Friday, 22 November 2024

ಮರೆಯಲ್ಲಡಗಿದ ಮಾಧುರ್ಯ - ಮದುವೆ ಮಾಡಿ ನೋಡು


ನಮ್ಮ ಊರ ಮನೆಯಂಗಳದಲ್ಲಿ ಒಂದು ಆಲ್ಫೊನ್ಸೊ ಮಾವಿನ ಮರವಿತ್ತು.  ಬುಡದಿಂದಲೇ ಗೆಲ್ಲುಗಳಿದ್ದ ಅದನ್ನು ಏರುವುದು ಬಲು ಸುಲಭವಾಗಿತ್ತು.   ಹೀಗಾಗಿ ತುದಿಗೆ ಗೋಣಿಚೀಲ ಅಳವಡಿಸಿದ ರಿಂಗ್ ಇರುವ ದೋಟಿಯ ಸಹಾಯದಿಂದ ಕೆಂಬಣ್ಣಕ್ಕೆ ತಿರುಗಿದ ಹಣ್ಣುಗಳನ್ನು ಕೊಯ್ಯುವ ಜವಾಬ್ದಾರಿಯನ್ನು ಸ್ವ ಇಚ್ಛೆಯಿಂದ ನಾನು ವಹಿಸಿಕೊಳ್ಳುತ್ತಿದ್ದೆ.  ಎದುರಿಗೆ ಕಾಣಿಸುವ ಹಣ್ಣುಗಳನ್ನೆಲ್ಲ ಕೊಯ್ದಾದ ಮೇಲೆ  ಎಲೆಗಳ ಮರೆಯಲ್ಲಿ ಅಡಗಿ ಕುಳಿತವುಗಳೇನಾದರೂ ಇನ್ನೂ ಇವೆಯೇ ಎಂದು ಪುನಃ ಪುನಃ ಪರಿಶೀಲಿಸುವುದಿತ್ತು.  ಹೀಗೆ ಮಾಡುವಾಗ ಮಾಗಿದ ಹಣ್ಣುಗಳ ಗೊಂಚಲೇನಾದರೂ   ಕಣ್ಣಿಗೆ ಬಿದ್ದರೆ ಆಗುತ್ತಿದ್ದ ಖುಶಿ ವರ್ಣಿಸಲಸದಳವಾದದ್ದು. ಇಂಥದ್ದೇ ಅನುಭವ ನನಗೆ ಮೊನ್ನೆ ಆದದ್ದು 1952ರಲ್ಲಿ ತೆಲುಗು ಮತ್ತು ತಮಿಳಿನಲ್ಲಿ ಸಂಯೋಜಿಸಲ್ಪಟ್ಟ ಮಾಧುರ್ಯಭರಿತ ಹಾಡುಗಳು 1965ರಲ್ಲಿ   ಕನ್ನಡ ರೂಪ ಪಡೆದುಕೊಂಡು ನಾನು ಅವುಗಳಲ್ಲಿ ಕೆಲವನ್ನು  2020ರಲ್ಲಿ ಮೊದಲ ಬಾರಿ ಆಲಿಸಿದಾಗ!

