳೂ ನಿಂತು ಹೋದವು.  70ರ ದಶಕದಲ್ಲಿ ಹಳೆ ಪದ್ಧತಿ ಆಂಶಿಕವಾಗಿ ಪುನರುತ್ಥಾನಗೊಂಡು ಚತುರ್ದಶಿ ವರೆಗೆ ದೇವಸ್ಥಾನದ ಒಳಗಡೆಯೇ ದೇವರ ಬಲಿ ಉತ್ಸವ, ಅಷ್ಟ ಸೇವಾದಿಗಳು ನಡೆದು ಹುಣಿಮೆಯ ದೊಡ್ಡ ದೀಪದ ದಿನ ಮಾತ್ರ  ಹೊರಸುತ್ತಿನ ಭಂಡಿ ಉತ್ಸವದ ನಂತರ ದೇವರು ಗುಡ್ಡದ ಮೇಲಿನ ಕಟ್ಟೆಗೆ ಹೋಗಿ ಅಷ್ಟಸೇವೆಗಳನ್ನು ಸ್ವೀಕರಿಸುವ ಕ್ರಮ ಆರಂಭವಾಯಿತು.  ಪಟಾಕಿ, ಬಾಣ ಬಿರುಸು ಇತ್ಯಾದಿಗಳ ಬಳಕೆ ನಿಂತು ಹೋಗಿ  ಭಕ್ತವೃಂದದ ಭಾಗವಹಿಸುವಿಕೆಯೂ ಗಮನಾರ್ಹವಾಗಿ ಕಡಿಮೆ ಆದರೂ ಅನೇಕ ವರ್ಷಗಳ ಕಾಲ ಈ ಪದ್ಧತಿ ಮುಂದುವರಿಯಿತು.

ಚತುರ್ದಶಿ ವರೆಗೆ ದೇವಸ್ಥಾನದ ಒಳಸುತ್ತಿನಲ್ಲಿ ನಡೆಯುತ್ತಿದ್ದ ಉತ್ಸವ.



ಭಂಡಿಯನ್ನು ಅದರ ಕೋಣೆಯಿಂದ ಹೊರತಂದು ದೇವಸ್ಥಾನದ ಎದುರಿಗೆ ತರುವಾಗ ಅದರಲ್ಲಿ ಕುಳಿತುಕೊಳ್ಳಲು ಚಿಕ್ಕ ಮಕ್ಕಳಾಗಿದ್ದ ನಮಗೆ ಅನುಮತಿ ಇತ್ತು. ಉತ್ಸವ ಮುಗಿದ ಮೇಲೆ ಭಂಡಿಯನ್ನು ಅದರ ಕೋಣೆಯೊಳಗೆ ಸೇರಿಸಿ ಬಾಗಿಲು ಹಾಕಿಕೊಂಡವರು ಹೇಗೆ ಹೊರಗೆ ಬರುತ್ತಾರೆ ಎಂದು ನಮಗೆ ಅಚ್ಚರಿಯಾಗುತ್ತಿತ್ತು. ಆ ಕೋಣೆಯಿಂದ ಉಗ್ರಾಣಕ್ಕೆ ಬರಲು ಓಬವ್ವನ ಕಿಂಡಿಯಂಥ ಒಂದು ತೆರೆದ ಕಿಟಿಕಿ ಇರುವುದು ಆಗ ನಮಗೆ ಗೊತ್ತಿರಲಿಲ್ಲ.     

ಪಲ್ಲಕ್ಕಿ ಕಟ್ಟುವ ಕಾರ್ಯವನ್ನು ಊರಿನವರೆಲ್ಲರೂ ಸಾಮೂಹಿಕವಾಗಿ ನಿರ್ವಹಿಸಿದರೆ  ದೀಪೋತ್ಸವಕ್ಕೆ ಸಂಬಂಧಿಸಿದ ಇತರ  ಕಾರ್ಯಗಳಿಗೆ ನಿಗದಿಯಾದ ಊರಿನ ವಿವಿಧ  ಮನೆತನಗಳಿದ್ದವು.  ಭಂಡಿ ಎಳೆಯಲು ಒಂದು ಮನೆತನವಾದರೆ, ದೂಡಲು ಇನ್ನೊಂದು ಮನೆತನ.  ದೀವಟಿಗೆ, ದಂಡ ಚಾಮರ, ಸಂಗೀತ ಸೇವೆ ಹೀಗೆ ಒಂದೊಂದಕ್ಕೂ ಬೇರೆಯೇ ಮನೆತನಗಳು. ಉತ್ಸವದ ಕೊನೆಯ ದಿನ ಸಂಬಂಧಿಸಿದ ಎಲ್ಲರಿಗೂ ಸಾಂಕೇತಿಕ  ಗೌರವ ಪ್ರದಾನ.   