ಚಂದಮಾಮದ ವಿಜಯಾ ಸಂಸ್ಥೆ  1952ರಲ್ಲಿ ತೆಲುಗು ಭಾಷೆಯಲ್ಲಿ  ಪೆಳ್ಳಿ ಚೇಸಿ ಚೂಡು ಮತ್ತು ತಮಿಳಿನಲ್ಲಿ ಕಲ್ಯಾಣಮ್ ಪಣ್ಣಿ ಪಾರ್ ಎಂಬ ಹೆಸರಲ್ಲಿ ಏಕಕಾಲದಲ್ಲಿ ತಯಾರಿಸಿ ಜಯಭೇರಿ ಬಾರಿಸಿದ್ದ ಚಿತ್ರವನ್ನು   13 ವರ್ಷಗಳ ನಂತರ 1965ರಲ್ಲಿ ಮದುವೆ ಮಾಡಿ ನೋಡು ಎಂಬ ಹೆಸರಲ್ಲಿ ಮರು ನಿರ್ಮಿಸಿತ್ತು.  ಎನ್.ಟಿ. ರಾಮರಾವ್, ವರಲಕ್ಷ್ಮೀ, ಸಾವಿತ್ರಿ, ಎಸ್.ವಿ. ರಂಗರಾವ್ ಮುಂತಾದವರು ನಟಿಸಿದ್ದ ಮೂಲ ಚಿತ್ರವನ್ನು ನಿರ್ದೇಶಿಸಿದ್ದವರು ಆ ಮೇಲೆ ತನ್ನದೇ ಪ್ರಸಾದ್ ಪ್ರೊಡಕ್ಷನ್ಸ್ ಸಂಸ್ಥೆಯನ್ನು ಸ್ಥಾಪಿಸಿದ ಎಲ್.ವಿ. ಪ್ರಸಾದ್.  ಕನ್ನಡದಲ್ಲಿ ರಾಜಕುಮಾರ್, ಉದಯಕುಮಾರ್, ಕೆ.ಎಸ್. ಅಶ್ವತ್ಥ್,  ನರಸಿಂಹರಾಜು, ಆರ್. ನಾಗೇಂದ್ರ ರಾವ್, ಎಚ್.ಆರ್.ಶಾಸ್ತ್ರಿ,  ದ್ವಾರಕೀಶ್, ಲೀಲಾವತಿ, ವಂದನಾ, ರಮಾದೇವಿ,  ಜಯಶ್ರೀ ಮುಂತಾದವರ ತಾರಾಗಣವಿದ್ದ ಚಿತ್ರವನ್ನು ಹುಣಸೂರ್ ಕೃಷ್ಣಮೂರ್ತಿ ನಿರ್ದೇಶಿಸಿದ್ದರು.  ವಿಜಯಾ ಸಂಸ್ಥೆಯ ಮಹೋನ್ನತ ಚಿತ್ರ ಸತ್ಯಹರಿಶ್ಚಂದ್ರ ತಯಾರಾದದ್ದೂ ಅದೇ ವರ್ಷ. ಎರಡೂ ಚಿತ್ರಗಳ ನಿರ್ದೇಶಕರು ಹುಣಸೂರು ಅವರೇ ಆಗಿದ್ದು, ತಾರಾಗಣ ಕೂಡ ಸರಿಸುಮಾರಾಗಿ ಒಂದೇ ಇದ್ದದ್ದರಿಂದ ಹರಿಶ್ಚಂದ್ರದ ಚಿತ್ರೀಕರಣದ ವೇಳೆ ಇದ್ದಿರಬಹುದಾದ ಬಿಡುವನ್ನು ಬಳಸಿಕೊಂಡು ಮದುವೆ ಮಾಡಿ ನೋಡು  ಚಿತ್ರವನ್ನು ಹೆಚ್ಚು ಬಜೆಟ್ ಇಲ್ಲದೆ ಮರು ನಿರ್ಮಿಸಿರಬಹುದು ಎಂದು ನನ್ನ ಊಹೆ.  ಅದುವರೆಗೆ ತೆಲುಗಿನಿಂದ ಕನ್ನಡಕ್ಕೆ ತನ್ನ ಚಿತ್ರಗಳನ್ನು ಡಬ್ ಮಾಡುತ್ತಿದ್ದ ವಿಜಯಾ ಸಂಸ್ಥೆ ಈ ಚಿತ್ರಗಳನ್ನು ಕನ್ನಡ ತಾರಾಗಣದೊಂದಿಗೆ ಮರು ನಿರ್ಮಿಸುವ ಮೂಲಕ ಆ ಪದ್ಧತಿಯನ್ನು ಕೈ ಬಿಟ್ಟಿತು.


ವಿಧವೆ ಕಾವೇರಮ್ಮನಿಗೆ(ಜಯಶ್ರೀ)   ರಾಜು(ನರಸಿಂಹರಾಜು), ಸರಸು(ಲೀಲಾವತಿ) ಮತ್ತು ಗೋಪಿ(ಮಾಸ್ಟರ್ ಬಸವರಾಜ್) ಎಂಬ ಮೂರು ಜನ ಮಕ್ಕಳು.  ವೃತ್ತಿಯಲ್ಲಿ ಅಧ್ಯಾಪಕನಾಗಿದ್ದ ರಾಜು ಮದುವೆಗೆ ಬೆಳೆದು ನಿಂತ ತಂಗಿಯ ಬಗ್ಗೆ ಯೋಚಿಸದೆ ತಮ್ಮ ಗೋಪಿ ಜೊತೆ ಸೇರಿಕೊಂಡು ನಾಟಕ ಗೀಟಕ ಎಂದು ಊರೂರು ಸುತ್ತುತ್ತಿರುವುದು ಕಾವೇರಮ್ಮನಿಗೆ ಎಳ್ಳಷ್ಟೂ ಇಷ್ಟವಿರಲಿಲ್ಲ. ತನ್ನ ಮನೆಗೆ ಆಗಾಗ ಬರುತ್ತಿದ್ದ ಗೋವಿಂದಯ್ಯನೊಡನೆ(ಹೆಚ್.ಆರ್. ಶಾಸ್ತ್ರಿ) ತನ್ನ ಮಗಳಿಗೊಂದು ಗಂಡು ಹುಡುಕಿಕೊಡು ಎಂದು ಗೋಗರೆಯುತ್ತಿದ್ದಳು. ಗೋವಿಂದಯ್ಯನಿಗಾದರೋ ತನ್ನ ಮಗಳು ಪುಟ್ಟಿಯನ್ನು(ರಮಾ) ಆಕೆಯ ಮೇಲೆ ಕಣ್ಣಿಟ್ಟಿದ್ದ ತನ್ನ ತಂಗಿಯ ಮಗ ಒರಟ ಪೈಲ್ವಾನ್ ಭೀಮಣ್ಣನಿಂದ(ಉದಯ ಕುಮಾರ್) ದೂರ ಮಾಡಿ ರಾಜುವಿನ ಕೊರಳಿಗೆ ಕಟ್ಟಬೇಕೆಂಬ ಅಭಿಲಾಷೆ. ಗೋವಿಂದಯ್ಯ ತನ್ನ ತಂಗಿಗೆ ಗಂಡು ಹುಡುಕಿ ಕೊಡುವುದು ಅಷ್ಟರಲ್ಲೇ ಇದೆ ಎಂದು ಅರಿತ ರಾಜು  ಈ ಕೆಲಸ ಮುಗಿಸದೆ ಮರಳುವುದಿಲ್ಲ ಎಂದು ಶಪಥ ಮಾಡಿ ತನ್ನ ತಮ್ಮ ಗೋಪಿಯ ಜೊತೆ ಊರು ಬಿಟ್ಟು ಹೊರಡುತ್ತಾನೆ.  ಹೀಗೆ ತಿರುಗುತ್ತಿರುವಾಗ ಒಂದೂರಿನಲ್ಲಿ ವಿಕ್ಷಿಪ್ತ ಪ್ರವೃತ್ತಿಯ ಪರಮೇಶ್ವರಯ್ಯ(ಕೆ.ಎಸ್. ಅಶ್ವತ್ಥ್) ಎಂಬವರ  ಮನೆ ಸೇರುತ್ತಾನೆ. ತಾನು ಹೊರಟದ್ದು ತಂಗಿಗೆ ಗಂಡು ಹುಡುಕಲೆಂದಾದರೂ  ಯೋಗಾಯೋಗದಿಂದ ಪರಮೇಶ್ವರಯ್ಯನ ಮಗಳ ಜೊತೆ ಆತನ ಮದುವೆಯೇ ಮೊದಲು ನಡೆಯುತ್ತದೆ. ಸರಸುಗೆ ತಾನು ಮದುವೆ ಮಾಡಿಸುವುದಾಗಿ  ಪರಮೇಶ್ವರಯ್ಯ ಮಾತು ಕೊಡುತ್ತಾನೆ. ಅದರಂತೆ ತನ್ನ ಸ್ನೇಹಿತ ವೆಂಕಟಪತಿಯ(ಅರ್.ನಾಗೇಂದ್ರ ರಾವ್) ಮಗ ಲಾಯರ್ ಶ್ರೀನಿವಾಸನ(ರಾಜಕುಮಾರ್) ಜೊತೆ ಸಂಬಂಧವನ್ನೂ ಕುದುರಿಸುತ್ತಾನೆ.  ಆದರೆ ಕಡು ಲೋಭಿಯಾದ ವೆಂಕಟಪತಿ ದೊಡ್ಡ ಮೊತ್ತದ ವರದಕ್ಷಿಣೆ ಕೇಳುತ್ತಾನೆ.  ತನ್ನಲ್ಲಿ ಬಿಡುಗಾಸಿಲ್ಲದಿದ್ದರೂ ಮದುವೆಯೊಂದು ಆಗಿ ಹೋಗಲಿ, ಆ ಮೇಲೆ ನೋಡಿಕೊಂಡರಾಯಿತು ಎಂದು ಯೋಚಿಸಿದ ಪರಮೇಶ್ವರಯ್ಯ ಇದಕ್ಕೆ ಒಪ್ಪುತ್ತಾನೆ. ತನ್ನ ಮಗಳು ಪುಟ್ಟಿಯ ಸಂಬಂಧ ತಪ್ಪಿ ಹೋಯಿತಲ್ಲಾ ಎಂದು ಕರುಬಿದ ಗೋವಿಂದಯ್ಯ ಮದುವೆ ಮಂಟಪದಲ್ಲಿ ಹಾಜರಾಗಿ ಸ್ಥಳದಲ್ಲೇ ನಗದು ರೂಪದ ವರದಕ್ಷಿಣೆ ಬೇಕೆಂದು ಪಟ್ಟು ಹಿಡಿಯುವಂತೆ ವೆಂಕಟಪತಿಯ ಕಿವಿಯೂದುತ್ತಾನೆ. ಪರಮೇಶ್ವರಯ್ಯ ಏನೇನೋ ಉಪಾಯ ಹೂಡಿದರೂ ಪ್ರಯೋಜನವಾಗದೆ ಮದುವೆ ಮುರಿದು ಬೀಳುತ್ತದೆ.  ಆದರೆ ವರ ಶ್ರೀನಿವಾಸನಿಗೆ ವಿಷಯ ತಿಳಿದು ಆತ ರಹಸ್ಯವಾಗಿ ಸರಸುವನ್ನು ತನ್ನ ಜೊತೆ ಕರೆದೊಯ್ಯುತ್ತಾನೆ.  ತಂದೆ ವೆಂಕಟಪತಿಗೆ ಈ ವಿಷಯ ತಿಳಿಯಬಾರದೆಂದು ತಾನು ಹುಚ್ಚನಂತೆ ನಟಿಸುತ್ತಾ ರಾಜುವನ್ನು ಡಾಕ್ಟರಾಗಿಸಿ ಸರಸು ನರ್ಸ್ ವೇಷ ಧರಿಸುವಂತೆ ಮಾಡುತ್ತಾನೆ. ವೆಂಕಟಪತಿಗೆ ನರ್ಸಮ್ಮನ ನಡವಳಿಕೆ ಇಷ್ಟವಾಗತೊಡಗುತ್ತದೆ. ಆಕೆಯೇ ತನ್ನ ಸೊಸೆ ಸರಸು ಎಂದೂ ಆತನಿಗೆ ತಿಳಿಯುತ್ತದೆ.  ಎಲ್ಲವೂ ಸುಖಾಂತ್ಯವಾಗುತ್ತದೆ.