ಇತರೆಡೆ ಇರುವಂತೆ ಬೇರೆಯೇ ವೇದಿಕೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸುವ ಸಂಪ್ರದಾಯ ಸಾಮಾನ್ಯವಾಗಿ ಇಲ್ಲಿ ಇರಲಿಲ್ಲ.  ದೇವರ ಸಾನ್ನಿಧ್ಯದಲ್ಲಿ ನಡೆಯುವ ಅಷ್ಟ ಸೇವೆಗಳೇ ಊರಿನ  ಜನತೆಗೆ ವೇದ, ಶಾಸ್ತ್ರ, ಪುರಾಣ, ಸಂಗೀತಗಳಲ್ಲಿ ತಮ್ಮ ಪ್ರತಿಭೆ ತೋರಿಸಲು ವೇದಿಕೆ.  ನಾನೂ 1968ರಲ್ಲಿ ಮೊದಲ ಬಾರಿ ನಾಲ್ಕು ಜನರ ಎದುರಿಗೆ  ಕೊಳಲು ನುಡಿಸಿದ್ದು ಇಲ್ಲಿಯೇ. ಆ ಮೇಲೆ  ತರಬೇತಿಗಾಗಿ   ಬೆಂಗಳೂರಲ್ಲಿ ಇದ್ದ ಸಮಯ ಬಿಟ್ಟರೆ ಪ್ರತೀ ವರ್ಷ   ಅಷ್ಟ ಸೇವೆಯಲ್ಲಿ ಪಾಲ್ಗೊಂಡಿದ್ದೇನೆ.  

ಕಾರ್ಪೊರೇಟ್ ವಲಯದಲ್ಲಿ ಪ್ರಾಯೋಜಕತ್ವವು ಇತ್ತೀಚೆಗೆ ಕಾಣಿಸಿಕೊಂಡದ್ದಾದರೂ ಇಲ್ಲಿ ದಶಕಗಳ ಹಿಂದಿನಿಂದಲೂ ಒಂದೊಂದು ದಿನದ ಉತ್ಸವವನ್ನು ಒಬ್ಬೊಬ್ಬರು ಪ್ರಾಯೋಜಿಸುವ ಪರಿಪಾಠ ಇತ್ತು.

ಹಿಂದಿನಿಂದಲೂ ಸಂಗೀತ ವಿಭಾಗದಲ್ಲಿ ಗುರುತಿಸಿಕೊಂಡ ಬತ್ರಬೈಲು  ಕುಟುಂಬದ ವಾಸುದೇವ ತಾಮ್ಹನಕರ್ ರಚಿಸಿ ಹಾಡಿರುವ ಈ ದೀಪೋತ್ಸವದ ವೈಭವವನ್ನು ಸ್ಥೂಲವಾಗಿ ವರ್ಣಿಸುವ  ಚಿತ್ಪಾವನಿ ಭಾಷೆಯ  ಹಾಡಿನ ವೀಡಿಯೊ ಒಂದು  ಕನ್ನಡ ಉಪ ಶೀರ್ಷಿಕೆಗಳೊಂದಿಗೆ ಇಲ್ಲಿದೆ.  ವೀಡಿಯೊ ಚಿತ್ರೀಕರಣ, ಎಡಿಟಿಂಗ್, ಹಾಡಿನ ಕನ್ನಡ ಭಾವಾನುವಾದ ಎಲ್ಲ ನನ್ನವೇ,