ಮೂಲ ತಮಿಳು ತೆಲುಗು ಭಾಷೆಗಳಲ್ಲಿದ್ದ ಚಿತ್ರಕ್ಕೆ  ಸಂಗೀತ ನಿರ್ದೇಶನ ಮಾಡಿದ್ದ ಘಂಟಸಾಲ ಅವರೇ ಕನ್ನಡದಲ್ಲೂ ಆ ಹೊಣೆಯನ್ನು ವಹಿಸಿಕೊಂಡು 13 ವರ್ಷ ಹಿಂದಿನ ಅವೇ ಧಾಟಿಯ ಹಾಡುಗಳನ್ನು ಹುಣಸೂರರ ಸಾಹಿತ್ಯದೊಂದಿಗೆ ಮರುಸೃಷ್ಟಿ ಮಾಡಿದ್ದರು.  ದೂರದರ್ಶನದಲ್ಲೂ ಒಂದೆರಡು ಬಾರಿ ಪ್ರಸಾರವಾಗಿದ್ದ ಮದುವೆ ಮಾಡಿ ನೋಡು ಚಿತ್ರ  ಯೂಟ್ಯೂಬಲ್ಲಿ ಲಭ್ಯವಿದ್ದರೂ ನಾನು ಅದನ್ನು ಪೂರ್ತಿಯಾಗಿ ನೋಡಿದ್ದು ಇತ್ತೀಚೆಗೆ. ಒಂದೆರಡು ಹಾಡುಗಳನ್ನು ಕ್ಯಾಸೆಟ್, ರೇಡಿಯೊಗಳಲ್ಲಿ ಮೊದಲೇ ಕೇಳಿದ್ದರೂ ಇನ್ನೂ ಇಷ್ಟೊಂದು ಆಕರ್ಷಕ ಹಾಡುಗಳು ಅದರಲ್ಲಿವೆಯೆಂದು ಗೊತ್ತಿರಲಿಲ್ಲ. ಅಂದಿನವರು ಸರಳ ವಾದ್ಯೋಪಕರಣಗಳನ್ನು ಬಳಸಿ ವೈವಿಧ್ಯಮಯ ಹಾಡುಗಳನ್ನು ಸೃಷ್ಟಿಸುತ್ತಿದ್ದ ರೀತಿ ಅಚ್ಚರಿ ಮೂಡಿಸುತ್ತದೆ. ಈಗಿನ ಕಾಲದ ಹತ್ತು ಹಾಡುಗಳ ಪೈಕಿ ಒಂಭತ್ತರಲ್ಲಿ ಒಂದೇ ರಿದಂ ಪ್ಯಾಟರ್ನ್ ಮರುಕಳಿಸುವುದನ್ನು ನಾವು ಕಾಣುತ್ತೇವೆ.  ಆದರೆ ತಾಳವಾದ್ಯಗಳು ಮತ್ತು ಇತರ ಸಂಗೀತೋಪಕರಣಗಳ  ಬಳಕೆಯಲ್ಲಿ ಇರುತ್ತಿದ್ದ ವೈವಿಧ್ಯ ಆ ಕಾಲದ ಹಾಡುಗಳ ಯಶಸ್ಸಿನ ಗುಟ್ಟು ಅನಿಸುತ್ತದೆ.  ಆಗಿನ ಸುಸ್ಪಷ್ಟ ಧ್ವನಿಮುದ್ರಣದ ತಂತ್ರಜ್ಞಾನವಂತೂ ಅತ್ಯದ್ಭುತ.

ಈಗ ಮರೆಯಲ್ಲಿ ಅಡಗಿದ್ದ ಆ ಹಾಡುಗಳ ಮಾಧುರ್ಯವನ್ನು ಒಂದೊಂದಾಗಿ ಸವಿಯೋಣ. ಹೆಡ್ ಫೋನ್ ಬಳಸಿ ಆಲಿಸಿದರೆ ಒಳ್ಳೆಯದು.

1. ಮದುವೆ ಮಾಡಿ ನೋಡೋಣ ನಾವು

ಇದು ರಾಜು ಮತ್ತು ಗೋಪಿ ಸರಸುಗೆ ಗಂಡು ಹುಡುಕಲು ಹೋಗುವ ಸಂದರ್ಭದ ಹಾಡು. ಧ್ವನಿಗಳು ಪೀಠಾಪುರಂ ನಾಗೇಶ್ವರ ರಾವ್ ಮತ್ತು ಬಿ.ಕೆ.ಸುಮಿತ್ರಾ ಅವರವು.  ಘಂಟಸಾಲ ಅವರು ತಾನು ಹಾಡದ  ಇತರ ಪಾತ್ರಗಳಿಗೆ ಬಳಸುತ್ತಿದ್ದ ಮಾಧವಪೆದ್ದಿ ಸತ್ಯಂ ಅವರ ಬದಲಿಗೆ ಇಲ್ಲಿ ಪೀಠಾಪುರಂ ಇರುವುದು ವಿಶೇಷ. ಮಾಯಾ ಬಜಾರ್ ಚಿತ್ರದ ‘ಸುಂದರಿ ನಾವಿಂಥ ದಿವ್ಯ ಸ್ವರೂಪವ’ ಹಾಡನ್ನು ಮೊದಲು ಪೀಠಾಪುರಂ ಅವರಿಂದ ಹಾಡಿಸಿ ಸರಿ ಕಾಣದೆ ಮತ್ತೆ ತಾವೇ ಹಾಡಿದ್ದಂತೆ.



2. ಯಾರ್ ಬರ್ತಾರೋ ನೋಡೋಣ

ಅಪ್ಪ ತನ್ನನ್ನು ಇನ್ಯಾರಿಗಾದರೂ ಮದುವೆ ಮಾಡಿ ಕೊಟ್ಟರೆ ಏನು ಮಾಡುವುದು ಎಂದು ಪುಟ್ಟಿ ಆತಂಕ ವ್ಯಕ್ತ ಪಡಿಸಿದಾಗ ಆಕೆಗೆ ಧೈರ್ಯ ತುಂಬುತ್ತಾ ಪೈಲ್ವಾನ್ ಭೀಮಣ್ಣ  ಹಾಡುವ ಹಾಡು ಇದು. ಘಂಟಸಾಲ ಮತ್ತು ಬಿ.ಕೆ.ಸುಮಿತ್ರಾ ಹಾಡಿದ್ದಾರೆ.   ಸಂಭಾಷಣಾ ರೂಪದಲ್ಲಿರುವ ಸಾಲುಗಳ ಸ್ಪಷ್ಟ ಉಚ್ಚಾರ ಗಮನಿಸಿದರೆ ಘಂಟಸಾಲ ಕನ್ನಡದವರಲ್ಲ ಎಂದು ಯಾರೂ ಹೇಳಲಾರರು.



3. ಮದುವೆ ಮಾಡಿಕೊಂಡು ಮನೆಯ ಹೂಡಿಕೊಂಡು

ಪತ್ನಿಯ ಮನೆಯಲ್ಲಿ ರಹಸ್ಯವಾಗಿ ಇರುವಾಗ ಶ್ರೀನಿವಾಸ ಸ್ವತಃ ಹಾರ್ಮೋನಿಯಮ್ ನುಡಿಸಿಕೊಂಡು ಹಾಡುವ ಈ ಹಾಡು ಘಂಟಸಾಲ ಅವರ ಹಾಡುಗಳ HMV ಕ್ಯಾಸೆಟ್ಟಲ್ಲಿ ಇತ್ತು.   ಹಾರ್ಮೋನಿಯಮ್ ನುಡಿಸುವುದು ಸಹಜವಾಗಿ ಕಾಣಬೇಕೆಂದು ಘಂಟಸಾಲ ಅವರು ಇದರ ತೆಲುಗು  ಅವತರಣಿಕೆಯಲ್ಲಿ ನಟಿಸಿದ ಎನ್.ಟಿ. ರಾಮರಾವ್ ಅವರಿಗೆ ಕೆಲವು ದಿನ ಸಂಗೀತ ಪಾಠ ಹೇಳಿಕೊಟ್ಟಿದ್ದರಂತೆ.  ಆದರೆ ಶ್ರೀನಿವಾಸನ ಪಾತ್ರದ  ರಾಜಕುಮಾರ್ ಅವರಿಗೆ ಅದರ ಅಗತ್ಯ ಬಿದ್ದಿರಲಿಕ್ಕಿಲ್ಲ. ಇದರ ಸಾಹಿತ್ಯವೂ ಬಲು ಅರ್ಥಪೂರ್ಣವಾಗಿದ್ದು 60ರ ದಶಕದಲ್ಲಿ ಆಗಷ್ಟೇ ಆರಂಭವಾಗಿದ್ದ ಕುಟುಂಬ ಯೋಜನೆಯ ಕಿರು ಸಂದೇಶವನ್ನೂ ಒಳಗೊಂಡಿದೆ.  ಆದರೆ 1952ರ ಮೂಲ ತೆಲುಗು ಹಾಡಿನಲ್ಲಿ ಅದರ ಉಲ್ಲೇಖ ಇದ್ದಿರಲಾರದು.



4. ಪುರಾಣ ವಾಚನ

ವೆಂಕಟಪತಿಯ ಪಾತ್ರ ವಹಿಸಿದ ಆರ್. ನಾಗೇಂದ್ರರಾಯರು ಸ್ವತಃ ವಾಚಿಸಿದ ಈ ಪುರಾಣ ಕೇಳಿದವರು ಮೂಗಿನ ಮೇಲೆ ಬೆರಳಿಡುವಂತಿದೆ. ವಸಂತಸೇನಾ ಮತ್ತು ಆನಂದ ಬಾಷ್ಪ ಚಿತ್ರದ ಹಾಡುಗಳಲ್ಲಿ ರಾಯರ ಧ್ವನಿ ಕೇಳಿಸಿತ್ತಾದರೂ  ಅವರು ಇಷ್ಟು ಒಳ್ಳೆಯ ಗಮಕಿ ಎಂಬ ಕಲ್ಪನೆಯೂ ನನಗಿರಲಿಲ್ಲ.   ಅವರ ಈ ಪ್ರತಿಭೆಯನ್ನು ಹೆಚ್ಚು ಯಾಕೆ ಬಳಸಿಕೊಳ್ಳಲಾಗಿಲ್ಲವೋ ತಿಳಿಯದು.



 
5. ಮನಸೇ ನಾ ಯಾರೋ ನೀನು ಬಲ್ಲೆಯಾ

ಪಿ. ಸುಶಿಲಾ ಅವರ ಧ್ವನಿಯಲ್ಲಿರುವ ಈ ಹಾಡು ನರ್ಸ್ ರೂಪದಲ್ಲಿರುವ ಸರಸು ಹಾಡುವುದು. ಇದನ್ನು ಶಾರ್ಟ್ ವೇವ್ ವಿವಿಧಭಾರತಿಯ ಮಧುರ್ ಗೀತಂ ಕಾರ್ಯಕ್ರಮದಲ್ಲಿ ಕೆಲವು ಸಲ ಕೇಳಿದ ನೆನಪಿದೆ.