ಮಂಗಳಾರತಿ ಪ್ರಣತಿ
ಸಾಮಾನ್ಯವಾಗಿ ಮಹಾಮಂಗಳಾರತಿಯ ಜೊತೆಗೆ ಗಂಟೆ ಜಾಗಟೆ ಹಾಗೂ ವೇದ ಮಂತ್ರ ಘೋಷಗಳಿರುವುದನ್ನು ಕಾಣುತ್ತೇವೆ.  ಆದರೆ ಇಲ್ಲಿ  ದೊಡ್ಡ ದೀಪೋತ್ಸವದ ದಿನ ಮಹಾಮಂಗಳಾರತಿ ಆದೊಡನೆ ಸಂಗೀತಕಾರರು ವಿಶೇಷ ಮಂಗಳ ಪದವೊಂದನ್ನು ಹಾಡುವ  ಪರಿಪಾಠ ಇತ್ತು. ಮಂಗಳಾರತಿ ಪ್ರಣತಿ ಎಂಬ ಆ ಸುಮಧುರ ಹಾಡನ್ನು  ವಾಸುದೇವ ತಾಮ್ಹನಕರ್ ಧ್ವನಿಯಲ್ಲಿ ಆಲಿಸಿ.




ಕಾರಣಾಂತರಗಳಿಂದ ಈಗ ದೀಪೋತ್ಸವದ ನಿರಂತರತೆಗೆ ತಡೆ ಉಂಟಾಗಿದೆ.  ಹಿಂದಿನ ವೈಭವ ಮತ್ತೆ ಮರುಕಳಿಸುವುದೆಂದು ಹಾರೈಸೋಣ.
    

Saturday, 2 November 2024

ಕಣ್ಣ ನೋಟದಲ್ಲೇ ಜೀವನ ಪ್ರಮಾಣ



ಪೆನ್ಶನ್ ಪಡೆಯುವವರು ವರ್ಷಕ್ಕೊಮ್ಮೆ ಜೀವನ ಪ್ರಮಾಣ ಪತ್ರ (Life Certificate) ಸಲ್ಲಿಸಬೇಕಾಗುತ್ತದೆ. ಇದಕ್ಕಾಗಿ ಪಿಂಚಣಿದಾರರು ಒಂದೋ ಆಯಾ ಸಂಸ್ಥೆಗೆ ಖುದ್ದಾಗಿ ಹಾಜರಾಗಬೇಕಾಗುತ್ತದೆ. ಇಲ್ಲವಾದರೆ ಪೋಸ್ಟ್ ಆಫೀಸ್ ಅಥವಾ ಸೈಬರ್ ಸೆಂಟರ್‌ಗಳಿಗೆ ಹೋಗಿ electronic ಮಾಧ್ಯಮದ ಮೂಲಕ ಜೀವನ ಪ್ರಮಾಣ ಪತ್ರ ಸಲ್ಲಿಸಬೇಕಾಗುತ್ತದೆ. ಇದಕ್ಕಾಗಿ ಒಂದಷ್ಟು ಶುಲ್ಕವನ್ನೂ ಪಾವತಿಸಬೇಕಾಗುತ್ತದೆ. ತುಂಬಾ ವಯಸ್ಸಾದವರು ಇದ್ದರೆ ಹೊರಗೆ ಹೋಗುವುದೂ ತ್ರಾಸದಾಯಕವೇ.

ಈಗ ಇವಾವುದರ ಅಗತ್ಯವೂ ಇಲ್ಲದೆ android phoneನಲ್ಲಿ ಮನೆಯಿಂದಲೇ ಒಂದು ಪೈಸೆ ಖರ್ಚಿಲ್ಲದೆ ಜೀವನ ಪ್ರಮಾಣ ಪತ್ರ ಸಲ್ಲಿಸಬಹುದು.

ಇದಕ್ಕೆ ಎರಡು appಗಳು ಬೇಕಾಗುತ್ತವೆ.

1. AadharFaceRd 1.1.1
ಇದನ್ನು google play storeನಿಂದ ಡೌನ್ ಲೋಡ್ ಮಾಡಿ install ಮಾಡಿಕೊಳ್ಳಬೇಕು. ಇದು ಹಿನ್ನೆಲೆಯಲ್ಲಿ ಕೆಲಸ ಮಾಡುವ app. ಇದರ ಐಕಾನ್ desktop ಮೇಲೆ ಇರುವುದಿಲ್ಲ.

2. Jeevan Pramaan 4.0.4
ಇದೂ google play storeನಲ್ಲಿ ಲಭ್ಯವಿದೆ.

(ಈ ಮೊದಲು install ಮಾಡಿಕೊಂಡ ಹಳೆಯ versions ಇದ್ದರೆ ಅವುಗಳನ್ನು uninstall ಮಾಡಿಕೊಳ್ಳಬೇಕು.)