6. ಮನಸನಾಳೊ ಮನಸೆ

ನಾ ಯಾರೋ ನೀನು ಬಲ್ಲೆಯಾ ಹಾಡಿಗೆ ಉತ್ತರ ರೂಪದಲ್ಲಿರುವಂತಿದೆ ಘಂಟಸಾಲ ಅವರ ಧ್ವನಿಯಲ್ಲಿರುವ ಈ ಹಾಡು. ಮನಸು ಶಬ್ದದ ಪುನರಾವರ್ತನೆ ಇದರ ವಿಶೇಷ. ಚಂದ್ರಮುಖಿ ಪ್ರಾಣಸಖಿಯ ಮನಸಿನ ಹಾಡಿಗೆ ಇದೇ ಸ್ಪೂರ್ತಿಯೋ ಏನೋ!  ಅನೇಕರ ಈಗಿನ  ಕೆಲವು  FB ಪೋಸ್ಟುಗಳನ್ನು ಗಮನಿಸಿ ಎಚ್ಚರಿಕೆ ನೀಡಿದಂತಿದೆ ದಶಕಗಳ ಹಿಂದಿನ ಇದರ ಸಾಹಿತ್ಯ.



7. ವೇಂಕಟಾಚಲ ವಾಸ ಹೇ ಶ್ರೀನಿವಾಸ

ಚಿತ್ರದ ಅತಿ ಜನಪ್ರಿಯ ಹಾಡು ಇದು.  ರೇಡಿಯೊದಲ್ಲೂ ಆಗಾಗ ಕೇಳಲು ಸಿಗುತ್ತಿತ್ತು. ಮೇಲ್ನೋಟಕ್ಕೆ ವೇಂಕಟಾಚಲವಾಸ ಎಂಬುದು ತಪ್ಪು ಉಚ್ಚಾರವೆಂದು ಭಾಸವಾದರೂ ಭಾಷಾ ಶಾಸ್ತ್ರಿಗಳು ಹೇಳುವಂತೆ ವೇಂಕಟೇಶ, ವೇಂಕಟಾಚಲ  ಇವೇ ಸರಿಯಾದ ರೂಪಗಳು. ಸಂಸ್ಕೃತದಲ್ಲಿ ‘ವೆ’ ಎಂಬ ಹೃಸ್ವ ರೂಪವೇ ಇಲ್ಲ. ಚಕ್ರವಾಕ ರಾಗದ ಈ ರಚನೆಯನ್ನು ಪಿ. ಸುಶೀಲಾ ಅವರು ಕಪ್ಪು1(C Sharp) ಶ್ರುತಿಯಲ್ಲಿ ಅತಿ ಮಧುರವಾಗಿ ಹಾಡಿದ್ದಾರೆ. ಇದರ ತೆಲುಗು ವರ್ಷನ್ ಏಳು ಕೊಂಡಲವಾಡವನ್ನು ಪಿ. ಲೀಲಾ ಕೆಳಗಿನ ಕಪ್ಪು5(A Sharp) ಶ್ರುತಿಯಲ್ಲಿ ಅಷ್ಟೇ ಮಧುರವಾಗಿ ಹಾಡಿದ್ದರು. ಎರಡೂ ಹಾಡುಗಳನ್ನು ಇಲ್ಲಿ ಕೇಳಬಹುದು.  ಈ ಹಾಡನ್ನು ತೆಲುಗಿನಲ್ಲಿ ಮೊದಲು ಜಿಕ್ಕಿ ಅವರ ಧ್ವನಿಯಲ್ಲಿ ಧ್ವನಿಮುದ್ರಿಸಿ ಆ ಮೇಲೆ ಲೀಲಾ ಅವರಿಂದ ಹಾಡಿಸಲಾಯಿತಂತೆ. ಇದನ್ನು ಕೇಳಿದಾಗ ಶ್ರೀನಿವಾಸ ಕಲ್ಯಾಣ ಚಿತ್ರದ ಸ್ವಾಮಿ ಶ್ರೀನಿವಾಸ ಮತ್ತು ಪವಡಿಸು ಪರಮಾತ್ಮ ಹಾಡುಗಳು ನೆನಪಾಗುತ್ತವೆ.




8. ಅಳಬೇಡ ಮುದ್ದು ಕಂದಯ್ಯ

ಜೆ.ವಿ.ರಾಘವುಲು, ಬಿ.ವಸಂತ ಮತ್ತು ಬಿ.ಕೆ.ಸುಮಿತ್ರಾ ಅವರ ಧ್ವನಿಯಲ್ಲಿ ಆನಂದಭೈರವಿ ರಾಗದಲ್ಲಿರುವ ವಿಶಿಷ್ಟ ಶೈಲಿಯ  ಜೋಗುಳ ಇದು.  ಸೇವಕ ಸಿಂಹಾದ್ರಿಯ ತಮಾಷೆ ಶೈಲಿಯಲ್ಲಿ ಆರಂಭವಾಗಿ ಅತ್ತಿಗೆ ನಾದಿನಿಯರ ಸರಸ ಸಂವಾದವಾಗಿ ಮುಂದುವರೆಯುತ್ತದೆ.



9. ಭಯವ್ಯಾತಕೆ ಪುಟ್ಟಿ ಭಯವ್ಯಾತಕೆ

ಪರಸ್ಪರ ಪ್ರೀತಿಸುತ್ತಿದ್ದ ಪುಟ್ಟಿ ಮತ್ತು ಪೈಲ್ವಾನ್ ಭೀಮಣ್ಣನ ಮದುವೆಯನ್ನು ಪರಮೇಶ್ವರಯ್ಯ ಸರಳವಾಗಿ ಮಾಡಿಸುತ್ತಾರೆ. ಇದನ್ನು ವಿರೋಧಿಸುತ್ತಿದ್ದ ತಂದೆ ತಾಯಿಗಳು ಏನು ಮಾಡುವರೋ ಎಂದು ಆಕೆ ಭಯಪಟ್ಟಾಗ ಭೀಮಣ್ಣ ಘಂಟಸಾಲ ಅವರ ಧ್ವನಿಯಲ್ಲಿ ಈ ರೀತಿ ಸಮಾಧಾನ ಹೇಳುತ್ತಾನೆ.



10. ಏನಮ್ಮಾ ಮುಂದೇನಮ್ಮಾ

ಹಿನ್ನೆಲೆಯ ಈ ಹಾಡನ್ನು ಜೆ.ವಿ. ರಾಘವುಲು ಹಾಡಿದ್ದಾರೆ.  ಜೇನುಗೂಡು ಚಿತ್ರದ ಜಿಗಿಜಿಗಿಯುತ ನಲಿ ಅವರ ಜನಪ್ರಿಯ ಹಾಡು. ಅವರು ಸ್ವತಃ ಸಂಗೀತ ನಿರ್ದೇಶಕ ಕೂಡ ಆಗಿದ್ದವರು. ಟೈಟಲ್ಸಲ್ಲಿ ಉಲ್ಲೇಖ ಇಲ್ಲದಿದ್ದರೂ ಈ ಚಿತ್ರದ  ಸಹಾಯಕ ಸಂಗೀತ ನಿರ್ದೇಶಕ/ಅರೇಂಜರ್  ಕೂಡ ಅವರೇ ಆಗಿರಬಹುದು. ವೀರಕೇಸರಿ ಮುಂತಾದ ಘಂಟಸಾಲ ಸಂಗೀತದ ಚಿತ್ರಗಳಲ್ಲಿ ಸಹಾಯಕನಾಗಿ ಅವರ ಹೆಸರಿದೆ. ಈ ಹಾಡಿನ  ಶಹನಾಯಿ interlude  ಪಾರ್ ಮಗಳೆ ಪಾರ್ ಚಿತ್ರದ ಮಧುರಾ ನಗರಿಲ್ ತಮಿಳ್ ಸಂಗಂ ಹಾಡನ್ನು ನೆನಪಿಸುತ್ತದೆ.



11. ಯಾರೋ ಯಾರೋ

ಎಕಾರ್ಡಿಯನ್, ಗಿಟಾರ್ ಇತ್ಯಾದಿಗಳ ಆಧುನಿಕ ಆರ್ಕೆಸ್ಟ್ರೇಶನ್ ಉಳ್ಳ ಈ  ಯುಗಳ ಗೀತೆಯನ್ನು ಘಂಟಸಾಲ ಮತ್ತು ಪಿ.ಸುಶೀಲಾ ಹಾಡಿದ್ದಾರೆ.  ಯೂಟ್ಯೂಬಲ್ಲಿರುವ ಚಿತ್ರದಲ್ಲಿ ಈ ಹಾಡು ಇಲ್ಲ. ಆದರೆ ಹಾಡಿನ  ಆಡಿಯೋ ಲಭ್ಯವಿದೆ. ಕೆಲವೊಮ್ಮೆ ರೇಡಿಯೊದಲ್ಲೂ ಕೇಳಿಬರುತ್ತದೆ.



ಈ ಚಿತ್ರದಲ್ಲಿ ಬ್ರಹ್ಮಯ್ಯಾ ಓ ಬ್ರಹ್ಮಯ್ಯಾ, ಎಲ್ಲಿರುವೆ ಪ್ರಿಯಾ ಮತ್ತು ಅಮ್ಮಾ ವೇದನೆ ಎಂಬ ಇನ್ನೂ ಮೂರು ಹಾಡುಗಳಿವೆ. ಅವು ಇನ್ನೂ ಸಿಕ್ಕಿಲ್ಲ.

ಹಳೆ ಹಾಡುಗಳು ಹಿಂದಿನ ನೆನಪುಗಳಿಗೆ ತಳಕು ಹಾಕಿಕೊಂಡಿರುವುದರಿಂದ ಇಷ್ಟವಾಗುತ್ತವೆ ಎಂದು ಹೇಳುವುದುಂಟು.  ಆದರೆ ಹಿಂದೆ ಒಮ್ಮೆಯೂ ಕೇಳದಿದ್ದರೂ ಇಂಥ ಹಾಡುಗಳೇಕೆ ಹಿತವೆನಿಸುತ್ತವೆ ಎಂಬುದು ಯೋಚಿಸಬೇಕಾದ ವಿಚಾರ.