ಇವೆರಡನ್ನು install ಮಾಡಿಕೊಂಡು ಸೂಕ್ತ permissions ಕೊಟ್ಟ ನಂತರ ಆ ಮೊಬೈಲ್ ಒಡೆಯ ಈ app ತೆರೆದು ತನ್ನನ್ನು ಆಪರೇಟರ್ ಎಂದು ದಾಖಲಿಸಿಕೊಳ್ಳಬೇಕು. ಇದಕ್ಕೆ ಆಧಾರ್ ನಂಬರ್, ಮೊಬೈಲ್ ನಂಬರ್ ಮತ್ತು email id ಬೇಕಾಗುತ್ತವೆ. OTP ಮೂಲಕ authentication ಆದ ಮೇಲೆ ಒಳ್ಳೆಯ ಬೆಳಕಿರುವಲ್ಲಿ ಮೊಬೈಲನ್ನು ಮುಖದ ಮುಂದೆ ಹಿಡಿದು ಕಣ್ಣಿನ iris capture ಮಾಡಬೇಕಾಗುತ್ತದೆ. ಮೊಬೈಲಲ್ಲಿ ಸರಿಯಾದ ಕೋನದಲ್ಲಿ ಮುಖದ ಬಿಂಬ ಮೂಡಿದೊಡನೆ Blink ಎಂಬ ಸೂಚನೆ ಕಾಣಿಸುತ್ತದೆ. ಕೆಲವು ಸಲ ಕಣ್ಣನ್ನು ಮಿಟುಕಿಸಿದಾಗ iris capture ಆಗಿ operator ರಿಜಿಸ್ಟ್ರೇಶನ್ ಪ್ರಕ್ರಿಯೆ ಮುಗಿಯುತ್ತದೆ. ಇದು one time process.

ನಂತರ ಆ ಮೊಬೈಲಿನಿಂದ ತನ್ನದೇ ಅಥವಾ ಬೇರೆ ಎಷ್ಟು ಮಂದಿ ಪಿಂಚಣಿದಾರರ ಜೀವನ ಪ್ರಮಾಣ ಪತ್ರವನ್ನೂ ಪಡೆಯಬಹುದು. screen ಮೇಲೆ ಕಾಣಿಸುವ ಸೂಚನೆಗಳನ್ನು ಅನುಸರಿಸುತ್ತಾ ಹೋದರಾಯಿತು. ಪೆನ್ಶನ್ ಪಡೆಯುವವರ ಆಧಾರ್, ಮೊಬೈಲ್ ನಂಬರ್, PensionPaymentOrder ಮತ್ತು ಬ್ಯಾಂಕ್ ವಿವರಗಳು ಬೇಕಾಗುತ್ತವೆ. Drop Down Menuವಿನಲ್ಲಿ ಸರಿಯಾದುದನ್ನು ಆಯ್ಕೆ ಮಾಡುವುದು ಬಲು ಮುಖ್ಯ. 

ಕರ್ನಾಟದಲ್ಲಿ SAMPANN ಮೂಲಕ ಪಿಂಚಣಿ ಪಡೆಯುವ ಬಿ.ಎಸ್.ಎನ್.ಎಲ್ ನಿವೃತ್ತರು ಈ ಕೆಳಗಿನ ಕ್ರಮ ಅನುಸರಿಸಬೇಕು.
Full Name as in Aadhar : ಇಲ್ಲಿ ಆಧಾರ್‌ನಲ್ಲಿ ಇದ್ದಂತೆ ಹೆಸರು ಟೈಪ್ ಮಾಡಬೇಕು.
Type of Pension : Service ಆಯ್ಕೆ ಮಾಡಬೇಕು.
Sanctioning Authority :  Telecom ಆಯ್ಕೆ ಮಾಡಬೇಕು
Disbursing Agency : SAMPANN ಆಯ್ಕೆ ಮಾಡಬೇಕು.
Agency :  CCA Karnataka ಆಯ್ಕೆ ಮಾಡಬೇಕು.
PPO Number : SAMPANN ಒದಗಿಸಿದ PPO ನಂಬರ್ ಟೈಪ್ ಮಾಡಬೇಕು.
Account Number(pension) : ಪೆನ್ಶನ್ ಜಮೆ ಆಗುವ ಬ್ಯಾಂಕ್ ಅಥವಾ ಪೋಸ್ಟ್ ಆಫೀಸ್ ಅಕೌಂಟ್ ನಂಬರ್ ಟೈಪ್ ಮಾಡಬೇಕು.

ಬೇರೆ ಸಂಸ್ಥೆಗಳಿಂದ ಪಿಂಚಣಿ ಪಡೆಯುವವರು  ತಮಗೆ ಸಂಬಂಧ ಪಟ್ಟ ಸೂಕ್ತವಾದ ಆಯ್ಕೆಗಳನ್ನು ಮಾಡಬೇಕು.

ಸ್ಕ್ರೀನಿನಲ್ಲಿ ಕಾಣಿಸುವ ಸೂಚನೆಗಳಂತೆ ಮುನ್ನಡೆಯುತ್ತಾ ಹೋಗಿ Do you want to scan face ಎಂದು ಕೇಳಿದಾಗ YES ಒತ್ತಬೇಕು.

ಆಗ ಮೊಬೈಲ್ ಕ್ಯಾಮರಾ selfie modeನಲ್ಲಿ ತೆರೆದುಕೊಳ್ಳುತ್ತದೆ. ಬೇರೆಯವರ Iris capture  ಮಾಡುವುದಾದರೆ back cameraಗೆ ಬದಲಾಯಿಸುವ ಅನುಕೂಲವೂ ಇದೆ.  

ನಂತರ ಒಳ್ಳೆಯ ಬೆಳಕಿರುವಲ್ಲಿ ಪಿಂಚಣಿದಾರನ ಮುಖದೆದುರು ಮೊಬೈಲ್ ಹಿಡಿದು ಆಪರೇಟರ್ ರಿಜಿಸ್ಟ್ರೇಶನ್ ಸಮಯದಲ್ಲಿ ಮಾಡಿದಂತೆ iris capture ಪ್ರಕ್ರಿಯೆ ಮುಗಿಸಿದರೆ Jeevan Pramaan Id ಕಾಣಿಸುತ್ತದೆ. ಪಿಂಚಣಿದಾರನ ಮೊಬೈಲಿಗೆ ಆ ಕುರಿತು ಮೆಸೇಜ್ ಕೂಡ ಬರುತ್ತದೆ. ಆ id ಒದಗಿಸಿ Jeevanpramaan ತಾಣದಿಂದ Life Certificate ಡೌನ್ ಲೋಡ್ ಮಾಡಿಕೊಳ್ಳಬಹುದು. 

ಒಮ್ಮೆ ತುಂಬಿದ ಪಿಂಚಣಿದಾರನ ಮಾಹಿತಿಗಳು ಸೇವ್ ಆಗಿ ಮುಂದಿನ ಸಲ ಲಾಗಿನ್ ಆಗುವಾಗ ಅವೇ ಕಾಣಿಸುತ್ತವೆ. ಅಗತ್ಯ ಇದ್ದರೆ ಮಾತ್ರ ಬದಲಾವಣೆ ಮಾಡಿದರಾಯಿತು.

ತಾವೇ ಸ್ವತಃ ಇದನ್ನೆಲ್ಲ ಮಾಡಲು ಕಷ್ಟ ಅನಿಸುವವರು ಮನೆಯಲ್ಲಿರುವ ಅಥವಾ ಅಕ್ಕಪಕ್ಕದ ಎಳೆಯರ ಸಹಾಯ ಪಡೆಯಬಹುದು. ಮೊಬೈಲ್ ಬಳಕೆಯಲ್ಲಿ ದಕ್ಷರಾಗಿರುವವರು ತಮ್ಮ ಜೀವನ್ ಪ್ರಮಾಣ್ ಮಾಡಿಕೊಳ್ಳುವುದರ ಜೊತೆಗೆ ಅಕ್ಕ ಪಕ್ಕದಲ್ಲಿರಬಹುದಾದ ಪಿಂಚಣಿದಾರ ಹಿರಿಯರಿಗೂ ಮಾಡಿ ಕೊಟ್ಟು ಅವರ ಹಣ, ಸಮಯ ಉಳಿಯುವಂತೆ ಮಾಡಬಹುದು.

ಗಮನಿಸಿ : ಈ appಗಳನ್ನು Androidನಲ್ಲಿ ಮಾತ್ರ ಉಪಯೋಗಿಸಬಹುದು. iphone ಅಥವಾ windows phoneಗಳಲ್ಲಿ ಅಲ್ಲ.