ಇದೇ ಚಿತ್ರವನ್ನು ಎಲ್.ವಿ.ಪ್ರಸಾದ್ ಅವರು 1972ರಲ್ಲಿ ಜಿತೇಂದ್ರ, ರಾಖಿ, ಶತ್ರುಘ್ನ ಸಿನ್ಹಾ ಮುಂತಾದವರ ತಾರಾಗಣದೊಂದಿಗೆ ಶಾದೀ ಕೆ ಬಾದ್ ಎಂಬ ಹೆಸರಲ್ಲಿ ಮರು ನಿರ್ಮಿಸಿದರು. ಸಂಗೀತ ನಿರ್ದೇಶಕ  ಲಕ್ಷ್ಮೀ-ಪ್ಯಾರೇ ಯಾವುದೇ ಧಾಟಿಗಳ ಮರುಬಳಕೆ ಮಾಡದೆ ಸ್ವಂತ ಹಾಡುಗಳನ್ನು ಸೃಷ್ಟಿಸಿದ್ದರು.  ಆ ಸಮಯದಲ್ಲಿ ಖಗ್ರಾಸ ಕಿಶೋರ್  ಗ್ರಹಣಗ್ರಸ್ತರಾಗಿದ್ದ ರಫಿಯ ಒಂದು ಹಾಡು ಅದರಲ್ಲಿತ್ತೆಂಬ ಒಂದೇ ಕಾರಣಕ್ಕಾಗಿ ನಾನು ಆ ಚಿತ್ರವನ್ನು ನೋಡಿದ್ದೆ! ಅದು ಮದುವೆ ಮಾಡಿ ನೋಡು ಚಿತ್ರದ ಅವತರಣಿಕೆ ಎಂದು ನನಗಾಗ ಗೊತ್ತಿರಲಿಲ್ಲ.
<!- 2-2-2020 -->










3 comments:

  1. ಕೆಲವು ಹಾಡುಗಳನ್ನು ಕೇಳಿದೆ. ಹಿಂದೆ ಎಂದೂ ಕೇಳಿರಲಿಲ್ಲ. ಬಾಕಿ ಹಾಡುಗಳನ್ನ ಬೆಳಗ್ಗೆ ಕೇಳುವೆ. ಕೆಳಿಲ್ಲದೇ ಇರೋ ಹಾಡನ್ನ ಕೇಳಬೇಕು ಅನ್ನಿಸಿದರೆ ' ವಿರಾಮದ ವೇಳಯಲ್ಲಿ' ಹುಡುಕಿ, ಗೊತ್ತಿಲದೇ ಇರುವ ವಿಚಾರ ತಿಳಿದುಕೊಬೇಕಾದ್ರೆ
    'ತಿಳಿರು ತೋರಣ' ಓದಿ ಅನ್ನೋ ಗಾದೆ ಮಾತು ನಾನೇ ಹೊಸೆದು ಹಾಕಿದ್ದೀನಿ!

    Suri Shivakumar (FB)

    ReplyDelete
  2. ಚಿತ್ರದ ಎಲ್ಲ ಹಾಡುಗಳು ನಾಟಕದ ಶೈಲಿಯಲ್ಲಿ ಸಂಯೋಜಿಸಿರುವುದು ಗಮನಾರ್ಹ. 'ಮದುವೆ ಮಾಡಿಕೊಂಡು' ಹಾಡು ನನಗೆ ಹೆಚ್ಚು ಪ್ರಿಯವಾದದ್ದು. ಹಾಡನ್ನು ಕಲಿಯುವ ಆಸಕ್ತಿಯಿಂದ ಪದೇ ಪದೇ ಗಮನಿಸಿದ್ದಂಗೆ ಈ ಹಾಡಿನಲ್ಲಿ ಹಾರ್ಮೋನಿಯಂ ಪ್ರಧಾನವಾಗಿ ಚಿತ್ರಿತವಾಗಿದ್ದರು ನನಗೆ ಅದರ ಧ್ವನಿ ಕೇಳಿಸುವುದೇ ಇಲ್ಲ.

    ಹಾಗೆ ನೀವು ಹೇಳಿದ ಘಂಟಸಾಲ ಹಾಡುಗಳು ಎಂದೂ ಕನ್ನಡಮಯವಾಗೇ ಕೇಳಿಸುತ್ತಿದ್ದರೂ ಅವರ "ಶ"ಕಾರಗಳು ತೆಲುಗು 'ಸ'ಕಾರಗಳಾಗೆ ಕೇಳುತ್ತವೆ.
    .ಹಾಗೆ
    "ಹಿಂದೆ ಒಮ್ಮೆಯೂ ಕೇಳದ ಹಾಡುಗಳೂ ಏಕೆ ಹಿತವೆನಿಸುತ್ತವ" ಎಂಬುದರ ಬಗ್ಗೆ ನೀವೇ ಬೆಳಕು ಚೆಲ್ಲಬೇಕು.

    Nagaraj Ronur (FB)

    ReplyDelete
  3. ಬಹಳ ಸೊಗಸಾದ ಮಾಹಿತಿ. ಚಿತ್ರಗಳನ್ನು ಕಟ್ಟಿ ಕೊಡುವುದರಲ್ಲಿ ನಿಮ್ಮದು ಎತ್ತಿದ ಕೈ ಸರ್! ಅನುಭವಿಸಿ ಬರೆಯುತ್ತೀರಿ.

    Kiran Surya (FB)

    ReplyDelete

Your valuable comments/suggestions are welcome