ಇನ್ನೊಂದು ಮುಖ್ಯ ವಿಚಾರವೂ ಇದೆ. ಈ app ಆಧಾರ್ ಸಂಖ್ಯೆ, ಆಧಾರ್ ಕಾರ್ಡಲ್ಲಿ ದಾಖಲಾಗಿರುವ ಹೆಸರು ಮತ್ತು OTPಗಳನ್ನು ಮಾತ್ರ ಪರಿಶೀಲಿಸುತ್ತದೆ. Drop down menuವಿನಿಂದ ಸರಿಯಾದ ಇಲಾಖೆ, ಸಂಸ್ಥೆಯನ್ನು ಆಯ್ದುಕೊಳ್ಳುವುದು ನಮ್ಮದೇ ಜವಾಬ್ದಾರಿ. ಆಯ್ಕೆ ತಪ್ಪಾದರೂ ಜೀವನ ಪ್ರಮಾಣ ಪತ್ರ generate ಆಗುತ್ತದೆ. ಆದರೆ ಸಿಗಬೇಕಾದ ಸಂಸ್ಥೆಗೆ ಮಾಹಿತಿ ಸಿಗುವುದಿಲ್ಲ. Download ಮಾಡಿದ ಜೀವನ ಪ್ರಮಾಣ ಪತ್ರದ ಕೆಳಭಾಗದಲ್ಲಿ ಅದು ಯಾರಿಗೆ ಹೋಗಿದೆ ಎಂದು ಕಾಣಿಸುತ್ತದೆ. ತಪ್ಪಾಗಿದೆ ಎಂದು ಕಂಡರೆ ಸರಿಯಾದ ಮಾಹಿತಿಯೊಡನೆ ಇನ್ನೊಮ್ಮೆ generate ಮಾಡಬಹುದು.

ಸಂಬಂಧಿತ ಸಂಸ್ಥೆಯು ಈ ಮಾಹಿತಿಯನ್ನು ಪಡೆದು ಜೀವನ ಪ್ರಮಾಣ ಪತ್ರವನ್ನು ಅಂಗೀಕರಿಸಿದರೆ ಈ ಸಾಲು ... has been successfully accepted by .... ಎಂದು, ಅಂಗೀಕರಿಸದಿದ್ದರೆ  ... has not been successfully accepted by .... ಎಂದು   ಬದಲಾಗುತ್ತದೆ. ಈ ರೀತಿ ಬದಲಾಗುವ ವರೆಗೆ ಆಗಾಗ ಜೀವನ ಪ್ರಮಾಣ ಪತ್ರವನ್ನು download ಮಾಡುತ್ತಿದ್ದರೆ ಒಳ್ಳೆಯದು. ಪಿಂಚಣಿ ಪಾವತಿಸುವ ಸಂಸ್ಥೆಯನ್ನು ಹೊಂದಿಕೊಂಡು accept ಆಗಲು ತಗಲುವ ಅವಧಿ ಕೆಲವು ದಿನಗಳೂ ಇರಬಹುದು, ಕೆಲವು ವಾರಗಳೂ ಇರಬಹುದು. ಸ್ವೀಕೃತವಾಗಿರುವ ಅಥವಾ ಆಗದಿರುವ ಬಗ್ಗೆ ಕೆಲವು ಸಂಸ್ಥೆಗಳು ಪಿಂಚಣಿದಾರರಿಗೆ ಮೆಸೇಜ್ ಕಳಿಸುತ್ತವೆ.  ಕೆಲವು ಸಂಸ್ಥೆಗಳ websiteಗಳಲ್ಲಿ ಪಿಂಚಣಿದಾರರು ಸ್ವಯಂ ಲಾಗಿನ್ ಆಗಿ status ಖಚಿತಪಡಿಸಿಕೊಳ್ಳುವ ಅನುಕೂಲವೂ ಇರುತ್ತದೆ. 

ಹೊರದೇಶಗಳಿಂದ ಈ ಸೌಲಭ್ಯ ಬಳಸಲು ಅವಕಾಶ ಇಲ್ಲ ಎಂದು UIDAI ಸ್ಪಷ್ಟಪಡಿಸಿದೆ.

- ಚಿದಂಬರ ಕಾಕತ್ಕರ್.